Demo image Demo image Demo image Demo image Demo image Demo image Demo image Demo image

ನಾನು ಮತ್ತು ನನ್ನದೊಂದು TV ಕಾರ್ಯಕ್ರಮ..........

  • ಶುಕ್ರವಾರ, ಮಾರ್ಚ್ 28, 2014
  • ಬಿಸಿಲ ಹನಿ

  • ಅಪ್ಪ ಸತ್ತ ನಂತರ ಅವ್ವನನ್ನು ನೋಡಿಕೊಂಡು ಬಂದರಾಯಿತೆಂದುಕೊಂಡು ಈ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಲಿಬಿಯಾದಿಂದ ಹೊರಟು ಬೆಂಗಳೂರಿಗೆ ಬಂದಿಳಿದೆ. ಅಲ್ಲಿಂದ ಒಂದೆರೆಡು ದಿವಸದಲ್ಲಿ ತಂಗಿಯ ಊರಿಗೆ ಹೋಗಿ ಅವ್ವನನ್ನು ನೋಡಿಕೊಂಡು ಮುಂದೆ ಅಕ್ಕನನ್ನು ನೋಡಲು ಗದುಗಿಗೆ ಬಂದೆ. ಗದುಗಿಗೆ ಕಾಲಿಡುತ್ತಿದ್ದಂತೆ ನನಗೊಂದು ಫೊನ್ ಕರೆ ಬಂತು “ಹಲೋ, ಉದಯ್ ಇಟಗಿಯವರಾ? ನಮಸ್ಕಾರ. ನಾನು ರಾಘವೇಂದ್ರ ಅಂತಾ B TV ಯಿಂದ ಮಾತಾಡುತ್ತಿದ್ದೇನೆ. ನಾವು ನಮ್ಮ B TV ಗಾಗಿ “ಸಾಧಕರು” ಎನ್ನುವ ಕಾರ್ಯಕ್ರಮವೊಂದನ್ನು ಮಾಡುತ್ತಿದ್ದೇವೆ. ಆ ಸಾಧಕರ ಪಟ್ಟಿಯಲ್ಲಿ ನೀವೂ ಒಬ್ಬರಿರುವದರಿಂದ ನಿಮ್ಮನ್ನು ಸಂದರ್ಶಿಸಬೇಕಾಗಿದೆ. ನೀವು ಎಲ್ಲಿ ಸಿಗುತ್ತೀರಿ? ಯಾವಾಗ ಸಿಗುತ್ತೀರಿ?” ಎಂದು ಆ ವ್ಯಕ್ತಿ ಕೇಳಿದರು. ಈ ಅನಿರಿಕ್ಷೀತ ಕರೆಯಿಂದ ಚಣಕಾಲ ಗಲಿಬಿಲಿಗೊಳಗಾದ ನಾನು “B TV ಎಂದರೆ ಯಾವುದು? ನಾನು ಅದರ ಹೆಸರೇ ಕೇಳಿಲ್ಲವಲ್ಲ? ಮೇಲಾಗಿ, ನೀವು ನನ್ನನ್ನು ಗುರುತಿಸಿದ್ದು ಹೇಗೆ? ನಾನೇನು ಅಂಥ ದೊಡ್ದ ಸಾಧನೆ ಮಾಡಿದ್ದೇನೆಂದು ನನ್ನ interview ಮಾಡುತ್ತೀರಿ?“  ಎಂದೆಲ್ಲಾ ಅವರನ್ನು ಕೇಳಿದೆ. ಅದಕ್ಕವರು “ಇದು ಹೊಸದಾಗಿ ಆರಂಭವಾಗುವ ಕನ್ನಡದ ಮತ್ತೊಂದು TV ಚಾನಲ್. ಶೀಘ್ರದಲ್ಲಿಯೇ launch ಆಗಲಿದೆ. ಅದಕ್ಕಾಗಿ ನಾವು ಕಾರ್ಯಕ್ರಮಗಳ ತಯಾರಿ ಮಾಡುತ್ತಿದ್ದೇವೆ. ಆ ಕಾರ್ಯಕ್ರಮಗಳಲ್ಲಿ “ಸಾಧಕರು” ಎನ್ನುವದು ಸಹ ಒಂದು ಕಾರ್ಯಕ್ರಮ. ನೀವು ಈ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ B.N.M. ಕಾಲೆಜಿನ ನಿಮ್ಮ ಮಾಜಿ ಸಹೋದ್ಯೊಗಿ ನಟರಾಜ್ ಅವರು ನಿಮ್ಮ ಬಗ್ಗೆ ಹೇಳಿದ್ದರಿಂದ ನಿಮ್ಮನ್ನು approach ಮಾದುತ್ತಿದ್ದೇವೆ. ಸಾಧಕರೆಂದರೆ ದೊಡ್ದ ದೊಡ್ದ ಸಾಧನೆ ಮಾಡಿ ಪ್ರಸಿದ್ಧಿ ಪಡೆದವರ ಬಗ್ಗೆ ನಾವು ಕಾರ್ಯಕ್ರಮ ಮಾಡುತ್ತಿಲ್ಲ. ಬದಲಿಗೆ, ಬದುಕಿನ ಕಷ್ಟಗಳಲ್ಲಿ ನೊಂದು-ಬೆಂದು ಇದೀಗ ತಮ್ಮ ಕಾಲಮೇಲೆ ನಿಂತು ಬದುಕನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿ ಬೇರೆಯವರಿಗೆ ಸ್ಫೂರ್ತಿಯಾದವರ ಬಗ್ಗೆ  ಕಾರ್ಯಕ್ರಮವೊಂದನ್ನು ಮಾಡುತ್ತಿದ್ದೆವೆ. ಅದೇ ಈ “ಸಾಧಕರು” ಎನ್ನುವ ಕಾರ್ಯಕ್ರಮ!” ಎಂದು ವಿವರಿಸಿದರು. ಮುಂದುವರೆದು “ನೀವು ಲಿಬಿಯಾದಲ್ಲಿ ಕೆಲಸ ಮಾಡುತ್ತಿರುವಿರೆಂದೂ ಮತ್ತು ಈಗ ರಜೆಯ ಮೇರೆಗೆ ಬೆಂಗಳೂರಿಗೆ ಬಂದಿರುವಿರೆಂದೂ, ಶೀಘ್ರದಲ್ಲಿಯೇ ನೀವು ಲಿಬಿಯಾಕ್ಕೆ ವಾಪಾಸು ಹೋಗುವಿರೆಂದೂ ನಮಗೆ ನಟರಾಜ್ ಅವರು ಹೇಳಿದ್ದರಿಂದ ನಿಮ್ಮ ಕಾರ್ಯಕ್ರಮವನ್ನು ಬೇಗ ಮುಗಿಸಬೇಕಿದೆ. ಹೇಳಿ, ನಿಮ್ಮ ಊರು ಯಾವುದು? ನೀವು ಓದಿದ ಸ್ಕೂಲುಗಳು ಯಾವವು? ಸಾಧ್ಯವಾದರೆ ನಿಮ್ಮ ಊರಿನ ಮನೆ, ಸ್ಕೂಲುಗಳು ಎಲ್ಲವನ್ನೂ ಚಿತ್ರಿಕರಿಸಿಕೊಂಡು ಬರುತ್ತೇವೆ. ಇನ್ನುಳಿದರ್ಧವನ್ನು ಬೆಂಗಳೂರಿನ ನಮ್ಮ ಸ್ಟುಡಿಯೋದಲ್ಲಿ ನಿಮ್ಮನ್ನು ಸಂದರ್ಶಿಸುತ್ತಾ ಚಿತಿಕರಿಸುತ್ತೇವೆ.” ಎಂದು ಹೇಳಿದರು. ನನಗೋ ಒಂದು ಕಡೆ ಖುಷಿ! ಇನ್ನೊಂದು ಕಡೆ ಮುಜುಗುರ! 

    ನಾನು ಅವರಿಗೆ ಹೆಳಿದೆ; ನಾನೀಗ ಗದುಗಿನಲ್ಲಿ ನಮ್ಮ ಅಕ್ಕನವರ ಮನೆಯಲ್ಲಿದ್ದೇನೆ. ನಾನು ಇನ್ನು ಐದಾರು ದಿನಗಳಲ್ಲಿ ಲಿಬಿಯಾಕ್ಕೆ ವಾಪಾಸು ಹೋಗುವವನಿದ್ದೇನೆ. ಅಷ್ಟರಲ್ಲಿ ಇಲ್ಲಿ ಮತ್ತು ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಮಾಡಲಾಗುತ್ತದೆಯೇ? ಎಂದು ಅನುಮಾನ ವ್ಯಕ್ತಪಡಿಸಿದೆ. ಅದಕ್ಕವರು “ಓ! ಖಂಡಿತ ಆಗುತ್ತದೆ. ನೀವೇನು ಯೋಚನೆ ಮಾಡಬೇಡಿ. ಗದುಗಿನಲ್ಲಿರುವ ನಮ್ಮ ರಿಪೋರ್ಟರ್ ಹತ್ತಿರ ಮಾತನಾಡಿ ಸಾಧ್ಯವಾದರೆ ಗದುಗಿನಲ್ಲಿಯೇ ಎಲ್ಲ ಕಾರ್ಯಕ್ರಮ ಮಗಿಸಿ ಕೊಡಲು ಹೇಳುತ್ತೇನೆ. ಆಗ ನಿಮಗೆ ಬೆಂಗಳೂರಿನ ನಮ್ಮ ಸ್ಟಡಿಯೋಕ್ಕೆಬರುವದು ತಪ್ಪುತ್ತದೆ.” ಎಂದು ಹೇಳಿ ಫೊನಿಟ್ಟರು.
    ಇದಾಗಿ ಅರ್ಧ ಘಂಟೆಯಷ್ಟೊತ್ತಿಗೆ B.TV ಯ ಗದಗ್ ಜಿಲ್ಲೆಯ ರಿಪೋರ್ಟರ್ M.D. ಪತ್ತಾರ್ (ಇವರು ಮೊದಲು ಈ ಟೀವಿಯಲ್ಲಿ ವರದಿಗಾರರಾಗಿದ್ದರಂತೆ) ಎನ್ನುವವರು ಫೋನ್ ಮಾಡಿ ನಮ್ಮ ಅಕ್ಕನವರ ಮನೆ ವಿಳಾಸ ಮತ್ತು ಮಾರನೆಯ ದಿನದ ನನ್ನ scheduleನ್ನು ಕೆಳಿ ತಿಳಿದುಕೊಂಡು “ನಾಳೆ ಬೆಳಿಗ್ಗೆ ಹತ್ತು ಘಂಟೆಗೆ ನಾನು ನಮ್ಮ ಕ್ಯಾಮರಾ ಮ್ಯಾನ್ ಜೊತೆ ನಿಮ್ಮ ಮನೆಗೆ ಬಂದು ಕಾರ್ಯಕ್ರಮದ ರೂಪರೇಷೆಗಳನ್ನು ಹೇಳಿ ಕಾರ್ಯಕ್ರಮವನ್ನು ಮಾಡುತ್ತೆನೆ. ಹತ್ತು ಘಂಟೆಗೆ ರೆಡಿಯಾಗಿರಿ” ಎಂದು ಹೇಳಿದರು.    
    ಮಾರನೆಯ ದಿನ ಬೆಳಿಗ್ಗೆ 10.30 ಘಂಟೆಗೆ ಪತ್ತಾರ್ ಅವರು ಕ್ಯಾಮರಾ ಮ್ಯಾನ್ ಜೊತೆ ಮನೆಗೆ ಬಂದರು. ಬಂದವರೇ ಬೆಂಗಳೂರಿನಲ್ಲಿ ಈ ಕಾರ್ಯಕ್ರಮದ ಮುಖ್ಯಸ್ಥರಾಗಿರುವ ರಾಘವೇಂದ್ರ ಅವರಿಗೆ ಫೋನ್ ಮಾಡಿ ಸುಮಾರು ಅರ್ಧ ಘಂಟೆಯಷ್ಟು ಅವರೊಂದಿಗೆ ಮಾತನಾಡುತ್ತಾ ಈ ಕಾರ್ಯಕ್ರಮವನ್ನು ಹೇಗೆ ಮಾಡಬೇಕೆಂಬುದರ ಬಗ್ಗೆ ವಿವರಗಳನ್ನು ಪಡೆದುಕೊಂಡರು. ಏಕೆಂದರೆ ಪತ್ತಾರ್ ಅವರು ಬರೀ ಗದಗ ಜಿಲ್ಲೆಯ ವರದಿಗಾರರಾಗಿದ್ದರಿಂದ ಅವರಿಗೆ ಈ ಕಾರ್ಯಕ್ರಮವನ್ನು ಹೇಗೆ ನಡೆಸಿಕೊಡಬೇಕೆಂಬುದರ ಬಗ್ಗೆ ಅಷ್ಟೊಂದು ಮಾಹಿತಿ ಇರಲಿಲ್ಲ. ಮೇಲಾಗಿ ಸಮಯದ ಅಭಾವ ಇದ್ದುದರಿಂದ ರಾಘವೆಂದ್ರ ಅವರು ಅವರಿಗೆ ಇಡಿ ಕಾರ್ಯಕ್ರಮವನ್ನು ಗದುಗಿನಲ್ಲಿಯೇ ಮುಗಿಸಲು ಹೇಳಿದ್ದರು. ಆ ಪ್ರಕಾರ ಅವರು ನನ್ನದೊಂದಿಷ್ಟು bio-data ವನ್ನು ತೆಗೆದುಕೊಂಡು ನನ್ನ ಅಕ್ಕನ ಮನೆಯಲ್ಲಿಯೇ ಚಿತ್ರಿಕರಿಸಲು ಶುರು ಮಾಡಿದರು. ಕ್ಯಾಮರಾದಲ್ಲಿ ಚನ್ನಾಗಿ ಕಾಣಲೆಂದು ನನ್ನ ಬೆನ್ನ ಹಿಂದುಗಡೆ ಮನೆಯಲ್ಲಿಯೇ ಇದ್ದ ಒಂದೆರೆಡು ಹೂಕುಂಡಗಳನ್ನು ಹಾಗೂ ಒಂದು ಟೆಡ್ಡಿಬೇರ‍್ ನ್ನು ಇಟ್ಟರು. ನನಗೆ ನಗು ಬಂತು. ನಗುತ್ತಾ ಅವರಿಗೆ ಹೇಳಿದೆ “ರೀ, ನಾನು ಇಲ್ಲಿ ನನ್ನ ಬದುಕಿನ ವಿಷಯದ ಬಗ್ಗೆ ಮಾತನಾಡುವದಕ್ಕೂ ಹಾಗೂ ನನ್ನ ಬೆನ್ನ ಹಿಂದೆ ಕಾಣುವ ದೃಶ್ಯಕ್ಕೂ ತುಂಬಾ ವ್ಯತ್ಯಾಸವಾಗುತ್ತದಲ್ರೀ?” ಎಂದೆ. ಅದಕ್ಕವರು “ಪರ್ವಾಗಿಲ್ಲ ಸರ್. ಇದು ಜಸ್ಟ್ ಕ್ಯಾಮರಾದಲ್ಲಿ ಚನ್ನಾಗಿ ಕಾಣುವದಕ್ಕೋಸ್ಕರ ಅಷ್ಟೇ” ಎಂದರು. 
     
    ಮೊದಲು ನನ್ನ ಬಗ್ಗೆ ಒಂದಷ್ಟು ವಿವರಣೆಯನ್ನು ಪತ್ತಾರ್ ಅವರು ಕೊಟ್ಟರು ನಂತರ. ಕ್ಯಾಮರಾ ಮ್ಯಾನ್ ಸುಮಾರು ಅರ್ಧ ಘಂಟೆ ನಾನು ಓದುವ ಮತ್ತು ಬರೆಯುವ ಭಂಗಿಯಲ್ಲಿ ಕುಳಿತಿರುವಂತೆ ಚಿತ್ರಿಕರಿಸಿಕೊಂಡರು. ಅದಾದ ನಂತರ ನನ್ನ ಅಕ್ಕನಿಗೆ ಒಂದು ಗ್ಲಾಸು ನೀರು ತರಲು ಹೇಳಿ ಅದನ್ನು ನಿಮ್ಮ ತಮ್ಮನಿಗೆ ಕೊಟ್ಟು ಅವರೊಂದಿಗೆ ಉಭಯ ಕುಶಲೋಪಾರಿ ಮಾತನಾಡುತ್ತಾ ಕುಳಿತುಕೊಳ್ಳಿರಿ. ನಾವದನ್ನು ಚಿತ್ರಿಕರಿಸುತ್ತೇವೆ ಎಂದರು. ನನಗೆ ಇದು ಯಾಕೋ ತೀರಾ ನಾಟಕೀಯವೆನಿಸಿತು. ಹಿಂದಿನ ದಿನವಷ್ಟೇ ನಾನು ಅಲ್ಲಿಗೆ ಬಂದಿಳಿದಾಗ ಉಭಯಕುಶಲೋಪಾರಿ ಬಗ್ಗೆ ಮಾತನಾಡಿಯಾದ ಮೆಲೆ ಮತ್ತೊಮ್ಮೆ ಕ್ಯಾಮರಾಗೋಸ್ಕರ ಮಾತನಾಡುವದು ಹೇಗೆ? ಆದರೂ ಅವರ ಒತ್ತಾಯಕ್ಕೆ ಅರ್ಧ ನಿಮಿಷದಲ್ಲಿ ಮುಗಿಸಿದೆವು. ಕ್ಯಾಮರಾ ಮ್ಯಾನ್ “ಇನ್ನು ಏನಾದರು ಮಾತನಾಡುತ್ತೀರಿ. ನಾನು ಇದೇ ದೃಶ್ಯವನ್ನು ಹತ್ತು ನಿಮಿಷಗಳ ಕಾಲ ಚಿತ್ರಿಕರಿಸಬೇಕಿದೆ.” ಎಂದರು. ನಾನವರಿಗೆ “ರೀ, ಇದು ತೀರಾ ಕೃತಕತೆಯೆನಿಸುತ್ತದೆ. ಬೇಕಾದರೆ ಹಾಗೆ ಕುಳಿತುಕೊಳ್ಳುತ್ತೇವೆ. ಅದನ್ನಷ್ಟೇ ಚಿತ್ರಿಕರಿಸಿಕೊಳ್ಳಿ.” ಎಂದೆ. ಅದಕ್ಕವರು “ಇಲ್ಲ ಸರ್, ಹಾಗೆ ಶೂಟ್ ಮಾಡಿದರೆ ಲಿಪ್ ಮೂಮೆಂಟ್ಸ್ ಇರೋದಿಲ್ಲ. ಅದಕ್ಕೆ ಏನದರು ಮಾತನಾಡಿ ಎಂದರು.” ನಾವು ಪೆಚಿಗೆ ಸಿಲುಕಿದೆವು. ನಾನಾಗ ಅವರನ್ನು ಸ್ವಲ್ಪ ರೇಗಿಸೋಣವೆಂದು “ಏನ್ರೀ ಟೀವಿ ಶೋಗಳು ಇಷ್ಟೊಂದು ನಾಟಕೀಯತೆಯಿಂದ ಕೂಡಿರುತ್ತವಾ?” ಎಂದು ಕೇಳಿದೆ. ಅವರು ಸುಮ್ಮನೆ ನಕ್ಕರು. ಆಗ ನನಗೆ ಇದ್ದಕ್ಕಿದ್ದಂತೆ “ಬಿಗ್ ಬಾಸ್” ನಂಥ ರಿಯಾಲಿಟಿ ಶೋಗಳು ನೆನಪಾದವು. ಆ ಕಾರ್ಯಕ್ರಮಗಳ ಸ್ವರೂಪ ಹೆಚ್ಚುಕಮ್ಮಿ ಇದೇ ತೆರನಾಗಿರುತ್ತದಲ್ವೆ? ಎಂದುಕೊಂಡೆ. ಅಲ್ಲಿ ಎಲ್ಲೋ ಒಂದು ಕಡೆ ಕ್ಯಾಮರಾ ಇಟ್ಟಿರುತ್ತಾರೆಂಬುದು ಆ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆಲ್ಲಾ ಗೊತ್ತಿರುವದರಿಂದ ಅವರೆಲ್ಲಾ ಸದಾಕಾಲ ಪ್ರಜ್ಞಾಪೂರ್ವಕವಾಗಿಯೇ ವರ್ತಿಸುತ್ತಿರುತ್ತಾರೆ. ಹೀಗಿದ್ದ ಮೇಲೆ ಅಲ್ಲಿ ರಿಯಾಲಿಟಿ ಇರಲು ಹೇಗೆ ಸಾಧ್ಯ? ರಿಯಾಲಿಟಿ ಶೋಗಳದ್ದೇ ಈ ಕಥೆಯಾದರೆ ಇನ್ನು ಬೇರೆ ಶೋಗಳ ಕಥೆ ಹೇಗಿರಬೇಡ? ಎಂದು ನನ್ನಷ್ಟಕ್ಕೆ ನಾನೇ ನಕ್ಕೆ. ಆಮೇಲೆ ಅಲ್ಲಿ ನನ್ನ ಅಣ್ಣ, ಅತ್ತಿಗೆ, ಅಕ್ಕ, ಮಾಮಾ ಹಾಗೂ ನನ್ನ ಜೊತೆ ನನ್ನ ತಾಯಿಯನ್ನು ನೋಡಲು ಬಂದಿದ್ದ ಗೆಳೆಯ ಮಂಜುನನ್ನು ನನ್ನ ಜೊತೆ ಕೂರಿಸಿ ಚಿತ್ರಿಕರಿಸಿದರು.    

    ಅಂದಹಾಗೆ ನಾನು ನಡೆದ ಬಂದ ದಾರಿಯ ಬಗ್ಗೆ ನನ್ನಿಂದಲೇ ಹೇಳಿಸುತ್ತಾ ಅದನ್ನೇ ಎರಡೆರೆಡು ಬಾರಿ ರೀಟೇಕ್ ಮಾಡಿದರು. ಅಲ್ಲಿ ನಾನು ನನ್ನ ಏಳ್ಗಿಗೆ ಕಾರಣರಾದ ಎಲ್ಲ ಬಂಧುಗಳು, ಶಿಕ್ಷಕರು ಮತ್ತು ಸ್ನೇಹಿತರನ್ನು ಸ್ಮರಿಸಿದ್ದೇನೆ. ಆದರೆ ಪತ್ತಾರ್ ಅವರು “ಪಟ್ಟಿ ಉದ್ದವಾಯಿತು, ಪರ್ವಾಗಿಲ್ಲ ನಾನು ಆಮೇಲೆ edit ಮಾಡುತ್ತೇನೆ.” ಎಂದರು. ನಂತರ ಪತ್ತಾರ್ ಅವರು ನನ್ನ ಬದುಕಿನ ಅತ್ಯಂತ ಕಷ್ಟದ ದಿನದ ಬಗ್ಗೆ, ಇಂಗ್ಲೀಷ್ ಭಾಷೆಯ ಬಗ್ಗೆ ನಾನು ಹೇಗೆ ಒಲವನ್ನು ಬೆಳೆಸಿಕೊಂಡೆನೆಂಬುದರ ಬಗ್ಗೆ ಹಾಗೂ ಲಿಬಿಯಾದ ಶಿಕ್ಷಣ ಮತ್ತು ಭಾರತದ ಶಿಕ್ಷಣದ ನಡುವಿನ ವ್ಯತ್ಯಾಸದ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ನಾನು ಅವೆಲ್ಲಕ್ಕೂ ಉತ್ತರವನ್ನು ಕೊಟ್ಟೆ. ಅದಾದ ನಂತರ ಗದುಗಿನಲ್ಲಿ ನಾನು ಓದಿದ ಸಿ.ಎಸ್. ಪಾಟೀಲ್ ಸ್ಕೂಲಿಗೆ (ಆಗಿನ ಮಾಡೆಲ್ ಹೈಸ್ಕೂಲ್) ಕರೆದುಕೊಂಡು ಹೋಗಿ ಶಾಲೆಯ ಆವಾರದ ಮುಂದೆ ಒಂದಷ್ಟು ಶೂಟ್ ಮಾಡಿದರು. ಅಲ್ಲಿ ನನಗೆ ಕಲಿಸಿದ ಶಿಕ್ಷಕರಲ್ಲಿ ಮೂವರನ್ನು ಹೊರತು ಪಡಿಸಿ ಬಹುತೇಕರು ನಿವೃತ್ತಿ ಹೊಂದಿದ್ದರು. ನನ್ನ ನೆಚ್ಚಿನ ಶಿಕ್ಷಕರಾದ ಹುಣಸಿಮರದ ಸರ್ ನನ್ನನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಅವರಿಂದಲೇ ನಾನು ಓದುವಾಗ ಶಾಲೆಯಲ್ಲಿ ಹೇಗಿದ್ದೆ ಎಂಬುದರ ಬಗ್ಗೆ ಅಭಿಪ್ರಾಯ ಪಡೆದುಕೊಂಡರೆಂದು ಕಾಣುತ್ತದೆ. ನಾನು ಎಲ್ಲ ಮುಗಿಯಿತು ಎಂದುಕೊಳ್ಳುತ್ತಿರುವಾಗಲೇ ಪತ್ತಾರ್ ಅವರು “ಸರ್, ನೀವು ಇಲ್ಲಿಯ ಮಕ್ಕಳಿಗೆ ಪಾಠ ಮಾಡಿ. ನಾವು ಅದರ ಕ್ಲಿಪ್ಪಿಂಗ್ ತೆಗೆದುಕೊಳ್ಳುತ್ತೇವೆ” ಎಂದರು. ನಾನು ಖುಷಿಯಿಂದ ಆ ಮಕ್ಕಳಿಗೆ ಹತ್ತು ನಿಮಿಷಗಳ ಕಾಲ ಇಂಗ್ಲೀಷಿನಲ್ಲಿ ಪಾಠ ಮಾಡಿದೆ. ಅಲ್ಲಿ ಎಲ್ಲ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವದರಿಂದ ಅವರಲ್ಲಿ ಕೆಲವರು ಸ್ವಲ್ಪ ಕನ್ನಡದಲ್ಲಿ ಹೇಳಿ ಎಂದರು. ಆಗ ನಾನು ಸ್ವಲ್ಪ ಕನ್ನಡದಲ್ಲಿ ಸ್ವಲ್ಪ ಇಂಗ್ಲೀಷಿನಲ್ಲಿ ಪಾಠ ಮಾಡಿದೆ. ಕ್ಲಾಸ್ ರೂಮಿನಲ್ಲಿ ನಾನು ಪಾಠ ಮಾಡುವಾಗ ನನಗೆ ಕಲಿಸಿದ ಶಿಕ್ಷಕರು ಬಂದು ಕುಳಿತರು. ಎಲ್ಲ ಮುಗಿದ ಮೇಲೆ “ನಿಮ್ಮ ಪಾಠ ತುಂಬಾ ಚನ್ನಾಗಿ ಬಂತು” ಎಂದರು. ನಾನು ಖುಷಿಯಿಂದ ಉಬ್ಬಿಹೋದೆ. ನಮಗೆ ಕಲಿಸಿದ ಶಿಕ್ಷಕರಿಂದಲೇ ನಾವು ಚನ್ನಾಗಿ ಪಾಠ ಮಾಡುತ್ತೇವೆ ಎಂದು ಹೇಳಿಸಿಕೊಳ್ಳುವದರಲ್ಲಿ ಎಷ್ಟೊಂದು ಥ್ರಿಲ್ ಇರುತ್ತದೆ ಎನ್ನುವದು ಮೊಟ್ಟಮೊದಲಿಗೆ ನನ್ನ ಅನುಭವಕ್ಕೆ ಬಂತು.  
      
    ಕೊನೆಯಲ್ಲಿ ಪತ್ತಾರ್ ಮತ್ತು ಕ್ಯಾಮರಾ ಮ್ಯಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಥ್ಯಾಂಕ್ಸ್ ಹೇಳಿ ನನ್ನ ಈಮೇಲ್ ಮತ್ತು ಫೋನ್ ನಂಬರ್ ತೆಗೆದುಕೊಂಡು ಕಾರ್ಯಕ್ರಮ ಪ್ರಸಾರವಾಗುವ ಒಂದು ವಾರದ ಮುನ್ನ ನಿಮಗೆ ತಿಳಿಸುತ್ತೇವೆ ಎಂದು ಹೇಳಿಹೋದರು. ನಾನು ಕೂಡಾ ಅವರಿಬ್ಬರಿಗೆ ಥ್ಯಾಂಕ್ಸ್ ಹೇಳಿ ಅವರನ್ನು ಬೀಳ್ಕೊಟ್ಟಾಗ ಮಧ್ಯಾಹ್ನ ಮೂರು ಘಂಟೆಯಾಗಿತ್ತು. ನಂತರ ನನಗೆ ಕಲಿಸಿದ ಶಿಕ್ಷಕರೊಂದಿಗೆ ಮಾತನಾಡಲು ಕುಳಿತೆ. ಅವರು ತಮ್ಮ ಕೈಲಿ ಕಲಿತ ನನ್ನ ಬಗ್ಗೆ ತುಂಬಾ ಹೆಮ್ಮೆ ಮತ್ತು ಅಭಿಮಾನಪಟ್ಟರು. ಮುಂದೆ ನಾನು ಲಿಬಿಯಾದಿಂದ ಬೆಂಗಳೂರಿಗೆ ವಾಪಾಸಾದ ಮೇಲೆ ಶಾಲಾ ವಾರ್ಷಿಕೋತ್ಸವಕ್ಕೆ ನನ್ನನ್ನು ಗೆಸ್ಟ್ ಆಗಿ ಕರಿಸುತ್ತೇನೆ ಎಂದರು. ನಾನು ಸಂಕೋಚದಿಂದ ಮುದುರಿ ಹೋದೆ. ಅಲ್ಲಿಯ ಹೆಡ್ ಮಾಸ್ಟರ್ ನನ್ನ ಫೋನ್ ನಂಬರ್ ಮತ್ತು ಈಮೇಲ್ ಐಡಿಗಳನ್ನು ತಮ್ಮ ಡೈರಿಯಲ್ಲಿ ಬರೆದಿಟ್ಟುಕೊಂಡರು.        
    ಶಾಲೆಯಿಂದ ಮನೆಯತ್ತ ಹೊರಟಾಗ ಮಧ್ಯಾಹ್ನ ನಾಲ್ಕು ಘಂಟೆ. ಅಲ್ಲಿಂದ ನಾನು ನಮಗೆ ದಾರಿದೀಪವಾಗಿದ್ದ ದೊಡ್ಡಪ್ಪ- ದೊಡ್ಡಮ್ಮನನ್ನು ನೋಡಲು ಅಳವಂಡಿಗೆ ಹೋದೆ. ನನ್ನ ದೊಡ್ಡಪ್ಪನವರಂತೂ ನನ್ನ ಕಾರ್ಯಕ್ರಮದ ಬಗ್ಗೆ ಕೇಳಿ ತುಂಬಾ ಖುಷಿಪಟ್ಟರು. ಅವರನ್ನು ನೋಡಿಕೊಂಡು ಅಂದೇ ರಾತ್ರಿ ಬೆಂಗಳೂರಿಗೆ “ಗೋಲ್‍ಗುಂಬಜ್ ಎಕ್ಸ್‍ಪ್ರೆಸ್” ಟ್ರೀನಿನಲ್ಲಿ ಹೊರಟುಬಂದೆ. ಮಾರನೆಯ ದಿವಸವೂ ಆ ಕಾರ್ಯಕ್ರಮದ ಹ್ಯಾಂಗ್ ಓವರ‍್ ನಲ್ಲಿಯೇ ತೇಲಾಡುತ್ತಿದ್ದೆ. ಬೆಂಗಳೂರಿಗೆ ಬಂದ ಮೇಲೆ B. TVಯ ರಾಘವೇಂದ್ರ ಅವರಿಗೆ ಮತ್ತು ಗೆಳೆಯ ನಟರಾಜನಿಗೆ ಫೋನ್ ಮಾಡಿ ಥ್ಯಾಂಕ್ಸ್ ಹೇಳಿದೆ.

    ಈ ಕಾರ್ಯಕ್ರಮವನ್ನು ನೋಡಲು ಬಹುಶಃ ನಾವು ಇನ್ನೂ ಒಂದು ತಿಂಗಳು ಕಾಯಬೇಕಾಗಬಹುದೇನೋ!