Demo image Demo image Demo image Demo image Demo image Demo image Demo image Demo image

ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಭಾಗ-3)

 • ಮಂಗಳವಾರ, ಅಕ್ಟೋಬರ್ 26, 2010
 • ಬಿಸಿಲ ಹನಿ
 • ಶೇಕ್ಷಪೀಯರ್ ತಿಕ್ಕಲಷ್ಟೇ ಅಲ್ಲ ಮಹಾನ್ ಸುಳ್ಳುಗಾರ ಕೂಡ ಆಗಿದ್ದ. ಬಾಯಿ ಬಿಟ್ಟರೆ ಸಾಕು: ಬರೀ ಸುಳ್ಳು, ಕಲ್ಪನೆ, ಭ್ರಮೆ. ನನ್ನ ಗಂಡ ಒಬ್ಬನೆ ಅಲ್ಲ: ಪ್ರಪಂಚದ ಎಲ್ಲ ಕವಿಗಳು, ಲೇಖಕರೆಲ್ಲಾ ಮಹಾನ್ ಸುಳ್ಳುಗಾರರೇ! ಹಾಗೆಂದೇ ಅವರಿಗೆ ದೊಡ್ಡ ದೊಡ್ಡ ಕೃತಿಗಳನ್ನು ರಚಿಸಲು ಸಾಧ್ಯವಾಗೋದು. ಅವೆಲ್ಲಾ ಬರೀ ಕಲ್ಪನೆ, ಭ್ರಮೆ, ಸುಳ್ಳಿನ ಕಂತೆಗಳು ಅಷ್ಟೇ. ಇನ್ನು ಈ ಜನಾನೋ ಮೊದಲೇ ಅರೆಹುಚ್ಚರು. ಕೇಳಬೇಕಲ್ಲ? ಅವನ್ನೆಲ್ಲಾ ಸತ್ಯ ಅನ್ಕೊಂಡು ಮುಗಿಬಿದ್ದು ಓದುತ್ತಾರೆ. ಓದಿ ಓದಿ ಪೂರ್ಣ ಹುಚ್ಚರಾಗುತ್ತಾರೆ. ಅವರು ಏನೋ ಬರೀತಾರೆ. ಇವರೇನೋ ಓದ್ತಾರೆ. ಓದಿದ ಮೇಲೆ ಸುಮ್ಮನಿರದೆ ಇದು ಚನ್ನಾಗಿದೆ, ಇದನ್ನೋದು ಅಂತಾ ಮತ್ತೊಬ್ಬರಿಗೆ ಹೇಳೋದು. ಅವರೂ ಹುಚ್ಚರಾಗೋದಲ್ಲದೆ ಬೇರೆದವರನ್ನೂ ಹುಚ್ಚರನ್ನಾಗಿ ಮಾಡ್ತಾರೆ! ಅದಕ್ಕೆ ನಾನ್ಯಾವತ್ತೂ ಯಾವ ಪುಸ್ತಕಾನೂ ಓದೋಕೆ ಹೋಗಲಿಲ್ಲ ಬೈಬಲ್ ಒಂದನ್ನು ಬಿಟ್ಟು! ಎಲ್ಲೀವರೆಗೂ ಓದೋರು ಇರ್ತಾರೋ ಅಲ್ಲೀವರೆಗೂ ಇವರು ಬರೀತಾನೆ ಇರ್ತಾರೆ. ಬರೆದು ಬರೆದು ಗುಡ್ಡೆ ಹಾಕ್ತಾರೆ. ಕೊನೆಗೆ ಒಂದಿಷ್ಟು ದುಡ್ಡು, ಬಹುಮಾನ ಅಂತಾ ತಗೊಳ್ತಾರೆ. ಅದು ಬಿಟ್ರೆ ಮತ್ಯಾವ ಮೂರು ಕಾಸಿನ ಪ್ರಯೋಜನಾನೂ ಇಲ್ಲ ಅವರಿಂದ! ಸುಳ್ಳುಗಾರರಿಗೆ ತಾನೆ ಈ ಜಗತ್ತಿನಲ್ಲಿ ಗೌರವ, ಮನ್ನಣೆ, ಬಹುಮಾನ ಎಲ್ಲಾ! ಇರಲಿ. ಮಿಸ್ಟರ್ ಶೇಕ್ಷಪೀಯರ್ ನನ್ನೊಂದಿಗೆ ಮಾತನಾಡುವಾಗಲೂ ಕೂಡ ಬರೀ ಸುಳ್ಳುಗಳನ್ನೇ ಹೇಳುತ್ತಿದ್ದ. ಒಮ್ಮೆ “ಭಾಳಾ ದೊಡ್ದ ಛಾನ್ಸ್ ಕಣೇ, ಸರ್ ಫ್ರಾನ್ಸಿಸ್ ಜೊತೆ ಸಮುದ್ರಯಾನ ಹೋಗಿದ್ದೆ” ಅಂದ. ಪಾಪ ಅಂಥ ಧೈರ್ಯ ಎಲ್ಲಿಂದ ಬರಬೇಕು ಅಂದುಕೊಂಡೆ. ಹನಿ ರಕ್ತ ಕಂಡರೂ ಗಡ ಗಡ ನಡುಗುವವನು ಅವನು. ಒಂದು ಸಲವಂತೂ ನಾನು ಈರುಳ್ಳಿ ಹೆಚ್ಚುವಾಗ ಕೈ ಕುಯ್ದುಕೊಂಡದ್ದು ಕಂಡು ಕುಸಿದು ಬಿದ್ದಿದ್ದ. ಇಂಥವನು ಸಮುದ್ರಯಾನ ಹೋದಾನೆ? “ಬೋಹಿಮಿಯಾದಿಂದ ನನ್ನ ಕಡಲಯಾನ ಶುರು” ಅಂದಿದ್ದ. ಬೋಹಿಮಿಯಾದಲ್ಲಿ ಕಡಲತೀರವೇ ಇರಲಿಲ್ಲ! ಅಲ್ಲಿಂದ ಟರ್ಕಿಯ ಅಲಿಪ್ಟೋ ಸೇರುತ್ತೇನೆಂದ. ಅಲ್ಲಿ ಬಂದರೇ ಇರಲಿಲ್ಲ! ಬರೀ ಸುಳ್ಳು! ವಿಲ್ಮ್ ಕೋಟ್ ಅನ್ನೋ ಊರಿಗೆ ಹೋಗಿದ್ದರೆ ಬಿಡ್ ಫೋರ್ಡ್ ಗೆ ಹೋಗಿದ್ದೆ ಅನ್ನುತ್ತಿದ್ದ. ಬಿಡ್ ಫೋರ್ಡ್ ಗೆ ಹೋಗಿದ್ದರೆ ಮತ್ತೆಲ್ಲಿಗೊ ಹೋಗಿದ್ದೆ ಅನ್ನುತ್ತಿದ್ದ. ಅವನು ಮಾತನಾಡುತ್ತಿದ್ದುದೇ ಹಾಗೆ. ಅವನು ಹೇಳುವದನ್ನೆಲ್ಲಾ ನೀವು ನಂಬಿದರೆ ಸಾಕು, ಅದೇ ಅವನಿಗೆ ಖುಷಿ!
  ಮಿಸೆಸ್ ಶೇಕ್ಷಪೀಯರ್


  ಈಗ ಮತ್ತೆ ಮೂಲಕಥೆಗೆ ಮರಳೋಣ. ಅದು ಮಿಸ್ಟರ್ ಶೇಕ್ಷಪೀಯರ್ ಬರೆಯುತ್ತಿದ್ದ ರೀತಿ. ಅವನು ಬರೆಯುತ್ತಿದ್ದುದು ಬಾತುಕೋಳಿಯ ಗರಿಯಿಂದ. ಅವನ ಪಕ್ಕದಲ್ಲಿ ಸದಾ ಒಂದು ಮಸಿ ಬಾಟಲಿ ಮತ್ತು ಒಂದಿಷ್ಟು ಖಾಲಿ ಹಾಳೆಗಳು ಇರುತ್ತಿದ್ದವು. ಇವೇ ಅವನ ಸಂಗಾತಿಗಳು. ಅವನಿಗೆ ಯಾವಾಗ ಬರೆಯುವ ಮೂಡು ಬರುತ್ತಿತ್ತೋ ಹೇಳಲಿಕ್ಕೆ ಬರುತ್ತಿರಲಿಲ್ಲ. ಮೂಡು ಬಂದ ಕೂಡಲೇ ಗರಿಯನ್ನು ಮಸಿ ಬಾಟಲಿಯಲ್ಲಿ ಅದ್ದಿ ಹಾಳೆಯ ಮೇಲಿಡುತ್ತಿದ್ದಂತೆ ಪದಗಳು ತಾವೇ ತಾವಾಗಿ ಕುಣಿಯುತ್ತಾ ಸಾಗುತ್ತಿದ್ದವು. ಅವ ಹಾಳೆಯ ಎರಡೂ ಮಗ್ಗಲಿನಲ್ಲಿ ಬರೆಯುತ್ತಿದ್ದ: ಒಂದು ಮಗ್ಗಲಿನಲ್ಲಿ ಐವತ್ತು ಸಾಲುಗಳು, ಇನ್ನೊಂದು ಮಗ್ಗಲಿನಲ್ಲಿ ಐವತ್ತು ಸಾಲುಗಳು. ಹಾಂ, ಅದು ಅವ ಹಾಗೆ ಬರೆಯುತ್ತಿದ್ದುದು ಎಷ್ಟು ಬರೆದೆನೆಂದು ಲೆಕ್ಕ ಇಡಲಿಕ್ಕೆ. ಪ್ರತಿ ಹಾಳೆಯನ್ನು ನಾಲ್ಕು ಕಾಲಂಗಳಾಗಿ ವಿಂಗಡಿಸುತ್ತಿದ್ದ. ಎಡಗಡೆ ಪಾತ್ರದ ಹೆಸರು. ಬಲಗಡೆ ರಂಗದ ಮೇಲೆ ಬರೋದನ್ನು ಹಾಗೂ ಹೋಗೋದನ್ನು ನಮೂದಿಸುತ್ತಿದ್ದ. ಸಂಭಾಷಣೆಯನ್ನು ಮಧ್ಯದಲ್ಲಿ ಬರೆಯುತ್ತಿದ್ದ. ಬರೆಯಲು ಅವನಿಗೆ ಒಂದು ನಿರ್ಧಿಷ್ಟ ಸಮಯ ಅಂತಾ ಇರಲಿಲ್ಲ. ಒಂದೊಂದು ಸಾರಿ ಮಧ್ಯರಾತ್ರಿಯವರೆಗೂ ಬರೆಯುತ್ತಿದ್ದ. ಬರೆದು ಬರೆದು ಸುಸ್ತಾಗಿ ಹಾಳೆಗಳನ್ನು ಅಲ್ಲೇ ಬಿಟ್ಟು ಹಾಗೆ ಮಲಗಿಬಿಡುತ್ತಿದ್ದ. ಇಲ್ಲವೇ ಒಂದೊಂದು ಸಾರಿ ಮಧ್ಯರಾತ್ರಿಯಲ್ಲಿ ಎದ್ದು ಬರೆಯುತ್ತಿದ್ದ. ಒಮ್ಮೊಮ್ಮೆ ನನ್ನೊಂದಿಗೆ ಮಾತಾಡುತ್ತಿದ್ದಂತೆ ಒಮ್ಮೆಲೆ ಏನೋ ಜ್ಞಾಪಿಸಿಕೊಂಡವನಂತೆ ಎದ್ದುಹೋಗಿ ಬರೆದಿಟ್ಟು ಬರುತ್ತಿದ್ದ. ಆಗೆಲ್ಲಾ ನಾನು ಸಿಡಿಮಿಡಿಗೊಂಡರೆ “ಶ್! ಬರಹ ಸೆಕ್ಸ್ ಇದ್ದಂತೆ. ಸೆಕ್ಸ್ ನ್ನು ಹೇಗೆ ಮೂಡು ಬಂದಾಗ ತೆಗೆದುಕೊಳ್ಳುತ್ತೇವೆಯೋ ಹಾಗೆ ಮೂಡು ಬಂದಾಗ ಬರೆಯುವದನ್ನು ಬರೆದುಬಿಡಬೇಕು. ಹಾಗೆಲ್ಲಾ ಅದನ್ನು ತಡೆಯಬಾರದು” ಎನ್ನುತ್ತಿದ್ದ. “ಅದಕ್ಕೆ ಅಲ್ವಾ ಮಾರಾಯ? ನಿನಗೆ ಮೂಡು ಬಂದಿತೆಂದು ತಡೆಯದೆ ನನ್ನನ್ನು ಮದುವೆಗೆ ಮೊದಲೇ ಬಸಿರು ಮಾಡಿದ್ದು” ಎಂದು ಛೇಡಿಸುತ್ತಾ ಅವನ ತಲೆಯ ಮೇಲೊಂದು ಮೊಟಕಿದ್ದೆ. ಅವನು ನಗುತ್ತಾ “ಹೇ...ಯೂ ನಾಟಿ” ಎಂದು ನನ್ನ ಕೆನ್ನೆ ಹಿಂಡಿದ್ದ. ಬರೆಯುವಾಗ ಒಮ್ಮೊಮ್ಮೆ ಅತಿ ಗಂಭೀರವಾಗಿ ಯೋಚಿಸುತ್ತಾ ಬರೆಯುತ್ತಿದ್ದ. ಒಮ್ಮೊಮ್ಮೆ ಏನನ್ನೋ ಗುನುಗುನಿಸುತ್ತಾ ಬರೆಯುತ್ತಿದ್ದ. ಒಮ್ಮೊಮ್ಮೆ ಬಿಟ್ಟ ಕಣ್ಣನ್ನು ಹಾಗೆ ಬಿಟ್ಟು ಎಲ್ಲೋ ನೋಡುತ್ತಾ ಕುಳಿತುಬಿಡುತ್ತಿದ್ದ. ನಾನು “ಅಯ್ಯೋ, ದೇವರೆ! ಏನಾಯಿತು ಇವನಿಗೆ?” ಎಂದು ಹತ್ತಿರ ಹೋಗಿ ಅವನ ಭುಜ ಅಲ್ಲಾಡಿಸಿದರೆ “ಶ್! ಸುಮ್ಮನಿರು. ನಾನು ನನ್ನ ಪಾತ್ರದೊಂದಿಗೆ ಸಂವಾದಕ್ಕಿಳಿದಿದ್ದೇನೆ. ಅದರ ಆಳಕ್ಕೆ ಇಳಿದು ನೋಡುತ್ತಿದ್ದೇನೆ. ಇನ್ನೇನು ಹೊಳೆದುಬಿಡುತ್ತೆ.......ಬರೆದುಬಿಡುತ್ತೇನೆ......ಸುಮ್ಮನಿರು” ಎಂದು ಬರೆದಾದ ಮೇಲೆ “ನಾನೊಬ್ಬನೇ ಅಲ್ಲ. ಬರಹಗಾರರೆಲ್ಲಾ ಹೀಗೆ ಬರೆಯೋದು.......” ಎಂದು ತನ್ನನ್ನು ಸಮರ್ಥಿಸಿಕೊಳ್ಳಲು ನೋಡುತ್ತಿದ್ದ. ನಾನದಕ್ಕೆ “ಈ ಬರಹಗಾರರು ತಮ್ಮ ಪಾತ್ರಗಳೊಂದಿಗೆ ಸಂವಾದಕ್ಕಿಳಿಯೋ ಬದಲು, ಅವುಗಳಲ್ಲಿ ಇಣುಕಿ ನೋಡೋ ಬದಲು, ಒಮ್ಮೆ ತಮ್ಮೊಂದಿಗೆ ತಾವು ಸಂವಾದಕ್ಕಿಳಿಯಬಾರದೇಕೆ? ತಮ್ಮೊಳಗೆ ತಾವು ಇಣುಕಿ ನೋಡಿಕೊಳ್ಳಬಾರದೇಕೆ?” ಎಂದು ಕೇಳಿದ್ದೆ. ಅದಕ್ಕವನು ಏನೂ ಉತ್ತರಿಸಲಿಲ್ಲ!  ಮೊದಲೇ ಹೇಳಿದಂಗೆ ನಾನ್ಯಾವತ್ತೂ ಏನನ್ನೂ ಓದಿದವಳಲ್ಲ ಬೈಬಲ್ ವೊಂದನ್ನು ಬಿಟ್ಟು. ಇನ್ನು ಇವನು ಬರೆದ ನಾಟಕಗಳನ್ನು ಹೇಗೆ ಓದಲಿ? ಒಮ್ಮೊಮ್ಮೆ ಅವನೇ “ಓದೆಂದು” ತಾನು ಬರೆದದ್ದನ್ನು ನನ್ನ ಮುಂದಿಡುತ್ತಿದ್ದ. ಇಲ್ಲವೇ ಬಲವಂತವಾಗಿ ಅವನೇ ಓದಿ ಹೇಳುತ್ತಿದ್ದ. ನಾನು “ಸಾಕು ಮಾರಾಯ, ತಲೆನೋವು” ಅಂತಿದ್ದೆ. ಹಾಗೆ ನೋಡಿದರೆ ನನಗೇನೂ ತಲೆನೋವಿರಲಿಲ್ಲ. ಆದರೆ ಇದ್ಯಾವುದು ನನ್ನ ಕಿವಿಗೆ ಬೇಡವಾಗಿರುತ್ತಿತ್ತು ಅಷ್ಟೆ. ಒಂದೊಂದು ಸಾರಿ ಅನಿಸೋದು; ನಾನು ಶೇಕ್ಷಪೀಯರನಿಗೆ ಸರಿಯಾದ ಜೋಡಿ ಅಲ್ವೇನೋ, ಸಮಾನ ಅಭಿರುಚಿಯ ಹೆಂಡತಿ ಆಗಲಿಲ್ವೇನೋ ಅಂತ. ಪಾಪ, ಶೇಕ್ಷಪೀಯರ್! I pity on him!  ನನಗಿನ್ನೂ ಚನ್ನಾಗಿ ನೆನಪಿದೆ. ಆವತ್ತು ರಾತ್ರಿ ಊಟವಾದ ಮೇಲೆ ನಾನು ಅಡಿಗೆ ಮನೆಯಲ್ಲಿ ಸಾಮಾನುಗಳನ್ನೆಲ್ಲ ಎತ್ತಿಡುತ್ತಿದ್ದೆ. ಅವ ಪಡಸಾಲೆಯಲ್ಲಿ ತಾನು ಬರೆದ ಪ್ರಸಿದ್ಧ ಸಾನೆಟ್ ಅದೇ....“ಬೇಸಿಗೆಯ ಹಗಲಿಗೆ ಹೋಲಿಸಲೆ ನಿನ್ನ? ಛೇ, ಅದು ಸಲ್ಲ. ಅದಕ್ಕಿಂತ ಸುಂದರ ನೀನು!” ಎಂದು ಗುನುಗುನಿಸುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದ. ನನಗೆ ಥಟ್ಟನೆ ಇದನ್ನೆಲ್ಲೋ ಕೇಳಿದಂತಿದೆಯಲ್ಲ ಅಂತಾ ಅನಿಸಿತು. ಹಾಂ, ನೆನಪಾಯಿತು ಆವತ್ತು ಲಂಡನ್ ಸೇತುವೆಯ ಮೇಲೆ ಇದನ್ನೆ ತಾನೆ ಅವ ನನಗೆ ಹೇಳಿದ್ದು? ಅಂದರೆ....ಅಂದರೆ ಇದು ನನ್ನ ಕುರಿತು ಬರೆದಿದ್ದು. ಪರ್ವಾಗಿಲ್ವೆ! ನನ್ನ ಗಂಡ ಮಿಸ್ಟರ್ ಸ್ಮೈಲ್ ನನ್ನ ಮೇಲೂ ಒಂದು ಸಾನೆಟ್ ಬರೆದಿದ್ದಾನೆ. ಶಹಭಾಷ್! ನೋಡಿಯೇ ಬಿಡೋಣ ಹೇಗಿದೆ? ಅಂತಾ ಕುತೂಹಲಕ್ಕೆಂದು ಸುಮ್ಮನೆ ಆಲಿಸುತ್ತಾ ಹೋದೆ. ಅದರಲ್ಲಿ ಅವ ಏನೇನೋ ಹೇಳಿದ್ದ. ಆದರೆ ನಾನು ಅರ್ಥ ಮಾಡಿಕೊಂಡಿದ್ದು ಇಷ್ಟು...... ತಪ್ಪಾಗಿದ್ದರೆ ಕ್ಷಮಿಸಿ........ಏಕೆಂದರೆ ನನಗೆ ಕಾವ್ಯದ ಬಗ್ಗೆ ಏನೂ ತಿಳಿಯದು. ಹೂಂ...... ಅವ ಹೇಳಿದ್ದ: ಬೇಸಿಗೆಯ ಹಗಲಿನ ಸೌಂದರ್ಯ ಕೂಡ ಕ್ಷಣಿಕವಾದುದು..... ಏಕೆಂದರೆ ಬೇಸಿಗೆಯ ಸೂರ್ಯ ಕಣ್ಣುಮುಚ್ಚಾಲೆಯಾಡುತ್ತ ಒಮ್ಮೊಮ್ಮೆ ಹೆಚ್ಚು ಬಿಸಿಯಾಗುತ್ತಾನೆ...... ಒಮ್ಮೊಮ್ಮೆ ತಣ್ಣಗಾಗುತ್ತಾನೆ....... ಒಮ್ಮೊಮ್ಮೆ ತನ್ನ ಹೊಂಬಣ್ಣ ಕಳೆದುಕೊಂಡು ಕಳೆಗುಂದುತ್ತಾನೆ..... ಅವನಲ್ಲಿ ಏರುಪೇರು ಇರುತ್ತೆ. ಆದರೆ ನಿನ್ನ ಸೌದರ್ಯ ಹಾಗಲ್ಲ....... ಅದಕ್ಕಿಂತ ಹೆಚ್ಚಿನದು...........ಸದಾ ಒಂದೇ ತೆರನಾಗಿರುವಂಥದ್ದು.........ಶಾಶ್ವತವಾಗಿರುವಂಥದ್ದು......... ನಶ್ವರದ ವಸ್ತುಗಳಿಗೆ ನಿನ್ನ ಹೋಲಿಸುವದು ಬೇಡ.......ಹಾಗೆಂದೇ ನಿನ್ನನ್ನು ಹಾಗೂ ನಿನ್ನ ಸೌಂದರ್ಯವನ್ನು ಈ ಕವನದಲ್ಲಿ ಹಿಡಿದಿಡುತ್ತಿದ್ದೇನೆ......ಅದು ನಿನ್ನ ಸೌಂದರ್ಯದಂತೆ ಈ ಕವನವೂ ಕೂಡ ಈ ಜಗತ್ತು ಇರುವವರೆಗೂ ಶಾಶ್ವತವಾಗಿರುತ್ತದೆ......ಅಬ್ಬಾ ಏನು ವರ್ಣನೆ? ಏನು ಆ ಪದಗಳ ಜೋಡಣೆ? ಅಬ್ಬಬ್ಬಾ ಹೇಳಲಿಕ್ಕಾಗದು. ಯಾವತ್ತೂ ಯಾವ ಕವನಗಳನ್ನೂ ಓದದ ನನ್ನಂಥವಳಿಗೂ ಕೂಡ ಆ ಸಾನೆಟ್ ಇಷ್ಟವಾಯಿತೆನ್ನಿ. ಅದೇನೋ ಹೇಳ್ತಾರಲ್ಲ......ಕಚಗುಳಿ.....ಕಚಗುಳಿ......ಹಾಂ, ಅದೇ.....ಕಚಗುಳಿ ಇಟ್ಟ ಅನುಭವವಾಯಿತು ನನಗೆ ಅದನ್ನು ಓದಿದ ಮೇಲೆ. ಒಂದು ಕ್ಷಣ ನನ್ನ ಗಂಡನ ಬಗ್ಗೆ ಅಭಿಮಾನ ಮೂಡಿತು. ಆದರೆ ಮರುಕ್ಷಣ ಅನುಮಾನ ಕಾಡಿತು. ಇದು.....ಇದು ನಿಜಕ್ಕೂ ನನ್ನ ಕುರಿತು ಬರೆದಿದ್ದೆ? ಇಲ್ಲ.......ಇಲ್ಲ ಇರಲಿಕ್ಕಿಲ್ಲ......ಏಕೆಂದರೆ ನಾನು ಅವ ಹೇಳುವಷ್ಟು ಸುಂದರವಾಗಿಲ್ಲ.....ಮೇಲಾಗಿ ನಾನು ವಯಸ್ಸಿನಲ್ಲಿ ಅವನಿಗಿಂತ ಎಂಟು ವರ್ಷ ದೊಡ್ಡವಳು...... ಅವನ ಕಣ್ಣಿಗೆ ಹೇಗೆ ತಾನೆ ರೂಪವಂತೆಯಾಗಿ ಕಂಡೇನು? ಹಾಗಾದರೆ ಇನ್ಯಾರು? ಅಂದರೆ..... ಅಂದರೆ ಅವನ ಜೀವನದಲ್ಲಿ ಮತ್ತೊಂದು ಹೆಣ್ಣಿನ ಪ್ರವೇಶವಾಗಿದಿಯೆ? ಅವನದನ್ನು ನನಗೆ ಗೊತ್ತಿಲ್ಲದಂತೆ ನಿಭಾಯಿಸುತ್ತಿದ್ದಾನೆಯೇ? ಏನಾದರಾಗಲಿ ಒಮ್ಮೆ ಕೇಳಿಯೇ ಬಿಡೋಣ ಎಂದುಕೊಂಡು ಕೆಲಸ ಮುಗಿಸಿ ಅವನಿರುವಲ್ಲಿಗೆ ಬಂದೆ. ಕವಿ ಇನ್ನೂ ಅದೇ ಸಾನೆಟ್ ನ್ನು ಗುನುಗುನಿಸುತ್ತಲೇ ಇದ್ದ. ಅರೆ ಕ್ಷಣ ತಡೆದು “ಹೇಳು.... ಆವತ್ತು ಲಂಡನ್ ಸೇತುವೆಯ ಮೇಲೆ ‘ಬೇಸಿಗೆಯ ಹಗಲಿಗೆ ಹೋಲಿಸಲೆ ನಿನ್ನ?’ ಎಂದು ನನ್ನ ಕೇಳಿದೆಯೆಲ್ಲ ಅದೆ ತಾನೆ ಈ ಸಾನೆಟ್? ಆದರೆ ಇದರಲ್ಲಿರುವ ಆ ‘ಬೇಸಿಗೆಯ ಹಗಲು’ ನಾನಲ್ಲ ಅಂತಾ ನನಗೆ ಚನ್ನಾಗಿ ಗೊತ್ತು. ಅದು ಇನ್ಯಾವಳನ್ನೋ ಕುರಿತು ಬರೆದಿದ್ದು. ಹೇಳು ಯಾರವಳು?” ಎಂದು ನೇರವಾಗಿ ಕೇಳಿದೆ. ಕವಿ ಕೆಮ್ಮತೊಡಗಿದ. ಗಾಳಿಯಲ್ಲಿ ತನ್ನೆರೆಡೂ ಕೈ ಬೀಸುತ್ತಾ ಏನೋ ಹೇಳಲು ಹೊರಟ. ಉಸಿರೇ ಹೊರಡುತ್ತಿಲ್ಲ. ಮುಖವೆಲ್ಲ ಕೆಂಪಾಯಿತು. ಕೊನೆಗೂ ಸಾವರಿಸಿಕೊಂಡು ನಾಚುತ್ತಾ ಉಸುರಿದ “ಅದು.......ಅದು.....‘ಅವಳ’ಲ್ಲ. ‘ಅವನು’ ”


  -ಉದಯ್ ಇಟಗಿ

  ಆಧಾರ: ರಾಬರ್ಟ್ ನೈ ಬರೆದ “Mrs. Shakespeare” ಎಂಬ ಇಂಗ್ಲೀಷ್ ಕಾದಂಬರಿ ಹಾಗೂ ಇದರ ಮೇಲೆ ನಟರಾಜ್ ಹುಳಿಯಾರವರು ಬರೆದ ಒಂದು ಲೇಖನ ಮತ್ತು ಶೇಕ್ಷಪೀಯರನ ಜೀವನದಲ್ಲಿ ಹೀಗೆ ನಡೆದಿರಬಹುದು ಎಂದು ಊಹಿಸಲು ಸಾಧ್ಯವಾದ ಅಂತರ್ಜಾಲದಲ್ಲಿ ಲಭ್ಯವಿರುವ ಅವನ ಒಂದಿಷ್ಟು ಜೀವನ ಘಟನೆಗಳು.

  ಚಿತ್ರ ಕೃಪೆ: ಅಂತರ್ಜಾಲ

  1 ಕಾಮೆಂಟ್‌(ಗಳು):

  siddu yapalaparavi ಹೇಳಿದರು...

  ತುಂಬಾ ಪ್ರಾಮಾಣಿಕ ಹೆಣ್ಣು ಈಕೆ.ಕ್ರಿಯಾಶೀಲತೆ ಸುಳ್ಳಿನಿಂದ ಹುಟ್ಟುತ್ತೆ ಎಂಬ ವಾದ ಸರಿ ಇರಬಹುದು.ಅಂದ ಹಾಗೆ ನಿಮ್ಮ ಕಮೆಂಟ್ಸಗೆ ಥ್ಯಾಂಕ್ಸ ಹೇಳಿದರೆ ಕ್ರುತಕವಾದೀತು.