Demo image Demo image Demo image Demo image Demo image Demo image Demo image Demo image

ಗುರುತು ಪತ್ರ

 • ಶನಿವಾರ, ಡಿಸೆಂಬರ್ 01, 2012
 • ಬಿಸಿಲ ಹನಿ
 • ಕವನದ ಹಿನ್ನೆಲೆ: ಮೊಹಮ್‍ದ ಡರ್ವಿಸ್ ಪ್ಯಾಲೈಸ್ತೀನಾದ ಪ್ರಸಿದ್ಧ ಕವಿ. ಹುಟ್ಟಿದ್ದು 1941ರಲ್ಲಿ ಪ್ಯಾಲೈಸ್ತೀನಾದ ಆಲ್-ಬಿರ್ವಿ ಎನ್ನುವ ಒಂದು ಸಣ್ಣ ಹಳ್ಳಿಯಲ್ಲಿ. 1948ರಲ್ಲಿ ಇಸ್ರೇಲಿಯರು ಈತನ ಊರಾದ ಆಲ್-ಬಿರ್ವಿಯನ್ನು ಆಕ್ರಮಿಸಿಕೊಂಡಿದ್ದರಿಂದ ಅವರಿಗೆ ಹೆದರಿ ಈತನ ಕುಟುಂಬ ಲೆಬನಾನ್‍ಗೆ ಓಡಿಹೋಗುತ್ತದೆ. ಒಂದು ವರ್ಷ ಬಿಟ್ಟು ಮತ್ತೆ ಅವರು ತಮ್ಮ ಊರಿಗೆ ವಾಪಾಸಾದಾಗ ಈತನ ಊರು ಸೇರಿದಂತೆ ಹಲವು ಊರುಗಳು ಇಸ್ರೇಲಿಯರ ದಾಳಿಗೆ ನಾಶವಾಗಿ ಅವರ ಹಿಡಿತದಲ್ಲಿ ಸಿಕ್ಕಿಕೊಳ್ಳುತ್ತವೆ. ಹೀಗಾಗಿ ಡರ್ವಿಸ್ ಕುಟುಂಬ ಬೇರೊಂದು ಹಳ್ಳಿಯಲ್ಲಿ ನೆಲೆಸಬೇಕಾಗುತ್ತದೆ. ಆ ಮೂಲಕ ಅವರು ತಮ್ಮದೇ ನೆಲದಲ್ಲಿ ಪರಕೀಯರಾಗಿ ಜೀವಿಸತೊಡಗುತ್ತಾರೆ. ತಮ್ಮದೇ ನೆಲದಲ್ಲಿ ತಮಗೆ ಸ್ಥಾನಪಲ್ಲಟವಾಗಿದ್ದನ್ನು ಹಾಗೂ ತಮ್ಮ ಗುರುತು ಅಳಿಸಿಹೋಗುವದನ್ನು ಕವಿ ಇನ್ನಿಲ್ಲದಂತೆ ಅನುಭವಿಸುತ್ತಾನೆ. ಹಾಗೆಂದೇ ಅವನ ಕವನಗಳು 1948ರಲ್ಲಿ ಉಂಟಾದ ಆಪತ್ತಿನಿಂದ ಪ್ಯಾಲೈಸ್ತೀನಿಯನ್ನರು ಅನುಭವಿಸಿದ ನಷ್ಟಗಳನ್ನು ಹಾಗೂ ಅವರ ಮೇಲೆ ಇಸ್ರೇಲಿಯರು ನಡೆಸಿದ ಸಾಂಸ್ಕೃತಿಕ ಮತ್ತು ರಾಜಕೀಯ ದಬ್ಬಾಳಿಕೆಯನ್ನು ಚಿತ್ರಿಸುತ್ತವೆ. ಪ್ರಸ್ತುತ ಕವನದಲ್ಲಿ ಕವಿಯು ಇಸ್ರೇಲಿಯರು ಪ್ಯಾಲೈಸ್ತೀನಿಯನ್ನರ ಗುರುತನ್ನು ಅಳಿಸಿಹಾಕುವ ಪ್ರಯತ್ನಗಳಿಗೆ ತೀವ್ರ ವಿರೋಧವನ್ನು ಹಾಗೂ ಆಕ್ರೋಶವನ್ನು ವ್ಯಕ್ತಪಡಿಸುತ್ತಾನೆ.  ಬರೆದುಕೊಳ್ಳಿ!

  ನಾನೊಬ್ಬ ಅರೇಬಿ

  ನನ್ನ ಗುರುತು ಪತ್ರದ ಸಂಖ್ಯೆ ಐವತ್ತು ಸಾವಿರ

  ನನಗೆ ಎಂಟು ಜನ ಮಕ್ಕಳು

  ಒಂಬತ್ತನೆಯದು ಈ ಬೇಸಿಗೆಯ ನಂತರ ಬರುತ್ತದೆ.

  ನಿಮಗೆ ಕೋಪವೇ?


  ಬರೆದುಕೊಳ್ಳಿ!

  ನಾನೊಬ್ಬ ಅರೇಬಿ

  ನಾನು ನನ್ನ ಗೆಳೆಯರೊಟ್ಟಿಗೆ

  ಕಲ್ಲುಗಣಿಯಲ್ಲಿ ಕೆಲಸ ಮಾಡುವವ

  ನನಗೆ ಎಂಟು ಜನ ಮಕ್ಕಳು

  ಅವರೆಲ್ಲರ ಊಟ, ವಸತಿ,

  ಓದು, ಬಟ್ಟೆಬರೆಯೆಲ್ಲವನ್ನೂ

  ಈ ಕಲ್ಲುಗಣಿ ದುಡಿಮೆಯಲ್ಲಿಯೇ

  ತೂಗಿಸುತ್ತೇನೆ.

  ನಿಮಗೆ ಕೋಪವೇ?


  ನಾನು ನಿಮ್ಮ ಮನೆಯ

  ಬಾಗಿಲಿಗೆ ಬಂದು ಭಿಕ್ಷೆ ಬೇಡುವದಿಲ್ಲ.

  ಅಥವಾ ನಿಮ್ಮ ಕಾಲಿಗೆ ಬಿದ್ದು

  ಕರುಣೆ ತೋರಿಸೆಂದು ಬೇಡಿ

  ಸಣ್ಣವನಾಗುವದಿಲ್ಲ.

  ಅದಕ್ಕೇ ನಿಮಗೆ ಕೋಪವೇ?


  ಬರೆದುಕೊಳ್ಳಿ!

  ನಾನೊಬ್ಬ ಅರೇಬಿ

  ಬಿರುದು ಬಾವಲಿಗಳಿಲ್ಲದ

  ಸಾಧಾರಣ ಮನುಷ್ಯ.

  ರೊಚ್ಚಿಗೆದ್ದ ಜನರ ನಾಡಿನಲ್ಲಿ

  ತಾಳ್ಮೆಯಿಂದ ಕಾಯುತ್ತಿದ್ದೇನೆ.

  ನನ್ನ ಹುಟ್ಟಿಗಿಂತ ಮೊದಲೇ

  ನಾನಿಲ್ಲಿ ಬೇರು ಬಿಟ್ಟಿದ್ದೇನೆ

  ಅಷ್ಟೇ ಏಕೆ ಯುಗಗಳು ಆರಂಭವಾಗುವದಕ್ಕೆ ಮುಂಚೆ,

  ಪೈನ್ ಮತ್ತು ಆಲಿವ್ ವೃಕ್ಷಗಳು ಹುಟ್ಟುವ ಮುಂಚೆ

  ಹಾಗೂ ಹುಲ್ಲು ಹುಟ್ಟುವ ಮೊದಲೇ

  ನಾನಿಲ್ಲಿ ಗಟ್ಟಿಯಾಗಿ ನೆಲೆಯೂರಿದ್ದೇನೆ.

  ನನ್ನ ಅಪ್ಪ ಸಾಧಾರಣ

  ರೈತಾಪಿ ಕುಟುಂಬದಿಂದ ಬಂದವನು

  ನನ್ನ ಅಜ್ಜನೂ ಸಹ ರೈತನೇ!

  ಅವ ಒಳ್ಳೆಯ ಮನೆತನದಲ್ಲಿ ಹುಟ್ಟಲಿಲ್ಲ

  ಒಳ್ಳೆಯ ಶಿಕ್ಷಣ ಪಡೆಯಲಿಲ್ಲ.

  ಆದರೆ ನನಗೆ ಓದನ್ನು ಹೇಳಿ ಕೊಡುವ ಮೊದಲು

  ಸೂರ್ಯನಿಗೆ ಮುಖಮಾಡಿ ನಿಲ್ಲುವದನ್ನು ಹೇಳಿಕೊಟ್ಟವನು.

  ನನ್ನ ಮನೆ ಹುಲ್ಲು ಕಡ್ಡಿಗಳಿಂದ

  ಮಾಡಿದ ಕಾವಲುಗಾರನ ಗುಡಿಸಲಿನಂತಿದೆ.

  ಹೇಳಿ, ನಿಮಗೆ ನನ್ನ ಸ್ಥಾನಮಾನದ ಬಗ್ಗೆ ತೃಪ್ತಿಯೇ?


  ಬರೆದುಕೊಳ್ಳಿ!

  ನಾನೊಬ್ಬ ಅರೇಬಿ

  ನೀವು ನನ್ನ ಪೂರ್ವಿಕರ

  ಹಣ್ಣುತೋಟ ಮತ್ತು ನಾನು ನನ್ನ ಮಕ್ಕಳೊಟ್ಟಿಗೆ

  ಉಳುಮೆ ಮಾಡುತ್ತಿದ್ದ ಭೂಮಿಯನ್ನು

  ಕಿತ್ತುಕೊಂಡವರು.

  ನೀವು ನಮಗೆ

  ಈ ಕಲ್ಲುಬಂಡೆಗಳನ್ನು ಬಿಟ್ಟು

  ಬೇರೇನೇನನ್ನೂ ಬಿಡಲಿಲ್ಲ.

  ಆದರೂ ನಿಮಗೆ ಕೋಪವೇ!


  ಆದ್ದರಿಂದ

  ಬರೆದುಕೊಳ್ಳಿ

  ಮೊದಲ ಪುಟದ ಮೊದಲ ಸಾಲಿನಲ್ಲಿ.

  ನಾನು ಜನರನ್ನು ದ್ವೇಷಿಸುವದಿಲ್ಲ

  ಅಥವಾ ಆಕ್ರಮಿಸುವದಿಲ್ಲ.

  ಆದರೆ ನಾನು ಹಸಿದರೆ,

  ರೊಚ್ಚಿಗೆದ್ದರೆ

  ದುರಾಕ್ರಮಣಕಾರರ ಮಾಂಸವೇ

  ನನ್ನ ಆಹಾರವಾಗುತ್ತದೆ.

  ಎಚ್ಚರ.........

  ಎಚ್ಚರ.........

  ನನ್ನ ಹಸಿವಿನ ಬಗ್ಗೆ

  ಮತ್ತು ನನ್ನ ರೊಚ್ಚಿನ ಬಗ್ಗೆ!  ಮೂಲ ಅರೇಬಿ: ಮೊಹಮ್‍ದ ಡರ್ವಿಸ್

  ಕನ್ನಡಕ್ಕೆ: ಉದಯ್ ಇಟಗಿ