Demo image Demo image Demo image Demo image Demo image Demo image Demo image Demo image

ಒಂದು ಕಾಲದಲ್ಲಿ....

  • ಸೋಮವಾರ, ಏಪ್ರಿಲ್ 27, 2009
  • ಬಿಸಿಲ ಹನಿ
  • ಮಗನೆ, ಒಂದು ಕಾಲದಲ್ಲಿ
    ಜನ ಮನಬಿಚ್ಚಿ ನಗುತ್ತಿದ್ದರು
    ಅದು ಅವರ ಕಂಗಳಲ್ಲಿ ಹೊಳೆಯುತ್ತಿತ್ತು.
    ಆದರೀಗ ಬರಿ ಹಲ್ಲುಬೀರಿ ನಗುತ್ತಾರೆ
    ಹಾಗೆ ನಗುವಾಗ ಅವರ ಶೀತಲ ಕಂಗಳು
    ನನ್ನ ನೆರಳ ಹಿಂದೆ ಏನನ್ನೋ ಹುಡುಕುತ್ತಿರುತ್ತವೆ.

    ನಿಜಕ್ಕೂ ಒಂದು ಕಾಲವಿತ್ತು
    ಅಲ್ಲಿ ಜನ ಮನಃಪೂರ್ವಕವಾಗಿ ಕೈ ಕುಲುಕುತ್ತಿದ್ದರು.
    ಆದರೀಗ ಅದು ಕಾಣೆಯಾಗಿದೆ ಮಗನೆ.
    ಈಗ ಮನಸ್ಸಿಲ್ಲದೆ ಬರಿ ಕೈಯನಷ್ಟೆ ಕುಲುಕುತ್ತಾರೆ
    ಹಾಗೆ ಕುಲುಕುವಾಗ ಅವರ ಎಡಗೈ
    ನನ್ನ ಖಾಲಿ ಜೇಬನ್ನು ಬಡಿದು ನೋಡುತ್ತದೆ.

    ಅವರು ಹೇಳುತ್ತಾರೆ
    “ಇದು ನಿಮ್ಮ ಮನೆಯಿದ್ದಂತೆ”, “ಪುನಃ ಬನ್ನಿ”.
    ನಾನು ಪುನಃ ಅವರ ಮನೆಗೆ ಹೋಗುತ್ತೇನೆ
    ನಮ್ಮದೇ ಮನೆ ಎಂದುಕೊಳ್ಳುತ್ತೇನೆ
    ಒಂದು ಸಾರಿ, ಎರಡು ಸಾರಿ.
    ಮೂರನೆಯ ಸಾರಿ ಸಾಧ್ಯವೇ ಇಲ್ಲ!
    ಅದಾಗಲೆ ಬಾಗಿಲು ಮುಚ್ಚಿಬಿಟ್ಟಿರುತ್ತದೆ.

    ನಾನೀಗ ಬಹಳಷ್ಟು ಸಂಗತಿಗಳನ್ನು ಕಲಿತುಕೊಂಡಿದ್ದೇನೆ, ಮಗನೆ!
    ಬೇರೆ ಬೇರೆ ಬಟ್ಟೆಗಳನ್ನು ಧರಿಸುವದನ್ನು ಕಲಿತಂತೆ
    ಬೇರೆ ಬೇರೆ ಮುಖಭಾವಗಳನ್ನು ಧರಿಸುವದನ್ನು ಸಹ.
    ಮನೆಯಲ್ಲೊಂದು ಮುಖಭಾವ! ಆಫೀಸಿನಲ್ಲೊಂದು ಮುಖಭಾವ!
    ಬೀದಿಯಲ್ಲೊಂದು ಮುಖಭಾವ! ಅತಿಥಿಗಳಿಗೊಂದು ಮುಖಭಾವ!
    ವಿವಿಧ ನಗೆಗಳೊಂದಿಗೆ ವಿವಿಧ ಮುಖಭಾವ!
    ಇದೀಗ ನಗುತ್ತಲೇ ಇರುತ್ತೇನೆ ಸದಾ ನಗುವ ಚಿತ್ರಪಟದಂತೆ!

    ಈಗ ನಾನೂ ಸಹ ಕಲಿತಿದ್ದೇನೆ
    ಬರಿ ಹಲ್ಲುಬೀರಿ ನಗುವದನ್ನು
    ಹಾಗೂ ಮನಸ್ಸಿಲ್ಲದೆ ಕೈ ಕುಲುಕುವದನ್ನು!
    “ಪೀಡೆ ತೊಲಗಿದರೆ ಸಾಕು” ಎಂದು ಕಾಯ್ದು
    ಕೊನೆಯಲ್ಲಿ “ಒಳ್ಳೆಯದು: ಹೋಗಿ ಬಾ” ಎಂದು ಮುಗುಳುನಗೆ ಬೀರುವದನ್ನು!
    ಹರ್ಷವಾಗಿರದಿದ್ದರೂ “ನಿಮ್ಮನ್ನು ಭೇಟಿಯಾಗಲು ಹರ್ಷಿಸುತ್ತೇನೆ!” ಎಂದು ಉದ್ಗರಿಸುವದನ್ನು!
    ಹಾಗೂ ಮಾತನಾಡಿ ಬೇಸರವಾಗಿದ್ದರೂ ಸಹ
    “ನಿಮ್ಮೊಂದಿಗೆ ಮಾತನಾಡಿದ್ದು ಖುಶಿಯಾಯಿತು” ಎಂದು ಹೇಳುವದನ್ನು!

    ಮಗನೆ, ನನ್ನ ನಂಬು
    ನಿನ್ನಂತಿರಬೇಕಾದರೆ ನಾನು ಏನಾಗಿದ್ದೆನೋ
    ಮತ್ತೆ ಅದಾಗ ಬಯಸುವೆ.
    ಇನ್ನಾದರು ಸತ್ತ ಭಾವಗಳೊಂದಿಗೆ ಬದುಕುವದನ್ನು ಬಿಟ್ಟು
    ಬಹಳಷ್ಟನ್ನು ನಾನು ಮತ್ತೆ ಕಲಿಯಬೇಕಿದೆ
    ಹೇಗೆ ಬದುಕಬೇಕೆಂಬುದನ್ನು? ಹೇಗೆ ನಗಬೇಕೆಂಬುದನ್ನು?
    ಏಕೆಂದರೆ ಕನ್ನಡಿಯಲ್ಲಿನ ನನ್ನ ನಗು
    ಹಾವಿನ ವಿಷದ ಹಲ್ಲುಗಳಂತೆ
    ನನ್ನ ವಿಷದ ಹಲ್ಲುಗಳನಷ್ಟೇ ತೋರಿಸುತ್ತದೆ.

    ಅದಕ್ಕೆ ಮಗನೆ, ಮತ್ತೆ ತೋರಿಸುಕೊಡು
    ಹೇಗೆ ನಗಬೇಕೆಂಬುದನ್ನು.
    ಹೇಳಿಕೊಡು ಒಂದುಕಾಲದಲ್ಲಿ
    ನಿನ್ನಂತಿರಬೇಕಾದರೆ
    ಹೇಗೆ ನಗುತ್ತಿದ್ದೆನೆಂದು?
    ಹೇಗೆ ನಗುತ್ತಿದ್ದೆನೆಂದು?

    ಇಂಗ್ಲೀಷ ಮೂಲ: ಗೇಬ್ರಿಯಲ್ ಒಕಾರಾ
    ಕನ್ನಡಕ್ಕೆ: ಉದಯ ಇಟಗಿ
    ಚಿತ್ರ ಕೃಪೆ: http://www.flickr.com/ awe2020

    19 ಕಾಮೆಂಟ್‌(ಗಳು):

    PARAANJAPE K.N. ಹೇಳಿದರು...

    chennagide, katu vaasthava

    ಬಿಸಿಲ ಹನಿ ಹೇಳಿದರು...

    ಥ್ಯಾಂಕ್ಸ್ ಪರಾಂಜಪೆಯವರೆ.

    ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

    ನಿಜ ಸರ್,
    ಈ ಕವನ ನಮಗೂ ಅನ್ವಯಿಸುತ್ತೆ. ಹಾಗಾಗಿ ಅನುವಾದ ಎಂದನಿಸುವುದಿಲ್ಲ. ಮಗುವಿನಿಂದ ಕಲಿಯಬೇಕಿದೆ. ಇಲ್ಲದಿದ್ದರೆ ಮುಖವಾಡ ಮುಗಿಸಿಹಾಕುತ್ತದೆ.

    Unknown ಹೇಳಿದರು...

    ಉದಯ್ ಇದು ನಾಗರೀಕ ಎನಿಸಿಕೊಂಡವರೆಲ್ಲರ ಕವಿತೆಯೂ ಹೌದು!

    ಹಾಗೆ ಕುಲುಕುವಾಗ ಅವರ ಎಡಗೈ
    ನನ್ನ ಖಾಲಿ ಜೇಬನ್ನು ಬಡಿದು ನೋಡುತ್ತದೆ. ಈ ಸಾಲುಗಳಲ್ಲಿರುವ ನಿಷ್ಠುರ ಸತ್ಯವನ್ನು ಇವತ್ತಿನ ವ್ಯಾಪಾರೀ ಜಗತ್ತಿನ ಯಾರೂ ನಿರಾಕರಿಸಲಾರರು. ಆದರೆ ಮತ್ತೆ ನಿಜವಾದ ನಗು ನಗಬೇಕು ಎನ್ನುವ ತುಡಿತ ಮಾನವನ ನಾಗಾರೀಕತೆಯಲ್ಲಿ ಸ್ಥಾಯಿಯಾಗಿರುವ ಸಹಜಮಾನವೀಯತೆಯನ್ನು ಎತ್ತಿ ತೋರಿಸುತ್ತದೆ.

    ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ. ಇಂತಹದೊಂದು ಕವಿತೆಯನ್ನು ಬೇರೆಯ ಭಾಷೆಯಲ್ಲಿ ಓದುತ್ತೇನೆ ಎಂಬ ಯಾವ ನಂಬಿಕೆಯೂ ನನಗಿಲ್ಲದಿರುವಾಗ, ಅದನ್ನು ನನ್ನ ನುಡಿಯಲ್ಲಿ ಮತ್ತೆ ಮತ್ತೆ ಓದಲು ಅವಕಾಶ ಮಾಡಿಕೊಟ್ಟಿದ್ದಕ್ಕೆ.

    ಸಾಗರದಾಚೆಯ ಇಂಚರ ಹೇಳಿದರು...

    ನಿಜಕ್ಕೂ ಒಪ್ಪುವನ್ತಾದ್ದೆ, ಒಳ್ಳೆಯ ಕವನ, ಹೀಗೆಯೇ ಬರೆಯುತ್ತಿರಿ

    ಚಂದಿನ ಹೇಳಿದರು...

    ನಿಜವಾಗಲೂ ಇದು ವಾಸ್ತವಕ್ಕಿಡಿದ ಕನ್ನಡಿ,
    ಮುಗ್ಧ, ಸ್ವಚ್ಛಂದ ನಗು ಮಕ್ಕಳಲ್ಲಿ ಕಾಣಲು
    ಹಾಗು ಅವರಿಂದ ಕಲಿಯಲು ಸಾಧ್ಯ.

    -ಚಂದಿನ

    ಶಿವಪ್ರಕಾಶ್ ಹೇಳಿದರು...

    ತುಂಬಾ ಚನ್ನಾಗಿದೆ..
    ಜನ ಬರಿ fake smile, ಕಾಟಾಚಾರಕ್ಕೆ hand-shake ಮಾಡ್ತಾರೆ.
    ಪ್ರತಿಯೊಂದು ಸಾಲು ಅವರ ತಪ್ಪನ್ನು ಬಿಂಬಿಸುವಂತಿದೆ..

    ಬಿಸಿಲ ಹನಿ ಹೇಳಿದರು...

    ಪ್ರೀತಿಯ ಮಲ್ಲಿಕಾರ್ಜುನವರೆ,
    ನೀವು ಹೇಳಿದಂತೆ ಮಗುವಿನ ಮನಸ್ಸು ಮತ್ತು ಆ ನಗು ನಮಗೆ ಬರಲು ಸಾಧ್ಯವೆ? ಮುಖವಾಡದ ಬದುಕು ನಮ್ಮನ್ನು ಮುಗಿಸಿಹಾಕುವದರಲ್ಲಿ ಸಂಶಯವೇ ಇಲ್ಲ!
    ಅನುವಾದ ಮೆಚ್ಚಿದ್ದಕ್ಕೆ ಧನ್ಯವಾದಗಳು.

    ಬಿಸಿಲ ಹನಿ ಹೇಳಿದರು...

    ಸತ್ಯನಾರಾಯಣವರೆ,
    ಈ ಕವನ ನಾಗರಿಕ ಸಮಾಜದ ಟೊಳ್ಳು ಸಂಸ್ಕೃತಿಯನ್ನು ಧ್ವನಿಸುವದರ ಜೊತೆಗೆ ಮುಖವಾಡದ ಬದುಕು ಎಷ್ಟೊಂದು ಹಿಂಸೆಯನ್ನು ನೀಡುತ್ತದೆ? ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ.
    ನನ್ನ ಅನುವಾದವನ್ನು ಮೆಚ್ಚಿ ಮಾತನಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್!

    ಬಿಸಿಲ ಹನಿ ಹೇಳಿದರು...

    ಗುರುಮೂರ್ತಿ, ಚಂದಿನ ಹಾಗು ಶಿವಪ್ರಕಾಶ್‍ವರಿಗೆ ನನ್ನ ಅನುವಾದವನ್ನು ಮೆಚ್ಚಿಕೊಂಡಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್!

    sunaath ಹೇಳಿದರು...

    ಸುಂದರವಾದ ಕವನಗಳನ್ನು ಅಷ್ಟೇ ಸುಂದರವಾಗಿ ಕನ್ನಡಕ್ಕೆ ತರುತ್ತಿದ್ದೀರಿ. ನಿಮಗೆ ಎಷ್ತು ಧನ್ಯವಾದ ಹೇಳಿದರೂ ಸಾಲದು.

    ಬಿಸಿಲ ಹನಿ ಹೇಳಿದರು...

    Thank you Sunaath sir.

    ಧರಿತ್ರಿ ಹೇಳಿದರು...

    ನಮ್ ಅದೃಷ್ಟ ಸರ್..ಎಂತೆಂಥ ಸುಂದರ ಕವನಗಳನ್ನು ಕನ್ನಡಕ್ಕೆ ತಂದು ನಮಗೂ ಉಣಬಡಿಸುತ್ತೀರಿ. ಧನ್ಯವಾದಗಳು ಸರ್.
    -ಧರಿತ್ರಿ

    ಬಿಸಿಲ ಹನಿ ಹೇಳಿದರು...

    Thank you Dharitri.

    Unknown ಹೇಳಿದರು...

    ಸೂಪರ್ ಸಾರ್, ಮೊದಲ ಬಾರಿ ನಿಮ್ಮ ಬ್ಲಾಗ್ ಗೆ ಭೇಟಿ ಕೊಟ್ಟು ಏನಿದೆ ನೋಡೋಣ ಅಂದುಕೊಂಡೆ... ನಿರಾಸೆಯಾಗಲಿಲ್ಲ... ನಾನು ಇಂಗ್ಲಿಷ್ ಸಾಹಿತ್ಯ ಓದುವುದು ಕಮ್ಮಿ... (ಆಸಕ್ತೀನೂ ಇಲ್ಲಾ, ಅರ್ಥಾನೂ ಆಗಲ್ಲ :-) ) ನೀವು ಕನ್ನಡದಲ್ಲಿ ಅನುವಾದಿಸಿದ್ದು ಚೆನ್ನಾಗಿದೆ... ಹೀಗೆ ಬರೆಯುತ್ತಿರಿ ... ಕೈತಪ್ಪಿ ಹೋಗುತ್ತಿದ್ದ ಇಂಥ ಸಾಹಿತ್ಯ ನಮಗೂ ಲಭ್ಯವಗಿಸಿದ್ದಕ್ಕೆ ಧನ್ನ್ಯವಾದಗಳು...

    Unknown ಹೇಳಿದರು...

    "ನಾನು ಪ್ರೀತಿಸಿದರೆ", "ಹುಚ್ಚರು" ಕವನಗಳನ್ನ ಓದಿದೆ... ಚೆನ್ನಾಗಿವೆ... "ಹುಚ್ಚರು ನಮ್ಮಂತೆ ಹುಚ್ಚರಲ್ಲ ಬಿಡಿ!" ವಾಹ್.. ಎಂಥಾ ಮಾತು..

    ಬಿಸಿಲ ಹನಿ ಹೇಳಿದರು...

    ರವಿಕಾಂತ ಗೋರೆಯವರೆ,
    ಮೊಟ್ಟ ಮೊದಲಬಾರಿಗೆ ನನ್ನ ಬ್ಲಾಗಿಗೆ ಭೇಟಿ ಕೊಟ್ಟಿದ್ದೀರ. ನಿಮಗೆ ಅದ್ಭುತವಾದ ಸ್ವಾಗತವನ್ನು ಕೋರುವೆ. ನಾನು ಈಗಷ್ಟೆ ಪರಾಂಜಪೆಯವರ ಬ್ಲಾಗಿನಲ್ಲಿ ನಿಮ್ಮ ಕಾಮೆಂಟ್ ಓದಿ ಮೆಚ್ಚಿಕೊಂಡಿದ್ದೆ. ಚನ್ನಾಗಿ ಬರೆದಿದ್ದೀರಿ.
    ಇಂಗ್ಲೀಷ ಸಾಹಿತ್ಯದಲ್ಲಿ ಒಳ್ಳೊಳ್ಳೆ ಕವನಗಳಿವೆ. ಅವನ್ನೆಲ್ಲ ನಿಧಾನವಾಗಿ ಕನ್ನಡಕ್ಕೆ ತರುವ ಪ್ರಯತ್ನ ಮಾಡುವೆ. "ಹುಚ್ಚರು" ಮತ್ತು "ನಾನು ಪ್ರೀತಿಸಿದರೆ" ಕವನಗಳನ್ನು ಮೆಚ್ಚಿಕೊಂಡಿದ್ದಕ್ಕೆ ತುಂಬಾ ಥ್ಯಾಂಕ್ಸ್! ಭೇಟಿ ಕೊಡುತ್ತಿರಿ.

    guruve ಹೇಳಿದರು...

    ಬಹಳ ಚೆನ್ನಾಗಿದೆ..

    ಬಿಸಿಲ ಹನಿ ಹೇಳಿದರು...

    ಗುರುಪ್ರಸಾದವರೆ,
    ನನ್ನ ಬ್ಲಾಗಿಗೆ ನಿಮ್ಮದು ಮೊದಲ ಭೇಟಿ. ನಿಮಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು.