ನಾವಿಬ್ಬರೂ ಚನ್ನಾಗಿಯೇ ಇರುತ್ತಿದ್ದೆವು; ಕಿಲಕಿಲ ನಗುತ್ತಾ, ರೇಗಿಸುತ್ತಾ, ತಮಾಷೆ ಮಾಡುತ್ತಾ ಜಗತ್ತಿನಲ್ಲಿ ನಾವಿಬ್ಬರೇ ಪ್ರೀತಿಸುತ್ತಿರುವಂತೆ ಒಬ್ಬರಿಗೊಬ್ಬರು ಸದಾ ಅಂಟಿಕೊಂಡೇ ಇರುತ್ತಿದ್ದೆವು. ಆದರೆ ಒಮ್ಮೊಮ್ಮೆ ಶರಂಪರ ಜಗಳಾಡಿ, ಕಿತ್ತಾಡಿಕೊಂಡು, ಮಾತುಬಿಟ್ಟು, ಮೌನವೃತ ಹಿಡಿದು ನಾನೊಂದು ದಿಕ್ಕು ನೀನೊಂದು ದಿಕ್ಕಾಗಿ ಕುಳಿತು ಬಿಡುತ್ತಿದ್ದೆವು. ಅಲ್ಲಿ ನೀನಿರುತ್ತಿದ್ದೆ, ನಾನಿರುತ್ತಿದ್ದೆ. ಅದರೂ ನಾವಿಲ್ಲವಾಗಿರುತ್ತಿದ್ದೆವು. ಅದೇನೋ ಗೊತ್ತಿಲ್ಲ ಒಮ್ಮೊಮ್ಮೆ ಇದ್ದಕ್ಕಿಂದ್ದಂತೆ ಈ ಜಗಳ ಇಬ್ಬರ ಮಧ್ಯ ಧುತ್ತೆಂದು ವಕ್ಕರಿಸಿಬಿಡುತ್ತಿತ್ತು. ಅಸಲಿಗೆ ಅದಕ್ಕೊಂದು ಕಾರಣಾಂತ ಇರುತ್ತಿರಲಿಲ್ಲ. ಒಂದೊಂದು ಸಲ ತಮಾಷೆಯೇ ಜಗಳಕ್ಕೆ ತಿರುಗಿಬಿಡೋದು. ಆಗೆಲ್ಲಾ ಒಬ್ಬರೊನ್ನೊಬ್ಬರು ಆಪಾದಿಸುತ್ತಾ, ಟೀಕಿಸುತ್ತಾ, ಶಪಿಸುತ್ತಾ, ಸಣ್ಣ ಸಣ್ಣ ತಪ್ಪುಗಳನ್ನು ದೊಡ್ಡದಾಗಿಸುತ್ತಾ ಇಬ್ಬರೂ ಒಬ್ಬರೊನ್ನೊಬ್ಬರು ಇನ್ನಿಲ್ಲದಂತೆ ದ್ವೇಷಿಸುತ್ತಿದ್ದೆವು. ಈ ದ್ವೇಷದಲ್ಲಿ ನಗು, ಮಾತು, ಎಲ್ಲವೂ ಮರೆತು ಹೋಗುತ್ತಿತ್ತು. ಸದಾ ಜೇನಹನಿಗಳಂತೆ ಸುರಿಯುತ್ತಿದ್ದ ನಮ್ಮ ಮಾತುಗಳು ವಿಷದ ಮುಳ್ಳುಗಳಾಗಿ ಚುಚ್ಚುತ್ತಿದ್ದವು. ಗಂಡ ಹೆಂಡಿರ ಜಗಳ ಹಾಸಿಗೆಯಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಆದರೆ ನಮ್ಮದು ಹಾಸಿಗೆಯಲ್ಲೂ ಭುಸುಗುಟ್ಟಿ ನಾನೊಂದು ಮಗ್ಗಲು, ನೀನೊಂದು ಮಗ್ಗಲಾಗಿ ಮಲಗುತ್ತಿದ್ದೆವು. ಈ ಜಗಳದಲ್ಲಿ ನಾವಿಬ್ಬರೂ ಎಷ್ಟು ಅಸಹ್ಯವಾಗಿ ವರ್ತಿಸುತ್ತಿದ್ದೆವೆಂದರೆ ನಾವು ಸುಸಂಸ್ಕೃತರು, ವಿದ್ಯಾವಂತರು ಎಂಬುದನ್ನು ಕೂಡ ಮರೆತು ಬಿಡುತ್ತಿದ್ದೆವು. ಸಭ್ಯತೆ, ನಾಗರಿಕತೆಯ ಮುಸುಕು ಹೊದ್ದ ನಮ್ಮಿಬ್ಬರೊಳಗೆ ಅದೆಂಥ ಅಸಹ್ಯದ ಭಾವಗಳಿರುತ್ತಿದ್ದವು!
ಜಗಳದಲ್ಲಿ ವಾಗ್ವುದ್ಧ ಭರ್ಜರಿಯಾಗಿ ನಡೆಯುತ್ತಿತ್ತು. ಮಾತೆಲ್ಲ ಮುಗಿದ ಮೇಲೆ ಮತ್ತೆ ಒಂದಷ್ಟು ದಿವಸ ಮೌನ ಯುದ್ಧ ನಡೆಯುತ್ತಿತ್ತು. ಅದು ಮಾತಿನ ಯುದ್ಧಕ್ಕಿಂತ ಇನ್ನೂ ಭಯಂಕರವಾಗಿರುತ್ತಿತ್ತು. ಅದೂ ಮುಗಿದು ಇನ್ನೇನು ಮತ್ತೆ ಇಬ್ಬರೂ ಒಂದಾಗಬೇಕೆನ್ನುವಷ್ಟರಲ್ಲಿ ನಮ್ಮಿಬ್ಬರ ಅಹಂ ಅಡ್ದಿ ಬರುತ್ತಿತ್ತು. ನಾನು ಮೊದಲು ಮಾತಾಡಲಿಯೆಂದು ನೀನು....... ನೀನು ಮೊದಲು ಮಾತಾಡಲಿಯೆಂದು ನಾನು.......ಹೀಗೆ ನಾವಿಬ್ಬರೂ ನಮ್ಮ ನಮ್ಮ ಅಹಮ್ಮಿನ ಕೋಟೆಯೊಳಗೆ ಬಂಧಿಯಾಗಿ ಹತ್ತಿರವಿದ್ದೂ ದೂರ ದೂರ ಉಳಿಯುತ್ತಿದ್ದೆವು. ನಮ್ಮಿಬ್ಬರ ನಡುವಿನ ಮೌನ ಮಾತಾಡುವ ಘಳಿಗೆಗಳಿಗಾಗಿ ತವಕಿಸುತ್ತಿತ್ತು. ಸರಿ, ಆ ಮೌನ ಮುರಿಯುವರಾದರೂ ಯಾರು? ನೀವು ಹುಡುಗಿಯರು ಅಷ್ಟು ಬೇಗ ಸೋಲುವದಿಲ್ಲ ಎಂದು ಗೊತ್ತಿದ್ದರಿಂದ ನಾನೇ ಮಾತಾಡಲು ಮುಂದಾಗುತ್ತಿದ್ದೆ. ಆಗೆಲ್ಲಾ ನಾನು “ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬ ಪ್ರೀತಿ, ಈಗ ಯಾಕೆ ಜ್ವಲಿಸುತಿದೆ ಏನೋ ಶಂಕೆ ಭೀತಿ?” ಎಂದು ನನ್ನಷ್ಟಕ್ಕೆ ನಾನೆ ಹಾಡಿಕೊಳ್ಳುತ್ತಾ ನಿನಗೆ ಹತ್ತಿರವಾಗಲು ನೋಡುತ್ತಿದ್ದೆ. ಆದರೆ ನೀನು ಮತ್ತೆ ಕೆಕ್ಕರಿಸಿದ ಕಣ್ಣುಗಳಿಂದ ನನ್ನ ದೂರ ತಳ್ಳುತ್ತಿದ್ದೆ. ಅಸಲಿಗೆ ನಾನು ಆ ಹಾಡನ್ನು ನಮ್ಮಿಬ್ಬರ ನಡುವಿನ ಬಿಗಿಯಾದ ವಾತಾವರಣವನ್ನು ತಿಳಿಗೊಳಿಸಲು ಹಾಡುವದಕ್ಕಿಂತ ಹೆಚ್ಚಾಗಿ ನಿನ್ನನ್ನು ಚುಚ್ಚಲು, ಛೇಡಿಸಲು ಹಾಡುತ್ತಿದ್ದೆ ಎಂದು ನೆನೆಸಿಕೊಂಡರೆ ನನಗೀಗ ನಗು ಬರುತ್ತದೆ. ಇರಲಿ. ಎಲ್ಲದಕ್ಕೂ ಒಂದು ಕೊನೆಯಂತಾ ಇರಲೇಬೇಕಲ್ಲವೆ? ಹಾಗೆಯೇ ನಮ್ಮ ಜಗಳಕ್ಕೂ ಒಂದು ಕೊನೆಯಿರುತ್ತಿತ್ತು. ದಿನಕಳೆದಂತೆ ನಮ್ಮಿಬ್ಬರ ನಡುವೆ ಕಟ್ಟಿಕೊಂಡಿದ್ದ ಚೀನಾ ಗೋಡೆ ಕರಗಿ ಮೊದಲಿನಂತಾಗಿ ಮೆಲ್ಲನೆ ನಾವಿಬ್ಬರೂ ಮತ್ತೆ ಜಮುನೆ ಗಂಗೆಯರಂತೆ ಸಂಗಮಿಸಿ ಹರಿಯುತ್ತಿದ್ದೆವು.
ನಮ್ಮಿಬ್ಬರ ಪ್ರೀತಿ ಮತ್ತೆ ಕೂಡಿಕೊಂಡು ತೋಳುಗಳು ತಬ್ಬಿಕೊಂಡ ಹೊತ್ತಿನಲ್ಲಿ ನೀನು ನನ್ನ ಕೇಳುತ್ತಿದ್ದೆ “ಯಾಕೆ ನನ್ನೊಂದಿಗೆ ಇಷ್ಟೊಂದು ಜಗಳವಾಡುತ್ತೀಯಾ? ಯಾಕೆ ನನ್ನ ಮೇಲೆ ಇಷ್ಟೊಂದು ಸಿಡಿಮಿಡಿಗುಟ್ಟುತ್ತೀಯಾ? ಯಾಕೆ ನನ್ನನ್ನು ಇಷ್ಟೊಂದು ದ್ವೇಷಿಸುತ್ತೀಯಾ? ಕಾರಣವೇನು?” ನಾನಾಗ ಮೆಲ್ಲಗೆ “ನಿನ್ನ ಪ್ರೀತಿಸುವದೇ ಈ ಎಲ್ಲ ದ್ವೇಷಕ್ಕೆ ಕಾರಣ.” ಎಂದು ಹೇಳುತ್ತಿದ್ದೆ. ನೀನು ಅರ್ಥವಾಗದೆ ನನ್ನನ್ನು ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದೆ. ನಾನು ನಿಧಾನಕ್ಕೆ ಎಲ್ಲವನ್ನೂ ಅರ್ಥಮಾಡಿಸುತ್ತಾ ಹೋಗುತ್ತಿದ್ದೆ.
ಯಾರು ಹೆಚ್ಚು ಜಗಳಾಡ್ತಾ ಇರ್ತಾರೆ ಅವರು ಹೆಚ್ಚು ಪ್ರೀತಿಸ್ತಾರೆ. ಬಹಳ ಇಷ್ಟ ಇರೋವ್ರ ಜೊತೆನೇ ಅಲ್ವ ನಮ್ಮ ಜಗಳ? ನಾನು ನಿನ್ನನ್ನು ಹೆಚ್ಚು ಪ್ರಿತಿಸುತ್ತೇನೆ. ಅದಕ್ಕೇ ನಿನ್ನೊಂದಿಗೆ ಈ ಕೋಪ, ತಾಪ, ದ್ವೇಷ ಎಲ್ಲ! ಬರೀ ನಿನ್ನೊಂದಿಗೆ ಮಾತ್ರವಲ್ಲ ನನಗೆ ಹತ್ತಿರವಾದ ಎಲ್ಲರೊಂದಿಗೂ ಇದು ಇದ್ದದ್ದೇ. ಅದೇ ಜೀವನ! ಹಾಗೆ ನೋಡಿದರೆ ಪ್ರೀತಿಯ ಇನ್ನೊಂದು ಮುಖವೇ ದ್ವೇಷ. ಪ್ರೀತಿ ಎಲ್ಲಿರುತ್ತದೋ ಅಲ್ಲಿ ದ್ವೇಷ ಇರಲೇಬೇಕು! ನಾವು ದ್ವೇಷಿಸುವದು ಪರಸ್ಪರ ಪರಿಚಯವಿರುವವರನ್ನೇ, ಅಪರಿಚಿತರನ್ನಲ್ಲ! ನಮ್ಮಿಂದ ಪ್ರೀತಿಸಲ್ಪಟ್ಟ ವ್ಯಕ್ತಿಯೇ ದ್ವೇಷಕ್ಕೆ ತುತ್ತಾಗುವದು. ನಮ್ಮ ದ್ವೇಷಕ್ಕೆ ಬಲಿಯಾಗುವವನು ಪರಿಚಿತ ವ್ಯಕ್ತಿಯೇ! ಪರಿಚಯವು ಗಾಢವಾದಾಗಲೇ ವ್ಯಕ್ತಿಯ ಬಗೆಗೆ ಸಲಿಗೆ ಹೆಚ್ಚಾಗುತ್ತದೆ. ಆ ಸಲಿಗೆ ಸ್ನೇಹಕ್ಕೆ, ಸ್ನೇಹ ಪ್ರೀತಿಗೆ ತಿರುಗುತ್ತದೆ. ಆ ಪ್ರೀತಿ ಹೆಚ್ಚಾದಂತೆ ಅವನ ಮೇಲೆ ಅಧಿಕಾರ, ಹಕ್ಕು ಚಲಾಯಿಸಲು ನೋಡುತ್ತೇವೆ. ಆಗಲೇ ಈ ಜಗಳ ಶುರುವಾಗಿ ದ್ವೇಷಕ್ಕೆ ತಿರುಗೋದು. ಆ ದ್ವೇಷ ಜ್ವಾಲಾಗ್ನಿಯಾಗಿ ಉರಿಯೋದು. ಕಾಲ ಸರಿದಂತೆಲ್ಲಾ ಆ ಜ್ವಾಲಾಗ್ನಿ ಉರಿದು ಬೂದಿಯಾಗುತ್ತದೆ. ಕ್ರಮೆಣ ಪ್ರೀತಿಯ ಫಿನಿಕ್ಸ್ ಹಕ್ಕಿಯೊಂದು ಆ ಬೂದಿಯಿಂದಲೇ ಹುಟ್ಟಿಬರುತ್ತದೆ! ನಾವು ಮತ್ತೆ ಇನ್ನಿಲ್ಲದಂತೆ ಪ್ರೀತಿಸಲು ನೋಡುತ್ತೇವೆ.
ಬದುಕೆಂದರೆ ಇದೇ ಅಲ್ಲವೆ?
-ಉದಯ್ ಇಟಗಿ
ಚಿತ್ರಕೃಪೆ: ಅವಧಿ
2 ಕಾಮೆಂಟ್(ಗಳು):
Uday
Very Good. chennagide
Good one.. Istavaaytu...
ಕಾಮೆಂಟ್ ಪೋಸ್ಟ್ ಮಾಡಿ