ನಿನ್ನೆ ಬೆಳಿಗ್ಗೆ ಪಾರ್ವತಜ್ಜಿ ಸತ್ತ ಸುದ್ದಿ ಬಂತು. ಮೊನ್ನೆ ರಾತ್ರಿ ೯ ರ ನಂತರ ತೀರಿಕೊಂಡಳಂತೆ. ನನಗೆ ನಮ್ಮ ಮನೆಯ ಒಂದು ತಲೆಮಾರು ಮುಕ್ತಾಯವಾದೆಂತೆನಿಸಿತು. ದೂರದ ಲಿಬಿಯಾದಿಂದ ಅವಳ ಮಣ್ಣಿಗೆ ಹೋಗಲಾಗದ ಅಸಹಾಯಕತೆ ಮತ್ತು ಚಡಪಡಿಕೆಯೊಂದಿಗೆ ಈ ಲೇಖನ ಬರೆಯುತ್ತಿದ್ದೇನೆ. ಇದು ನಾನು ಆಕೆಗೆ ಸಲ್ಲಿಸುವ ಶ್ರದ್ದಾಂಜಲಿಯೂ ಹೌದು.
ಪಾರ್ವತಜ್ಜಿ ಬಗ್ಗೆ ಬರೆಯುವದಾದರೂ ಏನನ್ನು? ಅಕ್ಷರದಲ್ಲಿ ಅವಳನ್ನು ಹಿಡಿದಿಡಲು ಸಾಧ್ಯವೇ? ಹಾಗೆ ಒಂದು ವೇಳೆ ಹಿಡಿದಿಟ್ಟರೂ ಅವಳ ಪರಿಪಕ್ವತೆ ಪೂರ್ಣವಾಗಿ ಸಿಗಲು ಸಾಧ್ಯವೇ? ಸಿಕ್ಕರೂ ನಾನು ಎಲ್ಲವನ್ನೂ ತುಂಬಲು ಯಶಸ್ವಿಯಾಗಬಲ್ಲೆನೆ? ನನಗೆ ಗೊತ್ತಿಲ್ಲ.
ಈ ಎಲ್ಲ ಪ್ರಶ್ನೆಗಳೊಂದಿಗೆ ನಾನು ಅಜ್ಜಿಯೊಂದಿಗೆ ನನ್ನ ನೆನಪಿನಾಳಕ್ಕೆ ಇಳಿಯುತ್ತಾ ಹೋಗುತ್ತೇನೆ. ಅಜ್ಜಿ ನಿಧಾನಕ್ಕೆ ನನ್ನ ಕೈಗೆ ಸಿಗುತ್ತಾ ಹೋಗುತ್ತಾಳೆ. ಸಿಕ್ಕಷ್ಟನ್ನೂ ಹೆಕ್ಕಿ ಹೆಕ್ಕಿ ಹೊರತೆಗೆಯುತ್ತಿದ್ದಂತೆ ಅಜ್ಜಿಯೊಂದಿಗೆ ಮೂವತ್ತು ವರ್ಷಗಳಷ್ಟು ಹಳೆಯದಾದ ನನ್ನ ಬಾಲ್ಯಕ್ಕೆ ಹಿಂತಿರುಗುತ್ತೇನೆ. ಅಲ್ಲಿಂದ ಇಲ್ಲಿಯವರೆಗೆ ಅಜ್ಜಿ ನನಗೆ ಕಂಡಿದ್ದು ಹೇಗೆ ಎಂಬುದನ್ನು ದಾಖಲಿಸುತ್ತಾ ಹೋಗುತ್ತೇನೆ.
ಈಕೆ ನನ್ನ ತಾಯಿಯ ತಾಯಿ. ನಮ್ಮ ಬಂಧು ಬಳಗದಲ್ಲೆಲ್ಲಾ ಹಿರಿಯ ತಲೆ. ಬದುಕಿನಲ್ಲಿ ನಲಿವಿಗಿಂತ ನೋವುಗಳನ್ನೇ ಉಂಡರೂ ಅದೇ ಬದುಕನ್ನು ಅಗಾಧವಾಗಿ ಪ್ರೀತಿಸುತ್ತಾ, ಪ್ರೀತಿಸುವದನ್ನು ಕಲಿಸುತ್ತಾ, ಎಲ್ಲವನ್ನೂ ಗೆಲ್ಲುತ್ತಾ, ಎಲ್ಲರನ್ನೂ ಗೆಲ್ಲಿಸುತ್ತಾ ನಮ್ಮೆಲ್ಲರ ಪ್ರೀತಿ ಪಾತ್ರಳಾಗಿ ೯೦ ವರ್ಷಗಳ ಸಾರ್ಥಕ ಜೀವನ ನಡೆಸಿ ಬತ್ತಲಾರದ ತುಂಬು ತೊರೆಯ ಪ್ರೀತಿಯಲ್ಲಿ ನಮ್ಮನ್ನೆಲ್ಲಾ ಅದ್ದಿ ತೆಗೆದವಳು.
ಅಜ್ಜಿಯ ನೆನಪಾದಾಗಲೆಲ್ಲ ಮೊಟ್ಟಮೊದಲಿಗೆ ನನ್ನನ್ನು ಆವರಿಸಿಕೊಳ್ಳುವದು ಅವಳ ಶಾಂತ, ಸೌಮ್ಯ, ನಗುಮುಖ ಹಾಗೂ ನಗು ನಗುತ್ತಲೇ ತನ್ನ ನಿಟ್ಟುಸಿರುಗಳನ್ನು ಗೆದ್ದ ರೀತಿ. ಇಂಥ ಅಜ್ಜಿಯೊಂದಿಗೆ ನನ್ನ ನೆನಪಿನ ಸುರಳಿ ಬಿಚ್ಚಿಕೊಳ್ಳುವದೇ ನಾನು ಬಹುಶಃ ೩-೪ ವರ್ಷದವನಾಗಿದ್ದಾಗಿನಿಂದ.
ನಮ್ಮದು ದೊಡ್ದ ಅವಿಭಕ್ತ ಕುಟುಂಬವಾಗಿದ್ದರಿಂದ ನನ್ನ ಬಾಲ್ಯವೆಲ್ಲ ದೊಡ್ಡಮ್ಮ ದೊಡ್ಡಪ್ಪರ ಆರೈಕೆಯಲ್ಲಿ ಕಲಕೋಟಿಯಲ್ಲಿ ಕಳೆಯಿತು. ಆಗೆಲ್ಲಾ ನನ್ನ ದೊಡ್ಡಪ್ಪ ಇನ್ನೊಬ್ಬ ದೊಡ್ಡಪ್ಪನ ಮಕ್ಕಳನ್ನು ಅಳವಂಡಿಯಿಂದ ದಸರಾ ಮತ್ತು ಬೇಸಿಗೆ ರಜೆಗೆ ಕಲಕೋಟಿಗೆ ಕರೆದುಕೊಂಡು ಬರುತ್ತಿದ್ದರು. ನಾವೆಲ್ಲಾ ಒಟ್ಟಿಗೆ ಇಲ್ಲಿ ಸ್ವಲ್ಪ ಕಾಲ ಕಳೆದು ನಂತರ ಅಜ್ಜಿ ಊರಾದ ಸುಲ್ತಾನಪೂರಕ್ಕೆ ಹೋಗುತ್ತಿದ್ದೆವು.
ನಾವು ಒಟ್ಟು ಮೊಮ್ಮಕ್ಕಳು ೪-೫ ಜನ ಇರುತ್ತಿದ್ದೆವು. ಈ ಎಲ್ಲ ಮೊಮ್ಮಕ್ಕಳನ್ನು ತನ್ನ ಒಂಬತ್ತು ಜನ ಮಕ್ಕಳೊಂದಿಗೆ ಸಂಭಾಳಿಸುತ್ತಿದ್ದ ರೀತಿಯೇ ನನಗೆ ಆಶ್ಚರ್ಯ ತರಿಸುತ್ತಿತ್ತು. ಆಗಿನ ಕಾಲದವರಿಗೆ ಇದನ್ನೆಲ್ಲ ಮಾಡಲು ಅಷ್ಟೊಂದು ಕಷ್ಟವೇನೂ ಇರಲಿಲ್ಲ ಎಂದು ನಾವು ಆಶ್ಚರ್ಯಪಡದೇ ಇರಬಹುದು. ಆದರೆ ಅಷ್ಟೂ ಜನ ಮಕ್ಕಳಿಗೆ ಅಡಿಗೆ ಮಾಡುತ್ತಾ, ಹೊಲಕ್ಕೆ ಹೋಗುವವರಿಗೆ ಬುತ್ತಿ ಕಟ್ಟುತ್ತಾ, ಮನೆಗೆ ಬರುವ ಹೋಗುವವರನ್ನು ನೋಡಿಕೊಳ್ಳುತ್ತಾ, ಮೊಮ್ಮಕ್ಕಳಿಗೆ ಏನೂ ಕೊರತೆಯಾಗದಂತೆ ಅವರು ಬೇಡಿ ಬೇಡಿದ್ದನ್ನು ಮಾಡಿಕೊಡುತ್ತಾ ನಗುನಗುತ್ತಾ ಎಲ್ಲವನ್ನು ನಿಭಾಯಿಸುತ್ತಿದ್ದ ರೀತಿಗೆ ನಿಬ್ಬೆರಗಾಗಿದ್ದೇನೆ. ಲಕ್ಷ್ಮೇಶ್ವರದಿಂದ ಪ್ರತಿ ಶುಕ್ರವಾರ ಸಂತೆಯಿಂದ ಏನಾದರು ತಿನ್ನಲು ತಂದಾಗ ನಮಗೆಲ್ಲಾ ಹಬ್ಬವೋ ಹಬ್ಬ. ಆಗ ಅಜ್ಜಿ ಮೊದಲೇ ಇದು ಇಂತಿಂಥವರ ಪಾಲೆಂದು ಸಮನಾದ ಪಾಲು ಮಾಡಿ ಎಲ್ಲರಿಗೂ ಸೇರುವಂತೆ ಮಾಡುತ್ತಿದ್ದಳು. ಮನೆಯ ಹಿತ್ತಲಿನ ಹುಣಸೆ ಮರದಿಂದ ನಾವು ಹುಣಸೆಕಾಯಿಗಳನ್ನು ಕಿತ್ತುಕೊಟ್ಟರೆ ಅದನ್ನು ಕುಟ್ಟಿ ರುಚಿರುಚಿಯಾಗಿ ಚಿಗಳಿ ಮಾಡಿಕೊಡುತ್ತಿದ್ದಳು. ಅಜ್ಜಿಯದು ರುಚಿ ರುಚಿಯಾದ ಅಡಿಗೆ ಮಾಡುವದರಲ್ಲೂ ಎತ್ತಿದ ಕೈ. ಹಾಗಾಗಿ ನನ್ನ ದೊಡ್ಡಪ್ಪ ಅಳವಂಡಿಯಿಂದ ಬರುವಾಗಲೆಲ್ಲ ಲಕ್ಷ್ಮೇಶ್ವರದಿಂದ ಸಾಕಷ್ಟು ತರಕಾರಿಗಳನ್ನು ತಂದು ಅಜ್ಜಿ ಕೈಯಿಂದ ಅಡಿಗೆ ಮಾಡಿಸಿಕೊಂಡು ಊಟ ಮಾಡುತ್ತಿದ್ದರು.
ಇದೆಲ್ಲದರ ನಡುವೆ ದನಕರುಗಳನ್ನು ಹಿಂಡುತ್ತಾ, ಹಿಂಡಿಯಾದ ಮೇಲೆ ಹಾಲು ಮಜ್ಜಿಗೆಯನ್ನು ಬೇರೆಯವರಿಗೆ ಒಂದು ಪೈಸೆಯನ್ನೂ ತೆಗೆದುಕೊಳ್ಳದೆ ಧಾರಾಳವಾಗಿ ಕೊಡುತ್ತಿದ್ದಳು. ಅಜ್ಜಿಯದು ತುಂಬಾ ದೊಡ್ಡ ಗುಣ ಮತ್ತು ಬೇರೆಯವರದಕೆ ಯಾವತ್ತೂ ಆಸೆ ಪಟ್ಟವಳಲ್ಲ. ಅಜ್ಜಿಯ ತವರು ಮನೆಯಲ್ಲಿ ಆಸ್ತಿ ಪಾಲಾಗುವಾಗ ಅವಳ ದೊಡ್ಡ ತಮ್ಮ "ನಿನಗೇನು ಬೇಕೋ ಕೇಳು, ಕೊಡುತ್ತೇನೆ" ಎಂದು ಕೇಳಿದಾಗ "ನನಗೇನೂ ಬೇಡ.ನನ್ನ ಸಣ್ಣ ಮಗಳ್ನ ದಾರಿಗೆ ಹಚ್ಚೋದ ಅಯತಿ.ಅದೊಂದು ಹಚ್ಚಿಕೊಟ್ಟ ಬಿಡು ಸಾಕು" ಎಂದು ಹೇಳಿ ಸುಮ್ಮನಾದಳು. ಅದರಂತೆ ಮುಂದೆ ಅವಳ ದೊಡ್ಡ ತಮ್ಮ ನಡೆದುಕೊಂಡಿದ್ದಿದೆ. ಅವಳ ದೊಡ್ಡ ತಮ್ಮ ಜಿಲ್ಲಾ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದರೂ ಅವರಿಂದ ಏನನ್ನೂ ಅಪೇಕ್ಷೆ ಪಟ್ಟವಳಲ್ಲ. ಮುಂದೆ ಅವಳ ಮಕ್ಕಳು ಮನೆಕಟ್ಟಿಸುವಾಗ ಮತ್ತು ಬರಗಾಲದ ಸಂದರ್ಭದಲ್ಲಿ ಅವರಿಂದ ಸಹಾಯ ತೆಗೆದುಕೊಂಡಿದ್ದು ಇದೆ. ಇಂಥ ಅಜ್ಜಿ ಸ್ವಂತ ತಮ್ಮ ದಾಯಾದಿ ತಮ್ಮ ಎಂದು ಲೆಕ್ಕಿಸದೆ ನನ್ನ ದೊಡ್ದಪ್ಪ(ಅಪ್ಪನ ಅಣ್ಣ)ನನ್ನು ಅವನ ಮದುವೆಯಾಗುವವರಿಗೂ ತನ್ನ ಹತ್ತಿರ ಇಟ್ಟುಕೊಂಡು ಸಾಕಿದ್ದೂ ಇದೆ. ಆಗ ನನ್ನ ದೊಡ್ಡಪ್ಪ ಹೊಲದ ಕೆಲಸದ ಜೊತೆಗೆ ಮನೆಯ ಕೆಲಸದಲ್ಲೂ ಸಹಾಯ ಮಾಡುತ್ತಿದ್ದರಂತೆ.ಈ ದೊಡ್ಡಪ್ಪ ಅವಳಿಗೆ ಒಂಥರಾ ಮಾರಲ್ ಸಪೋರ್ಟ್ ಇದ್ದ ಹಾಗೆ. ಯಾವಾಗಲೂ ಅವನನ್ನು ಕೇಳದೆ ಅಜ್ಜಿಯ ಮನೆಯವರು ಏನನ್ನೂ ಮಾಡುತ್ತಿರಲಿಲ್ಲ.
ಮನೆಯ ಹಿರಿಯರಿಂದ ನಾನು ಕೇಳಿ ತಿಳಿದಂತೆ ಅಜ್ಜಿಗೆ ಪ್ರಾಯ ತುಂಬಿದ ತಕ್ಷಣ ಅವಳ ಸೋದರ ಮಾವನೊಂದಿಗೆ ಮದುವೆ ಮಾಡಿಕೊಟ್ಟರು. ಆತ ಕನ್ನಡ ಸಾಲಿ ಮಾಸ್ತರಾಗಿದ್ದವರು. ಅಜ್ಜನ ಸಂಬಳ ಮತ್ತು ಆಗೆಲ್ಲ ಕಾಲಕಾಲಕ್ಕೆ ಮಳೆಯಾಗಿ ಹೊಲದಿಂದ ಒಳ್ಳೆ ಆದಾಯವೂ ಬರುತ್ತಿದ್ದುದರಿಂದ ಏನೂ ಸಮಸ್ಯೆಯಿರಲಿಲ್ಲ. ಒಮ್ಮೆ ಅಜ್ಜ ಹತ್ತಿ ಗಿರಣಿಯಲ್ಲಿ ಹತ್ತಿ ತುಂಬಲು ಹೋಗಿ ಅವನ ಬಲಗೈ ಗಿರಣಿಯಲ್ಲಿ ಸಿಕ್ಕು ಅದನ್ನು ಸಂಪೂರ್ಣವಾಗಿ ಕಳೆದು ಕೊಳ್ಳಬೇಕಾಯಿತು. ಬಲಗೈ ಹೋಗಿದ್ದರಿಂದ ಇನ್ನು ಮಕ್ಕಳಿಗೆ ಬರೆದು ಪಾಠ ಮಾಡುವದಾದರು ಹೇಗೆ? ಹೀಗಾಗಿ ಅಜ್ಜ ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ಹೋದಾಗ ಅವನ ಸಹೋದ್ಯೋಗಿಗಳು ನೀವು ಸುಮ್ಮನೆ ಬಂದು ಕುಳಿತುಕೊಂಡು ಹೋಗಿ ಸಾಕು ನಾವು ಉಳಿದಿದ್ದನ್ನು ನೋಡಿಕೊಳ್ಳುತ್ತೇವೆ ಎಂದು ಹೇಳಿದರೂ ಕೇಳದೆ ವೃತ್ತಿ ಧರ್ಮಕ್ಕೆ ಅಪಚಾರ ಮಾಡಲಾರೆ ಎಂದು ರಾಜಿನಾಮೆಯನ್ನು ನೀಡಿ ಒಕ್ಕಲುತನದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ. ಬರುವ ಪಿಂಚಣಿಯನ್ನೂ ಬೇಡೆಂದು ನಿಲ್ಲಿಸಿಬಿಟ್ಟ. ಮುಂದೆ ಸ್ವಲ್ಪ ದಿನಕ್ಕೆ ಅಜ್ಜ ತೀರಿಕೊಂಡ ಮೇಲೆ ಇಡಿ ಸಂಸಾರದ ಭಾರವೆಲ್ಲ ಅಜ್ಜಿ ತಲೆ ಮೇಲೆ ಬಿತ್ತು. ಅಜ್ಜ ಮೊದಲೇ ಪಿಂಚಣಿ ಬೇಡವೆಂದು ಬರೆದುಕೊಟ್ಟಿದ್ದರಿಂದ ಹೊಲದಿಂದ ಬರುವ ಆದಾಯದಲ್ಲಿಯೇ ಅಷ್ಟೂ ಮಕ್ಕಳನ್ನು ಕಟ್ಟಿಕೊಂಡು ಜೊತೆಗೆ ನಾದಿನಿ,ನಾದಿನಿಯರ ಮಕ್ಕಳನ್ನೂ ನೋಡಿಕೊಳ್ಳುತ್ತಾ ಎಲ್ಲವನ್ನೂ ಸರಿದೂಗಿಸಿದಳು.
ಅಜ್ಜಿ ವಯಸ್ಸಿದ್ದ ಕಾಲದಲ್ಲಿ ಬಾವಿಯಿಂದ ಸೇದಿ ಎರಡೆರಡು ಬಿಂದಿಗೆ ನೀರನ್ನು ಒಟ್ಟಿಗೆ ತರುತ್ತಿದ್ದಳು. ಅವಳ ಹಿರಿಯ ಮಗ ಹುಬ್ಬಳ್ಳಿಯಲ್ಲಿ ಓದುತ್ತಿದ್ದ ಕಾಲದಲ್ಲಿ ರಾತ್ರಿ ಮೂರು ಗಂಟೆಗೆ ಎದ್ದು ಅಡಿಗೆ ಮಾಡಿ ನಸುಕಿನಲ್ಲಿ ಹುಬ್ಬಳ್ಳಿಗೆ ಹೋಗುತ್ತಿದ್ದ ರೈಲಲ್ಲಿ ಬುತ್ತಿ ಇಟ್ಟು ಕಳಿಸಿತ್ತಿದ್ದಳು. ಮುಂದೆ ಮಕ್ಕಳ ಮದುವೆಯಾಗಿ ಸೊಸೆಯಂದಿರು ಬಂದ ಮೇಲೂ ಸುಮ್ಮನೆ ಕುಳಿತುಕೊಳ್ಳುತ್ತಿರಲಿಲ್ಲ. ಏನಾದರೊಂದು ಮಾಡುತ್ತಿದ್ದಳು. ಅಜ್ಜಿಯದು ಸುಮ್ಮನೆ ಕುಳಿತು ತಿನ್ನಬಾರದು ಎನ್ನುವ ಛಲ. ಇಂಥ ಅಜ್ಜಿಗೆ ಬರು ಬರುತ್ತಾ ಸೊಂಟ ಬಗ್ಗಿ ಈಗ್ಗೆ ಹತ್ತು ವರ್ಷಗಳಿಂದ ಸಂಪೂರ್ಣವಾಗಿ ಬಗ್ಗಿಕೊಂಡು ನಡೆಯುತ್ತಿದ್ದಳು. ಆದರೂ ಒಬ್ಬರ ಕೈಯಿಂದ ಚಾಕರಿ ಮಾಡಿಸಿಕೊಂಡವಳಲ್ಲ. ಇಂಥದರಲ್ಲೂ ಮನೆಗೆಲಸದಲ್ಲಿ ಸಹಾಯ ಮಾಡುತ್ತಿದ್ದಳು. ತೀರ ಸಾಯುವ ಮುನ್ನ ಒಂದು ತಿಂಗಳ ಕಾಲ ನೆಲಕಟ್ಟಿದಳು. ನಾನು ಅದನ್ನೆಲ್ಲ ನೋಡಲು ಅಲ್ಲಿರಲಿಲ್ಲ. ಬಹುಶಃ ಅಜ್ಜಿ ತುಂಬಾ ಮುಜುಗರ ಪಟ್ಟಿಕೊಂಡಿರಬೇಕು. ಅದಕೆಂದೇ ಸಾವಿನ ಹಾಸಿಗೆಯಿಂದ ಬೇಗನೆ ಎದ್ದು ಹೋಗಿಬಿಟ್ಟಳು.
ನಮ್ಮ ಮನೆಯ ಒಂದು ದೊಡ್ಡ ಕೊಂಡಿ ಕಳಚಿ ಬಿದ್ದಿದೆ. ನಾನು ಸುಮ್ಮನೆ ಕುಳಿತು ಯೋಚಿಸುತ್ತೇನೆ. ಅಜ್ಜಿ ಹಿಂದಿನ ತಲೆಮಾರಿನವಳು. ಅವಳ ಜೀವನ ಪ್ರೀತಿ, ಉತ್ಸಾಹ, ಸಂಬಂಧಗಳ ಬದ್ಧತೆಯನ್ನು ನನ್ನ ಮುಂದಿನ ತಲೆಮಾರಾದ ಮಗಳು ಭೂಮಿಗೆ ವರ್ಗಾಯಿಸಬಲ್ಲೆನೆ? ವರ್ಗಾಯಿಸುವಷ್ಟು ಸಶಕ್ತನಾಗಿದ್ದೇನೆಯೆ? ಆ ಚೈತನ್ಯವಿದೆಯೆ? ಯಶಸ್ವಿಯಾಗಬಲ್ಲೆನೆ? ಈ ಎಲ್ಲ ಪ್ರಶ್ನೆಗಳನ್ನು ನನ್ನಷ್ಟಕ್ಕೆ ನಾನೇ ಕೇಳಿಕೊಳ್ಳುತ್ತೇನೆ. ಹೃದಯ ನಿಡುಸುಯ್ಯುತ್ತದೆ. ಮತ್ತೆ ಅಜ್ಜಿ ತನ್ನ ನಗು ಮುಖವನ್ನು ಹೊತ್ತು ನನ್ನ ಕಣ್ಮುಂದೆ ಸುಳಿಯುತ್ತಾಳೆ. ನಗು ನಗುತ್ತಲೇ ಎಲ್ಲವನ್ನೂ, ಎಲ್ಲರನ್ನೂ ಗೆದ್ದು ಅವಳು ಬದುಕಿದ ರೀತಿ ನೆನಪಾಗುತ್ತದೆ. ಮನಸ್ಸು ಮತ್ತೆ ಅಜ್ಜಿಯ ಹಾಗೆ ಬತ್ತದ ತೊರೆಯಂತೆ ಕೆಲಸ ಮಾಡಲು ಸಜ್ಜಾಗುತ್ತದೆ.
-ಉದಯ ಇಟಗಿ
10 ಕಾಮೆಂಟ್(ಗಳು):
ಈ ಹಳೆಯ ಕಾಲದವರು (ಅಜ್ಜ, ಅಜ್ಜಿ)ಎಷ್ಟು ಮಾನವೀಯ ಪ್ರೀತಿ ಹಾಗೂ ಮಾನವೀಯ ಗೌರವದಿಂದ ತುಂಬಿಕೊಂಡಿರುತ್ತಿದ್ದರು! ಅವರೆದುರಿಗೆ ನಾವು ಎಷ್ಟು ಸಣ್ಣವರು ಅನ್ನಿಸಿಬಿಡುತ್ತದೆ.
ನಿಮ್ಮ ಅಜ್ಜಿಯ ನೆನಪನ್ನು ನೀವು ತೋಡಿಕೊಂಡಾಗ, ನನ್ನ ಅಜ್ಜಿಯ ನೆನಪೂ ಆಯಿತು.
ಧನ್ಯವಾದಗಳು.
ಸುನಾಥವರೇ,
ಅದಕ್ಕೆ ಹೇಳೋದಲ್ವಾ 'Old is gold'ಅಂತ. ನನ್ನ ಲೇಖನ ನಿಮ್ಮ ಅಜ್ಜಿಯ ನೆನ್ನಪನ್ನೂ ಮಾಡಿಕೊಟ್ಟಿದ್ದರಿಂದ ನಾನು ಧನ್ಯನಾದೆ.
ಭಾವಪೂರ್ಣ ಶ್ರದ್ಧಾಂಜಲಿ. ನನ್ನ ಕಥಾ ಸಂಕಲನವಾದ "ಕಾಣ್ಕೆ"ಯಲ್ಲಿ ನಾನು ಬರೆದ ಕಥೆಯಾದ "ಕಾಣ್ಕೆ"ಕೂಡಾ ನನ್ನಜ್ಜಿಯ ನೆನಪಿನ ಬುತ್ತಿಯಾಗಿದೆ. ಹಿಂದಿನವರ ಮನಸ್ಸು ನಿರ್ಮಲವಾಗಿರುತ್ತಿತ್ತು. ಮುಗ್ಧತೆ ತುಂಬಿದ ತುಂಬು ಹೃದಯವಾಗಿತ್ತು. ಹಾಗಿಗಾಗಿಯೇ ಅವರು ಕಷ್ಟಗಳಿಗೆ ಹೆದರುತ್ತಿರಲಿಲ್ಲ. ಮನಸ್ಸಿನ ಸ್ವಾಸ್ಥ್ಯದಿಂದಾಗಿ ಧೈಹಿಕವಾಗಿಯೂ ಸದೃಢರಾಗಿರುತ್ತಿದ್ದರು. ಅದೆಲ್ಲಾ ಭೂತಕಾಲದಲ್ಲಾಯಿತು ಎಂದೆನಿಸುತ್ತಿದೆ. ಈಗಿನ ಕಾಲದಲ್ಲಿ ಮನುಷ್ಯ ಮನುಷ್ಯನ ರಕ್ತ ಪಿಪಾಸುವಾಗಿರುವಾಗ ಸಾಮಾಜಿಕ ಸ್ವಾಸ್ಥ್ಯವೇ ಹದಗೆಡುತ್ತಿದೆ. ಇನ್ನು ಚಿತ್ತ ಸ್ವಾಸ್ಥ್ಯ ಎಲ್ಲಿಯ ಮಾತು?!
:-(
ನಿಮ್ಮಜ್ಜಿಯ ಆತ್ಮ ಚಿರ ಶಾಂತಿಯ ಪಡೆಯಲಿ ಎಂದು ಹಾರೈಸುವೆ.
ನಿಜವಾದ ಮಾತನ್ನು ಹೇಳಿದಿರೆ ತೇಜಸ್ವಿನಿಯವರೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ತುಂಬಾ ಸೊಗಸಾಗಿ ನಿರೂಪಿಸಿರುವಿರಿ. ಭಾವನೆಗಳ ತೀವ್ರತೆ ಇದ್ದರೂ ಅದಕ್ಕೊಂದು ಸಂಯಮವೂ ಇದೆ. ಅಜ್ಜಿ ಎಷ್ಟು ನವಿರು ಭಾವನೆಯವನೆಯವಳೋ ಅಷ್ಟೇ ಕಡಕ್ಕಾದ, ನೇರ ಸ್ವಭಾವದ ವ್ಯಕ್ತಿಯೂ ಆಗಿದ್ದರೆನಿಸುತ್ತದೆ.
ಮೇಡಂ,
ನಿಮ್ಮ ಸೊಗಸಾದ ಪ್ರತಿಕ್ರಿಯೆಗೆ ಧನ್ಯವಾದಗಳು.
ಉದಯ ಇಟಗಿ ಅವರೆ...
ಒಂದು ತಲೆಮಾರೇ ಇನ್ನಿಲಾವಾದಾಗಿನ ತಳಮಳ, ತಲ್ಲಣ, ನಿಡುಸುಯ್ಯುವಿಕೆಯನ್ನು ಹೊರಗೆಡವಿದ್ದೀರಿ.
ಓದುತ್ತ, ಯೋಚಿಸುತ್ತ ಬಹಳವೇ ಬೇಸರವಾಗುತ್ತದೆ. ನಿನ್ನೆ, ಇಂದೆಲ್ಲ ನಮ್ಮ ಕಣ್ಣೆದುರೇ ಇದ್ದವರು, ತಮ್ಮ ತೋಳುಗಳಲ್ಲಿ ನಮ್ಮನ್ನು ಹುದುಗಿಸಿಟ್ಟುಕೊಂಡವರು, ಮುದ್ದುಗರೆದು ಬೆಳೆಸಿರುವವರು ನಾಳೆ ನೋಡಲು ಸಿಗುವುದೇ ಇಲ್ಲ ಎಂಬೊಂದು ಸತ್ಯವೇ ಸಾಕು ನಮ್ಮ ಮನಸನ್ನಿಷ್ಟು ಮುದುಡಿಸಿಬಿಡಲು.
ಇಂಥಹ ಬರಹಕ್ಕೆ ನನ್ನದೂ ಎರಡು ಕಂಬನಿ.
ಉದಯ ಅವರೆ,
ತುಂಬಾ ದುಃಖದಿಂದ ಬರೆದಿದ್ದೀರೆಂದು ತಿಳಿಯುತ್ತದೆ.
ಶಾಂತಲಾ ಭಂಡಿಯವರೆ,
ಸಾವೊಂದು ಇರದಿದ್ದರೆ ನಮ್ಮ ಬದುಕಿನಲ್ಲಿ ಸಿಕ್ಕ ಅತ್ಯಮೂಲ್ಯ ವಕ್ತಿಗಳನ್ನು ಕೈತಪ್ಪಿ ಹೋಗದಂತೆ ಭದ್ರವಾಗಿ ಹಿಡಿದಿಟ್ಟುಕೊಳ್ಳಬಹುದಿತ್ತಲ್ಲವೆ? ಈ ಸಾವು ಎಷ್ಟೊಂದು ಕೄರ! ನಾನು ಆಗಾಗ್ಗೆ ಅಂದುಕೊಳ್ಳುವದುಂಟು,"ಹೋದವರು ಹಿಂತಿರುಗಿ ಬಾರರು ಉಳಿಸಿಕೊಳ್ಳಬಹುದೆ ಉಳಿದವರನ್ನು?" ಆಗಲೂ ಈ ಸಾವು ಮತ್ತೆ ನಿರಾಸೆಗೊಳಿಸುತ್ತದೆ.ನನ್ನ ಜೊತೆ ನಿಮ್ಮದೆರಡು ಕಂಬನಿಯನ್ನು ಸೇರಿಸಿದ್ದರಿಂದ ಮನಸ್ಸು ಎಷ್ಟೋ ಹಗುರವಾಯಿತು.
ಜಯಶಂಕರವರೆ,
ಅಜ್ಜಿ ಹೋದದ್ದಕ್ಕಿಂತ ಕೊನೆ ಗಳಿಗೆಯಲ್ಲಿ ಅವಳ ಬಳಿ ಇರಲಿಲ್ಲವಲ್ಲ ಎಂಬ ಕೊರಗಿನಿಂದ ಅವಳಿಗೆ ಶ್ರದ್ಧಾಂಜಲಿ ಸಲ್ಲಿಸಲೆಂದೇ ಈ ಲೇಖನ ಬರೆದಿರುವೆ.
ಕಾಮೆಂಟ್ ಪೋಸ್ಟ್ ಮಾಡಿ