ನಿನಗನ್ನಿಸುವದಿಲ್ಲವೆ
ನಾವಿಬ್ಬರು ಬಹಳಷ್ಟನ್ನು ಕಳೆದುಕೊಂಡಿದ್ದೇವೆಯೆಂದು?
ಈಗ ಬರಿ ಮಾತುಗಳಲ್ಲಿ ಮಡುಗಟ್ಟಿಹೋದ
ನಮ್ಮಿಬ್ಬರ ನಡುವಿನ “ಅಗಾಧ” ಪ್ರೀತಿಯನ್ನು?
ಒಬ್ಬರೊನ್ನೊಬ್ಬರು ನೋಡುವ ಆತುರ ಕಾತುರಗಳನ್ನು
ಭೇಟಿಯ ಸಂಭ್ರಮ ಸಡಗರಗಳನ್ನು?
ನಿನಗನ್ನಿಸುವದಿಲ್ಲವೆ
ನಮ್ಮಿಬ್ಬರ ಚುಂಬನಗಳು ಕಾವು ಕಳೆದುಕೊಂಡು
ಸಾಮಿಪ್ಯದ ಬಿಸುಪು ಆರಿಹೋಗಿ
ಭೇಟಿಗಳೆಲ್ಲ ಹೆಪ್ಪುಗಟ್ಟಿದ ಹಿಮಗಡ್ಡೆಗಳಂತಾಗಿವೆಯೆಂದು?
ಪ್ರೀತಿ ಮಾತುಗಳೆಲ್ಲ ಈಗ
ಬರಿ ಉಪಚಾರದ ಮಾತುಗಳಾಗಿ
ಭೇಟಿ ಮಾಡಲು ಸಹ ಮರೆತುಹೋಗಿ
ಸುಳ್ಳು ಸುಳ್ಳು ನೆಪಹೇಳಿ ಜಾರಿಕೊಳ್ಳುತ್ತಿದ್ದೇವೆಯೆಂದು?
ನಿನಗನ್ನಿಸುವದಿಲ್ಲವೆ
ನಾವು ಬರೆಯುವ ಅವಸರದ ಸಣ್ಣ ಸಣ್ಣ ಪತ್ರಗಳಲ್ಲಿ
ಭಾವನೆಗಳಾಗಲಿ ಉತ್ಸಾಹವಾಗಲಿ
ಹ್ರದಯದ ಪಿಸುಮಾತುಗಳಾಗಲಿ ಪ್ರೀತಿಯ ಹೊಂಗನಸುಗಳಾಗಲಿಲ್ಲವೆಂದು?
ಉತ್ತರಿಸುವದು ಹೊರೆಯಾಗಿ
ಪ್ರತಿಕ್ರಿಯಿಸುವದು ನಿಧಾನವಾಗಿದೆಯೆಂದು?
ನಿನಗನ್ನಿಸುವದಿಲ್ಲವೆ
ನಮ್ಮಿಬ್ಬರ ನಡುವಿದ್ದ ಜಗವು ಮುರಿದುಬಿದ್ದು
ಹೊಸದೊಂದು ಹುಟ್ಟಿದೆಯೆಂದು?
ನಮ್ಮ ಅಂತ್ಯ ಕಹಿಯಾಗಿ ಘೋರವಾಗಿ
ಕೇವಲ ಬೂದಿಯಾಗಿ ಉಳಿಯುತ್ತದೆಂದು?
ಏಕೆಂದರೆ ಇದು ಧುತ್ತೆಂದು ನಮ್ಮ ಮೇಲೆ ಎರಗಿದ್ದಲ್ಲ
ತಾನೇ ತಾನಾಗಿ ನಮ್ಮೊಳಗಿಂದ ನಿಧಾನವಾಗೆದ್ದು ಬಂದದ್ದು!
ಅರೇಬಿ ಮೂಲ: ಸಮೀಹ ಆಲ್ ಕಾಶಿ
ಭಾವಾನುವಾದ: ಉದಯ ಇಟಗಿ
ಆಚಾರ್ಯರ ಪುಣ್ಯಾರಾಧನೆ
18 ಗಂಟೆಗಳ ಹಿಂದೆ
8 ಕಾಮೆಂಟ್(ಗಳು):
ಉದಯ ಸರ್,
ಸಮೀಹ ಆಲ್‌ಕಾಶಿ ಪದ್ಯವನ್ನು ತುಂಬಾ ಚೆನ್ನಾಗಿ ಅನುವಾದಿಸಿದ್ದೀರಿ.....
ಗಂಡು ಹೆಣ್ಣಿನ ನಡುವೆ ಮುಗಿದು ಹೋದ ಬದುಕನ್ನು ವಿಷಾದ ಚಾಯೆಯಲ್ಲಿ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ....
ಉದಯ್
ಪ್ರತಿಯೊಬ್ಬರ ದಾಂಪತ್ಯದಲ್ಲೂ ಇಂತಹ ಒಂದು ಘಟ್ಟ ಇದ್ದೇ ಇರುತ್ತದೇನೋ! ಆದರೆ ಪತಿ ಯಾ ಪತ್ನಿ ಯಾರೂ ಬಾಯಿ ಬಿಟ್ಟು ಹೇಳುವ ಹಾಗಿಲ್ಲ; ವಾಸ್ತವದಲ್ಲಿ ಹಾಗೆ ಹೇಳಬಾರದು ಕೂಡಾ. ಏಕೆಂದರೆ ಆ ಘಟ್ಟ ಮುಗಿದ ಮೇಲೆ ಮತ್ತೆ ದಾಂಪತ್ಯದಲ್ಲಿ ಪರಸ್ಪರ ಪ್ರೀತಿ-ಪ್ರೇಮ, ಅವಲಂಬನ, ಎಲ್ಲವೂ ತಾನಾಗೆ ಮೂಡುತ್ತದೆ. ಆದರೆ ಸಾಹಿತ್ಯದಲ್ಲಿ ಎಲ್ಲವೂ ಸಾಧ್ಯ! ಅದಕ್ಕೆ ಉತ್ತಮ ನಿದರ್ಶನ ಈ ಕವಿತೆ. ಮೂಲ ಅರೇಬಿಕ್ ಭಾಷೆಯಲ್ಲಿ ಓದುವ ಸಾಮರ್ಥ್ಯವಿಲ್ಲದ ನನ್ನಂತಹವರಿಗೆ ಅನುವಾದದ ಮೂಲಕ ಕವನವನ್ನು ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು.
ವಾಹ್!ವಾಹ್!
ಗಂಡು ಹೆಣ್ಣುಗಳ ಸಂಬಂಧದ ಒಂದು ಘಟ್ಟವನ್ನು ಅಲ್ ಕಾಶಿ ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ. ಮೂಲಕವನ ಹೇಗಿದೆಯೋ ತಿಳಿಯದು; ಆದರೆ ನಿಮ್ಮ ಅನುವಾದ ಮನಸ್ಸನ್ನು ತಟ್ಟುತ್ತದೆ.
ಅರಬಿ ಸಾಹಿತ್ಯವನ್ನು ಕನ್ನಡಿಗರಿಗೆ ತಲುಪಿಸುತ್ತಿರುವ ನಿಮಗೆ ಧನ್ಯವಾದಗಳು.
ಶಿವು ಅವರೆ,
ಗಂಡು ಹೆಣ್ಣಿನ ನಡುವೆ ಮುಗಿದು ಹೋದ ಬದುಕನ್ನು ವಿಷಾದದ ಛಾಯೆಯಲ್ಲಿ ಚೆನ್ನಾಗಿ ಕಟ್ಟಿಕೊಟ್ಟ ಕೀರ್ತಿ ಮೂಲ ಕವಿ ಆಲ್ ಕಾಶಿಯವರಿಗೆ ಸಲ್ಲಬೇಕು.ನಂದೇನಿದ್ದರೂ ಅನುವಾದ ಅಷ್ಟೆ!
ಸತ್ಯನಾರಾಯಣ ಅವರೆ,
ಗಂಡು ಹೆಣ್ಣಿನ ಸಂಬಂಧದ ವಿವರಣೆಯನ್ನು ಬಹಳ ಚನ್ನಾಗಿ ಕಟ್ಟಿಕೊಟ್ಟಿದ್ದೀರಿ ನೀವು ಹೇಳಿದಂತೆ ಪ್ರತಿಯೊಬ್ಬರ ದಾಂಪತ್ಯದಲ್ಲೂ ಇಂತಹ ಒಂದು ಘಟ್ಟ ಇದ್ದೇ ಇರುತ್ತದೆ. ಆದರೆ ಬಾಯಿ ಬಿಟ್ಟು ಹೇಳದೆ ಅನುಭವಿಸಿಕೊಂಡೇ ಬಾಳುವ ಸಾಕಷ್ಟು ದಂಪತಿಗಳನ್ನು ನಾನು ನೋಡಿದ್ದೇನೆ.ಆ ಘಟ್ಟ ಮುಗಿದ ಮೇಲೆ ಮತ್ತೆ ದಾಂಪತ್ಯದಲ್ಲಿ ಪರಸ್ಪರ ಪ್ರೀತಿ-ಪ್ರೇಮ, ಅವಲಂಬನ,ಎಲ್ಲವೂ ತಾನಾಗೆ ಮೂಡುವದು ತೀರ ವಿರಳ.ಏಕೆಂದರೆ ಈ ಹೈಟೆಕ್ ಯುಗದಲ್ಲಿ ಸಂಬಂಧಗಳೂ ಹೈಟೆಕ್ ಆಗಿರುವದು ವಿಪರ್ಯಾಸ.ನೀವೇನಂತೀರಿ?
ಸುನಾಥ್ ಸರ್,
ನೀವು ಹೇಳಿದಂತೆ ಗಂಡು ಹೆಣ್ಣುಗಳ ಸಂಬಂಧದ ಒಂದು ಘಟ್ಟವನ್ನು ಅಲ್ ಕಾಶಿ ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ.ಮೂಲ ಕವನ ಹೇಗಿದೆಯೋ ನನಗೂ ಗೊತ್ತಿಲ್ಲ.ಅರಬಿಯಿಂದ ಇಂಗ್ಲೀಷಗೆ ಅನುವಾದ ಆಗಿದ್ದನ್ನು ಮೂಲಕ್ಕೆ ಧಕ್ಕೆಯಾಗದಂತೆ ಕನ್ನಡಕ್ಕೆ ಅನುವಾದಸಿದ್ದೇನೆ.Thank you for your nice compliment.
ಉದಯ ಅವರೆ,
ಒಳ್ಳೆ ಕವನಗಳನ್ನು ಅನುವಾದಿಸುತ್ತೀದ್ದೀರ.
ನಮಗೆ ಅರಬೀ ಭಾಷೆ ತಿಳಿಯದಿದ್ದರು ಅದರ ಕವನಗಳ ಅನುವಾದವನ್ನು ನಿಮ್ಮ ಬ್ಲಾಗಿನಲ್ಲಿ ಓದುವಂತೆ ಮಾಡಿದ್ದೀರ.
ವಂದನೆಗಳು
Thanka you Jayashankar.
ಕಾಮೆಂಟ್ ಪೋಸ್ಟ್ ಮಾಡಿ