Demo image Demo image Demo image Demo image Demo image Demo image Demo image Demo image

ಅಪ್ಪ

  • ಶುಕ್ರವಾರ, ಜೂನ್ 19, 2009
  • ಬಿಸಿಲ ಹನಿ
  • ಅಪ್ಪ ಎಂದರೆ ಪ್ರೀತಿ, ಅಪ್ಪ ಎಂದರೆ ವಾತ್ಸಲ್ಯ, ಅಪ್ಪ ಎಂದರೆ ಆಸರೆ, ಅಪ್ಪ ಎಂದರೆ ನೆರಳು, ಅಪ್ಪ ಎಂದರೆ ಸ್ಪೂರ್ತಿ, ಅಪ್ಪ ಎಂದರೆ ನೆನಪುಗಳ ಆಗರ, ಅಪ್ಪ ಎಂದರೆ ಕನಸುಗಳನ್ನು ಕಟ್ಟಿ ಕೊಡುವವ, ಕೊಂಡು ಕೊಡುವವ, ಅಪ್ಪ ಎಂದರೆ ಒಂದು ಸಣ್ಣ ಗದರಿಕೆಯೊಂದಿಗೆ ಪ್ರೀತಿಯ ಮಳೆಯಲ್ಲಿ ತೋಯಿಸುವವ. ಅಪ್ಪ ಎಂದರೆ ಇನ್ನೂ ಏನೇನೋ.................! ಆದರೆ ನನ್ನ ಅಪ್ಪ ಇದ್ಯಾವುದನ್ನು ನನಗೆ ಕೊಡಲಿಲ್ಲ. ದುಡಿಯದ, ಬೇಜವಬ್ದಾರಿ ನನ್ನ ಅಪ್ಪ ಹಚ್ಚನೆಯ ಬದುಕನ್ನು ಕಟ್ಟಿ ಕೊಡುವದನ್ನಾಗಲಿ ಅಥವಾ ಬೆಚ್ಚನೆಯ ಪ್ರೀತಿಯನ್ನು ಹೊದಿಸುವ ಪ್ರಯತ್ನವನ್ನಾಗಲಿ ಮಾಡಲೇ ಇಲ್ಲ. ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರ ಜಗತ್ತಿನಾದ್ಯಾಂತ ಎಲ್ಲ ಮಕ್ಕಳಿಗೆ ಅಪ್ಪ ಪ್ರೀತಿಯ ನೆನಪಾಗಿ ಉಕ್ಕಿದರೆ ನನಗೆ ಬಿಕ್ಕಾಗಿ ಕಾಡುತ್ತಾನೆ. ಆದರೂ ಅವನನ್ನು ಅಪ್ಪ ಅಲ್ಲ ಎಂದು ಹೇಳಲಾದೀತೆ? ಅಥವಾ ಅಪ್ಪ ಇದ್ಯಾವುದನ್ನೂ ನನಗೆ ಕೊಡದೇ ಇದ್ದ ಕಾರಣಕ್ಕೆನೇ ನಾನು ಇಷ್ಟೊಂದು ಗಟ್ಟಿಯಾಗಿ ಬೆಳೆದೆನೇ? ನನಗೆ ಗೊತ್ತಿಲ್ಲ!

    ಅಪ್ಪ ಕೆಟ್ಟವನೋ, ಕೄರನೋ, ಬೇಜವಾಬ್ದಾರಿಯುತನೋ ಯಾವತ್ತಿದ್ದರೂ ಅಪ್ಪ ಅಪ್ಪನೇ! ಅವನನ್ನು ಬಿಟ್ಟುಕೊಡಲಾಗದು. ಏಕೆಂದರೆ ಈ ಸಮಾಜದಲ್ಲಿ ಅವನಿಂದಲೇ ನಮಗೊಂದು ಐಡಿಂಟಿಟಿ ಸಿಕ್ಕಿದ್ದು! ಅವನಿಂದಲೇ ನಮ್ಮ ಹುಟ್ಟಿಗೊಂದು ಮರ್ಯಾದೆ ದೊರಕಿದ್ದು! ಅವನೇ ಗೊತ್ತಿಲ್ಲದೆ ಹುಟ್ಟಿದ್ದರೆ ನಮಗೆ ಕಾಸು ಕಿಮ್ಮತ್ತು ಬೆಲೆಯೂ ಇರುತ್ತಿರಲಿಲ್ಲ ಅಲ್ಲವೆ?

    ಹಾಗಾಗಿ ಅಪ್ಪನೆಡೆಗೆ ಪ್ರೀತಿಯೋ, ಗೌರವವೋ, ಅನಾದರವೋ, ದ್ವೇಷವೋ, ತಿರಸ್ಕಾರವೋ, ಸಂಘರ್ಷವೋ ಏನೇ ಇದ್ದರೂ ಅವನನ್ನು ಅಪ್ಪ ಎಂದು ಒಪ್ಪಿ ನಡೆಯುವ ಅನಿವಾರ್ಯತೆ ಮತ್ತು ಸಾಮಾಜಿಕ ಬದ್ಧತೆ ಇದ್ದೇ ಇದೆ. ಆ ಕಾರಣಕ್ಕೆನೇ ಅವನು ನಮಗೆ ನಮ್ಮೆಲ್ಲ ದ್ವೇಷಗಳ ನಡುವೆಯೂ ಆಪ್ತವಾಗುತ್ತಾನೆ. ಅವನನ್ನೇ ಮತ್ತೆ ಮತ್ತೆ ಅಪ್ಪ ಎಂದು ಹೇಳುತ್ತಾ ಒಪ್ಪಿ ನಡೆಯುತ್ತೇವೆ. ಏಕೆಂದರೆ ಅಪ್ಪನನ್ನು ಆಯ್ಕೆ ಮಾಡಿಕೊಳ್ಳಲಾಗದು.

    ನಾಳಿದ್ದು ಭಾನುವಾರ ಅಪ್ಪಂದಿರ ದಿನ. ಆ ವಿಶೇಷ ದಿನಕ್ಕಾಗಿ ನನ್ನ ಅಪ್ಪನನ್ನು ನಾ ಕಂಡಂತೆ, ಅವನಿರುವಂತೆ ಅತ್ಯಂತ ನಿರ್ಭಿಡೆಯಿಂದ ಕವನದಲ್ಲಿ ಹಿಡಿದಿಟ್ಟಿದ್ದೇನೆ. ಈ ಹಿಂದೆ ಇದನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಲಾಗಿತ್ತು. ಆದರೆ ಅಪ್ಪಂದಿರ ವಿಶೇಷ ದಿನಕ್ಕಾಗಿ ಇದನ್ನು ಪುನರ್ ಪ್ರಕಟಿಸಲಾಗುತ್ತಿದೆ. ಸಹೃದಯವರಾದ ನೀವು ಹೇಗೆ ಸ್ಪಂದಿಸುವಿರೆಂದು ಕಾಯ್ದು ನೋಡುವೆ.

    ಅಜ್ಜ ನೆಗೆದು ಬೀಳುವ ಮೊದಲೇ
    ಅವ್ವನ್ನು ಮದುವೆಯಾಗಿ
    ಇದ್ದ ಹೊಲ ಗದ್ದೆಗಳಲ್ಲಿ
    ಮೈ ಕೈ ಕೆಸರು ಮಾಡಿಕೊಳ್ಲದೆ
    ಅವ್ವ ಮಾಡಿಕೊಟ್ಟ ಬಿಸಿ ಬಿಸಿ ರೊಟ್ಟಿಯನ್ನು
    ಗಡದ್ದಾಗಿ ತಿಂದು ತೇಗಿ
    ಎಲ್ಲ ಭಾರವನ್ನು ಅವಳ ತಲೆ ಮೇಲೆ ಹಾಕಿ
    ತಾನು ಮಾತ್ರ ಇಸ್ಪೀಟಾಡುತ್ತ
    ಹೆಸರಿಗೆ ಮಾತ್ರ ಮನೆ ಯಜಮಾನನಾದ.

    ದುಡಿಯಲು ಗೊತ್ತಿರದ ಷಂಡ
    ಮೂರು ಮಕ್ಕಳನ್ನು ಹೆತ್ತು ಗಂಡಸೆನಿಸಿಕೊಂಡ.
    ಹುಟ್ಟಿಸಿದ ಮಕ್ಕಳನ್ನೂ ಸಾಕಲಾಗದೆ
    ಅವರಿವರ(ಬಂಧುಗಳ) ಮನೆಯಲ್ಲಿ ಬಿಟ್ಟು
    ತಾನು ಮಾತ್ರ ತನ್ನದೇ ಗೂಡಿನಲ್ಲಿ
    ಹಚ್ಚಗೆ ತಿಂದು ಬೆಚ್ಚಗೆ ಮಲಗಿ
    ಅವ್ವನ ಪ್ರೀತಿಯನ್ನೂ ನಮ್ಮಿಂದ ಕಸಿದುಕೊಂಡು
    ಅವಳನ್ನೂ ತನ್ನ ಜೊತೆಯಲ್ಲಿ ನಮ್ಮ ತಿರಸ್ಕಾರಕ್ಕೆ ಗುರಿಮಾಡಿದ.

    ಅಪ್ಪ ಏನೂ ಕಿಸಿಯದಿದ್ದರೂ
    ಅವ್ವನ ಮೇಲೆ ಸದಾ ಇವನ ರುದ್ರನರ್ತನ
    ಅವ್ವ ಇವನ ಆರ್ಭಟಕ್ಕೆ ಹೆದರಿ ಹಿಕ್ಕೆ ಹಾಕುತ್ತಾ
    ಒಳಗೊಳಗೆ ಎಲ್ಲವನ್ನು ನುಂಗುತ್ತಾ ಬೇಯುತ್ತಾ
    ಹೊಲದಲ್ಲೂ ದುಡಿದು ಮನೆಯಲ್ಲೂ ಮಾಡಿ
    ಸದಾ ಇವನ ಸೇವೆಗೆ ನಿಂತಳು.

    ಹೊತ್ಹೊತ್ತಿಗೆ ಚಾ ಕುಡಿದು
    ಬುಸ್ಸ್ ಬುಸ್ಸ್ ಎಂದು ಚುಟ್ಟ ಸೇದಿ
    ಗೊರ ಗೊರ ಕೆಮ್ಮಿ
    ಮೈಯೆಲ್ಲ ಗೂರಿ ಬಂದವರ ತರ
    ಪರಾ ಪರಾ ಕೆರೆದು
    ಆಗೊಮ್ಮೆ ಈಗೊಮ್ಮೆ ಜಡ್ಡಿಗೆ ಬಿದ್ದು
    ಸತ್ಹಾಂಗ ಮಾಡಿ
    ಒಮ್ಮಿಂದೊಮ್ಮೆಲೆ ಮೇಲೆದ್ದು ಗುಟುರು
    ಹಾಕುವ ಮುದಿ ಗೂಳಿ ಇವನು.

    ಅವರಿವರ ಹಂಗಿನ ಮಾತುಗಳನ್ನು ಕೇಳುತ್ತಾ
    ಮಕ್ಕಳೆಲ್ಲ ಕಷ್ಟಬಿದ್ದು ಓದಿ ಕೈಗೆ ಬಂದ ಮೇಲೆ
    ಅರವತ್ತರ ಅರಳು ಮರಳೆಂಬಂತೆ
    ಅಥವಾ ಕೆಟ್ಟ ಮೇಲೆ ಬುದ್ಧಿ ಬಂತೆಂಬಂತೆ
    ಹೊಲಕ್ಕೆ ದುಡಿಯಲು ಹೋಗಿ "ಹೀರೋ" ಆಗಲೆತ್ನಿಸಿದ್ದೂ ಇದೆ.
    ಅಲ್ಲಿ ದುಡಿದಿದ್ದೆಷ್ಟೋ
    ಆ ಖರ್ಚು ಈ ಖರ್ಚೆಂದು
    ಮಕ್ಕಳ ಹತ್ತಿರ ಕಾಸು ಪೀಕುತ್ತ
    ಅsssಬ್ಬ ಎಂದು ಡೇಗು ಹೊಡೆದು
    ಹೊಟ್ಟೆಯ ಮೇಲೆ ಕೈಯಾಡಿಸಿಕೊಳ್ಳುವದು ಮುಂದುವರಿದೇ ಇದೆ!

    ಇದೀಗ ಯಾರಾದರು
    "ಎಲ್ಲಿ ನಿನ್ನ ಮಕ್ಕಳು?"ಎಂದು ಕೇಳಿದರೆ
    ಮೈ ಕುಣಿಸಿ ಎದೆಯುಬ್ಬಿಸಿ
    "ಇವರೇ" ಎಂದು ನಮ್ಮೆಡೆಗೆ ತೋರಿಸುತ್ತಾನೆ.
    ನಾವೂ ಅಷ್ಟೇ ಯಾರಾದರು ನಮ್ಮನ್ನು
    "ಯಾರು ನೀವು?" ಎಂದು ಕೇಳಿದರೆ
    "ಮಲ್ಲೇಶಪ್ಪನ ಮಕ್ಕಳು" ಎಂದು ಹೇಳುತ್ತೇವೆ!

    -ಉದಯ ಇಟಗಿ

    24 ಕಾಮೆಂಟ್‌(ಗಳು):

    Ittigecement ಹೇಳಿದರು...

    ಉದಯ್....

    ಅಪ್ಪನ ಇನ್ನೊಂದು ಮುಖದ ಪರಿಚಯ...
    ಯಾರೂ ಜ್ಞಾಪಕ ಮಾಡಿಕೊಳ್ಳಲೂ ಬಯಸದ ಈ ಮುಖ...

    ಒಂದು ಸ್ತರದ ಧ್ವನಿಯಾಗಿ...
    ಇಂಥಹ ಮುಖ..
    ನೆನಪಿಸಿದ್ದಕ್ಕೆ ಅಭಿನಂದನೆ ಹೇಳಲೇ...?
    ವಾಸ್ತವದ ಜಗತ್ತಿನ
    ಕಹಿಸತ್ಯದ ನೆನಪು ಬೇಡ ಅನ್ನುತ್ತದೆ ಒಳ ಮನಸ್ಸು...

    http://ittigecement.blogspot.com/2008/12/blog-post_26.html
    (ಮಿಲತೀ..ಹೇ..ಜಿಂದಗೀ...ಮೇ..ಮೊಹಬ್ಬತ್..... ಕಭಿ. .ಕಭೀ.)

    ನನ್ನ ಬ್ಲಾಗಿನ ಈ ಲೇಖನ ದಯವಿಟ್ಟು ಓದಿ...

    ಧನ್ಯವಾದಗಳು...

    shivu.k ಹೇಳಿದರು...

    ಉದಯ್ ಸರ್,

    ಅಪ್ಪನ ಬಗೆಗೆ ನಿಮ್ಮ ಆನುಭವವನ್ನು ಓದಿ ಮನಸ್ಸಿಗೆ ಬೇಸರವಾಯಿತು...

    ಕವನವೂ ಕೂಡ ಅಷ್ಟೇ ನೇರವಾಗಿದೆಯಲ್ಲಾ....

    ನಿಮ್ಮ ತಂದೆಯಿಂದ ಸಿಕ್ಕ ಬದುಕಿನ ಅನುಭವ ನಿಮಗೆ ಜೀವನಾನುಭವವನ್ನು ಮತ್ತು ಅದಕ್ಕೆ ತದ್ವಿರುದ್ದವಾಗಿ ನಿಮ್ಮ ಮಗಳಿಗೆ ರೋಲ್ ಮಾಡೆಲ್ ಆಗಿ ಬಾಳುವುದನ್ನು ಕಲಿತಿದ್ದೀರಿ..

    ಈ ದಿನ ನೀವು ಈ ರೀತಿ ನಿಮ್ಮ ಅಪ್ಪನ ಆನುಭವವನ್ನು ಹಂಚಿಕೊಳ್ಳುವುದು ನಿಮಗೆ ಅನಿವಾರ್ಯವೆನಿಸಿರಬಹುದು. ವಾಸ್ತವವನ್ನು ಹೀಗೆ ಹೇಳಿಕೊಳ್ಳುವುದರಿಂದ ಮನಸ್ಸಿಗೆ ಹಗುರಾಗಬಹುದು...ಎಂಬ ಭಾವನೆ ನನ್ನದು...ಇದಕ್ಕಿಂತ ಹೆಚ್ಚಿಗೆ ಹೇಳಲಾರೆ...

    ಧನ್ಯವಾದಗಳು.

    shivu.k ಹೇಳಿದರು...

    ಉದಯ್ ಸರ್,

    ಅಪ್ಪನ ಬಗೆಗೆ ನಿಮ್ಮ ಆನುಭವವನ್ನು ಓದಿ ಮನಸ್ಸಿಗೆ ಬೇಸರವಾಯಿತು...

    ಕವನವೂ ಕೂಡ ಅಷ್ಟೇ ನೇರವಾಗಿದೆಯಲ್ಲಾ....

    ನಿಮ್ಮ ತಂದೆಯಿಂದ ಸಿಕ್ಕ ಬದುಕಿನ ಅನುಭವ ನಿಮಗೆ ಜೀವನಾನುಭವವನ್ನು ಮತ್ತು ಅದಕ್ಕೆ ತದ್ವಿರುದ್ದವಾಗಿ ನಿಮ್ಮ ಮಗಳಿಗೆ ರೋಲ್ ಮಾಡೆಲ್ ಆಗಿ ಬಾಳುವುದನ್ನು ಕಲಿತಿದ್ದೀರಿ..

    ಈ ದಿನ ನೀವು ಈ ರೀತಿ ನಿಮ್ಮ ಅಪ್ಪನ ಆನುಭವವನ್ನು ಹಂಚಿಕೊಳ್ಳುವುದು ನಿಮಗೆ ಅನಿವಾರ್ಯವೆನಿಸಿರಬಹುದು. ವಾಸ್ತವವನ್ನು ಹೀಗೆ ಹೇಳಿಕೊಳ್ಳುವುದರಿಂದ ಮನಸ್ಸಿಗೆ ಹಗುರಾಗಬಹುದು...ಎಂಬ ಭಾವನೆ ನನ್ನದು...ಇದಕ್ಕಿಂತ ಹೆಚ್ಚಿಗೆ ಹೇಳಲಾರೆ...

    ಧನ್ಯವಾದಗಳು.

    ಬಿಸಿಲ ಹನಿ ಹೇಳಿದರು...

    ಪ್ರಕಾಶ್ ಅವರೆ,
    ನೀವು ಕೊಟ್ಟಿರುವ ಲಿಂಕನ್ನು ಓದಿದೆ. ಜೀವನದಲ್ಲಿ ಅಪ್ಪನ ಪಾತ್ರ ಬಹಳ ಮುಖ್ಯವಾದುದು. ನೀವು ಚಿಕ್ಕ ವಯಸ್ಸಿನಲ್ಲಿ ಅಪ್ಪನನ್ನು ಕಳೆದುಕೊಂಡು ಚಿಕ್ಕಪ್ಪ, ಅಕ್ಕಂದಿರ ಗರಡಿಯಲ್ಲಿ ಬೆಳೆದಿರಿ. ನಾನು ಅಪ್ಪ ಬೇಜವಾಬ್ದಾರಿಯಾಗಿದ್ದರಿಂದ ಚಿಕ್ಕಂದಿನಿಂದಲೆ ಅವನಿಂದ ದೂರವಾಗಿ ದೊಡ್ದಪ್ಪ, ಅಕ್ಕಂದಿರ ಗರಡಿಯಲ್ಲಿ ಬೆಳೆದೆ. ಇಬ್ಬರಲ್ಲೂ ಒಂದೇ ಸಾಮ್ಯತೆಯಿದೆ. ಆ ಕಾರಣಕ್ಕೆನೇ ನಾವು ಇಷ್ಟೊಂದು ಗಟ್ಟಿಯಾಗಿ ಬೆಳೆದೆವಾ? ಗೊತ್ತಿಲ್ಲ! ಚಂದ್ರಕಾಂತವರು ಹೇಳುವಂತೆ ನಮ್ಮನ್ನು ನೋವುಗಳು ರೂಪಿಸಿದಷ್ಟು ನಲಿವುಗಳು ರೂಪಿಸುವದಿಲ್ಲ. ಎಷ್ಟೊಂದು ಸತ್ಯದ ಮಾತು! ಈ ಲಿಂಕನ್ನು ಇಲ್ಲಿ ಕೊಟ್ಟು ಒಳ್ಳೆಯದು ಮಾಡಿದಿರಿ. ಬಹುಶಃ ನಾವಿಬ್ಬರು ಸಮಾನ ದುಃಖಿಗಳಾಗಿದ್ದರಿಂದ ಇನ್ನಷ್ಟು ಹತ್ತಿರವಾದೆವನಿಸುತ್ತಿದೆ.

    ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

    ಉದಯ್ ಅವರೆ...
    ‘ತಂದೆ’ ಎಂದರೆ ‘ಸರ್ವಸ್ವ’ ಎಂದುಕೊಂಡೇ ಅವರೆದೆಗೆ ಆನಿಕೊಂಡೇ , ಅವರ ಪ್ರೀತಿಯ ಸತ್ವದಲ್ಲಿ ಅವರಿಗಿಂತ ಉದ್ದಕ್ಕೆ ಬೆಳೆದೆ. ಪ್ರತಿನಿತ್ಯವೂ ನನಗೆ ಅಪ್ಪನ ದಿನವೇ. ಇವತ್ತಿಗೂ ಅಪ್ಪನ ಪ್ರೀತಿಯಿರದೇ ಬದುಕೇ ಇಲ್ಲ ಎನ್ನುವ ಮಟ್ಟಕ್ಕೆ.
    ಅಂಥ ಚೆಂದದ ‘ಅಪ್ಪ’ ಎನ್ನುವ ಸಂಬಂಧ ಹೀಗೂ ಬರಿಯ ಪದವಾಗಿ ಬಳಕೆಯಾಗಬಲ್ಲುದು, ಅದೂ ಸಹ ಒಬ್ಬ ತಂದೆಯಿಂದಾಗಿಯೇ ಎಂಬುದನ್ನು ಓದಿದಾಗ ಬಹಳ ಬೇಸರವಾಗುತ್ತಿದೆ. ನಿಮ್ಮ ಬೇಸರಕ್ಕೆ ಸಾಂತ್ವನವಾಗಿ ನಮ್ಮ ಯಾವ ಸಾಲುಗಳೂ ನಿಲ್ಲಲಾರವು. ಅವು ನಿಮ್ಮ ಅಳಲುಗಳಾಗಿ ಹೀಗೆ ಹೊರಚೆಲ್ಲಿ ನಿಮಗಿಷ್ಟು ಸಮಾಧಾನ ಸಿಗಲಿ.
    ಮುಂದೆ ಎಲ್ಲವೂ ಇನ್ನಷ್ಟು ಒಳಿತಾಗಲಿ.

    Ittigecement ಹೇಳಿದರು...

    ಉದಯ್.....

    ನನಗೆ ಬಂದ ಆತ್ಮೀಯ ಪ್ರತಿಕ್ರಿಯೆಗಳಲ್ಲಿ ಇದೂ ಒಂದು....
    ಚಂದ್ರಕಾಂತರವರ ಪ್ರತಿಕ್ರಿಯೆಗಳೇ ಹಾಗೆ...
    ಅನುಭವದ ಮಾತುಗಳು...
    ಕೆಲವೊಮ್ಮೆ ನಾನು ಬರೆದ ಲೇಖನಗಳಿಗಿಂತ ಅವರ ಪ್ರತಿಕ್ರಿಯೆ ತುಂಬಾ ಚೆನ್ನಾಗಿರುತ್ತದೆ...

    ನನಗೇನೋ ಕಾಣದ ಅಪ್ಪನನ್ನು ನೆನಪಿಸಿಕೊಂಡು ಮಿಸ್ ಮಾಡಿಕೊಳ್ಳುತ್ತಿರುವೆ..
    ಜೀವನದಲ್ಲಿ ಏನೂ ಅರಿಯದ...
    ಓದೂ ಅರಿಯದ ನಮ್ಮಮ್ಮ...
    ಬದುಕಿನ ಆಸರೆ...
    ಭರವಸೆ...ಆಗಿದ್ದ...
    ನಮ್ಮಪ್ಪನ ಅಗಲಿಕೆ ಹೇಗೆ ಸಹಿಸಿಕೊಂಡಿರ ಬಹುದು...
    ಸಣ್ಣ ಮಕ್ಕಳಾದ ನಮ್ಮನ್ನು ಬೆಳೆಸಿದಳು...?
    ಆ ನೋವನ್ನು ಹೇಗೆ ಸಹಿಸಿಕೊಂಡಿರಬಹುದು...?

    ಕೆರೆನೋ, ಬಾವಿನೋ ನೋಡಿಕೊಂಡಿದ್ದರೆ...??

    ಬದುಕಿನ.., ಆಸೆಗಳು .., ಭರವಸೆಗಳು...
    ನಾವೇ .. ನಮ್ಮಲ್ಲಿ ಹುಟ್ಟಿಸಿಕೊಳ್ಳಬೇಕು...

    ತುಂಬಾ... ಧನ್ಯವಾದಗಳು...

    Unknown ಹೇಳಿದರು...

    ಏನೆಂದು ಹೇಳಲಿ??? ಕವನ ಚೆನ್ನಾಗಿದೆ ಅನ್ನಲೇ???... ತುಂಬಾ ನಿರ್ಭೀಡೆಯಿಂದ ಮನದ ಮಾತುಗಳನ್ನು ಹಂಚಿಕೊಂಡಿದ್ದನ್ನು ಓದಿ ಸ್ವಲ್ಪ ಬೇಸರವಾಯಿತು... ಇಂಥ ಅಪ್ಪಂದಿರು ಬಹುಶ ತುಂಬಾ ಜನ ಇರ್ತಾರೆ... ಅವರನ್ನು ನೋಡಿ ನಾವು ನಮ್ಮನ್ನು ತಿದ್ದಿಕೊಳ್ಳೋದು ಉತ್ತಮ ಅಲ್ಲವೇ?? ಇನ್ನು ಏನು ಹೇಳಲೂ ಮನಸ್ಸಾಗುತ್ತಿಲ್ಲ...

    PARAANJAPE K.N. ಹೇಳಿದರು...

    ಉದಯರೇ
    ಸಮಯೋಚಿತ ಲೇಖನ. ಅಪ್ಪನ ಕುರಿತಾದ ಪದ್ಯ ಕೂಡಾ ಬಹಳ ಚೆನ್ನಾಗಿ ಮೂಡಿಬ೦ದಿದೆ.

    sunaath ಹೇಳಿದರು...

    ಉದಯ,
    ಇಂತಹ ಅಪ್ಪಂದಿರೂ ಇರುತ್ತಾರೆ. ಕೆಲವರನ್ನು ನಾನೂ ನೋಡಿದ್ದೇನೆ. Frank ಆಗಿ ಹೇಳಿದ್ದು ನಿಮ್ಮ ಹೆಚ್ಚುಗಾರಿಕೆ.

    ಬಿಸಿಲ ಹನಿ ಹೇಳಿದರು...

    ಶಿವು,
    ನಿಮ್ಮ ಪ್ರೀತಿ ಹಾಗು ಅನುಕಂಪಕ್ಕೆ ಥ್ಯಾಂಕ್ಸ್! ನಾನು ಆದಷ್ಟು ಬರಹದಲ್ಲಿ ನೇರ ಹಾಗು ಪ್ರಾಮಾಣಿಕವಾಗಿರಲು ಪ್ರಯತ್ನಿಸುತ್ತೇನೆ. ನನಗೆ ನನ್ನ ತಂದೆಯ ಬಗ್ಗೆ ಹೇಳಿಕೊಳ್ಳುವಾಗ ಯಾವುದೇ ಮುಜುಗುರವಾಗಲಿ, ಅಳುಕಾಗಲಿ ಅಥವಾ ಬೇರೆಯವರು ಏನಂದುಕೊಳ್ಳುತ್ತಾರೋ ಎನ್ನುವ ಭಾವನೆಯಾಗಲಿ ಇರಲಿಲ್ಲ. ಕೆಲವರು ಅಪ್ಪ ಅಮ್ಮ ಅಪ್ಪಟ ಅನಕ್ಷರಸ್ಥರಾಗಿದ್ದರೂ ತಮ್ಮ ಮರ್ಯಾದೆಗೆ ಎಲ್ಲಿ ಕುಂದು ಬರುತ್ತದೋ ಎಂದು ಹೆದರಿ ಅದನ್ನು ಬೇರೆಯವರ ಹತ್ತಿರ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಸತ್ಯವನ್ನು ಮುಚ್ಚಿಟ್ಟು ಬೇರೇನೋ ಹೇಳಲು ಪ್ರಯತ್ನಿಸುತ್ತಾರೆ.
    ನನ್ನ ನೋವಿನ ಹಾದಿಯ ಸಾಧನೆಯ ಕತೆ ಬೇರೆಯವರಿಗೆ ಮಾರ್ಗದರ್ಶಿಯಾಗಲಿ ಎಂದು ಇದನ್ನು ಸೃದಯವರಾದ ನಿಮ್ಮೊಂದಿಗೆ ಹಂಚಿಕೊಂಡೆ. ಏಕೆಂದರೆ ಬೇರೆಯವರು ಅಪ್ಪ ಸರಿಯಿಲ್ಲ ಎನ್ನುವದನ್ನೇ ನೆಪವಾಗಿಟ್ಟುಕೊಂಡು ಏನನ್ನು ಸಾಧಿಸದೆ ಇರುವದನ್ನು ನೋಡಿದ್ದೇನೆ. ಜೀವನದಲ್ಲಿ ಏನನ್ನಾದರು ಸಾಧಿಸಲು ನೆಪಗಳು ಯಾವತ್ತೂ ಅಡ್ಡಿಯಾಗಬಾರದೆಂದು ನಂಬಿದವನು ನಾನು.
    ಖ್ಯಾತ ಇಂಗ್ಲೀಷ ಕವಿ T.S.Eliot ಒಂದು ಕಡೆ ಒಂದು ಮಾತನ್ನು ಹೇಳುತ್ತಾನೆ- We learn a little from others mistakes-ಎಂದು. ಇದು ನನ್ನ ಜೀವನದಲ್ಲೂ ಸತ್ಯವಾಗಿದೆ. ನನ್ನ ಅಪ್ಪ ಹಾಗಿದ್ದ ಕಾರಣಕ್ಕೇನೋ ಅವನಂತೆ ನಾನಾಗಬಾರದೆಂದು ನಿರ್ಧರಿಸಿ ಛಲದಿಂದ ಈ ಸ್ಥಾನಕ್ಕೆ ಬಂದಿದ್ದು. ಹಾಗು ಮೊದಲಿನಿಂದಲೂ ನನ್ನ ಮಕ್ಕಳಿಗೆ ಮಾದರಿ ಅಪ್ಪನಾಗಬೇಕೆಂದು ನಿರ್ಧರಿಸಿದ್ದು. ಹೀಗಾಗಿ ನನ್ನ ಮಗಳಿಗೆ ನಾನು ಮಾದರಿ ಅಪ್ಪನಾಗಿದ್ದುದರಲ್ಲಿ ಅಚ್ಚರಿಯಿಲ್ಲ.
    ನಿಮ್ಮ ಪ್ರೀತಿ ಹಾಗು ಸಾಂತ್ವನದ ನುಡಿಗಳಿಗೆ ಮತ್ತೊಮ್ಮೆ ಥ್ಯಾಂಕ್ಸ್.

    ಬಿಸಿಲ ಹನಿ ಹೇಳಿದರು...

    ಪ್ರಕಾಶ್ ಅವರೆ,
    “ಬದುಕಿನ.., ಆಸೆಗಳು .., ಭರವಸೆಗಳು...
    ನಾವೇ .. ನಮ್ಮಲ್ಲಿ ಹುಟ್ಟಿಸಿಕೊಳ್ಳಬೇಕು...”
    ಎಂಥ ಅದ್ಬುತವಾದ ಮಾತನ್ನು ಹೆಳಿದ್ದೀರಿ. ಅಂದಾಗಲೆ ಅಲ್ಲವೆ ನಾವು ಜೀವನದಲ್ಲಿ ಮೇಲೆ ಬರುವದು? ಬ್ಲಾಗ್ ಮೂಲಕವಷ್ಟೆ ನಾವಿಬ್ಬರು ಸ್ನೇಹಿತರಾದವರು. ಆದರೆ ಇದೀಗ ಅನಿಸುತ್ತದೆ ಬದುಕಿನ ಹಾದಿಯ ಕೊನೆಯವರೆಗೂ ನೀವು ನನಗೆ ಸ್ಪೂರ್ತಿಯಾಗಬಲ್ಲಿರಿ ಹಾಗು ಜೊತೆಯಾಗಿ ಸಾಗುವ ಸ್ನೇಹಿತರಾಗಿರಬಲ್ಲಿರೆಂದು. ಈ ಸಾರಿ ಅಗಷ್ಟ್ ತಿಂಗಳಲ್ಲಿ ಬೆಂಗಳೂರಿಗೆ ಬಂದಾಗ ನಿಮ್ಮನ್ನು ಭೇಟಿಯಾಗಲು ಪ್ರಯತ್ನಿಸುವೆ.
    ನಿಮ್ಮ ಸಮಾಧಾನದ ಮಾತುಗಳಿಗೆ ಥ್ಯಾಂಕ್ಸ್.

    ಬಿಸಿಲ ಹನಿ ಹೇಳಿದರು...

    ಪರಾಂಜಪೆ ಸರ್,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ಬಿಸಿಲ ಹನಿ ಹೇಳಿದರು...

    ರವಿಕಾಂತ್ ಗೋರೆಯವರೆ,
    “ಇಂಥ ಅಪ್ಪಂದಿರು ಬಹುಶ ತುಂಬಾ ಜನ ಇರ್ತಾರೆ... ಅವರನ್ನು ನೋಡಿ ನಾವು ನಮ್ಮನ್ನು ತಿದ್ದಿಕೊಳ್ಳೋದು ಉತ್ತಮ ಅಲ್ಲವೇ??” ಎನ್ನುವ ನಿಮ್ಮ ಮಾತು ನಿಜ. ಹಾಗೆಂದೇ ನಾನು ನನ್ನಪ್ಪನಿಗೆ ತದ್ವಿರುದ್ದವಾಗಿ ತಿದ್ದಿಕೊಂಡು ಬೆಳೆದಿದ್ದು.
    ನಿಮ್ಮ ಸಾಂತ್ವನಕ್ಕೆ ಥ್ಯಾಂಕ್ಸ್.

    ಬಿಸಿಲ ಹನಿ ಹೇಳಿದರು...

    ಸುನಾಥ್ ಸರ್,
    ನೀವು ಹೇಳಿದಂತೆ Frank ಆಗಿ ಹೇಳಿದ್ದು ನನ್ನ ಹೆಚ್ಚುಗಾರಿಕೆಯೆಂದು ಕರೆದಿರುವಿರಿ. ಇದಕ್ಕೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಇರಲಿ, ನಮ್ಮ ನೋವನ್ನು ಬೇರೆಯವರೊಂದಿಗೆ ಹಂಚಿಕೊಂಡಾಗಲೇ ನಾವು ಹಗುರಾಗುವದಲ್ಲದೆ ನಮಗಿಂತ ದೊಡ್ಡ ದೊಡ್ದ ಸಮಸ್ಯೆಯಲ್ಲಿ ಮುಳುಗಿರುವವರ ನೋವು ಸಹ ನಮಗೆ ಗೊತ್ತಾಗಿ ಅವರ ಮುಂದೆ ನನ್ನದೇನು ಮಹಾ ಎನಿಸಿಬಿಡುತ್ತದಲ್ಲವೆ?

    ಬಿಸಿಲ ಹನಿ ಹೇಳಿದರು...

    ಶಾಂತಲಾ ಅವರೆ,
    ನಿಮ್ಮ ಮನದಾಳದ ಸಾಂತ್ವನದ ನುಡಿಗಳಿಗೆ ಹಾಗು ಶುಭಹಾರೈಕೆಗಳಿಗೆ ತುಂಬಾ ತುಂಬಾ ಥ್ಯಾಂಕ್ಸ್. ಇಷ್ಟನ್ನು ಬಿಟ್ಟರೆ ನಿಮ್ಮ ಪ್ರತಿಕ್ರಿಯೆಗೆ ಹೇಗೆ ಸ್ಪಂದಿಸಬೇಕೆಂದು ಗೊತ್ತಾಗದೆ ಬಾಯಿಕಟ್ಟಿ ಹೋಗಿದೆ.

    ಅಹರ್ನಿಶಿ ಹೇಳಿದರು...

    ಉದಯ್ ಸರ್,

    ನಿಮ್ಮ ನೇರ ಬರವಣಿಗೆ ನೇರವಾಗಿ ಹ್ರುದಯದೊಳಕ್ಕೇ ಇಳಿಯುತ್ತದೆ.ಅಪ್ಪ ಹೆ೦ಗಿದ್ರು ಅಪ್ಪನೆ.ನನ್ನಪ್ಪನ ಬಗ್ಗೆ ಬರೆದಿರುವೆ.ಬ್ಲಾಗಿಗೊಮ್ಮೆ ಬನ್ನಿ.

    ಬಿಸಿಲ ಹನಿ ಹೇಳಿದರು...

    ಅಹರ್ನಿಶಿಯವರೆ,
    ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು. ಬರವಣಿಗೆ ನೇರವಾಗಿದ್ದಷ್ಟು ಹೃದಯದೊಳಗೆ ತಾನೆ ತಾನಾಗಿ ಇಳಿಯುತ್ತದೆ. ನಿಮ್ಮ ಬ್ಲಾಗಿಗೆ ಭೇಟಿ ನೀಡಿ ಅಲ್ಲಿ ಅಭಿಪ್ರಾಯಿಸುವೆ. ನಿಮ್ಮದು ಮೊದಲ ಭೇಟಿ ನನ್ನ ಬ್ಲಾಗಿಗೆ. ಹೀಗೆ ಬರುತ್ತಿರಿ.

    ಚಂದ್ರಕಾಂತ ಎಸ್ ಹೇಳಿದರು...

    ಉದಯ್

    ಬದುಕಿನ ನೋವು,ಅವಮಾನ,ಅಸಹಾಯಕತೆಗಳು ಮನುಷ್ಯನನ್ನು ಗಟ್ಟಿ ಮಾಡುತ್ತವೆ ಎನ್ನುವುದಕ್ಕೆ ನೀವು ಉದಾಹರಣೆ. ಆದರೆ ಎಲ್ಲ ಸಮಯದಲ್ಲಿಯೂ ಹಾಗಾಗುವುದಿಲ್ಲ. ಕೆಲವು ಮಕ್ಕಳು ತಂದೆಯ ಹಾದಿಯನ್ನೇ ಹಿಡಿಯುತ್ತಾರೆ.

    ನಿಮ್ಮ ಈ ಕವನದ ಮೇಲೆ ಲಂಕೇಶರ ‘ಅವ್ವ’ ಕವನದ ದಟ್ಟ ಪ್ರಭಾವ ಕಾಣಿಸುತ್ತದೆ. ( ಅದು ಒಂದು compliment!)

    ಚಂದ್ರಕಾಂತ ಎಸ್ ಹೇಳಿದರು...

    ಉದಯ್

    ಅಪ್ಪನ ಬಗೆಗಿನ ನಿಮ್ಮ ಸಂಬಂಧದ ವಿಷಾದ, ನೋವು, ಅಸಹಾಯಕತೆ ಇವೆಲ್ಲವನ್ನೂ ಬಹಳ ಚೆನ್ನಾಗಿ ಬಿಂಬಿಸಿರುವಿರಿ, ಬಿಂಬಿಸಿರುವಿರಿ ಎಂದರೆ ತಪ್ಪಾಗುವುದು.ಎಲ್ಲ ಭಾವಗಳಿಗು ಒಂದು outlet ಕೊಟ್ಟಿರುವಿರಿ

    ನಿಮ್ಮ ಕವನ ಚೆನ್ನಾಗಿದೆ. ಲಂಕೇಶರ ‘ಅವ್ವ’ ಕವನವನ್ನು ಈ ಕವಿತೆ ನೆನಪಿಸುತ್ತದೆ.

    ಬಿಸಿಲ ಹನಿ ಹೇಳಿದರು...

    ಚಂದ್ರಕಾಂತ ಮೇಡಂ,
    ನಿಮ್ಮ ಅದ್ಭುತ ಪ್ರತಿಕ್ರಿಯೆಗೆ ಥ್ಯಾಂಕ್ಸ್. ನೀವು ಹೇಳಿದಂತೆ ಕೋಪ, ತಾಪ, ಅಸಹಾಯಕತೆ ಎಲ್ಲವನ್ನು ಒಳಗೊಂಡಿದೆ. ಆದರೆ ಬೇರೆ ಕೄರ ಅಪ್ಪಂದಿರಿಗೆ ಹೋಲಿಸಿಕೊಂಡರೆ ನನ್ನ ಅಪ್ಪ ಎಷ್ಟೋ ಉತ್ತಮನಾಗಿರುವದರಿಂದ ಎದೆಗೆ ಎಷ್ಟೋ ಸಮಾಧಾನ! ಈ ಕಾರಣಕ್ಕೆನೇ ಅವನು ನನಗೆ ಹೆಚ್ಚು ಆಪ್ತನಾಗಿ ಕಾಣುತ್ತಾನೆ. ಅಪ್ಪ ಹಾಗೆ ಇದ್ದುದರಿಂದ ಅವನ ಹಾದಿಗೆ ವಿರುದ್ಧವಾಗಿ ನಡೆದು ಛಲದಿಂದ ಮೇಲೆ ಬಂದಿದ್ದೇನೆ ಎನ್ನುವದಕ್ಕಿಂತ ಅವನ ಆ ಇರುವಿಕೆ ನನ್ನನ್ನು ಈ ರೀತಿಯಾಗಿ ಬೆಳೆಯಲು ಹುರಿದುಂಬಿಸಿರಬದಲ್ಲವೆ? ಅದಕ್ಕಾದರು ಅವನಿಗೊಂದು ಥ್ಯಾಂಕ್ಸ್ ಹೇಳಲೇಬೇಕು. ಏಕೆಂದರೆ ಕೆಲವು ಒಳ್ಳೆಯ ಅಪ್ಪಂದಿರ ಮಕ್ಕಳು ಕೆಟ್ಟಿರುವದನ್ನು ನಾನು ನೋಡಿದ್ದೇನೆ.
    ಇನ್ನು ನನ್ನ ಕವನದ ಮೇಲೆ ಲಂಕೇಶರ “ಅವ್ವ” ಕವನದ ದಟ್ಟ ಪ್ರಭಾವವನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್. ಏಕೆಂದರೆ ಈ ಕವನ ಬರೆದ ಮೇಲೆ ನನಗೂ ಕೂಡ ಹಾಗೆ ಅನಿಸಿತ್ತು.
    Anyway, ನಿಮ್ಮ ಪ್ರತಿಕ್ರಿಯೆಗೆ ಮತ್ತೊಮ್ಮೆ ಧನ್ಯವಾದಗಳು.

    ಶಿವಪ್ರಕಾಶ್ ಹೇಳಿದರು...

    ನನಗೆ ಯಾವ ರೀತಿ ಪ್ರತಿಕ್ರಿಯಿಸಬೇಕೋ ಅಂತ ತೆಳಿಯುತ್ತಿಲ್ಲ.
    ನೀವು ಚಿಕ್ಕ ವಯಸ್ಸಿನಲ್ಲಿ ಅನುಭವಿಸಿದ ನೋವಿಗೆ ಸಾಂತ್ವನ ಹೇಳಬೇಕೋ ?
    ಅಥವಾ
    ನಿಮ್ಮ ಒಳ್ಳೆಯ ಲೇಖನಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕೋ...?

    ಸುಧೇಶ್ ಶೆಟ್ಟಿ ಹೇಳಿದರು...

    ಉದಯ್ ಅವರೇ...

    ನಿಮ್ಮ ಕವನ ನನ್ನ ಬದುಕಿಗೆ ಕನ್ನಡಿ ಹಿಡಿದ ಹಾಗಿತ್ತು....

    ಇದಕ್ಕಿ೦ತ ಹೆಚ್ಚಿಗೆ ಏನೂ ಹೇಳಲಾಗುತ್ತಿಲ್ಲ...

    ಧರಿತ್ರಿ ಹೇಳಿದರು...

    ನನ್ನಪ್ಪ ನೆನಪಾದರು..
    -ಧರಿತ್ರಿ

    ಜಲನಯನ ಹೇಳಿದರು...

    ಉದಯ ಸರ್ ಅಪ್ಪನ ಬಗ್ಗೆ ಚಂದ್ರಕಾಂತ ಮೇಡಂ ಪ್ರಸ್ತಾಪ ಮಾಡಿದ್ದಾರೆ ತಮ್ಮ ಬ್ಲಾಗಿನಲ್ಲಿ...ಅಪ್ಪ ನನ್ನ ಅನಿಸಿಕೆಯಲ್ಲಿ ಮಮತೆ-ಮಾತೆಯ ಪರ್ಯಾಯ ಜವಾಬ್ದಾರಿ, ನಿಷ್ಠುರತೆ, ನಿಖರತೆ ಇತ್ಯಾದಿ ಅಷ್ಟೇನೂ ಆಪ್ಯಾಯವೆನಿಸದ ಗುಣಹೊತ್ತ ವ್ಯಕ್ತಿ...ಅಪ್ಪನಿಲ್ಲದಿದ್ದರೆ, ಲಗಾಮು ಇಲ್ಲದೆ ಕುದುರೆಯಾಗುತ್ತೆ ಮನೆಯಲ್ಲಿರುವವರ ಮನಸು-ಕಾಯಕ. ಯೌವನದವರೆಗೂ ತಾಯ ಮಮತೆ ಹೆಚ್ಚು ತೂಗಿದರೆ ಆನಂತರದ ವ್ಯಕ್ತಿತ್ವ ನಿರ್ಮಾಣಕ್ಕೆ ತಂದೆಯೇ ರೂವಾರಿ.. ಆದ್ರೆ ಅದೇ ಅಪ್ಪ..ಬೇಜವಾಬುದಾರನಾದರೆ...ನಾವಿಕನಿಲ್ಲದ ಹಡಗು...ಕುಟುಂಬ...ಇದು ನನ್ನ ಅನಿಸಿಕೆ...