"Mrs. Shakespeare" ಎನ್ನುವ ನಾಟಕ ಇಂಗ್ಲೆಂಡಿನಲ್ಲಿ ಪ್ರದರ್ಶನವಾಗಿದ್ದನ್ನು ಕೇಳಿ,
"ರಾಬರ್ಟ್ ನೇ" ಅವರ ಸ್ತ್ರೀವಾದಿ ಕಾದಂಬರಿ ಓದಿ, ಈ ಬಗ್ಗೆ ನಟರಾಜ್ ಹುಳಿಯಾರ್ ಅವರ ಒಂದು ಲೇಖನ ಓದಿ ಹುಟ್ಟಿದ ಈ ಕೃತಿಯು ಈಗ ಓದುಗರ ಮುಂದಿದೆ. ಓದುಗರಿಗೆ ಪರಿಚಿತವಾದ ಶೇಕ್ಸ್ ಪಿಯರ್ ನ ಸಾಲುಗಳಿಂದಲೇ ಆರಂಭವಾಗುವ ಕೃತಿ ಅವುಗಳನ್ನು ಹೇಳುತ್ತಿರುವ ಆನಿ ಹ್ಯಾಥ್ವೇ ಶೇಕ್ಸ್ ಪಿಯರ್ ಳ ಅಂತರಾಳವನ್ನು ತೆರೆದಿಡುತ್ತಾ, ಶೇಕ್ಸ್ ಪಿಯರ್ ಅವಳಿಗೆ ಹೇಗೆ ಅನಿಸಿದ್ದ, ಆರಂಭದಲ್ಲಿ ಹೇಗಿದ್ದ ,ಹೇಗೆ ಜೀವನ ನಡೆಸಿದ್ದ, ಅಂತ್ಯದಲ್ಲಿ ಹೇಗಾದ ಎಂಬ ಎಲ್ಲ ಏರಿಳಿತಗಳನ್ನು ಸಮಗ್ರವಾಗಿ ನೋಡುಗರ ಮುಂದಿಡುವ ಒಂದು ಶ್ಲಾಘನೀಯ ಪ್ರಯತ್ನ ಇಲ್ಲಿದೆ.
ಹದಿನೆಂಟರ ಹರೆಯದ ಶೇಕ್ಸ್ ಪಿಯರ್ ತನಗಿಂತ ಎಂಟು ವರ್ಷ ದೊಡ್ಡವಳಾದ
ಆನಿ ಹ್ಯಾಥ್ವೇ ಳನ್ನು ಪ್ರೇಮಿಸಿದನಾ? ಇವರ ಮದುವೆಯ ಬಗ್ಗೆ ಇರುವ ಊಹಾಪೋಹಗಳು ಇಲ್ಲಿ ಆನ ಹ್ಯಾಥ್ವೇ ದೃಷ್ಟಿಯಿಂದ ಬರೆಯಲ್ಪಟ್ಟಿವೆ. ಇಲ್ಲಿ ಆನೆ ತನ್ನ ಗಂಡನ ಬಗ್ಗೆ 'ಹೊಂದಿರಬಹುದಾಗಿದ್ದ' ಭಾವನೆಗಳನ್ನು ಕೆಲವೊಮ್ಮೆ ಭಾವುಕಳಾಗಿ ಮತ್ತೆ ಕೆಲವೊಮ್ಮೆ ನಿರ್ಭಾವುಕಳಾಗಿ ಹೇಳುತ್ತಾಳೆ. ಆ ಮೂಲಕ ಕಥೆಯೊಂದನ್ನು ಕಟ್ಟಿಕೊಡುತ್ತಾಳೆ. ಅವಳ ಪ್ರೇಮ-ಕಾಮ, ಈರ್ಷೆ, ಸಿಟ್ಟು ಎಲ್ಲವೂ ಒಂದು ಹದಕ್ಕೆ ತಿರುಗಿದೆ. ಶೇಕ್ಸ್ ಪಿಯರ್ ನ ಬದುಕು ಮತ್ತು ಬರಹವನ್ನು ಅವನ ಸಂಗಾತಿಯ ಕಣ್ಣುಗಳಿಂದ ನೋಡುವುದೇ ಒಂದು ಹೊಸತನ. ಇದು ಸಾಹಿತ್ಯಕ್ಕೆ ಇರುವ ಅನಂತ ಸಾಧ್ಯತೆಗಳ ಪರಿಚಯವೂ ಹೌದು.
ಇಲ್ಲಿನ ಆನೆ ಹ್ಯಾಥ್ವೇ ಒಬ್ಬ ದಿಟ್ಟ ಹೆಂಗಸು; 'ಮಹಾನ್' ಶೇಕ್ಸ್ ಪಿಯರನ ಹಂಗನ್ನು ದಾಟಿದವಳು!
ಉದಯ ಇಟಗಿಯವರು ಬರೆದ ಈ ನಾಟಕ ನಮ್ಮಿಂದ ಒಂದೇ ಉಸಿರಿಗೆ ಹಾಗೆಯೇ ಕುತೂಹಲದಿಂದ ಓದಿಸಿಕೊಳ್ಳುತ್ತದೆ. ಓದಿದ ನಂತರ ನಾಟಕದ "ಸ್ವಾದ" ನಮ್ಮೊಳಗೆ ಸದಾ ಉಳಿಯುತ್ತದೆ.
ರಂಗ ಪ್ರಯೋಗಕ್ಕೂ ಸಜ್ಜಾಗಿ ನಿಂತಿರುವ ಈ ಕೃತಿ ಖಂಡಿತವಾಗಿಯೂ ಯಶಸ್ವಿಯಾಗುತ್ತೆ ಎನ್ನುವ ಭರವಸೆಯನ್ನು ಈ ಪಾತ್ರ ಮಾಡುತ್ತಿರುವ ಶ್ರೀಮತಿ ಲಕ್ಷ್ಮೀ ಚಂದ್ರಶೇಖರ್ ರವರೂ ವ್ಯಕ್ತಪಡಿಸಿದ್ದಾರೆ.
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ