Demo image Demo image Demo image Demo image Demo image Demo image Demo image Demo image

ಹೊಸವರ್ಷಕ್ಕೆ ಪ್ರತಿಭಾ ನಂದಕುಮಾರವರ ಒಂದು ಹಳೆಯ ಪದ್ಯ

  • ಗುರುವಾರ, ಡಿಸೆಂಬರ್ 31, 2009
  • ಬಿಸಿಲ ಹನಿ
  • ನಾನು ಬಾಲ್ಯದಲ್ಲಿರಬೇಕಾದರೆ ಹೊಸವರ್ಷವೆಂದರೆ ಕೇವಲ ಗಡಿಯಾರದ ಮುಳ್ಳು ಸರಿಯುವದಷ್ಟೆ ಎಂದುಕೊಂಡಿದ್ದೆ. ನಾನು ಮಾತ್ರವಲ್ಲ ನನ್ನ ಓರಗೆಯವರು ಹಾಗೂ ದೊಡ್ಡವರೂ ಅದನ್ನೇ ಅಂದುಕೊಂಡಿದ್ದರು. ಏಕೆಂದರೆ ನಾನು ಬೆಳೆದಿದ್ದು ಒಂದು ಚಿಕ್ಕ ಹಳ್ಳಿ ಕಲಕೋಟಿಯಲ್ಲಿ. ಹೀಗಾಗಿ ಅಲ್ಲಿ ಹೊಸವರ್ಷವನ್ನು ಸ್ವಾಗತಿಸುವ ಸಡಗರ, ಸಂಭ್ರಮಗಳ ‘ನಾಗರಿಕತೆ’ ಆ ಊರಿಗೆ ಇನ್ನೂ ಕಾಲಿಟ್ಟಿರಲಿಲ್ಲ. ಹೀಗಾಗಿ ಹೊಸವರ್ಷದ ದಿನವೂ ಸಹ ಎಲ್ಲ ದಿನಗಳಂತೆ ಯಾವುದೇ ವಿಶೇಷವಿಲ್ಲದೆ ಕಳೆದು ಹೋಗುತ್ತಿತ್ತು. ಮುಂದೆ ನಾನು ಗದಗ್ಗೆು ಬಂದೆ. ಅದು ಆಗಿನ್ನೂ ತಾಲೂಕ ಕೇಂದ್ರವಾಗಿತ್ತು. ಅಲ್ಲಿ ಕೂಡ ಹೊಸವರ್ಷದ ದಿನದಂದು ಹೇಳಿಕೊಳ್ಳುವಂಥ ಆಚರಣೆಗಳು ನಡೆಯದಿದ್ದರೂ atleast ಪರಸ್ಪರ ಶುಭಾಷಯಗಳನ್ನು ಹೇಳುವ ಪದ್ದತಿಯಿತ್ತು. ಮುಂದೆ ಪಿ.ಯು.ಸಿಗೆ ಧಾರವಾಡಕ್ಕೆ ಬಂದಾಗಲೂ ನಾನು ಯಾವುದೇ ತರದ ಆಚರಣೆಗಳನ್ನು ಮಾಡಲಿಲ್ಲ. ಬಹುಶಃ ಅದಕ್ಕೆ ಹೇಳಿಕೊಳ್ಳುವಂಥ ಆತ್ಮೀಯ ಸ್ನೇಹಿತರ ಕೊರತೆ ಇದ್ದಿರಬಹುದು.


    ಧಾರವಾಡದಿಂದ ನಾನು ಡಿಗ್ರಿ ಮಾಡಲು ಮಂಡ್ಯಕ್ಕೆ ಬಂದಾಗ ಅಲ್ಲಿ ಒಂದು ಸ್ನೇಹಿತರ ಗುಂಪಿಗೆ ಸೇರ್ಪಡೆಯಾದೆ. ಆ ಗುಂಪಿನವರಲ್ಲಿಯೇ ಇಬ್ಬರಾದ ಮಂಜು ಮತ್ತು ರಾಘು ಇಂದಿಗೂ ಕೂಡ ಜೀವದ ಗೆಳೆಯರಾಗಿ ಮುಂದುವರಿಯುತ್ತಿದ್ದಾರೆ. ಅವರೊಂದಿಗೆ ಒಂದು ವರ್ಷ ಸೇರಿ ಆಚರಿಸಿದ್ದೆ. ನನಗೆ ಅದು ಮೊಟ್ಟ ಮೊದಲ ಬಾರಿಗೆ ಒಂದು ಪಾರ್ಟಿಯೆಂದರೆ ಹೇಗಿರುತ್ತದೆ ಎನ್ನುವ ಅನುಭವವವನ್ನು ಕೊಟ್ಟಿದ್ದು ಬಿಟ್ಟರೆ ಹೇಳಿಕೊಳ್ಳುವಂಥ ಖುಶಿ ಕೊಟ್ಟಿರಲಿಲ್ಲ. ಡಿಗ್ರಿ ಮುಗಿದ ಮೇಲೆ ಬದುಕು ಹುಡುಕಿಕೊಂಡು ಬೆಂಗಳೂರಿಗೆ ಬಂದ ಹೊಸತರಲ್ಲಿ ನಾನು ಮತ್ತು ನನ್ನ ಆತ್ಮೀಯ ಸ್ನೇಹಿತ ಮಂಜು ಇಬ್ಬರೇ ಸೇರಿ ಆಚರಿಸಿದ್ದೆವು. ನಂತರ ಉದ್ಯೋಗದಲ್ಲಿ ಮುಂದುವರೆದು ಒಂದಷ್ಟು ದುಡ್ಡು ಕೈಯಲ್ಲಿ ಓಡಾಡತೊಡಗಿದಾಗ ಗೆಳೆಯರೆಲ್ಲ ಸೇರಿ ಬೇರೆ ಬೇರೆ ಕಡೆ ಹೋಗಿ ಪಾರ್ಟಿ ಮಾಡಿದ್ದಿದೆ. ಆದರೆ ನಾನು ಆ ಪಾರ್ಟಿಗಳಲ್ಲಿ ಪೂರ್ಣ ಮನಸ್ಸಿನಿಂದ ಭಾಗವಹಿಸುತ್ತಿರಲಿಲ್ಲ. ಏಕೆಂದರೆ ಹೊಸವರ್ಷ ನನಗೆ ಯಾವತ್ತೂ ವಿಶೇಷ ದಿನವಾಗಿ ಕಾಣಿಸಿಯೇ ಇಲ್ಲ. ಇದಕ್ಕೆ ಸರಿಯಾದ ಕಾರಣವೇನೆಂದು ಈವರೆಗೂ ತಿಳಿದಿಲ್ಲ. ಬರು ಬರುತ್ತಾ ನಾವು ಸ್ನೇಹಿತರು ಪಾರ್ಟಿ ಮಾಡುವದನ್ನು, ಗ್ರೀಟಿಂಗ್ಸ್ ಕಳಿಸುವದನ್ನೂ ನಿಲ್ಲಿಸಿಬಿಟ್ಟೆವು. ಹಾಗಂತ ನಮ್ಮ ನಡುವೆ ಇರುವ ಆತ್ಮೀಯತೆ ನಿಂತಿಲ್ಲ. ಅದು ದಿನದಿಂದ ದಿನಕ್ಕೆ ಬಲಗೊಳ್ಳುತ್ತಲೇ ಇದೆ. ಬಹುಶಃ ಹೊಸ ವರ್ಷವೆಂದರೆ ಕೇವಲ ಗಡಿಯಾರದ ಮುಳ್ಳು ಸರಿದು ಹೋಗುವದಷ್ಟೇ ಎನ್ನುವ ಸತ್ಯವನ್ನು ಕಂಡುಕೊಂಡೆವೆ? ಗೊತ್ತಿಲ್ಲ.

    ಇದೇ ಭಾವವನ್ನು ಬಿಂಬಿಸುವ ಪ್ರತಿಭಾ ನಂದಕುಮಾರವರ ಒಂದು ಹಳೆಯ ಪದ್ಯ ‘ಹೊಸವರ್ಷ’ ಮೊನ್ನೆ ನನ್ನ ಹಳೆಯ ಡೈರಿಯಲ್ಲಿ ಸಿಕ್ಕಿತು. ಯಾಕೋ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದ್ದರಿಂದ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇದು ನಿಮಗೆ ಇಷ್ಟವಾಗದಿರಬಹುದು.

    ಹೊಸವರ್ಷ

    ಹೊಸವರ್ಷ ಬರುತ್ತೆ ಹೊಸವರ್ಷ ಬರುತ್ತೆ

    ಅಂತ ಬೆಳಗ್ಗಿನಿಂದ ನನ್ನ ನಾಲ್ಕು ವರ್ಷದ ಮಗಳು

    ಹುಮ್ಮಸ್ಸಿನಿಂದ ಕಾದಳು.



    ನೋಡೋಕೆ ಹೇಗಿರುತ್ತಮ್ಮ

    ನೀನು ನೋಡಿದ್ದೀಯಾಮ್ಮಾ

    ಮಕ್ಕಲನ್ನು ಹೆದರಿಸುತ್ತಾಮ್ಮ

    ಬಚ್ಚಿಟ್ಟುಕೊಳ್ಳಲೇನಮ್ಮ

    ಎಂದು ಆತಂಕದಲಿ ಚಡಪಡಿಸಿದಳು.



    ರಾತ್ರಿ ಹನ್ನೆರಡಕ್ಕೆ ಬರುತ್ತೇ-

    ಸುಮ್ನೆ ಇರು ಗಲಾಟೆ ಮಾಡ್ದೆ

    ಊಟ ತಿಂಡಿ ಹಾಲು ಮುಗಿಸಿಬಿಡು ತೆಪ್ಗೆ

    ಎಂದು ನಾನೂ ಸಂದರ್ಭ ಉಪಯೋಗಿಸಿಕೊಂಡೆ.



    ವರ್ಷದ ಕೊನೆಯ ದಿನವಿಡೀ ಹಾರಾಡಿ

    ಕೊನೆಗೆ ರಾತ್ರಿ ಟೀವಿಯ ಮುಂದೆ ಕೂತೆವು

    ಆಕಳಿಸಿ ತೂಕಡಿಸಿ ಕಣ್ಣು ಮಿಟುಕಿಸುತ್ತ

    ಪಿಳಪಿಳನೆ ಟೀವಿಯಲ್ಲಿ ಕಣ್ಣುನೆಟ್ಟು

    ಹೊಸವಷಕ್ಕೆ ಕಾದೆವು

    ನಿದ್ದೆ ತಡೆಯದ ಮಗಳು ಪವಡಿಸಿದಳು.



    ಏನೇನೋ ಕಾಯಕ್ರಮಗಳ ನಂತರ

    ನಡುರಾತ್ರಿ ಸರಿಯಾಗಿ

    ಟೀವಿಯಲ್ಲೆಲ್ಲ ಗದ್ದಲ

    ಹೊರಗೆ ಪಟಾಕಿ ಸಿಡಿಮದ್ದು

    ಹೋಯೆಂದೆವು ನಾವೆಲ್ಲ

    ಎಚ್ಚೆತ್ತ ಮಗಳು ಏನಮ್ಮ ಏನಮ್ಮ ಅಂದಳು.

    ನೋಡು ಹನ್ನೆರಡಾಯಿತು

    ಹಳೆವರ್ಷ ಸರಿದುಹೋಯಿತು

    ಹೊಸವರ್ಸ ಕಾಲಿಟ್ಟಿತು ಎಂದೆ.



    ಟೀವಿ ಪರದೆಯಲ್ಲಿ ನೋಡಿ

    ಹೊಸವರ್ಷ ಅಂದರೆ ಗಡಿಯಾರ ಏನಮ್ಮ

    ಅದು ಯಾವಾಗ್ಲೂ ಓಡುತ್ತಿರತ್ತಾಲ್ಲಾಮ್ಮಾ

    ಎಂದು ಪೆಚ್ಚಾಗಿ ಪುನಃ ನಿದ್ದೆ ಹೋದಳು



    ಮಾರನೆಯ ದಿನ

    ಹೊಸವರ್ಷ ಅಂದರೆ ಏನಿಲ್ಲ ತಾತಾ

    ಗಡಿಯಾರದ ಮುಳ್ಳು ತಿರುಗೋದು ಅಷ್ಟೇ

    ಎಂದು ತಾತನಿಗೆ ಬೋಧಿಸುತ್ತಿದ್ದಳು.



    ಅಷ್ಟೇಮ್ಮಾ ಅಷ್ಟೆ ಎಂದರು ಅವರು

    ಬೊಚ್ಚು ಬಾಯಗಲಿಸಿ.



    -ಪ್ರತಿಭಾ ನಂದಕುಮಾರ್

    5 ಕಾಮೆಂಟ್‌(ಗಳು):

    PARAANJAPE K.N. ಹೇಳಿದರು...

    ಉದಯ್, ನಿಮ್ಮ ಬ್ಲಾಗಿನ ಹೊಸ ಬಣ್ಣ, ವಿನ್ಯಾಸ, ಚೆನ್ನಾಗಿದೆ. ಪ್ರತಿಭಾ ಕವನ ಪ್ರಕಟಿಸುವ ಮೂಲಕ ಹೊಸ ವರ್ಷಾಚರಣೆಯ ನಿಮ್ಮ ಅನುಭವ ಹ೦ಚಿಕೊ೦ಡಿದ್ದೀರಿ. ನಿಮಗೂ ಹೊಸ ವರುಷದ ಶುಭಾಶಯಗಳು.

    ದಿನಕರ ಮೊಗೇರ ಹೇಳಿದರು...

    ಉದಯ್ ಸರ್,
    ಹೊಸ ವಿನ್ಯಾಸದೊಂದಿಗೆ ಹೊಸ ವರುಷ ಬರ ಮಾಡಿಕೊಂಡಿದ್ದೀರಾ..... ತುಂಬಾ ಚೆನ್ನಾಗಿದೆ ವಿನ್ಯಾಸ............ ಪ್ರತಿಭಾ ಮೇಡಂ ಈ ಕವನ ಓದಿರಲಿಲ್ಲ..... ಧನ್ಯವಾದ ಓದಿಸಿದ್ದಕ್ಕೆ...... ಹೊಸ ವರ್ಷದ ಶುಭಾಶಯಗಳುನಿಮಗೆ............

    sunaath ಹೇಳಿದರು...

    ಉದಯ,
    ಹೊಸ ವರ್ಷದ ಶುಭಾಶಯಗಳು.
    ಹೊಸ ವರ್ಷಕ್ಕೆ ಅರ್ಥಪೂರ್ಣವಾದ ಕವನವನ್ನು ಉದ್ಧರಿಸಿದ್ದೀರಿ.

    shivu.k ಹೇಳಿದರು...

    ಉದಯ ಸರ್,

    ಹೊಸ ವರ್ಷದ ಸಂದರ್ಭದಲ್ಲಿ ನಿಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದೀರಿ..ಅದಕ್ಕೆ ಪ್ರತಿಭಾ ನಂದಕುಮಾರ್ ಕವನವೂ ಚೆನ್ನಾಗಿದೆ.
    ನಿಮಗೆ ಹೊಸ ವರ್ಷದ ಶುಭಾಶಯಗಳು.

    ಸಾಗರದಾಚೆಯ ಇಂಚರ ಹೇಳಿದರು...

    ನಿಮಗೂ ಹೊಸ ವರುಷದ ಶುಭಾಶಯಗಳು.