Demo image Demo image Demo image Demo image Demo image Demo image Demo image Demo image

ತಸ್ಲೀಮಾರ ಮೂರು ಅನುವಾದಿತ ಕವನಗಳು

 • ಗುರುವಾರ, ಮಾರ್ಚ್ 04, 2010
 • ಬಿಸಿಲ ಹನಿ
 • ಆತ್ಮೀಯರೆ,
  ನೀವು ನಂಬಲಿಕ್ಕಿಲ್ಲ. ಅತ್ತ ಕಳೆದ ಭಾನುವಾರ ತಸ್ಲೀಮಾ ಅವರ (ಪ್ರಚೋದನಾಕಾರಿ) ಲೇಖನವೊಂದು ಕನ್ನಡ ಪತ್ರಿಕೆಯೊಂದರಲ್ಲಿ ಪ್ರಕಟವಾಗಿ ಕರ್ನಾಟಕವು ಕೋಮು ಗಲಭೆಯಿಂದ ಹೊತ್ತಿ ಉರಿಯುತ್ತಿದ್ದರೆ, ಇತ್ತ ನಾನು ಇದ್ಯಾವುದರ ಪರಿವೇ ಇಲ್ಲದೆ ತಣ್ಣಗೆ ಕುಳಿತು ಕಾಕತಾಳೀಯವೆಂಬಂತೆ ಅವರ ಕವನಗಳನ್ನು ಬೆನ್ನಟ್ಟಿಹೋಗಿದ್ದೆ. ಅದರಲ್ಲಿ ಒಂದನ್ನು ಆಯ್ದು ಅನುವಾದಿಸಿ ನನ್ನ ಬ್ಲಾಗಿನಲ್ಲೂ ಹಾಕಿದ್ದೆ. ನನ್ನ ದಿನನಿತ್ಯದ ಕೆಲಸಗಳನ್ನು ಮುಗಿಸಿ ಎಂದಿನಂತೆ ಸಂಜೆ ಕನ್ನಡ ಟೀವಿ ಹಾಕಿದಾಗಲೆ ನನಗೆ ಈ ವಿಷಯ ಗೊತ್ತಾಗಿದ್ದು! ಆದ ಘಟನೆಗೆ ವಿಷಾದ ವ್ಯಕ್ತಪಡಿಸುತ್ತಾ ನನ್ನ ಅನುವಾದದ ಹಿಂದೆ ಯಾರನ್ನೂ ನೋಯಿಸುವ ಉದ್ದೇಶವಾಗಲಿ, ಅಥವಾ ಇನ್ಯಾವುದೇ ದುರುದ್ದೇಶವಾಗಲಿ ಇಲ್ಲವೆಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ.

  ತಸ್ಲೀಮಾರ ಕವನಗಳೇ ಹಾಗೆ! ಗುಂಡೇಟಿನಿಂದ ಹೊಡೆದ ಹಾಗಿರುತ್ತವೆ! ಅಬ್ಬರಿಸುತ್ತವೆ, ಸ್ತ್ರೀವಾದದ ಪರಕಾಷ್ಠೆಯನ್ನು ಮುಟ್ಟುತ್ತವೆ. ಆದರೂ ಅವರ ಕವನಗಳಲ್ಲಿನ ನೋವು, ವಿಷಾದ, ವ್ಯಂಗ್ಯ, ನೇರಾನೇರ ನುಡಿ ಎಲ್ಲವೂ ಕ್ಷಣಾರ್ಧದಲ್ಲಿ ನಮ್ಮನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡುಬಿಡುತ್ತವೆ. ತಸ್ಲೀಮಾಳನ್ನು ಯಾವುದೇ ಪೂರ್ವಗ್ರಹಗಳಿಲ್ಲದೆ ತಸ್ಲೀಮಾಳಂತೆ ಓದಿದರೆ ಮಾತ್ರ ನಮಗೆ ಆಪ್ತಳಾಗುತ್ತಾಳೆ, ಹತ್ತಿರವಾಗುತ್ತಾಳೆ. ಹಾಗೆಂದೇ ಅವಳ ಕವನಗಳನ್ನು ಅನುವಾದಿಸಿದ ಮಾತ್ರಕ್ಕೆ ನಾನು ಅವಳನ್ನು ಬೆಂಬಲಿಸುತ್ತಿದ್ದೇನೆಂದು ಅರ್ಥವಲ್ಲ. ನನಗಿಷ್ಟವಾದ ಅವಳ ಮೂರು ಕವನಗಳು ನಿಮಗೂ ಇಷ್ಟವಾಗಬಹುದೆಂದುಕೊಂಡು ಇಲ್ಲಿ ಕೊಡುತ್ತಿದ್ದೇನೆ. ಓದಿ ಆನಂದಿಸಿ.

  ಆಕ್ರಮಣ

  ಈ ಜನರು ಎಷ್ಟು ವಿಚಿತ್ರವೆಂದರೆ
  ನೀನು ಕುಳಿತುಕೊಂಡರೆ “ಬೇಡ, ಕುಳಿತುಕೊಳ್ಳಬೇಡ” ಎನ್ನುತ್ತಾರೆ
  ನಿಂತರೆ ಅದಕ್ಕೂ ಒಂದು ಹೇಳುತ್ತಾರೆ “ನಿಂತಿದ್ದೇಕೆ? ಓಡಾಡುವದಕ್ಕಾಗುವದಿಲ್ಲವೆ?”
  ಓಡಾಡಿದರೆ “ಯಾವಾಗಲೂ ಓಡಾಡಲು ನಾಚಿಕೆಯಾಗುವದಿಲ್ಲವೆ? ಕುಳಿತುಕೋ” ಎನ್ನುತ್ತಾರೆ

  ತುಂಬಾ ಹೊತ್ತು ಮಲಗಿದರೆ ಅವರು ಹೇಳುತ್ತಾರೆ ’ಸದಾ ಏನು ಮಲಗಿರುತ್ತಿ, ಎದ್ದೇಳು”
  ನೀನು ಮಲಗದೇ ಹೋದರೆ ಅದಕ್ಕೂ ಒಂದು ಹೇಳುತ್ತಾರೆ “ವಿಶ್ರಾಂತಿಯೇ ಇಲ್ಲ, ಮಲಗು”


  ಹೀಗೆ ನನ್ನ ದಿನಗಳನ್ನು ಬರಿ ಕುಳಿತುಕೊಳ್ಳುವದು ಮತ್ತು ಎದ್ದುನಿಲ್ಲುವದರಲ್ಲಿಯೇ ಕಳೆಯುತ್ತಿದ್ದೇನೆ
  ನಾನು ಈಗಿಂದೀಗಲೇ ಸಾಯಬೇಕೆಂದರೆ ಅವರು ಹೇಳುತ್ತಾರೆ
  “’ಏಕೆ ಸಾಯುತ್ತಿ? ನೀನಿನ್ನೂ ಬದುಕಿ ಬಾಳಬೇಕಾದವಳು. ಬದುಕಿಬಿಡು”
  ನಾನು ಬದುಕುವದನ್ನು ನೋಡಿ ಮತ್ತೆ ಅವರೇ ಹೇಳುತ್ತಾರೆ
  ”ನಾಚಿಕೆಯಾಗುವದಿಲ್ಲವೆ ನಿನಗೆ? ಇನ್ನೂ ಬದುಕಿದ್ದೀಯಲ್ಲ? ಸತ್ತುಬಿಡು”

  ಬಂಗಾಳಿ ಮೂಲ: ತಸ್ಲೀಮಾ ನಸ್ರೀನ್
  ಕನ್ನಡಕ್ಕೆ: ಉದಯ್ ಇಟಗಿ


  ಪರಿಚಯಸ್ಥ

  ನಾನಂದುಕೊಂಡಷ್ಟು ಅವನು ಗಂಡಸಾಗಿಲ್ಲ
  ಅರ್ಧ ನಪುಂಸಕ
  ಅರ್ಧ ಗಂಡಸು

  ಬದುಕು ಸವೆಯುತ್ತಾ ಹೋಗುತ್ತದೆ
  ನಾನು ಅದೇ ಗಂಡಸಿನೊಟ್ಟಿಗೆ
  ಕುಳಿತುಕೊಳ್ಳುತ್ತೇನೆ, ಮಲಗುತ್ತೇನೆ
  ಆದರೆ ನಿಜವಾಗಿ ಅವನೇನೆಂಬುದು ಗೊತ್ತೇ ಆಗುವದಿಲ್ಲ
  ನಾನು ಬಹಳ ದಿವಸಗಳಿಂದ ನೋಡಿದ ಮನುಷ್ಯ
  ‘ಅವನು’ ಅವನಲ್ಲ
  ನಿಜ ಹೇಳಬೇಕೆಂದರೆ ನನಗೆ ಗೊತ್ತಿರುವ ಮನುಷ್ಯ
  ಇವನಲ್ಲವೇ ಅಲ್ಲ!

  ನಾನಂದುಕೊಂಡಷ್ಟು ಅವನು ಮನುಷ್ಯನಾಗಿಲ್ಲ
  ಅರ್ಧ ಮೃಗ
  ಅರ್ಧ ಮನುಷ್ಯ

  ಬಂಗಾಳಿ ಮೂಲ: ತಸ್ಲೀಮಾ ನಸ್ರೀನ್
  ಕನ್ನಡಕ್ಕೆ: ಉದಯ್ ಇಟಗಿ

  ಸ್ವಿಟರ್ಜ್‍ರ್ಲ್ಯಾಂ ಡಿನ ಹುಡುಗಿ

  ರಾತ್ರಿಯ ಔತಣಕೂಟವೊಂದರಲ್ಲಿ
  ಎಲ್ಲರ ಕೈಯಲ್ಲೊಂದು ಶ್ಯಾಂಪೇನ್
  ಇಲ್ಲವೇ ಬಿಳಿ ಮಧ್ಯದ ಗ್ಲಾಸು.

  ಎಲ್ಲರೂ ಸಾಲು ಸಾಲಾಗಿ ನಿಂತಿದ್ದರು
  ಮೊದಲಿಗೆ ದೊಡ್ದವರು ನನ್ನ ಕೈ ಕುಲುಕಿ ಅಭಿನಂದಿಸಲು ಬಂದರು,
  ಕೆಲವರು ನನ್ನ ಅನುಭವಗಳನ್ನು ಹಂಚಿಕೊಳ್ಳಲು ಬಂದರು,
  ಕೆಲವರು ನಾನ್ಹೇಗೆ ಆ ನರವಾನರರ ಗುಹೆಯಿಂದ
  ಜೀವಂತವಾಗಿ ಹೊರಬಂದೆ ಎಂದು ಕೇಳಲು ಬಂದರು,
  ಕೆಲವರು ನನ್ನ ಆಟೋಗ್ರಾಫ್ ಪಡೆಯಲು ಬಂದರು,
  ಕೆಲವರು ನನ್ನ ನೋಡಿ ಕಣ್ಣರಳಿಸಿ ಮೆಚ್ಚುಗೆ ಸೂಚಿಸಲು ಬಂದರು,
  ಕೆಲವರು ಮುತ್ತನ್ನಿಡಲು ಬಂದರು,
  ಕೆಲವರು ಹೂಗುಚ್ಛಗಳನ್ನು ಕೊಡಲು ಬಂದರು.

  ಇವರೆಲ್ಲರ ಮಧ್ಯ ಬಂಗಾರಗೂದಲಿನ ಹುಡುಗಿಯೊಬ್ಬಳು ಬಂದಳು
  ನನ್ನ ಕೈ ಕುಲುಕಲಲ್ಲ, ಅಥವಾ ನನ್ನ ಕಣ್ಣೀರ ಕಥೆಗಳನ್ನು ಕೇಳಲಲ್ಲ
  ‘ನಾನು ನಿಮ್ಮೊಂದಿಗೆ ಸ್ವಲ್ಪ ಹೊತ್ತು ಅಳಲು ಬಂದಿದ್ದೇನೆ ಅಷ್ಟೇ’ ಎಂದು ಹೇಳಿದಳು
  ಅವಳು ಅಷ್ಟು ಹೇಳಿದ್ದೇ ತಡ ಇಡಿ ಬ್ರಹ್ಮಪುತ್ರೆ ನನ್ನ ಕಣ್ಣೊಳಗಿಂದ ಉಕ್ಕಿ ಹರಿದಳು
  ಹೃದಯ ಬಿರಿಯುವಂತೆ ಅತ್ತು ಬಿಟ್ಟೆ!

  ನಾನು ಪೂರ್ವದವಳು
  ಅವಳು ಪಶ್ಚಿಮದವಳು
  ಆದರೂ ನಾವಿಬ್ಬರು ಸಮಾನ ದುಃಖಿಗಳು
  ನಾನು ಕರಿಯಳು, ಅವಳು ಕೆಂಬಣ್ಣದವಳು
  ಆದರೆ ನಮ್ಮಿಬ್ಬರ ನೋವುಗಳು ಸರಿಸಮನಾಗಿ ನೀಲಿಗಟ್ಟಿದ್ದವು.
  ನಾವಿಬ್ಬರು ಅಳುವ ಮುನ್ನ ನಮ್ಮಿಬ್ಬರ ನೋವಿನ ಕಥೆಗಳನ್ನು
  ಒಬ್ಬರಿಗೊಬ್ಬರು ಹೇಳಿಕೊಳ್ಳಬೇಕಾಗಿರಲಿಲ್ಲ.
  ಏಕೆಂದರೆ ಅವೇನೆಂದು ನಮ್ಮಿಬ್ಬರಿಗೂ ಚನ್ನಾಗಿ ಗೊತ್ತಿದ್ದವು!


  ಬಂಗಾಳಿ ಮೂಲ: ತಸ್ಲೀಮಾ ನಸ್ರೀನ್
  ಕನ್ನಡಕ್ಕೆ: ಉದಯ್ ಇಟಗಿ

  7 ಕಾಮೆಂಟ್‌(ಗಳು):

  ಜಲನಯನ ಹೇಳಿದರು...

  ಉದಯ್ ತಸ್ಲೀಮಾ ಒಂದು ಭಾವವ್ಯಕ್ತತೆಯ ಮಾಧ್ಯಮ..ಅದನ್ನು ನೀವು ಹೇಳಿದಂತೆ ಓದಬೇಕು ನೋಡಬಾರದು...ಮೆಲುಕು ಹಾಕಬೇಕು...ವಾಂತಿ ಮಾಡಬಾರದು...ಚನ್ನಾಗಿವೆ ನಿಮ್ಮ ಪ್ರಯತ್ನಗಳು.

  sunaath ಹೇಳಿದರು...

  ಉದಯ,
  ನಿಮ್ಮ ಅನುವಾದದಲ್ಲಿಯ ಭಾವನೆಗಳು ಮನಸ್ಸನ್ನು ಮುಟ್ಟುವಂತೆ ಬಂದಿವೆ. ಕರ್ನಾಟಕದಲ್ಲಿ
  ಗಲಭೆ ನಡೆದ ಈ ಸಮಯದಲ್ಲಿ ತಸ್ಲೀಮಾರ ಕವನಗಳನ್ನು ನೀವು ನೀಡಿದ್ದು ಅತ್ಯಂತ ಪ್ರಾಸಂಗಿಕವಾಗಿದೆ.

  Dr. B.R. Satynarayana ಹೇಳಿದರು...

  ಉದಯ್ ನೀವು ಪ್ರಾರಂಬದ ೆರಡನೇ ಪ್ಯಾರದಲ್ಲಿ ಹೇಳಿರುವ ಮಾತುಗಳು ಸತ್ಯಕ್ಕೆ ಎಷ್ಟು ಹತ್ತಿರವಾದವುಗಳು ಎಂದು ಈ ಮೂರು ಕವನಗಳನ್ನು ಓದುತ್ತಿದ್ದ ಹಾಗೇ ಗೋಚರಿಸುತ್ತದೆ. ಒಳ್ಳೆಯ ಆಯ್ಕೆ ಮತ್ತು ಅನುವಾದ.
  ಹೌದು ಕರ್ನಾಟಕ (ಶಿವಮೊಗ್ಗ ಹಾಸನ) ಭಾಗಶಃ ಹೊತ್ತಿ ಉರಿಯಿತು. ನಾನೂ ಕನ್ನಡಪ್ರಭದ ಾ ಲೇಖನ ೋದಿದ್ದೆ. ಆಗ ನನಗೇನೂ ಅನ್ನಿಸಿರಲೇ ಇಲ್ಲ. ಬೆಳಿಗ್ಗೆ ನೋಡಿದರೆ ಗೋಲಿಬಾರ್.
  ಆಶ್ಚರ್ಯವೆಂದರೆ ನಾನು ಆ ಲೇಖನವನ್ನೇ ಬರೆದಿಲ್ಲ ಎಂದು ತಸ್ಲೀಮಾ ಹೇಳಿಕೆಯಿತ್ತಿದ್ದಾರೆ! ಯಾವುದು ಸತ್ಯ. ಯಾರು ಈ ಅನುವಾದಕಿ? ಅನುವಾದಕ್ಕೆ ಮೂಲ ಲೇಖಕರ ಒಪ್ಪಿಗೆ ಪಡೆಯಲಾಗಿತ್ತೆ? ಎಲ್ಲವೂ ಕಲಸುಮೇಲೋಗರ.

  ಮನಸು ಹೇಳಿದರು...

  tumba chennagide kavanada saalugaLu

  shivu.k ಹೇಳಿದರು...

  ಉದಯ ಸರ್,

  ಹೊರಪ್ರಪಂಚದಲ್ಲಿ ಏನಾದರೂ ಅದನ್ನು ತಲೆಗೆ ಹಚ್ಚಿಕೊಳ್ಳದೇ ಮುಕ್ತ ಮನಸ್ಸಿನಿಂದ ತಸ್ಲೀಮಳನ್ನು ಓದಿದಾಗ ಆಗುವ ಅನುಭವವೇ ಬೇರೆ. ನಿಮ್ಮ ಅನುವಾದಿತ ಪದ್ಯಗಳು ನಿಜಕ್ಕೂ ತುಂಬಾ ಚೆನ್ನಾಗಿ ಮೂಡಿಬಂದು ಆಕೆಯ ಮನಸ್ಸಿನ ಭಾವನೆಗಳು[ನೇರವಾದ ಹೆಣ್ಣಿನ ಭಾವನೆಗಳು]ತಿಳಿಯುತ್ತಿವೆ. ಇನ್ನಷ್ಟು ಬರೆಯಿರಿ..

  ಸಾಗರಿ.. ಹೇಳಿದರು...

  ಉದಯ್ ಅವರೇ,
  ನಾನು ತಸ್ಲೀಮಾರ ಲಜ್ಜಾ ಓದಿದ್ದೇನೆ, ಅವರ ಬರವಣಿಗೆಯಲ್ಲಿ ಯಾರನ್ನೋ ದೂರಬೇಕೆಂಬ ಉದ್ದೇಶಕ್ಕಿಂತ ಸತ್ಯವನ್ನು ಹೇಳುವ ಬಯಕೆ ನಿಚ್ಚಳವಾಗಿ ಕಾಣುತ್ತದೆ. ತಸ್ಲೀಮಾ ಬಹಳ ದಿಟ್ಟೆ. ಕವನಗಳು ತುಂಬ ಖುಶಿಕೊಟ್ಟಿತು, ಅನುವಾದಿಸಿ ನಮಗೂ ಓದಲು ಅನು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.

  ತೇಜಸ್ವಿನಿ ಹೆಗಡೆ- ಹೇಳಿದರು...

  ಹೆಣ್ಣಿನ ಯಾತನೆಗಳನ್ನು, ನೋವುಗಳನ್ನು ಬಹು ಸೂಕ್ಷ್ಮವಾಗಿ ಆದರೆ ಸಮರ್ಥವಾಗಿ ತಿಳಿಸಿದ್ದಾರೆ ತಸ್ಲೀಮಾ. ಅನುವಾದಗಳಿಗೆ ತುಂಬಾ ಧನ್ಯವಾದಗಳು. ಅವರ ಬರಹವನ್ನೋದಿ ಎಂತಹವರಿಗೂ ಎಲ್ಲೋ ನೋವಾದ ಅನುಭವವಾಗುವುದು.