ಈ ನಡುವೆ ನನ್ನ ಪಿ.ಯು.ಸಿ ಪರೀಕ್ಷೆಗೆ ಮತ್ತೆ ಕಟ್ಟಿದ್ದೆನಾದರೂ ಪರೀಕ್ಷೆ ತೆಗೆದುಕೊಳ್ಳಲು ಹೋಗಲಿಲ್ಲ. ಓದುವ, ಪರೀಕ್ಷೆ ತೆಗೆದುಕೊಳ್ಳುವ ಉತ್ಸಾಹವೇ ಇರಲಿಲ್ಲ. ಓದಿ ಪಾಸ್ ಮಾಡಿದರೆ ಮುಂದೆ ಓದಿಸುವವರು ಯಾರು? ಎಲ್ಲರಿಗೂ ಅವರವರ ಬದುಕು ಭಾರವಾಗಿತ್ತು. ಅಪ್ಪನಿಗೇ ಇಲ್ಲದ ಕಾಳಜಿ ಬೇರೆಯವರಿಗೆ ಎಲ್ಲಿಂದ ಬಂದೀತು? ಇದ್ದೊಬ್ಬ ಅಣ್ಣ ಬಿ.ಎ. ಮಾಡಿ ಟೀಚರ್ಸ್ ಟ್ರೇನಿಂಗ್ ಮುಗಿಸಿ ದೊಡ್ಡಪ್ಪನ ಊರಲ್ಲಿ ಅವರ ಹೊಲಗದ್ದೆಗಳನ್ನು ನೋಡಿಕೊಂಡಿದ್ದನು. ಏಕಾಏಕಿ ಆ ಹಂಗಿನಿಂದ ಹೊರಗೆ ಬಂದು ಆಚೆ ಕಡೆ ಏನಾದರೊಂದು ಕೆಲಸ ಮಾಡುವದು ಆ ಸಮಯದಲ್ಲಿ ಅವನಿಗೂ ಸಾಧ್ಯವಿರಲಿಲ್ಲ. ಮುಂದೆ ಸ್ವಲ್ಪ ದಿನ ನನ್ನ ತಾಯಿ ತವರು ಮನೆ ಸುಲ್ತಾನಪೂರದಲ್ಲಿ, ಸ್ವಲ್ಪ ದಿನ ನನ್ನ ದೊಡ್ಡಮ್ಮನ ಊರು ಕಲಕೋಟಿಯಲ್ಲಿ ಅವರ ಒಕ್ಕಲುತನದ ಕೆಲಸಗಳಲ್ಲಿ ಸಹಾಯಮಾಡುತ್ತಾ ಕಾಲ ಕಳೆದೆ. ಆಗೆಲ್ಲಾ ಅವರಿಗೆ ತುಂಬಾ ಭಾರವಾಗುತ್ತಿದ್ದೇನಲ್ಲ ಎಂದನಿಸಿ ಅತೀವ ಮುಜುಗರವಾಗುತ್ತಿತ್ತು. ಈ ನಡುವೆ ನನ್ನ ಅಕ್ಕ “ನೀನು ಓದಿ ಪಾಸ್ ಮಾಡಿದರೆ ತಾನೆ ಯಾರಾದರೂ ನಿನ್ನನ್ನು ಓದಿಸಲು ಯೋಚಿಸೋದು. ಮೊದಲು ಓದಿ ಪಾಸ್ ಮಾಡು. ಆಮೇಲೆ ನಾವ್ಯಾರಾದರು ಓದಿಸುತ್ತೇವೆ” ಎಂದು ಒಂದಿಷ್ಟು ಧೈರ್ಯ ಹೇಳಿ ಗದುಗಿಗೆ ಕರೆತಂದಳು. ಅಕ್ಕನ ಸಹಾಯದಿಂದ ಧಾರವಾಡಕ್ಕೆ ಹೋಗಿ ಮತ್ತೆ ಪರೀಕ್ಷೆ ಕಟ್ಟಿ ಬಂದೆ.
ನನಗೆ ಅಲ್ಲಿಯೂ ಅವರಿಗೆ ಭಾರವಾಗಿರಲು ಇಷ್ಟವಿರಲಿಲ್ಲ. ನನ್ನ ಖರ್ಚಿಗಾಗುವಷ್ಟನ್ನಾದರೂ ನಾನು ಸಂಪಾದಿಸಬೇಕಿತ್ತು. ಹೀಗಾಗಿ ಗೆಳೆಯರಾದ ನೀಲಗುಂದ ಮತ್ತು ಭುಜರಿಯ ಸಹಾಯದಿಂದ ಗದುಗಿನ ಪ್ರತಿಷ್ಠಿತ ಫೋಟೋ ಸ್ಟುಡಿಯೊವೊಂದರಲ್ಲಿ ಕೆಲಸ ಹಿಡಿದೆ. ಸ್ಟುಡಿಯೋದಲ್ಲಿ ದೊಡ್ಡ ದೊಡ್ಡ ಡೆವಲಿಪ್ಪಿಂಗ್ ಮತ್ತು ಪ್ರಿಂಟಿಂಗ್ ಮಶಿನ್ ಗಳಿದ್ದವು. ನನಗೆ ಅವನ್ನು ಮುಟ್ಟಲು ಸಹ ಭಯವಾಗುತ್ತಿತ್ತು. ಏನೋ ಮಾಡಲು ಹೋಗಿ ಏನಾದರು ಆಗಿಬಿಟ್ಟರೆ? ಏನು ಮಾಡುವದು? ದುಡ್ಡು ಎಲ್ಲಿಂದ ತರುವದು? ಹೀಗಾಗಿ ಪ್ರಿಂಟಿಗ್ ಬಿಟ್ಟು ಡೆವಲಪ್ ಆದ ನೆಗಟಿವ್ ಗಳನ್ನು ಕವರ್ ನಲ್ಲಿ ಸೇರಿಸುವದು, ಪಾಸ್ಪೋರ್ಟ್ ಸೈಜ್ ಫೋಟೋಗಳನ್ನು ಕತ್ತರಿಸಿ ಕೊಡುವದು, ಪ್ರಿಂಟ್ ಹಾಕಿದ ಫೋಟೊಗಳನ್ನು ಡೆಲಿವರಿ ಡೆಸ್ಕಿಗೆ ಕಳಿಸುವದು, ಒಂದೊಂದು ಸಾರಿ ಆರ್ಡರ್ಸ್ ತೆಗೆದುಕೊಳ್ಳುವದು.... ಹೀಗೆ ಒಂದೊಂದಾಗಿ ಫೋಟೋಗ್ರಾಫಿಗೆ ಸಂಬಂಧಪಟ್ಟ ಕೆಲಸಗಳನ್ನು ಕಲಿಯುತ್ತಿದ್ದಂತೆ ನನಗೇ ಗೊತ್ತಿಲ್ಲದಂತೆ ನನ್ನೊಳಗೊಬ್ಬ ಫೋಟೊಗ್ರಾಫರ್ ಮೊಳಕೆಯೊಡೆದಿದ್ದ. ಎಷ್ಟೋ ಸಲ ಹೆಗಲಿಗೊಂದು ಕ್ಯಾಮೆರಾ ಏರಿಸಿ ಮದುವೆ, ಮುಂಜಿ ಮುಂತಾದ ಸಮಾರಂಭಗಳಲ್ಲಿ ಓಡಾಡಿ ಫೋಟೊ ತೆಗೆಯುವ ಕನಸನ್ನು ಕಂಡಿದ್ದಿದೆ. ಆದರೆ ತಿಂಗಳಾಗುವಷ್ಟೊತ್ತಿಗೆ ಮಾಲೀಕರು ಒಂದು ತಿಂಗಳ ಸಂಬಳವನ್ನು ಕೈಗಿತ್ತು ಕಾರಣ ಹೇಳದೆ ನಾಳೆಯಿಂದ ಬರಬೇಡ ಎಂದಷ್ಟೆ ಹೇಳಿ ಕಳುಹಿಸಿದರು. ಬಹುಶಃ, ಅವರು ನಾನು ಒಂದು ತಿಂಗಳಲ್ಲಿಯೇ ಎಲ್ಲ ಕೆಲಸವನ್ನು ಕಲಿತುಕೊಳ್ಳುತ್ತೇನೆ ಎಂದು ನಿರೀಕ್ಷಿಸಿದ್ದರೋ ಅಥವಾ ಅವರಿಗೆ ನನ್ನನ್ನು ಕೆಲಸದಿಂದ ತಗೆಯಬೇಕಿತ್ತೋ ಗೊತ್ತಿಲ್ಲ. ಅಂತೂ ಆ ಕೆಲಸಕ್ಕೆ ಇತಿಶ್ರೀ ಹಾಡಿದೆ. ಆ ಮೂಲಕ ನನ್ನೊಳಗೆ ಚಿಗುರೊಡೆದಿದ್ದ ಫೋಟೋಗ್ರಾಫರ್ ಸತ್ತು ಹೋದ. ಒಂದು ಕೆಲಸವನ್ನು ನಾವಾಗಿಯೇ ಬಿಡುವದಕ್ಕೂ ಅದಾಗಿಯೇ ಹೋಗುವದಕ್ಕೂ ತುಂಬಾ ವ್ಯತ್ಯಾಸವಿದೆ; ಮೊದಲನೆಯದು ಈ ಕೆಲಸ ನನ್ನ ಯೋಗ್ಯತೆಗೆ ತಕ್ಕದಾಗಿಲ್ಲ ಎನ್ನುವ ಅರ್ಥವನ್ನು ಕೊಟ್ಟರೆ ಎರಡನೆಯದು ಕಾರಣ ಏನೇ ಇದ್ದರೂ ನಾನು ಆ ಕೆಲಸಕ್ಕೆ ಯೋಗ್ಯನಲ್ಲ ಎನ್ನುವ ಸಂದೇಶವನ್ನು ಕೊಡುತ್ತದೆ. ಕೆಲಸ ಕಳೆದುಕೊಂಡ ಅವಮಾನ ನನ್ನನ್ನು ಮತ್ತಷ್ಟು ಜರ್ಝರಿತನನ್ನಾಗಿ ಮಾಡಿತು.
ಸರಿ, ಮುಂದೆ ಏನು ಮಾಡುವದು? ಕಲಕೋಟಿಯಲ್ಲಿ ನನಗೆ ಕಲಿಸಿದ್ದ ನನ್ನ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಗದುಗಿಗೆ ಆಗಷ್ಟೆ ವರ್ಗವಾಗಿ ಬಂದಿದ್ದರು. ಮೊದಲಿನಿಂದಲೂ ಅವರಿಗೆ ನನ್ನ ಜಾಣತನದ ಬಗ್ಗೆ ಗೊತ್ತಿದ್ದರಿಂದ ಅವರು ತಮ್ಮ ಮನೆ ಹತ್ತಿರ ತೀರ ಸಣ್ಣ ಮಕ್ಕಳಿಗೆ ನಾನು ಯಾಕೆ ಟ್ಯೂಶನ್ ಮಾಡಬಾರದು ಎಂಬ ಸಲಹೆ ಕೊಟ್ಟರು. ‘ಪಿ.ಯು.ಸಿ ಫೇಲಾದವನೊಬ್ಬ ಯಾವ ತರದ ಟ್ಯೂಶನ್ ಮಾಡಿಯಾನು?’ ಎಂಬ ನನ್ನ ಆತಂಕವನ್ನು ಅವರ ಮುಂದಿಟ್ಟಾಗ “ನೀನು ಮೊದಲಿನಿಂದಲೂ ಜಾಣ ವಿದ್ಯಾರ್ಥಿ, ನಿನ್ನ ಇಂಗ್ಲೀಷ್ ಮತ್ತು ಗಣಿತ ಚನ್ನಾಗಿದೆ. ದೊಡ್ಡವರಿಗಲ್ಲದಿದ್ದರೂ ಸಣ್ಣ ಮಕ್ಕಳಿಗಿ ಪಾಠ ಹೇಳುವಷ್ಟು ಸಾಮರ್ಥ್ಯ ನಿನ್ನಲ್ಲಿದೆ. ನಿನ್ಯಾಕೆ ಪ್ರಯತ್ನಿಸಬಾರದು?” ಎಂದು ಧೈರ್ಯ ತುಂಬಿದರು. ಆ ಪ್ರಕಾರ ದಿನಾಲೂ ಅಕ್ಕನ ಮನೆಯಿಂದ ಅವರ ಮನೆಗೆ ಹೋಗಿ ಪಾಠ ಹೇಳಿ ಬರುತ್ತಿದ್ದೆ. ಪಾಠ ಮಾಡುತ್ತಾ ಮಾಡುತ್ತಾ ನಾನು ಬರೀ ಚಿಕ್ಕ ಮಕ್ಕಳಿಗೆ ಮಾತ್ರವಲ್ಲ SSLC ಮಕ್ಕಳಿಗೂ ಸಹ ಗಣಿತ ಮತ್ತು ಇಂಗ್ಲೀಷ್ ಹೇಳಿಕೊಡಬಲ್ಲೆ ಎನ್ನುವ ಆತ್ಮವಿಶ್ವಾಸ ಮೂಡಿತ್ತು. ಏಕೆಂದರೆ SSLC ಯಲ್ಲಿ ನಾನು ನನ್ನ ಗುರುಗಳಾದ ಅಣ್ಣಿಗೇರಿ ಮಾಸ್ತರರಿಂದ ಕಲಿತ ಗಣಿತ ಮತ್ತು ಇಂಗ್ಲೀಷ್ ನನ್ನ ತಲೆಯಲ್ಲಿ ಇನ್ನೂ ಹಾಗಾಗೆ ಉಳಿದಿದ್ದವು. ಹಾಗೆ ಮೆಲ್ಲಗೆ ನನ್ನೊಳಗೆ ಹುಟ್ಟಿದ ಶಿಕ್ಷಕನೊಬ್ಬ ಮುಂದೊಂದು ದಿನ ಬೃಹದಾಕಾರವಾಗಿ ನಿಲ್ಲುತ್ತಾನೆಂದು ನಾನೆಣಿಸಿರಲಿಲ್ಲ. ನನ್ನ ಹತ್ತಿರ ಟ್ಯೂಶನ್ ಬರುವ ಮಕ್ಕಳೆಲ್ಲಾ ಒಳ್ಳೆ ಅಂಕಗಳನ್ನು ತೆಗೆದುಕೊಂಡು ಪಾಸಾಗತೊಡಗಿದರು. ಇದರಿಂದ ಹೆಚ್ಚಿನ ಮಕ್ಕಳು ಬರತೊಡಗಿದರು. ನಾನು ನಿರೀಕ್ಷಿಸಿದ್ದಕ್ಕಿಂತ ದುಡ್ಡು ಕೂಡ ಚನ್ನಾಗಿ ಬರತೊಡಗಿತು. ಈಗಾಗಲೇ ಪಿ.ಯು.ಸಿ. ಪರೀಕ್ಷಿಗೆ ಕಟ್ಟಿಬಂದಿದ್ದರಿಂದ ನನ್ನ ಕೆಲಸದ ಜೊತೆಜೊತೆಗೆ ಪರೀಕ್ಷೆಗೆ ತಯಾರಾಗತೊಡಗಿದೆ.
ಇದೇ ಸಂದರ್ಭದಲ್ಲಿ ಆಗಷ್ಟೇ ಮದುವೆಯಾಗಿದ್ದ ನನ್ನ ಅಣ್ಣ ಅಂದರೆ ನನ್ನ ದೊಡ್ಡಪ್ಪನ ಮಗ “ನೀನು ಪಿ.ಯು.ಸಿ. ಪಾಸ್ ಮಾಡಿದರೆ ಮುಂದೆ ನಮ್ಮ ಜೊತೆ ಇದ್ದುಕೊಂಡು ಓದಬಹುದು” ಎಂದು ಭರವಸೆ ಕೊಟ್ಟ. ನನಗೋ ಎಲ್ಲಿಲ್ಲದ ಖುಶಿ! ನಾನು ಓದಲಾರದೆ ಹಾಗೆ ಉಳಿದು ಬಿಡುತ್ತೆನೆ ಎಂದುಕೊಂಡವನಿಗೆ ಸ್ವರ್ಗ ಮೂರೇ ಗೇಣು! ಆ ವರ್ಷ 1995. ನನ್ನ ಟ್ಯೂಶನ್ ಕೆಲಸದ ಜೊತೆ ಕಷ್ಟಬಿದ್ದು ಓದಿದೆ. ಈ ವರ್ಷ ಓದಿ ಪಾಸ್ ಮಾಡದೇ ಹೋದರೆ ಸಿಕ್ಕ ಅವಕಾಶ ಎಲ್ಲಿ ಕೈತಪ್ಪಿ ಹೋಗುತ್ತದೋ ಎಂಬ ಭಯದಿಂದ ಹಟಕ್ಕೆ ಬಿದ್ದು ಓದಿದೆ. ಏಪ್ರಿಲ್ ತಿಂಗಳಲ್ಲಿ ಧಾರವಾಡಕ್ಕೆ ಹೋಗಿ ಪರೀಕ್ಷೆ ಬರೆದು ಬಂದೆ. ಪರೀಕ್ಷೆಯಲ್ಲಿ ಪಾಸಾಗುತ್ತೆನೆ ಎಂಬ ಅತ್ಮವಿಶ್ವಾಸವಿತ್ತು. ಅಕಸ್ಮಾತ್ ಫೇಲಾಗಿ ಬಿಟ್ಟರೆ? ಇದ್ದೇ ಇದೆಯಲ್ಲ ಟ್ಯೂಶನ್ ಮಾಡ್ಕೊಂಡು ಹೋಗೋದು ಎಂದು ಟ್ಯೂಶನ್ ನಡೆಸಲು ತಯಾರಿ ಮಾಡಿಕೊಳ್ಳತೊಡಗಿದೆ. ಜೂನ್ ಮೊದಲ ವಾರದಲ್ಲಿ ಪಿ.ಯು.ಸಿ. ಫಲಿತಾಂಶ ಹೊರಬಿತ್ತು. ನನಗೋ ಏನಾಗುತ್ತದೋ ಎಂಬ ಆತಂಕ! ಧಾರವಾಡಕ್ಕೆ ಹೋಗಿ ರಿಸಲ್ಟ್ ನೋಡಿದೆ. ನನ್ನ ಅದೃಷ್ಟಕ್ಕೆ ಪಾಸಾಗಿದ್ದೆ. ಕುಣಿದುಕುಪ್ಪಳಿಸಿಬಿಟ್ಟೆ. ಅದೇ ಖುಶಿಯಲ್ಲಿ ಧಾರವಾಡದ ವಿಜಯಾ ಥೇಟರ್ ನಲ್ಲಿ ಆಗಷ್ಟೆ ಬಿಡುಗಡೆಯಾದ ಉಪೇಂದ್ರನ “ಓಂ” ಸಿನಿಮಾ ನೋಡಿ ಗದುಗಿಗೆ ವಾಪಾಸಾಗಿದ್ದೆ.
ಮಧ್ವ ನವರಾತ್ರೋತ್ಸವ
3 ದಿನಗಳ ಹಿಂದೆ