Demo image Demo image Demo image Demo image Demo image Demo image Demo image Demo image

ದಲ್ಲಾಳಿ

  • ಶುಕ್ರವಾರ, ಏಪ್ರಿಲ್ 09, 2010
  • ಬಿಸಿಲ ಹನಿ
  • ನಾನೊಬ್ಬ ಪ್ರಸಿದ್ಧ ದಲ್ಲಾಳಿ- ದನದ ವ್ಯಾಪಾರದಲ್ಲಿ. ದಲ್ಲಾಳಿ ಅಂದಮೇಲೆ ಸುಳ್ಳು ಹೇಳದೆ ಇರೋಕಾಗುತ್ತಾ? ದಿನಾ ಬೆಳಗಾದರೆ ತಲೆಯಲ್ಲಿ ಸದಾ ಸುಳ್ಳುಗಳನ್ನೇ ತುಂಬಿಕೊಂಡು, ಬಾಯಿತುಂಬಾ ಸಿಹಿಯಾದ ಮಾತುಗಳನ್ನಾಡುತ್ತಾ ದನದ ವ್ಯಾಪಾರಿಗಳಿಗೆ ಅವರ ವ್ಯಾಪಾರದಲ್ಲಿ ನೆರವಾಗುವದೇ ನನ್ನ ಕೆಲಸ. ಆ ಕಾರಣಕ್ಕೆ ಈ ಭಾಗದಲ್ಲಿ ನಾನು ಎಲ್ಲರಿಗೂ ಗೊತ್ತು ಹಾಗೂ ಜನ ನನ್ನನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ನನ್ನ ಕಂಡೊಡನೆ ಅವರು ನನ್ನನ್ನು ಚಹಾದ ಅಂಗಡಿಗೆ ಕರೆದುಕೊಂಡು ಹೋಗಿ “ದಭೆವಾಲಾ, ಎರಡು ಚಾ ತಯಾರಿಸು” ಎಂದು ಪ್ರೀತಿಯಿಂದ ಹೇಳುತ್ತಾರೆ. ನನ್ನನ್ನು ನೋಡಿದ ಮೇಲೆ ಆ ಚಹಾದ ಅಂಗಡಿ ಮಾಲಿಕ “ಓಹೋ, ತನ್ಸುಖ್! ಹೆಂಗಿದ್ದಿಯಪಾ? ಎಲ್ಲಾ ಅರಾಮಾನಾ? ಈ ನಡುವೆ ವ್ಯಾಪಾರ ಹೆಂಗೆ ನಡಿತಾ ಇದೆ?” ಎಂದು ಅತ್ಯುತ್ಸಾಹದಿಂದ ಎದ್ದುನಿಂತು ನಾನವನಿಗೆ ಚನ್ನಾಗಿ ಗೊತ್ತಿರುವೆನೆಂದು ತೋರಿಸಲು ಕೇಳುತ್ತಾನೆ. ಆದರೆ ಒಂದೊಂದು ಸಾರಿ ಹೀಗೆ ಕೇಳುತ್ತಿರುವರು ಯಾರೆಂದು ನನಗೆ ತಿಳಿಯದೇ ಕಕ್ಕಾಬಿಕ್ಕಿಯಾಗುತ್ತೇನೆ, ಅದು ಬೇರೆ ವಿಷ್ಯ!

    ನಾನು ದಿನಾ ಬೆಳಗಾದರೆ ಒಂದು ದನದ ಜಾತ್ರೆಯಿಂದ ಇನ್ನೊಂದು ದನದ ಜಾತ್ರೆಗೆ ಹೋಗುವವ. ಒಬ್ಬ ದನದ ದಲ್ಲಾಳಿ ಇನ್ನೇನು ತಾನೆ ಮಾಡಲು ಸಾಧ್ಯ? ದನದ ಜಾತ್ರೆಗಳು ವರ್ಷದುದ್ದಕ್ಕೂ ಇಲ್ಲಲ್ಲಾಂದ್ರೆ ಇನ್ನೆಲ್ಲೋ ಒಂದು ಕಡೆ ನಡೆದೇ ಇರುತ್ತವೆ. ನಾನು ಅವಕೆಲ್ಲಾ ಹೋಗಲೇಬೇಕು. ಏಕೆಂದರೆ ಅವೇ ನನ್ನ ಆದಾಯದ ಮೂಲಗಳು. ನಾನೀಗಾಗಲೆ ನಿಮಗೆಲ್ಲರಿಗೂ ಹೇಳಿದ್ದೇನೆ; ನಾನು ತುಂಬಾ ಸುಳ್ಳು ಹೇಳುತ್ತೇನೆಂದು. ಅದು ನನ್ನ ಬಾಯಿಗೆ ಒಗ್ಗಿಹೋಗಿದೆ. ನಾನು, ಎಳ್ಳಷ್ಟೂ ಕೆಲಸಕ್ಕೆ ಬಾರದ ದನಗಳನ್ನು ಭರ್ಜರಿ ಬೆಲೆಗೂ ಹಾಗೂ ಎಲ್ಲ ತೆರನಾಗಿ ಚನ್ನಾಗಿರುವ ದನಗಳನ್ನು ಭಾರಿ ಕಡಿಮೆ ಬೆಲೆಗೂ ಹಾಡಹಗಲೇ ಮಾರಾಟ ಮಾಡಿಸಬಲ್ಲೆ. ಹರಳನ್ನೊಯ್ದು ಮುತ್ತನ್ನು, ಮುತ್ತನ್ನೊಯ್ದು ಹರಳನ್ನಾಗಿಯೂ ಪರಿವರ್ತಿಸಲು ನನಗೆ ಬಹಳ ಸಮಯವೇನು ಬೇಕಾಗಿಲ್ಲ. ಅದು ನನಗೆ ಚನ್ನಾಗಿ ಅಭ್ಯಾಸವಾಗಿ ಹೋಗಿದೆ. ಕೊಂಡುಕೊಳ್ಳುವವರಿಗೆ ತನ್ನ ಮುಂದೆ ಬಿದ್ದಿರುವ ಕಬ್ಬಿಣವನ್ನು ಚಿನ್ನವೆಂದು ನಂಬಿಸಿ ಮೋಸ ಮಾಡುವ ನನಗೆ ಇಂತಹ ಕುತಂತ್ರಗಳೇನೂ ಹೊಸದಲ್ಲ. ಆ ಮೂಲಕ ನಾನು ಬರೀ ಕೊಳ್ಳುವನನ್ನು ಮಾತ್ರ ಮೋಸ ಮಾಡುವದಿಲ್ಲ, ಮಾರಾಟಗಾರನನ್ನು ಸಹ ವಂಚಿಸುತ್ತೇನೆ. ಕೆಲವು ದನದ ಮಾಲೀಕರು ಜಾತ್ರೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ತಮ್ಮ ಕಣ್ಣುಗಳನ್ನು ಉಜ್ಜುತ್ತಾ, ಆಕಳಿಸುತ್ತಾ ಕುಳಿತುಕೊಳ್ಳುತ್ತಾರೆ. ಅಂಥವರ ಹತ್ತಿರ ವ್ಯಾಪಾರ ಬೇಗ ಕುದರದಿರಲೆಂದು ಆಗಲೋ ಈಗಲೋ ಎಂಬಂತೆ ಒಂದೊಂದೇ ಗಿರಾಕಿಗಳನ್ನು ಕಳಿಸಿ ಕೊಡುತ್ತೇನೆ. ನಾನು ಹಸುಗಳ ಕೆಚ್ಚಲನ್ನು ಕೈಯಿಂದ ಸವರಿಯೇ ಅದು ಗೊಡ್ಡು ಹೌದೋ ಅಲ್ಲವೋ ಎಂಬುದನ್ನು ಹೇಳಬಲ್ಲೆ. ಒಂದೊಂದು ಸಾರಿ ನಾನು ನೋಡುವ ನೋಟಕ್ಕೆನೇ ಅದರ ಮಾಲಿಕನಿಗೆ ತಾನು ತನ್ನ ಹಸುವಿನಲ್ಲಿ ಮುಚ್ಚಿಟ್ಟ ಕುಂದು ಕೊರತೆಗಳು ನನಗೆ ಗೊತ್ತಾಗಿಬಿಟ್ಟಿವೆಯೆಂದು ಆತನಿಗೆ ಗೊತ್ತಾಗಿ “ಇದೆಲ್ಲಾ ನಿಂಗೆ ಹೆಂಗೆ ಗೊತ್ತಾಗುತ್ತೆ, ತನ್ಸುಖ್? ಹಾಗಾದ್ರೆ ಇದು ಬಾಳ ಬೆಲೆ ಬಾಳೋದಿಲ್ಲಾ ಅಂತಿಯಾ? ನೋಡು ಹಾಗಿದ್ರೆ, ನೀನು ಕಮ್ಮಿ ಬೆಲೆಗೆ ಕೊಡು ಅಂದ್ರೆ ಕೊಟ್ಟುಬಿಡ್ತೀನಿ....... ” ಎಂದು ತಾವೇ ಹೇಳುತ್ತಾ ಮುಂದೆ ಬರುತ್ತಾರೆ. ಇದರರ್ಥ ಇಷ್ಟೇ.... ನನಗೆ ಜನರನ್ನು ಹೇಗೆ ಮರುಳು ಮಾಡಬೇಕೆಂಬುದು ಚನ್ನಾಗಿ ಗೊತ್ತಿದೆ.

    ಅಷ್ಟಕ್ಕೂ ನಾನ್ಯಾರು? ತನ್ಸುಖ್, ಒಬ್ಬ ದಲ್ಲಾಳಿ!




    ನಂದು ತಕ್ಕ ಕೆಲಸವಲ್ಲ ಅಂತಾ ನಂಗೆ ಚನ್ನಾಗಿ ಗೊತ್ತಿದೆ. ದಿನಾಲೂ ಒಬ್ಬ ಮುಗ್ಧನನ್ನು ಮೋಸಗೊಳಿಸುವದಷ್ಟೇ ನನ್ನ ಕಾಯಕ. ಸುಳ್ಳು ಹೇಳುವದು ಕೂಡ ಕಡು ಪಾಪದ ಕೆಲಸವೆಂದು ನಂಗೆ ಚನ್ನಾಗಿ ಗೊತ್ತು. ಆದರೇನು ಮಾಡಲಿ? ನನ್ನ ಹೊಟ್ಟೆಪಾಡಿಗಾಗಿ ಅದನ್ನೆಲ್ಲಾ ಮಾಡಲೇಬೇಕಾಗಿದೆ. ಇದನ್ನು ಬಿಟ್ಟರೆ ನನ್ನ ಜೀವನೋಪಾಯಕ್ಕೆ ಬೇರೆ ಯಾವುದೇ ದಾರಿ ಇಲ್ಲ. ಮೇಲಾಗಿ ನನಗೆ ಹೊಲವಾಗಲಿ ಇತರೆ ಆಸ್ತಿಯಾಗಲಿ ಯಾವುದೂ ಇಲ್ಲ. ಹಾಗಾಗಿ, ನಾನು ತಾನೆ ಏನು ಮಾಡಲು ಸಾಧ್ಯ? ನನಗೆ ಬೇಕಾಗಿರೋದು ಕಮೀಷನ್ ಒಂದೇ! ನನಗೆ ಗೊತ್ತು ದಲ್ಲಾಳಿ ಕೆಲಸ ಈ ಸಮಾಜದಲ್ಲಿ ಅಂಥಾ ಗೌರವ ತರುವಂಥ ಕೆಲಸವಲ್ಲವೆಂದು. ದಲ್ಲಾಳಿ ಎನ್ನುವ ಪದವೇ ಮನದಲ್ಲಿ ಹೇಸಿಗೆ ಭಾವನೆಯನ್ನು ಹುಟ್ಟಿಸುತ್ತದೆ. ಆದರೇನು ಮಾಡ್ಲಿ? ನಾನೊಬ್ಬ ಅಸಹಾಯಕ. ಇದು ಬಿಟ್ಟರೆ ಬೇರೆ ದಾರಿಯೇ ಇಲ್ಲ. ಇಷ್ಟೊತ್ತು ನಾನು ನನ್ನ ಬಗ್ಗೆ ಹೇಳಿಕೊಂಡಿದ್ದು ನನ್ನ ಬುದ್ಧಿವಂತಿಕೆಯನ್ನು ಪ್ರದರ್ಶಿಸುವದಕ್ಕಲ್ಲ. ಆದರೆ ನಾನು ಎಂತೆಂಥ ಹೀನ ಕೃತ್ಯಗಳನ್ನು ಎಸಗುತ್ತೇನೆ ಮತ್ತು ಅವನ್ನು ಎಸಗುವದರಲ್ಲಿ ಎಷ್ಟೊಂದು ಪಳಗಿ ಹೋಗಿದ್ದೇನೆಂದು ತಿಳಿಸಲು ಹೇಳಿದೆನಷ್ಟೆ.

    ಈ ಘಟನೆ ನಡೆದಿದ್ದು ಒಂದು ಬೇಸಿಗೆಯ ಸಂಜೆ. ನಾನು ಆಗಷ್ಟೆ ಮನೆಗೆ ಮರಳಿ ನನ್ನ ಮನೆಯ ಪ್ರವೇಶದ್ವಾರಕ್ಕೆ ಹೊಂದಿಕೊಂಡಂತೆ ಅದರ ಪಕ್ಕದಲ್ಲಿಟ್ಟಿದ್ದ ಹೊರಸಿನ ಮೇಲೆ ಮಲಗಿದ್ದೆ. ಮೇಲೆ ಗುಬ್ಬಿಗಳು ಒಂದೇ ಸಮನೆ ಕಿಚಪಿಚ ಹಚ್ಚಿದ್ದರಿಂದ ನನಗೆ ನಿದ್ರೆ ಕಿಂಚಿತ್ತೂ ಹತ್ತಿರ ಸುಳಿಯಲಿಲ್ಲ. ಆಗಲೇ ನನ್ನ ಮನೆಯ ಮೇಲ್ಚಾವಣಿಯನ್ನು ಮೊಟ್ಟಮೊದಲಬಾರಿಗೆಂಬಂತೆ ನೋಡತೊಡಗಿದೆ. ಅದರ ಗಿಲಾವು ಕಿತ್ತುಹೋಗಿ ಜಂತಿಗಳೆಲ್ಲಾ ಬಿಡಿಬಿಡಿಯಾಗಿ ಬಿಟ್ಟುಕೊಂಡು ಒಂದಕ್ಕೊಂದು ಪೈಪೋಟಿ ನಡೆಸಿದವರ ತರ ಈಗಲೋ ಆಗಲೋ ನನ್ನ ಮೇಲೆ ಬೀಳುತ್ತಿವಿಯೇನೋ ಎಂಬಂತೆ ಭಾಸವಾದವು.

    ಕಿತ್ತುಹೋದ ನನ್ನ ಮನೆಯ ಮೇಲ್ಚಾವಣಿ ನನ್ನ ವೃದ್ಯಾಪ್ಯವನ್ನು ಜ್ಞಾಪಿಸಿದರೆ ಜಂತಿಯಲ್ಲಿ ಬಿದ್ದ ತೂತುಗಳು ನನ್ನ ಜೀವನದ ಶೂನ್ಯವನ್ನು ಒತ್ತಿ ಹೇಳಿದವು. ಕೂಡಲೇ ನನ್ನ ಮನಸ್ಸು ಇದುವರೆಗೂ ನಾನೆಷ್ಟು ಸುಳ್ಳುಗಳನ್ನು ಹೇಳಿದ್ದೇನೆ, ಎಷ್ಟು ಪಾಪಗಳನ್ನು ಮಾಡಿದ್ದೇನೆ, ಎಷ್ಟು ರೋಗಗ್ರಸ್ಥ ದನಗಳನ್ನು ಒಳ್ಳೆ ಬೆಲೆಗೆ ಮಾರಿಸಿದ್ದೇನೆ, ಎಷ್ಟು ಕಟ್ಟುಮಸ್ತಾದ ದನಗಳನ್ನು ಸೊವಿ ಬೆಲೆಗೆ ಮಾರಿಸಿದ್ದೇನೆಂಬುದನ್ನು ಲೆಕ್ಕಹಾಕತೊಡಗಿತು. ಈ ಹೊಟ್ಟೆಗೋಸ್ಕರ ನಾನು ಎಂತೆಂಥ ಪಾಪಗಳನ್ನು ಮಾಡಲಿಲ್ಲ? ಎಷ್ಟೊಂದು ಸುಳ್ಳುಗಳನ್ನು ಹೇಳಲಿಲ್ಲ? ಆದರೂ ಅದಿನ್ನೂ ಖಾಲಿಯಾಗಿಯೇ ಉಳಿದಿದೆ.

    ನಾನಿನ್ನೂ ನನ್ನ ಹಿಂದಿನದರ ಕುರಿತು ಯೋಚಿಸುತ್ತಿದ್ದೆ. ಅಷ್ಟರಲ್ಲಿ ಇದಕ್ಕಿದ್ದಂತೆ ನನ್ನನ್ನು ಭೇಟಿ ಮಾಡಲು ಬಂದ ವ್ಯಕ್ತಿಯೊಬ್ಬ ನನ್ನನ್ನು ವರ್ತಮಾನಕ್ಕೆ ಎಳೆದು ತಂದಿದ್ದ.

    “ರಾಮ್-ರಾಮ್, ಸಾ!”

    “ರಾಮ್-ರಾಮ್, ಭಾಯಿ!” ನಾನು ಮರು ಶುಭಾಶಯ ಹೇಳಿದೆ.

    “ನೀನು ತನ್ಸುಖ್ ಅಲ್ಲವೆ?”

    “ಹೌದು”

    “ನಂಗೊಂದು ಎಮ್ಮೆಯನ್ನು ಕೊಳ್ಳಬೇಕಾಗಿದೆ” ಅವನು ನನ್ನ ಕಾಲ ಬಳಿ ಹೊರಸಿನ ಮೇಲೆ ಕೂರುತ್ತಾ ಹೇಳಿದ.

    ಅವನಿಗೆ ವಯಸ್ಸಾಗಿತ್ತು. ಬಹುಶಃ, ಅರವತ್ತೋ ಅರವತ್ತರ ಮೇಲಾಗಿರಬೇಕು. ಅವನ ಮುಖ ಅವನು ಜೀವನದಲ್ಲಿ ತುಂಬಾ ನೊಂದಿದ್ದಾನೆಂದು ಹಾಗೂ ಯಾವುದೋ ತೊಂದರೆಯಲ್ಲಿದ್ದಾನೆಂದು ಹೇಳುತ್ತಿತ್ತು. ತಕ್ಷಣ ನನಗೆ ನನ್ನ ಪಾಪಗಳನ್ನೆಲ್ಲಾ ತೊಳೆದುಕೊಳ್ಳಲು ಇದೊಂದು ಒಳ್ಳೆ ಅವಕಾಶವಾಗಿ ಕಂಡಿತು. ಸರಿ, ಈತನಿಗೆ ಒಂದು ಒಳ್ಳೆ ಎಮ್ಮೆಯನ್ನು ಕೊಡಿಸುವದರ ಮೂಲಕ ನನ್ನೆಲ್ಲಾ ಪಾಪಗಳನ್ನು ತೊಳೆದುಕೊಳ್ಳಬಹದು ಎಂದು ಮನಸ್ಸಲ್ಲೇ ಲೆಕ್ಕಹಾಕತೊಡಗಿದೆ. ಅವನು ನೀರು ಕುಡಿಯುತ್ತಾ “ನಾನು ಹೇಳಿದ್ದು ಕೇಳಿಸ್ತಾ?” ಎಂದು ಮತ್ತೆ ಕೇಳಿದ.

    “ಹಾ, ಕೇಳಿಸ್ತು. ನಿಂಗೆ ಬೇಕಾಗಿರುವ ಎಮ್ಮೆಯನ್ನು ನೋಡಿದಿಯಾ?”

    “ಹಾಂ, ನೋಡಿದ್ದೇನೆ. ನೀನು ವ್ಯಾಪಾರ ಮುಗಿಸಿಕೊಡೊದಾದರೆ........”

    “ಎಲ್ಲಿದೆ ಅದು?”

    “ಹೇ......, ಇಲ್ಲೇ ಹತ್ತಿರದಲ್ಲೇ. ನಿಮ್ಮ ಮುಂದಿನ ಬೀದಿಯಲ್ಲಿರೊ ಕಾಶಿ ರಿಗಾರಂದು”

    ಕಾಶಿಯ ಹೆಸರು ಕೇಳುತ್ತಿದ್ದಂತೆ ಬಡತನದಲ್ಲಿ ಬೆಂದುಹೋದ ಅವನ ಮನೆ ಹಾಗೂ ಅವನ ಮುಗ್ಧ ಮುಖ, ಏಕಕಾಲಕ್ಕೆ ನನ್ನ ಕಣ್ಮುಂದೆ ಮಿಂಚಿನಂತೆ ಹಾದು ಹೋದವು. ಕಾಶಿಯ ಹೆಂಡತಿ ಕ್ಯಾನ್ಸರ್ ನಿಂದ ಕುಗ್ಗಿ ಹೋಗಿ ಅವಳ ಹಸುಗೂಸುಗಳು ಅವಳ ಮುಖವನ್ನೇ ದಿಗ್ಬ್ರಾಂತಿಯಿಂದ ನೋಡುತ್ತಾ ಅವಳು ಬದುಕುಳಿಯಲೆಂದು ಆಸೆಪಡುತ್ತಿದ್ದವು. ಕಾಶಿ ತನ್ನ ಹೆಂಡತಿಯ ಆಸ್ಪತ್ರೆ ಖರ್ಚನ್ನು ಭರಿಸಲು ಇದ್ದ ಒಂದೇ ಒಂದು ಎಮ್ಮೆಯನ್ನು ಮಾರಬೇಕಾಗಿತ್ತು. ಅವನು ಆಗಾಗ ನನ್ನ ಹತ್ತಿರ ಹೇಳುತ್ತಿದ್ದ “ತನ್ಸುಖ್, ನನ್ನ ಎಮ್ಮೆಯನ್ನು ಮಾರಿಸಿಕೊಡು. ನಿನಗೆ ತಿಳಿದಂತೆ ನನ್ನ ಹೆಂಡತಿ ಆರೈಕೆಗೆ ಉಳಿದಿರುವದು ಇದೊಂದೇ ದಾರಿ....... ಡಾಕ್ಟರು ಬೇರೆ ಆಪರೇಶನ್ ಮಾಡಬೇಕು ಅಂತಾ ಹೇಳಿದ್ದಾರೆ...... ಈಗ ನನ್ನ ಹತ್ರ ಒಂದು ನಯಾಪೈಸಾ ಇಲ್ಲ...... ನೀನು ಹೆಂಗೂ ದಲ್ಲಾಳಿಯಿದ್ದೀ..... ನಂಗಿದನ್ನು ಒಳ್ಳೆ ಬೆಲೆಗೆ ಮಾರಿಸಿಕೊಟ್ರೆ ದೊಡ್ಡ ಉಪಕಾರವಾಗುತ್ತೆ..... ನಿಂಗೆ ಬೇಕಾದರೆ ಕಮೀಷನ್ನೂ ತಗೋ......”

    ಅದೇನು ನಂಗೆ ಅಂಥಾ ಕಷ್ಟದ ಕೆಲಸವೇನಾಗಿರಲಿಲ್ಲ. ಆದರೆ ಆ ಹೆಸರೇ ನನ್ನಮುಂದೆ ಬೇರೊಂದು ಚಿತ್ರಣವನ್ನು ತಂದಿತು-ಅದು ಕಾಶಿಯ ರೋಗಗ್ರಸ್ಥ ಎಮ್ಮೆ. ಅದಕ್ಕೀಗಾಗಲೆ ನಾಲ್ಕು ಸಾರಿ ಹೊಟ್ಟಿ ಹೋಗಿತ್ತು. ಪಶುವೈದ್ಯರು ಅದನ್ನು ಆರೈಕೆ ಮಾಡಿದ್ದರೂ ಅದಕ್ಕೆ ಇನ್ನೊಂದು ಸಾರಿಯೇನಾದರು ಗರ್ಭಪಾತವಾದರೆ ಖಂಡಿತ ಸಾಯುತ್ತದೆಂದು ಎಚ್ಚರಿಕೆ ನೀಡಿದ್ದರು.

    ನಾನೀಗ ಇಕ್ಕಟ್ಟಿನಲ್ಲಿ ಸಿಲುಕಿದ್ದೆ. ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಸುಮ್ಮನೆ ಯೋಚಿಸುತ್ತಾ ಕುಳಿತುಬಿಟ್ಟೆ. ನಮ್ಮಿಬ್ಬರ ನಡುವೆ ಸ್ವಲ್ಪ ಹೊತ್ತು ಮೌನ ಆವರಿಸಿತ್ತು.

    ಸ್ವಲ್ಪ ಸಮಯದ ಬಳಿಕ ಆ ಮುದಕನೇ ಮೌನವನ್ನು ಮುರಿದನು.

    “ಏನು ಯೋಚಿಸುತ್ತಿದ್ದೀಯಾ ತನ್ಸುಖ್? ನನ್ನ ಬೇಡಿಕೆಯನ್ನು ಈಡೇರಿಸ್ತೀಯಾ ಹೇಗೆ?”

    “ಇಲ್ಲ. ಇನ್ನೂ ಇಲ್ಲ. ಅಂದಹಾಗೆ ಆ ಎಮ್ಮೆ ಕಾಶೀದು ಅಂತ ಹೇಳಿದಿಯಲ್ವಾ?”

    “ಹೌದು, ಯಾಕಿಷ್ಟೊಂದು ಪೇಚಾಡ್ತಿದ್ದೀಯಾ? ಏನಾದ್ರು ತೊಂದ್ರೆಯಿದಿಯಾ? ಇದ್ರೆ ಬೇಡ..... ಮೊದ್ಲೇ ಹೇಳಿ ಕೇಳಿ ನಾನು ಬಡವ..... ಈಗ್ಲೇ ಇಷ್ಟೊಂದು ಕಷ್ಟ..... ಅಂಥಾದ್ದರಲ್ಲಿ ನನ್ನನ್ನು ಇನ್ನೊಂದು ಕಷ್ಟಕ್ಕೆ ನೂಕಬೇಡ.. .......ಅಂದಹಾಗೆ ಅದನ್ನು ನನ್ನ ಮಗನಿಗೋಸ್ಕರ ಕೊಳ್ತಾಇದ್ದೀನಿ”

    “ನಿನ್ನ ಮಗನಿಗೋಸ್ಕರ.....?”

    “ಹೌದು, ನನ್ನ ಮಗನಿಗೆ ಹುಷಾರಿಲ್ಲ. ಎರಡು ವರ್ಷದಿಂದ ದವಾಖಾನೆಯಲ್ಲೇ ಇದ್ದ. ನಿನ್ನೆಯಷ್ಟೆ ಮನೆಗೆ ವಾಪಾಸಾಗಿದ್ದಾನೆ. ಡಾಕ್ಟರು, ಅವನು ಮೊದಲಿನಂತೆ ಮೈ ಕೈ ತುಂಬಿಕೊಂಡು ಓಡಾಡಲು ದಿನಾಲೂ ಹಾಲು ಕುಡಿಬೇಕು ಅಂತಾ ಹೇಳಿದ್ದಾರೆ. ಅದಕ್ಕೆ ಒಂದು ಎಮ್ಮಿ ಕೊಂಡ್ಕೋಬೇಕು ಅಂತಾ ಬಂದಿದ್ದೇನೆ. ಅದರಿಂದ ಮನೆಗೆ ಆದಾಯವೂ ಬರಬೇಕು, ನನ್ನ ಮಗನ ಆರೈಕೆಯೂ ನಡಿಬೇಕು”

    “ಓ...!”

    “ಹೌದು, ತನ್ಸುಖ್. ನಾನು ಹಾಳಾಗದೆ ಇರೋ ತರ ನೋಡಿಕೊ. ಇವಾಗಲೇ ಇಷ್ಟೊಂದು ಕಷ್ಟ. ಅದಕ ಮತ್ತ ಇನ್ನೊಂದು ಕಷ್ಟ ಕೂಡಿಸಬೇಡ”

    ಒಮ್ಮೆಲೆ ನಿಟ್ಟುಸಿರು ಬಿಡುತ್ತಾ ದಿಗ್ಭ್ರಾಂತನಾಗಿ ಕುಳಿತುಬಿಟ್ಟೆ. ಇಡಿ ಆಕಾಶ ನನ್ನ ಸುತ್ತ ಗಿರಗಿರನೆ ತಿರುಗಿದಂತೆ ಭಾಸವಾಯಿತು. ಎದೆ ಹೊಡೆದುಕೊಳ್ಳತೊಡಗಿತು. ನನ್ನ ಇಪ್ಪತ್ತು ವರ್ಷದ ದಲ್ಲಾಳಿ ವೃತ್ತಿ ಜೀವನದಲ್ಲಿ ನಾನ್ಯಾವತ್ತೂ ಈ ಪರಿಯ ಸಂದಿಗ್ಧಕ್ಕೆ ಸಿಲುಕಿರಲಿಲ್ಲ.
    ಒಂದೇ ಏಟಿಗೆ ಈ ಮುದುಕ ನನ್ನೆಲ್ಲ ಪಾಪಗಳಿಗೆ ಶಿಕ್ಷೆಯಾಗಿ ಅವನ್ನು ತೊಳೆದುಕೊಳ್ಳಲು ಒಂದು ಅವಕಾಶವನ್ನಿತ್ತಿದ್ದ.......
    ಕೂಡಲೇ ಕೈ ಚಾಚುತ್ತಾ ನಿಂತುಕೊಂಡಿರುವ ಎರಡು ಹಸಿದ ಕಂದಮ್ಮಗಳು ಹಾಗೂ ಇನ್ನೇನು ಕೊನೆಯುಸಿರೆಳೆಯುವ ಎರಡು ರೋಗಗ್ರಸ್ಥ ಜೀವಗಳು ನನ್ನ ಕಣ್ಣು ಮುಂದೆ ಬಂದು ನಿಂತವು.

    ಯಾರನ್ನು ಕಾಪಾಡಲಿ? ಯಾರನ್ನು ಬಿಡಲಿ?

    ಯಾರಿಗೆ ಮೋಸಮಾಡಲಿ, ಕಾಶಿಗಾ ಇಲ್ಲ ಈ ಮುದಕನಿಗಾ?

    ಈ ಪ್ರಶ್ನೆಗಳು ಎವೆಯಿಕ್ಕದೆ ನನ್ನನ್ನೇ ನೋಡುತ್ತಾ ಒಮ್ಮೆ ಕಟುಕಿದವು. ನಾನು ಈ ಮುದಕನಿಗೆ ಏನು ಹೇಳಲಿ- ಹೂಂ ಅಥವಾ ಊಹೂಂ? ಹೂಂ ಎಂದು ಹೇಳಿದರೆ ಆ ಮುದಕನನ್ನು ಕೊಲೆಗೈದಂತೆ. ಊಹೂಂ ಎಂದು ಹೇಳಿದರೆ ಕಾಶಿಯ ಕತೆ ಮುಗಿದಂತೆ.

    “ತನ್ಸುಖ್ಜಿ, ಕಾಶಿ ಮನೆಗೆ ಹೊಗೋಣವೆ?” ಆ ಯಜಮಾನ ಮತ್ತೊಮ್ಮೆ ಕೇಳಿದ.

    “ಕ್ಷಮಿಸಿ ಯಜಮಾನ್ರೆ..... ನಾನು ದಲ್ಲಾಳಿಯಲ್ಲ.......” ನನ್ನ ಧ್ವನಿ ಗದ್ಗದಿತವಾಗುತ್ತಿದ್ದುದು ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. “ನಿಮಗೆ ಹೇಗೆ ಬೇಕೋ, ಹಾಗೆ ಮಾಡಿ”

    ಆ ಮುದುಕ ತನ್ನ ಊರುಗೋಲಿನ ಸಹಾಯದಿಂದ ನಿಧಾನವಾಗಿ ಮೇಲೆದ್ದು ಹೋಗಲಣಿಯಾದ. ಅವ ತನ್ನ ನಡುಗುವ ಕಾಲುಗಳಲ್ಲಿ ಹೊರಗೆ ಹೋಗುವದನ್ನೇ ನೋಡುತ್ತಾ ಹೊರಸಿನ ಮೇಲೆ ಒಬ್ಬನೇ ಕುಳಿತೆ. ಪುನಃ ಮಲಗಿಕೊಳ್ಳುತ್ತಾ ಮೊದಲಿನಂತೆ ನನ್ನ ಮೇಲ್ಚಾವಣಿಯನ್ನೇ ನೋಡತೊಡಗಿದೆ.

    ಎಂದಿನಂತೆ ಮೇಲೆ ಗುಬ್ಬಿಗಳು ಕಿಚಪಿಚ ಎನ್ನುತ್ತಾ ತಮ್ಮ ಜಗಳದಲ್ಲಿ ನಿರತವಾಗಿದ್ದವು.

    ಮೂಲ ರಾಜಸ್ಥಾನಿ: ರಾಮ್ ಸ್ವರೂಪ್ ಕಿಸನ್

    ಇಂಗ್ಲೀಷಿಗೆ: ಗೋವಿಂದ ನಿಹಾಲಣಿ

    ಕನ್ನಡಕ್ಕೆ: ಉದಯ್ ಇಟಗಿ

    (1997 ರಲ್ಲಿ ಭಾರತೀಯ ಭಾಷೆಗಳ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕಥೆ.)
    ಜನೇವರಿ 16, 2011 ರ ಉದಯವಾಣಿ ಪತ್ರಿಕೆಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟ. ಅದರ ಲಿಂಕ್ ಗಳು ಇಲ್ಲಿವೆ
    1. http://74.127.61.106/epaper/PDFList.aspx?Pg=H&Edn=MN&DispDate=1%2F16%2F2011 (PDF Version)

    2. http://www.udayavani.com/news/43157L15-%E0%B2%A6%E0%B2%B2-%E0%B2%B2-%E0%B2%B3-">
    ಚಿತ್ರ ಕೃಪೆ: ಉದಯವಾಣಿ

    8 ಕಾಮೆಂಟ್‌(ಗಳು):

    shivu.k ಹೇಳಿದರು...

    ಸರ್,

    ಮತ್ತೊಂದು ಸುಂದರ ಅನುವಾದ. ಬದುಕಲು ಮಾಡಿದ ಪಾಪಗಳನ್ನೆಲ್ಲಾ ತೊಳೆದುಕೊಳ್ಳಲು ಬಂದ ಅವಕಾಶವನ್ನು ಮತ್ತೊಂದು ಮೋಸ ಮಾಡುವ ಅವಕಾಶ ಹೇಗೆ ತಡೆಯುತ್ತದೆಯೆನ್ನುವುದು ಕತೆಯಲ್ಲಿ ತುಂಬಾ ಚೆನ್ನಾಗಿ ಚಿತ್ರಿತವಾಗಿದೆ. ಅಂಥ ಗೊಂದಲಗಳು ಉಂಟಾದಾಗ ಏನು ಮಾಡಬೇಕು ಅನ್ನುವುದು ಉತ್ತರವಿಲ್ಲದ ಪ್ರಶ್ನೆ...

    ತುಂಬಾ ಚೆನ್ನಾಗಿದೆ ಸರ್....

    sunaath ಹೇಳಿದರು...

    ಉದಯ,
    ಮನ ಕಲಕುವ ಕತೆಯೊಂದನ್ನು ಕನ್ನಡಿಗರಿಗೆ ತೋರಿಸಿದ್ದೀರಿ. ಧನ್ಯವಾದಗಳು. ಒಂದು ಕತೆ ಎಷ್ಟು ಪುಟ್ಟದಾಗಿರಬಹುದು, ಆದರೆ ಎಷ್ಟು ಪರಿಣಾಮಕಾರಿಯಾಗಿರಬಹುದೆನ್ನುವದಕ್ಕೆ, ಈ ಕತೆಯು ಉತ್ತಮ ನಿದರ್ಶನ.

    ಸಾಗರದಾಚೆಯ ಇಂಚರ ಹೇಳಿದರು...

    ನಿಜಕ್ಕೂ ಮನ ಕಳುಕುವ ಕಥೆ
    ನಿಮ್ಮ ಅನುವಾದ ,ಮುಂದುವರೆಯಲಿ
    ಅದೆಷ್ಟೋ ಉಪಯುಕ್ತ ಮಾಹಿತಿಗಳು ನಮಗೆ ಸಿಗುತ್ತಿವೆ

    Nisha ಹೇಳಿದರು...

    Good one.

    Unknown ಹೇಳಿದರು...

    Super!!..

    ದಿನಕರ ಮೊಗೇರ ಹೇಳಿದರು...

    really soopar kathe...... dhanyavaada sir........

    AntharangadaMaathugalu ಹೇಳಿದರು...

    ಉದಯ್ ಸಾರ್..
    ಚಂದದ ಅನುವಾದ.... ಧನ್ಯವಾದಗಳು

    ಅನಾಮಧೇಯ ಹೇಳಿದರು...

    ಉದಯ್ ಸರ್..........ಉತ್ತಮ ಕಥೆ . ಎಲ್ಲೆಲ್ಲಿಂದಲೋ ಉತ್ತಮ ಬರಹಗಳನ್ನು ಹುಡುಕಿ ಕೈನೀಡಿ ಕನ್ನಡಕ್ಕೆ ಕರೆತರುತ್ತೀರಲ್ಲ .ವಿವಿದ ಭಾಷೆಗಳ ಉತ್ಕೃಷ್ಟ ಬರಹಗಳನ್ನು ಕನ್ನಡದಲ್ಲಿ ಓದುವ ಸುಖ ಒದಗಿಸಿಕೊಡುತ್ತಿರುವದಕ್ಕೆ ತಮಗೆ ದನ್ಯವಾದಗಳು.