Demo image Demo image Demo image Demo image Demo image Demo image Demo image Demo image

ಹೆಣ್ಣು ಸದಾ ಸಂದಿಗ್ಧ, ಗೊಂದಲಗಳಲ್ಲಿಯೇ ತನ್ನ ಸಾಕಷ್ಟು ಸಮಯ ಕಳೆದು ಬಿಡುತ್ತಾಳೆ!

  • ಬುಧವಾರ, ನವೆಂಬರ್ 04, 2009
  • ಬಿಸಿಲ ಹನಿ
  • ಅದು 1999ನೇ ಇಸ್ವಿಯೋ ಅಥವಾ ೨೦೦೦ನೇ ಇಸ್ವಿಯೋ ನನಗೆ ಸರಿಯಾಗಿ ನೆನಪಿಲ್ಲ. ಅದು ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ- ಬೆಂಗಳೂರಿನ ಕಬ್ಬನ್ ಪಾರ್ಕಿನ ಬಾಲಭವನದಲ್ಲಿ ನಡೆದಿತ್ತು. ಅಲ್ಲೊಂದು ಕವಯಿತ್ರಿಯರ ಕವಿಗೋಷ್ಟಿ. ಆ ಗೋಷ್ಟಿಗೆ ಪ್ರತಿಭಾ ನಂದಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮವಿದ್ದುದು ಮದ್ಯಾಹ್ನ ಮೂರು ಗಂಟೆಗೆ. ನಾಲ್ಕು ಗಂಟೆಯಾದರೂ ಅವರು ಬರುವ ಯಾವುದೇ ಚಿಹ್ನೆಗಳು ಕಾಣಿಸಲಿಲ್ಲ. ಕಾಯ್ದು ಕಾಯ್ದು ನಾವೆಲ್ಲಾ ಸುಸ್ತಾಗಿದ್ದೆವು. ಈ ಮಧ್ಯ ಸಂಘಟಿಕರು ಅವರ ಆಫೀಸಿಗೆ ಹಾಗೂ ಮನೆಗೆ (ಆಗಿನ್ನೂ ಮೊಬೈಲ್ ಬಳಕೆ ಅಷ್ಟಾಗಿ ಇರಲಿಲ್ಲ) ಆಗಾಗ ಫೋನಾಯಿಸಿ “ಇನ್ನೇನು ಬರುತ್ತಾರೆ, ಈಗ ಬರುತ್ತಾರೆ, ಮಾರ್ಗ ಮಧ್ಯದಲ್ಲಿದ್ದಾರೆ,” ಎನ್ನುವ ವಿಷಯವನ್ನು ನಮಗೆ ಆಗಾಗ ಮೈಕಿನಲ್ಲಿ ಹೇಳುತ್ತಾ ನಮ್ಮನ್ನು update ಮಾಡುತ್ತಿದ್ದರು. ಊಹೂಂ ಆದರೂ ಅವರು ಬರುವ ಯಾವುದೇ ಚಿಹ್ನೆಗಳು ಕಾಣಿಸಲಿಲ್ಲ. ಕೊನೆಗೆ ಬೇಸತ್ತ ಸಂಘಟಿಕರು ಅವರಿಗೆ ಕೊನೆಯದೆಂಬಂತೆ ಫೋನಾಯಿಸಿದಾಗ “ನೀವು ಆರಂಭಿಸಿ. ನಾನು ಬರುತ್ತೇನೆ” ಎಂದು ಹೇಳಿ ಅಪ್ಪಣೆ ನೀಡಿದರು. ಹೀಗಾಗಿ ಅನಿವಾರ್ಯವಾಗಿ ಕವಿಗೋಷ್ಟಿ ಅಧ್ಯಕ್ಷರಿಲ್ಲದೇ ಆರಂಭವಾಯಿತು. ನಾವೆಲ್ಲಾ ಉಸ್ಸಪ್ಪಾ ಎಂದು ಉಸಿರುಬಿಟ್ಟು ಕವಯಿತ್ರಿಯರ ಕವನಗಳನ್ನು ಕೇಳಲು ಕಿವಿ ನಿಮಿರಿಸಿ ಕುಳಿತೆವು. ಅರ್ಧ ಜನ ಕವಯಿತ್ರಿಯರ ಕವನ ವಾಚನವಾದ ಮೇಲೆ ಪ್ರತಿಭಾ ಕೊನೆಗೂ ಆಗಮಿಸಿದರು. ಉಳಿದ ಅರ್ಧ ಜನ ಕವಯಿತ್ರಿಯರ ಕವನವನ್ನು ಕೇಳಿದ ನಂತರ ತಮ್ಮ ಅಧ್ಯಕ್ಷೀಯ ಭಾಷಣವನ್ನು ಆರಂಭಿಸುತ್ತಾ “ನಾನೇಕೆ ತಡವಾಗಿ ಬಂದೆ ಎಂಬುದನ್ನು ನಿಮಗೆ ಹೇಳಲೇಬೇಕು. ಇಲ್ಲದೆ ಹೋದರೆ ಅಪಚಾರವಾಗುತ್ತದೆ. ಹೇಳಿದ ಮೇಲೆ ನೀವು ನನ್ನನ್ನು ಕ್ಷಮಿಸುತ್ತೀರಾ? ಬಿಡುತ್ತೀರಾ? ಎಲ್ಲವೂ ನಿಮಗೆ ಸೇರಿದ್ದು” ಎಂದು ಹೇಳಿ ಮುಂದುವರಿಸುತ್ತಾ “ನಾನು ನನ್ನ ಕೆಲಸಕ್ಕೆ ತಕ್ಕಂತೆ ಇವತ್ತು ಟೀ ಶರ್ಟ್ ಮತ್ತು ಪ್ಯಾಂಟ್ ಹಾಕ್ಕೊಂಡಿದ್ದೆ. ಕೆಲಸವೇನೋ ಒಂದು ಗಂಟೆಯಷ್ಟೊತ್ತಿಗೆಲ್ಲಾ ಮುಗಿಯಿತು. ಕೆಲಸ ಮುಗಿದ ಮೇಲೆ ನಾನು ಕಛೇರಿಯಿಂದ ಹಾಗೆ ಹೊರಟಿದ್ದರೆ ಇಲ್ಲಿಗೆ ಸಮಯಕ್ಕೆ ಸರಿಯಾಗಿ ಬಂದು ಸೇರುತ್ತಿದ್ದೆ. ಆದರೆ ನನ್ನ ಪುರುಷ ಸಹದ್ಯೋಗಿಗಳು ‘ಏನ್ ಮೇಡಂ, ಕವಿಗೋಷ್ಟಿಗೆ ಹೋಗತಿದ್ದೀರಾ.... ಈ ಟೀ ಶರ್ಟ್ ಪ್ಯಾಂಟೆಲ್ಲಾ ಯಾಕೆ ಹಾಕ್ಕೊಂಡು ಹೋಗತೀರಾ? ಮನೆಗೆ ಹೋಗಿ ಲಕ್ಷಣವಾಗಿ ಸೀರೆ ಉಟ್ಕೊಂಡು ಹೋಗಿ’ ಅಂತ ಸಲಹೆ ನೀಡಿದರು. ಆಗ ನಾನು ‘ಹೀಗೆ ಹೋಗೋದಾ? ಅಥವಾ ಸೀರೆ ಉಟ್ಕೊಂಡು ಹೋಗೋದಾ?’ ಅಂತೆಲ್ಲಾ ಯೋಚಿಸಿ ಯೋಚಿಸಿ ಈ ಗೊಂದಲ, ಸಂದಿಗ್ಧತೆಯಿಂದ ಹೊರಬರವದರಲ್ಲಿಯೇ ಅರ್ಧ ಸಮಯ ಕಳೆದುಬಿಟ್ಟೆ. ಕೊನೆಗೆ ಸೀರೆ ಉಟ್ಕೊಂಡೇ ಹೋಗಬೇಕೆಂದು ತೀರ್ಮಾನಿಸಿ ಮನೆಗೆ ಹೋಗಿ ಸೀರೆ ಉಟ್ಕೊಂಡು ಬರೋದ್ರಲ್ಲಿ ಇಷ್ಟು ಹೊತ್ತಾಯಿತು. ಇಲ್ದಿದ್ರೆ ಸಮಯಕ್ಕೆ ಸರಿಯಾಗಿ ಬಂದು ಸೇರುತ್ತಿದ್ದೆ. ಹೆಣ್ಣು ಯಾವಾಗಲೂ ಇಂಥ ಸಂದಿಗ್ಧ, ಗೊಂದಲಗಳಲ್ಲಿಯೇ ಸಾಕಷ್ಟು ಸಮಯ ಕಳೆದು ಬಿಡುತ್ತಾಳೆ ಮತ್ತು ಅವಳೊಬ್ಬಳೇ ಆಗಾಗ ಇಂಥ ಚಿಕ್ಕ ಚಿಕ್ಕ ಸಂದಿಗ್ಧತೆಗಳಿಗೆ ಒಳಗಾಗುತ್ತಿರುತ್ತಾಳೆ. ಆದರೆ ಅದೇ ಪುರುಷನಾಗಿದ್ದರೆ ಉಟ್ಟ ಬಟ್ಟೆಯ ಮೇಲೆ ಹಾಗೆ ಬಂದುಬಿಡಬಹುದಿತ್ತು. ಯಾಕೆಂದರೆ ಅವನಿಗೆ ಇಂಥ ಗೊಂದಲಗಳು ಯಾವುತ್ತೂ ಎದುರಾಗುವದೇ ಇಲ್ಲ” ಎಂದು ಎಂದಿನಂತೆ ತಮ್ಮ ಸ್ತ್ರೀಪರ ಕಾಳಜಿಯ ಹಿನ್ನೆಲೆಯಲ್ಲಿ ಮಾತನಾಡಿದಾಗ ನೆರದಿದ್ದ ಪ್ರೇಕ್ಷಕರು ಕ್ಷಮಿಸದೆ ಇರುತ್ತಾರೆಯೇ? ನೀವೇ ಹೇಳಬೇಕು. ಇದಕ್ಕೆ ನೀವೇನಂತೀರಿ?
    -ಉದಯ ಇಟಗಿ

    7 ಕಾಮೆಂಟ್‌(ಗಳು):

    sunaath ಹೇಳಿದರು...

    ಸರಿ ಬಿಡಿ, ನಾವೂ ಕ್ಷಮಿಸಿಬಿಡೋಣ!

    ಗೌತಮ್ ಹೆಗಡೆ ಹೇಳಿದರು...

    howd howdu anteevi:)

    ಸಾಗರದಾಚೆಯ ಇಂಚರ ಹೇಳಿದರು...

    ಒಪ್ಕೊಬೇಕಾದ್ದೇ
    ಕ್ಷಮಿಸಿ ಬಿಡೋಣ ನಾವೂನೂ

    Unknown ಹೇಳಿದರು...

    ಪ್ರತಿಭಾ ಅವರ ಮಾತನ್ನು ನಾನು ಒಪ್ಪುತ್ತೇನೆ. ಆದರೆ ಈ ರೀತಿಯ ಗೊಂದಲಗಳು ಹೆಣ್ಣಿಗೆ ಮಾತ್ರವೇ ಎಂದು ಭಾವಿಸುವುದೇಕೆ? ಪುರುಷರೂ ಈ ರೀತಿಯ ಗೊಂದಲಗಳಿಗೆ ಒಳಗಾಗುತ್ತಾರೆ. ಉದಾಹರಣೆಗೆ ನೋಡಿ. ಕಾಲೇಜಿನಲ್ಲಿ ನನ್ನ ಸಹೋದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಪುಟ್ಟಮಾದಪ್ಪ ಎಂಬುವವರು ಮೀಟಿಂಗ್ ಮುಂತಾದವಕ್ಕೆ ಹೊರಟಾ ನಮ್ಮ ಜೊತೆಯಲ್ಲೇ ಹೊರಟರೂ ಸ್ವಲ್ಪ ಹಿಂದುಳಿದುಬಿಡುತ್ತಿದ್ದರು. ಮೀಟಿಂಗ್ ಶುರುವಾದ ಮೇಲೆಯೇ ಅವರು ಬರುತ್ತಿದ್ದುದ್ದು. ಕಾರಣ ಇಷ್ಟೆ. ಅವರು ಟಾಯಿಲೆಟ್ ರೂಮಿಗೆ ಹೋಗಿ, ಮುಖ ತೊಳೆದು ಜೇಬಿನಲ್ಲಿದ್ದ ಫೇರ್ ಅಂಡ್ ಲವ್ಲಿ ಹಚ್ಚಿಕೊಂಡೇ ಬರುತ್ತಿದ್ದುದು!

    shivu.k ಹೇಳಿದರು...

    ಉದಯ್ ಸರ್,

    ನಿಜಕ್ಕೂ ಅವರು ಹೇಳುವುದು ನಿಜ. ನಮಗಿಂತ ಅವರೇ ಹೆಚ್ಚು ಗೊಂದಲದಲ್ಲಿರುತ್ತಾರೆ ಎನ್ನುವುದನ್ನು ನಾನು ಒಪ್ಪುತ್ತೇನೆ. ಕೆಲವು ನನ್ನ ಶ್ರೀಮತಿಯೂ ಹೀಗೆ ಮಾಡಿದ್ದು ಅನುಭವವಾಗಿದೆ.

    ತೇಜಸ್ವಿನಿ ಹೆಗಡೆ ಹೇಳಿದರು...

    ಪ್ರತಿಭಾ ಅವರ ಈ ಮಾತು ನನಗೆ ಅರ್ಧ ಸತ್ಯವೆನಿಸಿತು!

    ಚುಕ್ಕಿಚಿತ್ತಾರ ಹೇಳಿದರು...

    ಹೆಣ್ಣು ತನ್ನ ಅಭಿಪ್ರಾಯಗಳಿಗಿ೦ತಲೂ ಸಮಾಜದ ಅಭಿಪ್ರಾಯಗಳಿಗೆ ಹೆಚ್ಚು ಸೂಕ್ಷ್ಮವಾಗಿರುತ್ತಾಳೆ೦ಬುದು ನನ್ನ ಅಭಿಪ್ರಾಯ.......!