Demo image Demo image Demo image Demo image Demo image Demo image Demo image Demo image

’ಗಂಡುಹಕ್ಕಿ’, ಸ್ತ್ರೀಯರು, ಪ್ರಸ್ತುತ ಸಮಾಜ ಮತ್ತು ನಾನು.

  • ಶನಿವಾರ, ಡಿಸೆಂಬರ್ 27, 2008
  • ಬಿಸಿಲ ಹನಿ
  • ಕರ್ನಾಟಕ ಲೇಖಕಿಯರ ಸಂಘದಿಂದ ಪ್ರಕಟವಾದ "ಲೇಖಕಿಯರ ಸಣ್ಣ ಕತೆಗಳು-ಭಾಗ ೨" ರಲ್ಲಿ ಅಚ್ಚಾದ ಟಿ. ಸಿ. ಪೂರ್ಣಿಮಾರವರ "ಗಂಡುಹಕ್ಕಿಗೆ ರೆಕ್ಕೆ ಇಲ್ಲವೆ?" ಕತೆಯನ್ನು ಇತ್ತೀಚಿಗೆ ಓದಿದೆ. ಕತೆ ಅದ್ಭುತವಾಗಿದೆ. ಬಹಳಷ್ಟು ಲೇಖಕಿಯರು ಹೆಣ್ಣಿನ ಶೋಷಣೆ, ಅವಳ ಸ್ವಾತಂತ್ರ್ಯ ಹರಣ, ಅವಳ ಮೇಲಿನ ದಬ್ಬಾಳಿಕೆ ಬರಿ ಇಂಥದೇ ವಿಷಯಗಳ ಬಗ್ಗೆ ಬರೆಯುತ್ತಿರುವಾಗ ಪೂರ್ಣಿಮಾರವರು ಮಾತ್ರ ಬದಲಾಗುತ್ತಿರುವ ಸಮಾಜದಲ್ಲಿ ಬದಲಾಗುತ್ತಿರುವ ಮಹಿಳೆಯರ ಮನೋಭಾವ, ಅವರ ತಣ್ಣನೆಯ ಕ್ರೌರ್ಯ ಮತ್ತು ಆ ಮೂಲಕ ಮದುವೆಯೆಂಬ ಬಂಧನದಲ್ಲಿ ಗಂಡಸು ಹೇಗೆ ಶೋಷಣೆ, ಹತಾಶೆ, ನಿರಾಶೆ ಮತ್ತು ಅಸಹಾಯಕತೆಗೆ ಒಳಗಾಗುತ್ತಿದ್ದಾನೆ ಎಂಬುದನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಈ ಕಾರಣಕ್ಕೆ ಕತೆ ಓದುಗರ ಗಮನವನ್ನು ಸೆಳೆಯುತ್ತದೆ.

    ಕಾಲ ಬದಲಾದಂತೆ ಹೆಣ್ಣಿನ ಸ್ಥಾನ ಮಾನ ಬದಲಾದದ್ದು ನಿಜ. ಆದರೆ ಎಷ್ಟು ಬದಲಾಗಿವೆಯೆಂದರೆ ಇವತ್ತಿನ ಹೆಂಗಸರು ಬರಿ ಹಕ್ಕು, ಸ್ವಾತಂತ್ರ್ಯ, ಅಧಿಕಾರದ ಬಗ್ಗೆ ಮಾತನಾಡುತ್ತಾ (ಎಲ್ಲ ಹೆಂಗಸರು ಅಂತ ನಾನು ಹೇಳುತ್ತಿಲ್ಲ. ಆದರೆ ಹಾಗೆ ಮಾತನಾಡುವವರ ಸಂಖ್ಯೆ ಜಾಸ್ತಿಯಿದೆ.) ತಮ್ಮ ಮೂಲ ಕರ್ತವ್ಯ, ಜವಾಬ್ದಾರಿ, ಮಾನವೀಯ ಮೌಲ್ಯಗಳನ್ನು ಮರೆತು ತಾವಾಯಿತು ತಮ್ಮ ಗಂಡ, ಮಕ್ಕಳಾಯಿತು ಎಂದು ಸ್ವಾರ್ಥಿಗಳಾಗುತ್ತಿದ್ದಾರೆ. ಗಂಡ ಮಕ್ಕಳ ವಿಷಯದಲ್ಲೂ ಕೂಡ ಸರಿಯಾಗಿ ಒದಗಿಸಬೇಕಾದ ನ್ಯಾಯ ಒದಗಿಸುತ್ತಿಲ್ಲ. ಆ ಮಾತು ಬೇರೆ.

    ಕತೆಯ ಕೊನೆಯಲ್ಲಿ ಕಥಾನಾಯಕನಾಡುವ ಮಾತುಗಳು ಬದಲಾದ ಸಮಾಜದಲ್ಲಿ ಬದಲಾದ ಸ್ತ್ರೀಯರ ಆಲೋಚನೆಗಳ ಮೇಲೆ ಬೆಳಕು ಚೆಲ್ಲುವದರ ಮೂಲಕ ಓದುಗರನ್ನು ದಿಗ್ಭ್ರಮೆಗೊಳಿಸುತ್ತವೆ. ಯಾಕೋ ಈ ಸ್ತ್ರೀ ಸ್ವಾತಂತ್ರ್ಯ , ಆರ್ಥಿಕ ಸಮಾನತೆ, ಮತ್ತು ಸ್ತ್ರೀ ವಾದಗಳು ಅವಶ್ಯಕತೆಗಿಂತ ಮಿತಿಮೀರಿ ಬೆಳೆದು ಸಮಾಜದ ಸ್ವಾಸ್ಥ್ಯವನ್ನು ಹದೆಗೆಡಿಸುತ್ತಿವೆ ಎಂದೆನಿಸುತ್ತದೆ. ಕತೆಯಲ್ಲಿನ "ಇದೇನೂ ನನ್ನ ನಿರ್ಧಾರವಲ್ಲ, ಒಂದು ಸಲಹೆಯನ್ನು ಹೇಳೋದು. ಸರಿ ಕಂಡ್ರೆ ಒಪ್ಕೊಳ್ಳಿ ಇಲ್ದೇ ಹೋದ್ರೆ ಬಿಟ್ಬಿಡಿ." ಎಂದು ಸೂಕ್ಷ್ಮವಾಗಿ ಹೇಳಿ ಜಾರಿಕೊಳ್ಳುವ ಸವಿತೆಯರು, ಗಂಡನ ಬಲಹೀನತೆಯನ್ನೇ ಬಂಡವಾಳವಾಗಿಸಿ ಅವನನ್ನು ಶೋಷಿಸುವ ಶ್ವೇತೆಯರು, "ನನ್ನ ಕೈಲಾಗೊಲ್ಲ ಇನ್ನಿಬ್ರು ಸೊಸೆಂದ್ರು ಇದಾರಲ್ಲ. ಕೇಳಿ ನೋಡಿ" ಎಂದು ಹೇಳಿ ಮೆತ್ತಗೆ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಜಾಣ ಚಂಪಕೆಯರು ಮನೆ ಮನೆಗೂ ಸಿಗುತ್ತಾರೆ.

    ನಾನು ಈ ಮೊದಲು ಸ್ತ್ರೀಪರ ಖಾಳಜಿಗಳನ್ನು ಹೊಂದಿದ್ದೆ. ಆದರೆ ದಿನ ಕಳೆದಂತೆ ವಿವಾಹಿತ ಪುರುಷರ ಆತ್ಮಹತ್ಯೆ ಮತ್ತು ಅವರ ಮೇಲಿನ ದಬ್ಬಾಳಿಕೆ ಹೆಚ್ಚುತ್ತಿರುವದನ್ನು ಕಂಡು ಈ ಮದುವೆಯೆಂಬ ವ್ಯವಸ್ಥೆಯಲ್ಲಿ ಹೆಚ್ಚಾಗಿ ನಲುಗುತ್ತಿರುವದು ಹೆಣ್ಣಲ್ಲ ಗಂಡೆಂದು ಗೊತ್ತಾಯಿತು. ಅದಕ್ಕೆ ಪೂರಕ ಎನ್ನುವಂತೆ ಪೂರ್ಣಿಮಾರವರ ಕತೆ ವಿವಾಹಿತ ಗಂಡಸಿನ ತೊಳಲಾಟ, ನಲುಗಾಟ ಮತ್ತು ಅವನ ಅಸಹಾಯಕತೆಯನ್ನು ಎಳೆ ಎಳೆಯಾಗಿ ಬಿಡಿಸಿಡುತ್ತದೆ. ಇವತ್ತು ಗಂಡನಿಗೆ ಪ್ರೀತಿಯಿಂದ ಕುಡಿಯಲಿಕ್ಕೆ ನೀರು ಕೊಡುವದು ಕೂಡ ತಮ್ಮ ಅಹಂಗೆ, ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ವಿಷಯವೆಂದು ಭಾವಿಸುತ್ತಿದ್ದಾರೆ. ಇನ್ನು ಅತ್ತೆ ಮಾವಂದಿರ ವಿಷಯವಂತು ದೂರವೇ ಉಳಿಯಿತು.

    ಮದುವೆಯಾಗುವ ವಿದ್ಯಾವಂತ/ಉದ್ಯೋಗಸ್ಥ ಹೆಣ್ಣುಮಕ್ಕಳು ಪ್ರೀತಿ, ಅಂತಃಕರಣದ ಬಗ್ಗೆ ಮಾತನಾಡದೆ ಬರಿ ಹಕ್ಕು, ಅಧಿಕಾರ, ಸಮಾನತೆ, ಖಾಸಗಿತನದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ನಮ್ಮ ದೌರ್ಭಾಗ್ಯ ಮತ್ತು ಇವತ್ತಿನ ಸಾಮಾಜಿಕ ಬದುಕಿನ ವ್ಯಂಗ ಕೂಡ! ಏನಾಗಿದೆ ಈ ಹೆಂಗಸರಿಗೆ? ನಾಲ್ಕು ಜನಕ್ಕೆ ಬುದ್ಧಿ ಹೇಳುವ ವಿದ್ಯಾವಂತೆಯರು ಸ್ವಾತಂತ್ರ್ಯದ ಹೆಸರಿನಲ್ಲಿ ಬದುಕಿನ ನಿಜವಾದ ಗಮ್ಯತೆಯನ್ನು ಕಳೆದುಕೊಳ್ಳುತ್ತಿರುವದು ವಿಪರ್ಯಾಸ! ಈ ಆಧುನಿಕ ಸೀತೆಯರು ಒಳಗೂ ನೆನೆಯುವದಿಲ್ಲ, ಹೊರಗೂ ನೆನೆಯುವದಿಲ್ಲ. ಇನ್ನು ಇವರಿಗೆ ವಿದ್ಯೆ ಯಾಕೆ ಬೇಕು? ವಿಕಸನ ಯಾಕೆ ಬೇಕು? ಅಥವಾ ಅವರರ್ಥದಲ್ಲಿ ವಿದ್ಯೆಯೆಂದರೆ ಇದೇನಾ? ವಿಕಸನವೆಂದರೆ ಇದೇನಾ? ಇದಕ್ಕೆ ಪರಿಹಾರವಿಲ್ಲವೆ?

    ಇವತ್ತು ನಾನು ತಿಳಿದಿರುವಂತೆ ಬಹಳಷ್ಟು ಗಂಡಸರು flexible ಆಗಿದ್ದಾರೆ. ಹೊಂದಾಣಿಕೆ ಸ್ವಭಾವದವರಾಗಿದ್ದಾರೆ. ಉದ್ಯೋಗಸ್ಥ ಮಹಿಳೆಯರ ಅವಶ್ಯಕತೆಗೆ ತಕ್ಕಂತೆ ಮನೆಯ ಹಿರಿಯರೂ ಬದಲಾಗಿದ್ದಾರೆ. ಆದರೂ ಈ ಹೆಂಗಸರದು ನಖರಾ ಜಾಸ್ತಿಯಾಗುತ್ತಿದೆ. ಅತ್ತೆ, ಮಾವ, ಮೈದುನರು ಒಳ್ಳೆಯವರಾಗಿದ್ದರೂ ಏನೊ ಒಂದು ನೆಪ ಹೇಳಿ ಜಾರಿಕೊಳ್ಳುತ್ತಾ, ರೊಳ್ಳೆ ತೆಗೆಯುತ್ತಾ ಗಂಡನನ್ನು ಕುಕ್ಕಿ ತಿನ್ನುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇವರಿಗೆ ಗಂಡನ ಮನೆ ಕಡೆಯವರು ಯಾರೂ ಬೇಡ. ಹಾಗಂತ ಗಂಡಸರೇನಾದರೂ ಅವರ ಮನೆ ಕಡೆಯವರ ಬಗ್ಗೆ ಅಸಡ್ಡೆ ತೋರಿಸಿದರೆ ಉರಿದು ಬೀಳುವ ಜಾಯಮಾನದವರು. ಮೊನ್ನೆ ಪತ್ರಿಕೆ ಯೊಂದರಲ್ಲಿ ಪ್ರಕಟವಾದ ಸುದ್ದಿಯಂತೆ ಈ ವರ್ಷ ಕೇವಲ ಭಾರತದಲ್ಲಿ ವಿವಾಹಿತ ಗಂಡಸರ ಆತ್ಮಹತ್ಯೆ ಸಂಖ್ಯೆ ೫೫,೦೦೦ ದಾಟಿದೆ. ಎಂದ ಮೇಲೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಬಹುದಲ್ಲವೆ? ಇದನ್ನೆಲ್ಲ ಸರಿಪಡಿಸೋಕೆ ಆಗೊಲ್ವೆ? ಇದಕ್ಕೆಲ್ಲ ಪರಿಹಾರವಿಲ್ವೆ? ಸುಮ್ಮನೆ ಯೋಚಿಸುತ್ತಾ ಕುಳಿತಿರುವೆ.........

    (ಈ ಲೇಖನ ಖಂಡಿತ ಗಂಡಸರ ಪರವಾಗಿ ಅಥವಾ ಸ್ತ್ರೀಯರ ವಿರೋಧವಾಗಿ ಬರೆದಿದ್ದಲ್ಲ. ಪ್ರಸ್ತುತ ಸಮಾಜದಲ್ಲಿ ಹೆಚ್ಚುತ್ತಿರುವ ಪುರುಷರ ಮೇಲಿನ ದಬ್ಬಾಳಿಕೆಯ ಸಂಖ್ಯಾಧಾರಗಳು ಮತ್ತು ಅದಕ್ಕೆ ಪರೋಕ್ಷವಾಗಿ ಪೂರಕವಾಗಿರುವಂತೆ "ಗಂಡು ಹಕ್ಕಿಗೆ ರೆಕ್ಕೆ ಇಲ್ಲವೆ?" ಕತೆಗೆ ಪ್ರತಿಕಿಯಿಸುತ್ತಾ ಬರೆದಿದ್ದು.)


    2 ಕಾಮೆಂಟ್‌(ಗಳು):

    sunaath ಹೇಳಿದರು...

    ಉದಯ, ಬದಲಾಗುತ್ತಿರುವ ಸ್ತ್ರೀ-ಪುರುಷರ ಸಂಬಂಧವನ್ನು ಚೆನ್ನಾಗಿ ವಿವರಿಸಿದ್ದೀರಿ.

    ಬಿಸಿಲ ಹನಿ ಹೇಳಿದರು...

    ಸುನಾಥವರೇ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಪ್ರೋತ್ಸಾಹ ನನ್ನ ಮತ್ತಷ್ಟು ಬರೆಯಲು ಪ್ರೇರಿಪಿಸಿದೆ.