Demo image Demo image Demo image Demo image Demo image Demo image Demo image Demo image

ಇದು ಉಮಾಶ್ರೀ!!

  • ಭಾನುವಾರ, ಸೆಪ್ಟೆಂಬರ್ 27, 2009
  • ಬಿಸಿಲ ಹನಿ
  • ನಾನು ಆಗ ತಾನೆ M.A ಮಾಡಿ ಬೆಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದ್ದೆ. ಅದೇನು ನನ್ನ ಅದೃಷ್ಟವೋ ಏನೋ ನಾನು ಸೇರಿಕೊಂಡ ವರ್ಷವೇ ನಮ್ಮ ಕಾಲೇಜಿನ ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭಕ್ಕೆ ನನ್ನ ಅಚ್ಚುಮೆಚ್ಚಿನ ನಟಿ ಉಮಾಶ್ರೀಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ನನಗೆ ಖುಶಿಯೋ ಖುಶಿ! ಏಕೆಂದರೆ ನಾನು ಆ ವೇಳೆಗಾಗಲೆ ‘ಸಂಗ್ಯಾ ಬಾಳ್ಯಾ’ ಚಿತ್ರದಲ್ಲಿನ ಅವರ ವಿಶೇಷ ಅಭಿನಯವನ್ನು ನೋಡಿ ಅವರ ಕಟ್ಟಾ ಅಭಿಮಾನಿಯಾಗಿದ್ದೆ. ಆ ಚಿತ್ರಕ್ಕೆ ಅವರು ರಾಜ್ಯಮಟ್ಟದ ಶ್ರೇಷ್ಟ ಪೋಷಕ ನಟಿ ಪ್ರಶಸ್ತಿಯನ್ನೂ ಗಿಟ್ಟಿಸಿದ್ದರು. ಇದೀಗ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡು ಎಲ್ಲರ ಗಮನವನ್ನು ಸೆಳೆದಿದ್ದಾರೆ. ಕಾರ್ಯಕ್ರಮದ ದಿನ ನಮಗೆಲ್ಲರಿಗೂ ಉಮಾಶ್ರೀ ಬರುತ್ತಾರೋ ಇಲ್ಲವೋ ಎನ್ನುವ ಆತಂಕ ಇತ್ತು. ಏಕೆಂದರೆ ಬಹಳಷ್ಟು ಸಿನಿಮಾ ನಟರು ಮೊದಲು ಒಪ್ಪಿಕೊಂಡು ಕೊನೆ ಘಳಿಗೆಯಲ್ಲಿ ಕೈಕೊಟ್ಟು ಬಿಡುತ್ತಾರೆ. ಆದರೆ ಇಲ್ಲಿ ಹಾಗಾಗಲಿಲ್ಲ. ಉಮಾಶ್ರೀ ಬಂದರು. ಪ್ರಾಂಶುಪಾಲರು ನಮ್ಮನ್ನು ಪರಿಚಯಿಸಿದಾಗ ನಮ್ಮತ್ತ ಒಂದು ಮಂದಸ್ಮಿತವನ್ನು ಬೀರಿದರು. ನಂತರ ಕಾರ್ಯಕ್ರಮಕ್ಕೆ ಹೊರಟೇಬಿಟ್ಟರು. ಅಷ್ಟುಬಿಟ್ಟರೆ ಆವತ್ತು ಸಮಾರಂಭದ ಗಡಿಬಿಡಿಯಲ್ಲಿ ಅವರೊಂದಿಗೆ ಮಾತನಾಡಲಾಗಲೇ ಇಲ್ಲ!

    ಉಮಾಶ್ರೀ ಏನು ಮಾತನಾಡಬಹುದೆಂದು ನಮಗೆಲ್ಲ ಕುತೂಹಲವೋ ಕುತೂಹಲ! ಉಮಾಶ್ರೀ ಮಾತನಾಡಲು ಎದ್ದು ನಿಂತರು. ಒಮ್ಮೆ ಪ್ರೇಕ್ಷಕರತ್ತ ಮುಗುಳುನಗೆಯನ್ನು ಬೀರಿ ಆರಂಭಿಸಿಯೇ ಬಿಟ್ಟರು: ನಾವು ಗೆದ್ದಾಗ ಎಲ್ಲೊ ಒಂದು ಕಡೆ ಸೋತಿರುತ್ತೇವೆ, ಸೋತಾಗ ಇನ್ನೆಲ್ಲೋ ಒಂದು ಕಡೆ ಗೆದ್ದಿರುತ್ತೇವೆ! ಈ ಸೋಲು ಗೆಲವುಗಳನ್ನು ಸಮನಾಗಿ ಸ್ವೀಕರಿಸುವದೇ ಬದುಕು! ಹಾಗೆ ಸ್ವೀಕರಿಸುವದನ್ನು ಕಲಿಸುವದೇ ಕಲೆ! ಆ ಕಲೆ ಅಡಗಿರುವದೇ ಸಂಸ್ಕೃತಿಯಲ್ಲಿ! ಅಂಥ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಲೆಂದೇ ಇಂಥ ಸಾಂಸ್ಕೃತಿಕ ಸಮಾರಂಭಗಳನ್ನು ನಡೆಸೋದು! ಎಂದು ಫಿಲಾಸಫಿಕ್ ಆಗಿ ಮಾತನಾಡಿ ನಮ್ಮೆಲ್ಲರ ಚಪ್ಪಾಳೆಯನ್ನು ಗಿಟ್ಟಿಸಿದರು. ಅಷ್ಟೇ ಅಲ್ಲದೆ ಸಮಾರಂಭದ ಆಶಯಕ್ಕೆ ತಕ್ಕಂತೆ ಸಂಸ್ಕೃತಿ ಎಂದರೇನು? ಕಲೆ ಎಂದರೇನು? ಅದನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು? ಎಂಬುದನ್ನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬಹಳಷ್ಟು ಅತಿಥಿಗಳು ಸಮಾರಂಭದ ಆಶಯವನ್ನೇ ಮರೆತು ಏನೇನೋ ಮಾತಾಡಿ ಬೋರ್ ಹೊಡೆಸಿಬಿಡುತ್ತಾರೆ. ಆದರೆ ಉಮಾಶ್ರೀ ಹಾಗೆ ನಿರಾಶೆಗೊಳಿಸಲಿಲ್ಲ. ಮಾತು ಮುಗಿದಾದ ಮೇಲೆ ಕಾರ್ಯಕ್ರಮದ ನಿರೂಪಕರು ಉಮಾಶ್ರೀಯವರನ್ನು “ಒಡಲಾಳ” ನಾಟಕದ ಒಂದೆರಡು ಡೈಲಾಗ್‍ಗಳನ್ನು ಹೇಳಲು ಕೇಳಿಕೊಂಡಾಗ “ಅಯ್ಯೋ, ಆ ಡೈಲಾಗ್ಸೆಲ್ಲಾ ಮರೆತಿದಿರೆ! ಬಹಳ ದಿವಸ ಆಯ್ತು ನೋಡಿ” ಎಂದು ಹೇಳಿ ನಕ್ಕು ಬೇರೆ ಇನ್ಯಾವುದೋ ಸಿನಿಮಾದ ಡೈಲಾಗ್‍ಗಳನ್ನು ಹೇಳುವದರ ಮೂಲಕ ಪ್ರೇಕ್ಷಕರ ಮನವನ್ನು ತಣಿಸಿದರು.

    ಎಲ್ಲರೂ ಮಾತನಾಡಿದ ನಂತರ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳಿದ್ದವು. ಉಮಾಶ್ರೀ ವಿದ್ಯಾರ್ಥಿಗಳ ಮನರಂಜನಾ ಕಾರ್ಯಕ್ರಮವನ್ನು ನೋಡಲು ಉಳಿದರು. ಕಾರ್ಯಕ್ರಮಗಳು ಶುರುವಾದವು. ವಿದ್ಯಾರ್ಥಿನಿಯರ ತಂಡವೊಂದು ಯಾವುದೋ ಒಂದು ಹಾಡಿಗೆ ನರ್ತಿಸುತ್ತಿದ್ದರು. ಮಧ್ಯದಲ್ಲಿ ಹುಡುಗಿಯೊಬ್ಬಳ ಸೆರಗು ಆಕಸ್ಮಿಕವಾಗಿ ಜಾರಿ ಕೆಳಗೆ ಬಿತ್ತು. ತಕ್ಷಣ ಆ ಹುಡುಗಿ ಅದನ್ನು ಸರಿಪಡಿಸಿಕೊಂಡಳಾದರೂ ಅಷ್ಟರಲ್ಲಿ ಸೇರಿದ್ದ ಹುಡುಗರೆಲ್ಲಾ ಅಸಹ್ಯ ರೀತಿಯಲ್ಲಿ ಸಿಳ್ಳೆ, ಚಪ್ಪಾಳೆಗಳನ್ನು ಹಾಕಿ ಆ ಹುಡುಗಿಗೆ ಅವಮಾನ ಮಾಡಿದರು. ಈ ಘಟನೆಯಿಂದ ಆ ಹುಡುಗಿಗಿಂತ ಉಮಾಶ್ರೀಯವರೆಗೇ ತುಂಬಾ ನೋವಾಯಿತು. ಆ ನೃತ್ಯ ಮುಗಿಯುತ್ತಿದ್ದುದನ್ನೇ ಕಾಯುತ್ತಿದ್ದ ಉಮಾಶ್ರೀಯವರು ವೇದಿಕೆಗೆ ಬಂದು ಮೈಕ್ ತೆಗೆದುಕೊಂಡು “ನಾನು ಹಿಂದೆ ‘ಒಡಲಾಳ’ದಲ್ಲಿ ಸಾಕವ್ವನ ಪಾತ್ರ ಮಾಡುತ್ತಿದ್ದೆ. ಆ ಪಾತ್ರಕ್ಕೆ ರವಿಕೆ (ಬ್ಲೌಸ್) ಹಾಕದೆ ಬರಿ ಸೆರಗಿನಿಂದ ನನ್ನ ಎದೆಯನ್ನು ಮುಚ್ಚಿಕೊಂಡು ನಾಟಕದುದ್ದಕ್ಕೂ ಅಭಿನಯಿಸಬೇಕೆಂದು ನಿರ್ದೇಶಕರು ಹೇಳಿದ್ದರು. ನಾನು ಆಯ್ತು ಅಂದೆ. ಒಂದು ಶೋನಲ್ಲಿ ನಾನು ಹೀಗೆ ಅಭಿನಯಿಸುತ್ತಿದ್ದೆ. ಬಹಳ ಆವೇಶದ ಸನ್ನಿವೇಶವದು. ನಾನು ತಲ್ಲೀನಳಾಗಿ ಅಭಿನಯಸುತ್ತಿರಬೇಕಾದರೆ ಆಕಸ್ಮಿಕವಾಗಿ ನನ್ನ ಸೀರೆ ಸೆರಗೂ ಜಾರಿಬಿತ್ತು. ಆದರೆ ಅಲ್ಲಿರುವ ಪ್ರೇಕ್ಷಕರು ಯಾರೂ ನಗಲಿಲ್ಲ. ಏಕೆಂದರೆ ಅವರ ಗಮನವೆಲ್ಲಾ ನನ್ನ ಅಭಿನಯದ ಮೇಲಿತ್ತೇ ಹೊರತು ನನ್ನ ದೇಹದ ಮೇಲಲ್ಲ. ಅದು ಕಲೆಗೆ ಕೊಟ್ಟ ಗೌರವವಾಗಿತ್ತು. ಒಬ್ಬ ಕಲಾವಿದೆಯನ್ನು ನಡೆಸಿಕೊಂಡ ರೀತಿ ಅಂಥದ್ದಿತ್ತು! ಅಲ್ಲಿದ್ದವರೆಲ್ಲಾ ಸಭ್ಯ ಕಲೋಪಾಸಕರು, ಇಲ್ಲಿರೋರು ಅಸಭ್ಯ ಕಲೋಪಾಸಕರು! ಇಂಥವರಿಗೆ ಸಂಸ್ಕೃತಿ ಮಹತ್ವವನ್ನು ಸಾರುವ ಸಾಂಸ್ಕೃತಿಕ ಸಂಘಗಳು ಬೇರೆ” ಎಂದು ವ್ಯಂಗವಾಗಿ ತಣ್ಣನೆಯ ಮಾತುಗಳಲ್ಲಿ ಆದರೆ ಮುಟ್ಟಿನೋಡಿಕೊಳ್ಳುವ ಹಾಗೆ ವಿದ್ಯಾರ್ಥಿಗಳಿಗೆ ಮಾತಿನ ಛಡಿಯೇಟನ್ನು ನೀಡಿದರು. ಅಷ್ಟು ಹೇಳಿದ್ದೇ ತಡ ಅವಮಾನ ಮಾಡಿದ ವಿದ್ಯಾರ್ಥಿಗಳೆಲ್ಲಾ ಒಬ್ಬೊಬ್ಬರಾಗಿ ಖಾಲಿಯಾದರು. ಇದು ಉಮಾಶ್ರೀ!! ಹಾಗೆಂದೇ ಅಂಥವರನ್ನು ತಡವಾದರೂ ಕಲಾಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ!

    -ಉದಯ ಇಟಗಿ

    11 ಕಾಮೆಂಟ್‌(ಗಳು):

    ಸಾಗರದಾಚೆಯ ಇಂಚರ ಹೇಳಿದರು...

    ಉದಯ ಸರ್,
    ನಿಜ, ಉಮಾಶ್ರಿ ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದೆ.

    Ittigecement ಹೇಳಿದರು...

    ಉದಯ್....

    ರಾಷ್ಟ್ರಪ್ರಶಸ್ತಿ ಬಂದ ಈ ಸಮಯದಲ್ಲಿ ಉಮಾಶ್ರೀಯವರನ್ನು ನೆನಪಿಸಿಕೊಂಡಿದ್ದು ಸಕಾಲಿಕವಾಗಿದೆ...
    ಅವರು ಅದ್ಭುತ ಕಲಾವಿದೆ...

    "ಪುಟ್ಟ ಮಲ್ಲಿ.. ಪುಟ್ಟ ಮಲ್ಲಿ ನೋಡು ಬಾ ಇಲ್ಲಿ" ಅನ್ನುತ್ತ..
    ಹಣ್ಣು ಹಣ್ಣು ಮುದುಕಿಯ ಪಾತ್ರ ನೋಡಿ ನಾನು ಬೆರಗಾಗಿದ್ದೆ...

    ಹಳ್ಳಿಯ ಮುಗ್ಧ ಪಾತ್ರಗಳನ್ನು ಸಲಿಸಾಗಿ ಮಾಡುತ್ತಾರೆ...

    ಅವರಿಗೆ...ಅವರ ಸಾಮರ್ಥ್ಯ ತೋರಿಸುವ ಪಾತ್ರಗಳು ಇನ್ನಷ್ಟು ಸಿಗಬೇಕು..
    ಅವರಿಗೆ ಇನ್ನಷ್ಟು ಪ್ರಶಸ್ತಿಗಳು ಬರಲೆಂದು ಹಾರೈಸುವೆ...

    ಅವರೂ ಕೂಡ ಅವರ ಜೀವನದಲ್ಲಿ ನೊಂದು ಬೆಂದು ಎದ್ದಿದ್ದಾರೆ...

    ಅವರಿಗೆ ಅಭಿನಂದಿಸಲು ಅನುವು ಮಾಡಿಕೊಟ್ಟ ನಿಮಗೆ ಧನ್ಯವಾದಗಳು...

    shivu.k ಹೇಳಿದರು...

    ಉದಯ್ ಸರ್,

    ರಾಷ್ಟ್ರಪ್ರಶಸ್ತಿಯನ್ನು ಪಡೆದಂತ ನಟಿಯನ್ನು ಆಗ ನಿಮ್ಮ ಕಾಲೇಜಿನ ಕಾರ್ಯಕ್ರಮದಲ್ಲಿ ನೋಡಿದ ನೀವೇ ಅದೃಷ್ಟವಂತರು. ಅವರ ಮಾತುಗಳನ್ನು ನಾನು ಕೇಳಿದ್ದೇನೆ. ತುಂಬಾ ತೂಕವುಳ್ಳದ್ದಾಗಿರುತ್ತದೆ....

    ತೇಜಸ್ವಿನಿ ಹೆಗಡೆ ಹೇಳಿದರು...

    ಉದಯ್ ಅವರೆ,

    ನಿಮ್ಮ ಲೇಖನವನ್ನೋದಿದ ಮೇಲೆ ನಿಜಕ್ಕೂ ಬಹು ತೂಕದ ವ್ಯಕ್ತಿ ಆಕೆಯೆನಿಸಿತು . ಕೆಲ ತಿಂಗಳ ಹಿಂದಿನವರೆಗೂ ಒಂದು ಪತ್ರಿಕೆಯಲ್ಲಿ ಅವರ ಬಗ್ಗೆ ಬಂದ ಕೀಳು ವರದಿಯನ್ನೋದಿ ನನಗೆ ಸ್ವಲ್ಪ ಸಂಶಯ ಬಂದಿತ್ತು ನಿಜ. ಆದರೆ ಕ್ರಮೇಣ ಅವರ ಜೀವನ ಚರಿತ್ರೆ, ಮೇಲೇರಿ ಬಂದ ಪರಿ ಎಲ್ಲವನ್ನೂ ಓದುತ್ತಿದ್ದಂತೆ ಗೌರವ ಮೂಡಿತು. ಈಗ ನಿಮ್ಮೀ ಲೇಖನವನ್ನೋದಿದ ಮೇಲೆ ಗೌರವ ಇನ್ನೂ ಹೆಚ್ಚಾಗಿದೆ. ಧನ್ಯವಾದಗಳು.

    PARAANJAPE K.N. ಹೇಳಿದರು...

    ರಾಷ್ಟ್ರ ಪ್ರಶಸ್ತಿ ಪಡೆದ ನಟಿಯ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ನಾನು ಆಕೆಯ ಅಭಿಮಾನಿ

    Unknown ಹೇಳಿದರು...

    ಉದಯ್ ಒಮ್ಮೆ ಅವರು ನಮ್ಮ ಕಾಲೇಜಿಗೂ ಬಂದಿದ್ದರು. ಮೇಕಪ್ಪಿನಲ್ಲೇ ಬಂದಿದ್ದರೂ ಎಲ್ಲೂ ಗಡಿಬಿಡಿ ಮಾಡದೆ, ವಿದ್ಯಾರ್ಥಿಗಳೊಂದಿಗೆ ಬೆರೆತು ಮಾತನಾಡಿ, ಎಲ್ಲಾ ಕರ್ಯಕ್ರಮಗಳನ್ನು ನೋಡಿಯೇ ಹೊರಟರು. ಅವರ ಒಡಲಾಳ, ಯಯಾತಿ ನಾಟಕ ನೋಡಿ ಅವರೊಂದು ಅನನ್ಯ ರತ್ನ ಎಂಬ ತೀರ್ಮಾನಕ್ಕೆ ಬಂದಿದ್ದೆ. ಕೆಲವು ಸಿನಿಮಾಗಳಲ್ಲಿ ತೀರಾ ಕಳಪೆಯಾದ ಪಾತ್ರಗಳಲ್ಲಿ ಅವರನ್ನು ನೋಡಿ ನೊಂದಿದ್ದೆ. ಕೊನೆಗೂ ಆ ಕಲಾವಿದೆ ರಾಷ್ಟ್ರಮಟ್ಟದ ಗೌರವ ದೊರೆತದ್ದು ನಿಜಕ್ಕೂ ಸಂಭ್ರಮಿಸಲಬೇಕಾದ ವಿಷಯ. ನಿಮ್ಮ ಲೇಖನಕ್ಕೆ ಅಭಿನಂದನೆಗಳು.

    ಶಿವಪ್ರಕಾಶ್ ಹೇಳಿದರು...

    ಉದಯ್ ಅವರೆ,
    ಉಮಾಶ್ರಿ ಅವರು ಪ್ರತಿಭಾವಂತೆ ನಟಿ.
    She deserves to have national award.

    Unknown ಹೇಳಿದರು...

    ಉತ್ತಮ ಲೇಖನ...

    ದಿನಕರ ಮೊಗೇರ ಹೇಳಿದರು...

    ಎಲ್ಲರೂ ಎಪ್ಪತ್ತರ ವಯಸ್ಸಲ್ಲಿ ಇಪ್ಪತ್ತರ ಪಾತ್ರ ಮಾಡಿದರೆ ಉಮಾಶ್ರೀ ಇಪ್ಪತ್ತರ ವಯಸ್ಸಲ್ಲಿ, ಎಪ್ಪತ್ತರ ವಯಸ್ಸಿನ ಪಾತ್ರಕ್ಕೆ ಜೀವ ತುಂಬಿದ್ದರು..... ಅಂಥವರ ಬಗ್ಗೆ ಬರೆದಿದ್ದಕ್ಕೆ ... ಧನ್ಯವಾದ.....

    ಅಲೆಮಾರಿ ಹೇಳಿದರು...

    nanna mechchin umaashree avara bagge barediddakke nimage thanks:)

    RAGHU KV ಹೇಳಿದರು...

    LEKANA TUMBA ISTA AITU UDAY. KEEP IT UP.