Demo image Demo image Demo image Demo image Demo image Demo image Demo image Demo image

ಆಟಿಕೆಗಳು

 • ಭಾನುವಾರ, ಫೆಬ್ರವರಿ 08, 2009
 • ಬಿಸಿಲ ಹನಿ
 • ಮಗನೇ,
  ಮಣ್ಣಲ್ಲಿ ಕುಳಿತು ಸಂಭ್ರಮ ಸಡಗರಗಳಿಂದ
  ಮುರಿದ ಆಟಿಕೆಯೊಂದಿಗೆ ಆಡುತ್ತಾ
  ಇಡಿ ಮುಂಜಾನೆ ಕಳೆಯುತ್ತಿರುವೆಯಲ್ಲ
  ನೀನೆಷ್ಟೊಂದು ಸುಖಿ!?
  ನಿನ್ನ ಆಟವೇನಿದ್ದರೂ
  ಮುರಿದ ಸಣ್ಣ ಸಣ್ಣ ಆಟಿಕೆಗಳೊಂದಿಗೆ ಮಾತ್ರ!
  ಆದರೂ ಎಷ್ಟೊಂದು ಖುಶಿ, ಸಂತೋಷ ನಿನಗೆ!
  ನಾನೊಬ್ಬ ಮೂರ್ಖ
  ನನಗೆ ತಿಳಿಯದು ಅವುಗಳ ಬೆಲೆ
  ಸುಮ್ಮನೆ ಮುಸಿ ಮುಸಿ ನಗುತ್ತೇನೆ ಅವುಗಳ(ಮುರಿದ ಆಟಿಕೆಗಳ)ತ್ತ ನೋಡಿ.

  ನಾನೋ
  ಬೆಳ್ಳಂಬೆಳಿಗ್ಗೆ ಲೆಕ್ಕ ಪತ್ರಗಳನ್ನು ಹಿಡಿದು ಕುಳಿತಿರುವೆ
  ಕೂಡುತ್ತಾ, ಕಳೆಯುತ್ತಾ, ಗುಣಿಸುತ್ತಾ, ಭಾಗಿಸುತ್ತಾ ಕಡತಗಳಲ್ಲಿ ಮೈ ಮರೆತಿರುವೆ.
  ನಂದೂ ಒಂದು ಆಟವೇ,
  ಅಂಕಿ-ಸಂಖ್ಯೆಗಳ ಆಟ!
  ಬಹುಶಃ ನನ್ನಾಟವನ್ನು ನೋಡಿ ನಗುವ ಸರದಿ ಈಗ ನಿನ್ನದು
  "ಎಂಥ ಪೆದ್ದ ಅಪ್ಪ! ಯಾವುದೋ ಮೂರ್ಖರ ಆಟವನ್ನು ಆಡುತ್ತಾ
  ಸುಂದರ ಮುಂಜಾನೆಯನ್ನು ಹಾಳು ಮಾಡಿಕೊಳ್ಳುತ್ತಿರುವನಲ್ಲ?" ಎಂದು.
  ಏನು ಮಾಡಲಿ ಮಗನೆ?
  ನನಗೆ ನಿನ್ನ ಹಾಗೆ
  ಮುರಿದ ಕಡ್ಡಿಗಳೊಂದಿಗೆ, ಮಣ್ಣ ಕುಡಿಕೆಗಳೊಂದಿಗೆ
  ಆಡುತ್ತಾ ಆಡುತ್ತಾ ಮೈ ಮರೆಯುವ ಕಲೆ ಎಂದೋ ಮರೆತು ಹೋಗಿದೆ.
  ಈಗೇನಿದ್ದರೂ
  ನನ್ನ ಆಟ ಬರಿ
  ನಗನಾಣ್ಯ, ಬೆಳ್ಳಿ, ಬಂಗಾರದ ಸಾಮಾನುಗಳೊಂದಿಗೆ ಮಾತ್ರ!

  ನೀನೋ
  ದಿನವೂ ಮತ್ತದೇ ಮುರಿದ ಹಳೆಯ ಆಟಿಕೆಗಳನ್ನು ಹರವಿಕೊಂಡು
  ಆಡುತ್ತಾ ಆಡುತ್ತಾ ಖುಶಿಪಡುತ್ತಿ.
  ಆದರೆ ನಾನು?
  ನಾನು ಸಮಯ, ಶಕ್ತಿಯೆರಡನ್ನೂ ವ್ಯಯಗೊಳಿಸುತ್ತೇನೆ
  ದುಬಾರಿ ಸಾಮಾನುಗಳನ್ನು ಗಳಿಸಲು.
  ಆದರೂ ಮೈ ಮರೆಯಲಾಗದು ನನ್ನಾಟದಲ್ಲಿ,
  ಗಳಿಸಲಾಗದು ಆ ನಿನ್ನ ಆ ಖುಶಿಯನ್ನು.
  ಒಂದು, ಇನ್ನೊಂದು, ಮತ್ತೊಂದು, ಮಗದೊಂದು
  ಹೀಗೆ ಒಂದಾದ ಮೇಲೊಂದರಂತೆ
  ನನ್ನ ಮುತ್ತಿಕೊಳ್ಳುತ್ತಲೇ ಇವೆ ಆಸೆಗಳು
  ಮಿತಿಯಿಲ್ಲ ಅವಕೆ ಸಾಗರದಂತೆ
  ಆದರೂ ಗಟ್ಟಿಯಿರದ ದೋಣಿಯಲ್ಲಿ ಕುಳಿತುಕೊಂಡು
  ತೀರದಾಸೆಗಳ ಸಾಗರವನ್ನು ದಾಟಲು ತಿಣಿತಿಣುಕಿಡುತ್ತೇನೆ.
  ದಾಟುತ್ತೇನೆಯೇ?
  ನನಗೆ ಗೊತ್ತಿಲ್ಲ!

  ಮೂಲ: ರಬೀಂದ್ರನಾಥ್ ಟ್ಯಾಗೋರ್
  ರೂಪಾಂತರ: ಉದಯ ಇಟಗಿ

  11 ಕಾಮೆಂಟ್‌(ಗಳು):

  Dr. B.R. Satynarayana ಹೇಳಿದರು...

  ಕವನವನ್ನು ಓದುತ್ತಾ ಓದುತ್ತಾ, ಇದು ನೀವು ನಿಮ್ಮ ಮಗ ಮಣ್ಣಿನಲ್ಲಿ ಆಡುವುದನ್ನು ನೋಡಿ ಕಲ್ಪಿಸಿಕೊಂಡ ಕವಿತೆಯಿರಬಹುದೆಂದುಕೊಂಡೆ. ಕವನ ಅಂತ್ಯಕ್ಕೆ ಬಂದಾಗಲೇ ಅದೊಂದು ಅನುವಾದಿತ ಕವಿತೆ ಎಂದು ಗೊತ್ತಾಗಿದ್ದು! ಮೂಲವನ್ನು ನಾನು ಓದಿಲ್ಲ. ಆದರೆ ಈ ಕವಿತೆ ತನ್ನಷ್ಟಕ್ಕೆ ತಾನೇ ಒಂದು ಸುಂದರ ಕಲಾಕೃತಿ.

  ಬಿಸಿಲ ಹನಿ ಹೇಳಿದರು...

  ಸತ್ಯನಾರಾಯಣ ಸರ್,
  ಇದು ರಬೀಂದ್ರನಾಥ ಟ್ಯಾಗೋರ್‍ವರು ತಮ್ಮ ಮಗ ಮುರಿದ ಆಟಿಕೆಗಳೊಂದಿಗೆ ಆಡುವದನ್ನು ನೋಡಿ ಕಲ್ಪಿಸಿಕೊಂಡು ಬರೆದ ಕವಿತೆ.ಇಂಗ್ಲೀಷನಲ್ಲಿ ಇದರ ತಲೆಬರಹ "Playthings". ಇದನ್ನು ಈ ಹಿಂದೆ ಪ್ರಥಮ ಪಿ.ಯು.ಸಿ.ಗೆ ಪಠ್ಯವಾಗಿಟ್ಟಿದ್ದರು. ನಾನೊಬ್ಬ ಇಂಗ್ಲೀಷ ಅಧ್ಯಾಪಕನಾಗಿ ಇದನ್ನು ಪ್ರತಿ ಸಾರಿ ಪಾಠಮಾಡುವಾಗಲೆಲ್ಲಾ ಹೊಸ ಹೊಸ ಅರ್ಥಗಳನ್ನು ಕಂಡುಕೊಂಡು ರೋಮಾಂಚಿತನಾಗಿದ್ದೇನೆ. ಆಗಲೇ ಅನುವಾದ ಮಾಡಬೇಕೆಂದುಕೊಂಡಿದ್ದೆ. ಆದರೆ ಬೆಂಗಳೂರಿನ busy ಜೀವನದಲ್ಲಿ ಅದನ್ನು ನಮ್ಮದೇ ನೆಲದ ಕವಿತೆಯಾಗುವಷ್ಟರಮಟ್ಟಿಗೆ ಅನುವಾದಿಸಲು ಪುರುಸೊತ್ತಿರಲಿಲ್ಲ. ಹೀಗಾಗಿ ಲಿಬಿಯಾದಲ್ಲಿ ದೊರೆಯುವ ನನ್ನ ಸಾಕಷ್ಟು ಬಿಡುವಿನ ಸಮಯವನ್ನು ಈ ತರದ ಬರವಣೆಗೆಯಲ್ಲಿ ವಿನಿಯೋಗಿಸುತ್ತಿದ್ದೇನೆ.ನಿಮ್ಮ ತುಂಬು ಹೃದಯದ ಅಭಿಮಾನಭರಿತ ಮಾತುಗಳಿಗೆ ನನ್ನ ಧನ್ಯವಾದಗಳು.

  sunaath ಹೇಳಿದರು...

  ಮುಗ್ಧ ಮಕ್ಕಳಂತೆ ಖುಶಿಯಿಂದ ಆಡುವದು ನಮಗೆ ಸಾಧ್ಯವೆ?
  ಅನುವಾದ ಚನ್ನಾಗಿ ಬಂದಿದೆ.

  ಬಿಸಿಲ ಹನಿ ಹೇಳಿದರು...

  Thank you sir.

  ಶಿವಪ್ರಕಾಶ್ ಹೇಳಿದರು...

  ಅ ಮಗುವಿನ ಕುಶಿ ನಮಗ್ಯಾಕಿಲ್ಲ ?
  ಬರಿ ಹಣ, ಹಣ, ಹಣ..
  ಹಣಕ್ಕಾಗಿ ಹೆಣಗಾಡುವುದೊಂದೇ ನಮಗಿರುವ ಆಟ.
  ಕನ್ನಡ ಅನುವಾದಕ್ಕೆ ಜೀವ ತುಂಬಿದ್ದಕ್ಕೆ ತುಂಬ ಧನ್ಯವಾದಗಳು.

  ಬಿಸಿಲ ಹನಿ ಹೇಳಿದರು...

  Thank you Shivaprakash.

  shivu ಹೇಳಿದರು...

  ಉದಯ ಸರ್,
  ಹೀಗೆ ಹಾರಾಡುತ್ತಾ ನಿಮ್ಮ ಬ್ಲಾಗಲ್ಲಿ ಬಿದ್ದೆ.....
  ರವೀಂದ್ರನಾಥ ಠ್ಯಾಗೂರ್‌ರವರ ಕವನವನ್ನು ತುಂಬಾ ಚೆನ್ನಾಗಿ ಅನುವಾದಿಸಿದ್ದೀರಿ......ನಿಜಕ್ಕೂ ಮಕ್ಕಳ ಆನಂದ ನಮಗೆ ಈಗ ಸಿಗಲು ಸಾದ್ಯವೇ...

  ನನ್ನ ಬ್ಲಾಗಿಗೊಮ್ಮೆ ಬೇಟಿಕೊಡಿ...ಅಲ್ಲಿ ಫೋಟೋಗಳಿವೆ, ಲೇಖನಗಳಿವೆ...ಪುಟ್ಟ ಪುಟ್ಟ ಕತೆಗಳಿವೆ....ಟೋಪಿಗಳಿವೆ...ಭೂಪಟಗಳಿವೆ...

  ಬಿಸಿಲ ಹನಿ ಹೇಳಿದರು...

  ಶೀವು,
  ನನ್ನ ಬ್ಲಾಗ್‍ಗೆ ಭೇಟಿ ಕೊಟ್ಟು ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಬ್ಲಾಗ್‍ಗೆ ಭೇಟಿ ಕೊಟ್ಟು ಅಭಿಪ್ರಾಯ ಹೇಳುವೆ.

  ತೇಜಸ್ವಿನಿ ಹೆಗಡೆ- ಹೇಳಿದರು...

  ಉದಯ್ ಅವರೆ,

  ರವೀಂದ್ರನಾಥರ ಈ ಸುಂದರ, ಸಂದೇಶಭರಿತ ಕಾವ್ಯದ ಅನುವಾದವನ್ನು ನಮಗೆ ನೀಡಿದ್ದಕ್ಕೆ ಧನ್ಯವಾದಗಳು. ಓದಿ ತುಂಬಾ ಸಂತೋಷವಾಯಿತು. ಬುದ್ಧ ಹೇಳಿದ್ದು ಎಷ್ಟೊಂದು ಸತ್ಯ ಅಲ್ಲವೇ? "ಆಸೆಯೇ ದುಃಖಕ್ಕೆ ಮೂಲ"!

  ಬಿಸಿಲ ಹನಿ ಹೇಳಿದರು...

  ಥ್ಯಾಂಕ್ಸ್ ತೇಜಸ್ವಿನಿಯವರೆ

  ಚಂದಿನ ಹೇಳಿದರು...

  ಆತ್ಮೀಯ ಅನುವಾದ,
  ಬಹಳ ಇಷ್ಟವಾಯಿತು.

  - ಚಂದಿನ

  ಕವನಗಳಿಗೆ ಟ್ಯಾಗ್ ಬಳಸಿದರೆ ಅನುಕೂಲವಾಗುತ್ತದೆ.