Demo image Demo image Demo image Demo image Demo image Demo image Demo image Demo image

ಉಣ್ಣಿಕಥಾ

  • ಬುಧವಾರ, ಡಿಸೆಂಬರ್ 16, 2009
  • ಬಿಸಿಲ ಹನಿ
  • ಕಥಾ ಹಿನ್ನೆಲೆ: "ಉಣ್ಣಿಕಥಾ” ಮಲಯಾಳಂ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಗಿಟ್ಟಿಸಿಕೊಂಡು ಮನೆಮಾತಾಗಿದೆ. ಪೂರ್ವದ ಮೇಲೆ ಪಶ್ಚಿಮದ ಹೊಡೆತವನ್ನು ಕಥೆ ಧ್ವನಿಸುತ್ತದೆ. ಪೂರ್ವಾತ್ಯರಿಗೆ ಪಾಶ್ಚಿಮಾತ್ಯದ ವ್ಯಾಮೋಹ ಹಾಗೂ ಅದನ್ನೇ ಬಂಡವಾಳ ಮಾಡಿಕೊಂಡು ಪಾಶ್ಚಿಮಾತ್ಯರಿಂದ ಪೂರ್ವಾತ್ಯರ ಮೇಲೆ ಹಿಡಿತ ಸಾಧಿಸುವದನ್ನು ಕಥೆ ಸೂಚ್ಯವಾಗಿ ಹೇಳುತ್ತದೆ.



    ಇಲ್ಲಿ ಎರಡು ವಿಶೇಷತೆಗಳಿವೆ. ಸಾಮಾನ್ಯವಾಗಿ ಅಜ್ಜಿಯರು ಮೊಮ್ಮಕ್ಕಳಿಗೆ ಕಥೆ ಹೇಳಿದರೆ ಇಲ್ಲಿ ಮೊಮ್ಮಗ ಅಜ್ಜಿಗೆ ಕಥೆ ಹೇಳುತ್ತಿದ್ದಾನೆ. ಎರಡನೆಯದಾಗಿ ಕಥೆಯಲ್ಲಿ ಸಿನಿಮಾಅಟೋಗ್ರಾಫಿಕ್ ಶೈಲಿಯಿದೆ. ಅಂದರೆ ಕಥೆಯನ್ನು ಹೇಳುವಾಗ ಪಾತ್ರಗಳು ಹಾಗೂ ಚಿತ್ರಣಗಳು ಗೋಡೆಯ ಮೇಲೆ ಮೂಡುತ್ತವೆ. ಅಲ್ಲದೇ ಕಥೆಯಲ್ಲಿ ಅಲ್ಲಲ್ಲಿ ಪಶ್ಚಿಮದ ದಾಳಿಯನ್ನು ಸಂಕೇತಗಳ ಮೂಲಕ ಹೇಳಲಾಗಿದೆ. ಅದನ್ನು ಓದುಗರು ಗುರುತಿಸಬಹುದು.

    ಕಥೆಯ ಕೊನೆಯಲ್ಲಿ ಮುಠಾಶಿ ಕಥೆಯನ್ನು ಕೇಳುತ್ತಾ ಕೇಳುತ್ತಾ ನಿದ್ರೆ ಹೋಗುತ್ತಾಳೆ. ಆದರೆ ನಾವು ಓದುಗರು ಎಚ್ಚೆತ್ತುಕೊಳ್ಳುತ್ತೇವೆ. ಅಂದರೆ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ.



    “ಉಣ್ಣಿ, ಉಣ್ಣಿ ನಂಗೊಂದು ಕಥೆ ಹೇಳು ಬಾರೋ” ಮುಠಾಶಿ ಕರೆದಳು.


    ಮುಠಾಶಿ ಆಗಷ್ಟೆ ತನ್ನ ರಾತ್ರಿಯ ಮಿತವಾದ ಗಂಜಿ ಊಟವನ್ನು ಮುಗಿಸಿ ಸಂತೃಪ್ತಿಯಿಂದ ಎಲೆ ಅಡಿಕೆಯನ್ನು ಜಗಿಯುತ್ತಾ ಅದರ ರಸಸ್ವಾದವನ್ನು ಹೀರುತ್ತಾ ಕುಳಿತಿದ್ದಳು. ಈಗ ಉಣ್ಣಿಗಾಗಿ ಕಾಯಹತ್ತಿದಳು. ಉಣ್ಣಿಯ ಕಥೆಯನ್ನು ಕೇಳದೇ ಮುಠಾಶಿಗೆ ನಿದ್ರೆಯೇ ಬರುತ್ತಿರಲಿಲ್ಲ. ಉಣ್ಣಿ ಬರುವ ಸೂಚನೆಗಳು ಕಾಣದೆ ಹೋದಾಗ ತೆರೆದಿಟ್ಟ ಬಾಗಿಲಿನೊಳಗೆ ಇಣುಕುತ್ತಾ ಮತ್ತೊಮ್ಮೆ ಅವನನ್ನು ಕೂಗಿದಳು “ಬಾ ಉಣ್ಣಿ”. ಅವಳು ಅವನ ಕಥೆ ಕೇಳುವದಕ್ಕೆ ಪರಿತಪಿಸುತ್ತಿದ್ದಳು.


    “ಉಣ್ಣಿ ಹೋಂ ವರ್ಕ್ ಮಾಡ್ತಿದಾನೆ. ಶಾಲೆಯಲ್ಲಿ ಈಗಾಗಲೇ ಅವನ ಕ್ಲಾಸುಗಳು ಜೋರಾಗಿ ಸಾಗಿವೆ. ಅದಲ್ಲದೆ ಅವನದು ಈಗ ಎರಡನೇ ಕ್ಲಾಸು ಬೇರೆ.” ಅವನ ತಾಯಿ ಮುಠಾಶಿಯನ್ನು ಎಚ್ಚರಿಸಿದಳು.
    “ಉಣ್ಣಿ, ಒಂದೇ ಒಂದು ಸಣ್ಣಕತಿ ಹೇಳು ಸಾಕು. ಅದೇ ಉಣ್ಣಿಕಥಾ!” ಮುಠಾಶಿ ಬೇಡಿದಳು. ಅವಳು ಗೋಡೆಗೊರಗಿ ಕಾಲುಚಾಚಿಕೊಂಡು ಮಂಚದ ಮೇಲೆ ಕುಳಿತಿದ್ದಳು. ಕೋಣೆಯಲ್ಲಿ ಕಡಿಮೆ ಪ್ರಕಾಶಮಾನವುಳ್ಳ ಬಲ್ಬ್ ಇದ್ದುದರಿಂದ ಅಲ್ಲಿ ಮಬ್ಬು ಮಬ್ಬಾದ ಬೇಳಕಿತ್ತು.


    “ಅಮ್ಮಾ, ಉಣ್ಣಿ ಯಾವಾಗ್ಲೂ, ದಿನಾಲೂ ಹೇಗೆ ತಾನೆ ಕತಿ ಹೇಳ್ತಾನೆ? ಅವನೀಗ ಹೋಂ ವರ್ಕ್ ಮಾಡಬೇಕು”


    “ಇದೇ ಕಡೇದ್ದು ಮಗಳೇ, ಇನ್ಮುಂದೆ ಕೇಳಲ್ಲ”
    “ಅಮ್ಮಾ, ನಿನ್ನೆನೂ ನೀನು ಹೀಗೆ ಹೇಳಿರಲಿಲ್ವಾ?”


    ಮುಠಾಶಿ ಅಪರಾಧಿ ಪ್ರಜ್ಞೆಯಿಂದ ತನ್ನ ದೃಷ್ಟಿಯನ್ನು ಬೇರೆಡೆಗೆ ತಿರುಗಿಸಿದಳು. ಅವಳಿಗೆ ವಯಸ್ಸಾಗಿದ್ದರಿಂದ ಅವಳ ದೇಹವೆಲ್ಲಾ ಸುಕ್ಕುಗಟ್ಟಿ ಹೋಗಿತ್ತು. ಇದೀಗ ಚಿಕ್ಕ ಮಗುವಿನಂತೆ ಸಪ್ಪೆ ಮುಖ ಮಾಡಿ ಕುಳಿತಿದ್ದನ್ನು ನೋಡಿ ಉಣ್ಣಿಯ ಅಮ್ಮನ ಮನಸ್ಸು ಕರಗಿತು.


    “ಉಣ್ಣಿ, ಹೋಗು ಮುಠಾಶಿಗೆ ಕಥೆ ಹೇಳು ಹೋಗು. ಅವಳನ್ನು ಮಲಗಿಸಿದ ಮೇಲೆ ನಿನ್ನ ಹೋಂ ವರ್ಕ್ ಮಾಡುವಂತಿ”


    ತನ್ನ ಅಜ್ಜಿಗೆ ಬೇಗನೆ ನಿದ್ರೆ ಬರಲೆಂದು ಉಣ್ಣಿ ಮನದಲ್ಲಿಯೇ ಪ್ರಾರ್ಥಿಸಿದ. ಗಂಟೆ ಅದಾಗಲೇ 9.30 ಆಗಿತ್ತು.


    ಈಗ ಉಣ್ಣಿ ಬಂದು ಮುಠಾಶಿಯ ಪಕ್ಕ ಕುಳಿತ. ಅವಳ ಮುಖ ಖುಶಿಯಿಂದ ಹೊಳೆಯತೊಡಗಿತು. ದಿನಾ ರಾತ್ರಿ ಮುಠಾಶಿ ಉಣ್ಣಿಯ ಕಥೆಯನ್ನು ಕೇಳದೇ ಮಲಗುವದಿಲ್ಲ. ಅದವಳಿಗದು ಒಂದು ರೀತಿಯ ಅಭ್ಯಾಸವಾಗಿದೆ. ಕೆಟ್ಟ ಅಭ್ಯಾಸ! ಅದನ್ನು ಬಿಡಬೇಕೆಂದರೂ ಅವಳ ಕೈಯಿಂದ ಇನ್ನೂ ಸಾಧ್ಯವಾಗಿಲ್ಲ.


    “ನಿನಗೆ ಎಂಥಾ ಕತಿ ಬೇಕು, ಮುಠಾಶಿ?”


    “ಚನ್ನಾಗಿರೋದು ಯಾವದೋ ಒಂದು, ನಂಗೆ ನಿದ್ರೆ ತರುವಂಥದ್ದು”


    “ಹಾಗಾದರೆ, ಗಾಜಿನ ಮರದ ಕತೆ ಹೇಳಲೆ?”


    “ಹೂಂ”


    ಉಣ್ಣಿ ಮುಠಾಶಿಯ ಕಡೆ ಸರಿಯುತ್ತಾ ತದೇಕಚಿತ್ತದಿಂದ ತನ್ನ ಮುಂದಿರುವ ಗೋಡೆಯನ್ನೇ ನೋಡುತ್ತಾ ಕುಳಿತ. ಅದೊಂದು ಖಾಲಿ ಗೋಡೆ. ಅಲ್ಲಿ ಯಾವುದೇ ಫೋಟೊಗಳಾಗಲಿ, ಅಲಂಕಾರಿಕ ವಸ್ತುಗಳಾಗಲಿ ಇರಲಿಲ್ಲ. ಈಗ ಆ ಗೋಡೆಯ ಮೇಲೆ ಮೊಟ್ಟಮೊದಲಿಗೆ ಮೋಟುಮೋಟಾದ ಮನುಷ್ಯನ ಚಿತ್ರವೊಂದು ಮೂಡಿತು. ಆ ಮನುಷ್ಯನ ಕಿವಿಯಲ್ಲಿ ಚಿನ್ನದಿಂದ ಮಾಡಿದ ದಪ್ಪ ದಪ್ಪನಾದ ಓಲೆಗಳಿದ್ದವು. ಮಾತ್ರವಲ್ಲ ಅವನ ಮೋಟುಮೊಟಾದ ಬೆರಳುಗಳಲ್ಲೂ ಸಹ ಚಿನ್ನದ ಉಂಗುರಗಳಿದ್ದವು.


    “ಮುಠಾಶಿ, ಅಗೋ ಅಲ್ಲಿ ನೋಡು. ಅದು ಕುರುಮಾನ್ ಪಣಿಕ್ಕನ್”


    ಗೋಡೆಯ ಮೇಲೆ ಮೂಡಿರುವ ಮನುಷ್ಯನ ಚಿತ್ರವನ್ನು ಉದ್ದೇಶಿಸಿ ಉಣ್ಣಿ ಹೇಳಿದ. ಅಷ್ಟರಲ್ಲಿ ಪಲ್ಲಕ್ಕಿಯೊಂದು ಗೋಡೆಯ ಮೇಲೆ ಅಡ್ದಲಾಗಿ ಹೋಯಿತು. ಕೈಯಲ್ಲಿ ಬೀಸಣಿಗೆಯೊಂದನ್ನು ಹಿಡಿದುಕೊಂಡು ಕುರುಮಾನ್ ಆ ಪಲ್ಲಕಿಯಲ್ಲಿ ತುಸು ಗಂಭೀರವಾಗಿ ಕುಳಿತಿದ್ದಾನೆ. ಅದರ ಸುತ್ತಲೂ ಅವನ ಪರಿಚಾರಕರಿದ್ದಾರೆ. ಮುಂದೆ ಮುಂದೆ ಒಬ್ಬ ಪಂಜನ್ನು ಹಿಡಿದು ಬಂಗಾರದ ಬೆಳಕನ್ನು ಬೀರುತ್ತಾ ನಡೆಯುತ್ತಿದ್ದಾನೆ.


    “ಉಣ್ಣಿ, ಕುರುಮಾನ್ ಪಣಿಕ್ಕನ್ ಎಲ್ಲಿಗೆ ಹೋಗುತ್ತಿದ್ದಾನೆ?”


    “ಸಂಪಿಗೆ ಮರದ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋಗುತ್ತಿದ್ದಾನೆ”


    ತಕ್ಷಣ ಆ ಬಿಳಿಗೋಡೆಯ ಮೇಲೆ ದೊಡ್ದದೊಂದು ಹಸಿರು ಹಸಿರಾದ ಸಂಪಿಗೆ ಮರ ಅರಳಿ ನಿಂತಿತು. ಆ ಮರವು ಸಂಪೂರ್ಣವಾಗಿ ಹೂಗಳಿಂದ ತುಂಬಿ ಹೋಗಿದ್ದರಿಂದ ಅವುಗಳ ಭಾರಕ್ಕೆ ಮರವು ತುಸು ಬಾಗಿದಂತೆ ಭಾಸವಾಯಿತು. ಆ ಸಂಪಿಗೆ ಮರದ ಹೂಗಳ ಸುಗಂಧ ಗಾಳಿಯಲ್ಲಿ ಸೇರಿಕೊಂಡು ಇಡಿ ವಾತಾವರಣ ಮತ್ತಷ್ಟು ಆಹ್ಲಾದಕರಗೊಂಡಿತ್ತು.


    ಕುರುಮಾನ್‍ನ ಸೇವಕರು ಪಲ್ಲಕ್ಕಿಯನ್ನು ಮೆಲ್ಲಗೆ ಮರದ ಮುಂದೆ ಇರಿಸಿದರು. ಕುರುಮಾನ್ ಪಣಿಕ್ಕನ್ ತನ್ನ ಬಲಗಡೆಯಿಂದ ಕೆಳಗಿಳಿದ. ತಕ್ಷಣ ಒಬ್ಬ ಸೇವಕ ಓಡಿ ಬಂದು ಅವನ ಕೈಯಲ್ಲಿದ್ದ ಬೀಸಣಿಗೆಯನ್ನು ತೆಗೆದುಕೊಂಡು ಪಲ್ಲಕ್ಕಿಯಲ್ಲಿಟ್ಟ. ನಸುಕಿನ ತಂಗಾಳಿಗೆ ಮರದ ಎಲೆಗಳು ಅಲುಗಾಡಿದವು. ಕುರುಮಾನ್ ಎಲ್ಲಿಗಾದರು ಹೋಗಬೇಕಾದರೆ ಸದಾ ತನ್ನ ಜೊತೆಯಲ್ಲಿ ಬೀಸಣಿಗೆಯನ್ನು ಒಯ್ಯುತ್ತಿದ್ದ-ಅದು ಮಳೆಗಾಲವಾದರೂ ಸರಿಯೇ!


    ಆ ಸಂಪಿಗೆ ಮರದ ಬುಡದಲ್ಲಿ ಸಣ್ಣದೊಂದು ಕಟ್ಟೆಯಿತ್ತು. ಆ ಕಟ್ಟೆಯ ಮೇಲೆ ಮೂರ್ತಿಯೊಂದನ್ನು ಇರಿಸಲಾಗಿತ್ತು. ಅದು ಎಣ್ಣೆಗಟ್ಟಿತ್ತು. ಕುರುಮಾನ್ ಪಣಿಕ್ಕನ್ ಪೂಜೆ ಸಲ್ಲಿಸಿದ ಮೇಲೆ ತನ್ನ ಎರಡೂ ಹಸ್ತಗಳನ್ನು ಜೋಡಿಸಿ ಕಾವಿಲಮ್ಮನಿಗೆ ನಮಸ್ಕರಿಸಿದ. ಕಾವಿಲಮ್ಮನ ಪಕ್ಕ ಯಾವುದೋ ಪುರಾತನ ಕಾಲದ ಪಣತಿಯೊಂದು ಉರಿಯುತ್ತಿತ್ತು. ಅದರ ಬೆಳಕು ಸ್ವಲ್ಪ ಹೆಚ್ಚೇ ಇತ್ತು.


    “ಉಣ್ಣಿ, ಯಾರದು?”


    ಚನ್ನಾಗಿರುವ ಉಡುಪಧಾರಿಯೊಬ್ಬ ಆ ಬಿಳಿ ಗೋಡೆಯ ಮೇಲೆ ಮೂಡಿದ. ಅವನು ಅಂಗಿ ಧರಿಸಿದ್ದ. ಕೂದಲನ್ನು ನೀಟಾಗಿ ಕತ್ತರಿಸಿ ಬಾಚಿದ್ದ. ಆದರೆ ಅಲ್ಲಿರುವರೆಲ್ಲರೂ ತಮ್ಮ ಕೂದಲನ್ನು ಬಾಚಿ ತುರುಬಿನಂತೆ ಗಂಟು ಕಟ್ಟಿದ್ದರಿಂದ ಅವರ ಮಧ್ಯ ಈ ವ್ಯಕ್ತಿ ಅಪರಿಚಿತನಂತೆ ಕಂಡ.


    “ಅವನು ಮೆಲಕ್ಕೋರನ್. ಮಸಿದಿ ಮಂದಿರಗಳನ್ನು ಕಟ್ಟುವವ.” ಉಣ್ಣಿ ಹೇಳಿದ.
    ಮೆಲಕ್ಕೋರನ್, ಕುರುಮಾನ್ ಪಣಿಕ್ಕನ್ ಇರುವಲ್ಲಿಗೆ ನಡೆದುಬಂದು ತಲೆ ಬಗ್ಗಿಸಿ ತನ್ನ ಎರಡೂ ಕೈಗಳನ್ನು ಜೋಡಿಸಿ ಅತ್ಯಂತ ಗೌರವದಿಂದ ನಮಸ್ಕರಿಸಿದ.


    ಪೂರ್ವದ ದಿಗಂತ ಕಳೆಗುಂದುತ್ತಿತ್ತು.
    “ಯಾರು ನೀನು?”


    “ನಾನು ಪಶ್ಚಿಮ ದೇಶದವನು. ಒಬ್ಬ ಮೇಸ್ತ್ರಿ. ಮೆಲಕ್ಕೋರನ್ ನನ್ನ ಹೆಸರು”


    “ನಿನಗೇನು ಬೇಕು?”


    “ಕೆಲಸ”


    ಪಣಿಕ್ಕನ್ ತನ್ನ ಆಪ್ತಸಲಹಾಗಾರನತ್ತ ನೋಡಿದ. ಆ ಪಂಜಿನ ಬೆಳಕಲ್ಲಿ ಅವನು ತನ್ನ ತಲೆ ಅಲ್ಲಾಡಿಸುತ್ತಿರುವದು ಕಾಣಿಸಿತು.
    ಒಡನೆಯೇ ಸಂಪಿಗೆ ಮರದ ಎಲೆಗಳು ಚರಚರನೆ ಸದ್ದು ಮಾಡಿದವು. ಅದರಲ್ಲಿದ್ದ ಬಣ್ಣ ಬಣ್ಣದ ಪಕ್ಷಿಗಳು ತಮ್ಮ ನಿದ್ರೆಯಲ್ಲಿಯೇ ಒಮ್ಮೆ ಕದಲಿದವು. ಗೂಡಿನಲ್ಲಿದ್ದ ಮೊಟ್ಟೆಗಳು ಗಾಳಿಯಲ್ಲಿ ಏನನ್ನೋ ಪಿಸುಗುಟ್ಟಿದಂತೆ ಭಾಸವಾಯಿತು.


    “ಮೆಲಕ್ಕೋರನ್, ನಿನಗಿಲ್ಲಿ ಕೆಲಸವಿಲ್ಲ. ಪಕ್ಕದ ರಾಜ್ಯಗಳಿಗೆ ಹೋಗಿ ಕೇಳು”


    “ಇಲ್ಲ, ಇಲ್ಲಿಯೇ ನಿಮ್ಮ ಕಣ್ಣೆದುರಿಗೆ ಈಗಲೇ ಮಾಡುವಂಥ ಒಂದು ಕೆಲಸವಿದೆ” ಮೆಲಕ್ಕೋರನ್ ಹೇಳಿ ಪುನಃ ವಿನಮ್ರನಾಗಿ ತಲೆಬಾಗಿ ನಿಂತ.


    ಪಣಿಕ್ಕನ್ ಆಶ್ಚರ್ಯಚಕಿತನಾಗಿ ಮತ್ತೊಮ್ಮೆ ತನ್ನ ಆಪ್ತಸಲಹಾಗಾರನತ್ತ ನೋಡಿದ.


    “ಈ ಮರವನ್ನೇ ನೋಡಿ” ಮೆಲಕ್ಕೋರನ್ ಹೇಳುತ್ತಾ ಹೋದ “ತುಂಬಾ ಹಳೆಯದಾಗಿದೆ. ಗೆದ್ದಲು ಹಿಡಿದು ಈಗಲೋ ಆಗಲೋ ಬಿದ್ದುಹೋಗುವಂತಿದೆ. ಕಾವಿಲಮ್ಮನಿಗೆ ಹೆಚ್ಚು ದಿನ ನೆರಳು ಕೊಡಲಾರದು. ಇದನ್ನು ಕಿತ್ತೊಗೆದು ಹೊಸ ಮರವೊಂದನ್ನು ನೆಡೋಣ”


    “ಹಾಗೆ ಮಾಡಲು ಸಾಧ್ಯವೇ?”
    “ನಾನು, ಎಂದೆಂದಿಗೂ ಗೆದ್ದಲು ಹಿಡಿಯದ, ಎಲೆಗಳನ್ನು ಉದುರಿಸಲಾರದಂಥ ಮರವೊಂದನ್ನು ನೇಡುತ್ತೇನೆ.”


    “ಅಂಥದ್ದೊಂದು ನಿಜಕ್ಕೂ ಇದೆಯೇ ಮೆಲಕ್ಕೋರನ್?”


    “ಹಾ, ಹೌದು ಪಶ್ಚಿಮ ದೇಶದಲ್ಲಿದೆ”


    “ಸರಿ, ಹಾಗಾದರೆ. ನಮಗೂ ಅಂಥದ್ದೊಂದು ಮರವೊಂದವಿರಲಿ. ಈ ಕೂಡಲೇ ನಿನ್ನ ಕೆಲಸವನ್ನು ಆರಂಭಿಸು.”


    ಮೆಲಕ್ಕೋರನ್ ತನ್ನ ತಲೆ ನೆಲಕ್ಕೆ ತಾಗುವಂತೆ ಬಗ್ಗಿ ನಮಸ್ಕರಿಸಿ ಆ ಕತ್ತಲಲ್ಲಿ ಮಾಯವಾದ. ಕುರುಮಾನ್ ತನ್ನ ಪಲ್ಲಕ್ಕಿಯಲ್ಲಿ ಕುಳಿತ. ಸೇವಕನೊಬ್ಬ ಬೀಸಣಿಗೆಯನ್ನು ಅವನ ಕೈಗಿತ್ತ. ಮುಂದೆ ಮುಂದೆ ಪಂಜಿನ ಬೆಳಕು ಹಿಂದೆ ಹಿಂದೆ ಪಲ್ಲಕ್ಕಿ ಹೊರಟು ಕುರುಮಾನ್ ಪಣಿಕ್ಕನ್‍ನ ವಾಡೆಯನ್ನು ತಲುಪಿತು.


    ಕತ್ತಲು ಕರಗುತ್ತಿತ್ತು. ಮರದ ಮೇಲ್ತುದಿಗಳು ಬಿಳಿಚಿಕೊಂಡಿದ್ದವು. ಪಣತಿಯಲ್ಲಿನ ಎಣ್ಣೆ ತೀರಿಹೋಗುತ್ತಿತ್ತು.


    “ಉಣ್ಣಿ, ಆ ಸಂಪಿಗೆ ಮರವನ್ನು ಕತ್ತರಿಸುತ್ತಾರಾ?” ಮುಠಾಶಿ ಹತಾಶಳಾಗಿ ಕೇಳಿದಳು.


    ಅಷ್ಟರಲ್ಲಿ ಮರ ಕತ್ತರಿಸಿದ ಸದ್ದು ಕೇಳಿಸಿತು. ಈ ಭೂಮಿಯಷ್ಟು ಹಳೆಯದಾದ ಮರವನ್ನು ಕತ್ತರಿಸಿದ ಮೇಲೆ ದಣಿವಾರಿಸಿಕೊಳ್ಳಲು ಮೆಲಕ್ಕೋರನ್ ಪಕ್ಕದಲ್ಲಿದ್ದ ಕಲ್ಲುಬಂಡೆಗೆ ಆತು ಕುಳಿತನು. ಆಹಾರವನ್ನು ಹುಡುಕಿಕೊಂಡು ಹೊರಗೆ ಹೋಗಿದ್ದ ಹಕ್ಕಿಗಳೆಲ್ಲಾ ಮರವನ್ನು ಕತ್ತರಿಸಿದ ಸದ್ದಿಗೆ ಹಾರುತ್ತಾ ವಾಪಾಸಾದವು. ತಮ್ಮ ಗೂಡುಗಳು, ಮೊಟ್ಟೆಗಳು ಕಾಣಿಸದೆ ಕಬ ಕಬ ಎಂದು ಚೀರುತ್ತಾ ಅಸಹಾಯಕವಾಗಿ ಅತ್ತಿಂದಿತ್ತ ವೃತ್ತಾಕಾರದಲ್ಲಿ ಹಾರಾಡತೊಡಗಿದವು. ಮೆಲಕ್ಕೋರನ್ ಅವುಗಳತ್ತ ಗರಸನ್ನು ಎಸೆದು ಓಡಿಸಲು ಪ್ರಯತ್ನಿಸಿದ. ಆದರವು ತಕ್ಷಣಕ್ಕೆ ಹಾರಿಹೋಗದೆ ಕತ್ತರಿಸಿದ ಮರದ ಬಳಿ ಸ್ವಲ್ಪ ಹೊತ್ತು ಸುಳಿದಾಡಿದವು.


    “ಅಯ್ಯೋ! ಪಾಪ ಉಣ್ಣಿ, ಪಾಪ” ಮುಠಾಶಿ ಮರುಗಿದಳು.


    ಉಣ್ಣಿ ಮುಂದುವರಿಸಿದ.


    ಗೋಡೆಯ ಮೇಲೆ ಮತ್ತೆ ಮೆಲಕ್ಕೋರನ್‍ನ ಆಕೃತಿ ಮೂಡಿತು. ಅವನು ಹುಚ್ಚಿಗೆ ಬಿದ್ದವರ ತರ ಮರವನ್ನು ಕಟ್ಟುವದರಲ್ಲಿ ಮಗ್ನನಾಗಿದ್ದ. ಮಧ್ಯ ಮಧ್ಯ ತಂಪಾದ ಎಳೆನೀರನ್ನು ಕುಡಿಯುತ್ತಿದ್ದುದರಿಂದ ಅದರ ಸಿಪ್ಪೆಗಳೆಲ್ಲಾ ಅವನ ಸುತ್ತಲೂ ಬಿದ್ದಿದ್ದವು. ಆಗಾಗ ಕುರುಮಾನ್ ತನ್ನ ಪಲ್ಲಕ್ಕಿಯಲ್ಲಿ ಬಂದು ಮೆಲಕ್ಕೋರನ್ ಏನು ಮಾಡುತ್ತಿದ್ದಾನೆಂಬುದನ್ನು ನೋಡಿಹೋಗುತ್ತಿದ್ದ. ಅವನು ಗಾಜಿನ ದಿನ್ನೆಯನ್ನು ಸಲಿಸಾಗಿ ನಯವಾಗಿ ಕೆತ್ತುವದನ್ನು ನೋಡಿ ಆಶ್ಚರ್ಯಚಕಿತನಾದ. ಗಾಜಿನ ಚೂರುಗಳು ಕಾವಿಲಮ್ಮಳ ಮುಂದೆ ರಾಶಿ ರಾಶಿಯಾಗಿ ಬಿದ್ದಿದ್ದವು. ಕೆಲವು ತುಂಟ ಮಕ್ಕಳು ಮಿರುಗುವ ಗಾಜಿನ ಚೂರುಗಳೊಂದಿಗೆ ಆಡುತ್ತಾ ಆಡುತ್ತಾ ತಮ್ಮ ಬೆರಳುಗಳನ್ನು ಕತ್ತರಿಸಿಕೊಂಡರು.


    “ಓ, ಉಣ್ಣಿ ಅವರಿಗೆ ರಕ್ತ ಬರ್ತಿದಿಯಾ?” ಮುಠಾಶಿ ಕೇಳಿದಳು


    ಮೊದಲು ಮೆಲಕ್ಕೋರನ್ ಮರದ ಬೇರುಗಳನ್ನು ನಂತರ ರೆಂಬೆಕೊಂಬೆಗಳನ್ನು ಕೆತ್ತಿದ. ಉಳಿದಿದ್ದು ಹೂ, ಎಲೆಗಳು ಮಾತ್ರ.


    ಎಲೆಗಳಿಗೆ ಹಸಿರು ಗಾಜು, ಹೂಗಳಿಗೆ ಬಿಳಿಗಾಜು ಬೇಕಾಗಿತ್ತು.


    ಮುಠಾಶಿ ಆ ಬೋಳುಬೋಳಾದ ಮರದತ್ತ ಒಮ್ಮೆ ನೋಡಿದಳು.


    “ಉಣ್ಣಿ, ಹೋಂ ವರ್ಕ್ ಮುಗಿಸೋದಿಲ್ವಾ? ಗಂಟೆ ಆಗಲೆ ಹತ್ತು ಮುಕ್ಕಾಲಾಗುತ್ತಾ ಬಂತು” ಉಣ್ಣಿಯ ಅಮ್ಮ ಕೇಳಿದಳು.


    “ಇನ್ನೇನು ಮುಗಿತಾ ಬಂತು ಅಮ್ಮ”


    “ಬೇಗ ಬೇಗ ಮುಗಿಸು”


    ಮುಠಾಶಿಗೆ ಇನ್ನೇನು ಕಥೆ ಮುಗಿತಾ ಬಂತು ಎಂದು ಗೊತ್ತಾಗಿ ಬೇಸರವಾಯಿತು. ತನ್ನ ಮುಖವನ್ನು ಕೆಳಗೆ ಹಾಕಿದಳು. ನಿದ್ರೆ ಹತ್ತಿರ ಸುಳಿಯುತ್ತಿಲ್ಲ.


    “ಉಣ್ಣಿ” ಅವನ ಕಿವಿಯಲ್ಲಿ ಪಿಸುಗುಟ್ಟಿದಳು “ಅವಸರದಿಂದ ಕತಿ ಮುಗಿಸಬೇಡ”
    ಉಣ್ಣಿ ನಿಧಾನಿಸಿದ.


    ಮೆಲಕ್ಕೋರನ್ ಎಲೆಗಳನ್ನು ಹಾಗೂ ಹೂಗಳನ್ನು ಕೆತ್ತಲು ಬಹಳ ದಿನಗಳನ್ನು ತೆಗೆದುಕೊಂಡ. ಪ್ರತಿಯೊಂದು ಹೂವನ್ನು, ಎಲೆಯನ್ನು ಅತ್ಯಂತ ನಾಜೂಕಾಗಿ ನಿರ್ಮಿಸಿದ.


    ಮೆಲಕ್ಕೋರನ್‍ನ ಕೆಲಸ ನೋಡಲು ಕುರುಮಾನ್ ಆಗಾಗ ತನ್ನ ಪಲ್ಲಕಿಯಲ್ಲಿ ಬಂದುಹೋಗಿ ಮಾಡಿದ. ಕೆಲವು ತುಂಟ ಹುಡುಗರು ಗಾಜಿನ ಚೂರುಗಳ ರಾಶಿಯ ಸುತ್ತ ನೆರೆದು ಅವುಗಳೊಂದಿಗೆ ಆಟವಾಡುತ್ತ ಮತ್ತೆ ಮತ್ತೆ ತಮ್ಮ ಬೆರಳುಗಳಿಗೆ ಗಾಯವನ್ನು ಮಾಡಿಕೊಳ್ಳುತಿದ್ದರು.


    “ಕೊನೆಗೂ ಒಂದೂವರೆ ವರ್ಷದ ನಂತರ ಮರದ ಕೆಲಸ ಮುಗಿಯಿತು” ಉಣ್ಣಿ ಹೇಳಿದ.


    ಕುರುಮಾನ್ ಪಣಿಕ್ಕನ್ ಆ ಮನಮೋಹಕ ಗಾಜಿನ ಮರವನ್ನೊ ನೋಡಿ ಮೋಹಕ್ಕೊಳಗಾದನು. ಹಸಿರು ಗಾಜಿನ ಎಲೆಗಳು ಹಾಗೂ ಬಿಳಿ ಗಾಜಿನ ಎಲೆಗಳು ಸೂರ್ಯನ ಬೆಳಕಿಗೆ ಮಿಂಚುತ್ತಿದ್ದುದರಿಂದ ಆ ನಸುಗತ್ತಲಲ್ಲೂ ಅವುಗಳ ಪಾರದರ್ಶಕತೆ ಆ ಸೂರ್ಯನನ್ನೂ ನಾಚಿಸುವಂತಿತ್ತು.


    ಈ ಅದ್ಭುತವಾದ ಮರವನ್ನು ನೋಡಲು ಜನ ಎಲ್ಲೆಂದರಲ್ಲಿಂದ ಬರತೊಡಗಿದರು. ಕುರುಮಾನ್‍ನಿಗೆ ಮಾತ್ರ ಇಂಥ ಮರವನ್ನು ಕಟ್ಟಿಸಲು ಸಾಧ್ಯ ಎಂದು ಜನ ಮಾತಾಡಿಕೊಂಡರು. ಕುರುಮಾನ್ ಹೆಮ್ಮೆಯಿಂದ ಬೀಗಿದ.


    ಮೆಲಕ್ಕೋರನ್‍ನ ಕೆಲಸವನ್ನು ಮೆಚ್ಚಿಕೊಂಡು ಕುರುಮಾನ್ ಅವನಿಗೆ ಬೆಲೆಬಾಳುವ ಉಡುಗೂರೆಗಳನ್ನು ನೀಡಿ ಸತ್ಕರಿಸಿದ.
    ಗಾಜಿನ ಮರವು ನೋಡಲು ಅದ್ಭುತವಾಗಿತ್ತು. ಸೌಂದರ್ಯದಖಣಿಯಂತಿತ್ತು. ಸೌಂದರ್ಯದಲ್ಲಿ ಅದನ್ನು ಸರಿಗಟ್ಟುವ ಮತ್ತಾವ ವಸ್ತುಗಳು ಅಲ್ಲಿರಲಿಲ್ಲ. ಆದರೇನು? ಅದರಲ್ಲಿ ಸುವಾಸನೆಯೇ ಇರಲಿಲ್ಲ. ಆ ಮರದ ಟೊಂಗೆಗಳಿಗೆ ರಮ್ಯವಾದ ಕೃತಕ ಗೂಡುಗಳನ್ನು ನೇತುಹಾಕಲಾಗಿತ್ತು. ಆದರೆ ಅಲ್ಲಿ ಬಣ್ಣಬಣ್ಣದ ಹಕ್ಕಿಗಳು ತಮ್ಮ ರೆಕ್ಕೆಗಳನ್ನು ಫಡಫಡಿಸುತ್ತಾ ಕುಳಿತಿರಲಿಲ್ಲ.


    ಈಗ ಉಣ್ಣಿ ಕಥೆ ಹೇಳುವದನ್ನು ಮುಗಿಸಿ ಮುಠಾಶಿಯೆಡೆಗೆ ನೋಡಿದ. ಅವಳು ಅದಾಗಲೇ ಗೋಡೆಗೊರಗಿಕೊಂಡು ನಿದ್ರೆ ಹೋಗಿದ್ದಳು.


    ಮಲಯಾಳಂ ಮೂಲ: ಎಮ್. ಮುಕುಂದನ್
    ಇಂಗ್ಲೀಷಗೆ: ಕೆ,ಎಮ್.ಶರೀಫ್ ಮತ್ತು ನೀರದಾ ಸುರೇಶ್
    ಕನ್ನಡಕ್ಕೆ: ಉದಯ್ ಇಟಗಿ


    1೦-4-2011 ರ ಉದಯವಾಣಿಯಲ್ಲಿ ಪ್ರಕಟವಾಗಿದೆ http://www.udayavani.com/news/61820L15-ಉಣ-ಣ-ಕಥ-.html

    6 ಕಾಮೆಂಟ್‌(ಗಳು):

    sunaath ಹೇಳಿದರು...

    ಉದಯ,
    ಈ ಸುಂದರ ಮಲೆಯಾಳಿ ಕಥೆಯನ್ನು ನಮಗೆ ಅನುವಾದಿಸಿ ಕೊಟ್ಟದ್ದಕ್ಕಾಗಿ ನಿಮಗೆ ಧನ್ಯವಾದಗಳು. ಚಿಕ್ಕದಾದರೂ ತುಂಬಾ ಅರ್ಥಗರ್ಭಿತವಾದ ಕತೆ. ಅಭಿನಂದನೆಗಳು.

    Unknown ಹೇಳಿದರು...

    ಉದಯ್ ಒಂದು ಒಳ್ಳೆಯ ಕಥೆಯನ್ನು ಓದಿಸಿದ ನಿಮಗೆ ಧನ್ಯವಾಗಳು. ಕಥೆಯ ಮೊದಲಲ್ಲೇ ಅದರ ಹಿನ್ನೆಲೆಯನ್ನು ಓದಿದ್ದರಿಂದ ಅದೇ ಆಶಯದಿಂದ ಕಥೆ ಓದುವಂತಾಯಿತು. ಅದನ್ನು ಬಿಡಿಸಿಕೊಂಡು ಎರಡನೇ ಬಾರಿಗೆ ಓದಿದೆ. ಕಥೆ ತುಂಬಾ ಖುಷಿಕೊಟ್ಟಿತು. ಕಥೆ ಹೇಳುವ ಸಂಪ್ರದಾಯವೇ ನಾಶವಾಗುತ್ತಿದೆ. ಈ ಕಥೆಯಲ್ಲಿ ಮೊಮ್ಮಗ ಅಜ್ಜಿಗೆ ಕಥೆ ಹೇಳುವುದು ತಮಾಷೆಯ ವಿಷಯವಲ್ಲ. ಈಗ ಅಜ್ಜಿ/ಅಜ್ಜಂದಿರಾಗುತ್ತಿರುವವರಲ್ಲಿ ಹಾಗೂ ಆಗಿರುವವರಲ್ಲಿ ಹೆಚ್ಚಿನವರು 90ರ ದಶಕದಿಂದಲೂ ಟೀವಿ ಹುಚ್ಚಿಗೆ ಬಿದ್ದು ಕಥೆ ಹೇಳುವ ಸಂಪ್ರದಾಯಕ್ಕೆ ಮುಖ ತಿರಿಗಿಸಿದವರು! ಮಕ್ಕಳೂ ಅಷ್ಟೆ, ಟೀವಿ, ಕಂಪ್ಯೂಟರ್ ಗುಂಗಿನಲ್ಲಿ ಕಥೆಗೆ ಕಿವಿ ಕೊಟ್ಟಿದ್ದು ಸ್ವಲ್ಪ ಕಡಿಮೆ ಎಂದೇ ಹೇಳಬಹುದು. ಯಾವ ದೇಶವೆಂದು ಸರಿಯಾಗಿ ನೆನಪಿಗೆ ಬರುತ್ತಿಲ್ಲ, (ಸ್ಕಾಟ್ ಲ್ಯಾಂಡ್ ಅಥವಾ ಸ್ವಿಟ್ಜರ್ ಲ್ಯಾಂಡ್ ಇರಬಹುದು) ಮಕ್ಕಳಿಗೆ ಕಥೆ ಕೇಳಿಸುವುದಕ್ಕೆ ಹೊಸ ಉಪಾಯ ಮಾಡಿದ್ದಾರೆಂದು ಓದಿದ್ದೆ. ಒಂದು ನಿರ್ಧಿಷ್ಟ ನಂಬರಿಗೆ ದೂರವಾಣಿ ಮಾಡಿ, ಇಷ್ಟವಾದ ಕಥೆಯನ್ನು ಆಯ್ದುಕೊಂಡರೆ ಅಜ್ಜಿಯ ಅಥವಾ ಅಜ್ಜಂದಿರ ಧ್ವನಿಯಲ್ಲಿ ಆ ಕಥೆಯನ್ನು ಕೇಳುತ್ತಾ ಮಲಗಬಹುದಂತೆ! ಒಳ್ಳೆಯ ುಪಾಯವೇನೋ ಹೌದು. ಆದರೆ ನಮ್ಮ ಅಜ್ಜ ಅಜ್ಜಿಯರ ಬಾಯಲ್ಲಿ ಕೇಳುವ, ಒಂದೇ ಕಥೆಯನ್ನು ಮತ್ತೆ ಮತ್ತೆ ಹೇಳುವಾಗ ಹೊಸದರಂತೆ ಹೇಳುವ ಕೇಳುವ ಸೊಗಸು ಅದರಲ್ಲಿ ಬಂದೀತೆ? ಮುಂದೆ ಎಂದಾದರೂ ಈ ಕಥೆ ಹೇಳುವ ಕಥನಕಲೆ ಪುನರುಜ್ಜೀವನಗೊಂಡರೆ ಈ ಕಥೆಯಂತೆ ಮೊಮ್ಮಕ್ಕಳು ಅಜ್ಜಿಗೆ ಕಥೆ ಹೇಳಿ ಮೊದಲು ಅವರನ್ನು ತಯಾರು ಮಾಡಬೇಕಾಗುತ್ತದೆ!

    ಸಾಗರದಾಚೆಯ ಇಂಚರ ಹೇಳಿದರು...

    ಉದಯ್ ಸರ್
    ಒಂದು ಒಳ್ಳೆಯ ಕಥೆ ಓದಿಸಿದ್ದಿರಿ
    ಓದಿ ಬಹಳ ಸಂತಸ ಆಯಿತು
    ನಿಮ್ಮ ಬರಹಗಳಲ್ಲಿ ಏನೋ ಹೊಸತನ ಯಾವಾಗಲೂ ಇರುತ್ತದೆ

    shivu.k ಹೇಳಿದರು...

    ಉದಯ್ ಸರ್,

    ತುಂಬಾ ಒಳ್ಳೆಯ ಕಥೆಯನ್ನು ಅನುವಾದಿಸಿದ್ದೀರಿ...ಮಲೆಯಾಳಿಯಲ್ಲಿರುವ ಈ ಕಥೆಯ ನಿರೂಪಣೆ ಗೋಡೆಯ ಮೇಲಿನ ಚಿತ್ರಗಳು ನಮ್ಮನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತವೆ. ಕಥೆಯ ತಿರುಳು ಅಲೋಚನೆಗೀಡುಮಾಡುತ್ತದೆ...

    PARAANJAPE K.N. ಹೇಳಿದರು...

    ಕಥೆ ಚೆನ್ನಾಗಿದೆ. ಅನುವಾದಿಸಿ ಓದಲು ಅನುವು ಮಾಡಿದ್ದಕ್ಕೆ ವಂದನೆಗಳು

    ದಿನಕರ ಮೊಗೇರ ಹೇಳಿದರು...

    ಉದಯ್ ಸರ್,
    ತುಂಬಾ ಉತ್ತಮ್ ಕಥೆ ಅನುವಾದ ಮಾಡಿ ಕೊಟ್ಟಿದ್ದೀರಿ..... ಧನ್ಯವಾದಗಳು..... ಒಂದು ಸಲಹೆ ಸರ್...... ನಿಮ್ಮ ಫಾಂಟ್ ಬಣ್ಣ ಹಸಿರಾಗಿದೆ... ಓದಲು ಕಷ್ಟವಾಗುತ್ತಿದೆ.....