Demo image Demo image Demo image Demo image Demo image Demo image Demo image Demo image

ಮರ ಕತ್ತರಿಸುವದು

 • ಸೋಮವಾರ, ಮಾರ್ಚ್ 15, 2010
 • ಬಿಸಿಲ ಹನಿ

 • ಸ್ನೇಹಿತರೆ,
  ಭಾರತೀಯ ಇಂಗ್ಲೀಷ್ ಕವಿ ಗೀವ್ ಪಟೇಲ್ ಅಂಥಾ ಹೇಳಿಕೊಳ್ಳುವಂತ ಕವಿಯಲ್ಲವಾದರೂ ಅವನ ಈ ಕವಿತೆ ಬಹು ಚರ್ಚಿತ ಕವನಗಳಲ್ಲೊಂದು. ಏಕೆಂದರೆ ಇಲ್ಲಿ ಮರ ಕತ್ತರಿಸುವದು ಬರೀ ಮರವನ್ನಷ್ಟೇ ಕತ್ತರಿಸುವದಲ್ಲದೆ ಬೇರೆ ಬೇರೆ ರೂಪಕಗಳೊಂದಿಗೆ ವ್ಯಕ್ತವಾಗುತ್ತದೆ, ನಾನಾರ್ಥಗಳನ್ನು ಹೊರಹೊಮ್ಮಿಸುತ್ತದೆ. ಅದು ಮನುಷ್ಯನ ಕಾಮ ಆಗಿರಬಹುದು, ಆತನ ಸೊಕ್ಕು ಆಗಿರಬಹುದು, ಅಹಂಕಾರ ಆಗಿರಬಹುದು ಅಥವಾ ನಮ್ಮ ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾದ ಭೃಷ್ಟಾಚಾರವಾಗಿರಬಹುದು. ಇವಲ್ಲದೆ ಇನ್ನೂ ಬೇರೇನೋ ಆಗಿರಬಹುದು. ಅದನ್ನು ಓದುಗರು ಕಂಡುಹಿಡಿಯಬಹುದು. ನಾನು ಮೊದಲು ಇದನ್ನು ಅನುವಾದ ಮಾಡಲು ಹೋದೆ. ಸಾಧ್ಯವಾಗದೆ ಹೋದಾಗ ಭಾವಾನುವಾದ ಮಾಡಿದೆ. ಇದೀಗ ನಿಮ್ಮ ಓದಿಗಾಗಿ ಇಲ್ಲಿ ಕೊಡುತ್ತಿದ್ದೇನೆ. ಓದಿ ಅಭಿಪ್ರಾಯಿಸಿ.

  ಮರವನ್ನು ಕತ್ತರಿಸುವದೆಂದರೆ ಚಾಕುವಿನಿಂದ
  ಕಚ ಕಚನೆ ಕತ್ತರಿಸಿ ಒಗೆದಷ್ಟು ಸುಲಭವಲ್ಲ,
  ಅದು ತುಂಬಾ ಸಮಯವನ್ನು ತೆಗೆದುಕೊಳ್ಳುವ ಕೆಲಸ.
  ನಿಧಾನವಾಗಿ ಮೊಳಕೆಯೊಡೆದು
  ಭೂಮಿಯ ಆಳಕ್ಕೆ ಬೇರಿಳಿಸಿ
  ಅದರ ಸತ್ವವನ್ನೆಲ್ಲ ಹೀರಿ
  ಎಷ್ಟೋ ವರುಷಗಳ ಕಾಲ ಬಿಸಿಲು, ಮಳೆ, ಗಾಳಿಯನ್ನೆಲ್ಲ ಹೀರಿ
  ತನ್ನ ದಪ್ಪ ಚರ್ಮದಿಂದ ಎಲೆಗಳನ್ನೂ ಚಿಗುರಿ
  ರೆಂಬೆ ಕೊಂಬೆಗಳೊಂದಿಗೆ
  ಅಷ್ಟೆತ್ತರಕ್ಕೆ ಬೆಳೆದು ನಿಲ್ಲುತ್ತದೆ.
  ಹಾಗಾಗಿ ಅದನ್ನು ಕಡಿಯುವದು ಅಷ್ಟು ಸುಲಭವಲ್ಲ.
  ಮರವನ್ನು ಕಡಿಯುವದಾದರೆ
  ಬರೀ ಕಡಿದರೆ, ಕೊಚ್ಚಿದರೆ ಮಾತ್ರ ಸಾಲದು
  ಹಾಗೆ ನೋಡಿದರೆ ಅದನ್ನು ಕತ್ತರಿಸಲು
  ಯಾವ ಶ್ರಮವೂ ಸಾಕಾಗದು.
  ಕತ್ತರಿಸಿದ ಗಾಯ ಮಾಯುತ್ತದೆ
  ನಿಧಾನವಾಗಿ ಅದೇ ಜಾಗದಿಂದ
  ಮತ್ತೆ ಮರ ಚಿಗುರೊಡೆಯುತ್ತದೆ
  ರೆಂಬೆ, ಕೊಂಬೆಗಳೂ ಉದ್ದಕ್ಕೂ ಚಾಚಿಕೊಳ್ಳುತ್ತವೆ
  ನೋಡನೋಡುತ್ತಿದ್ದಂತೆ ಮೊದಲಿನಷ್ಟೇ
  ಹೆಮ್ಮರವಾಗಿ ಬೆಳೆದು ನಿಲ್ಲುತ್ತದೆ.

  ಹಾಗೆ ಒಂದು ವೇಳೆ ಮರವನ್ನು ಕತ್ತರಿಸಲೇಬೇಕೆಂದರೆ
  ಅದಕ್ಕೆ ಹಗ್ಗ ಸುತ್ತಿ ಗಟ್ಟಿಯಾಗಿ ಬಿಗಿದು
  ಭೂಗರ್ಭದೊಳಗಿಂದ ಪೂರ್ತಿಯಾಗಿ
  ಬೇರು ಸಮೇತ ಕಿತ್ತೆಸೆಯಬೇಕು.
  ಆಗ ಎಷ್ಟೋ ವರುಷಗಳಿಂದ
  ಭೂಮಿಯೊಳಡಗಿದ್ದ ಅದರ ಸತ್ವವ್ವೆಲ್ಲಾ ಉಡುಗಿ ಹೋಗಿ
  ನಿತ್ರಾಣವಾಗುತ್ತಾ ಬರುತ್ತದೆ.
  ಅಷ್ಟಕ್ಕೆ ನಿಮ್ಮ ಕೆಲಸ ನಿಲ್ಲಿಸಿದರೆ ಸಾಲದು
  ಅದರ ರೆಂಬೆಕೊಂಬೆಗಳನ್ನು ಒಂಚೂರು ಬಿಡದಂತೆ
  ಕಡಿಯಬೇಕು, ಕೊಚ್ಚಬೇಕು
  ಉರಿಬಿಸಿಲಲ್ಲಿ ಅವನ್ನೆಲ್ಲ ಒಣಗಿಸಬೇಕು
  ಸುಟ್ಟು ಕರಕಲಾಗಿಸಬೇಕು
  ತಿರುತಿರುಗಿ ಸುಡಬೇಕು
  ಸುಟ್ಟು ಬೂದಿ ಮಾಡಬೇಕು
  ಅಂದಾಗಲೇ ಮರವನ್ನು ಕತ್ತರಿಸದಂತೆ!

  ಇಂಗ್ಲೀಷ್ ಮೂಲ: ಗೀವ್ ಪಟೇಲ್
  ಭಾವಾನುವಾದ: ಉದಯ್ ಇಟಗಿ

  8 ಕಾಮೆಂಟ್‌(ಗಳು):

  ಮನಸು ಹೇಳಿದರು...

  nice sir,

  sunaath ಹೇಳಿದರು...

  ಉದಯ,
  ನೀವು ತಿಳಿಸಿದಂತೆ ಅನೇಕಾರ್ಥಗಳನ್ನು ಹೊಂದಿರುವ ಕವನವಿದು. ನಿಮ್ಮ ಭಾವಾನುವಾದ ಸುಂದರವಾಗಿದೆ.

  ಶಂಭುಲಿಂಗ ಹೇಳಿದರು...

  ಚೆನ್ನಾಗಿ ಅನುವಾದಿಸಿ ಕೊಟ್ಟಿದ್ದೀರಿ. ಧನ್ಯವಾದ

  shivu.k ಹೇಳಿದರು...

  ಉದಯ ಸರ್,

  ವಿಚಾರವನ್ನು ಓದಿದಾಗ ಅನೇಕ ಒಳ ಅರ್ಥಗಳು ಕಾಣುತ್ತವೆ. ಅದನ್ನು ಭಾವರ್ಥವನ್ನು ಅನುವಾದಿಸಿದ ನಿಮಗೆ ಧನ್ಯವಾದಗಳು.

  AntharangadaMaathugalu ಹೇಳಿದರು...

  ಅನುವಾದ ಸುಂದರವಾಗಿದೆ.... ಒಂದು ಗಿಡ ಬೆಳೆದು ಮರವಾಗುವುದೆಷ್ಟು ಕಷ್ಟವಿದೆಯೋ, ಬೃಹತ್ತಾಗಿ ಬೆಳೆದ ಮರವನ್ನು ಕತ್ತರಿಸುವುದೂ ಅಷ್ಟೇ ಕಷ್ಟ..

  Dr. B.R. Satynarayana ಹೇಳಿದರು...

  ಉದಯ್ ಒಳ್ಳೆಯ ಕವಿತೆ. ನಿಮ್ಮ ಅನುವಾದ ಚೆನ್ನಾಗಿ ಓದಿಸಿಕೊಂಡು ಹೋಯಿತು.

  PARAANJAPE K.N. ಹೇಳಿದರು...

  ಚೆನ್ನಾಗಿದೆ ಅನುವಾದಿತ ಕವನ, ಇನ್ನಷ್ಟು ಅನುವಾದಿಸಿ

  ಸಾಗರದಾಚೆಯ ಇಂಚರ ಹೇಳಿದರು...

  ಉದಯ್ ಸರ್
  ಸುಂದರ ಕವಿತೆ
  ಬಹಳ ಅರ್ಥ ಗರ್ಭಿತ