Demo image Demo image Demo image Demo image Demo image Demo image Demo image Demo image

ಒಂದು ಪರಿಚಯ

 • ಶುಕ್ರವಾರ, ಜೂನ್ 12, 2009
 • ಬಿಸಿಲ ಹನಿ
 • ನನಗೆ ರಾಜಕೀಯ ಗೊತ್ತಿಲ್ಲ
  ಆದರೆ ರಾಜಕೀಯದಲ್ಲಿರುವವರು ಗೊತ್ತು
  ಅವರ ಹೆಸರನ್ನು ವಾರದ ದಿನಗಳಂತೆ ತಿಂಗಳುಗಳ ಹೆಸರುಗಳನ್ನು
  ಹೇಳಿದಷ್ಟೇ ಸುಲಭವಾಗಿ ಆಗಾಗ್ಗೆ ಹೇಳಬಲ್ಲೆ-ಅದು ನೆಹರೂವಿನಿಂದ ಶುರುವಾಗುತ್ತದೆ.
  ನಾನೊಬ್ಬ ಭಾರತೀಯಳು, ಕಂದು ಬಣ್ಣದವಳು, ಮಲಾಬಾರಿನಲ್ಲಿ ಹುಟ್ಟಿದವಳು.
  ನಾನು ಮೂರು ಭಾಷೆಗಳಲ್ಲಿ ಮಾತನಾಡುತ್ತೇನೆ,
  ಎರಡರಲ್ಲಿ ಬರೆಯುತ್ತೇನೆ, ಒಂದರಲ್ಲಿ ಕನಸು ಕಾಣುತ್ತೇನೆ.
  ಇಂಗ್ಲೀಷಿನಲ್ಲಿ ಬರೆಯಬೇಡ, ಅದು ನಿನ್ನ ಮಾತೃಭಾಷೆಯಲ್ಲ: ಅವರು ಹೇಳಿದರು
  ವಿಮರ್ಶಕರೇ, ಸ್ನೇಹಿತರೇ, ಹಾಗೂ ಆಗಾಗ್ಗೆ ಭೇಟಿಯಿಡುವ ನನ್ನ ಬಂಧುಗಳೇ,
  ನನ್ನನ್ನೇಕೆ ಬಿಡಲಾರಿರಿ ನನಗಿಷ್ಟವಾದ ಭಾಷೆಯಲ್ಲಿ ಮಾತನಾಡಲು?
  ನಾನಾಡುವ ಭಾಷೆ ನನ್ನದು, ಕೇವಲ ನನ್ನದು
  ಅದರ ಸ್ವರೂಪ ವಿರೂಪಗಳೆಲ್ಲವೂ ನನ್ನವೇ, ನನ್ನೊಬ್ಬಳದು ಮಾತ್ರ!
  ಅರ್ಧ ಇಂಗ್ಲೀಷ್, ಅರ್ಧ ಭಾರತೀಯತೆ-ಬಹುಶಃ ನಿಮಗೆಲ್ಲ
  ತಮಾಷೆಯಾಗಿ ಕಾಣಬಹುದು ಆದರದು ಪ್ರಾಮಾಣಿಕವಾಗಿರುತ್ತದೆ
  ನಾನು ಜೀವಂತವಾಗಿರುವಷ್ಟೇ ಅದು ಸಹ ಜೀವಂತವಾಗಿರುತ್ತದೆ.
  ಹೇಳಿ, ನೀವದನ್ನು ಗುರುತಿಸಲಾರಿರೆ?
  ಅದು ನನ್ನ ಖುಶಿಗಳನ್ನು ಧ್ವನಿಸುತ್ತದೆ, ಆಸೆಗಳನ್ನು ಹೊರಗೆಡವುತ್ತದೆ.
  ಕಾಗೆ ಕಾಕಾ ಎನ್ನುವಂತೆ ಸಿಂಹ ಘರ್ಜಿಸುವಂತೆ
  ನಾನು ಕೂಡ ಅದರಲ್ಲಿ ಚೀರಬಲ್ಲೆ.
  ನಾನು ಚಿಕ್ಕವಳಾಗಿದ್ದೆ ನಂತರ ಅವರು ದೊಡ್ದವಳಾಗಿದ್ದೇನೆಂದು ಹೇಳಿದರು.
  ಏಕೆಂದರೆ ನಾನು ಎತ್ತರಕ್ಕೆ ಬೆಳೆದಿದ್ದೆ, ನನ್ನ ಅಂಗಾಂಗಗಳು ಊದಿಕೊಂಡು
  ಒಂದೆರಡು ಕಡೆ ಕೂದಲು ಸಹ ಮೊಳೆತಿದ್ದವು.
  ನಾನು ಅವನ ಬಳಿ ಏನು ಬೇಡಬೇಕೆಂದು ಗೊತ್ತಾಗದೆ ಪ್ರೀತಿಯನ್ನು ಬೇಡಿದೆ.
  ಆದರೆ ಅವನು ಹದಿನಾರರ ಹುಡುಗನನ್ನು ಯಾವೊಂದು ಮುಜುಗರವಿಲ್ಲದೆ
  ಮಲಗುವ ಕೋಣೆಗೆ ಎಳೆದುಕೊಂಡು ಬಾಗಿಲು ಮುಚ್ಚಿದ.
  ಅವನು ನನಗೆ ಹೊಡೆಯಲಿಲ್ಲ
  ಆದರೆ ನನ್ನೊಳಗಿನ ದುಃಖತಪ್ತ ಹೆಂಗಸಿಗೆ ಹೊಡೆತ ಬಿದ್ದಿತ್ತು.
  ನನ್ನ ಮೊಲೆ, ಗರ್ಭಗಳು ಭಾರವಾದಂತೆನಿಸಿ ನಾನು ಜಜ್ಜಿಹೋದ ಅನುಭವ.
  ನನ್ನ ಮೇಲೆ ನಾನೇ ಕನಿಕರಪಡುತ್ತಾ ಮುದುಡಿ ಕುಳಿತೆ.
  ಅಲ್ಲಿಂದಾಚೆ ನಾನು ಅಂಗಿ ಧರಿಸಿದೆ, ತಮ್ಮನ ಪ್ಯಾಂಟು ಹಾಕಿಕೊಂಡೆ,
  ಕೂದಲನ್ನು ಸಣ್ಣದಾಗಿ ಕತ್ತರಿಸಿದೆ,
  ನನ್ನ ಹೆಣ್ತನವನ್ನು ಸಂಪೂರ್ಣವಾಗಿ ಕಡೆಗಣಿಸಿದೆ.
  ಸೀರೆ ಉಡು, ಹುಡುಗಿಯಂತಿರು, ಹೆಣ್ಣಾಗು, ಹೆಂಡತಿಯಾಗು,
  ಕಸೂತಿ ಹಾಕು, ಅಡಿಗೆ ಮಾಡು, ಆಳುಗಳ ಜೊತೆ ಬಿಗುವಾಗಿರು,
  ಹೊಂದಿಕೊ, ತಕ್ಕನಾಗಿ ನಡೆದಿಕೊ
  ಅಬ್ಬಬ್ಬ, ಎಷ್ಟೊಂದು ನಿರೀಕ್ಷಕರು!
  ಗೋಡೆಯ ಮೇಲೆ ಕೂರಬೇಡ, ಕಿಟಕಿಯಲ್ಲಿ ಇಣುಕುಬೇಡ
  ಆಮಿಯಾಗಿರು, ಅಥವಾ ಕಮಲಾಳಾಗಿರು ಅಥವಾ
  ಮಾಧವಿ ಕುಟ್ಟಿಯಾಗಿದ್ದರೆ ಇನ್ನೂ ಒಳಿತು.
  ಹೆಸರೊಂದನ್ನು, ಕೆಲಸವೊಂದನ್ನು ಆಯ್ದುಕೊಳ್ಳಲು ಇದು ತಕ್ಕ ಸಮಯ
  ಸೋಗಲಾಡಿತನ ಬಿಡು, ಭ್ರಾಂತಿಯಾದವರ ತರ ವರ್ತಿಸಬೇಡ,
  ಕಾಮತ್ಮೋನ್ನಳಾಗಿ ಕಾಣಿಸಬೇಡ,
  ಪ್ರೀತಿ ಸಿಗದೆ ಹೋದಾಗ ಜೋರಾಗಿ ಧ್ವನಿ ತೆಗೆದು
  ಮುಜುಗುರವಾಗುವಂತೆ ಅಳಬೇಡ.............ಎಷ್ಟೊಂದು ಆಜ್ಞೆಗಳು!
  ನನಗೊಬ್ಬ ಗಂಡು ಸಿಕ್ಕ, ನಾನು ಅವನನ್ನೇ ಪ್ರೀತಿಸಿದೆ.
  ಅವನನ್ನು ಹೆಸರು ಹಿಡಿದು ಕರೆಯಬೇಡಿ
  ಏಕೆಂದರೆ ಅವನಿಗೆ ಹೆಸರಿಲ್ಲ.
  ಅವನು ಎಲ್ಲ ಗಂಡಸರ ತರ ಹೆಣ್ಣನ್ನು ಬಯಸುವವ
  ನಾನು ಎಲ್ಲ ಹೆಂಗಸರ ತರ ಪೀತಿಯನ್ನು ಬಯಸುವವಳು
  ಅವನೊಳಗೆ ಅಬ್ಬರಿಸಿ ಉಕ್ಕಿ ಉಕ್ಕಿ ಹರಿಯುವ ನದಿ
  ನನ್ನೊಳಗೆ ಆಯಾಸವಿಲ್ಲದೆ ಕಾಯುವ ಶಾಂತ ಸಮುದ್ರ.
  ನಾನು ಸಿಕ್ಕ ಸಿಕ್ಕವರನೆಲ್ಲ ಕೇಳುತ್ತಾ ಹೋಗುತ್ತೇನೆ
  “ಯಾರು ನೀನೆಂದು?” ಉತ್ತರವೊಂದೇ “ನಾನು ನಾನೇ”
  ಈ ಜಗದಲ್ಲಿ “ನಾನು ನಾನೇ” ಎಂದು ಕರೆದುಕೊಳ್ಳುವವ
  ಒರೆಯಲ್ಲಿ ಭದ್ರವಾಗಿ ಮುಚ್ಚಿಟ್ಟ ಖಡ್ಗದಂತೆ!
  ಹನ್ನೆರಡು ಗಂಟೆಯಲ್ಲಿ, ಮಧ್ಯರಾತ್ರಿಯಲ್ಲಿ, ಅಪರಿಚಿತ ಪಟ್ಟಣಗಳ ಬೀದಿಗಳಲ್ಲಿ
  ಎಲ್ಲೆಂದರಲ್ಲಿ, ಯಾವಾಗೆಂದರವಾಗ ನಾನು ಒಂಟಿಯಾಗಿ ಕುಡಿಯುತ್ತೇನೆ
  ನಗುತ್ತೇನೆ, ಪ್ರೀತಿಸುತ್ತೇನೆ
  ಆಮೇಲೆ ನನ್ನಷ್ಟಕ್ಕೆ ನಾನೇ ನಾಚಿಕೆಪಟ್ಟುಕೊಂಡು ಬೀಳುತ್ತೇನೆ.
  ನಾನು ಪಾತಕಿ, ನಾನು ಪೂಜ್ಯಳು
  ನಾನು ಪತಿವೃತೆ, ನಾನು ಶೀಲಗೆಟ್ಟವಳು
  ನನ್ನ ಖುಶಿಗಳು ನಿನ್ನವಲ್ಲ, ನನ್ನ ನೋವುಗಳು ನಿನ್ನವಲ್ಲ
  ಇದೀಗ ಯಾರಾದರು ‘ಯಾರು ನೀನು?’ ಎಂದು ಕೇಳಿದರೆ
  ನಾನು ಸಹ ‘ನಾನು ನಾನೇ’ ಎಂದು ಹೇಳುತ್ತೇನೆ.

  ಇಂಗ್ಲೀಷ ಮೂಲ: ಕಮಲಾ ದಾಸ್
  ಕನ್ನಡಕ್ಕೆ: ಉದಯ ಇಟಗಿ
  ಚಿತ್ರ ಕೃಪೆ: www.flickr.com/by Tafa
  16 ಕಾಮೆಂಟ್‌(ಗಳು):

  shivu ಹೇಳಿದರು...

  uday sir,

  tumbaa cennagi kamala das kavanavannu anuvadisidiri. kavanavu kooda tumba "bold and beautiful..."

  ಈ ಜಗದಲ್ಲಿ “ನಾನು ನಾನೇ” ಎಂದು ಕರೆದುಕೊಳ್ಳುವವ ಒರೆಯಲ್ಲಿ ಭದ್ರವಾಗಿ ಮುಚ್ಚಿಟ್ಟ ಖಡ್ಗದಂತೆ.

  e salugalu tumba arthavannu koduttave...nanage istavaithu...

  thanks...

  sunaath ಹೇಳಿದರು...

  ಇದು ಕೇವಲ ಮಾಧವಿ ಕುಟ್ಟಿಯ ಅಳಲಲ್ಲ; ಬಹುತೇಕ ಎಲ್ಲ ಹೆಣ್ಣುಮಕ್ಕಳ ಅಳಲು.

  ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

  ಎಲ್ಲಾ ಹೆಂಗಸರ ಒಳದನಿ ಕಮಲಾದಾಸ್ ಅವರ ಲೇಖನಿಯಿಂದ ಹೊರಬಂತಾ?
  ಅವರು ಕನ್ನಡದಲ್ಲೇ ಬರೆದಿದ್ದಾರೆ ಅನಿಸುವಷ್ಟು ಚೆನ್ನಾಗಿ ಅನುವಾದಿಸಿದ್ದೀರಿ. ಅವರ ಬರಹಗಳನ್ನು ಓದದ ನನ್ನಂತಹವರಿಗೆ ನಿಮ್ಮ ಮೂರು ಪೋಸ್ಟಿಂಗ್ ಗಳಿಂದ ಬಹಳ ವಿಷಯ ತಿಳಿಯಿತು. ಧನ್ಯವಾದಗಳು. ಕಮಲಾದಾಸ್ ಅವರ ಪುಸ್ತಕಗಳನ್ನು ಓದಲು ಆಸೆಯಾಗುತ್ತಿದೆ. ನೀವು ಯಾವುದು recommend ಮಾಡುವಿರಿ. ತಿಳಿಸಿ.

  ಸಿಮೆಂಟು ಮರಳಿನ ಮಧ್ಯೆ ಹೇಳಿದರು...

  ಉದಯ್....

  ಈ ಕವಿತೆ ಬಹಳ ಇಷ್ಟವಾಯಿತು....
  "ನನ್ನ ಖುಷಿಗಳು ನಿನ್ನವಲ್ಲ...
  ನನ್ನ ನೋವುಗಳು ನಿನ್ನವಲ್ಲ...
  ಇದೀಗ ನಾನು ನಾನೇ ಎಂದು ಕರೆದು ಕೊಳ್ಳುತ್ತಿದ್ದೇನೆ..."

  ಅದ್ಭುತ ಪದಗಳು...!!!

  ಈ ಕವಿತೆಯನ್ನು ನಾನು ನನ್ನ ಸಂಗ್ರಹದಲ್ಲಿ ಇಟ್ಟುಕೊಂಡಿದ್ದೇನೆ...

  ತುಂಬಾ ಸುಂದರ ಕವಿತೆಯನ್ನು ಅನುವಾದಿಸಿ ಕೊಟ್ಟ ನಿಮಗೆ
  ಅನಂತ.. ಅನಂತ ವಂದನೆಗಳು...

  ಧರಿತ್ರಿ ಹೇಳಿದರು...

  ಕಮಲದಾಸ್..ಏನು ಹೇಳೋದು ಆ ಬರಹಲೋಕದ ಅದ್ಭುತ ಪ್ರತಿಭೆಯ ಕುರಿತು...ಸರ್...ಕಮಲದಾಸ್ ಕುರಿತು ನಿಮ್ಮಲ್ಲಿರುವ ಎಲ್ಲಾ ತುಣುಕುಗಳನ್ನು ಅನುವಾದಿಸಿ ಹಾಕಬೇಕಾಗಿ ವಿನಂತಿ.
  -ಧರಿತ್ರಿ

  ಬಿಸಿಲ ಹನಿ ಹೇಳಿದರು...

  ಶಿವು ಅವರೆ,
  ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್. ಆದರೆ ಅರ್ಧ ಕನ್ನಡ ಅರ್ಧ ಇಂಗ್ಲೀಷ್ ಯಾಕೆಂದು ಗೊತ್ತಾಗಲಿಲ್ಲ? ಅಂದರೆ ನೀವು ಸಹ ಕಮಲಾ ದಾಸ್ ತರ ಅರ್ಧ ಇಂಗ್ಲೀಷು ಅರ್ಧ ಭಾರತೀಯತೆಯಿಂದ ಪ್ರಭಾವಿತರಾದಿರೆ?

  ಬಿಸಿಲ ಹನಿ ಹೇಳಿದರು...

  ಸುನಾಥ್ ಸರ್,
  ಹೌದು, ನೀವು ಹೇಳಿದಂತ ಇದು ಮಾಧವಿ ಕುಟ್ಟಿಯ ಅಳಲಲ್ಲ; ಬಹುತೇಕ ಎಲ್ಲ ಹೆಣ್ಣುಮಕ್ಕಳ ಅಳಲಾಗಿದೆ. ಮಾಧವಿ ಕುಟ್ಟಿಯವರು ಎಲ್ಲ ಹೆಣ್ಣು ಮಕ್ಕಳ ದನಿಯಾಗಿದ್ದರು.

  ಬಿಸಿಲ ಹನಿ ಹೇಳಿದರು...

  ಮಲ್ಲಿಕಾರ್ಜುನವರೆ,
  ನನ್ನ ಅನುವಾದ ಮತ್ತು ಲೇಖನಗಳನ್ನು ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್!ಕಮಲಾ ದಾಸ್‍ರ ಲೇಖನಗಳನ್ನು,ಕವನಗಲನ್ನು ಒಮ್ಮೆ ಎಲ್ಲರೂ ಓದಲೇಬೇಕು. ಏಕೆಂದರೆ ಅನಿಸಿದ್ದನ್ನು ಅಂದುಕೊಂಡತೆ ಯಾವುದೇ ಆತ್ಮ ವಂಚನೆಯಿಲ್ಲದೆ ಬರೆದವಳಾಕೆ. ಮೊದಲು ಅವಳ ಆತ್ಮಕತೆ "My Story" ಯಿಂದ ಆರಂಭಿಸಿ. ಇನ್ನಿತರ ಕವನ ಸಂಕಲನಗಳು ಈ ಕೆಳಗಿವೆ.
  # 1964: The Sirens (Asian Poetry Prize winner)
  # 1965: Summer in Calcutta (poetry; Kent's Award winner)
  # 1967: The Descendants (poetry)
  # 1973: The Old Playhouse and Other Poems (poetry)
  # 1977: Alphabet of Lust (novel)
  # 1985: The Anamalai Poems (poetry)
  # 1992: Padmavati the Harlot and Other Stories (collection of short stories)
  # 1996: Only the Soul Knows How to Sing (poetry)
  # 2001: yaa Allah (collection of poems) published by [IP

  ಬಿಸಿಲ ಹನಿ ಹೇಳಿದರು...

  ಪ್ರಕಾಶ್‍ವರೆ,
  ನನ್ನ ಅನುವಾದವೊಂದರ ಸಾಲುಗಳು ನಿಮ್ಮ ಡೈರಿಯಲ್ಲಿ ಸೇರ್ಪಡೆಯಾಗಿದ್ದು ಕೇಳಿ ತುಂಬಾ ಖುಶಿಯಾಯಿತು. ಅನುವಾದವನ್ನು ಮೆಚ್ಚಿಕೊಂಡು ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು.

  ಬಿಸಿಲ ಹನಿ ಹೇಳಿದರು...

  ಧರಿತ್ರಿ,
  ಕಮಲಾ ದಾಸ್ ಬರಹ ಲೋಕದ ಒಂದು ಅದ್ಭುತ ಪ್ರತಿಭೆ! ಸಾಧ್ಯವಾದರೆ ಅವರ ಇತರೆ ಕವನಗಳನ್ನು, ಲೇಖನಗಳನ್ನು ಅನುವಾದಿಸಿ ಹಾಕುತ್ತೇನೆ.

  ಚಂದಿನ ಹೇಳಿದರು...

  ಅನುವಾದ ಬಹಳ ಸೊಗಸಾಗಿ ಮೂಡಿ ಬಂದಿದೆ.

  ನಲ್ಮೆಯ
  ಚಂದಿನ

  ಬಿಸಿಲ ಹನಿ ಹೇಳಿದರು...

  ಥ್ಯಾಕ್ಸ್ ಚಂದಿನವರೆ.

  ರವಿಕಾಂತ ಗೋರೆ ಹೇಳಿದರು...

  ಚೆನ್ನಾಗಿದೆ ಸಾರ್..

  ಬಿಸಿಲ ಹನಿ ಹೇಳಿದರು...

  ಥ್ಯಾಕ್ಸ್ ಗೋರೆಯವರೆ.

  ಉಮೇಶ ಬಾಳಿಕಾಯಿ ಹೇಳಿದರು...

  ಉದಯ ಸರ್,

  ಕಮಲದಾಸ್ ರ ಕವನವನ್ನು ತುಂಬಾ ಚೆನ್ನಾಗಿ ಅನುವಾದಿಸಿದ್ದೀರಿ. ಅಭಿನಂದನೆಗಳು. ಹೆಣ್ಣೊಬ್ಬಳ ಆಂತರಿಕ ಆರ್ತನಾದವನ್ನು ಇದಕ್ಕಿಂತ ಚೆನ್ನಾಗಿ ವಿವರಿಸಲು ಸಾಧ್ಯವಿಲ್ಲವೇನೋ. ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದುಕೊಂಡು ಕನ್ನಡವನ್ನು ಇಷ್ಟು ಚೆನ್ನಾಗಿ ಬರೆಯುವ ನಿಮ್ಮ ಬಗ್ಗೆ ಸಂತೋಷ. ಬರೆಯುತ್ತಿರಿ.

  - ಉಮೇಶ

  ಬಿಸಿಲ ಹನಿ ಹೇಳಿದರು...

  ಉಮೇಶ್ ಬಾಳಿಕಾಯಿಯವರೆ,
  ನನ್ನ ಬ್ಲಾಗಿಗೆ ಮೊದಲ ಭೇಟಿಯನ್ನಿಟ್ಟಿದ್ದೀರಿ. ನಿಮಗೆ ಸ್ವಾಗತ. ಅನುವಾದವನ್ನು ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್. ನಿಮಗೆ ಒಂದು ವಿಷಯ ಗೊತ್ತಿರಬಹುದು. ಆಧುನಿಕ ಕನ್ನಡ ಸಾಹಿತ್ಯ ಶ್ರೀಮಂತವಾಗಿದ್ದೇ ಇಂಗ್ಲೀಷ ಪ್ರಾಧ್ಯಾಪಕರು ಬರೆಯಲು ಶುರುವಾದಾಗಿನಿಂದ. ಉದಾಹರಣೆಗೆ ಅನಂತಮೂರ್ತಿ. ಲಂಕೇಶ್, ಅಡಿಗ, ಬಿ.ಎಮ್.ಶ್ರೀ. ಚಂಪಾ, ಆಮೂರು, ಕುರ್ತಕೂಟಿ, ವೀಣಾ ಶಾಂತೇಶ್ವರ,ಶಂಕರ ಮೊಕಾಶಿ ಪುಣೆಕರ, ಗೋಕಾಕ್ ಇನ್ನೂ ಮುಂತಾದವರು ಇಂಗ್ಲೀಷ ಪ್ರಾಧ್ಯಾಪಕರಾಗಿದ್ದುಕೊಂಡೆಡೇ ಕನ್ನಡದಲ್ಲಿ ಬರೆದು ಹೆಸರಾದರು. ನೀವು ಭಾವಿಸಿದಂತೆ ಇಂಗ್ಲೀಷ ಪ್ರಾಧ್ಯಾಪಕರಿಗೆ ಕನ್ನಡದಲ್ಲಿ ಬರೆಯುವದು ಕಷ್ತವೇನಲ್ಲ. ಇರಲಿ. ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್. ಆಗಾಗ್ಗೆ ಬರುತ್ತಿರಿ.