Demo image Demo image Demo image Demo image Demo image Demo image Demo image Demo image

ಎರಡು ಅನುವಾದಿತ ಕವನಗಳು

  • ಮಂಗಳವಾರ, ಸೆಪ್ಟೆಂಬರ್ 22, 2009
  • ಬಿಸಿಲ ಹನಿ
  • ಚಿನ್ನವಾಗಿರುವದೆಲ್ಲಾ ಹೊಳೆಯುವದಿಲ್ಲ

    ಚಿನ್ನವಾಗಿರುವದೆಲ್ಲಾ ಹೊಳೆಯುವದಿಲ್ಲ
    ಅತ್ತಿತ್ತ ಅಲೆದಾಡುವರೆಲ್ಲಾ ಕಳೆದುಹೋಗುವದಿಲ್ಲ
    ಮುದುಕರೆಲ್ಲಾ ದುರ್ಬಲವಾಗಿರುವದಿಲ್ಲ
    ಹಿಮವು ನೆಲದಾಳದ ಬೇರುಗಳನ್ನು ಮುಟ್ಟುವದಿಲ್ಲ
    ಕಿಡಿಯೊಂದರಿಂದಲೇ ಬೆಂಕಿ ಹೊತ್ತುತ್ತದೆ
    ಕತ್ತಲೆಯೊಳಗಿಂದಲೇ ಬೆಳಕೊಂದು ಸೀಳಿಕೊಂಡು ಬರುತ್ತದೆ
    ಮುರಿದ ಹೋದ ಹೂ ದಳವೊಂದು ಮತ್ತೆ ಸೇರುತ್ತದೆ
    ಕಿರೀಟ ಕಳೆದುಕೊಂಡುವರು ಮತ್ತೆ ರಾಜರಾಗಿ ಮೆರೆಯುತ್ತಾರೆ

    ಮೂಲ ಇಂಗ್ಲೀಷ: ಜಾನ್ ರೊನಾಲ್ಡ್ ರಿಯುಲ್ ಟೋಲ್ಕಿನ್
    ಕನ್ನಡಕ್ಕೆ: ಉದಯ ಇಟಗಿ

    ನಾನು ನಿನ್ನವಳಲ್ಲ

    ನಾನು ನಿನ್ನವಳಾಗಬೇಕೆಂದು ಬಯಸಿದರೂ
    ನಿನ್ನವಳಾಗಲಿಲ್ಲ
    ನಿನ್ನೊಳಗೆ ಕಳೆದುಹೋಗಬೇಕೆಂದಕೊಂಡರೂ
    ಕಳೆದುಹೋಗಲಾಗಲಿಲ್ಲ.
    ಬದಲಾಗಿ ಕಳೆದುಹೋದೆ ನಾ
    ಮಟ ಮಟ ಮಧ್ಯಾಹ್ನದಲ್ಲಿ ಮೇಣದ ಬೆಳಕಾಗಿ
    ಕರಗಿಹೋದೆ ನಾ ಸಾಗರದೊಳಗೆ ಮಂಜಿನ ಹನಿಯಾಗಿ!

    ನನಗೆ ಗೊತ್ತು
    ನೀನು ಈಗಲೂ ನನ್ನ
    ಚೆಂದವಾಗಿ ಪ್ರೀತಿಸುತ್ತೀಯಾ
    ನಿನ್ನ ಉಸಿರಾಗಿ ಪ್ರಜ್ವಲಿಸುವ ಜ್ವಾಲೆಯಾಗಿ
    ಆದರೂ ನಾನು ನಾನೇ
    ಬೆಳಕಲ್ಲಿ ಬೆಳಕಾಗಿರಬಯಸುವವಳು!

    ಓ, ಹುಡುಗ!
    ಭೋರ್ಗರೆದುಬಿಡು ಮತ್ತೊಮ್ಮೆ
    ಕೊಚ್ಚಿಹೋಗಲಿ ನಾ ನಿನ್ನ ಪ್ರೀತಿಯ ಹುಚ್ಚು ಹೊಳೆಯಲ್ಲಿ
    ಉಳಿದುಬಿಡುವೆ ನಾ ಆರದೆ ಉರಿವ ದೀಪವಾಗಿ
    ಬೀಸುವ ಬಿರುಗಾಳಿಯ ನಡುವೆಯೂ!

    ಇಂಗ್ಲೀಷ ಮೂಲ: ಸಾರಾ ಟಿಸ್ಡೇಲ್
    ಕನ್ನಡಕ್ಕೆ: ಉದಯ ಇಟಗಿ

    11 ಕಾಮೆಂಟ್‌(ಗಳು):

    Unknown ಹೇಳಿದರು...

    ಉದಯ್ ಮೊದಲ ಕವಿತೆ ಆಶಾವಾದದ ಮೂರ್ತಸ್ವರೂಪದಂತಿದೆ. ಕತ್ತಲೆಯೊಳಗಿಂದಲೇ ಬೆಳಕೊಂದು ಸೀಳಿಕೊಂಡು ಬರುತ್ತದೆ ಎಂಬ ಸಾಲು ಬಹಳ ಿಷ್ಟವಾಯಿತು. ಎರಡನೆಯ ಕವಿತೆಯಲ್ಲಿ ಅಕ್ಕಮಹಾದೇವಿಯ ವಚನದ ತೀವ್ರತೆಯಿದೆ.
    ಕಳೆದುಹೋದೆ ನಾ
    ಮಟ ಮಟ ಮಧ್ಯಾಹ್ನದಲ್ಲಿ ಮೇಣದ ಬೆಳಕಾಗಿ
    ಎನ್ನುವಲ್ಲಿ ಅಕ್ಕಮಹಾದೇವಿಯ ಬೆಳಕಿನಲ್ಲಕಿ ಬಯಲಾಗುವ ಬಯಕೆ ವ್ಯಕ್ತವಾಗಿದೆಯೇನೋ ಅನ್ನಿಸುತ್ತಿದೆ.
    ಬೆಳಕಲ್ಲಿ ಬೆಳಕಾಗಿರಬಯಸುವವಳು
    ಎಂಬ ಮಾತಂತೂ ಅಕ್ಕಮಹಾದೇವಿಯ ವಚನದ ಸಾಲು ಎನ್ನುವಷ್ಟರ ಮಟ್ಟಿಗೆ ಅನುವಾದಗೊಂಡಿದೆ. ಮೂಲ ನನಗೆ ಗೊತ್ತಿಲ್ಲ. ಪ್ರೀತಿಯ ಜೊತೆಗ ಸ್ವಾತಂತ್ರದ ತೀವ್ರತೆ ಎರಡನೆಯ ಕವಿತೆಯಲ್ಲಿ ಮನಮುಟ್ಟವಂತೆ ಅಭಿವ್ಯಕ್ತಿಗೊಂಡಿದೆ.

    sunaath ಹೇಳಿದರು...

    ಸುಂದರವಾದ ಕವನಗಳು; ಸುಂದರ ಅನುವಾದ. ಓದಿ ಖುಶಿಯಾಯ್ತು.

    Unknown ಹೇಳಿದರು...

    ವಾಹ್... ಎಂಥ ಚೆಂದದ ಕವನಗಳು...ಅದರಲ್ಲೂ ಮೊದಲನೆ ಕವನ ತುಂಬಾ ಇಷ್ಟವಾಯಿತು...

    ತೇಜಸ್ವಿನಿ ಹೆಗಡೆ ಹೇಳಿದರು...

    ಮೂಲಕವನ ಹೇಗಿದೆಯೆಂದು ನಾ ತಿಳಿಯೆ. ಆದರೆ ನಿಮ್ಮ ಅನುವಾದಿತ ಕವನಗಳೆರಡೂ ತುಂಬಾ ಸುಂದರವಾಗಿವೆ. ನೆನಪಿನಲ್ಲಿಟ್ಟುಕೊಳ್ಳುವಂತಿವೆ. ಸರಳವಾಗಿವೆ. ಉತ್ತಮ ಪ್ರಯತ್ನ.

    shivu.k ಹೇಳಿದರು...

    ಉದಯ್ ಸರ್,

    ಎರಡು ಸೊಗಸಾದ ಕವನಗಳನ್ನು ಚೆನ್ನಾಗಿ ಅನುವಾದ ಮಾಡಿದ್ದೀರಿ...
    ಮೊದಲನೆಯ ಕವನದಲ್ಲಿನ
    "ಅತ್ತಿತ್ತ ಅಲೆದಾಡುವರೆಲ್ಲಾ ಕಳೆದುಹೋಗುವದಿಲ್ಲ" ತುಂಬಾ ಇಷ್ಟವಾಯ್ತು...
    ಯಾವುದಾದರೂ ಹೊಸ ಲೇಖನಕ್ಕೆ ಶೀರ್ಷಿಕೆಯಾಗಿ ಬಳಸಬಹುದು...

    ಧನ್ಯವಾದಗಳು.

    PARAANJAPE K.N. ಹೇಳಿದರು...

    ಚೆಂದದ ಕವನಗಳಿಗೆ ಅಭಿನಂದನೆಗಳು.

    ಸಾಗರದಾಚೆಯ ಇಂಚರ ಹೇಳಿದರು...

    ಉದಯ್ ಸರ್,
    ತುಂಬಾ ಚೆನ್ನಾಗಿ ಅನುವಾದಿಸಿದ್ದಿರಾ,
    ನೈಜವಾಗಿದೆ

    ಶಿವಪ್ರಕಾಶ್ ಹೇಳಿದರು...

    ಎರಡು ಕವನಗಳು ಸೂಪರ್

    ಚಕೋರ ಹೇಳಿದರು...

    nimma blog first class aagide

    ಬಿಸಿಲ ಹನಿ ಹೇಳಿದರು...

    ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು

    Chamaraj Savadi ಹೇಳಿದರು...

    ಉದಯ್, ಕವಿತೆಗಳು ಚೆನ್ನಾಗಿವೆ. ಮೂಲ ಕವಿತೆಯನ್ನು ಜೊತೆಗೇ ನೀಡಿದ್ದರೆ, ಇನ್ನೂ ಚೆನ್ನಾಗಿರುತ್ತಿತ್ತು ಎಂಬುದು ನನ್ನ ಅನಿಸಿಕೆ.