Demo image Demo image Demo image Demo image Demo image Demo image Demo image Demo image

ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ?

 • ಶುಕ್ರವಾರ, ಫೆಬ್ರವರಿ 06, 2009
 • ಬಿಸಿಲ ಹನಿ
 • ಲೇಬಲ್‌ಗಳು: ,
 • ಇತ್ತೀಚಿಗೆ ನಾನು ಕೆಲಸ ಮಾಡುವ ಸೆಭಾ ಯೂನಿವರ್ಷಿಟಿಯಲ್ಲಿ ಒಂದು ಘಟನೆ ಜರುಗಿತು. ಲಂಡನ್‍ನಲ್ಲಿ ಓದಿ ಬಂದ ನನ್ನ ಲಿಬಿಯನ್ ಅಧ್ಯಾಪಕ ಮಿತ್ರರೊಬ್ಬರು "Indian teachers are overqualified, but they are under skilled" ಅಂತ ನೇರವಾಗಿ ಆಪಾದಿಸಿದರು. ಅಂದರೆ ಅವರ ಆಪಾದನೆಯ ತಿರುಳು ಇಷ್ಟೇ ಆಗಿತ್ತು: ಭಾರತೀಯ ಅಧ್ಯಾಪಕರು (ಎಲ್ಲರೂ ಅಲ್ಲ) ಏನೇ ಎಮ್.ಫಿಲ್. ಪಿಎಚ್.ಡಿ ಮಾಡಿದರೂ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪಾಠ ಮಾಡುವದರಲ್ಲಿ ಸೋತು ಹೋಗುತ್ತಾರೆ ಹಾಗೂ ಅವರಿಗೆ ಭಾಷೆಯನ್ನು ಸಮರ್ಥವಾಗಿ ಬಳಸಿ ಪ್ರಸ್ತುತ ಪಡಿಸುವ ಕಲೆಯಾಗಲಿ, ಪರಿಣಾಮಕಾರಿಯಾಗಿ ಸಂವಹಿಸುವ ಕಲೆಯಾಗಲಿ ಗೊತ್ತಿಲ್ಲ ಎಂಬುದು. ಅವರ ಈ ಹೇಳಿಕೆಯಿಂದ ಮೊದಲಿಗೆ ನನಗೆ ಸ್ವಲ್ಪ ಕಸಿವಿಸಿಯಾಯಿತಾದರೂ ಅವರು ಮಾತನಾಡುತ್ತಿರುವದು ಬರಿ ಎಮ್.ಫಿಲ್. ಪಿಎಚ್.ಡಿ ಮಾಡಿದವರ ಬಗ್ಗೆ ಮಾತ್ರ ಎಂದೂ ಹಾಗೂ ನಾನು ಯಾವುದೇ ಎಮ್.ಫಿಲ್ ಪಿಎಚ್.ಡಿ ಮಾಡದೇ ಇರುವದರಿಂದ ಆ ಗುಂಪಿಗೆ ಸೇರಲಾರೆ ಎಂದು ತಿಳಿದು ಕೊಂಚ ಸಮಾಧಾನವಾಯಿತು. ಆದರೂ ನಾನೂ ಒಬ್ಬ ಭಾರತೀಯನಾಗಿದ್ದರಿಂದ ಏಕೋ ಅವಮಾನವಾದಂತೆನಿಸಿ ಥಟ್ಟನೆ "ಬರಿ ಭಾರತೀಯರನ್ನು ಮಾತ್ರ ಏಕೆ ದೂರುತ್ತೀರಿ? ಬ್ರಿಟಿಷರು, ಅಮೆರಿಕನ್ನರು, ಲಿಬಿಯನ್ನರು ಯಾರಾದರು ಪಿಎಚ್.ಡಿ ಮಾಡಿರುವ ಬಹಳಷ್ಟು ಜನರದು ಇದೇ ಕತೆ ಆಗಿರಬಹುದಲ್ಲವೆ?" ಎಂದು ಮರು ಸವಾಲೆಸೆದೆ. ಬಹುಶಃ ಅವರ ಪ್ರಶ್ನೆಗೆ ಅದು ಸರಿಯಾದ ಉತ್ತರ ಆಗಿರದೆ ಇದ್ದುದರಿಂದಲೋ ಅಥವಾ ಮಾತಿನ ಜಟಾಪಟಿಯಲ್ಲಿ ಅವರ ಮಾತಿನ ಧಾಟಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಹಾಗೆ ಹೇಳಿದ್ದರಿಂದಲೋ ಏನೋ ಅವರೂ ಕೋಪಿಸಿಕೊಂಡು ಚರ್ಚೆ ಆರಂಭವಾಗುವದಕ್ಕೆ ಮುನ್ನ ಎದ್ದು ಹೋದರು. ಮೇಲಾಗಿ ಆ ಚರ್ಚೆ ಯಾವುದೇ ಮುನ್ಸೂಚನೆಯಿಲ್ಲದೆ ಮಾತಿನ ಭರದಲ್ಲಿ ಇದ್ದಕ್ಕಿದ್ದಂತೆ ಆರಂಭವಾಗಿದ್ದರಿಂದ ಹಾಗೂ ಅದಕ್ಕೆ ಬೇಕಾದ ಪೂರ್ವ ಸಿದ್ಧತೆ ನನ್ನಲ್ಲಿ ಇರಲಿಲ್ಲವಾದ್ದರಿಂದ ಅವರೊಂದಿಗೆ ಹೆಚ್ಚು ವಾದಕ್ಕೆ ಇಳಿಯಲು ಹೋಗಲಿಲ್ಲ. ಏಕೋ ಏನೋ ಅವರ ಮಾತುಗಳು ನನ್ನ ತಲೆಯಲ್ಲಿ ಹುಳುಗಳನ್ನು ಬಿಟ್ಟವು. ಅವರು ಎದ್ದು ಹೋದ ಮೇಲೆ ಈ ಭಾರತೀಯರನ್ನು, ಬ್ರಿಟಿಷರನ್ನು, ಅಮೆರಿಕನ್ನರನ್ನು, ಲಿಬಿಯನ್ನರನ್ನು ಒತ್ತಟ್ಟಿಗಿಟ್ಟು ಸುಮ್ಮನೆ ಈ ಎಮ್.ಫಿಲ್. ಪಿಎಚ್.ಡಿ ಡಿಗ್ರಿಗಳ ಕುರಿತು ಗಂಭೀರವಾಗಿ ಯೋಚಿಸತೊಡಗಿದೆ. ಹಾಗೆ ಯೋಚಿಸುತ್ತಾ ಹೋದಂತೆ ನನ್ನ ವಿದ್ಯಾರ್ಥಿ ದಿನಗಳು ಅಕ್ಯಾಡೆಮಿಕ್ ದಿನಗಳು ನೆನಪಾದವು.

  ನಾನು ಧಾರವಾಡದ ಕಿಟೆಲ್ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪಿ.ಯು.ಸಿ.ಓದುತ್ತಿದ್ದಾಗ ನಮಗೊಬ್ಬ ಕನ್ನಡ ಅಧ್ಯಾಪಕರಿದ್ದರು. ಅವರು ಮಾಡಿದ್ದು ಬರಿ ಎಮ್.ಎ. ಆದರೆ ಅವರು ಪಾಠ ಮಾಡುತ್ತಿದ್ದ ರೀತಿಗೆ ತರಗತಿ ಯಾವಾಗಲೂ ಕಿಕ್ಕಿರಿದು ತುಂಬಿರುತ್ತಿತ್ತು. ಸಾಮಾನ್ಯವಾಗಿ ಭಾಷಾ ತರಗತಿಗಳನ್ನು ಅಲಕ್ಷಿಸುವ ಅದರಲ್ಲೂ ಕನ್ನಡ ವಿಷಯವನ್ನು ಅಲಕ್ಷಿಸುವ ವಿಜ್ಞಾನದ ವಿದ್ಯಾರ್ಥಿಗಳು ಸಹ ಅವರ ತರಗತಿಗೆ ತಪ್ಪದೇ ಹಾಜರಾಗುತ್ತಿದ್ದರು. ಆದರೆ ನಾವು ದ್ವಿತಿಯ ಪಿ.ಯು.ಸಿ.ಗೆ ಬರುವಷ್ಟರಲ್ಲಿ ಆ ಅಧ್ಯಾಪಕರು ಮೂರು ತಿಂಗಳು ಮೆಟರ್ನಿಟಿ ಲೀವ್ ಮೇಲೆ ಹೋಗಬೇಕಾಗಿ ಬಂದಿದ್ದರಿಂದ ಅವರ ಜಾಗಕ್ಕೆ ನಮ್ಮದೇ ಕಾಲೇಜಿನ ಆರ್ಟ್ಸ್ ವಿಭಾಗದಿಂದ ಬೇರೊಬ್ಬ ಕನ್ನಡ ಅಧ್ಯಾಪಕರನ್ನು ಡೆಪ್ಯೂಟ್ ಮಾಡಲಾಯಿತು. ಆಕೆ ಅದಾಗಲೆ ಪಿಎಚ್.ಡಿ ಮಾಡಿ ಪತ್ರಿಕೆಗಳಲ್ಲಿ ಕತೆ, ಕವನ, ಲೇಖನಗಳನ್ನು ಬರೆದು ಲೇಖಕಿ ಎನಿಸಿಕೊಂಡಾಗಿತ್ತು. ಆದರೆ ಅವರು ಪಾಠ ಮಾಡುತ್ತಿದ್ದುದು ಎಷ್ಟು ನೀರಸವಾಗಿರುತ್ತಿತ್ತೆಂದರೆ ವಿದ್ಯಾರ್ಥಿಗಳೆಲ್ಲಾ ಅವರನ್ನು ಛೇಡಿಸುತ್ತಾ, ಗೇಲಿ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಇದರರ್ಥ ಅವರಲ್ಲಿ ವಿಷಯ ಜ್ಞಾನ ಏನೇನೂ ಇರಲಿಲ್ಲವಂತಲ್ಲ. ಮೊದಲಿದ್ದ ಅಧ್ಯಾಪಕರಿಗಿಂತ ಹೆಚ್ಚು ಜ್ಞಾನ, ವಿಷಯ ಸಂಗ್ರಹಣೆ ಅವರಲ್ಲಿತ್ತು. ಆದರೆ ಅದನ್ನು ಸಮರ್ಥವಾಗಿ ಬಳಸಿ ಪ್ರಸ್ತುತಪಡಿಸುವ ಕಲೆ ಅವರಿಗೆ ಗೊತ್ತಿರಲಿಲ್ಲ. ಏನೋ ಹೇಳಲು ಹೋಗಿ ಏನನ್ನೋ ಹೇಳುತ್ತಿದ್ದರು. ವಿದ್ಯಾರ್ಥಿಗಳೆಲ್ಲಾ ಗೊಳ್ಳೆಂದು ನಕ್ಕು "ಇವರಿಗೆ ಅದ್ಯಾರು ಪಿಎಚ್.ಡಿ ಕೊಟ್ಟರೋ" ಎಂದು ಅಪಹಾಸ್ಯ ಮಾಡುತ್ತಿದ್ದರು. ಇನ್ನು ಇಂಗ್ಲೀಷ ವಿಭಾಗದಲ್ಲಿ ಒಬ್ಬರು ಪಿಎಚ್.ಡಿ ಮಾಡಿದವರು, ಇನ್ನೊಬ್ಬರು ಬರಿ ಎಮ್.ಎ. ಮಾಡಿದವರು ಇದ್ದರು. ಬರಿ ಎಮ್.ಎ. ಮಾಡಿದ ಅಧ್ಯಾಪಕರು ಆಕರ್ಷಕವಾಗಿ ಪಾಠ ಮಾಡಿದಷ್ಟು ಈ ಪಿಎಚ್.ಡಿ ಮಾಡಿದ ಅಧ್ಯಾಪಕರು ಮಾಡುತ್ತಿರಲಿಲ್ಲ. ಇವರು ವಿದ್ಯಾರ್ಥಿಗಳ ಗ್ರಹಿಕೆಗೆ ಯಾವತ್ತೂ ನಿಲುಕುತ್ತಿರಲಿಲ್ಲ. ಇಷ್ಟೇ ಅಲ್ಲದೆ ಗಣಿತ ವಿಭಾಗದಲ್ಲಿದ್ದ ಮೂವರು ಅಧಾಪಕರಲ್ಲಿ ಇಬ್ಬರು ಬರಿ ಎಮ್.ಎಸ್ಸಿ ಪದವಿಯಲ್ಲಿ ತೃಪ್ತಿಪಟ್ಟುಕೊಂಡು ಅದ್ಭುತವಾಗಿ ಪಾಠ ಮಾಡುತ್ತಿದ್ದರು. ಇನ್ನೊಬ್ಬರು ಪಿಎಚ್.ಡಿ ಹುಚ್ಚು ಹಿಡಿಸಿಕೊಂಡು ಸರಿಯಾಗಿ ತರಗತಿಗಳನ್ನು ತೆಗೆದುಕೊಳ್ಳದೆ ಕೊನೆಗೂ ಪಟ್ಟು ಹಿಡಿದು ಪಿಎಚ್.ಡಿ ಮುಗಿಸಿ ಕ್ಲಾಸ್ ರೂಮಿಗೆ ಬಂದಾಗ ನಮಗೆ ಅಂಥ ಯಾವುದೇ ವ್ಯತ್ಯಾಸ ಕಾಣಿಸಲಿಲ್ಲ.

  ನಾನು ಮುಂದೆ ವಿಜ್ಞಾನವನ್ನು ಬಿಟ್ಟು ಆರ್ಟ್ಸ್ ತೆಗೆದುಕೊಂಡು ಮಂಡ್ಯದ ಪಿ.ಇ.ಎಸ್ ಕಾಲೇಜಿನಲ್ಲಿ ಇಂಗ್ಲೀಷ ವಿಭಾಗಕ್ಕೆ ಸೇರಿಕೊಂಡಾಗಲೂ ಈ ಪಿಎಚ್.ಡಿ ಮಾಡಿರುವ ಅಧ್ಯಾಪಕರಿಂದ ಅಂಥ ವಿಶೇಷವಾದದ್ದೇನೂ ಲಭಿಸಲಿಲ್ಲ. ನಮ್ಮ ಇಂಗ್ಲೀಷ ವಿಭಾಗದಲ್ಲಿದ್ದ ಎಂಟು ಜನ ಅಧ್ಯಾಪಕರಲ್ಲಿ ಆರು ಜನ ಬರಿ ಎಮ್.ಎ. ಮಾಡಿದವರು, ಒಬ್ಬರು ಅದಾಗಲೆ ಪಿಎಚ್.ಡಿ ಮಾಡಿ ಬಹಳ ದಿವಸಗಳಾಗಿದ್ದವು. ಇನ್ನೊಬ್ಬರು ಅರ್ಧ ಮಾಡಿ ಮುಗಿಸಿದ್ದರು. ಈ ಪಿಎಚ್.ಡಿ ಅಧ್ಯಾಪಕರು ಚನ್ನಾಗಿ ಪಾಠವನ್ನೇನೊ ಮಾಡುತ್ತಿದ್ದರು. ಆದರೆ ಉಳಿದ ಅಧ್ಯಾಪಕರಂತೆ ಎಲ್ಲ ವಿದ್ಯಾರ್ಥಿಗಳನ್ನು ತಲುಪುವಲ್ಲಿ ಯಶಸ್ವಿಯಾಗುತ್ತಿರಲಿಲ್ಲ. ಇನ್ನೊಬ್ಬ ಪಿಎಚ್.ಡಿ ಮಾಡುತ್ತಿರುವ ಮಹಾಶಯರು ಪಠ್ಯದಲ್ಲಿ ಅಳವಡಿಸಿರುವ ಪದ್ಯದ ಬಗ್ಗೆ ಆರಂಭಿಸಿ ಇದ್ದಕ್ಕಿದ್ದಂತೆ ಇನ್ಯಾವುದೆ ವಿಷಯಕ್ಕೆ ಜಿಗಿದು ಕೊನೆಗೆ ಆ ಪದ್ಯಕ್ಕೆ ಏನೇನೂ ಸಂಬಂಧವಿಲ್ಲದ ತಮ್ಮ ಪಿಎಚ್.ಡಿ ವಿಷಯದ ಬಗ್ಗೆ ಮಾತನಾಡಿ ತರಗತಿ ಮುಗಿಸುತ್ತಿದ್ದರು. ನಮ್ಮ ಇಂಗ್ಲೀಷ ವಿಭಾಗದ ಮುಖ್ಯಸ್ಥರು ಪಿಎಚ್.ಡಿ. ಹೇಗೆ ಮಾಡಬೇಕೆಂದು ತಲೆಕೆಡಿಸಿಕೊಳ್ಳದೆ ಸದಾ ಪಾಠ ಹೇಗೆ ಮಾಡಬೇಕೆಂದು ಯೋಚಿಸುತ್ತಾ ಗಂಟೆಗಟ್ಟಲೆ ತಯಾರಾಗಿ ಬಂದು ಶೇಕ್ಷಪೀಯರ್‍ನ "ಮ್ಯಾಕ್‍ಬೆತ್" ನಾಟಕ ಮಾಡುತ್ತಿದ್ದರೆ ನಮಗೆ ನಾಟಕ ನೋಡಿದಷ್ಟೆ ಖುಶಿಯಾಗುತ್ತಿತ್ತು. ಬರ್ನಾಡ್‍ಶಾನ "ಪಿಗ್ಮ್ಯಾಲಿಯನ್" ನಾಟಕದ ವಸ್ತುವನ್ನು ಅವರಷ್ಟು ಚನ್ನಾಗಿ ವಿಶ್ಲೇಷಿದಷ್ಟು ಬಹುಶಃ ಬರ್ನಾಡ್‍ಶಾನ ನಾಟಕಗಳ ಮೇಲೆ ಪಿಎಚ್.ಡಿ ಮಾಡಿದವರೂ ಸಹ ಅಷ್ಟು ಚನ್ನಾಗಿ ವಿಶ್ಲೇಷಿಕ್ಕಿಲ್ಲ. ಇನ್ನೊಬ್ಬ ಇಂಗ್ಲೀಷ ಅಧ್ಯಾಪಕರು ತಮ್ಮ ಎಮ್.ಎ. ಡಿಗ್ರಿ ಜೊತೆಗೆ ದೆಹಲಿಯ ನಾಟಕ ಶಾಲೆಯಲ್ಲಿ ತರಬೇತಿ ಮುಗಿಸಿ ಬಂದಿದ್ದರಷ್ಟೆ. ಆದರೆ ಹೆನ್ರಿಕ್ ಇಬ್ಸನ್‌ನ "ಎ ಡಾಲ್ಸ್ ಹೌಸ್" ನಾಟಕದ ನೋರಾಳ ಪಾತ್ರದಲ್ಲಿ ಅವರು ಪರಕಾಯ ಪ್ರವೇಶ ಮಾಡಿ ಪಾಠ ಮಾಡುತ್ತಿದ್ದರೆ ನಾವೆಲ್ಲಾ ರೋಮಾಂಚಿತರಾಗುತ್ತಿದ್ದೆವು. ಇನ್ನು ಇತಿಹಾಸ ವಿಭಾಗದಲ್ಲಿದ್ದ ಪ್ರೊಫೆಸರ್‍ರೊಬ್ಬರಿಗೆ ಯಾವುದೇ ಪಿಎಚ್.ಡಿಗಳಿರಲಿಲ್ಲ. ಅದನ್ನು ಮಾಡಬೇಕೆಂಬ ಮೂಡು ಸಹ ಅವರಿಗೆ ಇರಲಿಲ್ಲ. ಆದರೆ ಅವರು ಇತಿಹಾಸವನ್ನು ಪ್ರಸ್ತುತ ಕಾಲದ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಿತಿಗಳ ಹಿನ್ನೆಲೆಯಲ್ಲಿ ಚರ್ಚಿಸುತ್ತಿದ್ದರೆ, ಇತಿಹಾಸಕಾರರಿಗೂ ಗೊತ್ತಿಲ್ಲದ ಕೆಲವು ಸಂಗತಿಗಳನ್ನು ಹೇಳುತ್ತಿದ್ದರೆ ನಾವೆಲ್ಲಾ ಬೆಕ್ಕಸ ಬೆರಗಾಗಿ ಕೇಳುತ್ತಿದ್ದೆವು. ಅಷ್ಟೆ ಅಲ್ಲದೆ ಅವರಿಗೆ ಇತಿಹಾಸವನ್ನಲ್ಲದೆ ಬೇರೆ ಎಲ್ಲ ವಿಷಯಗಳ ಬಗ್ಗೆ ಅಪಾರವಾದ ಜ್ಞಾನವಿತ್ತು. ಹೀಗಾಗಿ ನಾವು ಅವರನ್ನು "ವಾಕಿಂಗ್ ಎನ್‌ಸೈಕ್ಲೋಪೀಡಿಯಾ" ಎಂದು ಕರೆಯುತ್ತಿದ್ದೆವು.

  ಮುಂದೆ ನಾನು ಎಮ್.ಎ ಮಾಡಿ ಅಧ್ಯಾಪಕನಾಗಿ ವೃತ್ತಿ ಬದುಕು ಆರಂಭಿಸಿದಾಗ ಶೈಕ್ಷಣಿಕ ರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿ ಪಿಎಚ್.ಡಿ ಮಾಡುವದು ತೀರ ಸಾಮಾನ್ಯವಾಗಿ ಕಾಲೇಜೊಂದರಲ್ಲೇ ಪಿಎಚ್.ಡಿ ಮಾಡಿದವರು ಕನಿಷ್ಟ ಪಕ್ಷ ಎರಡು ಅಥವಾ ಮೂರು ಜನ ಇರುತ್ತಿದ್ದರು. ಆಗೆಲ್ಲಾ ನನಗೆ ಈ ಪಿಎಚ್.ಡಿ ಮಾಡಿದವರೊಂದಿಗೆ ಭಿನ್ನ ರೀತಿಯ ಅನುಭವಗಳಾಗಿವೆ. ನಾನು ಕೆಲಸ ಮಾಡುತ್ತಿದ್ದ ಕಾಲೇಜೊಂದರಲ್ಲಿ ವಿಜ್ಞಾನ ಹಾಗೂ ಬೇರೆ ಬೇರೆ ವಿಷಯಗಳಲ್ಲಿ ಪಿಎಚ್.ಡಿ ಮಾಡಿದ ಎಷ್ಟೋ ಜನಕ್ಕೆ ಇಂಗ್ಲೀಷನಲ್ಲಿ ಸರಿಯಾಗಿ ಮಾತನಾಡುವದಿಕ್ಕೆ ಬರುವದಿರಲಿ ಒಂದು ವಾಕ್ಯವನ್ನು ಸಹ ತಪ್ಪಿಲ್ಲದೆ ಬರೆಯಲು ಬರುತ್ತಿರಲಿಲ್ಲ. ಆದರೂ ಎರಡು ಕೊಂಬುಗಳು ಬಂದವರಂತೆ ವರ್ತಿಸುತ್ತಾ ನಮ್ಮನ್ನೆಲ್ಲಾ ತಮ್ಮ ಗುಂಪಿನಿಂದ ಹೊರಗೆ ಇಟ್ಟಿದ್ದರು. ನಾನು ಬೆಂಗಳೂರಿನ ಪ್ರತಿಷ್ಟಿತ ಇಂಜಿನೀಯರಿಂಗ್ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುವಾಗ ಸಮ ಮೊತ್ತದ ಅನುಭವವಿದ್ದಾಗ್ಯೂ ನನಗೆ ಪಿಎಚ್.ಡಿ ಇಲ್ಲ ಅನ್ನುವ ಕಾರಣಕ್ಕೆ ಸಂಬಳದಲ್ಲಿ ಹಿಂದೇಟು ಬಿದ್ದಿದೆ. ಆಗೆಲ್ಲಾ ನಾನು "ಈ ಪಿಎಚ್.ಡಿ ಮಾಡಿದವರು ಅಂಥ ವಿಶೇಷವಾದದ್ದೇನೂ ಕಲಿಸುವದಿಲ್ಲವಲ್ಲ? ಆದರೂ ಏಕೆ ಈ ತಾರತಮ್ಯ?" ಎಂದು ಬೇಸರ ಪಟ್ಟುಕೊಂಡಿದ್ದಿದೆ. ಬರುಬರುತ್ತಾ ಪಿಎಚ್.ಡಿ ಮಾಡುವದು ಸರ್ವೇಸಾಮಾನ್ಯವಾಗಿ ಪ್ರತಿಷ್ಟಿತ ಕಾಲೇಜುಗಳಲ್ಲಿ ಪಿಎಚ್.ಡಿ ಮಾಡಿದವರನ್ನೇ ತೆಗೆದುಕೊಳ್ಳುವಂತಾಯಿತು. ಒಂದು ಸಾರಿ ನಾನು ಬೆಂಗಳೂರಿನ ಪ್ರತಿಷ್ಟಿತ ಖಾಸಗಿ ಕಾಲೇಜೊಂದರ ಸಂದರ್ಶನಕ್ಕೆ ಹಾಜರಾದಾಗ "ಅಯ್ಯೊ, ನೀವಿನ್ನೂ ಪಿಎಚ್.ಡಿ ಮಾಡಿಲ್ಲವೆ? ಈ ಫೀಲ್ಡಗೆ ಬಂದು ಏಳು ವರ್ಷ ಆಯ್ತು. ಹೋಗಲಿ ಎಮ್.ಫಿಲ್. ಆದರೂ ಮಾಡಿಕೊಳ್ಳಿ" ಎಂದು ನನ್ನನ್ನು ಅಸ್ಪೃಶ್ಯರನ್ನು ಕಾಣುವಂತೆ ಕಂಡು ಪುಕ್ಕಟ್ಟೆ ಉಪದೇಶವನ್ನು ಕೊಟ್ಟು ಕಳಿಸಿದರೆ ಹೊರತು ಅವರಿಗೆ ನನ್ನ ಬೇರೆಲ್ಲ ಕೌಶಲ್ಯಗಳು ಕಾಣಿಸದೆ ನನ್ನನ್ನು ಆಯ್ಕೆ ಮಾಡಲಿಲ್ಲ.

  ಒಂದು ಸಾರಿ ನಮ್ಮ ಕಾಲೇಜಿನಲ್ಲಿ ಬಿ.ಎ. ತರಗತಿಗೆ ಬಸವಣ್ಣ ಮತ್ತು ಅಲ್ಲಮ ಪ್ರಭುವಿನ (ಇಂಗ್ಲೀಷ ಅನುವಾದ) ವಚನಗಳ ಹಿನ್ನೆಲೆಯಲ್ಲಿ "ಕಲ್ಚರ್ ಯ್ಯಾಂಡ್ ಸೊಸಾಯಿಟಿ" ವಿಷಯದ ಮೇಲೆ ಉಪನ್ಯಾಸವನ್ನು ಏರ್ಪಡಿಸಿದ್ದೆವು. ಅಲ್ಲಿ ಮಾತನಾಡಲು ಪಿಎಚ್.ಡಿ ಪ್ರಾಧ್ಯಾಪಕರನ್ನು ಆಹ್ವಾನಿಸಿದ್ದೆವು. ಅವರು ಅದಾಗಲೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಸೆಮಿನಾರುಗಳಲ್ಲಿ ಪ್ರಬಂಧ ಮಂಡಿಸಿ ಬಂದಿದ್ದರು. ವಿದ್ಯಾರ್ಥಿಗಳು ಮತ್ತು ನಾವೆಲ್ಲಾ ಅವರು ಏನು ಮಾತನಾಡಬಹುದೆಂದು ಭಾರಿ ಕುತೂಹಲದಿಂದ ಕಾಯುತ್ತಾ ಕುಳಿತಿದ್ದೆವು. ಕೊನೆಗೂ ಅವರ ಭಾಷಣ ಶುರುವಾಯಿತು. ಶುರುವಾದ ಮೊದಲ ಅರ್ಧ ಘಂಟೆ ಅವರು ವಿಷಯದ ಮೇಲೆ ಕೇಂದ್ರಿಕೃತವಾಗಿದ್ದರು. ಆನಂತರ ಎಲ್ಲೆಲ್ಲೋ ಜಿಗಿದು ಏನೇನೋ ಹೇಳಿ ಒಂದು ಗಂಟೆಯಲ್ಲಿ ಮುಗಿಸಬೇಕಿದ್ದ ಭಾಷಣವನ್ನು ಮೂರು ಘಂಟೆಗಳವರೆಗೆ ಕೊರೆದು ಕೊನೆಗೂ ಮುಗಿಸುವಷ್ಟರಲ್ಲಿ ವಿದ್ಯಾರ್ಥಿಗಳಲ್ಲದೆ ನಾವೂ ಸುಸ್ತಾಗಿದ್ದೆವು. ಇನ್ನೊಂದು ಸಾರಿ ನಮ್ಮ ಕಾಲೇಜಿನ ಇಂಗ್ಲೀಷ ವಿಭಾಗದಿಂದ " ದಿ ಇಂಪ್ಯಾಕ್ಟ್ ಆಪ್ ವೆರ್ನ್ಯಾಕ್ಯುಲರ್ ಆನ್ ಲರ್ನಿಂಗ್ ಆಫ್ ಇಂಗ್ಲೀಷ ಲಾಂಗ್ವೇಜ್" ಎನ್ನುವ ವಿಷಯದ ಮೇಲೆ ರಾಜ್ಯ ಮಟ್ಟದ ಸೆಮಿನಾರೊಂದನ್ನು ಏರ್ಪಡಿಸಿದ್ದೆವು. ಅಲ್ಲಿ ಮಾತನಾಡಲು ಒಟ್ಟು ಆರು ಜನ ಪಿಎಚ್.ಡಿ ಪ್ರಾಧ್ಯಾಪಕರನ್ನು ಆಹ್ವಾನಿಸಲಾಗಿತ್ತು. ಅವರಲ್ಲಿ ಇಬ್ಬರು ಮಾತ್ರ ಎಷ್ಟನ್ನು ಹೇಳಬೇಕೋ, ಏನನ್ನು ಹೇಳಬೇಕೋ ಅಷ್ಟನ್ನು ಮಾತ್ರ ಹೇಳಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ಉಳಿದ ನಾಲ್ಕು ಜನರಲ್ಲಿ ಮೂವರ ಮಾತುಗಳು ತಲೆಯ ಮೇಲೆ ಹಾರಿ ಹೋದರೆ, ಒಬ್ಬರ ಮಾತುಗಳಂತು ನಮ್ಮ ಮೊಣಕಾಲಿನಿಂದ ಮೇಲೇರುವ ಸ್ಥಿತಿಯಲ್ಲೂ ಇರಲಿಲ್ಲ.

  ಒಮ್ಮೆ ನಮ್ಮ ಕಾಲೇಜಿಗೆ ನ್ಯಾಕ್ (NAAC) ಕಮಿಟಿ ಬಂದಾಗ ನಮ್ಮ ಇಂಗ್ಲೀಷ ವಿಭಾಗದ ಮುಖ್ಯಸ್ಥರನ್ನು "ನೀವು ವಿಭಾಗದ ಮುಖ್ಯಸ್ಥರಾಗಿಯೂ ಇನ್ನೂ ಪಿಎಚ್.ಡಿ ಮಾಡಿಲ್ಲವೆ?" ಎಂದು ಕಮಿಟಿ ಅವರನ್ನು ನೇರವಾಗಿ ಕೇಳಿತ್ತು. ಅದಕ್ಕವರು ತಾಳ್ಮೆಯಿಂದ "ಪಿಎಚ್.ಡಿ. ಮಾಡಿದರೆ ನನಗೊಂದು ಇನ್ಕ್ರೀಮೆಂಟ್ ಸಿಗುವದು ಬಿಟ್ಟರೆ ಅದರಿಂದ ನನಗಾಗಲಿ, ವಿದ್ಯಾರ್ಥಿಗಳಿಗಾಗಲಿ ಬೇರೆ ಯಾವುದೇ ರೀತಿಯ ಪ್ರಯೋಜನವಾಗುವದಿಲ್ಲ" ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿದ್ದರು. ಅವರ ಮಾತಿನಲ್ಲಿ ಎಷ್ಟೊಂದು ಸತ್ಯ ಅಡಗಿದೆ ಅಲ್ಲವೆ? ಎಮ್.ಫಿಲ್. ಅಥವಾ ಪಿಎಚ್.ಡಿಗಳನ್ನು ಹೊಂದಿರುವ ಅಧ್ಯಾಪಕನ ಪಾಠಗಳು ನಿಜಕ್ಕೂ ವಿದ್ಯಾರ್ಥಿಗಳ ಮೇಲೆ ವಿಶೇಷವಾದ ಪರಿಣಾಮವನ್ನು ಬೀರುತ್ತವೆಯೆ? ಅವರ ಪಿಎಚ್.ಡಿಗಳಿಂದ ವಿದ್ಯಾರ್ಥಿಗಳಿಗೆ ಲಾಭವಾಗುತ್ತದೆಯೆ? ಆ ಡಿಗ್ರಿಗಳು ಬೇಕೆ? ಅವುಗಳ ಅವಶ್ಯಕತೆಯಿದೆಯೆ? ನೇಮಕಾತಿ ಸಂದರ್ಭದಲ್ಲಿ ಅವುಗಳನ್ನು ಪರಿಗಣಿಸಬೇಕೆ? ಅವನ್ನೇ ಮಾನದಂಡವಾಗಿಟ್ಟುಕೊಂಡು ಸಂಬಳದ ವಿಷಯದಲ್ಲಿ ತಾರತಮ್ಯ ಮಾಡುವದು ಸರಿಯೆ? ಕಲಿಸುವಿಕೆಗೂ ಸಂಶೋಧನೆ ಮಾಡುವದಕ್ಕೂ ಏನಾದರು ಸಂಬಂಧವಿದೆಯೆ? ಅಸಲಿಗೆ ಪಿಎಚ್.ಡಿ ಎಂದರೆ ಒಂದು ನಿರ್ಧಿಷ್ಟ ವಿಷಯದ ಮೇಲೆ ಸಂಶೋಧನೆ ಮಾಡುವ ರಿಸರ್ಚ್ ಡಿಗ್ರಿಯೇ ಹೊರತು ಟೀಚಿಂಗ್ ಡಿಗ್ರಿ ಅಲ್ಲವೇ ಅಲ್ಲ. ಇದರರ್ಥ ಕಾಲೇಜುಗಳಲ್ಲಿ, ಯೂನಿವರ್ಷಿಟಿಗಳಲ್ಲಿ ಅಧ್ಯಾಪಕರನ್ನು ಹೇಗೆ ರಿಸರ್ಚ್ ಮಾಡಬೇಕೆಂದು ತರಬೇತಿಗೊಳಿಸಲಾಗುತ್ತಿದೆ ಹೊರತು ಹೇಗೆ ಕಲಿಸಬೇಕೆಂದು ತರಬೇತಿಗೊಳಿಸಲಾಗುತ್ತಿಲ್ಲ. ದುರಂತವೆಂದರೆ ಇವತ್ತು ಅಕ್ಯಾಡೆಮಿಕ್ ವಿಭಾಗದಲ್ಲಿ ಪಿಎಚ್.ಡಿ ಮಾಡುವದು ದೊಡ್ದ ಸಾಧನೆಯೆಂಬಂತೆ, ದೊಡ್ಡ ಕ್ವಾಲಿಫಿಕೇಶನ್ ಎಂಬಂತೆ ಬಿಂಬಿಸಲಾಗುತ್ತಿದೆ. ನೇಮಕಾತಿ ಸಂದರ್ಭದಲ್ಲಿ ಈ ಡಿಗ್ರಿಗಳನ್ನೇ ಮಾನದಂಡವಾಗಿಟ್ಟುಕೊಂಡು ಅಂಥವರಿಗೆ ಆದ್ಯತೆ ಕೊಡಲಾಗುತ್ತಿದೆ. ಪಿಎಚ್.ಡಿ ಮಾಡದಿದ್ದರೆ ಅಧ್ಯಾಪಕನ ಕೆಲಸಕ್ಕೆ ಅರ್ಜಿ ಹಾಕಲೂ ಯೋಗ್ಯನಲ್ಲ ಎನ್ನುವ ಅಭಿಪ್ರಾಯ ಮೂಡುತ್ತಿದೆ. ಇಂಥ ವಾತಾವರಣ ಅವಶ್ಯವಾಗಿ ಹೋಗಬೇಕಾಗಿದೆ. ಈಗೀಗ ಮುಂದುವರಿದ ರಾಷ್ಟ್ರಗಳು ಒಬ್ಬ ಅಧ್ಯಾಪಕನ ಪಿಎಚ್.ಡಿ.ಗೂ ಹಾಗೂ ಆತ ಪಾಠ ಮಾಡುವದಕ್ಕೂ ಏನೂ ಸಂಬಧವಿಲ್ಲವೆಂದು ತಿಳಿದು ಅವುಗಳನ್ನು ಕೈ ಬಿಡಲಾಗುತ್ತಿದೆ. ಬರಿ ಕೌಶಲ್ಯ, ಸಾಮರ್ಥ್ಯಗಳ ಆಧಾರದ ಮೇಲೆ ಮಾತ್ರ ಶಿಕ್ಷಕರನ್ನು ನೇಮಿಸಿಕೊಳ್ಳುವ ಪರಿಪಾಠವನ್ನು ಬೆಳೆಸಿಕೊಳ್ಳುತ್ತಿವೆ. ಇದರರ್ಥ ಪಿಎಚ್.ಡಿ ಮಾಡುವದನ್ನು ಆಯಾ ಅಧ್ಯಾಪಕನ ಆಸಕ್ತಿಗೆ ಬಿಡಲಾಗುತ್ತಿದೆಯೆ ಹೊರತು ಖಡ್ಡಾಯಗೊಳಿಸುವದಾಗಲಿ ಹಾಗೂ ಅದನ್ನೇ ಮಾನದಂಡವಾಗಿಸಿ ಕೆಲಸಕ್ಕೆ ತೆಗೆದುಕೊಳ್ಳುವದನ್ನಾಗಲಿ ಮಾಡುತ್ತಿಲ್ಲ. ಭಾರತದಲ್ಲೂ ಇದೆ ಪರಿಪಾಠವನ್ನು ಅನುಸರಿಸಲು ಆಗುವದಿಲ್ಲವೆ? ಕಾಲೇಜುಗಳು, ಯೂನಿವರ್ಷಿಟಿಗಳು ಇದರ ಬಗ್ಗೆ ಗಂಭೀರವಾಗಿ ಯೋಚಿಸಿ ಆ ನಿಟ್ಟಿನಲ್ಲಿ ಕೆಲಸ ಮಾಡಲಾರವೆ? ಈ ಬಗ್ಗೆ ನಮ್ಮ ಶಿಕ್ಷಣತಜ್ಞರು, ಬುದ್ಧಿ ಜೀವಿಗಳು ಏನು ಹೇಳುತ್ತಾರೆ?

  [ಈ ಲೇಖನವು "ದಟ್ಸ್ ಕನ್ನಡ" ದಲ್ಲಿ ಪ್ರಕಟವಾಗಿದೆ. http://thatskannada.oneindia.in/nri/article/2009/0205-indian-teachers-over-qualified-under-skilled.html]

  -ಉದಯ ಇಟಗಿ

  6 ಕಾಮೆಂಟ್‌(ಗಳು):

  ಸತ್ಯನಾರಾಯಣ ಹೇಳಿದರು...

  ನಿಮ್ಮ ಲೇಖನದ ಕೆಲವೊಂದು ಅಂಶಗಳಲ್ಲಿ ಸತ್ಯಾಂಶವಿದೆ. ಲೇಖನದ ಕೊನೆಯ ಪಿ.ಹೆಚ್.ಡಿ ಮಾಡುವದನ್ನು ಆಯಾ ಅಧ್ಯಾಪಕನ ಆಸಕ್ತಿಗೆ ಬಿಡಲಾಗುತ್ತಿದೆಯೆ ಹೊರತು ಖಡ್ಡಾಯಗೊಳಿಸುವದಾಗಲಿ ಹಾಗೂ ಅದನ್ನೇ ಮಾನದಂಡವಾಗಿಸಿ ಕೆಲಸಕ್ಕೆ ತೆಗೆದುಕೊಳ್ಳುವದನ್ನಾಗಲಿ ಮಾಡುತ್ತಿಲ್ಲ. ಭಾರತದಲ್ಲೂ ಇದೆ ಪರಿಪಾಠವನ್ನು ಅನುಸರಿಸಲು ಆಗುವದಿಲ್ಲವೆ? ಎಂಬುದನ್ನು ನಾನೂ ಒಪ್ಪುತ್ತೇನೆ. ಆದರೆ ಪಿಎಚ್.ಡಿ. ಮಾಡಿದವರಲ್ಲೂ ಚೆನ್ನಾಗಿ ಪಾಠ ಮಾಡುವವರಿರುತ್ತಾರೆ ಎಂಬುದನ್ನು ನಿಮ್ಮ ಲೇಖನ ಲಕ್ಷಿಸಿಲ್ಲ. ಇನ್ನು ಪಿ.ಎಚ್.ಡಿ. ಎಂದು ಬರೆಯುವ ಬದಲು ಪಿಎಚ್.ಡಿ. ಎಂದು ಬರೆಯುವುದು ಸೂಕ್ತವಲ್ಲವೆ?

  ಬಿಸಿಲ ಹನಿ ಹೇಳಿದರು...

  ಸತ್ಯನಾರಾಯಣ ಸರ್,
  ನೀವು ನನ್ನ ಲೇಖನದ ಒಳಾರ್ಥವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಅಂತ ಕಾಣಿಸುತ್ತೆ. ನಾನು ಎಲ್ಲೂ ಪಿಎಚ್.ಡಿ ಮಾಡಿದವರು ಸರಿಯಾಗಿ ಪಾಠ ಮಾಡುವದಿಲ್ಲ ಎಂದು ಹೇಳಿಲ್ಲ. ನನ್ನ ಲೇಖನದ ಉದ್ದೇಶವೂ ಅದಲ್ಲ. ಬದಲಾಗಿ ಪಿಎಚ್.ಡಿ ಮಾಡಿದವರ ಪಾಠದಿಂದ ವಿದಾರ್ಥಿಗಳಿಗೆ ಅಂಥ ವಿಶೇಷವಾದ ಲಾಭವೇನೂ ಆಗುತ್ತಿಲ್ಲ. ಆ ಕಾರಣಕ್ಕೆ ಅದನ್ನು ನೇಮಕಾತಿ ಸಂದರ್ಭದಲ್ಲಿ ಖಡ್ಡಾಯಗೊಳಿಸಬಾರದು ಹಾಗೂ ಅದನ್ನು ಪರಿಗಣಿಸಬಾರದು ಎಂದು ಹೇಳಿದ್ದೇನೆ ಅಷ್ಟೆ. ಪಿಎಚ್.ಡಿ ಮಾಡಿದವರಲ್ಲೂ ಸಹ ತುಂಬಾ ಚನ್ನಾಗಿ ಪಾಠ ಮಾಡುವವರಿದ್ದಾರೆ. ಆದರೆ ಅವರ ಪಿಎಚ್.ಡಿಯಿಂದ ಕಲಿಸುವಿಕೆಯಲ್ಲಿ ಯಾವ ರೀತಿಯ ಅನುಕೂಲವಾಗಲಾರದು ಎಂದಷ್ಟೆ ಹೇಳಿದ್ದೇನೆ.
  ಇನ್ನು ನಾನು "Ph.D" ಶಬ್ದವು ಕನ್ನಡದಲ್ಲಿ ಪಿ.ಎಚ್.ಡಿ.ಯಾಗಿರಬಹುದೆಂದುಕೊಂಡಿದ್ದೆ. Anyway, ನನ್ನ ತಪ್ಪನ್ನು ತಿದ್ದಿದುಕ್ಕೆ ವಂದನೆಗಳು. ಅದರಂತೆ ಲೇಖನದಲ್ಲಿ ಬದಲಾಯಿಸಿದ್ದೇನೆ. ನನ್ನ ತಪ್ಪನ್ನು ಗಮನಕ್ಕೆ ತಂದಿದುಕ್ಕೆ ಹಾಗೂ ನಿಮ್ಮ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು.

  ಚಂದ್ರಕಾಂತ ಎಸ್ ಹೇಳಿದರು...

  ಉದಯ್ ಅವರೆ ಈ ದಿನ ಕೆಂಡಸಂಪಿಗೆಯಲ್ಲಿ ನಿಮ್ಮ ಬ್ಲಾಗ್ ಪರಿಚಯಿಸಿದ್ದನ್ನು ನೋಡಿದೆ. ಬಹಳ ಚೆನ್ನಾಗಿ ನಿಮ್ಮ ಬ್ಲಾಗ್ ಪರಿಚಯ ಮಾಡಿಕೊಟ್ಟಿದ್ದರೆ. ನೋಡಿ ಖುಷಿಯಾಯಿತು.

  ಈ ಲೇಖನ ಅರ್ಥಪೂರ್ಣವಾಗಿದೆ. ನಿಮಗೆ ಗೊತ್ತಿರುವಂತೆ ಹಳೆಯ ತಲೆಮಾರಿನವರಾರೂ ಎಂ. ಫಿಲ್., ಪಿಎಚ್.ಡಿ ಮಾಡುತ್ತಿರಲಿಲ್ಲ. ಮಾಡಿದವರೂ ಸಂಶೋಧನೆಯನ್ನು ಇಷ್ಟಪಟ್ಟು ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಮಾತ್ರ ಈ ಪಿಡುಗು ವೈಯಕ್ತಿಕ ಲಾಭಕ್ಕಾಗಿ ಹುಟ್ಟಿಕೊಂಡಿದೆ. ಇತ್ತೀಚೆಗೆ ವಿಜಯಕರ್ನಾಟಕದಲ್ಲಿ ಇಂದಿನ ಪಿಎಚ್.ಡಿಯ ಎಲ್ಲಾ ಅಕ್ರಮಗಳನ್ನೂ , ಅದು ಬಿಕರಿಗಿಟ್ಟ ಡಿಗ್ರಿ ಎಂಬುದನ್ನು ಸವಿವರವಾಗಿ ಪ್ರಕಟಿಸಿದ್ದರು.

  sunaath ಹೇಳಿದರು...

  ಉದಯ,
  ನಿಮ್ಮ ಲೇಖನ ಕಣ್ಣು ತೆರೆಸುವಂತಿದೆ. ನಿಜ ಹೇಳಬೇಕೆಂದರೆ, ಮಾಧ್ಯಮಿಕ ಶಾಲೆಯಲ್ಲಿ
  ನಮ್ಮ ಗುರುಗಳು ಕಲಿಸಿದಷ್ಟು ಚೆನ್ನಾಗಿ, ಕಾಲೇಜಿನಲ್ಲಿ ಕಲಿಸಲಿಲ್ಲ! ಮುಖ್ಯವೆಂದರೆ,
  ಕಲಿಸುವವರಿಗೆ ವಿಷಯದಲ್ಲಿ ಪಾಂಡಿತ್ಯವಿದ್ದರೆ ಸಾಲದು, ಕಲಿಸುವದರಲ್ಲೂ ಆಸಕ್ತಿ ಇರಬೇಕು, ಅಲ್ಲವೆ?

  ಬಿಸಿಲ ಹನಿ ಹೇಳಿದರು...

  ಚಂದ್ರಕಾಂತ ಮೇಡಂ,
  ಹೌದು,ನೀವು ಹೇಳಿದಂತೆ ನನ್ನ ಬ್ಲಾಗನ್ನು ಕೆಂಡಸಂಪಿಗೆಯಲ್ಲಿ ಚನ್ನಾಗಿ ಪರಿಚಯ ಮಾಡಿಕೊಟ್ಟಿದ್ದಾರೆ. ಅದಕ್ಕೆ ಕೆಂಡಸಂಪಿಗೆಯ ಸಂಪಾದಕರಿಗೂ ಹಾಗೂ ಅದನ್ನು ಪರಿಚಯಿಸಿದ ಜಿತೇಂದ್ರ ಅವರಿಗೂ ನಾನು ಆಭಾರಿಯಾಗಿದ್ದೇನೆ. ನಾನು ಬ್ಲಾಗು ಶುರು ಮಾಡಿ ಇನ್ನೂ ಎರಡು ತಿಂಗಳಾಗಿಲ್ಲ ಆಗಲೆ ಇಷ್ಟು ಬೇಗನೆ ಪರಿಚಯಸುತ್ತಾರೆ ಎಂದು ನಾನು ನಿರೀಕ್ಷಿಸರಿಲಿಲ್ಲ.
  ಇತ್ತೀಚಿಗೆ ಪಿಎಚ್.ಡಿ ತನ್ನ ಮೌಲ್ಯವನ್ನು ಹಾಗೂ ಅರ್ಥವನ್ನು ಕಳೆದುಕೊಳ್ಳುತ್ತಿರುವದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯೇ ಕಾರಣ! ಏಕೆಂದರೆ ನೇಮಕಾತಿ ಸಂದರ್ಭದಲ್ಲಿ ಅದನ್ನು ಖಡ್ಡಾಯಗೊಳಿಸುತ್ತಿರುವದರಿಂದ ಎಲ್ಲರೂ ಪಿಎಚ್.ಡಿ ಮಾಡುವಂತಾಗಿ ಅದೊಂದು ಬಿಕರಿಗಿಟ್ಟ ಮಾಲಾಗುತ್ತಿದೆ. ನನ್ನ ಪ್ರಕಾರ ಕ್ರಿಯಾಶೀಲ ಕಾರ್ಯಕ್ಷೇತ್ರದಲ್ಲಿ ಕ್ರಿಯಾಶೀಲತೆಯೇ ಮಾನದಂಡವಾಗಬೇಕು ಹೊರತು ಪರ್ಸೆಂಟೇಜಾಗಲಿ, ಡಿಗ್ರಿಗಳಾಗಲಿ, ಸರ್ಟಿಫಿಕೇಟ್‍ಗಳಾಗಲಿ ಅಲ್ಲ. ಕೌಶಲ್ಯ, ಸಾಮರ್ಥ್ಯಗಳ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ಆರಂಭವಾಗಬೇಕಿದೆ. Anyway,ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು.

  ಬಿಸಿಲ ಹನಿ ಹೇಳಿದರು...

  ಸುನಾಥ್ ಸರ್,
  ನೀವು ಹೇಳಿದಂತೆ ವಿಷಯ ಜ್ಞಾನವಿದ್ದರೆ ಸಾಲದು ಅದನ್ನು ಪ್ರಸ್ತುತ ಪಡಿಸುವ ಕಲೆಯೂ ಇರಬೇಕಾಗುತ್ತದೆ. ಎಂದಿನಂತೆ ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು.