Demo image Demo image Demo image Demo image Demo image Demo image Demo image Demo image

ಮರಭೂಮಿಯೆಂದರೆ ಬರೀ ಮರಳಲ್ಲ..........

  • ಶನಿವಾರ, ಜೂನ್ 08, 2013
  • ಬಿಸಿಲ ಹನಿ
  • ನಾನು ಸೆಭಾಕ್ಕೆ ಬಂದ ಮಾರನೆಯ ದಿನವೇ ನಮ್ಮ ಯೂನಿವರ್ಷಿಟಿಯವರು ನನಗೆ ಅಲ್ಲಿಂದ 660K.M ದೂರವಿರುವ ಘಾಟ್ Arts & Science ಕಾಲೇಜಿಗೆ ಪೋಸ್ಟಿಂಗ್ ಆಗಿದೆಯೆಂದೂ ಹಾಗೂ ಅದಾಗಲೇ ಕ್ಲಾಸುಗಳು ಆರಂಭವಾಗಿರುವದರಿಂದ ನಾನು ಘಾಟ್‍ಗೆ ತಕ್ಷಣ ಹೋಗಬೇಕೆಂದೂ ಹೇಳಿದರು. ಆ ಪ್ರಕಾರ ಮಾರನೆಯ ದಿನ ಟ್ಯಾಕ್ಸಿಯೊಂದನ್ನು ನಾನುಳಿದುಕೊಂಡಿರುವ ಹೋಟೆಲ್‍ಗೆ ನನ್ನನ್ನು ಪಿಕ್ ಮಾಡಲು ಕಳಿಸಿದ್ದರು. ಆ ಟ್ಯಾಕ್ಸಿ ಡ್ರೈವರ್ ಬೆಳಿಗ್ಗೆ 11.30ಕ್ಕೆ ನನ್ನನ್ನು ಕರೆದುಕೊಂಡು ಘಾಟ್‍ನತ್ತ ಹೊರಟ. ದಾರಿಯುದ್ದಕ್ಕೂ ಜಗತ್ತಿನ ಅತಿದೊಡ್ದ ಮರಭೂಮಿ ‘ಸಹರಾ’ ಅಡ್ದಲಾಗಿ ಮಲಗಿತ್ತು. ಎಲ್ಲಿ ನೋಡಿದರಲ್ಲಿ ಮರಳು, ಮರಳು, ಬರೀ ಮರಳು! ನಾನು ಮೊಟ್ಟ ಮೊದಲಬಾರಿಗೆ ನನ್ನ ಜೀವನದಲ್ಲಿ ಮರಭೂಮಿಯೊಂದನ್ನು ನೋಡಿದ್ದೆ; ಅದೂ ಜಗತ್ತಿನ ಅತಿ ದೊಡ್ದ ಮರಭೂಮಿಯನ್ನು! ನೋಡುವ ಮೊದಲು ಮರಭೂಮಿಯ ಬಗ್ಗೆ ಅನೇಕ ಕಥೆಗಳನ್ನು ಕೇಳಿದ್ದೆ: ಮರಭೂಮಿಯೆಂದರೆ ಬರೀ ಮರಳು ಮತ್ತು ಬಿಸಿಲು ಮಾತ್ರ ಎಂದಕೊಂಡಿದ್ದೆ. ಆದರೆ ಇಲ್ಲಿಯೂ ಒಂದು ಭಯಂಕರ ಚಳಿಗಾಲ ಇರುತ್ತದೆ ಎನ್ನುವದು ನನ್ನ ಗಮನಕ್ಕೆ ಬಂದಿದ್ದು ನಾನಿಲ್ಲಿ ವಾಸಿಸಲು ಆರಂಭಿಸಿದಾಗಲೇ! ಮರಭೂಮಿಯೆಂದರೆ ಬರಡಾಗಿರುತ್ತದೆ, ಅಲ್ಲಿ ಏನೂ ಬೆಳೆಯುವದಿಲ್ಲ, ನೀರು ಸಿಗುವದಿಲ್ಲ, ನೀರನ್ನು ಹುಡುಕಿಕೊಂಡು ಜನ ಮೈಲಿಗಟ್ಟಲೆ ಹೋಗುತ್ತಾರೆ ಹಾಗೆ ಹೀಗೆ ಇನ್ನೂ ಏನೇನೋ........ ಇದೀಗ ಅದನ್ನೆಲ್ಲಾ ಕಣ್ಣಾರೆ ಕಂಡು ಅನುಭವಿಸುವ ಪರಿ ನನ್ನದಾಗಿತ್ತು. ವಿಪರ್ಯಾಸವೆಂದರೆ ಇಂಥ ಮರಭೂಮಿಯಲ್ಲಿ ನನ್ನ ಬದುಕಿನ ಹಸಿರನ್ನು ಹುಡುಕಿ ಬಂದಿದ್ದೆ. ನಾನು ಘಾಟ್‍ಗೆ ಬಂದ ಹೊಸತರಲ್ಲಿಯೇ ನನ್ನ ಇಂಡಿಯನ್ ಸಹೋದ್ಯೋಗಿಗಳು ಹಾಗೂ ಇಲ್ಲಿಯ ಆಸ್ಪತ್ರೆಯೊಂದರಲ್ಲಿ ಹಲ್ಲಿನ ಡಾಕ್ಟರ್ ಆಗಿದ್ದ ನಮ್ಮ ಇಂಡಿಯನ್ ಡಾಕ್ಟರ್ ಸುನೀಲ್ ಅವರನ್ನು ಕರೆದುಕೊಂಡು ಸಹರಾ ಮರಭೂಮಿಯನ್ನು ನೋಡಲು ಹೊರಟೆ. ಅದೇನೋ ಗೊತ್ತಿಲ್ಲ! ನನಗೆ ಒಮ್ಮೆ ಮರಭೂಮಿಯ ಒಳಗೆ ಹೋಗಿ ಬರಬೇಕು, ಅದರ ಒಡಲಾಳವನ್ನು ಬಗೆದು ನೋಡಬೇಕು ಎನ್ನುವ ಅದಮ್ಯ ಬಯಕೆ ಹೆಚ್ಚಾಗಿಬಿಟ್ಟಿತ್ತು.
    ಜಗತ್ತಿನ ಅತಿ ದೊಡ್ಡ ಮರಭೂಮಿಯಾದ ಸಹರಾ ಸುಮಾರು ಒಂಬತ್ತು ಮಿಲಿಯನ್ ಚ.ಕಿ.ಮಿ.ನಷ್ಟು ದೊಡ್ಡದಾಗಿದ್ದು ಸಹರಾ ಆಫ್ರಿಕಾ ಖಂಡದ 1/3 ನಷ್ಟು ಭಾಗವನ್ನು ಆಕ್ರಮಿಸಿಕೊಂಡಿದೆ. ಇದು ಆದಿ, ಮಧ್ಯ, ಹಾಗೂ ಅಂತ್ಯ ಸಹರಾ ಮರಭೂಮಿಗಳಾಗಿ ವಿಭಜನೆ ಹೊಂದಿದ್ದು ಮಧ್ಯದ ಭಾಗವು ಲಿಬಿಯಾ ಮತ್ತು ಅಲ್ಜಿರೀಯಾದಲ್ಲಿದೆ. ನಾವಿರುವ ಊರು ಘಾಟ್ ಸಹರಾ ಮರಭೂಮಿಯ ಮಧ್ಯಯೇ ಇದೆ! ಸುತ್ತಲೂ ಮರಭೂಮಿ. ನಡುವೆ ಈ ಊರು. ಈ ಊರಿಂದಾಚೆ ನಾವು ಯಾವ ದಿಕ್ಕಿನೆಡೆಗಾದರೂ ಸರಿ ಸ್ವಲ್ಪ ದೂರಕ್ಕೆ ನಡೆದುಕೊಂಡು ಬಂದರೆ ಸಾಕು ತಟ್ಟನೆ ನಮ್ಮ ಕಣ್ಣಿಗೆ ಕಾಣಿಸುವದು ಬರೀ ಮರಳು, ಮರಳು ಮತ್ತು ಮರಳು! ಇಲ್ಲಿ ಮರಳು ಬಿಟ್ಟರೆ ಬೆರೇನೂ ಇಲ್ಲ! ಹಾಗಂತಾ ಇತರರಂತೆ ನಾನೂ ನಂಬಿದ್ದೆ. ಆದರೆ ಯಾವಾಗ ಒಮ್ಮೆ ಸಹರಾ ಮರಭೂಮಿಯ ಒಳಹೊಕ್ಕು ಬಂದೆನೋ ಆಗ ನನ್ನ ನಂಬಿಕೆಗಳೆಲ್ಲಾ ತಲೆಕೆಳಗಾಗಿದ್ದವು. ಅಲ್ಲಲ್ಲಿ ಚಿತ್ತಚಿತ್ತಾರವಾಗಿ ಬಿದ್ದುಕೊಂಡ ಒಂದಷ್ಟು ಮರಳು ಗುಡ್ಡಗಳು, ಆ ಗುಡ್ದಗಳ ಅಕ್ಕಪಕ್ಕದಲ್ಲಿ ಬೆಳೆದ ಒಂದಿಷ್ಟು ಹಸಿರು ಪೊದೆಗಳು. ಪೊದೆಗಳಿಗೆ ಸ್ವಲ್ಪ ದೂರದಲ್ಲಿಯೇ ಎತ್ತರಕ್ಕೆ ಬೆಳೆದು ನಿಂತ ಮರಗಳು, ಅಲ್ಲಲ್ಲಿ ಸಿಗುವ ಒಂದಷ್ಟು ಸಿಹಿನೀರ ಒರತೆಗಳು. ಚಿಕ್ಕ ಚಿಕ್ಕ ಝರಿಗಳು, ಬಿಸಿನೀರ ಬುಗ್ಗೆಗಳು, ಇವುಗಳ ಮಧ್ಯ ವ್ಯವಸಾಯಕ್ಕಾಗಿ ಉಪಯೋಗಿಸಲ್ಪಡುವ ಒಂದಷ್ಟು ಫಲವತ್ತಾದ ನೆಲ, ಈ ನೆಲದೊಳಗೆ ಹುದುಗಿರುವ ಅಪಾರ ಅಂತರ್ಜಲ, ವರ್ಷದಲ್ಲಿ ಒಂದೋ ಎರಡೋ ಸಾರಿ ಬೀಳುವ ಮಳೆ, ಅಬ್ಬಾ, ಒಂದೇ? ಎರಡೇ? ಈ ಬೃಹತ್ ಮರಭೂಮಿಯಲ್ಲಿ ಏನೇನೆಲ್ಲಾ ಇದೆ! ಅದನ್ನೆಲ್ಲಾ ಕಂಡುಕೊಳ್ಳುವ ತಾಳ್ಮೆ ಮತ್ತು ವ್ಯವಧಾನ ನಮಗಿರಬೇಕಷ್ಟೇ ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡಿದ್ದೆ.
    ಇಲ್ಲಿನ ಸಹರಾ ಮರಭೂಮಿಯಲ್ಲಿ ಸುಮಾರು 200 ಕಿ.ಮಿ. ಉದ್ದದಷ್ಟು ಬೃಹದಾಕಾರವಾಗಿ ಬೆಳೆದುನಿಂತ ಪರ್ವತವೊಂದಿದೆ. ಅದೇ ‘ಅಕಾಕುಸ್’ ಪರ್ವತ. ಈ ಪರ್ವತ ಘಾಟ್‍ನಿಂದ ಸುಮಾರು 200 ಕಿ.ಮಿ. ದೂರವಿರುವ ಅವಿನಾತ್ ಎಂಬ ಹಳ್ಳಿಯಿಂದ ಆರಂಭವಾಗಿ ಘಾಟ್ ಮೂಲಕ ಹಾಯ್ದು ಇಲ್ಲಿಂದ ಎಂಟು ಕಿ.ಮಿ. ದೂರವಿರುವ ಆಲ್ ಬರ್ಕತ್ ಎಂಬ ಹಳ್ಳಿಯಿಂದ ಸ್ವಲ್ಪ ದೂರಕ್ಕೆ ಸಾಗಿ ಕೊನೆಗೊಳ್ಳುತ್ತದೆ. ಈ ಮರಭೂಮಿಯ ನಡುವೆ ಈ ಪರ್ವತ ಹೇಗೆ ಸೃಷ್ಟಿಯಾಯಿತು ಎಂದು ಸ್ಥಳಿಯರನ್ನು ಕೇಳಿದರೆ ಇಲ್ಲಿ ಹಿಂದೆ ಸಮುದ್ರವಿತ್ತಂತೆ, ಆ ಸಮುದ್ರದಲ್ಲಿ ದೊಡ್ದ ದೊಡ್ದ ಕಲ್ಲಿನ ಬಂಡೆಗಳು, ಬೆಟ್ಟಗುಡ್ಡಗಳು ಇದ್ದು ಸಮುದ್ರ ಕರಗಿಹೋದ ಮೇಲೆ ಬರೀ ಮರಳು ಮತ್ತು ಈ ಕಲ್ಲು ಪರ್ವತ ಮಾತ್ರ ಉಳಿದುಕೊಂಡಿವೆ ಎಂದು ಹೇಳುತ್ತಾರೆ. ‘ಅಕಾಕುಸ್’ ಪರ್ವತ ಅತ್ಯಂತ ಪುರಾತನವಾಗಿದ್ದು ಇಲ್ಲಿ ಈಜಿಪ್ಟ್ ನಾಗರಿಕತೆ ಹುಟ್ಟುವದಕ್ಕಿಂತ ಮುಂಚೆಯೇ ನಮಗೆ ಗೊತ್ತೇ ಇರದ ಪುರಾತನ ನಾಗರಿಕತೆಗಳು ಹುಟ್ಟಿದ್ದವು ಎಂದು ಇತಿಹಾಸಕಾರರು ಹೇಳುತ್ತಾರೆ. ಏಕೆಂದರೆ ಈ ಪರ್ವತದೊಳಗೆ ಹನ್ನೆರೆಡು ಸಾವಿರ ವರ್ಷಗಳಷ್ಟು ಹಳೆಯದಾದ ಗುಹೆಗಳು ಇದ್ದು ಅಲ್ಲಿ ಮಾನವರು ವಾಸಿಸಿದ್ದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ ಹಾಗೂ ಇಲ್ಲಿ ಸಿಕ್ಕ ಕೆಲವು ಆಯುಧಗಳು ಮತ್ತು ಚಿತ್ರಗಳು ಆ ಜನರವೇ ಎಂದು ಹೇಳಲಾಗುತ್ತದೆ. ಏನೇ ಆಗಲಿ ಈ ಅಕಾಕುಸ್ ಪರ್ವತ ಸಹರಾ ಮರಭೂಮಿಗೆ ಒಂದು ಕಳಶವಿದ್ದಂತಿದ್ದು ಇಲ್ಲಿನ ಮರಭೂಮಿಗೆ ಒಂದು ವಿಶೇಷ ಸೌಂದರ್ಯವನ್ನು ತಂದುಕೊಟ್ಟಿದೆ. ಹಾಗೆಂದೇ ಸಹರಾ ಮರಭೂಮಿಯನ್ನು ನೋಡಲು ಬಂದ ಪ್ರವಾಸಿಗರ್ಯಾರು ಇದನ್ನು ನೋಡದೆ ಹಾಗೆ ಹೋಗುವದಿಲ್ಲ. ಇಲ್ಲಿಗೆ ಸಾಕಷ್ಟು ಜನ ಯೂರೋಪಿಯನ್ನರು ಪ್ರವಾಸಕ್ಕೆಂದು ಬಂದು ಮರಭೂಮಿಯ ಮಧ್ಯ ಟೆಂಟ್‍ಗಳನ್ನು ಹಾಕಿಕೊಂಡು ಎರಡ್ಮೂರು ದಿನವಿದ್ದು ಹೋಗುತ್ತಾರೆ. ಘಾಟ್‍ನಿಂದ ಹನ್ನೆರೆಡು ಕಿ.ಮಿ. ದೂರದಲ್ಲಿ ಅಂದರೆ ಸಹರಾ ಮರಭೂಮಿಯ ಅಂತರಾಳದಲ್ಲಿ ಬಿಸಿನೀರಿನ ಬುಗ್ಗೆಯೊಂದು ಇದೆ. ಆ ಬಿಸಿನೀರಿನ ಬುಗ್ಗೆ ವಿಶೇಷ ಔಷಧಿ ಗುಣಗಳನ್ನು ಹೊಂದಿದ್ದು ಕೀಲುನೋವು. ಮಂಡಿನೋವು, ಹಾಗೂ ಚರ್ಮರೋಗವನ್ನು ಬಹುಬೇಗನೆ ಗುಣಪಡಿಸುತ್ತದೆ ಎಂದು ಇಲ್ಲಿನವರು ಹೇಳುತ್ತಾರೆ. ಈ ಬಿಸಿನೀರಿನ ಬುಗ್ಗೆಗೆ ಎರಡು ಪ್ರತ್ಯೇಕ ಪೈಪ್‍ಗಳನ್ನು ಜೋಡಿಸಿದ್ದು ಅವು ಹೆಂಗಸರಿಗೆ ಮತ್ತು ಗಂಡಸರಿಗೆ ಪ್ರತ್ಯೇಕವಾಗಿ ಕಟ್ಟಿಸಲಾದ ಸ್ನಾನಗೃಹದ ಎರಡು ದೊಡ್ಡ ಟಬ್‍ಗಳಿಗೆ ಬೀಳುವಂತೆ ಮಾಡಿದ್ದಾರೆ. ಆ ಟಬ್‍ನಲ್ಲಿ ಸುಮಾರು ಎಂಟತ್ತು ಜನ ಒಟ್ಟಿಗೆ ಸ್ನಾನಮಾಡಬಹುದು. ಕೀಲುನೋವು, ಮಂಡಿನೋವು, ಹಾಗೂ ಚರ್ಮರೋಗದ ಖಾಯಿಲೆಯಿರುವವರು ಚಿಕಿತ್ಸೆ ಪಡೆಯಲು ಗಂಟೆಗಟ್ಟಲೆ ಈ ಟಬ್‍ನಲ್ಲಿ ಬಿದ್ದುಕೊಂಡಿರುತ್ತಾರೆ. ಎಷ್ಟೋ ಜನ ದೂರದ ಊರುಗಳಿಂದ ಬಂದು ಇಲ್ಲಿ ಟೆಂಟ್ ಹಾಕಿಕೊಂಡು ತಿಂಗಳಾನುಗಟ್ಟಲೆ ವಾಸಮಾಡಿ ಚಿಕಿತ್ಸೆ ಪಡೆದು ಹಿಂದಿರುಗುತ್ತಾರೆ.
    ನಾನಿರುವ ಊರು ಘಾಟ್‍ನಿಂದ 100 ಕಿ.ಮಿ. ದೂರದಲ್ಲಿರುವ ಅವಿನಾತ್ ಎಂಬ ಊರಿದೆ. ಅಲ್ಲಿನ ಸಹರಾ ಮರಭೂಮಿಯಲ್ಲಿ ನೈಸರ್ಗಿಕವಾಗಿ ಉದ್ಭವಿಸಿದ ಅಪರೂಪದ ಶಿಲಾಕೃತಿಗಳಿವೆ. ಅವು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ನೋಡಲು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಇಲ್ಲಿಂದ 350 ಕಿ.ಮಿ. ದೂರದಲ್ಲಿರುವ ಒಬಾರಿ ಎಂಬ ಪಟ್ಟಣಕ್ಕೆ ಹತ್ತಿರದಲ್ಲಿ “ಗೆಬ್ರಾನ್” ಎಂಬ ಒಂದು ಸರೋವರವಿದೆ. ಇದು ನಯನಮನೋಹರವಾಗಿದ್ದು ಲಿಬಿಯಾದಲ್ಲಿ ಅತ್ಯಂತ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿದೆ. ಇದು ಮರಳು ದಿನ್ನೆಗಳ ಮಧ್ಯ ಇದ್ದು ಸುತ್ತಲೂ ತಾಳೆಮರಗಳಿಂದ ಆವರಿಸಲ್ಪಟ್ಟಿದೆ. “ಗೆಬ್ರಾನ್” ಎನ್ನುವದು ಗೆಬರ್ (ಸಮಾಧಿ) ಮತ್ತು ಆನ್ (ಒಂದು ಹೆಸರು) ಎಂಬ ಎರಡು ಪದಗಳಿಂದ ಉಂಟಾಗಿದ್ದು ಪುರಾತನ ಕಾಲದ ವಲಸೆಗರ ಗುಂಪೊಂದು ಇಲ್ಲಿ ಸ್ವಲ್ಪ ದಿವಸ ತಂಗಿ ಮುಂದೆ ಹೋಗಿರಬಹುದು ಎಂದು ಹೇಳಲಾಗುತ್ತದೆ. ಅದಕ್ಕೆ ಸಾಕ್ಷಿಯಾಗಿ ಮರಳಲ್ಲಿ ಹೂತು ಹೋದ ಅವರ ಸಮಾಧಿಗಳು ಈಗಲೂ ಕಾಣಿಸುತ್ತವೆ. ಇಲ್ಲಿಂದ ಸ್ವಲ್ಪ ದೂರದಲ್ಲಿಯೇ ಫೆಜಾನ್ ಎಂಬ ಹಳ್ಳಿಯಿದೆ. ಇಲ್ಲಿ ಪೆಲಿಯೋಲಿಥಿಕ್ ಮತ್ತು ನಿಯೋಲಿಥಿಕ್ ಕಾಲದ ಜನರು ಬಳಸುತ್ತಿದ್ದ ಕೊಡ್ಲಿ ಹಾಗೂ ಮತ್ತಿತರ ಆಯುಧಗಳು ದೊರಕಿವೆ ಎಂದು ಭೂಗರ್ಭಶಾಸ್ತ್ರಜ್ಞರು ಹೇಳುತ್ತಾರೆ.
     ಮರುಭೂಮಿಯಲ್ಲಿ ನೀರು ಸಿಗುವದೆಂದರೆ ಕೇವಲ ಓಯಾಸಿಸ್ನಲ್ಲಿ ಮಾತ್ರ ಎಂದುಕೊಂಡಿರುವ ಜನರಿಗೆ ಇಲ್ಲೂ ಅಂತರ್ಜಲ ಅಪಾರವಾಗಿದ್ದು ನೆಲದಲ್ಲಿ ನೀರು ಹೇರಳವಾಗಿ ಓಡಾಡುತ್ತಿದೆ ಎಂಬುದು ಗೊತ್ತಿರುವುದಿಲ್ಲ. ಅದೂ ಇಲ್ಲಿನ (ಬೇರೆ ಕಡೆ ಹೇಗೋ ಗೊತ್ತಿಲ್ಲ) ಸಹರಾ ಮರಭೂಮಿಯಲ್ಲಿ ಅಂತರ್ಜಲ ಸಮೃದ್ಧವಾಗಿದ್ದು ಸುಮಾರು ನಲವತ್ತು ಐವತ್ತು ಅಡಿಗೆಲ್ಲಾ ನೀರು ಸಿಕ್ಕುಬಿಡುತ್ತದೆ. ಇತ್ತೀಚಿಗೆ ಇಲ್ಲಿ ಭೂವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪ್ರಕಾರ ಬೇರೆ ಜಾಗಕ್ಕಿಂತ ಇಲ್ಲಿ ಅಂತರ್ಜಲ ಹತ್ತುಪಟ್ಟು ಹೆಚ್ಚಾಗಿದೆಯೆಂದು ತಿಳಿದುಬಂದಿದೆ. ಹಾಗೆಂದೇ ಇಲ್ಲಿ ಯಾವ ಜಾಗದಲ್ಲಿ ಬೇಕಾದರೂ ಬೋರ್ ಹಾಕಿದರೆ ಬಹಳ ಬೇಗನೆ ನೀರು ಸಿಕ್ಕುಬಿಡುತ್ತದೆ ಮತ್ತು ಅದು ಹೆಚ್ಚುಕಮ್ಮಿ ಸಿಹಿಯಾಗಿರುತ್ತದೆ. ನೀವು ನಂಬುತ್ತಿರೋ ಇಲ್ವೋ ಘಾಟ್‍ನಲ್ಲಿ ನಮ್ಮ ಕಾಲೇಜು ಹತ್ತಿರದಲ್ಲಿ ಬೋರ್ವೆಲ್‍ವೊಂದನ್ನು ಹಾಕಿದ್ದು ಅದು ಸುಮಾರು 35 ವರ್ಷಗಳಿಂದ ಅರ್ಧ ಘಾಟ್‍ಗಾಗುವಷ್ಟು ನೀರನ್ನು ಒದಗಿಸುತ್ತಿದೆಯೆಂದೂ ಇಷ್ಟಾದರೂ ಅದರ ಅಂತರ್ಜಲ ಮಾತ್ರ ಕುಸಿದಿಲ್ಲವೆಂದೂ ಇಲ್ಲಿಯ ಜನ ಹೇಳುತ್ತಾರೆ. ಆರು ವರ್ಷದ ನನ್ನ ಘಾಟ್ ಜೀವನದಲ್ಲಿ ಒಂದು ವರ್ಷವೂ ಇಲ್ಲಿನ ಜನ ನೀರಿಗಾಗಿ ತಹತಹಿಸಿದ್ದನ್ನು ನಾನು ನೋಡಿಲ್ಲ. ಮಳೆಯೇ ಬೀಳದ ಈ ಪ್ರದೇಶದಲ್ಲಿ ಅದ್ಹೇಗೆ ನೀರು ಶೇಖರಣೆಗೊಂಡಿದೆ ಹಾಗೂ ವರ್ಷದಿಂದ ವರ್ಷಕ್ಕೆ ಅದ್ಹೇಗೆ ಹೆಚ್ಚುತ್ತಾ ಹೋಗುತ್ತದೆ ಎನ್ನುವ ಪ್ರಶ್ನೆಗೆ ನನಗೆ ಈಗಲೂ ಉತ್ತರ ಸಿಕ್ಕಿಲ್ಲ.
    1953ರಲ್ಲಿ ತೈಲ ಹುಡುಕಾಟಕ್ಕಾಗಿ ಇಲ್ಲಿನ ಭೂಮಿಯನ್ನು ಕೊರಯುತ್ತಿರಬೇಕಾದರೆ ಅಪಾರ ಪ್ರಮಾಣದ ಸಿಹಿನೀರು ಚಿಮ್ಮಿ ಇಲ್ಲಿನ ನೆಲದೊಳಗೆ ಅಡಗಿರುವ ಅಪಾರ ಪ್ರಮಾಣದ ಜಲಸಂಪತ್ತನ್ನು ಪರಿಚಯಿಸತಂತೆ. ಮುಂದೆ 1969ರಲ್ಲಿ ಅಧಿಕಾರಕ್ಕೆ ಬಂದ ಗಡಾಫಿ ಇದರ ಸದ್ಬಳಕೆ ಮಾಡಿಕೊಳ್ಳಲು ಮಾನವ ನಿರ್ಮಿತ ನೀರಾವರಿ ಯೋಜನೆಯೊಂದಕ್ಕೆ ಕೈಹಾಕಿದನಂತೆ. ಅದು 1984ರಲ್ಲಿ ಪೂರ್ಣಗೊಂಡು ಜಗತ್ತಿನ ಅತಿ ದೊಡ್ದ ಮಾನವ ನಿರ್ಮಿತ ನದಿಯೆಂಬ ಹೆಗ್ಗಳಿಕೆಗೆ ಪಾತ್ರವಾಯಿತಂತೆ. ಇಡಿ ಲಿಬಿಯಾದ ತುಂಬಾ ಸುಮಾರು 1,300 ಬಾವಿಗಳಿದ್ದು ದಿನವೊಂದಕ್ಕೆ 7,100,000 ಕ್ಯೂಬಿಕ್ ಮೀಟರ್ ಗಳಷ್ಟು ಟ್ರಪೋಲಿ, ಬೆಂಗಾಜಿ, ಸಿರ್ತ್ ಮುಂತಾದ ನಗರಗಳಿಗೆ ನೀರು ಸರಬರಜಾಗುತ್ತದೆ ಹಾಗೂ ಇದೇ ನೀರನ್ನು ಉಪಯೋಗಿಸಿಕೊಂಡು ಮರಭೂಮಿಯಲ್ಲಿ ಅಲ್ಲಲ್ಲಿ ಬೇಸಾಯ ಮಾಡಿಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳುವವರಿದ್ದಾರೆ. ಹಾಗೆ ನೋಡಿದರೆ ಲಿಬಿಯಾದ ಕೃಷಿ ಚಟುವಟಿಕೆಗಳು ಹೆಚ್ಚು ನಡೆಯುವದು ಸಮುದ್ರ ತೀರದ ಪ್ರದೇಶಗಳಲ್ಲಿ. ಅಲ್ಲಿ ಮುಖ್ಯವಾಗಿ ಬಾರ್ಲಿ, ಗೋದಿ, ಟೊಮ್ಯಾಟೋ, ಕಿತ್ತಳೆ, ಸೇಬು, ಕಲ್ಲಂಗಡಿ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಹಾಗೆಂದೇ ಹೆಚ್ಚಿನ ತರಕಾರಿಗಳು ಟ್ರಿಪೋಲಿ, ಬೆಂಗಾಜಿಯಿಂದ ಇಲ್ಲಿಗೆ ರವಾನೆಯಾಗುತ್ತವೆ. ಆದರೆ ಇಲ್ಲಿ ಮರಭೂಮಿಯಲ್ಲಿ ಸಣ್ಣ ಪ್ರಮಾಣದಲ್ಲಿ ಗೋದಿ, ಬಾರ್ಲಿ, ಕಲ್ಲಂಗಡಿ, ಟೊಮ್ಯಾಟೋ ಮತ್ತು ಮುಖ್ಯವಾಗಿ ಖರ್ಜೂರಗಳನ್ನು ಬೆಳೆಯುತ್ತಾರೆ. ಲಿಬಿಯಾದ ದಕ್ಷಿಣ ಭಾಗದಲ್ಲಿ ಹೆಚ್ಚು ಹಳ್ಳಿಗಳೇ ಇದ್ದು ಇಲ್ಲಿನ ಜನರು ಆಡುಕುರಿಗಳನ್ನು ಸಾಕುವದರಿಂದ ಅವಕ್ಕೆ ಬೇಕಾದ ಹುಲ್ಲನ್ನು ಸಹ ಬೆಳೆದು ಮಾರುತ್ತಾರೆ. ಆದರೆ ಹಾಲು ಮತ್ತು ಮೊಸರಿನ ಪ್ಯಾಕ್ಗಳು ಇಲ್ಲಿಂದ 1500 ಕಿ.ಮಿ. ದೂರದಲ್ಲಿರುವ ಮಿಸ್ರತಾ ಎಂಬ ಊರಿನಿಂದ ಇಲ್ಲಿಗೆ ಬರುತ್ತವೆ. ಮತ್ತು ಬಹಳಷ್ಟು ತರಕಾರಿಗಳು ಸೆಭಾ ಮತ್ತು ಒಬಾರಿಯಿಂದ ಇಲ್ಲಿಗೆ ರವಾನೆಯಾಗುತ್ತವೆ. ಅಂದಹಾಗೆ ಇಲ್ಲಿನವರು ಆಡುಕರಿಗಳನ್ನು ಸಾಕುವದು ಹಬ್ಬಹರಿದಿನಗಳಲ್ಲಿ ಅವುಗಳನ್ನು ಮಾರಿ ಲಾಭಮಾಡಿಕೊಳ್ಳುವದಕ್ಕೆ. ಅಂದರೆ ಅವು ಚಿಕ್ಕವಾಗಿದ್ದಾಗ ಸಣ್ಣ ಬೆಲೆಗೆ ತಂದು ತಮ್ಮ ಫಾರ್ಮ್ ಹೌಸ್‍ಗಳಲ್ಲಿ ಸಾಕಿ ಅವಕ್ಕೆ ಚನ್ನಾಗಿ ತಿನಿಸಿ ದೊಡ್ದದಾದ ಮೇಲೆ ರಮದಾನ್ ಮತ್ತು ಈದ್ ಹಬ್ಬಗಳಿಗೆ ಇತರರಿಗೆ ಒಳ್ಳೆ ಬೆಲೆಗೆ ಮಾರಿ ಲಾಭಮಾಡಿಕೊಳ್ಳುತ್ತಾರೆ.

    ಈಗ ಹೇಳಿ ಮರಭೂಮಿಯೆಂದರೆ ಬರೀ ಬಿಸಿಲು ಮತ್ತು ಮರಳು ಮಾತ್ರವೇ?



    -ಉದಯ್ ಇಟಗಿ