Demo image Demo image Demo image Demo image Demo image Demo image Demo image Demo image

ಆ ಫೋಟೋಗ್ರಾಫರ್ ನೊಂದಿಗೆ.........

  • ಶುಕ್ರವಾರ, ಮೇ 15, 2009
  • ಬಿಸಿಲ ಹನಿ

  • “ನಾನೊಂದು ಫೋಟೋ ತೆಗಿಸಬೇಕಾಗಿದೆ.......” ಹೇಳಿದೆ. ಆ ಫೋಟೋಗ್ರಾಫರ್ ಯಾವೊಂದೂ ಆಸಕ್ತಿಯಿಲ್ಲದೆ ಸುಮ್ಮನೆ ಒಮ್ಮೆ ನನ್ನ ನೋಡಿದ. ಅವನು ನೋಡಲು ಸಣಕಲಾಗಿದ್ದು ಅವನಿಗೆ ವಿಜ್ಞಾನಿಗಳಿಗಿರುವಂತೆ ಗುಳಿಬಿದ್ದ ಕಣ್ಣುಗಳಿದ್ದವು. ಆ ಗುಳಿಬಿದ್ದ ಕಂಗಳಿಂದಲೋ ಏನೋ ಅವನು ತೊಟ್ಟ ಆ ಬೂದು ಬಣ್ಣದ ಸೂಟಿನಲ್ಲಿ ಮತ್ತಷ್ಟು ಇಳಿಬಿದ್ದಂತೆ ಕಾಣುತ್ತಿದ್ದ. ಇಷ್ಟು ಬಿಟ್ಟರೆ ಅವನ ಬಗ್ಗೆ ಹೆಚ್ಚಿಗೆ ಹೇಳುವಂಥದ್ದು ಬೇರೇನೂ ಇರಲಿಲ್ಲ. ಏಕೆಂದರೆ ಒಬ್ಬ ಫೋಟೊಗ್ರಾಫರ್ ಹೇಗೆ ಇರುತ್ತಾನೆ ಎನ್ನುವದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂಥದ್ದೇ!
    "ಸ್ವಲ್ಪ ಹೊತ್ತು ಕಾಯಿರಿ” ಎಂದು ಹೇಳುತ್ತಾ ಕುರ್ಚಿಯೊಂದನ್ನು ತೋರಿಸಿದ. ನಾನಲ್ಲಿ ಕುಳಿತುಕೊಂಡು ಸುಮಾರು ಒಂದು ಗಂಟೆಯಷ್ಟು ಕಾಯ್ದೆ. ಅಷ್ಟರಲ್ಲಿ ಅಲ್ಲೇ ಟೇಬಲ್ ಮೇಲಿದ್ದ ಮೂರು ಬೇರೆ ಬೇರೆ ಮ್ಯಾಗಜೀನ್ಗಂಳನ್ನು ತಿರುವಿ ಹಾಕಿದ್ದೆ.
    ಒಂದು ಗಂಟೆಯ ನಂತರ ಆ ಫೋಟೋಗ್ರಾಫರ್ ತನ್ನ ಒಳಕೋಣೆಯ ಬಾಗಿಲನ್ನು ತೆರೆದು “ಬನ್ನಿ” ಎಂದು ಹೇಳಿದ. ಧ್ವನಿ ಒರಟಾಗಿತ್ತು.
    ನಾನು ಎದ್ದುಹೋಗಿ ಆ ಕೋಣೆಯಲ್ಲಿ ಕುಳಿತುಕೊಂಡೆ. ನನ್ನ ಪಕ್ಕದಲ್ಲಿಯೇ ಕೋಣೆಯ ಕಿಟಕಿಯಿತ್ತು. ಅದು ಹಿಮದಿಂದ ಆವರಿಸಿದ್ದು ಅದ್ಹೇಗೋ ಅದರಿಂದ ಬಿಸಿಲು ಕೋಲೊಂದು ಒಳಗೆ ನುಸಳಿ ನನ್ನ ಬಳಿ ಬಂದು ಬಿದ್ದಿತ್ತು.
    ಆ ಫೋಟೋಗ್ರಾಫರ್ ಕ್ಯಾಮರಾ ಯಂತ್ರವೊಂದನ್ನು ಕೋಣೆಯ ಮಧ್ಯಭಾಗಕ್ಕೆ ತಳ್ಳಿ ತಾನು ಅದರ ಹಿಂದೆ ಹೋಗಿ ನಿಂತುಕೊಂಡ. ಆತ ಅದರಲ್ಲಿ ಮುಖ ತೂರಿ ನನ್ನತ್ತ ಒಮ್ಮೆ ನೋಡಿದ. ಒಂದೇ ಒಂದು ಕ್ಷಣ......... ಆಮೇಲೆ ಏನನ್ನಿಸಿತೋ ಪುನಃ ಮುಖವನ್ನು ಹೊರತೆಗೆದವನೆ ಉದ್ದನೆಯ ಕೊಕ್ಕೆಯಿಂದ ಕಿಟಕಿಯ ಬಾಗಿಲನ್ನು ಹಾಗೂ ಇಳಿಬಿಟ್ಟ ಬಿಳಿ ಪರದೆಯನ್ನು ಸ್ವಲ್ಪ ಹಿಂದೆ ಸರಿಸಿ ಒಳಗೆ ಸಾಕಷ್ಟು ಗಾಳಿ, ಬೆಳಕನ್ನು ಬರಮಾಡಿಕೊಂಡ.
    ಪುನಃ ಯಂತ್ರದ ಹಿಂದುಗಡೆ ಹೋಗಿ ಅಲ್ಲಿ ತೂಗಿಬಿಟ್ಟ ಕಪ್ಪನೆಯ ಬಟ್ಟೆಯೊಂದನ್ನು ತನ್ನ ಹತ್ತಿರಕ್ಕೆ ಎಳೆದುಕೊಂಡು ಏನನ್ನೋ ಯೋಚಿಸುತ್ತಾ ನಿಂತುಕೊಂಡ. ನಾನು ಅವನು ನಿಂತಿರುವ ಭಂಗಿಯನ್ನು ನೋಡಿ ಪ್ರಾರ್ಥಿಸುತ್ತಿರಬಹುದೆಂದುಕೊಂಡು ಸುಮ್ಮನೆ ನೋಡುತ್ತಾ ಕುಳಿತೆ.
    ಮತ್ತೆ ತನ್ನ ಮುಖವನ್ನು ಹೊರತೆಗೆದು ತುಂಬಾ ನಿರಾಶೆಗೊಂಡವನ ತರ ತನ್ನ ತಲೆಯನ್ನೊಮ್ಮೆ ಅಲ್ಲಾಡಿಸಿ “ಈ ಮುಖ ತುಂಬಾ ಕೆಟ್ಟದಾಗಿದೆ” ಎಂದು ನೇರವಾಗಿ ಹೇಳಿದ.
    ನಾನು ಹೌದೆಂದು ತಲೆಯಲ್ಲಾಡಿಸುತ್ತಾ “ಆ ವಿಷಯ ನನಗೆ ಮುಂಚಿನಿಂದಲೂ ಗೊತ್ತು!” ಎಂದು ಪ್ರಶಾಂತವಾಗಿ ಹೇಳಿದೆ.
    ಅವನು ಮತ್ತೊಮ್ಮೆ ನನ್ನ ನೋಡಿ ನಿಟ್ಟುಸಿರೊಂದನ್ನು ಬಿಡುತ್ತಾ “ನನಗನಿಸುತ್ತೆ ನಿಮ್ಮ ಮುಖ ಇನ್ನೂ ಸ್ವಲ್ಪ ದೊಡ್ಡದಾಗಿದ್ದರೆ ಚನ್ನಾಗಿತ್ತು.” ಎಂದು ಹೇಳಿದ. ನಾನು “ಹೌದಾ? ಅಂದರೆ ನಿಮ್ಮಷ್ಟು ದೊಡ್ಡದಾಗಿರಬೇಕಿತ್ತೆ?” ಎಂದು ಕೇಳಿದೆ.
    ಅವನು ನನ್ನ ಮಾತುಗಳನ್ನು ಕೇಳಿಸಿಕೊಂಡಂತೆ ಕಾಣಲಿಲ್ಲ.
    ಈಗ ಹತ್ತಿರ ಬಂದು ನನ್ನ ತಲೆಯನ್ನು ಅವನ ಕೈಗಳಲ್ಲಿ ತೆಗೆದುಕೊಳ್ಳುತ್ತಾ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ತಿರುತಿರುಗಿಸಿ ನೋಡತೊಡಗಿದ. ಅವ ಹಾಗೆ ಮಾಡುತ್ತಿರುವದನ್ನು ನೋಡಿ ಬಹುಶಃ ಅವನು ನನಗೆ ಮುತ್ತಿಕ್ಕಬಹುದೆಂದು ನಾನು ಉನ್ಮತ್ತನಾಗಿ ಕಣ್ಣು ಮುಚ್ಚಿದೆ.
    ಆದರೆ ನನ್ನ ಊಹೆ ತಪ್ಪಾಗಿತ್ತು!
    ಮತ್ತೊಮ್ಮೆ ನನ್ನ ಮುಖವನ್ನು ಎಷ್ಟು ಸಾಧ್ಯವೋ ಅಷ್ಟು ಕಡೆ ತಿರುತಿರುಗಿಸಿ ಅದನ್ನೇ ನೋಡುತ್ತಾ ನಿಂತುಕೊಂಡ.
    ಪುನಃ ನಿಟ್ಟುಸಿರೊಂದನ್ನು ಬಿಡುತ್ತಾ “ನನಗೆ ಈ ತಲೆ ಇಷ್ಟವಾಗಲಿಲ್ಲ!” ಎಂದು ಟೀಕಿಸಿದ.
    ನಾನು ತುಟಿಪಿಟ್ಟೆನ್ನಲಿಲ್ಲ.
    ಪುನಃ ಯಂತ್ರದ ಹಿಂದೆ ಹೋಗಿ ನಿಂತುಕೊಳ್ಳುತ್ತಾ ಮತ್ತೊಮ್ಮೆ ನನ್ನ ನೋಡಿ “ಎಲ್ಲಿ, ಸ್ವಲ್ಪ ಸಣ್ಣದಾಗಿ ಮುಗುಳು ನಗಿ” ಎಂದು ಹೇಳಿದ.
    ನಾನು ನಗತೊಡಗಿದೆ.
    “ನಿಲ್ಲಿಸಿ.....” ತಕ್ಷಣ ಕಿರುಚಿದ.
    ಪುನಃ ನನ್ನೊಮ್ಮೆ ನೋಡುತ್ತಾ “ಈ ಕಿವಿಗಳು ನಿಮ್ಮ ಮುಖಕ್ಕೆ ಸ್ವಲ್ಪವೂ ಹೊಂದಿಕೆಯಾಗುತ್ತಿಲ್ಲ” ಎಂದು ಮತ್ತೆ ಹೀಗಳೆದ.
    ನಾನು ಸುಮ್ಮನೆ ಕುಳಿತಿದ್ದೆ.
    ಸ್ವಲ್ಪ ತಡೆದು “ಅವುಗಳನ್ನು ಸ್ವಲ್ಪ ಕೆಳಗಿಳಿಸಿದರೆ ಚನ್ನಾಗಿರುತ್ತೆ! ಎಲ್ಲಿ, ಇಳಿಸಿ ನೋಡೋಣ? ಹಾಂ...ಹಾಗೆ! ಕಣ್ಣುಗಳು......ಆ ಗುಡ್ಡೆಗಳನ್ನು ಮಧ್ಯಭಾಗಕ್ಕೆ ತಂದು ನಿಲ್ಲಿಸಿದರೆ ಒಳ್ಳೆಯದು.......ವೇರಿ ಗುಡ್! ಎಲ್ಲಿ ಈಗ ಶ್ವಾಸಕೋಶಗಳನ್ನು ಸ್ವಲ್ಪ ಅಗಲಿಸಿ ನೋಡೋಣ? ಹಾಂ....ಹಾಗೆ! ನಿಮ್ಮ ಕೊರಳನ್ನು ಸ್ವಲ್ಪ ಉಬ್ಬಿಸಿ.....ಗುಡ್! ಈಗ ಉಸಿರು ಬಿಗಿಹಿಡಿದುಕೊಂಡು ನಿಮ್ಮ ಸೊಂಟವನ್ನು ಕಿರಿದುಗೊಳಿಸಿ.........ಹಾಂ.....ಹಾಗೆ! ಈಗ ಮೊಳಕೈಗೆ ಹತ್ತಿರವಾಗುವಂತೆ ನಿಮ್ಮ ಕುಂಡಿಯನ್ನು ಸ್ವಲ್ಪ ಮೇಲೆತ್ತಿ......ಗುಡ್, ವೇರಿ ಗುಡ್, ವೇರಿ ವೇರಿ ಗುಡ್! ಈಗ ಎಲ್ಲವೂ ಸರಿಯಾಗಿದೆ!” ಎಂದು ಹೇಳಿ ಮತ್ತೊಮ್ಮೆ ನನ್ನ ಮುಖವನ್ನು ನೋಡಿದ.
    ನಾನು ಅವನು ಅಷ್ಟೆಲ್ಲಾ ತಯಾರಿ ಮಾಡಿದ್ದನ್ನು ನೋಡಿ ಇನ್ನೇನು ಫೋಟೊ ತೆಗಿಯಬಹುದೆಂದುಕೊಂಡೆ. ಆದರೆ ನನ್ನ ಮುಖವನ್ನೇ ದಿಟ್ಟಿಸುತ್ತಾ ಮತ್ತೆ ಗೊಣಗಿದ “ನಿಮ್ಮ ಮುಖ ಫೋಟೋಕ್ಕೆ ತಕ್ಕನಾಗಿಲ್ಲ!”
    ನಾನು ಆ ಸ್ಟೂಲಿನ ಮೇಲೆ ಅತ್ತ ಇತ್ತ ಓಲಾಡತೊಡಗಿದ್ದೆ.
    “ನಿಲ್ಲಿಸಿ.....” ಭಾವುಕನಾದರೂ ಕೊಂಚ ಗಂಭೀರವಾಗಿ ಹೇಳಿದೆ. ನನ್ನ ಸಹನೆಯ ಕಟ್ಟೆಯೊಡೆದಿತ್ತು.
    “ಇದು ನನ್ನ ಮುಖ! ನಿನ್ನದಲ್ಲ! ನಲವತ್ತು ವರ್ಷಗಳ ಕಾಲ ಈ ಮುಖದೊಟ್ಟಿಗೆ ಜೀವನ ಮಾಡಿದ್ದೇನೆ! ಅದರ ಹುಳುಕುಗಳೇನೆಂಬುದು ನಿನಗಿಂತ ಚನ್ನಾಗಿ ನಂಗೆ ಗೊತ್ತು! ಅದು ಫೋಟೋಯೋಗ್ಯವಲ್ಲ ಎಂದೂ ಗೊತ್ತು. ನನಗೆ ಹೇಳಿ ಮಾಡಿಸಿದುದಲ್ಲ ಎಂಬುದು ಸಹ ಗೊತ್ತು! ಆದರೂ ಇದು ನನ್ನ ಮುಖ! ನನಗಿರುವ ಒಂದೇ ಒಂದು ಮುಖ! ಈ ಮುಖ ಬಿಟ್ಟರೆ ಬೇರೆ ಗತಿಯಿಲ್ಲ!” ನನ್ನ ಗಂಟಲು ಕಟ್ಟಿ ಬರುತ್ತಿತ್ತು. ಆದರೂ ಬಿಡದೆ ಮತ್ತೆ ಹೇಳಿದೆ “ಈ ಮುಖವನ್ನು ಅದರೆಲ್ಲಾ ಹುಳುಕುಗಳ ಸಮೇತ ಒಪ್ಪಿಕೊಂಡಿದ್ದೇನೆ! ಅದರೊಟ್ಟಿಗೇ ಬದುಕಿತ್ತಿದ್ದೇನೆ! ಅದಿರುವಂತೆ ಪ್ರೀತಿಸುವದನ್ನು ಕಲಿತಿದ್ದೇನೆ! ನೀನದನ್ನು ಎತ್ತಿ ಆಡಬೇಕಾಗಿಲ್ಲ! ಈ ಬಾಯಿ, ಕಣ್ಣು, ಕಿವಿ ಎಲ್ಲವೂ ನನ್ನವೇ! ನಿನ್ನದಲ್ಲ! ದೋಷವಿರುವದು ನಿನ್ನ ಕ್ಯಾಮರಾದಲ್ಲಿ! ನನ್ನ ಮುಖದಲ್ಲಲ್ಲ!” ಎಂದು ಖಾರವಾಗಿ ಹೇಳುತ್ತಾ ನಾನು ಕುಳಿತಲ್ಲಿಂದ ಮೇಲೇಳಲು ಪ್ರಯತ್ನಿಸಿದೆ.
    ಟಕ್!!
    ಅವನು ಅದಾಗಲೆ ಕ್ಯಾಮರಾದ ಗುಂಡಿಯನ್ನು ಒತ್ತಿಬಿಟ್ಟಿದ್ದ! ನನ್ನ ಫೋಟೋ ತೆಗೆದಾಗಿತ್ತು! ವಿದ್ಯುತ್ತಿನ ರಭಸಕ್ಕೆ ಆ ಯಂತ್ರ ಇನ್ನೂ ಗಡಗಡನೆ ನಡುಗತ್ತಲೇ ಇತ್ತು.
    ಆ ಫೋಟೊಗ್ರಾಫರ್ ಮುಗುಳುನಗುತ್ತಾ “ನಿಮ್ಮೆಲ್ಲ ಭಾವನೆಗಳಿಗೆ ಜೀವ ತುಂಬಿ ಸೆರೆ ಹಿಡಿದಿದ್ದೇನೆ” ಎಂದು ಹೇಳಿದ.
    ನಾನು “ಜೀವ ತುಂಬಿ!? ಎಲ್ಲಿ ನೊಡೋಣ......?” ಎಂದು ಕೇಳಿದೆ.
    “ಓ! ಈಗಲೇ ನೋಡಲಾಗದು. ಮೊದಲು ನೆಗಟಿವ್ನ್ನು ಡೆವಲಪ್ ಮಾಡಬೇಕು. ಆಮೇಲೆ ಪ್ರಿಂಟ್ ಹಾಕಬೇಕು. ಸ್ವಲ್ಪ ಸಮಯ ಹಿಡಿಯುತ್ತೆ. ಒಂದು ಕೆಲ್ಸ ಮಾಡಿ, ಈ ಶನಿವಾರ ಬಂದುಬಿಡಿ. ನೋಡುವಿರಂತೆ”
    ನಾನು ಆ ಶನಿವಾರ ಮತ್ತೆ ಅವನಲ್ಲಿಗೆ ಹೋದೆ.
    ಈ ಸಾರಿ ಆತ ಮುಂಚಿಗಿಂತಲೂ ನಿರಾಸಕ್ತಿಯಿಂದ ಕಾಣುತ್ತಿದ್ದ. ಆದರೂ ಮುಖದಲ್ಲಿ ಯಾವುದೋ ಒಂದು ಗಂಭೀರ ಕಳೆ ಸೂಸುತ್ತಿತ್ತು.
    ಅವನು ನೆಗಟಿವ್ನ್ನು ಹೊರತೆಗೆದು ತೋರಿಸಿದ. ನಾವಿಬ್ಬರೂ ಸ್ವಲ್ಪಹೊತ್ತು ಸುಮ್ಮನೆ ಆ ನೆಗಟಿವ್ನ್ನು ನೋಡುತ್ತಾ ಹೋದೆವು.
    “ಇದು ನಾನಾ?” ಸ್ವಲ್ಪ ಗಲಿಬಿಲಿಗೊಂಡವನ ತರ ಕೇಳಿದೆ.
    “ಹೌದು, ನೀವೇನೇ!” ಅವನು ಸಮಾಧಾನವಾಗಿ ಉತ್ತರಿಸಿದ.
    ಮತ್ತೆ ಇಬ್ಬರೂ ನೆಗಟಿವ್ನ್ನು ನೋಡುತ್ತಾ ಹೋದೆವು.

    ನಾನು ಸ್ವಲ್ಪ ಹಿಂದೆ ಮುಂದೆ ನೋಡುತ್ತಾ “ಈ ಕಣ್ಣುಗಳು ನನ್ನ ಕಣ್ಣುಗಳ ತರ ಇಲ್ಲ” ಎಂದು ಹೇಳಿದೆ.
    “ಓ! ಅವಾ? ಅವುಗಳಿಗೆ ಹೊಸ ರೂಪ ಕೊಡಲಾಗಿದೆ. ಇನ್ನೊಮ್ಮೆ ಸರಿಯಾಗಿ ನೋಡಿ. ಅದ್ಭುತವಾಗಿ ಬಂದಿವೆಯಲ್ಲವೆ?” ತನ್ನ ಕೆಲಸದ ಬಗ್ಗೆ ತಾನೆ ಹೆಮ್ಮೆಯಿಂದ ಹೇಳಿಕೊಂಡ.
    “ಗುಡ್, ಆದರೆ ಈ ಹುಬ್ಬುಗಳು ಖಂಡಿತ ನನ್ನವಲ್ಲ”
    “ಹೌದು” ಒಂದು ಕ್ಷಣ ನನ್ನ ದಿಟ್ಟಿಸಿ “ಅವನ್ನು ತೆಗೆದು ಹೊಸದನ್ನು ಜೋಡಿಸಲಾಗಿದೆ...... ಇದು ಈಗ ಚಾಲ್ತಿಯಲ್ಲಿರುವ ಹೊಸವಿಧಾನ.... ನೀವಿಲ್ಲಿ ನೋಡಿದರೆ ನಾವೆಲ್ಲಿ ಬದಲಾಯಿಸಿದ್ದೇವೆಂದು ಬಹುಶಃ ನಿಮಗೆ ಗೊತ್ತಾಗಬಹುದು....... ನನಗೆ ಸಣ್ಣ ಹುಬ್ಬುಗಳನ್ನು ಕಂಡರೆ ಆಗುವದಿಲ್ಲ” ಎಂದು ಹೇಳಿದ.
    “ಓ! ನಿಮಗೆ ಆಗುವದಿಲ್ಲವೆ?”
    “ಊಹೂಂ, ಇಲ್ಲ” ಅವನು ಹೇಳುತ್ತಾ ಹೋದ “ಹುಬ್ಬಿನ ಮೇಲೆ ದಪ್ಪನೆಯ ಕೂದಲಿದ್ದರನೇ ಚೆಂದ. ಅದಕೆಂದೇ ಕಪ್ಪು ಕಡ್ಡಿಯನ್ನು ಬಳಸಿ ಅವನ್ನು ದಪ್ಪನಾಗಿ ತೀಡಿದ್ದೇನೆ”
    “ಸರಿ, ಬಾಯಿ...?”
    “ಅದನ್ನು ಸ್ವಲ್ಪ ಅಡ್ಜೆಸ್ಟ್ ಮಾಡಲಾಗಿದೆ...... ನಿಮ್ಮದು ತುಂಬಾ ಕೆಳಗಡೆ ಇದೆ....... ಆದರೆ ಫೋಟೋದಲ್ಲಿ ಅದನ್ನು ಸ್ವಲ್ಪ ಮೇಲೆತ್ತಲಾಗಿದೆ”
    “ಕಿವಿಗಳು ಮಾತ್ರ ನನ್ನ ತರಾನೆ ಇವೆ”
    “ಹೌದು, ಅದೊಂದು ಇದ್ದ ಹಾಗೆ ಬಂದಿದೆ. ಪ್ರಿಂಟ್ ಹಾಕುವಾಗ ಅದನ್ನು ಬದಲಾಯಿಸಲು ನೋಡುತ್ತೇನೆ..... ಈ ಸಲ್ಫೈಡ್ ವಿಧಾನ ಬಳಸಿ ಕಿವಿಗಳನ್ನು ತೆಗೆಯಬಹುದು..... ನೀವು ಹೇಳಿದರೆ..........”
    “ನೋಡಿ....!” ನಾನು ನನ್ನೆಲ್ಲ ಮುಖಭಾವಗಳನ್ನು ಸೂಸುತ್ತಾ ಅತ್ಯಂತ ನಿಷ್ಠುರವಾಗಿ ಹೇಳಿದೆ “ನನಗೆ ನನ್ನದೇ ಆದ ಒಂದು ಪೋಟೊ ಬೇಕಾಗಿತ್ತು! ಸೊಟ್ಟಗೆಯೋ, ನೆಟ್ಟಗೆಯೋ ಹೇಗಾದರು ಸರಿ ನನ್ನ ಹಾಗೆ ಇರುವ, ನನ್ನ ತರಾನೆ ಕಾಣುವ ಒಂದೇ ಒಂದು ಫೋಟೊ! ಕಡೆಗೆ ಹುಚ್ಚನ ತರ ಕಂಡಿದ್ದರೂ ಪರ್ವಾಗಿರಲಿಲ್ಲ! ಆದರೆ ನನ್ನನ್ನೇ ಹೋಲುವ, ಆ ದೇವರು ಕೊಟ್ಟ ಮುಖದಂತೆ ಕಾಣುವ ಹಾಗೆ ಒಂದೇ ಒಂದು ಫೋಟೋ ಬೇಕಾಗಿತ್ತು! ನಾನು ಸತ್ತ ಮೇಲೆ ನನ್ನ ನೆನಪಿಗಾಗಿ ಗೆಳೆಯರೆಲ್ಲ ಇಟ್ಟುಕೊಳ್ಳುವಂಥ ಫೋಟೋ ಬೇಕಿತ್ತು! ಆದರೆ ಇದು ನಾನಂದುಕೊಂಡ ಹಾಗೆ ಬಂದಿಲ್ಲ..... ನನ್ನ ಕಲ್ಪನೆ ತಪ್ಪಾಗಿದೆ...... ನನಗಿದು ಬೇಕಾಗಿಲ್ಲ....ನಿನ್ನ ನೆಗಟಿವ್ನ್ನು ನೀನೇ ಇಟ್ಕೊ...... ಸಲ್ಫೈಡ್, ಬ್ರೋಮೈಡ್, ಆಕ್ಷೈಡ್ ಕೊನೆಗೆ ಸಗಣಿಯಲ್ಲಾದರು ಅದ್ದಿ ತೆಗಿ...... ಕಣ್ಣುಗಳನ್ನಾದರು ತೆಗಿ, ಕಿವಿಗಳನ್ನಾದರು ಕತ್ತರಿಸು, ಹುಬ್ಬನ್ನಾದರು ತೀಡು, ಬಾಯಿಯನ್ನಾದರು ಸೀಳು....ತುಟಿಗಳು ಥಳ ಥಳ ಹೊಳೆಯುವಂತೆ ಬಣ್ಣವನ್ನಾದರು ಹಚ್ಚು, ಇಲ್ಲವೇ ಅವನ್ನು ಉಬ್ಬಿಸು, ತಗ್ಗಿಸು ಕೊನೆಗೆ ಮುಖವನ್ನಾದರು ಬದಲಾಯಿಸು......ನೀನು ಏನೇನು ಮಾಡಬೇಕೆಂದಿರುವೆಯೋ ಅದನ್ನೆಲ್ಲ ಮಾಡು..... ಮಾಡಿಯಾದ ಮೇಲೆ ನೀನಾದರೂ ಇಟ್ಕೊ.... ನಿನ್ನ ಸ್ನೇಹಿತರಿಗಾದರೂ ಕೊಡು..........ಅವರು ಅದನ್ನು ನೋಡಿ ಖುಶಿಪಡಬಹುದು. ಆದರೆ....ಆದರೆ... ನನಗೆ ಇದೊಂದು ಶುದ್ಧ ಅಧಿಕ ಪ್ರಸಂಗತನ..... ಕೆಲಸಕ್ಕೆ ಬಾರದ ಫೋಟೋ......!”
    ಹೇಳುತ್ತಾ ಹೋದಂತೆ ನನ್ನ ಗಂಟಲು ಕಟ್ಟಿ ಬಂತು. ಕಂಗಳು ತುಂಬಿ ಬಂದವು. ಅತ್ಯಂತ ನಿರಾಶನಾಗಿ ಅಲ್ಲಿಂದ ಹೊರಟೆ.
    ಇಂಗ್ಲೀಷ್ ಮೂಲ: ಸ್ಟೀಫನ್ ಲೀಕಾಕ್
    ಕನ್ನಡಕ್ಕೆ: ಉದಯ ಇಟಗಿ





    ಚಿತ್ರ ಕೃಪೆ:www.flickr.com kansasexplorer 3128

    14 ಕಾಮೆಂಟ್‌(ಗಳು):

    PARAANJAPE K.N. ಹೇಳಿದರು...

    ಚೆನ್ನಾದ ಬರಹ, ಆತ್ಮವಿಮರ್ಶೆಗೆ ಹಚ್ಚುತ್ತದೆ. ಸ್ವ೦ತ ನೆಲೆಯಲ್ಲಿ ಉತ್ತಮ ಕಥೆ,ಕವನ ಬರೆಯುವುದರ ಜೂತೆ ಜೂತೆಗೆ ಅನುವಾದ ಕಲೆಯೂ ನಿಮಗೆ ಚೆನ್ನಾಗಿ ಸಿದ್ಧಿಸಿದೆ.

    shivu.k ಹೇಳಿದರು...

    ಸರ್,

    ಫೋಟೋಗ್ರಾಫರನ ಬಗ್ಗೆ ಎಂಥದೋ ಲೇಖನವಿದೆಯೆಂದು ಹಾರಿಬಂದೆ...ಓದಿದಾಗ.....

    ವಾಹ್! ಎಂಥ ಸುಂದರ ಅನುಭವ. ಓದುತ್ತಿದ್ದಂತೆ ನನ್ನ ವೃತ್ತಿಯ ಅನುಭವಗಳು ಮೆಲುಕುಹಾಕುವಂತಾಯಿತು...ಆದ್ರೆ ನಾವು ಚೆನ್ನಾಗಿಲ್ಲದಿದ್ದರೂ ಚೆನ್ನಾಗಿರುವಂತೆ ಮಾಡಲು ಯತ್ನಿಸುತ್ತೇವೆ...ಇಲ್ಲಿ ನೋಡಿದರೆ ಈ ಮೂಲ ಲೇಖನ ಮತ್ತು ನಿಮ್ಮ ಅನುವಾದದಂತೆ ನಮ್ಮೊಳಗೆ ಸಂಭಾಷಣೆ ನಡೆದರೆ ಕೊನೆಗೊಮ್ಮೆ ನಿಷ್ಟುರವಾದ ಸತ್ಯ ಹೊರಬೀಳುತ್ತದೆಯೆಂದು ನನಗೆ ಗೊತ್ತೇ ಇರಲಿಲ್ಲ..

    ನೀವು ಬರೆದ ಇದುವರೆಗಿನ ಅನುವಾದಗಳಲ್ಲಿ ನಾನು ಹೆಚ್ಚು ಇಷ್ಟಪಟ್ಟಿದ್ದು ಇದೇ ಇರಬೇಕು..ಕಾರಣ ವಿಚಾರವೇ ಆಗಿದೆಯೆಲ್ಲವೇ...ಹ್ಯಾಟ್ಸಪ್ ಸರ್...

    ಅಭಿನಂದನೆಗಳು....

    Unknown ಹೇಳಿದರು...

    ಉದಯ್
    ನಿಮ್ಮ ಬ್ಲಾಗಿನಲ್ಲಿ ಕಥೆಯನ್ನು ನೋಡಿ ಖುಷಿಯಾಯಿತು. ಕಥೆ ಚಿಂತನೆಗೆ ಹಚ್ಚುವಂತಿದೆ. ಅನುವಾದದ ಸೊಗಸಿನ ಬಗ್ಗೆ ಎರಡು ಮಾತಿಲ್ಲ. ಒಂದೇ ಒಂದು ಪದವನ್ನು ಹೆಚ್ಚು ಹಾಕದೇ ಎಷ್ಟು ಬೇಕೋ ಅಷ್ಟನ್ನೇ ಹಾಕಿ ಹದಗೊಳಿಸಿದಂತಹ, ಚೆನ್ನಾಗಿ ಓದಿಸಿಕೊಂಡು ಹೋಗುವಂತಹ ಅನುವಾದ. ಮೂಲಕಥೆಯನ್ನು ಓದಲಾಗದವರಿಗೆ ನಿಮ್ಮ ಅನುವಾದಗಳು ಒಂದು ವರವಿದ್ದಂತೆ!

    sunaath ಹೇಳಿದರು...

    Humorous and sentimental story.
    ಅನುವಾದವು ಸಮರ್ಥವಾಗಿದೆ.
    ಕವನಗಳ ಜೊತೆಗೇ ಒಳ್ಳೆಯ ಕತೆಗಳನ್ನೂ ಅನುವಾದ ಮಾಡಿಕೊಡುತ್ತಿರುವಿರಿ.
    ಧನ್ಯವಾದಗಳು.

    ಬಿಸಿಲ ಹನಿ ಹೇಳಿದರು...

    ಪರಾಂಜಪೆ ಸರ್,
    ಯಾಕೋ ಗೊತ್ತಿಲ್ಲ ಸ್ವಂತ ಬರೆಯುವದಕ್ಕಿಂತ ಹೆಚ್ಚಾಗಿ ಅನುವಾದದ ಕಡೆಗೆ ನನ್ನ ಒಲವು ಜಾಸ್ತಿ. ಅದನ್ನು ಇದೇ ಬ್ಲಾಗಿನಲ್ಲಿ ಪ್ರಕಟವಾದ "ನನ್ನೊಳಗಿನ ಬರಹಗಾರ ರೂಪಗೊಂಡಿದ್ದು" ಲೇಖನದಲ್ಲಿ ಹೇಳಿಕೊಂಡಿದ್ದೇನೆ. ಬೇರೆ ಬೇರೆ ಭಾಷೆಯಲ್ಲಿ ಚನ್ನಾಗಿರುವದನ್ನು ಕನ್ನಡಕ್ಕೆ ತರುವಾಸೆ.ಹೀಗಾಗಿ ಅನುವಾದಿಸುತ್ತಾ ಹೋಗುತ್ತೇನೆ.
    ಇರಲಿ,ಕಥೆ ಹಾಗೂ ಅನುವಾದವನ್ನು ಮೆಚ್ಚಿಕೊಂಡಿದ್ದಕ್ಕೆ ವಂದನೆಗಳು.

    ಬಿಸಿಲ ಹನಿ ಹೇಳಿದರು...

    ಶಿವು ಅವರೆ,
    ನಿಜ ಹೇಳಬೇಕೆಂದರೆ ಮೊನ್ನೆಯಷ್ಟೆ ನಿಮ್ಮ ಬ್ಲಾಗಿನಲ್ಲಿ ಪ್ರಕಟವಾದ "ಆ ಮೂಗು ಆರ್ಡರ್ ಕೊಟ್ಟು ಮಾಡಿಸಿದಂತಿದೆಯಲ್ವೇ ಸರ್........" ಎನ್ನುವ ಲೇಖನ ಇದಕ್ಕೆ ಸ್ಪೂರ್ತಿ! ಅದನ್ನು ಓದುತ್ತಾ ಓದುತ್ತಾ ನಾನು ಕಾಲೇಜಿನಲ್ಲಿ ಓದುತ್ತಿರಬೇಕಾದರೆ ನಮಗೆ text ಆಗಿದ್ದ ಈ ಕಥೆ ಜ್ಞಾಪಕಕ್ಕೆ ಬಂತು. ಮುಂದೆ ಒಬ್ಬ ಇಂಗ್ಲೀಷ ಅಧ್ಯಾಪಕನಾಗಿ ಡಿಗ್ರಿ ತರಗತಿಗಳಿಗೆ ಇದನ್ನು ಪಾಠ ಮಾಡಿದ್ದೇನೆ ಕೂಡ. ಪಾಠ ಕೇಳುವಾಗ ಹಾಗೂ ಮಾಡುವಾಗ ಇದನ್ನು ನನ್ನ ವಿದ್ಯಾರ್ಥಿಗಳೊಂದಿಗೆ ಸಾಕಷ್ಟು enjoy ಮಾಡಿದ್ದೇನೆ.
    ನಿಮ್ಮ ಲೇಖನ ಓದಿದ ಮೇಲೆ ಇದನ್ನು ಯಾಕೆ ಅನುವಾದ ಮಾಡಬಾರದು ಎಂದು ತಕ್ಷಣ ಇಂಟರ್ನೆಟ್‍ಲ್ಲಿ ಡೌನ್‍ಲೋಡ್ ಮಾಡಿಕೊಂಡು ಅನುವಾದಿಸಿಬಿಟ್ಟೆ.
    ಇದು ನಿಮ್ಮ ವೃತ್ತಿ ಜೀವನದ ಅನುಭವಗಳನ್ನು ಜ್ಞಾಪಿಸುವಂತಿದ್ದರೂ ನೀವಂತು ಆ ಫೋಟೊಗ್ರಾಫರ್ ತರ ಅಲ್ಲ ಬಿಡಿ. ನೀವೆಲ್ಲಿ? ಅವನೆಲ್ಲಿ?
    ಕಥೆ ಹಾಗೂ ಅನುವಾದ ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್!

    ಬಿಸಿಲ ಹನಿ ಹೇಳಿದರು...

    ಸತ್ಯನಾರಾಯಣ ಸರ್,
    ಇದು ನನ್ನ ಪ್ರಕಾರ ಅಷ್ಟೊಂದು ಚಿಂತನೆಗೆ ಹಚ್ಚುವ ಕಥೆಯಲ್ಲ. ನವಿರಾದ ಹಾಸ್ಯದೊಂದಿಗೆ ಬಿಚ್ಚಿಕೊಳ್ಳುತ್ತಾ ಕೊನೆಯಲ್ಲಿ ಒಮ್ಮೆಲೆ ವಿಷಾದವನ್ನು ಎರಚಿಬಿಡುವಂಥ ಸಾಮಾನ್ಯ ಕಥೆ. ಕಥೆಯ ಆರಂಭದಲ್ಲಿ ಫೋಟೊಗ್ರಾಫರ‍್ನೊಂದಿಗೆ ಲೇಖಕನ ವಿಚಿತ್ರ ಅನುಭವಗಳ ಬಗ್ಗೆ ನಗುತ್ತಾ ಹೋಗುತ್ತೇವೆಯಾದರೂ ಕೊನೆಯಲ್ಲಿ ಲೇಖಕನಿಗೆ ಆಗುವ ಹತಾಶೆಯ ಬಗ್ಗೆ ನಮ್ಮ ಅನುಕಂಪ ಗಿಟ್ಟಿಸುವಲ್ಲಿ ಕಥೆ ಯಶಸ್ವಿಯಾಗುತ್ತದೆ.

    ಇನ್ನು ನನ್ನ ಅನುವಾದವನ್ನು ಮೆಚ್ಚಿ ಒಂದೆರಡು ಸಾಲು ಬರೆದಿದ್ದೀರಿ. ಅದಕ್ಕೆ ತುಂಬು ಹೃದಯದ ವಂದನೆಗಳು. ನಾನಿನ್ನೂ ಅನುವಾದ ಕಲೆಯನ್ನು ರೂಢಿಸಿಕೊಳ್ಳಬೇಕಿದೆ ಎಂಬುದೇ ನನ್ನ ಅನಿಸಿಕೆ.

    ಬಿಸಿಲ ಹನಿ ಹೇಳಿದರು...

    ಸುನಾಥ್ ಸರ್,
    ನಿಜಕ್ಕೂ ಇದೊಂದು Humorous and sentimental story.
    ಕಥೆಯ ಆರಂಭದಲ್ಲಿ ಫೋಟೊಗ್ರಾಫರ‍್ನೊಂದಿಗೆ ಲೇಖಕನ ವಿಚಿತ್ರ ಅನುಭವಗಳ ಬಗ್ಗೆ ನಗುತ್ತಾ ಹೋಗುತ್ತೇವೆಯಾದರೂ ಕೊನೆಯಲ್ಲಿ ಲೇಖಕನಿಗೆ ಆಗುವ ಹತಾಶೆಯ ಬಗ್ಗೆ ನಮ್ಮ ಅನುಕಂಪ ಗಿಟ್ಟಿಸುವಲ್ಲಿ ಕಥೆ ಯಶಸ್ವಿಯಾಗುತ್ತದೆ.
    ನೀವು ಹೇಳಿದಂತೆ ಕವನಗಳ ಜೊತೆಗೆ ಕಥೆಗಳನ್ನೂ ಯಾಕೆ ಅನುವಾದಿಸಬಾರದು ಎಂದು ಅನುವಾದಿಸಿದೆ. ಚೆಂದವಾಗಿದ್ದನ್ನು ಕನ್ನಡಕ್ಕೆ ತರುವಾಸೆ.

    ಜಲನಯನ ಹೇಳಿದರು...

    Uday,
    This is a perfect trans-emotion, I dont say a translation...
    ಅನುವಾದಕ್ಕಿಂತ ಭಾವಾನುವಾದ ಎನ್ನೋಣವೇ...? ಒಳ್ಳೆಯ ಪೋಸ್ಟಿಂಗ್
    ಮುಂದುವರೆಸಿ ನಿಮ್ಮ ಈ ಕೆಲಸ..ಭಾಷೆಯನ್ನು ಶ್ರೀಮಂತಗೊಳಿಸಲು ಇಂತಹ ಲೇಕಹನಗಳು ಅಗತ್ಯ.

    Ittigecement ಹೇಳಿದರು...

    ಉದಯ್....

    ಬಹಳ ಸುಂದರವಾದ ಕಥೆ.....

    ಓದುತ್ತ ಹೋದಂತೆ ಹ್ರದಯ ಭಾರವಾಯಿತು...
    ಮನಸ್ಸಲ್ಲಿ ಉಳಿಯುವಂಥದ್ದು ಇದರ ಕಥಾವಸ್ತು.....

    ನಮಗೆ ಸಿಕ್ಕ ವ್ಯಕ್ತಿಗಳನ್ನು ನಮಗೆ ಹೇಗೆ ಬೇಕೊ ಹಾಗೆ ನೋಡಲು ಇಷ್ಟ ಪಡುತ್ತೇವೆ...
    ಅವರನ್ನು ಅವರು ಇರುವ ಹಾಗೆ ಒಪ್ಪಿಕೊಳ್ಳದೆ....

    ತುಂಬಾ ಇಷ್ಟವಾಯಿತು....

    ಚಂದದ ಕಥೆ ಕೊಟ್ಟಿದ್ದಕ್ಕೆ...
    ಧನ್ಯವಾದಗಳು....

    ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

    ಉದಯ್ ಅವರೆ,
    ಅದ್ಭುತವಾಗಿದೆ ಕಥೆ ಮತ್ತು ಅನುವಾದ. ತಮಾಷೆಯಂತೆ ಶುರುವಾಗಿ ಕೊನೆಗೆ ಏನೇನೆಲ್ಲಾ ಆಗುತ್ತೆ. ನಾನು ಲೇಖಕನಿಗೆ hurt ಆಗುವಂತೆ ಮಾತಾಡಿ, ಅವನ ಕೋಪ, ನಿರಾಶೆ, ಹತಾಶೆಯನ್ನು ಹೊರಗೆಡವಿ ಆಗ ಕ್ಲಿಕ್ಕಿಸುತ್ತಾನಲ್ಲ - ಅದು ನೈಜ ಭಾವವನ್ನು ಸೆರೆಹಿಡಿವ ಅವನ ವಿಧಾನವಿರಬಹುದೆಂದು ಭಾವಿಸಿದ್ದೆ. ಆದರೆ ಕೊನೆಗೆ ನಿರಾಸೆಯಾಯ್ತು.

    ಶಿವಪ್ರಕಾಶ್ ಹೇಳಿದರು...

    Nice article uday.

    ಬಿಸಿಲ ಹನಿ ಹೇಳಿದರು...

    ಜಲನಯನ, ಮಲ್ಲಿಕಾರ್ಜುನ,ಪ್ರಕಾಶ್, ಹಾಗೂ ಶಿವಪ್ರಕಾಶ್‍ವರೆ,
    ನಿಮ್ಮೆಲ್ಲರಿಗೂ ಓದಿ ಅಭಿಪ್ರಾಯ ಹೇಳಿದ್ದಕ್ಕೆ ಥ್ಯಾಂಕ್ಸ್.

    Unknown ಹೇಳಿದರು...

    ಕಥೆ ಚೆನ್ನಾಗಿದೆ...