Demo image Demo image Demo image Demo image Demo image Demo image Demo image Demo image

ತಾಯ್ತನ ವೈಭವಿಕೃತಗೊಂಡಷ್ಟು ತಂದೆತನ ವೈಭವಿಕೃತಗೊಂಡಿಲ್ಲ ಯಾಕೆ?

  • ಶನಿವಾರ, ಜೂನ್ 19, 2010
  • ಬಿಸಿಲ ಹನಿ

  • ನಾಳೆ ಅಪ್ಪನ ದಿನ. ಜಗತ್ತಿನೆಲ್ಲೆಡೆ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ದಿನ. ಆತ ನಮ್ಮನ್ನು ಹುಟ್ಟಿಸಿ ಬೆಳೆಸಿದ್ದಕ್ಕೆ, ನಮ್ಮ ಕನಸುಗಳನ್ನು ಸಾಕಾರಗೊಳಿಸಿದ್ದಕ್ಕೆ ನಮನ ಸಲ್ಲಿಸುವ ದಿನ. ಆದರೆ ಖೇದದ ಸಂಗತಿಯೆಂದರೆ ಮೊದಲಿನಿಂದಲೂ ಅಮ್ಮನ ದಿನ ವಿಶೇಷತೆ ಪಡೆದಷ್ಟು ಅಪ್ಪನ ದಿನ ಅದ್ಯಾಕೋ ಅಷ್ಟೊಂದು ವಿಶೇಷತೆಯನ್ನು ಪಡೆದೇ ಇಲ್ಲ. ಏಕೆಂದರೆ ಜಗತ್ತಿನ ಯಾವುದೇ ಭಾಗವನ್ನು ತೆಗೆದುಕೊಂಡರೂ ಅಲ್ಲಿ ಅಮ್ಮನಿಗೆ ವಿಶೆಷ ಆದ್ಯತೆ. ಅವಳಿಗೆ ಮೊದಲ ಸ್ಥಾನ. ಅಪ್ಪ ಎಷ್ಟೇ ಮಾಡಿದರೂ ಅವನಿಗೆ ಸದಾ ಎರಡನೆ ಸ್ಥಾನ. ಪುರುಷ ಪ್ರಧಾನ ಸಮಾಜದಲ್ಲೂ ಒಂದು ಕುಟುಂಬ ಕಟ್ಟಿ ಬೆಳೆಸುವಷ್ಟರಲ್ಲಿ ಅಮ್ಮನ ಪಾತ್ರವನ್ನು ಗುರುತಿಸುವಷ್ಟು ಅಪ್ಪನ ಪಾತ್ರವನ್ನು ಗುರುತಿಸುವದರಲ್ಲಿ ಏನೋ ಒಂದು ತರದ ಉದಾಸೀನ. ಅಮ್ಮ ಸರಿಯಿದ್ದರೆ ಸಾಕು. ಅಪ್ಪ ಹೇಗಿದ್ದರೇನು? ಎನ್ನುವ ಉಢಾಪೆ. ಅಚ್ಚರಿಯೆಂದರೆ ತಾಯ್ತನ ವೈಭವಿಕೃತಗೊಂಡಷ್ಟು ತಂದೆತನ ಯಾಕೆ ವೈಭವಿಕೃತಗೊಂಡಿಲ್ಲವೆಂದು?

    ಒಂದು ಕುಟುಂಬವನ್ನು ಕಟ್ಟಿ ಬೆಳೆಸುವದರಲ್ಲಿ, ಸಾಕಿ ಸಲುಹುವದರಲ್ಲಿ ಅಮ್ಮನ ಪಾತ್ರದ ಮುಂದೆ ಅಪ್ಪನದು ಗೌಣ ಅನಿಸಿಬಿಡುತ್ತದೆ. ಯಾಕೆ? ಅಂತೆಯೇ ನೀವು ಯಾವುದೇ ಸಾಹಿತ್ಯ ತೆಗೆದುಕೊಂಡರೂ ಅಲ್ಲಿ ತಾಯ್ತನ ವೈಭವಿಕೃತಗೊಂಡಷ್ಟು ತಂದೆತನ ವೈಭವಿಕೃತಗೊಂಡೇ ಇಲ್ಲ. ಯಾಕೆ? ಲೇಖಕರು, ಕವಿಗಳು ತಾಯ್ತನವನ್ನು ಹಾಡಿ ಹೊಗಳಿದಷ್ಟು ತಂದೆತನವನ್ನು ಹಾಡಿಹೊಗಳಲೇ ಇಲ್ಲ! ಯಾಕೆ? ಕಾನೂನು ಕಟ್ಟಳೆಗಳಲ್ಲೂ ಮಕ್ಕಳ ವಿಚಾರದಲ್ಲಿ ಅಮ್ಮನಿಗೇ ಅಗ್ರಸ್ಥಾನ. ಯಾಕೆ? ವಿಚ್ಛೇದನದ ಸಮಯದಲ್ಲಿ ಕೋರ್ಟು ಕೂಡ ಒಂದು ನಿರ್ಧಿಷ್ಟ ಅವಧಿಯವರೆಗೆ ಮಕ್ಕಳು ಅಮ್ಮನ ಆರೈಕೆಯಲ್ಲಿ ಬೆಳೆಯಬೇಕೆಂದು ತಾಕೀತು ಮಾಡುತ್ತದೆ. ಯಾಕೆ?

    ಇದಕ್ಕೆ ಕಾರಣ ಬಹಳ ಸ್ಪಷ್ಟವಿದೆ. ಹೆಣ್ಣಿಗೆ ಅಗಾಧ ತಾಳ್ಮೆ, ಸಹನೆ, ಪ್ರೀತಿ, ವಾತ್ಸಲ್ಯ ಇರುವದೇ ಆಗಿದೆ. ಹೆಣ್ಣಿಗಿರುವಷ್ಟು ಜವಾಬ್ದಾರಿ, ತಾಕತ್ತು ಗಂಡಿಗಿಲ್ಲ ಎನ್ನುವ ನಂಬಿಕೆಯಿದೆ. ಹಿಂದೆಲ್ಲ ಅಮ್ಮ ಮನೆಯಲ್ಲಿದ್ದುಕೊಂಡೇ ಬೆಳಿಗ್ಗೆ ಬೇಗ ಎದ್ದು ತಿಂಡಿ, ಅಡಿಗೆ ಮಾಡಿ ಗಂಡನನ್ನು ಹೊರಗೆ ದುಡಿಯಲು ಕಳಿಸುವದು, ಮಕ್ಕಳನ್ನು ಶಾಲೆಗೆ ಕಳಿಸುವದರಿಂದ ಹಿಡಿದು ಮನೆಯ ಬೇರೆಲ್ಲ ಕೆಲಸ ಮಾಡಿ ಅವರ ಆರೈಕೆ ಮಾಡುವದರಲ್ಲಿ ಅವಳು ಸೈ ಅನಿಸಿಕೊಳ್ಳುತ್ತಿದ್ದಳು. ಹೀಗಾಗಿ ಅವಳಿಗೆ ವಿಶೇಷ ಸ್ಥಾನವಿತ್ತು. ಅವಳಿಗೆ ಪ್ರೀತಿ, ಒಲವು, ಮಮಕಾರ ಸುರಿಸುವದರಲ್ಲಿ ಸಾಕಷ್ಟು ಸಮಯವಿರುತ್ತಿತ್ತು. ಆದರೆ ಅಪ್ಪನದು ತೋರ್ಪಡಿಸದ ಪ್ರೀತಿ. ಆತನದು ಸದಾ ಉರಿ ಉರಿಯುವ ದರ್ಪದ ಮುಖ. ಆತ ಹೆಗಲ ಮೇಲೆ ಎಲ್ಲಾ ಜವಾಬ್ದಾರಿಗಳನ್ನು ಹೊತ್ತು ಬಾಳಬಂಡಿ ಓಡಿಸಲು ಸಿದ್ಧನಾಗಿದ್ದರಿಂದ ಆತನೇ ಮನೆಯ ಯಜಮಾನ, ಆತನದು ಜವಾಬ್ದಾರಿಯುತ ನಡೆ. ಈ ಎಲ್ಲ ಪ್ರಕ್ರಿಯೆಯಲ್ಲಿ ಆತ ಒಂದಿಷ್ಟು ಜೋಲು ಮುಖವನ್ನಿಟ್ಟುಕೊಂಡಿದ್ದರೆ, ಮಕ್ಕಳೊಂದಿಗೆ ಅಷ್ಟಾಗಿ ಬೆರೆಯುವದರಲ್ಲಿ ಸೋತು ಹೋಗುತ್ತಿದ್ದರೆ ಅಚ್ಚರಿಯೇನಿಲ್ಲ.

    ಆದರೆ ಇಂದು ಅಪ್ಪ ಅಮ್ಮ ಇಬ್ಬರೂ ಬಹಳಷ್ಟು ಬದಲಾಗಿದ್ದಾರೆ. ಸಂಸಾರದ ಬಾಳಬಂಡಿಯ ನೊಗವನ್ನು ಅಪ್ಪ ಅಮ್ಮ ಇಬ್ಬರೂ ಸರಿ ಸಮನಾಗಿ ಹೊತ್ತಿದ್ದಾರೆ. ಸದಾ ಮನೆಯಲ್ಲೇ ಕುಳಿತು ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಅಮ್ಮ ಇಂದು ಹೊರಗೆ ದುಡಿದು ಸುಸ್ತಾಗಿ ಬರುವ ಅಮ್ಮನಾಗಿದ್ದಾಳೆ. ಸದಾ ಹೊರಗಡೆಯೇ ಉಳಿಯುತ್ತಿದ್ದ ಅಪ್ಪ ಅಮ್ಮನಂತೆ ಅಡಿಗೆ ಮನೆಗೆ ನುಗ್ಗಿ ಮಕ್ಕಳಿಗೆ ಹಾಲು ಕಾಯಿಸಿಕೊಡುತ್ತಾನೆ, ತಿಂಡಿ ಮಾಡಿಕೊಡುತ್ತಾನೆ. ಅಮ್ಮನಿಗೆ ಮನೆಗೆಲಸದಲ್ಲಿ ಸಹಾಯಮಾಡುತ್ತಾನೆ. ಅವನು ಕೂಡ ಅಮ್ಮನಂತೆ ಮಕ್ಕಳನ್ನು ಎತ್ತಿ ಆಡಿಸುತ್ತಾನೆ, ನ್ಯಾಪಿ ಬದಲಿಸುತ್ತಾನೆ, ರಚ್ಚೆ ಹಿಡಿಯುವ ಮಕ್ಕಳನ್ನು ಸಮಾಧಾನಪಡಿಸುತ್ತಾನೆ. ಅವರನ್ನು ರೆಡಿ ಮಾಡಿ ಸ್ಕೂಲಿಗೂ ಕಳಿಸುತ್ತಾನೆ. ಹೋ ವರ್ಕ್ ಮಾಡಿಸುತ್ತಾನೆ. ಅಮ್ಮನಂತೆ ಮುದ್ದು ಮಾಡುತ್ತಾನೆ, ಲಲ್ಲೆಗೆರೆಯುತ್ತಾನೆ. ಆದರೂ ಅಮ್ಮನ ಆರೈಕೆ, ಪ್ರೀತಿ, ವಾತ್ಸಲ್ಯಗಳ ನಿಟ್ಟುಸಿರುಗಳ ಮುಂದೆ ಅಪ್ಪನದು ಅಷ್ಟಾಗಿ ಲೆಕ್ಕಕ್ಕೇ ಬರುವದಿಲ್ಲ ಯಾಕೆ?
    ಇವತ್ತು ಅಪ್ಪ ಎಂದರೆ ಪ್ರೀತಿ, ಅಪ್ಪ ಎಂದರೆ ವಾತ್ಸಲ್ಯ, ಅಪ್ಪ ಎಂದರೆ ಆಸರೆ, ಅಪ್ಪ ಎಂದರೆ ನೆರಳು. ಅಪ್ಪ ಎಂದರೆ ಸ್ಪೂರ್ತಿ, ಅಪ್ಪ ಎಂದರೆ ನೆನಪುಗಳ ಆಗರ, ಅಪ್ಪ ಎಂದರೆ ಕನಸುಗಳನ್ನು ಕಟ್ಟಿ ಕೊಡುವವ, ಕೊಂಡು ಕೊಡುವವ, ಹಂಚಿಕೊಳ್ಳುವವ. ಅಪ್ಪ ಎಂದರೆ ಸ್ನೇಹಿತ, ಅಪ್ಪ ಎಂದರೆ ಮಾರ್ಗದರ್ಶಿ, ಅಪ್ಪ ಎಂದರೆ ಭರವಸೆಯ ಬೆಳಕು. ಅಪ್ಪ ಎಂದರೆ ಒಂದು ಸಣ್ಣ ಗದರಿಕೆಯೊಂದಿಗೆ ಪ್ರೀತಿಯ ಮಳೆಯಲ್ಲಿ ತೋಯಿಸುವವ. ಅಪ್ಪ ಎಂದರೆ ಇನ್ನೂ ಏನೇನೋ ಆಗಿದ್ದಾನೆ! ಮಕ್ಕಳ ಬೆಳವಣಿಗೆಯಲ್ಲಿ ಆತನೂ ಅಮ್ಮನಂತೆ ಸರಿ ಸಮನಾಗಿ ಜೀವ ತೇಯುತ್ತಾನೆ. ಆದರೂ ಇನ್ನೂ ಆತ ಅಮ್ಮನಂತೆ “truth” ಆಗದೆ “myth” (Mother is a truth, father is a myth) ಆಗಿಯೇ ಗೇಲಿಗೊಳಗಾಗುತ್ತಿರುವದು ಮಾತ್ರ ವಿಷಾದಕರ!
    -ಉದಯ್ ಇಟಗಿ

    5 ಕಾಮೆಂಟ್‌(ಗಳು):

    ದಿನಕರ ಮೊಗೇರ ಹೇಳಿದರು...

    ಉದಯ್ ಸರ್,
    ಸತ್ಯವಾದ ಮಾತು...... ಅಮ್ಮಂದಿರಿಗೆ ಹೆಚ್ಚಿನ ಮಹತ್ವ ಸಿಗುತ್ತಿದೆ....... ಅಪ್ಪಂದಿರಿಗೆ ಸಿಗಬೇಕಾದ ಆದ್ಯತೆ ಸಿಗುತ್ತಿಲ್ಲ..... ಆದರೂ ಒಬ್ಬರಿಲ್ಲದಿದ್ದರೆ ಇನ್ನೊಬ್ಬರಿಲ್ಲ ಆಲ್ವಾ..... ಕೇವಲ ಅಪ್ಪ ಇದ್ದು, ಅಮ್ಮ ಇಲ್ಲದಿದ್ದರೆ ಪರಿಪೂರ್ಣ ಬದುಕು ಇಲ್ಲ.... ಹಾಗೆ ಇಬ್ಬರಿಗೂ ಸಮಾನ ಸ್ತಾನಮಾನ ಸಿಗಲೇ ಬೇಕು ಎನ್ನುವ ತಮ್ಮ ವಾದ ಸರಿಯಾಗಿದೆ........ ಉತ್ತಮ ವಾದ ಮತ್ತುಬರಹ.....

    Ittigecement ಹೇಳಿದರು...

    ಉದಯ್...

    "ಅಪ್ಪನ ದಿನಾಚರಣೆಯ" ಸಂದರ್ಭದಲ್ಲಿ ಸಕಾಲಿಕ ಬರಹ...

    ಹಿಂದೊಮ್ಮೆ ನಾನು ಬರೆದ ಲೇಖನದಲ್ಲಿ ನಾವಿಬ್ಬರೂ ಒಂದು ಸಣ್ಣ ಚರ್ಚೆಯನ್ನೇ ಮಾಡಿಕೊಂಡಿದ್ದು ನೆನಪಾಯಿತು...
    ("ಮಿಲ್ತಿ ಹೆ.. ಜಿಂದಗಿ.. ಮೆ ಮೊಹಬ್ಬತ್ " ಎನ್ನುವ ಲೇಖನದ ಪ್ರತಿಕ್ರಿಯೆಯಲ್ಲಿ)

    ಮಾಂಸದ ...
    ಪಿಂಡದ ಮುದ್ದೆಗೆ..
    ಮುದ್ದಿನ ರೂಪ..
    ಜೀವಕೊಡುವದು..
    ತಾಯಿ..

    ಹಾಗಾಗಿ ತನ್ನದೆನ್ನುವ ಭಾವ ಅವಳಿಗೆ..

    ಅಪ್ಪ ಏನಿದ್ದರೂ...
    ನಂಬಿಕೆ....
    ತಾಯಿ ಸತ್ಯ...

    ಬದುಕಿನ ಆರ್ಥಿಕ ಜವಾಬ್ದಾರಿಯಲ್ಲಿ ಅಪ್ಪ ಮುಳುಗಿರುವಾಗ..
    ಮಗುವಿಗೆ ಬೇಕಾದ ಪ್ರೀತಿ..ಮಮತೆ ಕೊಡುವದು ಅಮ್ಮ..

    ನೀವೆನ್ನುವ ಹಾಗೆ..
    ಈಗ ಕಾಲ ಬದಲಾಗುತ್ತಿದೆ..

    ಉತ್ತಮ ಬರಹಕ್ಕೆ ಅಭಿನಂದನೆಗಳು ಉದಯ್ ...

    ಚುಕ್ಕಿಚಿತ್ತಾರ ಹೇಳಿದರು...

    taaytana ennuvudu vaibhaveekaranagondilla.. annisutte..
    adakke sigabekaada sthaana sikkide...ashte..
    taaytana kannige kaanutte... tande tana avyakta..!! vyaktavaagaddanna bannisuvudu koodaa kashta..

    maguvondu roopa padedu manushyanaagalu'' taayiya madilinante tandeya hegaloo'' atyavashya

    thanks

    shivu.k ಹೇಳಿದರು...

    ಉದಯ್ ಸರ್,

    ಅಪ್ಪಂದಿರ ಬಗ್ಗೆ ಬರೆದ ಬರಹ ಚಿಂತನೆಗೆ ಹಚ್ಚುತ್ತದೆ. ನೀವು ಹೇಳಿದಂತೆ ಈಗ ಅಮ್ಮಂದಿರಿಗೆ ಹೆಚ್ಚು ಪ್ರಾಮುಖ್ಯತೆಯಿದೆ...

    AntharangadaMaathugalu ಹೇಳಿದರು...

    ಉದಯ್ ಸಾರ್...
    ಒಳ್ಳೆಯ ಲೇಖನ. ಈಗ ಕಾಲ ಬದಲಾಗಿದೆ ಸಾರ್... ಅಪ್ಪ ಅಮ್ಮ ಇಬ್ಬರಿಗೂ ಸಮಾನ ಸ್ಥಾನವಿದೆ. ಅಮ್ಮ ಭಾವನಾತ್ಮಕವಾಗಿ ಮಗುವಿಗೆ ಹೆಚ್ಚು ಹತ್ತಿರವಾಗುವುದು, ಗರ್ಭದಲ್ಲಿ ಬೆಳೆಸಿ, ಜನ್ಮ ಕೊಡುವ ಅವಕಾಶವಿರುವುದರಿಂದ. ಯಾವುದೋ ಕಥೆಯಲ್ಲಿ ಶಾಸ್ತ್ರ ಉಲ್ಲೇಖ ಮಾಡಿ ಹೇಳಿದ್ದನ್ನು ಓದಿದೆ... ಹೆಣ್ಣಿಗೆ ೭ನೇ ತಿಂಗಳಲ್ಲಿ ಮಾಡುವ ಶಾಸ್ತ್ರವನ್ನು "ಸೀಮಂತೋನ್ನಯನ" ಎಂದರೆ ಬೈತಲೆಯನ್ನು ಅರ್ಧ ಭಾಗವಾಗಿ ವಿಂಗಡಿಸುವುದು ಎಂದರ್ಥ. ಆದಿನ ಮಾತೃಪೂಜೆ, ನಾಂದೀ ಮಾಡಿ ಪ್ರಜಾಪತಿಗೆ ಮಂತ್ರಪೂರ್ವಕವಾಗಿ ಹವಿಸ್ಸು ನೀಡುವ ತನಕ ಗರ್ಭದಲ್ಲಿನ ಮಗುವಿನ ಮೇಲೆ ತಂದೆಗೆ ಅಧಿಕಾರವಿಲ್ಲವೆಂದೂ, ಇದಾದ ನಂತರ ಮಗು ತಂದೆಯ ವಂಶಸ್ಥನಾಗುತ್ತಾನೆಂದೂ.... ಆದರೆ ಈಗಿನ ಪರಿಸ್ಥಿತಿ ತುಂಬಾ ವಿಭಿನ್ನ. ತಂದೆ-ತಾಯಿ ಇಬ್ಬರೂ ಸಮಾನರು ಎಂಬುದು ಎಲ್ಲರೂ ಒಪ್ಪಿಕೊಂಡ ವಿಚಾರ. ಪ್ರಕೃತಿ ಸಹಜವಾದ ನವಿರು ಭಾವನೆಗಳು ಮಗುವಿಗೆ ಅಪ್ಪನಿಗಿಂತ ಅಮ್ಮನ ಹತ್ತಿರ ಸದರ ಮತ್ತು ಸಲಿಗೆ ಹೆಚ್ಚುವಂತೆ ಮಾಡುತ್ತದೇ ಹೊರತು... ಬೇರೇನೂ ವ್ಯತ್ಯಾಸ ನಂಗಂತೂ ಕಾಣಲಿಲ್ಲ.......