Demo image Demo image Demo image Demo image Demo image Demo image Demo image Demo image

ಕನಸು ನನಸುಗಳ ನಡುವಿನ ನೆನಪು ಭಾಗ-2

  • ಶುಕ್ರವಾರ, ಜನವರಿ 07, 2011
  • ಬಿಸಿಲ ಹನಿ
  • ನಾನು S.S.L.C. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ತೆಗೆದುಕೊಂಡು ಪಾಸಾಗಿದ್ದರಿಂದ ಧಾರವಾಡದಲ್ಲಿ ಆಗಲೇ ವಕೀಲ ವೃತ್ತಿಯನ್ನು ಮಾಡುತ್ತಿದ್ದ ನನ್ನ ಚಿಕ್ಕಪ್ಪ (ಜಗದೀಶ್ ಇಟಗಿ) ಇನ್ನುಮುಂದೆ ನಾನು ಓದಿಸುತ್ತೇನೆಂದು ಕರೆದುಕೊಂಡು ಬಂದನು. ನನಗೆ ಹೆಚ್ಚು ಅಂಕಗಳು ಬಂದಿದ್ದರಿಂದ ಸಹಜವಾಗಿ ಎಲ್ಲರ ಮನೆಯಲ್ಲೂ ಹೇಳುವಂತೆ ನಮ್ಮ ಮನೆಯಲ್ಲೂ ಸಾಯಿನ್ಸ್ ತೆಗೆದುಕೊಳ್ಳಲು ಹೇಳಿದರು. ನನಗೆ ಮೊದಲಿನಿಂದಲೂ ಕಥೆ ಕಾದಂಬರಿಗಳ ಹುಚ್ಚು ಇದ್ದುದರಿಂದ “ನಾನು ಆರ್ಟ್ಸ್ ತಗೋತಿನಿ. ನನಗೆ ಸಾಯಿನ್ಸ್ ಅಂದ್ರ ಅಷ್ಟಕ್ಕಷ್ಟ. ದಯವಿಟ್ಟು ಆರ್ಟ್ಸ್ ತಗೊಳ್ಳೋಕೆ ಬಿಡ್ರಿ” ಎಂದು ಗೋಗರೆದರೂ ನಮ್ಮ ಮನೆಯವರು “ಆರ್ಟ್ಸ್ ತಗೊಂಡು ಏನ್ಮಾಡ್ತಿ? ಮಣ್ಣು ತಿಂತಿಯಾ? ಸುಮ್ಕ ಸಾಯಿನ್ಸ್ ತಗೊಂಡು ಉದ್ದಾರ ಆಗು” ಎಂದು ಹೇಳಿದರು. ಅದರ ಹಿಂದೆ ಅವರ ಕಾಳಜಿಯಿತ್ತಾದರೂ ಆ ಕಾಳಜಿ ನನಗೆ ಹಿಂಸೆ ಎನಿಸಿದ್ದಂತೂ ಸತ್ಯ.

    ನನಗೋ ಅತ್ತ ಖಡಾಖಂಡಿತವಾಗಿ ಬೇಡ ಎಂದು ಹೇಳಲಾಗದೆ ಇತ್ತ ಒಪ್ಪಿಕೊಳ್ಳಲಾಗದ ಸಂದಿಗ್ಧತೆ ಹುಟ್ಟಿತು. ಒಟ್ಟಿನಲ್ಲಿ ನನಗೆ ಆ ಸಂದಿಗ್ಧತೆಯಿಂದ ಹೇಗಾದರು ಪಾರಾದರೆ ಸಾಕೆಂದು “ನನಗ ಫಿಜಿಕ್ಸ್, ಕೆಮಿಸ್ಟ್ರಿ ಅಂದ್ರ ಆಗಲ್ಲ. ನಾನು ಅರ್ಟ್ಸೇ ತಗೊಳ್ಳತೀನಿ” ಎಂದು ಬಚಾವಾಗಲು ನೋಡಿದೆ. ಆದರೆ ಅದಾಗಲೇ ಸಾಯಿನ್ಸ್ ತಗೊಂಡು ವೆಟರ್ನರಿ ಡಾಕ್ಟರ್ ಆಗಿದ್ದ ನನ್ನ ದೊಡ್ಡಪ್ಪನ ಮಗ “ನಿನಗೆ ಮ್ಯಾಥ್ಸ್ ನಲ್ಲಿ ಒಳ್ಳೆ ಮಾರ್ಕ್ಸ್ ಬಂದಿದೆ. ಮ್ಯಾಥ್ಸ್ ಬಂದ್ರ ಫಿಜಿಕ್ಸ್, ಕೆಮಿಸ್ಟ್ರಿ ಬಂದಂಗ” ಎಂದು ಅದ್ಯಾವ ತರ್ಕದ ಮೇಲೆ ಈ ಐಡಿಯಾ ಕೊಟ್ಟನೋ ಅಂತೂ ನಾನೂ ಕನ್ವಿನ್ಸ್ ಆಗಿ ಅವರಿಚ್ಛೆಯಂತೆ ನಡೆದುಕೊಂಡಿದ್ದಾಯಿತು. ಮೇಲಾಗಿ ನನಗೆ ಗಣಿತ ಅಚ್ಚುಮೆಚ್ಚಿನ ವಿಷಯವಾಗಿತ್ತು ಹಾಗೂ ನಾನು ಅತ್ಯಂತ ಪ್ರೀತಿಯಿಂದ, ಶ್ರದ್ಧೆಯಿಂದ ಲೆಕ್ಕಗಳನ್ನು ಅಚ್ಚುಕಟ್ಟಾಗಿ ಬಿಡಿಸುತ್ತಿದ್ದೆ. ಈಗಲೂ ಅಷ್ಟೆ ನನಗೆ ಗಣಿತವೆಂದರೆ ಪಂಚಪ್ರಾಣ! ಹೇಗೂ ಗಣಿತವಿರುತ್ತದಲ್ಲ? ಅದರ ಜೊತೆ ಇನ್ನುಳಿದಿದ್ದನ್ನು ಕಷ್ಟಪಟ್ಟು ಓದಿ ಪಾಸ್ ಮಾಡಿದರಾಯಿತು ಎಂದುಕೊಂಡು ಒಂದುತರದ ಹುಂಬತನದ ಮೇಲೆ ಸಾಯಿನ್ಸ್ ತಗೊಂಡಾಯ್ತು.

    ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ನಾನು ಅಟೆಂಡ್ ಮಾಡುತ್ತಿದ್ದುದು ಬರಿ ಮೂರೇ ಮೂರು ಕ್ಲಾಸು; ಕನ್ನಡ,ಇಂಗ್ಲೀಷ್ ಮತ್ತು ಗಣಿತ. ಉಳಿದವುಗಳನ್ನು ಬಲವಂತವಾಗಿ ಕಷ್ಟಪಟ್ಟು ಕೇಳಿಸಿಕೊಂಡರೂ ತಲೆಗೆ ಹೋಗದು. ಇಷ್ಟವೇ ಇಲ್ಲದ ಮೇಲೆ ಹೇಗೆ ತಾನೆ ತಲೆಗೆ ಹೋದೀತು? ನನ್ನ ಕಾಲೇಜಿನ ಅವಧಿಯನ್ನು ಬಹಳಷ್ಟು ಸಾರಿ ಕಾಲೇಜು ಲೈಬ್ರರಿಯಲ್ಲೋ ಇಲ್ಲ ವಿದ್ಯಾವರ್ಧಕ ಸಂಘದ ಲೈಬ್ರರಿಯಲ್ಲೋ ಕಳೆಯುತ್ತಿದ್ದೆ. ಪರಿಣಾಮ, ದ್ವಿತಿಯ ಪಿ.ಯು.ಸಿ.ಯಲ್ಲಿ ಫಿಜಿಕ್ಸ್ ಮತ್ತು ಕೆಮಿಸ್ಟ್ರಿ ವಿಷಯಗಳಲ್ಲಿ ಗೋತಾ ಹೊಡೆದೆ. ಇದರಿಂದ ನನ್ನ ಮೇಲೆ ಅಗಾಧ ನಿರೀಕ್ಷೆ ಇಟ್ಟುಕೊಂಡವರಿಗೆ ಬಲವಾದ ಪೆಟ್ಟುಬಿತ್ತು. ನಾನು ಫೇಲಾಗಿದ್ದು ಕೇಳಿ ನಮ್ಮ ಮನೆಯವರೆಲ್ಲರೂ ತುಚ್ಛವಾಗಿ ಕಂಡರು. ನನಗೆ ಆಶ್ರಯ ಕೊಟ್ಟಿದ್ದ ಚಿಕ್ಕಪ್ಪ “ನೀನು ಚನ್ನಾಗಿ ಓದುತ್ತೀಯೆಂದು ಕರೆದುಕೊಂಡುಬಂದೆ. ಇನ್ನು ನಿಂದು ನೀ ನೋಡ್ಕೋ” ಎಂದು ಹೇಳಿ ಕೈ ತೊಳೆದುಕೊಂಡರು.
    ಸರಿ, ಮುಂದೆ ಏನು ಮಾಡುವದು? ಎಲ್ಲಿಗೆ ಹೋಗುವದು? ಇನ್ಮುಂದೆ ನನ್ನ ಜವಾಬ್ದಾರಿ ತೆಗೆದುಕೊಳ್ಳೋರು ಯಾರು? ನನ್ನೂರಿಗೆ ಹೋಗುವದೆ? ಮೊದಲಿನಿಂದಲೂ ನನ್ನೂರಿನಲ್ಲಿ ಇದ್ದು ಅಭ್ಯಾಸವಿಲ್ಲದ್ದರಿಂದ ಅಲ್ಲಿಗೆ ಹೋಗಿ ಮಾಡುವದಾದರು ಏನನ್ನು? ಯಾರ ಹತ್ತಿರ ಇರಬೇಕು? ಹೀಗೆ ಹತ್ತಾರು ಪ್ರಶ್ನೆಗಳು ನನ್ನ ಕಾಡತೊಡಗಿದವು. ಬಣ್ಣಬಣ್ಣದ ಕನಸು ಕಾಣಬೇಕಾದ ಹದಿಹರೆಯದಲ್ಲಿ ಇನ್ನು ಮುಂದೆ ಹೇಗೆ ಬದುಕಬೇಕು ಎನ್ನುವದರ ಕುರಿತು ಸುದೀರ್ಘವಾಗಿ ಆಲೋಚಿಸುತ್ತಿದ್ದೆ. ಅಲ್ಲಿಂದ ನನ್ನ ಬದುಕು ಹಳಿ ತಪ್ಪುತ್ತಲೇ ಹೋಯಿತು.

    ಮುಂದೆ ಒಂದೆರೆಡು ತಿಂಗಳು ದೊಡ್ಡಮ್ಮನ ಊರು ಕಲಕೋಟಿ, ಹಾಗೂ ಅಕ್ಕನ ಬಳಿ ಗದುಗಿನಲ್ಲಿ ಕಳೆದೆ. ಒಂದೊಂದು ಸಾರಿ ನಾನು ಹುಟ್ಟಿ ಏನು ಪ್ರಯೋಜನ ಎಂದು ನನ್ನಷ್ಟಕ್ಕೆ ನಾನೇ ಒಬ್ಬನೇ ಕುಳಿತು ಬಿಕ್ಕುತ್ತಿದ್ದೆ. ಆ ಬಿಕ್ಕುಗಳಿಗೆ ಅಲ್ಲಿ ಆ ಕ್ಷಣದ ಸಾಂತ್ವನ ಮಾತ್ರವಿತ್ತು. ಈ ಸಮಯದಲ್ಲಾದರೂ ಅಪ್ಪನಾದವನು ಮುಂದೆ ಏನು ಮಾಡುತ್ತಿ? ಹೇಗೆ? ಏನು? ಎತ್ತ? ಎಂದು ಕೇಳುವ ವ್ಯವಧಾನವನ್ನು ಒಂಚೂರು ತೋರಲಿಲ್ಲ. ಮುಂಚಿನಿಂದಲೂ ಆತನ ಬಗ್ಗೆ ಗೊತ್ತಿದ್ದರಿಂದ ನಾನು ಕೂಡ ಆತನನ್ನು ‘ಮುಂದೆ ಹೇಗೆ?’ ಎಂದು ಕೇಳುವ ಗೊಡವೆಗೆ ಹೋಗಲಿಲ್ಲ. ಆದರೆ ನನ್ನ ಸಿಟ್ಟು, ಆಕ್ರೋಶಗಳು ಒಳಗೊಳಗೆ ಭುಸಗುಟ್ಟುತ್ತಲೇ ಇದ್ದವು.
    ಹೀಗಿರುವಾಗ ನನ್ನ ಸೋದರ ಮಾವ ಲಕ್ಷ್ಮೇಶ್ವರದ ದವಾಖಾನೆಯೊಂದರಲ್ಲಿ ಕೌಂಪೊಂಡರ್ ಕೆಲಸ ಹುಡುಕಿ ಅಲ್ಲಿಗೆ ನನ್ನ ಸೇರಿಸಿದರು. ಅದು ಅವರೂರು ಸುಲ್ತಾನಪೂರಕ್ಕೆ ಹತ್ತು ಕಿಲೊಮೀಟರ್ ದೂರದಲ್ಲಿತ್ತು. ನನ್ನ ಮಾವ ದಿನಾ ಬಸ್ಸಿಗೆ ಇಲ್ಲಿಂದಾನೆ ಓಡಾಡು ಎಂದರು. ಆ ಪ್ರಕಾರ ದಿನಾ ಬೆಳಿಗ್ಗೆ ಬುತ್ತಿಕಟ್ಟಿಕೊಂಡು ಎಂಟು ಗಂಟಗೆ ಹೋಗಿ ರಾತ್ರಿ ಎಂಟರ ಬಸ್ಸಿಗೆ ಇಲ್ಲವಾದರೆ ಒಮ್ಮೊಮ್ಮೆ ಹತ್ತರ ಬಸ್ಸಿಗೆ ವಾಪಾಸಾಗುತ್ತಿದ್ದೆ. ಅದು ನಾನು ಜೀವನದಲ್ಲಿ ಮೊಟ್ಟಮೊದಲಬಾರಿಗೆ ಹಿಡಿದ ಕೆಲಸವಾಗಿತ್ತು. ಆ ದವಾಖಾನೆ ಇಡಿ ಲಕ್ಷ್ಮೇಶ್ವರದಲ್ಲಿಯೇ ಪ್ರಸಿದ್ದಿ ಪಡೆದ ದವಾಖಾನೆಯಾಗಿತ್ತು. ಅಲ್ಲಿ ನನ್ನ ಜೊತೆ ಇನ್ನೊಬ್ಬ ಕೌಂಪೊಂಡರ ಈಗಾಗಲೇ ತುಂಬಾ ವರ್ಷದಿಂದ ಕೆಲಸ ಮಾಡುತ್ತಿದ್ದ. ಅವನಿಂದ ಡ್ರೆಸ್ಸಿಂಗ್ ಮಾಡುವದು, ಆಪರೇಶನ್ ಥೇಟರ್ ರೆಡಿ ಮಾಡುವದು, ಡಾಕ್ಟರ್ ಗಳಿಗೆ ಸಹಾಯ ಮಾಡುವದು, VRL ಮೂಲಕ ದೂರದ ಊರಿಂದ ಬರುವ ಔಷಧಿಗಳನ್ನು ಆಸ್ಪತ್ರೆಯ ಔಷಧಿ ಅಂಗಡಿಗೆ ತಂದುಹಾಕುವದು ಇವೆ ಮೊದಲಾದ ಕೆಲಸಗಳನ್ನು ಕಲಿತುಕೊಂಡೆ.

    ನಾನು ಮಾಡುವ ಕೆಲಸವನ್ನು ಅತ್ಯಂತ ಖುಶಿಯಿಂದಲೇ ಮಾಡುತ್ತಿದ್ದೆ. ನನಗೆ ಕೌಂಪೊಂಡರ್ ಕೆಲಸ ಕೀಳಾಗಿ ಕಾಣಲಿಲ್ಲ. ಇದು ಬಿಟ್ಟರೆ ಬೇರೆ ಅವಕಾಶಗಳು ಇರಲಿಲ್ಲ. ಪಿ.ಯು.ಸಿ ಫೇಲಾದವನಿಗೆ ಇದಕ್ಕಿಂತ ಬೇರೆ ಯಾವ ಕೆಲಸ ತಾನೆ ಸಿಕ್ಕೀತು? ಮೇಲಾಗಿ ಈ ಕೆಲಸ ಇಲ್ಲದಿದ್ದರೆ ಬೇರೆ ಎಲ್ಲ ರೀತಿಯಿಂದಲೂ ನಾನು ಇನ್ನೊಬ್ಬರ ಮೇಲೆ ಅವಲಂಬನೆಯಾಗಬೇಕಿತ್ತು. ಅದು ನನಗೆ ಇಷ್ಟವಿರಲಿಲ್ಲ. ಏನಾದರಾಗಲಿ ಸ್ವತಂತ್ರವಾಗಿ ಬದುಕಬೇಕು ಎಂದುಕೊಂಡು ಕೆಲಸವನ್ನು ಚನ್ನಾಗಿ ಕಲಿಯತೊಡಗಿದೆ. ಅವತ್ತು ಶುರುವಾದ ನನ್ನ ಸ್ವಾಲಂಬನೆಯ ಪ್ರಜ್ಞೆ ಮುಂದೆ ನನ್ನಲ್ಲಿ ಬಲಗೊಳ್ಳುತ್ತಲೇ ಹೋಯಿತು.

    ಮೊಟ್ಟಮೊದಲಬಾರಿಗೆ ಬದುಕನ್ನು ಕಟ್ಟಿಕೊಳ್ಳುವ ನೆಪದಲ್ಲಿ ಜಗತ್ತಿನೆದುರು ನಿಂತಿದ್ದೆ. ಅಲ್ಲಿ ಕ್ರಮೇಣ ಜಗತ್ತಿನ ಇನ್ನೊಂದು ಮುಖದ ಪರಿಚಯವಾಗತೊಡಗಿತು. ಅಲ್ಲಿಯವರೆಗೂ ಕಥೆ, ಕಾದಂಬರಿಗಳಂತೆ ಜೀವನವಿರುತ್ತದೆ ಎಂದು ಕಲ್ಪಿಸಿಕೊಂಡಿದ್ದವನಿಗೆ ವಾಸ್ತವದ ಕಹಿಸತ್ಯಗಳು ಬೇರೊಂದು ಸತ್ಯವನ್ನು ತೆರೆದಿಟ್ಟಿದ್ದವು. ಮೊಟ್ಟಮೊದಲಬಾರಿಗೆ ಕಲ್ಪನೆಗೂ ವಾಸ್ತವಕ್ಕೂ ಇರುವ ಅಂತರ ತಿಳಿದಿತ್ತು. ನನ್ನಿಂದ ನಾನು ಆಚೆ ನಿಂತು ಜಗತ್ತು ನೋಡಿದ್ದೆ. ಹುಚ್ಚಿಗೆ ಬಿದ್ದು ಕಥೆ, ಕಾದಂಬರಿಗಳನ್ನು ಓದಿ ಖುಶಿಪಡುತ್ತಿದ್ದವನಿಗೆ ವಾಸ್ತವದ ಬದುಕು ಭ್ರಮೆನಿರಸನಗೊಳಿಸಿತ್ತು. “ಕಥೆ, ಕಾದಂಬರಿಯಂತೆ ಜೀವನ ಇರೋದಿಲ್ಲಾ. ಅವನ್ನೋದಿ ಹಾಳಾಗಬೇಡ” ಎಂದು ನಮ್ಮ ಮನೆಯಲ್ಲಿ ದೊಡ್ಡವರು ಆಗಾಗ್ಗೆ ಹೇಳುತ್ತಿದ್ದುದು ಸ್ವಂತ ಅನುಭವಕ್ಕೆ ಬಂದಿತ್ತು. ದವಾಖಾನೆಯಲ್ಲಿ ಕಣ್ಣೆದುರಿಗೆ ನಡೆಯುವ ಮೋಸ, ವಂಚನೆ, ಸುಲಿಗೆಗಳನ್ನು ನೋಡಿ ಅಸಹಾಯಕನಾಗಿದ್ದೆ. ಮನಸ್ಸು ಆದರ್ಶ ಮತ್ತು ವಾಸ್ತವಗಳ ನಡುವೆ ತೂಗುತ್ತಿತ್ತು. ಇಂಥ ಕಡೆ ನಾನು ಕೆಲಸ ಮಾಡಬೇಕೆ? ಎಂಬ ಸಂದಿಗ್ಧತೆಯೂ ಆಗಾಗ ಎದುರಾಗುತ್ತಿತ್ತು. ಆದರೆ ಬೇರೆ ದಾರಿಯೇ ಇರಲಿಲ್ಲ! ಮೆಲ್ಲನೆ ಆದರ್ಶಗಳಿಗಿಂತ ಬದುಕು ದೊಡ್ಡದು ಎನಿಸತೊಡಗಿತು. ವಿಚಿತ್ರವೆಂದರೆ ಸಾಹಿತ್ಯ ಮತ್ತು ವಾಸ್ತವಬದುಕಿನ ನಡುವಿನ ಅಂತರ ತಿಳಿದ ಮೇಲೂ ನಾನು ಸಾಹಿತ್ಯ ಓದುವದನ್ನು ಕೈ ಬಿಡಲಿಲ್ಲ. ಅದು ಕೂಡ ಅಷ್ಟೆ; ನನ್ನನ್ನು ಯಾವತ್ತೂ ಕೈ ಬಿಡಲಿಲ್ಲ. ನಾನು ಸೋತಾಗ, ಹತಾಶಗೊಳಗಾದಾಗ, ಅವಮಾನಕ್ಕೀಡಾದಾಗ, ನೋವನ್ನುಂಡಾಗ..... ಹೀಗೆ ಬದುಕಿನ ಬೇರೆ ಬೇರೆ ಸಂದರ್ಭಗಳಲ್ಲಿ ನನ್ನ ಜೊತೆಗಿದ್ದುಕೊಂಡೇ ನನಗೊಂದಿಷ್ಟು ಸಮಾಧಾನ ಹೇಳಿದೆ.

    ಈ ಎಲ್ಲದರ ಮಧ್ಯ ಒಂದಿಷ್ಟು ಕನಸುಗಳು ಚಿಗುರತೊಡಗಿದ್ದವು. ಅವು ಕೌಂಪೊಂಡರ್ ಆಗುವ ಕನಸುಗಳು. ಅವನ್ನು ನನ್ನ ಕೆಲಸ ಹುಟ್ಟುಹಾಕಿದ್ದೋ ಇಲ್ಲ ಬೇರೆಯವರು ನನ್ನ ಕೌಂಪೊಂಡರ್ ಕೆಲಸ ನೋಡಿ ಅವನ್ನು ಮನದಲ್ಲಿ ಬಿತ್ತಿ ಬೆಳೆದರೋ ಗೊತ್ತಿಲ್ಲ. ಅಂತೂ ಕೌಂಪೊಂಡರ್ ಆಗುವ ಕನಸು ಕಾಣತೊಡಗಿದೆ. ಆಗ ನಮ್ಮ ಮನೆಯವರು “ಕೌಂಪೊಂಡರ್ ಆಗಿ ಒಳ್ಳೆ ಕೆಲಸ ಮಾಡಿದೆ. ಹಾಗೆ ಮುಂದುವರಿ. ನಿನಗೆ ಒಳ್ಳೆ ಭವಿಷ್ಯವಿದೆ. ಕೌಂಪೊಂಡರ್ ಆಗಿ ಕೆಲಸ ಕಲಿತ ಮೇಲೆ ನಾಲ್ಕಾರು ಹಳ್ಳಿ ಸುತ್ತಿ ಪೇಶೆಂಟ್ಸ್ ನೋಡಿ ಬಂದ್ರ ಒಳ್ಳೆ ದುಡ್ದು ಮಾಡಬಹುದು.” ಎಂದೆಲ್ಲಾ ಪ್ರೋತ್ಸಾಹಿಸುವಾಗ ನಾನು ಕೌಂಪೊಂಡರ್ ಆಗಿ ಕಾಸು ಎಣಿಸೋ ಕನಸು ಕಂಡಿದ್ದೇನೆ. ಆದರೆ ಆ ಕನಸು ಒಂದು ತಿಂಗಳು ಮುಗಿಯುವಷ್ಟೊತ್ತಿಗೆ ಮುರುಟಿಬಿತ್ತು. ಏಕೆಂದರೆ ಅಲ್ಲಿ ಕೆಲಸಕ್ಕೆ ಸೇರುವ ಮುನ್ನ ನನ್ನ ಸಂಬಳ ಇಷ್ಟಿಷ್ಟೇ ಅಂತ ನಿಗದಿಯಾಗಿರಲಿಲ್ಲ. ಕರುಣೆ ಆಧಾರದ ಮೇಲೆ ಕೆಲಸ ಕೊಡುವವರನ್ನು ಇಷ್ಟಿಷ್ಟೇ ಕೊಡಿ ಅಂತ ಕರಾರುವಕ್ಕಾಗಿ ಹೇಗೆ ಕೇಳೋದು? ತಿಂಗಳ ಕೊನೆಯಲ್ಲಿ ಆ ಡಾಕ್ಟರು ಕೊಟ್ಟಿದ್ದು ಬರೀ 200 ರೂಪಾಯಿ. ಆ ಸಂಬಳ ನಾನು ದಿನಾಲೂ ಹೋಗಿ ಬರುವ ಬಸ್ ಚಾರ್ಜಿಗೂ ಸಾಕಾಗುತ್ತಿರಲಿಲ್ಲವಾದ್ದರಿಂದ ಆ ಕೆಲಸಕ್ಕೆ ಎಳ್ಳು ನೀರು ಬಿಡಬೇಕಾಯಿತು. ಅಲ್ಲಿಂದ ನನ್ನ ಬದುಕು ಮತ್ತಷ್ಟು ಮೂರಾಬಟ್ಟೆಯಾಗುತ್ತಾ ಹೋಯಿತು.

    4 ಕಾಮೆಂಟ್‌(ಗಳು):

    sunaath ಹೇಳಿದರು...

    ವಿದ್ಯಾಲಯದಲ್ಲಿ ಕಲಿಯುವದಕ್ಕಿಂತ ಬದುಕಿನಲ್ಲಿ ಕಲಿಯುವದೇ ಹೆಚ್ಚಿನದು ಎನ್ನುವದನ್ನು ನಿಮ್ಮ ಲೇಖನ ಚೆನ್ನಾಗಿ ಎತ್ತಿ ತೋರಿಸುತ್ತದೆ.

    ಶಿವಕುಮಾರ್ ಮಾವಲಿ.. ಹೇಳಿದರು...

    Common sir continue please ....

    shivu.k ಹೇಳಿದರು...

    ಸರ್,

    ನಿಮಗಿಷ್ಟವಿಲ್ಲದ ಕಾಂಪೌಂಡರ್ ಕೆಲಸ, ಇಷ್ಟಪಡದ ಓದಿನ ವಿಚಾರಗಳು, ಫೇಲ್, ಇತ್ಯಾದಿಗಳನ್ನು ಓದುತ್ತಾ...ಮುಂದೇನು ಅಂತ ಕುತೂಹಲದಿಂದ ಕಾಯುತ್ತಿದ್ದೇನೆ. ಬದುಕು ಎಷ್ಟು ಕುತೂಹಲವಲ್ವಾ ಸರ್..

    prabhamani nagaraja ಹೇಳಿದರು...

    ಬದುಕನ್ನು ಸ್ವಪ್ರಯತ್ನದಲ್ಲಿ ಕಟ್ಟಿಕೊಳ್ಳುವ ತವಕದ ನಿಮ್ಮ ಸ್ವಾನುಭವ ಲೇಖನ ಕುತೂಹಲಕರವಾಗಿದೆ.ನಿಮಗೆ `ಮಕರ ಸಂಕ್ರಮಣದ ಶುಭಾಶಯಗಳು.' ನನ್ನ ಬ್ಲಾಗ್ ಗೊಮ್ಮೆ ಬನ್ನಿ