Demo image Demo image Demo image Demo image Demo image Demo image Demo image Demo image

ಕನಸು ನನಸುಗಳ ನಡುವಿನ ನೆನಪು (ಭಾಗ-1)

  • ಶುಕ್ರವಾರ, ಡಿಸೆಂಬರ್ 31, 2010
  • ಬಿಸಿಲ ಹನಿ

  • ಈಗ್ಗೆ ಹನ್ನೆರಡು ವರ್ಷಗಳ ಹಿಂದೆ ಒಂದು ಚಳಿಗಾಲದ ಬೆಳ್ಳಂಬೆಳಿಗ್ಗೆ ಬೆಂಗಳೂರಿಗೆ ಬದುಕು ಹುಡುಕಿಕೊಂಡು ಬಂದಿಳಿದಾಗ ಬಗಲಲ್ಲೊಂದು ಮಾಸಿದ ಸೂಟ್ಕೇಸ್, ಕೈಯಲ್ಲೊಂದು ಬಿ.ಎ. ಡಿಗ್ರಿ ಸರ್ಟಿಫಿಕೇಟ್, ಕಿಸೆಯಲ್ಲಿ ಅಕ್ಕನಿಂದ ಸಾಲವಾಗಿ ತಂದ ಒಂದು ಸಾವಿರ ರೂಪಾಯಿ, ತಲೆಯಲ್ಲಿ ಅಷ್ಟೂ ವರ್ಷ ಕಲಿತ ಅರೆಬರೆ ಜ್ಞಾನ, ಕಣ್ಣಲ್ಲಿ ಅಸ್ಪಷ್ಟ ಕನಸುಗಳು, ಮನಸ್ಸಲ್ಲಿ ದೃಢ ಸಂಕಲ್ಪ ಹಾಗೂ ಇರಲು ಜೀವದ ಗೆಳೆಯ ಮಂಜುವಿನ ರೂಮಿತ್ತು. ಚಳಿಗೆ ಮೈ, ಮನಸ್ಸುಗಳೆರಡೂ ಒಮ್ಮೆ ಸಣ್ಣಗೆ ನಡುಗಿದವು. ಮುಂದೆ ಹೇಗೋ ಏನೋ ಎಂಬ ಆತಂಕ ಬೆಂಗಳೂರಿಗೆ ಬದುಕು ಹುಡುಕಿಕೊಂಡು ಬಂದಿಳಿಯುವ ಬಹಳಷ್ಟು ಜನರನ್ನು ಕಾಡುವಂತೆ ನನನ್ನೂ ಆ ಕ್ಷಣಕ್ಕೆ ಕಾಡಿತ್ತು. ಜೀವನದಲ್ಲಿ ಹಂಗು, ಅವಲಂಬನೆ, ಆಸರೆ, ಆರ್ಥಿಕಮುಗ್ಗಟ್ಟುಗಳಿಂದ ಬೇಸತ್ತು ಮೊಟ್ಟ ಮೊದಲಬಾರಿಗೆ ನನ್ನದೇ ನಿರ್ಧಾರದ ಮೇಲೆ ಬೆಂಗಳೂರಿಗೆ ಬದುಕು ಹುಡುಕಿಕೊಂಡು ಬಂದಿದ್ದೆ. ನಾನು ಇಲ್ಲಿ ಯಾವುದಾದರೊಂದು ಕೆಲಸ ಹುಡುಕಿಕೊಂಡು ನನ್ನ ಓದನ್ನು ಮುಂದುವರಿಸುತ್ತಾ ಮುಂದಿನ ಬದುಕನ್ನು ಕಟ್ಟಿಕೊಳ್ಳಬೇಕಿತ್ತು. ಬಂದದ್ದು ಬರಲಿ ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇನೆ ಎನ್ನುವ ದೃಢ ನಿರ್ಧಾರದೊಂದಿಗೆಯೇ ಬೆಂಗಳೂರಿಗೆ ಕಾಲಿಟ್ಟಿದ್ದೆ. ಆದರೂ ಸಣ್ಣದೊಂದು ಹೆದರಿಕೆ ಮನದ ಮೂಲೆಯಲ್ಲೆಲ್ಲೋ ಆವರಿಸಿತ್ತು. ಏಕೆಂದರೆ ಬೆಂಗಳೂರು ಕೆಲವರಿಗೆ ಬದುಕು ನೀಡಿ ಪೊರೆದಂತೆಯೇ ಕೆಲವರನ್ನು `ನೀನಿಲ್ಲಿ ಬದುಕಲು ಯೋಗ್ಯನಲ್ಲ ಹೋಗು’ ಎಂದು ಹೇಳಿ ಒದ್ದು ಹೊರಹಾಕಿದ್ದಿದೆ; ಅಂತೆಯೇ ನನ್ನನ್ನೂ ಒದ್ದು ಹೊರಗೆ ಹಾಕಿದರೆ? ಎಂಬ ಅಳಕು ನನ್ನಲ್ಲೂ ಇತ್ತು. ನನ್ನಲ್ಲಿ ಗುರಿಯಿತ್ತು ಆದರೆ ನಾನು ಆ ಗುರಿಯನ್ನು ಮುಟ್ಟೇಮುಟ್ಟುತ್ತೇನೆಂದು ಯಾರೂ ಗ್ಯಾರಂಟಿ ಕೊಟ್ಟಿರಲಿಲ್ಲ. ಏಕೆಂದರೆ ನಾ ನಡೆಯುವ ಹಾದಿ ಅದಾಗಲೇ ಯಾರೋ ರೂಪಿಸಿಟ್ಟ ಸಿದ್ಧಹಾದಿಯಾಗಿರಲಿಲ್ಲ. ಅದನ್ನು ಕಷ್ಟಪಟ್ಟು ನಾನೇ ನಿರ್ಮಿಸಿಕೊಳ್ಳಬೇಕಿತ್ತು. ಬದುಕಲ್ಲಿ ಮುನ್ನುಗ್ಗಬೇಕಿತ್ತು, ಒಂದಿಷ್ಟು ನಜ್ಜುಗಜ್ಜಾಗಿ ಜಜ್ಜಿ ಹೋದರೂ ಸರಿಯೇ! ಛಲಬಿಡದ ತ್ರಿವಿಕ್ರಮನಂತೆ ನಾನಂದುಕೊಂಡ ಗುರಿಯನ್ನು ಮುಟ್ಟಿ ಮೇಲೆ ಬರಬೇಕಿತ್ತು. ಆದರದು ನಾನಂದುಕೊಂಡಷ್ಟು ಸುಲಭವಿತ್ತೆ? ಬರೀ B.A. ಮಾಡಿದ ನನ್ನಂಥವನಿಗೆ ಬೆಂಗಳೂರಿನಂಥ ಊರಿನಲ್ಲಿ ಯಾರು ತಾನೆ ಕೆಲಸ ಕೊಟ್ಟಾರು? ನನಗೆ ಇಂತಿಂಥದೇ ಕೆಲಸ ಮಾಡಬೇಕೆಂಬ ಯಾವುದೇ ಇರಾದೆ ಇರಲಿಲ್ಲವಾದರೂ ಎರಡು ಹೊತ್ತಿನ ಹೊಟ್ಟೆ ಹೊರೆದು ಓದಲು ಒಂದಷ್ಟು ಸಮಯ ಸಿಗುವಷ್ಟು ಯಾವುದಾದರೊಂದು ನಿಯತ್ತಿನ ಕೆಲಸ ಇದ್ದರೆ ಸಾಕಿತ್ತು. ಎಲ್ಲದಕ್ಕೂ ನಾನು ತಯಾರಿಗಿಯೇ ಬಂದಿದ್ದೆ! ಬದುಕು ಎಲ್ಲವನ್ನೂ ಕಲಿಸುತ್ತದೆ; ಬದುಕುವದನ್ನು ಕೂಡ!

    ಎತ್ತಣ ಮುಧೋಳ? ಎತ್ತಣ ಕಲಕೋಟಿ? ಎತ್ತಣ ಗದಗ? ಎತ್ತಣ ಧಾರವಾಡ? ಎತ್ತಣ ಮಂಡ್ಯ? ಎತ್ತಣ ಬೆಂಗಳೂರು? ಎತ್ತಣ ಲಿಬಿಯಾ? ನನ್ನ ಬದುಕು ಎಷ್ಟೊಂದು ಊರುಗಳಲ್ಲಿ ಹಾದುಹೋಯಿತು? ನಾನು ಎಷ್ಟೊಂದು ದೂರ ನಡೆದು ಬಂದು ಬಿಟ್ಟೆ? ಹಾಗೆ ನಡೆಯುತ್ತಲೇ ಎಷ್ಟೊಂದು ಬೆಳೆದುಬಿಟ್ಟೆ? ಬದುಕು ನನ್ನನ್ನು ಮೇಲಿಂದ ಮೇಲೆ ಕಳ್ಳೆಮಳ್ಳೆ ಆಡಿಸುತ್ತಲೇ ಎಲ್ಲಿಂದ ಎಲ್ಲಿಯವರೆಗೆ ಎಳೆದುತಂದು ಕೈ ಬಿಟ್ಟಿತು! ಈಗ ಅದನ್ನೆಲ್ಲ ನೆನೆಸಿಕೊಂಡರೆ ಎಂಥದೋ ಪುಳಕ, ಎಂಥದೋ ರೋಮಾಂಚನ, ಎಂಥದೋ ಹೆಮ್ಮೆ ಒಮ್ಮೆಲೆ ಉಂಟಾಗುತ್ತವೆ. ಕಣ್ಣಲ್ಲಿ ಆನಂದಭಾಷ್ಪಗಳು ತಾನೆ ತಾನಾಗಿ ಉಕ್ಕುತ್ತವೆ. ಜೊತೆಗೆ ಮನಸ್ಸಲ್ಲಿ ಸಣ್ಣದೊಂದು ಅಹಂಕಾರ ಸದ್ದಿಲ್ಲದೆ ಸರಿದುಹೋಗುತ್ತದೆ. ಆ ಹಾದಿಯಲ್ಲಿ ಏನೆಲ್ಲ ಇತ್ತು!? ಎಷ್ಟೆಲ್ಲ ಎಡರುತೊಡರುಗಳಿದ್ದವು, ಏಳುಬೀಳುಗಳಿದ್ದವು, ನೋವುಗಳಿದ್ದವು, ಅವಮಾನಗಳಿದ್ದವು, ಹೋರಾಟಗಳಿದ್ದವು. ಇವನ್ನೆಲ್ಲ ಹೇಗೆ ಎದುರಿಸಿಬಂದೆ? ಎಂದು ಕೇಳಿಕೊಳ್ಳುವಾಗಲೆಲ್ಲಾ ನಾನು ಹಾದುಬಂದ ನನ್ನ ಸಾಹಸಗಾಥೆ ನೆನಪಾಗುತ್ತದೆ. ಆ ಕಥೆಯ ಹಿಂದಿನ ನೆನಪುಗಳು ಒಂದೊಂದಾಗಿ ಕಣ್ಣಮುಂದೆ ಬಿಚ್ಚಿಕೊಳ್ಳತೊಡಗುತ್ತವೆ. ನಿಧಾನವಾಗಿ ನಾ ನಡೆದು ಬಂದ ಹಾದಿಯ ಹೆಜ್ಜೆಗುರುತುಗಳು ನನ್ನತ್ತ ಒಮ್ಮೆ ನೋಡಿ ಮುಗುಳುನಗೆ ಬೀರುತ್ತವೆ. ‘ಶಹಭಾಷ್ ಮಗನೆ!’ ಎಂದು ಬೆನ್ನುತಟ್ಟುತ್ತಾ ನನ್ನ ಮುಂದಿನ ಕೆಲಸಗಳಿಗೆ, ಸಾಹಸಗಳಿಗೆ ಒಂದಿಷ್ಟು ಸ್ಪೂರ್ತಿಯನ್ನು ತುಂಬುತ್ತವೆ, ಪ್ರೊತ್ಸಾಹವನ್ನು ಕೊಡುತ್ತವೆ. ಹಾಗೆಂದೇ ಅವುಗಳನ್ನು ಆಗಾಗ್ಗೆ ಮೆಲಕುಹಾಕುತ್ತೇನೆ. ಮೆಲಕುಹಾಕುತ್ತಲೇ ಅವುಗಳನ್ನು ಮತ್ತೆ ಮತ್ತೆ ಕಣ್ಣಮುಂದೆ ಆಡಲುಬಿಟ್ಟು ಮುದಗೊಳ್ಳುತ್ತೇನೆ. ಮುದಗೊಳ್ಳುತ್ತಲೇ “ಓ ಬದುಕೆ, ನೀನಿಷ್ಟೇನಾ?” ಎಂದು ಒಮ್ಮೆ ಬದುಕಿನತ್ತ ನೋಡಿ ಗಹಗಹಿಸಿ ನಗುತ್ತೇನೆ. ತಟ್ಟನೆ “ನಗು ಮಗನೆ ನಗು, ನನಗೆ ಗೊತ್ತು! ನಿನ್ನದು ಅಹಂಕಾರದ ನಗುವಲ್ಲ, ಅದು ಅಭಿಮಾನದ ನಗು!” ಎಂದು ಯಾರೋ ಕಿವಿಯಲ್ಲಿ ಪಿಸುಗುಟ್ಟಿದಂತಾಗುತ್ತದೆ. ತಿರುಗಿ ನೋಡುತ್ತೇನೆ. ನನ್ನನ್ನು ಹಿಂಡಿಹಿಪ್ಪೆ ಮಾಡಲು ನೋಡಿದ ಮತ್ತದೇ ನನ್ನ ಬದುಕು ನನ್ನ ಪಕ್ಕದಲ್ಲಿ ನಗುತ್ತಾ ನಿಂತಿರುತ್ತದೆ! ಹೆಮ್ಮೆಯಿಂದ ಬೀಗುತ್ತಾ ಅದಕ್ಕೊಂದು ಥ್ಯಾಂಕ್ಸ್ ಹೇಳುತ್ತಿದ್ದಂತೆಯೇ ನಾನು ನಡೆದ ಬಂದ ಹಾದಿ ಒಮ್ಮೆ ನನ್ನ ಕಣ್ಣೆದುರಿಗೆ ಸುಮ್ಮನೆ ಹಾದುಹೋಗುತ್ತದೆ.

    ಬೇಜವಾಬ್ದಾರಿ ಅಪ್ಪನ ಮಗನಾಗಿ ಹುಟ್ಟಿದ ನನ್ನ ಬದಕು ಮೊದಲಿನಿಂದಲೂ ಹರಿದು ಹಂಚಿಹೋದ ಬದುಕು. ನಾನು ಹುಟ್ಟಿದ್ದು ತಾಯಿಯ ತವರು ಮನೆಯಲ್ಲಾದರೂ ನನ್ನ ಮೊದಲ ಮೂರು ವರ್ಷದ ಬಾಲ್ಯ ಕಳೆದಿದ್ದು ನನ್ನೂರು ಮುಧೋಳದಲ್ಲಿ, ಅಪ್ಪ ಅಮ್ಮನ ಗರಡಿಯಲ್ಲಿ. ಅಪ್ಪ ಬೇಜವಾಬ್ದಾರಿಯಾಗಿದ್ದಕ್ಕೆ ಬೇಸತ್ತು ನನ್ನ ಸಂಬಂಧಿಕರು ಇಲ್ಲಿದ್ದರೆ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗಲಾರದು ಎಂಬ ಕಾರಣಕ್ಕೆ ಮೂರೂ ಜನ ಮಕ್ಕಳನ್ನು (ನಾನು, ಅಣ್ಣ, ತಂಗಿ) ತಂತಮ್ಮ ಊರಿಗೆ ಕರೆದುಕೊಂಡು ಹೋದರು. ಆ ಪ್ರಕಾರ ನನ್ನ ಅಣ್ಣನನ್ನು ನನ್ನ ದೊಡ್ಡಪ್ಪ (ತಂದೆಯ ಅಣ್ಣ- ಹೇಮಣ್ಣ ಕವಲೂರು) ತಮ್ಮೂರು ಅಳವಂಡಿಗೆ ಕರೆದುಕೊಂಡು ಹೋದರೆ, ನನ್ನನ್ನು ನನ್ನ ದೊಡ್ಡಮ್ಮ (ತಾಯಿಯ ಅಕ್ಕ-ಸರೋಜಿನಿ ಪಾಟೀಲ್) ತಮ್ಮೂರು ಕಲಕೋಟಿಗೆ ಕರೆದುಕೊಂಡು ಬಂದರು. ನನ್ನ ತಂಗಿಯನ್ನು ತಾಯಿಯ ತವರು ಮನೆ ಸುಲ್ತಾನಪೂರದವರು ಕರೆದುಕೊಂಡು ಹೋದರು. ಹೀಗಾಗಿ ನಾವು ಮೂರೂ ಜನ ಮಕ್ಕಳು ಬಾಲ್ಯದಿಂದಲೇ ತಂದೆ ತಾಯಿಯರ ಪ್ರೀತಿ, ವಾತ್ಸಲ್ಯದಿಂದ ವಂಚಿತರಾದೆವು. ಮೊದಲಿನಿಂದಲೂ ಅಷ್ಟಾಗಿ ತಂದೆ ತಾಯಿಯರ ಸಂಪರ್ಕವಿಲ್ಲದೆ ಬೆಳೆದಿದ್ದರಿಂದ ನಮ್ಮ ಮತ್ತು ಅವರ ನಡುವೆ ಅಂಥ ಹೇಳಿಕೊಳ್ಳುವಂಥ ಸಂಪರ್ಕ ಯಾವತ್ತಿಗೂ ಏರ್ಪಡಲಿಲ್ಲ. ಹೀಗಾಗಿ ಅವರು ಅಪರೂಪಕ್ಕೊಮ್ಮೆ ನಮ್ಮನ್ನು ನೋಡಲು ಬಂದಾಗ ನಾವು ಅವರನ್ನು ಅಪರಿಚಿತರಂತೆ ನೋಡುತ್ತಿದ್ದೆವು. ಅವರೊಂದಿಗೆ ಮಾತನಾಡಲೂ ಎಂಥದೋ ಮುಜುಗರವಾಗುತ್ತಿತ್ತು. ಹೀಗಿರುವಾಗ ನಮ್ಮನ್ನು ಒಪ್ಪಿ, ಅಪ್ಪಿ ಸಂತೈಸಿದ ಎಷ್ಟೋ ಬಂಧುಗಳು ನಮಗೆ ದಾರಿ ದೀಪವಾದರು ಹಾಗೂ ಅವರೇ ತಂದೆ ತಾಯಿಗಳಾದರು.

    ನಾನು ನನ್ನ ಮೂರನೇ ವರ್ಷದಿಂದಲೇ ಕಲಕೋಟಿಯಲ್ಲಿ ದೊಡ್ಡಮ್ಮ ದೊಡ್ಡಪ್ಪರ ತುಂಬು ಆರೈಕೆಯಲ್ಲಿ ಬೆಳೆಯತೊಡಗಿದೆ. ಅವರು ಒಂದು ಮಗುವಿಗೆ ಏನೆಲ್ಲಾ ಬೇಕೋ ಅದನ್ನೆಲ್ಲ ಧಾರೆಯೆರೆದು ಬೆಳೆಸಿದರು. ದೊಡ್ಡಮ್ಮ ದೊಡ್ಡಪ್ಪನಿಗೆ ಗಂಡುಮಕ್ಕಳಿಲ್ಲದಿದ್ದ ಕಾರಣಕ್ಕೇನೋ ನನ್ನನ್ನು ಅತಿ ಮುದ್ದಿನಿಂದ, ಪ್ರೀತಿಯಿಂದ ಬೆಳೆಸಿದರು. ನಾನು ಓದಿನಲ್ಲಿ ಸದಾ ಮುಂದಿದ್ದ ಕಾರಣಕ್ಕೆ ದೊಡ್ದಪ್ಪ (ಸೋಮನಗೌಡ ಪಾಟಿಲ್) ನಿಗೆ ನಾನು ಬಲು ಇಷ್ಟವಾಗುತ್ತಿದ್ದೆ. ಅವರು ಆಗಾಗ್ಗೆ ನನಗೆ ಕಾಮಿಕ್ಸ್ ಪುಸ್ತಕಗಳನ್ನು ತಂದುಕೊಡುತ್ತಿದ್ದರು. ಹೀಗಾಗಿ ನನಗೆ ಓದುವ ಹುಚ್ಚು ಚಿಕ್ಕಂದಿನಿಂದಲೇ ಶುರುವಾಯಿತು. ಅವರು ನನ್ನನ್ನು ಎಷ್ಟು ಇಷ್ಟಪಡುತ್ತಿದ್ದರೆಂದರೆ ನಾನು ಎರಡನೇ ಕ್ಲಾಸಿನಲ್ಲಿರಬೇಕಾದರೆ ಒಮ್ಮೆ ದೊಡ್ಡಪ್ಪ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಅದು ಅವರ ಅಣ್ಣನ ಮಗಳು ಅಮೇರಿಕಕ್ಕೆ ಹೋಗುವ ಸಂದರ್ಭ. ಆಗಲೇ ನಾನು ಬೆಂಗಳೂರಿನ ಏರ್ಪೋರ್ಟಿನಲ್ಲಿ ವಿಮಾನ ಹೇಗಿರುತ್ತದೆ ಎಂದು ಮೊಟ್ಟಮೊದಲಬಾರಿಗೆ ನೋಡಿ ಥ್ರಿಲ್ ಆಗಿದ್ದೆ. ಅದನ್ನು ನನ್ನ ಸಹಪಾಠಿಗಳ ಹತ್ತಿರ ಆಗಾಗ್ಗೆ “ನಾನು ಬೆಂಗಳೂರಿಗೆ ಹೋಗಿ ವಿಮಾನ ನೋಡಿಬಂದಿದ್ದೇನೆ ಗೊತ್ತಾ?” ಎಂದು ಏನೋ ಮಹತ್ವದನ್ನು ಸಾಧಿಸಿದ ಹಾಗೆ ಹೇಳಿಕೊಂಡು ಓಡಾಡುತ್ತಿದ್ದೆ. ನಾನು ವಿಮಾನ ನೋಡಿ ಬಂದಿದ್ದೇನೆ ಎಂಬ ಕಾರಣಕ್ಕಾಗಿ ನನ್ನ ಇತರೆ ಸಹಪಾಠಿಗಳು ಆ ಹಳ್ಳಿಯ ಶಾಲೆಯಲ್ಲಿ ನನ್ನನ್ನು ವಿಶೇಷ ಗೌರವದಿಂದ ಕಾಣುತ್ತಿದ್ದರು. ದೊಡ್ಡಪ್ಪ ಬೆಂಗಳೂರಿನ ಲಾಲ್ ಬಾಗ್, ಕಬ್ಬನ್ ಪಾರ್ಕ್, ವಿಧಾನಸೌಧ ಎಂದೆಲ್ಲಾ ಒಂದು ಸುತ್ತು ಹೊಡಿಸಿದ್ದರು. ಆಗಲೇ ನಾನು ಬೆಂಗಳೂರಿನ ಅಂದ ಚೆಂದಕ್ಕೆ ಮಾರು ಹೋಗಿ ದೊಡ್ಡವನಾದ ಮೇಲೆ ಇಲ್ಲೇ ಇರಬೇಕು ಎಂದು ಬಯಸಿದ್ದೆ. ಆದರೆ ಮುಂದೆ ಬದುಕು ನನ್ನನ್ನು ಮೇಲಿಂದ ಮೇಲೆ ಕಳ್ಳೆಮಳ್ಳೆ ಆಡಿಸಿ ಕೈಬಿಡುತ್ತಿದ್ದುದರಿಂದ ಬೆಂಗಳೂರಿನಲ್ಲಿ ಇರುವ ಆಸೆಯಿರಲಿ ಅದರತ್ತ ತಲೆ ಹಾಕಿ ಮಲಗುವದನ್ನು ಕೂಡ ಬಿಟ್ಟೆ. ಆದರೆ ಮುಂದೆ ನನ್ನ ಬದುಕಿನ ಆಕಸ್ಮಿಕ ಮತ್ತು ಅನಿವಾರ್ಯತೆಗಳೆರಡೂ ನನ್ನನ್ನು ಇಲ್ಲಿಯವರೆಗೂ ಎಳೆದುತರುತ್ತವೆ ಎಂದು ನಾನೆಣಿಸಿರಲಿಲ್ಲ.

    ಈ ಕಲಕೋಟಿಯಲ್ಲಿರುವಾಗಲೇ ನನಗೆ ಗೌರಜ್ಜಿಯ ಪರಿಚಯವಾದದ್ದು. ಈಕೆ ನಮ್ಮ ಬಂಧು ಬಳಗದವಳಲ್ಲದಿದ್ದರೂ ನಮ್ಮ ದೊಡ್ಡಪ್ಪನ ಹಿರಿಯರು ಆಕೆಯ ಗಂಡನಿಗೆ ಹಿಂದೆ ಯಾವುದೋ ಸಹಾಯ ಮಾಡಿದ್ದರಿಂದ ಅದರ ಋಣ ತೀರಿಸಲೆಂದು ಆ ಮನೆಯನ್ನು ಹದ್ದುಗಣ್ಣಿನಿಂದ ಕಾಯುವದರ ಮೂಲಕ ಸಹಾಯ ಮಾಡುತ್ತಿದ್ದಳು. ಆಕೆ ಹೆಚ್ಚು ಕಡಿಮೆ ಮನೆಯವಳಂತೆ ಆಗಿದ್ದಳು. ಈಕೆಗೆ ರಾಮಾಯಣ ಮಹಾಭಾರತದ ಕಥೆಗಳೆಲ್ಲವೂ ಗೊತ್ತಿದ್ದರಿಂದ ಅವನ್ನು ನಾನು ಪ್ರಾಥಮಿಕ ಶಾಲೆಯನ್ನು ಸೇರುವ ಮೊದಲೇ ಅವಳ ಬೊಚ್ಚ ಬಾಯಿಂದ ಕೇಳಿ ಬೆಕ್ಕಸ ಬೆರಗಾಗುತ್ತಿದ್ದೆ. ಅದಲ್ಲದೆ ದೀಪಾವಳಿ ಮತ್ತು ಗೌರಿ ಹುಣ್ಣಿಮೆಯಂದು ಅವಳು ಹಾಡುತ್ತಿದ್ದ ಸೋಬಾನೆ ಪದಗಳು ನನ್ನ ಸುಪ್ತ ಮನಸ್ಸಿನ ಮೇಲೆಲ್ಲೋ ಪರಿಣಾಮ ಬೀರಿದ್ದರಿಂದ ನಾನು ಮುಂದೆ ಬರಹಗಾರನಾಗಲು ಸಾಕಷ್ಟು ಸಹಾಯವಾದವೆಂದು ಕಾಣುತ್ತದೆ.

    ನಾನು ಕಲಕೋಟಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ನನಗೆ ಅದೇ ಊರಿನಲ್ಲಿರುವ ನಮ್ಮ ದೂರದ ಸಂಬಂಧಿಕ ಮಲ್ಲೇಶಪ್ಪ ಸಣ್ಣಕಳ್ಳಿ ಎಂಬವರಿಂದ ಇಂಗ್ಲೀಷ ಪಾಠಾಭ್ಯಾಸ ಶುರುವಾಯಿತು. ಅವರು ವೃತ್ತಿಯಲ್ಲಿ ‘ಗ್ರಾಮ ಸೇವಕ’ ರಾಗಿ ಕೆಲಸ ಮಾಡುತ್ತಿದ್ದರೂ ಅವರಿಗೆ ಇಂಗ್ಲೀಷ ಭಾಷೆಯ ಬಗ್ಗೆ ಅಪಾರ ಜ್ಞಾನವಿತ್ತು. ದಿನಾ ಬೆಳಿಗ್ಗೆ ಹಾಗೂ ಸಾಯಂಕಾಲ ಅವರಲ್ಲಿಗೆ ಹೋಗಿ ಇಂಗ್ಲೀಷ ಪಾಠ ಹೇಳಿಸಿಕೊಳ್ಳಲು ಹೋಗುತ್ತಿದ್ದೆ. ನನಗೆ ಅದೇನೋ ಗೊತ್ತಿಲ್ಲ ನಾನು ಇಂಗ್ಲೀಷ ಭಾಷೆಯನ್ನು ಬಹಳ ಬೇಗ ಬೇಗನೆ ಕಲಿಯತೊಡಗಿದೆ. ನಿಮಗೆ ಅಚ್ಚರಿಯಾಗಬಹುದು ನಾನು ಎರಡನೇ ಕ್ಲಾಸಿನಲ್ಲಿರುವಾಗಲೇ ಮೊದಲನೇ ಭಾಷಾಂತರ ಪಾಠಮಾಲೆಯಲ್ಲಿನ ಶಬ್ಧಗಳನ್ನು ಹಾಗೂ ವಾಕ್ಯ ರಚನೆಗಳನ್ನು ಚನ್ನಾಗಿ ಕಲಿತುಕೊಂಡಿದ್ದೆ. ನಮ್ಮ ಶಾಲೆಯಲ್ಲಿ ಮೂರು ಜನ ಶಿಕ್ಷಕರಿದ್ದದರಿಂದ ಆ ಮೂವರೇ ಏಳು ಕ್ಲಾಸುಗಳನ್ನು ಹಂಚಿಕೊಂಡಿದ್ದರು. ಏಳನೆ ತರಗತಿಗೆ ಪಾಠ ಮಾಡುವ ಶಿಕ್ಷಕರು ವಿದ್ಯಾರ್ಥಿಗಳಿಗೇನಾದರು ಇಂಗ್ಲೀಷ ಪಾಠಗಳನ್ನು ಓದಲು ಬಾರದಿದ್ದರೆ ನನ್ನನ್ನು ತಮ್ಮ ತರಗತಿಗೆ ಕರೆಸಿಕೊಂಡು ನನ್ನ ಕಡೆಯಿಂದ ಆ ಪಾಠ ಓದಿಸಿ ಆ ವಿದ್ಯಾರ್ಥಿಗಳಿಗೆ ಅವಮಾನ ಮಾಡುತ್ತಿದ್ದರು. ನಾನೋ ಹೆಮ್ಮೆಯಿಂದ ಬೀಗುತ್ತಿದ್ದೆ. ನಾನು ಅಷ್ಟರಮಟ್ಟಿಗೆ ಇಂಗ್ಲೀಷನ್ನು ಸರಾಗವಾಗಿ ಓದುವದು ಬರೆಯುವದನ್ನು ಮಾಡುತ್ತಿದ್ದೆ.

    ನಾನು ನಾಲ್ಕನೇ ತರಗತಿಯಲ್ಲಿರುವಾಗಲೆ ನನ್ನ ದೊಡ್ಡಪ್ಪ ಹೃದಯಾಘಾತದಿಂದ ನಿಧನ ಹೊಂದಿ ಮನೆಯಲ್ಲಿ ಅಗಾಧ ಬದಲಾವಣೆಗಳಾದವು. ಆಗ ಇದೇ ದೊಡ್ಡಪ್ಪನ ಮಗಳು ಅಂದರೆ ನನ್ನ ಅಕ್ಕ (ಜಯಶ್ರಿ ಗೌರಿಪೂರ್) ಗದುಗಿನಲ್ಲಿ ಗಂಡನ ಮನೆಯವರ ಕಾಟಕ್ಕೆ ಬೇಸತ್ತು ಬೇರೆ ಹೋಗಬೇಕಾಗಿ ಬಂದಾಗ ಜೊತೆಯಲ್ಲಿರಲಿ ಎಂದು ನನ್ನನ್ನು ತನ್ನ ಜೊತೆ ಕರೆದುಕೊಂಡು ಹೋದಳು. ಮನೆಯ ಹತ್ತಿರದಲ್ಲಿಯೇ ಇರುವ ಶಾಲೆಗೆ ನನ್ನನ್ನು ಸೇರಿಸಲಾಯಿತು. ಅಕ್ಕ ಎಷ್ಟೊಂದು ಕಟ್ಟುನಿಟ್ಟಾಗಿದ್ದಳೆಂದರೆ ನಾನು ಶಾಲೆಯಲ್ಲಿ ಸದಾ ಮೊದಲನೇ ಸ್ಥಾನವನ್ನು ಯಾರಿಗೂ ಬಿಟ್ಟು ಕೊಡದಂತೆ ನೋಡಿಕೊಂಡಳು. ನಾನು ಶಾಲೆಯಿಂದ ಬಂದ ತಕ್ಷಣ ಆ ದಿನ ಶಾಲೆಯಲ್ಲಿ ಯಾವ್ಯಾವ ಪಾಠ ನಡೆಯಿತು ಎಂಬ ವರದಿಯನ್ನು ಒಪ್ಪಿಸಬೇಕಾಗಿತ್ತು. ಬಹುಶಃ, ಅವಳು ಇಷ್ಟೊಂದು ಕಾಳಜಿ ತೆಗೆದುಕೊಂಡಿದ್ದಕ್ಕೇನೋ ನಾನು ಏಳನೇ ತರಗತಿಯಲ್ಲಿ ಇಡಿ ಶಾಲೆಗೆ ಮೊದಲನೆಯವನಾಗಿ ತೇರ್ಗಡೆ ಹೊಂದಿದೆ. ಅದಕ್ಕೆ 25 ರೂಗಳಷ್ಟು ಬಹುಮಾನವೂ ಬಂತು. ನಂತರ ನಾನು ಎಂಟನೆ ತರಗತಿಯಿಂದ ಮಾಡೆಲ್ ಹೈಸ್ಕೂಲಿಗೆ (ಈಗಿನ ಸಿ.ಎಸ್.ಪಾಟೀಲ್ ಹೈಸ್ಕೂಲ್) ಸೇರಿದೆ. ಅಲ್ಲಿಯೂ ಸಹ ಅಕ್ಕ ಹತ್ತನೆ ತರಗತಿಯವರೆಗೂ ವರ್ಷ ವರ್ಷವೂ ಇಡಿ ಕ್ಲಾಸಿಗೆ ಫಸ್ಟ್ ಬರುವಂತೆ ನೋಡಿಕೊಂಡಳು.

    -ಉದಯ್ ಇಟಗಿ

    ಚಿತ್ರಕೃಪೆ: ಕೆಂಡ ಸಂಪಿಗೆ
    (ತಮಗೆಲ್ಲರಿಗೂ ಮತ್ತೊಮ್ಮೆ ಹೊಸವರ್ಷದ ಶುಭಾಶಯಗಳು)

    6 ಕಾಮೆಂಟ್‌(ಗಳು):

    sunaath ಹೇಳಿದರು...

    ಉದಯ,
    ಬದುಕು ಒಂದು ಸೋಜಿಗಗಳ ಸಂತೆ.
    ಹೊಸ ವರ್ಷದ ಶುಭಾಶಯಗಳು.

    ಸುಧೇಶ್ ಶೆಟ್ಟಿ ಹೇಳಿದರು...

    nimma badukina bandiya thallaNagaLa parichaya ishta aayithu.... baraha sphoorthi huttisuvanthidhe.. mundina bhaagakke kaayuttene Uday sir..

    ವಾಣಿಶ್ರೀ ಭಟ್ ಹೇಳಿದರು...

    nimma baravanigeya shaili istavaayitu...
    nanna blogigomme banni

    suresh Bujari ಹೇಳಿದರು...

    Nagottu uday ninna bagge. Ninna barahad shaili ista adakkee odide. channagide. hage munduvare. bye.

    AntharangadaMaathugalu ಹೇಳಿದರು...

    ನಿಮಗು ಹೊಸ ವರ್ಷದ ಶುಭಾಶಯಗಳು. ಬದುಕೆಂಬ ಬುಟ್ಟಿಯಲ್ಲಿ ಅನೇಕ ಚಿತ್ರ-ವಿಚಿತ್ರ ಸಾಮಾನುಗಳೂ, ಬೊಂಬೆಗಳೂ ಇರುತ್ತವೆ.. ಅದಕ್ಕೆ ಸಂಬಂಧಿಸಿದ ಯಾವುದಾದರೂ ಘಟನೆ ಅಥವಾ ಜನರು ಸಿಕ್ಕಾಗ, ಅವು ಮೆಲ್ಲನೆ ಹೊರಗೆ ಇಣುಕಿ, ನಮ್ಮ ನೆನಪಿನಾಳವನ್ನು ಕೆದಕುತ್ತವೆ....

    ಶ್ಯಾಮಲ

    shivu.k ಹೇಳಿದರು...

    ಸರ್,
    ನಿಮ್ಮ ನೆನಪಿನಾಳದ ಘಟನೆಗಳು ತುಂಬಾ ಚೆನ್ನಾಗಿವೆ. ಮುಂದಿನ ಭಾಗವನ್ನು ಕಾಯುತ್ತಿದ್ದೇನೆ.