Demo image Demo image Demo image Demo image Demo image Demo image Demo image Demo image

ಶೇಕ್ಷಪೀಯರನ ತಂಗಿ

  • ಬುಧವಾರ, ಡಿಸೆಂಬರ್ 31, 2008
  • ಬಿಸಿಲ ಹನಿ
  • ಶೇಕ್ಷಪೀಯರನ ಕಾಲದಲ್ಲಿ ಅವನಷ್ಟೇ ಸಮರ್ಥವಾಗಿ ಯಾರಿಗಾದರು ನಾಟಕಗಳನ್ನು ಬರೆಯಲು ಸಾಧ್ಯವಿತ್ತಾ ಎಂದು ಒಂದು ಸಾರಿ ಸುಮ್ಮನೆ ಯೋಚಿಸುವದಾದರೆ ನಮಗೆ ಸಿಗುವದು ಅವನ ತಂಗಿ. ಬರಹದಲ್ಲಿ ಪ್ರತಿಭೆಯಲ್ಲಿ ಅವನಷ್ಟೇ ಸಮರ್ಥವಾಗಿದ್ದವಳು. ಅವಳ ಹೆಸರು ಜುಡಿತ್.

    ಶೇಕ್ಷಪಿಯರ್ ವ್ಯಾಕರಣದ ಶಾಲೆಗೆ ತಾನೇ ಹೋದ. ಅಲ್ಲಿ ಲ್ಯಾಟಿನ್, ವರ್ಜಿಲ್, ಹೋರೆಸ್ ಮತ್ತು ತರ್ಕಶಾಸ್ತ್ರ ಕಲಿತನು. ಎಲ್ಲರಿಗೂ ತಿಳಿದಿರುವಂತೆ ಶೇಕ್ಷಪಿಯರ್ ಒಬ್ಬ ಸಾಹಸಿ ಹುಡುಗನಾಗಿದ್ದ. ಯಾವಾಗಲೂ ಮೊಲಗಳನ್ನು ಹಿಡಿಯುವದು, ಜಿಂಕೆಗಳನ್ನು ಬೇಟೆಯಾಡುವದು ಅವನ ಕೆಲಸವಾಗಿತ್ತು. ಮುಂದೆ ಪಕ್ಕದ ಊರಿನ ಹುಡುಗಿಯನ್ನು ಮದುವೆಗೆ ಮುನ್ನ ಬಸಿರು ಮಾಡಿದ್ದರಿಂದ ಅವಳನ್ನೇ ಮದುವೆಯಾಗಬೇಕಾಗಿ ಬಂತು. ಅವಳಿಂದ ಮಗುವನ್ನೂ ಪಡೆದ. ಈ ಮಧ್ಯೆ ಅವರಪ್ಪನ ವ್ಯಾಪಾರ ನಷ್ಟಕ್ಕೀಡಾಗಿ ಮನೆಯ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿತು. ಧುತ್ತೆಂದು ಎರಗಿದ ಈ ಎಲ್ಲ ಅವಘಡಗಳಿಂದಾಗಿ ಆತ ಲಂಡನ್ ಗೆ ಕೆಲಸ ಹುಡುಕಿ ಹೋಗಬೇಕಾಯಿತು. ಅಲ್ಲಿ ರಂಗಮಂದಿರವೊಂದರಲ್ಲಿ ನಾಟಕ ನೋಡಲು ಬರುವಾಗ ಶ್ರೀಮಂತ ಜನರು ತರುವ ಕುದರೆಗಳನ್ನು ನೋಡಿಕೊಳ್ಳುವ ಕೆಲಸಕ್ಕೆ ಸೇರಿದ. ಅವನಿಗೆ ನಾಟಕಗಳಲ್ಲಿ ತುಂಬಾ ಆಸಕ್ತಿಯಿದ್ದುದರಿಂದ ಮುಂದೆ ಬಹಳ ಬೇಗನೆ ನಟನಾಗಿ, ನಾಟಕಕಾರನಾಗಿ ಭಡ್ತಿ ಪಡೆದ. ಇದರಿಂದ ಅವನಿಗೆ ಪ್ರಚಾರವೂ ಸಿಕ್ಕಿ ವಿಶ್ವದ ಅಗ್ರಮಾನ್ಯ ನಾಟಕಕಾರೆಂದೆನಿಸಿಕೊಂಡ.

    ಈ ಮಧ್ಯ ಅವನ ಅಸಾಧಾರಣ ಪ್ರತಿಭಾವಂತ ತಂಗಿ ಮನೆಯಲ್ಲಿ ಹಾಗೆ ಉಳಿದಳು. ಅವಳು ಅವನಷ್ಟೇ ಸಾಹಸಿ, ಕಲ್ಪನಾತೀತ ಮತ್ತು ಉತ್ಸಾಹದ ಚಿಲುಮೆಯಾಗಿದ್ದಳು. ಆದರೆ ಅವಳನ್ನು ಶಾಲೆಗೆ ಕಳಿಸಲಿಲ್ಲ. ಅವಳಿಗೆ ವ್ಯಾಕರಣ, ತರ್ಕಶಾಸ್ತ್ರ ಓದಲು ಅವಕಾಶವಿರಲಿಲ್ಲ. ಬರಿ ಹೊರೇಸ್ ಮತ್ತು ವರ್ಜಿಲ್ ಓದಬಹುದಿತ್ತು. ತನ್ನ ಅಣ್ಣನ ಪುಸ್ತಕಗಳನ್ನು ಆಗಾಗ್ಗೆ ತೆಗೆದು ಓದುತ್ತಿದ್ದಳು. ಹೀಗೆ ಓದಲು ಕುಳಿತಾಗಲೆಲ್ಲ ಅವಳ ತಂದೆ ತಾಯಿ ಅವಳಿಗೆ ಕಾಲುಚೀಲಗಳನ್ನು ಹೆಣೆಯಲು ಅಥವಾ ಅಡಿಗೆ ಮಾಡಲು ಹೇಳುತ್ತಿದ್ದರು. ಜೊತೆಗೆ ಪುಸ್ತಕಗಳೊಂದಿಗೆ ಕಾಲ ಕಳೆಯಬೇಡೆಂಬ ಎಚ್ಚರಕೆಯ ಮಾತು ಬೇರೆ ಇರುತ್ತಿತ್ತು. ಇದನ್ನು ಅವಳಿಗೆ ನೋವಾಗದಂತೆ ಸಾವಧಾನವಾಗಿ ಹೇಳಿದರೂ ಅದರ ತೀಕ್ಷ್ಣತೆ ಅವಳನ್ನು ತಟ್ಟದೆ ಬಿಡುತ್ತಿರಲಿಲ್ಲ. ತಂದೆತಾಯಿಗಳಿಗೆ ಮಗಳ ಮೇಲೆ ಪ್ರಿತಿಯಿದ್ದರೂ ಅಂದಿನ ಸಾಮಾಜಿಕ ಕಟ್ಟುಪಾಡುಗಳಿಗೆ ಹೆದರಿ ಸುಮ್ಮನಿರಬೇಕಾಯಿತು. ಇದೆಲ್ಲದರ ನಡುವೆ ಅವಳು ಆಗೊಮ್ಮೆ ಈಗೊಮ್ಮೆ ಏನನ್ನೋ ಗೀಚುತ್ತಿದ್ದಳು. ಗೀಚಿದ್ದನ್ನು ಜಾಗೂರುಕತೆಯಿಂದ ಬಚ್ಚಿಡಬೇಕಾಗುತ್ತಿತ್ತು ಅಥವಾ ಸುಡಬೇಕಾಗುತ್ತಿತ್ತು.

    ಪ್ರಾಯಕ್ಕೆ ಕಾಲಿಡುವ ಮುನ್ನವೇ ಅವಳನ್ನು ಒಬ್ಬ ಉಣ್ಣೆ ವ್ಯಾಪಾರಿಗೆ ಮದುವೆ ಮಾಡಿಕೊಟ್ಟರು. ಅವಳಿಗೆ ಮದುವೆ ಇಷ್ಟವಿರಲಿಲ್ಲ. ಬೇಡವೆಂದು ಅತ್ತಳು. ಅದಕ್ಕೋಸ್ಕರ ಅವಳಪ್ಪನಿಂದ ಒದೆ ತಿಂದಳು. ಅವನು ಮದುವೆ ವಿಚಾರದಲ್ಲಿ ತನ್ನನ್ನು ನೋಯಿಸುವದಾಗಲಿ, ಅವಮಾನಿಸುವದಾಗಲಿ ಮಾಡಬೇಡೇಂದು ಕೇಳಿಕೊಂಡ. ಕಣ್ಣಲ್ಲಿ ನೀರಿತ್ತು. ವಿಧಿಯಿಲ್ಲದೆ ಒಪ್ಪಬೇಕಾಯಿತು. ಬೇಸಿಗೆಯ ಒಂದು ರಾತ್ರಿ ಸಣ್ಣಪೆಟ್ಟಿಗೆಯೊಳಗೆ ತನ್ನ ಸಾಮಾನುಗಳನ್ನು ತುಂಬಿಕೊಂಡು ಯಾರಿಗೂ ಹೇಳದೆ ಮನೆಯನ್ನು ಬಿಟ್ಟು ಲಂಡನ್ ಕಡೆಗೆ ನಡೆದಳು. ಆಗ ಅವಳಿಗಿನ್ನೂ ಹದಿನೇಳು ತುಂಬಿರಲಿಲ್ಲ. ಆದರೂ ಅವಳಿಗೆ ಪದಗಳ ಜೋಡಣೆಯಲ್ಲಿ ಅಣ್ಣನಷ್ಟೇ ತೀಕ್ಷ್ಣ ಗ್ರಹಿಕೆ, ಚಾಕಚಕ್ಯತೆಯಿತ್ತು. ಒಮ್ಮೊಮ್ಮೆ ಅವನನ್ನೂ ಮೀರಿಸುತ್ತಿದ್ದಳು. ಅವನಂತೆ ಅವಳಿಗೂ ನಾಟಕದಲ್ಲಿ ಆಸಕ್ತಿಯಿತ್ತು. ರಂಗಮಂದಿರದ ಬಾಗಿಲಲ್ಲಿ ನಿಂತು ನಾನು ನಟಿಸುತ್ತೇನೆ ಎಂದಳು. ಅವಳನ್ನು ನೋಡಿ ನಕ್ಕರು. ಮ್ಯಾನೇಜರ್ ಅವಳನ್ನು ಅಪಹಾಸ್ಯ ಮಾಡಿದ. ಸ್ತ್ರಿ ನಟರ ಬಗ್ಗೆ ಕುಹಕವಾಡಿದ. ಯಾವ ಹೆಣ್ಣೂ ನಟಿ ಆಗುವದಕ್ಕೆ ಸಾಧ್ಯವಿಲ್ಲವೆಂದ. ಅವಳಿಗೆ ಇಷ್ಟವಾದ ರಂಗದಲ್ಲಿ ತರಬೇತಿ ಸಿಗಲಿಲ್ಲ. ಊಟಕ್ಕಾಗಿ ಬೀದಿ ಬೀದಿ ಅಲೆದಳು. ಆದರೂ ನಾಟಕ ಬರೆಯುವದರಲ್ಲಿ ಅವಳ ಆಸಕ್ತಿ ಕುಂದಲಿಲ್ಲ.


    ಅವಳ ಮುಖದಲ್ಲಿ ಶೇಕ್ಷಪಿಯರನ ಕಳೆಯಿತ್ತು. ಅದೇ ಬೂದುಗಣ್ಣುಗಳು, ದುಂಡಗಿನ ಹುಬ್ಬುಗಳು. ಜೊತೆಗೆ ಪುಟಿಯುವ ತಾರುಣ್ಯವಿತ್ತು. ಕೊನೆಗೆ ನಾಟಕ ಕಂಪನಿಯ ಮ್ಯಾನೇಜರ್ ನಿಕ್ ಗ್ರೀನ್ ಅವಳಿಗೆ ನಾಟಕದಲ್ಲಿ ಅವಕಾಶ ನೀಡುತ್ತೇನೆಂದು ನಂಬಿಸಿ ಮಗುವೊದನ್ನು ಕರುಣಿಸಿ ಕೈ ಬಿಟ್ಟ. ಬರಿ ಹೆಂಗಸಿನ ದೇಹದ ಮೇಲೆ ಆಸೆಯಿದ್ದವನಿಗೆ ಅವಳ ಕವಿ ಹೃದಯ ಹೇಗೆ ಕಂಡೀತು? ಮುಂದೆ ಜೀವನದಲ್ಲಿ ಹತಾಶೆಗೊಂಡು ಚಳಿಗಾಲದ ಒಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಳು. ಅವಳ ಶವವನ್ನು ಇಂದು ಲಂಡನ್ನಲ್ಲಿರುವ ಪ್ರಸಿದ್ಧ ಮಧ್ಯದಂಗಡಿ "ಆನೆ ಮತ್ತು ಅರಮನೆ"ಯ ಕೆಳಗೆ ಹೂಳಲಾಗಿದೆ.

    ಜುಡಿತ್ ಗೆ ಎಲ್ಲ ಪ್ರೊತ್ಷಾಹ ಸಿಕ್ಕಿ ಬದುಕುಳಿದಿದ್ದರೆ ಬಹುಶಃ ಅವಳು ಶೇಕ್ಷಪಿಯರನ ಹೆಸರನ್ನೂ ಅಳಿಸಿ ಹಾಕುತ್ತಿದ್ದಳೇನೊ! [ಆಧಾರ-Verginia Woolf's Shakespeare's Sister]

    2 ಕಾಮೆಂಟ್‌(ಗಳು):

    sunaath ಹೇಳಿದರು...

    ತುಂಬಾ ಆಶ್ಚರ್ಯಕರ ಮಾಹಿತಿ!

    ಬಿಸಿಲ ಹನಿ ಹೇಳಿದರು...

    Thanks ಸುನಾಥವರೇ,ಇಂಥ ಮತ್ತಷ್ಟು ಮಾಹಿತಿಗಳೊಂದಿಗೆ ಮತ್ತೆ ನನ್ನ ಬ್ಲಾಗಲ್ಲಿ ಹಾಜರಾಗುವೆ.