ಈಗ್ಗೆ ಒಂದು ತಿಂಗಳ ಹಿಂದೆಯಷ್ಟೇ ಒಬ್ಬರು ನನ್ನ ಬ್ಲಾಗಿಗೆ ಹೊಸದಾಗಿ ಭೇಟಿಕೊಟ್ಟು ಅಲ್ಲಿ ನಾನು ಪ್ರಕಟಿಸಿದ ಕವನವೊಂದಕ್ಕೆ ಪ್ರತಿಕ್ರಿಯೆ ನೀಡುತ್ತಾ “ಹೀಗೆ ಹಾರಾಡುತ್ತಾ ನಿಮ್ಮ ಬ್ಲಾಗಲ್ಲಿ ಬಿದ್ದೆ. ರವೀಂದ್ರನಾಥ ಟ್ಯಾಗೋರ್‌ರವರ ಕವನವನ್ನು ತುಂಬಾ ಚೆನ್ನಾಗಿ ಅನುವಾದಿಸಿದ್ದೀರಿ. ನನ್ನ ಬ್ಲಾಗಿಗೊಮ್ಮೆ ಬೇಟಿಕೊಡಿ. ಅಲ್ಲಿ ಒಂದಷ್ಟು ಚೆಂದದ ಫೋಟೊಗಳಿವೆ, ಲೇಖನಗಳಿವೆ. ಭೂಪಟಗಳಿವೆ, ಪುಟ್ಟ ಪುಟ್ಟ ಕತೆಗಳಿವೆ” ಎಂದು ಹೇಳಿದ್ದರು. ನಾನು ಎಂದಿನಂತೆ ಸಹಬ್ಲಾಗಿಗರು ಪ್ರತಿಕ್ರಿಯಿಸಿದಾಗ ಅವರಿಗೊಂದು ಧನ್ಯವಾದ ಹೇಳಿ ಸುಮ್ಮನಾಗುವಂತೆ ಸುಮ್ಮನಾಗುವದಾಗಲಿ, ಅಥವಾ ಅವರು ತಮ್ಮ ಬ್ಲಾಗನ್ನು ನೋಡಲು ಹೇಳಿದಾಗ ವಿಳಂಬಮಾಡುವಂತೆ ವಿಳಂಬ ಮಾಡುವದನ್ನಾಗಲಿ ಇವರ ವಿಷಯದಲ್ಲಿ ಮಾಡಲಿಲ್ಲ. ತಕ್ಷಣ ಅವರ ಬ್ಲಾಗಿಗೆ ಭೇಟಿಕೊಟ್ಟೆ. ಅದಕ್ಕೆ ಕಾರಣ- ಅದರಲ್ಲಿರುವ ಒಂದಷ್ಟು “ಚೆಂದನೆಯ ಫೋಟೋಗಳು”! ಹಾಗೂ ನನಗೂ ಫೋಟೊಗ್ರಾಫಿಯಲ್ಲಿ ಮೊದಲಿನಿಂದಲೂ ಅಲ್ಪ ಸ್ವಲ್ಪ ಆಸಕ್ತಿ ಇತ್ತಲ್ಲ? ಒಮ್ಮೆ ನೋಡೇ ಬಿಡುವಾ ಎಂದುಕೊಂಡು ಅವರ ಬ್ಲಾಗಿನೊಳಕ್ಕೆ ಇಣುಕಿದೆ. ಒಂದಷ್ಟು ತಮಾಷೆಯ ಲೇಖನಗಳನ್ನು ಓದುತ್ತಾ ಹೊಟ್ಟೆ ಹುಣ್ಣಾಗುವಷ್ಟು ನಗುವದರೊಂದಿಗೆ ಅಲ್ಲಿರುವ ಫೋಟೋಗಳನ್ನು ನೋಡಿ ನಿಬ್ಬೆರಗಾಗಿ ಹೋದೆ! ಅದ್ಭುತ ಪ್ರತಿಭೆಯೆಂದುಕೊಂಡೆ!
ಈ ಮಧ್ಯ ನಾನು ಸುಮಾರು ಹದಿನೈದು ದಿವಸಗಳ ಕಾಲ ನನ್ನ ಫ್ಯಾಮಿಲಿ ವೀಸಾ ಕೆಲಸದ ನಿಮಿತ್ತ ನಾನಿರುವ ಜಾಗದಿಂದ ೬೫೦ ಕಿ.ಮೀ. ದೂರದಲ್ಲಿರುವ ಮೇನ್ ಕ್ಯಾಂಪಸ್ಗೆ ಹೋಗಬೇಕಾಗಿ ಬಂದಿದ್ದರಿಂದ ನನ್ನ ಬ್ಲಾಗಿನಲ್ಲಿ ಹೊಸತೇನನ್ನೂ ಬರೆದಿರಲಿಲ್ಲ. ಇದು ಒಂದು ನೆಪವಷ್ಟೆ! ಅದಕ್ಕೆ ನನ್ನ ಸೋಮಾರಿತನವೂ ಕಾರಣವಾಗಿತ್ತು ಎನ್ನಿ! ಹೀಗಾಗಿ ನನ್ನ ಬ್ಲಾಗ್ ಹಳೆಯದರಲ್ಲಿಯೇ ಕೊಳೆಯುತ್ತಾ ಬಿದ್ದಿತ್ತು! ಇದೇ ಸಂದರ್ಭದಲ್ಲಿ ಮತ್ತದೇ ವ್ಯಕ್ತಿ ನನ್ನ ಬ್ಲಾಗಿಗೆ ಭೇಟಿಕೊಟ್ಟು “ಹೊಸತೇನಾದರು ಇದೆ ಎಂದು ನಿಮ್ಮ ಬ್ಲಾಗಿಗೆ ಬಂದೆ. ಇರಲಿಲ್ಲ. ಬಹುಶಃ ಕೆಲಸದಲ್ಲಿ ಬ್ಯುಸಿ ಆಗಿರಬೇಕು. ಬಿಡುವು ಮಾಡಿಕೊಂಡು ಬರೆಯಿರಿ” ಎಂದು ಮತ್ತೊಂದು ಸಣ್ಣ ಕಾಮೆಂಟನ್ನು ಬಿಟ್ಟಿದ್ದರು. ನಾನು ವಾಪಾಸಾದ ಮೇಲೆ ಇವರ ಕಾಮೆಂಟನ್ನು ನೋಡಿ ಮೊಟ್ಟ ಮೊದಲಿಗೆ ಮಾಡಿದ ಕೆಲಸ ಬರೆಯಲು ಮುಂದಾದದ್ದು. ಒಂದೇ ವಾರದಲ್ಲಿ ಎರಡು ಲೇಖನಗಳನ್ನು ಹಾಗೂ ಎರಡು ಪದ್ಯಗಳನ್ನು ಅನುವಾದಿಸಿ ಪ್ರಕಟಿಸಿದೆ. ಅವತ್ತೇ ಇನ್ನುಮುಂದೆ ನಾನು ಬರವಣಿಗೆಯಲ್ಲಿ ಸದಾ ಕಾರ್ಯೋನ್ಮುಖನಾಗಿರಬೇಕೆಂದು ನಿರ್ಧರಿಸಿದೆ. ಒಂದು ಕ್ರಿಯಾಶೀಲ ಮನಸ್ಸು ಇನ್ನೊಂದು ಜೀವವನ್ನು ಕ್ರಿಯಾಶಿಲನನ್ನಾಗಿಸುವದೆಂದರೆ ಹೀಗೇನೇ! ಇಂಥ ಕ್ರಿಯಾಶಿಲ ಜೀವಗಳು ಪ್ರಶಸ್ತಿಗಳನ್ನು ಯಾವತ್ತಿಗೂ ಹುಡುಕಿಕೊಂಡು ಹೋಗುವದಿಲ್ಲ. ಅವು ತಾವೇ ತಾವಾಗಿ ಇವರನ್ನು ಹುಡುಕಿಕೊಂಡು ಬರುತ್ತವೆ. ಇದೀಗ ಆ ಪಟ್ಟಿಗೆ ಸೇರಿದ ಆ ಕ್ರಿಯಾಶೀಲ ಜೀವವೇ “ಛಾಯಾಕನ್ನಡಿ” ಬ್ಲಾಗಿನ ಒಡೆಯ, ಛಾಯಾಗ್ರಾಹಕ ಹಾಗೂ ಈ ಬಾರಿಯ ಲಂಡನ್ನಿನ ದಿ ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯ ಅಂತರಾಷ್ಟ್ರೀಯ ಮಟ್ಟದ ಪುರಸ್ಕಾರವನ್ನು ತಮ್ಮದಾಗಿಸಿಕೊಂಡ ಬೆಂಗಳೂರಿನ ಕೆ.ಶಿವು. ಇವರೊಂದಿಗೆ ಇದೇ ಪ್ರಶಸ್ತಿಯನ್ನು ಹಂಚಿಕೊಡಿರುವ ಮತ್ತೊಬ್ಬ ಕನ್ನಡಿಗ, ಬ್ಲಾಗಿಗ, ಶಿಡ್ಲಘಟ್ಟದವರಾದ ಮಲ್ಲಿಕಾರ್ಜುನ ಡಿ.ಜಿ. ಯವರು.
ಶಿವು ಕೆ ಮತ್ತು ಮಲ್ಲಿಕಾರ್ಜುನ ಡಿ.ಜಿ ಈ ಬಾರಿಯ ಲಡನ್ನಿನ ಪ್ರತಿಷ್ಟಿತ ದಿ ರಾಯಲ್ ಫೋಟೋಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ (Associate) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಯಲ್ ಫೋಟೋಗ್ರಫಿ ಸೊಸೈಟಿಯ ಮನ್ನಣೆಗೆ ಪಾತ್ರರಾಗುವುದು ಹೆಮ್ಮೆಯ ಸಂಗತಿ.
ಶಿವು ಪಿಕ್ಟೋರಿಯಲ್ ವಿಭಾಗದಲ್ಲಿ ಪಡೆದಿದ್ದರೆ, ಮಲ್ಲಿಕಾರ್ಜುನ ನೇಚರ್ ವಿಭಾಗದಲ್ಲಿ ಪಡೆದಿರುವರು.
ಈ ಗೌರವಕ್ಕೆ ಪಾತ್ರರಾಗಲು ಬೇಕಾದ ಅಹ್ರತೆಗಳು:
ಪಿಕ್ಟೋರಿಯಲ್ ಅಥವಾ ನೇಚರ್ ಈ ರೀತಿ ಒಂದೇ ವಿಷಯದ ಬೆನ್ನು ಬಿದ್ದು, ಹಲವು ವರ್ಷಗಳ ಸಾಧನೆ, ಪರಿಶ್ರಮವನ್ನು ತಮಗೆ ಬಂದಿರುವ ಅಂತರಾಷ್ಟ್ರೀಯ ಪ್ರಶಸ್ತಿಗಳ ಮೂಲಕ ನಿರೂಪಿಸಲು ಕನಿಷ್ಟ ಐದು ದೇಶಗಳಲ್ಲಿ ಛಾಯಾಚಿತ್ರಗಳು ಬಹುಮಾನ ಪಡೆದಿರಬೇಕು ಅಥವಾ ಪ್ರದರ್ಶನಗೊಂಡಿರಬೇಕು.
ತಮ್ಮ ಹದಿನೈದು ಉತ್ತಮ ಚಿತ್ರಗಳನ್ನು ರಾಯಲ್ ಫೋಟೋಗ್ರಫಿ ಸೊಸೈಟಿಯವರಿಗೆ ಕಳಿಸಬೇಕು. ಅವನ್ನು ಅವರ ಕಮಿಟಿಯವ್ರು ಪರಿಶೀಲಿಸಿ ಅತ್ಯುತ್ತಮವಾಗಿದ್ದರೆ ಮಾತ್ರ ಈ ಗೌರವವನ್ನು ಪ್ರಧಾನ ಮಾಡುವರು.
೧೮೫೩ರಲ್ಲಿ ರಾಯಲ್ ಸೊಸೈಟಿಯಿಂದ ಇದುವರೆಗೂ ೧೩೨ ಭಾರತೀಯರು ಈ ಗೌರವಕ್ಕೆ ಪಾತ್ರರಗಿದ್ದಾರೆ. ಈ ವರ್ಷ ವಿಶ್ವದಾದ್ಯಂತ ಈ ಮನ್ನಣೆ ೨೯ ಜನ ಛಾಯಾಗ್ರಾಹಕರಿಗೆ ಸಿಕ್ಕಿದೆ. ಅದರಲ್ಲಿ ಭಾರತೀಯರು ಇವರಿಬ್ಬರು ಮಾತ್ರ.
ಬೆಂಗಳೂರಿನಲ್ಲಿ ನ್ಯೂಸ್ ಪೇಪರ್ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ಶಿವು ಫೋಟೋಗ್ರಾಫಿಯಲ್ಲಿ ಸಾಕಷ್ಟು ರಾಷ್ಟ್ರೀಯ ಪುರಸ್ಕಾರಗಳನ್ನು ಗೆದ್ದು ಇದೀಗ ಅಂತರಾಷ್ಟ್ರೀಯ ಪ್ರಶಸ್ತಿಯ ಗರಿಯನ್ನು ತಮ್ಮ ಮುಡಿಯಲ್ಲಿ ಸಿಕ್ಕಿಸಿಕೊಂಡಿದ್ದಾರೆ. ನಾನು ಅವರನ್ನು ಕಣ್ಣಾರೆ ಕಂಡಿಲ್ಲ, ಮಾತನಾಡಿಸಿಲ್ಲ. ದೂರದ ಲಿಬಿಯಾದಲ್ಲಿರುವ ನನಗೆ ಒಂದು ತಿಂಗಳ ಹಿಂದೆಯಷ್ಟೇ ಬ್ಲಾಗ್ ಲೋಕದ ಮೂಲಕ ಪರಿಚಯವಾದವರು. ಇಂದು ಬೆಳಿಗ್ಗೆ ಇವರಿಗೆ ಪ್ರಶಸ್ತಿ ಬಂದಿದ್ದನ್ನು ದಿನಪತ್ರಿಕೆಗಳಲ್ಲಿ ಓದಿ ಖುಶಿಯಾಗಿ ಇವರ ಮೇಲೆ ಒಂದು ಲೇಖನವನ್ನು ಬರೆಯೋಣವೆಂದುಕೊಂಡು ಬರೆಯತೊಡಗಿದೆ. ಯಾಕೋ ಇವರ ಬಗ್ಗೆ ಇರುವ ಮಾಹಿತಿ ಸಾಕೆನಿಸಲಿಲ್ಲ. ಸರಿ ಬ್ಲಾಗಲ್ಲಾದರೂ ಇವರ ಪರಿಚಯ ಸಿಗುತ್ತದಾ? ಎಂದು ನೋಡಿದರೆ ಅಲ್ಲಿ ಬರಿ ಶಿವು, ಬೆಂಗಳೂರು ಎಂದು ಮಾತ್ರ ಇತ್ತು. ಅವರನ್ನೇ ನೇರವಾಗಿ ಸಂಪರ್ಕಿಸಲು ನನ್ನ ಬಳಿ ಅವರ ಈಮೇಲ್ ಆಗಲಿ ಫೋನ್ ನಂಬರ್ ಆಗಲಿ ಇರಲಿಲ್ಲ. ಅವರ ಬ್ಲಾಗಿನೊಳಕ್ಕೆ ನುಗ್ಗಿ ಕಾಮೆಂಟು ಬಿಡುವ ಜಾಗದಲ್ಲಿ ನನ್ನ ಈಮೇಲ್ಗೆ ನಿಮ್ಮ ಬಗ್ಗೆ ಡಿಟೇಲ್ಸ್ ಕಳಿಸಿ ಎಂದಿದ್ದರೆ ಕಳಿಸುತ್ತಿದ್ದರೇನೋ. ಆದರೆ ನಾವು ಬರೆಯುವ ವ್ಯಕ್ತಿಯ ಬಗ್ಗೆ, ಅವರ ಸಾಧನೆಗಳ ಬಗ್ಗೆ ನಾವೇ ಖುದ್ದಾಗಿ ಬೇರೆ ಮೂಲಗಳಿಂದ ತಿಳಿದುಕೊಂಡು ಬರೆದರೆ ಚನ್ನಾಗಿರುತ್ತದೆ. ಅದು ಬಿಟ್ಟು “ನೀವೇನು ಮಾಡಿದ್ದೀರಿ? ಏನು ಸಾಧಿಸಿದ್ದೀರಿ?” ಎಂದು ಅವರನ್ನೇ ಕೇಳಿ ಅವರ ಬಗ್ಗೆ ಬರೆಯುವದು ನಮಗೆ ಅಭಾಸವೆನಿಸುತ್ತದೆ ಹಾಗೂ ಅವರಿಗೆ ಮುಜುಗುರವಾಗುತ್ತದೆ. ಹೀಗಾಗಿ ಆ ಯೋಚನೆಯನ್ನು ಕೈ ಬಿಟ್ಟು ಅವರ ಬ್ಲಾಗಲ್ಲಿ ಪ್ರಕಟವಾದ ಅವರ ಬರಹಗಳ ಆಧಾರದ ಮೇಲೆ ಅವರು ಎಂಥವರು ಎಂದು ಊಹಿಸುತ್ತಾ (ತಪ್ಪಿದ್ದರೆ ಅವರ ಕ್ಷಮೆ ಕೋರುತ್ತಾ) ಬರೆಯಬಲ್ಲೆ ಎಂದುಕೊಂಡೆ. ಎಷ್ಟೇ ಆಗಲಿ ನಮ್ಮ ಬರಹಗಳು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತವಲ್ಲವೆ?
ಶಿವು ಒಬ್ಬ ಸ್ನೇಹ ಜೀವಿ. ಅದಕ್ಕೆ ಸಾಕ್ಷಿ ಅವರ ಬ್ಲಾಗಿನಲ್ಲಿ ಬರುವ ಕಾಮೆಂಟುಗಳ ಸಂಖ್ಯೆ. ಒಂದೊಂದು ಸಾರಿ ಅದು ನೂರನ್ನೂ ದಾಟುತ್ತದೆ. ಅಷ್ಟೂ ಜನಕ್ಕೆ ತಾಳ್ಮೆಯಿಂದ ಉತ್ತರಿಸುತ್ತಾರೆ. ಅಷ್ಟೇ ಅಲ್ಲದೆ ಅವರು ನಿರ್ವಹಿಸುವ ಬ್ಲಾಗುಗಳ ಸಂಖ್ಯೆಯೂ ದೊಡ್ಡದಿದೆ. ಅವರೆಲ್ಲರ ಬ್ಲಾಗಿನೊಳಕ್ಕೆ ನುಗ್ಗಿ ಅಲ್ಲೊಂದು ಕಾಮೆಂಟು ಬರೆಯುತ್ತಾರೆ. ಬರೆಯದೇ ಇದ್ದರೆ ಏಕೆ ಬರೆದಿಲ್ಲವೆಂದು ಕೇಳುತ್ತಾರೆ? ಬರೆಯುವಂತೆ ಹುರಿದುಂಬಿಸುತ್ತಾರೆ.
ಇದೆಲ್ಲದರ ಜೊತೆಗೆ ತಮ್ಮ ಕೆಲಸದ ನಡುವೆಯೂ ತಮ್ಮ ಫೋಟೋಗ್ರಫಿಗೆ ಯಾವ ವಸ್ತು ಸಿಗಬಹುದೆಂದು ಹುಡುಕಿ ಹೊರಡುತ್ತಾರೆ. ಅದು ಹೇಗಿರುತ್ತದೆಂದು ಅವರ ಮಾತಲ್ಲೇ ಕೇಳಿ....
“ನನ್ನ ಕೈಯಲ್ಲಿರುವ ಪೆನ್ನು "ಕನ್ನಡಪ್ರಭ” ದಿನಪತ್ರಿಕೆಯ ಮೊತ್ತವನ್ನು ಪೇಪರ್ ಬಿಲ್ಲಿನಲ್ಲಿ ಬರೆಯುತ್ತಿದ್ದರೂ ನನ್ನ ಕಣ್ಣು ಮಾತ್ರ ಆ ಗಿಡದ ಕಡೆಗಿತ್ತು. ಮತ್ತೇನಿಲ್ಲಾ ಸುಮ್ಮನೇ ಕುತೂಹಲ! ನಾನು ಯಾವುದೆ ಮನೆಯ ಬಾಗಿಲಿನ ಮುಂದೆ ನಿಂತರೂ ಅವರು ಮನೆಯ ಮುಂದೆ ವರಾಂಡದಲ್ಲಿ, ಕುಂಡಗಳಲ್ಲಿ ಹಾಕಿರುವ ಹೂವಿನ ಗಿಡಗಳ ಕಡೆ ಕಣ್ಣು ವಾಲಿರುತ್ತದೆ.
ಗಿಡಗಳಲ್ಲಿರುವ ಹೂಗಳಿಗಿಂತ ಅದರ ಎಲೆಗಳು ನನ್ನನ್ನೂ ಹೆಚ್ಚಾಗಿ ಸೆಳೆಯುತ್ತವೆ. ಅದರಲ್ಲೂ ಅಂಗವಿಕಲ ಎಲೆಗಳು!! ಒಂದೆರಡು ಎಲೆಗಳು ಈ ರೀತಿ ಯಾವುದೇ ಗಿಡದಲ್ಲಿದ್ದರೂ ನನ್ನ ಕುತೂಹಲ ಬೆರಗಿನಿಂದ ಹೆಚ್ಚಾಗುತ್ತದೆ. ಹತ್ತಿರ ಹೋಗಿ ಎಲೆಯ ಕೆಳಬಾಗದಲ್ಲಿ ನೋಡಿದರೆ ಯಾವುದಾದರೂ ಒಂದು ಹುಳು [ಕ್ಯಾಟರ್‌ಪಿಲ್ಲರ್] ಅದೇ ಎಲೆಯನ್ನೇ ತಿನ್ನುತ್ತಿರುತ್ತದೆ.ಇಷ್ಟಾದರೇ ಸಾಕು.....ಅಲ್ಲಿಂದ ಶುರುವಾಗುತ್ತದೆ ನನ್ನ ಹೊಸ ಅಸೈನ್ಮೆಂಟ್! ಮನೆಗೆ ಬಂದು ನನ್ನ ಬಳಿ ಇರುವ ಹುಳುಗಳ ಪುಸ್ತಕಗಳಿಂದ ಗಿಡದ ಹೆಸರು, ಹುಳುವಿನ ಬಣ್ಣ ಆಕಾರ ನೋಡಿ ತಿಳಿದ ಮಾಹಿತಿಯಿಂದ ನನ್ನ ಕ್ಯಾಮೆರಾ ಜಾಗ್ರುತವಾಗುತ್ತದೆ.”
ಇನ್ನು ಅವರ ಕೆಲಸದ ಶ್ರದ್ಧೆ ಹೇಗಿದೆ ಎಂದು ಒಮ್ಮೆ ನೋಡಿ...........
“ಹೀಗೆ ಗಮನ ಸೆಳೆದ ಆ ಮನೆಯ ಕಾಂಪೌಂಡಿನಲ್ಲೇ ಬೆಳೆದಿದ್ದ ನುಗ್ಗೆ ಎಲೆಯಷ್ಟೆ ಚಿಕ್ಕದಾದ ಹಸಿರೆಲೆಗಳನ್ನು ತನ್ನ ಕಾಂಡಗಳ ತುಂಬಾ ತುಂಬಿಕೊಂಡಿದ್ದ ಆ ಮನೆಯವರು ನನ್ನ ಕೈಯಿಂದ ರಸೀತಿ ಪಡೆಯುವಾಗ ನನ್ನ ಗಮನ ಸೆಳೆದಿತ್ತು ಆ ಮುಳ್ಳಿನ ಗಿಡ. ಹಣ ತರಲು ಒಳಹೋದ ಮೇಲೆ ನಾನು ಕೆಳಗೆ ಕುಳಿತು ನಿಧಾನವಾಗಿ ನೋಡಿದರೆ ಹಸಿರು ಬಣ್ಣದ ಹತ್ತಾರು ಹುಳುಗಳು ಗಿಡದ ಎಲೆಗಳ ಮೇಲೆ ಕೆಳಗೆ ಬಸವನ ಹುಳುವಿನ ವೇಗದಲ್ಲಿ ಹರಿದಾಡುತ್ತಾ ಅದೇ ಎಲೆಗಳನ್ನೇ ತಿನ್ನುತ್ತಿವೆ. ತಕ್ಷಣ ನೋಡಿದರೆ ಎಲೆಯಾವುದು ಹುಳುಯಾವುದು ಎಂದು ಗೊತ್ತಾಗದ ಹಾಗೆ ಎಲೆಗಳ ಜೊತೆಗೆ ಕೋಮೊಪ್ಲೇಜ್ ಆಗಿವೆ. ಇದು ಅವುಗಳ ಪ್ರೆಡೇಟರುಗಳಾದ, ಜೇಡ, ಪ್ರೈಯಿಂಗ್ ಮ್ಯಾಂಟಿಸ್, ದುಂಬಿಗಳು, ಮತ್ತು ಇತರ ಪಕ್ಷಿಗಳಿಂದ ರಕ್ಷಿಸಿಕೊಳ್ಳಲು ದೇವರ ಸಹಜ ಸೃಷ್ಟಿ!!”
ಸ್ರಜನಶೀಲ ಕೆಲಸವೆಂದರೆ ಇದೇ ಅಲ್ಲವೆ? ಅವರು ಅದನ್ನು ಸ್ರಜನಶೀಲವನ್ನಾಗಿಸಲು ಎಷ್ಟೊಂದು ಕಷ್ಟಪಡುತ್ತಾರಲ್ಲವೆ? ಹಾಗೆಂದೇ ಅವರನ್ನು ಪ್ರಶಸ್ತಿಗಳು ಬೆನ್ನಟ್ಟಿ ಬರುತ್ತವೆ. ಮತ್ತಷ್ಟು ತಿಳಿಯಲು ಹಾಗೂ ಅವರ ಕ್ಯಾಮರಾ ಕಣ್ಣಲ್ಲಿ ಸೆರೆ ಸಿಕ್ಕ ಅತಿ ಸುಂದರ ಚಿತ್ರಗಳನ್ನು ನೋಡಲು ಅವರ ಬ್ಲಾಗಿಗೊಮ್ಮೆ http://chaayakannadi.blogspot.com/ ಭೇಟಿ ಕೊಡಿ.
ಸಮಾನ ವಯಸ್ಸಿನವರು, ಸಮಾನ ಮನಸ್ಕಿನವರು ಕೂಡಿದರೆ ಏನೆಲ್ಲ ಸಾಧಿಸಬಹುದು ಎನ್ನುವದಕ್ಕೆ ಶಿವು, ಮತ್ತವರ ಆಪ್ತ ಸ್ನೇಹಿತ ಮಲ್ಲಿಕಾರ್ಜುನವರೇ ಸಾಕ್ಷಿ! ಶಿವು ಒಟ್ಟಿಗೆ ಮಲ್ಲಿಕಾರ್ಜುನವರು ಸಹ ಈ ಬಾರಿಯ ಲಡನ್ನಿನ ಪ್ರತಿಷ್ಟಿತ ದಿ ರಾಯಲ್ ಫೋಟೋಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ (Associate) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇಬ್ಬರು ಸ್ನೇಹಿತರು ಒಟ್ಟಿಗೇ ಪ್ರಶಸ್ತಿ ಪಡೆಯುವದು ತುಂಬಾ ವಿರಳ. ಆದರೆ ಇವರಿಬ್ಬರ ವಿಷಯದಲ್ಲಿ ಅದು ಸತ್ಯವಾಗಿದೆ! ಚಿಕ್ಕಬಳ್ಳಾಪೂರದ ಶಿಡ್ಲಘಟ್ಟದವರಾದ ಮಲ್ಲಿಕಾರ್ಜುನವರಿಗೆ ಮೊದಲಿನಿಂದಲೂ ಫೋಟೋಗ್ರಾಫಿಯತ್ತ ಒಲವು. ಹಕ್ಕಿಗಳ ಬದುಕಿನ ರೀತಿ, ಅವುಗಳ ಪ್ರೇಮಸಲ್ಲಾಪವನ್ನು ಗಂಟೆಗಟ್ಟಲೆ ತಾಳ್ಮೆಯಿಂದ ಕಾಯ್ದು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಅವುಗಳೆಲ್ಲವನ್ನು ಅವರ ಬ್ಲಾಗಿನಲ್ಲಿ http://dgmalliphotos.blogspot.com/ ನೋಡಬಹುದು.
ಶಿವು ಅವರಂತೆ ಇವರಿಗೂ ತಮ್ಮ ಕೆಲಸದಲ್ಲಿ ವಿಶೇಷ ಆಸಕ್ತಿ ಶ್ರದ್ಧೆ ಇದೆ. ತಮ್ಮ ದಿನನಿತ್ಯದ ಜಂಜಾಟಗಳ ನಡುವೆಯೂ ಹಕ್ಕಿಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯಲು ಬೆನ್ನಟ್ಟಿ ಹೋಗುತ್ತಾರೆ. ಈ ಅನುಭವಗಳನ್ನು ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ. ಒಮ್ಮೆ ಓದಿ......
“ದೊಡ್ಡಬಳ್ಳಾಪೂರ ಹತ್ತಿರವಾಗುತ್ತಿತ್ತು. ಕಿರ್ ಕಿರ್ರೋ ಎಂದು ಶಬ್ದ ಮಾಡುತ್ತಾ ಹಕ್ಕಿಗಳು ಹಾರಿ ರಸ್ತೆಯ ಎಡದ ಮರದಿಂದ ಬಲದ ಮರಕ್ಕೆ ಹಾರಿದ್ದು ಕಾಣಿಸಿತು. ತಕ್ಷಣ ಕಾರನ್ನು ರಸ್ತೆ ಬದಿ ನಿಲ್ಲಿಸಿದೆ. ನೋಡಿದರೆ ಮರದ ಮೇಲೆ ಜೋಡಿ ಹಕ್ಕಿಗಳು ಕೂತಿವೆ..............
ಫೋಟೊ ತೆಗೆದು ದೇವಸ್ಥಾನದ ಬಾಗಿಲು ಹಾಕಿದರೆ ಕಷ್ಟ ಎಂದುಕೊಂದು ಹೊರಟೆವು”
ಇದಲ್ಲದೆ ಇವರಿಗೆ ಸಾಹಿತ್ಯದಲ್ಲೂ ವಿಶೇಷ ಆಸಕ್ತಿ! ಪ್ರಸಿದ್ಧ ಸಾಹಿತಗಳ ಫೋಟೊಗಳನ್ನು ತೆಗೆದು ಅವರ ಹಸ್ತಾಕ್ಷರ ಸಮೇತ ಅವುಗಳನ್ನು ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದಾರೆ.
ಕ್ರಪಾಕರ ಸೇನಾನಿಯ ನಂತರ ಈ ಜೋಡಿಗಳನ್ನು ಫೋಟೋಗ್ರಾಫಿಯ “ಹಕ್ಕ ಬುಕ್ಕ” ರೆಂದೇ ಕರೆಯುತ್ತಾರೆ. ಈ ಹಕ್ಕ ಬುಕ್ಕರನ್ನು ಮತ್ತಷ್ಟು ಪ್ರಶಸ್ತಿಗಳು ಹುಡುಕಿಕೊಂಡು ಬರಲಿ, ಹಾಗೂ ಅವರ ಸಾಧನೆ ಹೀಗೆ ಮುಂದುವರೆಯಲಿ ಎಂದು ಹಾರೈಸುತ್ತಾ ಅವರಿಗೆ ಎಲ್ಲ ಬ್ಲಾಗಿಗರ ಪರವಾಗಿ ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
-ಉದಯ ಇಟಗಿ
ಕ್ರುಪೆ: 1) http://avadhi.wordpress.com/
2) http://chaayakannadi.blogspot.com/
3) http://dgmalliphotos.blogspot.com/
ಆಚಾರ್ಯರ ಪುಣ್ಯಾರಾಧನೆ
18 ಗಂಟೆಗಳ ಹಿಂದೆ
7 ಕಾಮೆಂಟ್(ಗಳು):
ಶಿವು ಮತ್ತು ಮಲ್ಲಿಕಾರ್ಜುನರ ಬಗೆಗೆ ಚೆನ್ನಾಗಿ ಬರೆದಿದ್ದೀರಿ.
ನಿಮಗೆ ಹಾಗೂ ಅವರಿಬ್ಬರಿಗೆ ಅಭಿನಂದನೆಗಳು.
ಸುನಾಥ್ ಸರ್,
ನಮ್ಮ ಜೊತೆಯಲ್ಲಿರುವವರು ಇಷ್ಟೊಂದು ದೊಡ್ದಮಟ್ಟದ ಸಾಧನೆ ಮಾಡಿದಾಗ ಅವರ ಬಗ್ಗೆ ಬರೆಯುವದು ನಮ್ಮ ಕರ್ತವ್ಯ ಹಾಗೂ ಸೌಜನ್ಯ! ಹಾಗೆಂದೆ ಅವರ ಬಗ್ಗೆ ಬರೆದೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಉದಯ್
ಬಹಳ ಚೆನ್ನಾಗಿ ಈ ಲೇಖನವನ್ನು ಸಿದ್ಧಪಡಿಸಿರುವಿರಿ. ಎಷ್ಟೊಂದು ಸೂಕ್ಷ್ಮವಾಗಿ ಅವರ ಬ್ಲಾಗ್ ಮತ್ತು ಮಾತುಗಳನ್ನು ಗಮನಿಸುತ್ತಾ ವ್ಯಕ್ತಿಚಿತ್ರ ರೂಪಿಸಿರುವಿರಿ.ಓದಿ ಬಹಳ ಸಂತಸವಾಯಿತು.
ಥ್ಯಾಂಕ್ಸ್ ಮೇಡಂ,
ಜೊತೆಯವರು ದೊಡ್ಡ ಸಾಧನೆ ಮಾಡಿದಾಗ ಅವರ ಬಗ್ಗೆ ಅಷ್ಟು ಬರೆಯದೇ ಹೋದರೆ ಹೇಗೆ?
ಈ ಮೂಲಕ ಅವರಿಬ್ಬರಿಗೂ ಅಭಿನಂದನೆಗಳನ್ನು ಅರ್ಪಿಸುತ್ತೇನೆ.
ಉತ್ತಮ ಲೇಖನ, ಶಿವೂ ಮತ್ತು ಮಲ್ಲಿ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಅವರಿಬ್ಬರಿಗೂ ಅಭಿನ೦ದನೆಗು, ಲೇಖನ ಬರೆದ ನಿಮಗೂ ನನ್ನ ವ೦ದನೆಗಳು
ಉದಯ್ ಅವರೆ,
ನಿಜವಾಗಿಯೂ ಇವರು ಹೊನ್ನ ಕಿರೀಟದಂತಹ ಪ್ರಶಸ್ತಿಗೆ ಅರ್ಹರಾದವರು. ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಆಸಕ್ತಿಯಿಂದ ಪ್ರಕೃತಿಯನ್ನು ವೀಕ್ಷಿಸಿ, ಅಭ್ಯಸಿಸಿ ಶ್ರಮಪಟ್ಟಿದ್ದಕ್ಕೇ ಇಂದು ಪ್ರಶಸ್ತಿ ಅವರನ್ನು ಅರಸಿಬಂದಿದೆ. ಮಲ್ಲಿಕಾರ್ಜುನರಿಗೆ ಹಾಗೂ ಶಿವು ಅವರಿಗೆ ಹಾರ್ದಿಕ ಅಭಿನಂದನೆಗಳು. ಇವರ ಸಾಧನೆಯನ್ನು ಗುರುತಿಸಿ ಅಭಿನಂದಿಸಿದ ನಿಮಗೂ ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ