Demo image Demo image Demo image Demo image Demo image Demo image Demo image Demo image

ಚೀನು ಅಚಿಬೆಯ “ಡೆಡ್ ಮೆನ್ಸ್ ಪಾಥ್”

  • ಗುರುವಾರ, ಡಿಸೆಂಬರ್ 24, 2009
  • ಬಿಸಿಲ ಹನಿ
  • ವಿಷಯ ಸೂಚನೆ: ಈ ಲೇಖನವನ್ನು ನನ್ನ ಬ್ಲಾಗಿನ ಒಂದು ವರುಷದ ಹುಟ್ಟುಹಬ್ಬದ ವಿಶೇಷತೆಗಾಗಿ ಸಿದ್ಧಪಡಿಸಿದ್ದೆ. ಆದರೆ ಹುಟ್ಟುಹಬ್ಬದ ಲೇಖನ ಮತ್ತು ಈ ಲೇಖನಗಳೆರಡೂ ಸೇರಿ ಓದಲು ತುಂಬಾ ದೊಡ್ಡದಾಗುತ್ತದೆಂದು ಇಂದು ಪ್ರತ್ಯೇಕವಾಗಿ ಕೊಡುತ್ತಿದ್ದೇನೆ. ಓದಿ ಅಭಿಪ್ರಾಯಿಸಿ.

    ಚೀನು ಅಚಿಬೆ ಸಮಕಾಲಿನ ಜಗತ್ತು ಕಂಡ ದೈತ್ಯ ಪ್ರತಿಭೆಯ ಬರಹಗಾರ. ನೈಜೇರಿಯಾ ಮೂಲದ ಚೀನು ಹುಟ್ಟಿದ್ದು ನೈಜೇರಿಯಾದ ಓಗಿಡಿ ಎಂಬ ಹಳ್ಳಿಯಲ್ಲಿ. ಅದೇ ಊರಿನಲ್ಲಿ ಅವನ ತಂದೆ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದುದರಿಂದ ಅವನ ವಿಧ್ಯಾಭ್ಯಾಸ ಅಲ್ಲಿಯೇ ಮುಂದುವರಿಯಿತು. ಮುಂದೆ ಆತ ಯೂನಿವರ್ಷಿಟಿ ವಿಧ್ಯಾಭ್ಯಾಸಕ್ಕಾಗಿ ಇಂಗ್ಲೀಷ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು ಇಬಾಡನ್ ಎಂಬಲ್ಲಿ ಮುಗಿಸಿದ. ಅಲ್ಲಿಯೇ ಆತ ಯೂರೋಪಿಯನ್ನರು ಆಫ್ರಿಕಾ ಖಂಡದ ಬಗ್ಗೆ ಬರೆದ ಬಹಳಷ್ಟು ಕಾದಂಬರಿಗಳನ್ನು ಓದಲು ಆರಂಭಿಸಿದ್ದು. ಹೀಗೆ ಓದುವಾಗ ಅವನಿಗೇನನ್ನಿಸಿತೋ ಏನೋ ಇನ್ಮುಂದೆ ನಮ್ಮ ಕಥೆಯನ್ನು ನಾವೇ ದಾಖಲಿಸಿದರೆ ಚೆನ್ನ ಎಂದುಕೊಂಡು ಬರಹಗಾರನಾಗಲು ನಿರ್ಧರಿಸಿದ. ಹಾಗೆಂದೇ ಆತ ಆಫ್ರಿಕಾ ಖಂಡದ ಮುಖ್ಯವಾಗಿ ನೈಜೇರಿಯಾದವರ ನೋವು ನಲಿವುಗಳನ್ನು ಎಲ್ಲೂ ಆವುಟಗೊಳಿಸದೆ ಅಬ್ಬರಗೊಳಿಸದೆ ಇದ್ದಕ್ಕಿದ್ದಂತೆ ದಾಖಲಿಸುತ್ತಾ ಹೋದ. ಪರಿಣಮವಾಗಿ ಬಹಳಷ್ಟು ಕಥೆ, ಕಾದಂಬರಿಗಳನ್ನು ಹೊರತಂದನು. ಅವನ ಮೊಟ್ಟ ಮೊದಲ ಕಾದಂಬರಿ “ಥಿಂಗ್ಸ್ ಫಾಲ್ ಅಪಾರ್ಟ್” ಇಂಗ್ಲೀಷ ಸಾಹಿತ್ಯವಲಯದಲ್ಲಿ ಬಹು ಚರ್ಚೆಗೊಳಗಾದ ಕಾದಂಬರಿ. ಮಾತ್ರವಲ್ಲ ಅವನಿಗೆ ಅಪಾರ ಕೀರ್ತಿ, ಯಶಸ್ಸುಗಳೆರಡನ್ನೂ ತಂದುಕೊಟ್ಟಿತು. ಮುಂದೆ ಇದೇ ಕಾದಂಬರಿಗೆ ನೋಬೆಲ್ ಪ್ರಶಸ್ತಿಯೂ ಸಹ ದೊರಕಿತು. ಮುಂದೆ ಈತ “No Longer at Ease” (1960), “Arrow of God” (1964), “A Man of the People” (1966) ಎನ್ನುವ ಕಾದಂಬರಿಗಳನ್ನು "Marriage Is A Private Affair" (1952), "Dead Men's Path" (1953), “The Sacrificial Egg and Other Stories” (1953) ಎನ್ನುವ ಕಥಾಸಂಕಲನಗಳನ್ನು ಹೊರತಂದನು.

    ಚೀನು ಅಚಿಬೆಯು ಕಾದಂಬರಿಗಳನ್ನು ಬರೆಯುವದರಲ್ಲಿ ಪ್ರಸಿದ್ಧಿ ಪಡೆದಷ್ಟೆ ಸಣ್ಣ ಕಥೆಗಳನ್ನು ಬರೆಯುವದರಲ್ಲಿಯೂ ಸಹ ಎತ್ತಿದ ಕೈ. ಆತನ ಬಹಳಷ್ಟು ಕಥೆಗಳು ಗಾತ್ರ ಮತ್ತು ರಚನೆಯಲ್ಲಿ ಚಿಕ್ಕದಾಗಿದ್ದರೂ ಅಗಾಧವಾದದ್ದನ್ನೇನೋ ಹೇಳುತ್ತವೆ. ಅಂಥ ಕಥೆಗಳಲ್ಲಿ ಓದುಗರನ್ನು ಚಿಂತನೆಗೆ ಹಚ್ಚುವ ಮತ್ತು ಚರ್ಚಿಸುವಂತೆ ಮಾಡುವ ಕಥೆ “ಡೆಡ್ ಮೆನ್ಸ್ ಪಾಥ್”. ಘಟನೆಯಿಂದ ಘಟನೆಗೆ ಬಹಳಷ್ಟು ವಿವರಣೆಗಳಿಲ್ಲದೆ ಬೇಗ ಬೇಗನೆ ಸಾಗುವ ಈ ಕಥೆ ಕೊನೆಯಲ್ಲಿ ಓದುಗರನ್ನು ಬೆಚ್ಚಿಬೀಳಿಸುವಂತೆ ಮಾಡುತ್ತದೆ. ಈ ಕಥೆಯು ಆಧುನಿಕತೆ ಮತ್ತು ಸಾಂಪ್ರದಾಯಕತೆಯ ನಡುವಿನ ತಿಕ್ಕಾಟವನ್ನು ಹೇಳುತ್ತದೆ.

    ಕಥೆ ಆರಂಭವಾಗುವದು ಆಫ್ರಿಕಾದ ಯಾವುದೋ ಒಂದು ಭಾಗದಲ್ಲಿ. ಅದರ ಕಥಾನಾಯಕ ಮೈಕೆಲ್ ಓಬಿ ಉನ್ನತ ವ್ಯಾಸಾಂಗವನ್ನು ಮುಗಿಸಿ ಶಿಕ್ಷಕನಾಗಿ ಕೆಲಸ ಮಾಡುತ್ತಿರುತ್ತಾನೆ. ಅವನು ದಕ್ಷ ಹಾಗೂ ನಿಷ್ಟಾವಂತತನಕ್ಕೆ ಹೆಸರುವಾಸಿಯಾಗಿರುತ್ತಾನೆ. ಇದೇ ಕಾರಣಕ್ಕೆ ಅತ್ಯಂತ ಹಿಂದುಳಿದ ಶಾಲೆಯಾದ ಎನ್ಡುಮೆ ಸೆಂಟ್ರಲ್ ಶಾಲೆಯ ಮುಖ್ಯಸ್ತರು ಅದನ್ನು ಮುಂದೆ ತರಲು ಓಬಿ ಸೂಕ್ತವಾದ ವ್ಯಕ್ತಿಯೆಂದು ಪರಿಗಣಿಸಿ ಅವನನ್ನು ಅದರ ಹೆಡ್ ಮಾಸ್ಟರನ್ನಾಗಿ ನೇಮಿಸುತ್ತಾರೆ. ಅವನಲ್ಲಿ ಹೊಸ ಹೊಸ ವಿಚಾರಗಳಿದ್ದವು ಮತ್ತು ಅದಕ್ಕಿಂತ ಹೆಚ್ಚಾಗಿ ಒಂದು ಶಾಲೆಯನ್ನು ಹೇಗೆ ನಡೆಸಬೇಕೆಂಬ ದೂರದೃಷ್ಟಿ ಅವನಲ್ಲಿತ್ತು. ಇದೀಗ ಅವನ್ನೆಲ್ಲ ಕಾರ್ಯರೂಪಕ್ಕೆ ತರಲು ಓಬಿಗೆ ಇದೊಂದು ಒಳ್ಳೆಯ ಅವಕಾಶವಾಗಿದ್ದರಿಂದ ಅತಿ ಉತ್ಸುಕತೆಯಿಂದ ಈ ಕೆಲಸವನ್ನು ಒಪ್ಪಿಕೊಳ್ಳುತ್ತಾನೆ. ಅವನಲ್ಲಿ ಎರಡು ಗುರಿಗಳಿದ್ದವು. ಮೊದಲನೆಯದು ತನ್ನ ಶಾಲೆಯಲ್ಲಿ ಅತಿ ಉನ್ನತ ಕಲಿಕಾ ವಿಧಾನಗಳನ್ನು ಪರಿಚಯಿಸುವದು. ಎರಡನೆಯದು ಇಡಿ ಶಾಲೆಯ ಕೌಂಪೊಂಡನ್ನು ಹೂದೋಟಗಳಿಂದ ಅಲಂಕರಿಸುವದು. ಆ ನಿಟ್ಟಿನಲ್ಲಿ ಅವನು ಕಾರ್ಯೋನ್ಮುಖನಾಗುತ್ತಾನೆ.

    ಒಂದು ದಿವಸ ಹೂದೋಟಗಳನ್ನು ಪರಿಶೀಲಿಸುವಾಗ ಕೌಂಪೊಂಡಿನೊಳಗೆ ಹೆಂಗಸೊಬ್ಬಳು ನಡೆದುಹೋಗುತ್ತಾಳೆ. ಇವಳೇಕೆ ಕೌಂಪೊಂಡಿನೊಳಗೆ ನಡೆದುಹೊಗುತ್ತಿದ್ದಾಳೆ ಎಂದು ಹತ್ತಿರ ಹೋಗಿ ನೋಡುತ್ತಾನೆ. ಅಲ್ಲಿ ಆಗಲೇ ಬಳಸಿಬಿಟ್ಟ ಕಾಲುದಾರಿಯೊಂದು ನಿರ್ಮಾಣವಾಗಿದೆ. ನೀವೇಕೆ ಈ ಊರಿನವರನ್ನು ಇಲ್ಲಿ ಹಾದುಹೋಗಲು ಅಪ್ಪಣೆ ನೀಡಿದಿರಿ ಎಂದು ಅಲ್ಲಿ ಅದಾಗಲೇ ಮೂರು ವರ್ಷದಿಂದ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯನ್ನು ಕೇಳುತ್ತಾನೆ. ಅದಕ್ಕವನು “ಹಿಂದೆ ನಾವು ಈ ದಾರಿಯನ್ನು ಮುಚ್ಚುಹಾಕಲು ಪ್ರಯತ್ನಿಸಿದಾಗ ನಮ್ಮ ಮತ್ತು ಊರಿನವರ ನಡುವೆ ದೊಡ್ದ ಜಗಳವೇ ಆಯಿತು. ಏಕೆಂದರೆ ಈ ಹಾದಿ ಊರಿನ ದೇವಸ್ಥಾನವನ್ನು ಮತ್ತು ಸ್ಮಶಾಣವನ್ನು ಒಂದುಗೂಡಿಸುವದರಿಂದ ಅವರಿಗೆ ಬಹಳ ಮುಖ್ಯವಾಗಿದೆ ” ಎಂದು ಹೇಳುತ್ತಾನೆ. “ಅದಕ್ಕೂ ಇದಕ್ಕೂ ಏನು ಸಂಬಂಧ? ಅದಲ್ಲದೆ ಇದು ನಡೆದಿದ್ದು ಹಿಂದೆ. ಈಗ ಹೀಗಾಗಲು ಸಾಧ್ಯವಿಲ್ಲ” ಎಂದು ಮಾರನೇ ದಿವಸವೇ ಆ ಹಾದಿಯನ್ನು ಮುಚ್ಚಿಹಾಕುತ್ತಾನೆ. ಈ ಘಟನೆಯ ಮಾರನೇ ದಿವಸವೇ ಆ ಊರಿನ ಪೂಜಾರಿ ಶಾಲೆಗೆ ಬಂದು ಓಬಿಯನ್ನು ಮತ್ತೆ ಆ ಹಾದಿಯನ್ನು ತೆರೆಯುವಂತೆ ಆಗ್ರಹಿಸುತ್ತಾನೆ. ಆದರೆ ಓಬಿ ಇದಕ್ಕೆ ಒಪ್ಪುವದಿಲ್ಲ. “ಈ ದಾರಿಯಿಂದಲೇ ನಮ್ಮ ಪೂರ್ವಿಕರು ನಮ್ಮನ್ನು ಭೇಟಿ ನೀಡುವದು. ಅದಲ್ಲದೆ ನಮ್ಮ ಮಕ್ಕಳು ಹುಟ್ಟಿ ಬರುವದು ಈ ದಾರಿಯಿಂದಲೇ.” ಎಂದು ಹೇಳಿ ಪೂಜಾರಿ, ಓಬಿಯ ಮನವೊಲಿಸಲು ನೋಡುತ್ತಾನೆ. ಆದರೆ ಓಬಿ ಅವನಿಗೆ “ಇಂಥ ಮೂಢನಂಬಿಕೆಗಳನ್ನು ನಾವು ನಂಬುವದಿಲ್ಲ. ಇಂಥ ಕಂದಾಚಾರಗಳನ್ನು ನಮ್ಮ ಶಾಲೆಯ ಮಕ್ಕಳು ನೋಡಿ ನಗುವಂತೆ ಮಾಡುವದೇ ನಮ್ಮ ಉದ್ದೇಶ. ಈ ಹಾದಿಯನ್ನು ಮತ್ತೆ ತೆರೆಯಲಾಗುವದಿಲ್ಲ. ಬೇಕಾದರೆ ಕೌಂಪೊಂಡಿನಿಂದಾಚೆ ಈ ದಾರಿಯನ್ನು ನಿರ್ಮಿಸಿಕೊಳ್ಳಿ” ಎಂದು ಹೇಳಿ ಅವನನ್ನು ಲೇವಡಿಮಾಡಿ ಕಳಿಸುತ್ತಾನೆ. ಸರಿಯೆಂದು ಊರಿನ ಪೂಜಾರಿ ಹೊರಟುಹೋಗುತ್ತಾನೆ. ಇದಾಗಿ ಎರಡು ದಿವಸಗಳ ನಂತರ ಆ ಊರಿನಲ್ಲಿ ಹೆಂಗಸೊಬ್ಬಳು ಹೆರಿಗೆ ಸಮಯದಲ್ಲಿ ಸಾಯುತ್ತಾಳೆ. ಇದಕ್ಕೆ ಕಾರಣವೇನಿರಬಹುದೆಂದು ಜೋತಿಸಿಯೊಬ್ಬರನ್ನು ಊರಿನವರು ಕೇಳಿದಾಗ ಪೂರ್ವಿಕರ ಹಾದಿಯನ್ನು ಮುಚ್ಚಿದ್ದರಿಂದ ಹೀಗಾಗಿದೆ ಎಂಬ ಉತ್ತರ ಬರುತ್ತದೆ. ಮಾರನೇ ದಿವಸ ಓಬಿ ಎದ್ದು ನೋಡುತ್ತಾನೆ ಶಾಲೆಯ ಅವಶೇಷಗಳು ಬಿದ್ದಿದ್ದವು. ಹಿಂದಿನ ರಾತ್ರಿ ಊರಿನ ಜನರು ಬಿದಿರಿನ ಕಡ್ದಿಗಳನ್ನು ಕಿತ್ತೆಸೆದು ಮತ್ತೆ ಆ ಹಾದಿಯನ್ನು ತೆರೆದಿದ್ದರು. ಅಲ್ಲದೇ ಹೂದೋಟಗಳನ್ನು ಹಾಳುಮಾಡಿದ್ದರು. ಶಾಲೆಯ ಕಟ್ಟಡವೊಂದನ್ನು ಸಹ ಕೆಡುವಿದ್ದರು. ಅದೇ ದಿವಸ ಸ್ಕೂಲ್ ಇನ್ಸ್ಪೆಕ್ಟರ್ ಶಾಲೆಯ ತಪಾಷಣೆಗಾಗಿ ಬರುತ್ತಾನೆ. ಸ್ಕೂಲ್ ಇನ್ಸ್ಪೆಕ್ಟರ್ ಅಲ್ಲಿರುವ ಕೆಟ್ಟ ಪರಿಸ್ಥಿತಿಯನ್ನು ನೋಡಿ ಶಾಲೆಯ ಬಗ್ಗೆ ಮಾತ್ರವಲ್ಲದೆ ಓಬಿಯು ಬುಡಕಟ್ಟು ಜನಾಂಗದವರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಇಡಿ ಹಳ್ಳಿಯಲ್ಲಿ ಅಶಾಂತಿ ನೆಲೆಸಲು ಕಾರಣನಾಗಿದ್ದಾನೆ ಎಂದು ಅವನ ಬಗ್ಗೆಯೂ ಸಹ ಕೆಟ್ಟ ವರದಿಯೊಂದನ್ನು ನೀಡುತ್ತಾನೆ. ಅಲ್ಲಿಗೆ ಕಥೆ ಮುಗಿಯುತ್ತದೆ. ಮೈಕೆಲ್ ಓಬಿಯ ಪರಿಸ್ಥಿತಿ ಹೇಗಿರಬೇಡ? ನೀವೇ ಊಹಿಸಿ.

    ಇಲ್ಲಿ ಯಾವುದೇ ಬದಲಾವಣೆಯನ್ನು ಶಿಘ್ರದಲ್ಲಿ ತರಲಾಗುವದಿಲ್ಲ ಮತ್ತು ಅದನ್ನು ತರುವದಾದರೆ ಹಂತ ಹಂತವಾಗಿ ಜನರ ಭಾವನೆಗಳಿಗೆ ನೋವಾಗದಂತೆ ತಂದರೆ ಒಳ್ಳೆಯದು ಎನ್ನುವದನ್ನು ಕಥೆಯು ಸೂಚ್ಯವಾಗಿ ಹೇಳುತ್ತದೆ. ಈ ಮೂಲಕ ಮೈಕೆಲ್ ಓಬಿ ಮತ್ತು ಊರ ಜನರ ನಡುವಿನ ಸಾಂಸ್ಕೃತಿಕ ಸಂಘರ್ಷವನ್ನು ಚಿತ್ರಿಸುತ್ತದೆ. ಓಬಿ ಆಧುನಿಕತೆಯನ್ನು ಪ್ರತಿನಿಧಿಸಿದರೆ ಊರಿನ ಪೂಜಾರಿ ಸಾಂಪ್ರದಾಯಕತೆಯನ್ನು ಪ್ರತಿನಿಧಿಸುತ್ತಾನೆ. ಇವರಿಬ್ಬರ ನಡುವಿನ ತಿಕ್ಕಾಟವೇ ಕಥೆಯ ತಿರುಳು. ಮೈಕೆಲ್ ಓಬಿಯು ತಾನಂದುಕೊಂಡಿದ್ದನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದು ಹೊರಡುತ್ತಾನೆ ಮತ್ತು ಹಾಗೆ ಬದಲಾವಣೆಯನ್ನು ತರಬೇಕಾದರೆ ಆತ ತನ್ನ ಸಹಚರರ ಮೇಲೆ ಅದು ಯಾವ ಪರಿಣಾಮ ಬೀರಬಹುದು ಎಂದು ಯೋಚಿಸುವದೇ ಇಲ್ಲ. ಈ ನಿಟ್ಟಿನಲ್ಲಿ ತುಂಬಾ ಅವಸರವಸರವಾಗಿ ನಿರ್ಧಾರಗಳನ್ನು ತೆಗೆದುಕೊಂಡು ತನ್ನ ಸೋಲಿಗೆ ತಾನೇ ಕಾರಣನಾಗುತ್ತಾನೆ.

    ಮೈಕೆಲ್ ಓಬಿಯನ್ನು ಗಿರೀಶ್ ಕಾರ್ನಾಡರ ಬಸವಣ್ಣ (ತಲೆದಂಡ) ಹಾಗೂ ಮೊಹಮ್‍ದ್ ಬೀನ್ ತುಘಲಕ್ (ತುಘಲಕ್) ನಿಗೆ ಹೋಲಿಸಬಹುದು. ನಾಟಕದಲ್ಲಿನ ಬಸವಣ್ಣ ಸಮಾಜದಲ್ಲಿ ಒಂದೊಂದೇ ಬದಲಾವಣೆಗಳನ್ನು ಅತ್ಯಂತ ತ್ವರಿತಗತಿಯಲ್ಲಿ ತರುವದರ ಮೂಲಕ ತನ್ನ ವಿಚಾರಗಳನ್ನು ಇನ್ನೊಬ್ಬರ ಮೇಲೆ ಹೇರುತ್ತಾ ಹೋಗುತ್ತಾನೆ. ಆದರೆ ಅದು ಅವನ ಅನುಯಾಯಿಗಳ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವದನ್ನು ಯೋಚಿಸುವದೇ ಇಲ್ಲ. ಈ ಅಸಮಾಧನದ ಹೊಗೆಯೊಂದಿಗೆ ಅವರು ಅವನ ಬದಲಾವಣೆಯನ್ನು ಸಹಿಸಿಕೊಳ್ಳುತ್ತಾರೆ. ಮುಂದೆ ಇದು ಒಬ್ಬರ ನಂತರ ಒಬ್ಬರ ಶರಣರ ತಲೆದಂಡಕ್ಕೆ ಕಾರಣವಾಗುತ್ತದೆ. ಕೊನೆಗೆ ರೊಚ್ಚಿಗೆದ್ದು ಅವನನ್ನೇ ಸಾಯಿಸುತ್ತಾರೆ. ಅದೇ ರೀತಿ ತುಘಲಕ್ ನಾಟಕದಲ್ಲಿ ಮೊಹಮ್‍ದ್ ಬೀನ್ ತುಘಲಕ್‍ನನ್ನು ಗಿರೀಶ್‍ರು ಒಬ್ಬ ದಕ್ಷ, ಚತುರ ಆಡಳಿತಗಾರನನ್ನಾಗಿ ಚಿತ್ರಿಸಿದ್ದಾರೆ. ಅವನು ಹಿಂದೂ- ಮುಸ್ಲಿಂರ ಏಕತೆಗಾಗಿ ಶ್ರಮಿಸುವದು, ದೆಹಲಿಯಿಂದ ದೇವಗಿರಿಗೆ, ದೇವಗಿರಿಯಿಂದ ದೆಹಲಿಗೆ ರಾಜಧಾನಿಯನ್ನು ಸ್ಥಳಾಂತರಿಸುವದು, ನಾಣ್ಯಗಳನ್ನು ಬದಲಾಯಿಸುವದು ಎಲ್ಲವನ್ನು ಪ್ರಜೆಗಳ ಒಳಿತಿಗಾಗಿ ಮಾಡುತ್ತಾನೆ. ಆದರೆ ಅವನ ಪ್ರಜೆಗಳು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದ್ದರಿಂದ ಅವನ ಕೆಲಸಗಳು ಅವನ ಅವನತಿಗೆ ಕಾರಣವಾಗುತ್ತವೆ. ಇದು ನಾಟಕದ ಕೊನೆಯಲ್ಲಿನ ಅವನ ಸ್ವಗತಗಳಲ್ಲಿ ವ್ಯಕ್ತವಾಗುತ್ತದೆ. ಇವರಿಬ್ಬರ ಶೀಘ್ರ ಬದಲಾವಣೆಗಳು ಅವರಿಗೇ ಮುಳುವಾಗುವಂತೆ ಓಬಿಯ ಶೀಘ್ರ ಬದಲಾವಣೆಗಳು ಸಹ ಅವನಿಗೇ ಮುಳುವಾಗುತ್ತವೆ.

    ಹಾಗಿದ್ದರೆ ನಮಗೆಲ್ಲಾ ಬದಲಾವಣೆ ಬೇಡವಾ? ಖಂಡಿತ ಬೇಕು. ಆದರೆ ಅದು ಜನರ ಸಹಕಾರದೊಂದಿಗೆ ನಿಧಾನಗತಿಯಲ್ಲಿ ಆದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎನ್ನುವದನ್ನು ಕಥೆ ಒತ್ತಿ ಹೇಳುತ್ತದೆ.

    (ಈ ಕಥೆಯ ಅನುವಾದವನ್ನು ಶೀಘ್ರದಲ್ಲಿಯೇ ನಿರೀಕ್ಷಿಸಿ)
    -ಉದಯ್ ಇಟಗಿ

    2 ಕಾಮೆಂಟ್‌(ಗಳು):

    PARAANJAPE K.N. ಹೇಳಿದರು...

    ನೈಜೀರಿಯಾದ ಬರಹಗಾರನ ಪರಿಚಯ, ಆತನ ಕಾದ೦ಬರಿಯ ಕಿರುಮಾಹಿತಿ ಚೆನ್ನಾಗಿದೆ. ಆತನ ಕಥೆಗಳ ಅನುವಾದ ಹಾಕಿ, ಓದಿಗೆ ಕಾದಿರುವೆ.

    shivu.k ಹೇಳಿದರು...

    ಸರ್.,

    ಚೀನು ಅಚಿಬೆಯ ಪರಿಚಯ ಚೆನ್ನಾಗಿದೆ. ಬ್ಲಾಗಿನಲ್ಲಿ ನೀವು ಹಾಕಿದ ಆತನ ಕತೆಯನ್ನು ಓದಿದೆ. ತುಂಬಾ ಚೆನ್ನಾಗಿದೆ....ಆತನ ಮತ್ತಷ್ಟು ಕತೆಗಳನ್ನು ಅನುವಾದ ಮಾಡಿ.