“ಶೆಟ್ಟರ ಸಾತಣ್ಣ ಸತ್ತ....!” ಮನುಷ್ಯ ಸಂಬಂಧಗಳ ನೈಜತೆಯನ್ನು ಬೆತ್ತಲುಗೊಳಿಸುವ ಕನ್ನಡದ ಒಂದು ಅಪರೂಪದ ಕಥೆ. ಮಾತ್ರವಲ್ಲ ಕನ್ನಡದ ಶ್ರೇಷ್ಠ ಕಥೆಗಳಲ್ಲೊಂದು. ಸುಮಾರು ನಾಲ್ಕು ದಶಕಗಳ ಹಿಂದೆ ಬರೆದ ಕಥೆಯಿದು. ಬರೆದವರು ಉತ್ತರ ಕರ್ನಾಟಕ ಭಾಗದ ಮುಂಚೂಣಿಯ ಲೇಖಕರಲ್ಲೊಬ್ಬರಾದ ದು.ನಿಂ. ಬೆಳಗಲಿಯವರು. ಕಥೆ, ಕಾದಂಬರಿ, ಹರಟೆ, ಚರಿತ್ರೆ, ಅನುವಾದ, ಮಕ್ಕಳ ಸಾಹಿತ್ಯ ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೈಯಾಡಿಸಿರುವ ಬೆಳಗಲಿಯವರು ಅನೇಕ ಪ್ರಶಸ್ತಿಗಳ ಜೊತೆಗೆ ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪುರಸ್ಕಾರವನ್ನೂ ಪಡೆದುಕೊಂಡಿದ್ದಾರೆ. “ಶೆಟ್ಟರ ಸಾತಣ್ಣ ಸತ್ತ....!” ಎಂಬ ಕಥೆ ಮೊದಲ ಸಲ ‘ಸುಧಾ’ ವಾರ ಪತ್ರಿಕೆಯ ಎಪ್ರಿಲ್ 4, 1971ರ ಸಂಚಿಕೆಯಲ್ಲಿ ಪ್ರಕಟವಾಯಿತು. ಆನಂತರ ಅವರ “ಮುತ್ತಿನ ತೆನೆಗಳು” ಎಂಬ ಕಥಾಸಂಕಲನದಲ್ಲಿ ಪ್ರಕಟವಾಯಿತು. ಆ ಕಥೆ ಓದುಗರ ಮೆಚ್ಚುಗೆಯನ್ನು ಗಳಿಸತಲ್ಲದೆ ವಿಮರ್ಶಕರ ಗಮನವನ್ನೂ ಸೆಳೆಯಿತು. ಲಂಕೇಶರು ಇದನ್ನು ಇಂಗ್ಲೀಷಿಗೆ ಅನುವಾದಿಸುವ ವಿಚಾರ ಹೇಳಿದ್ದರು. ಎಪ್ಪತ್ತರ ದಶಕದಲ್ಲಿ ಬಂದ ಕಥೆಯಾದರೂ ವಸ್ತುವಿನ ದೃಷ್ಟಿಯಿಂದ ಇಂದಿಗೂ ಪ್ರಸ್ತುತವಾಗಿದೆ.
ಉತ್ತರ ಕರ್ನಾಟಕದ ಕಡೆ ಪ್ರಚಲಿತವಿರುವ ಜಾನಪದ ನಂಬಿಕೆಯೊಂದನ್ನು ಆಧಾರವಾಗಿಟ್ಟುಕೊಂಡು ಲೇಖಕರು ಈ ಕಥೆಯನ್ನು ಅತ್ಯಂತ ಸಮರ್ಥವಾಗಿ ಹೆಣೆದಿದ್ದಾರೆ. ಒಂದು ಸಣ್ಣ ಕಥೆಯೆಂದರೆ ಹೀಗಿರಬೇಕು ಎಂದು ಹೇಳುವಷ್ಟರಮಟ್ಟಿಗೆ ಸಣ್ಣ ಕಥೆಯ ಎಲ್ಲ ಲಕ್ಷಣಗಳನ್ನು ಈ ಕಥೆ ಒಗ್ಗೂಡಿಸಿಕೊಂಡಿದೆ. ಕಥೆ ಘಟನೆಯಿಂದ ಘಟನೆಗೆ ಬೇಗ ಬೇಗ ಸಾಗಿದರೂ ಲೇಖಕರು ಎಲ್ಲೂ ಅವಸರಪಟ್ಟಂತೆ ಕಾಣುವದಿಲ್ಲ. ಕಥೆಗೆ ಬೇಕಾಗುವ ಪೂರಕ ಅಂಶಗಳು ಎಷ್ಟಿರಬೇಕೋ ಅಷ್ಟನ್ನು ಮಾತ್ರ ಹೆಣೆದಿದ್ದಾರೆ. ಕಥೆ ಬೆಳಯುತ್ತಾಹೋದಂತೆ ಮನುಷ್ಯ ಸಂಬಂಧಗಳ ನೈಜತೆ ಬೆತ್ತಲಾಗುವ ಪರಿ ಮತ್ತು ಅವು ತಮ್ಮ ಮುಖವಾಡಗಳನ್ನು ಕಳಚುವ ರೀತಿ ನಮ್ಮನ್ನು ಬೆರಗುಗೊಳಿಸುವದರ ಜೊತೆಗೆ ಕೊನೆಯಲ್ಲಿ ದಿಗ್ಭ್ರಮೆಯನ್ನುಂಟುಮಾಡುವದರ ಮೂಲಕ ಮನುಷ್ಯರ ವರ್ತನೆಯ ಬಗ್ಗೆ ಒಂದು ರೀತಿಯ ಅಸಹ್ಯ ಭಾವನೆಯನ್ನು ತರಿಸುತ್ತದೆ.
ಕಥೆ ಆರಂಭವಾಗುವದೇ ಶೆಟ್ಟರ ಸಾತಣ್ಣ ಸತ್ತ ಸುದ್ದಿಯೊಂದಿಗೆ. ಆ ಸುದ್ದಿಯನ್ನು ಊರವರಿಗೆ ಮುಟ್ಟಿಸಲು ಸಾತಣ್ಣನ ಆಳು ತಳವಾರ ಕೆಂಚ ಅಳುತ್ತ ಓಡುತ್ತ ಧಾವಿಸುತ್ತಿದ್ದಾನೆ. ಸಾತಣ್ಣ ಸತ್ತ ಸುದಿಯನ್ನು ಯಾರೂ ನಂಬಲೊಲ್ಲರು. “ಆಂ! ಇದೇನಿದ! ಖರೇನೋ ಸುಳ್ಳೋ ನೋಡ್ರಿ....!” ಎಂದು ಎಲ್ಲರೂ ಅನುಮಾನ ಪಡುತ್ತಿದ್ದಾರೆ. ಏಕೆಂದರೆ ಸಾತಣ್ಣನದು ಸಾಯುವ ವಯಸ್ಸಲ್ಲ! ಅಥವಾ ಸತ್ತು ಹೋಗುವಂಥ ಕಾಯಿಲೆಗೂ ಬಿದ್ದವನಲ್ಲ! ಅದು ಅನಿರೀಕ್ಷಿತ ಸಾವು. ಹಿಂಗ ಕುಂತಾಂವಾ ಹಿಂಗ ಎದ್ದು ಹೊದಂಗ ಆಗೇತಿ. “ಘಾತ ಆಯ್ತಲ್ಲಾ! ನಿನ್ನೆ ಸಂಜಿಕ ಕುಡಚಿ ಸ್ಟೇಷನ್ದಾಗ ಭೇಟಿ ಆಗಿದ್ದೋಪಾ! ಮಿರಜಿ-ಸಾಂಗ್ಲಿಗೆ ಅಷ್ಟ ಹೊಗಿ ಬರ್ತೀನಂದಾ. ಇದೇನಿದಾ ಖರೇನೋ ತಮ್ಮಾ?” ಎಂದು ಗಾಬರಿಯಿಂದ ಕೇಳಿದ ಈಶ್ವರಯ್ಯನಿಗೆ “ಈಗ ಮಿರಜಿಯಿಂದ ಫೋನ್ ಬಂದೈತೆಂತ! ಸೆಟ್ರ ಸಾತಣ್ಣಗ ಹಾರ್ಟ್ ಪೇಲೋ ಏನೋ ಆಗಿ ಇಂದ ಹರ್ಯಾಗ ಜೀವ ಹೋತಂತ! ಅದs ಸರಪಂಚರಿಗೆ ಹೇಳಾಕ ನಡದೇನಿ.....” ಎಂಬ ಉತ್ತರ ಸಿಗುತ್ತದೆ. ಶೆಟ್ಟರ ಸಾತಣ್ಣನ ಈ ಅನಿರೀಕ್ಷಿತ ಸಾವಿನ ಸುದ್ದಿಯೇ ಕಥೆಯ ಮಧ್ಯಬಿಂದು. ಅಲ್ಲಿಂದ ಸಾತಣ್ಣನ ಸ್ನೇಹಿತರು, ಪರಿಚಯಸ್ಥರು ಹೇಗೆ ವರ್ತಿಸುತ್ತಾರೆಂಬುದೇ ಕಥೆಯ ಜೀವಾಳ. ಆಯಾ ಪಾತ್ರದ ಮೂಲಕವೇ ಅವರವರ ಸ್ವಭಾವವನ್ನು ಪ್ರಕಟಿಸುತ್ತಾ ಒಂದೊಂದಾಗಿ ಪಾತ್ರಗಳನ್ನು ಓದುಗರ ಮುಂದೆ ತಂದು ನಿಲ್ಲಿಸುತ್ತಾರೆ ಲೇಖಕರು.
ಸತ್ತ ಸುದ್ದಿಯನ್ನು ಮುಟ್ಟಿಸಲು ಬಂದ ಸಾತಣ್ಣನ ಖಾಸಾ ಗೆಳೆಯ ಈಶ್ವರಯ್ಯನಿಗೆ ಸಾತಣ್ಣನ ಇನ್ನೊಬ್ಬ ಗೆಳೆಯ ಪರಪ್ಪ ಹೇಳುವದು ಹೀಗೆ “ಸಾತಣ್ಣ ನಮ್ಜಾತ್ಯಾಂವಾ, ದೂರದ ಸಂಬಂಧಿಕ ಅಂತ ಐಸಾವಿರ ರೂಪಾಯಿ ಕೊಟ್ಟೀನಿ. ಏನಪಾ, ನಿನಗೂ ಇನಾ ಹೇಳಿಲ್ಲ. ಹ್ವಾದ ವರ್ಸ ತ್ವಾಟ ತಗೊಂಡಲಾ, ಆಗ ಕಡಿಮೆ ಬಿದ್ದುವಂತ, ಈ ಹಬ್ಬ ಆದಮ್ಯಾಲ ಕೊಡ್ತನಂತಿದ್ದ. ಸಂಬಂಧ ನೋಡು. ಕಾಗದಾ, ಪತ್ರ ಏನ್ ಬರ್ಸಿಕೊಳ್ಳೋದು? ಹಾಂಗs ಇಸ್ವಾಸ... ರೂಪಾಯ್ದು ಭಾಳ ಪಜೀತಿ ಬಂತು ಈಸೂರಾ! ನಿ ಸಾತಣ್ಣನ ದೋಸ್ತ ಅದಿ. ನೀನs ಏನಾರ ಮಾಡಿ ನನ್ನ ರೂಪಾಯಿ ಬರೂ ಹಂಗ ಮಾಡಪಾ”
ಸರಪಂಚ ಮುರಿಗೆಪ್ಪ “ಮ್ಯಾಲ ಬಾ ಈಸೂರಾ, ಬಾ ಒಂದೀಟ ಮಾತಾಡುದೈತಿ...ಅಲ್ಲ, ಸಾತಣ್ಣ ರೊಕ್ಕ ಭಾಳ ಮಾಡ್ಯಾನಂತ ನಾನೂ ಕೇಳೀನಿ. ಹ್ವಾದ ಸಾರಿ ಇಪ್ಪತೈದು ಸಾವಿಅರ ಕೊಟ್ಟು ನಾಕೆಕೆರೆ ತ್ವಾಟಾ ಕೊಂದಲ್ಲ, ಇನs ಸಾಕಷ್ಟ ರೊಕ್ಕ ಇರಬೇಕು. ಅವನ ಹೇಣ್ತಿ, ಮಕ್ಕಳಿಗೆ ಹೇಳಿ ಐದ್ಹತ್ತ ಸಾವಿರ ಹೈಸ್ಕೂಲ ಸಾಲಿ ಹೆಸರ್ಲೇ ಇಸ್ಕೊಳ್ಳೋಣ. ಇದ ಊರಹಿತದ ಕೆಲ್ಸ ನೋಡು. ಸತ್ತ ಸಾತಣ್ಣನ ಹೆಸರೂ ಉಳಿತೈತಿ, ಹತ್ಸಾವಿರ ಕೊಟ್ರ ಅವನ ಹೆಸರ್ಲೆ ಎಡ್ಡ ಖೋಲಿ ಕಟ್ಟಿಸೋಣು, ಐದ ಕೊಟ್ರ ಒಂದs ಕಟ್ಟಿಸೋಣು. ನೀನs ಏನಾರೆ ವಸೂಲಿ ಹಚ್ಚಿ, ಅವರ ಸಂಬಂಧಿಕರಿಗೆ ಹೇಳಿ ಅಷ್ಟು ಮಾಡು” ಎಂದು ಹೇಳುತ್ತಾನೆ.
ಹಳ್ಳಿಯ ಜನಕ್ಕೆ ಮಾರ್ಗದರ್ಶನ ನೀಡಬಹುದಾಗಿರುವ ಮಠದ ಮಹಾರುದ್ರಯ್ಯನವರು ತಮ್ಮ ಮಠಕ್ಕೆ ಒಂದು ಬೆಳ್ಳಿ ಪ್ರಭಾವಳಿ ಅವಶ್ಯಕತೆಯಿದೆ. ಅದನ್ನು ಸಾತಣ್ಣನ ಹೆಸರಲ್ಲಿ ಮಾಡಿಸಿಕೊಟ್ಟರೆ ಅವನ ಹೆಸರು ಖಾಯಂ ಉಳಿತೈತಿ ಎಂದು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಾ ಈಶ್ವರಯ್ಯನ ದುಂಬಾಲು ಬೀಳುತ್ತಾರೆ.
ಊರಿನ ಗೌಡರು ಈಶ್ವರಯ್ಯನನ್ನು ಕರೆದು ಹೇಳುವದು ಹೀಗೆ “....ಮನ್ನೆ ಸಾತಣ್ಣನ ಎಡ್ನೂರ್ರ ಪೆಂಟಿ ಬೆಲ್ಲಾ ಕೊಟ್ಟೀನಿ. ಮಾನಿ ಪೂರ ಅಡತ್ಯಾಗ ಹಚ್ಚ ಬೇಕಮ್ದ್ರ, ಪಾಪ, ಊರಾನ ಮನ್ಸ್ಯಾ ಇಂವಗೂ ನಾಕ ದ್ದುಡ್ದು ಸಿಗಲಿ ಅಂತ ಅದರ ರೂಪಾಯಿ ಬಂದಿಲ್ಲೋ, ಬರೇ ಬಾಯಿ ವ್ಯಾಪಾರ. ಯಾರ್ನ ಕೇಳಬೇಕು?” ಅವರಿಗೆ ಸತ್ತ ಸಾತಣ್ಣನಿಗಿಂತ ತಮ್ಮ ದುಡ್ದಿನದೇ ಚಿಂತೆ.
ಮಕ್ಕಳಿಗೆ ನೀತಿ ಪಾಠ ಹೇಳುವ ಜೋಶಿ ಮಾಸ್ತರರು ಈಶ್ವರಯ್ಯನ ಕಂಡೊಡನೆ ಒಂದೆಡೆ ಕರೆದು ಹೇಳುವದು ಹೀಗೆ ”ನಮ್ಮ ಕಿರಾಣಿ ಉದ್ರಿ ಖಾತೆ ಸಾತಣ್ನನ ಅಂಗಡಿಯಲ್ಲೇ ಇರೋದು ನಿನಗೂ ಗೊತ್ತದಲ್ಲ. ಪಗಾರ ತಡಾ ಆಗಿ ಎರಡು ತಿಂಗಳು ಉದ್ರಿ ತೀರಿಸಿರಲಿಲ್ಲ. ಅದs ಅದನ್ನ ಕೊಡಲಿಕ್ಕೆ ಮುಂಜಾನೆ ಅಂಗಡಿಗೆ ಹೋಗಿದ್ದೆ. ಸಾತಣ್ಣ ಇರ್ಲಿಲ್ಲ. ಊರಿಗೆ ಹೋಗಿದ್ದಾರಂತ ಅವರ ಹಿರೀ ಮಗ ನಮ್ಮ ಸಾಲೆಯಲ್ಲೇ ಇದ್ದಾನಲ್ಲ, ಶಂಕರ, ಅವನs ಹೇಳಿದ. ಆ ರೊಕ್ಕ ತಿರುಗಿ ಒಯ್ದರ ಬೇರೆ ಖರ್ಚು ಆಗಬಹುದಂತ ಆ ಹುಡುಗನ ಕೈಯಾಗ ಕೊಟ್ಟು, ಎಲ್ಲಾ ಬಾಕಿ ಕಾಟು ಹಾಕು ಅಂತ ಹೇಳಿದೀನಿ. ಅದಕ್ಕs ನಾಕ ದಿನಾ ಬಿಟ್ಟು ನೀನೂ ಅಷ್ಟ ನೋಡು, ಆ ಹುಡುಗ ಬಾಕಿ ತೆಗೆದಾನಿಲ್ಲೋ. ಇನ್ನs ಸಣ್ಣವ ಮರೀಬಹುದು.”
ಆದರೆ ಕಥೆಯ ಕೊನೆಯಲ್ಲಿ ಶೆಟ್ಟರ ಸಾತಣ್ಣ ಸತ್ತೇ ಇಲ್ಲ ಎಂಬ ಸುದ್ದಿ ಗೊತ್ತಾಗುತ್ತದೆ. ಇದಕ್ಕೆ ಕಾರಣ ಉತ್ತರ ಕರ್ನಾಟಕದ ಕಡೆ ಯಾರಾದರೂ ಕಾಗಿ ಮೆಟ್ಟು (ಹೆಣ್ಣು- ಗಂಡು ಕಾಗೆಗಳ ಮಿಲನ) ನೋಡಿದರೆ ಅವರು ಕೂಡಲೇ ಸತ್ತುಹೋಗುತ್ತಾರೆ ಎಂಬ ನಂಬಿಕೆಯಿದೆ. ಹೀಗಾಗಿ ಅದರ ಪರಿಹಾರಕ್ಕಂತ ಆ ವ್ಯಕ್ತಿ ಸತ್ತುಹೋಗಿದ್ದಾನೆಂದು ಸುಳ್ಳು ಸುದ್ದಿ ಹಬ್ಬಿಸಿದರೆ ಅವನ ಆಯುಷ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. ಅದೇ ಪ್ರಕಾರ ಇಲ್ಲಿ ಸಾತಣ್ಣನು ಕಾಗಿ ಮೆಟ್ಟು ನೋಡಿದ್ದರಿಂದ ಅದರ ಪರಿಹಾರಕ್ಕಂತ ಆತ ಸತ್ತಿದ್ದಾನೆಂದು ಸುಳ್ಳು ಸುದ್ದಿ ಹಬ್ಬಿಸಬೇಕಾದ ಪ್ರಸಂಗ ಬರುತ್ತದೆ. ಕಥೆಯ ಕೊನೆಯಲ್ಲಿ ಶೆಟ್ಟರ ಸಾತಣ್ಣ ಜೀವಂತವಾಗಿ ಪ್ರಕಟವಾದಾಗ ಉಂಟಾಗುವ ಪರಿಣಾಮವೂ ವಿಲಕ್ಷಣವಾದದ್ದು. ಸಾತಣ್ಣ ಜೀವಂತವಾಗಿದ್ದಾನೆ ಎಂಬ ಸುದ್ದಿ ಕೇಳಿ ಪರಪ್ಪನ ಬೆರಳ ಸಂದಿಯಲ್ಲಿ ಸುಡುತ್ತ ಬಂದ ಸಿಗರೇಟಿನ ಬೆಂಕಿ ಸ್ಪರ್ಶಿಸಿ ಚುರ್ರೆನ್ನುತ್ತದೆ. ಅವಸರದಿಂದ ಕೆಳಗಿಳಿದ ಮುರುಗೆಪ್ಪನ ಕಾಲಿಗೆ ಧೋತರ ಸಿಕ್ಕಿ ಬಕ್ಕಂಡಿ ಕಚ್ಚಿ ಬಿಳುತ್ತಾನೆ. ಗಡಿಬಿಡಿಯಿಂದ ಎದ್ದ ಗೌಡರಿಗೆ ಹೊರ ಗೊಡೆಯ ಗೂಟ ಬಲವಾಗಿ ತಾಗಿ ಕಣ್ಣಿಗೆ ಕತ್ತಲು ಕಟ್ಟುತ್ತದೆ. “ಎಲಾ! ಸಾತಣ್ಣ ಬದುಕಿದನ?” ಎಂದು ಬೇಸರಿಸಿ ಅಲಕ್ಷದಿಂದ ಮಗ್ಗಲು ಬದಲಿಸಿದಾಗ, ಪಕ್ಕದ ಖಾಲಿ ಹಾಲಿನ ಬಟ್ಟಲು ಪಕ್ಕೆಗೆ ಚುಚ್ಚಿ ಬೆಳ್ಳಿ ಪ್ರಭಾವಳಿ ಇರಿದಂತಾಗುತ್ತದೆ. “ಹೌದೇನೋ? ಖರೇನೋ ಸುಳ್ಳೋ ನೋಡೋ!” ಎಂದು ಮಗ ತಂದ ವಾರ್ತೆಯ ಬಗ್ಗೆ ಪರಾಮರ್ಶಿಸುತ್ತ ಜೋಶಿ ಮಾಸ್ತರರು, ತಲೆಯ ಮೇಲೆ ಕೈಹೊತ್ತು ಕುಲಿತುಕೊಳ್ಳುತ್ತಾರೆ, ಮಧ್ಯಾಹ್ನದ ನಿದ್ರೆ ಕೆಟ್ಟಂತಾಗಿ.
ಒಬ್ಬ ವ್ಯಕ್ತಿ ಸತ್ತ ಸಂದರ್ಭದಲ್ಲಿ ಅವನ ಸುತ್ತಲಿನವರ ಮನಸ್ಸಿನಲ್ಲಿ ಹಲವಾರು ವಿಚಾರಗಳು ಮೂಡುತ್ತವೆ. ಅತ್ಮೀಯರಾದರೆ ನಿಜವಾದ ದುಃಖವನ್ನು ವ್ಯಕ್ತಪಡಿಸುತ್ತಾರೆ. ಅದರೆ ಆತ್ಮೀಯತೆಯ ಮುಖವಾಡ ಧರಿಸಿದ ಸ್ವಾರ್ಥಿಗಳು ‘ಉರಿಯುವ ಮನೆಯಿಂದ ಗಳ ಹಿರಿದುಕೊಳ್ಳು’ವಂತೆ, ಸತ್ತ ಸಮಯದಲ್ಲೂ ಸ್ವಾರ್ಥ ಸಾಧನೆಯಲ್ಲಿ ಲೆಕ್ಕ ಹಾಕುತ್ತಿರುತ್ತಾರೆ ಎಂಬುದಕ್ಕೆ ಕಥೆಯಲ್ಲಿ ಬರುವ ಪರಪ್ಪ, ಮುರಿಗೆಪ್ಪ, ಮಹಾರುದ್ರಯ್ಯನವರು, ಜೋಶಿ ಮಾಸ್ತರು ಮತ್ತು ಗೌಡರ ಪಾತ್ರಗಳೇ ಸಾಕ್ಷಿ.
ಈ ಎಲ್ಲ ಸ್ವಾರ್ಥಿಗಳ ಮಧ್ಯೆಯೇ ಸಾತಣ್ಣನ ನಿಜವಾದ ಸ್ನೇಹಿತ ನಿಸ್ವಾರ್ಥಿ ಈಶ್ವರಯ್ಯ, ಹಾಗೂ ಕಥೆಯ ಕೊನೆಯಲ್ಲಿ ಸಾತಣ್ಣ ಜೀವಂತವಾಗಿರುವ ಸುದ್ದಿಯನ್ನು ತಿಳಿದು ತೋಟದಿಂದ ಓಡಿ ಬಂದು, ಕಾಯಿ ಕರ್ಪೂರ ತಗೊಂಡು ಹನುಮಂತನ ಗುಡಿಗೆ ಹೋಗುವ ತಳವಾರ ಕೆಂಚನಂಥವರು ಮಾನವೀಯ ಮೌಲ್ಯಗಳ ಕೊಂಡಿಯಂತೆ ಕಾಣಿಸುತ್ತಾರೆ. ಈ ಬಗೆಯ ಅನುಭವಗಳನ್ನು ಸಮಾಜದಲ್ಲಿ ಆಗಾಗ ಕಂಡೇ ಕಾಣುತ್ತಿರುತ್ತೇವೆ.
-ಉದಯ್ ಇಟಗಿ
ಮನುಷ್ಯ ಸಂಬಂಧಗಳ ನೈಜತೆಯನ್ನು ಬೆತ್ತಲುಗೊಳಿಸುವ ಕನ್ನಡದ ಒಂದು ಅಪರೂಪದ ಕಥೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
- ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಜಿತೇಂದ್ರ
ಶನಿವಾರ, 7 ಫೆಬ್ರವರಿ 2009 (06:24 IST)
ಉದಯ್ ಬರೆಯುವ ಬಿಸಿಲ ಹನಿ
ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ? ಹಾಗಂತ ಪ್ರಶ್ನೆ ಹಾಕುತ್ತಿದ್ದಾರೆ ಉದಯ್ ಇಟಗಿ. ಈ ಡಾಕ್ಟರ್ ಅಂದರೆ ವೈದ್ಯರಲ್ಲ , ಪಿಎಚ್ ಡಿ ಪದವೀಧರರು. ಕೇವಲ ಇಂತಹದ್ದೊಂದು ಪದವಿ ಇಟ್ಟುಕೊಂಡು ಮೆರೆಯುತ್ತಿರುವ ಕೆಲ ಅಧ್ಯಾಪಕರು ಹಾಗು ಈ ಪದವಿಯ ವಿಚಾರವೇ ಅಧ್ಯಾಪಕರ ನಡುವೆ ಅಡ್ಡಗೋಡೆಯಾಗುತ್ತಿರುವ ವಿಚಾರವನ್ನ ವಿಶ್ಲೇಷಿಸಿ ಬರೆದಿದ್ದಾರೆ ಉದಯ್. ಸ್ವತಃ ಅಧ್ಯಾಪಕರಾಗಿರುವ ಅವರು, ತಮ್ಮೀ ಅನುಭವವನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಲಿಬಿಯಾ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಉದ್ಯೋಗದಲ್ಲಿರುವ ಉದಯ್, ದೂರ ದೇಶದಿಂದ ಬ್ಲಾಗಿಸುತ್ತಿದ್ದಾರೆ. ಬಿಸಿಲಹನಿ ಅವರ ಬ್ಲಾಗ್ ಹೆಸರು. "ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ. ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು. ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ. ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ, ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ. ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ. ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ. ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು. ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ. ಭೂಮಿ ಕೊನೆಯಾದರೆ ಮಾನವ ಕೊನೆ." ಇದು ತಮ್ಮೀ ಬ್ಲಾಗಿನ ಬಗ್ಗೆ ಬರೆದುಕೊಂಡ ಮಾತುಗಳು. ಉದಯ್ ತಮ್ಮ ಅನುಭವ, ನೆನಪು-ನೇವರಿಕೆಗಳನ್ನೇ
ಮೂಲವಾಗಿಟ್ಟುಕೊಂಡು ಒಂದಿಷ್ಟು ಲೇಖನ ಬರೆದಿದ್ದಾರೆ. ಜೊತೆಗೆ ಓದತಕ್ಕ ಅನುವಾದಗಳಿವೆ. ಒಟ್ಟಾರೆ, ಇಲ್ಲಿ ಎಲ್ಲ ತರಹದ ಹನಿಗಳೂ ಇವೆ. ಒಮ್ಮೆ ಓದ ಬನ್ನಿ.
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
-
-
ಕಥನ ಮಥನ1 ವಾರದ ಹಿಂದೆ
-
-
-
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ5 ತಿಂಗಳುಗಳ ಹಿಂದೆ
-
-
ಗಿಳಿಯು ಮಾತನಾಡುವುದಿಲ್ಲ!1 ವರ್ಷದ ಹಿಂದೆ
-
Pic by Hengki Lee3 ವರ್ಷಗಳ ಹಿಂದೆ
-
-
ತಪ್ಪು ಬಿಗಿದಪ್ಪು4 ವರ್ಷಗಳ ಹಿಂದೆ
-
ಸಾತ್ವಿಕರು ಎಲ್ಲಿಗೆ ಹೋಗಬೇಕು?5 ವರ್ಷಗಳ ಹಿಂದೆ
-
ದ್ವಿಪದಿಗಳು5 ವರ್ಷಗಳ ಹಿಂದೆ
-
ಹೊಸ ದಿನ5 ವರ್ಷಗಳ ಹಿಂದೆ
-
The story of telling a story!5 ವರ್ಷಗಳ ಹಿಂದೆ
-
ಕೆಲವು ಹಾಯ್ಕುಗಳು...ಒಂದು ಕವನ5 ವರ್ಷಗಳ ಹಿಂದೆ
-
ಅಳಿವು ಉಳಿವಿನ ನಡುವೆ...5 ವರ್ಷಗಳ ಹಿಂದೆ
-
-
-
ಆಸೆ....!!!6 ವರ್ಷಗಳ ಹಿಂದೆ
-
ಡ್ರಾಫ್ಟ್ ಸೇರಿದ ಮೊದಲ ಪತ್ರ : Draft Mail – 26 ವರ್ಷಗಳ ಹಿಂದೆ
-
ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!6 ವರ್ಷಗಳ ಹಿಂದೆ
-
ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ6 ವರ್ಷಗಳ ಹಿಂದೆ
-
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?6 ವರ್ಷಗಳ ಹಿಂದೆ
-
ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!6 ವರ್ಷಗಳ ಹಿಂದೆ
-
ದಿ ಥಿಯರಿ ಆಫ್ ಎವೆರಿಥಿಂಗ್6 ವರ್ಷಗಳ ಹಿಂದೆ
-
ಹೊಸದೊಂದು ಜಾವಳಿ7 ವರ್ಷಗಳ ಹಿಂದೆ
-
ಮಾಯೆ7 ವರ್ಷಗಳ ಹಿಂದೆ
-
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ7 ವರ್ಷಗಳ ಹಿಂದೆ
-
ಅನುಸಂಧಾನ-೩7 ವರ್ಷಗಳ ಹಿಂದೆ
-
ಗಂಜಿ ಗಿರಾಕಿಗಳು !!7 ವರ್ಷಗಳ ಹಿಂದೆ
-
ನಿತ್ಯಸ್ಥಾಯಿ ಚಿತ್ರ8 ವರ್ಷಗಳ ಹಿಂದೆ
-
ಅತಿಕ್ರಮಣವಾಗಿದೆ ಮಲೆನಾಡಿನ ಬದುಕು8 ವರ್ಷಗಳ ಹಿಂದೆ
-
-
ಚಳಿಗಾಲದ ತೀವ್ರತೆ..!8 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:9 ವರ್ಷಗಳ ಹಿಂದೆ
-
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ9 ವರ್ಷಗಳ ಹಿಂದೆ
-
ಹೋಗಿ ಬನ್ನಿ ಕಲಾಂ ಸಾರ್9 ವರ್ಷಗಳ ಹಿಂದೆ
-
ಕತ್ತಲೆ.................9 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು..9 ವರ್ಷಗಳ ಹಿಂದೆ
-
ಆಟೋ ಮಹಾತ್ಮೆ9 ವರ್ಷಗಳ ಹಿಂದೆ
-
ಸಾವು ಬದುಕಿನ ಆಟ9 ವರ್ಷಗಳ ಹಿಂದೆ
-
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!10 ವರ್ಷಗಳ ಹಿಂದೆ
-
-
ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...10 ವರ್ಷಗಳ ಹಿಂದೆ
-
ಗಾಜಿನ ಲೋಟದಲ್ಲಿ ರಸ್ನಾ10 ವರ್ಷಗಳ ಹಿಂದೆ
-
ಕಾಡುವಂಥ ಸ್ವಪ್ನ ಸಾಕೇ10 ವರ್ಷಗಳ ಹಿಂದೆ
-
-
ಮೇಲೂರಿನ ಅಪ್ಪಟ ಕನ್ನಡ ಪ್ರೇಮ11 ವರ್ಷಗಳ ಹಿಂದೆ
-
ನಿನ್ನೊಳಗಿರಲು ನಾ ಯಾರೇ...?11 ವರ್ಷಗಳ ಹಿಂದೆ
-
ತೀರ....11 ವರ್ಷಗಳ ಹಿಂದೆ
-
ಜೀವನ ಮತ್ತು ತೂಕ11 ವರ್ಷಗಳ ಹಿಂದೆ
-
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?11 ವರ್ಷಗಳ ಹಿಂದೆ
-
-
ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ12 ವರ್ಷಗಳ ಹಿಂದೆ
-
ಸ್ವ ಸಹಾಯ ಪುಸ್ತಕಗಳು12 ವರ್ಷಗಳ ಹಿಂದೆ
-
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ12 ವರ್ಷಗಳ ಹಿಂದೆ
-
-
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)12 ವರ್ಷಗಳ ಹಿಂದೆ
-
(ಮಹಿಳಾ)ವಾದ:12 ವರ್ಷಗಳ ಹಿಂದೆ
-
-
ಬಾಜೀ ರಾವತ್ ಎ೦ಬ ಧೀರ ತರುಣ12 ವರ್ಷಗಳ ಹಿಂದೆ
-
ಒಂದು ಲೋಟ ಹಾಲು ಮತ್ತು…12 ವರ್ಷಗಳ ಹಿಂದೆ
-
ಕೂರ್ಮಾವತಾರ ವಿಮರ್ಶೆ12 ವರ್ಷಗಳ ಹಿಂದೆ
-
ಬೆಳಕು ಕಂಡ ಆ ಕ್ಷಣದಲಿ...13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್13 ವರ್ಷಗಳ ಹಿಂದೆ
-
ಕಫನ್13 ವರ್ಷಗಳ ಹಿಂದೆ
-
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …13 ವರ್ಷಗಳ ಹಿಂದೆ
-
ನನ್ನ ಜಡೆ14 ವರ್ಷಗಳ ಹಿಂದೆ
-
ಕೇಳಿ-೫14 ವರ್ಷಗಳ ಹಿಂದೆ
-
ಹೊವಿನಂತ ಹುಡುಗ ನಾನು ತುಂಬ ಮೃದು14 ವರ್ಷಗಳ ಹಿಂದೆ
-
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು14 ವರ್ಷಗಳ ಹಿಂದೆ
-
ಅಳಿಯಲಾರದ ನೆನಹು: ೧14 ವರ್ಷಗಳ ಹಿಂದೆ
-
ನಿಮ್ಮೊಳಗಿದ್ದೂ ನಿಮ್ಮಂತಾಗದೇ14 ವರ್ಷಗಳ ಹಿಂದೆ
-
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ15 ವರ್ಷಗಳ ಹಿಂದೆ
-
-
ಕ್ಯಾಲೆಂಡರ್ ಮೇಲಿನ ಗುರುತುಗಳು15 ವರ್ಷಗಳ ಹಿಂದೆ
-
-
ಕೆಲವು ಪ್ರಶ್ನೆಗಳು15 ವರ್ಷಗಳ ಹಿಂದೆ
-
ಏನ ಹೇಳಲಿ ನಾನು?15 ವರ್ಷಗಳ ಹಿಂದೆ
-
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !16 ವರ್ಷಗಳ ಹಿಂದೆ
-
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...17 ವರ್ಷಗಳ ಹಿಂದೆ
-
ನನ್ನ ವಿಹಾರ
ಪ್ರಚಲಿತ ಪೋಸ್ಟ್ಗಳು
ಉತ್ತರ ಕರ್ನಾಟಕ ಆಹಾರ ಮಳಿಗೆಗಳು
1.ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ. 2.ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ 3.ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ) 4.ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361) 5.ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734) 6.ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ. 7.ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.) 8.ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994) 9.ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201) 10.ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650 11.ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ. 12.ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು 13.ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ ಘಾಟ್,ರಾಜಾಜಿನಗರ.(ಫೊನ್ ನಂ: 9448542268 ) 14.ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ. 15.ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642) 16.ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392) 17.ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365) 18.ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220) 19.ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813) 20.ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ. 21.ಪೈ ವಿಹಾರ್, ಆನಂದರಾವ್ ವೃತ್ತ 22.ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ. 23.ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ
Pages
Labels
ಕನ್ನಡ ಡಿಕ್ಷನರಿ
Blogger ನಿಂದ ಸಾಮರ್ಥ್ಯಹೊಂದಿದೆ.
6 ಕಾಮೆಂಟ್(ಗಳು):
ಬೆಳಗಲಿಯವರ ಉತ್ಕೃಷ್ಟ ಕತೆಗಳಲ್ಲೊಂದಿದು. ಬಹಳ ದಿನಗಳ ಹಿಂದೆ ಓದಿದ್ದೆ. ಮತ್ತೆ ನೆನಪಿಸಿ ಕೊಟ್ಟಿರಿ. ಧನ್ಯವಾದಗಳು.
ಚೆಂದದ ಕಥೆ...
ಬೆಳಗಲಿಯವರ ಸುಂದರ ಕಥೆ
ಓದಿ ಬಹಳ ಸಂತಸವಾಯಿತು
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ
ಸರ್,
ಒಂದು ಉತ್ತಮ ಕತೆಯನ್ನು ಓದಿದ ಅನುಭವವಾಯಿತು...ಅದಕ್ಕಾಗಿ ನಿಮಗೆ ಥ್ಯಾಂಕ್ಸ್..
ಉದಯ್....
ಬಹಳ ಚಂದದ ಕಥೆ...
ಇದರ ಮೂಲ ಭಾಗ ಓದ ಬೇಕೆನಿಸಿತು...
ಅಳಿದ ಮೇಲೆ...
ಏನು...?
ಉಳಿದವರಿಗೆ,,,
ಅಳಿದವನ .....
ಮಾತು..
ಸ್ಮರಣೆ...
ಅಳಿಯದ..ಅಳಿಸಲಾರದ..
ಬಂಧವೋ...
ಬಿಡುಗಡೆಯೋ...
ಇದು ಎಲ್ಲೋ ಓದಿದ ಸಾಲುಗಳು...
ಚಂದದ ಕಥೆ ಪರಿಚಯ ಕೊಟ್ಟಿದ್ದಕ್ಕೆ ಧನ್ಯವಾದಗಳು...
ಚಂದದ ಕಥೆಯ ಪರಿಚಯ ಮಾಡಿಕೊಟ್ಟಿರಿ ಉದಯ್ ಸಾರ್. ಧನ್ಯವಾದಗಳು..
ಕಾಮೆಂಟ್ ಪೋಸ್ಟ್ ಮಾಡಿ