(1)
ಹೌದು ಕಣೋ ಮಂಜು
ನಾವು ಹುಡುಗರೇ ಹೀಗೆ.......
ಏನೇನೋ ವಟಗುಟ್ಟಲು ಹೋಗಿ
ಹೇಳಬೇಕಾದ್ದನ್ನೆಲ್ಲ ನೇರವಾಗಿ ಹೇಳಿ
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ
ಮೈ ಜುಮ್ಮೆನ್ನಿಸುವ ಆಲೋಚನೆಗಳನೆಲ್ಲಾ
ನಮ್ಮೊಳಗೆ ಹಿಡಿದಿಟ್ಟುಕೊಳ್ಳಲಾರದೆ
ಹಾಳೆಯ ಮೇಲೆ ಬರೆದು ರೆಡ್ಹ್ಯಾಂಡಾಗಿ ಸಿಕ್ಕಿಬೀಳುತ್ತೇವೆ
ಆಗಾಗ ಗುಲಾಬಿಯೊಂದನ್ನು ಹಿಡಿದು
ಹುಡುಗಿಯರ ಹಿಂದೆನೇ ಸುತ್ತಿ ಸುತ್ತಿ ಉಗಿಸಿಕೊಳ್ಳುತ್ತೇವೆ
ಇಲ್ಲವೇ ಒಮ್ಮೊಮ್ಮೆ ಸಿನೆಮಿಕ್ಕಾಗಿ
ರೋಡಲ್ಲಿಯೇ ‘ಐ ಲವ್ ಯು’ ಎಂದು ಕಿರುಚಿ ಹೇಳಿ
ಅವರನ್ನೂ ಪೇಚಿಗೆ ಸಿಲುಕಿಸಿ ನಾವೂ ಪೇಚಿಗೆ ಸಿಲಕುತ್ತೇವೆ
ಇನ್ನೂ ಏನೇನೊ ಬೇರೆ ದಾರಿ ಹುಡುಕಿ
ಹುಡುಗಿಯರನ್ನು ಒಲಿಸಿಕೊಳ್ಳಲು ಹೆಣಗುತ್ತೇವೆ
ಅದನ್ನು ಅರ್ಥ ಮಾಡಿಕೊಳ್ಳಲಾರದೆ
ಹುಡುಗಿಯರು ಕೈ ತಪ್ಪಿದಾಗ ನಿರಾಶರಾಗಿ
ಸ್ವಲ್ಪ ದಿವಸ ಗಡ್ದ ಬಿಡುತ್ತೇವೆ ಗುಂಡು ಹಾಕುತ್ತೇವೆ
ಆದರೆ ಮತ್ತೊಬ್ಬ ದೇವದಾಸನಾಗದಂತೆ ಎಚ್ಚರವಹಿಸುತ್ತೇವೆ
ಮುಂದೆ ಅಪ್ಪ ಅಮ್ಮ ಹುಡುಕಿದ ಹುಡುಗಿಯನ್ನೇ ಮದುವೆಯಾಗಿ
ಹೊಸ ಬದುಕಿಗೆ ಕಾಲಿಡುತ್ತೇವೆ
ಆಗಾಗ ಹೆಂಡತಿಯಲ್ಲಿ ಅವಳಿಗೆ ಗೊತ್ತಾಗದಂತೆ
‘ಅವಳನ್ನು’ ಹುಡುಕುತ್ತೇವೆ
ಆದರೆ ಅವಳ ಕೈಲಿ ಸಲೀಸಾಗಿ ಸಿಕ್ಕಿಬಿದ್ದು ಛೀ, ಥೂ ಅನಿಸಿಕೊಳ್ಳುತ್ತೇವೆ
ಅಷ್ಟರಲ್ಲಿ ಬಚ್ಚಿಟ್ಟ ಭಾವನೆಗಳನೆಲ್ಲಾ ಬಿಚ್ಚಿಟ್ಟು
ಹೆಂಡತಿಯ ಮುಂದೆ ಬಟಾಬಯಲಾಗಿಬಿಟ್ಟಿರುತ್ತೇವೆ
ಮುಂದಿನ ಬದುಕಲ್ಲಿ ಮಜವೇ ಇರುವದಿಲ್ಲ ಮಂಜು.......
(2)
ನಾಲ್ಕು ವರ್ಷಗಳಲ್ಲಿ ವಿಪರೀತ ದಪ್ಪಗಾಗಿ
ಎರಡೇ ಎರಡು ಮಕ್ಕಳ ತಂದೆಯಾಗಿ
ಏದುಸಿರುಬಿಡುತ್ತಾ ಮಕ್ಕಳಿಗೆ ಐಸ್ ಕ್ರೀಂ ಕೊಡಿಸುವಾಗ
‘ಅವಳು’ ಸಿಗುತ್ತಾಳೆ
ಕೂಲಾಗಿ ನಗುನಗುತ್ತಾ ಒಂದು ಹಾಯ್ ಹೇಳುತ್ತೇವೆ
ಆದರವಳು ‘ನೀನು ನನ್ನವನಾಗಿದ್ದರೆ ಎಷ್ಟು ಚನ್ನಾಗಿರುತ್ತಿತ್ತಲ್ವ?’
ಎಂದು ಕಣ್ಣಲ್ಲಿಯೇ ಹೇಳುತ್ತಾಳೆ
ನಾವು ಮಾತ್ರ ಅಸಹಾಯಕ ನಗೆ ನಗುತ್ತಾ
ಅವಳ ಗಂಡ ಮಕ್ಕಳ ಯೋಗಕ್ಷೇಮ ವಿಚಾರಿಸುವದೇ ಇಲ್ಲ
ಯಾಕೆಂದರೆ ಅವನದೂ ಅದೇ ಕಥೆಯಲ್ಲವೆ?
ಅದು ನಮಗೆ ಗೊತ್ತಿದ್ದದ್ದೇ ಅಲ್ಲವೇ?
ನಾವು ಹುಡುಗರೇ ಹೀಗೆ..........
-ಉದಯ್ ಇಟಗಿ
ವಿ.ಸೂ: ಈ ಕವನವನ್ನು ಪ್ರತಿಭಾ ನಂದಕುಮಾರವರ “ನಾವು ಹುಡುಗಿಯರೇ ಹೀಗೆ” ಎನ್ನುವ ಕವನದ ಧಾಟಿಯಲ್ಲಿ ಹುಡುಗರು ಹೇಗಿರಬಹುದು ಎಂದು ಯೋಚಿಸಿ ಒಂದಷ್ಟು ತಮಾಷೆ ಒಂದಷ್ಟು ವಿಷಾದ ಭಾವದೊಂದಿಗೆ ಬರೆದಿರುವದು. ಹುಡುಗರಿಗೆ ಇಷ್ಟವಾಗಬಹುದು.
ಕಲಾವಿದರು ಬೇಕಾಗಿದ್ದಾರೆ
1 ದಿನದ ಹಿಂದೆ
8 ಕಾಮೆಂಟ್(ಗಳು):
ಉದಯ್ ಸರ್,
ತುಂಬಾ ಚೆನ್ನಾಗಿದೆ....... ಎಷ್ಟಾದರೂ ನಾವು ಹುಡುಗರು ಅಲ್ವೇ...... ನಾನು ಪ್ರತಿಭಾ ಅವರ ಕವನ ಓದಿಲ್ಲ..... ನಿಮ್ಮ ಕವನ ಇಷ್ಟ ಆಯ್ತು........
ಹುಡುಗರ ಮನಸ್ಥಿತಿಗೆ ಹಿಡಿದ ಕೈಗನ್ನಡಿ!
ಅವಳಿಗೆ ಗೊತ್ತಾಗದಂತೆ ‘ಅವಳನ್ನು’ ಹುಡುಕುತ್ತೇವೆ ಎನ್ನುವ ಸಾಲುಗಳು ಅನುಭಾವದ ನುಡಿಗಳಿಂತಿವೆ. ಮೊದಲಿಗೆ ನಾನು ಇದೊಂದು ಅನುವಾದದ ಕವಿತೆಯಿರಬಹುದೆಂದು ಓದಲು ಆರಂಬಿಸಿದೆ. ಆದರೆ ಕವಿತೆಯ ಉದ್ದಕ್ಕೂ ಏನೋ ಸ್ವಂತಿಕೆ, ನೇಟಿವಿಟಿ, ಬೇರೆಯೇ ತರ ಎನ್ನಿಸಿತು.ಕೊನೆಯಲ್ಲಿ ನಿಮ್ಮ ವಿವರಣೆ ಅದನ್ನು ನಿಜವಾಗಿಸಿತು ಕೂಡ.
ವಾಹ್, ಹೌದು ನಾವು ಹುಡುಗರೇ ಹೀಗೆ...
ಬಹಳ ಚೆನ್ನಾಗಿದೆ ಉದಯ್, ಪ್ರತಿಭಾ ಅವರ ಕವನವನ್ನು ಓದಿದ್ದೆ, ಅದಕ್ಕೆ ಸ೦ವಾದಿಯಾಗಿದೆ ನಿಮ್ಮ ಕವನ
ಹುಡುಗರು ಹೀಗೆಂದು ತಿಳಿದಿರಲಿಲ್ಲ. ನಿಮ್ಮ ಕವಿತೆ ಓದಿ ತಿಳಿಯಿತು. ಕವನ ಚೆನ್ನಾಗಿದೆ. :)
ಉದಯ್ ಸಾರ್.... ಹೌದಾ ಹುಡುಗರು ಹೀಗಾ? ಗೊತ್ತಿರಲಿಲ್ಲ.. :-) ಚೆನ್ನಾಗಿದೆ...
ಶ್ಯಾಮಲ
ಹೌದಾ ನೀವು ಹುಡುಗರು ಹೀಗೇನಾ?! ಕವಿತೆ ಚೆಂದಿದೆ ಸಾರ್ :)
ಪ್ರತಿಭಾರವರ ಕವಿತೆಯ ಧಾಟಿಯಲ್ಲೇ ಇದೆ :)
-ಸವಿತ
ಉದಯ್ ಸರ್,
ತಡವಾಗಿ ಅನಾರೋಗ್ಯದ ಕಾರಣ ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ.
ನಾವು ಹುಡುಗರೇ ಹೀಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ನಾನಂತೂ ನನ್ನ ಶ್ರೀಮತಿಯನ್ನು ಹುಡುಕುವುದಿಲ್ಲ. ಯಾಕೆ ಹುಡುಕುವುದಿಲ್ಲವೆನ್ನುವುದಕ್ಕೆ ನನ್ನ
http://chaayakannadi.blogspot.com/2009/03/blog-post_22.html ಲೇಖನವನ್ನು ಓದಿ.
ಆದ್ರೂ ನೀವೇಳಿದಂತೆ ಕೆಲವೊಮ್ಮೆ ಆಗುತ್ತದೆ. ಎಲ್ಲ ಹುಡುಗರಿಗೂ ಆಗುವ ಹಾಗೆ.
ಚೆಂದದ ಪದ್ಯ.
ಕಾಮೆಂಟ್ ಪೋಸ್ಟ್ ಮಾಡಿ