ಲಂಕೇಶರ “ಅವ್ವ” ಕನ್ನಡ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲು. ಅದನ್ನು ಹೊರತು ಪಡಿಸಿ ಅವ್ವಂದಿರ ಮೇಲೆ ಬೇರೆ ಬೇರೆಯವರು ಸಹ ಬರೆದಿದ್ದಾರೆ. ಇವತ್ತು ಅವ್ವಂದಿರ ದಿನ. ಆ ವಿಶೇಷ ದಿನಕ್ಕಾಗಿ ಅವ್ವನ ಮೇಲೆ ನಮ್ಮ ತರುಣ ಕವಿಗಳು ಬರೆದ ಒಂದಿಷ್ಟು ಪದ್ಯಗಳನ್ನು ಇಂಟರ್ನೆಟ್ನದಲ್ಲಿ ಹೆಕ್ಕಿ ತೆಗೆದು ನಿಮ್ಮ ಮುಂದೆ ಇಡುತ್ತಿದ್ದೇನೆ. ಅವ್ವನ ಬಗ್ಗೆ ಭಿನ್ನ ಭಿನ್ನ ಭಾವನೆಗಳನ್ನು ವ್ಯಕ್ತಪಡಿಸುವ ಈ ಕವನಗಳು ನಿಮಗೂ ಇಷ್ಟವಾಗಬಹುದು ಎಂಬ ನಂಬಿಕೆಯಿಂದ ಇಲ್ಲಿ ಕೊಡುತ್ತಿದ್ದೇನೆ. ಓದಿ ಆನಂದಿಸಿ. ಅಂದಹಾಗೆ ಇಲ್ಲಿಯ ಕವನಗಳನ್ನು ಆಯಾಯ ಕವಿಗಳ ಒಪ್ಪಿಗೆಯಿಲ್ಲದೆ ನೇರವಾಗಿ ಅವರವರ ಬ್ಲಾಗಿನಿಂದ ಎತ್ತಿ ಹಾಕಿಕೊಂಡಿದ್ದೇನೆ. ಅವರೆಲ್ಲರೂ ನನ್ನನ್ನು ಕ್ಷಮಿಸುತ್ತಾರೆ ಎಂಬ ನಂಬಿಕೆಯಿಂದ ಅವರಿಗೆ ಒಂದು ಕೃತಜ್ಞತೆ ಹೇಳುತ್ತಿದ್ದೇನೆ.
ಅವ್ವ ಜೀತ ಮಾಡಲಾರೆ ನಾ.....
ಅವ್ವ ಜೀತ ಮಾಡಲಾರೆ ನಾನು
ತುತ್ತು ಅನ್ನಕ್ಕೆ, ತುಂಡು ಬಟ್ಟೆಗೆ ಮತ್ತೇ ಈ ತುಂಡು ಬದುಕಿಗೆ...
ಬೆಳಿಗ್ಗೆ ಎದ್ದು ಹಲ್ಲುಜ್ಜುವ ಮುಂಚೆ ಕೆಲಸದ ನೆನಪು
ಎಲ್ಲಾದನ್ನು ಅವಸರಸರವಾಗಿ ಮುಗಿಸಿ ಓಡಿದ್ದು ಸಾಕು
ಅವ್ವ ಜೀತ ಮಾಡಲಾರೆ ನಾನು.....
ಈಗೀಗ ಜೀತದ ಗತಿ ಮತ್ತು ಸ್ಥಿತಿ ಬದಲಾಗಿದೆ
ನೀಟಾಗಿರುವ ಅಂಗಿ ಮತ್ತು ಅದಕ್ಕೊಂದು ಟೈ
ಕೈಗೊಂದು ಬ್ಯಾಗು
ಕೃತಕ ನಗು...
ಕೃತಕ ಮರ್ಯಾದೆ....
ದೇಹದ ಸುವಾಸನೆ... ದುರ್ನಾತದ ಮನಸುಗಳು
ಅವ್ವ ಜೀತ ಮಾಡಲಾರೆ ನಾ......
- ಜಡಿ. ಜಿ
ಕೃಪೆ: http://jadijagathu.blogspot.com/
ಅವ್ವ
ಕಷ್ಟದ ಕಣ್ಣೀರು ಕೋಡಿ ಹರಿದಾಗಲೂ
ಸ್ಥೈರ್ಯ ತುಂಬಿ ಬೆಳೆಸಿದಾಕೆ,
ಬರೀ ಸೋಲು ಕಂಡುವನಿಗೆ
ಗೆಲುವಿನ ದಾರಿ ತೋರಿಸಿದಾಕೆ.. ಅವ್ವ
ಗೆದ್ದು ಬಂದಾಗ...
ಮರೆಯಲ್ಲಿ ನಿಂತು ಆನಂದಭಾಷ್ಪ ಸುರಿಸಿದಾಕೆ
ಎಂಥ ನೋವಿನಲ್ಲೂ ನಗು ತಂದಾಕೆ
ತಾನುಣ್ಣುವ ತುತ್ತನ್ನು
ತನ್ನ ಕರಳು ಕುಡಿಗೆ ತಿನ್ನಿಸಿದಾಕೆ.. ಅವ್ವ
ಮುನ್ನುಗ್ಗಲು ಕಸವು ತುಂಬಲು
ಹಿಮ್ಮೇಳವಾಗಿ ಶಕ್ತಿ ನೀಡಿದಾಕೆ
ರಾಗ ಕೆಟ್ಟು ಭಾವ ಸೋತಾಗ
ತಾನೇ ತಂಬೂರಿ ಕೈಗಿತ್ತಿಕೊಂಡಾಕೆ.. ಅವ್ವ
ಮಾತು ಕಲಿಸಿ; ನೀತಿ ತಿಳಿಸಿ
ಸದ್ಗತಿಯ ಸಾಧ್ಯತೆ ತೋರಿಸಿದಾಕೆ
ಸಾಧ್ಯ-ಅಸಾಧ್ಯಗಳ ತೋಳಲಾಟದಲ್ಲಿ
ತಾನೇ ನಿಂತು ನೆರವಾದಾಕೆ.. ಅವ್ವ
ಆದರೆ........
ಆಕೆಗೆ ನೀ ಕೊಟ್ಟಿದ್ದಾರೂ ಏನು
ಬರೀ ಕಣ್ಣೀರು.. ತೋರಿಸಿದ್ದು
ವೃದ್ಧಾಶ್ರಮ ಬಾಗಿಲು...
-ಮಲ್ಲಿಕಾರ್ಜುನ ತಿಪ್ಪಾರ
ಅವ್ವ ಅಲ್ಲವೋ....ನಾ... ನಿನ್ನ ಅಕ್ಕ...
ಅವ್ವ ಅಲ್ಲವೋ....
ನಾ... ನಿನ್ನ ಅಕ್ಕ...
ಬೆಕ್ಕು ಕಂಡರು ಪಕ್ಕನೆ ತೆಕ್ಕಿಬೀಳುವ
ಕಪ್ಪು ಕತ್ತಲ ಪರದೆಗೂ ರೆಪ್ಪೆ ಬಿಗಿಯುವ
ಪುಟು ಪುಟು ಹೆಜ್ಜೆಯ ಪುಕ್ಕನನ್ನು
ಲಂಗದ ನಿರಿಗೆಯಲ್ಲಿ ಬಚ್ಚಿಟ್ಟುಕೊಂಡವಳು...
ಮಣ್ಣು ಗೋಡೆಗೆ ಮೊಳೆ ಹೊಡೆದು
ನಿನ್ನ ಚೋಟುದ್ದದ ಅಂಗಿ ಚಡ್ಡಿ ಸಿಕ್ಕಿಸಿ
ಅರಳುಗಣ್ಣಿಗೆ ತುಂಬಿಸಿ
ಚಪ್ಪಾಳೆ ತಟ್ಟಿ ಕುಣಿದವಳು....
ಅಪ್ಪ ಕೊಟ್ಟ ಒಂದೇ ದುಡ್ಡಿಗೆ
ಎರಡು ಬಂಬೈ ಮಿಠಾಯಿ ಗುಡ್ಡಗಳು
ನಿಂದೆಲ್ಲ ನುಂಗಿ, ನನ್ನದೂ
ಇಡಿಯಾಗಿ ನೆಕ್ಕಿ ನಕ್ಕಾಗ
ದನಿ ಎತ್ತದೆ ಜೊಲ್ಲು ನುಂಗಿದವಳು....
ಬಾಗಿಲು ದಾತಟುತ್ತಲೇ ಬಗಲೇರಿ ಕುಂತು
ಒಲ್ಲದ ಶಾಲೆಯ ಹಾದಿಯ
ನಡುವೆ ... ಕಲ್ಲ ಮೇಲೆ ಗುದುಮುರುಗಿ
ಅತ್ತು ಕರೆದು ... ಚೂರಿ-ಗೀರಿ
ಅಕ್ಕೊರು ಕಾಣುತ್ತಲೇ ಗಪ್ ಚಿಪ್....
ಎಳೇ ಉಗುರಿನ ಗೀರೂ
ನೆತ್ತರು ಜಿನುಗಿಸಿದ ಕೈಯ
ಅವ್ವನ ಮುಂಚಾಚಿ
ಲಂಗದ ಚುಂಗಿನಿಂದ ಕಣ್ಣೊತ್ತಿಕೊಂಡಾಗ...
'ಛೀ ... ಸಣ್ಣ ತಮ್ಮ ಚೂರಿದರ
ಬಿಕ್ಕಿ ಬಿಕ್ಕಿ ಅಳತೀಯ.......
ಹುಚ್ಚೀ ಹಳೆ ಹುಚ್ಚಿ ಎಂದಾಗ....
ಅವರೆ ಚಪ್ಪರದಡಿ ಅಡಗಿ .... ಉಡುಗಿ...
ಉಫ್ ಉಫ್ ಊದಿಕೊಂಡವಳು..
ಇಲ್ಲಿ... ಇಲ್ಲೀಗ ...
ನನ್ನ ಖೋಲಿಯ ಗೋಡೆಯ ಮೂಲೆಗೆ
ಕೊಟ್ಟ ಮನೆಯ ದತ್ತ ನೆನಪಿಗೆ
ಗುರುತಾಗಿ ಉಳಿದವರ.....
ಕೈಯ ಹಿಡಿದವರ ... ಒಡನೆ ನಡೆದವರ ....
ಬಳಗ... ಭಾವ ಚಿತ್ರಗಳ ಸಾಲು
ಎಲ್ಲಕೂ ಸೇರಿ ಸುತ್ತು ಬಂದ
ಗಂಧ ಆರಿದ ಗಂಧದ ಹಾರ....
ಕಳೆದು ಹೋದವರು ಕ್ರಮವಾಗಿ ಕುಂತಿಲ್ಲ
ಅಲ್ಲಿ.......
ವಯಸು ವಯಸಿನ ಸರದಿ ಸಾಲು ಅಲ್ಲ
ಅಂಗಿ ತೊಟ್ಟ ತಂಗಿ..... ಪಟಗ ಸುತ್ತಿದ ಅಪ್ಪ....
ಟೈ ಕಟ್ಟಿದ ಅಣ್ಣ...
ಮುಸುಕು ಸೆರಗಿನ ಅವ್ವ ಕೊನೆಗೆ.......
ಯಾರ ಭಾವಚಿತ್ರದ ನೋಟ
ಯಾರ ಕಣ್ಣಿಗೆ ಉಂಟೋ
ಬದುಕು .... ಆದರೂ... ಇದಕೂ
ಭಾವ ಬಂಧುರದ ನಂಟು
ಅವ್ವ ಅಲ್ಲವೋ ... ನಾ ನಿನ್ನ ಅಕ್ಕ
ಹೇಳದೆ ಹೇಗಿರಲಿ ... ?
ಹೆಕ್ಕದೇ ಹೇಗಿರಲಿ
ಅದು ನನ್ನ ನೆನಪಿನ ಬಿಕ್ಕು.....
-ಅನಸೂಯ ಸಿಧ್ಧರಾಮ
-ಕೃಪೆ: http://bhaavabutti.blogspot.com/
ಅವ್ವ ನೀ ಮತ್ತ್ಯಾವ ಹೆಣ್ಣಲ್ಲಿ ಸಿಗುತ್ತಿ ?
ಕಪ್ಪು ಮಸಿ ಬಣ್ಣದ ತೊಲೆಯ ಮೇಲೆ
ನಿಂತ ಕಟ್ಟಿಗೆಯ ಓರೆ ಸೂರು
ಸಗಣಿ ಸಾರಿದ ಘಮ್ಮೆನ್ನುವ ಅಂಕು
ಡೊಂಕು ನೆಲದ ಮೇಲೆ ಕೂರು
ಅಪ್ಪನ ಸಿಟ್ಟಿನಂತೆ ಧಗಧಗಿಸುವ ಕಟ್ಟಿಗೆಯ ಒಲೆ
ಹೊಗೆ ತುಂಬಿ ಸಿಟ್ಟು ಬಿಟ್ಟು ಹೋದ ಕಣ್ಣೀರ ಕಲೆ
ಅಮ್ಮನ ಸುಟ್ಟು ಸುಕ್ಕುಗಟ್ಟಿದ ಕೆನ್ನೆಯ ಚರ್ಮದ ಮೇಲೆ
ದೂರದ ಹಳ್ಳದ ತೊರೆಯಿಂದ ತಂದ ಕುಡಿಯುವ ನೀರು
ಶಾಂತ ಮುಖದ ಹಣೆಯ ಮೇಲೆ ಮೂರು ಚಿಂತೆಯ ಗೀರು
ಏನೂ ಕೊಟ್ಟಿಲ್ಲ ಆ ದೇವ ಅವಳಿಗೆ
ಕೊಟ್ಟಷ್ಟೂ ಅವಳು ಕೊಟ್ಟಿದ್ದಾಳೆ ತನ್ನ ಮಕ್ಕಳಿಗೆ
ಆಕ್ಷೇಪ ಆಸೆಗಳಿಲ್ಲ ಬದುಕಿನೊಂದಿಗೆ ತನ್ನ ಬಗ್ಗೆ
ಎಂದೂ ಬತ್ತದ ಮಮತೆಯ ಚಿಲುಮೆ ಆ ಬುಗ್ಗೆ
ಮಗನ ತೋಳ್ಗಳಲಿ ತನ್ನ ಬಲ ಕಂಡಳು
ಮಗಳ ಮೂಗುತಿಯಲಿ ತನ್ನ ಸೌಂದರ್ಯ ಪಡೆದಳು
ಏನೂ ಕೊಡದಿದ್ದರೂ ಪಡೆದಷ್ಟಕ್ಕೇ ಧನ್ಯಳು ತನ್ನ ಗಂಡನಿಗೆ
ಬಿಸಿಲು ಮಳೆ ಚಳಿ ಎನ್ನದೇ ಬಡಿಸುವಳು ರುಚಿ ರುಚಿ ಅಡುಗೆ
ಇದ್ದ ಅಲ್ಪ ಮೃಷ್ಟಾನ್ನ ಹಂಚಿ ನಮ್ಮನು ಉಣಿಸಿ ಪಡೆವಳು ತೃಪ್ತಿ
ತಣ್ಣೀರು ಕುಡಿದು ಬರೀ ನೆಲದ ಮೇಲೆ ಮಲಗಿ ನೂರ್ಕಾಲ
ಬಾಳಿದ ನನ್ನ ತಾಯಿ ಬಹು ಗಟ್ಟಿಗಿತ್ತಿ
ಎಂದೆಲ್ಲ ಹೇಳಿದಾಗ ಮೂತಿ ಸೊಟ್ಟ ಮಾಡಿಕೊಂಡು
ಹಾರಿ ಹೋಗಿತ್ತು ನನ್ನ ಪಾತರಗಿತ್ತಿ !
ಅವ್ವ ನೀ ಮತ್ತ್ಯಾವ ಹೆಣ್ಣಲ್ಲಿ ಸಿಗುತ್ತಿ ?
- ಮೊಹಮ್ದ್ ರಫಿಕ್ ನರೇಗಲ್
- ಕೃಪೆ: http://thatskannada.oneindia.in
ಈ ಅಪ್ಪ ಈ ಅಮ್ಮ
ಈ ಅಮ್ಮ
ನನ್ನ ಹಡೆದು
ಸಾವ ಅಂಚಲ್ಲಿ ಕೊಂಚ ನಿಂತು
ಅವತ್ತೇ ರಟ್ಟೆ ಬೀಸಿ ರೊಟ್ಟಿ ಬಡಿದಳು
ನಮ್ಮಮ್ಮ
ಮಲ್ಲಿಗೆ ಮುಖದ
ಅದನೆ೦ದೂ ಮುಡಿಯದ ಓನಾಮ
ಓದಲು ಆಕೆಗೆ ಅಕ್ಷರ ಬೇಡ
ಕಪ್ಪು ಬಿಳುಪಿನ ಮಕ್ಕಳ ಮೈ ಸಾಕು
ಮಾಡಲು ಆಕೆಗೆ ನೂರೆಂಟು ಕೆಲಸ
ಆಳು ಕಾಳು ಎಮ್ಮೆ ಮನೆ ಮಕ್ಕಳು
ಚೀರುವ ಮಗುವಿನ ಕುಂಡೆ ತೊಳೆದು
ಅದೇ ಕೈಯಲಿ ರೊಟ್ಟಿಯ ಬಡಿವಳು
ಒಬ್ಬೆಯ ಮೇಲೊಬ್ಬೆ
ಮೌನದ ತುತ್ತಿಗೆ ಯಾವ ಲೆಕ್ಕ?
ಅಮ್ಮನ ಮೇಲೆ ಹಾಡು ಕಟ್ಟಿ
ಕತೆ ಹೇಳಿವೆ ಪದಗಳು ಒಂದಿಲ್ಲೊಂದು
ಅಮ್ಮ ಮಗುವಿನ ತಾಯಿಯಂತೆ
ತಂದೆಗೆ ಮಡದಿಯೆಂತೆಲ್ಲ ಇದ್ದರೆ
ಈ ಜನ
ಅಮ್ಮನನ್ನು ನೆನಪು ಮಾಡುತ್ತಿರಲಿಲ್ಲ
ಅಪ್ಪನ ಮದುವೆಯಾದ ಅವಳ
ಗೊತ್ತೇ ಆಗದಂತೆ
ತಪ್ಪು ಮಾಡಿದ ತಪ್ಪಿಗೆ
ಅಮ್ಮನೂ ಕಾರಣವಿರಬೇಕು
ನಾನಿರುತ್ತಿರಲಿಲ್ಲ
ಹಾಲು ಹೈನ ಮಾಡುವ ಅಮ್ಮ
ಅಪ್ಪನನ್ನು ಹಾಲಲ್ಲಿ ಅದ್ದಿ
ಮೈ ತೊಳೆದಳು
ಅಪ್ಪನೂ ಅಷ್ಟೆ; ಪ್ರೀತಿ ಉಣಬಡಿಸಿದ
ಅನ್ಯೋನ್ಯವಾಗಿರುವಾಗಲೆ
ಯಾಕೋ ಏನೋ ಚೀರುವಳು ಅಮ್ಮ
ಒಮ್ಮೊಮ್ಮೆ ರಂಪ, ಹಲವು ಸಲ ಅನುಕಂಪ
ಇಲ್ಲ ಅಂದು ಕೇಳಲಿಲ್ಲ, ಇದೆ ಎಂದೂ ಅನ್ನಲಿಲ್ಲ
ಊರ ಉಸಾಬರಿ ಮಾಡಲಿಲ್ಲ; ಅಗಸೆ ದಾಟಲಿಲ್ಲ
ಯಾರ ಮಣ್ಣಿಗೂ ಹೋಗುವದು ಬಿಡಲಿಲ್ಲ
ಕಚ್ಚೆ ಏರಿಸಿ ಗಂಡ್ರಾಮಿಯಾಗಿ ದುಡಿದಳು
ಗಂಡಸು ಎತ್ತದಷ್ಟು ಮೇವು ಹೊರೆ ಹೊತ್ತಳು
ಕಂದ ಹಾಕಿದ ಎಮ್ಮೆಗೆ ಮುಖ ಗಂಟಿಕ್ಕಿದಳು
ಬೇಸಿಗೆಯಲ್ಲಿ ಖುಲ್ಲಾ ಹೊಡೆದು ಊರೂರು
ಅಲೆದು
ಮುಸಿಮುಸಿ ಅತ್ತಳು;ಎಲ್ಲಾ ಎಮ್ಮೆಗೆ
ಗಾಂಧಿ ಮನೆತನದ ಹೆಸರೇ ಇಟ್ಟಳು
ಅಪ್ಪ ನಿಜವಾಗಲೂ ಅಮ್ಮನನ್ನು
ತುಂಬಾ ಪ್ರೀತಿಸುವವ
ಇದು ಹೀಗೆಂದು ಒಂದು
ಮುಂಜಾವು ನನಗೆ ಗೊತ್ತಾಯಿತು
ಅಮ್ಮನೇನೂ ಕಡಿಮೆ ಇರಲಿಲ್ಲ!
ಅವರ ರಾತ್ರಿಗಳು ಮೌನ ರಾಗಗಳಾಗಿ
ಬೆಳಿಗ್ಗೆ ನನಗೆ ಅಪ್ಪನಿಗೆ
ಉಣಬಡಿಸುವಾಗಲೆ ಗೊತ್ತಾಗುತ್ತಿತ್ತು
ಅಪ್ಪನ ಮೈಸೂರು ಸ್ಯಾಂಡಲ್ಲು
ಅಮ್ಮನ ಬರಿ ಮೈ ಸ್ನಾನ
ನನ್ನಲ್ಲಿ ಗಾಢವಾದ ಮೌನ, ಅಕ್ಕರೆ,ಸಂಶಯ
ಈ ಅಪ್ಪ ಈ ಅಮ್ಮ
ಎಲ್ಲಿ ಹೋದರು
ಗೊತ್ತಾಗುತ್ತಿಲ್ಲ.
-ಶಿವರಾಜ ಬೆಟ್ಟದೂರು, ರಾಯಚೂರು
ಕೃಪೆ: http://navu-nammalli.blogspot.com/
ಅವ್ವ
ಎರಿ ಮಣ್ಣಿನ ಕರಿ ಬಣ್ಣದ್ಹಾಂಗ
ಇರೋ ನನ್ನವ್ವ
ಅಂಥಾ ಗಂಡನ್ನ ಕಟಗೊಂಡು
ಪಡಬಾರದ್ದ ಪಟ್ಟು
ಏಗಬಾರದ್ದ ಏಗಿ
ಊರಾಗ ನಾಲ್ಕು ಮಂದಿ
ಹೌದು ಹೌದು ಅನ್ನೋಹಂಗ
ಬಾಳೆ ಮಾಡದಾಕಿ.
ಅಂಥಾ ಎಡಾ ಹೊಲದಾಗ
ದುಮು ದುಮು ಬಿಸಿಲಾಗ
ಬೆವರು ಹರಿಸಿ ಬಂಗಾರ ಬೆಳಿತೇನಿ
ಅಂತ ಹೋದಾಕಿ.
ಬಂಗಾರ ಇಲ್ದ ಬೆಳ್ಳಿ ಇಲ್ದ
ಬರೆ ಎರಡು ಸೀರ್ಯಾಗ
ಜೀವನಾ ಕಂಡಾಕಿ.
ಹೊಲ್ದಾನ ಹ್ವಾರೆನೂ ಮಾಡಿ
ಮನ್ಯಾಂದೂ ನೋಡಿ
ಯಾವಾಗ್ಲೂ ಮಾರಿ ದುಮು ದುಮು ಉರಿಸ್ಕೋಂತ
ಮನ್ಯಾಗ ಕೂತ್ಗೊಂಡು ತಿನ್ನೋ ಗಂಡನ್ನೂ ಸಂಭಾಳಿಸಿ
ಹಾಡ ಹಾಡತಾ ಹಾಡಾದಾಕಿ.
ಇಂಥಾ ಗಂಡನ್ನ ಕಟಗೊಂಡ ಮ್ಯಾಲೆ
ಮಕ್ಕಳ್ನ ಹಂತ್ಯಾಕ ಇಟಗೊಂಡು
ಜ್ವಾಪಾನ ಮಾಡಲಾರದ
ದೈನೇಸಿಪಟಗೊಂಡು
ಬ್ಯಾರೆದವರ ಹತ್ರ ಇಟ್ಟು
ವಿಲ ವಿಲ ಅಂತ ಒದ್ದಾಡದಕಿ.
ಮಕ್ಕಳು ಕೈಗೆ ಬಂದ ಮ್ಯಾಲೆ
ಅವರಂತ್ಯಾಕಿದ್ದು ಜೀವನದ ಸುಖ ಕಾಣತೇನಿ
ಅಂತ ಆಸೆ ಪಟ್ಟಾಕಿ.
ಸೊಸ್ತೇರ ಕೈಲಿ ಸ್ವಾಟಿ ತಿವಿಸಿಗೊಳ್ಳಲಾರದ್ದಕ್ಕೋ
ಇಲ್ಲ ಕಟಗೊಂಡ ಗಂಡ
ತನ್ನ ಜೊತಿ ಮಕ್ಕಳ ಹತ್ರ ಇರಲಾರದ್ದಕ್ಕೋ ಏನೋ
ನಂದಿಷ್ಟೇ ಹಣೆಬರಹ ಅನ್ಕೊಂಡು
ಹೊಳ್ಳಿ ಊರಿಗೆ ಹೋದಾಕಿ.
ಬರೆ ಬಿಸಿಲಾಗ ದುಡ್ಕೊಂತ
ಬೆಳದಿಂಗಳ ನಗಿ ನಕ್ಕು ಬೆಳಕು ಹರಿಸಿದಾಕಿ.
ಮಣ್ಣಾಗ ಹುಟ್ಟಿ
ಮಣ್ಣಾಗ ಬೆಳೆದು
ಮಣ್ಣಾಗಿ ಹೋದಾಕಿ.
-ಉದಯ ಇಟಗಿ
ಕಲಾವಿದರು ಬೇಕಾಗಿದ್ದಾರೆ
1 ದಿನದ ಹಿಂದೆ
7 ಕಾಮೆಂಟ್(ಗಳು):
tumba chennagive kavanagalu
ಉದಯ,
’ಅವ್ವನ ದಿನ’ದಂದು ತುಂಬ ಸುಂದರವಾದ ಕವನಗಳನ್ನು ನಮಗೆ ಹುಡುಕಿ ಕೊಟ್ಟಿದ್ದೀರಿ.
ನಿಮಗೆ ಧನ್ಯವಾದಗಳು.
ಸರ್.
ಅಮ್ಮನ ದಿನಕ್ಕಾಗಿ ಎಲ್ಲೆಲ್ಲಿ ಹುಡುಕಿ ಪದ್ಯಗಳನ್ನು ತಂದಿದ್ದೀರಾ...ಒಂದಕ್ಕಿಂತ ಒಂದು ತುಂಬಾ ಚೆನ್ನಾಗಿವೆ..
Kavanagalu chennaagiddavu.. Aadare idenidu avvana dina?? Huh naavu yetta saaguttiddeve?
ಉದಯ್ ಸಾರ್........
ತುಂಬಾ ಚೆನ್ನಾದ ಕವನಗಳು.... ಕವನದ ಮಾತುಗಳು ಎಲ್ಲವೂ ವಾಸ್ತವವೇ... ತುಂಬಾ ಚೆನ್ನಾಗಿದೆ ಎನ್ನುವ ಮಾತುಗಳು ಬಿಟ್ಟು ಬೇರೇನೂ ಹೇಳುವ ಯೋಗ್ಯತೆ ನನಗಿಲ್ಲ ಸಾರ್......
ಅಮ್ಮನ ಬಗ್ಗೆ ವಿಭಿನ್ನ ರೀತಿಯ ಕವನಗಳನ್ನು ಓದಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ಎಲ್ಲಾ ಕವನಗಳೂ ಚೆನ್ನಾಗಿದೆ. ನಿಮ್ಮ ಕವನವೂ ಇಷ್ಟವಾಯಿತು.
ಥ್ಯಾಂಕ್ಸ್ ಉದಯ್ ಸರ್..:-) ಇಲ್ಲಿ ಅವ್ವ ಮಗುವಾಗಿದ್ದು ಭಾರಿ ಖುಷಿ ಕೊಟ್ಟ ಸಂಗತಿ.:) ಎಲ್ಲ ಕವಿಗಳೂ ಅವ್ವನನ್ನು ಲಾಲಿಸಿದ ರೀತಿ ಚೆನ್ನ..:-)
ಕಾಮೆಂಟ್ ಪೋಸ್ಟ್ ಮಾಡಿ