Demo image Demo image Demo image Demo image Demo image Demo image Demo image Demo image

ಎಲ್ಲುಂಟು ಒಲವಿರದ ಜಾಗ?

 • ಶನಿವಾರ, ಮಾರ್ಚ್ 20, 2010
 • ಬಿಸಿಲ ಹನಿ
 • 2007 ರಲ್ಲಿ ಲಿಬಿಯಾದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಉಪನ್ಯಾಸಕನಾಗಿ ಆಯ್ಕೆಗೊಂಡು ಭಾರತ ಬಿಟ್ಟು ಸಾಗರದಾಚೆಯ ಸಾವಿರ ಸಾವಿರ ಮೈಲಿ ದೂರವಿರುವ ಲಿಬಿಯಾಗೆ ಬಂದಿದ್ದೆ. ಗೆಳೆಯರು, ಸಹೋದ್ಯೋಗಿಗಳು “ನಮ್ಮ ಸುಂದರ ದೇಶ ಬಿಟ್ಟು, ಹೋಗಿ ಹೋಗಿ ಆ ಆಫ್ರಿಕಾ ದೇಶಕ್ಕೆ ಹೋಗತೀರಲ್ರಿ? ಬುದ್ದಿಯಿಲ್ಲ ನಿಮಗೆ” ಎಂದು ನೆಗಾಡಿದ್ದರು. ದುಡ್ದಿಗೆ, ಬುದ್ಧಿಗೆ ಆಫ್ರಿಕಾ ದೇಶ, ಯೂರೋಪ್ ದೇಶ, ಅರಬ್ ದೇಶ ಅಂತೆಲ್ಲಾ ಇರುತ್ತದೆಯೆ? ಎಲ್ಲಿ ನನ್ನ ಬುದ್ಧಿ ಬೆಲೆಬಾಳುತ್ತದೋ ಅಲ್ಲಿಗೆ ಹೋಗುವವನು ನಾನು. ಬುದ್ಧಿಗೆ ಹಾಗೂ ಅದನ್ನು ಹಿಂಬಾಲಿಸಿಕೊಂಡು ಬರುವ ದುಡ್ದಿಗೆ ಜಾಗದ ಹಂಗಿಲ್ಲ. ಅಥವಾ ’ಕೆಲಸ ಮಾಡಿದರೆ ನಮ್ಮ ದೇಶದಲ್ಲಿಯೇ ಮಾಡಬೇಕು’ ಎನ್ನುವ ಭಯಂಕರ ಸ್ವಾಭಿಮಾನದ ಕಟ್ಟಿಗೆ ಬಿದ್ದು ಸಿಕ್ಕ ಅವಕಾಶವನ್ನು ಕಳೆದುಕೊಳ್ಳುವ ಕಟ್ಟಾ ದೇಶಾಭಿಮಾನಿಯಾಗಲಿ ಅಥವಾ ಸಿಗದೇ ಇರುವ ಅವಕಾಶವನ್ನು ದೇಶಾಭಿಮಾನದ ನೆಪವೊಡ್ಡಿ ಹೋಗಲಿಲ್ಲ ಎಂದು ಹೇಳುವ ಸೋಗಲಾಡಿ ಮನುಷ್ಯನೂ ನಾನಲ್ಲವಾದ್ದರಿಂದ ಅವರ ಮಾತಿಗೆ ನನ್ನ ನಿರ್ಲಕ್ಷ್ಯ ನಗೆಯೊಂದನ್ನು ಉತ್ತರವಾಗಿ ನೀಡುತ್ತಾ ವಿಮಾನ ಹತ್ತಿದ್ದೆ.

  ಹೋಗುವ ಮುನ್ನ ನೂರು ಜನ ನೂರು ಮಾತಾಡಿದ್ದರು. ನಾನು ಆಯ್ಕೆಯಾದ ಸಂತೋಷದ ವಿಷಯವನ್ನು ನನ್ನ ಸಹದ್ಯೋಗಿಗಳ ಹತ್ತಿರ ಹಂಚಿಕೊಂಡಾಗ ಬಹಳಷ್ಟು ಜನ encourage ಮಾಡಿದ್ದಕ್ಕಿಂತ discourage ಮಾಡಿದ್ದೇ ಹೆಚ್ಚು. “ಅಯ್ಯೋ ಆಫ್ರಿಕಾ ದೇಶಾನಾ? ಅಯ್ಯೋ ರಾಮಾ! ಮುಗಿದು ಹೋಯ್ತು ನಿಮ್ಮ ಕಥೆ! ಅದೊಂದು ಕೆಟ್ಟ ಖಂಡ! ಅಲ್ಲಿಗ್ಯಾಕ್ರಿ ಹೋಗ್ತೀರಾ?” ಎಂದು ನನ್ನ ಸಹದ್ಯೋಗಿಯೊಬ್ಬರು ಇಡೀ ಆಫ್ರಿಕಾ ಖಂಡವನ್ನೇ ಸುತ್ತಿ ಬಂದವರ ತರ ಮತ್ತು ಆ ಇಡಿ ಖಂಡವೇ ಕೆಟ್ಟದಾಗಿದೆ ಎನ್ನುವ ತರ ಅಧಿಕೃತವಾಗಿ ಘೋಷಿಸಿ ಬಿಟ್ಟರು. ಇನ್ನೊಬ್ಬರು “ಅಲ್ಲಿ ಯೆಲೋ ಫಿವರ್, ಏಡ್ಸ್ ತುಂಬಾ ಜಾಸ್ತೀರೀ. ಹುಷಾರು!” ಎಂದು ಎಚ್ಚರಿಸಿದ್ದರು. ಇನ್ನು ಕೆಲವರು “ಅಲ್ಲಿ ಕಳ್ಳತನ, ಕೊಲೆ ಎಲ್ಲಾ ತುಂಬಾ ಕಾಮನ್ ಅಂತೆ. ಯಾವುದಕ್ಕೂ ಹುಶರಾಗಿರಿ. ರಾತ್ರಿ ಹೊರಗೆ ಒಬ್ರೇ ಎಲ್ಲೂ ಓಡಾಡಬೇಡಿ” ಎಂದು ನನ್ನ ಬಗ್ಗೆ ಕಳಕಳಿ ವ್ಯಕ್ತಪಡಿಸುತ್ತಾ ಒಂದಷ್ಟು ಉಪದೇಶಿಸಿದ್ದರು. ಮತ್ತೆ ಕೆಲವರು “ಫಾರಿನ್ಗೆ ಹೋಗೋದಾದರೆ UK, USA ಗೆ ಮಾತ್ರ ಹೋಗಬೇಕು. ಬೇರೆ ದೇಶಗಳಿಗೆ ಹೋದ್ರೆ ಏನು ಸುಖ ಇದೆ?” ಅಂತ ತಮ್ಮ ವಾದ ಮಂಡಿಸಿದರು. ಹೀಗೆ ಒಬ್ಬೊಬ್ಬರು ಒಂದೊಂದಾಗಿ ಹೇಳುತ್ತಲೇ ಇದ್ದರು. ಅವರಲ್ಲಿ ನಿಜವಾಗಿ ನನ್ನ ಬಗ್ಗೆ ಕಾಳಜಿಯಿತ್ತೋ, ಅಥವಾ ಮತೇನಾದರು ಇತ್ತೋ ಗೊತ್ತಾಗಲಿಲ್ಲ. ಏನಾದರಾಗಲಿ, ಸಿಕ್ಕ ಅವಕಾಶವನ್ನು ಯಾರು ಕಳೆದುಕೊಳ್ಳುತ್ತಾರೆ? ಎಂದುಕೊಂಡು ನಾನು ಲಿಬಿಯಾಗೆ ಹೋಗಲು ಮಾನಸಿಕವಾಗಿ ತಯಾರಿ ನಡೆಸಿದೆ.


  ಇವರೆಲ್ಲರು ಹೀಗೆ ಹೇಳುವಾಗ ಒಂಚೂರು ಅಧೀರನಾಗದ ನಾನು ಹೋಗುವ ದಿನ ಹತ್ತಿರ ಬಂದಂತೆ ನನ್ನೊಳಗೆ ಸಣ್ಣದೊಂದು ಆತಂಕ ಶುರುವಾಯಿತು. ಕಾಣದ ದೇಶ, ಕಾಣದ ಜನ, ಕೇಳದ ಭಾಷೆ ಹೇಗೋ ಏನೋ? ಇವರೆಲ್ಲ ಹೇಳುವದು ನಿಜವಾಗಿ ಬಿಟ್ಟರೆ? ಅಮೆರಿಕಾ, ಲಂಡನ್, ಜರ್ಮನಿಯಾದರೆ ಹೇಗೋ ಬದುಕಿಬಿಡಬಹುದು. ಆದರೆ ಇಲ್ಲಿ? ಇಲ್ಲಿಯ ಜನ ಒರಟಾಗಿರುತ್ತಾರೋ? ಮೃದುವಾಗಿರುತ್ತಾರೋ? ಇದು ಆಫ್ರಿಕಾ ದೇಶವಾಗಿದ್ದರಿಂದ ವಿದ್ಯಾರ್ಥಿಗಳು ತುಂಬಾ ಡಲ್ ಇರುತ್ತಾರೆ ಎಂದು ಯಾರೋ ಹೇಳಿದ್ದರು. ಅದು ನಿಜವೆ? ಎನ್ನುವ ಪ್ರಶ್ನೆಗಳು ಕಾಡತೊಡಗಿದವು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಿ ಮೊಟ್ಟಮೊದಲಿಗೆ ಲಿಬಿಯಾ ದೇಶದ ಕುರಿತು ಇಂಟರ್ನೆಟ್ನಲ್ಲಿ ಒಂದಿಷ್ಟು ಮಾಹಿತಿ ಹೆಕ್ಕಿ ತೆಗೆದಿದ್ದೆ. ಬಂದ ಮಾಹಿತಿಯೆಲ್ಲ ಸಮಾಧಾನಕರವಾಗಿದ್ದರೂ ಮನಸ್ಸಿಗೇಕೋ ಸಮಾಧಾನವಿರಲಿಲ್ಲ. ಕಾಣದ ಊರಲ್ಲಿ ಏನಾದರು ಆಗಿಬಿಟ್ಟರೆ? ಎನ್ನುವ ಭಯ, ಆತಂಕ ಇದ್ದೇ ಇತ್ತು. ಈ ಭಯ, ಆತಂಕಗಳನ್ನು ಹೊತ್ತುಕೊಂಡೇ ಅಕ್ಟೊಬರ್ 27, 2007 ರಂದು ನನಗೆ ಪೋಸ್ಟಿಂಗ್ ಆದ ಸೆಭಾಗೆ ಬಂದಿಳಿದೆ. ಆದರೆ ಅಲ್ಲಿಂದ ನಮ್ಮೆಲ್ಲರನ್ನೂ ಸೆಭಾ ವಿಶ್ವವಿದ್ಯಾನಿಲಯಕ್ಕೆ affiliate ಆಗಿರುವ ದೂರದ ಬೇರೆ ಬೇರೆ ಕಾಲೇಜುಗಳಿಗೆ ಕಳಿಸಿದರು. ಆ ಪ್ರಕಾರ ನನಗೆ ಸಿಕ್ಕಿದ್ದು ಸೆಭಾದಿಂದ 650K.M ದೂರವಿರುವ ಘಾಟ್ Arts & Science ಕಾಲೇಜು.


  ಮಾರನೆ ದಿವಸ ಟ್ಯಾಕ್ಸಿ ಡ್ರೈವರ್ ನಾನುಳಿದುಕೊಂಡಿರುವ ಹೋಟೆಲ್ಗೆ ನನ್ನನ್ನು ಪಿಕ್ ಮಾಡಲು ಬಂದ. ಬೆಳಿಗೆ 11.30ಗೆ ಸೆಭಾ ಬಿಟ್ಟು ಘಾಟಿನತ್ತ ಹೊರಟೆ. ದಾರಿಯುದ್ದಕ್ಕೂ ಜಗತ್ತಿನ ಅತಿದೊಡ್ದ ಮರಭೂಮಿ ಸಹರಾ ಅಡ್ದಲಾಗಿ ಮಲಗಿತ್ತು. ಅಲ್ಲಲ್ಲಿ ಮರಳು ಗುಡ್ಡಗಳು. ಅದರ ನಡುವೆ ಕಣ್ಣಿಗೆ ಒಂದಷ್ಟು ಖುಶಿ ಕೊಡುವ ಹಸಿರು ಗಿಡಗಂಟೆಗಳು. ನನ್ನ ಬದುಕಿನ ಹಸಿರನ್ನು ಈ ಮರಭೂಮಿಯಲ್ಲಿ ಹುಡುಕಿ ಬಂದಿದ್ದೆ. ಘಾಟ್ ತಲುಪಿದಾಗ ಸಂಜೆ ಆರು ಗಂಟೆ. ದಾರಿಯುದ್ದಕ್ಕೂ ಇದೇನಪ್ಪ ಎಲ್ಲಿ ನೋಡಿದರಲ್ಲಿ ಮರಳುಗಾಡು. ಇಂಥ ಜಾಗದಲ್ಲಿ ನಾನೊಬ್ಬನೇ ಇರಬೇಕೆ? ಎಂದು ಕೇಳಿಕೊಳ್ಳುತ್ತ ಬಂದಿದ್ದೆ. ಘಾಟ್ನ್ನು ಪ್ರವೇಶಿಸುತ್ತಿದ್ದಂತೆ ಡ್ರೈವರ್ ’ಇದು ಘಾಟ್’ ಎಂದು ಅರೆಬಿಕ್ ಭಾಷೆಯಲ್ಲಿ ಹೇಳಿದ. ನಂತರ ಅಲ್ಲಿ ಇಲ್ಲಿ ಹೋಗಿ ನಾನು ಸೇರಬೇಕಾದ ಜಾಗಕ್ಕೆ ಸೇರಿಸಿದ. ಅಲ್ಲೊಂದಿಷ್ಟು ಇಂಡಿಯನ್ ಮುಖಗಳನ್ನು ನೋಡಿ ಎದೆಗೆ ಎಷ್ಟೋ ಸಮಾಧಾನವಾಗಿತ್ತು.


  ಅಕಾಕುಸ್ ಪರ್ವತ
  ಸಂಬಳ, ಕೆಲಸ ತೃಪ್ತಿಕೊಟ್ಟರೂ ಏಕೋ ಈ ಜಾಗ ನನಗೆ ಒಗ್ಗಿ ಬರಲಿಲ್ಲ. ಇತ್ತ ಹಳ್ಳಿಯೂ ಅಲ್ಲದ ಅತ್ತ ಪಟ್ಟಣವೂ ಅಲ್ಲದ ಈ ಜಾಗ ನನಗೆ ಬೇಸರವನ್ನು ತರಿಸುತ್ತಿತ್ತು. ನಾನು ಹಳ್ಳಿಯಿಂದ ಬಂದಿದ್ದರೂ ಈಗಾಗಲೇ 8 ವರ್ಷಗಳನ್ನು ಬೆಂಗಳೂರಿನಲ್ಲಿ ಕಳೆದಿದ್ದರಿಂದ ಹಳ್ಳಿಗೆ ಹೊಂದಿಕೊಳ್ಳುವ ಸ್ವಭಾವ ಹೊರಟುಹೋಗಿತ್ತು. ಬೆಂಗಳೂರಿನಂಥ ದೈತ್ಯ ನಗರದ ಮುಂದೆ ಈ ಜಾಗದ ಕೊರತೆಗಳು ಎದ್ದು ಕಾಣಿಸತೊಡಗಿದವು. ಎತ್ತಣ ಬೆಂಗಳೂರು? ಎತ್ತಣ ಘಾಟ್? ನನ್ನ ಮಾಜಿ ಸಹೋದ್ಯೋಗಿಗಳು ನಾನು ಬರುವ ಮುನ್ನ ಹೇಳಿದ ಒಂದೊಂದು ಮಾತುಗಳು ಸರಿ ಎನಿಸುತ್ತಿತ್ತು. ಯಾಕಾದ್ರು ಬಂದೆನೋ? ಇಲ್ಲಿ ಒಂದು ಸರಿಯಾದ ಸಿನೆಮಾ ಥೇಟರ್ ಇಲ್ಲ. ಸಾಯಂಕಾಲ ಸುತ್ತಾಡಿಕೊಂಡು ಬರಲು ಒಂದು ಪಾಶ್ ಏರಿಯಾ ಇಲ್ಲ. ಒಂದು ಪಾರ್ಕ್ ಇಲ್ಲ. ತಿನ್ನಲು ನಮಗೆ ಒಗ್ಗುವ ತಿಂಡಿ ತಿನಿಸುಗಳಿಲ್ಲ. ಇನ್ನು ಜನ ಒರಟೊರಟು. ದಿನಾಲೂ ಸ್ನಾನ ಮಾಡುವದಿಲ್ಲ. ಅದಕ್ಕೆ ಅವರು ಯಾವಾಗಲೂ ಸುಗಂಧ ದ್ರವ್ಯಗಳನ್ನು ಬಳಸುವದು ಎಂದೆಲ್ಲಾ ತಿಳಿದು ಅಸಹ್ಯವಾಯಿತು. ಇರುವ ಕೆಲವೇ ಕೆಲವು ಅಂಗಡಿ ಮುಗ್ಗಟ್ಟುಗಳಿಗೆ ಹೋದರೆ ಅಲ್ಲಿ ಬರಿ ಅರೇಬಿಕ್ ಭಾಷೆಯಲ್ಲಿ ಮಾತನಾಡುತ್ತಿದ್ದುದು, ನಾವು ಅವರನ್ನು ಇಂಗ್ಲೀಷನಲ್ಲಿ ಅರ್ಥ ಮಾಡಿಸಲು ಹೆಣಗಾಡುತ್ತಿದ್ದುದು ಎಲ್ಲವೂ ಬೇಸರವನ್ನು ತರಿಸುತ್ತಿತ್ತು. ಹೋಗಲಿ ನಿಸರ್ಗದಲ್ಲಿ ಒಂದಿಷ್ಟು ಹಸಿರನ್ನಾದರು ನೋಡಿ ಆನಂದ ಪಡೆಯೋಣವೆಂದರೆ ಅದೂ ಇಲ್ಲ. ಎತ್ತ ನೋಡಿದರತ್ತ ಬರಿ ನಿಸ್ತೇಜ ಮರಳು ಗುಡ್ದಗಳೇ! ನಾನು ಹೋದಾಗ ಆಗಷ್ಟೆ ಚಳಿಗಾಲ ಶುರುವಾದ್ದರಿಂದ ಇಲ್ಲಿಯ ಚಳಿ ಅಸಹನೀಯವಾಗಿತ್ತು. ಮನೆಯಲ್ಲಿ ಹೀಟರ್ಗಡಳನ್ನು ಆನ್ ಮಾಡಿದ್ದರೂ, ಸ್ವೆಟರ್ ಧರಿಸಿದ್ದರೂ ಒಂದೊಂದು ಸಾರಿ ಮನೆಯೊಳಗಿದ್ದರೂ ಸಹ ಚಳಿಗೆ ನಡುಗುತ್ತಿದ್ದೆವು. ಕ್ರಮೇಣ ಇಲ್ಲಿಯ ವಾತಾವರಣ ನನ್ನನ್ನು ಒಂದು ರೀತಿಯ ಡಿಪ್ರೆಶನ್ಗೆರ ತಳ್ಳಿತು. ಯಾಕಾದರು ಬಂದೆನೋ? ಎನಿಸುತ್ತಿತ್ತು. ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದರೂ ಏಕೋ ನಮ್ಮ ಹಳ್ಳಿ ಇಷ್ಟವಾದಂತೆ ಇಲ್ಲಿಗೆ ಹೊಂದಿಕೊಳ್ಳಲು ಹೆಣಗಾಡತೊಡಗಿದೆ. ಈ ಮಧ್ಯ ದೂರದ ಇಂಡಿಯಾದಲ್ಲಿರುವ ಹೆಂಡತಿ, ಮಗಳು, ಬಂಧುಗಳು, ಸ್ನೇಹಿತರ ನೆನಪು ಕಾಡತೊಡಗಿತು.
  ಎಲ್ಲ ಬೇಸರಗಳಿಗೂ, ತಿರಸ್ಕಾರಗಳಿಗೆ ಒಂದು ಅಂತ್ಯವಿದ್ದಂತೆ ನನ್ನ ಬೇಸರಕ್ಕೂ, ತಿರಸ್ಕಾರಗಳಿಗೂ ಒಂದು ಅಂತ್ಯವಿತ್ತು. ದಿನ ಕಳೆದಂತೆ ಈ ಎಲ್ಲ ಕೊರತೆಗಳೊಂದಿಗೆ ಬದುಕುವದು ಅಭ್ಯಾಸವಾಯಿತು. ಇಂಥ ಕಡೆ ಬಂದಾಗ ವಾತಾವರಣ, ವ್ಯವಸ್ಥೆ ನಮಗೋಸ್ಕರ ಬದಲಾಗುವದಿಲ್ಲ ನಾವು ಅದಕ್ಕೆ ತಕ್ಕಂತೆ ಬದಲಾಗಬೇಕು ಎನ್ನುವ ಸತ್ಯದ ಅರಿವಾಯಿತು. ಹಾಗಾಗಿ ಮೊದಲು ನನ್ನನ್ನು ನಾನು ಬದಲಾಯಿಸಿಕೊಂಡೆ. ಬದಲಾಯಿಸಿಕೊಂಡ ಮೇಲೆ ಸ್ವಲ್ಪ ಕಾಲದಲ್ಲೇ ಅದು ಕೂಡ ಅರಾಮವಿನಿಸತೊಡಗಿತು. ಮೊದಲು ಎಲ್ಲವನ್ನೂ ಬೆಂಗಳೂರಿಗೆ ಹೋಲಿಸಿ ನೋಡುವದನ್ನು ನಿಲ್ಲಿಸಿದೆ. ಈ ಜಾಗವನ್ನು ಅದಿರುವಂತೆ ಸ್ವೀಕರಿಸತೊಡಗಿದೆ. ತಟ್ಟನೆ ಇಲ್ಲಿ ಪ್ರತಿ ಹಳ್ಳಿಗೂ ಒಂದು ಬ್ಯಾಂಕ್, ಒಂದು ಹಾಸ್ಪಿಟೆಲ್, ಒಂದು ಪೋಸ್ಟ್ ಆಪೀಸ್ ಕಲ್ಪಿಸಿದ್ದನ್ನು ನೋಡಿ ಖುಶಿಯಾಯಿತು. ಹಾಗೆ ನೋಡಿದರೆ ಭಾರತದಲ್ಲಿ ಪ್ರತಿಯೊಂದು ಹಳ್ಳಿಗೂ ಈ ಸೌಲಭ್ಯಗಳನ್ನು ಇನ್ನೂ ಕಲ್ಪಿಸಲು ಸಾಧ್ಯವಾಗಿಲ್ಲ. ಇಂಥ ಮರಭೂಮಿಯಲ್ಲೂ ಕುಡಿಯುವ ನೀರು ಅದೆಷ್ಟು ಸಿಹಿಯಾಗಿರುತ್ತದೆ ಮತ್ತು ಅದ್ಹೇಗೆ ಇಪ್ಪತ್ನಾಲ್ಕು ಗಂಟೆ ಸಿಗುತ್ತದೆ ಎನ್ನುವದೇ ನನಗಿನ್ನೂ ಅಚ್ಚರಿಯ ಸಂಗತಿ. ಮೇಲಾಗಿ ಇಲ್ಲಿ ಬದುಕು ದುಬಾರಿಯಿರಲಿಲ್ಲ. ಹೀಗಾಗಿ ನಾವು ಗಳಿಸಿದ್ದರಲ್ಲಿ ಬಹಳಷ್ಟನ್ನು ಉಳಿಸಬಹುದಿತ್ತು.


  ಕ್ರಮೇಣ ನನ್ನೊಟ್ಟಿಗೆ ಕೆಲಸ ಮಾಡುವ ಇಜಿಪ್ಸಿಯನ್, ಇರಾಕಿ ಹಾಗೂ ಸುಡಾನಿ ಸಹೋದ್ಯೋಗಿಗಳೊಂದಿಗೆ ಬೆರೆಯುವದನ್ನು ಕಲಿತೆ. ಅವರ ಮಾತುಕತೆ, ಅವರ ಒಡನಾಟ, ಅವರ ಸ್ನೇಹ ಹಿತವೆನಿಸತೊಡಗಿತು. ಅವರೆಲ್ಲ ನನ್ನನ್ನು ನನ್ನ ಕವಚದೊಳಗಿಂದ ಹೊರಗೆಳೆದು ಒಂದಿಷ್ಟು ಸಾಂತ್ವನ ನೀಡಿದರು. ಇಲ್ಲಿಯ ವಿದ್ಯಾರ್ಥಿಗಳೆಲ್ಲ ದಡ್ದರೆಂದು ಪೂರ್ವಗ್ರಹಪೀಡಿತನಾಗಿ ಬಂದ ನನಗೆ ಇಲ್ಲೊಂದಿಷ್ಟು ಅತಿ ಜಾಣ ವಿದ್ಯಾರ್ಥಿಗಳು ಕಾಣಿಸಿದ್ದರು. ಅವರಿಗೆಲ್ಲ ಅವರ ಓದಿನ ವಿಷಯದಲ್ಲಿ ನನ್ನ ಸಲಹೆ, ಸಹಕಾರಗಳನ್ನು ಕೊಡುತ್ತಾ ಸಂತೋಷಪಡುವದನ್ನು ಕಲಿತೆ. ಇಲ್ಲಿ ಬೆಂಗಳೂರಿನ ಯಾವುದೇ ಟ್ರಾಫಿಕ್ ಇಲ್ಲವಾದ್ದರಿಂದ ಇಲ್ಲಿಯ ಸ್ವಚ್ಛ ಗಾಳಿ ಮನಸ್ಸಿಗೆ, ಮೈಯಿಗೆ ಹಿತವೆನಿಸತೊಡಗಿತು. ಮೆಲ್ಲನೆ ಹೊರಗಿನ ವ್ಯವಹಾರಕ್ಕೆ ಬೇಕಾಗುವ ಒಂದಿಷ್ಟು ಅರೇಬಿಕ್ ಭಾಷೆಯನ್ನು ಕಲಿತೆ. ಇದೀಗ ಅಂಗಡಿಯವರೊಂದಿಗೆ, ತರಕಾರಿ ಮಾರ್ಕೆಟಿನಲ್ಲಿ ಒಂದಿಷ್ಟು ಚೌಕಾಶಿ ಮಾಡುವದನ್ನು ಕಲಿತೆ. ಇಲ್ಲಿ ಬೇಸಿಗೆಯಲ್ಲಿ ಕತ್ತಲಾಗುವದೇ ರಾತ್ರಿ ಒಂಬತ್ತರ ಮೇಲೆ. ಇದು ಮೊದಮೊದಲು ನನಗೆ ವಿಚಿತ್ರವಾಗಿ ಕಂಡಿತ್ತು. ಆದರೆ ಅದೇ ಕತ್ತಲ ರಾತ್ರಿಯನ್ನು ಕಾಯುತ್ತಾ ಕುಳಿತುಕೊಳ್ಳತೊಡಗಿದೆ. ಏಕೆಂದರೆ ನಿಧಾನವಾಗಿ ಕತ್ತಲಾಗುತ್ತಿದ್ದಂತೆ ಆಗಸದಲ್ಲಿ ಸೂರ್ಯ ಒಂದು ಬಿಳಿಚೆಂಡಿನತೆ ಹಾಲೋಜಿನ್ ಬಲ್ಬ್ ಎಸೆದಂತೆ ಕಾಣುತ್ತಿದ್ದರಿಂದ ಅಲ್ಲಿ ಉಂಟಾಗುವ ಅಪೂರ್ವ ದೃಶ್ಯವನ್ನು ನೋಡಿ ಮನಸ್ಸು ಖುಶಿಯಾಗುತ್ತಿತ್ತು. ಬೆಂಗಳೂರಿನಲ್ಲಿ ಕಾಣಸಿಗದ ಬಣ್ಣ ಬಣ್ಣದ ನಕ್ಷತ್ರಗಳು ಇಲ್ಲಿ ಧಾರಾಳವಾಗಿ ಸಿಗುತ್ತಿದ್ದವು. ಹುಣ್ಣಿಮೆಯ ದಿನ ಚಂದ್ರ ’ಅಕಾಕುಸ್’ ಪರ್ವತದ ಹಿಂದೆ ಕಣ್ಣುಮುಚ್ಚಾಲೆಯಾಡುವದು ಮನಸ್ಸಿನಲ್ಲಿ ಸುನಿತ ಬಾವನೆಗಳನ್ನು ಕೆರಳಿಸತೊಡಗಿತು. ಯಾವ ಮರಭೂಮಿಯನ್ನು ಬೇಸರದಿಂದ ನೋಡುತ್ತಿದ್ದೆನೋ ಅದೇ ಮರಭೂಮಿ ತನ್ನ ವಿವಿಧ ಚಿತ್ತಾರದ ಆಕೃತಿಗಳೊಂದಿಗೆ ನಿಂತಿರುವದು ಹಾಗೂ ಅದರ ಮಧ್ಯ ಅಲ್ಲಲ್ಲಿ ಇರುವ ಹಸಿರು ಗಿಡಗಳು ಕಣ್ಣಿಗೆ, ಮನಸ್ಸಿಗೆ ಮುದನೀಡತೊಡಗಿದವು. ಆ ಮರಳು ಗುಡ್ಡಗಳ ಹಿಂದೆ ಸೂರ್ಯ ತನ್ನ ಕೆಂಬಣ್ಣ ಚೆಲ್ಲುತ್ತಾ ಅಸ್ತಮಿಸುತ್ತಿರುವದು ಭಿನ್ನ ಅನುಭವವನ್ನು ಕೊಡುತ್ತಿತ್ತು. ಆ ಮೂಲಕ ಆ ಗುಡ್ದಗಳಿಗೆ ಜೀವ ಬಂದಿತ್ತು.


  ಅಕಾಕುಸ್ ಪರ್ವತದ ಹಿಂದೆ ಒಂದು ಮುಂಜಾನೆಯ ಸೂರ್ಯ

  ಇಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಧಾರಾಳವಾದ ಸಮಯ ಸಿಗುತ್ತಿತ್ತು. ಈ ಸಮಯವನ್ನು ಬಳಸಿಕೊಂಡು ಅವಾಗವಾಗ ಬರೆಯುತ್ತಿದ್ದ ನಾನು ನನ್ನ ಬರವಣಿಗೆಯನ್ನು ಯಾಕೆ ಮುಂದುವರಿಸಬಾರದು ಎಂದುಕೊಂಡು ಬ್ಲಾಗ್ ತೆರೆದೆ. ಆ ಮೂಲಕ ಮೊದಲಿಗಿಂತ ಸ್ವಲ್ಪ ಹೆಚ್ಚೇ ಬರೆದೆ. ಬೆಂಗಳೂರಿನಲ್ಲಿರುವಾಗ ಈ ಹಾಳಾದ್ದು ಬೆಂಗಳೂರು ಬಿಟ್ಟು ಯಾವುದಾದರೊಂದು ಹಳ್ಳಿಗೆ ಹೋಗಿ ಬದುಕಿಬಿಡಬೇಕು ಎಂದುಕೊಳ್ಳುತ್ತಿದ್ದೆ. ಈಗ ಇದು ಒಂದು ಹಳ್ಳಿಯಲ್ಲವೆ? ಇಲ್ಲಿ ಉಳಿಯುವ ಅದೃಷ್ಟ ತಾನೇ ತಾನಾಗಿ ಬಂದಿರುವದರಿಂದ ಯಾಕೆ ಉಪಯೋಗಿಸಿಕೊಳ್ಳಬಾರದು ಎನಿಸತೊಡಗಿತು. ನಾನು ಕೂಡ ನಿಧಾನಕ್ಕೆ ಬೇರಿಳಿಸಿ ಅರಳುವ ಪರಿ ಕಲಿತೆ. ಒಂದಿಷ್ಟು ಗೆಲುವಾದೆ. ಬದುಕು ಸಹ್ಯವೆನಿಸತೊಡಗಿತು. ಜನ ಇಷ್ಟವಾಗತೊಡಗಿದರು.

  ಯಾವುದೇ ಮನುಷ್ಯ ಎಲ್ಲಿ ಬೇಕಾದರು ಬದುಕಬಲ್ಲ. ಆದರೆ ಆತನಿಗೆ ಅಲ್ಲಿ ಬದುಕುವ ಕಲೆ ತಿಳಿದಿರಬೇಕಷ್ಟೆ. ಎತ್ತೆಂದರತ್ತ ಎಸೆದಲ್ಲಿ ನಿಧಾನವಾಗಿ ಬೇರಿಳಿಸಿ ಅರಳುವ ಪರಿ ಗೊತ್ತಿರಬೇಕಷ್ಟೆ. ಆಗ ಅವನು ಇಷ್ಟಪಡದೆ ಇರುವ ಜಾಗ ಯಾವುದಿರುತ್ತದೆ ಹೇಳಿ?
  -ಉದಯ್ ಇಟಗಿ

  11 ಕಾಮೆಂಟ್‌(ಗಳು):

  shivu.k ಹೇಳಿದರು...

  ಸರ್,

  ನಿಮ್ಮ ಬದುಕಿನ ಮುಖ್ಯ ಘಟ್ಟವನ್ನು ಎಷ್ಟು ಚೆನ್ನಾಗಿ ಅನಾವರಣ ಮಾಡಿದ್ದೀರಿ...ಇಷ್ಟಪಟ್ಟದ್ದು ಸಿಗದಿದ್ದಾಗ, ಸಿಕ್ಕಿದ್ದನ್ನೇ ಇಷ್ಟಪಡು ಅಂತಾರೆ...ನೀವು ಅಲ್ಲಿ ಹೊಂದಿಕೊಂಡಿದ್ದನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ...ಇದರ ಬಗ್ಗೆ ಮತ್ತಷ್ಟು ಬರೆಯಿರಿ..

  ಶಂಭುಲಿಂಗ ಹೇಳಿದರು...

  ನಿಜ ನಿಮ್ಮ ಮಾತು. ಕಷ್ಟಪಡುವುದಕ್ಕಿಂತಲೂ ಇಷ್ಟಪಟ್ಟು ಕೆಲಸ ಮಾಡಿದಾಗ ನೆಮ್ಮದಿ ಸಿಗುತ್ತದೆ. ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ , ಹಾಗೇ ಅಲ್ಲಿಯ ಚಿತ್ರಗಳನ್ನು ತೋರಿಸಿದ್ದಕ್ಕೆ ಧನ್ಯವಾದ ನಿಮಗೆ.

  PARAANJAPE K.N. ಹೇಳಿದರು...

  ಅಪರಿಚಿತ ನಾಡಿಗೆ ಉದ್ಯೋಗಾರ್ಥ ಹೋಗಿ, ಅಲ್ಲಿನ ಜನ ಜೀವನದೊ೦ದಿಗೆ ಹೊ೦ದಿಕೊ೦ಡು ಬಾಳ್ವೆ ನಡೆಸುತ್ತಿರುವ ನಿಮ್ಮ ಅನುಭವ ಕಥಾನಕ ಚೆನ್ನಾಗಿದೆ. ಒಲವಿನ ಸೆಲೆ ನಮ್ಮೊಳಗೆ ಇದ್ದರೆ ಮರುಭೂಮಿಯಲ್ಲೂ ಸ್ನೇಹದ ಸಿಹಿನೀರ ಬುಗ್ಗೆ ಸಿಗುತ್ತದೆ ಎ೦ಬುದನ್ನು ನೀವು ಕ೦ಡು ಕೊ೦ಡಿದ್ದೀರಿ.ಇನ್ನಷ್ಟು ಅನುಭವ ಗಳನ್ನೂ ಅನಾವರಣ ಗೊಳಿಸಿ.

  Dr. B.R. Satynarayana ಹೇಳಿದರು...

  ಚೆನ್ನಾಗಿದೆ ಉದಯ್. ನಿಮ್ಮ ತೊಳಲಾಟಗಳಿಎಗ ಻ಕ್ಷರರೂಪ ಚನ್ನಾಗಿಯೇ ತೊಡಿಸಿದ್ದೀರಿ. ಈ ರೀತಿಯ ತೊಳಲಾಟ ೆಲ್ಲರಿಗೂ ಒಇಂದಿಲ್ಲೊಂದು ಸಂದರ್ಭದಲ್ಲಿ ಒದಗಿ ಬಂದಿರುತ್ತದೆ. ಆದರೆ ಅದನ್ನು ಆಸ್ವಾದಿಸಿದಲ್ಲದೆ, ಇಷ್ಟೊಂದು ಸುಂದರ ಬರಹವನ್ನಾಗಿಸಿದ್ದಕ್ಕೆ ಅಭಿನಂದನೆಗಳು

  sunaath ಹೇಳಿದರು...

  ಬದುಕಿಗೆ ಅರ್ಥ ಕೊಡುವ ಕಲೆಯನ್ನು ಅರಿತುಕೊಂಡಿದ್ದೀರಿ, ಉದಯ. ಹೀಗಾಗಿ ನಿಮಗೆ ಮರುಭೂಮಿಯಲ್ಲಿಯೂ ಸಹ ಸಾರ್ಥಕ ಬದುಕು ಸಾಧ್ಯವಾಗಿದೆ.

  ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

  ಸರ್,
  ಹೊಸ ಜಾಗಕ್ಕೆ ಹೋದಾಗ ನನಗೂ ಮನಸ್ಸು ನೀರಿನಿಂದ ಹೊರಬಂದ ಮೀನಿನಂತೆನಿಸುವುದು. ನೀವದನ್ನು ನಿಭಾಯಿಸಿದ್ದು ಗ್ರೇಟ್. ಅಲ್ಲಿನ ಬದುಕಿನ ಬಗ್ಗೆ, ವಿಶೇಷಗಳ(ನಮಗೆ ಅಲ್ಲಿನ್ಬದೆಲ್ಲವೂ ವಿಶೇಷವೇ!) ಬಗ್ಗೆ ಬರೆಯುತ್ತಿರಿ.

  ಗೌತಮ್ ಹೆಗಡೆ ಹೇಳಿದರು...

  ಅದೇನು ಸರ್ ಅಕಾಕುಸ್ ಪರ್ವತ ! ಒಳ್ಳೆ ಪೇಂಟಿಂಗ್ ಥರ ಕಾಣುತ್ತೆ :):) ಬರಹ ಚೆನ್ನಾಗಿದೆ ಸರ್ :)

  ಬಿಸಿಲ ಹನಿ ಹೇಳಿದರು...

  ಗೌತಮ್,
  ಅದು ಪೇಂಟಿಂಗ್ ಅಲ್ಲ. ಡಿಜಿಟಲ್ ಕ್ಯಾಮರಾದಲ್ಲಿ ತೆಗೆದ ಫೋಟೋ!

  ಬಾಲು ಸಾಯಿಮನೆ ಹೇಳಿದರು...

  ತುಂಬಾ ಆಸಕ್ತಿಯಿಂದ ನಿಮ್ಮ ಅನುಭವಗಳನ್ನು ಓದಿದೆ. ಬದುಕಿನ ಪಯಣ ಏನೆಲ್ಲ ಕಲಿಸುತ್ತದೆ ಅಲ್ವಾ?
  ಮೊದಲ ಬಾರಿ ನಿಮ್ಮ ಬ್ಲಾಗನ್ನು ವರ್ಷಗಳ ಹಿಂದೆ ಓದಿದಾಗ ನನಗೂ ಹಾಗೆ ಅನ್ನಿಸಿತ್ತು. ಆ ಮರುಭುಮಿ ನಾಡಿಗೆ ಏಕೆ ಹೋಗಿದ್ದಾರಪ್ಪ ಎಂದು.
  ನನಗೂ ಈ ಅನುಭವ ಆಗಿದೆ.
  ಕೆಲವರ್ಷಗಳ ಹಿಂದೆ ಪಿಲಿಪೈನ್ಸ ಗೆ ಹೋದಾಗ; "ಪಿಲಿಪೈನ್ಸ? ಅದು ನಮ್ಮ ದೇಶಕ್ಕಿಂತ ಬಡ ದೇಸನಾ?" ಅಂತ ಅಲ್ಲಿಗೇ ಪ್ರಶ್ನೆ ಮುಗಿಯುತ್ತತ್ತು. ನಿಜವಾಗಿಯೂ ನನ್ನ ಎಲ್ಲ ವಿದೇಶ ಪ್ರಯಾಣಗಳಲ್ಲಿ ಅತಿ ಹೆಚ್ಚು ಕಲಿತದ್ದು ಆಗಲೇ. ಜನ ಯಾಕೆ ನಮಗಿಂತ ಬಡವರಿಂದ ಕಲಿಯುವುದು ಇರುವುದೇ ಇಲ್ಲ ಎಂದು ತಿಳಿಯುತ್ತಾರೋ ಗೊತ್ತಿಲ್ಲ!
  ಏನಾದರೂ ಕೊನೆಗೆ ಉಳಿಯುವುದು ಅನುಭವಗಳು ಮಾತ್ರ!.
  ಅನುವಾದಗಳ ಜೊತೆಗೆ ಅನುಭವಗಳನ್ನೂ ದಾಖಲಿಸುತ್ತಿರಿ. ಧನ್ಯವಾದಗಳು

  AntharangadaMaathugalu ಹೇಳಿದರು...

  ಉದಯ್ ಸಾರ್...
  ನೀವು ಬದುಕನ್ನು ಸ್ವೀಕರಿಸಿದ ರೀತಿ ತುಂಬಾ ಹಿಡಿಸಿತು. ಬೇರೆ ದಾರಿಯೇ ಇಲ್ಲ ಎಂದಾಗ, ಮನಸ್ಸು ಹೇಗೆ ಅಲ್ಲೇ, ತನಗೆ ಬೇಕದ್ದನ್ನು ಹುಡುಕ ತೊಡಗುತ್ತದೆ ಅಲ್ವಾ? ನಮ್ಮ ದೇಶದಲ್ಲೇ ಬೇರೆ ಕಡೆ ಹೋಗಿ, ಬದುಕುವುದು ಕಷ್ಟವಾಗಿರುವಾಗ, ನೀವು ಕಂಡರಿಯದ ಅಪರಿಚಿತ ಜಾಗದಲ್ಲಿ, ನಿಮ್ಮೊಳಗಿನ ಬರಹಗಾರನನ್ನೂ ಆಚೆ ತೆರೆದುಕೊಳ್ಳುವಂತೆ ಮಾಡಿರುವುದು ತುಂಬಾ ಶ್ಲಾಘನೀಯ ಸಾರ್... ಹೀಗೇ ಅಲ್ಲಿ ನಿಮಗೆ ಕಂಡ ಎಲ್ಲಾ ವಿಷಯಗಳನ್ನೂ ನಮ್ಮ ಜೊತೆ ಹಂಚಿಕೊಳ್ಳಿ... ಮತ್ತು ನಿಮ್ಮ ಕಣ್ಣಲ್ಲಿ ನಮಗೂ ಅವೆಲ್ಲವನ್ನೂ ತೋರಿಸಿ...

  ಬೆಂಕಿಕಡ್ಡಿ ಹೇಳಿದರು...

  I liked your way of changing yourselves to the available resources, which indeed every one should practice! Read your blog through avadhi n will follow now onwards.