Demo image Demo image Demo image Demo image Demo image Demo image Demo image Demo image

ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಭಾಗ-2)

  • ಗುರುವಾರ, ಅಕ್ಟೋಬರ್ 21, 2010
  • ಬಿಸಿಲ ಹನಿ

  • ಆವತ್ತು ಮಿಸ್ಟರ್ ಶೇಕ್ಷಪೀಯರ್ ಲಂಡನ್ನಿಗೆ ಹೊರಟ ದಿನ. ಅವ ಕೆಲಸ ಹುಡುಕಿ ಹೊರಟಿದ್ದ. ಇದ್ದಬಿದ್ದ ದನದ ವ್ಯಾಪಾರದಲ್ಲಿ ಇವನಪ್ಪ ಕೈ ಸುಟ್ಟುಕೊಂಡು ಬರಿಗೈ ದಾಸನಾಗಿದ್ದ. ಎರಡು ಹೊತ್ತಿನ ಊಟಕ್ಕೂ ಕಷ್ಟವಾಗಿತ್ತು. ಸಹಜವಾಗಿ ಮನೆಯ ಜವಾಬ್ದಾರಿ ನನ್ನ ಗಂಡನ ಮೇಲೂ ಬಿತ್ತು. ಸರಿ, ಲಂಡನ್ನಿಗೆ ಹೊರಟು ನಿಂತ. ಹೊರಡುವಾಗ ಕಣ್ಣ ತುಂಬ ಭರವಸೆ, ಕನಸು. ಹೋಗುವಾಗ ಹಲ್ಲು ಕಚ್ಚಿ ಹೇಳಿದ: “ಬರೆಯುತ್ತೇನೆ.” ನಾನು ಪತ್ರ ಬರೆಯುತ್ತಾನೇನೋ ಅಂದುಕೊಂಡೆ! ಆದರೆ ಅವ ಬರೆದಿದ್ದು ಮೂವತ್ತೆಂಟು ನಾಟಕಗಳನ್ನು, ನೂರಾ ಐವತ್ನಾಲ್ಕು ಸುನಿತಗಳನ್ನು ಹಾಗೂ ಎರಡು ಉದ್ದದ ಅಶ್ಲೀಲ ಪದ್ಯಗಳನ್ನು.

    ಅವನು ಹೋಗಿ ಮೂರ್ನಾಲ್ಕು ತಿಂಗಳಾದ ಮೇಲೆ ಲಂಡನ್ನಿನಲ್ಲಿ ಇವನೇನು ಕಡಿಯುತ್ತಾನೆ ನೋಡಿಕೊಂಡು ಬನ್ನಿ ಅಂತಾ ತಮ್ಮಂದಿರನ್ನು ಅಟ್ಟಿದೆ. ಅವರು ಹೋಗಿ ಬಂದು “ಕೆಲಸವಂತೂ ಇದೆ” ಅಂದರು. ಸದಾ ರಂಗಶಾಲೆಯ ಬಾಗಿಲಲ್ಲಿ ನಿಂತಿರುತ್ತಾನೆ; ಕುದರೆಗಳನ್ನು ಕಾಯುತ್ತಾನೆ ಅಂದರು. ಅದರಲ್ಲೇನು ದುಡ್ಡು ಸಿಗುತ್ತೆ ಅಂದುಕೊಂಡೆ. ಇಲ್ಲ, ದಿನೆ ದಿನೆ ಶೇಕ್ಷಪೀಯರನ ವ್ಯಾಪಾರ ಕುದುರುತ್ತಾ ಹೋಯಿತು. ಮುಂದೆ ಸ್ವಲ್ಪೇ ದಿನದಲ್ಲಿ ಅವನ ಕೈ ಕೆಳಗೆ ಹತ್ತಾರು ಜನ ಹುಡುಗರು ಕೆಲಸ ಮಾಡಲು ಶುರು ಮಾಡಿದರು!

    ಮತ್ತೆ ಊರಿಗೆ ಬರುವ ಹೊತ್ತಿಗೆ ಮಿಸ್ಟರ್ ಶೇಕ್ಷಪೀಯರ್ ಗೆ ರಂಗಶಾಲೆಯ ಒಳಕ್ಕೆ ಬಡ್ತಿ ಸಿಕ್ಕಿತ್ತು. “ನಾನೀಗ prompter’s assistant” ಅಂದ. ಅಥವಾ assistant prompter ಅಂದನೋ? ಸಧ್ಯ, ಕುದರೆ ಕಾಯುವ ಕೆಲಸಕ್ಕಿಂತ ಇದು ವಾಸಿ. “ಏನು ಕೆಲಸ ಅದು?” ಎಂದು ಕೇಳಿದೆ. “ಅದೇ.... ಸ್ಟೇಜಿನ ಹಿಂದೆ ನಿಂತು ನಟರಿಗೆ ಅವರ ಮಾತುಗಳನ್ನು ಹೇಳಿಕೊಡುವದು” ಅಂದ!

    ಇದಾಗಿ ಒಂದು ವರ್ಷಕ್ಕೆ ಅವನಿಂದ ಪತ್ರವೊಂದು ಬಂತು. ಅದರಲ್ಲಿ ಬರೀತಿದೇನಿ ಅಂದ. ಕಾಮಿಡಿ ಅಂದ. ಟ್ರ್ಯಾಜಿಡಿ ಅಂದ. ಹಿಸ್ಟರಿ ಅಂದ. ಟ್ರ್ಯಾಜಿಕ್-ಕಾಮಿಡಿ ಅಂದ. ಕಾಮಿಕ್-ಟ್ರ್ಯಾಜಿಡಿ ಅಂದ. ಇನ್ನೂ ಏನೇನೋ ಅಂದ. ಏನಾದ್ರು ಬರ್ಕೋಂಡು ಸಾಯ್ಲಿ! ಇದರಲ್ಲಾದರು ದುಡ್ಡುಗಿಡ್ಡು ಬರುತ್ತಾ? ಅಂದುಕೊಂಡೆ. ಆದರೆ ಪತ್ರದಲ್ಲಿ ಅದರ ಬಗ್ಗೆ ಪ್ರಸ್ತಾಪವೇ ಇರಲಿಲ್ಲ! ಕೊನೆಯಲ್ಲಿ ಲಂಡನ್ನಿಗೆ ಬಾ ಎಂದು ಬರೆದಿದ್ದ.

    ಒಂದು ಬೇಸಿಗೆಯ ದಿನ ನಾನು ಲಂಡನ್ನಿಗೆ ಹೋದೆ. ನನಗೇಕೋ ಮೊದಲ ನೋಟದಲ್ಲಿಯೇ ಲಂಡನ್ ಬೇಸರ ತರಿಸಿತು. ಅದರ ಥಳಕು ಬಳುಕಿನೊಳಗೆ ನೈಜತೆ ಕಳೆದುಹೋಗಿದೆ ಎನಿಸಿತು. ಸತ್ತ ನಗರದಂತೆ ಭಾಸವಾಯಿತು. ಅಲ್ಲಿ ಬೀಳುತ್ತಿದ್ದ ಹಿಮ ಹಿಮವಾಗಿರಲಿಲ್ಲ. ಬೀಸುತ್ತಿದ್ದ ತಂಗಾಳಿ ತಂಗಾಳಿಯಾಗಿರಲಿಲ್ಲ. ಅಲ್ಲಿ ಮನುಷ್ಯರಿಗಿಂತ ಅವರ ನೆರಳುಗಳೇ ಹೆಚ್ಚು ಸುಳಿದಾಡುತ್ತಿದ್ದವು. ಅವರಿಗೆ ತಲೆಯಿತ್ತೆ ಹೊರತು ಹೃದಯವಿರಲಿಲ್ಲ. ಒಟ್ಟಿನಲ್ಲಿ ಲಂಡನ್, ಲಂಡನ್ ಆಗಿ ಉಳಿದಿರಲಿಲ್ಲ. ಅದೊಂದು ಜೀವಂತ ಸ್ಮಶಾನವಾಗಿತ್ತು. ಅಲ್ಲಿ ಸತ್ತವರು ಮಾತ್ರ ಬದುಕುತ್ತಿದ್ದರು. It was all unreality London! ನನಗೆ ಲಂಡನ್ನಿಗಿಂತ ನಮ್ಮೂರೇ ಚೆಂದ ಎನಿಸಿತು!

    ಹೀಗೆ.. ಒಂದು ಸಂಜೆ ಮಿ. ಶೆಕ್ಷಪೀಯರ್ ನನ್ನ ಜಗತ್ಪ್ರಸಿದ್ಧ ಲಂಡನ್ ಸೇತುವೆಗೆ ಕರೆದೊಯ್ದ. ಕೆಳಗೆ ಥೇಮ್ಸ್ ನದಿ ಪ್ರಶಾಂತವಾಗಿ ಹರಿಯುತ್ತಿತ್ತು. ಆ ಸೇತುವೆಯ ಮೇಲೆ ನಿಂತು “ಬೇಸಿಗೆಯ ಹಗಲಿಗೆ ಹೋಲಿಸಲೆ ನಿನ್ನ? (Shall I compare thee to a summer’s day?)” ಎಂದ. “ನೋ, ಥ್ಯಾಂಕ್ಸ್” ಎಂದೆ. ಆಗ ಅವನ ಮುಖ ನೋಡಬೇಕಿತ್ತು. ಒಮ್ಮೆ ಸುಮ್ಮನೆ ಮುಗುಳ್ನಕ್ಕ. ಮುಗುಳ್ನಗೆಯ ಸರದಾರ; ಮಿಸ್ಟರ್ ಶೇಕ್ಷಪೀಯರ್, ನನ್ನ ಗಂಡ. ನಾನವನನ್ನು “ಸರ್ ಸ್ಮೈಲ್” ಎಂದೇ ಕರೆಯುತ್ತಿದ್ದೆ. ಅವನು ಇನ್ಯಾವುದರಲ್ಲೂ ಹೇಳಿಕೊಳ್ಳುವಂತಿರಲಿಲ್ಲ, ಮುಗುಳ್ನಗುವುದೊಂದನ್ನು ಬಿಟ್ಟು. ಅವನು ಯಾವತ್ತೂ ದೊಡ್ಡದಾಗಿ ನಗುತ್ತಿರಲಿಲ್ಲ. ಬಾಯಿಬಿಟ್ಟರೆ ಎರಡು ಮುರುಕಲು ಕರಿಹಲ್ಲು ಯಾರಿಗಾದರೂ ಕಂಡಾವೆಂಬ ಭಯ! ಆದರೆ ಅವನ ತರಾನೇ ಯಾರಿಗಾದರೂ ಕರಿಹಲ್ಲಗಳಿದ್ದವರೊಂದಿಗೆ ನಗಲು ಯಾವ ಭಯವೂ ಇರಲಿಲ್ಲ. “ಈ ಮುರುಕಲು ಕರಿಹಲ್ಲುಗಳು ನಿನಗ್ಹೇಗೆ ಬಂದವು?” ಎಂದು ಒಮ್ಮೆ ಕೇಳಿದ್ದೆ. “ನಾನು ಚಿಕ್ಕವನಿದ್ದಾಗ ಸಕ್ಕರೆ ಮಿಠಾಯಿ ತುಂಬಾ ತಿಂತಿದ್ದೆ. ಅದಕ್ಕೆ ಹೀಗಾದವು” ಅಂದ. ಪಾಪ, ಸಿಹಿತಿನಿಸುಗಳೆಂದರೆ ಪಂಚಪ್ರಾಣ ಅವನಿಗೆ! ಬಾಯಿ ಚಪಲ, ಯಾವಾಗಲೂ ಬರಿ ಬಾದಾಮಿ ಕಜ್ಜಾಯ, ಶುಂಠಿ ಬ್ರೆಡ್ಡು, ಇಲ್ಲವೆ ಬಿಸ್ಕಿಟ್ ಗಳನ್ನೇ ತಿಂತಿದ್ದ. ಆದರೆ ಸಕ್ಕರೆ ಮೊದಲಿನಿಂದಲೂ ಅವನ ದೇಹಕ್ಕೆ ಒಗ್ಗಿಬರಲಿಲ್ಲ. ಏಕೆಂದರೆ ಅವನ ರಕ್ತದಲ್ಲಿದ್ದದ್ದು ಬರಿ ಉಪ್ಪು! ಉಪ್ಪು ಮತ್ತು ಸಕ್ಕರೆ ಹೇಗೆ ಒಂದಾದಾವು? Am I right? Yes, I am. Let me die if I lie.

    ಈ ಮೊದಲೇ ಹೇಳಿದಂಗೆ ಶೇಕ್ಷಪೀಯರ್ ಯಾವತ್ತೂ ಸೀದಾ ಸಾದಾ ಮಾತಾಡುತ್ತಿರಲಿಲ್ಲ. ಏನಾದರು ಹೇಳಬೇಕೆಂದರೆ ಸುತ್ತಿ ಬಳಸಿ ಹೇಳುತ್ತಿದ್ದ. ಅದೇನೋ ಮೆಟಫರ್-ಗಿಟಫರ್ ಅಂತಾರಲ್ಲ ಅದರಲ್ಲಿ ಹೇಳುತ್ತಿದ್ದ. ಮನೆಯಲ್ಲೂ ಅಷ್ಟೆ ಅವನು ಮಾತಾಡುತ್ತಿದ್ದೆಲ್ಲ ರೂಪಕಗಳಲ್ಲೇ! ಹುಚ್ಚುಕವಿ, ಅವನು ಬದುಕಿದ್ದೇ ರೂಪಕಗಳ ಜೊತೆ. ನನಗೋ ಒಂದೊಂದು ಸಾರಿ ಅವನೇನು ಹೇಳುತ್ತಿದ್ದಾನೆಂದು ಅರ್ಥವಾಗದೆ ರೋಸಿಹೋಗುತ್ತಿತ್ತು. ಅದೇನದು ಬಿಡಿಸಿ ಹೇಳಬಾರದೆ? ಎಂದು ರೇಗಿದರೆ ಅದು “ಮೆಟಫರ್; ಹಾಗೆಲ್ಲಾ ಬಿಡಿಸಿ ಹೇಳಬಾರದು” ಎನ್ನುತ್ತಲೇ “ಮೆಟಫರ್ ಅಂದ್ರೆ ಏನು ಗೊತ್ತಾ? ಒಂದು ವಸ್ತುವಿನ ಬಗ್ಗೆ ಹೇಳೋದು-ಇದು ಅದಲ್ಲ, ಬೇರೇನೋ ಅನ್ನೋದು! ಬಿಡಿಸಿ ಹೇಳಬೇಕೆಂದರೆ ಅವೆಲ್ಲಾ ದೊಡ್ಡ ದೊಡ್ಡ ಹೊಗಳಿಕೆಯ ಮಾತುಗಳು, ಇಲ್ಲಾ ಬೈಗುಳಗಳು ಅಷ್ಟೆ!” ಎಂದು ಎಲ್ಲವನ್ನೂ ಬಿಡಿಸಿ ಹೇಳಿದ್ದ.

    ಈ ಮೆಟಫರುಗಳ ಜೊತೆಗಿದ್ದ ತಿಕ್ಕಲು ಶೇಕ್ಷಪೀಯರ್ ಜೊತೆ ಬದುಕಿದ್ದ ನನ್ನ ಪಾಡು ಯಾರಿಗೂ ಬೇಡ. ಅವನ ಅಪ್ಪ ಜಾನ್ ಶೇಕ್ಷಪೀಯರ್ ಇನ್ನೂ ತಿಕ್ಕಲು. ಅವನು ಬದುಕಿದ್ದೇ ವೈನ್ ಬಾಟಲಿನಲ್ಲಿ. ಒಂದು ಕ್ರಿಸ್ಮಸ್ ದಿನ ಕುಡಿದು ಕಣ್ಣಿರಿಡುತ್ತಾ ನಮ್ಮನ್ನೆಲ್ಲಾ ಕೇಳಿದ: “ಈ ಕ್ರಿಸ್ಮಸ್ ಗೆ ನನಗೊಂದು ಬಿಳಿಮೋಡದ ತುಂಡು ತಂದು ಕೊಡಿ.” ಇಂಥ ಕ್ರಿಸ್ಮಸ್ ಉಡುಗೊರೆಯನ್ನು ಎಲ್ಲಿಂದ ತರುವದು ಎಂದು ನಾನು ಪಿಳಿಪಿಳಿ ಕಣ್ಣುಬಿಟ್ಟೆ. ಆದರೆ ನನ್ನ ಮಾವನ ಹೆಂಡತಿ ಮೇರಿ ಥಟ್ಟನೆದ್ದು ಹೂದೋಟಕ್ಕೆ ಹೋದಳು. ಅದೇ ಆಗ ಬಿದ್ದ ಮಂಜನ್ನು ಬೊಗಸೆ ತುಂಬ ತಂದಳು. ಮುದುಕ ಜಾನ್ ಶೇಕ್ಷಪೀಯರ್ ಅಳು ನಿಲ್ಲಿಸಿದ. ಆ ‘ಮೋಡದ ತುಂಡಿ’ಗೆ ಮುತ್ತಿಕ್ಕಿ ಮಂಜು ಕರಗುವ ಮುನ್ನ ಮಗುವಿನ ಥರ ನಿದ್ದೆ ಹೋದ. ಇಂಥ ಹುಚ್ಚನ ಮಗ ಈ ಶೇಕ್ಷಪೀಯರ್.

    ಚಿತ್ರ ಕೃಪೆ: ಅಂತರ್ಜಾಲ

    ಆಧಾರ: ರಾಬರ್ಟ್ ನೈ ಬರೆದ “Mrs. Shakespeare” ಎಂಬ ಇಂಗ್ಲೀಷ್ ಕಾದಂಬರಿ ಹಾಗೂ ಇದರ ಮೇಲೆ ನಟರಾಜ್ ಹುಳಿಯಾರವರು ಬರೆದ ಒಂದು ಲೇಖನ ಮತ್ತು ಶೇಕ್ಷಪೀಯರನ ಜೀವನದಲ್ಲಿ ಹೀಗೆ ನಡೆದಿರಬಹುದು ಎಂದು ಊಹಿಸಲು ಸಾಧ್ಯವಾದ ಅಂತರ್ಜಾಲದಲ್ಲಿ ಲಭ್ಯವಿರುವ ಅವನ ಒಂದಿಷ್ಟು ಜೀವನ ಘಟನೆಗಳು.


    -ಉದಯ್ ಇಟಗಿ

    2 ಕಾಮೆಂಟ್‌(ಗಳು):

    Siddu Yapalaparavi ಹೇಳಿದರು...

    ಅವನ ಊರು,ಮನೆ,ಏವನ್ ನದಿ ತೀರದಲ್ಲಿ ಅಲೆದಾಡಿದಾಗ ನನಗೆ ಸರಿ ಕಂಡಂತೆ ಅವನನ್ನು ಕಲ್ಪಿಸಿಕೊಂಡಿದ್ದೆ.ನಿಮ್ಮ ಲೇಖನ ಖುಷಿ ಕೊಟ್ಟಿದೆ

    ಡಾ.ಅರುಣ್ ಜೋಳದ ಕೂಡ್ಲಿಗಿ ಹೇಳಿದರು...

    ನಿಮ್ಮ ಬ್ಲಾಗ್ ನೋಡಿ ಖುಷಿಯಾಯಿತು. ಶೇಕ್ಷಪೀಯರ್ ಬಗೆಗಿನ ಈ ಬರಹವನ್ನು ತುಂಬಾ ಕುತೂಹಲದಿಂದ ಓದಿದೆ. ನಿಮ್ಮ ಅಭಿರುಚಿ ಚೆನ್ನಾಗಿದೆ.