Demo image Demo image Demo image Demo image Demo image Demo image Demo image Demo image

You and me

  • ಬುಧವಾರ, ಏಪ್ರಿಲ್ 27, 2022
  • ಬಿಸಿಲ ಹನಿ
  • You and me I am just a piece of bamboo Only when you touch me with your lips I will be a flute I am just a blank paper Only when you write something on it It will be a poem I am just a stone Only when you chisel me out I will be a sculpture I am just a wire Only when you string me out I will be a rhythm I am just a seed Only when you shower rain on me I will turn into green I am just the sky Only when you spread yourself on it It will turn into colourful feelings I am just a flower Only when you kiss me I will turn into a fruit I am just the earth Only when you become a gravitational power I will make a move I am just a sea Only when you join me I will gain life I am just a lamp Only when you touch me I will give out light I am just water Only when you mix up with it I will be an intoxicating drink I am just a zero Only when you join me I will gain value I am an empty pot Only when you fill yourself in me I will turn into knowledge I am just the way Only when you walk on it My journey will begin From Kannada: Handalagere Girish To English: Uday Itagi ನಾ - ನೀ ನಾ ಕೇವಲ ಬಿದಿರು ನೀ ತುಟಿಯಿಟ್ಟರಷ್ಟೇ ಕೊಳಲು ನಾ ಕೇವಲ ಖಾಲಿ ಹಾಳೆ ನೀ ಗೀಚಿದರಷ್ಟೇ ಕಾವ್ಯ ನಾ ಕೇವಲ ಕಲ್ಲು ನೀ ಮಟ್ಟಿದರಷ್ಟೇ ಶಿಲ್ಪ ನಾ ಕೇವಲ ತಂತಿ ನೀ ಮೀಟಿದರಷ್ಟೇ ಶೃತಿ ನಾ ಕೇವಲ ಬೀಜ ನೀ ಹನಿದರಷ್ಟೇ ಹಸಿರು ನಾ ಕೇವಲ ಬಾನು ನೀ ಮೂಡಿದರಷ್ಟೇ ಬಣ್ಣಭಾವ ನಾ ಕೇವಲ ಹೂ ನೀ ಚುಂಬಿಸಿದರಷ್ಟೇ ಫಲ ನಾ ಕೇವಲ ಭೂಮಿ ನೀ ಗುರುತ್ವವಾದರಷ್ಟೇ ಚಲನೆ ನಾ ಕೇವಲ ಕಡಲು ನೀ ಕೂಡಿದರಷ್ಟೇ ಜೀವ ನಾ ಕೇವಲ ಹಣತೆ ನೀ ಸೋಕಿದರಷ್ಟೇ ಬೆಳಕು ನಾ ಕೇವಲ ನೀರು ನೀ ಬೆರೆತರಷ್ಟೇ ಮಧು ತೀರ್ಥ ನಾ ಕೇವಲ ಸೊನ್ನೆ ನೀ ಸೇರಿದರಷ್ಟೇ ಮೌಲ್ಯ ನಾ ಕೇವಲ ಖಾಲಿ ಕೊಡ ನೀ ತುಂಬಿದರಷ್ಟೇ ಅರಿವು ನಾ ಕೇವಲ ದಾರಿ ನೀ ನಡೆದರಷ್ಟೇ ಪಯಣ - ಹಂದಲಗೆರೆ ಗಿರೀಶ್

    ಶೇಕ್ಸ್‌ಪಿಯರನ ನಿಜ ಬಣ್ಣ ಬಯಲು ಮಾಡಿದ ಶ್ರೀಮತಿ

  • ಭಾನುವಾರ, ಏಪ್ರಿಲ್ 24, 2022
  • ಬಿಸಿಲ ಹನಿ
  • 'ಶೇಕ್ಸ್‌ಪಿಯರನ ಶ್ರೀಮತಿ’- ಆಸಕ್ತಿ ಕೆರಳಿಸಿದ ಸಮರ್ಥ ಪ್ರಯೋಗ. ಇದು ಏಕವ್ಯಕ್ತಿ ಪ್ರದರ್ಶನವಾದರೂ ಎಲ್ಲೂ ಯಾಂತ್ರಿಕವಾಗಿರದೆ, ತನ್ನ ವೈವಿಧ್ಯಪೂರ್ಣ ಅಂಶಗಳಿಂದ ಸುಲಭವಾಗಿ ನೋಡಿಸಿಕೊಂಡು ಹೋದ ಸಮರ್ಥ ಪ್ರಯೋಗವಾಗಿತ್ತು. ಪ್ರಪ್ರಥಮವಾಗಿ ಶೇಕ್ಸ್‌ಪಿಯರನಹೆಸರೇ ಆಸಕ್ತಿಯನ್ನು ಹುಟ್ಟಿಸುವ ಕಥಾವಸ್ತು. ಜಗತ್ಪ್ರಸಿದ್ಧ ನಾಟಕಕಾರನ ಹೆಂಡತಿಯ ಮೂಲಕ ಅನಾವರಣಗೊಳ್ಳುವ ನಾಟಕ ಸಹಜವಾಗಿ ಕುತೂಹಲ ದಕ್ಕಿಸಿಕೊಳ್ಳುವ ನಂಬಿಕೆಯನ್ನು ಹುಸಿಗೊಳಿಸಲಿಲ್ಲ. ‘ಕ್ರಿಯೇಟಿವ್ ಥಿಯೇಟರ್’ ಅರ್ಪಿಸಿದ ‘ಶೇಕ್ಸ್‌ಪಿಯರನಶ್ರೀಮತಿ’ ಲೇಖಕ ಉದಯ್ ಇಟಗಿಯವರು ವಿವಿಧ ಆಕರಗಳಿಂದ ಸಂಗ್ರಹಿಸಿ ಬರೆದ ಸ್ವೋಪಜ್ಞತೆಯನ್ನು ತೋರಿದ ಸ್ವಾರಸ್ಯಕರ ಏಕವ್ಯಕ್ತಿ ರಂಗಪ್ರಯೋಗ. ರಂಗದ ಮೇಲೆ ತರಲು ಸವಾಲಾಗಬಲ್ಲಂಥ ನಾಟಕವನ್ನು ನಿರ್ದೇಶಕ ವಿಶ್ವರಾಜ್ ಪಾಟೀಲ್ ಮನಮುಟ್ಟುವಂತೆ ಹರಿತವಾಗಿ ನಿರ್ದೇಶಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಶ್ರೀಮತಿಯ ಅಂತರಂಗವನ್ನು, ತುಮುಲ-ವಿಷಾದಗಳನ್ನು ನೋಡುಗರಿಗೆ ಪರಿಣಾಮಕಾರಿಯಾಗಿ ಮುಟ್ಟಿಸಿದವರು ಹಿರಿಯ ನಟಿ ಲಕ್ಷ್ಮೀ ಚಂದ್ರಶೇಖರ್. ಜನಪ್ರಿಯತೆ ಮತ್ತು ಖ್ಯಾತಿಯನ್ನು ವಿಶ್ವಾದ್ಯಂತ ಪಡೆದುಕೊಂಡಿರುವ ರಂಗಪ್ರೇಮಿಗಳ ಆರಾಧ್ಯದೈವ ಷೇಕ್ಸ್ ಪಿಯರ್ ನ ಅಂತರಂಗದ ಬದುಕಿನ ಪಾತಳಿಗೆ ದುರ್ಬೀನಿಡುವ ಈ ಪ್ರಯತ್ನ ರಂಗದ ಮೇಲೆ ಹೇಗೆ ಅರಳುವುದೋ ಎಂಬ ಕುತೂಹಲ ನೋಡುಗನ ಊಹೆಯನ್ನೂ ಮೀರಿತ್ತು. ಕ್ರಿ.ಶ. ಹದಿನಾರು ಮತ್ತು ಹದಿನೇಳನೆಯ ಶತಮಾನದ ಕಾಲಘಟ್ಟದಲ್ಲಿ ಇಂಗ್ಲೆಂಡಿನಲ್ಲಿ ಜೀವಿಸಿದ್ದು, ನಾಟಕ ಮತ್ತು ಕಾವ್ಯಕ್ಕೆ ಹೊಸದಿಕ್ಕನ್ನು ತೋರಿದ ಮಹತ್ವದ ಬರಹಗಾರ ವಿಲಿಯಂ ಷೇಕ್ಸ್ ಪಿಯರ್, ಜಗದ ಕಣ್ಣಿಗೆ ಕಂಡಿದ್ದಕ್ಕಿಂತ ವಿಭಿನ್ನವಾಗಿ ಅವನ ಹೆಂಡತಿ ಆನಿ ಹ್ಯಾಥ್ವೆಯ ಸ್ವಗತದ ಮಾತುಗಳಿಂದ ಅವನ ವ್ಯಕ್ತಿತ್ವವನ್ನು ಒರೆಗೆ ಹಚ್ಚುವ ಬಗೆ ವಿಶಿಷ್ಟವಾಗಿತ್ತು. ಬಹು ಸರಳವಾದ ಮನಂಬುಗುವ ಭಾಷೆಯಲ್ಲಿ ಶ್ರೀಮತಿ ತನ್ನ ಸರಳ-ಬಿಚ್ಚುಮನದ ಸ್ವಭಾವಕ್ಕನುಗುಣವಾಗಿ ಗೊಂದಲಮಯವಾದ ಅವನ ಬದುಕಿನ ಹೆಜ್ಜೆಗಳನ್ನು ತಾನು ಕಂಡಂತೆ ತೆರೆದಿಡುವ ಪರಿ ಆಪ್ಯಾಯಮಾನ. ಅವಳಿಗಿಂತ ಎಂಟುವರ್ಷ ಕಿರಿಯನಾದ ಹದಿನೆಂಟರ ಯುವಕ ಷೇಕ್ಸ್ ಪಿಯರ್ ತಾನಾಗೇ ಅವಳ ಸ್ನೇಹ ಬಯಸಿ, ಮುಂದುವರೆದು, ಆಕೆಯ ಗರ್ಭಕ್ಕೆ ಕಾರಣನಾಗಿ ಪಂಚಾಯಿತಿಯ ತೀರ್ಮಾನಕ್ಕೆ ಮಣಿದು ಒತ್ತಾಯಕ್ಕೆ ಅವಳನ್ನು ಮದುವೆಯಾದವನು. ರಸಿಕ, ಚಂಚಲಚಿತ್ತ ಗಂಡನ ಬಗ್ಗೆ ಅವಳಿಗೆ ಸದಾ ಗುಮಾನಿ-ಗೊಂದಲ. ಸಿರಿವಂತ ಮನೆತನದ ಸೋಮಾರಿ ಅತ್ತೆ, ಬೇಜವಾಬ್ದಾರಿ ಸ್ವಭಾವದ ಕುಡುಕ ಮಾವ, ಜೊತೆಗೆ ತಿಕ್ಕಲುತನದ ಸುಳ್ಳುಗಾರ, ಸ್ತ್ರೀಲೋಲುಪ ಗಂಡನೊಡನಾಟದ ಸಂಸಾರದಲ್ಲಿ ಮೂರುಮಕ್ಕಳು ಬೇರೆ. ಏಕಾಂಗಿಯಾಗಿ ಸಂಸಾರ ನಿಭಾಯಿಸುವ ಗಟ್ಟಿಗಿತ್ತಿ ಹೆಣ್ಣಾಗಿ ಆಕೆ, ಮನೆಯಲ್ಲೇ ಸಣ್ಣಪುಟ್ಟ ಕೆಲಸಗಳಿಂದ ಹಣ ಸಂಪಾದಿಸುವ ಶ್ರಮಜೀವಿ. ಸಂಸಾರದ ಜವಾಬ್ದಾರಿ ಹೊರದ ಗಂಡ ಲಂಡನ್ನಿಗೆ ಪಲಾಯನ ಮಾಡಿ, ಅಲ್ಲಿ ಹೆಣ್ಣು-ಹೆಂಡಗಳ ಸಹವಾಸದಲ್ಲಿದ್ದರೂ ಅದನ್ನು ಪ್ರತಿಭಟಿಸದ ಒಳ್ಳೆಯ ಹೆಂಡತಿ ಇವಳು. ಸಲಿಂಗಕಾಮಿಯಾಗಿಯೂ ಆಗಿದ್ದ ಅವನ ಎಲ್ಲ ದೌರ್ಬಲ್ಯಗಳ ಬಗ್ಗೆ ತಿಳಿದಿದ್ದರೂ ಇವಳು ತಲೆಕೆಡಿಸಿಕೊಳ್ಳದ ಪ್ರಶಾಂತೆ. ಅವನ ಸಾನೆಟ್ಟಿನಂತೆ ತಾನು ಅವನ ಪಾಲಿಗೆ ‘ಬೇಸಿಗೆಯ ಹಗಲಾಗದೆ, ಚಳಿಗಾಲದ ದಿನದಂತೆ’ ಆದ ತಾನು ಅವನ ಮೈ-ಮನ ಬೆಚ್ಚಗಿರಿಸಲಾಗಲಿಲ್ಲ ಎಂಬ ವಿಷಾದವೂ ಅವಳಲ್ಲಿದೆ. ಸಾಹಿತ್ಯಪ್ರೇಮಿಯಲ್ಲದ ತಾನು ಅವನಿಗೆ ಸರಿಜೋಡಿಯಲ್ಲ ಎಂಬ ಅರಿವೂ ಇದೆ. ಪ್ರಪಂಚದ ಎಲ್ಲ ಕವಿಗಳು, ಲೇಖಕರು ಸುಳ್ಳುಗಾರರೇ ಎಂದು ಮೂದಲಿಸುವ ಶ್ರೀಮತಿ ‘ಗಂಡಂದಿರ ಮನಸ್ಸನ್ನು ಮಾತ್ರ ಬಗೆದು ನೋಡಬಾರದು..ಅದು ನಿಗೂಢ-ಹೊಲಸು’ ಎಂದು ಬಹು ಮಾರ್ಮಿಕವಾಗಿ ನುಡಿಯುತ್ತಾಳೆ. ತಮ್ಮದು ವಿರಸ ದಾಂಪತ್ಯವಾದರೂ, ಗಂಡನ ಬರವಣಿಗೆ ಶಕ್ತಿಯ ಬಗ್ಗೆ ಮೆಚ್ಚುವ ಅವಳಲ್ಲಿ ಅವನ ಕೆಟ್ಟಚಾಳಿಗಳ ಬಗ್ಗೆ ತಿರಸ್ಕಾರ ಇದ್ದೇ ಇರುತ್ತದೆ. ಬೈಬಲನ್ನು ನಂಬಿದ ತಾನು ಸದ್ಗೃಹಿಣಿ, ನೆಟ್ಟಗೆ ಬಾಳುತ್ತಿರುವ ತನಗೇನೂ ತಿಳಿಯದು ಎಂದು ಎಲ್ಲವನ್ನೂ ಮುಕ್ತವಾಗಿ ಮಾತನಾಡುವ ಶ್ರೀಮತಿ, ಹತ್ತಿರವಿದ್ದೂ ದೂರ ಉಳಿದ ಗಂಡನ ಅಸಾಂಗತ್ಯದ ಬಗ್ಗೆ ಜರಡಿ ಹಿಡಿದು ಜಾಲಾಡುವ, ವಿಶ್ಲೇಷಿಸುವ ವಿಚಾರಗಳು ಬಹು ಅರ್ಥಗರ್ಭಿತ. ‘ಪ್ರಸಿದ್ಧ ವ್ಯಕ್ತಿಗಳ ಬದುಕಿನ ಚಿತ್ರಣ ಕಟ್ಟಿಕೊಡುವಾಗ ಅವರ ಬದುಕಿನಲ್ಲಿ ಬಂದ ಇತರೆ ಹೆಣ್ಣುಗಳನ್ನು ಮಾತ್ರ ಹೈಲೈಟ್ ಮಾಡುತ್ತಾರೆಯೇ ವಿನಃ ಅವರ ಕೈಹಿಡಿದ ಹೆಂಡತಿಯ ವಿಷಯವನ್ನು ಮಾತ್ರ ಎಲ್ಲೂ ಹೊರಗೆಡಹುವುದೇ ಇಲ್ಲ’ ಎಂಬ ವಿಷಾದ ವ್ಯಕ್ತಪಡಿಸುತ್ತಾಳೆ. ‘ಪ್ರಸಿದ್ಧರು ಪ್ರಸಿದ್ಧಿಗೆ ಬರುವುದರ ಹಿಂದೆ ಅವರ ಹೆಂಡತಿಯರ ಶ್ರಮ, ತ್ಯಾಗದ ದೊಡ್ಡಕಥೆಯನ್ನು ಯಾರೂ ಲೆಕ್ಕಿಸುವುದಿಲ್ಲ’ ಎಂಬ ಅವಳ ನೋವಿನ ಹಳವಂಡ ಆಕೆಯ ಬದುಕಿನ ನಿಶಬ್ದ ಕ್ರೌರ್ಯ-ದುರಂತವನ್ನು ಎತ್ತಿ ಹಿಡಿಯುತ್ತದೆ. ಷೇಕ್ಸ್ ಪಿಯರ್ ತನ್ನ ಜೀವಿತಾವಧಿಯ ಕಡೆಯ ಐದುವರ್ಷಗಳು ಹೆಂಡತಿಯ ಆರೈಕೆಯಲ್ಲೇ ಇದ್ದರೂ ಅವನು ತನ್ನ ಹಳೆಯ ಗೆಳತನದ ಗುಂಗಿನಲ್ಲೇ ಇದ್ದನೇ ಎಂಬ ಅಸ್ಪಷ್ಟತೆ – ಅಪರಿಚಿತತೆ ಅವಳ ಬೆರಗು. ತನ್ನ ಐವತ್ತೆರಡನೆಯ ಹುಟ್ಟಿದಹಬ್ಬದ ದಿನವೇ ಮರಣಿಸಿದ ಷೇಕ್ಸ್ ಪಿಯರನ್ ವಂಶ ತನ್ನ ಮಕ್ಕಳೊಂದಿಗೆ ಕೊನೆಯಾದ ಬಗ್ಗೆ ಶ್ರೀಮತಿ ವಿಷಾದಿಸಿದರೂ, ಎಂದೂ ಆಪ್ತವಾಗದ ಗಂಡ ಎಂದೂ ತನ್ನ ಕನಸಿನಲ್ಲೂ ಸುಳಿದಿಲ್ಲ ಎಂಬ ಕಹಿಭಾವನೆಯನ್ನು ಒಸರಿಸುವ ಅವಳ ನಿಟ್ಟುಸಿರ ಅಭಿವ್ಯಕ್ತಿಯಲ್ಲಿ ಪ್ರಸಿದ್ಧ ಕವಿಯ ಹೆಂಡತಿಯರ ಅಸಮ ದಾಂಪತ್ಯದ ಸಾರ್ವತ್ರಿಕತೆಯನ್ನು ಬಿಂಬಿಸುತ್ತಾಳೆ. ನಾಟಕ ನೋಡಿದ ಮೇಲೆ ಜಗ ಮೆಚ್ಚಿದ ಶೇಕ್ಸ್‌ಪಿಯರನಪ್ರತಿಭೆ- ಅವನ ಹೆಂಡತಿಯ ಅಂತರಂಗದ ತೊಳಲಾಟ-ಸ್ಪಂದನಗಳ ಓಘದ ಮುಂದೆ ಮಂಕಾಗಿ ತೋರುತ್ತದೆ. ಎಲ್ಲ ಪ್ರಸಿದ್ಧರ ಹೆಂಡತಿಯರ ಅಂತರಂಗದ ಜ್ವಾಲಾಮುಖಿಗಳಿಗೆ ಕನ್ನಡಿ ಹಿಡಿವ, ಶೇಕ್ಸ್‌ಪಿಯರನಹೆಂಡತಿ ಮೇಲ್ನೋಟಕ್ಕೆ ಒರಟಳಂತೆ ಕಂಡರೂ ಅವಳ ಪ್ರಾಮಾಣಿಕತೆಯ ವ್ಯಕ್ತಿತ್ವ ಕಂಡು ಮನಸ್ಸು ಮಿಡಿಯುತ್ತದೆ. ಶೇಕ್ಸ್‌ಪಿಯರನಹೆಂಡತಿಯಾಗಿ ಹೃದಯಸ್ಪರ್ಶೀ ಅಭಿನಯ ನೀಡಿದ ಲಕ್ಷ್ಮೀ ಚಂದ್ರಶೇಖರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಟಕಾವಧಿ ಒಂದು ಗಂಟೆಯುದ್ದಕ್ಕೂ ಎಲ್ಲೂ ಬೇಸರ ಹಣಕದಂತೆ ರಂಗದ ಮೇಲಿನ ಆಕೆಯ ಚಲನೆ, ಚಟುವಟಿಕೆಗಳು ಪೂರಕವಾಗಿವೆ. ಇದನ್ನು ಆಗುಮಾಡಿದ ನಿರ್ದೇಶಕ ವಿಶ್ವರಾಜ್ ಪಾಟೀಲರು ಅಭಿನಂದನೀಯರು. ಉತ್ತಮ ರಂಗಸಜ್ಜಿಕೆ- ರಂಗಪರಿಕರ (ವಿಶ್ವನಾಥ ಮಂಡಿ) ಧ್ವನಿ ಸಂಯೋಜನೆ (ಗಜಾನನ ನಾಯ್ಕ) ಬೆಳಕಿನ ವಿನ್ಯಾಸ ( ಮುದ್ದಣ್ಣ ರಟ್ಟಿಹಳ್ಳಿ) ವಸ್ತ್ರವಿನ್ಯಾಸ (ಮಂಗಳಾ.ಎನ್) ಪ್ರಸಾಧನ (ರಾಮಕೃಷ್ಣ ಕನ್ನರಪಾಡಿ) ಪರಿಪೂರ್ಣವಾಗಿತ್ತು. ಒಟ್ಟಾರೆ ನಾಟಕದ ಎಲ್ಲ ಅಂಶಗಳಲ್ಲೂ ನೋಡುಗನಿಗೆ ತೃಪ್ತಿ ನೀಡಿದ್ದು ನಾಟಕದ ಗೆಲುವು!! ಖ್ಯಾತನಾಮರ ಹೆಂಡಂದಿರ ದನಿಗೆ ಹೊರತೂಬು ನೀಡಿದರೆ ಅವರ ಗಂಡಂದಿರ ಮುಖವಾಡಗಳು ಕಳಚಿ ನಿಜಬಣ್ಣ ಬಯಲಾಗುವುದು ಎಂಬ ಸೂಚ್ಯಾರ್ಥ ಇಂಥ ನಾಟಕಗಳ ಸಂದೇಶವೆನ್ನಬಹುದೇನೋ?!!! -ವೈ.ಕೆ.ಸಂಧ್ಯಾ ಶರ್ಮ

    ತನ್ನ ಶ್ರೀಮತಿಯಿಂದಲೇ ವಿಮರ್ಶಿಗೊಳಗಾದ ಜಗತ್ಪ್ರಸಿದ್ಧ ಪತಿ

  • ಬುಧವಾರ, ಏಪ್ರಿಲ್ 20, 2022
  • ಬಿಸಿಲ ಹನಿ
  • ತನ್ನ ಶ್ರೀಮತಿಯಿಂದಲೇ ವಿಮರ್ಶಿಗೊಳಗಾದ ಜಗತ್ಪ್ರಸಿದ್ಧ ಪತಿ..।ಗೋರಿಯಿಂದೆದ್ದು ಕುಳಿತು ಅಂತರಂಗ ತೋಡಿಕೊಳ್ಳುವ ಸತಿ…ವಿಶ್ವವಿಖ್ಯಾತ ನಾಟಕಕಾರನ ಜೀವನದ ಪ್ರಮುಖ ಪಾತ್ರಧಾರಿಣಿಯ ನಿಜಬದುಕಿನ ಗತಿಸ್ಥಿತಿ…ಅಂದಿನ ಇಂಗ್ಲಿಷ್ ಸಮಾಜದ ಬಾಳುವೆಯ ಒಟ್ಟಂದದ ರೀತಿನೀತಿ…ಪ್ರಖರ ಬೌದ್ಧಿಕ ,ಭಾವುಕ , ಸಂಫರ್ಷದಲ್ಲಿ,ಮೆಟಾಫರ್ ಗಳ ಗುಂಗಿನಲ್ಲಿ ದಣಿದು , ನಿಷಿದ್ಧ ಸ್ನೇಹಗಳ ಬಂಧನದಲ್ಲಿ ಸ್ಪೂರ್ತಿ ಗೊಂಡ ಮಹಾಕವಿಯ ಮನಸ್ಥಿತಿ.. ಗಂಡನಿಂದ ಸರಳ ಪ್ರೇಮ,ಜೀವನ ನಿರ್ವಹಣೆಯ ಹೊಣೆಯನ್ನು ಬಯಸಿ,ಹಾಗಾಗದಿದ್ದಾಗಲೂ ಕಂಗೆಡದೆ ದುಡಿದು ಘನತೆಯ ಬಾಳು ಕಟ್ಟಿಕೊಂಡ ಛಲಗಾತಿ…ನಾವರಿಯದ ಶೇಕ್ಸಪಿಯರನ್ನು ಯಾವುದೇ ರಾಗ ದ್ವೇಷಗಳಿಲ್ಲದೆ ತಣ್ಣನೆಯ ದನಿಯಲ್ಲಿ ಪ್ರಾಮಾಣಿಕವಾಗಿ ಪದಚಿತ್ತಾರಗಳಲ್ಲಿ ಚಿತ್ರಿಸುವ ಕಲೆಗಾರ್ತಿ… ಅವಳ ಭಾವಗಳನ್ನು ಸ್ಪಷ್ಟವಾಗಿ ಹೇಳುವ ಕಥೆಗಾರ್ತಿ..ಸರಳೆಯಾದ ಶ್ರೀಮತಿ ಮಹಾಕವಿಯ ತಳಮಳ,ಎದೆಗುದಿ.ವಿಕ್ಷಿಪ್ತತೆಯೂ ಇಲ್ಲಿ ಆಪ್ತವೇ ಆಗಿಬಿಡುವ ಕವಿಯ ಬಗೆಗಿನ ಕಡುಪ್ರೀತಿ.।ಓಹ್ ಅಧ್ಭುತ. ನಿಜಕ್ಕೂ ಈ ಪುಟ್ಟಪುಸ್ತಕ ಮಹಾಕವಿಯ ಬದುಕಿನ ನಾವರಿಯದ ಆಯಾಮಗಳನ್ನು ಹೊರೊಮ್ಮಿಸಿದೆ. ಇಂತಹುದೊಂದು ಅಮೂಲ್ಯ ವಸ್ತುವನ್ನು ಅಧ್ಯಯನ ಮಾಡಿ.ಬರಹ ರೂಪಕ್ಕೆ ತಂದು..ಅದರಲ್ಲೂ ರಂಗಪ್ರಯೋಗಕ್ಕೆ ಅಳವಡಿಸುತ್ತಿರುವ ನಿಮ್ಮ ಸಾಹಸ ಯಶಸ್ವಿಯಾಗಲಿೇ ಶ್ರೀಯುತ ಉದಯ ಇಟಗಿಯವರೇ.।ಶುಭಹಾರೈಕೆಗಳು..।
    -ಶುಭದಾ ಎಚ್. ಎನ್.

    ದಕ್ಷಿಣ ಕನ್ನಡದ ಹಿರಿಯ ಲೇಖಕ ಉದಯ ಕುಮಾರ ಹಬ್ಬು ಅವರು ನನ್ನ "ಶೇಕ್ಸಪಿಯರನ ಶ್ರೀಮತಿ" ನಾಟಕವನ್ನು ಓದಿ ಸಣ್ಣದೊಂದು ವಿಮರ್ಶೆಯನ್ನು ಬರೆದಿದ್ದಾರೆ.

  • ಗುರುವಾರ, ಏಪ್ರಿಲ್ 14, 2022
  • ಬಿಸಿಲ ಹನಿ
  • ದಕ್ಷಿಣ ಕನ್ನಡದ ಹಿರಿಯ ಲೇಖಕ ಉದಯ ಕುಮಾರ ಹಬ್ಬು ಅವರು ನನ್ನ "ಶೇಕ್ಸಪಿಯರನ ಶ್ರೀಮತಿ" ನಾಟಕವನ್ನು ಓದಿ ಸಣ್ಣದೊಂದು ವಿಮರ್ಶೆಯನ್ನು ಬರೆದಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು. ಸಾಹಿತಿ ಉದಯ ಇಟಗಿಯವರು ಈ ಏಕವ್ಯಕ್ತಿ ರಂಗಪ್ರಯೋದ ನಾಟಕ "ಶೇಕ್ಸ್‌ಪಿಯರ್‌ ನ ಶ್ರೀಮತಿ" ಯನ್ನು ಪ್ರೀತಿಯಿಂದ ಕಳಿಸಿದ್ದಾರೆ.‌ಈ ನಾಟಕ ಬರೆಯಲು ಅನೇಕ ಆಕರಗಳನ್ನು ಆಧರಿಸಿ ಸೊಗಸಾಗಿ ಬರೆದಿದ್ದಾರೆ. ಶೇಕ್ಸ್‌ಪಿಯರ್ ನ ಹೆಂಡತಿ ಆನಿ ಹ್ಯಾಥ್ವೆ ಇವಳ ದಾಂಪತ್ಯದ ಬದುಕು ಹೇಗಿತ್ತು ಎಂಬ ಪ್ರಕರಣವನ್ನು ಶ್ರೀಮತಿಯ ಸ್ವಗತದ ರೂಪದಲ್ಲಿ ಚಿತ್ರಿಸಲಾಗಿದೆ. ಸ್ವಗತ ಈ ನಾಟಕದ ತಂತ್ರ. ಸಾಮಾನ್ಯವಾಗಿ ಖ್ಯಾತನಾಮರ ಹೆಂಡತಿಯ ಬದುಕು ದುಃಖ ನೋವು ದುಮ್ಮಾನ, ಗಂಡನ ತಾತ್ಸಾರ ಅಥವಾ ಸಮಯಾಭಾವದ ಕೊರತೆ, ಗಂಡನ ಅನ್ಯಸ್ತ್ರೀಗಮನ ಇವೆಲ್ಲವೂ ಇದ್ದು ಅವುಗಳನ್ನು ತಾಳ್ಮೆಯಿಂದ ಕೌಶಲ್ಯದಿಂದ ತೂಗಿಸಿಕೊಂಡು ಹೋಗುವ ಚಾಕಚಕ್ಯತೆಯ ಗಟ್ಡಿ ಹೆಣ್ಣು ಮಾತ್ರ ಸಂಸಾರ ಸಾಗರದಲ್ಲಿ ಯಶಸ್ವಿಯಾಗಿ ಈಜಬಲ್ಲಳು.‌ಗಾಂಧಿಜೀಯವರ ಹೆಂಡತಿ ಕಸ್ತೂರಬಾ ಅವರ ದಾಂಪತ್ಯ ಬದುಕು ಸುಖಮಯವಾಗಿತ್ತೆ? ಅಂತೆಯೆ ಶೇಕ್ಸ್‌ಪಿಯರ್ ನ‌ ಹೆಂಡತಿಯ ಬದುಕೂ ಏನು ಸುಖದ ಸುಪ್ಪತ್ತಿಗೆಯಾಗಿರಲಿಲ್ಲ.‌ಗಂಡನ ಖ್ಯಾತಿಯ ದೀಪದ ಬೆಳಕಿನ ದೀಪದ ಬುಡದ ಕತ್ತಲಾಗಿಯೆ ಬದುಕನ್ನು ಹೆಂಡತಿ ನವೆಯುತ್ತ ಸವಿಸುತ್ತಾಳೆ. ಶೇಕ್ಸ್‌ಪಿಯರ್ ನ‌ಹೆಂಡತಿ ಸ್ವತಃ‌ ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿ ತನ್ನ ಮೂರು‌ ಮಕ್ಕಳನ್ನೂ ಅತ್ತೆ ಮಾವಂದಿರನ್ನೂ ಸಾಕುತ್ತಾಳೆ. ಶೇಕ್ಸ್‌ಪಿಯರ್ ನ‌ ಬದುಕಿನ ಸಂಕಥನಗಳಲ್ಲಿ ಊಹಾಪೋಹಗಳೇ ಹೆಚ್ಚು. ಅವನು‌ ಹೆನ್ರಿ ರಿಜ್ಲಿಯೊಂದಿಗೆ ಸಲಿಂಗಕಾಮದ ಜೊತೆಗಾರನಾಗಿ,‌ಮುಂದೆ Dark Lady ಪ್ರಿಯಕರನಾಗಿ ಚಿತ್ರಿತಗೊಂಡಿರುವುದು ಶೇಕ್ಸ್‌ಪಿಯರ್ ಬರೆದ ೧೫೪ಕ್ಕೂ ಮಿಕ್ಕಿ ಬರೆದ ಸಾನೆಟ್ಟುಗಳ ಆಧಾರದ ಮೇಲೆ ಊಹಿಸಲ್ಪಟ್ಟ ಸಂಕಥನಗಳು. ಈ ನಾಟಕ ರಂಗ ಪ್ರಯೋಗಕ್ಕೆ ಸಜ್ಜಾಗಿದೆ. ಖ್ಯಾತ ನಟಿ ಪ್ರೊ ಲಕ್ಷ್ಮಿ ಚಂದ್ರಶೇಖರ ಶ್ರೀಮತಿ ಶೇಕ್ಸ್‌ಪಿಯರ್ ನ ಪಾತ್ರದಲ್ಲಿ ಬರಲಿದ್ದಾರೆ. ಈ ನಾಟಕವನ್ನು ಒಂದು ಐದು ಅಂಕಗಳ ನಾಟಕವನ್ನಾಗಿ ಮಾಡಬಹುದಾದ ಎಲ್ಲ ಆಕರಗಳ ಆಧಾರಗಳೂ ಇದ್ದವು. ಶೇಕ್ಸ್‌ಪಿಯರ್, ಅವನ ಹೆಂಡತಿ, ಹೆನ್ರಿ ರಿಜ್ಲಿ, ಅವನ ಮೂರು ಮಕ್ಕಳು, ಹೀಗೆ ವಿಸ್ತೃತವಾಗಿ ಒಂದು ದೊಡ್ಡ ನಾಟಕ ಬರೆಯಬಹುದಿತ್ತು. ಏಕವ್ಯಕ್ತಿ ರಂಗ ಪ್ರದರ್ಶನವು ನುರಿತ ನಟಿಯ ಅಭಿನಯದಿಂದ ಜನರ ಮನಸ್ಸನ್ನು ಸೆಳೆಯಬಹುದು‌. ಈ ಹೊಸ ಪ್ರಯೋಗವನ್ನು ಕನ್ಬಡಕ್ಕೆ ಪರಿಚಯಿಸಿದ ಉದಯ ಇಟಗಿ ಇವರನ್ನು ಅಭಿನಂದಿಸುವೆ.

    ಉದಯ ಇಟಗಿಯವರ "ಶೇಕ್ಸ್ ಪಿಯರ್ ನ ಶ್ರೀಮತಿ"

  • ಸೋಮವಾರ, ಏಪ್ರಿಲ್ 11, 2022
  • ಬಿಸಿಲ ಹನಿ
  • "Mrs. Shakespeare" ಎನ್ನುವ ನಾಟಕ ಇಂಗ್ಲೆಂಡಿನಲ್ಲಿ ಪ್ರದರ್ಶನವಾಗಿದ್ದನ್ನು ಕೇಳಿ, "ರಾಬರ್ಟ್ ನೇ" ಅವರ ಸ್ತ್ರೀವಾದಿ ಕಾದಂಬರಿ ಓದಿ, ಈ ಬಗ್ಗೆ ನಟರಾಜ್ ಹುಳಿಯಾರ್ ಅವರ ಒಂದು ಲೇಖನ ಓದಿ ಹುಟ್ಟಿದ ಈ ಕೃತಿಯು ಈಗ ಓದುಗರ ಮುಂದಿದೆ. ಓದುಗರಿಗೆ ಪರಿಚಿತವಾದ ಶೇಕ್ಸ್ ಪಿಯರ್ ನ ಸಾಲುಗಳಿಂದಲೇ ಆರಂಭವಾಗುವ ಕೃತಿ ಅವುಗಳನ್ನು ಹೇಳುತ್ತಿರುವ ಆನಿ ಹ್ಯಾಥ್ವೇ ಶೇಕ್ಸ್ ಪಿಯರ್ ಳ ಅಂತರಾಳವನ್ನು ತೆರೆದಿಡುತ್ತಾ, ಶೇಕ್ಸ್ ಪಿಯರ್ ಅವಳಿಗೆ ಹೇಗೆ ಅನಿಸಿದ್ದ, ಆರಂಭದಲ್ಲಿ ಹೇಗಿದ್ದ ,ಹೇಗೆ ಜೀವನ ನಡೆಸಿದ್ದ, ಅಂತ್ಯದಲ್ಲಿ ಹೇಗಾದ ಎಂಬ ಎಲ್ಲ ಏರಿಳಿತಗಳನ್ನು ಸಮಗ್ರವಾಗಿ ನೋಡುಗರ ಮುಂದಿಡುವ ಒಂದು ಶ್ಲಾಘನೀಯ ಪ್ರಯತ್ನ ಇಲ್ಲಿದೆ. ಹದಿನೆಂಟರ ಹರೆಯದ ಶೇಕ್ಸ್ ಪಿಯರ್ ತನಗಿಂತ ಎಂಟು ವರ್ಷ ದೊಡ್ಡವಳಾದ ಆನಿ ಹ್ಯಾಥ್ವೇ ಳನ್ನು ಪ್ರೇಮಿಸಿದನಾ? ಇವರ ಮದುವೆಯ ಬಗ್ಗೆ ಇರುವ ಊಹಾಪೋಹಗಳು ಇಲ್ಲಿ ಆನ ಹ್ಯಾಥ್ವೇ ದೃಷ್ಟಿಯಿಂದ ಬರೆಯಲ್ಪಟ್ಟಿವೆ. ಇಲ್ಲಿ ಆನೆ ತನ್ನ ಗಂಡನ ಬಗ್ಗೆ 'ಹೊಂದಿರಬಹುದಾಗಿದ್ದ' ಭಾವನೆಗಳನ್ನು ಕೆಲವೊಮ್ಮೆ ಭಾವುಕಳಾಗಿ ಮತ್ತೆ ಕೆಲವೊಮ್ಮೆ ನಿರ್ಭಾವುಕಳಾಗಿ ಹೇಳುತ್ತಾಳೆ. ಆ ಮೂಲಕ ಕಥೆಯೊಂದನ್ನು ಕಟ್ಟಿಕೊಡುತ್ತಾಳೆ. ಅವಳ ಪ್ರೇಮ-ಕಾಮ, ಈರ್ಷೆ, ಸಿಟ್ಟು ಎಲ್ಲವೂ ಒಂದು ಹದಕ್ಕೆ ತಿರುಗಿದೆ. ಶೇಕ್ಸ್ ಪಿಯರ್ ನ ಬದುಕು ಮತ್ತು ಬರಹವನ್ನು ಅವನ ಸಂಗಾತಿಯ ಕಣ್ಣುಗಳಿಂದ ನೋಡುವುದೇ ಒಂದು ಹೊಸತನ. ಇದು ಸಾಹಿತ್ಯಕ್ಕೆ ಇರುವ ಅನಂತ ಸಾಧ್ಯತೆಗಳ ಪರಿಚಯವೂ ಹೌದು. ಇಲ್ಲಿನ ಆನೆ ಹ್ಯಾಥ್ವೇ ಒಬ್ಬ ದಿಟ್ಟ ಹೆಂಗಸು; 'ಮಹಾನ್' ಶೇಕ್ಸ್ ಪಿಯರನ ಹಂಗನ್ನು ದಾಟಿದವಳು! ಉದಯ ಇಟಗಿಯವರು ಬರೆದ ಈ ನಾಟಕ ನಮ್ಮಿಂದ ಒಂದೇ ಉಸಿರಿಗೆ ಹಾಗೆಯೇ ಕುತೂಹಲದಿಂದ ಓದಿಸಿಕೊಳ್ಳುತ್ತದೆ. ಓದಿದ ನಂತರ ನಾಟಕದ "ಸ್ವಾದ" ನಮ್ಮೊಳಗೆ ಸದಾ ಉಳಿಯುತ್ತದೆ. ರಂಗ ಪ್ರಯೋಗಕ್ಕೂ ಸಜ್ಜಾಗಿ ನಿಂತಿರುವ ಈ ಕೃತಿ ಖಂಡಿತವಾಗಿಯೂ ಯಶಸ್ವಿಯಾಗುತ್ತೆ ಎನ್ನುವ ಭರವಸೆಯನ್ನು ಈ ಪಾತ್ರ ಮಾಡುತ್ತಿರುವ ಶ್ರೀಮತಿ ಲಕ್ಷ್ಮೀ ಚಂದ್ರಶೇಖರ್ ರವರೂ ವ್ಯಕ್ತಪಡಿಸಿದ್ದಾರೆ.

    ಶೇಕ್ಸ್‌ಪಿಯರನ ಶ್ರಿಮತಿ ರಂಗವೇರುವ ದಿನ ಬಂದೇ ಬಿಟ್ಟಿತು

  • ಶುಕ್ರವಾರ, ಏಪ್ರಿಲ್ 08, 2022
  • ಬಿಸಿಲ ಹನಿ
  • ನನಗೆ ಗೊತ್ತು ನೀವೆಲ್ಲಾ ಈ ನಾಟಕ ನೋಡಲು ತುದಿಗಾಲಲ್ಲಿ ಕಾಯುತ್ತಿರುವೆರೆಂದು. ಆ ದಿನ ಬಂದೇ ಬಿಟ್ಟಿತು. ಇದೇ ಏಪ್ರಿಲ್ 22 ಮತ್ತು 23 ರಂದು ಬೆಂಗಳೂರಿನ ರಂಗ ಶಂಕರದಲ್ಲಿ ಮೊದಲ ಪ್ರಯೋಗವಾಗಿ ಮೂಡಿ ಬರಲಿದೆ. ದಿನಾಂಕವನ್ನು ಗುರುತಿಟ್ಟುಕೊಳ್ಳಿ. ಮಿಸ್ ಮಾಡಬೇಡಿ. ಹಾಗೆ ಇದನ್ನು ನಿಮ್ಮ ಗುಂಪುಗಳಲ್ಲಿ ಶೇರ್ ಮಾಡಿ.

    Awareness

  • ಭಾನುವಾರ, ಏಪ್ರಿಲ್ 03, 2022
  • ಬಿಸಿಲ ಹನಿ
  • ' ಅರಿವು ' ಅರಿವೆಂಬುದು ಸಿರಿಯಲ್ಲ ಗುರುವು ಬೆಳಕೆಂಬುದು ಸ್ಥಿರವಲ್ಲ ಹರಿವು ಸಂತೆಯ ಸರಕಲ್ಲ ಅವರಿವರ ಸೊತ್ತಲ್ಲ ಅರಿವೆಂಬುದು ಬಯಲ ಬುತ್ತಿ ಚಿತ್ತ ಹಸಿದವರ ತುತ್ತು ಕಾಣ ಹರಾಜಿಗಿಟ್ಟ ಕಿರೀಟವಲ್ಲ ಧರ್ಮದ ನಶೆಯಲ್ಲ ಅರಿವೆಂಬುದು ಸಮತೆಯ ಹೂ ನಿಸರ್ಗ ಸಹಜ ವಿವೇಕ ಕಾಣ ಲಿಂಗದ ಹಂಗಿಲ್ಲ ಗ್ರಂಥಗಳಲ್ಲಿ ಅವಿತಿಲ್ಲ ಅರಿವೆಂಬುದು ಬ್ರಹ್ಮಾಂಡ ಬಯಲು ಒಡಲಬೂದಿಮುಚ್ಚಿದ ಕೆಂಡ ಕಾಣ ಒಲಿಸಿಕೊಳ್ಳುವ ಸ್ವರವಲ್ಲ ನುಡಿಯ ಸೊಬಗಲ್ಲ ಅರಿವೆಂಬುದು ಅಂತರಾಳದ ಸಿರಿ ಸುಮ್ಮನಿರುವ ಸುಮ್ಮಾನ ಕಾಣ ತುಂಬಿಕೊಳ್ಳುವ ಮಾಹಿತಿಯಲ್ಲ ಗುರು ತೋರುವ ದಾರಿಯಲ್ಲ ಅರಿವೆಂಬುದು ನೆಲದ ಮರೆಯ ನಿಧಾನ ನಾವೇ ಹೀರಿಕೊಳ್ಳುವ ದಾಹ ಕಾಣ ಕೂಡಿಡುವ ಥೈಲಿಯಲ್ಲ ಅಕ್ಷರದ ಅಹಂಕಾರವಲ್ಲ ಅರಿವೆಂಬುದು ನೀರ ದೀವಿಗೆ ತನ್ನ ತಾ ಅರಿವ ಆತ್ಮಗನ್ನಡಿ ಕಾಣ ಕಣ್ಣಿಗೆ ನಿಲುಕುವ ಸತ್ಯವಲ್ಲ ಧ್ಯಾನಕ್ಕೆ ದಕ್ಕುವ ಮೌನವಲ್ಲ ಅರಿವೆಂಬುದು ಅವಿನಾಶಿ ನಿಜಕೆ ಬೆತ್ತಲಾದವರ ಅರಿವೆ ಕಾಣ ಕರ್ಮದ ಫಲವಲ್ಲ ದೇಶ ಕಾಲದ ಹಂಗಿಲ್ಲ ಅರಿವೆಂಬುದು ಕ್ಷಣಭಂಗುರ ಸಾವು ಚುಂಬಿಸಿದವರ ತುಟಿಮಿಂಚು ಕಾಣ ಅರಿವೆಂಬುದು ಸ್ಥಿರವಲ್ಲ ಹರಿವು ಇರುವುದ ಇರುವಂತೆಯೇ ಕಾಣುವ ಕಾಣ್ಕೆ ಕಾಣ - ಹಂದಲಗೆರೆ ಗಿರೀಶ್ Awareness Awareness is not wealth but a teacher Nor light is constant but a flow Awareness is not a piece of luggage kept in fair Nor the property that belongs to somebody It is an ailment found in an open place And it is a gulp of hungry souls too Awareness is not an auctioned crown Nor it is the morphine of religion Awareness is the flower of equality Or it is a natural innate wisdom Awareness has no gender obligation Nor it is hidden in the scriptures Look, awareness is an open universe Or it is like stales covered with ashes inside the stomach It’s not a loving tone Nor the beauty of a word Awareness is the richness of innermost And it is a silent happiness It doesn’t give information that can be infused Nor it is a way shown by a teacher Awareness is like a hidden wealth in the ground And it’s a thirst that we have to quench ourselves Neither it is a money bag Nor the pride of letters Awareness is a lamp of water Or it is knowing about oneself in the mirror of one’s self-conscious spirit Neither an eye-catching truth it is Nor a meditating silence Instead, awareness is immortal And those who have really turned nude None of their attire can be seen Neither it is the yield of Karma Nor the obligation of time Awareness is volatile And look at the glowing lips of those Who has already kissed the death Awareness is not constant but a flow It’s something like looking at the things as they are From Kannada: Handalagere Girish To English: Uday Itagi

    ಶ್ವೇತಾ ಹೊಸಬಾಳೆ ಶೇಕ್ಸಪಿಯರನ ಶ್ರೀಮತಿ ಕುರಿತು

  • ಬಿಸಿಲ ಹನಿ
  • "ಈ ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲಾ ಅವರವರ ಹೆಂಡ್ತಿ ಕಣ್ಣಿಗೆ ಯಾವತ್ತಿದ್ರೂ ಸಣ್ಣೋರೆ! ಯಾಕೆ ಅಂದ್ರೆ ಅವ್ರಿಗೊತ್ತಿರೋ ಅಷ್ಟು ಅವರ ದೌರ್ಬಲ್ಯಗಳು, ಹುಳುಕುಗಳು ಬೇರೆ ಯಾರಿಗೂ ಗೊತ್ತಿರೋದಿಲ್ಲ ನೋಡಿ...ನನ್ ಗಂಡ ಕೂಡಾ ಅಂಥ ಒಬ್ಬ ಯಕಃಶ್ಚಿತ್ ಮನುಷ್ಯ ಆಗಿದ್ದ ಅಂಥ ಹೇಳಿಕೊಳ್ಳೋದ್ರಲ್ಲಿ ನಂಗೆ ಯಾವ ಸಂಕೋಚಾನೂ ಇಲ್ಲ; ನನ್ ಗಂಡ ಒಬ್ನೇ ಏನು, ಎಲ್ಲಾ ಗಂಡಂದಿರ ಹಣೆಬರಹವೂ ಅಷ್ಟೇ" - ಇದು ಉದಯ್ ಇಟಗಿ ಬರೆದಿರುವ 'Shakespeareನ ಶ್ರೀಮತಿ' ನಾಟಕದಲ್ಲಿ ಮಿಸೆಸ್ ಆನಾ ಹ್ಯಾತ್ವೆ ಯ ಪಾತ್ರದ ಮಾತುಗಳು. ಇಂಥಾ ಸಾರ್ವತ್ರಿಕ ಸತ್ಯಗಳು, ಮನಸ್ಸಿನ ಮಾತುಗಳು ಈ ನಾಟಕದಲ್ಲಿ ತುಂಬಾ ಇದ್ದು ಅರೆ! ಹೌದಲ್ಲಾ ಎಂದೆನಿಸಿ ಮನಸ್ಸು ವಿಸಿಲ್ ಹೊಡೆಯುತ್ತದೆ. ಸ್ವಲ್ಪ ದಿನಗಳ ಹಿಂದೆ ಸಂಧ್ಯಾರಾಣಿ ಮತ್ತವರ ಸ್ನೇಹಿತರು ನಡೆಸುತ್ತಿರುವ 'ಯಾವ್ ಪುಸ್ಕ ಓದ್ತಿದ್ದೀರ?' ಎನ್ನುವ ಕ್ಲಬ್ ಹೌಸಿನ ಕಾರ್ಯಕ್ರಮ ದಲ್ಲಿ ಪ್ರೊ.ಲಕ್ಷ್ಮೀ ಚಂದ್ರಶೇಖರ್ ಈ ನಾಟಕವನ್ನು ತುಂಬಾ ಸೊಗಸಾಗಿ ಓದಿದ್ದರು. ಬಿ.ವಿ ಭಾರತಿ ಅದರ ಲಿಂಕನ್ನು ಶೇರ್ ಮಾಡಿಕೊಂಡಿದ್ರಿಂದ ಕಾರ್ಯಕ್ರಮ ಮುಗಿದು ಎಷ್ಟೋ ದಿನಗಳ ನಂತರವೂ ಕೇಳೋದಕ್ಕೆ ಆಗಿ ಖುಷಿ ಆಯ್ತು ಶೇಕ್ಸ್ ಪಿಯರ್ ಅವನ ನಾಟಕಗಳ ಮೂಲಕ ಇಡೀ ಜಗತ್ತಿಗೆ ಗೊತ್ತು; ಆದ್ರೆ ಅವನ ಹೆಂಡತಿ, ತೀರಾ ವೈಯಕ್ತಿಕ ವಿಷಯಗಳು ಎಷ್ಟು ಜನರಿಗೆ ಗೊತ್ತು? ಈ ಏಕವ್ಯಕ್ತಿ ನಾಟಕದ ಮೂಲಕ ಅವಳ ಅಂತರಂಗವನ್ನು ತೆರೆದಿಡುವ ಪ್ರಯತ್ನವನ್ನು ಮಾಡಿದ್ದಾರೆ ಉದಯ್ ಇಟಗಿ. ಇದೇ ಏಪ್ರಿಲ್ ೨೩ ರಂದು ಈ ನಾಟಕ ರಂಗಶಂಕರದಲ್ಲಿ ತೆರೆಯ ಮೇಲೂ ಬರಲಿದೆಯಂತೆ. ನನಗಂತೂ ನಾಟಕ ಕೇಳಿದ ಮೇಲೆ ನೋಡಲೇಬೇಕು ಎನಿಸಿದೆ. ನಾಟಕ ಇಷ್ಟ ವಾದ್ದರಿಂದ ಆಸಕ್ತ ಕೇಳುಗರಿಗಾಗಿ ನಾನೂ ಲಿಂಕನ್ನು ಶೇರ್ ಮಾಡಿದ್ದೇನೆ. ಈಗ ಸದ್ಯ ಮನೇಲೇ ಕುಳಿತು ಆರಾಮಾಗಿ ನಾಟಕ ಕೇಳಿ...ನಂತರ ಅದರ ರಂಗರೂಪವನ್ನೂ ತೆರೆಯ ಮೇಲೆ ನೋಡಿ ಆನಂದಿಸಿ. ಅದ್ಭುತ ನಾಟಕಗಳನ್ನು ಕೊಟ್ಟ ನಾಟಕಕಾರನ ಹೆಂಡತಿಯೇ ನಾಟಕವಾಗಿ, ನಾಟಕದ ಪಾತ್ರವಾಗಿ ತೆರೆಯ ಮೇಲೆ ಬಂದು ಮಾತನಾಡುವುದು what a wonderful concept what a thrill ಜಗತ್ತಿನ ಕಣ್ಣಿಗೆ ಅನಾಮಿಕಳಾಗಿಯೇ ಉಳಿದಿರುವ ಶೇಕ್ಸ್ ಪಿಯರ್ ನ ಹೆಂಡತಿಯನ್ನೂ ರಂಗದ ಮೇಲೆ ತರುವ ವಿಶೇಷ ವಸ್ತುವಿನ ನಾಟಕಕ್ಕಾಗಿ thank you very much to Uday Itagi . ನಾಟಕ ಕೇಳುವ ಖುಷಿ ಕೊಟ್ಟಿದ್ದಕ್ಕಾಗಿ Sandhya Rani ಮತ್ತು ಲಿಂಕನ್ನು ಶೇರ್ ಮಾಡಿದ್ದಕ್ಕೆ Bharathi B V ಗೂ ಥ್ಯಾಂಕ್ಯೂ. ವಿಶ್ವ ರಂಗಭೂಮಿ ದಿನದ ಶುಭಾಶಯಗಳು.