Demo image Demo image Demo image Demo image Demo image Demo image Demo image Demo image

ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಕೊನೆಯ ಭಾಗ)

  • ಸೋಮವಾರ, ನವೆಂಬರ್ 08, 2010
  • ಬಿಸಿಲ ಹನಿ
  • “ಅವನು………? ಅಂದರೆ………?” ನನಗೆ ನಂಬಲಾಗಲಿಲ್ಲ.
    “ಅಂದರೆ ಅವನು ನನ್ನ ಗೆಳೆಯ. ಬರಿ ಗೆಳೆಯನಲ್ಲ. ಜೀವದ ಗೆಳೆಯ!”
    “ಮತ್ತೆ ಇದು ಹುಡುಗಿ ಮೇಲೆ ಬರೆದಿರೊ ತರ ಇದೆ”
    “ಹಾಗೆ ಅನ್ಕೊ...... ಆದರೆ ನಾನದನ್ನು ಬರೆದಿದ್ದು ಅವನ ಮೇಲೆಯೇ, ಅವನು ಈ ವರ್ಣನೆ ಕೇಳಿ ಈ ಕೋಟು ಕೊಟ್ಟ” ಎಂದು ಉಬ್ಬಿದ.
    “ಹಾಗಾದರೆ ಅದು ಒಳ್ಳೆ ಸಾನೆಟ್”
    “ಯಾಕೆ?” ಕೇಳಿದ ಮಿ. ಶೇಕ್ಷಪೀಯರ್.
    “ಯಾಕೆಂದರೆ ಇದು ಒಳ್ಳೇ ಕೋಟು!”
    ಚಣ ಬಿಟ್ಟು ಕೇಳಿದೆ: “ಹಾಗಾದರೆ ನಿನ್ನ ಬೀರುವಿನಲ್ಲಿ ಇರುವ ಡ್ರೆಸ್ಸುಗಳೆಲ್ಲ ಸಾನೆಟ್ಟಿನಿಂದಲೇ ಬಂದವೆ?”
    ಮಿಸ್ಟರ್ ಸ್ಮೈಲ್ ನಾಚಿ ಕೆಂಪಾಗಿ ನಿಂತ. ಮಹಾನ್ ನಾಚಿಕೆಗಾರ! ಆ ನಾಚಿಕೆಯಲ್ಲಿ ಮುಗ್ಧತೆಯಿತ್ತೋ, ತಪ್ಪು ಮಾಡಿ ಸಿಕ್ಕಿಕೊಂಡವನ ಭಯವಿತ್ತೋ! ಕಡೆಗೂ ತಡೆತಡೆದು ಹೇಳಿದ, “ಸಾನೆಟ್ ಬರೆದಿದ್ದು ಬರೀ ಬಟ್ಟೆಗೋಸ್ಕರ ಅಲ್ಲ, ಆದರೆ ಸಾನೆಟ್ ಬರೆದಾಗೆಲ್ಲ ಒಂದೊಂದು ಕೋಟು ಸಿಕ್ಕಿದ್ದು ನಿಜ!”
    “ಓ! ಹಾಗಾದರೆ ನಿನಗೆ ಇಷ್ಟೆಲ್ಲ ದುಡ್ಡು ಕೊಡುವ ಆ ನಿನ್ನ ‘ಅವನು’, ನಿನ್ನ ಸಾಕೋ ಆ ಪೆಟ್ರನ್ನು ಶ್ರೀಮಂತನಿರಬೇಕು” ಅಂದೆ.
    “ಪೇಟ್ರನ್ ಅನ್ನಬೇಡ, ನನ್ನ ಹೆನ್ರಿ, ನನ್ನ ಹೆನ್ರಿ ರಿಜ್ಲಿ, ಸೌತಾಂಪ್ಟನ್” ಎಂದ.


    ಹೆನ್ರಿ ರಿಜ್ಲಿ -ಶೇಕ್ಷಪೀಯರನ ಗೆಳೆಯ


    “ಓಹ್! ಹೆನ್ರಿ ನಿನ್ನ ಆಶ್ರಯದಾತ!”
    “ಪ್ಲೀಸ್, ಯ್ಯಾನಿ, ಅವನು ಬರೀ ಆಶ್ರಯದಾತ ಅಲ್ಲ”
    “ಹಾಂ, ಅವನು ಬೇಸಿಗೆಯ ಹಗಲಿನ ಥರ!” ಎಂದು ತಿವಿದೆ.
    ಹೀಗಿರುವಾಗ ಒಂದು ದಿನ ಮಿ. ಶೇಕ್ಷಪೀಯರ್ ನನ್ನ ಕಣ್ಣಿಗೆ ಪಟ್ಟಿ ಕಟ್ಟಿ “ಬಾ ತಮಾಷೆ ತೋರಿಸುತ್ತೇನೆ” ಎಂದು ಮನೆಯ ಮಹಡಿಗೆ ಕರಕೊಂಡು ಹೋದ. “ಕಣ್ಣು ಬಿಡು” ಅಂದ. ಕಣ್ಣುಬಿಟ್ಟರೆ ಅಲ್ಲೊಂದು ದೊಡ್ಡ ಹಾಸಿಗೆ. “ಇದೇ ನಮ್ಮ ಪ್ಲೇಹೌಸ್” ಅಂದ, ನನ್ನ ಹುಚ್ಚುಕವಿ.
    ನಾನೆಂದೂ ಪ್ಲೇಹೌಸಿಗೆ ಹೋದವಳಲ್ಲ. “ಇಲ್ಲೇನು ಮಾಡುವದು?” ಅಂದರೆ, “ಆಡುವದು” ಅಂದ.
    “ಆಮೇಲೇನಾಯಿತು ಗೊತ್ತ?” ಅವನು “ಓ ಮೈ ಲವ್, ಓ ಮೈ ಲೈಫ್” ಅಂದ. ನಾನೂ “ಓ ಮೈ ಲೈಫ್, ಓ ಮೈ ಲವ್” ಅಂದೆ.
    ಇಲ್ಲಿಂದ ಮುಂದೆ ನಡೆದದ್ದನ್ನೆಲ್ಲ ಇದ್ದದ್ದು ಇದ್ದಂತೆ ಹೇಳಿಬಿಡುವೆ. Let me die if I lie.
    ಅವತ್ತು ಹಾಸಿಗೆಯ ಮೇಲೆ ಒಂದು ಸಣ್ಣ ಆಟ ಆದಮೇಲೆ ಕೇಳಿದೆ, “ಈ ಹಾಸಿಗೆಗೆ ಎಷ್ಟು ಸಾನೆಟ್ಸ್ ಆಯ್ತು?”
    “ಸಾನೆಟ್ಸ್? ನೋ, ನೋ, ಎರಡೇ ಎರಡು ಪದ್ಯಕ್ಕೆ ಈ ಹಾಸಿಗೆ ಸಿಕ್ತು” ಅಂದ ಹೆಮ್ಮೆಯಿಂದ.
    “ಅಬ್ಬ! ಹಾಗಾದರೆ ಉದ್ದನೆ ಪದ್ಯಗಳೇ ಇರಬೇಕು!”
    ಸರ್ ಸ್ಮೈಲ್ ಎದ್ದ. “ಇರು, ತೋರಿಸ್ತೇನೆ” ಎಂದು ಎರಡು ದಪ್ಪ ರಟ್ಟಿನ ಪುಸ್ತಕ ತಂದ. ಒಂದರ ಮೇಲೆ “Venus and Adonis” ಅಂತ ಬರೆದಿತ್ತು. ಇನ್ನೊಂದರ ಮೇಲೆ “The Rape of Lucrece” ಅಂತ ಇತ್ತು. “ಲೂಕ್ರಿಸ್ ನ ರೇಪ್ ಮಾಡಿದೋರು ಯಾರು? ಗಂಡಸೋ ಹೆಂಗಸೋ?” ಅಂದೆ. “Sextus Tarquinis” ಅಂದ. “ಸೆಕ್ಸ್ಟಸ್! ಹೆಸರೇ ಬೊಂಬಾಟಾಗಿದೆ.” ಅಂದೆ. ಮಿ. ಶೇಕ್ಷಪೀಯರ್ ಮುಖ ಊದಿಸಿಕೊಂಡು “ಆ ಸೆಕ್ಸ್ಟಸ್ ಒಬ್ಬ ವಿಲನ್” ಅಂದ “ಆದರೇನಂತೆ! ಆ ಹೆಸರಿನ ಸೌಂಡೇ ಎಷ್ಟು ಲವ್ಲಿಯಾಗಿದೆ!” ಅಂದೆ.
    “ಅದಿರಲಿ, ಆ ಇನ್ನೊಂದು ಪದ್ಯದಲ್ಲಿ ರೇಪ್ ಮಾಡೋರು ಯಾರು? ವೀನಸ್ ನ ಆಡೋನಿಸ್ ರೇಪ್ ಮಾಡ್ತಾನೋ ಅಥವಾ ಆಡೋನಿಸ್ ನ ವೀನಸ್?” ಎಂದೆ. ತಲೆ ಚಚ್ಚಿಕೊಳ್ಳುತ್ತಾ ಶೇಕ್ಷಪೀಯರ್ ಅವನ ಪದ್ಯಗಳ ಕತೆಯೆಲ್ಲ ಹೇಳಿದ. “ಇವೇನು ಪದ್ಯಗಳೋ! ಇದರ ತುಂಬಾ ಲಂಪಟರು, ರೇಪ್ ಮಾಡೋದು, ರೇಪ್ ಮಾಡೋಕೆ ಟ್ರೈ ಮಾಡೋದು, ಓಡಿಹೋಗೋದು.....ಇಷ್ಟೇ” ಅಂದೆ.
    ಸುಮ್ಮನೆ ಥಣ್ಣಗೆ ಹಾಸಿಗೆಯ ಮೇಲೊರಗಿ “ಹೆನ್ರಿ ರಿಜ್ಲಿ” ಅಂದೆ. “ಎಸ್?” ಎಂದ ಶೇಕ್ಷಪೀಯರ್.
    “ಆ ಎರಡು ಪದ್ಯಕ್ಕೆ ಹೆನ್ರಿ ನಿನಗೆ ಇಷ್ಟು ದೊಡ್ಡ ಹಾಸಿಗೆ ಕೊಟ್ಟನೆ?”
    “ಇಲ್ಲ, ಇಲ್ಲ. ಅವನು ದುಡ್ಡು ಕೊಟ್ಟ. ನಾನು ಹಾಸಿಗೆ ಕೊಂಡೆ!” ಎಂದ ಮಳ್ಳನ ಹಾಗೆ.
    ಯಾಕೋ ಏನೋ, ಇದ್ದಕ್ಕಿದ್ದಂತೆ ನನ್ನ ಮೂಗು ಹಾಸಿಗೆಯೆನ್ನೆಲ್ಲ ಮೂಸತೊಡಗಿತು! “ಈ ಹಾಸಿಗೇಲಿ......ಈ ಹಾಸಿಗೇಲಿ ‘ಅವನು’ ಮಲಗಿದ್ದನ?” ಅಂತ ಪಿಸುಗುಟ್ಟಿದೆ. ಮಿ. ಶೇಕ್ಷಪೀಯರ್ ಸುಮ್ಮನಿದ್ದ. ಹಾಗೆ ಸುಮ್ಮನಿದ್ದರೆ “ಹೂಂ” ಎಂದನೆಂದೇ ಅರ್ಥ! “ಓ ಜೀಸಸ್” ಅನ್ನುತ್ತಾ, ಮೆಲ್ಲಗೆ “ಅದಕ್ಕೆ.....ಎಷ್ಟು ಕೊಟ್ಟ?” ಅಂದೆ. “ಒಂದು ಸಾವಿರ ಪೌಂಡ್” – ಕೊನೆಗೂ ಶೇಕ್ಷಪೀಯರ್ ಬಾಯಿಬಿಟ್ಟ.
    ಆಮೇಲೆ ಪ್ಲೇಹೌಸಿನಲ್ಲಿ ಆಟ ಶುರುವಾಯಿತು. ಎಲ್ಲ ತಿರುವುಮುರುವು. ಒಮ್ಮೆ ನಾನು ಗಂಡಿನ ವೇಷದಲ್ಲಿ, ಅವನು ಹೆಣ್ಣು ವೇಷದಲ್ಲಿ! ಇನ್ನೊಂದು ಆಟದಲ್ಲಿ “ಈ ಹಾಸಿಗೆಯೇ ದ್ವೀಪ” ಅಂದ. ನಾನು ಮಂತ್ರವಾದಿಯ ಮಗಳಂತೆ. ಆ ಮಂತ್ರವಾದಿಯ ಹೆಸರು ಪ್ರಾಸ್ಟರಸ್ ಅಂತೆ. ಶೇಕ್ಷಪೀಯರ್ ತಾನು ಅದೆಂಥದೋ ಕ್ಯಾಲಿಬನ್ ಅಂದ. ಇನ್ನೊಂದು ಆಟದಲ್ಲಾಗಲೇ ನೀನು ಜೂಲಿಯೆಟ್ ಅಂದ. ಹಾಸಿಗೆಯೇ ಗೋರಿಯಂತೆ. ಅದರೊಳಗೆ ನಾನು ಸತ್ತು ಬಿದ್ದಿರಬೇಕಂತೆ! ಆಮೇಲೆ ತಾನು ರೋಮಿಯೋ ಅಂತ ಬಂದು ವಿಷ ಕುಡಿದ. ಇದಾದ ಮೇಲೆ ನಾನು ಎದ್ದು ಚೂರಿಯಿಂದ ಇರಿದುಕೋಬೇಕು! ಇನ್ನೊಂದು ರಾತ್ರಿ ಅದ್ಯಾವನೋ ಡೆನ್ಮಾರ್ಕ್ ರಾಜಕುಮಾರನ ಪ್ರೇಯಸಿಯ ಪಾತ್ರ. ಆ ರಾಜಕುಮಾರನಿಗೆ ಒಂಥರಾ ಹುಚ್ಚು, ಅಥವಾ ಹುಚ್ಚನಂತೆ ನಟಿಸುತ್ತಿದ್ದ, ಅಥವಾ ಹಾಗೆ ನಟಿಸೋಕೆ ಹೋಗಿ ಹುಚ್ಚನಾದನೋ ಏನೋ. ಅಂತೂ ಅದು ನನಗೂ ಗೊತ್ತಾಗಲಿಲ್ಲ, ಶೇಕ್ಷಪೀಯರ್ ನಿಗೂ ಗೊತ್ತಾಗಲಿಲ್ಲ. ಆದರೆ ನಾನಂತೂ ಅವನ ಪ್ರೇಯಸಿಯಂತೆ ಹೂವೆಸೆಯುವಂತೆ ನಟಿಸುತ್ತಾ ಕೊಳಕ್ಕೆ, ಅಂದರೆ ಹಾಸಿಗೆಗೆ, ಬಿದ್ದೆ. ಹಾಂ, ಅವನು ಹೇಳಿದ ಹಾಗೆ ಮುಖ ಅಡಿಯಾಗೇ ಬಿದ್ದೆ, ಅನ್ನಿ!
    ಇದಾದ ಮೇಲೆ ಒಂದು ರಾತ್ರಿ “ಆ ಹೆನ್ರಿ ರಿಜ್ಲಿ ನೋಡೊಕೆ ಹೇಗಿದಾನೆ?” ಅಂದೆ.
    “ನನ್ನ ಪುಟ್ಟ ಸೂಳೆ! ಅವನೇನು ನಿನ್ನ ಸವತಿ ಅಲ್ಲ” ಅಂದ, ಪ್ರೀತಿಯಿಂದ.
    “ಅದೆಲ್ಲ ಇರಲಿ, ಅವನು ನೋಡೋಕೆ ಹೇಗಿದಾನೆ ಹೇಳು, ಪ್ಲೀಸ್” ಅಂದೆ.
    ಶೇಕ್ಷಪೀಯರ್ ನಾಚಿದ, ಬೆವೆತ, ಉಗುರು ಕಚ್ಚಿದ, “ಅವನ ಬಗ್ಗೆ ನನ್ನ ಸಾನೆಟ್ಟುಗಳಲ್ಲಿ ಬರೆದಿರೋದನ್ನೆಲ್ಲ ಓದಲೆ?” ಅಂದ, “ಅವೆಲ್ಲ ಬೇಡಯ್ಯ, ಸಾಫ್ ಸೀದಾ ಎರಡೇ ಮಾತಲ್ಲಿ ಹೇಳು” ಅಂದೆ. ಶುರುಮಾಡಿಯೇಬಿಟ್ಟ, “ಇಪ್ಪತ್ತೊಂದು ವಸಂತಗಳ ಕಂಡವನು, ಆ ದೇವತೆ, ಆ ಸ್ಪೂರ್ತಿ, ಆ ಸಂತ, ಸಂಪಿಗೆಗಿಂತ ಮಧುರ ಅವನ ಬಿಸಿಯುಸಿರು......” ಪಾಪ, ಹೀಗೆ ಹಾಡುತ್ತಲೇ ಇದ್ದ, the love-sick fool, my dirty devil!
    ಆದರೆ ಆಮೇಲೆ ಯಾರಿಂದಲೋ ಗೊತ್ತಾಯಿತು ಆ ಹೆನ್ರಿ, ಶೇಕ್ಷಪೀಯರನಿಗೆ ಬರಿ ಸಲಿಂಗಿ ಸಂಗಾತಿಯಾಗಿರಲಿಲ್ಲ, ಅವನ ಆತ್ಮ ಸಂಗಾತಿ ಕೂಡ ಆಗಿದ್ದನೆಂದು. ಅವರಿಬ್ಬರಲ್ಲಿ ಎಷ್ಟೊಂದು ಆತ್ಮೀಯತೆ, ಗಾಢತೆಯಿತ್ತೆಂದರೆ ಇಬ್ಬರೂ ಒಬ್ಬರೊನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ. ಶೇಕ್ಷಪಿಯರ್ ಕೂಡ ಅವನನ್ನು ಅತ್ಯಂತ ತೀವ್ರವಾಗಿ ಗಾಢವಾಗಿ ಪ್ರೀತಿಸುತ್ತಿದ್ದ. ಅದಕ್ಕೆ ಅವನು ಬರೆದ 154 ಸಾನೆಟ್ ಗಳಲ್ಲಿ 126 ಸಾನೆಟ್ ಗಳು ಗೆಳೆತನಕ್ಕೇ ಮೀಸಲಾಗಿರುವದು ಸಾಕ್ಷಿ. ಆ ಹೆನ್ರಿ ಇವನಿಗೆ ಹೇಳಿ ಮಾಡಿಸಿದಂಥ ಜೋಡಿ. ಶೆಕ್ಷಪೀಯರನ ಭಾವನೆಗಳಿಗೆ, ಕನಸುಗಳಿಗೆ, ಅವನು ಅದ್ಭುತವಾಗಿ ಸ್ಪಂದಿಸುತ್ತಿದ್ದನಂತೆ. ಅಷ್ಟೇ ಅಲ್ಲ ಅವ ಶೇಕ್ಷಪೀಯರ್ ಬರೆದಿದದ್ದನ್ನು ಮೆಚ್ಚಿಕೊಂಡು ಹಾಡಿ ಹೊಗಳುತ್ತಿದ್ದನಂತೆ ಹಾಗೂ ಇನ್ನೂ ಬರಿಯೆಂದು ಹುರುದುಂಬಿಸುತ್ತಿದ್ದನಂತೆ. ಒಂದು ಲೆಕ್ಕದಲ್ಲಿ ಅವನೇ ಇವನಿಗೆ ಹೆಂಡತಿಯಾಗಿದ್ದರೆ ಚನ್ನಾಗಿತ್ತೇನೋ! ತಪ್ಪಿ ನಾನಾಗಿ ಬಿಟ್ಟೆ. ಪಾಪ ಶೇಕ್ಷಪೀಯರ್! ಮೊದಲೇ ಹೇಳಿದಂಗೆ ನಾನು ಅವನಿಗೆ ಸರಿಯಾದ ಜೋಡಿಯಾಗಲಿಲ್ಲ. ಅವನ ಭಾವನೆಗಳಿಗೆ ನಯವಾಗಿ ನಾಜೂಕಾಗಿ ಯಾವತ್ತೂ ಸ್ಪಂದಿಸಲಿಲ್ಲ. ಬರೀ ಏನಿದ್ದರೂ ಮುಖಕ್ಕೆ ಹೊಡೆದ ಹಾಗೆ ಹೇಳುತ್ತಿದ್ದೆ. ಇನ್ನು ಅವನು ಯಾವಾಗಲಾದರೂ ಕವನ ಓದಲು ಬಂದಾಗ ‘ತಲೆನೋವು ಮಾರಾಯ’ ಅಂತ ಹೇಳಿ ನಿರಾಶೆಗೊಳಿಸುತ್ತಿದ್ದೆ. ನನಗೆ ಸಾಹಿತ್ಯದಲ್ಲಿ ಆಸಕ್ತಿಯಿರಲಿಲ್ಲ ನಿಜ. ಆದರೆ ಆಸಕ್ತಿ ಬೆಳೆಸಿಕೊಂಡಿದ್ದರೆ, ಅವನನ್ನು ನಯವಾಗಿ ಸಂಭಾಳಿಸಿದ್ದರೆ ನಾನವನಿಗೆ ಒಳ್ಳೆ ಹೆಂಡತಿ ಆಗಬಹುದಿತ್ತೇನೋ ಅಂತ ಈಗ ಅನಿಸುತ್ತದೆ. ಬಹುಶಃ ಅದೇ ಕಾರಣಕ್ಕೇ ಇರಬೇಕು ಅವನು ನನ್ನಲ್ಲಿ ಕಾಣದಿದ್ದನ್ನು ಅವನ ಗೆಳೆಯನಲ್ಲಿ ಕಂಡುಕೊಂಡ. ನನಗೆ ಅವನಿಷ್ಟದಂತೆ ಬದುಕಲು ಸಾದ್ಯವಿತ್ತೇನೋ ಆದರೆ ನಾನು ಪ್ರಯತ್ನಿಸಲಿಲ್ಲ. ಹೀಗಾಗಿ ಅವನ ಗೆಳೆಯನೇ ಅವನಿಗೆ ಹೆಂಡತಿಯಂತಾದ.

    ಮತ್ತೆ ನೆನಪಾಗುತ್ತಿದೆ......ನಾನೊಮ್ಮೆ ಅದೇ ಥೇಮ್ಸ್ ನದಿ ದಂಡೆಯ ಮೇಲೆ ಸಂಜೆ ವಿಹಾರಕ್ಕೆಂದು ಅವನ ಜೊತೆ ಹೋದಾಗ ಕುತೂಹಲಕ್ಕೆಂದು ಕೇಳಿದ್ದೆ “ನಿನ್ನ ಗೆಳೆಯ ಬೇಸಿಗೆಯ ಹಗಲಾದರೆ, ನಾನೇನು ಹಾಗಾದರೆ?” ಎಂದು. ಅದಕ್ಕವನು ನಿರ್ಭಿಡೆಯಿಂದ “ನೀನು ಚಳಿಗಾಲದ ಒಂದು ದಿನ” ಎಂದು ಹೇಳಿದ್ದ. ನನಗಾಗ ಅರ್ಥವಾಗದೆ ನಗುತ್ತಾ ಸುಮ್ಮನೆ ತಲೆಯಮೇಲೊಂದು ಮೊಟಕಿದ್ದೆ. ಆದರೆ ಈಗ ಎಲ್ಲವೂ ಅರ್ಥವಾಗುತ್ತಿದೆ. ನಿಜಕ್ಕೂ ನಾನವನ ಮೈ ಮನಗಳ ಬಿಸಿಯೇರಿಸದ “ಚಳಿಗಾಲದ ಒಂದು ದಿನ” ವಾಗಿ ಉಳಿದುಬಿಟ್ಟೆನೆಂದು. ಇರಲಿ. ಇಷ್ಟೆಲ್ಲಾ ಹೇಳಿದ ಮೇಲೆ ನನ್ನೆರೆಡು ಮಕ್ಕಳ ಬಗ್ಗೆ ಹೇಳಲೇಬೇಕು.

    ಸೂಸನ್ ಮತ್ತು ಜುಡಿತ್ ಎಂಬ ಎರಡು ಹೆಣ್ಣುಮಕ್ಕಳು ನನಗೆ. ಸೂಸನ್ ನನ್ನ ಮತ್ತು ಶೇಕ್ಷಪೀಯರನ ಮೊದಲ ಮಿಲನದಲ್ಲಿಯೇ ಹುಟ್ಟಿದಾಕೆ. ಸೂಸನ್ ಜಾಣೆ, ಬುದ್ಧಿವಂತೆ, ಲೋಕಜ್ಞಾನವಿದ್ದಾಕೆ. ವ್ಯವಹಾರದಲ್ಲಿ ತುಂಬಾ ಚುರುಕು. ಅವಳನ್ನು ನೋಡಿದರೆ ಏನೋ ಒಂಥರಾ ಖುಶಿ ನನಗೆ! ಜುಡಿತ್ ನನ್ನ ಕಿರಿಮಗಳು: ಒರಟು, ಒಡ್ಡಿ, ಪೆದ್ದಿ. ಅವಳಕ್ಕನಿಗಿಂತ ಎರಡು ವರ್ಷ ಚಿಕ್ಕವಳು. ಆದರೆ ಇವಳೇ ಅಕ್ಕನಂತೆ ಕಾಣುತ್ತಿದ್ದಳು. ಅವಳಿಗೆ ಬರೆಯುವ ಸಾಮರ್ಥ್ಯವಿದ್ದರೂ ಬರೆಯಲಿಲ್ಲ. ಏಕೆಂದರೆ ಬರೀತಾ ಬರೀತಾನೆ ಅವರಪ್ಪ ಕುಟುಂಬದಿಂದ ಹೊರಗೆ ಉಳಿದುಬಿಟ್ಟ ಎನ್ನುವದು ಅವಳ ಅಭಿಪ್ರಾಯವಾಗಿತ್ತು. ಪಾಪ, ಅವಳಿಗೆ ಜೀವನ ಅಷ್ಟೊಂದು ಸುಖಕರವಾಗಿರಲಿಲ್ಲ. ಮೂವತ್ತೊಂದರವರೆಗೆ ಅವಳು ಮದುವೆಯಾಗಲಿಲ್ಲ. ಆದರೆ ಮದುವೆಯಾದಾಗ ಅವಳ ಆಯ್ಕೆ ಅಷ್ಟು ಸರಿಯಾಗಿರಲಿಲ್ಲ. ಸ್ವಲ್ಪೇ ದಿನದಲ್ಲಿ ಆ ಮದುವೆ ಮುರಿದುಬಿತ್ತು. ಹೀಗಾಯ್ತಲ್ಲಾ ಅಂತಾ ನಮಗೆಲ್ಲಾ ತುಂಬಾ ಬೇಜಾರಾಯಿತು.

    ಮಿ. ಶೇಕ್ಷಪೀಯರ್ ತನ್ನ ಕೊನೆ ದಿಗಳನ್ನು ಕಳೆಯಲು ಸ್ಟ್ರ್ಯಾಟ್ ಫೋರ್ಡಿಗೆ ಬಂದ. ಕೈಯಲ್ಲಿ ಸಾಕಷ್ಟು ಹಣವಿತ್ತು. ಅದು ಅವನು ಬರೆದಿದ್ದುದರಿಂದ ಗಳಿಸಿದ್ದು. ಕುಡಿಯುವದನ್ನು ಹೇಗೋ ಬಿಟ್ಟಿದ್ದ. ಆದರೆ ಊರಿಗೆ ವಾಪಾಸಾದ ಮೇಲೆ ಮತ್ತೆ ಕುಡಿಯತೊಡಗಿದ. ಬಹುಶಃ, ತನ್ನ ಎರಡನೇ ಮಗಳು ಜುಡಿತ್ ಳ ಬಾಳು ಮೂರಾಬಟ್ಟಿಯಾಗಿದ್ದು ಇದಕ್ಕೆ ನೆಪವಾಗಿರಬೇಕು. ನೆಪವಷ್ಟೆ. ಕಾರಣವಲ್ಲ. ಹಾಗಂತ ಅವನ ಆರೋಗ್ಯದಲ್ಲಿ ಹೇಳಿಕೊಳ್ಳುವಂತ ವ್ಯತ್ಯಾಸವೇನೂ ಆಗಿರಲಿಲ್ಲ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ನಮ್ಮನ್ನೆಲ್ಲ ಬಿಟ್ಟುಹೋದ. ನಾವ್ಯಾರು ಅವನು ಇಷ್ಟು ಬೇಗ ಸಾಯುತ್ತಾನೆಂದು ಎಣಿಸಿರಲಿಲ್ಲ. ಆದರೆ ಸಾಯುವ ಮುನ್ನ ತಾನು ಮಾಡಬೇಕಾದ ಜವಾಬ್ದಾರಿಗಳನ್ನೆಲ್ಲ ಮುಗಿಸಿದ್ದ. ಏಪ್ರೀಲ್ 23, 1616 - ಅದು ಅವನ ಐವತ್ತೆರಡನೇ ಹುಟ್ಟುಹಬ್ಬ. ಅಂದೇ ಅವನು ಸತ್ತುಹೋದ.

    Dead Mr. Shakespeare
    My bad husband.
    The darling.

    ನನ್ನ ತೋಳಲ್ಲಿ ಸಾಯುವ ಮೊದಲು ಮಿಸ್ಟರ್ ಶೇಕ್ಷಪೀಯರ್ ವಿಲ್ ನಲ್ಲಿ ಕೊನೆಯ ವಾಕ್ಯವೊಂದನ್ನು ಸೇರಿಸಿದ: “I gave unto my wife my second-best bed with the furniture.” ಹಾಗಾದರೆ ಆ ಇನ್ನೊಂದು ಹಾಸಿಗೆಯ, the best bedನ ಕತೆಯಲ್ಲಿ ಬರುವ ಪಾತ್ರ ಯಾವುದು? ಅವನ ಗೆಳೆಯನೇ? ಅಥವಾ ನನಗೂ ನಿಮಗೂ ಗೊತ್ತಿಲ್ಲದ ಇನ್ನೊಂದು ಹೆಣ್ಣಿನದೇ?

    ಉತ್ತರ ಹುಡುಕುತ್ತಿದ್ದೇನೆ............!

    -ಉದಯ್ ಇಟಗಿ
    ಆಧಾರ: ರಾಬರ್ಟ್ ನೈ ಬರೆದ “Mrs. Shakespeare” ಎಂಬ ಇಂಗ್ಲೀಷ್ ಕಾದಂಬರಿ ಹಾಗೂ ಇದರ ಮೇಲೆ ನಟರಾಜ್ ಹುಳಿಯಾರವರು ಬರೆದ ಒಂದು ಲೇಖನ ಮತ್ತು ಶೇಕ್ಷಪೀಯರನ ಜೀವನದಲ್ಲಿ ಹೀಗೆ ನಡೆದಿರಬಹುದು ಎಂದು ಊಹಿಸಲು ಸಾಧ್ಯವಾದ ಅಂತರ್ಜಾಲದಲ್ಲಿ ಲಭ್ಯವಿರುವ ಅವನ ಒಂದಿಷ್ಟು ಜೀವನ ಘಟನೆಗಳು.
    ಚಿತ್ರ ಕೃಪೆ: ಅಂತರ್ಜಾಲ

    ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಭಾಗ-3)

  • ಮಂಗಳವಾರ, ಅಕ್ಟೋಬರ್ 26, 2010
  • ಬಿಸಿಲ ಹನಿ
  • ಶೇಕ್ಷಪೀಯರ್ ತಿಕ್ಕಲಷ್ಟೇ ಅಲ್ಲ ಮಹಾನ್ ಸುಳ್ಳುಗಾರ ಕೂಡ ಆಗಿದ್ದ. ಬಾಯಿ ಬಿಟ್ಟರೆ ಸಾಕು: ಬರೀ ಸುಳ್ಳು, ಕಲ್ಪನೆ, ಭ್ರಮೆ. ನನ್ನ ಗಂಡ ಒಬ್ಬನೆ ಅಲ್ಲ: ಪ್ರಪಂಚದ ಎಲ್ಲ ಕವಿಗಳು, ಲೇಖಕರೆಲ್ಲಾ ಮಹಾನ್ ಸುಳ್ಳುಗಾರರೇ! ಹಾಗೆಂದೇ ಅವರಿಗೆ ದೊಡ್ಡ ದೊಡ್ಡ ಕೃತಿಗಳನ್ನು ರಚಿಸಲು ಸಾಧ್ಯವಾಗೋದು. ಅವೆಲ್ಲಾ ಬರೀ ಕಲ್ಪನೆ, ಭ್ರಮೆ, ಸುಳ್ಳಿನ ಕಂತೆಗಳು ಅಷ್ಟೇ. ಇನ್ನು ಈ ಜನಾನೋ ಮೊದಲೇ ಅರೆಹುಚ್ಚರು. ಕೇಳಬೇಕಲ್ಲ? ಅವನ್ನೆಲ್ಲಾ ಸತ್ಯ ಅನ್ಕೊಂಡು ಮುಗಿಬಿದ್ದು ಓದುತ್ತಾರೆ. ಓದಿ ಓದಿ ಪೂರ್ಣ ಹುಚ್ಚರಾಗುತ್ತಾರೆ. ಅವರು ಏನೋ ಬರೀತಾರೆ. ಇವರೇನೋ ಓದ್ತಾರೆ. ಓದಿದ ಮೇಲೆ ಸುಮ್ಮನಿರದೆ ಇದು ಚನ್ನಾಗಿದೆ, ಇದನ್ನೋದು ಅಂತಾ ಮತ್ತೊಬ್ಬರಿಗೆ ಹೇಳೋದು. ಅವರೂ ಹುಚ್ಚರಾಗೋದಲ್ಲದೆ ಬೇರೆದವರನ್ನೂ ಹುಚ್ಚರನ್ನಾಗಿ ಮಾಡ್ತಾರೆ! ಅದಕ್ಕೆ ನಾನ್ಯಾವತ್ತೂ ಯಾವ ಪುಸ್ತಕಾನೂ ಓದೋಕೆ ಹೋಗಲಿಲ್ಲ ಬೈಬಲ್ ಒಂದನ್ನು ಬಿಟ್ಟು! ಎಲ್ಲೀವರೆಗೂ ಓದೋರು ಇರ್ತಾರೋ ಅಲ್ಲೀವರೆಗೂ ಇವರು ಬರೀತಾನೆ ಇರ್ತಾರೆ. ಬರೆದು ಬರೆದು ಗುಡ್ಡೆ ಹಾಕ್ತಾರೆ. ಕೊನೆಗೆ ಒಂದಿಷ್ಟು ದುಡ್ಡು, ಬಹುಮಾನ ಅಂತಾ ತಗೊಳ್ತಾರೆ. ಅದು ಬಿಟ್ರೆ ಮತ್ಯಾವ ಮೂರು ಕಾಸಿನ ಪ್ರಯೋಜನಾನೂ ಇಲ್ಲ ಅವರಿಂದ! ಸುಳ್ಳುಗಾರರಿಗೆ ತಾನೆ ಈ ಜಗತ್ತಿನಲ್ಲಿ ಗೌರವ, ಮನ್ನಣೆ, ಬಹುಮಾನ ಎಲ್ಲಾ! ಇರಲಿ. ಮಿಸ್ಟರ್ ಶೇಕ್ಷಪೀಯರ್ ನನ್ನೊಂದಿಗೆ ಮಾತನಾಡುವಾಗಲೂ ಕೂಡ ಬರೀ ಸುಳ್ಳುಗಳನ್ನೇ ಹೇಳುತ್ತಿದ್ದ. ಒಮ್ಮೆ “ಭಾಳಾ ದೊಡ್ದ ಛಾನ್ಸ್ ಕಣೇ, ಸರ್ ಫ್ರಾನ್ಸಿಸ್ ಜೊತೆ ಸಮುದ್ರಯಾನ ಹೋಗಿದ್ದೆ” ಅಂದ. ಪಾಪ ಅಂಥ ಧೈರ್ಯ ಎಲ್ಲಿಂದ ಬರಬೇಕು ಅಂದುಕೊಂಡೆ. ಹನಿ ರಕ್ತ ಕಂಡರೂ ಗಡ ಗಡ ನಡುಗುವವನು ಅವನು. ಒಂದು ಸಲವಂತೂ ನಾನು ಈರುಳ್ಳಿ ಹೆಚ್ಚುವಾಗ ಕೈ ಕುಯ್ದುಕೊಂಡದ್ದು ಕಂಡು ಕುಸಿದು ಬಿದ್ದಿದ್ದ. ಇಂಥವನು ಸಮುದ್ರಯಾನ ಹೋದಾನೆ? “ಬೋಹಿಮಿಯಾದಿಂದ ನನ್ನ ಕಡಲಯಾನ ಶುರು” ಅಂದಿದ್ದ. ಬೋಹಿಮಿಯಾದಲ್ಲಿ ಕಡಲತೀರವೇ ಇರಲಿಲ್ಲ! ಅಲ್ಲಿಂದ ಟರ್ಕಿಯ ಅಲಿಪ್ಟೋ ಸೇರುತ್ತೇನೆಂದ. ಅಲ್ಲಿ ಬಂದರೇ ಇರಲಿಲ್ಲ! ಬರೀ ಸುಳ್ಳು! ವಿಲ್ಮ್ ಕೋಟ್ ಅನ್ನೋ ಊರಿಗೆ ಹೋಗಿದ್ದರೆ ಬಿಡ್ ಫೋರ್ಡ್ ಗೆ ಹೋಗಿದ್ದೆ ಅನ್ನುತ್ತಿದ್ದ. ಬಿಡ್ ಫೋರ್ಡ್ ಗೆ ಹೋಗಿದ್ದರೆ ಮತ್ತೆಲ್ಲಿಗೊ ಹೋಗಿದ್ದೆ ಅನ್ನುತ್ತಿದ್ದ. ಅವನು ಮಾತನಾಡುತ್ತಿದ್ದುದೇ ಹಾಗೆ. ಅವನು ಹೇಳುವದನ್ನೆಲ್ಲಾ ನೀವು ನಂಬಿದರೆ ಸಾಕು, ಅದೇ ಅವನಿಗೆ ಖುಷಿ!




    ಮಿಸೆಸ್ ಶೇಕ್ಷಪೀಯರ್


    ಈಗ ಮತ್ತೆ ಮೂಲಕಥೆಗೆ ಮರಳೋಣ. ಅದು ಮಿಸ್ಟರ್ ಶೇಕ್ಷಪೀಯರ್ ಬರೆಯುತ್ತಿದ್ದ ರೀತಿ. ಅವನು ಬರೆಯುತ್ತಿದ್ದುದು ಬಾತುಕೋಳಿಯ ಗರಿಯಿಂದ. ಅವನ ಪಕ್ಕದಲ್ಲಿ ಸದಾ ಒಂದು ಮಸಿ ಬಾಟಲಿ ಮತ್ತು ಒಂದಿಷ್ಟು ಖಾಲಿ ಹಾಳೆಗಳು ಇರುತ್ತಿದ್ದವು. ಇವೇ ಅವನ ಸಂಗಾತಿಗಳು. ಅವನಿಗೆ ಯಾವಾಗ ಬರೆಯುವ ಮೂಡು ಬರುತ್ತಿತ್ತೋ ಹೇಳಲಿಕ್ಕೆ ಬರುತ್ತಿರಲಿಲ್ಲ. ಮೂಡು ಬಂದ ಕೂಡಲೇ ಗರಿಯನ್ನು ಮಸಿ ಬಾಟಲಿಯಲ್ಲಿ ಅದ್ದಿ ಹಾಳೆಯ ಮೇಲಿಡುತ್ತಿದ್ದಂತೆ ಪದಗಳು ತಾವೇ ತಾವಾಗಿ ಕುಣಿಯುತ್ತಾ ಸಾಗುತ್ತಿದ್ದವು. ಅವ ಹಾಳೆಯ ಎರಡೂ ಮಗ್ಗಲಿನಲ್ಲಿ ಬರೆಯುತ್ತಿದ್ದ: ಒಂದು ಮಗ್ಗಲಿನಲ್ಲಿ ಐವತ್ತು ಸಾಲುಗಳು, ಇನ್ನೊಂದು ಮಗ್ಗಲಿನಲ್ಲಿ ಐವತ್ತು ಸಾಲುಗಳು. ಹಾಂ, ಅದು ಅವ ಹಾಗೆ ಬರೆಯುತ್ತಿದ್ದುದು ಎಷ್ಟು ಬರೆದೆನೆಂದು ಲೆಕ್ಕ ಇಡಲಿಕ್ಕೆ. ಪ್ರತಿ ಹಾಳೆಯನ್ನು ನಾಲ್ಕು ಕಾಲಂಗಳಾಗಿ ವಿಂಗಡಿಸುತ್ತಿದ್ದ. ಎಡಗಡೆ ಪಾತ್ರದ ಹೆಸರು. ಬಲಗಡೆ ರಂಗದ ಮೇಲೆ ಬರೋದನ್ನು ಹಾಗೂ ಹೋಗೋದನ್ನು ನಮೂದಿಸುತ್ತಿದ್ದ. ಸಂಭಾಷಣೆಯನ್ನು ಮಧ್ಯದಲ್ಲಿ ಬರೆಯುತ್ತಿದ್ದ. ಬರೆಯಲು ಅವನಿಗೆ ಒಂದು ನಿರ್ಧಿಷ್ಟ ಸಮಯ ಅಂತಾ ಇರಲಿಲ್ಲ. ಒಂದೊಂದು ಸಾರಿ ಮಧ್ಯರಾತ್ರಿಯವರೆಗೂ ಬರೆಯುತ್ತಿದ್ದ. ಬರೆದು ಬರೆದು ಸುಸ್ತಾಗಿ ಹಾಳೆಗಳನ್ನು ಅಲ್ಲೇ ಬಿಟ್ಟು ಹಾಗೆ ಮಲಗಿಬಿಡುತ್ತಿದ್ದ. ಇಲ್ಲವೇ ಒಂದೊಂದು ಸಾರಿ ಮಧ್ಯರಾತ್ರಿಯಲ್ಲಿ ಎದ್ದು ಬರೆಯುತ್ತಿದ್ದ. ಒಮ್ಮೊಮ್ಮೆ ನನ್ನೊಂದಿಗೆ ಮಾತಾಡುತ್ತಿದ್ದಂತೆ ಒಮ್ಮೆಲೆ ಏನೋ ಜ್ಞಾಪಿಸಿಕೊಂಡವನಂತೆ ಎದ್ದುಹೋಗಿ ಬರೆದಿಟ್ಟು ಬರುತ್ತಿದ್ದ. ಆಗೆಲ್ಲಾ ನಾನು ಸಿಡಿಮಿಡಿಗೊಂಡರೆ “ಶ್! ಬರಹ ಸೆಕ್ಸ್ ಇದ್ದಂತೆ. ಸೆಕ್ಸ್ ನ್ನು ಹೇಗೆ ಮೂಡು ಬಂದಾಗ ತೆಗೆದುಕೊಳ್ಳುತ್ತೇವೆಯೋ ಹಾಗೆ ಮೂಡು ಬಂದಾಗ ಬರೆಯುವದನ್ನು ಬರೆದುಬಿಡಬೇಕು. ಹಾಗೆಲ್ಲಾ ಅದನ್ನು ತಡೆಯಬಾರದು” ಎನ್ನುತ್ತಿದ್ದ. “ಅದಕ್ಕೆ ಅಲ್ವಾ ಮಾರಾಯ? ನಿನಗೆ ಮೂಡು ಬಂದಿತೆಂದು ತಡೆಯದೆ ನನ್ನನ್ನು ಮದುವೆಗೆ ಮೊದಲೇ ಬಸಿರು ಮಾಡಿದ್ದು” ಎಂದು ಛೇಡಿಸುತ್ತಾ ಅವನ ತಲೆಯ ಮೇಲೊಂದು ಮೊಟಕಿದ್ದೆ. ಅವನು ನಗುತ್ತಾ “ಹೇ...ಯೂ ನಾಟಿ” ಎಂದು ನನ್ನ ಕೆನ್ನೆ ಹಿಂಡಿದ್ದ. ಬರೆಯುವಾಗ ಒಮ್ಮೊಮ್ಮೆ ಅತಿ ಗಂಭೀರವಾಗಿ ಯೋಚಿಸುತ್ತಾ ಬರೆಯುತ್ತಿದ್ದ. ಒಮ್ಮೊಮ್ಮೆ ಏನನ್ನೋ ಗುನುಗುನಿಸುತ್ತಾ ಬರೆಯುತ್ತಿದ್ದ. ಒಮ್ಮೊಮ್ಮೆ ಬಿಟ್ಟ ಕಣ್ಣನ್ನು ಹಾಗೆ ಬಿಟ್ಟು ಎಲ್ಲೋ ನೋಡುತ್ತಾ ಕುಳಿತುಬಿಡುತ್ತಿದ್ದ. ನಾನು “ಅಯ್ಯೋ, ದೇವರೆ! ಏನಾಯಿತು ಇವನಿಗೆ?” ಎಂದು ಹತ್ತಿರ ಹೋಗಿ ಅವನ ಭುಜ ಅಲ್ಲಾಡಿಸಿದರೆ “ಶ್! ಸುಮ್ಮನಿರು. ನಾನು ನನ್ನ ಪಾತ್ರದೊಂದಿಗೆ ಸಂವಾದಕ್ಕಿಳಿದಿದ್ದೇನೆ. ಅದರ ಆಳಕ್ಕೆ ಇಳಿದು ನೋಡುತ್ತಿದ್ದೇನೆ. ಇನ್ನೇನು ಹೊಳೆದುಬಿಡುತ್ತೆ.......ಬರೆದುಬಿಡುತ್ತೇನೆ......ಸುಮ್ಮನಿರು” ಎಂದು ಬರೆದಾದ ಮೇಲೆ “ನಾನೊಬ್ಬನೇ ಅಲ್ಲ. ಬರಹಗಾರರೆಲ್ಲಾ ಹೀಗೆ ಬರೆಯೋದು.......” ಎಂದು ತನ್ನನ್ನು ಸಮರ್ಥಿಸಿಕೊಳ್ಳಲು ನೋಡುತ್ತಿದ್ದ. ನಾನದಕ್ಕೆ “ಈ ಬರಹಗಾರರು ತಮ್ಮ ಪಾತ್ರಗಳೊಂದಿಗೆ ಸಂವಾದಕ್ಕಿಳಿಯೋ ಬದಲು, ಅವುಗಳಲ್ಲಿ ಇಣುಕಿ ನೋಡೋ ಬದಲು, ಒಮ್ಮೆ ತಮ್ಮೊಂದಿಗೆ ತಾವು ಸಂವಾದಕ್ಕಿಳಿಯಬಾರದೇಕೆ? ತಮ್ಮೊಳಗೆ ತಾವು ಇಣುಕಿ ನೋಡಿಕೊಳ್ಳಬಾರದೇಕೆ?” ಎಂದು ಕೇಳಿದ್ದೆ. ಅದಕ್ಕವನು ಏನೂ ಉತ್ತರಿಸಲಿಲ್ಲ!



    ಮೊದಲೇ ಹೇಳಿದಂಗೆ ನಾನ್ಯಾವತ್ತೂ ಏನನ್ನೂ ಓದಿದವಳಲ್ಲ ಬೈಬಲ್ ವೊಂದನ್ನು ಬಿಟ್ಟು. ಇನ್ನು ಇವನು ಬರೆದ ನಾಟಕಗಳನ್ನು ಹೇಗೆ ಓದಲಿ? ಒಮ್ಮೊಮ್ಮೆ ಅವನೇ “ಓದೆಂದು” ತಾನು ಬರೆದದ್ದನ್ನು ನನ್ನ ಮುಂದಿಡುತ್ತಿದ್ದ. ಇಲ್ಲವೇ ಬಲವಂತವಾಗಿ ಅವನೇ ಓದಿ ಹೇಳುತ್ತಿದ್ದ. ನಾನು “ಸಾಕು ಮಾರಾಯ, ತಲೆನೋವು” ಅಂತಿದ್ದೆ. ಹಾಗೆ ನೋಡಿದರೆ ನನಗೇನೂ ತಲೆನೋವಿರಲಿಲ್ಲ. ಆದರೆ ಇದ್ಯಾವುದು ನನ್ನ ಕಿವಿಗೆ ಬೇಡವಾಗಿರುತ್ತಿತ್ತು ಅಷ್ಟೆ. ಒಂದೊಂದು ಸಾರಿ ಅನಿಸೋದು; ನಾನು ಶೇಕ್ಷಪೀಯರನಿಗೆ ಸರಿಯಾದ ಜೋಡಿ ಅಲ್ವೇನೋ, ಸಮಾನ ಅಭಿರುಚಿಯ ಹೆಂಡತಿ ಆಗಲಿಲ್ವೇನೋ ಅಂತ. ಪಾಪ, ಶೇಕ್ಷಪೀಯರ್! I pity on him!



    ನನಗಿನ್ನೂ ಚನ್ನಾಗಿ ನೆನಪಿದೆ. ಆವತ್ತು ರಾತ್ರಿ ಊಟವಾದ ಮೇಲೆ ನಾನು ಅಡಿಗೆ ಮನೆಯಲ್ಲಿ ಸಾಮಾನುಗಳನ್ನೆಲ್ಲ ಎತ್ತಿಡುತ್ತಿದ್ದೆ. ಅವ ಪಡಸಾಲೆಯಲ್ಲಿ ತಾನು ಬರೆದ ಪ್ರಸಿದ್ಧ ಸಾನೆಟ್ ಅದೇ....“ಬೇಸಿಗೆಯ ಹಗಲಿಗೆ ಹೋಲಿಸಲೆ ನಿನ್ನ? ಛೇ, ಅದು ಸಲ್ಲ. ಅದಕ್ಕಿಂತ ಸುಂದರ ನೀನು!” ಎಂದು ಗುನುಗುನಿಸುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದ. ನನಗೆ ಥಟ್ಟನೆ ಇದನ್ನೆಲ್ಲೋ ಕೇಳಿದಂತಿದೆಯಲ್ಲ ಅಂತಾ ಅನಿಸಿತು. ಹಾಂ, ನೆನಪಾಯಿತು ಆವತ್ತು ಲಂಡನ್ ಸೇತುವೆಯ ಮೇಲೆ ಇದನ್ನೆ ತಾನೆ ಅವ ನನಗೆ ಹೇಳಿದ್ದು? ಅಂದರೆ....ಅಂದರೆ ಇದು ನನ್ನ ಕುರಿತು ಬರೆದಿದ್ದು. ಪರ್ವಾಗಿಲ್ವೆ! ನನ್ನ ಗಂಡ ಮಿಸ್ಟರ್ ಸ್ಮೈಲ್ ನನ್ನ ಮೇಲೂ ಒಂದು ಸಾನೆಟ್ ಬರೆದಿದ್ದಾನೆ. ಶಹಭಾಷ್! ನೋಡಿಯೇ ಬಿಡೋಣ ಹೇಗಿದೆ? ಅಂತಾ ಕುತೂಹಲಕ್ಕೆಂದು ಸುಮ್ಮನೆ ಆಲಿಸುತ್ತಾ ಹೋದೆ. ಅದರಲ್ಲಿ ಅವ ಏನೇನೋ ಹೇಳಿದ್ದ. ಆದರೆ ನಾನು ಅರ್ಥ ಮಾಡಿಕೊಂಡಿದ್ದು ಇಷ್ಟು...... ತಪ್ಪಾಗಿದ್ದರೆ ಕ್ಷಮಿಸಿ........ಏಕೆಂದರೆ ನನಗೆ ಕಾವ್ಯದ ಬಗ್ಗೆ ಏನೂ ತಿಳಿಯದು. ಹೂಂ...... ಅವ ಹೇಳಿದ್ದ: ಬೇಸಿಗೆಯ ಹಗಲಿನ ಸೌಂದರ್ಯ ಕೂಡ ಕ್ಷಣಿಕವಾದುದು..... ಏಕೆಂದರೆ ಬೇಸಿಗೆಯ ಸೂರ್ಯ ಕಣ್ಣುಮುಚ್ಚಾಲೆಯಾಡುತ್ತ ಒಮ್ಮೊಮ್ಮೆ ಹೆಚ್ಚು ಬಿಸಿಯಾಗುತ್ತಾನೆ...... ಒಮ್ಮೊಮ್ಮೆ ತಣ್ಣಗಾಗುತ್ತಾನೆ....... ಒಮ್ಮೊಮ್ಮೆ ತನ್ನ ಹೊಂಬಣ್ಣ ಕಳೆದುಕೊಂಡು ಕಳೆಗುಂದುತ್ತಾನೆ..... ಅವನಲ್ಲಿ ಏರುಪೇರು ಇರುತ್ತೆ. ಆದರೆ ನಿನ್ನ ಸೌದರ್ಯ ಹಾಗಲ್ಲ....... ಅದಕ್ಕಿಂತ ಹೆಚ್ಚಿನದು...........ಸದಾ ಒಂದೇ ತೆರನಾಗಿರುವಂಥದ್ದು.........ಶಾಶ್ವತವಾಗಿರುವಂಥದ್ದು......... ನಶ್ವರದ ವಸ್ತುಗಳಿಗೆ ನಿನ್ನ ಹೋಲಿಸುವದು ಬೇಡ.......ಹಾಗೆಂದೇ ನಿನ್ನನ್ನು ಹಾಗೂ ನಿನ್ನ ಸೌಂದರ್ಯವನ್ನು ಈ ಕವನದಲ್ಲಿ ಹಿಡಿದಿಡುತ್ತಿದ್ದೇನೆ......ಅದು ನಿನ್ನ ಸೌಂದರ್ಯದಂತೆ ಈ ಕವನವೂ ಕೂಡ ಈ ಜಗತ್ತು ಇರುವವರೆಗೂ ಶಾಶ್ವತವಾಗಿರುತ್ತದೆ......ಅಬ್ಬಾ ಏನು ವರ್ಣನೆ? ಏನು ಆ ಪದಗಳ ಜೋಡಣೆ? ಅಬ್ಬಬ್ಬಾ ಹೇಳಲಿಕ್ಕಾಗದು. ಯಾವತ್ತೂ ಯಾವ ಕವನಗಳನ್ನೂ ಓದದ ನನ್ನಂಥವಳಿಗೂ ಕೂಡ ಆ ಸಾನೆಟ್ ಇಷ್ಟವಾಯಿತೆನ್ನಿ. ಅದೇನೋ ಹೇಳ್ತಾರಲ್ಲ......ಕಚಗುಳಿ.....ಕಚಗುಳಿ......ಹಾಂ, ಅದೇ.....ಕಚಗುಳಿ ಇಟ್ಟ ಅನುಭವವಾಯಿತು ನನಗೆ ಅದನ್ನು ಓದಿದ ಮೇಲೆ. ಒಂದು ಕ್ಷಣ ನನ್ನ ಗಂಡನ ಬಗ್ಗೆ ಅಭಿಮಾನ ಮೂಡಿತು. ಆದರೆ ಮರುಕ್ಷಣ ಅನುಮಾನ ಕಾಡಿತು. ಇದು.....ಇದು ನಿಜಕ್ಕೂ ನನ್ನ ಕುರಿತು ಬರೆದಿದ್ದೆ? ಇಲ್ಲ.......ಇಲ್ಲ ಇರಲಿಕ್ಕಿಲ್ಲ......ಏಕೆಂದರೆ ನಾನು ಅವ ಹೇಳುವಷ್ಟು ಸುಂದರವಾಗಿಲ್ಲ.....ಮೇಲಾಗಿ ನಾನು ವಯಸ್ಸಿನಲ್ಲಿ ಅವನಿಗಿಂತ ಎಂಟು ವರ್ಷ ದೊಡ್ಡವಳು...... ಅವನ ಕಣ್ಣಿಗೆ ಹೇಗೆ ತಾನೆ ರೂಪವಂತೆಯಾಗಿ ಕಂಡೇನು? ಹಾಗಾದರೆ ಇನ್ಯಾರು? ಅಂದರೆ..... ಅಂದರೆ ಅವನ ಜೀವನದಲ್ಲಿ ಮತ್ತೊಂದು ಹೆಣ್ಣಿನ ಪ್ರವೇಶವಾಗಿದಿಯೆ? ಅವನದನ್ನು ನನಗೆ ಗೊತ್ತಿಲ್ಲದಂತೆ ನಿಭಾಯಿಸುತ್ತಿದ್ದಾನೆಯೇ? ಏನಾದರಾಗಲಿ ಒಮ್ಮೆ ಕೇಳಿಯೇ ಬಿಡೋಣ ಎಂದುಕೊಂಡು ಕೆಲಸ ಮುಗಿಸಿ ಅವನಿರುವಲ್ಲಿಗೆ ಬಂದೆ. ಕವಿ ಇನ್ನೂ ಅದೇ ಸಾನೆಟ್ ನ್ನು ಗುನುಗುನಿಸುತ್ತಲೇ ಇದ್ದ. ಅರೆ ಕ್ಷಣ ತಡೆದು “ಹೇಳು.... ಆವತ್ತು ಲಂಡನ್ ಸೇತುವೆಯ ಮೇಲೆ ‘ಬೇಸಿಗೆಯ ಹಗಲಿಗೆ ಹೋಲಿಸಲೆ ನಿನ್ನ?’ ಎಂದು ನನ್ನ ಕೇಳಿದೆಯೆಲ್ಲ ಅದೆ ತಾನೆ ಈ ಸಾನೆಟ್? ಆದರೆ ಇದರಲ್ಲಿರುವ ಆ ‘ಬೇಸಿಗೆಯ ಹಗಲು’ ನಾನಲ್ಲ ಅಂತಾ ನನಗೆ ಚನ್ನಾಗಿ ಗೊತ್ತು. ಅದು ಇನ್ಯಾವಳನ್ನೋ ಕುರಿತು ಬರೆದಿದ್ದು. ಹೇಳು ಯಾರವಳು?” ಎಂದು ನೇರವಾಗಿ ಕೇಳಿದೆ. ಕವಿ ಕೆಮ್ಮತೊಡಗಿದ. ಗಾಳಿಯಲ್ಲಿ ತನ್ನೆರೆಡೂ ಕೈ ಬೀಸುತ್ತಾ ಏನೋ ಹೇಳಲು ಹೊರಟ. ಉಸಿರೇ ಹೊರಡುತ್ತಿಲ್ಲ. ಮುಖವೆಲ್ಲ ಕೆಂಪಾಯಿತು. ಕೊನೆಗೂ ಸಾವರಿಸಿಕೊಂಡು ನಾಚುತ್ತಾ ಉಸುರಿದ “ಅದು.......ಅದು.....‘ಅವಳ’ಲ್ಲ. ‘ಅವನು’ ”


    -ಉದಯ್ ಇಟಗಿ

    ಆಧಾರ: ರಾಬರ್ಟ್ ನೈ ಬರೆದ “Mrs. Shakespeare” ಎಂಬ ಇಂಗ್ಲೀಷ್ ಕಾದಂಬರಿ ಹಾಗೂ ಇದರ ಮೇಲೆ ನಟರಾಜ್ ಹುಳಿಯಾರವರು ಬರೆದ ಒಂದು ಲೇಖನ ಮತ್ತು ಶೇಕ್ಷಪೀಯರನ ಜೀವನದಲ್ಲಿ ಹೀಗೆ ನಡೆದಿರಬಹುದು ಎಂದು ಊಹಿಸಲು ಸಾಧ್ಯವಾದ ಅಂತರ್ಜಾಲದಲ್ಲಿ ಲಭ್ಯವಿರುವ ಅವನ ಒಂದಿಷ್ಟು ಜೀವನ ಘಟನೆಗಳು.

    ಚಿತ್ರ ಕೃಪೆ: ಅಂತರ್ಜಾಲ

    ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಭಾಗ-2)

  • ಗುರುವಾರ, ಅಕ್ಟೋಬರ್ 21, 2010
  • ಬಿಸಿಲ ಹನಿ

  • ಆವತ್ತು ಮಿಸ್ಟರ್ ಶೇಕ್ಷಪೀಯರ್ ಲಂಡನ್ನಿಗೆ ಹೊರಟ ದಿನ. ಅವ ಕೆಲಸ ಹುಡುಕಿ ಹೊರಟಿದ್ದ. ಇದ್ದಬಿದ್ದ ದನದ ವ್ಯಾಪಾರದಲ್ಲಿ ಇವನಪ್ಪ ಕೈ ಸುಟ್ಟುಕೊಂಡು ಬರಿಗೈ ದಾಸನಾಗಿದ್ದ. ಎರಡು ಹೊತ್ತಿನ ಊಟಕ್ಕೂ ಕಷ್ಟವಾಗಿತ್ತು. ಸಹಜವಾಗಿ ಮನೆಯ ಜವಾಬ್ದಾರಿ ನನ್ನ ಗಂಡನ ಮೇಲೂ ಬಿತ್ತು. ಸರಿ, ಲಂಡನ್ನಿಗೆ ಹೊರಟು ನಿಂತ. ಹೊರಡುವಾಗ ಕಣ್ಣ ತುಂಬ ಭರವಸೆ, ಕನಸು. ಹೋಗುವಾಗ ಹಲ್ಲು ಕಚ್ಚಿ ಹೇಳಿದ: “ಬರೆಯುತ್ತೇನೆ.” ನಾನು ಪತ್ರ ಬರೆಯುತ್ತಾನೇನೋ ಅಂದುಕೊಂಡೆ! ಆದರೆ ಅವ ಬರೆದಿದ್ದು ಮೂವತ್ತೆಂಟು ನಾಟಕಗಳನ್ನು, ನೂರಾ ಐವತ್ನಾಲ್ಕು ಸುನಿತಗಳನ್ನು ಹಾಗೂ ಎರಡು ಉದ್ದದ ಅಶ್ಲೀಲ ಪದ್ಯಗಳನ್ನು.

    ಅವನು ಹೋಗಿ ಮೂರ್ನಾಲ್ಕು ತಿಂಗಳಾದ ಮೇಲೆ ಲಂಡನ್ನಿನಲ್ಲಿ ಇವನೇನು ಕಡಿಯುತ್ತಾನೆ ನೋಡಿಕೊಂಡು ಬನ್ನಿ ಅಂತಾ ತಮ್ಮಂದಿರನ್ನು ಅಟ್ಟಿದೆ. ಅವರು ಹೋಗಿ ಬಂದು “ಕೆಲಸವಂತೂ ಇದೆ” ಅಂದರು. ಸದಾ ರಂಗಶಾಲೆಯ ಬಾಗಿಲಲ್ಲಿ ನಿಂತಿರುತ್ತಾನೆ; ಕುದರೆಗಳನ್ನು ಕಾಯುತ್ತಾನೆ ಅಂದರು. ಅದರಲ್ಲೇನು ದುಡ್ಡು ಸಿಗುತ್ತೆ ಅಂದುಕೊಂಡೆ. ಇಲ್ಲ, ದಿನೆ ದಿನೆ ಶೇಕ್ಷಪೀಯರನ ವ್ಯಾಪಾರ ಕುದುರುತ್ತಾ ಹೋಯಿತು. ಮುಂದೆ ಸ್ವಲ್ಪೇ ದಿನದಲ್ಲಿ ಅವನ ಕೈ ಕೆಳಗೆ ಹತ್ತಾರು ಜನ ಹುಡುಗರು ಕೆಲಸ ಮಾಡಲು ಶುರು ಮಾಡಿದರು!

    ಮತ್ತೆ ಊರಿಗೆ ಬರುವ ಹೊತ್ತಿಗೆ ಮಿಸ್ಟರ್ ಶೇಕ್ಷಪೀಯರ್ ಗೆ ರಂಗಶಾಲೆಯ ಒಳಕ್ಕೆ ಬಡ್ತಿ ಸಿಕ್ಕಿತ್ತು. “ನಾನೀಗ prompter’s assistant” ಅಂದ. ಅಥವಾ assistant prompter ಅಂದನೋ? ಸಧ್ಯ, ಕುದರೆ ಕಾಯುವ ಕೆಲಸಕ್ಕಿಂತ ಇದು ವಾಸಿ. “ಏನು ಕೆಲಸ ಅದು?” ಎಂದು ಕೇಳಿದೆ. “ಅದೇ.... ಸ್ಟೇಜಿನ ಹಿಂದೆ ನಿಂತು ನಟರಿಗೆ ಅವರ ಮಾತುಗಳನ್ನು ಹೇಳಿಕೊಡುವದು” ಅಂದ!

    ಇದಾಗಿ ಒಂದು ವರ್ಷಕ್ಕೆ ಅವನಿಂದ ಪತ್ರವೊಂದು ಬಂತು. ಅದರಲ್ಲಿ ಬರೀತಿದೇನಿ ಅಂದ. ಕಾಮಿಡಿ ಅಂದ. ಟ್ರ್ಯಾಜಿಡಿ ಅಂದ. ಹಿಸ್ಟರಿ ಅಂದ. ಟ್ರ್ಯಾಜಿಕ್-ಕಾಮಿಡಿ ಅಂದ. ಕಾಮಿಕ್-ಟ್ರ್ಯಾಜಿಡಿ ಅಂದ. ಇನ್ನೂ ಏನೇನೋ ಅಂದ. ಏನಾದ್ರು ಬರ್ಕೋಂಡು ಸಾಯ್ಲಿ! ಇದರಲ್ಲಾದರು ದುಡ್ಡುಗಿಡ್ಡು ಬರುತ್ತಾ? ಅಂದುಕೊಂಡೆ. ಆದರೆ ಪತ್ರದಲ್ಲಿ ಅದರ ಬಗ್ಗೆ ಪ್ರಸ್ತಾಪವೇ ಇರಲಿಲ್ಲ! ಕೊನೆಯಲ್ಲಿ ಲಂಡನ್ನಿಗೆ ಬಾ ಎಂದು ಬರೆದಿದ್ದ.

    ಒಂದು ಬೇಸಿಗೆಯ ದಿನ ನಾನು ಲಂಡನ್ನಿಗೆ ಹೋದೆ. ನನಗೇಕೋ ಮೊದಲ ನೋಟದಲ್ಲಿಯೇ ಲಂಡನ್ ಬೇಸರ ತರಿಸಿತು. ಅದರ ಥಳಕು ಬಳುಕಿನೊಳಗೆ ನೈಜತೆ ಕಳೆದುಹೋಗಿದೆ ಎನಿಸಿತು. ಸತ್ತ ನಗರದಂತೆ ಭಾಸವಾಯಿತು. ಅಲ್ಲಿ ಬೀಳುತ್ತಿದ್ದ ಹಿಮ ಹಿಮವಾಗಿರಲಿಲ್ಲ. ಬೀಸುತ್ತಿದ್ದ ತಂಗಾಳಿ ತಂಗಾಳಿಯಾಗಿರಲಿಲ್ಲ. ಅಲ್ಲಿ ಮನುಷ್ಯರಿಗಿಂತ ಅವರ ನೆರಳುಗಳೇ ಹೆಚ್ಚು ಸುಳಿದಾಡುತ್ತಿದ್ದವು. ಅವರಿಗೆ ತಲೆಯಿತ್ತೆ ಹೊರತು ಹೃದಯವಿರಲಿಲ್ಲ. ಒಟ್ಟಿನಲ್ಲಿ ಲಂಡನ್, ಲಂಡನ್ ಆಗಿ ಉಳಿದಿರಲಿಲ್ಲ. ಅದೊಂದು ಜೀವಂತ ಸ್ಮಶಾನವಾಗಿತ್ತು. ಅಲ್ಲಿ ಸತ್ತವರು ಮಾತ್ರ ಬದುಕುತ್ತಿದ್ದರು. It was all unreality London! ನನಗೆ ಲಂಡನ್ನಿಗಿಂತ ನಮ್ಮೂರೇ ಚೆಂದ ಎನಿಸಿತು!

    ಹೀಗೆ.. ಒಂದು ಸಂಜೆ ಮಿ. ಶೆಕ್ಷಪೀಯರ್ ನನ್ನ ಜಗತ್ಪ್ರಸಿದ್ಧ ಲಂಡನ್ ಸೇತುವೆಗೆ ಕರೆದೊಯ್ದ. ಕೆಳಗೆ ಥೇಮ್ಸ್ ನದಿ ಪ್ರಶಾಂತವಾಗಿ ಹರಿಯುತ್ತಿತ್ತು. ಆ ಸೇತುವೆಯ ಮೇಲೆ ನಿಂತು “ಬೇಸಿಗೆಯ ಹಗಲಿಗೆ ಹೋಲಿಸಲೆ ನಿನ್ನ? (Shall I compare thee to a summer’s day?)” ಎಂದ. “ನೋ, ಥ್ಯಾಂಕ್ಸ್” ಎಂದೆ. ಆಗ ಅವನ ಮುಖ ನೋಡಬೇಕಿತ್ತು. ಒಮ್ಮೆ ಸುಮ್ಮನೆ ಮುಗುಳ್ನಕ್ಕ. ಮುಗುಳ್ನಗೆಯ ಸರದಾರ; ಮಿಸ್ಟರ್ ಶೇಕ್ಷಪೀಯರ್, ನನ್ನ ಗಂಡ. ನಾನವನನ್ನು “ಸರ್ ಸ್ಮೈಲ್” ಎಂದೇ ಕರೆಯುತ್ತಿದ್ದೆ. ಅವನು ಇನ್ಯಾವುದರಲ್ಲೂ ಹೇಳಿಕೊಳ್ಳುವಂತಿರಲಿಲ್ಲ, ಮುಗುಳ್ನಗುವುದೊಂದನ್ನು ಬಿಟ್ಟು. ಅವನು ಯಾವತ್ತೂ ದೊಡ್ಡದಾಗಿ ನಗುತ್ತಿರಲಿಲ್ಲ. ಬಾಯಿಬಿಟ್ಟರೆ ಎರಡು ಮುರುಕಲು ಕರಿಹಲ್ಲು ಯಾರಿಗಾದರೂ ಕಂಡಾವೆಂಬ ಭಯ! ಆದರೆ ಅವನ ತರಾನೇ ಯಾರಿಗಾದರೂ ಕರಿಹಲ್ಲಗಳಿದ್ದವರೊಂದಿಗೆ ನಗಲು ಯಾವ ಭಯವೂ ಇರಲಿಲ್ಲ. “ಈ ಮುರುಕಲು ಕರಿಹಲ್ಲುಗಳು ನಿನಗ್ಹೇಗೆ ಬಂದವು?” ಎಂದು ಒಮ್ಮೆ ಕೇಳಿದ್ದೆ. “ನಾನು ಚಿಕ್ಕವನಿದ್ದಾಗ ಸಕ್ಕರೆ ಮಿಠಾಯಿ ತುಂಬಾ ತಿಂತಿದ್ದೆ. ಅದಕ್ಕೆ ಹೀಗಾದವು” ಅಂದ. ಪಾಪ, ಸಿಹಿತಿನಿಸುಗಳೆಂದರೆ ಪಂಚಪ್ರಾಣ ಅವನಿಗೆ! ಬಾಯಿ ಚಪಲ, ಯಾವಾಗಲೂ ಬರಿ ಬಾದಾಮಿ ಕಜ್ಜಾಯ, ಶುಂಠಿ ಬ್ರೆಡ್ಡು, ಇಲ್ಲವೆ ಬಿಸ್ಕಿಟ್ ಗಳನ್ನೇ ತಿಂತಿದ್ದ. ಆದರೆ ಸಕ್ಕರೆ ಮೊದಲಿನಿಂದಲೂ ಅವನ ದೇಹಕ್ಕೆ ಒಗ್ಗಿಬರಲಿಲ್ಲ. ಏಕೆಂದರೆ ಅವನ ರಕ್ತದಲ್ಲಿದ್ದದ್ದು ಬರಿ ಉಪ್ಪು! ಉಪ್ಪು ಮತ್ತು ಸಕ್ಕರೆ ಹೇಗೆ ಒಂದಾದಾವು? Am I right? Yes, I am. Let me die if I lie.

    ಈ ಮೊದಲೇ ಹೇಳಿದಂಗೆ ಶೇಕ್ಷಪೀಯರ್ ಯಾವತ್ತೂ ಸೀದಾ ಸಾದಾ ಮಾತಾಡುತ್ತಿರಲಿಲ್ಲ. ಏನಾದರು ಹೇಳಬೇಕೆಂದರೆ ಸುತ್ತಿ ಬಳಸಿ ಹೇಳುತ್ತಿದ್ದ. ಅದೇನೋ ಮೆಟಫರ್-ಗಿಟಫರ್ ಅಂತಾರಲ್ಲ ಅದರಲ್ಲಿ ಹೇಳುತ್ತಿದ್ದ. ಮನೆಯಲ್ಲೂ ಅಷ್ಟೆ ಅವನು ಮಾತಾಡುತ್ತಿದ್ದೆಲ್ಲ ರೂಪಕಗಳಲ್ಲೇ! ಹುಚ್ಚುಕವಿ, ಅವನು ಬದುಕಿದ್ದೇ ರೂಪಕಗಳ ಜೊತೆ. ನನಗೋ ಒಂದೊಂದು ಸಾರಿ ಅವನೇನು ಹೇಳುತ್ತಿದ್ದಾನೆಂದು ಅರ್ಥವಾಗದೆ ರೋಸಿಹೋಗುತ್ತಿತ್ತು. ಅದೇನದು ಬಿಡಿಸಿ ಹೇಳಬಾರದೆ? ಎಂದು ರೇಗಿದರೆ ಅದು “ಮೆಟಫರ್; ಹಾಗೆಲ್ಲಾ ಬಿಡಿಸಿ ಹೇಳಬಾರದು” ಎನ್ನುತ್ತಲೇ “ಮೆಟಫರ್ ಅಂದ್ರೆ ಏನು ಗೊತ್ತಾ? ಒಂದು ವಸ್ತುವಿನ ಬಗ್ಗೆ ಹೇಳೋದು-ಇದು ಅದಲ್ಲ, ಬೇರೇನೋ ಅನ್ನೋದು! ಬಿಡಿಸಿ ಹೇಳಬೇಕೆಂದರೆ ಅವೆಲ್ಲಾ ದೊಡ್ಡ ದೊಡ್ಡ ಹೊಗಳಿಕೆಯ ಮಾತುಗಳು, ಇಲ್ಲಾ ಬೈಗುಳಗಳು ಅಷ್ಟೆ!” ಎಂದು ಎಲ್ಲವನ್ನೂ ಬಿಡಿಸಿ ಹೇಳಿದ್ದ.

    ಈ ಮೆಟಫರುಗಳ ಜೊತೆಗಿದ್ದ ತಿಕ್ಕಲು ಶೇಕ್ಷಪೀಯರ್ ಜೊತೆ ಬದುಕಿದ್ದ ನನ್ನ ಪಾಡು ಯಾರಿಗೂ ಬೇಡ. ಅವನ ಅಪ್ಪ ಜಾನ್ ಶೇಕ್ಷಪೀಯರ್ ಇನ್ನೂ ತಿಕ್ಕಲು. ಅವನು ಬದುಕಿದ್ದೇ ವೈನ್ ಬಾಟಲಿನಲ್ಲಿ. ಒಂದು ಕ್ರಿಸ್ಮಸ್ ದಿನ ಕುಡಿದು ಕಣ್ಣಿರಿಡುತ್ತಾ ನಮ್ಮನ್ನೆಲ್ಲಾ ಕೇಳಿದ: “ಈ ಕ್ರಿಸ್ಮಸ್ ಗೆ ನನಗೊಂದು ಬಿಳಿಮೋಡದ ತುಂಡು ತಂದು ಕೊಡಿ.” ಇಂಥ ಕ್ರಿಸ್ಮಸ್ ಉಡುಗೊರೆಯನ್ನು ಎಲ್ಲಿಂದ ತರುವದು ಎಂದು ನಾನು ಪಿಳಿಪಿಳಿ ಕಣ್ಣುಬಿಟ್ಟೆ. ಆದರೆ ನನ್ನ ಮಾವನ ಹೆಂಡತಿ ಮೇರಿ ಥಟ್ಟನೆದ್ದು ಹೂದೋಟಕ್ಕೆ ಹೋದಳು. ಅದೇ ಆಗ ಬಿದ್ದ ಮಂಜನ್ನು ಬೊಗಸೆ ತುಂಬ ತಂದಳು. ಮುದುಕ ಜಾನ್ ಶೇಕ್ಷಪೀಯರ್ ಅಳು ನಿಲ್ಲಿಸಿದ. ಆ ‘ಮೋಡದ ತುಂಡಿ’ಗೆ ಮುತ್ತಿಕ್ಕಿ ಮಂಜು ಕರಗುವ ಮುನ್ನ ಮಗುವಿನ ಥರ ನಿದ್ದೆ ಹೋದ. ಇಂಥ ಹುಚ್ಚನ ಮಗ ಈ ಶೇಕ್ಷಪೀಯರ್.

    ಚಿತ್ರ ಕೃಪೆ: ಅಂತರ್ಜಾಲ

    ಆಧಾರ: ರಾಬರ್ಟ್ ನೈ ಬರೆದ “Mrs. Shakespeare” ಎಂಬ ಇಂಗ್ಲೀಷ್ ಕಾದಂಬರಿ ಹಾಗೂ ಇದರ ಮೇಲೆ ನಟರಾಜ್ ಹುಳಿಯಾರವರು ಬರೆದ ಒಂದು ಲೇಖನ ಮತ್ತು ಶೇಕ್ಷಪೀಯರನ ಜೀವನದಲ್ಲಿ ಹೀಗೆ ನಡೆದಿರಬಹುದು ಎಂದು ಊಹಿಸಲು ಸಾಧ್ಯವಾದ ಅಂತರ್ಜಾಲದಲ್ಲಿ ಲಭ್ಯವಿರುವ ಅವನ ಒಂದಿಷ್ಟು ಜೀವನ ಘಟನೆಗಳು.


    -ಉದಯ್ ಇಟಗಿ

    ದಿ ಲೇಟ್ ಮಿಸ್ಟರ್ ಶೇಕ್ಷಪೀಯರ್ (ಭಾಗ-1)

  • ಮಂಗಳವಾರ, ಅಕ್ಟೋಬರ್ 19, 2010
  • ಬಿಸಿಲ ಹನಿ
  • ನಾನು ಮಿಸೆಸ್ ಶೇಕ್ಷಪೀಯರ್! ಅದೇ..... ಈ ಜಗತ್ತು ಕಂಡ ಅತ್ಯದ್ಭುತ ನಾಟಕಕಾರ ಹಾಗೂ ಶ್ರೇಷ್ಠ ಸುನಿತ ಕವಿ ದಿ ಲೇಟ್ ಮಿಸ್ಟರ್ ವಿಲಿಯಂ ಶೇಕ್ಷಪೀಯರನ ಹೆಂಡತಿ ಮಿಸೆಸ್ ಯ್ಯಾನಿ ಹ್ಯಾಥ್ವೇ ಶೇಕ್ಷಪೀಯರ್! ನಾನಿಲ್ಲಿ ಹೇಳ ಹೊರಟಿರುವದು ನನ್ನ ಗಂಡನ ಬಗ್ಗೆ...... ಅಂದರೆ ಶೆಕ್ಷಪೀಯರನ ಬಗ್ಗೆ..... ಜೊತೆಗೆ ಒಂದಿಷ್ಟು ನನ್ನ ಬಗ್ಗೆ.....ನಮ್ಮ ಮದುವೆ ಬಗ್ಗೆ...ಸಂಸಾರದ ಬಗ್ಗೆ.....ಹಾಗೂ ನಾವಿಬ್ಬರು ಜೊತೆಗಿದ್ದಾಗ ಮತ್ತು ಜೊತೆಗಿಲ್ಲದಾಗಿನ ಕಳೆದ ವರ್ಷಗಳ ಬಗ್ಗೆ.....


    My husband.
    Sweet Mr. Shakespeare,
    The dirty devil.


    ಶೇಕ್ಷಪೀಯರನನ್ನು ಬೇರೆಯವರು ನೋಡುವದಕ್ಕೂ ಒಬ್ಬ ಹೆಂಡತಿಯಾಗಿ ನಾನು ನೋಡುವದಕ್ಕೂ ತುಂಬಾ ವ್ಯತ್ಯಾಸವಿದೆಯಲ್ಲವೆ? ಹಾಗೆಂದೇ ನಾ ಕಂಡಂತೆ ಶೇಕ್ಷಪೀಯರ್ ಹೇಗೆ ಎಂಬುದನ್ನು ನಿಮ್ಮ ಮುಂದೆ ಇಡುತ್ತಾ ಹೋಗುತ್ತೇನೆ. ಒಪ್ಪಿಸಿಕೊಳ್ಳಿ.......

    ನಾನು ಶೇಕ್ಷಪೀಯರನ ಊರಾದ ಸ್ಟ್ರ್ಯಾಟ್ ಫೋರ್ಡಿನಿಂದ ಕೇವಲ ಒಂದು ಮೈಲಿ ದೂರದಲ್ಲಿರುವ ಪಕ್ಕದ ಊರಿನವಳು.




    ಸ್ಯಾರ ಕೃಟ್ ಫೋರ್ಡಿ (Stratford) ನಲ್ಲಿರುವ ಶೇಕ್ಷಪೀಯರ್ ನ ಮನೆ

    ಅವನು ಮೊಲಗಳನ್ನು ಹಿಡಿಯಲೋ, ಬೇಟೆಯಾಡಲೋ, ಅಥವಾ ಹುಡುಗಿಯರನ್ನು ನೋಡಲೋ ದಿನಾಲೂ ನಮ್ಮೂರಿಗೆ ಬರುತ್ತಿದ್ದ. ಹಾಗೆ ಬಂದವನು ಒಂದು ದಿನ ನನ್ನ ನೋಡಿದ.... ನೋಡುತ್ತಲೇ ಹೋದ......ನಾನೇನೂ ಪ್ರತಿಕ್ರಿಯೆಸಲು ಹೋಗಲಿಲ್ಲ..... ಆಮೇಲೇನಾಯಿತೋ, ನೋಡಿ ಹಾಗೆ ಹೊರಟೇ ಹೋದ. ಮಾರನೆ ದಿನ ಮತ್ತೆ ಬಂದ.... ನನ್ನ ನೋಡಿ ಒಂದು ತುಂಟ ನಗೆ ಬೀರಿದ.....ಮೆಲ್ಲಗೆ ಹತ್ತಿರ ಬಂದ...... ಪರಿಚಯ ಮಾಡಿಕೊಂಡ.....ನಾಳೆ ಬರುತ್ತೇನೆ ಎಂದು ಹೇಳಿ ಹೋದ. ಹೇಳಿದಂತೆ ಮಾರನೆ ದಿವಸ ಮತ್ತೆ ಬಂದ. “ಬರುತ್ತೀಯಾ?” ಎಂದು ಕೇಳಿದ. ನಾನು “ಎಲ್ಲಿಗೆ?” ಎಂದೆ. “ಹೀಗೆ ಕಾಡಿಗೆ....” ಎಂದ. “ಅಯ್ಯಯ್ಯಪ್ಪ! ನಮ್ಮ ಅಪ್ಪ ಅಮ್ಮನಿಗೆ ಗೊತ್ತಾದ್ರೆ ಅಷ್ಟೆ. ಸುಮ್ಮನೆ ಬಿಡಲ್ಲ.” ಎಂದೆ. “ನಿಮ್ಮ ಅಪ್ಪ ಅಮ್ಮನಿಗೆ ಗೊತ್ತಾಗದಂತೆ ಕರೆದುಕೊಂಡು ಹೋಗುತ್ತೇನೆ. ಬರುತ್ತೀಯಾ?” ಅವನ ಧ್ವನಿಯಲ್ಲಿ ಕೀಟಲೆಯಿತ್ತು. ಆ ಕೀಟಲೆಗೆ ಕರಗಿದೆ. ಬೆನ್ನ ಹಿಂದೆ ಹೋದೆ. ಆವತ್ತು ಕಾಡಿನಲ್ಲಿ ಅತ್ತಿತ್ತ ಸುಮ್ಮನೆ ಅಲೆದೆವು. ಅವನು ನನಗೆ ಗೊತ್ತಿರದ ಎಷ್ಟೋ ಹಕ್ಕಿಗಳನ್ನು, ಗಿಡ, ಮರಗಳನ್ನು ಪರಿಚಯಿಸಿದ. ಮರುದಿವಸ ಮತ್ತೆ ಬಂದ...... ಬಂದಾಗ ಮುಸ್ಸಂಜೆಯಾಗಿತ್ತು. ಮತ್ತೆ ಅದೇ ಕಾಡಿಗೆ ಕರೆದುಕೊಂಡು ಹೋದ. ನನ್ನ ಒಂದು ಹುಲ್ಲು ಹಾಸಿನ ಮೇಲೆ ಕುಳಿಸಿದ..... ಹತ್ತಿರ ಬಂದ.....ಕೈ ಹಿಡಿದ......ಮೆಲ್ಲಗೆ ಮುಖಕ್ಕೆ ಮುತ್ತನಿತ್ತ.....ಉಸಿರು ಬಿಸಿಯಾಗಿತ್ತು......ಕಣ್ಣಲ್ಲಿ ಆಸೆಯಿತ್ತು.....ಹಾಗೆ ಮೆಲ್ಲಗೆ ನನ್ನ ಕೆಳಗೆ ಉರುಳಿಸಿದ......ಮೈ ಮೇಲೇರಿ ಬರತೊಡಗಿದ....ನಾನು ಸರಕ್ಕನೆ ಸರಿದುಕೊಂಡೆ......ಬೇಡ ಬೇಡವೆಂದು ಪ್ರತಿಭಟಿಸಿದೆ. ಆದರೆ ಅವ ಕೇಳಲಿಲ್ಲ.....ಅವನ ಹಿಡಿತ ಬಿಗಿಯಾಗಿತ್ತು.... ನಾನು ನಿನ್ನನ್ನೇ ಮದುವೆಯಾಗುತ್ತೇನೆ ಎಂದ....ಅವನನ್ನು ನಂಬಿದೆ....ಹಾಗೆ ಮುಂದಿನ ಹತ್ತು ನಿಮಿಷ ಅವನ ತುಟಿಗಳು ನನ್ನ ಮೈ ಮೇಲೆಲ್ಲಾ ಹರಿದಾಡಿದವು...... ನಾ ಅವನ ತೋಳುಗಳಲ್ಲಿ ಕರಗಿಹೋದೆ. ಸರಿ, ಮುಂದಿನ ತಿಂಗಳು ನಾನು ಮುಟ್ಟಾಗಲಿಲ್ಲ. ನಮ್ಮಿಬ್ಬರ ಮೊದಲ ಮಿಲನದಲ್ಲಿಯೇ ನಾನು ಗರ್ಭ ಧರಿಸಿದ್ದೆ. ವಿಷಯವನ್ನು ಅವನಿಗೆ ತಿಳಿಸಿದೆ. ಮದುವೆಗೆ ಏರ್ಪಾಡು ಮಾಡೆಂದೆ. ಮಹಾನ್ ಖಿಲಾಡಿ ಅವನು! ಮೊದಲು ಖುಶಿಪಟ್ಟ. ಕುಣಿದು ಕುಪ್ಪಳಿಸಿದ. ನಾಳೆ ಬರುತ್ತೇನೆ ಎಂದು ಹೇಳಿಹೋದ. ಆದರೆ ಆಸಾಮಿ ನಾಲ್ಕು ದಿವಸವಾದರೂ ಪತ್ತೆನೇ ಇಲ್ಲ. ಐದನೆಯ ದಿನ ಪ್ರತ್ಯಕ್ಷನಾದ. ನಾನು ‘ಮನೆಯಲ್ಲಿ ಕೇಳಿದಿಯಾ?’ ಎಂದು ಕೇಳಿದೆ. ಊಂ, ಊಹೂಂ ಎಂದೇನೂ ಬಡಬಡಿಸಿದ. ನಾನು ಹಟಬಿಡದೆ ಮತ್ತೆ ಕೇಳಿದೆ. ಮದುವೆ ಈಗಲೇ ಸಾಧ್ಯವಿಲ್ಲ ಎಂದ. ಏನೇನೋ ಸಬೂಬಗಳನ್ನು ಹೇಳಿದ. ತಪ್ಪಿಸಿಕೊಳ್ಳಲು ನೋಡಿದ. ನಾನು ಬಿಡಲಿಲ್ಲ. ಮನೆಯಲ್ಲಿ ಅಪ್ಪ ಅಮ್ಮನಿಗೆ ವಿಷಯ ತಿಳಿಸಿದೆ. ಅವರು ಪಂಚಾಯಿತಿ ಕೂಡಿಸಿದರು. ಪಂಚಾಯಿತಿಯಲ್ಲಿ ಅವನು ನನ್ನ ಮದುವೆಯಾಗಲೇಬೇಕೆಂದು ತೀರ್ಮಾನ ಕೊಟ್ಟರು. ಹತ್ತಿರದ ಚರ್ಚ್ ವೊಂದರಲ್ಲಿ ಪಂಚಾಯಿತಿಯ ಸಮ್ಮುಖದಲ್ಲಿಯೇ ನಮಗಿಬ್ಬರಿಗೂ ಮದುವೆಯಾಯಿತು. ಅದಾಗಲೇ ನನಗೆ ಐದು ತಿಂಗಳು ತುಂಬಿತ್ತು. ಮದುವೆಯಾದಾಗ ನನಗೆ 26. ಅವನಿಗೆ 18. ಅಂದರೆ ವಯಸ್ಸಲ್ಲಿ ನಾನು ಅವನಿಗಿಂತ 8 ವರ್ಷ ದೊಡ್ಡವಳಾಗಿದ್ದೆ. ಅವನಿಗದು ಕಸಿವಿಸಿಯೆನಿಸಿತು. ಮುಜುಗರವೆನಿಸಿತು. ಕೀಳರೆಮೆಯಾಗಿ ಕಾಡತೊಡಗಿತು. ಹಾಗೂ ಅವನದನ್ನು ಯಾವತ್ತೂ ಮರೆಯಲಿಲ್ಲ! ನನಗೂ ಮರೆಯಲು ಬಿಡಲಿಲ್ಲ!

    ನಾನೊಮ್ಮೆ ಕೇಳಿದ್ದೆ ಅವನನ್ನು ನೇರವಾಗಿ “ನಿನಗೆ ನನ್ನ ಬಸಿರು ಮಾಡುವಾಗ ಕಾಣದ ವಯಸ್ಸು ಈಗ ಸಂಸಾರ ನಡೆಸುವಾಗ ಯಾಕೆ ಕಾಣುತ್ತಿದೆ?” ಎಂದು. ಪ್ರಶ್ನೆ ಮುಖಕ್ಕೆ ಹೊಡೆದ ಹಾಗಿತ್ತು. ಆದರವನಿಗೆ ನಾನು ಕೇಳಿದ ರೀತಿ ಇಷ್ಟವಾಗಲಿಲ್ಲ. ನಾನೇನು ಮಾಡಲಿ? ನಾನು ಹೇಳುವ ಕೇಳುವ ರೀತಿಯೇ ಹಾಗಿತ್ತು. ಕಡ್ಡಿ ಮುರಿದ ಹಾಗೆ! ನನಗೋ ನಯನಾಜೂಕಾಗಿ ಹೇಳಲು ಬರುತ್ತಲೇ ಇರಲಿಲ್ಲ. ನಾನದನ್ನು ಕಲಿಯಲೂ ಇಲ್ಲ. ಅವನಿಗದೇಕೋ ನಾನು ಹಾಗೆ ಮಾತನಾಡುವ ರೀತಿ ಇಷ್ಟವಾಗತ್ತಿರಲಿಲ್ಲ. ಅವನೋ ಏನಾದರು ಹೇಳಬೇಕೆಂದರೆ ಸುತ್ತಿ ಬಳಸಿ ಹೇಳುತ್ತಿದ್ದ. ಅದೇ ಮೆಟಫರ್-ಗಿಟಫರ್ ಅಂತಾರಲ್ಲ ಅದರಲ್ಲಿ ಹೇಳುತ್ತಿದ್ದ. ನನಗೋ ತಲೆಬುಡ ಒಂದೂ ಅರ್ಥವಾಗುತ್ತಿರಲಿಲ್ಲ. ಇರಲಿ. ಇದರ ಬಗ್ಗೆ ಆಮೇಲೆ ಹೇಳುತ್ತೇನೆ. ಬಹುಶಃ, ಇದೇ ವಿಷಯ ನಮ್ಮಿಬ್ಬರ ನಡುವೆ ಬಿರುಕು ಮೂಡಲು ಕಾರಣವಾಯಿತು ಅನಿಸುತ್ತೆ. ಅದು ಮುಂದೆ ಹಿಗ್ಗುತ್ತಲೇ ಹೋಯಿತು. ಹೀಗಾಗಿ ಅವನು ಮಾನಸಿಕವಾಗಿ ನನಗೆ ಯಾವತ್ತೂ ಹತ್ತಿರವಾಗಲೇ ಇಲ್ಲ!

    ನಾನು ಉಳ್ಳವರ ಮನೆಯಿಂದ ಬಂದವಳು. ಇವನ ಮನೆನೂ ಹಾಗೆ ಅನ್ಕೊಂಡು ಬಂದೆ. ಆದರೆ ಅದಾಗಲೇ ಇವನಪ್ಪನಿಗೆ ವ್ಯಾಪಾರದಲ್ಲಿ ನಷ್ಟವುಂಟಾಗಿ ದಿವಾಳಿ ಎದ್ದಿದ್ದ. ಜೀವನಕ್ಕೆ ಇರಲಿ ಅಂತಾ ದನದ ವ್ಯಾಪಾರವನ್ನು ಮಾತ್ರ ಇನ್ನೂ ಕೈಯಲ್ಲಿ ಹಾಗೆ ಇಟ್ಕೊಂಡಿದ್ದ. ಹೀಗಾಗಿ ಮನೆ ಮುಂದೆ ಯಾವಗಲೂ ದನಗಳ ಹಿಂಡು ಹಿಂಡು ಸಾಲು. ಅವು ಅಲ್ಲೇ ಸಗಣಿ ಹಾಕುತ್ತಿದ್ದವು. ಆ ಸಗಣಿಯೇ ಮನೆ ಮುಂದೆ ಒಂದು ಗುಡ್ದೆಯಾಗಿ ಸದಾ ಗೊಮ್ಮೆನ್ನುವ ದುರ್ನಾತ ಹರಡುತ್ತಿತ್ತು. ನನಗೋ ಇಸ್ಸಿಸ್ಸಿ....ಎಂದು ಅಸಹ್ಯವಾಗುತ್ತಿತ್ತು. ಏನು ಮಾಡೋದು? ಕಟ್ಕೊಂಡ ಮೇಲೆ ಅನುಭವಿಸಲೇ ಬೇಕಲ್ಲ? ನಾನು ಬಂದ ಹೊಸತರಲ್ಲಿ ಅಂತಾ ಕಾಣುತ್ತೆ- ಹೀಗೆ ಗುಡ್ದೆ ಹಾಕಿ ಗಬ್ಬುನಾತ ಹೊರಡಿಸಿದ್ದಕ್ಕೆ ಮುನಿಸಿಪಾಲ್ಟಿಯವರು ನನ್ನ ಮಾವನಿಗೆ ಒಂದು ಶಿಲ್ಲಾಂಗಿನಷ್ಟು ದಂಡ ಹಾಕಿದ್ದರು. ಅವತ್ತು ಎಲ್ಲರೂ ಬೇಜಾರಿನಲ್ಲಿದ್ದರು. ನಾನು ಮಾತ್ರ ಒಳಗೊಳಗೆ ಖುಶಿಪಟ್ಟಿದ್ದೆ!


    (ರಾಬರ್ಟ್ ನೈ ಬರೆದ “Mrs. Shakespeare” ಎಂಬ ಇಂಗ್ಲೀಷ್ ಕಾದಂಬರಿ ಆಧಾರಿತ.)

    -ಉದಯ್ ಇಟಗಿ

    ಟಿ. ಎನ್. ಸೀತಾರಾಮ್ ಕಥೆ ಕದ್ದಿದ್ದಾರೆಯೆ?

  • ಶನಿವಾರ, ಅಕ್ಟೋಬರ್ 09, 2010
  • ಬಿಸಿಲ ಹನಿ

  • ಕನ್ನಡದ ಮಟ್ಟಿಗೆ ಕಥೆ ಕದಿಯುವದು ಹೊಸದೇನಲ್ಲ. ಕೆಲವು ಲೇಖಕರು ಇಂಗ್ಲೀಷ್ ಸಾಹಿತ್ಯದಿಂದ ನೇರವಾಗಿ ಕಾಪಿ ಹೊಡೆದು ಅದು ತಮ್ಮದೇ ಎಂಬಂತೆ ಘೋಷಿಸಿಕೊಂಡು ಬಿಡುತ್ತಾರೆ. ಇನ್ನು ಕೆಲವರು ಕಥೆಯ ಮುಖ್ಯ ತಿರುಳನ್ನು ಹಾಗೆ ಇಟ್ಟುಕೊಂಡು ಅಲ್ಪ ಸ್ವಲ್ಪ ಪಾತ್ರ ಬದಲಾವಣೆ ಹಾಗೂ ಚಿತ್ರಣದೊಂದಿಗೆ ತಮ್ಮದೇ ಸ್ವಂತದ್ದೆಂಬಂತೆ ತಮ್ಮ ಹೆಸರು ಹಾಕಿಕೊಳ್ಳುತ್ತಾರೆ. ಇದು ಹಿಂದಿನಿಂದಲೂ ನಡೆದು ಬಂದ ಸಂಗತಿ. ಕನ್ನಡದ ಕೆಲವು ಕಾಂಜಿ ಪಿಂಜಿ ಲೇಖಕರು ಇಂಗ್ಲೀಷ್ ಸಾಹಿತ್ಯವಿರಲಿ ಕನ್ನಡದ ಇತರೆ ಬರಹಗಾರರ ಕಥೆಯನ್ನೋ ಕಾದಂಬರಿಯನ್ನೋ ಕದ್ದು ಸಿಕ್ಕಿ ಬಿದ್ದಿದ್ದುಂಟು. ಅವರೆಲ್ಲ ಹೋಗಲಿ. ಕಳೆದ ವರ್ಷ ನಮ್ಮ ಹೆಸರಾಂತ ಲೇಖಕ ಜೋಗಿಯವರು ಕೂಡ ಇಂಗ್ಲೀಷ್ ಸಾಹಿತ್ಯದ ಮೊಪಾಸನ ‘ದಿ ಆರ್ಟಿಸ್ಟ್’ ಕಥೆಯನ್ನು ಕದ್ದು ಸಿಕ್ಕಿ ಬಿದ್ದಿದ್ದರು. ಅದಲ್ಲದೆ ಅವರ ‘ರಾಯಭಾಗದ ರಹಸ್ಯ ರಾತ್ರಿ’ ಕಥಾಸಂಕಲನದಲ್ಲಿನ ‘ಯಡಕುಮೇರಿಯ ಸುರಂಗದಲ್ಲಿ’ ಎಂಬ ಒಂದು ಕತೆ ಆಂಗ್ಲ ಕತೆಗಾರ ಚಾರ್ಲ್ಸ್ ಡಿಕನ್ಸ್ನ ‘ದಿ ಸಿಗ್ನಲ್ ಮ್ಯಾನ್’ ಕಥೆಯನ್ನು ಹೋಲುತ್ತದೆ.ಹಾಗೆಯೇ ಎ.ಆರ್.ಮಣಿಕಾಂತ್ ಕೆಲವು ಲೇಖನಗಳನ್ನು/ಕಥೆಗಳನ್ನು ಬಹಳಷ್ಟು ಈಮೇಲ್ ಕಥೆಗಳಿಂದ ಭಟ್ಟಿ ಇಳಿಸಿದ್ದಾರೆ. ಆದರೆ ಇವರ್ಯಾರು ಸೌಜನ್ಯಕ್ಕಾದರೂ ಮೂಲವನ್ನು ಪ್ರಸ್ತಾಪಿಸುವ ಇರಾದೆಗೆ ಹೋಗಿಲ್ಲ. ಆದರೆ ಜೋಗಿಯವರು ಮಾತ್ರ ಸಿಕ್ಕಿ ಬಿದ್ದಾಗ “ಮೊಪಾಸಾ ಕತೆಗಳನ್ನು ನಾನೂ ಓದಿದ್ದೇನೆ. ನನ್ನ ಸಂಗ್ರಹದಲ್ಲಿರುವ 189 ಕಥೆಗಳಲ್ಲಿ ಆ ಕತೆ ಇರಲಿಲ್ಲ. ಹೀಗಾಗಿ ನನಗೆ ಯಾರದ್ದೆಂದು ತಿಳಿಯಲಿಲ್ಲ. ಯಡಕುಮೇರಿಯ ಸುರಂಗದಲ್ಲಿ ಕತೆಗೂ ಸಿಗ್ನಲ್ ಮ್ಯಾನ್ ಕತೆಗೂ ಸಾಮ್ಯ ಇದೆಯೇನೋ. ನಾನು ಆ ಕತೆಯನ್ನು ಓದಿರಲಿಲ್ಲ. ನನ್ನ ಕತೆ ಅದಕ್ಕಿಂತ ಚೆನ್ನಾಗಿದೆ.” ಎಂಬ ಉತ್ತರವನ್ನು ಕೊಟ್ಟು ನಮ್ಮನ್ನು ನಂಬಿಸಲು ಪ್ರಯತ್ನಿಸಿದರು. ಅದು ನಿಜವಿರಬಹುದೇನೋ! ಏಕೆಂದರೆ ಈ ವಿಶಾಲ ಜಗತ್ತಿನಲ್ಲಿ ಇಬ್ಬರ ಕಲ್ಪನೆಗಳು ಒಂದೇ ಆಗಿರಲಿಕ್ಕೆ ಸಾಧ್ಯವಿಲ್ಲ ಎಂದು ಹೇಳುವದಾದರು ಹೇಗೆ? ಹಾಗೆ ಕಲ್ಪನೆಗಳು ಒಂದಾಗಿ ಕ್ರುತಿಯೊಂದು ಹೊರಬಂದಾಗ ಹೆಚ್ಚು ತೂಕ ಬರುವದು ಮೂಲ ಲೇಖಕನಿಗೆ, ಹಾಗೂ ಎರಡನೆಯವನದು ಏನಿದ್ದರೂ ‘ಕೃತಿಚೌರ್ಯ’ ಎಂದು ಬ್ರ್ಯಾಂಡ್ ಆಗುವದು ಸಹಜ. ಆ ನಿಟ್ಟಿನಲ್ಲಿ ನಮ್ಮ ಕನ್ನಡದ ನಿರ್ದೇಶಕರು ಕಥೆ ಕದಿಯುವದರಲ್ಲಿ ಹೊಸಬರೇನಲ್ಲ. ಬೇರೆ ನಿರ್ದೇಶಕರಿರಲಿ “ಮಾಯಾಮೃಗ”, “ಮನ್ವಂತರ”, “ಮುಕ್ತ” ದಂತಹ ಧಾರಾವಾಹಿಗಳನ್ನು ಕೊಟ್ಟ ಸೂಕ್ಷ್ಮ ಮನಸ್ಸಿನ ನಿರ್ದೇಶಕ ಸೀತಾರಾಮ್ ಕೂಡ ಕಥೆ ಕದಿಯುತ್ತಾರೆಂದರೆ ನಂಬಲಿಕ್ಕೆ ಆಗುತ್ತೆ? ಹೌದೆಂದು ಹೇಳಬೇಕಾಗುತ್ತ! ಏಕೆಂದರೆ ಅವರ ಎರಡನೆ ಚಿತ್ರ “ಮೀರಾ, ಮಾಧವ, ರಾಘವ” ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಇಂಗ್ಲೀಷ್ ಸಾಹಿತ್ಯದ ಹೆನ್ರಿಕ್ ಇಬ್ಸನ್ನನ “ಎ ಡಾಲ್ಸ್ ಹೌಸ್” ಎನ್ನುವ ಜನಪ್ರಿಯ ನಾಟಕದ ಮೂಲಕಥೆಯನ್ನು ಆಧರಿಸಿದೆ. ಇದು ಅಂತಿಂಥ ನಾಟಕವಲ್ಲ! ಇಬ್ಸನ್ನನ ಮಾಸ್ಟರ್ ಪೀಸ್! ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ತ್ರೀ ವಿಮೋಚನೆ ಬಗ್ಗೆ ಮಾತನಾಡಿದ ಹಾಗೂ ಮಹಿಳೆಯರಿಗೆ ವೋಟಿಂಗ್ ಪವರ್ ತಂದುಕೊಡುವದರ ಮೂಲಕ ಭಾರಿ ಸುದ್ದಿಯನ್ನು ಮಾಡಿದ ನಾಟಕ! ಆ ಮೂಲಕಥೆಯನ್ನು ಹಾಗೇ ಇಟ್ಟುಕೊಂಡು ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಸಿತಾರಾಮ್ ಅವರು ಹೇಗೆ ಅತ್ಯಂತ ಜಾಣತನದಿಂದ ಈ ಕಥೆಯನ್ನು ಹೆಣೆದಿದ್ದಾರೆ ನೋಡಿ. ಮೊದಲಿಗೆ ಇಬ್ಸನ್ನನ ನಾಟಕವನ್ನು ಗಮನಿಸೋಣ.


    ಇಬ್ಸನ್ನನ ನಾಟಕ “ಎ ಡಾಲ್ಸ್ ಹೌಸ್” ನಲ್ಲಿ ಬರುವ ಕಥಾನಾಯಕಿಯ ಹೆಸರು ನೋರಾ ಹೆಲ್ಮರ್. ಅವಳ ಗಂಡ ಟ್ರೊವಾಲ್ಡ್ ಹೆಲ್ಮರ್. ಅವರಿಗೆ ಮೂರು ಜನ ಮಕ್ಕಳು. ಅವನು ಈಗಷ್ಟೆ ಬ್ಯಾಂಕಿನಲ್ಲಿ ಮ್ಯಾನೆಜರ್ ಹುದ್ದೆಗೆ ಬಡ್ತಿ ಪಡೆದಿದ್ದಾನೆ. ಹೀಗಾಗಿ ಅವನಿಗೆ ಯಾವುದೇ ಹಣಕಾಸಿನ ತೊಂದರೆಯಿಲ್ಲ. ಆದರೆ ನೋರಾಳಿಗೆ ಒಂದಿಷ್ಟು ಸಾಲವಿದೆ. ಆ ಸಾಲವನ್ನು ಅವಳು ಗುಟ್ಟಾಗಿ ಕೆಲಸ ಮಾಡುತ್ತಾ ತೀರಿಸುತ್ತಿದ್ದಾಳೆ. ಇದರ ಬಗ್ಗೆ ಅವಳ ಗಂಡನಿಗೆ ಏನೇನೂ ಗೊತ್ತಿಲ್ಲ. ಈ ಸಾಲವನ್ನು ಗಂಡನಿಗೆ ಗೊತ್ತಿಲ್ಲದಂತೆ ಅವನಿಗೋಸ್ಕರ ಮಾಡಿದ್ದಳು. ಮದುವೆಯಾದ ಹೊಸತರಲ್ಲಿ ಅವನು ಯಾವುದೋ ಖಾಯಿಲೆಯಿಂದ ಹಾಸಿಗೆ ಹಿಡಿಯುತ್ತಾನೆ. ಆಗ ವೈದ್ಯರು ನೋರಾಳಿಗೆ ಅವನಿಗೆ ತುರ್ತಾಗಿ ಇಟಲಿಯಲ್ಲಿ ಚಿಕಿತ್ಸೆ ಕೊಡಿಸದೆ ಹೋದರೆ ಅವನು ಬದುಕುವದಿಲ್ಲ ಎಂದು ಹೇಳುತ್ತಾರೆ. ಇಟಲಿಯಲ್ಲಿ ಟ್ರೀಟ್ಮೆಂಟ್ ಕೊಡಿಸಬೇಕೆಂದರೆ ಸಾಕಷ್ಟು ಹಣ ಬೇಕಾಗುತ್ತದೆ. ಆದರೆ ಅಷ್ಟೊಂದು ಹಣವನ್ನು ಎಲ್ಲಿಂದ ತರುವದು? ಮೇಲಾಗಿ ಹಣದ ಬಗ್ಗೆ ಯೋಚನೆ ಮಾಡುತ್ತಾ ಕೂಡುವ ಕಾಲವಲ್ಲ ಇದು. ಸರಿಯೆಂದು ಅವಳಪ್ಪನಲ್ಲಿಗೆ ಹೋಗುತ್ತಾಳೆ. ಆದರೆ ಅವಳಪ್ಪನು ಕೂಡ ಖಾಯಿಲೆಯಿಂದ ಹಾಸಿಗೆ ಹಿಡಿದಿರುತ್ತಾನೆ. ಇಂಥ ಸಂದರ್ಭದಲ್ಲಿ ಅವನನ್ನು ದುಡ್ಡು ಕೇಳುವದು ಸರಿಯಲ್ಲ ಎಂದುಕೊಳ್ಳುತ್ತಾಳೆ. ಆದರೆ ಗಂಡನಿಗೆ ತುರ್ತಾಗಿ ಚಿಕಿತ್ಸೆ ಕೊಡಿಸಲೇಬೇಕು. ಆಗ ಅನಿವಾರ್ಯವಾಗಿ ಸಾಲ ಕೊಡುವವನಾದ ಕ್ರೊಗ್ಸ್ಟ್ಯಾಡ್ ಎಂಬವನಲ್ಲಿಗೆ ಹೋಗುತ್ತಾಳೆ. ಅವನು ಅವಳ ಗಂಡನ ಬ್ಯಾಂಕಿನಲ್ಲಿಯೇ ಗುಮಾಸ್ತನಾಗಿ ಕೆಲಸ ಮಾಡುತ್ತಿರುತ್ತಾನೆ. ಅವನೊಬ್ಬ ಕ್ರಿಮಿನಲ್. ಅಂಥವನನ್ನು ಸಾಲ ಕೊಡೆಂದು ಕೇಳುತ್ತಾಳೆ ಹಾಗೂ ಸಾಲ ತೆಗೆದುಕೊಳ್ಳುವ ವಿಷಯ ಗಂಡನಿಗೆ ಗೊತ್ತಾಗಬಾರದೆಂದು ತಾಕೀತು ಮಾಡುತ್ತಾಳೆ. ಆದರೆ ಚಾಣಾಕ್ಷನಾದ ಕ್ರೊಗ್ಸ್ಟ್ಯಾಡ್ ಈ ದುಡ್ಡಿಗೆ ನಿನ್ನ ಹತ್ತಿರ ಏನು ಸೆಕ್ಯೂರಿಟಿಯಿದೆ ಎಂದು ಕೇಳುತ್ತಾನೆ. ಅವಳು ಅದನ್ನು ಒದಗಿಸಲು ಅಸಹಾಯಕಳಾದಾಗ ಬಾಂಡ್ ಪೇಪರ್ ಮೇಲೆ ಅವಳಪ್ಪನ ಸಹಿ ಹಾಕೆಂದು ಹೇಳುತ್ತಾನೆ. ಅವಳು ಹಿಂದೆ ಮುಂದೆ ನೋಡದೆ ದುಡ್ಡಿನ ತುರ್ತಿಗೆ ಅವಳಪ್ಪನ ಸಹಿಯನ್ನು ಫೋರ್ಜರಿ ಮಾಡುತ್ತಾಳೆ ಹಾಗೂ ಗಂಡನ ಹತ್ತಿರ ಅವಳಪ್ಪ ಕೊಟ್ಟನೆಂದು ಸುಳ್ಳು ಹೇಳುತ್ತಾಳೆ. ಆದರೆ ಮುಂದೆ ಇದೆ ಕ್ರೊಗ್ಸ್ಟ್ಯಾಡ್ ನ ಕೆಲಸ ಹೋಗುವ ಸಂಭವ ಬರುತ್ತದೆ. ಆಗ ಅವನು ನೋರಾಳ ಹತ್ತಿರ ಬಂದು ಅವಳ ಗಂಡನಿಗೆ ಏನಾದರು ಹೇಳಿ ತನ್ನ ಕೆಲಸ ಹೋಗದಂತೆ ನೋಡಿಕೊಳ್ಳಲು ಹೇಳುತ್ತಾನೆ. ನೋರಾ ತನ್ನ ಪ್ರಯತವನ್ನು ಮಾಡುತ್ತಾಳೆ. ಆದರೆ ತುಂಬಾ ಪ್ರಾಮಾಣಿಕನಾದ ಹೆಲ್ಮರ್ ಅವಳ ಮಾತನ್ನು ಕೇಳುವದಿಲ್ಲ. ಆಗ ಕ್ರೊಗ್ಸ್ಟ್ಯಾಡ್ ನೋರಾಳಿಗೆ “ಈ ವಿಷಯದಲ್ಲಿ ನಿನ್ನ ಗಂಡನಿಗೆ ಹೇಳಿ ಮನವೊಲಿಸದೆ ಹೋದರೆ ನಾನು ನಿನ್ನ ಫೋರ್ಜರಿ ವಿಷಯವನ್ನು ನಿನ್ನ ಗಂಡನಿಗೆ ಹೇಳಬೇಕಾಗುತ್ತದೆ” ಎಂದು ಬ್ಲ್ಯಾಕ್ ಮೇಲ್ ಮಾಡ ತೊಡಗುತ್ತಾನೆ. ಇಲ್ಲಿಂದ ನೋರಾ ಸಂಕಷ್ಟಕ್ಕೆ ಸಿಲುಕುತ್ತಾಳೆ. ಮುಂದೆ ಹೆಲ್ಮರ್, ಕ್ರೊಗ್ಸ್ಟ್ಯಾಡ್ ಒಬ್ಬ ಕ್ರಿಮಿನಲ್ ಎನ್ನುವ ಕಾರಣಕ್ಕೆ ಅವನನ್ನು ಕೆಲಸದಿಂದ ತೆಗೆದುಹಾಕುತ್ತಾನೆ. ಆದರೆ ಸುಮ್ಮನಿರದ ಕ್ರೊಗ್ಸ್ಟ್ಯಾಡ್ ವಿಷಯವನ್ನು ನೇರವಾಗಿ ಹೆಲ್ಮರ್ ನಿಗೆ ಹೇಳಿ ಬ್ಲ್ಯಾಕ್ ಮೇಲ್ ತಂತ್ರದ ಮೂಲಕ ತನ್ನ ಕೆಲಸವನ್ನು ಉಳಿಸಿಕೊಳ್ಳಬಹುದೆಂದು ಲೆಕ್ಕಾಚಾರ ಹಾಕಿ “ನನ್ನನ್ನು ಕೆಲಸದಿಂದ ತೆಗೆದು ಹಾಕಿದರೆ ನಿನ್ನ ಹೆಂಡತಿ ಫೋರ್ಜರಿ ಮಾಡಿದ ಪತ್ರ ನನ್ನ ಹತ್ತಿರ ಇದೆ. ಅದನ್ನು ಪೋಲಿಸರಿಗೆ ಕೊಟ್ಟರೆ ಆಗ ಪರಿಣಾಮ ಏನಾಗಬಹುದೆಂದು ಯೋಚಿಸು” ಎಂದು ವಿವರಿಸುವ ಒಂದು ಪತ್ರವನ್ನು ಹೆಲ್ಮರ್ ನ ಲೆಟರ್ ಬಾಕ್ಸ್ ನಲ್ಲಿ ಹಾಕುತ್ತಾನೆ. ಇದನ್ನು ಓದಿದ ಹೆಲ್ಮರ್ ಹೆಂಡತಿ ನೋರಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. “ನೀನು ಒಬ್ಬ ಕ್ರಿಮಿನಲ್. ನಿನ್ನಿಂದಾಗಿ ನನ್ನ ಮಾನ, ಮರ್ಯಾದೆ ಎಲ್ಲಾ ಹಾಳಾಯಿತು. ಇನ್ನು ನಾವಿಬ್ಬರು ಒಟ್ಟಿಗಿರಲು ಹೇಗೆ ಸಾಧ್ಯ?” ಎಂದು ಆಪಾದಿಸುತ್ತಾನೆ. ಇದು ನೋರಾಳ ಮನಸ್ಸಿನ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಆದರೆ ಮಾರನೆ ದಿವಸ ಕ್ರೊಗ್ಸ್ಟ್ಯಾಡ್ ನಿಂದ “ನನ್ನ ತಪ್ಪಿನ ಅರಿವಾಗಿದೆ. ನಾನೀಗ ಬದಲಾಗಿದ್ದೇನೆ. ನಾನು ಯಾವುದೇ ಪೋಲಿಸ್ ಕಂಪ್ಲೇಟ್ ಕೊಡುವದಿಲ್ಲ ಹಾಗೂ ನೋರಾ ಫೋರ್ಜರಿ ಮಾಡಿದ ಬಾಂಡ್ ಪೇಪರ್ ನ್ನು ವಾಪಾಸು ಕಳಿಸಿದ್ದೇನೆ.” ಎನ್ನುವ ಪತ್ರ ಬರುತ್ತದೆ. ಇದನ್ನು ಓದಿದ ಹೆಲ್ಮರ್ ಕುಣಿದು ಕುಪ್ಪಳಿಸುತ್ತಾನೆ. “ನೋರಾ, ಆದದ್ದನ್ನೆಲ್ಲಾ ಮರೆತುಬಿಡು. ನಾನು ನಿನ್ನನ್ನು ಕ್ಷಮಿಸಿದ್ದೇನೆ” ಎಂದು ಹೆಲ್ಮರ್ ಹೆಂಡತಿಗೆ ಹೇಳುತ್ತಾನೆ. ಆದರೆ ಈಗಾಗಲೆ ಅವನ ಮಾತಿನಿಂದ ಬಹಳಷ್ಟು ನೊಂದಿರುವ ನೋರಾ ಅವನನ್ನು ತೊರೆದು ಹೋಗಲು ನಿರ್ಧರಿಸುತ್ತಾಳೆ. ಆದರೆ ಹೋಗುವ ಮುನ್ನ ಗಂಡನಿಗೆ “ನಾನು ಎಷ್ಟೆಲ್ಲ ಕಷ್ಟಪಟ್ಟೆ. ನಿನಗೋಸ್ಕರ ತಾನೆ ನಾನು ಸಾಲ ಮಾಡಿದ್ದು. ನಿನ್ನನ್ನು ಉಳಿಸಿಕೊಳ್ಳೊದಕ್ಕೆ ತಾನೆ ನಾನು ಸಾಲ ಮಾಡಿದ್ದು? ಆದ್ರೆ ನಾನು ಅಪರಾಧಿ ಅಂತ ಗೊತ್ತಾದ ತಕ್ಷಣ ನಾವಿಬ್ರೂ ಬೇರೆ ಬೇರೆ ಅನ್ನೋ ತರ ಮಾತಾಡಿದಿ. ಈಗ ಕಷ್ಟ ಕಳೀತು ಅಂತಾ ಬಾ ಅಂತಾ ಕರೀತಾ ಇದಿಯಾ. ಇದು ಹೇಗೆ ಸಾಧ್ಯ? ನಿನ್ನಂತ ದ್ರೋಹಿಯೊಂದಿಗೆ ಒಟ್ಟಿಗೆ ಇರೋದಕ್ಕಿಂತ ದೂರ ಹೋಗೋದೆ ಮೇಲು. ಗುಡ್ ಬೈ.” ಎಂದು ಹೇಳಿ ಗಂಡನನ್ನು ಹಾಗೂ ಮಕ್ಕಳನ್ನು ಬಿಟ್ಟು ಹೋಗುತ್ತಾಳೆ. ಪ್ರೇಕ್ಷಕರಿಗೆ ಬಾಗಿಲು ಮುಚ್ಚಿದ ಸದ್ದು ಕೇಳುತ್ತದೆ.


    ಈ ನಾಟಕ ಮಹಿಳಾ ಪ್ರಧಾನ ನಾಟಕ. ಇಡಿ ಯೋರೋಪಿನಲ್ಲಿ ಸಂಚಲನವನ್ನು ಮೂಡಿಸಿತ್ತು. ಈ ನಾಟಕದ ಆಗಮನದೊಂದಿಗೆ ಮಹಿಳೆಯರು ತಮ್ಮ ಹಕ್ಕಿಗಾಗಿ ಹೋರಾಡತೊಡಗಿದರು. ಪರಿಣಾಮವಾಗಿ ಮಹಿಳಾ ಸಂಘಟನೆಗಳು, ಸ್ತ್ರೀ ಶಕ್ತಿಗಳು ಹುಟ್ಟಿಕೊಂಡವು. ಈ ನಾಟಕದ ಮೂಲಕಥೆಯನ್ನು ಆಧಾರವಾಗಿಟ್ಟುಕೊಂಡು ಸೀತಾರಾಮರು ಆ ಕಡೆ ಈ ಕಡೆ ಹಿಗ್ಗಿಸಿ ತಮ್ಮದೇ ಕಥೆಯೆಂಬಂತೆ “ಮೀರಾ, ಮಾಧವ, ರಾಘವ” ದಲ್ಲಿ ಬಿಂಬಿಸಿದ್ದಾರೆ.


    “ಮೀರಾ, ಮಾಧವ, ರಾಘವ” ದಲ್ಲಿ ರೌಡಿ ರಾಘವ ಕಥಾನಾಯಕಿ ಮೀರಾಳನ್ನು ಮದುವೆ ಆಗೆಂದು ಪೀಡಿಸುತ್ತಿರುತ್ತಾನೆ. ಆದರೆ ಅವಳು ಅವನನ್ನು ನಿರಾಕರಿಸಿ ಲೆಕ್ಚರರ್ ಆಗಿರುವ ಮಾಧವನನ್ನು ಮದುವೆ ಆಗುತ್ತಾಳೆ. ಮಾಧವನಿಗೆ ಮೊದಲಿನಿಂದಲೂ ಐ.ಎ.ಎಸ್ ಮಾಡಬೇಕೆಂಬ ಮಹಾದಾಸೆ ಇರುತ್ತದೆ. ಆದರೆ ದುಡ್ಡಿನ ಅಡಚಣೆಯಿಂದಾಗಿ ಅವನ ಕನಸು ತಟಸ್ಥವಾಗಿರುತ್ತದೆ. ಆದರೆ ಮೀರಾ ತನ್ನ ತೌರು ಮನೆಯ ಆಸ್ತಿಯಲ್ಲಿ ಭಾಗ ಕೇಳಿ ಅದರಿಂದ ಬಂದ ದುಡ್ಡಿನಿಂದ ನಿನ್ನನ್ನು ಐ.ಎ.ಎಸ್ ಮಾಡಿಸುತ್ತೇನೆ ನೀನು ಹೋಗಿ ಬಾ ಎಂದು ಗಂಡನನ್ನು ದೆಹಲಿಗೆ ಕಳಿಸುತ್ತಾಳೆ. ತೌರು ಮನೆಯ ಆಸ್ತಿಯಲ್ಲಿ ಸದ್ಯಕ್ಕೆ ಆಸ್ತಿಯಲ್ಲಿ ಭಾಗ ಸಿಗುವದಿಲ್ಲ ಎಂದು ಗೊತ್ತಾದ ಮೇಲೆ ಇದರಿಂದ ತನ್ನ ಗಂಡನ ಐ.ಎ.ಎಸ್ ಮಾಡುವ ಕನಸು ನುಚ್ಚು ನೂರಾಗುತ್ತದೆ ಅವನನ್ನು ಹೇಗಾದರು ಮಾಡಿ ಐ.ಎ.ಎಸ್ ಮಾಡಿಸಲೇಬೇಕೆಂದು ನಿರ್ಧರಿಸಿ ಸಹಾಯಕ್ಕಾಗಿ ತನ್ನ ಗೆಳತಿ ಕಲ್ಯಾಣಿಯ ತಂದೆ ಬಳಿ ಹೋಗುತ್ತಾಳೆ. ಅವರು ಒಂದು ಫೈನಾನ್ಸ್ ಕಂಪನಿಯಲ್ಲಿ ಮಾನೇಜರ್ ಆಗಿ ಕೆಲಸ ಮಾಡುತ್ತಿದ್ದು ಹತ್ತು ಲಕ್ಷದಷ್ಟು ಹಣವನ್ನು ಅವರಿಗೆ ಕೊಡಲು ಪವರ್ ಇಲ್ಲವೆಂದು ಹೇಳಿ ಮೀರಾಳನ್ನು ತನ್ನ ಬಾಸ್ ಬಳಿ ಕರೆದುಕೊಂಡು ಹೋಗುತ್ತಾರೆ. ಮೀರಾಳ ದುರಾದೃಷ್ಟಕ್ಕೆ ಆ ಬಾಸ್ ಬೇರೆ ಯಾರೂ ಅಲ್ಲದೆ ಈ ಹಿಂದೆ ಅವಳನ್ನು ಮದುವೆಯಾಗೆಂದು ಪೀಡಿಸುತ್ತಿದ್ದ ರಾಘವನಾಗಿರುತ್ತಾನೆ. ಅವನು ಹತ್ತು ಲಕ್ಷದಷ್ಟು ಹಣವನ್ನು ಕೊಡಲು ಮುಂದಾಗುತ್ತಾನೆ. ಆದರೆ ಅದಕ್ಕೆ ಮೀರಾಳ ಹತ್ತಿರ ಸೆಕ್ಯುರಿಟಿ ಕೇಳುತ್ತಾನೆ. ಅವಳು ಅದನ್ನು ಒದಗಿಸಲು ಅಸಹಾಯಕಳಾದಾಗ ಅವನು ಒಂದು ಬಾಂಡ್ ಪೇಪರ್ ಮೇಲೆ ಅವಳ ಗಂಡನೇ ಅವನಿಂದ ಸಾಲ ತೆಗೆದುಕೊಂಡಿರುವಂತೆ ಅವಳ ಕೈಲಿ ಬರೆಸಿ ಅವಳ ಗಂಡನ ಸಹಿಯನ್ನು ಫೋರ್ಜರಿ ಮಾಡಲು ಹೇಳುತ್ತಾನೆ. ಮತ್ತು ಪಕ್ಕದಲ್ಲಿ ಸಾಕ್ಷಿಯಾಗಿ ಅವಳಿಗೆ ಸಹಿ ಹಾಕಲು ಹೇಳುತ್ತಾನೆ. ಏಕೆಂದರೆ ಅವಳ ಗಂಡ ಹೇಗೂ ಐ.ಎ.ಎಸ್ ಆಫಿಸರ್ ಆಗುವವ. ಮುಂದೆ ಅವನಿಂದಾದರೂ ವಸೂಲಿ ಮಾಡಬಹುದೆಂಬುದು ಅವನ ಮುಂದಾಲೋಚನೆ. ಮೀರಾ ಇಷ್ಟೆಲ್ಲ ಮಾಡಲು ಹಿಂದೆ ಮುಂದೆ ನೋಡುತ್ತಳಾದರೂ ಗಂಡನ ಐ.ಎ.ಎಸ್ ಗೆ ತೊಂದರೆಯಾಗಬಾರದೆಂದು ಗಂಡನ ಸಹಿ ಮಾಡಿ ದುಡ್ಡು ತೆಗೆದುಕೊಂಡು ಬರುತ್ತಾಳೆ. ಆದರೆ ಗಂಡನ ಹತ್ತಿರ ತೌರು ಮನೆಯವರು ದುಡ್ಡು ಕೊಟ್ಟರೆಂದು ಸುಳ್ಳು ಹೇಳುತ್ತಾಳೆ. ನಂತರ ರಾಘವ ದುಡ್ಡಿಗೆ ಬಡ್ಡಿ ಕೊಡೆಂದು ಪೀಡಿಸುತ್ತಾನೆ. ಇಲ್ಲವಾದರೆ ತನ್ನ ಕ್ಲಬ್ಬಿನಲ್ಲಿ ಹಾಡೆಂದು ಕೇಳುತ್ತಾನೆ. ಮೀರಾ ಯಾರಿಗೂ ಗೊತ್ತಿಲ್ಲದಂತೆ ಕ್ಲಬ್ಬಿಗೆ ಹೋಗಿ ಹಾಡಿ ಬರುತ್ತಾಳೆ. ಇತ್ತ ಗಂಡ ಐ.ಎ.ಎಸ್ ಪಾಸ್ ಮಾಡಿ ಹೇಮಗಿರಿ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬರುತ್ತಾನೆ. ಮುಂದೆ ಅದೇ ಊರಿನವನಾದ ರಾಘವ ಎಲೆಕ್ಷನ್ ಗೆ ನಾಮಿನೇಶನ್ ಫೈಲ್ ಮಾಡಲು ಹೋಗುತ್ತಾನೆ. ಆದರೆ ಅಷ್ಟರಲ್ಲಿ ಅವನೊಬ್ಬ ದೊಡ್ಡ ಕ್ರಿಮಿನಲ್ ಆಗಿದ್ದರಿಂದ ಅವನ ಮೇಲೆ ಗಡಿಪಾರು ಆಜ್ಞೆಯನ್ನು ಜಿಲ್ಲಾಧಿಕಾರಿ ಮಾಧವ ಹೊರಡಿಸಿರುತ್ತಾನೆ. ಹೀಗಾಗಿ ಅವನಿಗೆ ನಾಮಿನೇಶನ್ ಫೈಲ್ ಮಾಡಲಾಗುವದಿಲ್ಲ. ಆದರೆ ನಾಮಿನೇಶನ್ ಫೈಲ್ ಮಾಡಲು ಇನ್ನೂ ಸಮಯವಿರುವದರಿಂದ ಆ ಆರ್ಡರ್ ನ್ನು ಕ್ಯಾನ್ಸಲ್ ಮಾಡಿಸಲು ಮಾಧವನ ಹೆಂಡತಿ ಮೀರಾಳನ್ನು ಕೇಳುತ್ತಾನೆ. ಆದರೆ ಅವಳು ತನ್ನ ಗಂಡ ಪ್ರಾಮಾಣಿಕ, ದಕ್ಷ ಅಧಿಕಾರಿಯಾಗಿದ್ದರಿಂದ ಇಂಥದನ್ನು ಮಾಡುವದಿಲ್ಲವೆಂದು ಹೇಳಿದಾಗ ಅವಳು ಫೋರ್ಜರಿ ಮಾಡಿರುವ ವಿಷಯವನ್ನು ಅವಳ ಗಂಡನಿಗೆ ಹೇಳುತ್ತೇನೆಂದು ಬ್ಲ್ಯಾಕ್ ಮೇಲ್ ಮಾಡುತ್ತಾನೆ. ಅವಳು ಕೂಡ ಈ ಸಂಕಷ್ಟದಿಂದ ಹೇಗಾದರು ಪಾರಾದರೆ ಸಾಕೆಂದು ಗಂಡನಿಗೆ ಆರ್ಡರ್ ಕ್ಯಾನ್ಸಲ್ ಮಾಡಲು ಹೇಳುತ್ತಾಳೆ. ಆದರೆ ಪ್ರಾಮಾಣಿಕ ಅಧಿಕಾರಿಯಾದ ಅವನು ಕ್ಯಾನ್ಸಲ್ ಮಾಡಲು ನಿರಾಕರಿಸುತ್ತಾನೆ. ಆರ್ಡರ್ ಕ್ಯಾನ್ಸಲ್ ಆಗದೆ ಹೋದಾಗ ಕ್ರೋಧಗೊಂಡ ರಾಘವ ಒಂದು ದಿನ ನೇರವಾಗಿ ಮಾಧವನ ಹತ್ತಿರ ಬಂದು ಅವನ ಹೆಂಡತಿ ಫೋರ್ಜರಿ ಮಾಡಿರುವ ವಿಷಯವನ್ನು ಹೇಳುತ್ತಾನೆ. ಅಲ್ಲಿಂದ ಮುಂದೆ ಮೀರಾ ಸಂಕಷ್ಟಕ್ಕೆ ಸಿಲುಕುತ್ತಾಳೆ. ಗಂಡ ಹೆಂಡತಿಯರ ಮಧ್ಯ ಇದೆ ವಿಷಯಕ್ಕೆ ಜಗಳ ಶುರುವಾಗುತ್ತದೆ. ಸಾಲ ಮಾಡಿದ ಕಾರಣವನ್ನು ಅವಳು ಹೇಳಲೇ ಬೇಕಾಗುತ್ತದೆ. ಆದರೆ ಮಾಧವ ಈ ಫೋರ್ಜರಿ ಪತ್ರ ಪೋಲಿಸ್ ನವರ ಕೈಗೆ ಸಿಕ್ಕರೆ ಇಬ್ಬರೂ ಜೈಲಿಗೆ ಹೋಗಬೇಕಾಗುತ್ತದೆ ಇದರಿಂದ ತನ್ನ ಮಾನ ಮರ್ಯಾದೆಯೆಲ್ಲ ಹರಾಜಾಗುತ್ತದೆ ಎಂದು ಹೇಳುತ್ತಾನೆ. ಕೊನೆಗೆ ಹೆಂಡತಿಗೆ ಅವನ ಹತ್ತಿರ ಪ್ರೀತಿಯ ನಾಟಕವಾಡಿ ಆ ಓರಿಜಿನಲ್ ಕಾಪಿಯನ್ನು ತೆಗೆದುಕಂಡು ಬಾ ಎಂದು ಹೇಳುತ್ತಾನೆ. ಅವಳು ಅದೇ ಪ್ರಕಾರ ಮುಚ್ಚಿದ ಖಾಲಿ ಲಕೋಟಿಯನ್ನು ರಾಘವನ ಹತ್ತಿರ ತೆಗೆದುಕೊಂಡು ಇದರಲ್ಲಿ “ನಿನ್ನ ಆರ್ಡರ್ ಕ್ಯಾನ್ಸಲ್ ಮಾಡಿರುವ ಕಾಪಿಯಿದೆ. ನನಗೆ ನನ್ನ ಓರಿಜಿನಲ್ ಕಾಪಿ ಕೊಡು” ಎಂದು ಕೇಳುತ್ತಾಳೆ. ಆದರೆ ಚಾಣಾಕ್ಷನಾದ ರಾಘವ ಓರಿಜಿನಲ್ ಕಾಪಿ ತೋರಿಸುವ ನಾಟಕವಾಡಿ ಅವಳ ಕೈಯಿಂದ ಲಕೋಟಿಯನ್ನು ಕಿತ್ತುಕೊಳ್ಳುತ್ತಾನೆ. ಅದು ಖಾಲಿಯಿರುವದನ್ನು ನೋಡಿ ಓರಿಜಿನಲ್ ಕಾಪಿ ಕೊಡುವದಿಲ್ಲ ಎಂದು ಹೇಳುತ್ತಾನೆ. ಮುಂದೇನು ಮಾಡಬೇಕೆಂದು ಗೊತ್ತಾಗದೆ ಮೀರಾ ಪಕ್ಕದಲ್ಲಿಯೇ ಇದ್ದ ಅವನ ಪಿಸ್ತೂಲಿನಿಂದ ಶೂಟ್ ಮಾಡುತ್ತಾಳೆ. ಆಮೇಲೆ ಗಂಡನ ಹತ್ತಿರ ಬಂದು ತಪ್ಪೊಪ್ಪಿಕೊಳ್ಳುತ್ತಾಳೆ. ಆದರೆ ಗಂಡ ಅವಳನ್ನು ಆ ಕೊಲೆ ಕೇಸಿನಿಂದ ಪಾರು ಮಾಡಬಹುದಾಗಿತ್ತಾದರೂ ಹಾಗೆ ಮಾಡದೆ “ಒಳ್ಳೆ ಲಾಯರ್ ನ್ನ ನೇಮಿಸಿ ಕೇಸ್ ಫೈಟ್ ಮಾಡೋಣ ಶಿಕ್ಷೆಯಾಗುತ್ತೆ. ಅದಾದ ಮೇಲೆ ಬಿಡುಗಡೆನೂ ಆಗುತ್ತೆ. ಆದ್ರೆ ಒಂದು ಮಾತು ಮೀರಾ, ಬಿಡುಗಡೆಯಾದ ಮೇಲೆ ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ. ಯಾಕೆಂದ್ರೆ ಒಬ್ಬ ಕೊಲೆಗಾರ್ತಿ ಡೀಸಿ ಹೆಂಡತಿಯಾಗಿ ಉಳಿಯೋದಕ್ಕೆ ಸಾಧ್ಯನಾ?” ಎಂದು ಖಡಾ ಖಂಡಿತವಾಗಿ ಹೇಳುತ್ತಾನೆ. ಆದರೆ ಸಿನಿಮಾದ ಕೊನೆಯಲ್ಲಿ ರಾಘವ ಬದುಕುಳಿಯುತ್ತಾನೆ. ಆಶ್ಚರ್ಯ ಎಂಬಂತೆ ಅವನು ಬದಲಾಗುತ್ತಾನೆ ಹಾಗೂ ಮೀರಾಳ ಮೇಲೆ ಯಾವುದೇ ಕಂಪ್ಲೇಟ್ ಕೊಡದೆ ಅವಳ ಫೋರ್ಜರಿ ಡಾಕುಮೆಂಟ್ಸ್ ನ್ನು ವಾಪಾಸು ಕೊಡುತ್ತಾನೆ. ಆಗ ಅವಳ ಗಂಡ ಮಾಧವ “ಬಾ, ಇನ್ನೇನು ಕಷ್ಟ ಕಳಿತಲ್ಲ, ಹ್ಯಾಪಿಯಾಗಿ ಸಿಲೆಬ್ರೇಟ್ ಮಾಡೋಣ” ಎಂದು ಹೇಳುತ್ತಾನೆ. ಆದರೆ ಮೀರಾ ಅವನ ವರ್ತನೆಗೆ ಬೇಸರಪಟ್ಟುಕೊಂಡು ಅತ್ಯಂತ ತಿರಸ್ಕಾರದಿಂದ ಅವನನ್ನು ಬಿಟ್ಟು ಹೋಗುತ್ತಾಳೆ. ಹೋಗುವ ಮುನ್ನ ಅವನು ಪರಿ ಪರಿಯಾಗಿ ಕೇಳಿಕೊಂಡರೂ ಅವಳು ಇರದೆ ಹೊರಟು ಹೋಗುತ್ತಾಳೆ. ಆದರೆ ಹೋಗುವ ಮುನ್ನ “ನಾನು ನಿನಗೋಸ್ಕರ ಎಷ್ಟೆಲ್ಲ ಕಷ್ಟಪಟ್ಟೆ. ನಿಮ್ಮ ಐ.ಎ.ಎಸ್ ಕನಸು ನನಸು ಮಾಡಕ್ಕೋಸ್ಕರ ಸಾಲ ಮಾಡಿದೆ. ಆದ್ರೆ ನಾನು ಅಪರಾಧಿ ಅಂತ ಗೊತ್ತಾದ ತಕ್ಷಣ ನನ್ನನ್ನು ಬಚಾವ್ ಮಾಡಲು ಸಾಧ್ಯವಿದ್ದರೂ ನೀನು ಹಾಗೆ ಮಾಡಲಿಲ್ಲ. ನಿನಗೆ ನಿನ್ನ ಪ್ರೆಸ್ಟಿಜ್ ಮುಖ್ಯ ಆಯ್ತು. ಅಧಿಕಾರ ದೊಡ್ಡದು ಆಯ್ತು. ಪ್ರೀತಿಸೊ ಹೆಂಡತಿ ಜೈಲಿಗೆ ಹೋದ್ರು ಚಿಂತೆ ಇಲ್ಲ, ನಿನಗೆ ನಿನ್ನ ಕೆಲಸಾನೆ ದೊಡ್ಡದು ಅಯ್ತು. ಇದಕ್ಕಿಂತ ದ್ರೋಹ ಬೇಕಾ? ಈಗ ಕಷ್ಟ ಕಳೀತು ಅಂತಾ ಬಾ ಮೀರಾ ಒಟ್ಟಿಗಿರೋಣ ಅಂತಾ ಕರೀತಾ ಇದಿಯಾ. ಇದು ಹೇಗೆ ಸಾಧ್ಯ ಮಾಧವ? ಗುಡ್ ಬೈ.” ಎಂದು ಹೇಳಿ ಹೊರಟು ಹೋಗುತ್ತಾಳೆ. ಅಲ್ಲಿಗೆ ಸೀತಾರಾಮ್ “ಇದು ಕೊನೆಯಲ್ಲ, ಹೊಸ ಬದುಕಿನ ಹೆಜ್ಜೆ” ಎಂದು ತೋರಿಸುವದರ ಮೂಲಕ ಸಿನಿಮಾ ಮುಗಿಸುತ್ತಾರೆ.


    ಈಗ ಹೇಳಿ ಇವೆರೆಡರ ಕಥೆ ಒಂದೇ ಆಗಿಲ್ಲವೆ? ಇಲ್ಲಿ ಮೀರಾ ನೋರಾಳನ್ನು, ರಾಘವ ಕ್ರೊಗ್ಸ್ಟ್ಯಾಡ್ ನನ್ನು, ಮಾಧವ ಹೆಲ್ಮರ್ ನನ್ನು ಪ್ರತಿನಿಧಿಸುವದಿಲ್ಲವೆ? ಹಾಗೂ ಘಟನೆಗಳು ಕೂಡ ಹೆಚ್ಚು ಕಮ್ಮಿ ಒಂದೇ ಆಗಿಲ್ಲವೆ? ಈ ಸಣ್ಣ ನಾಟಕವನ್ನು ಸೀತಾರಾಮರು ಒಂದು ಸಿನಿಮಾಕ್ಕೆ ಆಗುವಷ್ಟು ಸರಕನ್ನಾಗಿ ಹಿಗ್ಗಿಸಿಕೊಂಡು ಈ ಚಿತ್ರ ತೆಗೆದಿಲ್ಲವೆ? ಸೀತಾರಾಮರು ನಿರ್ದೇಶಕರಲ್ಲದೆ ಮೂಲತಃ ಲೇಖಕರು ಹೌದು. ಕನ್ನಡಕ್ಕೆ “ಕ್ರೌರ್ಯ” ದಂಥ ಶ್ರೇಷ್ಠ ಕಥೆಯನ್ನು ಹಾಗೂ “ನಮ್ಮೊಳಗೊಬ್ಬ ನಾಜೂಕಯ್ಯ” ದಂಥ ಉತ್ತಮ ನಾಟಕವನ್ನು ಸೀತಾರಾಮರು ಕೊಟ್ಟಿದ್ದಾರೆ. ಅಂಥವರು ಈ ರೀತಿ ಕಥೆ ಕದಿಯುವದು ಸರಿಯೇ?


    ಈ ಸಿನಿಮಾ ಬಂದಿದ್ದು 2007ರಲ್ಲಿ. ಆದರೆ ಆಗ ಈ ನಕಲಿನ ವಿಷಯ ಕುರಿತಂತೆ ಸುದ್ದಿಯಾಗಿತ್ತೋ ನನಗೆ ಗೊತ್ತಿಲ್ಲ. ಈಗ್ಗೆ ಆರು ತಿಂಗಳಿನ ಹಿಂದೆ ನಾನು ದೂರದ ಲಿಬಿಯಾದಲ್ಲಿ ಕುಳಿತು ಕಸ್ತೂರಿ ಚಾನೆಲ್ಲಿನಲ್ಲಿ ಈ ಸಿನಿಮಾವನ್ನು ನೋಡಿದೆ. ಅರ್ಧ ಸಿನಿಮಾ ನೋಡುತ್ತಿದ್ದಂತೆ ಅರೆ ಇದು ಇಬ್ಸನ್ನನ “ಎ ಡಾಲ್ಸ್ ಹೌಸ್” ನಾಟಕದ ತರಾನೆ ಇದೆಯೆಲ್ಲಾ? ಕ್ಲೈಮ್ಯಾಕ್ಸ್ ನೋಡಿಯೇ ಬಿಡೋಣ ಎಂದು ನೋಡಿದರೆ ಅದು ಕೂಡ ಹಾಗೆಯೇ ಇತ್ತು. ಆಮೇಲೆ ಬಹುಶಃ ಟೈಟಲ್ ಕಾರ್ಡಿನಲ್ಲಿ ಮೂಲ ಕಥೆಯನ್ನು ಪ್ರಸ್ತಾಪಿಸರಬೇಕು, ನಾನು ಗಮನಿಸಿರಿಲಿಕ್ಕಿಲ್ಲ ಎಂದುಕೊಂಡು ಸುಮ್ಮನಾದೆ. ಆದರೆ ಈ ಸಾರಿ ಬೆಂಗಳೂರಿಗೆ ಹೋದಾಗ “ಮೀರಾ, ಮಾಧವ, ರಾಘವ” ಸಿ.ಡಿ.ಯನ್ನು ತೆಗೆದುಕೊಂಡು ಬಂದು ಇಲ್ಲಿ ಮತ್ತೊಮ್ಮೆ ನೋಡಿದೆ. ಎಲ್ಲಿಯೂ ಮೂಲಕಥೆಯ ಪ್ರಸ್ತಾಪವಿಲ್ಲ. ಈಗ ಹೇಳಿ ಸೀತಾರಾಮರು ಕಥೆ ಕದ್ದಿದ್ದಾರೆ ಅನಿಸುವದಿಲ್ಲವೆ? ಅಥವಾ 21ನೇ ಶತಮಾನದ ಇವರದು ಹಾಗೂ 19ನೇ ಶತಮಾನದ ಇಬ್ಸನ್ನನ ಕಲ್ಪನೆಗಳು ಒಂದೇ ಆಗಿದ್ದವಾ? ಈ ಪ್ರಶ್ನೆಗಳಿಗೆ ಸೀತಾರಾಮರೇ ಉತ್ತರಿಸಬೇಕು.


    -ಉದಯ್ ಇಟಗಿ

    ನಿಮ್ಮಿ ಮತ್ತು ರಟ್ಟಿನ ಬಾಕ್ಸು

  • ಶುಕ್ರವಾರ, ಅಕ್ಟೋಬರ್ 01, 2010
  • ಬಿಸಿಲ ಹನಿ

  • ನಾನು ಲಂಕೇಶ್ ಪತ್ರಿಕೆಯನ್ನು ಓದಲು ಆರಂಭಿಸಿದ್ದೇ ತೊಂಬತ್ತರ ದಶಕದ ಮಧ್ಯಭಾಗದಿಂದ. ಅವು ನನ್ನ ಕಾಲೇಜು ದಿನಗಳು. ಬಣ್ಣ ಬಣ್ಣದ ಕನಸುಗಳನ್ನು ಕಾಣುತ್ತಾ ಹದಿ ಹರೆಯದ ಹಳವಂಡಗಳಿಗೆ ಜೋತುಬಿದ್ದ ಕಾಲವದು. ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅಂಕಣಗಳಲ್ಲಿ ವಯೋಸಹಜನುಗುಣವಾಗಿ ನನ್ನನ್ನು ಹೆಚ್ಚು ಆಕರ್ಷಿಸಿದ್ದು “ತುಂಟಾಟ”. ಜೊತೆಗೆ ನೀಲು ಪದ್ಯಗಳು ಮತ್ತು ನಿಮ್ಮಿ ಕಾಲಂ. ಅಸ್ತಿತ್ವದಲ್ಲಿಯೇ ಇರದ ಗಂಜುಗಣ್ಣಿನ ಹುಡುಗಿಯ ಫೋಟೊವೊಂದನ್ನು ಹಾಕಿ ಅದಕ್ಕೆ ‘ನಿಮ್ಮಿ ಕಾಲಂ’ ಎಂದು ಹೆಸರಿಟ್ಟು ಲಂಕೇಶರೇ ಮೊದಲಿಗೆ ಅದನ್ನು ಪರಕಾಯ ಪ್ರವೇಶ ಮಾಡಿ ಬರೆದರು. ಆನಂತರ ಪ್ರತಿಭಾ ನಂದಕುಮಾರ್ ಒಂದಷ್ಟು ದಿವಸ ಬರೆದರು. ಮುಂದೆ ಅದನ್ನು ಅನಿತಾ ನಟರಾಜ್ ಹುಳಿಯಾರ್ ಮುಂದುವರೆಸಿಕೊಂಡು ಹೋದರು. ನಿಮ್ಮಿ ಕಾಲಂ ಆ ಕಾಲದ ಹದಿ ಹರೆಯದವರ ಹೃದಯಕ್ಕೆ ಲಗ್ಗೆ ಹಾಕುವದರ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಏಕೆಂದರೆ ಅದು ನಿಮ್ಮಿ ಮತ್ತು ಅವಳ ಪ್ರಿಯಕರ ಅಮರನ ಪ್ರೀತಿ, ಪ್ರೇಮ, ಪ್ರಣಯದ ಜೊತೆಗೆ ಒಂದಿಷ್ಟು ಅವರ ಜಗಳ, ಮುನಿಸು ಮತ್ತು ಸಲ್ಲಾಪಗಳಿಂದ ರಾರಾಜಿಸುವದರ ಮೂಲಕ ನನ್ನಂತ ಹದಿ ಹರೆಯದವರನ್ನು ಹಿಡಿದಿಟ್ಟಿತ್ತು. ಹೆಚ್ಚು ಕಮ್ಮಿ ನಿಮ್ಮಿ ನನ್ನಂತ ಎಷ್ಟೊ ಹುಡುಗರಿಗೆ ಪ್ರೇಯಸಿಯಾಗಿ ಬಿಟ್ಟಿದ್ದಳು. ಅವಳ ಕಚುಗುಳಿಯಂತ ಬರಹ ನನ್ನನ್ನು ಬಹುವಾಗಿ ತಾಕಿತ್ತು. ಬಹಳಷ್ಟು ಸಾರಿ ನಿಮ್ಮಿ ಅವಳು ಮತ್ತು ಅವಳ ಪ್ರಿಯಕರ ಅಮರ ಈ ವಾರ ಎಲ್ಲಿ ಹೋದರು, ಏನು ಮಾಡಿದರು, ಅವರನ್ನು ನೋಡಲು ಯಾರು ಬಂದಿದ್ದರು, ಏನು ಗಿಫ್ಟು ತಂದಿದ್ದರು ಬರಿ ಇಂಥವೇ ವಿಷಯಗಳೊಂದಿಗೆ ಬೋರ್ ಹೊಡೆಸುತ್ತಿದ್ದಳು. ಆದರೆ ಇವೆಲ್ಲವುಗಳ ಮಧ್ಯ ಆಗೊಮ್ಮೆ ಈಗೊಮ್ಮೆ ಮನಸ್ಸನ್ನು ತಾಕುವಂಥ ತುಂಬಾ ಇಂಟರೆಸ್ಟಿಂಗ್ ವಿಷಯಗಳನ್ನು ಸಹ ಬರೆಯುತ್ತಿದ್ದಳು. ಅಂಥವುಗಳಲ್ಲಿ ರಟ್ಟಿನ ಬಾಕ್ಸಿನ ಕತೆಯೊಂದು. ನಿಮ್ಮಿ ಬರೆದ ಆ ಅನುಭವಕಥನವನ್ನು ನಾನು ಓದಿದಂತೆ ಜ್ಞಾಪಿಸಿಕೊಂಡು ಅವಳ ಧಾಟಿಯಲ್ಲಿಯೇ ನಿಮ್ಮ ಮುಂದೆ ಇಡುತ್ತಿದ್ದೇನೆ.

    ಒಂದು ಇಳಿಸಂಜೆ ನಾನು ನನ್ನ ಸ್ಕೂಟಿಯನ್ನು ತೆಗೆದುಕೊಂಡು ಮೈಸೂರಿನ ಚಾಮುಂಡಿ ಬೆಟ್ಟದಿಂದ ವಾಪಾಸಾಗುತ್ತಿದ್ದೆ. ಅವತ್ತು ಸಣ್ಣಗೆ ತುಂತುರು ಮಳೆ ಹುಯ್ಯುತ್ತಿತ್ತು. ಹಾಗೆ ಹೋಗುವಾಗ ಆ ರಸ್ತೆಯ ಪಕ್ಕದಲ್ಲಿ ಗಾರೆ ಕೆಲಸ ಮಾಡುವ ಹೆಂಗಸೊಬ್ಬಳು ತನ್ನ ಪುಟ್ಟ ಗುಡಿಸಿಲಿನಲ್ಲಿ ಕುಳಿತುಕೊಂಡು ಒಲೆ ಹೊತ್ತಿಸಲು ಹರ ಸಾಹಸ ಮಾಡುತ್ತಿದ್ದಳು ಮತ್ತು ಏನೇನೆಲ್ಲಾ ಕಸರತ್ತುಗಳನ್ನು ಮಾಡುತ್ತಿದ್ದಳು. ಅವಳು ಉಟ್ಟಿದ್ದ ಸೀರೆ ಮಾಸಿ ಹೋಗಿ ರವಿಕೆಯ ತೋಳು ಎಡಗೈ ಹತ್ತಿರ ಸ್ವಲ್ಪ ಹರಿದು ಹೋಗಿತ್ತು. ಬಹುಶಃ ಅವಳು ಆಗಷ್ಟೆ ಹೊರಗಿನ ಕೆಲಸ ಮುಗಿಸಿ ಬಂದಿದ್ದರಿಂದ ಅವಳ ಮುಖದಲ್ಲಿ ಆಯಾಸ ಎದ್ದು ಕಾಣುತ್ತಿತ್ತು. ಬಡತನ ಅವಳನ್ನು ಹಿಂಡಿ ಹಿಪ್ಪಿ ಮಾಡಿದಂತಿತ್ತು. ಅದೇಕೊ ಅವಳ ಮುಖದಲ್ಲಿನ ಮುಗ್ಧತೆ ಹಾಗು ಕಣ್ಣುಗಳಲ್ಲಿ ಸ್ಪಷ್ಟವಾಗಿ ಕಾಣುವ ಬಡತನದ ಛಾಯೆ ನನ್ನಲ್ಲಿ ತಟ್ಟನೆ ಒಂದು ಕರುಣಾ ಭಾವವನ್ನು ಮೂಡಿಸಿತು. ಎಂದೂ ಇಂಥ ಬಡತನದ ಬಿಸಿ ಅನುಭವಕ್ಕೆ ತೆರೆದುಕೊಳ್ಳದ ಶ್ರೀಮಂತ ಹುಡುಗಿಯಾದ ನನಗೆ ಏಕೋ ಆ ಹೆಂಗಸಿನ ಹೋರಾಟದ ಬದುಕು ನನ್ನನ್ನು ತಟ್ಟನೆ ಹಿಡಿದು ನಿಲ್ಲಿಸಿತು. ನಾನು ತಕ್ಷಣ ನನ್ನ ಸ್ಕೂಟಿಯನ್ನು ನಿಲ್ಲಿಸಿ ಆ ಹೆಂಗಸು ಹೇಗೆ ಒಲೆ ಹೊತ್ತಿಸಬಹುದು ಎಂದು ದೂರದಿಂದಲೇ ನೋಡುತ್ತಾ ನಿಂತೆ. ಮೊದಲು ಅವಳು ಸೌದೆಯನ್ನು ಇಟ್ಟು, ಸ್ವಲ್ಪ ಸೀಮೆ ಎಣ್ಣೆ ಸುರಿದು, ಕಡ್ಡಿ ಗೀರಿ ಬೆಂಕಿ ಹೊತ್ತಿಸಲು ನೋಡಿದಳು. ಊಹೂಂ, ಒಲೆ ಹೊತ್ತಿಕೊಳ್ಳಲಿಲ್ಲ. ಬರಿ ಹೊಗೆ ಮಾತ್ರ ಏಳುತ್ತಲೇ ಇತ್ತು. ಪಕ್ಕದಲ್ಲಿಯೇ ಇದ್ದ ರಟ್ಟಿನ ಊದುಗೊಳವೆಯನ್ನು ತೆಗೆದುಕೊಂಡು ಊದೇ ಊದಿದಳು. ಒಲೆ ಹೊತ್ತಲಿಲ್ಲ. ನಂತರ ಎಂದೋ ಆಯ್ದಿಟ್ಟಿದ್ದ ಹಾಳೆಯ ಚೂರುಗಳನ್ನು ಒಲೆಯಲ್ಲಿ ಹಾಕಿ ಹೊತ್ತಿಸಲು ನೋಡಿದಳು. ಈಗ ಬರಿ ಹೊಗೆ ಎದ್ದಿತು. ಆದರೆ ಬೆಂಕಿ ಹೊತ್ತಿಕೊಳ್ಳಲಿಲ್ಲ. ಆ ಹೊಗೆಗೆ ಅವಳು ಏದುಸಿರು ಬಿಡುತ್ತಾ ಹತ್ತಾರು ಬಾರಿ ಕೆಮ್ಮಿದಳು. ಜೊತೆಗೆ ಅವಳ ಕಣ್ಣು, ಮೂಗಿಂದ ನೀರು ಸುರಿಯಿತು. ಆಮೇಲೆ ಒಣ ಹುಲ್ಲುಕಡಿಗಳನ್ನು ತೆಗೆದುಕೊಂಡು ಒಂದಿಷ್ಟು ಪುರಳೆ ಮಾಡಿ ಬೆಂಕಿ ಹೊತ್ತಿಸಲು ನೋಡಿದಳು. ಬರಿ ಪುರಳೆ ಮಾತ್ರ ಉರಿದು ಮುಖ್ಯವಾದ ಸೌದೆ ಹೊತ್ತಿಕೊಳ್ಳಲಿಲ್ಲ. ಬಹುಶಃ ಮಳೆಯಿಂದಾಗಿ ಸೌದೆಗಳು ಒದ್ದೆಯಾಗಿ ಹಸಿ ಹಸಿಯಾಗಿದ್ದವೆಂದು ಕಾಣುತ್ತದೆ. ಅಷ್ಟರಲ್ಲಿ ಅವಳ ಐದು ವರ್ಷದ ಕಂದಮ್ಮ “ಅಮ್ಮಾ, ಹಸಿವಾಗ್ತಿದೆ. ಬೇಗ ಮುದ್ದೆ ಬೇಯಿಸಮ್ಮ” ಎಂದು ಅವಳ ಸೆರಗನ್ನು ಹಿಡಿದು ಎಳೆದಾಗ ಅವಳ ಕರುಳು ಚುರ್ರು ಎಂದಿರಬೇಕು. ಇನ್ನು ತಡ ಮಾಡದೆ ಗುಡಿಸಿಲಿನಿಂದ ಹೊರ ಬಂದು ಹತ್ತಿರದಲ್ಲಿಯೇ ಇದ್ದ ಕಿರಾಣಿ ಅಂಗಡಿಯೆಡೆಗೆ ನಡೆದಳು. ನಾನು ಇವಳೇನು ಮಾಡಬಹುದೆಂದು ಕುತೂಹಲದಿಂದ ಅವಳನ್ನೇ ಹಿಂಬಾಲಿಸಿದೆ. ಆ ಕಿರಾಣಿ ಅಂಗಡಿಯವನ ಹತ್ತಿರ ಹೋಗಿ “ಬುದ್ಧಿ, ಇವತ್ತು ಸೌದೆಯೆಲ್ಲಾ ನೆಂದು ಹೋಗಿ ಯಾಕೋ ಒಲೆನೇ ಹತ್ಕೊಳ್ತಾ ಇಲ್ಲ. ಅದ್ಕೆ ನಿಮ್ತಾವ ಸಾಮಾನು ತುಂಬೋ ಖಾಲಿ ರಟ್ಟಿನ ಬಾಕ್ಸು ಇದ್ರೆ ಕೊಡ್ತೀರಾ ಬುದ್ಧಿ. ಅದನ್ನೇ ಒಲೆಯೊಳಗಿಟ್ಟು ಹೆಂಗೋ ಉರಿ ಹೊತ್ತಿಸಿ ನನ್ನ ಮಗೀಗೆ ಒಂದಿಷ್ಟು ಮುದ್ದೆ ಬೇಸಿ ಹಾಕ್ತಿನಿ. ಬೋ ಹಸ್ಗೊಂಡಿದೆ” ಎಂದು ಬೇಡಿದಳು. ಅವಳು ಅಷ್ಟು ಕೇಳಿದ್ದೆ ತಡ ಆ ಕಿರಾಣಿ ಅಂಗಡಿಯವ ”ರಟ್ಟಿನ ಬಾಕ್ಸಂತೆ ರಟ್ಟಿನ ಬಾಕ್ಸು. ಎಲ್ಲಿಂದ ತರೋಣಮ್ಮಾ? ಯಾವ ರಟ್ಟಿನ ಬಾಕ್ಸು ಇಲ್ಲ, ಏನೂ ಇಲ್ಲ. ಹೋಗಮ್ಮಾ ಹೋಗು. ಬಂದಬಿಟ್ಲು ದೊಡ್ಡದಾಗಿ ರಟ್ಟಿನ ಬಾಕ್ಸು ಕೇಳ್ಕೊಂಡು” ಎಂದು ಅವಳ ಮೇಲೆ ಹರಿಹಾಯ್ದ. ಪಾಪ, ಅವಳು ಬಂದ ದಾರಿಗೆ ಸುಂಕವಿಲ್ಲವೆಂದುಕೊಂಡು ಸಪ್ಪೆ ಮುಖ ಹಾಕಿಕೊಂಡು ಗುಡಿಸಿಲಿನತ್ತ ಹೆಜ್ಜೆ ಹಾಕಿದಳು. ನನಗೆ ಅವಳ ಅವಸ್ಥೆಯನ್ನು ನೋಡಿ ಮರುಕ ಉಂಟಾಯಿತು. ಹಾಗೆಯೇ ಕಿರಾಣಿ ಅಂಗಡಿಯವನ ಮೇಲೆ ಕೋಪ ಬಂತು. ನಾನೇ ನೋಡುತ್ತಿದ್ದಂತೆ ಅವನ ಬಳಿ ಅಷ್ಟೊಂದು ರಟ್ಟಿನ ಬಾಕ್ಸುಗಳಿದ್ದವು. ಅದರಲ್ಲಿ ಒಂದನ್ನು ಕೊಟ್ಟಿದ್ದರೆ ಅವನ ಗಂಟೇನು ಹೋಗುತ್ತಿತ್ತು? ಎಂದು ಬೇಸರಗೊಳ್ಳುತ್ತಾ ತಡಮಾಡದೆ ಅವನ ಬಳಿ ಹೋಗಿ “ನನಗೆ ಒಂದು ಖಾಲಿ ರಟ್ಟಿನ ಬಾಕ್ಸು ಬೇಕು. ಅತ್ಯವಶ್ಯವಾಗಿ ಬೇಕು. ನಾನದಕ್ಕೆ ದುಡ್ಡು ಕೊಡ್ತೇನೆ” ಎಂದು ಕೇಳಿದೆ. “ಅಯ್ಯೋ, ಒಂದೇನು ಮೇಡಂ, ಅಂಥಾವು ಹತ್ತು ಬೇಕಾದ್ರೆ ತಗೊಂಡು ಹೋಗಿ, ನಾವವನ್ನ ಇಟ್ಕೊಂಡು ಏನ್ ಮಾಡೋದಿದೆ? ಮತ್ತೆ ಖಾಲಿ ಬಾಕ್ಸುಗಳಿಗೆಲ್ಲ ದುಡ್ಡು ಯಾಕೆ ಮೇಡಂ? ಹಂಗೇ ಸುಮ್ನೆ ತಗೊಂಡು ಹೋಗಿ ಮೇಡಂ” ಎಂದು ನನ್ನ ನೋಡಿ ನಗುತ್ತಾ “ಏಯ್, ಮೇಡಮ್ಮೋರಿಗೆ ಒಂದಿಷ್ಟು ರಟ್ಟಿನ ಬಾಕ್ಸು ಅಂತೆ ಕೊಟ್ಟು ಕಳಿಸೋ” ಎಂದು ತನ್ನ ಕೆಲಸದ ಆಳಿಗೆ ತಾಕೀತು ಮಾಡಿದ. ಅವನು ಆ ಖಾಲಿ ರಟ್ಟಿನ ಬಾಕ್ಸುಗಳನ್ನೆಲ್ಲಾ ಸರಿಯಾಗಿ ಮಡಿಚಿ ಒಂದರ ಮೇಲೆ ಒಂದಿಟ್ಟು ದಾರವನ್ನು ಕಟ್ಟಿ ನನ್ನ ಕೈಗಿತ್ತ. ನಾನು ಆ ಅಂಗಡಿಯವನಿಗೆ ಥ್ಯಾಂಕ್ಸ್ ಹೇಳಿ ಅವಳ ಗುಡಿಸಿಲಿನತ್ತ ನಡೆದೆ.

    ನಾನು ಅವಳ ಗುಡಿಸಿಲಿನೊಳಕ್ಕೆ ನಡೆದು ಆ ಬಾಕ್ಷುಗಳನ್ನೆಲ್ಲಾ ಅವಳ ಮುಂದೆ ಇಟ್ಟು “ತಗೋ ಇವನ್ನ, ಇನ್ನೂ ಎಂಟು ದಿನಕ್ಕಾಗುವಷ್ಟು ತಂದಿದೇನೆ” ಎಂದು ಹೇಳಿದೆ. ಅವಳು ಕೃತಜ್ಞತಾ ಭಾವದಿಂದ ನನ್ನ ಕೈಯನ್ನು ಹಿಡಿದು “ಮುಂದಿನ ಜನ್ಮಾ ಅಂತಾ ಇದ್ರೆ ನಾನ್ ನಿನ್ ಹೊಟ್ಯಾಗ ಮಗಳಾಗಿ ಉಟ್ಟಿ ನಿನ್ ಉಪಕಾರ ತಿರಿಸ್ತೇನವ್ವಾ” ಎಂದು ಕಣ್ಣೀರಿಟ್ಟಳು. ನಾನು “ಅಳಬೇಡ. ಮಗೂಗೆ ಬೇಗ ಮುದ್ದೆ ಬೇಸಿ ಹಾಕಮ್ಮ” ಎಂದೆ. ಅವಳು ಮುದ್ದೆ ಬೇಯಿಸಿ ಮಗೂಗೆ ಉಣ್ಣಿಸೋವರೆಗೆ ಅವಳ ಹತ್ತಿರ ಇದ್ದು ಆ ದೃಶ್ಯಗಳನ್ನು ಕಣ್ತುಂಬಾ ತುಂಬಿಕೊಂಡು ಮನೆಯತ್ತ ಹೊರಟೆ. ರಾತ್ರಿ ಎಷ್ಟು ಹೊತ್ತಾದರು ನಿದ್ರೆ ಬರಲಿಲ್ಲ. ಏಕೋ ಈ ಘಟನೆ ನನ್ನನ್ನು ಕೊರೆಯುತ್ತಲೇ ಇತ್ತು. ಹಾಗೆ ನೋಡಿದರೆ ರಟ್ಟಿನ ಬಾಕ್ಸುಗಳು ನನಗೆ ಅವಶ್ಯವಾಗಿರಲಿಲ್ಲ. ಅವಶ್ಯವಿದ್ದದ್ದು ಆ ಹೆಂಗಸಿಗೆ. ಆದರೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಅಂಗಡಿಯವ ಅವನ್ನು ಅವಳಿಗೆ ಕೊಡದೆ ನನಗೇಕೆ ಕೊಟ್ಟ? ಅಂದರೆ ನನ್ನ ಯೌವನ, ರೂಪ ನೋಡಿ ಕೊಟ್ಟನೆ? ಅಥವಾ ನಾನು ವಿದ್ಯಾವಂತೆಯೆಂದು ಕೊಟ್ಟನೆ? ಅಥವಾ ನಾನು ಕೇಳಿದ ರೀತಿ ಆಧುನಿಕ ಬದುಕಿನ ನಯ ನಾಜೂಕತೆಯಿಂದ ಕೂಡಿತ್ತೆಂದು ಕೊಟ್ಟನೆ? ಅಥವಾ ಜನರಿಗೆ ಬಡತನ, ಬಡವರ ಗೋಳನ್ನು ಅರ್ಥ ಮಾಡಿಕೊಳ್ಳದಷ್ಟು ವ್ಯವಧಾನ, ತಾಳ್ಮೆ ಹೊರಟು ಹೋಗಿದೆಯೆ? ಅಥವಾ ಇವರೆಲ್ಲಾ ಇದ್ದವರಿಗೆ ಮಾತ್ರ ಸಹಾಯ ಮಾಡುತ್ತಾರಾ? ಉತ್ತರ ಹುಡುಕುತ್ತಿದ್ದೇನೆ. ಇನ್ನೂ ಸಿಕ್ಕಿಲ್ಲ.

    -ಉದಯ್ ಇಟಗಿ

    ಮತ್ತೆ ಬೆಂಗಳೂರಿಗೆ ಬರುತ್ತಿದ್ದೇನೆ......

  • ಮಂಗಳವಾರ, ಜುಲೈ 20, 2010
  • ಬಿಸಿಲ ಹನಿ
  • ಪ್ರತಿ ವರ್ಷದಂತೆ ಈ ವರ್ಷವೂ ಒಂದು ತಿಂಗಳ ವಾರ್ಷಿಕ ರಜೆಯ ಮೇಲೆ ಭಾರತಕ್ಕೆ ಬರುತ್ತಿದ್ದೇನೆ. ಕಳೆದ ಫೆಬ್ರುವರಿಯಲ್ಲಿ ಅಮ್ಮನ ಆರೋಗ್ಯ ಸರಿಯಿರಲಿಲ್ಲವಾದ್ದರಿಂದ ಆಕೆಯನ್ನು ನೋಡಲು ಎಂಟು ದಿನದ ಮಟ್ಟಿಗೆ ಬೆಂಗಳೂರಿಗೆ ಬಂದಿದ್ದೆನಾದರೂ ಆಗ ನನ್ನ ಬ್ಲಾಗ್ ಗೆಳೆಯರನ್ನು ಭೇಟಿಯಾಗಲು ಆಗಲಿಲ್ಲ. ಬಹಳಷ್ಟು ಸಮಯ ಅಲ್ಲಿ ಇಲ್ಲಿ ಕಳೆದು ಹೋಯಿತು. ಒಂದು ಫೋನ್ ಕೂಡ ಮಾಡಲಿಕ್ಕಾಗಲಿಲ್ಲ. ಮಾಡಿದ್ದರೆ ಗೆಳೆಯರಿಗೆ ಸಿಗಲೇಬೇಕಾಗುತ್ತಿತ್ತು. ಆದರೆ ನಾನಿರುವಷ್ಟು ದಿನಗಳನ್ನು ಹೆಂಡತಿ, ಮಗಳೊಂದಿಗೆ ಹಾಗೂ ಜೀವದ ಗೆಳೆಯ ಮಂಜುವಿನೊಂದಿಗೆ ಕಳೆಯಲು ನಿರ್ಧರಿಸಿದ್ದರಿಂದ ನಿಮಗ್ಯಾರಿಗೂ ಸಿಗಲಿಲ್ಲ ಹಾಗೂ ಫೋನ್ ಮಾಡಲಿಲ್ಲ. ಅದಕ್ಕಾಗಿ ಕ್ಷಮಿಸಿ.

    ನಾನು ನಿಮ್ಮನ್ನು ಭೇಟಿಯಾಗಿ ಅದಾಗಲೇ ಒಂದು ವರ್ಷ ಕಳೆಯಿತಲ್ಲವೆ? ಅಬ್ಬಾ, ಸಮಯ ಎಷ್ಟು ಬೇಗನೆ ಸರ ಸರನೆ ಸರಿದು ಹೋಯಿತು! ಒಂದು ವರ್ಷದಲ್ಲಿ ಎಷ್ಟೊಂದು ಬದಲಾವಣೆಗಳು ನನ್ನ ಬೆಂಗಳೂರಿನಲ್ಲಿ ಹಾಗೂ ನನಗೆ ಬೇಕಾದವರ ಜೀವನದಲ್ಲಿ! ಈ ಬದಲಾದದ್ದನ್ನು, ಬದಲಾದವರನ್ನು ಸ್ವೀಕರಿಸಲು ಸಾಕಷ್ಟು ಮಾನಸಿಕ ತಯಾರಿ ನಡೆಸಿಕೊಂಡೇ ಈಗ ಮತ್ತೆ ಬರುತ್ತಿದ್ದೇನೆ ಬೆಂಗಳೂರಿಗೆ. ಈ ಸಾರಿ ಬಂದಾಗ ಮಾಡಲು ಅಂಥ ಮುಖ್ಯವಾದ ಕೆಲಸವೇನಿಲ್ಲವಾದರೂ ನಾನು, ನನ್ನ ಹೆಂಡತಿ ಹಾಗೂ ಮಗಳು ಸೇರಿ ನಾಲ್ಕು ದಿನದ ಮಟ್ಟಿಗೆ ಸಿಂಗಾಪೂರ್ ಟ್ರಿಪ್ ಹೋಗಬೇಕಿದೆ. ಮಗಳನ್ನು ಒಳ್ಳೆ ಪ್ರೀ ನರ್ಸರಿ ಸ್ಕೂಲಿಗೆ ಹಾಕಬೇಕಿದೆ. ಮನೆ ಕಟ್ಟಲು ಅದರ ಖರ್ಚು ವೆಚ್ಚದ ಬಗ್ಗೆ ವಿಚಾರಿಸಬೇಕಿದೆ. Regional Institute of English Language, Bangalore ಇಲ್ಲಿಂದ ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿರುವ ಯಾವದಾದಾರೊಂದು ಒಳ್ಳೆ ಡಿಸ್ಟನ್ಸ್ ಮೋಡ್ ಕೋರ್ಷಿಗೆ ಸೇರಿಕೊಳ್ಳಬೇಕಾಗಿದೆ ಹಾಗೂ ಅದಕ್ಕೆ ಸಂಬಂಧಪಟ್ಟ ಹಾಗೆ ಒಂದಿಷ್ಟು ಪುಸ್ತಕಗಳನ್ನು ಕೊಳ್ಳಬೇಕಾಗಿದೆ. ಭವಿಷ್ಯದಲ್ಲಿ ಒಂದು ಫಾರ್ಮ್ ಹೌಸ್ ತೆಗೆಯಲು ಅದರ ಬಗ್ಗೆ ಮಾಹಿತಿ ಕಲೆಹಾಕಬೇಕಾಗಿದೆ. ಮನೆಗೆ ಹತ್ತಿರದ ರಂಗಶಂಕರದಲ್ಲಿ ಒಂದಿಷ್ಟು ಒಳ್ಳೆ ನಾಟಕಗಳನ್ನು ನೋಡಬೇಕಿದೆ. ವೀಕ್ಷಕರ ಮೆಚ್ಚುಗೆಗೆ ಪಾತ್ರವಾದ “ನಾನು ನನ್ನ ಕನಸು” ಸಿನಿಮಾ ವೀಕ್ಷಿಸಬೇಕಿದೆ. ಒಂದಷ್ಟು ಹೊಸ ಭಾವಗೀತೆಗಳ ಹಾಗೂ ಸಿನಿಮಾಗಳ ಸೀಡಿಗಳನ್ನು ಕೊಳ್ಳಬೇಕಿದೆ. ನಾವು ಮೂರು ಜನ (ರಾಘು, ಮಂಜು ಮತ್ತು ನಾನು) ಗೆಳೆಯರು ಕುಳಿತುಕೊಂಡು ಹರಟೆ ಹೊಡೆಯಬೇಕಿದೆ, ಹಳೆಯ ನೆನಪುಗಳನ್ನು ಆಡಲು ಬಿಡಬೇಕಿದೆ. ಮದುವೆನೇ ಆಗುವದಿಲ್ಲ ಎನ್ನುತ್ತಿದ್ದ ಗೆಳೆಯ ಮಂಜು ಮದುವೆಯಾಗಿದ್ದರಿಂದ ಅವನನ್ನು ರೇಗಿಸಬೇಕಿದೆ, ಒಂದಿಷ್ಟು ಕಾಲೆಳೆಯಬೇಕಾಗಿದೆ, ಚನ್ನಾಗಿ ಗೋಳು ಹೊಯ್ದುಕೊಳ್ಳಬೇಕಿದೆ ಹಾಗೂ ಅವನಿಂದ ಒಂದೆರಡು ಲ್ಯಾವಿಶ್ ಪಾರ್ಟಿ ತೆಗೆದುಕೊಳ್ಳಬೇಕಿದೆ. ಹಾಗೆಯೇ ಅವನೊಂದಿಗೆ ಒಂದಿಷ್ಟು ಜಗಳವಾಡುತ್ತಾ ಆತ ಮಾಡಿದ ಕೆಲವು ತಪ್ಪುಗಳಿಗೆ ಆತನನ್ನು ಬಯ್ಯಬೇಕಿದೆ, ತರಾಟೆಗೆ ತೆಗೆದುಕೊಳ್ಳಬೇಕಿದೆ. ಅವನೊಂದಿಗೆ ಆಡದೆ ಉಳಿದ ಮಾತುಗಳು ನನ್ನ ಎದೆಯೊಳಗೆ ಉಳಿದು ಹಿಂಸೆಯ ರೂಪವನ್ನು ತಾಳುವ ಮೊದಲೇ ಅವನ ಮೇಲೆ ಸ್ಪೋಟಿಸಿ ಹಗುರಾಗಬೇಕಿದೆ. ಅವನ ಹುಂಬುತನ, ನಿರ್ಲಕ್ಷತನ, ಉಡಾಫೆತನಕ್ಕೆ ಒಮ್ಮೆ ಆತನೊಂದಿಗೆ ಕುಳಿತು ಅವನ ಮೇಲಿನ ಸಿಟ್ಟು, ರೋಷ, ಕೋಪ, ತಾಪ ಎಲ್ಲವನ್ನೂ ಹೇಳಿಕೊಳ್ಳಬೇಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ತನ್ನೊಟ್ಟಿಗೆ ಕೆಲಸ ಮಾಡುತ್ತಿದ್ದ ಹುಡುಗಿಯನ್ನೇ ಮದುವೆಯಾಗುತ್ತಿದ್ದೇನೆ ಎನ್ನುವ ವಿಷಯವನ್ನು ನನ್ನಿಂದ ಏಕೆ ಮುಚ್ಚಿಟ್ಟೆ ಎಂದು ಕೇಳಬೇಕಿದೆ. ಆ ನಿಟ್ಟಿನಲ್ಲಿ ನಿನ್ನ ಮನಸ್ಸಿನಲ್ಲಿ ನನಗೆ ಕೊಟ್ಟಿರುವ ಸ್ಥಾನ ಇಷ್ಟೇನಾ? ಈ ವಿಷಯದಲ್ಲಿ ನನ್ನ ಅಭಿಪ್ರಾಯವನ್ನು ಕೇಳಬೇಕೆನಿಸಲಿಲ್ಲವೆ?” ಎಂದು ಕೇಳುತ್ತಾ ಕಟಕಟೆಯಲ್ಲಿ ನಿಲ್ಲಿಸಬೇಕಿದೆ

    .


    ಆತ ಅವನೊಟ್ಟಿಗೆ ಕೆಲಸ ಮಾಡುವ ಹುಡುಗಿಯನ್ನು ಮದುವೆಯಾಗಿದ್ದು ಖಂಡಿತ ನನಗೆ ಬೇಜಾರಿಲ್ಲ. ಅದು ಅವನ ವ್ಯಯಕ್ತಿಕ ವಿಷಯ. ಅವನಿಗಿಷ್ಟವಾದ ಹುಡುಗಿಯನ್ನೇ ಮದುವೆಯಾಗಿದ್ದಕ್ಕೆ ನನಗೆ ತುಂಬಾ ಖುಶಿಯಿದೆ. ಆದರೆ ಈ ವಿಷಯವನ್ನು ನನಗೂ ಹೇಳದೆ ಮದುವೆಯಾಗಿದ್ದು ಮಾತ್ರ ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ನಾನು ಮೊನ್ನೆ ಬೆಂಗಳೂರಿಗೆ ಬಂದಾಗ “ಉದಯ್, ಮನೆಯಲ್ಲಿ ಅಮ್ಮನಿಗೆ ಮಾಡಲಾಗುತ್ತಿಲ್ಲವಾದ್ದರಿಂದ ಹಾಗೂ ನನಗೂ ಒಂಟಿತನ ಕಾಡುತ್ತಿರುವದರಿಂದ ಮದುವೆಯಾಗಬೇಕೆಂದುಕೊಂಡಿರುವೆ” ಎಂದು ಹೇಳಿದಾಗ ನನಗೆ ಖುಶಿಯಾಗಿತ್ತು ಪರ್ವಾಗಿಲ್ಲ ಈಗಲಾದರೂ ಮನಸ್ಸು ಬದಲಾಯಿಸಿದನಲ್ಲ ಎಂದು. ಈ ಮೊದಲು ನಾನು ಲಿಬಿಯಾದಿಂದ ಅವನಿಗೆ ಫೋನ್ ಮಾಡಿದಾಗಲೆಲ್ಲಾ ಅವನು ತನ್ನ ಮದುವೆ ಬಗ್ಗೆ ಹಿಂಟ್ ಕೊಟ್ಟಿದ್ದನಾದರೂ ಇಷ್ಟೊಂದು ಸೀರಿಯಸ್ ಆಗಿದ್ದಾನೆಂದುಕೊಂಡಿರಲಿಲ್ಲ. ಏನಾದರಾಗಲಿ ಮದುವೆಯಾಗಲು ನಿರ್ಧರಿಸಿದ್ದಾನಲ್ಲ ಅಷ್ಟೇ ಸಾಕು ಎಂದು ಖುಶಿಪಟ್ಟಿದ್ದೆ. ನಾನು ಆಲ್ ದಿ ಬೆಸ್ಟ್ ಹೇಳುತ್ತಾ “ಹುಡುಗಿ ಹುಡುಕಬೇಕಾ?” ಎಂದು ಕೇಳಿದ್ದೆ. “ಹಾ, ಹೌದು ನಮ್ಮ ಮನೆಯಲ್ಲಿ ಹುಡುಕುತ್ತಿದ್ದಾರೆ” ಎಂದು ಹೇಳಿದ್ದ. ತದನಂತರ ಕೇವಲ ಎರಡೇ ತಿಂಗಳ ಅಂತರದಲ್ಲಿ ಕೆಲವೇ ಕೆಲವು ಬಂಧುಗಳ ಸಮ್ಮುಖದಲ್ಲಿ ಧರ್ಮಸ್ಥಳದಲ್ಲಿ ಸರಳ ವಿವಾಹವಾಗಿದ್ದ. ಆಗೆಲ್ಲಾ ಆತ ನನ್ನನ್ನು ಈಗಷ್ಟೆ ಹೊಸದಾಗಿ ಹುಡುಗಿಯನ್ನು ನೋಡಿ ಮದುವೆಯಾಗುತ್ತಿದ್ದೇನೆ ಎಂದು ನಂಬಿಸಿದ್ದ. ಆದರೆ ಮದುವೆಯಾಗಿ ಎಂಟು ದಿವಸದ ಮೇಲೆ ಇನ್ನೊಬ್ಬ ಗೆಳೆಯ ರಾಘು, ಮಂಜುವಿನ ಮದುವೆ ಫೋಟೋಗಳನ್ನು ಈ ಮೇಲ್ ಮೂಲಕ ಕಳಿಸಿದಾಗ ಈ ಹುಡುಗಿಯನ್ನು ಎಲ್ಲೋ ನೋಡಿದ್ದೇನಲ್ಲ ಎನಿಸಿ ನನ್ನ ಹಾರ್ಡ್ ಡಿಸ್ಕಿನಲ್ಲಿರುವ “ಮಂಜು ಫೋಟೋಸ್” ಫೋಲ್ಡರಿಗೆ ಹಾಕಬೇಕಾದರೆ ಆತನ ಹಳೆಯ ಫೋಟೊಗಳಲ್ಲಿ ಅಂದರೆ ಆತನ ಯಾವುದೋ ಟ್ರೇನಿಂಗ್ ಫೋಟೋಗಳಲ್ಲಿ ಅಕಸ್ಮಾತಾಗಿ ಈ ಹುಡುಗಿಯ ಫೋಟೋ ಕಣ್ಣಿಗೆ ಬಿತ್ತು. ಅರೆ, ಇವಳೇನಾ ಮಂಜುವಿನ ಹೆಂಡತಿ? ಇರಲಿಕ್ಕಿಲ್ಲ ಎಂದುಕೊಂಡು ಮತ್ತೆ ಮತ್ತೆ zoom ಮಾಡಿ ನೋಡಿದೆ. ಅನುಮಾನವೇ ಇಲ್ಲ. ಅದೇ ಹುಡುಗಿಯೇ! ನನಗೆ ಆಘಾತಕ್ಕಿಂತ ಹೆಚ್ಚಾಗಿ ಅಚ್ಚರಿಯಾಗಿತ್ತು. ನಾನು ಎದೆ ತಟ್ಟಿ ಹೇಳಿಕೊಳ್ಳುವ ಗೆಳೆಯ ತನ್ನ ಜೀವನದ ಅತ್ಯಂತ ಖುಶಿಯ ವಿಚಾರವನ್ನು ನನ್ನೊಂದಿಗೆ ಹಂಚಿಕೊಳ್ಳಲಾರದೆ ಉಳಿದನೆ? ಹಾಗೆ ಹಂಚಿಕೊಳ್ಳಲಾರದಂತೆ ತಡೆಹಿಡಿದಿದ್ದಾದರೂ ಏನು? ಅಥವಾ ನನ್ನೊಂದಿಗೆ ಹಂಚಿಕೊಳ್ಳುದಷ್ಟು ಅಳುಕು, ಮುಜುಗುರ ಅವನಲ್ಲಿ ಇನ್ನೂ ಇದೆಯಾ? ಹಿಂದೆ ತನಗೆ ತಕ್ಷಣ ಏನಾದರು ಆದರೆ ಅದನ್ನು ಮೊದಲು ಬಂದು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದ ಮಂಜು ಇವನೇನಾ? ತೀರ ಹಿಂದೆ ಬೇಡ, ಮೊನ್ನೆ ಮೊನ್ನೆ ನಾನು ಬೆಂಗಳೂರಿಗೆ ಬಂದಾಗ ಬೇರೆಲ್ಲವನ್ನು ಹಂಚಿಕೊಂಡವನು ಈ ವಿಷಯವನ್ನು ಏಕೆ ಮುಚ್ಚಿಟ್ಟ? ನಾವಾದರೆ ಎಲ್ಲದಕ್ಕೂ ಅವನ ಅಭಿಪ್ರಾಯ ತೆಗೆದುಕೊಳ್ಳುತ್ತೇವೆ. ಆದರೆ ಅವನೇಕೆ ಹೀಗೆ ಮಾಡಿದ? ಈ ವಿಷಯ ನನ್ನ ತಲೆಯಲ್ಲಿ ಕೊರೆಯತೊಡಗಿತ್ತು. ಬೆಂಗಳೂರಿಗೆ ಹೋದ ಮೇಲೆ ಕೇಳೋಣವೆಂದುಕೊಂಡಿದ್ದೆ. ಆದರೆ ತಡೆಯಲಾಗಲಿಲ್ಲ. ತಕ್ಷಣ ಫೋನ್ ಮಾಡಿ ಕೇಳಿಯೇಬಿಟ್ಟೆ. ಆಗವನು ಹಿಂದೆ ಹುಡುಗಿಯೋರ್ವಳನ್ನು ಪ್ರೀತಿಸಿದ್ದು, ಆ ವಿಷಯದಲ್ಲಿ ನನ್ನ ಸಹಾಯ ಕೇಳಿದ್ದು, ಕಾರಣಾಂತರಗಳಿಂದ ಅದು ತಪ್ಪಿ ಹೋದದ್ದು, ಆಮೇಲೆ ಅವಾಗವಾಗ ನಾವು ಅವನನ್ನು ರೇಗಿಸುತ್ತಿದ್ದುದು, ತಮಾಷೆ ಮಾಡುತ್ತಿದ್ದುದು ಎಲ್ಲವನ್ನು ಹೇಳುತ್ತಾ ಈ ಕಾರಣಕ್ಕಾಗಿ ಎಲ್ಲ ಆದ ಮೇಲೆ ಹೇಳಬೇಕೆಂದುಕೊಂಡಿದ್ದೆ ಎಂದು ಹೇಳಿದ. ನಾನೇಕೋ ಅವನು ಕೊಟ್ಟ ಉತ್ತರದಿಂದ ಕನ್ವಿನ್ಸ್ ಆಗಲಿಲ್ಲ. ಅಸಲಿಗೆ ನಾವು ಒಬ್ಬರೊನ್ನಬ್ಬರನ್ನು ಎಷ್ಟು ಸಲ ರೇಗಿಸಿಲ್ಲ! ಅವನ ಕೊಟ್ಟ ಉತ್ತರ ತೀರ ಉಡಾಫೆಯದು ಅನಿಸಿತು. ಈಗ ಆ ವಿಷಯವನ್ನು ಕೆದಕಬೇಕಿದೆ. ಜೀವದ ಗೆಳೆಯ ಎಂಬ ಹಕ್ಕಿನಿಂದ ಕೇಳಬೇಕಾದ್ದನ್ನೆಲ್ಲಾ ಕೇಳಬೇಕಿದೆ ಹೇಳಬೇಕಾದ್ದನ್ನೆಲ್ಲಾ ಹೇಳಬೇಕಿದೆ. ಮೂರು ತಿಂಗಳಿನಿಂದ ಸ್ವಗತವಾಗಿಯೇ ಉಳಿದ ಮನದ ಮಾತುಗಳನ್ನು ಆತನ ಮುಂದೆ ಸಂವಾದಕ್ಕಿಡಬೇಕಿದೆ. ಫಲಿತಾಂಶ ಏನಾಗಬಹುದು? ಗೊತ್ತಿಲ್ಲ.

    ಇನ್ನುಳಿದಂತೆ ಬ್ಲಾಗ್ ಗೆಳೆಯರನ್ನು ಭೇಟಿಯಾಗಬೇಕಿದೆ. ಮಿಡಿಯಾ ಫ್ಲಾವರ್ ಮೋಹನ್ ಸರ್ನ್ನು ಮೀಟ್ ಮಾಡಬೇಕಿದೆ. ಬ್ಲಾಗ್ ಗೆಳೆಯ ಶಿವು ಹಾಗೂ ಪ್ರಕಾಶ್ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಬೇಕಿದೆ. ನನಗೆ ಬದುಕನಿತ್ತ ಬೆಂಗಳೂರಿನಲ್ಲಿ ಚನ್ನಾಗಿ ಸುತ್ತಾಡಬೇಕಿದೆ. ಎಂದಿನಂತೆ ಯಡಿಯೂರಿನಲ್ಲಿ ನನಗಿಷ್ಟವಾದ ಪಾನಿಪೂರಿ ತಿನ್ನಬೇಕಿದೆ. ಅಮ್ಮನ ಆರೋಗ್ಯ ವಿಚಾರಿಸಬೇಕಿದೆ. ನನ್ನ ಹೈಸ್ಕೂಲ್ ಗೆಳೆಯ ಜಗದೀಶ್ ಅಣ್ಣಿಗೇರಿ ನಾಲ್ಕೈದು ವರ್ಷಗಳಿಂದ ಟಚ್ಲ್ಲೇನ ಇಲ್ಲ. ಆತ ಮೊದಲು ಲಂಡನ್ನಗಲ್ಲಿರುವಾಗ ಆಗಾಗ ಫೋನ್ ಮಾಡುತ್ತಿದ್ದ. ಆನಂತರ ನನ್ನ ಫೋನ್ ನಂಬರ್ ಬದಲಾಯಿತು. ಆಗ ನನ್ನ ಬಳಿ ಈಮೇಲ್ ಇರಲಿಲ್ಲ. ಅವನದನ್ನೂ ತೆಗೆದುಕೊಂಡಿರಲಿಲ್ಲ. ಹೀಗಾಗಿ ಇಬ್ಬರ ಮಧ್ಯ ಸಂಪರ್ಕವೇ ಇಲ್ಲ. ಈಗ ಬೆಂಗಳೂರಿನಲ್ಲಿಯೇ ಇದ್ದಾನೆಂದು ಕೇಳಿಪಟ್ಟೆ. ಖುಶಿಯಾಯಿತು. ಹುಡುಕುವದು ಅಂಥಾ ಕಷ್ಟವೇನೂ ಆಗುವದಿಲ್ಲ. ಕಾಲೇಜು ಗೆಳೆಯರನ್ನು ನೋಡಿಕೊಂಡು ಬರಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಇನ್ನೊಬ್ಬ ಗೆಳೆಯ ರಾಘುವಿನೊಂದಿಗೆ ಒಂದಿಷ್ಟು ಕುಳಿತು ಮಾತನಾಡಬೇಕಿದೆ. ಎಷ್ಟೆಲ್ಲಾ ಇದೆ. ಇವನ್ನೆಲ್ಲಾ ಕೇವಲ ಒಂದೂವರಿ ತಿಂಗಳಲ್ಲಿ ಮಾಡಿ ಮುಗಿಸುತ್ತೇನೆಯೆ? ಗೊತ್ತಿಲ್ಲ.

    ನಾಳೆ ಅಂದರೆ ಜುಲೈ 20ರಂದು ಟ್ರಿಪೋಲಿಯಿಂದ ಹೊರಟು ಜುಲೈ 21ರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನಲ್ಲಿರುತ್ತೇನೆ. ನನ್ನ ಫೋನ್ ನಂಬರ್ - 9844549386. See you soon. Until then bye……..

    -ಉದಯ್ ಇಟಗಿ

    ತಾಯ್ತನ ವೈಭವಿಕೃತಗೊಂಡಷ್ಟು ತಂದೆತನ ವೈಭವಿಕೃತಗೊಂಡಿಲ್ಲ ಯಾಕೆ?

  • ಶನಿವಾರ, ಜೂನ್ 19, 2010
  • ಬಿಸಿಲ ಹನಿ

  • ನಾಳೆ ಅಪ್ಪನ ದಿನ. ಜಗತ್ತಿನೆಲ್ಲೆಡೆ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ದಿನ. ಆತ ನಮ್ಮನ್ನು ಹುಟ್ಟಿಸಿ ಬೆಳೆಸಿದ್ದಕ್ಕೆ, ನಮ್ಮ ಕನಸುಗಳನ್ನು ಸಾಕಾರಗೊಳಿಸಿದ್ದಕ್ಕೆ ನಮನ ಸಲ್ಲಿಸುವ ದಿನ. ಆದರೆ ಖೇದದ ಸಂಗತಿಯೆಂದರೆ ಮೊದಲಿನಿಂದಲೂ ಅಮ್ಮನ ದಿನ ವಿಶೇಷತೆ ಪಡೆದಷ್ಟು ಅಪ್ಪನ ದಿನ ಅದ್ಯಾಕೋ ಅಷ್ಟೊಂದು ವಿಶೇಷತೆಯನ್ನು ಪಡೆದೇ ಇಲ್ಲ. ಏಕೆಂದರೆ ಜಗತ್ತಿನ ಯಾವುದೇ ಭಾಗವನ್ನು ತೆಗೆದುಕೊಂಡರೂ ಅಲ್ಲಿ ಅಮ್ಮನಿಗೆ ವಿಶೆಷ ಆದ್ಯತೆ. ಅವಳಿಗೆ ಮೊದಲ ಸ್ಥಾನ. ಅಪ್ಪ ಎಷ್ಟೇ ಮಾಡಿದರೂ ಅವನಿಗೆ ಸದಾ ಎರಡನೆ ಸ್ಥಾನ. ಪುರುಷ ಪ್ರಧಾನ ಸಮಾಜದಲ್ಲೂ ಒಂದು ಕುಟುಂಬ ಕಟ್ಟಿ ಬೆಳೆಸುವಷ್ಟರಲ್ಲಿ ಅಮ್ಮನ ಪಾತ್ರವನ್ನು ಗುರುತಿಸುವಷ್ಟು ಅಪ್ಪನ ಪಾತ್ರವನ್ನು ಗುರುತಿಸುವದರಲ್ಲಿ ಏನೋ ಒಂದು ತರದ ಉದಾಸೀನ. ಅಮ್ಮ ಸರಿಯಿದ್ದರೆ ಸಾಕು. ಅಪ್ಪ ಹೇಗಿದ್ದರೇನು? ಎನ್ನುವ ಉಢಾಪೆ. ಅಚ್ಚರಿಯೆಂದರೆ ತಾಯ್ತನ ವೈಭವಿಕೃತಗೊಂಡಷ್ಟು ತಂದೆತನ ಯಾಕೆ ವೈಭವಿಕೃತಗೊಂಡಿಲ್ಲವೆಂದು?

    ಒಂದು ಕುಟುಂಬವನ್ನು ಕಟ್ಟಿ ಬೆಳೆಸುವದರಲ್ಲಿ, ಸಾಕಿ ಸಲುಹುವದರಲ್ಲಿ ಅಮ್ಮನ ಪಾತ್ರದ ಮುಂದೆ ಅಪ್ಪನದು ಗೌಣ ಅನಿಸಿಬಿಡುತ್ತದೆ. ಯಾಕೆ? ಅಂತೆಯೇ ನೀವು ಯಾವುದೇ ಸಾಹಿತ್ಯ ತೆಗೆದುಕೊಂಡರೂ ಅಲ್ಲಿ ತಾಯ್ತನ ವೈಭವಿಕೃತಗೊಂಡಷ್ಟು ತಂದೆತನ ವೈಭವಿಕೃತಗೊಂಡೇ ಇಲ್ಲ. ಯಾಕೆ? ಲೇಖಕರು, ಕವಿಗಳು ತಾಯ್ತನವನ್ನು ಹಾಡಿ ಹೊಗಳಿದಷ್ಟು ತಂದೆತನವನ್ನು ಹಾಡಿಹೊಗಳಲೇ ಇಲ್ಲ! ಯಾಕೆ? ಕಾನೂನು ಕಟ್ಟಳೆಗಳಲ್ಲೂ ಮಕ್ಕಳ ವಿಚಾರದಲ್ಲಿ ಅಮ್ಮನಿಗೇ ಅಗ್ರಸ್ಥಾನ. ಯಾಕೆ? ವಿಚ್ಛೇದನದ ಸಮಯದಲ್ಲಿ ಕೋರ್ಟು ಕೂಡ ಒಂದು ನಿರ್ಧಿಷ್ಟ ಅವಧಿಯವರೆಗೆ ಮಕ್ಕಳು ಅಮ್ಮನ ಆರೈಕೆಯಲ್ಲಿ ಬೆಳೆಯಬೇಕೆಂದು ತಾಕೀತು ಮಾಡುತ್ತದೆ. ಯಾಕೆ?

    ಇದಕ್ಕೆ ಕಾರಣ ಬಹಳ ಸ್ಪಷ್ಟವಿದೆ. ಹೆಣ್ಣಿಗೆ ಅಗಾಧ ತಾಳ್ಮೆ, ಸಹನೆ, ಪ್ರೀತಿ, ವಾತ್ಸಲ್ಯ ಇರುವದೇ ಆಗಿದೆ. ಹೆಣ್ಣಿಗಿರುವಷ್ಟು ಜವಾಬ್ದಾರಿ, ತಾಕತ್ತು ಗಂಡಿಗಿಲ್ಲ ಎನ್ನುವ ನಂಬಿಕೆಯಿದೆ. ಹಿಂದೆಲ್ಲ ಅಮ್ಮ ಮನೆಯಲ್ಲಿದ್ದುಕೊಂಡೇ ಬೆಳಿಗ್ಗೆ ಬೇಗ ಎದ್ದು ತಿಂಡಿ, ಅಡಿಗೆ ಮಾಡಿ ಗಂಡನನ್ನು ಹೊರಗೆ ದುಡಿಯಲು ಕಳಿಸುವದು, ಮಕ್ಕಳನ್ನು ಶಾಲೆಗೆ ಕಳಿಸುವದರಿಂದ ಹಿಡಿದು ಮನೆಯ ಬೇರೆಲ್ಲ ಕೆಲಸ ಮಾಡಿ ಅವರ ಆರೈಕೆ ಮಾಡುವದರಲ್ಲಿ ಅವಳು ಸೈ ಅನಿಸಿಕೊಳ್ಳುತ್ತಿದ್ದಳು. ಹೀಗಾಗಿ ಅವಳಿಗೆ ವಿಶೇಷ ಸ್ಥಾನವಿತ್ತು. ಅವಳಿಗೆ ಪ್ರೀತಿ, ಒಲವು, ಮಮಕಾರ ಸುರಿಸುವದರಲ್ಲಿ ಸಾಕಷ್ಟು ಸಮಯವಿರುತ್ತಿತ್ತು. ಆದರೆ ಅಪ್ಪನದು ತೋರ್ಪಡಿಸದ ಪ್ರೀತಿ. ಆತನದು ಸದಾ ಉರಿ ಉರಿಯುವ ದರ್ಪದ ಮುಖ. ಆತ ಹೆಗಲ ಮೇಲೆ ಎಲ್ಲಾ ಜವಾಬ್ದಾರಿಗಳನ್ನು ಹೊತ್ತು ಬಾಳಬಂಡಿ ಓಡಿಸಲು ಸಿದ್ಧನಾಗಿದ್ದರಿಂದ ಆತನೇ ಮನೆಯ ಯಜಮಾನ, ಆತನದು ಜವಾಬ್ದಾರಿಯುತ ನಡೆ. ಈ ಎಲ್ಲ ಪ್ರಕ್ರಿಯೆಯಲ್ಲಿ ಆತ ಒಂದಿಷ್ಟು ಜೋಲು ಮುಖವನ್ನಿಟ್ಟುಕೊಂಡಿದ್ದರೆ, ಮಕ್ಕಳೊಂದಿಗೆ ಅಷ್ಟಾಗಿ ಬೆರೆಯುವದರಲ್ಲಿ ಸೋತು ಹೋಗುತ್ತಿದ್ದರೆ ಅಚ್ಚರಿಯೇನಿಲ್ಲ.

    ಆದರೆ ಇಂದು ಅಪ್ಪ ಅಮ್ಮ ಇಬ್ಬರೂ ಬಹಳಷ್ಟು ಬದಲಾಗಿದ್ದಾರೆ. ಸಂಸಾರದ ಬಾಳಬಂಡಿಯ ನೊಗವನ್ನು ಅಪ್ಪ ಅಮ್ಮ ಇಬ್ಬರೂ ಸರಿ ಸಮನಾಗಿ ಹೊತ್ತಿದ್ದಾರೆ. ಸದಾ ಮನೆಯಲ್ಲೇ ಕುಳಿತು ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಅಮ್ಮ ಇಂದು ಹೊರಗೆ ದುಡಿದು ಸುಸ್ತಾಗಿ ಬರುವ ಅಮ್ಮನಾಗಿದ್ದಾಳೆ. ಸದಾ ಹೊರಗಡೆಯೇ ಉಳಿಯುತ್ತಿದ್ದ ಅಪ್ಪ ಅಮ್ಮನಂತೆ ಅಡಿಗೆ ಮನೆಗೆ ನುಗ್ಗಿ ಮಕ್ಕಳಿಗೆ ಹಾಲು ಕಾಯಿಸಿಕೊಡುತ್ತಾನೆ, ತಿಂಡಿ ಮಾಡಿಕೊಡುತ್ತಾನೆ. ಅಮ್ಮನಿಗೆ ಮನೆಗೆಲಸದಲ್ಲಿ ಸಹಾಯಮಾಡುತ್ತಾನೆ. ಅವನು ಕೂಡ ಅಮ್ಮನಂತೆ ಮಕ್ಕಳನ್ನು ಎತ್ತಿ ಆಡಿಸುತ್ತಾನೆ, ನ್ಯಾಪಿ ಬದಲಿಸುತ್ತಾನೆ, ರಚ್ಚೆ ಹಿಡಿಯುವ ಮಕ್ಕಳನ್ನು ಸಮಾಧಾನಪಡಿಸುತ್ತಾನೆ. ಅವರನ್ನು ರೆಡಿ ಮಾಡಿ ಸ್ಕೂಲಿಗೂ ಕಳಿಸುತ್ತಾನೆ. ಹೋ ವರ್ಕ್ ಮಾಡಿಸುತ್ತಾನೆ. ಅಮ್ಮನಂತೆ ಮುದ್ದು ಮಾಡುತ್ತಾನೆ, ಲಲ್ಲೆಗೆರೆಯುತ್ತಾನೆ. ಆದರೂ ಅಮ್ಮನ ಆರೈಕೆ, ಪ್ರೀತಿ, ವಾತ್ಸಲ್ಯಗಳ ನಿಟ್ಟುಸಿರುಗಳ ಮುಂದೆ ಅಪ್ಪನದು ಅಷ್ಟಾಗಿ ಲೆಕ್ಕಕ್ಕೇ ಬರುವದಿಲ್ಲ ಯಾಕೆ?
    ಇವತ್ತು ಅಪ್ಪ ಎಂದರೆ ಪ್ರೀತಿ, ಅಪ್ಪ ಎಂದರೆ ವಾತ್ಸಲ್ಯ, ಅಪ್ಪ ಎಂದರೆ ಆಸರೆ, ಅಪ್ಪ ಎಂದರೆ ನೆರಳು. ಅಪ್ಪ ಎಂದರೆ ಸ್ಪೂರ್ತಿ, ಅಪ್ಪ ಎಂದರೆ ನೆನಪುಗಳ ಆಗರ, ಅಪ್ಪ ಎಂದರೆ ಕನಸುಗಳನ್ನು ಕಟ್ಟಿ ಕೊಡುವವ, ಕೊಂಡು ಕೊಡುವವ, ಹಂಚಿಕೊಳ್ಳುವವ. ಅಪ್ಪ ಎಂದರೆ ಸ್ನೇಹಿತ, ಅಪ್ಪ ಎಂದರೆ ಮಾರ್ಗದರ್ಶಿ, ಅಪ್ಪ ಎಂದರೆ ಭರವಸೆಯ ಬೆಳಕು. ಅಪ್ಪ ಎಂದರೆ ಒಂದು ಸಣ್ಣ ಗದರಿಕೆಯೊಂದಿಗೆ ಪ್ರೀತಿಯ ಮಳೆಯಲ್ಲಿ ತೋಯಿಸುವವ. ಅಪ್ಪ ಎಂದರೆ ಇನ್ನೂ ಏನೇನೋ ಆಗಿದ್ದಾನೆ! ಮಕ್ಕಳ ಬೆಳವಣಿಗೆಯಲ್ಲಿ ಆತನೂ ಅಮ್ಮನಂತೆ ಸರಿ ಸಮನಾಗಿ ಜೀವ ತೇಯುತ್ತಾನೆ. ಆದರೂ ಇನ್ನೂ ಆತ ಅಮ್ಮನಂತೆ “truth” ಆಗದೆ “myth” (Mother is a truth, father is a myth) ಆಗಿಯೇ ಗೇಲಿಗೊಳಗಾಗುತ್ತಿರುವದು ಮಾತ್ರ ವಿಷಾದಕರ!
    -ಉದಯ್ ಇಟಗಿ

    ನೆರಳು ಕೊಟ್ಟವರನ್ನು ನೆನೆಯುತ್ತಾ....................

  • ಬುಧವಾರ, ಮೇ 19, 2010
  • ಬಿಸಿಲ ಹನಿ
  • “A success has many fathers but a failure none.”
    ಹಾಗಂತ ಇಂಗ್ಲೀಷಿನಲ್ಲಿ ಒಂದು ಗಾದೆ ಮಾತಿದೆ. ಈ ಮಾತು ಬೇರೆಯವರ ಜೀವನದಲ್ಲಿ ಎಷ್ಟರಮಟ್ಟಿಗೆ ನಿಜವಾಗಿದೆಯೋ ಗೊತ್ತಿಲ್ಲ. ಆದರೆ ನನ್ನ ಜೀವನದಲ್ಲಿ ಇದು ಅಕ್ಷರಶಃ ಸತ್ಯವಾಗಿದೆ. ಏಕೆಂದರೆ ನನ್ನ ಯಶೋಗಾಥೆಯ ಹಿಂದೆ ಬಹಳಷ್ಟು ಜನರ ಶ್ರಮ, ತ್ಯಾಗ, ಸಹಾಯ, ನಿಟ್ಟುಸಿರು ಎಲ್ಲವೂ ಇದೆ. ಅವರನ್ನೆಲ್ಲ ನೆನೆಯಲೆಂದೇ ಈ ಲೇಖನವನ್ನು ಬರೆಯುತ್ತಿದ್ದೇನೆ.

    ನಾವು ಜೀವನದಲ್ಲಿ ಯಶಸ್ಸನ್ನು ಕಂಡಾಗ, ಆ ಯಶಸ್ಸಿಗೆ ಕಾರಣಿಕರ್ತರಾದವರನ್ನು ನಾವು ನೆನೆಯಲೇಬೇಕಾಗುತ್ತದೆ. ನಾವು ಬದುಕಿನಲ್ಲಿ ಗೆದ್ದು ವಿಜಯದ ಪತಾಕೆಯನ್ನು ಹಾರಿಸಿದ ಸಂದರ್ಭದಲ್ಲಿ ಅಂಥವರನ್ನು ಸ್ಮರಿಸಲೇಬೇಕಾಗುತ್ತದೆ ಹಾಗೂ ಅವರಿಗೊಂದು ಥ್ಯಾಂಕ್ಸ್ ಹೇಳಲೇಬೇಕಾಗುತ್ತದೆ. ಇಲ್ಲವಾದರೆ ನಾವು ಮನುಷ್ಯರಾಗಿರುವದರಲ್ಲಿ ಅರ್ಥವೇ ಇರುವದಿಲ್ಲ. ಹಾಗೆಂದೇ ನನ್ನ ಯಶೋಗಾಥೆಯ ಹಿಂದಿರುವ ಇವರೆಲ್ಲರ ಸಹಾಯ, ಶ್ರಮಕ್ಕೆ ಒಂದು ಕೃತಜ್ಞತೆ ಹೇಳಲೆಂದೇ ಈ ಲೇಖನವನ್ನು ಬರೆಯುತ್ತಿದ್ದೇನೆ ಹಾಗೂ ಈ ಲೇಖನವನ್ನು ಅವರೆಲ್ಲರಿಗೂ ಅರ್ಪಿಸುತ್ತಿದ್ದೇನೆ.

    ಬೇಜವಾಬ್ದಾರಿ ಅಪ್ಪನ ಮಗನಾಗಿ ಹುಟ್ಟಿದ ನನ್ನ ಬದಕು ಮೊದಲಿನಿಂದಲೂ ಹರಿದು ಹಂಚಿಹೋದ ಬದುಕು. ನಾನು ಹುಟ್ಟಿದ್ದು ತಾಯಿಯ ತವರು ಮನೆಯಲ್ಲಾದರೂ ನನ್ನ ಮೊದಲ ಮೂರು ವರ್ಷದ ಬಾಲ್ಯ ಕಳೆದಿದ್ದು ನನ್ನೂರು ಮುಧೋಳದಲ್ಲಿ, ಅಪ್ಪ ಅಮ್ಮನ ಗರಡಿಯಲ್ಲಿ. ಅಪ್ಪ ಬೇಜವಾಬ್ದಾರಿಯಾಗಿದ್ದಕ್ಕೆ ಬೇಸತ್ತು ನನ್ನ ಸಂಬಂಧಿಕರು ಇಲ್ಲಿದ್ದರೆ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗಲಾರದು ಎಂಬ ಕಾರಣಕ್ಕೆ ಮೂರೂ ಜನ ಮಕ್ಕಳನ್ನು (ನಾನು, ಅಣ್ಣ, ತಂಗಿ) ತಂತಮ್ಮ ಊರಿಗೆ ಕರೆದುಕೊಂಡು ಹೋದರು. ಆ ಪ್ರಕಾರ ನನ್ನ ಅಣ್ಣನನ್ನು ನನ್ನ ದೊಡ್ಡಪ್ಪ (ತಂದೆಯ ಅಣ್ಣ- ಹೇಮಣ್ಣ ಕವಲೂರು) ತಮ್ಮೂರು ಅಳವಂಡಿಗೆ ಕರೆದುಕೊಂಡು ಹೋದರೆ, ನನ್ನನ್ನು ನನ್ನ ದೊಡ್ಡಮ್ಮ (ತಾಯಿಯ ಅಕ್ಕ-ಸರೋಜಿನಿ ಪಾಟೀಲ್) ತಮ್ಮೂರು ಕಲಕೋಟಿಗೆ ಕರೆದುಕೊಂಡು ಬಂದರು. ನನ್ನ ತಂಗಿಯನ್ನು ತಾಯಿಯ ತವರು ಮನೆ ಸುಲ್ತಾನಪೂರದವರು ಕರೆದುಕೊಂಡು ಬಂದರು. ಹೀಗಾಗಿ ನಾವು ಮೂರೂ ಜನ ಮಕ್ಕಳು ಬಾಲ್ಯದಿಂದಲೇ ತಂದೆ ತಾಯಿಯರ ಪ್ರೀತಿ, ವಾತ್ಸಲ್ಯದಿಂದ ವಂಚಿತರಾದೆವು. ಮೊದಲಿನಿಂದಲೂ ಅಷ್ಟಾಗಿ ತಂದೆ ತಾಯಿಯರ ಸಂಪರ್ಕವಿಲ್ಲದೆ ಬೆಳೆದಿದ್ದರಿಂದ ನಮ್ಮ ಮತ್ತು ಅವರ ನಡುವೆ ಅಂಥ ಹೇಳಿಕೊಳ್ಳುವಂಥ ಸಂಪರ್ಕ ಯಾವತ್ತಿಗೂ ಏರ್ಪಡಲಿಲ್ಲ. ಹೀಗಾಗಿ ಅವರು ಅಪರೂಪಕ್ಕೊಮ್ಮೆ ನಮ್ಮನ್ನು ನೋಡಲು ಬಂದಾಗ ನಾವು ಅವರನ್ನು ಅಪರಿಚಿತರಂತೆ ನೋಡುತ್ತಿದ್ದೆವು. ಅವರೊಂದಿಗೆ ಮಾತನಾಡಲೂ ಎಂಥದೋ ಮುಜುಗರವಾಗುತ್ತಿತ್ತು. ಹೀಗಿರುವಾಗ ನಮ್ಮನ್ನು ಒಪ್ಪಿ, ಅಪ್ಪಿ ಸಂತೈಸಿದ ಎಷ್ಟೋ ಬಂಧುಗಳು ನಮಗೆ ದಾರಿ ದೀಪವಾದರು ಹಾಗೂ ಅವರೇ ತಂದೆ ತಾಯಿಗಳಾದರು.

    ನಾನು ನನ್ನ ಮೂರನೇ ವರ್ಷದಿಂದಲೇ ಕಲಕೋಟಿಯಲ್ಲಿ ದೊಡ್ಡಮ್ಮ ದೊಡ್ಡಪ್ಪರ ತುಂಬು ಆರೈಕೆಯಲ್ಲಿ ಬೆಳೆದೆ. ಅವರು ಒಂದು ಮಗುವಿಗೆ ಏನೆಲ್ಲಾ ಬೇಕೋ ಅದನ್ನೆಲ್ಲ ಧಾರೆಯೆರೆದು ಬೆಳೆಸಿದರು. ದೊಡ್ಡಮ್ಮ ದೊಡ್ಡಪ್ಪನಿಗೆ ಗಂಡುಮಕ್ಕಳಿಲ್ಲದಿದ್ದ ಕಾರಣಕ್ಕೇನೋ ನನ್ನನ್ನು ಅತಿ ಮುದ್ದಿನಿಂದ, ಪ್ರೀತಿಯಿಂದ ಬೆಳೆಸಿದರು. ನಾನು ಓದಿನಲ್ಲಿ ಸದಾ ಮುಂದಿದ್ದ ಕಾರಣಕ್ಕೆ ದೊಡ್ದಪ್ಪ (ಸೋಮನಗೌಡ ಪಾಟಿಲ್) ನಿಗೆ ನಾನು ಬಲು ಇಷ್ಟವಾಗುತ್ತಿದ್ದೆ. ಅವರು ಆಗಾಗ್ಗೆ ನನಗೆ ಕಾಮಿಕ್ಸ್ ಪುಸ್ತಕಗಳನ್ನು ತಂದುಕೊಡುತ್ತಿದ್ದರು. ಹೀಗಾಗಿ ನನಗೆ ಓದುವ ಹುಚ್ಚು ಚಿಕ್ಕಂದಿನಿಂದಲೇ ಶುರುವಾಯಿತು.

    ಈ ಕಲಕೋಟಿಯಲ್ಲಿಯೇ ನನಗೆ ಗೌರಜ್ಜಿಯ ಪರಿಚಯವಾದದ್ದು. ಈಕೆ ನಮ್ಮ ಬಂಧು ಬಳಗದವಳಲ್ಲದಿದ್ದರೂ ನಮ್ಮ ದೊಡ್ಡಪ್ಪನ ಹಿರಿಯರು ಆಕೆಯ ಗಂಡನಿಗೆ ಹಿಂದೆ ಯಾವುದೋ ಸಹಾಯ ಮಾಡಿದ್ದರಿಂದ ಅದರ ಋಣ ತೀರಿಸಲೆಂದು ಆ ಮನೆಯನ್ನು ಹದ್ದುಗಣ್ಣಿನಿಂದ ಕಾಯುವದರ ಮೂಲಕ ಸಹಾಯ ಮಾಡುತ್ತಿದ್ದಳು. ಆಕೆ ಹೆಚ್ಚು ಕಡಿಮೆ ಮನೆಯವಳಂತೆ ಆಗಿದ್ದಳು. ಈಕೆಗೆ ರಾಮಾಯಣ ಮಹಾಭಾರತದ ಕಥೆಗಳೆಲ್ಲವೂ ಗೊತ್ತಿದ್ದರಿಂದ ಅವನ್ನು ನಾನು ಪ್ರಾಥಮಿಕ ಶಾಲೆಯನ್ನು ಸೇರುವ ಮೊದಲೇ ಅವಳ ಬೊಚ್ಚ ಬಾಯಿಂದ ಕೇಳಿ ಬೆಕ್ಕಸ ಬೆರಗಾಗುತ್ತಿದ್ದೆ. ಅದಲ್ಲದೆ ದೀಪಾವಳಿ ಮತ್ತು ಗೌರಿ ಹುಣ್ಣಿಮೆಯಂದು ಅವಳು ಹಾಡುತ್ತಿದ್ದ ಸೋಬಾನೆ ಪದಗಳು ನನ್ನ ಸುಪ್ತ ಮನಸ್ಸಿನ ಮೇಲೆಲ್ಲೋ ಪರಿಣಾಮ ಬೀರಿದ್ದರಿಂದ ನಾನು ಮುಂದೆ ಬರಹಗಾರನಾಗಲು ಸಾಕಷ್ಟು ಸಹಾಯವಾದವೆಂದು ಕಾಣುತ್ತದೆ. ಅದಕ್ಕಾಗಿ ಇಲ್ಲಿ ಅವಳಿಗೆ ವಿಶೇಷವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ದೊಡ್ದಮ್ಮ ಹೊತ್ತು ಹೊತ್ತಿಗೆ ತುತ್ತಿಟ್ಟು ಮುತ್ತಿಟ್ಟು ಬಲು ಅಕ್ಕರೆಯಿಂದ ನೋಡಿಕೊಂಡರು. ಅದಲ್ಲದೆ ಅವರೂ ಸಹ ನನಗೆ ಆಗಾಗ ಬೇರೆ ಬೇರೆ ಕಥೆಗಳನ್ನು ಹೇಳಿ ಖುಶಿಪಡಿಸುತ್ತಿದ್ದರು.

    ನಾನು ಕಲಕೋಟಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ನನಗೆ ಅದೇ ಊರಿನಲ್ಲಿರುವ ನಮ್ಮ ದೂರದ ಸಂಬಂಧಿಕ ಮಲ್ಲೇಶಪ್ಪ ಸಣ್ಣಕಳ್ಳಿ ಎಂಬವರಿಂದ ಇಂಗ್ಲೀಷ ಪಾಠಾಭ್ಯಾಸ ಶುರುವಾಯಿತು. ಅವರು ವೃತ್ತಿಯಲ್ಲಿ ‘ಗ್ರಾಮ ಸೇವಕ’ ರಾಗಿ ಕೆಲಸ ಮಾಡುತ್ತಿದ್ದರೂ ಅವರಿಗೆ ಇಂಗ್ಲೀಷ ಭಾಷೆಯ ಬಗ್ಗೆ ಅಪಾರ ಜ್ಞಾನವಿತ್ತು. ದಿನಾ ಬೆಳಿಗ್ಗೆ ಹಾಗೂ ಸಾಯಂಕಾಲ ಅವರಲ್ಲಿಗೆ ಹೋಗಿ ಇಂಗ್ಲೀಷ ಪಾಠ ಹೇಳಿಸಿಕೊಳ್ಳಲು ಹೋಗುತ್ತಿದ್ದೆ. ನನಗೆ ಅದೇನೋ ಗೊತ್ತಿಲ್ಲ ನಾನು ಇಂಗ್ಲೀಷ ಭಾಷೆಯನ್ನು ಬಹಳ ಬೇಗ ಬೇಗನೆ ಕಲಿಯತೊಡಗಿದೆ. ನಿಮಗೆ ಅಚ್ಚರಿಯಾಗಬಹುದು ನಾನು ಎರಡನೇ ಕ್ಲಾಸಿನಲ್ಲಿರುವಾಗಲೇ ಮೊದಲನೇ ಭಾಷಾಂತರ ಪಾಠಮಾಲೆಯಲ್ಲಿನ ಶಬ್ಧಗಳನ್ನು ಹಾಗೂ ವಾಕ್ಯ ರಚನೆಗಳನ್ನು ಚನ್ನಾಗಿ ಕಲಿತುಕೊಂಡಿದ್ದೆ. ನಮ್ಮ ಶಾಲೆಯಲ್ಲಿ ಮೂರು ಜನ ಶಿಕ್ಷಕರಿದ್ದದರಿಂದ ಆ ಮೂವರೇ ಏಳು ಕ್ಲಾಸುಗಳನ್ನು ಹಂಚಿಕೊಂಡಿದ್ದರು. ಏಳನೆ ತರಗತಿಗೆ ಪಾಠ ಮಾಡುವ ಶಿಕ್ಷಕರು ವಿದ್ಯಾರ್ಥಿಗಳಿಗೇನಾದರು ಇಂಗ್ಲೀಷ ಪಾಠ ಓದಲು ಬಾರದಿದ್ದರೆ ನನ್ನನ್ನು ತಮ್ಮ ತರಗತಿಗೆ ಕರೆಸಿಕೊಂಡು ನನ್ನ ಕಡೆಯಿಂದ ಆ ಪಾಠ ಓದಿಸಿ ಆ ವಿದ್ಯಾರ್ಥಿಗಳಿಗೆ ಅವಮಾನ ಮಾಡುತ್ತಿದ್ದರು. ನಾನು ಅಷ್ಟರಮಟ್ಟಿಗೆ ಇಂಗ್ಲೀಷನ್ನು ಸರಾಗವಾಗಿ ಓದುವದು ಬರೆಯುವದನ್ನು ಮಾಡುತ್ತಿದ್ದೆ. ನನಗೆ ಇಂಗ್ಲೀಷ್ ಭಾಷೆಯ ಮೇಲೆ ವಿಶೇಷವಾದ ಒಲವು ಮತ್ತು ಆಸಕ್ತಿಗಳನ್ನು ಬೆಳೆಸುವದಕ್ಕೆ ಸಹಾಯ ಮಾಡಿದ ಈ ವ್ಯಕ್ತಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಇಂದು ಇಲ್ಲ. ಬಹುಶಃ ಅವರು ಇದ್ದಿದ್ದರೆ ಇಂದು ನಾನು ಇಂಗ್ಲೀಷ ಭಾಷೆಯಲ್ಲಿ ಉಪನ್ಯಾಸಕನಾಗಿ ಹೊರದೇಶದಲ್ಲಿ ಕೆಲಸ ಮಾಡುತ್ತಿದ್ದುದನ್ನು ನೋಡಿ ತುಂಬಾ ಖುಶಿ ಪಡುತ್ತಿದ್ದರೇನೋ!

    ನಾನು ನಾಲ್ಕನೇ ತರಗತಿಯಲ್ಲಿರುವಾಗಲೆ ನನ್ನ ದೊಡ್ಡಪ್ಪ ಹೃದಯಾಘಾತದಿಂದ ನಿಧನ ಹೊಂದಿ ಮನೆಯಲ್ಲಿ ಅಗಾಧ ಬದಲಾವಣೆಗಳಾದವು. ಆಗ ಇದೇ ದೊಡ್ಡಪ್ಪನ ಮಗಳು ಅಂದರೆ ನನ್ನ ಅಕ್ಕ (ಜಯಶ್ರಿ ಗೌರಿಪೂರ್) ಗದುಗಿನಲ್ಲಿ ಗಂಡನ ಮನೆಯವರ ಕಾಟಕ್ಕೆ ಬೇಸತ್ತು ಬೇರೆ ಹೋಗಬೇಕಾಗಿ ಬಂದಾಗ ಜೊತೆಯಲ್ಲಿರಲಿ ಎಂದು ನನ್ನನ್ನು ತನ್ನ ಜೊತೆ ಕರೆದುಕೊಂಡು ಹೋದಳು. ಮನೆಯ ಹತ್ತಿರದಲ್ಲಿಯೇ ಇರುವ ಶಾಲೆಗೆ ನನ್ನನ್ನು ಸೇರಿಸಲಾಯಿತು. ಅಕ್ಕ ಎಷ್ಟೊಂದು ಕಟ್ಟುನಿಟ್ಟಾಗಿದ್ದಳೆಂದರೆ ನಾನು ಶಾಲೆಯಲ್ಲಿ ಸದಾ ಮೊದಲನೇ ಸ್ಥಾನವನ್ನು ಯಾರಿಗೂ ಬಿಟ್ಟು ಕೊಡದಂತೆ ನೋಡಿಕೊಂಡಳು. ನಾನು ಶಾಲೆಯಿಂದ ಬಂದ ತಕ್ಷಣ ಆ ದಿನ ಶಾಲೆಯಲ್ಲಿ ಯಾವ್ಯಾವ ಪಾಠ ನಡೆಯಿತು ಎಂಬ ವರದಿಯನ್ನು ಒಪ್ಪಿಸಬೇಕಾಗಿತ್ತು. ಬಹುಶಃ, ಅವಳು ಇಷ್ಟೊಂದು ಕಾಳಜಿ ತೆಗೆದುಕೊಂಡಿದ್ದಕ್ಕೇನೋ ನಾನು ಏಳನೇ ತರಗತಿಯಲ್ಲಿ ಇಡಿ ಶಾಲೆಗೆ ಮೊದಲನೆಯವನಾಗಿ ತೇರ್ಗಡೆ ಹೊಂದಿದೆ. ನಂತರ ನಾನು ಎಂಟನೆ ತರಗತಿಯಿಂದ ಮಾಡೆಲ್ ಹೈಸ್ಕೂಲಿಗೆ ಸೇರಿದೆ. ಅಲ್ಲಿಯೂ ಸಹ ಅಕ್ಕ ಹತ್ತನೆ ತರಗತಿಯವರೆಗೂ ವರ್ಷ ವರ್ಷವೂ ಇಡಿ ಕ್ಲಾಸಿಗೆ ಫಸ್ಟ್ ಬರುವಂತೆ ನೋಡಿಕೊಂಡಳು. ನನ್ನ ಮಾಮಾ, ಅಂದರೆ ಅಕ್ಕನ ಗಂಡ (ಮಹದೇವಪ್ಪ ಗೌರಿಪೂರ್) ಸ್ವಲ್ಪ ಸಿಡುಕಿನ ಸ್ವಭಾವದವನಾಗಿದ್ದರೂ ನಾನು ಪ್ರತಿ ರಾತ್ರಿ ಊಟ ಮಾಡಿದೆನೋ ಇಲ್ವೋ ಎಂಬುದನ್ನು ವಿಚಾರಿಸಿ ಮಲಗುತ್ತಿದ್ದರು.


    ನನ್ನ ಅಕ್ಕ ಜಯಶ್ರೀ ಗೌರಿಪೂರ್


    ನಾನು ಗದುಗಿನಲ್ಲಿ ಓದುತ್ತಿರಬೇಕಾದರೆ ಇನ್ನೊಬ್ಬ ಮಹನಿಯರನ್ನು ನೆನೆಯದೇ ಹೋದರೆ ಮಹಾಪರಾಧವಾಗುತ್ತದೆ. ಅವರೆಂದರೆ ಅಣ್ಣಿಗೇರಿ ಸರ್. ಶ್ರಿಯುತ ಬಿ.ಜಿ. ಅಣ್ಣಿಗೇರಿಯವರ ಹೆಸರು ಇಡಿ ಗದುಗಿನ ತುಂಬಾ ಗೊತ್ತು. ಅವರು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಜೀವನ ಪರ್ಯಂತ ಬ್ರಹ್ಮಚಾರಿಯಾಗಿದ್ದುಕೊಂಡೇ ತಮ್ಮ ಜೀವನವನ್ನು ಮುಡಿಪಾಗಿಟ್ಟವರು.



    ಗದುಗಿನಲ್ಲಿ ಅವರದೊಂದು ಆಶ್ರಮವಿದೆ. ಆ ಆಶ್ರಮದಲ್ಲಿ ಬೇರೆ ಊರಿನ ಬಡ ವಿದ್ಯಾರ್ಥಿಗಳು ಇದ್ದುಕೊಂಡು ತಂತಮ್ಮ ಊರಿನಿಂದ ಬುತ್ತಿ ತರಿಸಿಕೊಂಡು ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದರು. ಅವರಿಗೆ ಉಚಿತ ವಸತಿಯಲ್ಲದೆ ಉಚಿತ ವಿದ್ಯಾಭ್ಯಾಸವನ್ನು ಸಹ ಕೊಡುತ್ತಿದ್ದರು. ದಿನಾ ಬೆಳಿಗ್ಗೆ ಐದು ಗಂಟೆಯಷ್ಟೊತ್ತಿಗೆ ಎಲ್ಲ ವಿದ್ಯಾರ್ಥಿಗಳು ಸ್ನಾನ ಮುಗಿಸಿ ಪ್ರಾರ್ಥನೆಗೆ ಬರಬೇಕು. ಆನಂತರ ಬೆಳಿಗ್ಗೆ ಏಳರಿಂದ ಹತ್ತರವರೆಗೆ ಸತತವಾಗಿ 8, 9, 10ನೇ ತರಗತಿಗಳಿಗೆ ಕ್ಲಾಸುಗಳು ಆರಂಭವಾಗುತ್ತಿದ್ದವು. ಅಣ್ಣಿಗೇರಿ ಸರ್ ಅವರದು ಗಣಿತ ಮತ್ತು ಇಂಗ್ಲೀಷ್ ಹೇಳುವದರಲ್ಲಿ ಎತ್ತಿದ ಕೈ. ಇವರಲ್ಲದೆ ಹುಣಶಿಮರದ ಸರ್, ಗಾಣಿಗೇರ ಸರ್ ಅವರು ಬೇರೆ ಕಡೆ ಕೆಲಸ ಮಾಡುತ್ತಿದ್ದರೂ ಇಲ್ಲಿಗೆ ಬಂದು ಉಚಿತವಾಗಿ ಪಾಠ ಮಾಡಿ ಹೋಗುತ್ತಿದ್ದರು. ಈ ತರದ ಕ್ಲಾಸುಗಳು ಬರಿ ಆಶ್ರಮದಲ್ಲಿರುವವರಿಗೆ ಮಾತ್ರ ಸೀಮಿತವಾಗಿರಲಿಲ್ಲ ಹೊರಗಿನಿಂದಲೂ ಸಹ ಬೇರೆ ವಿದ್ಯಾರ್ಥಿಗಳು ಹೋಗಬಹುದಿತ್ತು. ಅಂಥ ಹೊರಗಿನ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬ. ಒಂದೊಂದು ತರಗತಿಯಲ್ಲಿ ನೂರಾರು ವಿದ್ಯಾರ್ಥಿಗಳು ಇರುತ್ತಿದ್ದರು. ಒಂದೊಂದು ಸಾರಿ ಆಶ್ರಮದ ದೊಡ್ದ ಕೋಣೆಯಲ್ಲೋ ಅಥವಾ ಬಯಲಲ್ಲಿರುವ ಮರದ ಕೆಳಗೋ ತರಗತಿಗಳು ನಡೆಯುತ್ತಿರುವಾಗ ನಮಗೆಲ್ಲ ಅವು ಗುರುಕುಲ ಪದ್ಧತಿಯನ್ನು ಜ್ಞಾಪಿಸುತ್ತಿದ್ದವು. ಒಂದು ನಯಾ ಪೈಸೆಯನ್ನೂ ತೆಗೆದುಕೊಳ್ಳದೆ ನನ್ನ ಜೀವನ ರೂಪಿಸುವದರಲ್ಲಿ ಅವರ ಪಾತ್ರ ಹಿರಿದಾಗಿದೆ. ಅವರ ಸಾಧನೆಯನ್ನು ಮೆಚ್ಚಿಕೊಂಡು ಈಗ್ಗೆ ಏಳೆಂಟು ವರ್ಷಗಳ ಹಿಂದೆ ಕರ್ನಾಟಕ ಸರಕಾರ ಅವರಿಗೆ ರಾಜ್ಯ ಪ್ರಶಸ್ತಿಯನ್ನಿಟ್ಟು ಗೌರವಿಸಿದೆ. ಅಂಥ ಗಣ್ಯವ್ಯಕ್ತಿಯನ್ನು ನಾನಿಲ್ಲಿ ವಿಶೇಷವಾಗಿ ನೆನೆಯುತ್ತೇನೆ.

    ನಾನು S.S.L.C. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ತೆಗೆದುಕೊಂಡು ಪಾಸಾಗಿದ್ದರಿಂದ ಧಾರವಾಡದಲ್ಲಿ ಆಗಲೇ ವಕೀಲ ವೃತ್ತಿಯನ್ನು ಮಾಡುತ್ತಿದ್ದ ನನ್ನ ಚಿಕ್ಕಪ್ಪ (ಜಗದೀಶ್ ಇಟಗಿ) ಇನ್ನುಮುಂದೆ ನಾನು ಓದಿಸುತ್ತೇನೆಂದು ಮುಂದೆ ಬಂದನು. ನನಗೆ ಹೆಚ್ಚು ಅಂಕಗಳು ಬಂದಿದ್ದರಿಂದ ಸಹಜವಾಗಿ ಎಲ್ಲರ ಮನೆಯಲ್ಲೂ ಹೇಳುವಂತೆ ನಮ್ಮ ಮನೆಯಲ್ಲೂ ಸಾಯಿನ್ಸ್ ತೆಗೆದುಕೊಳ್ಳಲು ಹೇಳಿದರು. ಆದರೆ ನನಗೆ ಸಾಯಿನ್ಸ್ ಎಂದರೆ ಅಷ್ಟಕ್ಕಷ್ಟೆ ಇದ್ದುದರಿಂದ ನಾನು ಬೇಡ ಬೇಡವೆಂದೆ. ಯಾರೂ ಕೇಳಲಿಲ್ಲ. ಕೊನೆಗೆ ಸಾಯಿನ್ಸ್ ಗೆ ಸೇರಬೇಕಾಯಿತು. ಪರಿಣಾಮವಾಗಿ ದ್ವಿತಿಯ ಪಿ.ಯು.ಸಿ.ಯಲ್ಲಿ ಗೋತಾ ಹೊಡೆದೆ. ಬಹುಶಃ, ನಾನು ಪಾಸಾಗಿದ್ದರೆ ಅವರು ಮುಂದೆ ಓದಿಸುತ್ತಿದ್ದರೇನೋ. ಆದರೆ ನಾನು ಫೇಲಾಗಿದ್ದುದು ಅವರ ನಿರೀಕ್ಷೆಗೆ ಬಲು ಪೆಟ್ಟು ಬಿದ್ದಂತಾಗಿ ಅವರು ಕೈ ತೊಳೆದುಕೊಂಡರು. ಸರಿಯೆಂದು ಮುಂದಿನ ಎರಡು ವರ್ಷ ಅಲ್ಲಿ ಇಲ್ಲಿ ಕೆಲಸ ಮಾಡಿದೆ.


    ಪಾರ್ವತಜ್ಜಿ


    ಅದಕ್ಕೆ ನನ್ನ ಸೋದರ ಮಾವ (ವಿಶ್ವನಾಥ್ ಕರಚಣ್ಣನವರ) ಮತ್ತು ಅಜ್ಜಿ (ಪಾರ್ವತೆಮ್ಮ ಕರಚಣ್ಣನವರ) ಸಹಾಯ ಮಾಡಿದರು. ಇವರೆಲ್ಲರ ಉಪಕಾರವನ್ನು ನಾನು ಅತ್ಯಂತ ವಿನಮ್ರನಾಗಿ ನೆನೆಯುತ್ತೇನೆ.

    ನಾನು ಪಿ.ಯು.ಸಿ ಪಾಸಾಗುತ್ತೇನೋ ಇಲ್ವೋ ನನಗೇ ಗೊತ್ತಿರಲಿಲ್ಲ. ಏಕೆಂದರೆ ಪಾಸಾದರೂ ಮುಂದೆ ನನ್ನ ಓದಿನ ಜವಾಬ್ದಾರಿ ತೆಗೆದುಕೊಳ್ಳುವವರು ಯಾರೆಂದು ಆತಂಕವಾಗಿತ್ತು. ಇತ್ತ ಅಳವಂಡಿಯಲ್ಲಿದ್ದ ನನ್ನಣ್ಣ ಬಿ.ಎ. ಹಾಗೂ ಟೀಚರ್ಸ್ ಟ್ರೇನಿಂಗ್ ಮುಗಿಸಿ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದ. ಅವನಾದರು ನನ್ನ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸ್ಥಿತಿಯಲಿರಲಿಲ್ಲ. ಅಂಥ ಸಂದರ್ಭದಲ್ಲಿ ನನ್ನ ಅಳವಂಡಿ ದೊಡ್ಡಪ್ಪನ ಮಗ (ಡಾ. ರವಿ ಕವಲೂರು) ಅವನಾದಗಲೇ ವೆಟರ್ನರಿ ಡಾಕ್ಟರಾಗಿ ಆಗಷ್ಟೆ ಸರಕಾರಿ ಕೆಲಸಕ್ಕೆ ಸೇರಿದ್ದರಿಂದ ಮುಂದೆ ಬಂದು ನೀನು ಪಿ.ಯು.ಸಿ ಪಾಸಾದರೆ ಮುಂದೆ ನಾನು ಓದಿಸುತ್ತೇನೆ ಎಂದು ಹೇಳಿದ. ನನಗೆ ಎಲ್ಲಿಲ್ಲದ ಖುಶಿ! ಇನ್ನೇನು ನನ್ನ ಓದಿನ ಆಸೆ ಬಿಟ್ಟು ಬೇರೆ ಏನೋ ಒಂದು ಕೆಲಸ ಮಾಡಿಕೊಂಡಿರಬೇಕೆಂದವನಿಗೆ ಓಯಾಸಿಸ್ ತರ ಬಂದ. ಅದೇ ವರ್ಷ ಕಷ್ಟಪಟ್ಟು ಓದಿ ಅಂತೂ ಪಿ.ಯು.ಸಿ. ಪಾಸಾದೆ. ಅದೇ ವರ್ಷ ಅಂದರೆ 1995 ರಲ್ಲಿ ಅವನ ಮದುವೆಯಾಯಿತು. ಅವನ ಹೆಂಡತಿ ಅಂದರೆ ನನ್ನ ಅತ್ತಿಗೆಗೆ (ಉಷಾ ರವಿಂದ್ರ) ಮಂಡ್ಯದ ವಿ.ಸಿ.ಫಾರಂನಲ್ಲಿ ಕೆಲಸ ಸಿಕ್ಕು ಅಣ್ಣ ಗುಲ್ಬರ್ಗಾದಿಂದ ಟ್ರಾನ್ಸಫರ್ ತೆಗೆದುಕೊಂಡು ಮಂಡ್ಯಕ್ಕೆ ಬಂದನು.


    ಅತ್ತಿಗೆ ಮತ್ತು ಅಣ್ಣ

    ಆನಂತರ ನಾನು ಅವರೊಟ್ಟಿಗೆ ಇದ್ದುಕೊಂಡು ಮಂಡ್ಯದ ಪಿ.ಇಎಸ್ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗಕ್ಕೆ ಸೇರಿಕೊಂಡು ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದೆ. ಮಂಡ್ಯ ನನಗೆ ಬಹಳಷ್ಟನ್ನು ಕೊಟ್ಟಿತು. ಹೊಸ ಬದುಕು, ಹೊಸ ಜನ, ಹೊಸ ವಾತಾವರಣ ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರು ಜೀವದ ಗೆಳೆಯರನ್ನು ಕೊಟ್ಟಿತು. ಇಲ್ಲಿಯೇ ನನ್ನೊಳಗೆ ಅದಾಗಲೇ ಮೊಳಕೆಯೊಡೆದು ಮುರುಟಿಹೋದ ನನ್ನ ಬರವಣಿಗೆ ಮತ್ತೆ ಚಿಗುರತೊಡಗಿತು. ಹೀಗೆ ನನಗೆ ವಿಶೇಷ ದಾರಿದೀಪವಾದ ಹಾಗೂ ನನ್ನ ಬದುಕಿಗೆ ಒಂದು ವಿಶೇಷ ತಿರುವನ್ನು ತಂದುಕೊಟ್ಟ ಅಣ್ಣ ಅತ್ತಿಗೆಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಇದೇ ಸಂದರ್ಭದಲ್ಲಿ ನಾನು ಓದುತ್ತಿದ್ದ ಕಾಲೇಜಿನಲ್ಲಿ ನನ್ನ ಗುರುಗಳು ಹಾಗು ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರೊ. ಸುರೇಶ್ ಹೊಳ್ಳ ಅವರನ್ನು ಅತ್ಯಂತ ಹೃದಯಪೂರ್ವಕವಾಗಿ ನೆನೆಯುತ್ತೇನೆ. ಏಕೆಂದರೆ ನಾನು ತರಗತಿಯಲ್ಲಿ ಸದಾ ಚಟುವಟಿಕಿಯಿಂದ ಇರುತ್ತಿದುದಕ್ಕೆ ಅವರಿಗೆ ನನ್ನನ್ನು ಕಂಡರೆ ಅದೇನೋ ಒಲವು ಹಾಗೂ ಅಕ್ಕರೆ. ಅವರು ಆಗಾಗ ತಮ್ಮ ವಿಭಾಗಕ್ಕೆ ನನ್ನನ್ನು ಕರೆದು ಇಂಗ್ಲೀಷ್ ಕಾದಂಬರಿಗಳನ್ನು, ನಾಟಕಗಳನ್ನು, ಕವನಗಳನ್ನು ಹೇಗೆ ಓದಬೇಕು, ಅವಗಳ ಮೇಲೆ ಹೇಗೆ ಪ್ರಬಂಧಗಳನ್ನು ಬರೆಯಬೇಕು ಮತ್ತು ಅವುಗಳನ್ನು ಹೇಗೆ ವಿಮರ್ಶಿಸಬೇಕೆಂಬುದನ್ನು ಹೇಳಿಕೊಡುತ್ತಿದ್ದರು. ತಮ್ಮಲಿರುವ ಪುಸ್ತಕಗಳನ್ನು ತಂದುಕೊಟ್ಟು ಓದು ಎಂದು ಹೇಳುತ್ತಿದ್ದರು. ಇವರಲ್ಲದೆ ನಮ್ಮ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ಅನಂತ ಪದ್ಮನಾಭಯ್ಯ ಕ್ಲಾಸಿನಲ್ಲಿ ನನ್ನನ್ನು ರೇಗಿಸುತ್ತಾ ನನ್ನ ಮೇಲೆ ಉದಾಹರಣೆಗಳನ್ನು ಕೊಡುತ್ತಾ ಇತಿಹಾಸವನ್ನು ಹೇಗೆ ಓದಬೇಕೆಂಬದನ್ನು ಮನದಟ್ಟು ಮಾಡಿಕೊಟ್ಟರು. ಇವರ ಇಂಗ್ಲೀಷ ಜ್ಞಾನ ಅಪಾರವಾಗಿತ್ತಲ್ಲದೆ ಬೇರೆ ಬೇರೆ ವಿಷಯಗಳ ಬಗ್ಗೆ ಚನ್ನಾಗಿ ತಿಳಿದುಕೊಂಡಿದ್ದರು. ಹೀಗಾಗಿ ನಾವೆಲ್ಲರೂ ಅವರನ್ನು ವಾಕಿಂಗ್ ಎನ್ಸೈಕ್ಲೊಪೀಡಿಯಾ ಎಂದು ಕರೆಯುತ್ತಿದ್ದವು. ಇವರು ನನ್ನ ಭವಿಷ್ಯವನ್ನು ರೂಪಿಸುವದರಲ್ಲಿ ವಿಶೇಷವಾದ ಒಲವನ್ನು ತೋರಿಸಿದ್ದಾರೆ. ಅವರಿಗೆ ನಾನು ಚಿರಋಣಿಯಾಗಿದ್ದೇನೆ. ಇವರಲ್ಲದೆ ಅದೇ ಕಾಲೇಜಿನ ನಮ್ಮ ಇಂಗ್ಲೀಷ ವಿಭಾಗದ ಪ್ರೊ.ಮೋಹನ್ ರಾಜ್, ಪ್ರೊ.ಚಂದ್ರಶೇಖರ್, ಪ್ರೊ. ಅನೀಲ್ ಕುಮಾರ್ ಹಾಗೂ ಪ್ರೊ. ಮುರುಳಿಧರವರು ನನ್ನ ಓದಿನ ವಿಷಯದಲ್ಲಿ ಸಾಕಷ್ಟು ಮಾರ್ಗದರ್ಶನ ಮಾಡಿದ್ದರಿಂದ ಅವರೆಲ್ಲರಿಗೂ ನನ್ನ ನಮನಗಳನ್ನು ಸಲ್ಲಿಸುತ್ತೇನೆ.

    ನಾನು ಮಂಡ್ಯದಲ್ಲಿ ಬಿ.ಎ ಮುಗಿಸಿದ ಮೇಲೆ ಎಂ.ಎ.ಮಾಡಬೇಕಿತ್ತು. ಅದಕ್ಕಾಗಿ ಮೈಸೂರು ವಿಶ್ವವಿದ್ಯಾಲಯಕ್ಕೆ ಹೋಗಬೇಕಿತ್ತು. ಅಣ್ಣ ಅತ್ತಿಗೆಯರಿಬ್ಬರೂ ಇಲ್ಲೇ ಇದ್ದುಕೊಂಡು ಮಾಡೆಂದರು. ಆದರೆ ಅವರಿಗೆ ಈಗಾಗಲೇ ಮೂರು ವರ್ಷ ಹೊರೆಯಾಗಿದ್ದರಿಂದ ಮತ್ತೆರಡು ವರ್ಷ ಹೊರೆಯಾಗಲು ನನ್ನ ಮನಸ್ಸೇಕೋ ಒಪ್ಪಲಿಲ್ಲ. ಅಷ್ಟೊತ್ತಿಗಾಗಲೆ ನನ್ನ ಸ್ವಂತ ಅಣ್ಣನಿಗೆ ಶಿಕ್ಷಕ ಹುದ್ದೆಯ ಸರಕಾರಿ ಕೆಲಸ ಸಿಕ್ಕಿತ್ತು. ಆದರೆ ಅದೇ ವರ್ಷ ನನ್ನ ತಂಗಿಯ ಮದುವೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರಿಂದ ಅವನನ್ನು ಮುಂದೆ ಓದಿಸು ಎಂದು ನನಗೆ ಕೇಳುವ ಹಕ್ಕಿರಲಿಲ್ಲ. ಅದಾಗಲೇ ನನ್ನ ಮನಸ್ಸಿನಲ್ಲೊಂದು ಬೆಂಗಳೂರಿಗೆ ಹೋಗಿ ಏನಾದರೊಂದು ಕೆಲಸ ಮಾಡಿ ನನ್ನ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸಬೇಕು ಎನ್ನುವ ನಿರ್ಧಾರ ಹರಳುಗಟ್ಟುತ್ತಿತ್ತು. ಅಂಥ ಸಂದರ್ಭದಲ್ಲಿ ಮಂಡ್ಯದ ವೀ.ಸಿ.ಫಾರಂನಲ್ಲಿ ಸ್ನೇಹಿತನಾದ ಮಂಜು ಅದಾಗಲೇ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಅವನು ತನ್ನ ರೂಮಿನಲ್ಲಿದ್ದುಕೊಂಡು ಕೆಲಸ ಮಾಡುತ್ತಾ ಓದು ಮುಂದುವರಿಸಬಹುದು ಎನ್ನುವ ಆಹ್ವಾನವನ್ನಿತ್ತನು. ಅಷ್ಟೇ ಅಲ್ಲದೆ ದೂರಶಿಕ್ಷಣದಲ್ಲಿ ಎಂ.ಎ ಮಾಡಲು ಅವನೇ ಖುದ್ದಾಗಿ ಫೀಸು ಕಟ್ಟಿದ. ಹಾಗೆ ನೋಡಿದರೆ ಅವನು ನನಗೆ ಅಂಥ ಆತ್ಮೀಯನಾಗಿರಲಿಲ್ಲ. ಆದರೆ ಬೆಂಗಳೂರಿಗೆ ಬಂದ ಮೇಲೆ ನಮ್ಮಿಬ್ಬರ ಆತ್ಮೀಯತೆಯ ಗಾಢತೆ ಹೆಚ್ಚಿತು. ಬಹುಶಃ, ಅದಕ್ಕೆ ನಮ್ಮಿಬ್ಬರ ಹಿನ್ನೆಲೆ ಹೆಚ್ಚು ಕಡಿಮೆ ಒಂದೇ ಆಗಿರುವದು ಕಾರಣವಾಗಿರಬಹುದು. ನಾನು ಇವನೊಟ್ಟಿಗೆ ಬೆಂಗಳೂರಿನಲ್ಲಿರುವಾಗ ಆತನಿಗೆ ಒಳ್ಳೆಯ ಆದಾಯವಿತ್ತು. ನನಗೋ ಅವನ ಕಾಲುಭಾಗದಷ್ಟು ಕೂಡ ಬರುತ್ತಿರಲಿಲ್ಲ. ಆಗೆಲ್ಲ ಅವನು ತನ್ನ ದುಡ್ದನ್ನು ಒಂದು ಡಬ್ಬಿಯಲ್ಲಿಟ್ಟು ನಿನಗೆ ಹೇಗೆ ಬೇಕಾದರು ಖರ್ಚು ಮಾಡೆಂದು ಹೇಳುತ್ತಿದ್ದ. ಆದರೆ ಅವನು ಕೊಟ್ಟ ಸ್ವಾತಂತ್ರ್ಯವನ್ನು ಉಪಯೋಗಪಡಿಸಿಕೊಳ್ಳಲೂ ಮುಜುಗರವಾಗುತ್ತಿದ್ದುದರಿಂದ ನನಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತೆಗೆದುಕೊಂಡು ಅವನಿಗೆ ಲೆಕ್ಕ ಕೊಡುತ್ತಿದ್ದೆ. ಆ ನಿಟ್ಟಿನಲ್ಲಿ ಅವನ ಉದಾರತನ, ಧಾರಾಳತನ ನಿಜಕ್ಕೂ ಶ್ಲಾಘನೀಯ.



    ಜೀವದ ಗೆಳೆಯ ಮಂಜು


    ನಾವಿಬ್ಬರೂ ಗಂಟೆಗಟ್ಟಲೆ ನಮ್ಮಿಬ್ಬರ ಸಮಸ್ಯೆಗಳು ಹಾಗೂ ಅವುಗಳನ್ನು ಬಗೆ ಹರಿಸಿಕೊಳ್ಳುವದರ ಬಗ್ಗೆ ಮಾತನಾಡುತ್ತಿದ್ದೆವು. ಈತ ಯಾವಾಗಲೂ ಲವಲವಿಕೆಯಿಂದ ನಗು ನಗುತ್ತಾ ಮಾತನಾಡುತ್ತಿದ್ದ. ಏನೇ ಸಮಸ್ಯೆ ಇರಲಿ ಅದನ್ನು ಸುಲಭವಾಗಿ ನಿಭಾಯಿಸುತ್ತಿದ್ದ. ನಾನು ಯಾವಾಗಲೂ ನನ್ನ ಇತಿಮಿತಿಗಳಲ್ಲಿ ಕನಸುಗಳನ್ನು ಕಾಣುತ್ತಿದ್ದೆ. ಆದರೆ ಈತನ ಕನಸುಗಳೆಲ್ಲ ತನ್ನ ಇತಿಮಿತಿಗಳ ಪರಧಿಯಾಚೆಯೇ ಇರುತ್ತಿದ್ದವು. ಆತ ಯಾವಾಗಲೂ ಹೇಳುತ್ತಿದ್ದ; ನಾವೇನಕ್ಕಾದರೂ ಕೈ ಹಾಕಿದರೆ ದೊಡ್ದದಕ್ಕೇ ಕೈ ಹಾಕಬೇಕು, ಅಂದಾಗಲೇ ನಾವು ಅನ್ಕೊಂಡಿದ್ದನ್ನು ಸಾಧಿಸಲು ಹಾಗೂ ನಮ್ಮ ಗುರಿ ಮುಟ್ಟಲು ಸಾಧ್ಯವಾಗುವದೆಂದು. ಆ ಮೂಲಕ ನನ್ನ ಬಣ್ಣಗೆಟ್ಟ ಬದುಕಿಗೆ ಒಂದಿಷ್ಟು ಬಣ್ಣ ತುಂಬಿದವನು ಇವನು. ಅಲ್ಲದೆ ನನಗೆ ಬಣ್ಣ ಬಣ್ಣದ ಕನಸುಗಳನ್ನು ಸಹ ಕಾಣಲು ಕಲಿಸಿದವನು ಇವನು. ನಾವು ಹೀಗೇ ಮಾತನಾಡುತ್ತಿರಬೇಕಾದರೆ “ಉದಯ್, ನೀನು ಒಂದಿಲ್ಲಾ ಒಂದು ದಿವಸ ವಿದೇಶಕ್ಕೆ ಹೋಗುತ್ತಿ. ನಿನಗೆ ಆ ಪ್ರತಿಭೆಯಿದೆ. ಆರಂಕಿ ಸಂಬಳ ತರುತ್ತಿ. ನಾನು ನಿನ್ನನ್ನು ಏರಪೋರ್ಟಿಗೆ ಸ್ವಾಗತ ಮಾಡಲು ಬರುತ್ತೇನೆ” ಎಂದೆಲ್ಲಾ ಹೇಳುವಾಗ ಮೈ ಜುಂ ಎನ್ನುತ್ತಿದ್ದರೂ ಬರೀ ಎಂ.ಎ ಮಾಡಿದವನಿಗೆ ವಿದೇಶಕ್ಕೆ ಹೋಗಲು ಸಾಧ್ಯವೆ? ಎಂದು ಕಲ್ಪಿಸಿಕೊಳ್ಳಲೂ ಸಾಧ್ಯವಾಗದೆ ಅವನು ಹೇಳುವದು ಯಾಕೋ ಉತ್ಪ್ರೇಕ್ಷೆ ಎನಿಸುತ್ತಿತ್ತು. ಆದರೆ ಈಗ ಆ ಕನಸು ನನಸಾಗಿದ್ದರಿಂದ ಅವನ ಮಾತುಗಳಲ್ಲಿ ಇನ್ನೂ ಹೆಚ್ಚಿನ ವಿಶ್ವಾಸ ಮೂಡಿದೆ. ನಮ್ಮಿಬ್ಬರಲ್ಲಿ ಆತ್ಮೀಯತೆ ಹೆಚ್ಚಿದಷ್ಟು ಒಬ್ಬರಿಗೊಬ್ಬರು ಜಗಳವಾಡಿದ್ದೇವೆ, ವಾದ ಮಾಡಿದ್ದೇವೆ, ಕಿತ್ತಾಡಿದ್ದೇವೆ, ಅಪಾರ್ಥ ಮಾಡಿಕೊಂಡಿದ್ದೇವೆ ಹಾಗೂ ಒಬ್ಬರಿಗೊಬ್ಬರು ಮುನಿಸಿಕೊಂಡು ಮಾತುಬಿಟ್ಟಿದ್ದೇವೆ. ಆದರೂ ಅವನ್ನೆಲ್ಲ ಮರೆತು ಮತ್ತೆ ಒಂದಾಗಿದ್ದೇವೆ. ಒಬ್ಬರಿಗೊಬ್ಬರು ಬೆಳೆಯಲು ಸಹಾಯಕವಾಗಿದ್ದೇವೆ. ಈಗಲೂ ಅಷ್ಟೆ ನಾವಿಬ್ಬರೂ ಎಲ್ಲೇ ಇದ್ದರೂ, ಹೇಗೆ ಇದ್ದರೂ ಅಮೃತವಾಹಿನಿಯೊಂದು ನಮ್ಮಿಬ್ಬರ ಎದೆಗಳ ನಡುವೆ ಹರಿಯುತ್ತಲೇ ಇರುತ್ತದೆ. ಅದಕೆಂದೇ ನನ್ನ ಹೆಂಡತಿ ನನಗೆ ಯಾವಾಗಲೂ “ಮಂಜು ನಿನ್ನ ಮೊದಲ ಹೆಂಡತಿಯೆಂದು” ಆಗಾಗ ತಮಾಷೆ ಮಾಡುವದುಂಟು. ಇದು ಮಾತ್ರವಲ್ಲದೆ ನನ್ನ ಬರವಣಿಗೆಯನ್ನು ಮೆಚ್ಚಿಕೊಂಡು ಹೀಗೆ ಬರೆಯುತ್ತಿರು ಎಂದು ಪ್ರೋತ್ಸಾಹಿಸಿದ್ದಾನೆ. ನಾನು ಬೆಂಗಳೂರಿನಲ್ಲಿ ಬೆಳೆಯಲು ಸಾಕಷ್ಟು ಸಹಾಯ ಮಾಡಿದ ಇವನನ್ನು ಎಷ್ಟು ನೆನೆದರೂ ಸಾಲದು.

    ಮಂಜು ಬಗ್ಗೆ ಹೇಳಿದ ಮೇಲೆ ನನ್ನ ಇನ್ನೊಬ್ಬ ಆತ್ಮೀಯ ಗೆಳೆಯ ರಾಘುವಿನ ಬಗ್ಗೆ ಹೇಳಲೇಬೇಕು. ಹಾಗೆ ನೋಡಿದರೆ ಈತ ಮಂಜುಗಿಂತ ಹೆಚ್ಚು ಆತ್ಮೀಯವಾಗಿದ್ದವನು. ಹಾಗೆಂದೇ ಅವನೊಂದಿಗೆ ಇವತ್ತಿಗೂ ತೀರ ಪರ್ಸನಲ್ ಎನಿಸುವಂಥ ವಿಷಯಗಳನ್ನು ಶೇರ್ ಮಡಿಕೊಳ್ಳಲು ಸಾಧ್ಯವಾಗಿರುವದು. ಮಂಜುವಿನ ಹತ್ತಿರ ಶೇರ್ ಮಾಡಿಕೊಳ್ಳುವ ಕೆಲವು ವಿಷಯಗಳನ್ನು ಇವನ ಹತ್ತಿರ ಮಾಡಿಕೊಳ್ಳಲಾಗುವದಿಲ್ಲ. ಈತನ ಹತ್ತಿರ ಶೆರ್ ಮಾಡಿಕೊಳ್ಳುವ ಕೆಲವು ವಿಷ್ಯಗಳನ್ನು ಮಂಜುವಿನ ಹತ್ತಿರ ಶೇರ್ ಮಾಡಿಕೊಳ್ಳಲಾಗುವದಿಲ್ಲ. ಈತನ ಮನೆ ಇದ್ದದ್ದು ಬೆಂಗಳೂರಿನಲ್ಲಿ. ಆದರೆ ಕೆಲಸ ಮಾಡುತ್ತಿದ್ದುದು ಮಂಡ್ಯದ ವೀ.ಸಿ. ಫಾರಂನಲ್ಲಿ. ಮಂಡ್ಯದ ವೀ.ಸಿ.ಫಾರಂನಲ್ಲಿ ಈತ ನನಗೆ ಏನಕ್ಕಾದರೂ ನೊವಾದಾಗ, ಅಂಕಗಳು ಕಡಿಮೆ ಬಂದಾಗ ಸಾಂತ್ವನ ಹೇಳುತ್ತಿದ್ದ ಮತ್ತು ಒಂದಿಷ್ಟು ಭರವಸೆಯನ್ನು ತುಂಬುತ್ತಿದ್ದ. ನನಗೆ ನಮ್ಮ ಅಣ್ಣ ಅತ್ತಿಗೆಯರನ್ನು ದುಡ್ಡು ಕೇಳಲು ಮುಜುಗರವಾದಾಗ ಇವನೇ ಎಷ್ಟೋ ಸಾರಿ ಕೊಟ್ಟಿದ್ದಾನೆ ಮತ್ತು ನಾನು ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ ಮೇಲೆ ಹಿಂದಿರುಗಿಸಿದ್ದೇನೆ. ಅದಲ್ಲದೆ ನಾನು ಬೆಂಗಳೂರಿಗೆ ಬಂದ ಮೇಲೆ ಎಂ.ಎ ಮುಗಿಸಿದ ತಕ್ಷಣ ಬೇರೆ ಬೇರೆ ಕಾಲೇಜುಗಳಿಗೆ ಹೋಗಿ ನನ್ನ ರೆಸ್ಯೂಮ್ ಕೊಟ್ಟು ಬರಲು ಸಹಾಯ ಮಾಡಿದ್ದಾನೆ. ಈತನೊಂದಿಗೂ ತುಂಬಾ ಸಲ ಜಗಳವಾಡಿದ್ದೇನೆ. ಆದರೆ ಎಲ್ಲವನ್ನು ಮರೆತು ಮತ್ತೆ ಒಂದಾಗಿದ್ದೇನೆ. ಇವನಿಗೂ ಕೂಡ ಅನೇಕ ಥ್ಯಾಂಕ್ಸ್ ಗಳನ್ನು ಹೇಳುತ್ತೇನೆ.


    ನಾನು ಮತ್ತು ರಾಘು


    ನನ್ನ ಹೆಂಡತಿ ರೇಖಾ ಬಗ್ಗೆ ಎಷ್ಟು ಹೆಳಿದರೂ ಕಮ್ಮಿಯೇ! ಅವಳ ಅತಿಯಾದ ಕೋಪ, ಹಟ ಕಿರಿ ಕಿರಿಯೆನಿಸಿದರೂ ಅವಳ ಮಗುವಿನಂಥ ಮನಸ್ಸಿಗೆ ಸೋತು ಹೋಗುತ್ತೇನೆ. ನಾನು ಲಿಬಿಯಾಗೆ ಹೋಗುವಾಗ “ನಾನು, ಮನೆ ಮತ್ತು ಮಗಳು ಭೂಮಿ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ, ನೀನು ನೆಮ್ಮದಿಯಾಗಿ ಹೋಗಿ ಬಿಟ್ಟು ಬಾ” ಎಂದು ನಿರಾಂತಕವಾಗಿ ಕಳಿಸಿಕೊಟ್ಟಾಕೆ. ಬೇರೆಯವರ ಹೆಂಡತಿಯರ ತರ ನನ್ನನ್ನು ಒಡವೆ, ವಸ್ತ್ರ ಎಂದು ಯಾವುದಕ್ಕೂ ಪೀಡಿಸಿದವಳಲ್ಲ. ನನ್ನ ಕನಸುಗಳನ್ನು ಬೆಳೆಸಿದ್ದಾಳೆ. ನಾನು ಏನೇ ಮಾಡಿದರೂ ಅದಕ್ಕೆ ಸೈ ಎಂದಿದ್ದಾಳೆ. ಆಗಾಗ ದುಡ್ಡಿನ ಸಹಾಯ ಮಾಡಿದ್ದಾಳೆ. ನನ್ನ ಬರವಣಿಗೆಯನ್ನು ಮೆಚ್ಚಿಕೊಂಡು ಹುರಿದುಂಬಿಸಿದ್ದಾಳೆ. ಮನೆಯನ್ನು ನನ್ನ ಅನುಪಸ್ಥಿತಿಯಲ್ಲಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾಳೆ. ಮಗಳು ಭೂಮಿಯನ್ನು ಚನ್ನಾಗಿ ಬೆಳೆಸಿದ್ದಾಳೆ. ಇದಕ್ಕಿಂತ ಹೆಚ್ಚಿಗೇನು ಬೇಕು ಒಬ್ಬ ಗಂಡನಿಗೆ? ಹೀಗಾಗಿ ಅವಳಿಗೆ “ನಿನ್ನ ಪ್ರೀತಿಗೆ, ಅದರ ರೀತಿಗೆ ನನ್ನ ಕಣ್ಣ ಹನಿಗಳೇ ಕಾಣಿಕೆ” ಎಂದು ಹೇಳುತ್ತೆನೆ.


    ನಾನು ನನ್ನ ಹೆಂಡತಿ


    ಇನ್ನು ನನ್ನ ಭಾವಮೈದುನ ವೆಂಕಟೇಶ್ ಮತ್ತು ನನ್ನ ಅತ್ತೆ ಮಂಗಲಗೌರಮ್ಮನವರ ಸಹಾಯ ದೊಡ್ದದು. ನನ್ನ ಭಾವಮೈದುನ ಸ್ವಭಾವತಃ ತುಂಬಾ ಮೃದು. ಅವರು ನಾನು ಲಿಬಿಯಾಗೆ ಬರುವಾಗ “ರೇಖಾ ಮತ್ತು ಮಗಳ ಭೂಮಿ ಚಿಂತೆ ಬಿಡಿ. ನಾವು ನೋಡಿಕೊಳ್ಳುತ್ತೇವೆ” ಎಂದು ಹೇಳಿ ಕಳಿಸಿಕೊಟ್ಟವರು. ಅಲ್ಲದೇ ನನ್ನ ಮಗಳು ಭೂಮಿಯನ್ನು ಆಗಾಗ್ಗೆ ತಮ್ಮ ಮನೆಯಲ್ಲಿಟ್ಟುಕೊಂಡು ಚನ್ನಾಗಿ ನೋಡಿಕೊಂಡಿದ್ದಾರೆ. ಇವರಿಗೆ ನನ್ನ ವಿಶೇಷವಾದ ಥ್ಯಾಂಕ್ಸ್ ಹೇಳುತ್ತೇನೆ.

    ಇನ್ನು ನಾನು ಲಿಬಿಯಾಗೆ ಹೋಗಬೇಕಾದರೆ ನನ್ನ ಬಳಿ ಪಾಸ್ಪೋರ್ಟ್ ಇರಲಿಲ್ಲ. ಅದನ್ನು ತತ್ಕಾಲ್ ಸ್ಕೀಂನಲ್ಲಿ ತೆಗೆಸಿಕೊಡಲು ಸಹೋದ್ಯೋಗಿ ಹರೀಶನ ತಂದೆ ಗಂಗಾಧರವರು ತುಂಬಾ ಸಹಾಯ ಮಾಡಿದರು. ಅವರು ಬೆಂಗಳೂರಿನ ಪೋಲಿಷ್ ಕಚೇರಿಯ ವಿಭಾಗವೊಂದರಲ್ಲಿ D.Y.S.P ಆಗಿ ಕೆಲಸ ಮಾಡುತ್ತಿದ್ದರು. ಅವರು ಬೆಂಗಳೂರಿನ ಪೋಲಿಷ್ ಕಮೀಷನರ್ ಆಫೀಸಿನಲ್ಲಿರುವ A.C.P ರಘುವೀರ್ ಅವರಿಗೆ ಫೋನ್ ಮಾಡಿ ನನಗೆ ಸಹಾಯ ಮಾಡಲು ಹೇಳಿದರು. A.C.P. ರಘುವೀರ್ ಅವರು ಗಂಗಾಧರವರು ಹೇಳಿದ್ದಾರೆ ಎಂಬ ಕಾರಣಕ್ಕೆ ವಿಶೇಷವಾದ ಆಸಕ್ತಿ ವಹಿಸಿ ನನಗೆ ಬೇಗ ಬೇಗನೆ ಪೋಲಿಷ್ ವೆರಿಫಿಕೇಶನ್ ಮುಗಿಸಿ ಕೇವಲ ಎಂಟೇ ದಿನದಲ್ಲಿ ನನಗೆ ಪಾಸ್ಪೋರ್ಟ್ ಸಿಗುವಂತೆ ಮಾಡಿಕೊಟ್ಟರು. ಶ್ರೀಯುತ ಗಂಗಾಧರ್ ಹಾಗೂ ಶ್ರೀಯುತ ರಘುವೀರ್- ಇವರಿಬ್ಬರ ಸಹಾಯವಿರದಿದ್ದರೆ ಖಂಡಿತ ನನಗೆ ಪಾಸ್ಪೋರ್ಟ್ ಸಿಗುತ್ತಿರಲಿಲ್ಲ ಹಾಗೂ ನಾನು ಲಿಬಿಯಾಗೆ ಬರಲಾಗುತ್ತಿರಲಿಲ್ಲ. ಹೀಗಾಗಿ ಇವರಿಬ್ಬರನ್ನು ನಿತ್ಯವೂ ನೆನೆಯುತ್ತಿರುತ್ತೇನೆ.

    ನಾನು ಲಿಬಿಯಾಗೆ ಬರಬೇಕಾದರೆ ಒಂದಿಷ್ಟು ದುಡ್ದಿನ ಸಹಾಯ ಮಾಡಿದ ನನ್ನಣ್ಣ ಪ್ರಕಾಶ್ ಮತ್ತು ನನ್ನ ಅಕ್ಕನ ಮಗ ರಾಜಾನಿಗೆ ವಿಶೇಷವಾದ ನಮನಗಳನ್ನು ಸಲ್ಲಿಸುತ್ತೇನೆ. ಒಂದೊಂದು ಸಾರಿ ಮಗಳು ಭೂಮಿ ಹುಶಾರು ತಪ್ಪಿದಾಗ ಬೆಳಿಗ್ಗೆಯೇ ಓಡಿ ಬಂದು ಆಸ್ಪತ್ರೆಗೆ ಸೇರಿಸಿದ ಹಾಗೂ ರೇಖಾಗೆ ಮೈನರ್ ಆಕ್ಷಿಡೆಂಟ್ ಆದಾಗ ಅವಳನ್ನೂ ಆಸ್ಪತ್ರೆಗೆ ಸೇರಿಸಿದ ಗೆಳೆಯ ಮಂಜುವಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಇವರಲ್ಲದೆ ನನ್ನ ಏಳಿಗೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾದ ಬೇರೆ ಎಲ್ಲರನ್ನೂ ಇಲ್ಲಿ ನೆನೆಯುತ್ತೇನೆ.

    ಅದಕ್ಕೇ ಹೇಳಿದ್ದು ಒಬ್ಬ ಮನುಷ್ಯನ ಯಶಸ್ಸಿನ ಹಿಂದೆ ಎಷ್ಟೊಂದು ಜನರಿರುತ್ತಾರಲ್ಲವೆ ಎಂದು. ಇವರೆಲ್ಲರ ಋಣ ನನ್ನ ಹೆಗಲ ಮೇಲಿದೆ. ಈ ಋಣವನ್ನು ತೀರಿಸುವದು ಹೇಗೆ? ಹಣದ ರೂಪದಲ್ಲಿಯೆ? ಅಥವಾ ಗಿಫ್ಟ್ ರೂಪದಲ್ಲಿಯೆ? ಹಾಗೆಲ್ಲ ಸಹಾಯವನ್ನು, ಪ್ರೀತಿಯನ್ನು ಹಣದ ರೂಪದಲ್ಲಿ ಅಳೆಯಲಾದೀತೆ? ಬರಿ ಹಣವೊಂದನ್ನೆ ನೀಡಿ ಮಾಡಿದ ಉಪಕಾರವನ್ನು, ಸಹಾಯವನ್ನು ಸಂದಾಯ ಮಾಡುವಂತಿದ್ದರೆ ನಾವೆಲ್ಲ ಋಣಮುಕ್ತರಾಗುತ್ತಿದ್ದೆವೆಯೇ? ಗೊತ್ತಿಲ್ಲ. ಈ ಋಣ ತೀರಿಸುತ್ತೇನೆಯೇ? ಅಥವಾ ಹಾಗೆ ಹೋಗುತ್ತೇನೆಯೇ? ಅದೂ ಗೊತ್ತಿಲ್ಲ.

    -ಉದಯ್ ಇಟಗಿ

    ಅವ್ವಂದಿರ ವಿಶೇಷ ದಿನಕ್ಕಾಗಿ ಅವ್ವನ ಮೇಲೆ ಒಂದಿಷ್ಟು ಪದ್ಯಗಳು

  • ಶನಿವಾರ, ಮೇ 08, 2010
  • ಬಿಸಿಲ ಹನಿ
  • ಲಂಕೇಶರ “ಅವ್ವ” ಕನ್ನಡ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲು. ಅದನ್ನು ಹೊರತು ಪಡಿಸಿ ಅವ್ವಂದಿರ ಮೇಲೆ ಬೇರೆ ಬೇರೆಯವರು ಸಹ ಬರೆದಿದ್ದಾರೆ. ಇವತ್ತು ಅವ್ವಂದಿರ ದಿನ. ಆ ವಿಶೇಷ ದಿನಕ್ಕಾಗಿ ಅವ್ವನ ಮೇಲೆ ನಮ್ಮ ತರುಣ ಕವಿಗಳು ಬರೆದ ಒಂದಿಷ್ಟು ಪದ್ಯಗಳನ್ನು ಇಂಟರ್ನೆಟ್ನದಲ್ಲಿ ಹೆಕ್ಕಿ ತೆಗೆದು ನಿಮ್ಮ ಮುಂದೆ ಇಡುತ್ತಿದ್ದೇನೆ. ಅವ್ವನ ಬಗ್ಗೆ ಭಿನ್ನ ಭಿನ್ನ ಭಾವನೆಗಳನ್ನು ವ್ಯಕ್ತಪಡಿಸುವ ಈ ಕವನಗಳು ನಿಮಗೂ ಇಷ್ಟವಾಗಬಹುದು ಎಂಬ ನಂಬಿಕೆಯಿಂದ ಇಲ್ಲಿ ಕೊಡುತ್ತಿದ್ದೇನೆ. ಓದಿ ಆನಂದಿಸಿ. ಅಂದಹಾಗೆ ಇಲ್ಲಿಯ ಕವನಗಳನ್ನು ಆಯಾಯ ಕವಿಗಳ ಒಪ್ಪಿಗೆಯಿಲ್ಲದೆ ನೇರವಾಗಿ ಅವರವರ ಬ್ಲಾಗಿನಿಂದ ಎತ್ತಿ ಹಾಕಿಕೊಂಡಿದ್ದೇನೆ. ಅವರೆಲ್ಲರೂ ನನ್ನನ್ನು ಕ್ಷಮಿಸುತ್ತಾರೆ ಎಂಬ ನಂಬಿಕೆಯಿಂದ ಅವರಿಗೆ ಒಂದು ಕೃತಜ್ಞತೆ ಹೇಳುತ್ತಿದ್ದೇನೆ.

    ಅವ್ವ ಜೀತ ಮಾಡಲಾರೆ ನಾ.....

    ಅವ್ವ ಜೀತ ಮಾಡಲಾರೆ ನಾನು
    ತುತ್ತು ಅನ್ನಕ್ಕೆ, ತುಂಡು ಬಟ್ಟೆಗೆ ಮತ್ತೇ ಈ ತುಂಡು ಬದುಕಿಗೆ...
    ಬೆಳಿಗ್ಗೆ ಎದ್ದು ಹಲ್ಲುಜ್ಜುವ ಮುಂಚೆ ಕೆಲಸದ ನೆನಪು
    ಎಲ್ಲಾದನ್ನು ಅವಸರಸರವಾಗಿ ಮುಗಿಸಿ ಓಡಿದ್ದು ಸಾಕು
    ಅವ್ವ ಜೀತ ಮಾಡಲಾರೆ ನಾನು.....
    ಈಗೀಗ ಜೀತದ ಗತಿ ಮತ್ತು ಸ್ಥಿತಿ ಬದಲಾಗಿದೆ
    ನೀಟಾಗಿರುವ ಅಂಗಿ ಮತ್ತು ಅದಕ್ಕೊಂದು ಟೈ
    ಕೈಗೊಂದು ಬ್ಯಾಗು
    ಕೃತಕ ನಗು...
    ಕೃತಕ ಮರ್ಯಾದೆ....
    ದೇಹದ ಸುವಾಸನೆ... ದುರ್ನಾತದ ಮನಸುಗಳು
    ಅವ್ವ ಜೀತ ಮಾಡಲಾರೆ ನಾ......

    - ಜಡಿ. ಜಿ
    ಕೃಪೆ: http://jadijagathu.blogspot.com/



    ಅವ್ವ

    ಕಷ್ಟದ ಕಣ್ಣೀರು ಕೋಡಿ ಹರಿದಾಗಲೂ
    ಸ್ಥೈರ್ಯ ತುಂಬಿ ಬೆಳೆಸಿದಾಕೆ,
    ಬರೀ ಸೋಲು ಕಂಡುವನಿಗೆ
    ಗೆಲುವಿನ ದಾರಿ ತೋರಿಸಿದಾಕೆ.. ಅವ್ವ

    ಗೆದ್ದು ಬಂದಾಗ...
    ಮರೆಯಲ್ಲಿ ನಿಂತು ಆನಂದಭಾಷ್ಪ ಸುರಿಸಿದಾಕೆ
    ಎಂಥ ನೋವಿನಲ್ಲೂ ನಗು ತಂದಾಕೆ
    ತಾನುಣ್ಣುವ ತುತ್ತನ್ನು
    ತನ್ನ ಕರಳು ಕುಡಿಗೆ ತಿನ್ನಿಸಿದಾಕೆ.. ಅವ್ವ

    ಮುನ್ನುಗ್ಗಲು ಕಸವು ತುಂಬಲು
    ಹಿಮ್ಮೇಳವಾಗಿ ಶಕ್ತಿ ನೀಡಿದಾಕೆ
    ರಾಗ ಕೆಟ್ಟು ಭಾವ ಸೋತಾಗ
    ತಾನೇ ತಂಬೂರಿ ಕೈಗಿತ್ತಿಕೊಂಡಾಕೆ.. ಅವ್ವ

    ಮಾತು ಕಲಿಸಿ; ನೀತಿ ತಿಳಿಸಿ
    ಸದ್ಗತಿಯ ಸಾಧ್ಯತೆ ತೋರಿಸಿದಾಕೆ
    ಸಾಧ್ಯ-ಅಸಾಧ್ಯಗಳ ತೋಳಲಾಟದಲ್ಲಿ
    ತಾನೇ ನಿಂತು ನೆರವಾದಾಕೆ.. ಅವ್ವ

    ಆದರೆ........
    ಆಕೆಗೆ ನೀ ಕೊಟ್ಟಿದ್ದಾರೂ ಏನು
    ಬರೀ ಕಣ್ಣೀರು.. ತೋರಿಸಿದ್ದು
    ವೃದ್ಧಾಶ್ರಮ ಬಾಗಿಲು...


    -ಮಲ್ಲಿಕಾರ್ಜುನ ತಿಪ್ಪಾರ



    ಅವ್ವ ಅಲ್ಲವೋ....ನಾ... ನಿನ್ನ ಅಕ್ಕ...

    ಅವ್ವ ಅಲ್ಲವೋ....
    ನಾ... ನಿನ್ನ ಅಕ್ಕ...
    ಬೆಕ್ಕು ಕಂಡರು ಪಕ್ಕನೆ ತೆಕ್ಕಿಬೀಳುವ
    ಕಪ್ಪು ಕತ್ತಲ ಪರದೆಗೂ ರೆಪ್ಪೆ ಬಿಗಿಯುವ
    ಪುಟು ಪುಟು ಹೆಜ್ಜೆಯ ಪುಕ್ಕನನ್ನು
    ಲಂಗದ ನಿರಿಗೆಯಲ್ಲಿ ಬಚ್ಚಿಟ್ಟುಕೊಂಡವಳು...
    ಮಣ್ಣು ಗೋಡೆಗೆ ಮೊಳೆ ಹೊಡೆದು
    ನಿನ್ನ ಚೋಟುದ್ದದ ಅಂಗಿ ಚಡ್ಡಿ ಸಿಕ್ಕಿಸಿ
    ಅರಳುಗಣ್ಣಿಗೆ ತುಂಬಿಸಿ
    ಚಪ್ಪಾಳೆ ತಟ್ಟಿ ಕುಣಿದವಳು....
    ಅಪ್ಪ ಕೊಟ್ಟ ಒಂದೇ ದುಡ್ಡಿಗೆ
    ಎರಡು ಬಂಬೈ ಮಿಠಾಯಿ ಗುಡ್ಡಗಳು
    ನಿಂದೆಲ್ಲ ನುಂಗಿ, ನನ್ನದೂ
    ಇಡಿಯಾಗಿ ನೆಕ್ಕಿ ನಕ್ಕಾಗ
    ದನಿ ಎತ್ತದೆ ಜೊಲ್ಲು ನುಂಗಿದವಳು....
    ಬಾಗಿಲು ದಾತಟುತ್ತಲೇ ಬಗಲೇರಿ ಕುಂತು
    ಒಲ್ಲದ ಶಾಲೆಯ ಹಾದಿಯ
    ನಡುವೆ ... ಕಲ್ಲ ಮೇಲೆ ಗುದುಮುರುಗಿ
    ಅತ್ತು ಕರೆದು ... ಚೂರಿ-ಗೀರಿ
    ಅಕ್ಕೊರು ಕಾಣುತ್ತಲೇ ಗಪ್ ಚಿಪ್....
    ಎಳೇ ಉಗುರಿನ ಗೀರೂ
    ನೆತ್ತರು ಜಿನುಗಿಸಿದ ಕೈಯ
    ಅವ್ವನ ಮುಂಚಾಚಿ
    ಲಂಗದ ಚುಂಗಿನಿಂದ ಕಣ್ಣೊತ್ತಿಕೊಂಡಾಗ...
    'ಛೀ ... ಸಣ್ಣ ತಮ್ಮ ಚೂರಿದರ
    ಬಿಕ್ಕಿ ಬಿಕ್ಕಿ ಅಳತೀಯ.......
    ಹುಚ್ಚೀ ಹಳೆ ಹುಚ್ಚಿ ಎಂದಾಗ....
    ಅವರೆ ಚಪ್ಪರದಡಿ ಅಡಗಿ .... ಉಡುಗಿ...
    ಉಫ್ ಉಫ್ ಊದಿಕೊಂಡವಳು..
    ಇಲ್ಲಿ... ಇಲ್ಲೀಗ ...
    ನನ್ನ ಖೋಲಿಯ ಗೋಡೆಯ ಮೂಲೆಗೆ
    ಕೊಟ್ಟ ಮನೆಯ ದತ್ತ ನೆನಪಿಗೆ
    ಗುರುತಾಗಿ ಉಳಿದವರ.....
    ಕೈಯ ಹಿಡಿದವರ ... ಒಡನೆ ನಡೆದವರ ....
    ಬಳಗ... ಭಾವ ಚಿತ್ರಗಳ ಸಾಲು
    ಎಲ್ಲಕೂ ಸೇರಿ ಸುತ್ತು ಬಂದ
    ಗಂಧ ಆರಿದ ಗಂಧದ ಹಾರ....
    ಕಳೆದು ಹೋದವರು ಕ್ರಮವಾಗಿ ಕುಂತಿಲ್ಲ
    ಅಲ್ಲಿ.......
    ವಯಸು ವಯಸಿನ ಸರದಿ ಸಾಲು ಅಲ್ಲ
    ಅಂಗಿ ತೊಟ್ಟ ತಂಗಿ..... ಪಟಗ ಸುತ್ತಿದ ಅಪ್ಪ....
    ಟೈ ಕಟ್ಟಿದ ಅಣ್ಣ...
    ಮುಸುಕು ಸೆರಗಿನ ಅವ್ವ ಕೊನೆಗೆ.......
    ಯಾರ ಭಾವಚಿತ್ರದ ನೋಟ
    ಯಾರ ಕಣ್ಣಿಗೆ ಉಂಟೋ
    ಬದುಕು .... ಆದರೂ... ಇದಕೂ
    ಭಾವ ಬಂಧುರದ ನಂಟು
    ಅವ್ವ ಅಲ್ಲವೋ ... ನಾ ನಿನ್ನ ಅಕ್ಕ
    ಹೇಳದೆ ಹೇಗಿರಲಿ ... ?
    ಹೆಕ್ಕದೇ ಹೇಗಿರಲಿ
    ಅದು ನನ್ನ ನೆನಪಿನ ಬಿಕ್ಕು.....
    -ಅನಸೂಯ ಸಿಧ್ಧರಾಮ
    -ಕೃಪೆ: http://bhaavabutti.blogspot.com/


    ಅವ್ವ ನೀ ಮತ್ತ್ಯಾವ ಹೆಣ್ಣಲ್ಲಿ ಸಿಗುತ್ತಿ ?

    ಕಪ್ಪು ಮಸಿ ಬಣ್ಣದ ತೊಲೆಯ ಮೇಲೆ
    ನಿಂತ ಕಟ್ಟಿಗೆಯ ಓರೆ ಸೂರು
    ಸಗಣಿ ಸಾರಿದ ಘಮ್ಮೆನ್ನುವ ಅಂಕು
    ಡೊಂಕು ನೆಲದ ಮೇಲೆ ಕೂರು

    ಅಪ್ಪನ ಸಿಟ್ಟಿನಂತೆ ಧಗಧಗಿಸುವ ಕಟ್ಟಿಗೆಯ ಒಲೆ
    ಹೊಗೆ ತುಂಬಿ ಸಿಟ್ಟು ಬಿಟ್ಟು ಹೋದ ಕಣ್ಣೀರ ಕಲೆ
    ಅಮ್ಮನ ಸುಟ್ಟು ಸುಕ್ಕುಗಟ್ಟಿದ ಕೆನ್ನೆಯ ಚರ್ಮದ ಮೇಲೆ

    ದೂರದ ಹಳ್ಳದ ತೊರೆಯಿಂದ ತಂದ ಕುಡಿಯುವ ನೀರು
    ಶಾಂತ ಮುಖದ ಹಣೆಯ ಮೇಲೆ ಮೂರು ಚಿಂತೆಯ ಗೀರು
    ಏನೂ ಕೊಟ್ಟಿಲ್ಲ ಆ ದೇವ ಅವಳಿಗೆ
    ಕೊಟ್ಟಷ್ಟೂ ಅವಳು ಕೊಟ್ಟಿದ್ದಾಳೆ ತನ್ನ ಮಕ್ಕಳಿಗೆ

    ಆಕ್ಷೇಪ ಆಸೆಗಳಿಲ್ಲ ಬದುಕಿನೊಂದಿಗೆ ತನ್ನ ಬಗ್ಗೆ
    ಎಂದೂ ಬತ್ತದ ಮಮತೆಯ ಚಿಲುಮೆ ಆ ಬುಗ್ಗೆ

    ಮಗನ ತೋಳ್ಗಳಲಿ ತನ್ನ ಬಲ ಕಂಡಳು
    ಮಗಳ ಮೂಗುತಿಯಲಿ ತನ್ನ ಸೌಂದರ್ಯ ಪಡೆದಳು
    ಏನೂ ಕೊಡದಿದ್ದರೂ ಪಡೆದಷ್ಟಕ್ಕೇ ಧನ್ಯಳು ತನ್ನ ಗಂಡನಿಗೆ
    ಬಿಸಿಲು ಮಳೆ ಚಳಿ ಎನ್ನದೇ ಬಡಿಸುವಳು ರುಚಿ ರುಚಿ ಅಡುಗೆ

    ಇದ್ದ ಅಲ್ಪ ಮೃಷ್ಟಾನ್ನ ಹಂಚಿ ನಮ್ಮನು ಉಣಿಸಿ ಪಡೆವಳು ತೃಪ್ತಿ
    ತಣ್ಣೀರು ಕುಡಿದು ಬರೀ ನೆಲದ ಮೇಲೆ ಮಲಗಿ ನೂರ್ಕಾಲ
    ಬಾಳಿದ ನನ್ನ ತಾಯಿ ಬಹು ಗಟ್ಟಿಗಿತ್ತಿ
    ಎಂದೆಲ್ಲ ಹೇಳಿದಾಗ ಮೂತಿ ಸೊಟ್ಟ ಮಾಡಿಕೊಂಡು
    ಹಾರಿ ಹೋಗಿತ್ತು ನನ್ನ ಪಾತರಗಿತ್ತಿ !
    ಅವ್ವ ನೀ ಮತ್ತ್ಯಾವ ಹೆಣ್ಣಲ್ಲಿ ಸಿಗುತ್ತಿ ?
    - ಮೊಹಮ್ದ್ ರಫಿಕ್ ನರೇಗಲ್
    - ಕೃಪೆ: http://thatskannada.oneindia.in



    ಈ ಅಪ್ಪ ಈ ಅಮ್ಮ


    ಈ ಅಮ್ಮ
    ನನ್ನ ಹಡೆದು
    ಸಾವ ಅಂಚಲ್ಲಿ ಕೊಂಚ ನಿಂತು
    ಅವತ್ತೇ ರಟ್ಟೆ ಬೀಸಿ ರೊಟ್ಟಿ ಬಡಿದಳು

    ನಮ್ಮಮ್ಮ
    ಮಲ್ಲಿಗೆ ಮುಖದ
    ಅದನೆ೦ದೂ ಮುಡಿಯದ ಓನಾಮ
    ಓದಲು ಆಕೆಗೆ ಅಕ್ಷರ ಬೇಡ
    ಕಪ್ಪು ಬಿಳುಪಿನ ಮಕ್ಕಳ ಮೈ ಸಾಕು
    ಮಾಡಲು ಆಕೆಗೆ ನೂರೆಂಟು ಕೆಲಸ
    ಆಳು ಕಾಳು ಎಮ್ಮೆ ಮನೆ ಮಕ್ಕಳು

    ಚೀರುವ ಮಗುವಿನ ಕುಂಡೆ ತೊಳೆದು
    ಅದೇ ಕೈಯಲಿ ರೊಟ್ಟಿಯ ಬಡಿವಳು
    ಒಬ್ಬೆಯ ಮೇಲೊಬ್ಬೆ
    ಮೌನದ ತುತ್ತಿಗೆ ಯಾವ ಲೆಕ್ಕ?

    ಅಮ್ಮನ ಮೇಲೆ ಹಾಡು ಕಟ್ಟಿ
    ಕತೆ ಹೇಳಿವೆ ಪದಗಳು ಒಂದಿಲ್ಲೊಂದು

    ಅಮ್ಮ ಮಗುವಿನ ತಾಯಿಯಂತೆ
    ತಂದೆಗೆ ಮಡದಿಯೆಂತೆಲ್ಲ ಇದ್ದರೆ
    ಈ ಜನ
    ಅಮ್ಮನನ್ನು ನೆನಪು ಮಾಡುತ್ತಿರಲಿಲ್ಲ

    ಅಪ್ಪನ ಮದುವೆಯಾದ ಅವಳ
    ಗೊತ್ತೇ ಆಗದಂತೆ
    ತಪ್ಪು ಮಾಡಿದ ತಪ್ಪಿಗೆ
    ಅಮ್ಮನೂ ಕಾರಣವಿರಬೇಕು
    ನಾನಿರುತ್ತಿರಲಿಲ್ಲ

    ಹಾಲು ಹೈನ ಮಾಡುವ ಅಮ್ಮ
    ಅಪ್ಪನನ್ನು ಹಾಲಲ್ಲಿ ಅದ್ದಿ
    ಮೈ ತೊಳೆದಳು

    ಅಪ್ಪನೂ ಅಷ್ಟೆ; ಪ್ರೀತಿ ಉಣಬಡಿಸಿದ
    ಅನ್ಯೋನ್ಯವಾಗಿರುವಾಗಲೆ
    ಯಾಕೋ ಏನೋ ಚೀರುವಳು ಅಮ್ಮ
    ಒಮ್ಮೊಮ್ಮೆ ರಂಪ, ಹಲವು ಸಲ ಅನುಕಂಪ

    ಇಲ್ಲ ಅಂದು ಕೇಳಲಿಲ್ಲ, ಇದೆ ಎಂದೂ ಅನ್ನಲಿಲ್ಲ
    ಊರ ಉಸಾಬರಿ ಮಾಡಲಿಲ್ಲ; ಅಗಸೆ ದಾಟಲಿಲ್ಲ
    ಯಾರ ಮಣ್ಣಿಗೂ ಹೋಗುವದು ಬಿಡಲಿಲ್ಲ
    ಕಚ್ಚೆ ಏರಿಸಿ ಗಂಡ್ರಾಮಿಯಾಗಿ ದುಡಿದಳು
    ಗಂಡಸು ಎತ್ತದಷ್ಟು ಮೇವು ಹೊರೆ ಹೊತ್ತಳು
    ಕಂದ ಹಾಕಿದ ಎಮ್ಮೆಗೆ ಮುಖ ಗಂಟಿಕ್ಕಿದಳು
    ಬೇಸಿಗೆಯಲ್ಲಿ ಖುಲ್ಲಾ ಹೊಡೆದು ಊರೂರು
    ಅಲೆದು
    ಮುಸಿಮುಸಿ ಅತ್ತಳು;ಎಲ್ಲಾ ಎಮ್ಮೆಗೆ
    ಗಾಂಧಿ ಮನೆತನದ ಹೆಸರೇ ಇಟ್ಟಳು

    ಅಪ್ಪ ನಿಜವಾಗಲೂ ಅಮ್ಮನನ್ನು
    ತುಂಬಾ ಪ್ರೀತಿಸುವವ
    ಇದು ಹೀಗೆಂದು ಒಂದು
    ಮುಂಜಾವು ನನಗೆ ಗೊತ್ತಾಯಿತು
    ಅಮ್ಮನೇನೂ ಕಡಿಮೆ ಇರಲಿಲ್ಲ!

    ಅವರ ರಾತ್ರಿಗಳು ಮೌನ ರಾಗಗಳಾಗಿ
    ಬೆಳಿಗ್ಗೆ ನನಗೆ ಅಪ್ಪನಿಗೆ
    ಉಣಬಡಿಸುವಾಗಲೆ ಗೊತ್ತಾಗುತ್ತಿತ್ತು

    ಅಪ್ಪನ ಮೈಸೂರು ಸ್ಯಾಂಡಲ್ಲು
    ಅಮ್ಮನ ಬರಿ ಮೈ ಸ್ನಾನ
    ನನ್ನಲ್ಲಿ ಗಾಢವಾದ ಮೌನ, ಅಕ್ಕರೆ,ಸಂಶಯ

    ಈ ಅಪ್ಪ ಈ ಅಮ್ಮ
    ಎಲ್ಲಿ ಹೋದರು
    ಗೊತ್ತಾಗುತ್ತಿಲ್ಲ.

    -ಶಿವರಾಜ ಬೆಟ್ಟದೂರು, ರಾಯಚೂರು
    ಕೃಪೆ: http://navu-nammalli.blogspot.com/


    ಅವ್ವ

    ಎರಿ ಮಣ್ಣಿನ ಕರಿ ಬಣ್ಣದ್ಹಾಂಗ
    ಇರೋ ನನ್ನವ್ವ
    ಅಂಥಾ ಗಂಡನ್ನ ಕಟಗೊಂಡು
    ಪಡಬಾರದ್ದ ಪಟ್ಟು
    ಏಗಬಾರದ್ದ ಏಗಿ
    ಊರಾಗ ನಾಲ್ಕು ಮಂದಿ
    ಹೌದು ಹೌದು ಅನ್ನೋಹಂಗ
    ಬಾಳೆ ಮಾಡದಾಕಿ.

    ಅಂಥಾ ಎಡಾ ಹೊಲದಾಗ
    ದುಮು ದುಮು ಬಿಸಿಲಾಗ
    ಬೆವರು ಹರಿಸಿ ಬಂಗಾರ ಬೆಳಿತೇನಿ
    ಅಂತ ಹೋದಾಕಿ.
    ಬಂಗಾರ ಇಲ್ದ ಬೆಳ್ಳಿ ಇಲ್ದ
    ಬರೆ ಎರಡು ಸೀರ್ಯಾಗ
    ಜೀವನಾ ಕಂಡಾಕಿ.

    ಹೊಲ್ದಾನ ಹ್ವಾರೆನೂ ಮಾಡಿ
    ಮನ್ಯಾಂದೂ ನೋಡಿ
    ಯಾವಾಗ್ಲೂ ಮಾರಿ ದುಮು ದುಮು ಉರಿಸ್ಕೋಂತ
    ಮನ್ಯಾಗ ಕೂತ್ಗೊಂಡು ತಿನ್ನೋ ಗಂಡನ್ನೂ ಸಂಭಾಳಿಸಿ
    ಹಾಡ ಹಾಡತಾ ಹಾಡಾದಾಕಿ.

    ಇಂಥಾ ಗಂಡನ್ನ ಕಟಗೊಂಡ ಮ್ಯಾಲೆ
    ಮಕ್ಕಳ್ನ ಹಂತ್ಯಾಕ ಇಟಗೊಂಡು
    ಜ್ವಾಪಾನ ಮಾಡಲಾರದ
    ದೈನೇಸಿಪಟಗೊಂಡು
    ಬ್ಯಾರೆದವರ ಹತ್ರ ಇಟ್ಟು
    ವಿಲ ವಿಲ ಅಂತ ಒದ್ದಾಡದಕಿ.

    ಮಕ್ಕಳು ಕೈಗೆ ಬಂದ ಮ್ಯಾಲೆ
    ಅವರಂತ್ಯಾಕಿದ್ದು ಜೀವನದ ಸುಖ ಕಾಣತೇನಿ
    ಅಂತ ಆಸೆ ಪಟ್ಟಾಕಿ.
    ಸೊಸ್ತೇರ ಕೈಲಿ ಸ್ವಾಟಿ ತಿವಿಸಿಗೊಳ್ಳಲಾರದ್ದಕ್ಕೋ
    ಇಲ್ಲ ಕಟಗೊಂಡ ಗಂಡ
    ತನ್ನ ಜೊತಿ ಮಕ್ಕಳ ಹತ್ರ ಇರಲಾರದ್ದಕ್ಕೋ ಏನೋ
    ನಂದಿಷ್ಟೇ ಹಣೆಬರಹ ಅನ್ಕೊಂಡು
    ಹೊಳ್ಳಿ ಊರಿಗೆ ಹೋದಾಕಿ.

    ಬರೆ ಬಿಸಿಲಾಗ ದುಡ್ಕೊಂತ
    ಬೆಳದಿಂಗಳ ನಗಿ ನಕ್ಕು ಬೆಳಕು ಹರಿಸಿದಾಕಿ.
    ಮಣ್ಣಾಗ ಹುಟ್ಟಿ
    ಮಣ್ಣಾಗ ಬೆಳೆದು
    ಮಣ್ಣಾಗಿ ಹೋದಾಕಿ.

    -ಉದಯ ಇಟಗಿ

    ಮರಣ ವೃತ್ತಾಂತ

  • ಶುಕ್ರವಾರ, ಮೇ 07, 2010
  • ಬಿಸಿಲ ಹನಿ
  • ಆತ್ಮೀಯರೆ,
    ಏ.ಕೆ.ರಾಮಾನುಜನ್ ಭಾರತೀಯ ಪ್ರಸಿದ್ಧ ಇಂಗ್ಲೀಷ್ ಕವಿ. “ಮರಣ ವೃತ್ತಾಂತ” (Obituary) ಎನ್ನುವದು ಅವರು ಅವರಪ್ಪ ಸತ್ತ ಮೇಲೆ ಬರೆದ ಒಂದು ಕವನ. ಸಾಮಾನ್ಯವಾಗಿ ನಾವೆಲ್ಲ ವ್ಯಕ್ತಿ ಸತ್ತ ಮೇಲೆ ಅವರನ್ನು ಹೊಗಳುತ್ತಾ, ಉತ್ಪ್ರೇಕ್ಷಿಸುತ್ತಾ ಅವರ ಬಗ್ಗೆ ಬರೆದು ದಿನ ಪತ್ರಿಕೆಗಳಲ್ಲಿ ಪ್ರಕಟಿಸುತ್ತೇವೆ. ಆದರೆ ಇಲ್ಲಿ ಕವಿ ಅವರಪ್ಪನನ್ನು ಇದ್ದಕ್ಕಿದ್ದಂತೆ ಈ “ಮರಣ ವೃತ್ತಾಂತ”ದಲ್ಲಿ ಸೆರೆ ಹಿಡಿದಿದ್ದಾರೆ. ಬಹುಶಃ ಕವಿಯ ಅಪ್ಪ ತನ್ನ ಕುಟುಂಬದವರ ಜೊತೆ ಅಷ್ಟೊಂದು ಚನ್ನಾಗಿರಲಿಲ್ಲವೆಂದು ಕಾಣುತ್ತದೆ. ಅಥವಾ ಅವನೊಬ್ಬ ಬೇಜವಾಬ್ದಾರಿ ಅಪ್ಪನಾಗಿರಬಹುದು. ಆ ಕಾರಣಕ್ಕೆ ಕವಿ ಅಪ್ಪನ ಮೇಲೆ ಸಿಟ್ಟಾಗಿದ್ದಾನೆ. ಆ ಸಿಟ್ಟು ಕವನದುದ್ದಕ್ಕೂ ಕಾಣುತ್ತದೆ. ಇಲ್ಲಿ ವ್ಯಕ್ತಿ ಸತ್ತ ಮೇಲೆ ಅವನಿರುವಂತೆ ಅವನನ್ನು ಸೆರೆಹಿಡಿದಿರುವದು ಕವಿಯ ನೇರ ಹಾಗೂ ನಿಷ್ಟುರ ನಡವಳಿಕೆಯನ್ನು ತೋರಿಸುತ್ತದೆ.


    ಅಪ್ಪ ಸತ್ತಾಗ
    ನಮಗೆ ಅಂತಾ ಬಿಟ್ಟು ಹೋಗಿದ್ದು
    ಮೇಜಿನ ತುಂಬ ಒಂದಷ್ಟು ಧೂಳು ತುಂಬಿದ ಕಾಗದ ಪತ್ರಗಳು,
    ಒಂದಿಷ್ಟು ಸಾಲ, ಒಂದಿಬ್ಬರು ಅವಿವಾಹಿತ ಹೆಣ್ಣುಮಕ್ಕಳು
    ಹಾಗೂ ಇನ್ನೂ ಹಾಸಿಗೆಯಲ್ಲೇ ಉಚ್ಚೇ ಮಾಡುವ ಮೊಮ್ಮಗ.
    ಸಾಲದ್ದಕ್ಕೆ ಆ ಮೊಮ್ಮಗನಿಗೆ ಅವ ಸತ್ತ ಮೇಲೆ
    ಆಕಸ್ಮಿಕವಾಗಿ ಇವನ ಹೆಸರನ್ನೇ ಇಡಬೇಕಾಯಿತು.


    ಜೊತೆಗೆ ಅವನು ನಮಗೆ ಅಂತಾ ಬಿಟ್ಟು ಹೋಗಿದ್ದು
    ಮನೆಯಂಗಳದಲ್ಲಿನ ಬಾಗಿದ ತೆಂಗಿನ ಮರಕ್ಕೆ ಆತುಕೊಂಡೇ ನಿಂತಿರುವ
    ಹಾಗೂ ನಾವು ಮುದುಕರಾಗುವಷ್ಟೊತ್ತಿಗೆ ಬಿದ್ದು ಹೋಗುವ ಮನೆ.
    ಸದಾ ಒಣಗಿ ಕೃಶವಾಗಿದ್ದ ಅಪ್ಪ
    ಉರಿಯಲು ತಯಾರಾಗಿದ್ದವನಂತೆ
    ಆತನ ಹೆಣ ಸುಡುವಾಗ ಪುರಪುರನೆ ಉರಿದುಹೋದ.


    ಇದಲ್ಲದೆ ಗಂಡು ಮಕ್ಕಳಿಗೆ ಅಂತಾ ಅವ ಬಿಟ್ಟು ಹೋಗಿದ್ದು
    ಅರ್ಧ ಸುಟ್ಟ ಒರಟೊರಟಾದ ಬೆನ್ನು ಮೂಳೆಗಳು.
    ಪುರೋಹಿತರು ಹೇಳಿದಂತೆ
    ನಾವವನ್ನು ಹುಶಾರಾಗಿ ಆಯ್ದುಕೊಂಡು
    ಹತ್ತಿರದ ರೈಲು ನಿಲ್ದಾಣದ ಬಳಿಯಿರುವ
    ತ್ರಿವೇಣಿ ಸಂಗಮದಲ್ಲಿ ಪೂರ್ವಾಭಿಮುಖವಾಗಿ ನಿಂತು
    ನದಿಯಲ್ಲಿ ತೇಲಿಬಿಟ್ಟೆವು.
    ಹೀಗಾಗಿ ಅವನ ಹೆಸರು,
    ಜನನ, ಮರಣದ ದಿನಾಂಕಗಳನ್ನೊಳಗೊಂಡ
    ಗೋರಿಯನ್ನಾಗಲಿ, ಸಮಾಧಿಯನ್ನಾಗಲಿ
    ರಚಿಸುವ ಪ್ರಮೇಯ ಬೀಳಲಿಲ್ಲ.

    ಅಪ್ಪ ತನ್ನನ್ನೂ ಒಳಗೊಂಡಂತೆ
    ಯಾವುದನ್ನೂ ಸರಿಯಾಗಿ ನಿಭಾಯಿಸಲಿಲ್ಲ.
    ಅವನು ಎಷ್ಟು ಸುಲುಭವಾಗಿ ಹುಟ್ಟಿದನೋ
    ಅಷ್ಟೇ ಸುಲಭವಾಗಿ ಸತ್ತು ಹೋದ.
    ಒಂದು ಮಟ ಮಟ ಮಧ್ಯಾಹ್ನ
    ಮದ್ರಾಸಿನ ಬ್ರಾಹ್ಮಣ ಕೇರಿಯೊಂದರಲ್ಲಿ ಸಿಸೇರಿಯನ್ ಮೂಲಕ ಹುಟ್ಟಿದ,
    ಅಂತೆಯೇ ಹಣ್ಣಿನ ಮಾರ್ಕೇಟೊಂದರಲ್ಲಿ
    ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸತ್ತು ಹೋದ.


    ಆದರೆ ನಾಲ್ಕು ದಿನಗಳ ನಂತರ
    ಯಾರೋ ಒಬ್ಬರು ನನಗೆ ಹೇಳಿದರು
    ಪತ್ರಿಕೆಯೊಂದರ ಒಳಪುಟಗಳಲ್ಲಿ
    ಅವನ ಬಗ್ಗೆ ಎರಡು ಸಾಲು ಹೊಗಳಿ ಬರೆಯಲಾಗಿದೆಂದು
    ಅವ ಸತ್ತು ನಾಲ್ಕು ವಾರಗಳ ನಂತರ
    ಅದನ್ನೇ ಗುಜರಿ ಅಂಗಡಿಯವನಿಗೆ ಮಾರಲಾಗಿತ್ತು.
    ಅವನದನ್ನು ತಿರುಗಿ ನಾನು ದಿನಸಿ ಸಾಮಾನುಗಳನ್ನು ಕೊಳ್ಳುವ
    ಕಿರಾಣಿ ಅಂಗಡಿಯವನಿಗೆ ಮಾರಿದ್ದ.
    ಆ ಅಂಗಡಿಯವನು ಕಟ್ಟಿಕೊಟ್ಟ ಪೊಟ್ಟಣಗಳಲ್ಲಿ
    ಬರುವ ಸುದ್ದಿಗಳನ್ನು ನಾನು ಆಗಾಗ ಮೋಜಿಗಾಗಿ ಓದುವದು ರೂಡಿ.
    ಅಂತೆಯೇ ಅಪ್ಪನ ಮರಣ ವೃತ್ತಾಂತದ ಸಾಲುಗಳು
    ಇಲ್ಲಿ ಏನಾದರೂ ಸಿಗುತ್ತವೆಯೇನೋ ಎಂದು ಹುಡುಕಾಡುತ್ತೇನೆ.

    ಏನಾದರಾಗಲಿ ಅವ ಹೊರಟು ಹೋಗಿದ್ದಾನೆ ನಮ್ಮನ್ನೆಲ್ಲ ಬಿಟ್ಟು
    ನಮಗೆ ಅಂತಾ ಬೇರೇನನ್ನೂ ಬಿಡದಿದ್ದರೂ
    ಬಿಟ್ಟು ಹೋಗಿದ್ದಾನೆ ಬದಲಾದ ಅಮ್ಮನನ್ನು
    ಹಾಗೂ ವರ್ಷ ವರ್ಷವೂ ಮಾಡಲೇಬೇಕಾದ ಅವನ ತಿಥಿಯನ್ನು!


    ಮೂಲ ಇಂಗ್ಲೀಷ್: ಏ.ಕೆ.ರಾಮಾನುಜನ್
    ಭಾವಾನುವಾದ: ಉದಯ್ ಇಟಗಿ

    ಮನುಷ್ಯ ಸಂಬಂಧಗಳ ನೈಜತೆಯನ್ನು ಬೆತ್ತಲುಗೊಳಿಸುವ ಕನ್ನಡದ ಒಂದು ಅಪರೂಪದ ಕಥೆ

  • ಶುಕ್ರವಾರ, ಏಪ್ರಿಲ್ 16, 2010
  • ಬಿಸಿಲ ಹನಿ
  • “ಶೆಟ್ಟರ ಸಾತಣ್ಣ ಸತ್ತ....!” ಮನುಷ್ಯ ಸಂಬಂಧಗಳ ನೈಜತೆಯನ್ನು ಬೆತ್ತಲುಗೊಳಿಸುವ ಕನ್ನಡದ ಒಂದು ಅಪರೂಪದ ಕಥೆ. ಮಾತ್ರವಲ್ಲ ಕನ್ನಡದ ಶ್ರೇಷ್ಠ ಕಥೆಗಳಲ್ಲೊಂದು. ಸುಮಾರು ನಾಲ್ಕು ದಶಕಗಳ ಹಿಂದೆ ಬರೆದ ಕಥೆಯಿದು. ಬರೆದವರು ಉತ್ತರ ಕರ್ನಾಟಕ ಭಾಗದ ಮುಂಚೂಣಿಯ ಲೇಖಕರಲ್ಲೊಬ್ಬರಾದ ದು.ನಿಂ. ಬೆಳಗಲಿಯವರು. ಕಥೆ, ಕಾದಂಬರಿ, ಹರಟೆ, ಚರಿತ್ರೆ, ಅನುವಾದ, ಮಕ್ಕಳ ಸಾಹಿತ್ಯ ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೈಯಾಡಿಸಿರುವ ಬೆಳಗಲಿಯವರು ಅನೇಕ ಪ್ರಶಸ್ತಿಗಳ ಜೊತೆಗೆ ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪುರಸ್ಕಾರವನ್ನೂ ಪಡೆದುಕೊಂಡಿದ್ದಾರೆ. “ಶೆಟ್ಟರ ಸಾತಣ್ಣ ಸತ್ತ....!” ಎಂಬ ಕಥೆ ಮೊದಲ ಸಲ ‘ಸುಧಾ’ ವಾರ ಪತ್ರಿಕೆಯ ಎಪ್ರಿಲ್ 4, 1971ರ ಸಂಚಿಕೆಯಲ್ಲಿ ಪ್ರಕಟವಾಯಿತು. ಆನಂತರ ಅವರ “ಮುತ್ತಿನ ತೆನೆಗಳು” ಎಂಬ ಕಥಾಸಂಕಲನದಲ್ಲಿ ಪ್ರಕಟವಾಯಿತು. ಆ ಕಥೆ ಓದುಗರ ಮೆಚ್ಚುಗೆಯನ್ನು ಗಳಿಸತಲ್ಲದೆ ವಿಮರ್ಶಕರ ಗಮನವನ್ನೂ ಸೆಳೆಯಿತು. ಲಂಕೇಶರು ಇದನ್ನು ಇಂಗ್ಲೀಷಿಗೆ ಅನುವಾದಿಸುವ ವಿಚಾರ ಹೇಳಿದ್ದರು. ಎಪ್ಪತ್ತರ ದಶಕದಲ್ಲಿ ಬಂದ ಕಥೆಯಾದರೂ ವಸ್ತುವಿನ ದೃಷ್ಟಿಯಿಂದ ಇಂದಿಗೂ ಪ್ರಸ್ತುತವಾಗಿದೆ.

    ಉತ್ತರ ಕರ್ನಾಟಕದ ಕಡೆ ಪ್ರಚಲಿತವಿರುವ ಜಾನಪದ ನಂಬಿಕೆಯೊಂದನ್ನು ಆಧಾರವಾಗಿಟ್ಟುಕೊಂಡು ಲೇಖಕರು ಈ ಕಥೆಯನ್ನು ಅತ್ಯಂತ ಸಮರ್ಥವಾಗಿ ಹೆಣೆದಿದ್ದಾರೆ. ಒಂದು ಸಣ್ಣ ಕಥೆಯೆಂದರೆ ಹೀಗಿರಬೇಕು ಎಂದು ಹೇಳುವಷ್ಟರಮಟ್ಟಿಗೆ ಸಣ್ಣ ಕಥೆಯ ಎಲ್ಲ ಲಕ್ಷಣಗಳನ್ನು ಈ ಕಥೆ ಒಗ್ಗೂಡಿಸಿಕೊಂಡಿದೆ. ಕಥೆ ಘಟನೆಯಿಂದ ಘಟನೆಗೆ ಬೇಗ ಬೇಗ ಸಾಗಿದರೂ ಲೇಖಕರು ಎಲ್ಲೂ ಅವಸರಪಟ್ಟಂತೆ ಕಾಣುವದಿಲ್ಲ. ಕಥೆಗೆ ಬೇಕಾಗುವ ಪೂರಕ ಅಂಶಗಳು ಎಷ್ಟಿರಬೇಕೋ ಅಷ್ಟನ್ನು ಮಾತ್ರ ಹೆಣೆದಿದ್ದಾರೆ. ಕಥೆ ಬೆಳಯುತ್ತಾಹೋದಂತೆ ಮನುಷ್ಯ ಸಂಬಂಧಗಳ ನೈಜತೆ ಬೆತ್ತಲಾಗುವ ಪರಿ ಮತ್ತು ಅವು ತಮ್ಮ ಮುಖವಾಡಗಳನ್ನು ಕಳಚುವ ರೀತಿ ನಮ್ಮನ್ನು ಬೆರಗುಗೊಳಿಸುವದರ ಜೊತೆಗೆ ಕೊನೆಯಲ್ಲಿ ದಿಗ್ಭ್ರಮೆಯನ್ನುಂಟುಮಾಡುವದರ ಮೂಲಕ ಮನುಷ್ಯರ ವರ್ತನೆಯ ಬಗ್ಗೆ ಒಂದು ರೀತಿಯ ಅಸಹ್ಯ ಭಾವನೆಯನ್ನು ತರಿಸುತ್ತದೆ.

    ಕಥೆ ಆರಂಭವಾಗುವದೇ ಶೆಟ್ಟರ ಸಾತಣ್ಣ ಸತ್ತ ಸುದ್ದಿಯೊಂದಿಗೆ. ಆ ಸುದ್ದಿಯನ್ನು ಊರವರಿಗೆ ಮುಟ್ಟಿಸಲು ಸಾತಣ್ಣನ ಆಳು ತಳವಾರ ಕೆಂಚ ಅಳುತ್ತ ಓಡುತ್ತ ಧಾವಿಸುತ್ತಿದ್ದಾನೆ. ಸಾತಣ್ಣ ಸತ್ತ ಸುದಿಯನ್ನು ಯಾರೂ ನಂಬಲೊಲ್ಲರು. “ಆಂ! ಇದೇನಿದ! ಖರೇನೋ ಸುಳ್ಳೋ ನೋಡ್ರಿ....!” ಎಂದು ಎಲ್ಲರೂ ಅನುಮಾನ ಪಡುತ್ತಿದ್ದಾರೆ. ಏಕೆಂದರೆ ಸಾತಣ್ಣನದು ಸಾಯುವ ವಯಸ್ಸಲ್ಲ! ಅಥವಾ ಸತ್ತು ಹೋಗುವಂಥ ಕಾಯಿಲೆಗೂ ಬಿದ್ದವನಲ್ಲ! ಅದು ಅನಿರೀಕ್ಷಿತ ಸಾವು. ಹಿಂಗ ಕುಂತಾಂವಾ ಹಿಂಗ ಎದ್ದು ಹೊದಂಗ ಆಗೇತಿ. “ಘಾತ ಆಯ್ತಲ್ಲಾ! ನಿನ್ನೆ ಸಂಜಿಕ ಕುಡಚಿ ಸ್ಟೇಷನ್ದಾಗ ಭೇಟಿ ಆಗಿದ್ದೋಪಾ! ಮಿರಜಿ-ಸಾಂಗ್ಲಿಗೆ ಅಷ್ಟ ಹೊಗಿ ಬರ್ತೀನಂದಾ. ಇದೇನಿದಾ ಖರೇನೋ ತಮ್ಮಾ?” ಎಂದು ಗಾಬರಿಯಿಂದ ಕೇಳಿದ ಈಶ್ವರಯ್ಯನಿಗೆ “ಈಗ ಮಿರಜಿಯಿಂದ ಫೋನ್ ಬಂದೈತೆಂತ! ಸೆಟ್ರ ಸಾತಣ್ಣಗ ಹಾರ್ಟ್ ಪೇಲೋ ಏನೋ ಆಗಿ ಇಂದ ಹರ್ಯಾಗ ಜೀವ ಹೋತಂತ! ಅದs ಸರಪಂಚರಿಗೆ ಹೇಳಾಕ ನಡದೇನಿ.....” ಎಂಬ ಉತ್ತರ ಸಿಗುತ್ತದೆ. ಶೆಟ್ಟರ ಸಾತಣ್ಣನ ಈ ಅನಿರೀಕ್ಷಿತ ಸಾವಿನ ಸುದ್ದಿಯೇ ಕಥೆಯ ಮಧ್ಯಬಿಂದು. ಅಲ್ಲಿಂದ ಸಾತಣ್ಣನ ಸ್ನೇಹಿತರು, ಪರಿಚಯಸ್ಥರು ಹೇಗೆ ವರ್ತಿಸುತ್ತಾರೆಂಬುದೇ ಕಥೆಯ ಜೀವಾಳ. ಆಯಾ ಪಾತ್ರದ ಮೂಲಕವೇ ಅವರವರ ಸ್ವಭಾವವನ್ನು ಪ್ರಕಟಿಸುತ್ತಾ ಒಂದೊಂದಾಗಿ ಪಾತ್ರಗಳನ್ನು ಓದುಗರ ಮುಂದೆ ತಂದು ನಿಲ್ಲಿಸುತ್ತಾರೆ ಲೇಖಕರು.

    ಸತ್ತ ಸುದ್ದಿಯನ್ನು ಮುಟ್ಟಿಸಲು ಬಂದ ಸಾತಣ್ಣನ ಖಾಸಾ ಗೆಳೆಯ ಈಶ್ವರಯ್ಯನಿಗೆ ಸಾತಣ್ಣನ ಇನ್ನೊಬ್ಬ ಗೆಳೆಯ ಪರಪ್ಪ ಹೇಳುವದು ಹೀಗೆ “ಸಾತಣ್ಣ ನಮ್ಜಾತ್ಯಾಂವಾ, ದೂರದ ಸಂಬಂಧಿಕ ಅಂತ ಐಸಾವಿರ ರೂಪಾಯಿ ಕೊಟ್ಟೀನಿ. ಏನಪಾ, ನಿನಗೂ ಇನಾ ಹೇಳಿಲ್ಲ. ಹ್ವಾದ ವರ್ಸ ತ್ವಾಟ ತಗೊಂಡಲಾ, ಆಗ ಕಡಿಮೆ ಬಿದ್ದುವಂತ, ಈ ಹಬ್ಬ ಆದಮ್ಯಾಲ ಕೊಡ್ತನಂತಿದ್ದ. ಸಂಬಂಧ ನೋಡು. ಕಾಗದಾ, ಪತ್ರ ಏನ್ ಬರ್ಸಿಕೊಳ್ಳೋದು? ಹಾಂಗs ಇಸ್ವಾಸ... ರೂಪಾಯ್ದು ಭಾಳ ಪಜೀತಿ ಬಂತು ಈಸೂರಾ! ನಿ ಸಾತಣ್ಣನ ದೋಸ್ತ ಅದಿ. ನೀನs ಏನಾರ ಮಾಡಿ ನನ್ನ ರೂಪಾಯಿ ಬರೂ ಹಂಗ ಮಾಡಪಾ”

    ಸರಪಂಚ ಮುರಿಗೆಪ್ಪ “ಮ್ಯಾಲ ಬಾ ಈಸೂರಾ, ಬಾ ಒಂದೀಟ ಮಾತಾಡುದೈತಿ...ಅಲ್ಲ, ಸಾತಣ್ಣ ರೊಕ್ಕ ಭಾಳ ಮಾಡ್ಯಾನಂತ ನಾನೂ ಕೇಳೀನಿ. ಹ್ವಾದ ಸಾರಿ ಇಪ್ಪತೈದು ಸಾವಿಅರ ಕೊಟ್ಟು ನಾಕೆಕೆರೆ ತ್ವಾಟಾ ಕೊಂದಲ್ಲ, ಇನs ಸಾಕಷ್ಟ ರೊಕ್ಕ ಇರಬೇಕು. ಅವನ ಹೇಣ್ತಿ, ಮಕ್ಕಳಿಗೆ ಹೇಳಿ ಐದ್ಹತ್ತ ಸಾವಿರ ಹೈಸ್ಕೂಲ ಸಾಲಿ ಹೆಸರ್ಲೇ ಇಸ್ಕೊಳ್ಳೋಣ. ಇದ ಊರಹಿತದ ಕೆಲ್ಸ ನೋಡು. ಸತ್ತ ಸಾತಣ್ಣನ ಹೆಸರೂ ಉಳಿತೈತಿ, ಹತ್ಸಾವಿರ ಕೊಟ್ರ ಅವನ ಹೆಸರ್ಲೆ ಎಡ್ಡ ಖೋಲಿ ಕಟ್ಟಿಸೋಣು, ಐದ ಕೊಟ್ರ ಒಂದs ಕಟ್ಟಿಸೋಣು. ನೀನs ಏನಾರೆ ವಸೂಲಿ ಹಚ್ಚಿ, ಅವರ ಸಂಬಂಧಿಕರಿಗೆ ಹೇಳಿ ಅಷ್ಟು ಮಾಡು” ಎಂದು ಹೇಳುತ್ತಾನೆ.

    ಹಳ್ಳಿಯ ಜನಕ್ಕೆ ಮಾರ್ಗದರ್ಶನ ನೀಡಬಹುದಾಗಿರುವ ಮಠದ ಮಹಾರುದ್ರಯ್ಯನವರು ತಮ್ಮ ಮಠಕ್ಕೆ ಒಂದು ಬೆಳ್ಳಿ ಪ್ರಭಾವಳಿ ಅವಶ್ಯಕತೆಯಿದೆ. ಅದನ್ನು ಸಾತಣ್ಣನ ಹೆಸರಲ್ಲಿ ಮಾಡಿಸಿಕೊಟ್ಟರೆ ಅವನ ಹೆಸರು ಖಾಯಂ ಉಳಿತೈತಿ ಎಂದು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಾ ಈಶ್ವರಯ್ಯನ ದುಂಬಾಲು ಬೀಳುತ್ತಾರೆ.

    ಊರಿನ ಗೌಡರು ಈಶ್ವರಯ್ಯನನ್ನು ಕರೆದು ಹೇಳುವದು ಹೀಗೆ “....ಮನ್ನೆ ಸಾತಣ್ಣನ ಎಡ್ನೂರ್ರ ಪೆಂಟಿ ಬೆಲ್ಲಾ ಕೊಟ್ಟೀನಿ. ಮಾನಿ ಪೂರ ಅಡತ್ಯಾಗ ಹಚ್ಚ ಬೇಕಮ್ದ್ರ, ಪಾಪ, ಊರಾನ ಮನ್ಸ್ಯಾ ಇಂವಗೂ ನಾಕ ದ್ದುಡ್ದು ಸಿಗಲಿ ಅಂತ ಅದರ ರೂಪಾಯಿ ಬಂದಿಲ್ಲೋ, ಬರೇ ಬಾಯಿ ವ್ಯಾಪಾರ. ಯಾರ್ನ ಕೇಳಬೇಕು?” ಅವರಿಗೆ ಸತ್ತ ಸಾತಣ್ಣನಿಗಿಂತ ತಮ್ಮ ದುಡ್ದಿನದೇ ಚಿಂತೆ.

    ಮಕ್ಕಳಿಗೆ ನೀತಿ ಪಾಠ ಹೇಳುವ ಜೋಶಿ ಮಾಸ್ತರರು ಈಶ್ವರಯ್ಯನ ಕಂಡೊಡನೆ ಒಂದೆಡೆ ಕರೆದು ಹೇಳುವದು ಹೀಗೆ ”ನಮ್ಮ ಕಿರಾಣಿ ಉದ್ರಿ ಖಾತೆ ಸಾತಣ್ನನ ಅಂಗಡಿಯಲ್ಲೇ ಇರೋದು ನಿನಗೂ ಗೊತ್ತದಲ್ಲ. ಪಗಾರ ತಡಾ ಆಗಿ ಎರಡು ತಿಂಗಳು ಉದ್ರಿ ತೀರಿಸಿರಲಿಲ್ಲ. ಅದs ಅದನ್ನ ಕೊಡಲಿಕ್ಕೆ ಮುಂಜಾನೆ ಅಂಗಡಿಗೆ ಹೋಗಿದ್ದೆ. ಸಾತಣ್ಣ ಇರ್ಲಿಲ್ಲ. ಊರಿಗೆ ಹೋಗಿದ್ದಾರಂತ ಅವರ ಹಿರೀ ಮಗ ನಮ್ಮ ಸಾಲೆಯಲ್ಲೇ ಇದ್ದಾನಲ್ಲ, ಶಂಕರ, ಅವನs ಹೇಳಿದ. ಆ ರೊಕ್ಕ ತಿರುಗಿ ಒಯ್ದರ ಬೇರೆ ಖರ್ಚು ಆಗಬಹುದಂತ ಆ ಹುಡುಗನ ಕೈಯಾಗ ಕೊಟ್ಟು, ಎಲ್ಲಾ ಬಾಕಿ ಕಾಟು ಹಾಕು ಅಂತ ಹೇಳಿದೀನಿ. ಅದಕ್ಕs ನಾಕ ದಿನಾ ಬಿಟ್ಟು ನೀನೂ ಅಷ್ಟ ನೋಡು, ಆ ಹುಡುಗ ಬಾಕಿ ತೆಗೆದಾನಿಲ್ಲೋ. ಇನ್ನs ಸಣ್ಣವ ಮರೀಬಹುದು.”

    ಆದರೆ ಕಥೆಯ ಕೊನೆಯಲ್ಲಿ ಶೆಟ್ಟರ ಸಾತಣ್ಣ ಸತ್ತೇ ಇಲ್ಲ ಎಂಬ ಸುದ್ದಿ ಗೊತ್ತಾಗುತ್ತದೆ. ಇದಕ್ಕೆ ಕಾರಣ ಉತ್ತರ ಕರ್ನಾಟಕದ ಕಡೆ ಯಾರಾದರೂ ಕಾಗಿ ಮೆಟ್ಟು (ಹೆಣ್ಣು- ಗಂಡು ಕಾಗೆಗಳ ಮಿಲನ) ನೋಡಿದರೆ ಅವರು ಕೂಡಲೇ ಸತ್ತುಹೋಗುತ್ತಾರೆ ಎಂಬ ನಂಬಿಕೆಯಿದೆ. ಹೀಗಾಗಿ ಅದರ ಪರಿಹಾರಕ್ಕಂತ ಆ ವ್ಯಕ್ತಿ ಸತ್ತುಹೋಗಿದ್ದಾನೆಂದು ಸುಳ್ಳು ಸುದ್ದಿ ಹಬ್ಬಿಸಿದರೆ ಅವನ ಆಯುಷ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. ಅದೇ ಪ್ರಕಾರ ಇಲ್ಲಿ ಸಾತಣ್ಣನು ಕಾಗಿ ಮೆಟ್ಟು ನೋಡಿದ್ದರಿಂದ ಅದರ ಪರಿಹಾರಕ್ಕಂತ ಆತ ಸತ್ತಿದ್ದಾನೆಂದು ಸುಳ್ಳು ಸುದ್ದಿ ಹಬ್ಬಿಸಬೇಕಾದ ಪ್ರಸಂಗ ಬರುತ್ತದೆ. ಕಥೆಯ ಕೊನೆಯಲ್ಲಿ ಶೆಟ್ಟರ ಸಾತಣ್ಣ ಜೀವಂತವಾಗಿ ಪ್ರಕಟವಾದಾಗ ಉಂಟಾಗುವ ಪರಿಣಾಮವೂ ವಿಲಕ್ಷಣವಾದದ್ದು. ಸಾತಣ್ಣ ಜೀವಂತವಾಗಿದ್ದಾನೆ ಎಂಬ ಸುದ್ದಿ ಕೇಳಿ ಪರಪ್ಪನ ಬೆರಳ ಸಂದಿಯಲ್ಲಿ ಸುಡುತ್ತ ಬಂದ ಸಿಗರೇಟಿನ ಬೆಂಕಿ ಸ್ಪರ್ಶಿಸಿ ಚುರ್ರೆನ್ನುತ್ತದೆ. ಅವಸರದಿಂದ ಕೆಳಗಿಳಿದ ಮುರುಗೆಪ್ಪನ ಕಾಲಿಗೆ ಧೋತರ ಸಿಕ್ಕಿ ಬಕ್ಕಂಡಿ ಕಚ್ಚಿ ಬಿಳುತ್ತಾನೆ. ಗಡಿಬಿಡಿಯಿಂದ ಎದ್ದ ಗೌಡರಿಗೆ ಹೊರ ಗೊಡೆಯ ಗೂಟ ಬಲವಾಗಿ ತಾಗಿ ಕಣ್ಣಿಗೆ ಕತ್ತಲು ಕಟ್ಟುತ್ತದೆ. “ಎಲಾ! ಸಾತಣ್ಣ ಬದುಕಿದನ?” ಎಂದು ಬೇಸರಿಸಿ ಅಲಕ್ಷದಿಂದ ಮಗ್ಗಲು ಬದಲಿಸಿದಾಗ, ಪಕ್ಕದ ಖಾಲಿ ಹಾಲಿನ ಬಟ್ಟಲು ಪಕ್ಕೆಗೆ ಚುಚ್ಚಿ ಬೆಳ್ಳಿ ಪ್ರಭಾವಳಿ ಇರಿದಂತಾಗುತ್ತದೆ. “ಹೌದೇನೋ? ಖರೇನೋ ಸುಳ್ಳೋ ನೋಡೋ!” ಎಂದು ಮಗ ತಂದ ವಾರ್ತೆಯ ಬಗ್ಗೆ ಪರಾಮರ್ಶಿಸುತ್ತ ಜೋಶಿ ಮಾಸ್ತರರು, ತಲೆಯ ಮೇಲೆ ಕೈಹೊತ್ತು ಕುಲಿತುಕೊಳ್ಳುತ್ತಾರೆ, ಮಧ್ಯಾಹ್ನದ ನಿದ್ರೆ ಕೆಟ್ಟಂತಾಗಿ.

    ಒಬ್ಬ ವ್ಯಕ್ತಿ ಸತ್ತ ಸಂದರ್ಭದಲ್ಲಿ ಅವನ ಸುತ್ತಲಿನವರ ಮನಸ್ಸಿನಲ್ಲಿ ಹಲವಾರು ವಿಚಾರಗಳು ಮೂಡುತ್ತವೆ. ಅತ್ಮೀಯರಾದರೆ ನಿಜವಾದ ದುಃಖವನ್ನು ವ್ಯಕ್ತಪಡಿಸುತ್ತಾರೆ. ಅದರೆ ಆತ್ಮೀಯತೆಯ ಮುಖವಾಡ ಧರಿಸಿದ ಸ್ವಾರ್ಥಿಗಳು ‘ಉರಿಯುವ ಮನೆಯಿಂದ ಗಳ ಹಿರಿದುಕೊಳ್ಳು’ವಂತೆ, ಸತ್ತ ಸಮಯದಲ್ಲೂ ಸ್ವಾರ್ಥ ಸಾಧನೆಯಲ್ಲಿ ಲೆಕ್ಕ ಹಾಕುತ್ತಿರುತ್ತಾರೆ ಎಂಬುದಕ್ಕೆ ಕಥೆಯಲ್ಲಿ ಬರುವ ಪರಪ್ಪ, ಮುರಿಗೆಪ್ಪ, ಮಹಾರುದ್ರಯ್ಯನವರು, ಜೋಶಿ ಮಾಸ್ತರು ಮತ್ತು ಗೌಡರ ಪಾತ್ರಗಳೇ ಸಾಕ್ಷಿ.

    ಈ ಎಲ್ಲ ಸ್ವಾರ್ಥಿಗಳ ಮಧ್ಯೆಯೇ ಸಾತಣ್ಣನ ನಿಜವಾದ ಸ್ನೇಹಿತ ನಿಸ್ವಾರ್ಥಿ ಈಶ್ವರಯ್ಯ, ಹಾಗೂ ಕಥೆಯ ಕೊನೆಯಲ್ಲಿ ಸಾತಣ್ಣ ಜೀವಂತವಾಗಿರುವ ಸುದ್ದಿಯನ್ನು ತಿಳಿದು ತೋಟದಿಂದ ಓಡಿ ಬಂದು, ಕಾಯಿ ಕರ್ಪೂರ ತಗೊಂಡು ಹನುಮಂತನ ಗುಡಿಗೆ ಹೋಗುವ ತಳವಾರ ಕೆಂಚನಂಥವರು ಮಾನವೀಯ ಮೌಲ್ಯಗಳ ಕೊಂಡಿಯಂತೆ ಕಾಣಿಸುತ್ತಾರೆ. ಈ ಬಗೆಯ ಅನುಭವಗಳನ್ನು ಸಮಾಜದಲ್ಲಿ ಆಗಾಗ ಕಂಡೇ ಕಾಣುತ್ತಿರುತ್ತೇವೆ.

    -ಉದಯ್ ಇಟಗಿ

    ದಲ್ಲಾಳಿ

  • ಶುಕ್ರವಾರ, ಏಪ್ರಿಲ್ 09, 2010
  • ಬಿಸಿಲ ಹನಿ
  • ನಾನೊಬ್ಬ ಪ್ರಸಿದ್ಧ ದಲ್ಲಾಳಿ- ದನದ ವ್ಯಾಪಾರದಲ್ಲಿ. ದಲ್ಲಾಳಿ ಅಂದಮೇಲೆ ಸುಳ್ಳು ಹೇಳದೆ ಇರೋಕಾಗುತ್ತಾ? ದಿನಾ ಬೆಳಗಾದರೆ ತಲೆಯಲ್ಲಿ ಸದಾ ಸುಳ್ಳುಗಳನ್ನೇ ತುಂಬಿಕೊಂಡು, ಬಾಯಿತುಂಬಾ ಸಿಹಿಯಾದ ಮಾತುಗಳನ್ನಾಡುತ್ತಾ ದನದ ವ್ಯಾಪಾರಿಗಳಿಗೆ ಅವರ ವ್ಯಾಪಾರದಲ್ಲಿ ನೆರವಾಗುವದೇ ನನ್ನ ಕೆಲಸ. ಆ ಕಾರಣಕ್ಕೆ ಈ ಭಾಗದಲ್ಲಿ ನಾನು ಎಲ್ಲರಿಗೂ ಗೊತ್ತು ಹಾಗೂ ಜನ ನನ್ನನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ನನ್ನ ಕಂಡೊಡನೆ ಅವರು ನನ್ನನ್ನು ಚಹಾದ ಅಂಗಡಿಗೆ ಕರೆದುಕೊಂಡು ಹೋಗಿ “ದಭೆವಾಲಾ, ಎರಡು ಚಾ ತಯಾರಿಸು” ಎಂದು ಪ್ರೀತಿಯಿಂದ ಹೇಳುತ್ತಾರೆ. ನನ್ನನ್ನು ನೋಡಿದ ಮೇಲೆ ಆ ಚಹಾದ ಅಂಗಡಿ ಮಾಲಿಕ “ಓಹೋ, ತನ್ಸುಖ್! ಹೆಂಗಿದ್ದಿಯಪಾ? ಎಲ್ಲಾ ಅರಾಮಾನಾ? ಈ ನಡುವೆ ವ್ಯಾಪಾರ ಹೆಂಗೆ ನಡಿತಾ ಇದೆ?” ಎಂದು ಅತ್ಯುತ್ಸಾಹದಿಂದ ಎದ್ದುನಿಂತು ನಾನವನಿಗೆ ಚನ್ನಾಗಿ ಗೊತ್ತಿರುವೆನೆಂದು ತೋರಿಸಲು ಕೇಳುತ್ತಾನೆ. ಆದರೆ ಒಂದೊಂದು ಸಾರಿ ಹೀಗೆ ಕೇಳುತ್ತಿರುವರು ಯಾರೆಂದು ನನಗೆ ತಿಳಿಯದೇ ಕಕ್ಕಾಬಿಕ್ಕಿಯಾಗುತ್ತೇನೆ, ಅದು ಬೇರೆ ವಿಷ್ಯ!

    ನಾನು ದಿನಾ ಬೆಳಗಾದರೆ ಒಂದು ದನದ ಜಾತ್ರೆಯಿಂದ ಇನ್ನೊಂದು ದನದ ಜಾತ್ರೆಗೆ ಹೋಗುವವ. ಒಬ್ಬ ದನದ ದಲ್ಲಾಳಿ ಇನ್ನೇನು ತಾನೆ ಮಾಡಲು ಸಾಧ್ಯ? ದನದ ಜಾತ್ರೆಗಳು ವರ್ಷದುದ್ದಕ್ಕೂ ಇಲ್ಲಲ್ಲಾಂದ್ರೆ ಇನ್ನೆಲ್ಲೋ ಒಂದು ಕಡೆ ನಡೆದೇ ಇರುತ್ತವೆ. ನಾನು ಅವಕೆಲ್ಲಾ ಹೋಗಲೇಬೇಕು. ಏಕೆಂದರೆ ಅವೇ ನನ್ನ ಆದಾಯದ ಮೂಲಗಳು. ನಾನೀಗಾಗಲೆ ನಿಮಗೆಲ್ಲರಿಗೂ ಹೇಳಿದ್ದೇನೆ; ನಾನು ತುಂಬಾ ಸುಳ್ಳು ಹೇಳುತ್ತೇನೆಂದು. ಅದು ನನ್ನ ಬಾಯಿಗೆ ಒಗ್ಗಿಹೋಗಿದೆ. ನಾನು, ಎಳ್ಳಷ್ಟೂ ಕೆಲಸಕ್ಕೆ ಬಾರದ ದನಗಳನ್ನು ಭರ್ಜರಿ ಬೆಲೆಗೂ ಹಾಗೂ ಎಲ್ಲ ತೆರನಾಗಿ ಚನ್ನಾಗಿರುವ ದನಗಳನ್ನು ಭಾರಿ ಕಡಿಮೆ ಬೆಲೆಗೂ ಹಾಡಹಗಲೇ ಮಾರಾಟ ಮಾಡಿಸಬಲ್ಲೆ. ಹರಳನ್ನೊಯ್ದು ಮುತ್ತನ್ನು, ಮುತ್ತನ್ನೊಯ್ದು ಹರಳನ್ನಾಗಿಯೂ ಪರಿವರ್ತಿಸಲು ನನಗೆ ಬಹಳ ಸಮಯವೇನು ಬೇಕಾಗಿಲ್ಲ. ಅದು ನನಗೆ ಚನ್ನಾಗಿ ಅಭ್ಯಾಸವಾಗಿ ಹೋಗಿದೆ. ಕೊಂಡುಕೊಳ್ಳುವವರಿಗೆ ತನ್ನ ಮುಂದೆ ಬಿದ್ದಿರುವ ಕಬ್ಬಿಣವನ್ನು ಚಿನ್ನವೆಂದು ನಂಬಿಸಿ ಮೋಸ ಮಾಡುವ ನನಗೆ ಇಂತಹ ಕುತಂತ್ರಗಳೇನೂ ಹೊಸದಲ್ಲ. ಆ ಮೂಲಕ ನಾನು ಬರೀ ಕೊಳ್ಳುವನನ್ನು ಮಾತ್ರ ಮೋಸ ಮಾಡುವದಿಲ್ಲ, ಮಾರಾಟಗಾರನನ್ನು ಸಹ ವಂಚಿಸುತ್ತೇನೆ. ಕೆಲವು ದನದ ಮಾಲೀಕರು ಜಾತ್ರೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ತಮ್ಮ ಕಣ್ಣುಗಳನ್ನು ಉಜ್ಜುತ್ತಾ, ಆಕಳಿಸುತ್ತಾ ಕುಳಿತುಕೊಳ್ಳುತ್ತಾರೆ. ಅಂಥವರ ಹತ್ತಿರ ವ್ಯಾಪಾರ ಬೇಗ ಕುದರದಿರಲೆಂದು ಆಗಲೋ ಈಗಲೋ ಎಂಬಂತೆ ಒಂದೊಂದೇ ಗಿರಾಕಿಗಳನ್ನು ಕಳಿಸಿ ಕೊಡುತ್ತೇನೆ. ನಾನು ಹಸುಗಳ ಕೆಚ್ಚಲನ್ನು ಕೈಯಿಂದ ಸವರಿಯೇ ಅದು ಗೊಡ್ಡು ಹೌದೋ ಅಲ್ಲವೋ ಎಂಬುದನ್ನು ಹೇಳಬಲ್ಲೆ. ಒಂದೊಂದು ಸಾರಿ ನಾನು ನೋಡುವ ನೋಟಕ್ಕೆನೇ ಅದರ ಮಾಲಿಕನಿಗೆ ತಾನು ತನ್ನ ಹಸುವಿನಲ್ಲಿ ಮುಚ್ಚಿಟ್ಟ ಕುಂದು ಕೊರತೆಗಳು ನನಗೆ ಗೊತ್ತಾಗಿಬಿಟ್ಟಿವೆಯೆಂದು ಆತನಿಗೆ ಗೊತ್ತಾಗಿ “ಇದೆಲ್ಲಾ ನಿಂಗೆ ಹೆಂಗೆ ಗೊತ್ತಾಗುತ್ತೆ, ತನ್ಸುಖ್? ಹಾಗಾದ್ರೆ ಇದು ಬಾಳ ಬೆಲೆ ಬಾಳೋದಿಲ್ಲಾ ಅಂತಿಯಾ? ನೋಡು ಹಾಗಿದ್ರೆ, ನೀನು ಕಮ್ಮಿ ಬೆಲೆಗೆ ಕೊಡು ಅಂದ್ರೆ ಕೊಟ್ಟುಬಿಡ್ತೀನಿ....... ” ಎಂದು ತಾವೇ ಹೇಳುತ್ತಾ ಮುಂದೆ ಬರುತ್ತಾರೆ. ಇದರರ್ಥ ಇಷ್ಟೇ.... ನನಗೆ ಜನರನ್ನು ಹೇಗೆ ಮರುಳು ಮಾಡಬೇಕೆಂಬುದು ಚನ್ನಾಗಿ ಗೊತ್ತಿದೆ.

    ಅಷ್ಟಕ್ಕೂ ನಾನ್ಯಾರು? ತನ್ಸುಖ್, ಒಬ್ಬ ದಲ್ಲಾಳಿ!




    ನಂದು ತಕ್ಕ ಕೆಲಸವಲ್ಲ ಅಂತಾ ನಂಗೆ ಚನ್ನಾಗಿ ಗೊತ್ತಿದೆ. ದಿನಾಲೂ ಒಬ್ಬ ಮುಗ್ಧನನ್ನು ಮೋಸಗೊಳಿಸುವದಷ್ಟೇ ನನ್ನ ಕಾಯಕ. ಸುಳ್ಳು ಹೇಳುವದು ಕೂಡ ಕಡು ಪಾಪದ ಕೆಲಸವೆಂದು ನಂಗೆ ಚನ್ನಾಗಿ ಗೊತ್ತು. ಆದರೇನು ಮಾಡಲಿ? ನನ್ನ ಹೊಟ್ಟೆಪಾಡಿಗಾಗಿ ಅದನ್ನೆಲ್ಲಾ ಮಾಡಲೇಬೇಕಾಗಿದೆ. ಇದನ್ನು ಬಿಟ್ಟರೆ ನನ್ನ ಜೀವನೋಪಾಯಕ್ಕೆ ಬೇರೆ ಯಾವುದೇ ದಾರಿ ಇಲ್ಲ. ಮೇಲಾಗಿ ನನಗೆ ಹೊಲವಾಗಲಿ ಇತರೆ ಆಸ್ತಿಯಾಗಲಿ ಯಾವುದೂ ಇಲ್ಲ. ಹಾಗಾಗಿ, ನಾನು ತಾನೆ ಏನು ಮಾಡಲು ಸಾಧ್ಯ? ನನಗೆ ಬೇಕಾಗಿರೋದು ಕಮೀಷನ್ ಒಂದೇ! ನನಗೆ ಗೊತ್ತು ದಲ್ಲಾಳಿ ಕೆಲಸ ಈ ಸಮಾಜದಲ್ಲಿ ಅಂಥಾ ಗೌರವ ತರುವಂಥ ಕೆಲಸವಲ್ಲವೆಂದು. ದಲ್ಲಾಳಿ ಎನ್ನುವ ಪದವೇ ಮನದಲ್ಲಿ ಹೇಸಿಗೆ ಭಾವನೆಯನ್ನು ಹುಟ್ಟಿಸುತ್ತದೆ. ಆದರೇನು ಮಾಡ್ಲಿ? ನಾನೊಬ್ಬ ಅಸಹಾಯಕ. ಇದು ಬಿಟ್ಟರೆ ಬೇರೆ ದಾರಿಯೇ ಇಲ್ಲ. ಇಷ್ಟೊತ್ತು ನಾನು ನನ್ನ ಬಗ್ಗೆ ಹೇಳಿಕೊಂಡಿದ್ದು ನನ್ನ ಬುದ್ಧಿವಂತಿಕೆಯನ್ನು ಪ್ರದರ್ಶಿಸುವದಕ್ಕಲ್ಲ. ಆದರೆ ನಾನು ಎಂತೆಂಥ ಹೀನ ಕೃತ್ಯಗಳನ್ನು ಎಸಗುತ್ತೇನೆ ಮತ್ತು ಅವನ್ನು ಎಸಗುವದರಲ್ಲಿ ಎಷ್ಟೊಂದು ಪಳಗಿ ಹೋಗಿದ್ದೇನೆಂದು ತಿಳಿಸಲು ಹೇಳಿದೆನಷ್ಟೆ.

    ಈ ಘಟನೆ ನಡೆದಿದ್ದು ಒಂದು ಬೇಸಿಗೆಯ ಸಂಜೆ. ನಾನು ಆಗಷ್ಟೆ ಮನೆಗೆ ಮರಳಿ ನನ್ನ ಮನೆಯ ಪ್ರವೇಶದ್ವಾರಕ್ಕೆ ಹೊಂದಿಕೊಂಡಂತೆ ಅದರ ಪಕ್ಕದಲ್ಲಿಟ್ಟಿದ್ದ ಹೊರಸಿನ ಮೇಲೆ ಮಲಗಿದ್ದೆ. ಮೇಲೆ ಗುಬ್ಬಿಗಳು ಒಂದೇ ಸಮನೆ ಕಿಚಪಿಚ ಹಚ್ಚಿದ್ದರಿಂದ ನನಗೆ ನಿದ್ರೆ ಕಿಂಚಿತ್ತೂ ಹತ್ತಿರ ಸುಳಿಯಲಿಲ್ಲ. ಆಗಲೇ ನನ್ನ ಮನೆಯ ಮೇಲ್ಚಾವಣಿಯನ್ನು ಮೊಟ್ಟಮೊದಲಬಾರಿಗೆಂಬಂತೆ ನೋಡತೊಡಗಿದೆ. ಅದರ ಗಿಲಾವು ಕಿತ್ತುಹೋಗಿ ಜಂತಿಗಳೆಲ್ಲಾ ಬಿಡಿಬಿಡಿಯಾಗಿ ಬಿಟ್ಟುಕೊಂಡು ಒಂದಕ್ಕೊಂದು ಪೈಪೋಟಿ ನಡೆಸಿದವರ ತರ ಈಗಲೋ ಆಗಲೋ ನನ್ನ ಮೇಲೆ ಬೀಳುತ್ತಿವಿಯೇನೋ ಎಂಬಂತೆ ಭಾಸವಾದವು.

    ಕಿತ್ತುಹೋದ ನನ್ನ ಮನೆಯ ಮೇಲ್ಚಾವಣಿ ನನ್ನ ವೃದ್ಯಾಪ್ಯವನ್ನು ಜ್ಞಾಪಿಸಿದರೆ ಜಂತಿಯಲ್ಲಿ ಬಿದ್ದ ತೂತುಗಳು ನನ್ನ ಜೀವನದ ಶೂನ್ಯವನ್ನು ಒತ್ತಿ ಹೇಳಿದವು. ಕೂಡಲೇ ನನ್ನ ಮನಸ್ಸು ಇದುವರೆಗೂ ನಾನೆಷ್ಟು ಸುಳ್ಳುಗಳನ್ನು ಹೇಳಿದ್ದೇನೆ, ಎಷ್ಟು ಪಾಪಗಳನ್ನು ಮಾಡಿದ್ದೇನೆ, ಎಷ್ಟು ರೋಗಗ್ರಸ್ಥ ದನಗಳನ್ನು ಒಳ್ಳೆ ಬೆಲೆಗೆ ಮಾರಿಸಿದ್ದೇನೆ, ಎಷ್ಟು ಕಟ್ಟುಮಸ್ತಾದ ದನಗಳನ್ನು ಸೊವಿ ಬೆಲೆಗೆ ಮಾರಿಸಿದ್ದೇನೆಂಬುದನ್ನು ಲೆಕ್ಕಹಾಕತೊಡಗಿತು. ಈ ಹೊಟ್ಟೆಗೋಸ್ಕರ ನಾನು ಎಂತೆಂಥ ಪಾಪಗಳನ್ನು ಮಾಡಲಿಲ್ಲ? ಎಷ್ಟೊಂದು ಸುಳ್ಳುಗಳನ್ನು ಹೇಳಲಿಲ್ಲ? ಆದರೂ ಅದಿನ್ನೂ ಖಾಲಿಯಾಗಿಯೇ ಉಳಿದಿದೆ.

    ನಾನಿನ್ನೂ ನನ್ನ ಹಿಂದಿನದರ ಕುರಿತು ಯೋಚಿಸುತ್ತಿದ್ದೆ. ಅಷ್ಟರಲ್ಲಿ ಇದಕ್ಕಿದ್ದಂತೆ ನನ್ನನ್ನು ಭೇಟಿ ಮಾಡಲು ಬಂದ ವ್ಯಕ್ತಿಯೊಬ್ಬ ನನ್ನನ್ನು ವರ್ತಮಾನಕ್ಕೆ ಎಳೆದು ತಂದಿದ್ದ.

    “ರಾಮ್-ರಾಮ್, ಸಾ!”

    “ರಾಮ್-ರಾಮ್, ಭಾಯಿ!” ನಾನು ಮರು ಶುಭಾಶಯ ಹೇಳಿದೆ.

    “ನೀನು ತನ್ಸುಖ್ ಅಲ್ಲವೆ?”

    “ಹೌದು”

    “ನಂಗೊಂದು ಎಮ್ಮೆಯನ್ನು ಕೊಳ್ಳಬೇಕಾಗಿದೆ” ಅವನು ನನ್ನ ಕಾಲ ಬಳಿ ಹೊರಸಿನ ಮೇಲೆ ಕೂರುತ್ತಾ ಹೇಳಿದ.

    ಅವನಿಗೆ ವಯಸ್ಸಾಗಿತ್ತು. ಬಹುಶಃ, ಅರವತ್ತೋ ಅರವತ್ತರ ಮೇಲಾಗಿರಬೇಕು. ಅವನ ಮುಖ ಅವನು ಜೀವನದಲ್ಲಿ ತುಂಬಾ ನೊಂದಿದ್ದಾನೆಂದು ಹಾಗೂ ಯಾವುದೋ ತೊಂದರೆಯಲ್ಲಿದ್ದಾನೆಂದು ಹೇಳುತ್ತಿತ್ತು. ತಕ್ಷಣ ನನಗೆ ನನ್ನ ಪಾಪಗಳನ್ನೆಲ್ಲಾ ತೊಳೆದುಕೊಳ್ಳಲು ಇದೊಂದು ಒಳ್ಳೆ ಅವಕಾಶವಾಗಿ ಕಂಡಿತು. ಸರಿ, ಈತನಿಗೆ ಒಂದು ಒಳ್ಳೆ ಎಮ್ಮೆಯನ್ನು ಕೊಡಿಸುವದರ ಮೂಲಕ ನನ್ನೆಲ್ಲಾ ಪಾಪಗಳನ್ನು ತೊಳೆದುಕೊಳ್ಳಬಹದು ಎಂದು ಮನಸ್ಸಲ್ಲೇ ಲೆಕ್ಕಹಾಕತೊಡಗಿದೆ. ಅವನು ನೀರು ಕುಡಿಯುತ್ತಾ “ನಾನು ಹೇಳಿದ್ದು ಕೇಳಿಸ್ತಾ?” ಎಂದು ಮತ್ತೆ ಕೇಳಿದ.

    “ಹಾ, ಕೇಳಿಸ್ತು. ನಿಂಗೆ ಬೇಕಾಗಿರುವ ಎಮ್ಮೆಯನ್ನು ನೋಡಿದಿಯಾ?”

    “ಹಾಂ, ನೋಡಿದ್ದೇನೆ. ನೀನು ವ್ಯಾಪಾರ ಮುಗಿಸಿಕೊಡೊದಾದರೆ........”

    “ಎಲ್ಲಿದೆ ಅದು?”

    “ಹೇ......, ಇಲ್ಲೇ ಹತ್ತಿರದಲ್ಲೇ. ನಿಮ್ಮ ಮುಂದಿನ ಬೀದಿಯಲ್ಲಿರೊ ಕಾಶಿ ರಿಗಾರಂದು”

    ಕಾಶಿಯ ಹೆಸರು ಕೇಳುತ್ತಿದ್ದಂತೆ ಬಡತನದಲ್ಲಿ ಬೆಂದುಹೋದ ಅವನ ಮನೆ ಹಾಗೂ ಅವನ ಮುಗ್ಧ ಮುಖ, ಏಕಕಾಲಕ್ಕೆ ನನ್ನ ಕಣ್ಮುಂದೆ ಮಿಂಚಿನಂತೆ ಹಾದು ಹೋದವು. ಕಾಶಿಯ ಹೆಂಡತಿ ಕ್ಯಾನ್ಸರ್ ನಿಂದ ಕುಗ್ಗಿ ಹೋಗಿ ಅವಳ ಹಸುಗೂಸುಗಳು ಅವಳ ಮುಖವನ್ನೇ ದಿಗ್ಬ್ರಾಂತಿಯಿಂದ ನೋಡುತ್ತಾ ಅವಳು ಬದುಕುಳಿಯಲೆಂದು ಆಸೆಪಡುತ್ತಿದ್ದವು. ಕಾಶಿ ತನ್ನ ಹೆಂಡತಿಯ ಆಸ್ಪತ್ರೆ ಖರ್ಚನ್ನು ಭರಿಸಲು ಇದ್ದ ಒಂದೇ ಒಂದು ಎಮ್ಮೆಯನ್ನು ಮಾರಬೇಕಾಗಿತ್ತು. ಅವನು ಆಗಾಗ ನನ್ನ ಹತ್ತಿರ ಹೇಳುತ್ತಿದ್ದ “ತನ್ಸುಖ್, ನನ್ನ ಎಮ್ಮೆಯನ್ನು ಮಾರಿಸಿಕೊಡು. ನಿನಗೆ ತಿಳಿದಂತೆ ನನ್ನ ಹೆಂಡತಿ ಆರೈಕೆಗೆ ಉಳಿದಿರುವದು ಇದೊಂದೇ ದಾರಿ....... ಡಾಕ್ಟರು ಬೇರೆ ಆಪರೇಶನ್ ಮಾಡಬೇಕು ಅಂತಾ ಹೇಳಿದ್ದಾರೆ...... ಈಗ ನನ್ನ ಹತ್ರ ಒಂದು ನಯಾಪೈಸಾ ಇಲ್ಲ...... ನೀನು ಹೆಂಗೂ ದಲ್ಲಾಳಿಯಿದ್ದೀ..... ನಂಗಿದನ್ನು ಒಳ್ಳೆ ಬೆಲೆಗೆ ಮಾರಿಸಿಕೊಟ್ರೆ ದೊಡ್ಡ ಉಪಕಾರವಾಗುತ್ತೆ..... ನಿಂಗೆ ಬೇಕಾದರೆ ಕಮೀಷನ್ನೂ ತಗೋ......”

    ಅದೇನು ನಂಗೆ ಅಂಥಾ ಕಷ್ಟದ ಕೆಲಸವೇನಾಗಿರಲಿಲ್ಲ. ಆದರೆ ಆ ಹೆಸರೇ ನನ್ನಮುಂದೆ ಬೇರೊಂದು ಚಿತ್ರಣವನ್ನು ತಂದಿತು-ಅದು ಕಾಶಿಯ ರೋಗಗ್ರಸ್ಥ ಎಮ್ಮೆ. ಅದಕ್ಕೀಗಾಗಲೆ ನಾಲ್ಕು ಸಾರಿ ಹೊಟ್ಟಿ ಹೋಗಿತ್ತು. ಪಶುವೈದ್ಯರು ಅದನ್ನು ಆರೈಕೆ ಮಾಡಿದ್ದರೂ ಅದಕ್ಕೆ ಇನ್ನೊಂದು ಸಾರಿಯೇನಾದರು ಗರ್ಭಪಾತವಾದರೆ ಖಂಡಿತ ಸಾಯುತ್ತದೆಂದು ಎಚ್ಚರಿಕೆ ನೀಡಿದ್ದರು.

    ನಾನೀಗ ಇಕ್ಕಟ್ಟಿನಲ್ಲಿ ಸಿಲುಕಿದ್ದೆ. ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಸುಮ್ಮನೆ ಯೋಚಿಸುತ್ತಾ ಕುಳಿತುಬಿಟ್ಟೆ. ನಮ್ಮಿಬ್ಬರ ನಡುವೆ ಸ್ವಲ್ಪ ಹೊತ್ತು ಮೌನ ಆವರಿಸಿತ್ತು.

    ಸ್ವಲ್ಪ ಸಮಯದ ಬಳಿಕ ಆ ಮುದಕನೇ ಮೌನವನ್ನು ಮುರಿದನು.

    “ಏನು ಯೋಚಿಸುತ್ತಿದ್ದೀಯಾ ತನ್ಸುಖ್? ನನ್ನ ಬೇಡಿಕೆಯನ್ನು ಈಡೇರಿಸ್ತೀಯಾ ಹೇಗೆ?”

    “ಇಲ್ಲ. ಇನ್ನೂ ಇಲ್ಲ. ಅಂದಹಾಗೆ ಆ ಎಮ್ಮೆ ಕಾಶೀದು ಅಂತ ಹೇಳಿದಿಯಲ್ವಾ?”

    “ಹೌದು, ಯಾಕಿಷ್ಟೊಂದು ಪೇಚಾಡ್ತಿದ್ದೀಯಾ? ಏನಾದ್ರು ತೊಂದ್ರೆಯಿದಿಯಾ? ಇದ್ರೆ ಬೇಡ..... ಮೊದ್ಲೇ ಹೇಳಿ ಕೇಳಿ ನಾನು ಬಡವ..... ಈಗ್ಲೇ ಇಷ್ಟೊಂದು ಕಷ್ಟ..... ಅಂಥಾದ್ದರಲ್ಲಿ ನನ್ನನ್ನು ಇನ್ನೊಂದು ಕಷ್ಟಕ್ಕೆ ನೂಕಬೇಡ.. .......ಅಂದಹಾಗೆ ಅದನ್ನು ನನ್ನ ಮಗನಿಗೋಸ್ಕರ ಕೊಳ್ತಾಇದ್ದೀನಿ”

    “ನಿನ್ನ ಮಗನಿಗೋಸ್ಕರ.....?”

    “ಹೌದು, ನನ್ನ ಮಗನಿಗೆ ಹುಷಾರಿಲ್ಲ. ಎರಡು ವರ್ಷದಿಂದ ದವಾಖಾನೆಯಲ್ಲೇ ಇದ್ದ. ನಿನ್ನೆಯಷ್ಟೆ ಮನೆಗೆ ವಾಪಾಸಾಗಿದ್ದಾನೆ. ಡಾಕ್ಟರು, ಅವನು ಮೊದಲಿನಂತೆ ಮೈ ಕೈ ತುಂಬಿಕೊಂಡು ಓಡಾಡಲು ದಿನಾಲೂ ಹಾಲು ಕುಡಿಬೇಕು ಅಂತಾ ಹೇಳಿದ್ದಾರೆ. ಅದಕ್ಕೆ ಒಂದು ಎಮ್ಮಿ ಕೊಂಡ್ಕೋಬೇಕು ಅಂತಾ ಬಂದಿದ್ದೇನೆ. ಅದರಿಂದ ಮನೆಗೆ ಆದಾಯವೂ ಬರಬೇಕು, ನನ್ನ ಮಗನ ಆರೈಕೆಯೂ ನಡಿಬೇಕು”

    “ಓ...!”

    “ಹೌದು, ತನ್ಸುಖ್. ನಾನು ಹಾಳಾಗದೆ ಇರೋ ತರ ನೋಡಿಕೊ. ಇವಾಗಲೇ ಇಷ್ಟೊಂದು ಕಷ್ಟ. ಅದಕ ಮತ್ತ ಇನ್ನೊಂದು ಕಷ್ಟ ಕೂಡಿಸಬೇಡ”

    ಒಮ್ಮೆಲೆ ನಿಟ್ಟುಸಿರು ಬಿಡುತ್ತಾ ದಿಗ್ಭ್ರಾಂತನಾಗಿ ಕುಳಿತುಬಿಟ್ಟೆ. ಇಡಿ ಆಕಾಶ ನನ್ನ ಸುತ್ತ ಗಿರಗಿರನೆ ತಿರುಗಿದಂತೆ ಭಾಸವಾಯಿತು. ಎದೆ ಹೊಡೆದುಕೊಳ್ಳತೊಡಗಿತು. ನನ್ನ ಇಪ್ಪತ್ತು ವರ್ಷದ ದಲ್ಲಾಳಿ ವೃತ್ತಿ ಜೀವನದಲ್ಲಿ ನಾನ್ಯಾವತ್ತೂ ಈ ಪರಿಯ ಸಂದಿಗ್ಧಕ್ಕೆ ಸಿಲುಕಿರಲಿಲ್ಲ.
    ಒಂದೇ ಏಟಿಗೆ ಈ ಮುದುಕ ನನ್ನೆಲ್ಲ ಪಾಪಗಳಿಗೆ ಶಿಕ್ಷೆಯಾಗಿ ಅವನ್ನು ತೊಳೆದುಕೊಳ್ಳಲು ಒಂದು ಅವಕಾಶವನ್ನಿತ್ತಿದ್ದ.......
    ಕೂಡಲೇ ಕೈ ಚಾಚುತ್ತಾ ನಿಂತುಕೊಂಡಿರುವ ಎರಡು ಹಸಿದ ಕಂದಮ್ಮಗಳು ಹಾಗೂ ಇನ್ನೇನು ಕೊನೆಯುಸಿರೆಳೆಯುವ ಎರಡು ರೋಗಗ್ರಸ್ಥ ಜೀವಗಳು ನನ್ನ ಕಣ್ಣು ಮುಂದೆ ಬಂದು ನಿಂತವು.

    ಯಾರನ್ನು ಕಾಪಾಡಲಿ? ಯಾರನ್ನು ಬಿಡಲಿ?

    ಯಾರಿಗೆ ಮೋಸಮಾಡಲಿ, ಕಾಶಿಗಾ ಇಲ್ಲ ಈ ಮುದಕನಿಗಾ?

    ಈ ಪ್ರಶ್ನೆಗಳು ಎವೆಯಿಕ್ಕದೆ ನನ್ನನ್ನೇ ನೋಡುತ್ತಾ ಒಮ್ಮೆ ಕಟುಕಿದವು. ನಾನು ಈ ಮುದಕನಿಗೆ ಏನು ಹೇಳಲಿ- ಹೂಂ ಅಥವಾ ಊಹೂಂ? ಹೂಂ ಎಂದು ಹೇಳಿದರೆ ಆ ಮುದಕನನ್ನು ಕೊಲೆಗೈದಂತೆ. ಊಹೂಂ ಎಂದು ಹೇಳಿದರೆ ಕಾಶಿಯ ಕತೆ ಮುಗಿದಂತೆ.

    “ತನ್ಸುಖ್ಜಿ, ಕಾಶಿ ಮನೆಗೆ ಹೊಗೋಣವೆ?” ಆ ಯಜಮಾನ ಮತ್ತೊಮ್ಮೆ ಕೇಳಿದ.

    “ಕ್ಷಮಿಸಿ ಯಜಮಾನ್ರೆ..... ನಾನು ದಲ್ಲಾಳಿಯಲ್ಲ.......” ನನ್ನ ಧ್ವನಿ ಗದ್ಗದಿತವಾಗುತ್ತಿದ್ದುದು ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. “ನಿಮಗೆ ಹೇಗೆ ಬೇಕೋ, ಹಾಗೆ ಮಾಡಿ”

    ಆ ಮುದುಕ ತನ್ನ ಊರುಗೋಲಿನ ಸಹಾಯದಿಂದ ನಿಧಾನವಾಗಿ ಮೇಲೆದ್ದು ಹೋಗಲಣಿಯಾದ. ಅವ ತನ್ನ ನಡುಗುವ ಕಾಲುಗಳಲ್ಲಿ ಹೊರಗೆ ಹೋಗುವದನ್ನೇ ನೋಡುತ್ತಾ ಹೊರಸಿನ ಮೇಲೆ ಒಬ್ಬನೇ ಕುಳಿತೆ. ಪುನಃ ಮಲಗಿಕೊಳ್ಳುತ್ತಾ ಮೊದಲಿನಂತೆ ನನ್ನ ಮೇಲ್ಚಾವಣಿಯನ್ನೇ ನೋಡತೊಡಗಿದೆ.

    ಎಂದಿನಂತೆ ಮೇಲೆ ಗುಬ್ಬಿಗಳು ಕಿಚಪಿಚ ಎನ್ನುತ್ತಾ ತಮ್ಮ ಜಗಳದಲ್ಲಿ ನಿರತವಾಗಿದ್ದವು.

    ಮೂಲ ರಾಜಸ್ಥಾನಿ: ರಾಮ್ ಸ್ವರೂಪ್ ಕಿಸನ್

    ಇಂಗ್ಲೀಷಿಗೆ: ಗೋವಿಂದ ನಿಹಾಲಣಿ

    ಕನ್ನಡಕ್ಕೆ: ಉದಯ್ ಇಟಗಿ

    (1997 ರಲ್ಲಿ ಭಾರತೀಯ ಭಾಷೆಗಳ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕಥೆ.)
    ಜನೇವರಿ 16, 2011 ರ ಉದಯವಾಣಿ ಪತ್ರಿಕೆಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟ. ಅದರ ಲಿಂಕ್ ಗಳು ಇಲ್ಲಿವೆ
    1. http://74.127.61.106/epaper/PDFList.aspx?Pg=H&Edn=MN&DispDate=1%2F16%2F2011 (PDF Version)

    2. http://www.udayavani.com/news/43157L15-%E0%B2%A6%E0%B2%B2-%E0%B2%B2-%E0%B2%B3-">
    ಚಿತ್ರ ಕೃಪೆ: ಉದಯವಾಣಿ