Demo image Demo image Demo image Demo image Demo image Demo image Demo image Demo image

ಶಾಕುಂತಳೆಯ ಸ್ವಗತಗಳು

  • ಮಂಗಳವಾರ, ಮಾರ್ಚ್ 17, 2009
  • ಬಿಸಿಲ ಹನಿ
  • ಲೇಬಲ್‌ಗಳು:
  • ಎಲ್ಲ ಪ್ರಿಯತಮರು ಶಾಪಗ್ರಸ್ತರೇ!
    ಕಡೆಪಕ್ಷ ಏನಿಲ್ಲವೆಂದರೂ
    ತಂತಮ್ಮ ಪ್ರಿಯತಮೆಯನ್ನು
    ಒಂದಷ್ಟು ದಿವಸ ಮರೆತು
    ಹಾಯಾಗಿ ಇದ್ದುಬಿಡುವ ಶಾಪಗ್ರಸ್ತರು!
    ಪಾಪ ಅವರು ತಾನೆ ಏನು ಮಾಡಿಯಾರು
    ಅವರ ಪ್ರೀತಿ ಮರೆವಿನ ಹೊಳೆಗೆ ಸಿಕ್ಕು ಕೊಚ್ಚಿಹೋಗಿಬಿಟ್ಟರೆ?

    ಎಲ್ಲ ಪ್ರಿಯತಮೆಯರು ಶಾಪಗ್ರಸ್ತರೇ!
    ತನ್ನ ಪ್ರಿಯತಮನ ಸ್ಮರಣೆಯಿಂದಲೇ
    ಮರೆತು ಹೋಗುವಷ್ಟು ಶಾಪಗ್ರಸ್ತರು!
    ಅವರು ಕಾಯುತ್ತಲೇ ಇರಬೇಕು
    ತಮ್ಮ ಗುಟ್ಟು ಅವನ ನೆನಪಿನ
    ಬಲೆಯಲ್ಲಿ ಸಿಕ್ಕು ರಟ್ಟಾಗುವವರಿಗೂ!

    ಪ್ರತಿ ಮಗುವೂ ಶಾಪಗ್ರಸ್ತನೇ!
    ತಂದೆಯಿಲ್ಲದೆ ಬೆಳೆಯುವ
    ಸದಾ ಸಿಂಹದ ಬಾಯಿಯಲ್ಲಿಯೇ ಕೈಯಿಟ್ಟುಕೊಂಡು
    ಆಟವಾಡುವ ಶಾಪಗ್ರಸ್ತ!

    ಮಲಯಾಳಂ ಮೂಲ: ಕೆ. ಸತ್ಚಿದಾನಂದ
    ಇಂಗ್ಲೀಷಗೆ: ಕೆ. ಸತ್ಚಿದಾನಂದ
    ಕನ್ನಡಕ್ಕೆ: ಉದಯ ಇಟಗಿ

    ಚಿತ್ರ ಕೃಪೆ: ತೇಜಸ್ವಿನಿ ಹೆಗಡೆಯವರ "ಮಾನಸ" ಬ್ಲಾಗ್

    19 ಕಾಮೆಂಟ್‌(ಗಳು):

    ತೇಜಸ್ವಿನಿ ಹೆಗಡೆ ಹೇಳಿದರು...

    ಅನುವಾದಿತ ಕವನ ತುಂಬಾ ಚೆನ್ನಾಗಿದೆ. ಚಿತ್ರ ಬಳಸಿಕೊಂಡದ್ದು ನೋಡಿ ಸಂತೋಷವಾಯಿತು.

    ಅಂತರ್ವಾಣಿ ಹೇಳಿದರು...

    ಪ್ರೀತಿಸಿದವರು ಅವರದೇ ಲೋಕದಲ್ಲಿರುತ್ತಾರೆ.. :)

    ಬಿಸಿಲ ಹನಿ ಹೇಳಿದರು...

    Thanks ತೇಜಸ್ವಿನಿಯವರೆ

    ಬಿಸಿಲ ಹನಿ ಹೇಳಿದರು...

    ಜಯಶಂಕರ್ ಅವರೆ,
    ಪ್ರೀತಿಸಿದವರು ಅವರದೇ ಲೋಕದಲ್ಲಿರುತ್ತಾರೆ ನಿಜ. ಆದರೆ ದುಷ್ಯಂತ ಮಾತ್ರ ಶಾಕುಂತಳೆಯನ್ನು ಮರೆತು ತನ್ನದೇ ಲೋಕದಲ್ಲಿದ್ದುದು ಮಾತ್ರ ದುರಂತ!

    Unknown ಹೇಳಿದರು...

    ಉದಯ್ ಥ್ಯಾಂಕ್ಸ್, ಒಂದು ಒಳ್ಳೆಯ ಕವಿತೆ ಕೊಟ್ಟಿರುವುದಕ್ಕೆ. ಅದಕ್ಕಿಂತ ಹೆಚ್ಚಾಗಿ ಕನ್ನಡವನ್ನಷ್ಟೇ ಬಲ್ಲ ನನ್ನಂತಹ ಕೂಪಮಂಡೂಕಕ್ಕೆ ನಿಮ್ಮಂತವರ ಅನುವಾದ ಹೊರಜಗತ್ತಿಗೆ ಕಿಟಕಿಯಿದ್ದ ಹಾಗೆ. ಧನ್ಯವಾದಗಳು ಮತ್ತೊಮ್ಮೆ

    PARAANJAPE K.N. ಹೇಳಿದರು...

    ಉದಯ್ ಅವರೇ,
    ಸ್ವಗತಗಳು ಚೆನ್ನಾಗಿವೆ. ಇನ್ನಷ್ಟು ಬರೆಯಿರಿ,

    ಬಿಸಿಲ ಹನಿ ಹೇಳಿದರು...

    Thank you SatyaNarayayana & Paraanjape

    ಚಂದ್ರಕಾಂತ ಎಸ್ ಹೇಳಿದರು...

    ಉದಯ್

    ಅನುವಾದ ಬಹಳ ಚೆನ್ನಾಗಿದೆ. ಮೂಲಕವನ ಬಹಳ ಸತ್ವಭರಿತವಾಗಿದೆ.ಮಲಯಾಳಿ ಮತ್ತು ಕನ್ನಡ ಭಾಷೆಗಳು ಅಕ್ಕತಂಗಿಯರಾದ್ದರಿಂದ, ಆ ಮೂಲ ಕವನದ ಸತ್ವ ಹಾಗೆಯೇ ಉಳಿದಿದೆ ಅನಿಸುತ್ತದೆ

    ನಿಮಗೆ ಇನ್ನೊಂದು ವಿಷಯ ಗೊತ್ತೇ ? ಶಕುಂತಲೆಯ ಕತೆ ನಮಗೆ ಮೊದಲು ಸಿಗುವುದು ವ್ಯಾಸಭಾರತದಲ್ಲಿ ‘ ಶಕುಂತಲೋಪಾಖ್ಯಾನ’ ಎಂಬ ಹೆಸರಿನಲ್ಲಿ. ಆ ಮೂಲ ಕತೆಯನ್ನು ಸಧ್ಯದಲ್ಲಿಯೇ ಬರೆದು ಬ್ಲಾಗ್ ಗೆ ಹಾಕಬೇಕೆಂದು ಚಿಂತಿಸುತ್ತಿರುವೆ. ನಂತರ ಆ ಕತೆಯ ಎಳೆಯನ್ನು ಹಿಡಿದು ಕಾಳಿದಾಸ ಎಷ್ಟು ಪರಿವರ್ತಿಸಿದ್ದಾನೆಂದರೆ, ನಮ್ಮ ದೇಶದ ಪ್ರತಿ ಪುರುಷನೂ ಇಷ್ಟಪಡುವ ಲತೆಯಂತಹ, ಸದಾಕಾಲ ಆಶ್ರಯ ಬಯಸುವ ಹೆಣ್ಣನ್ನಾಗಿ ಮಾಡಿದ್ದಾನೆ.ನಿಮಗೂ ಈ ವಿಷಯ ಗೊತ್ತಿರಬಹುದು.

    ಚಂದ್ರಕಾಂತ ಎಸ್ ಹೇಳಿದರು...

    ಈ ಕವನದ ಮೂಲ ಇಂಗ್ಲೀಷ್ ಕವನದ ಹೆಸರೇನು?

    ಶಾಕುಂತಲೆ ಸರಿಯಾದ ಪ್ರಯೋಗವಲ್ಲ. ಶಕುಂತಲೆ ಸರಿಯಾದ ಪ್ರಯೋಗ.

    ಕಾಳಿದಾಸನ ನಾಟಕದ ಹೆಸರು " ಅಭಿಜ್ಞಾನ ಶಾಕುಂತಲಮ್ " ಎಂದರೆ ನೆನಪು ಅಥವಾ ಕುರುಹು( ಗುರುತು) ಎಂದರ್ಥ. ಶಾಕುಂತಲಮ್ ಎಂದರೆ ಶಕುಂತಲೆಯ ಕೂಸು ( ಮಗ) ಸರ್ವದಮನ ಎಂದರ್ಥ

    ಬಿಸಿಲ ಹನಿ ಹೇಳಿದರು...

    ಚಂದ್ರಕಾಂತ ಮೇಡಂ,
    ಎಂದಿನ ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು. ನೀವು ಹೇಳಿದಂತೆ ಶಕುಂತಲೋಪಾಖ್ಯಾನ ವ್ಯಾಸಭಾರತದಲ್ಲಿ ಬರುತ್ತದೆ ಎಂದು ಗೊತ್ತು. ಆದರೆ ಅದರ ಕತೆ ಗೊತ್ತಿಲ್ಲ. ನೀವು ಹೇಳುವ ಪ್ರಕಾರ ವ್ಯಾಸಭಾರತದ ಶಾಕುಂತಲಾ ಬಹುಶಃ ಗಂಡನ ಹಂಗು, ಆಶ್ರಯವಿಲ್ಲದೆ ಬದುಕುವ ಸ್ವತಂತ್ರ, ಸ್ತ್ರೀವಾದಿ ಮಹಿಳೆ ಆಗಿರಬಹುದು. ಬಹುಶಃ ಇದನ್ನೆ ಆಧಾರವಾಗಿಟ್ಟುಕೊಂಡು ಡಾ.ವೀಣಾ ಶಾಂತೇಶ್ವರ "ನಿರಾಕರಣೆ" ಎನ್ನುವ ನಾಟಕ ಬರೆದಿದ್ದಾರೆ. ನೀವು ಓದಿರಬಹುದು. ಶಾಕುಂತಳೆಯನ್ನು ಸ್ತ್ರೀವಾದಿ ಮಹಿಳೆಯನ್ನಾಗಿ ಚಿತ್ರಿಸಿದ್ದಾರೆ.
    ಏನೆ ಇರಲಿ, ಮೊದಲು ನಾನು ಸ್ತ್ರೀವಾದನ್ನು ಬಲವಾಗಿ ನಂಬಿದ್ದೆ. ಆದರೆ ದಿನಕಳೆದಂತೆ ಅದು ದುರ್ಬಳಿಕೆ ಆಗುತ್ತಿರುವದನ್ನು ನೋಡಿ ಸಂಪೂರ್ಣವಾಗಿ ನಂಬಿಕೆ ಕಳೆದುಕೊಂಡಿದ್ದೇನೆ. ಈ ವಿಷಯದ ಮೇಲೆ ನಾನು ಬರೆದಿರುವ ಲೇಖನವನ್ನು ಓದಬಹುದು http://bisilahani.blogspot.com/2008/12/blog-post_27.html. ಎಲ್ಲಿ ಪ್ರತಿರೋಧವಿರುತ್ತದೆಯೋ ಅಲ್ಲಿ ಸಂಘರ್ಷ ಇದ್ದೇ ಇರುತ್ತದೆ, ಎಲ್ಲಿ ರಾಜಿಯಿರುತ್ತದೆಯೋ ಅಲ್ಲಿ ಬದುಕು ಇರುತ್ತದೆ. ಹಾಗಂತ ಸ್ತ್ರೀಯರು ಎಲ್ಲವನ್ನು ಸಹಿಸಿಕೊಂಡಿರಬೇಕೆಂದು ನಾನು ಹೇಳುತ್ತಿಲ್ಲ. ಸಣ್ಣ ಸಣ್ಣ ವಿಷಯಕ್ಕೂ ಪ್ರತಿಭಟಿಸಿ ಬದುಕನ್ನು ಸದಾ ಕಾಲ ಛಿದ್ರಗೊಳಿಸಿಕೊಳ್ಳುವದು ಮೂರ್ಖತನವಾಗುತ್ತದೆ! ಹಾಗಂತ ಈ ನೀಲುವನ್ನು ಹೊಂದಿದ ಮೇಲೆ ನೀವೇಕೆ ಈ ಕವನವನ್ನು ಅನುವಾದಿಸಿದ್ದೀರಿ ಎಂದು ನೀವು ಕೇಳಬಹುದು. ಖಂಡಿತ ದುಷ್ಯಂತನಿಂದ ಶಾಕುಂತಳೆಗಾದ ಅನ್ಯಾಯಕ್ಕೆ ನನ್ನ ಪ್ರತಿಭಟನೆ, ಧಿಕ್ಕಾರ ಇದ್ದೇ ಇದೆ. ಅದಕ್ಕಾಗಿಯೇ ನಾನು ಈ ಕವನವನ್ನು ತುಂಬಾ ಇಷ್ಟಪಟ್ಟು ಅನುವಾದಿಸಿದ್ದು.
    ಕ್ಷಮಿಸಿ ಏನೋ ಹೇಳಲು ಹೋಗಿ ಏನನ್ನೋ ಹೇಳಿಬಿಟ್ಟೆ. ನಿಮ್ಮ ಲೇಖನಕ್ಕಾಗಿ ಕಾಯುತ್ತಿರುತ್ತೇನೆ.

    ಬಿಸಿಲ ಹನಿ ಹೇಳಿದರು...

    ಮೇಡಂ,
    ಇಂಗ್ಲೀಷನಲ್ಲಿ ಈ ಕವನದ ಹೆಸರು "Shakuntala" ಎಂದು. ಕವಿಯ ಹೆಸರು K.Satchidanand.
    ಶಾಕುಂತಳೆಯನ್ನು "ಶಕುಂತಳೆ"ಯೆಂದು ತಿದ್ದಿರುವಿರಿ. ಧನ್ಯವಾದಗಳು. ಆದರೆ ಬಹಳಷ್ಟು ಜನ ಶಾಕುಂತಳೆಯೆಂದು ಬಳಿಸಿರುವದನ್ನು ನೋಡಿದ್ದೇನೆ. ವೈದೇಹಿಯವರು ಕೂಡ "ಶಾಕುಂತಲೆಯೊಡನೆ ಒಂದು ಅಪರಾಹ್ನ" ಎನ್ನುವ ಕತೆಯಲ್ಲಿ ಶಾಕುಂತಲೆಯೆಂದು ಬಳಸಿದ್ದಾರೆ.
    ನೀವು ಹೇಳುವ ಪ್ರಕಾರ "ಅಭಿಜ್ಞಾನ" ಎಂದರೆ ಗುರುತು. "ಶಾಕುಂತಲಮ್" ಎಂದರೆ ಕೂಸು. ಆದರೆ ಈ ಹಿನ್ನೆಲೆಯಲ್ಲಿ ಕಾಳಿದಾಸನ ಕತೆಗೆ ಅದ್ಹೇಗೆ ಈ ತಲೆಬರಹ ಸೂಕ್ತವಾಗುತ್ತದೆ? ಸ್ವಲ್ಪ ವಿವರಿಸುತ್ತೀರಾ?

    sunaath ಹೇಳಿದರು...

    ಉದಯರೆ,
    ಈಗ ಮಲೆಯಾಳಮ್ ಕವನದ ಅನುವಾದ ಕೊಟ್ಟಿರುವಿರಲ್ಲ.
    ನಿಮಗೆ ಏಷ್ಟು ಭಾಷೆಗಳು ಬರುತ್ತವೆ?
    ಉತ್ತಮ ಕವನದ ಉತ್ತಮ ಅನುವಾದಕ್ಕಾಗಿ ಧನ್ಯವಾದಗಳು.

    ಬಿಸಿಲ ಹನಿ ಹೇಳಿದರು...

    ಸುನಾಥ್ ಸರ್,
    ನೀವು ತಿಳಿದಂತೆ ನಾನು multi linguist ಅಲ್ಲ. ಬೇರೆ ಬೇರೆ ಭಾಷೆಯಿಂದ ಇಂಗ್ಲೀಷಗೆ ತರ್ಜುಮೆ ಆಗಿರುವದನ್ನು ಕನ್ನಡಿಕರಿಸುವದಷ್ಟೆ ನನ್ನ ಕೆಲಸ. Thanks for your compliment.

    shivu.k ಹೇಳಿದರು...

    ಉದಯ್ ಸರ್,

    ನೀವು ಮಲೆಯಾಳಂ ಭಾಷೆಯಿಂದಲೂ ಅನುವಾದಿಸುತ್ತೀರೆಂದರೆ ನಿಮಗೆಷ್ಟು ಭಾಷೆ ಬರುತ್ತದೆ.!ಶಾಪಗ್ರಸ್ತರ ಬಗ್ಗೆ ಒಳ್ಳೇ ಕವನ ! ಮುಂದುವರಿಸಿ....

    ಬಿಸಿಲ ಹನಿ ಹೇಳಿದರು...

    ಶೀವು,
    ನೀವು ತಿಳಿದಂತೆ ನಾನು multi linguist ಅಲ್ಲ. ಬೇರೆ ಬೇರೆ ಭಾಷೆಯಿಂದ ಇಂಗ್ಲೀಷಗೆ ತರ್ಜುಮೆ ಆಗಿರುವದನ್ನು ಕನ್ನಡಿಕರಿಸುವದಷ್ಟೆ ನನ್ನ ಕೆಲಸ. Thanks for your compliment.

    ಚಂದ್ರಕಾಂತ ಎಸ್ ಹೇಳಿದರು...

    ಉದಯ್

    ಉಂಗುರ ದೊರೆತ ಮೇಲೆ ನೆನಪು ಮಾಡಿಕೊಳ್ಳಲ್ಪಟ್ಟ ಅಥವಾ ಗುರುತಿಸಲ್ಪಟ್ಟ ( ಅಭಿಜ್ಞಾನಮ್)ಶಕುಂತಲೆಯ ಮಗ ಶಾಕುಂತಲಮ್ ಅಥವಾ ಸರ್ವದಮನ (ಭರತ)

    ಶಾಕುಂತಲಮ್ ಎಂದರೆ ಶಕುಂತಲೆಗೆ ಸಂಬಂಧಿಸಿದ ಎಂಬ ಅರ್ಥವೂ ಇದೆ

    ಶಕುಂತಲೆಯನ್ನು ಕುರಿತು ರಚಿತವಾದ ನಾಟಕ ಶಾಕುಂತಲಮ್ ಎಂಬ ಅರ್ಥವೂ ಇದೆ

    ಆ ಮೂಲ ನಾಟಕವನ್ನು ನೋಡಿದಾಗ ಅದರಲ್ಲಿ ಇನ್ನೊಂದು ಮಾತು ಸೇರಿರುವುದನ್ನು ಗಮನಿಸಿದೆ. " ಅನೇಕ ಜನರು ಶಕುಂತಲೆ ಎಂಬರ್ಥದಲ್ಲಿಯೂ ಶಾಕುಂತಲೆಯನ್ನು ಬಳಸುತ್ತಾರೆ "

    ಇಷ್ಟೆಲ್ಲಾ ಅರ್ಥಗಳನ್ನು ಮತ್ತೊಮ್ಮೆ ನೋಡುವಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು

    ಬಿಸಿಲ ಹನಿ ಹೇಳಿದರು...

    ಚಂದ್ರಕಾಂತ ಮೇಡಂ,
    ನಿಮ್ಮ ವಿವರಣೆಗೆ ಧನ್ಯವಾದಗಳು.ಆದರೆ ಇನ್ನೊಂದು ಕತೆ ಹೀಗಿದೆ ಅಲ್ವೆ? ಮೇನಕೆ ತನ್ನ ಮಗುವನ್ನು ಭೂಲೋಕದಲ್ಲಿ ಬಿಟ್ಟುಹೋದ ಮೇಲೆ ಶಾಕುಂತಲ ಪಕ್ಷಿಗಳು ಅವಳನ್ನು ಸಂರಕ್ಷಿಸುತ್ತಿದ್ದರಿಂದ ಹಾಗೂ ಅಲ್ಲಿಗೆ ಬಂದ ಕಣ್ವರು ಅದನ್ನು ಕಣ್ಣಾರೆ ನೋಡಿದ್ದರಿಂದ ಅವಳಿಗೆ ಶಾಕುಂತಲೆ ಎಂದು ನಾಮಕರಣ ಮಾಡಿದರೆಂದು ಕತೆ ಹೇಳುತ್ತದಲ್ವೆ? ಇದಕ್ಕೆ ನೀವೇನು ಹೇಳುತ್ತೀರಿ?

    ಚಂದ್ರಕಾಂತ ಎಸ್ ಹೇಳಿದರು...

    ಉದಯ್

    ಹೌದು, ಅವಳ ತಂದೆ ತಾಯಿಯರು ಬಿಟ್ಟುಹೋದಮೇಲೆ ಅವಳನ್ನು ಶಕುಂತ ಪಕ್ಷಿಗಳು ಸಾಕಿದವು, ಆದ್ದರಿಂದ ಅವಳಿಗೆ ಶಕುಂತಲಾ ಎಂಬ ಹೆಸರು ಬಂದಿತು

    ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

    ಉದಯ ಅವರೆ...
    ಶಕುಂತಲೆಯ ಸ್ವಗತ ಬಹಳ ಇಷ್ಟವಾಯಿತು. ಒಬ್ಬೊಬ್ಬರ ಭಾವಕ್ಕೂ ಒಂದೊಂದು ತೆರನಾಗಿ ಧಕ್ಕುವ ಈ ಶಕುಂತಲೆಯ ಕಥೆ ಕೇಳಿದಾಗೆಲ್ಲ ಏನಾದರೂ ಬರೆಯಬೇಕೆನ್ನಿಸುತ್ತಿತ್ತು. ಬಹಳಷ್ಟು ಜನ ಬರೆದದ್ದನ್ನೇ ಮತ್ತೆ ನಾನು ಬರೆಯುವುದು ಬೇಡ ಅಂದುಕೊಳ್ಳುತ್ತ ಇಷ್ಟು ದಿನ ತಡೆಹಿಡಿದಿದ್ದ ಸಾಲುಗಳು ಮತ್ತೆ ಮತ್ತೆ ಕಾಡಿ ಬ್ಲಾಗಲ್ಲಿ ಚೆಲ್ಲಿಬಿಟ್ಟೆ.
    ನಿಮ್ಮ ಕವಿತೆಯ ಲಿಂಕನ್ನು ನನ್ನ ಬ್ಲಾಗಲ್ಲಿಟ್ಟಿದ್ದಕ್ಕೆ ಹಾಗೂ ಚೆಂದದ ಸಾಲುಗಳ ಅನುವಾದಕ್ಕೆ ನಿಮಗೆ ಧನ್ಯವಾದ.