Demo image Demo image Demo image Demo image Demo image Demo image Demo image Demo image

ಆಗಂತುಕ

 • ಭಾನುವಾರ, ಆಗಸ್ಟ್ 10, 2014
 • ಬಿಸಿಲ ಹನಿ

 • ನಿಮಗೆ ನಿರ್ಧಿಷ್ಟ ಯೋಜನೆಗಳಿಲ್ಲ. ನೀವು ಗೊತ್ತುಗುರಿಯಿಲ್ಲದೆ ಮನೆಯಿಂದ ದೂರದೆಲ್ಲೆಲ್ಲೋ ಅಂಡಲೆಯುತ್ತಿರುತ್ತೀರಿ. ನಿಮ್ಮ ಬಳಿ ಹಣವಿಲ್ಲ. ನಿಮಗೆ ಸ್ಥಳೀಯ ಭಾಷೆ ಗೊತ್ತಿಲ್ಲ. ನೀವು ಹಿಂದಿ ಮತ್ತು ಇಂಗ್ಲೀಷಿನಲ್ಲಿ ಮಾತ್ರ ಮಾತನಾಡಬಲ್ಲಿರಿ. ಆದರೆ ಅಲ್ಲಿನ ಜನಕ್ಕೆ ಈ ಭಾಷೆಗಳ್ಯಾವವು ಅರ್ಥವಾಗಲಾರವು. ಇಂಥ ಪರಿಸ್ಥಿತಿಲಿ ನೀವು ಖಂಡಿತ ವಿಪತ್ತಿಗೆ ಸಿಲುಕುತ್ತೀರಿ ಹಾಗೂ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತೀರಿ.
  ನೀವು ಅಪಾಯದ ಸುಳಿಯಲ್ಲಿ ಸಿಲುಕಿರುತ್ತೀರಿ. ಆಗ ಅಪ್ಪಟ ಅಪರಿಚಿತನೊಬ್ಬ ಬಂದು ನಿಮ್ಮನ್ನು ಕಾಪಾಡಿದರೆ ನಿಮಗೇನನಿಸುತ್ತದೆ? ವರ್ಷಗಳುರುಳಿದರೂ ನೀವು ಆಗಿಂದಾಗ್ಗೆ ಆ ಘಟನೆಯನ್ನು ಮೆಲಕುಹಾಕುತ್ತಿರುತ್ತೀರಿ ಮತ್ತು ಆ ವ್ಯಕ್ತಿಯ ಉಪಕಾರವನ್ನು ಸ್ಮರಿಸುತ್ತಿರುತ್ತೀರಲ್ಲವೇ? 
  ಇದೀಗ ನಾನು ನನಗಾದ ಇಂಥದೇ ಅನುಭವವೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ.
  ನನಗೆ ನನ್ನನ್ನೂ ಸೇರಿಸಿ ಮನುಷ್ಯರ ಬಗ್ಗೆ ಕೆಲವು ಅಸ್ಪಷ್ಟ ಕಲ್ಪನೆಗಳಿವೆ. ನಮ್ಮ ಸುತ್ತ ಒಳ್ಳೆಯವರಿದ್ದಾರೆ. ಕೆಟ್ಟವರಿದ್ದಾರೆ. ಕಳ್ಳರಿದ್ದಾರೆ. ಸುಳ್ಳರಿದ್ದಾರೆ. ಮಳ್ಳರಿದ್ದಾರೆ. ರೋಗಿಷ್ಟರಿದ್ದಾರೆ. ಇವರೆಲ್ಲರ ನಡುವೆ ನಾವು ಹುಶಾರಾಗಿ ಬದುಕಬೇಕಿದೆ. ಏಕೆಂದರೆ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚು. ಆದರೆ ಕೆಲವು ಸಾರಿ ನಮ್ಮ ಲೆಕ್ಕಾಚಾರ ತಲೆಕೆಳಗಾಗುತ್ತದೆ. ಒಮ್ಮೊಮ್ಮೆ ನಾವು ಕೆಲವರನ್ನು ಒಳ್ಳೆಯವರೆಂದುಕೊಳ್ಳುತ್ತೇವೆ. ಆದರೆ ಅವರು ಕೆಲವು ಸಲ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಇನ್ನು ಕೆಲವೊಮ್ಮೆ ಕೆಲವರನ್ನು ಕೆಟ್ಟವರೆಂದುಕೊಂಡಿರುತ್ತೇವೆ. ಆದರೆ ಅವರು ಒಮ್ಮೊಮ್ಮೆ ಒಳ್ಳೆಯದಾಗಿ ನಡೆದುಕೊಂಡು ನಮ್ಮನ್ನು ಅಚ್ಚರಿಗೊಳಿಸುತ್ತಾರೆ. ಈ ಸತ್ಯ ನಮಗೆ ಗೊತ್ತಾಗುವದು ನಮಗೂ ಇಂಥದೊಂದು ಅನುಭವ ಆದಾಗಲೇ!
  ಇದೀಗ ನನಗಾದ ಅಂಥ ಅನುಭವವೊಂದನ್ನು ನಾನಿಲ್ಲಿ ದಾಖಲಿಸಲು ಹೊರಟಿದ್ದೇನೆ. ಬಹುಶಃ, ನಿಮಗೆ ಇದೊಂದು ಕ್ಷುಲ್ಲಕ ವಿಷಯ ಅಂತಾ ಅನಿಸಬಹುದೇನೋ!
  ಅದೊಂದು ನಗರ. ಮನೆಯಿಂದ ಸುಮಾರು ಸಾವಿರದಾ ಐದನೂರು ಮೈಲಿಗಳಷ್ಟು ದೂರವಿರುವ ಕಣಿವೆ ಪ್ರದೇಶದಲ್ಲಿನ ಊರು. ಅಲ್ಲಿನ ಜನರಿಗೆ ಕರುಣೆ ಎಂಬುದೇ ಗೊತ್ತಿರಲಿಲ್ಲ. ಅವರು ಭಯಂಕರ ಕ್ರೂರಿಗಳಾಗಿದ್ದರು. ಕೊಲೆ, ಸುಲಿಗೆ, ದರೋಡೆ ಹಾಗೂ ಪಿಕ್-ಪಾಕೇಟ್ ಮಾಡುವದು ಅವರ ದಿನನಿತ್ಯದ ಕಾಯಕವಾಗಿತ್ತು. ವೃತ್ತಿಯಿಂದ ಅವರೆಲ್ಲಾ ಸೈನಿಕರು. ಆದರೆ ಅವರಲ್ಲಿ ಕೆಲವರು ದೂರದ ಊರುಗಳಿಗೆ ಹೋಗಿ ಹಣವನ್ನು ಕೈಗಡ ಕೊಟ್ಟು ಅದರಿಂದ ಬರುವ ಬಡ್ಡಿಯ ಮೇಲೆ ಬದುಕುತ್ತಿದ್ದರು. ಇನ್ನು ಕೆಲವರು ದೊಡ್ಡ ದೊಡ್ಡ ನಗರಗಳಲ್ಲಿನ ಬ್ಯಾಂಕುಗಳಲ್ಲೋ, ಮಿಲ್ಲುಗಳಲ್ಲೋ, ಇಲ್ಲವೇ ವಾಣಿಜ್ಯ ಮಳಿಗೆಗಳಲ್ಲೋ ವಾಚ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆಲ್ಲಾ ಹಣವೊಂದೇ ಮುಖ್ಯವಾಗಿತ್ತು. ಹಣಕ್ಕೋಸ್ಕರ ಅವರು ಏನು ಬೇಕಾದರು ಮಾಡುತ್ತಿದ್ದರು; ಕೊಲೆಯನ್ನು ಸಹ.
  ನಾನು ಅದೇ ಊರಲ್ಲಿ ಕೊಳಚೆ ಪ್ರದೇಶವೊಂದರಲ್ಲಿ ಅತಿ ಸಣ್ಣದಾದ ಮತ್ತು ಶುಚಿಯಲ್ಲದ ರೂಮೊಂದರಲ್ಲಿ ವಾಸಿಸುತ್ತಿದ್ದೆ. ನಾನಲ್ಲಿ ಪ್ರತಿನಿತ್ಯ ಅಲ್ಲಿಗೆ ವಲಸೆ ಬಂದ ಆಳುಗಳಿಗೆ ಬೆಳಿಗ್ಗೆ ಒಂಬತ್ತರಿಂದ ರಾತ್ರಿ ಹನ್ನೊಂದರವರೆಗೆ ಇಂಗ್ಲೀಷನ್ನು ಹೇಳಿಕೊಡುತ್ತಿದ್ದೆ. ನಾನವರಿಗೆ ಇಂಗ್ಲೀಷಿನಲ್ಲಿ ಅವರ ವಿಳಾಸವನ್ನು ಹೇಗೆ ಬರೆಯಬೇಕೆಂಬುದನ್ನು ಹೇಳಿಕೊಡುತ್ತಿದ್ದೆ. ಅವರಿಗೆಲ್ಲಾ ತಮ್ಮ ವಿಳಾಸ ಬರೆಯುವದನ್ನು ಕಲಿಯುವದೇ ಒಂದು ದೊಡ್ಡ ವಿದ್ಯಾಭ್ಯಾಸವಾಗಿತ್ತು. ಏಕೆಂದರೆ ದೂರದ ಊರಿನಲ್ಲಿರುವ ತಮ್ಮ ಬಂಧು-ಬಳಗಕ್ಕೆ ಆಗಿಂದಾಗ್ಗೆ ಪತ್ರವನ್ನು ತಮ್ಮದೇ ಭಾಷೆಯಲ್ಲಿ ಬರೆಯುತ್ತಿದ್ದರು. ಆದರೆ ವಿಳಾಸವನ್ನು ಮಾತ್ರ ಇಂಗ್ಲೀಷಿನಲ್ಲಿ ಬರೆಯಬೇಕಾಗುತ್ತಿತ್ತು. ಹೀಗಾಗಿ ಅಂಚೆ ಕಛೇರಿಗಳಲ್ಲಿ ವಿಳಾಸಗಳನ್ನು ಇಂಗ್ಲೀಷಿನಲ್ಲಿ ಬರೆಯಲು ಜನರಿದ್ದರು. ಆದರೆ ಅವರು ಒಂದರಿಂದ ನಾಲ್ಕಾಣೆಯಷ್ಟು ಹಣವನ್ನು ತೆಗೆದುಕೊಳ್ಳುತ್ತಿದ್ದರು.
  ಹಾಗಾಗಿ ನಾನು ಅವರಿಗೆ ಸ್ವಲ್ಪ ಹಣ ಉಳಿತಾಯವಾಗಲಿ ಎಂಬ ಉದ್ದೇಶದಿಂದ ಅವರಿಗೆ ವಿಳಾಸ ಬರೆಯುವದನ್ನು ಚನ್ನಾಗಿ ಹೇಳಿಕೊಟ್ಟೆ.
  ಆ ದಿನಗಳಲ್ಲಿ ನಾನು ನನ್ನ ಬೆಳಗಿನ ಟೀ ಮತ್ತು ಮಧ್ಯಾಹ್ನದ ಊಟದ ಖರ್ಚನ್ನು ಉಳಿಸುವದಕ್ಕೋಸ್ಕರ ದಿನವಿಡಿ ಮಲಗಿ ಸಂಜೆ ನಾಲ್ಕು ಘಂಟೆಗೆ ಏಳುತ್ತಿದ್ದೆ.
  ಎಂದಿನಂತೆ ನಾನು ಒಂದು ದಿನ ಸಂಜೆ ನಾಲ್ಕು ಘಂಟೆಗೆ ಎದ್ದು, ದಿನನಿತ್ಯದ ಕರ್ಮಗಳನ್ನೆಲ್ಲಾ ಮುಗಿಸಿ ಊಟಕ್ಕಾಗಿ ಹೊರಗೆ ನಡೆದೆ. ನಾನು ಆವತ್ತು ಕೋಟು ಹಾಕಿಕೊಂಡಿದ್ದೆ ಹಾಗೂ ಆ ಕೋಟಿನ ಕಿಸೆಯಲ್ಲಿ ನನ್ನ ವ್ಯಾಲೆಟ್ ಇಟ್ಟಿದ್ದೆ. ಅದರಲ್ಲಿ ಆವತ್ತಿನ ನನ್ನ ಇಡಿ ಜೀವಮಾನದ ಸಂಪಾದನೆ ಹದಿನಾಲ್ಕು ರೂಪಾಯಿಗಳಿದ್ದವು.
  ನಾನು ತುಂಬಾ ಜನಸಂದಣಿಯಿದ್ದ ಹೋಟೆಲ್ ವೊಂದಕ್ಕೆ ಹೋದೆ. ಅಲ್ಲಿ ಚಪಾತಿ ಮತ್ತು ಮಾಂಸದ ಸಾರಿನ ಭರ್ತಿ ಊಟವನ್ನು ಮಾಡಿದೆ. ಜೊತೆಗೆ ಟೀಯನ್ನೂ ಕುಡಿದೆ. ಒಟ್ಟು ಹನ್ನೊಂದು ಆಣೆಗೆ  ಬಿಲ್ ಬಂತು.
  ಬಿಲ್ ಕೊಡಲು ನಾನು ಕೋಟಿನ ಕಿಸೆಯೊಳಗೆ ಕೈ ಹಾಕಿದೆ. ನನ್ನ ಕಿಸೆಯೊಳಗಿನ ನನ್ನ ವ್ಯಾಲೆಟ್ ಮಾಯವಾಗಿತ್ತು.  ತಕ್ಷಣ ನಾನು ಧಾರಾಳವಾಗಿ ಬೆವರಲಾರಂಭಿಸಿದೆ. ಆಗಷ್ಟೇ ತಿಂದಿದ್ದೆಲ್ಲಾ ಆ ಕ್ಷಣಕ್ಕೆ ಜೀರ್ಣವಾಗಿ ಹೋದಂತಾಯಿತು.
  ನಾನು ಹೇಳಿದೆ, “ಯಾರೋ ನನ್ನ ವ್ಯಾಲೆಟ್ ನ್ನು ಎಗರಿಸಿದ್ದಾರೆ.”
  ಅಲ್ಲಿ ತುಂಬಾ ಜನರಿದ್ದರು. ಒಮ್ಮೆಗೆ ಅವರೆಲ್ಲಾ ಬೆಚ್ಚಿಬೀಳುವಂತೆ ಹೋಟೆಲ್ ಮಾಲಿಕ ದೊಡ್ಡದಾಗಿ ಗಹಗಹಿಸಿ ನಕ್ಕ. ಆತ ನನ್ನ ಕೋಟಿನ ಲೇಪಲನ್ನು ಹಿಡಿದು ಎಳೆಯುತ್ತಾ ಕಿರುಚಿದ, “ಈ ತೆರದ ಆಟಗಳು ನನ್ನ ಮುಂದೆ ನಡೆಯುವದಿಲ್ಲ. ಸುಮ್ಮನೆ ಹಣವಿಟ್ಟು ಹೋಗು......ಇಲ್ಲಾ ಅಂದ್ರೆ ನಿನ್ನ ಕಣ್ಣು ಕೀಳುತ್ತೇನೆ.” 
  ನಾನು ನನ್ನ ಸುತ್ತಲಿನ ಜನರನ್ನು ದಯನೀಯವಾಗಿ ನೋಡಿದೆ. ಅವರುಗಳ ಮುಖದ ಮೇಲೆ ಚೂರೇ ಚೂರು ಕರುಣೆ ಎಂಬುದು ಕಾಣಿಸಲಿಲ್ಲ. ಬದಲಿಗೆ ಅವರು ಹಸಿದ ತೋಳುಗಳಂತೆ ಕಾಣಿಸಿದರು.
  ಅವನು ನನ್ನ ಕಣ್ಣುಗಳನ್ನು ಕೀಳುತ್ತೇನೆ ಎಂದು ಹೇಳಿದ ಮೇಲೆ ಖಂಡಿತ ಕೀಳುತ್ತಾನೆ.
  ನಾನು ಹೇಳಿದೆ, “ನನ್ನ ಕೋಟು ಇಲ್ಲೇ ಇರಲಿ. ನಾನು ಈಗ ಹೋಗಿ ದುಡ್ಡು ತೆಗೆದುಕೊಂಡು ಬರುತ್ತೇನೆ.”
  ಆತ ಮತ್ತೊಮ್ಮೆ ಗಹಗಹಿಸಿ ನಗುತ್ತಾ ನನ್ನ ಕೋಟನ್ನು ತೆಗೆಯಲು ಹೇಳಿದ.
  ನಾನು ನನ್ನ ಕೋಟನ್ನು ತೆಗೆದೆ.
  ಅವನು ನನ್ನ ಷರ್ಟನ್ನು ತೆಗೆಯಲು ಹೇಳಿದ.
  ನಾನು ನನ್ನ ಷರ್ಟನ್ನು ತೆಗೆದೆ.
  ಅವನು ನನ್ನ ಶೂಗಳನ್ನು ಕಳಚಿಡಲು ಹೇಳಿದ.
  ನಾನು ಕಳಚಿಟ್ಟೆ.
  ಕೊನೆಯದಾಗಿ ಅವನು ನನ್ನ ಪ್ಯಾಂಟನ್ನು ಬಿಚ್ಚಲು ಹೇಳಿದ.
  ನನಗೆ ಆ ಇಡಿ ಯೋಜನೆ ನನ್ನನ್ನು ಬೆತ್ತಲುಗೊಳಿಸಿ, ನನ್ನ ಕಂಗಳನ್ನು ಕಿತ್ತು, ಹೊರಗೆ ಕಳಿಸುವಂತೆ ಭಾಸವಾಯಿತು.
  “ಒಳಗಡೆ ಏನೂ ಇಲ್ಲ.” ನಾನು ಮುಜುಗುರದಿಂದ ಹೇಳಿದೆ.
  ಎಲ್ಲರೂ ಗೊಳ್ಳೆಂದು ನಕ್ಕರು.
  ಹೋಟೆಲ್ ಮಾಲಿಕ ಹೇಳಿದ, “ನಂಗೆ ಅನುಮಾನವಿದೆ. ಒಳಗಡೆ ಏನಾದರು ಇದ್ದಿರಲೇಬೇಕು.”
  ಸುಮಾರು ಐವತ್ತು ಜನ ಅವನ ಮಾತನ್ನೇ ಪುನರುಚ್ಛರಿಸಿದರು, “ಹೌದ್ಹೌದು,  ಒಳಗಡೆ ಏನಾದರು ಇದ್ದಿರಲೇಬೇಕು!
  ನನ್ನ ಕೈಗಳು ನನ್ನ ಪ್ಯಾಂಟನ್ನು ಬಿಚ್ಚಲು ನಿರಾಕರಿಸಿದವು. ನಾನು ನನ್ನ ಕಲ್ಪನೆಯಲ್ಲಿ ಒಬ್ಬ ಮನುಷ್ಯ ಜನಸಂದಣಿಯಲ್ಲಿ ಕಣ್ಣುಗಳನ್ನು ಕಳೆದುಕೊಂಡು ಬೆತ್ತಲಾಗಿ ನಿಂತಿದ್ದನ್ನು ಊಹಿಸಿಕೊಂಡೆ. ಓ, ದೇವರೇ ಎಂಥ ಸಂದಿಗ್ಧ ಪರಿಸ್ಥಿತಿಗೆ ದೂಡಿದೆ ನನ್ನನ್ನು! ಎಂಥ ಕಠಿಣ ಪರೀಕ್ಷೆಗೆ ಒಡ್ಡಿದೆ! ಮುಗಿದು ಹೋಗಲಿ......ಒಮ್ಮೆ ಮುಗಿದು ಹೋಗಲಿ.......ಈ ಪರೀಕ್ಷೆ ಗಿರೀಕ್ಷೆ  ಎಲ್ಲ!
  ನಾನು ನನ್ನ ಪ್ಯಾಂಟಿನ ಒಂದೊಂದೇ ಗುಂಡಿಗಳನ್ನು ಬಿಚ್ಚತೊಡಗಿದೆ. ಅಷ್ಟರಲ್ಲಿ ದನಿಯೊಂದು ಕೇಳಿಸಿತು, “ನಿಲ್ಲಿ, ನಾನು ಹಣ ಕೊಡುತ್ತೇನೆ!”
  ಎಲ್ಲರೂ ದನಿ ಬಂದ ದಿಕ್ಕಿನತ್ತ ತಿರುಗಿದರು.
  ಅಲ್ಲಿ ಆರಡಿ ಎತ್ತರದ ಗೌರವರ್ಣದ ವ್ಯಕ್ತಿಯೊಬ್ಬ ನಿಂತಿದ್ದ. ಆತ ಬಿಳಿ ಬಟ್ಟೆಗಳನ್ನು ಧರಿಸಿದ್ದು ತಲೆಗೆ ಪೇಟವನ್ನು ಸುತ್ತಿದ್ದ. ಆತನಿಗೆ ದಪ್ಪ ಮೀಸೆ ಮತ್ತು ನೀಲಿ ಕಂಗಳಿದ್ದವು.
  ಆ ಪ್ರದೇಶದಲ್ಲಿ ನೀಲಿ ಕಂಗಳು ಸಾಮಾನ್ಯವಾಗಿದ್ದವು. ಅವನು ಮುಂದೆ ಬಂದು ಹೋಟೆಲ್ ಮಾಲಿಕನನ್ನು ಕೇಳಿದ, “ಎಷ್ಟು ಅಂತಾ ಹೇಳಿದಿರಿ?”
  “ಹನ್ನೊಂದು ಆಣೆ.”
  ಆತ ಹಣವನ್ನು ಸಂದಾಯ ಮಾಡಿದ. ಆಮೇಲೆ ನನ್ನೆಡೆಗೆ ತಿರುಗಿ, “ನಿನ್ನ ಬಟ್ಟೆಗಳನ್ನು ಹಾಕಿಕೋ.” ಎಂದು ಹೇಳಿದ.
  ನಾನು ಬಟ್ಟೆಗಳನ್ನು ಹಾಕಿಕೊಂಡೆ.
  “ಬಾ,” ಅವನು ನನ್ನನ್ನು ಕರೆದ. ನಾನು ಅವನೊಂದಿಗೆ ಹೊರಟೆ. ಅವನಿಗೆ ಕೃತಜ್ಞತೆ ಸಲ್ಲಿಸಲು ನನ್ನ ಬಳಿ ಶಬ್ದಗಳಿರಲಿಲ್ಲ. ನಾನವನಿಗೆ ಹೇಳಿದೆ “ನೀನು ತುಂಬಾ ಒಳ್ಳೆಯವನು. ನಿನ್ನಷ್ಟು ಒಳ್ಳೆಯವನನ್ನು ನಾನು ಇದುವರೆಗೂ ನೋಡಿಲ್ಲ.”
  ಅವನು ನಕ್ಕ.
  “ಏನು ನಿನ್ನ ಹೆಸರು?” ಅವನು ಕೇಳಿದ. ನಾನವನಿಗೆ ನನ್ನ ಹೆಸರು ಮತ್ತು ಎಲ್ಲಿಂದ ಬಂದಿರುವೆನೆಂಬುದನ್ನು ಹೇಳಿದೆ.
  ನಾನು ಅವನ ಹೆಸರು ಕೇಳಿದೆ. ಅವನು “ನನಗೆ ಹೆಸರಿಲ್ಲ.” ಎಂದು ಹೇಳಿದ.
  “ಹಾಗಾದ್ರೆ, ನಿನ್ನ ಹೆಸರು “ಕರುಣೆ” ಇರಬೇಕು” ನಾನು ಹೇಳಿದೆ.
  ಅದನ್ನು ಕೇಳಿ ಆತ ನಗಲಿಲ್ಲ. ನಾವು ನಡೆಯುತ್ತಾ ಒಂದು ನಿರ್ಜನ ಸೇತುವೆಯ ಬಳಿ ಬಂದೆವು.
  ಅವನು ಸುತ್ತಲೂ ಒಮ್ಮೆ ನೋಡಿದ. ಅಲ್ಲಿ ಯಾರೂ ಇರಲಿಲ್ಲ. “ಇಲ್ಕೇಳು, ನೀನು ಹಿಂದಿರುಗಿ ನೋಡದೆ ಇಲ್ಲಿಂದ ಹೋಗು. ಒಂದುವೇಳೆ ಯಾರಾದರು ನೀನು ನನ್ನನ್ನು ನೋಡಿರುವಿಯಾ ಎಂದು ನಿನ್ನನ್ನು ಕೇಳಿದರೆ ಇಲ್ಲ ಎಂದು ಹೇಳು.”   
  ನನಗೆ ಅರ್ಥವಾಯಿತು.
  ಅವನು ತನ್ನ ಜೇಬುಗಳಿಂದ ಸುಮಾರು ಐದು ವ್ಯಾಲೆಟ್ ಗಳನ್ನು ಹೊರತೆಗೆದನು. ಆ ಐದರಲ್ಲಿ ನಂದೂ ಒಂದಿತ್ತು.
  “ಇವುಗಳಲ್ಲಿ ನಿಂದ್ಯಾವುದು?”
  ನಾನು ನನ್ನ ವ್ಯಾಲೆಟ್ ಕಡೆ ತೋರಿಸಿದೆ.
  “ಅದನ್ನು ತೆಗೆದು ನೋಡು.”
  ನಾನು ತೆಗೆದು ನೋಡಿದೆ. ಅದರಲ್ಲಿ ನನ್ನ ದುಡ್ಡು ಹೇಗಿತ್ತೋ ಹಾಗೆಯೇ ಇತ್ತು. ನಾನದನ್ನು ನನ್ನ ಜೇಬಿನಲ್ಲಿಟ್ಟುಕೊಂಡೆ.
  “ಹೋಗು, ದೇವರು ನಿನಗೆ ಒಳ್ಳೇದು ಮಾಡಲಿ.” ಅವನು ಹೇಳಿದ.
  “ನಿನಗೂ ಅಷ್ಟೇ, ಆ ದೇವರು ಒಳ್ಳೇದು ಮಾಡಲಿ” ನಾನು ಪುನರುಚ್ಛರಿಸಿದೆ.

  ಮೂಲ ಮಲಯಾಳಂ: ವೈಕಂ ಮೊಹಮ್ಮದ್ ಬಶೀರ್
  ಇಂಗ್ಲೀಷಿಗೆ: ವಿ. ಅಬ್ದುಲ್ಲಾ
  ಕನ್ನಡಕ್ಕೆ: ಉದಯ್ ಇಟಗಿ

   
  ಈ ಕಥೆ ಇವತ್ತಿನ (10-08-2014) ಉದಯವಾಣಿಯಲ್ಲಿ ಪ್ರಕಟವಾಗಿದೆ. ಅದರ ಲಿಂಕ್ ಇಲ್ಲಿದೆ.
  http://epaper.udayavani.com/Display.aspx?Pg=H&Edn=MN&DispDate=8/10/2014

     1 ಕಾಮೆಂಟ್‌(ಗಳು):

  sunaath ಹೇಳಿದರು...

  ವಿವಿಧ ಭಾಷೆಗಳ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ ನೀಡುತ್ತಿದ್ದೀರಿ. ಇದು ನಮಗೆ(ಕನ್ನಡಿಗರಿಗೆ) ದೊಡ್ಡದೊಂದು ಉಪಕಾರ. ಈ ಎಲ್ಲ ಕಥೆಗಳು ಪುಸ್ತಕರೂಪದಲ್ಲಿ ಬಂದರೆ ಚೆನ್ನಾಗಿರುತ್ತದೆ.