Demo image Demo image Demo image Demo image Demo image Demo image Demo image Demo image

ಪಶ್ಚಿಮಕ್ಕೆ ಯಾರ ಅಂಕುಶವೂ ಇಲ್ಲ, ಆನೆ ನಡೆದಿದ್ದೇ ದಾರಿಯಾಗಿದೆ...

  • ಸೋಮವಾರ, ಡಿಸೆಂಬರ್ 30, 2024
  • ಬಿಸಿಲ ಹನಿ
  • (ಇವತ್ತು ಡಿಸೆಂಬರ್ 30. ಇವತ್ತಿಗೆ ಸದ್ದಾಂ ಹುಸೇನ್ ನ್ನು ಗಲ್ಲಿಗೇರಿಸಿ ಸರಿಯಾಗಿ ಹದಿನೆಂಟು ವರ್ಷಗಳು ಕಳೆದವು. ಆ ನೆಪದಲ್ಲಿ ಇದೊಂದು ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ.)
    ಸುತ್ತಲೂ ಕೈಯಲ್ಲಿ ಗನ್ನುಗಳನ್ನು, ಬಂದೂಕಗಳನ್ನು ಹಿಡಿದು ಆತನನ್ನು ಬೆನ್ನಟ್ಟಿ ಬಂದ ಪುಂಡರು (ಬಂಡುಕೋರರು). ಮಧ್ಯದಲ್ಲಿ ಮನುಷ್ಯ ಸಹಜ ಪ್ರಾಣ ಭೀತಿಯಿಂದ ರಸ್ತೆ ಅಡಿಯ ಕೊಳವೆಯೊಂದರಲ್ಲಿ ಅಡಗಿ ಕುಳಿತ ವ್ಯಕ್ತಿ. ಕೊನೆಗೂ ಆ ಪುಂಡರು ಅವನನ್ನು ಕೊಳವೆಯಿಂದಾಚೆ ದರದರನೆ ಎಳೆದು ತಂದು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ಕೆನ್ನೆಗೆ ಬಾರಿಸುತ್ತಾ, ತಲೆಯ ಮೇಲೆ ಮೊಟಕುತ್ತಾ, ಕೆಳಗೆ ಬೀಳಿಸಿ ಒದೆಯುತ್ತಾ ವಿಲಕ್ಷಣ ಖುಷಿ ಪಡುವಾಗ ಕೆಳಗೆ ಬಿದ್ದ ವ್ಯಕ್ತಿ "Please don't beat me. What harm have I done to you?" ಎಂದು ಗೋಗರೆಯುತ್ತಿದ್ದರೂ ಲೆಕ್ಕಿಸದೇ ಆತನಿಗೆ ರಕ್ತ ಬರುವ ಹಾಗೆ ಹೊಡೆಯುತ್ತಲೇ ಇದ್ದ ಮನುಷ್ಯರು ಆ ಸಮಯದಲ್ಲಿ ನಿಜಕ್ಕೂ ರಾಕ್ಷಸ ಅವತಾರವನ್ನು ತಾಳಿದ್ದರು. ಈ ಮಧ್ಯ ಸನ್ನಿಗೊಳಗಾದ ಪುಂಡನೊಬ್ಬ ಬಂದೂಕಿನಿಂದ ಗುಂಡು ಹಾರಿಸಿದಾಗ ಮತ್ತೆ ಆ ವ್ಯಕ್ತಿ "Don't kill me." ಎಂದು ಅರಚಿತ್ತಿದ್ದರೂ ಬಿಡದೆ ಮನಬಂದಂತೆ ಗುಂಡಿನ ಮೇಲೆ ಗುಂಡುಗಳನ್ನು ಹಾರಿಸಿ ಅವನ ಪ್ರಾಣವನ್ನು ತೆಗೆಯುವಲ್ಲಿ ಯಶಸ್ವಿಯಾದರು. ಮಾತ್ರವಲ್ಲ ಅವನ ಸಾವನ್ನು ಸಂಭ್ರಮಿಸಿ ಸಂತೋಷಪಟ್ಟರು. ಹೀಗೆ ಹೀನಾಯವಾಗಿ ಕೊಲ್ಲಲ್ಪಟ್ಟ ಆ ವ್ಯಕ್ತಿಯೇ ಮೊಹಮ್ದ ಗಡಾಫಿ. ಅವರು ಅವನ ಸಾವನ್ನು ಸಂಭ್ರಮಿಸಿದರು, ಹೊಸ ನಾಡೊಂದನ್ನು ಕಟ್ಟುತ್ತೇವೆ ಎಂದು ಘೋಷಿಸಿದರು. ಆದರೆ ನಿಜಕ್ಕೂ ಇವರು ಹೊಸ ನಾಡೊಂದನ್ನು ಕಟ್ಟಿದರೆ? ಲಿಬಿಯಾದಲ್ಲಿ ಹೊಸತನವನ್ನು ತಂದರೆ? ಇಲ್ಲವೇ ಇಲ್ಲ! ಬದಲಿಗೆ ಗಡಾಫಿಯ ಹತ್ಯೆಯಾದ ದಿನದಿಂದಲೇ ಲಿಬಿಯಾ ಅಧೋಗತಿಗೆ ಇಳಿಯುತ್ತಾ ಹೋಯಿತು. ನಳನಳಿಸುತ್ತಿದ್ದ ಲಿಬಿಯಾ ಮುರಿದು ಇನ್ನೆಂದೂ ರಿಪೇರಿ ಮಾಡದ ಹಂತ ತಲುಪಿತು. ಕಂಗೊಳಿಸುತ್ತಿದ್ದ ಲಿಬಿಯಾವನ್ನು ಒಡೆದು ಚೂರು ಚೂರು ಮಾಡಿದ ಆ ಮಹಾನ್ ಶಕ್ತಿಗಳಿಗೆ ಧಿಕ್ಕಾರವಿರಲಿ. ಗಡಾಫಿಯ ಉಪ್ಪಿನ ಋಣದ ಅರಿವು ಇವರಿಗೆ ಕಿಂಚಿತ್ತಾದರೂ ಇದ್ದಿದ್ದರೆ ಇವರು ಹೀಗೆ ಮಾಡುತ್ತಿದ್ದರೆ? ಇಂಥದೇ ಇನ್ನೊಂದು ಸಂದರ್ಭ. ಆದರೆ ಕೊಂಚ ಭಿನ್ನ. ಅದು ಇರಾಕಿನ ಕೋರ್ಟು. ಬೆಳಗಿನ ಆರು ಘಂಟೆಯ ಸಮಯ. ಆವತ್ತು ಸದ್ದಾಂ ಹುಸೇನ್ ಕೇಸಿಗೆ ಸಂಬಂಧಪಟ್ಟ ಕೊನೆಯ ತೀರ್ಪು ಹೊರಬೀಳುವದಿತ್ತು. ಸದ್ದಾಂ ಹುಸೇನ್ ಕಟಕಟೆಯಲ್ಲಿ ಒಂಚೂರು ಅಧೀರನಾಗದೆ ಅಚಲನಾಗಿ ನಿಂತಿದ್ದಾನೆ. ಈಗಾಗಲೇ ಪೂರ್ವ ನಿರ್ಧರಿತಗೊಂಡ ಸದ್ದಾಂ ಹುಸೇನ್ ವಿರುದ್ಧದ ಮರಣ ದಂಡನೆಯ ಅಂತಿಮ ತೀರ್ಪನ್ನು ನ್ಯಾಯಾಧೀಶರು ಓದುತ್ತಿದ್ದಾರೆ. ಆ ತೀರ್ಪು ಏನು ಬರತ್ತದೆ ಎಂದು ಈಗಾಗಲೇ ಮನಗಂಡಿದ್ದ ಸದ್ದಾಂ ಹುಸೇನ್ ಆಕ್ರೋಶದಿಂದ "You American dog! You wretched beast! You will be a slave to Israelis! ಅಲ್ಲಾಹು ಅಕ್ಬರ್! ಅಲ್ಲಾಹು ಅಕ್ಬರ್!" ಎಂದು ಕೂಗುತ್ತಲೇ ಇದ್ದ. ತೀರ್ಪನ್ನು ಓದಿದ ನಂತರ ಆತನನ್ನು ಗಲ್ಲಿಗೇರಿಸುವ ಕೋಣೆಗೆ ಕರೆತರಲಾಗುತ್ತದೆ. ಆಗಲೂ ಸದ್ದಾಂ ಒಂಚೂರು ಹೆದರದೆ ಎಂದಿನ ಅದೇ ಗತ್ತಿನಿಂದ ಸಾವಿನ ಕೋಣೆಗೆ ನಡೆದು ಬರುತ್ತಾನೆ. ನೇಣುಗಂಬದ ಮುಂದೆ ನಿಲ್ಲಿಸಲಾಗುತ್ತದೆ. ಅತ್ತ ಮುಸುಕು ಹಾಕಿಕೊಂಡ ಒಂದಿಬ್ಬರು ಅಮೆರಿಕನ್ ಸೈನಿಕರು. ಇತ್ತ ಒಂದಿಬ್ಬರು ಇರಾಕಿ ಜೈಲು ಅಧಿಕಾರಿಗಳು. ಆ ಮುಸುಕುಧಾರಿಗಳನ್ನು ಗುರುತು ಹಿಡಿದ ಸದ್ದಾಂ ಹುಸೇನ್ ತನ್ನ ವ್ಯಂಗ್ಯದ ಮಾತುಗಳಿಂದ ಅವರನ್ನು ಚುಚ್ಚುತ್ತಾನೆ. ಆಗ ಜೈಲು ಅಧಿಕಾರಿಗಳು ಆತನನ್ನು "ನಿಮ್ಮ ಕೊನೆಯ ಆಸೆ ಏನು?" ಎಂದು ಕೇಳುತ್ತಾರೆ. ಅದಕ್ಕವನು "ನಾನು ಕೈಯಲ್ಲಿ ಹಿಡಿದಿರುವ ಕುರಾನ್ನ್ನು ನನ್ನ ಸ್ನೇಹಿತನ ಮಗನ ಕೈಗೆ ಕೊಡಿ" ಎಂದು ಹೇಳುತ್ತಾನೆ. ಇಷ್ಟರಲ್ಲಿಯೇ ಈತನ ಸ್ನೇಹಿತನನ್ನೂ ಸಹ ಗಲ್ಲಿಗೇರಿಸುವದು ನಿರ್ಧಾರವಾಗಿರುತ್ತದೆ. ಕುಣಿಕೆಯು ಅವನ ಕುತ್ತಿಗೆಗೆ ಬೀಳುವ ಮೊದಲು ಸದ್ದಾಂ ಹೀಗೆಂದು ಕೂಗುತ್ತಲೇ ಇದ್ದ "Long live the nation! Long live the people! Long live the Palestinians!" ಆದರೆ ನಿಜಕ್ಕೂ ಅವನ ಸಾವಿನ ನಂತರ ಇರಾಕ್ ತನ್ನ ಹಿಂದಿನ ವೈಭವವನ್ನು ಮರಳಿಪಡೆಯಿತೇ? ಇಲ್ಲವೇ ಇಲ್ಲ. ಅದು ಕೂಡ ಮುರಿದುಹೋದ ಸಾಮ್ರಾಜ್ಯಗಳ ಸಾಲಿನಲ್ಲಿ ಒಂದಾಗಿ ನಿಂತಿತು. ಈ ಎರಡು ಘಟನೆಗಳು ಎಂಥವರನ್ನೂ ಮನ ಕಲುಕದೇ ಬಿಡುವದಿಲ್ಲ. ಈ ಎರಡು ಘಟನೆಗಳಿಂದ ಜಗತ್ತಿನ ದೈತ್ಯ ಶಕ್ತಿಗಳು ತಮಗಾಗದವರನ್ನು ಹೇಗೆ ಮುಗಿಸುತ್ತವೆ ಎಂಬುದನ್ನು ಮನದಟ್ಟು ಮಾಡುತ್ತವೆ ಮತ್ತು ಚೆಂದವಾಗಿ ಸಾಗುತ್ತಿದ್ದ ಎರಡು ದೇಶಗಳನ್ನು ಹೇಗೆ ಹಾಳುಗೆಡವಿದರು ಎಂಬುದು ಗೊತ್ತಾಗುತ್ತದೆ. ಜೊತೆಗೆ ಮಾಧ್ಯಮಗಳು ಹೇಗೆ ಒಳಸತ್ಯವನ್ನು ಮರೆಮಾಚಿ ಸುಳ್ಳನ್ನೇ ಸತ್ಯವೆಂದು ನಂಬಿಸುತ್ತವೆ ಎಂಬುದು ಸ್ಪಷ್ಟವಾಗುತ್ತದೆ. ನಾನು ಲಿಬಿಯಾಕ್ಕೆ ಹೋಗಿದ್ದು 2007 ರ ಅಕ್ಟೋಬರ್ ತಿಂಗಳ ಕೊನೆಯಲ್ಲಿ. ಅದಕ್ಕೆ ಸರಿಯಾಗಿ ಹತ್ತು ತಿಂಗಳುಗಳ ಹಿಂದೆಯಷ್ಟೇ ಅಂದರೆ 2006 ರ ಡಿಸೆಂಬರ್ 30 ರಂದು ಇರಾಕಿನಲ್ಲಿ ಸದ್ದಾಂ ಹುಸೇನ್ನ್ನು ಗಲ್ಲಿಗೇರಿಸಿಲಾಗಿತ್ತು. ಅದು ಭಾರಿ ಸುದ್ದಿಯಾಗಿತ್ತು. ಪತ್ರಿಕೆಗಳಲ್ಲೆಲ್ಲಾ ಅವನದೇ ಸುದ್ದಿ. ಟೀವಿ ಮಾಧ್ಯಮಗಳು ಸಹ ಅವನೊಬ್ಬ ಖಳನಾಯಕನೆಂಬಂತೆ ಚಿತ್ರಿಸಿದ್ದವು. ನಾವು ಕೂಡಾ ಅದೇ ಸತ್ಯವೆಂದು ನಂಬಿದ್ದೆವು. ಆದರೆ ನಾನು 2007 ರಲ್ಲಿ ಲಿಬಿಯಾಕ್ಕೆ ಬಂದಿಳಿದಾಗ ನಮ್ಮ ಕಾಲೇಜಿನಲ್ಲಿ ನನ್ನೊಟ್ಟಿಗೆ ನಾಲ್ಕು ಜನ ಇರಾಕಿ ಪ್ರೊಫೆಸರ್ ಗಳು ಕೆಲಸ ಮಾಡುತ್ತಿದ್ದರು. ನಾನವರನ್ನು ಕಂಡೊಡನೆ “Was Saddam Hussein really so cruel? Did he really exploit you? How did you tolerate his atrocities?” ಎಂದೆಲ್ಲಾ ಅವರನ್ನು ಕೇಳಿದಾಗ ಅವರಲ್ಲಿ ಒಂದಿಬ್ಬರು ಸಪ್ಪೆ ಮುಖ ಮಾಡಿದರೆ ಇನ್ನೊಬ್ಬರು ಅತ್ತೇ ಬಿಟ್ಟರು. ನಾನು ಗಾಭರಿ ಬಿದ್ದು ಯಾಕೆ ಏನಾಯಿತೆಂದು ಕೇಳಿದಾಗ ಅವರೆಲ್ಲಾ ಅದು ಅಮೆರಿಕಾ ಹೇಳಿದ ಸುಳ್ಳು ಸುದ್ದಿ, ಇರಾಕಿನಲ್ಲಿದ್ದ ತೈಲ ಸಂಪತ್ತನ್ನು ದೋಚಲು ಅಮೆರಿಕಾ ಏನೆಲ್ಲಾ ಹುನ್ನಾರಗಳನ್ನು ಮಾಡಿತು ಮತ್ತು ಸದ್ದಾಂ ಹುಸೇನ್ ಎಷ್ಟೆಲ್ಲಾ ಒಳ್ಳೆಯವನಾಗಿದ್ದ ಎಂಬುವದನ್ನು ಸೂಚ್ಯವಾಗಿ ಹೇಳಿದ್ದರು. ಇರಾಕಿನ ರಾಜಧಾನಿ ಬಾಗ್ದಾದನ್ನು ಸಿಂಗಾಪೂರಿಗಿಂತ ಮೂರುಪಟ್ಟು ಅಭಿವೃದ್ದಿ ಪಡೆಸಿದ್ದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದರು. ಅಷ್ಟೇ ಅಲ್ಲದೇ ಸಧ್ಯದಲ್ಲಿಯೇ ಲಿಬಿಯಾಕ್ಕೂ ಕೂಡಾ ಆ ಗತಿ ಬರಬಹುದೆಂದು ಹೇಳಿದಾಗ ನಾನವರನ್ನು ನಂಬಿರಲಿಲ್ಲ. ಆದರೆ 2011 ರಲ್ಲಿ ಲಿಬಿಯಾದಲ್ಲಿ ಕ್ರಾಂತಿ ಆರಂಭವಾದಾಗ ಜಗತ್ತಿನ ಬಹುತೇಕ ಮಾಧ್ಯಮಗಳು ಗಡಾಫಿ ಮತ್ತು ಆತನ ಲಿಬಿಯಾದ ಬಗ್ಗೆ ವ್ಯತಿರಿಕ್ತವಾದ ಚಿತ್ರಣಗಳನ್ನು ತೋರಿಸುವಾಗ ಅವರ ಮಾತುಗಳು ವಾಸ್ತವದಲ್ಲಿ ಅರಿವಾಗಿ ಅಮೆರಿಕಾ ತನ್ನ ಬೇಳೆ ಬೇಯಿಸಿಕೊಳ್ಳುವದಕ್ಕಾಗಿ ಏನೆಲ್ಲಾ ಮಾಡುತ್ತದೆ ಎಂದು ತಿಳಿದು ಭಾರೀ ನೋವಾಗಿತ್ತು. ಮೌಮರ್ ಗಡಾಫಿ ಮತ್ತು ಸದ್ದಾಂ ಹುಸೇನ್ ಎಂಬಿಬ್ಬರು ನಮ್ಮ ಕಾಲದ ನಿರಂಕುಶವಲ್ಲದ ನಿರಂಕುಶ ಆಡಳಿತಗಾರರಾಗಿದ್ದರೂ ಸದಾ ತಂತಮ್ಮ ದೇಶದ ಏಳ್ಗೆಗಾಗಿ ದುಡಿದವರು. ಸದ್ದಾಂ ಹುಸೆನ್ ಇರಾಕ್ನ ಅಧ್ಯಕ್ಷರಾಗಿದ್ದರೆ ಗಡಾಫಿ ಲಿಬಿಯಾದ ಅನಧಿಕೃತ ಆಡಳಿತಗಾರನಾಗಿದ್ದನು. ಇಬ್ಬರೂ ತಮ್ಮ ಸರ್ಕಾರಗಳು ಮತ್ತು ಮಿಲಿಟರಿಯ ಮೇಲೆ ಕಟ್ಟುನಿಟ್ಟಾದ ನಿಯಂತ್ರಣದ ಮೂಲಕ ಅಧಿಕಾರವನ್ನು ಕ್ರೋಢೀಕರಿಸುವ ಮೂಲಕ ಸರ್ವಾಧಿಕಾರಿ ನಾಯಕರಾಗಿ ಆಳ್ವಿಕೆ ನಡೆಸಿದರು. ಆದರೆ ವಾಸ್ತವದಲ್ಲಿ ಇಬ್ಬರೂ ಸಮಾಜವಾದಿಗಳಾಗಿದ್ದರು. ಜೊತೆಗೆ ಇಬ್ಬರೂ ಪರಮಾಪ್ತ ಸ್ನೇಹಿತರಾಗಿದ್ದರು. ಇಬ್ಬರೂ ರಕ್ತರಹಿತ ಕ್ರಾಂತಿಯ ಮೂಲಕ ಅಧಿಕಾರಕ್ಕೆ ಬಂದವರು. ಕರ್ನಲ್ ಗಡಾಫಿ 1969 ರಲ್ಲಿ ಆಗಿನ ರಾಜ ಇದ್ರಿಸ್ ಅನ್ನು ರಕ್ತರಹಿತ ಕ್ರಾಂತಿಯ ಮೂಲಕ ಪದಚ್ಯುತಗೊಳಿಸಿ ದೇಶದ ಆಳ್ವಿಕೆಯನ್ನು ವಹಿಸಿಕೊಂಡಾಗ ಅವನು ಸೈನ್ಯದಲ್ಲಿ ಕಿರಿಯ ಅಧಿಕಾರಿಯಾಗಿದ್ದನು. ಎಂಟು ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನಂತರ 1977 ರಿಂದ ರಾಷ್ಟ್ರವನ್ನು ಯಾವುದೇ ಹುದ್ದೆಯಿಲ್ಲದೆ ನಿಯಂತ್ರಿಸುತ್ತಿದ್ದನು. ಅವನು ಲಿಬಿಯಾ ದೇಶವನ್ನು 42 ವರ್ಷಗಳ ಕಾಲ ಸಮರ್ಥವಾಗಿ ಆಳಿ ಇಡೀ ಆಫ್ರಿಕಾ ಖಂಡದಲ್ಲಿ ಮುಂಚೂಣಿಯಲ್ಲಿಟ್ಟಿದ್ದನು. ಲಿಬಿಯಾದಲ್ಲಿ ದೊರೆತ ತೈಲವನ್ನು ತನ್ನ ರಾಷ್ಟ್ರದ ಏಳಿಗೆಗಾಗಿ ಬಳಸಿದನು. ಆದರೆ ಸದ್ದಾಂ ಹುಸೇನ್ ಮಿಲಿಟರಿ ಮತ್ತು ಪಕ್ಷದ ರಚನೆಗಳ ಮೇಲೆ ಹೆಚ್ಚು ಅವಲಂಬಿಸಿದ್ದ ಬಾತ್ ಪಾರ್ಟಿಯಲ್ಲಿನ ಪಾತ್ರದ ಮೂಲಕ ಅಧಿಕಾರಕ್ಕೆ ಬಂದನು. ಅವನು ಕೂಡಾ ತೈಲದಿಂದ ಬಂದ ಲಾಭವನ್ನು ಜನರ ಉದ್ದಾರಕ್ಕಾಗಿ ಬಳಸಿಕೊಂಡನು. ಇಬ್ಬರೂ ನಾಯಕರು ಬಲವಾದ ವ್ಯಕ್ತಿತ್ವ ಆರಾಧನೆಗಳನ್ನು ಬೆಳೆಸಿದರು, ತಮ್ಮ ರಾಷ್ಟ್ರಗಳಿಗೆ ತಮ್ಮನ್ನು ತಾವು ಅನಿವಾರ್ಯವೆಂದು ಬಿಂಬಿಸಿದರು. ಅವರ ಚಿತ್ರಗಳು ಮತ್ತು ಭಾಷಣಗಳನ್ನು ಪ್ರಮುಖವಾಗಿ ಪ್ರದರ್ಶಿಸಲಾಯಿತು ಮತ್ತು ಪ್ರಸಾರ ಮಾಡಲಾಯಿತು .ಇಬ್ಬರೂ ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಯ, ನಿರ್ದಿಷ್ಟವಾಗಿ ಅಮೆರಿಕಾದ ತೀವ್ರ ಟೀಕಾಕಾರರಾಗಿದ್ದರು. ಅವರು ಆಗಾಗ್ಗೆ ತಮ್ಮನ್ನು ಅರಬ್ ರಾಷ್ಟ್ರೀಯತೆಯನ್ನು ಕಾಪಾಡಿಕೊಳ್ಳುವ ಮತ್ತು ಸ್ವಾತಂತ್ರ್ಯವನ್ನು ರಕ್ಷಣೆ ಮಾಡಲು ಬಂದ ನಾಯಕರೆಂದು ಬಿಂಬಿಸಿಕೊಂಡರು. ಇಬ್ಬರೂ ಆಕ್ರಮಣಕಾರಿ ವಿದೇಶಿ ನೀತಿಗಳಲ್ಲಿ ತೊಡಗಿದ್ದರು. ಗಡಾಫಿ 1965 ರಲ್ಲಿ ಚಾದ್ನಲ್ಲಿ ಅಲ್ಲಿಯ ಚಕ್ರವರ್ತಿಯ ವಿರುದ್ಧ ಅಲ್ಲಿನ ಜನ ದಂಗೆ ಎದ್ದಾಗ ಲಿಬಿಯಾದ ಮೊದಲ ಅರಸ ಇದ್ರಿಸ್ ಬಂಡುಕೊರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವದರ ಮೂಲಕ ಅವರ ಸಹಾಯಕ್ಕೆ ನಿಲ್ಲುತ್ತಾನೆ. ಆದರೆ ಚಕ್ರವರ್ತಿಯ ಸಹಾಯಕ್ಕೆ ಫ್ರಾನ್ಸ್ ನಿಲ್ಲುತ್ತದೆ. ಈ ತಿಕ್ಕಾಟ ನಾಲ್ಕು ವರ್ಷಗಳವೆರೆಗೆ ನಡೆಯುತ್ತಲೇ ಇರುತ್ತದೆ. ಇತ್ತ ಲಿಬಿಯಾದಲ್ಲಿ 1969 ರಲ್ಲಿ ಇದ್ರಿಸ್ನನ್ನು ಕಿತ್ತೆಸೆದು ಮೌಮರ್ ಗಡಾಫಿ ಅಧಿಕಾರಕ್ಕೆ ಬರುತ್ತಾನೆ. ಬಂದವನೇ ಚಾದ್ನ ಉತ್ತರ ಭಾಗವನ್ನು ರಷಿಯಾದ ಸಹಾಯದಿಂದ ಆಕ್ರಮಿಸಿಕೊಂಡು ಅಲ್ಲಿ ಲಿಬಿಯಾದ ಮಿಲ್ಟ್ರಿ ಬೇಸ್ನ್ನು ಸ್ಥಾಪಿಸುತ್ತಾನೆ. ಇದಲ್ಲದೆ ಅಲ್ಲಿನ ಬಂಡುಕೋರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಾ ಹೋಗುತ್ತಾನೆ. ಅದೇ ರೀತಿ ಸದ್ದಾಂ 1980 ರಲ್ಲಿ ಇರಾನ್ ಮೇಲೆ ಆಕ್ರಮಣ ಮಾಡುವದರ ಮೂಲಕ ಇರಾನ್-ಇರಾಕ್ ಯುದ್ಧಕ್ಕೆ ಕಾರಣನಾಗುತ್ತಾನೆ ಮತ್ತು ನಂತರ 1990 ರಲ್ಲಿ ಕುವೈತ್ ಅನ್ನು ಆಕ್ರಮಿಸಿಕೊಳ್ಳುತ್ತಾನೆ. ಇಬ್ಬರೂ ಇಸ್ರೇಲ್ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದರು. ಯಹೂದಿಗಳ ಹುಟ್ಟು ವೈರಿಗಳಾದ ಪ್ಯಾಲೇಸ್ತೇನಿಯನ್ನರಿಗೆ ಇಬ್ಬರೂ ಧನಸಹಾಯ ಮಾಡುವದರ ಮೂಲಕ ಅವರ ಹೋರಾಟವನ್ನು ಬೆಂಬಲಿಸುತ್ತಾರೆ. ಎರಡು ಮೂರು ಬಾರಿ ಸ್ವತಃ ಸದ್ದಾಂ ಹುಸೇನ್ ಮುಸ್ಲಿಂರ ಕಡುವೈರಿಗಳಾದ ಇಸ್ರೇಲಿಗರ ಮೇಲೆ ರಾಕೇಟ್ ಗಳನ್ನು ಕಳಿಸಿ ಸೇಡು ತೀರಿಸಿಕೊಳ್ಳಲು ನೋಡುತ್ತಾನೆ. ಆ ಮೂಲಕ ಪಶ್ಚಿಮದವರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಇಬ್ಬರೂ ಅತ್ಯಂತ ವಿವಾದಾಸ್ಪದ ವ್ಯಕ್ತಿಯಾಗಿದ್ದರು. ಇಬ್ಬರೂ ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿದರು. ಅನೇಕ ಇತರೆ ಮುಸ್ಲಿಂ ರಾಷ್ಟ್ರಗಳಲ್ಲಿನ ಮಹಿಳೆಯರಿಗಿಂತ ಇಲ್ಲಿನ ಮಹಿಳೆಯರು ಹೆಚ್ಚು ಹಕ್ಕುಗಳನ್ನು ಅನುಭವಿಸಿದರು. ಇಬ್ಬರೂ ತೈಲದಿಂದ ಬಂದ ಲಾಭವನ್ನು ದೇಶದ ಉದ್ದಾರಕ್ಕಾಗಿ ಚೆಲ್ಲಿದರು. ಇಬ್ಬರೂ ಜಾತ್ಯಾತೀತರಾಗಿದ್ದರು. ಇಬ್ಬರೂ ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಮತ್ತು ವಸತಿಗೆ ಒತ್ತು ಕೊಟ್ಟವರು. ಇಬ್ಬರ ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ಆರ್ಥಿಕ ದುರುಪಯೋಗ ಸಾಮಾನ್ಯವಾಗಿದ್ದರೂ ಅವರು ಪ್ರಮುಖ ಕೈಗಾರಿಕೆಗಳನ್ನು ರಾಷ್ಟ್ರೀಕರಣಗೊಳಿಸಿದರು ಮತ್ತು ಜನಪ್ರಿಯ ಬೆಂಬಲವನ್ನು ಕ್ರೋಢೀಕರಿಸಲು ಸಂಪತ್ತನ್ನು ಮರುಹಂಚಿಕೆ ಮಾಡಿದರು. ಇಬ್ಬರೂ ಮಹತ್ವಾಕಾಂಕ್ಷೆಯ ಶಸ್ತ್ರಾಸ್ತ್ರ ಕಾರ್ಯಕ್ರಮಗಳನ್ನು ಅನುಸರಿಸಿದರು, ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು (WMDs) ಅಭಿವೃದ್ಧಿಪಡಿಸುವ ಪ್ರಯತ್ನಗಳು ಸೇರಿದಂತೆ. ಸದ್ದಾಂ ಡಬ್ಲ್ಯುಎಂಡಿಗಳನ್ನು ಹೊಂದಿದ್ದನೆಂದು ಆರೋಪಿಸಲಾಯಿತು, ಇದು 2003 ರ ಇರಾಕ್ ಯುದ್ಧಕ್ಕೆ ನೆಪವಾಯಿತು. ಗಡಾಫಿ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮವನ್ನು ಹೊಂದಿದ್ದನು ಆದರೆ 2003 ರಲ್ಲಿ ಅಂತರರಾಷ್ಟ್ರೀಯ ಒತ್ತಡದಿಂದಾಗಿ ಅದನ್ನು ಕಿತ್ತುಹಾಕಿದನು. ಇಬ್ಬರೂ ತಮ್ಮ ಆಡಳಿತದಲ್ಲಿ ಧರ್ಮನಿರಪೇಕ್ಷತೆಯನ್ನು ತರಲು ಪ್ರಯತ್ನಿಸಿದರು. ಇಬ್ಬರೂ ಆಡಳಿತದಲ್ಲಿ ಧರ್ಮದ ಪ್ರಭಾವವನ್ನು ಕಡಿಮೆ ಮಾಡಲು ಕಾನೂನು ಮತ್ತು ನೀತಿಗಳನ್ನು ಉತ್ತೇಜಿಸಿದರು. ಇದು ಪ್ರಾದೇಶಿಕವಾಗಿ ಇಸ್ಲಾಮಿಕ್ ಆಡಳಿತಗಳಿಗೆ ವಿರುದ್ಧವಾಗಿತ್ತು ಹಾಗೂ ಅನೇಕ ಮೂಲಭೂತವಾದಿಗನ್ನು ರೊಚ್ಚಿಗೆಬ್ಬಿಸಿತು. ಇಬ್ಬರೂ ಕೃಷಿಗೆ ಒತ್ತು ನೀಡಿ ಭೂಮಿಯನ್ನು ಪುನರ್ವಿತರಣೆಗೆ ಮತ್ತು ರೈತರಿಗೆ ಅನುದಾನ ನೀಡಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಕ್ರಮ ಕೈಗೊಂಡರು. ಇದು ನೀರಾವರಿ ವ್ಯವಸ್ಥೆಗಳು ಮತ್ತು ಕೃಷಿ ಉಪಕರಣಗಳನ್ನು ಒದಗಿಸಲು ಸಹಾಯ ಮಾಡಿತು. ಗಡಾಫಿ ಲಿಬಿಯಾದಲ್ಲಿ ಮಾನವ ನಿರ್ಮಿತ ನದಿಯೊಂದನ್ನು ನಿರ್ಮಿಸಿ ಅಂಥ ಮರಭೂಮಿಯಲ್ಲಿಯೂ ಸಹ ರೈತರಿಗೆ ನೀರಾವರಿ ಯೋಜನೆಯೊಂದನ್ನು ಕಲ್ಪಿಸಿಕೊಟ್ಟನು. ಇಬ್ಬರೂ ಪ್ಯಾಲೆಸ್ತೇನಿಯನ್ನರ ಪರವಾಗಿದ್ದರು ಮತ್ತು ಅವರಿಗೆ ಮೇಲಿಂದ ಮೇಲೆ ಧನ ಸಹಾಯವನ್ನು ಮಾಡುತ್ತಿದ್ದರು. ಈ ಇಸ್ರೇಲ್ ವಿರೋಧಿ ನೀತಿಯನ್ನು ಅನುಸರಿಸಿದ್ದಕ್ಕಾಗಿ ಇಬ್ಬರೂ ದುರಂತ ಅಂತ್ಯವನ್ನು ಕಂಡರು. ಯುಎಸ್ ಇರಾಕ್ ಮೇಲೆ ಆಕ್ರಮಣ ಮಾಡಿ ಸದ್ದಾಂನನ್ನು ಜೀವಂತವಾಗಿ ಸೆರೆಹಿಡಿದು ನಂತರ ಅವನನ್ನು ಗಲ್ಲಿಗೇರಿಸಿದರೆ ಅದೇ ಯುಎಸ್ ಗಡಾಫಿಯನ್ನು ಅವನ ಸ್ವಂತ ಜನರಿಂದಲೇ ಅವನನ್ನು ಕ್ರೂರವಾಗಿ ಕೊಲ್ಲಿಸಿ ಅವನ ಅಂತ್ಯಕ್ಕೆ ಸಮಾಪ್ತಿ ಹಾಡಿತು. ಗಡಾಫಿ ವಿಮೋಚನಾ ಚಳವಳಿಗಳನ್ನು ಬೆಂಬಲಿಸುತ್ತಿದ್ದನು. ಪ್ಯಾಲೈಸ್ತೇನಾ, ಲೈಬೀರಿಯಾ, ಸಿಯೆರಾ ಮತ್ತು ಲಿಯೋನ್ನಂತಹ ದೇಶಗಳಲ್ಲಿ ಬಂಡಾಯ ಚಳುವಳಿಗಳನ್ನು ಪ್ರಾಯೋಜಿಸಿದ ಕೀರ್ತಿಯೂ ಅವನಿಗೆ ಸಲ್ಲುತ್ತದೆ. 80 ರ ದಶಕದಲ್ಲಿ ರೇಗನ್ ಯುಗದಲ್ಲಿ ಲಿಬಿಯಾ ಮತ್ತು ಪಶ್ಚಿಮದ ನಡುವಿನ ಉದ್ವಿಗ್ನತೆಯು ಅದರ ಉತ್ತುಂಗವನ್ನು ತಲುಪಿತು. 90 ರ ದಶಕದಲ್ಲಿ ಪಾನ್ ಆಮ್ ವಿಮಾನ ದುರಂತದ ಕಾರಣಕ್ಕಾಗಿ ಪಶ್ಚಿಮದಿಂದ ಲಿಬಿಯಾ ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಯಿತು ಮತ್ತು ನಿಧಾನವಾಗಿ ಅವನನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸಿತು. 2003 ರಲ್ಲಿ ಸದ್ದಾಂ ಸೆರೆಹಿಡಿಯಲ್ಪಟ್ಟಾಗ ಗಡಾಫಿ ತಮ್ಮ ದೇಶದಲ್ಲಿನ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ನಾಶ ಮಾಡಲು ಒಪ್ಪಿಕೊಂಡನು ಮತ್ತು ಯುಎನ್ ಇನ್ಸ್ಪೆಕ್ಟರ್ಗಳು ಬಂದು ಅವುಗಳನ್ನು ಕೆಡವಲು ಅವಕಾಶ ನೀಡುವುದಾಗಿ ವಾಗ್ದಾನ ಮಾಡಿದನು. ಸದ್ದಾಂ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದನು ಮತ್ತು ತನ್ನ ಅಧಿಕಾರವನ್ನು ಭದ್ರಪಡಿಸಿಕೊಳ್ಳಲು ಸುನ್ನಿಗಳನ್ನು ಅಧಿಕಾರದ ಸ್ಥಾನದಲ್ಲಿ ಇರಿಸಿದನು. 1980-1988 ರವರೆಗೆ, ಇರಾಕ್ ಇರಾನ್ನೊಂದಿಗೆ ಯುದ್ಧದಲ್ಲಿತ್ತು. ಸದ್ದಾಂ ಕುರ್ದಿಶ್ ಮತ್ತು ಶಿಯಾ ದಂಗೆಗಳನ್ನು ನಿಗ್ರಹಿಸಬೇಕಾಯಿತು. 1990 ರಲ್ಲಿ ಕುವೈತ್ನ ಆಕ್ರಮಣದಿಂದಾಗಿ ಅವನು ಅಂತರರಾಷ್ಟ್ರೀಯ ಪ್ರಚಾರಕ್ಕೆ ಬಂದನು. ಅಮೆರಿಕಾ ನಾಯಕತ್ವದಲ್ಲಿ 1991 ರ ಗಲ್ಫ್ ಯುದ್ಧವು ಕುವೈಟ್ ಅನ್ನು ಇರಾಕ್ನಿಂದ ಮುಕ್ತಗೊಳಿಸಿತು ಆದರೆ ಇರಾಕ್ನಲ್ಲಿ ಸದ್ದಾಂ ಅಧಿಕಾರದಲ್ಲಿ ಮುಂದುವರಿದನು. ಸದ್ದಾಂ ಇರಾಕ್ನಲ್ಲಿ ಜನಪ್ರಿಯ ನಾಯಕನಾಗಿದ್ದನು. ಆದರೆ 2003 ರಲ್ಲಿ, ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಕಾರ್ಯಕ್ರಮದಲ್ಲಿ ಇರಾಕ್ ಭಾಗಿಯಾಗಿದೆ ಎಂದು ಶಂಕಿಸಿ US ಇರಾಕ್ ಮೇಲೆ ಆಕ್ರಮಣ ಮಾಡಿ ಅವನನ್ನು ಡಿಸೆಂಬರ್ 2003 ರಲ್ಲಿ ಸೆರೆಹಿಡಿಯಲಾಯಿತು ಮತ್ತು 148 ಶಿಯಾ ಜನರನ್ನು ಕೊಂದ ಆರೋಪದಲ್ಲಿ ಶಿಕ್ಷೆಗೊಳಗಾದನು. ಅಂತಿಮವಾಗಿ 30 ಡಿಸೆಂಬರ್ 2006 ರಂದು ಸದ್ದಾಂನನ್ನು ಅಮೆರಿಕಾ ಗಲ್ಲಿಗೇರಿಸಿತು. ಇಬ್ಬರೂ ಪರಮಾಪ್ತ ಸ್ನೇಹಿತರಾಗಿದ್ದರು ಮತ್ತು ಇಬ್ಬರೂ ಅಮೆರಿಕಾದ ಸಾಮ್ರಾಜ್ಯಶಾಹಿ ಧೋರಣೆಯನ್ನು ಖಂಡಿಸುತ್ತಿದ್ದರು ಹಾಗೂ ಇದೇ ಕಾರಣಕ್ಕಾಗಿ ಅವರ ವಿರೋಧವನ್ನು ಕಟ್ಟಿಕೊಂಡು ತಮ್ಮ ಪತನಕ್ಕೆ ತಾವೇ ಕಾರಣರಾದರು. ಇಬ್ಬರೂ ಮಾನವ ಹಕ್ಕು ಉಲ್ಲಂಘನೆಗಳ ಆರೋಪಕ್ಕೆ ಒಳಗಾದರು, ಇಬ್ಬರೂ ತಮ್ಮ ದೇಶಗಳ ತೈಲ ಸಂಪತ್ತನ್ನು ಬಳಸಿಕೊಂಡು ತಮ್ಮ ಆಡಳಿತವನ್ನು ಬಲಪಡಿಸಿದರು. ಗಡಾಫಿ ಲಿಬಿಯಾದ ತೈಲ ಉದ್ಯಮವನ್ನು ರಾಷ್ಟ್ರೀಕರಿಸಿದನು ಹಾಗೂ ಸದ್ದಾಮ್ ಇರಾಕ್ನ ತೈಲ ಆದಾಯವನ್ನು ಸೈನಿಕ ವಿಸ್ತರಣೆ ಮತ್ತು ದೇಶೀಯ ಯೋಜನೆಗಳಿಗೆ ಬಳಸಿದನು. ಅಮೆರಿಕಾದ ವಿಷಯದಲ್ಲಿ ಇಬ್ಬರಿಗೂ ಸೂಕ್ಷ್ಮ ತಿಳುವಳಿಕೆಯಾಗಲಿ ಡಿಪ್ಲೋಮೆಸಿಯಾಗಲಿ ಇರಲಿಲ್ಲ. ಹೀಗಾಗಿ ಈ ಇಬ್ಬರು ತಮ್ಮ ದೇಶದ ಜನರ ಕಣ್ಣಲ್ಲಿ ಮಾತ್ರ ಹೀರೋ ಆಗಿ ಮಿಕ್ಕೆಲ್ಲರ ದೃಷ್ಟಿಯಲ್ಲಿ ವಿಲನ್ ಎಂಬ ಹಣೆಪಟ್ಟಿಯನ್ನು ಹೊತ್ತು ನಿಂತರು. ಇದೀಗ ಅವರು ಆಳಿದ್ದ ರಾಷ್ಟ್ರಗಳು ಪಾಳುಬಿದ್ದ ರಾಷ್ಟ್ರಗಳಾಗಿವೆ. ಮುರಿದುಹೋದ ನಾಡುಗಳನ್ನಾಗಿ ಪರಿವರ್ತಿಸಿವೆ. ಇರಾಕ್ ಪಂಥೀಯ ಹಿಂಸಾಚಾರಕ್ಕೆ ಇಳಿದಿದೆ ಮತ್ತು ಲಿಬಿಯಾ ರಾಜಕೀಯ ಅರಾಜಕತೆಗೆ ಒಳಗಾಗಿ ನಾಗರಿಕ ಸಂಘರ್ಷದಲ್ಲಿ ಮುಳುಗಿದೆ. ಮತ್ತೀಗ ಹೊಸದಾಗಿ ಆ ಪಟ್ಟಿಗೆ ಮೊನ್ನೆಯಷ್ಟೇ ಆಲ್ ಅಸಾದ್ ನಿಂದ ವಿಮೋಚನೆಗೊಂಡಿದೆ ಎಂದು ಹೇಳಲಾದ ಸಿರಿಯಾ ರಾಷ್ಟ್ರವೂ ಸೇರಿಕೊಂಡಿತು. ಪಶ್ಚಿಮದ ರಾಷ್ಟ್ರಗಳು ಮಾತ್ರ ಎಂದಿನಂತೆ ತಮ್ಮ ಕಾಯಕವನ್ನು ಮುಂದುವರಿಸಿವೆ, ಅವಕ್ಕೆ ಯಾರ ಅಂಕುಶವೂ ಇಲ್ಲ...

    ಅಗಲಿದ ಗೆಳೆಯನಿಗೊಂದು ನುಡಿನಮನ

  • ಗುರುವಾರ, ಡಿಸೆಂಬರ್ 12, 2024
  • ಬಿಸಿಲ ಹನಿ
  • ಕರ್ನಾಟಕ ರಾಜ್ಯ ಸಮಿತಿ ಪಕ್ಷದ ಉಪಾಧ್ಯಕ್ಷರಾದ ಲಿಂಗೇಗೌಡ ಎಸ್.ಎಚ್. ಅವರು ದೂರದ ಗುಜರಾತಿನಲ್ಲಿ ನಡೆದ ರಸ್ತೆ ಅಪಘಾತದವೊಂದರಲ್ಲಿ ತೀರಿಕೊಂಡರು ಎಂಬ ಸುದ್ದಿ ತಿಳಿದು ಆಘಾತವಾಗಿದೆ.  ಈತ ಮಂಡ್ಯದ ಪಿ. ಇ. ಎಸ್. ಕಾಲೇಜಿನಲ್ಲಿ  ನನ್ನ ಸಹಪಾಠಿಯಾಗಿದ್ದ.  ಸಾಹಿತ್ಯದ ಬಗ್ಗೆ ಅಪಾರ ತಿಳುವಳಿಕೆಯನ್ನು ಹೊಂದಿದ್ದ. ಮುಂದೆ ಎಮ್.ಎ. ಇಂಗ್ಲೀಷ್ ಮುಗಿಸಿದ ಮೇಲೆ ಆತ ಅಬಕಾರಿ ಇಲಾಖೆಯಲ್ಲಿ ಬಹಳ ಬೇಗನೆ  ಉದ್ಯೋಗಕ್ಕೆ ಸೇರಿದ.  
    ನಾನು ಕೆಲಸ ಅರಸಿಕೊಂಡು ಲಿಬಿಯಾಕ್ಕೆ ಹೋದೆ. ಆಗಿನ್ನೂ ವಾಟ್ಸಾಪ್ ಇರಲಿಲ್ಲವಾದ್ದರಿಂದ ಸಂಪರ್ಕ ತಪ್ಪಿಹೋಯಿತು.  ಫೇಸ್ಬುಕ್ ಬಂದ ಮೇಲೆ ಮತ್ತೆ ಸಂಪರ್ಕ ಸಿಕ್ಕಿತು.   ೨೦೧೫ ರಲ್ಲಿ ನಾನು ಲಿಬಿಯಾದಿಂದ ವಾಪಾಸಾದ ಮೇಲೆ ಒಂದು ಸಾರಿ ಸಿಕ್ಕಿದ್ದ. ಮಿಕ್ಕ ಸಮಯವೆಲ್ಲಾ ಫೋನಿನಲ್ಲಿಯೇ ಮಾತನಾಡುತ್ತಿದ್ದೆವು.  ಅಬಕಾರಿ ಇಲಾಖೆಯಲ್ಲಿ ಸರಿ ಬರಲಿಲ್ಲವೆಂದು ಕೆಲಸಕ್ಕೆ ರಾಜಿನಾಮೆಯನ್ನಿತ್ತು   ರವಿ ಕೃಷ್ಣಾರೆಡ್ದಿಯವರ ಕರ್ನಾಟಕ ರಾಜ್ಯ ಸಮಿತಿ ಪಕ್ಷವನ್ನು  ಸೇರಿಕೊಳ್ಲುವದರ ಮೂಲಕ ರಾಜಕೀಯದಲ್ಲಿ ಸಕ್ರೀಯನಾದ.  ಭ್ರಷ್ಟ ಮತದಾರರ ನಡುವೆಯೇ ಎರಡು ಮೂರು ಸಾರಿ ಚುನಾವಣೆಗೆ ನಿಂತು ಸೋತಿದ್ದ.  ನನಗೆ ಮೂರ್ನಾಲ್ಕು ಸಾರಿ "ಉದಯ್, ನೀನು ನಮ್ಮ ಪಕ್ಷವನ್ನು ಸೇರಿಕೊ. ನಿನ್ನಂತವರು ರಾಜಕೀಯಕ್ಕೆ ಬಂದರೆ ಅಗಾಧ ಬದಲಾವಣೆಯನ್ನು ತರಬಹುದು." ಎಂದು ಒತ್ತಾಯಿಸುತ್ತಿದ್ದ.  ನಾನು "ರಾಜಕೀಯ ನನ್ನಂತವರಿಗಲ್ಲ ಬಿಡು ಮಾರಾಯ, ಸುಮ್ಮನಿರು" ಎಂದು ನಕ್ಕು ಸುಮ್ಮನಾಗುತ್ತಿದ್ದೆ. ರವಿ ಕೃಷ್ಣಾರೆಡ್ಡಿಯವರಂತೆ  ರಾಜಕೀಯದಲ್ಲಿ ಅಗಾಧ ಬದಲಾವಣೆಯನ್ನು ತರಬೇಕೆಂಬ ಕನಸನ್ನು ಹೊತ್ತಿದ್ದ.  "ಇಂಥ ಭ್ರಷ್ಟ ವ್ಯವಸ್ಥೆಯಲ್ಲಿ ನಾವೆಲ್ಲಾ ಆರಿಸಿ ಬರಲು ಸಾಧ್ಯವೇ?" ಎಂದು ಕೇಳಿದಾಗ "ಆರಿಸಿ ಬರದಿದ್ದರೂ ಪರ್ವಾಗಿಲ್ಲ, ಮುಂದಿನ ದಿನಗಳಲ್ಲಿ ಜನರಲ್ಲಿ ಒಂದು ಅವೇರ್ನಸ್ ಬರುತ್ತೆ. ಆ ಮೂಲಕ ಕ್ರಮೇಣ ಭ್ರಷ್ಟಾಚಾರವನ್ನು  ಮಟ್ಟ ಹಾಕಬಹುದು ಎಂದು ಹೇಳುತವಾಗ ನನಗೆ ಶುದ್ಧ ಹುಂಬನಂತೆ ಕಾಣುತ್ತಿದ್ದ. ಮರುಕ್ಷಣವೇ ಅವನ ಆಶಾವಾದ ನನ್ನನ್ನು ಬೆರಗುಗೊಳಿಸುತ್ತಿತ್ತು. ನನಗೆ ಒಂದೊಂದು ಸಾರಿ ಈತ ಯಾಕಿಷ್ಟೊಂದು impractical ಆಗಿದ್ದಾನೆ ಅಂತಾ ಅನಿಸಿದ್ದರೂ ಅವನ ಉತ್ಸಾಹಕ್ಕೆ ತಣ್ಣೀರೇರಚಲು ಮನಸ್ಸಾಗಿರಲಿಲ್ಲ.
    ಅವನ ಕೋರಿಕೆಯ ಮೇರೆಗೆ ಪಕ್ಷಕ್ಕೆ ಸಣ್ಣ ದೇಣಿಗೆಯನ್ನೂ ನೀಡಿದ್ದೆ.  ಪಕ್ಷಕ್ಕೆ ನಿಷ್ಟನಾಗಿ ಕೆಲಸ ಮಾಡುತ್ತಿದ್ದ. ರವಿ ಕೃಷ್ನಾರೆಡಿಯವರ ತರ ಹೊಸತನ್ನು ತರಬೇಕೆಂಬ ಛಲವನ್ನು ಹೊತ್ತಿದ್ದ.
    ಈಗ ನೋಡಿದರೆ ಅವನು ಸತ್ತ ಸುದ್ದಿ ಬಂದು ನಮ್ಮಲ್ಲೆರನ್ನು ದಿಗ್ಭ್ರಾಂತರನ್ನಾಗಿಸಿದೆ. ಹೋಗಿ ಬಾ ಗೆಳೆಯ. ನಿನ್ನ ಕನಸು ನಿನ್ನ ಪಕ್ಷದ ಅಧ್ಯಕ್ಷರು ಮತ್ತು ಕಾರ್ಯಕರ್ತರ ಮೂಲಕವಾದರೂ ಈಡೇರಲಿ.

    Can one write a love poem in middle age?

  • ಶನಿವಾರ, ಡಿಸೆಂಬರ್ 07, 2024
  • ಬಿಸಿಲ ಹನಿ
  • Can one write a poem in middle age? Ask me, I would say yes for love happens only in middle age Love happens, When the heart longs For separation. Love means Distance, Silence, Solitude, Freedom unbound by ties. Love happens When the lover has no name. And all this becomes possible, Only in middle age When madness loses its vigour! Chetana Thirthahalli ನಡು ವಯಸ್ಸಿನಲ್ಲಿ ಪ್ರೇಮಪದ್ಯ ಬರೆಯಬಹುದೇ? ಕೇಳಿ ನನ್ನನ್ನು, ಪ್ರೇಮ ಘಟಿಸುವುದೇ ನಡುವಯಸ್ಸಿನಲ್ಲಿ. ಪ್ರೇಮ ಘಟಿಸುವುದು ಮಾತು ಸಾಕಾದಾಗ, ದೇಹ ದಣಿದಾಗ, ಸ್ಪರ್ಶಕ್ಕೆ ಮೈ ಮರಗಟ್ಟಿದಾಗ, ಆಯ್ದ ಪೋಣಿಸಿದ ಪದಗಳ ಹಾರ ಹೇವರಿಕೆ ತರಿಸುವಾಗ; ಪ್ರೇಮ ಘಟಿಸುವುದು, ವಿರಹಕ್ಕೆ ಮನಸ್ಸು ಹಾತೊರೆಯುವಾಗ. ಪ್ರೇಮವೆಂದರೆ ದೂರ, ಮೌನ, ಏಕಾಂತ, ಬಂಧ ಬೆಸೆಯದ ಸ್ವಾತಂತ್ರ್ಯ. ಪ್ರೇಮ ಘಟಿಸುವುದು ಪ್ರೇಮಿಗೆ ಹೆಸರಿಲ್ಲವಾದಾಗ. ಮತ್ತು ಇವೆಲ್ಲ ಸಾಧ್ಯವಾಗೋದು, ಹುಚ್ಚುತನಕ್ಕೆ ಪುರುಸೊತ್ತಾಗದ ನಡು ವಯಸ್ಸಿನಲ್ಲೇ! ಚೇತನಾ ತೀರ್ಥಹಳ್ಳಿ

    Before Me

  • ಶುಕ್ರವಾರ, ಡಿಸೆಂಬರ್ 06, 2024
  • ಬಿಸಿಲ ಹನಿ
  • Before Me Before me, darkness was born, It was called death. Before me, light was born, It was worshipped as the Sun. Before me, love was born, It was revered as the earth. Before me, my tears were born, They were named poetry. Kannada Original: Arif Raja English Translation: Uday Itagi ನನಗಿಂತ ಮೊದಲು ನನಗಿಂತ ಮೊದಲು ಕತ್ತಲು ಹುಟ್ಟಿತು ಅದಕ್ಕೆ ಸಾವು ಎಂದು ಕೂಗಲಾಯಿತು ನನಗಿಂತ ಮೊದಲು ಬೆಳಕು ಹುಟ್ಟಿತು ಅದಕ್ಕೆ ಸೂರ್ಯ ಎಂದು ನಮಿಸಲಾಯಿತು ನನಗಿಂತ ಮೊದಲು ಪ್ರೀತಿ ಹುಟ್ಟಿತು ಅದಕ್ಕೆ ಭೂಮಿ ಎಂದು ಪೂಜಿಸಲಾಯಿತು ನನಗಿಂತ ಮೊದಲು ನನ್ನ ಕಣ್ಣೀರು ಹುಟ್ಟಿತು ಅದಕ್ಕೆ ಕವಿತೆ ಎಂದು ಹೆಸರಿಡಲಾಯಿತು -ಆರಿಫ್ ರಾಜಾ

    Without love...

  • ಭಾನುವಾರ, ಡಿಸೆಂಬರ್ 01, 2024
  • ಬಿಸಿಲ ಹನಿ
  • *ಪ್ರೀತಿ ಇಲ್ಲದ ಮೇಲೆ...*

    ಪ್ರೀತಿ ಇಲ್ಲದ ಮೇಲೆ-
    ಹೂವು ಅರಳೀತು ಹೇಗೆ ?
    ಮೋಡ ಕಟ್ಟೀತು ಹೇಗೆ ?
    ಹನಿಯೊಡೆದು ಕೆಳಗಿಳಿದು
    ನೆಲಕ್ಕೆ ಹಸಿರು ಮೂಡೀತು ಹೇಗೆ ?
    ಪ್ರೀತಿ ಇಲ್ಲದ ಮೇಲೆ-
    ಮಾತಿಗೆ ಮಾತು ಕೂಡೀತು ಹೇಗೆ ?
    ಅರ್ಥ ಹುಟ್ಟೀತು ಹೇಗೆ?
    ಬರಿ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ
    ಪದ್ಯವಾದೀತು ಹೇಗೆ ?
    ಪ್ರೀತಿ ಇಲ್ಲದ ಮೇಲೆ-
    ಸಂಶಯದ ಗಡಿಗಳುದ್ದಕ್ಕು
    ಸಿಡಿಗುಂಡುಗಳ ಕದನ ನಿಂತೀತು ಹೇಗೆ ?
    ಜಾತಿ-ಮತ-ಭಾಷೆ-ಬಣ್ಣಗಳ ಗೋಡೆಯ ನಡುವೆ
    ನರಳುವ ಪಾಡು ತಪ್ಪೀತು ಹೇಗೆ ?
    ನಮ್ಮ ನಿಮ್ಮ ಮನಸ್ಸು
    ಮರುಭೂಮಿಯಾಗದ ಹಾಗೆ
    ತಡೆಗಟ್ಟುವುದು ಹೇಗೆ ?

    *-ಜಿ. ಎಸ್. ಶಿವರುದ್ರಪ್ಪ*

    *Without Love....*

    Without love,
    How will the flowers bloom?
    How will the clouds gather?
    How will the raindrops descend,
    Bringing greenery to the earth?

    Without love,
    How will words connect with one another?
    How will meaning emerge?
    Just because words stand together,
    How will it become poetry?

    Without love,
    How will the battles of suspicion and doubt cease?
    How will the agony of caste, creed, language, and color,
    Trapped within walls, be alleviated?

    How can we prevent
    Our hearts and minds
    From turning into barren deserts?

    Kannada Original: *G. S. Shivarudrappa*

    English Translation: Uday Itagi