Demo image Demo image Demo image Demo image Demo image Demo image Demo image Demo image

ಮಂಜುವಿಗೆ

 • ಶುಕ್ರವಾರ, ಡಿಸೆಂಬರ್ 26, 2008
 • ಬಿಸಿಲ ಹನಿ
 • ಜೀವದ ಗೆಳೆಯ ಮಂಜು ಮತ್ತು ನಾನು ಬೆಂಗಳೂರಿನ ಎಲಿಚೇನಹಳ್ಳಿ ರೂಮೊಂದರಲ್ಲಿ ಸುಮಾರು ಒಂದು ವರ್ಷ ಒಟ್ಟಿಗೆ ಇದ್ದೆವು. ಆದರೆ ಡಿಸೆಂಬರ್ ೧೯೯೯ ರಲ್ಲಿ ಅವರ ತಂದೆಗೆ ಮಂಡ್ಯದಿಂದ ಬೆಂಗಳೂರಿಗೆ ಟ್ರಾನ್ಷಫರ್ ಆಗಿದ್ದರಿಂದ ಅವನು ಅನಿವಾರ್ಯ ಕಾರಣಗಳಿಂದ ನನ್ನ ರೂಮನ್ನು ಬಿಟ್ಟು ತಮ್ಮ ಮನೆಗೆ ಹೋಗಬೇಕಾಯಿತು. ಹಾಗೆ ಹೊರಟ ಸಂದರ್ಭದಲ್ಲಿ ಬರೆದ ಕವನವಿದು. ಇದನ್ನು ೨.೧೨.೧೯೯೯ರಂದು ಬರೆದಿದ್ದು.
  ಗೆಳೆಯಾ,
  ಬದುಕಿನ ಬುತ್ತಿಯಿಂದ
  ಹಿಡಿ ಹಿಡಿ ನೆನಪುಗಳನ್ನು
  ಹೆಕ್ಕಿ ಹೆಕ್ಕಿ ತೆಗೆದವರು ನಾವು
  ಕಟ್ಟಿಟ್ಟ ಕನಸುಗಳನ್ನು ಬಿಚ್ಚಿಟ್ಟು
  ರಮ್ಯವಾಗಿ ಹಂಚಿಕೊಂಡವರು ನಾವು
  ಬಸಿದು ಹೋದ ಬದುಕಿನ
  ಗಸಿ ಗಸಿಯನ್ನು ಬಿಡದೆ
  ಮೊಗೆಮೊಗೆದು ಕುಡಿದವರು ನಾವು
  ಎದೆಯ ನೋವುಗಳಿಗೆ ಕದವ ಹಾಕದೆ
  ತೆರೆದು ತೋರಿದವರು ನಾವು
  ಸಂಜೆ ಮಲ್ಲಿಗೆಯ ಸವಿಗಂಪನ್ನು
  ಸವಿಯುತ್ತಾ ಅದೆಷ್ಟೋ ಸುಂದರ
  ಸಂಜೆಗಳನ್ನು ಕಳೆದವರು ನಾವು
  ನಾಳೆಗಳ ಕುರಿತು ಗಂಟೆಗಟ್ಟಲೆ
  ಹರಟುತ್ತಾ ಅದ್ಭುತ ರಾತ್ರಿಗಳನ್ನು
  ಕಳೆದವರು ನಾವು
  ಎದೆಗೆ ಎದೆ ಕೊಟ್ಟು
  ಹೆಗಲಿಗೆ ಹೆಗಲು ಕೊಟ್ಟು
  ಈ ಬಾಳ ಪಯಣದಲಿ
  ಜೊತೆ ಜೊತೆಯಾಗಿ ನಿಂತವರು ನಾವು
  ಬಿಂಬ-ಪ್ರತಿಬಿಂಬಗಳಾದವರು ನಾವು
  ಹೇಗೆ ಬೀಳ್ಕೊಡಲಿ ನಿನ್ನ?
  ನೀ ಹೊರಟು ನಿಂತಿರುವೆ
  ನಿನ್ನದೇ ಗೂಡಿಗೆ.

  ಗೆಳೆಯಾ,
  ನನಗೆ ಗೊತ್ತು ಇಲ್ಲಿ
  ಅಗಲಿಕೆ ಅನಿವಾರ್ಯವೆಂದು
  ಆದರೂ ಏಕೋ ಎದೆ ಭಾರವಾಗುತ್ತಿದೆ
  ಕಣ್ಣುಗಳು ತೇವಗೊಳ್ಳುತ್ತಿವೆ
  ಹೇಗೆ ಸ್ಪಂದಿಸಲಿ ನಿನ್ನ ನಿರ್ಗಮನಕೆ?
  Anyway, ಕೊಡುತ್ತಿದ್ದೇನೆ ನಿನಗೆ
  ಹಿಡಿ ಹಿಡಿ ನೆನಪುಗಳನ್ನು
  ಹಸಿ ಹಸಿ ಪ್ರೀತಿಯನ್ನು
  ಎದೆಯ ಭಾವನೆಗಳನ್ನು ಹೊರಗೆಡವಿಟ್ಟ ಈ ಕವನವನ್ನು!
  ಶುಭವಾಗಲಿ ನಿನಗೆ.
  ್ರೀತಿಯಿಂದ
  ಉದಯ ಇಟಗಿ

  2 ಕಾಮೆಂಟ್‌(ಗಳು):

  ಅಂತರ್ವಾಣಿ ಹೇಳಿದರು...

  ಉದಯ ಅವರೆ,

  ನಿಮ್ಮ ಗೆಳೆಯನ ಕುರಿತಾದ ಕವನ ಮನ ಕಲುಕುವಂತಿದೆ.

  ಈ ಸಾಲುಗಳು ಹೆಚ್ಚು ಮೆಚ್ಚಿಗೆಯಾದವು:

  ಎದೆಗೆ ಎದೆ ಕೊಟ್ಟು
  ಹೆಗಲಿಗೆ ಹೆಗಲು ಕೊಟ್ಟು
  ಈ ಬಾಳ ಪಯಣದಲಿ
  ಜೊತೆ ಜೊತೆಯಾಗಿ ನಿಂತವರು ನಾವು
  ಬಿಂಬ-ಪ್ರತಿಬಿಂಬಗಳಾದವರು ನಾವು
  ಹೇಗೆ ಬೀಳ್ಕೊಡಲಿ ನಿನ್ನ?
  ನೀ ಹೊರಟು ನಿಂತಿರುವೆ
  ನಿನ್ನದೇ ಗೂಡಿಗೆ.

  ಬಿಸಿಲ ಹನಿ ಹೇಳಿದರು...

  ಪ್ರೀತಿಯ ಜಯಶಂಕರವರೆ,
  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನನಗೆ ಮತ್ತಷ್ಟು ಬರೆಯಲು ಉತ್ತೇಜನ ಸಿಕ್ಕಂತಾಯಿತು.ನಿಮ್ಮ "ಹಿಡಿ ಪ್ರೀತಿ" ಕವನದಲ್ಲಿನ ಸಾಲುಗಳು
  "ಪ್ರೀತಿ ಸಿಗದೆ ಜಗತ್ತಾಗಿದೆ ಕತ್ತಲು
  ಯಾರು ಬರುವರು ಇದ ಬೆಳಗಲು?"
  ತುಂಬಾ ಮಾರ್ಮಿಕವಾಗಿವೆ.
  ಪ್ರೀತಿಯಿಂದ
  ಉದಯ