ಮೊನ್ನೆ ನವೆಂಬರ್ ೧ ರಂದು ಸುವರ್ಣ ಚಾನೆಲ್ನಹಲ್ಲಿ ಪ್ರಸಾರವಾದ ನಿಮ್ಮ ಸಂದರ್ಶನವೊಂದರದಲ್ಲಿ ಹಾಡುತ್ತಿರುವಾಗ ಏಕೋ ನಿಮ್ಮ ಧ್ವನಿ ನಡುಗುತ್ತಿರುವದನ್ನು ನೋಡಿ ಅಶ್ವತ್ಥ್ ಅವರಿಗೆ ವಯಸ್ಸಾಯಿತು. ಇನ್ಮುಂದೆ ಅಶ್ವತ್ಥ್ ಅವರು ಹಾಡುವದನ್ನು ನಿಲ್ಲಿಸಿದರೆ ಒಳಿತು ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡಿದ್ದೆ. ಛೇ, ಅದ್ಯಾವ ಗಳಿಗೆಯಲ್ಲಿ ಹಾಗೆಂದುಕೊಂಡೆನೋ ಕಾಕತಾಳಿಯವೆಂಬಂತೆ ನೀವು ಹಾಡುವದನ್ನು ನಿಲ್ಲಿಸಿ ಹೋಗಿ ಬಿಟ್ಟಿರಿ. ಆ ಗಿಲ್ಟ್ ನನ್ನನ್ನು ಬೆಳಿಗ್ಗೆಯಿಂದ ಕ್ಷಣ ಕ್ಷಣವೂ ಹಿಂಡಿಹಿಪ್ಪಿ ಮಾಡುತ್ತಿದೆ. ನಾನು ಹಾಗೆ ಅಂದುಕೊಂಡ ಕೇವಲ ಒಂದು ತಿಂಗಳ ಅಂತರದಲ್ಲಿಯೇ ಆಸ್ಪತ್ರೆಗೆ ದಾಖಲಾದಿರಿ. ಇದು ನಮಗೆಲ್ಲ ಅನಿರೀಕ್ಷೀತ ಆಘಾತವಾಗಿತ್ತು. ಆಸ್ಪತ್ರೆಗೆ ದಾಖಲಾದವರು ಬೇಗ ಗುಣಮುಖರಾಗುತ್ತೀರಿ, ಅಲ್ಲಿಂದ ಎದ್ದು ಬಂದು ರೇ.. ರೇ.. ರೇ.. ಎಂದು ಹಾಡುತ್ತಾ ಮತ್ತೆ ನಮ್ಮನ್ನೆಲ್ಲ ನಿಮ್ಮ ರಾಗಗಳೊಂದಿಗೆ ಕುಣಿಸಿತ್ತೀರಿ, ಇನ್ನಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನ ನೀಡುತ್ತೀರಿ ಎಂದೆಲ್ಲಾ ನಿರೀಕ್ಷಿಸಿದ್ದೆವು. ಆದರೆ ನಮ್ಮನ್ನೆಲ್ಲ ನಿರಾಶೆಗೊಳಿಸಿ ನೇರವಾಗಿ ಸಾವಿನ ಮನೆಗೆ ನಡೆದುಬಿಟ್ಟಿರಿ. ಹೇಳಿ, ಹಾಡಿ ಹಾಡಿ ಬೇಸರವಾಗಿತ್ತೆ ನಿಮಗೆ? ಅಥವಾ ವಿಧಿ ನಿಮ್ಮ ಹಾಡು ಕೇಳಲು ನಿಮ್ಮನ್ನು ಬಲವಾಗಿ ಎಳೆದೊಯ್ಯಿತೇ? ಕಾರಣ ಹೇಳದೆ ಹೋಗಿಬಿಟ್ಟಿರಿ.
ಹಾಗೆ ನೋಡಿದರೆ ನಾನು ಸುಗಮ ಸಂಗೀತದೆಡೆಗೆ ಆಕರ್ಷಿತನಾಗಿದ್ದು ನಿಮ್ಮ ಧ್ವನಿಯಿಂದಲೇ! ನಿಮಗಿಂತ ಮೊದಲೇ ಇದ್ದ ಅನಂತಸ್ವಾಮಿಯವರ ಧ್ವನಿಯನ್ನು ನಾನು ಕೇಳಿದ್ದು ನಿಮ್ಮ ಧ್ವನಿಯನ್ನು ಕೇಳಿದ ಮೇಲೆ. ಅದೇಕೋ ಅನಂತಸ್ವಾಮಿಯವರಿಗಿಂತ ನಿಮ್ಮ ಧ್ವನಿಯೇ ತುಂಬಾ ಇಷ್ಟವಾಯಿತು. ನನಗೆ ಮಾತ್ರವಲ್ಲ ಬಹಳಷ್ಟು ಕನ್ನಡಿಗರಿಗೆ ಕೂಡ ನಿಮ್ಮ ಧ್ವನಿ ಇಷ್ಟವಾಯಿತು, ಏಕೆಂದರೆ ಅಂಥದೊಂದು ಮಾಂತ್ರಿಕ ಶಕ್ತಿ ನಿಮ್ಮ ಧ್ವನಿಗಿತ್ತು. ಅನಂತಸ್ವಾಮಿಯರ ಸಾವಿನೊಂದಿಗೆ ಸುಗಮ ಸಂಗೀತ ಕ್ಷೇತ್ರ ಬಡವಾಯಿತೆಂದುಕೊಂಡರೂ ಜನ, ಹೇಗೂ ಅಶ್ವಥ್ ಇದಾರಲ್ಲ! ಆ ಕೊರತೆಯನ್ನು ನೀಗಿಸುತ್ತಾರೆ ಎಂದುಕೊಂಡು ಸುಮ್ಮನಾದರು. ನೀವು ಖಂಡಿತವಾಗಿ ಆ ಕೊರತೆಯನ್ನು ನೀಗಿಸಿಬಿಟ್ಟಿರಿ. ಮಾತ್ರವಲ್ಲ ಮುಂದೆ ನೀವದನ್ನು ಹೊಸ ಹೊಸ ಪ್ರಯೋಗಗಳೊಂದಿಗೆ ಉಚ್ಛ್ರಾಯ ಸ್ಥಿತಿಗೆ ತಂದಿರಿ. ಆದರೆ ಈಗ ನಿಮ್ಮ ಸಾವಿನೊಂದಿಗೆ ಆ ಕೊರತೆ ದಟ್ಟವಾಗಿ ಎದ್ದು ಕಾಣುತ್ತಿದೆ. ನಿಮ್ಮ ನಂತರದ ಸುಗಮ ಸಂಗೀತ ಕ್ಷೇತ್ರದ ದಿಗ್ಗಜರು ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಕನ್ನಡನಾಡಿನ ಶ್ರೇಷ್ಟ ಹಾಗೂ ಉದಯೋನ್ಮುಖ ಕವಿಗಳ ಕವಿತೆಗಳನ್ನು ಮನೆ ಮನೆಗೆ ತಲುಪಿಸುವದರ ಮೂಲಕ ನೀವು ಮನೆ ಮಾತಾಗಿಬಿಟ್ಟಿರಿ. ಬಹುಶಃ ನಿಮ್ಮ ಹಾಡುಗಳನ್ನು ಜನ ಕೇಳಿದ ಮೇಲೆಯೇ ಕವಿಗಳನ್ನು ಮುಗಿಬಿದ್ದು ಓದತೊಡಗಿದರು. ಮುಂದೆ ಎಂದೂ ಕೇಳಿರದ ಶಿಶುನಾಳ ಶರೀಫರ್ ತತ್ವ ಪದಗಳಿಗೆ ನಿಮ್ಮದೇ ಆದಂಥ ವಿಶಿಷ್ಟ ಶೈಲಿಯ ಸಂಗೀತವನ್ನು ಅಳವಡಿಸಿ ಹಾಡುವದರ ಮೂಲಕ ನಾಡಿನ ಜನಮನವನ್ನು ಗೆದ್ದುಬಿಟ್ಟಿರಿ. ನೇಗಿಲ ಯೋಗಿ ಹಾಡಿನ ಮೂಲಕ ಈ ನಾಡಿನ ರೈತರ ಕಣ್ಮಣಿಯಾಗಿಬಿಟ್ಟಿರಿ. ನೀವು ಹಾಡುತ್ತಾ ಹಾಡುತ್ತಾ ಇಡಿ ನಾಡಿನ ಜನಸಾಗರವನ್ನೇ ಸುಗಮ ಸಂಗೀತದಲ್ಲಿ ಮುಳುಗಿಸಿಬಿಟ್ಟಿರಿ, ಅದಕ್ಕೆ ಬೆಂಗಳೂರು ಮತ್ತು ನಾಡಿನ ಇತರ ಭಾಗಗಳಲ್ಲಿ ನಡೆಸಿದ ನಿಮ್ಮ ಸುಗಮ ಸಂಗೀತದ ಕಛೇರಿಗಳೇ ಸಾಕ್ಷಿ. ಕನ್ನಡದ ಗಂಧ ಗಾಳಿಯೂ ಗೊತ್ತಿಲ್ಲದ ಎಷ್ಟೊ ಸಾಫ್ಟವೇರ್ ಇಂಜಿನೀಯರಗಳು ಸಹ ನಿಮ್ಮ ಸಂಗೀತ ಕಛೇರಿಗಳಿಗೆ ಮುಗಿಬಿದ್ದು ಬರತೊಡಗಿದರು. ನಿಮ್ಮ ಹಾಡು ಕೇಳುತ್ತಾ ಕೇಳುತ್ತಾ ನಿಮ್ಮೊಂದಿಗೆ ತಾವು ಹಾಡುತ್ತಾ ಧನ್ಯರಾದರು. ನೀವು ‘ಕನ್ನಡ ಸತ್ಯವೇ’ ಹಾಡನ್ನು ಹಾಡುತ್ತಿದ್ದರೆ ಎಲ್ಲರಲ್ಲೂ ಕನ್ನಡದ ಕಿಚ್ಚು ತಾನೇ ತಾನಾಗಿ ಹೊತ್ತಿಕೊಳ್ಳುತ್ತಿತ್ತು. ಅದಲ್ಲದೇ ಶಿಶುನಾಳ್ ಶರೀಫ್ರಎ ‘ತರವಲ್ಲ ತೆಗಿ’ ಹಾಡಿನ ರೆರೇ... ರೇ... ಎಂಬ ಆಲಾಪನೆ ಎತ್ತಿಕೊಳ್ಳುತ್ತಿದ್ದಂತೆ ನೆರೆದ ಇಡಿ ಜನಸಾಗರವೇ ಯಾವುದೇ ಸಮ್ಮೋಹನಕ್ಕೊಳಗಾದಂತೆ ಹುಚ್ಚೆದ್ದು ಕುಣಿಯುತ್ತಿದ್ದರು.
ಅಶ್ವತ್ಥ್ ಅವರಿಗೆ ಅಶ್ವಥ್ರೇಣ ಸಾಟಿ ಎಂದು ಜನ ನಿಮ್ಮ ಬಗ್ಗೆ ಹೇಳುತ್ತಿದ್ದರೂ ನೀವೊಬ್ಬ ಮುಂಗೋಪಿ, ದುರಂಕಾರಿ, ಪ್ರಚಾರ ಪ್ರಿಯ, ಹಾಡಿದ್ದ ಹಾಡನ್ನು ಇನ್ನೊಮ್ಮೆ ಹಾಡುವಾಗ ಸ್ವಲ್ಪ ಬದಲಾಯಿಸಿ ಹಾಡುತ್ತಾರೆ, ಧಾರವಾಡ ಕನ್ನಡದ ಹಾಡುಗಳನ್ನು ಅದರ accentನ್ನು ಕೆಡಿಸಿ ಹಾಡುತ್ತಾರೆ ಎನ್ನುವ ಆಪಾದನೆಗಳು ನಿಮ್ಮ ಮೇಲೆ ಇದ್ದವು. ಆದರೆ ಅವೆಲ್ಲ ನಿಮ್ಮ ಕಂಚಿನ ಕಂಠದ ಮುಂದೆ ಹಾಗೂ ಸಾಧನೆಗಳ ಮುಂದೆ ಗೌಣವಾಗಿಬಿಟ್ಟವು. ನೀವು ಯಾವ ಶಿಷ್ಯರನ್ನೂ ಬೆಳೆಸಲಿಲ್ಲ. ಆದರೆ ಒಳ್ಳೊಳ್ಳೆ ಗಾಯಕ, ಗಾಯಕಿಯರನ್ನು ಬೆಳೆಸಿದಿರಿ. ಅವರಿಂದ ಲೈಫ್ ಟೈಮ್ ಹಾಡುಗಳನ್ನು ಹಾಡಿಸಿದಿರಿ. ಆದರೆ ಅವರೆಲ್ಲ ನೀವೇರಿದ ಎತ್ತರಕ್ಕೆ ಏರುತ್ತಾರೆಯೆ? ನಿಮ್ಮ ನಂತರದ ಸುಗಮ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆಯೆ? ಅವರಲ್ಲಿ ಯಾರಾದಾರೊಬ್ಬರು ಸುಗಮ ಸಂಗೀತದ ದಿಗ್ಗಜರಾಗುತ್ತಾರೆಯೇ? ಗೊತ್ತಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು.
ನೀವು ಕೊಟ್ಟ ಭಾವಗೀತೆಗಳು, ಸಿನಿಮಾ ಹಾಡುಗಳು ಒಂದೇ... ಎರಡೆ? ಆಕಾಶದ ನೀಲಿಯಲ್ಲಿ, ಎಲ್ಲೋ ಹುಡುಕಿದೆ ಇಲ್ಲದ ದೇವರು, ರಾಯರು ಬಂದರು ಮಾವನ ಮನೆಗೆ, ನಾಯಿ ತಲೆಮ್ಯಾಲಿನ ಬುತ್ತಿ, ಗಿಳಿಯು ಪಂಜರದೊಳಿಲ್ಲ, ಗೆದಿಯಬೇಕು ಮಗಳೆ, ಆಕಾಶ ಬಿಕ್ಕುತಿದೆ ಇನ್ನೂ ಮುಂತಾದ ಹಾಡುಗಳ ಮೂಲಕ ಲಕ್ಷಾಂತರ ಕನ್ನಡಿಗರ ಮನದಲ್ಲಿ ಎಂದೆಂದಿಗೂ ಚಿರಾಯುವಾಗಿರುತ್ತಿರಿ. ನಿಮ್ಮ ಸಾವಿನಿಂದ ಸುಗಮ ಸಂಗೀತದಲ್ಲಿ ಆವರಿಸಿರುವ ಶೂನ್ಯ ಬೇಗನೆ ಮಾಯವಾಗಿ ಮತ್ತೆ ಚೇತರಿಸಿಕೊಳ್ಳಲಿ, ನೀವೇ ಬೆಳೆಸಿರುವ ಪ್ರತಿಭೆಗಳು ನೀವೇರಿದ ಎತ್ತರಕ್ಕೆ ಏರುವಂತಾಗಲಿ. ಸಾಧ್ಯವಾದರೆ ಮತ್ತೊಮ್ಮೆ ಹುಟ್ಟಿ ಬನ್ನಿ ನಮ್ಮ ನಾಡಿನಲ್ಲಿ. ಏಕೆಂದರೆ ನಿಮ್ಮಂತವರೊಬ್ಬರು ನಮಗೆ ಬೇಕು ಹಾಡಲು...ಹಾಡಿಸಲು.........
ನಿಮ್ಮ ನೊಂದ ಅಭಿಮಾನಿ
ಉದಯ್ ಇಟಗಿ
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ