Demo image Demo image Demo image Demo image Demo image Demo image Demo image Demo image

ದೋಣಿಯಾಟ

  • ಶುಕ್ರವಾರ, ಮಾರ್ಚ್ 20, 2009
  • ಬಿಸಿಲ ಹನಿ
  • ಲೇಬಲ್‌ಗಳು:
  • ನಾನು ಮೊನ್ನೆಯಷ್ಟೇ ರಬಿಂದ್ರನಾಥ್ ಟ್ಯಾಗೋರರ “ಆಟಿಕೆಗಳು” ಕವನವನ್ನು ಅನುವಾದಿಸಿ ನನ್ನ ಬ್ಲಾಗಲ್ಲಿ ಪ್ರಕಟಿಸಿದ್ದೆ ಕೂಡ. ಈಗ ಅವರದೇ ಇನ್ನೊಂದು ಕವನ “ಕಾಗದದ ದೋಣಿಗಳು” ನ್ನು ಅನುವಾದಿಸಲು ಕೈಗೆತ್ತಿಕೊಂಡಂತೆ ಕವನದೊಂದಿಗೆ ನನ್ನ ಬಾಲ್ಯದ ನೆನಪುಗಳು ಮೆಲ್ಲಮೆಲ್ಲಗೆ ಹೊರಬಂದು ಗರಿ ಬಿಚ್ಚಿ ಕುಣಿಯತೊಡಗಿದವು. ಕವನದ ಒಳಸತ್ವವನ್ನು ಹೀರಿ ಅನುವಾದಿಸಲು ಮತ್ತೆ ಮತ್ತೆ ಓದುತ್ತಾಹೋದಂತೆ “ಅರೆ, ಹೌದಲ್ಲ! ಇದು ನಾನೇ. ನನ್ನದೇ ಆಟ. ನಾನೂ ಹೀಗೆ ಆಡುತ್ತಿದ್ದೆನಲ್ಲ?” ಎಂದೆನಿಸತೊಡಗಿತು. ಕವಿಯ ಬಾಲ್ಯದ ನೆನಪುಗಳಿಗೂ, ನನ್ನ ಬಾಲ್ಯದ ನೆನಪುಗಳಿಗೂ ಎಷ್ಟೊಂದು ಸಾಮ್ಯ! ನನಗೊಬ್ಬನಿಗೆ ಏನು? ನನ್ನಂತೆ ಹಳ್ಳಿಗಾಡಿನಲ್ಲಿ ಬೆಳೆದ ಬಹಳಷ್ಟು ಜನಕ್ಕೆ ಇದೆ ತರದ ಅನುಭವಗಳು, ನೆನಪುಗಳು ಇರಲಿಕ್ಕುಂಟು! ಈ ಮಳೆ, ಕಾಗದದ ದೋಣಿ, ನದಿಗಳೊಂದಿಗೆ ತೆರೆದುಕೊಳ್ಳುವ ನೆನಪುಗಳನ್ನು ಸುಮ್ಮನೆ ಬೆನ್ನಟ್ಟಿಹೋದೆ. ಅಲ್ಲಿ ಏನೇನೆಲ್ಲ ಇತ್ತು? ಒಂದಷ್ಟು ಹುಡುಗು ಮನಸ್ಸಿನ ಮಧುರ ಕಲ್ಪನೆಗಳಿದ್ದವು, ಕನಸುಗಳಿದ್ದವು ಹಾಗೂ ಸಮುದ್ರವನ್ನು ಹೋಗಿ ಸೇರಲೇಬೇಕೆಂಬ ವಾಸ್ತವ ಭ್ರಮೆಯ ಗುರಿಯಿತ್ತು. ಇದರ ಬೆನ್ನಹಿಂದೆಯೇ ವಿವಿಧ ರೂಪಗಳಲ್ಲಿ ಬಂದೆರಗುವ ನಿರಾಶೆಗಳಿದ್ದವು, ನುಚ್ಚುನೂರಾದ ಕನಸುಗಳಿದ್ದವು, ಸೋಲಿನ ವಿಷಾದವಿತ್ತು ಹಾಗೂ ಇದೆಲ್ಲವನ್ನು ತೆಕ್ಕೆಗೆ ತೆಗೆದುಕೊಂಡು ಮತ್ತದೇ ಕನಸುಗಳನ್ನು ಬೆನ್ನಟ್ಟಿ ಗೆದ್ದೇತೀರುತ್ತೇನೆಂಬ ಛಲವಿತ್ತು.

    ಕವಿಯು ಪ್ರತಿದಿನವೂ ಕಾಗದದ ದೋಣಿಗಳನ್ನು ಮಾಡಿ ಅವುಗಳ ಮೇಲೆ ತನ್ನ ಹೆಸರು ಮತ್ತು ತಾನಿರುವ ಊರಿನ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಬರೆದು ಹರಿವ ಹೊಳೆಯಲ್ಲಿ ತೇಲಿಬಿಡುತ್ತಾನೆ. ತನ್ನ ಹೆಸರು ಮತ್ತು ತಾನಿರುವ ಊರಿನ ಹೆಸರನ್ನು ಬರೆಯುವದೇಕೆಂದರೆ ಅದು ದೂರದ ನಾಡಿನವರಿಗೆ ಯಾರಿಗಾದರೂ ಸಿಕ್ಕಿ ಅವರಿಗೆ ತಾನಾರೆಂದು ಗೊತ್ತಾಗಲಿ ಎನ್ನುವ ದೂರದ ಆಸೆ. ಆ ಮೂಲಕ ತನ್ನತನವನ್ನು, ತನ್ನ ಅಸ್ಥಿತ್ವವನ್ನು ಖಾತ್ರಿಪಡಿಸುವ ಅಥವಾ ಭದ್ರವಾಗಿ ನೆಲೆಯೂರಿಸುವಾಸೆ. ಹೀಗೆ ಸಣ್ಣದಾಗಿ ಆರಂಭವಾಗುವ “Identity Crisis” ಮುಂದೊಂದು ದಿನ ಎಷ್ಟೊಂದು ದೊಡ್ಡದಾಗಿ ಬೆಳೆದುಬಿಡತ್ತದಲ್ಲ ಎಂದು ನಾನು ಅಚ್ಚರಿಪಟ್ಟಿದ್ದಿದೆ. ಹೀಗೆ ತೇಲೆಬಿಟ್ಟ ದೋಣಿಯನ್ನು ಸುಮ್ಮನೆ ಕಳಿಸಿಕೊಡಲಾದೀತೆ? ಅದನ್ನು ಒಂದಿಷ್ಟು ಅಂದವಾಗಿ ಚೆಂದವಾಗಿ ಕಳಿಸಿಕೊಡಬೇಡವೆ? ಹಾಗಾಗಿ ಅದರಲ್ಲೊಂದಿಷ್ಟು ಮನೆಯ ತೋಟದಲ್ಲಿ ಬೆಳೆದ ಪಾರಿಜಾತದ ಹೂಗಳನ್ನು ತುಂಬಿ ಸುರಕ್ಷಿತವಾಗಿ ಕಳಿಸಿಕೊಡುತ್ತಾನೆ. ತೇಲಿಬಿಟ್ಟ ನಂತರ ಆಕಾಶದೆಡೆಗೆ ನೋಡುತ್ತಾನೆ. ಮೋಡಗಳದಾಗಲೇ ದೋಣಿಗಳೊಂದಿಗೆ ವಿಹರಿಸಲು ತಯಾರಿ ನಡೆಸುತ್ತಿವೆ. ಕವಿಯ ಖುಶಿ ಇಮ್ಮುಡಿಯಾಗುತ್ತದೆ. ಕತ್ತಲಾಗುತ್ತಿದ್ದಂತೆ ತನ್ನ ಬಾಹುಗಳಲ್ಲಿ ಮುಖವನ್ನು ಹುದುಗಿಸಿ ದೋಣಿಗಳು ಯಕ್ಷಿಣಿಯರನ್ನು ಹಾಗೂ ಅವರ ಕನಸ ಬುಟ್ಟಿಗಳನ್ನು ಹೊತ್ತು ದೂರ ದೂರ ಸಾಗುತ್ತಿರುವಂತೆ ಕನಸು ಕಾಣುತ್ತಾನೆ. ಅಲ್ಲಿಗೆ ಕವನ ಮುಗಿಯುತ್ತದೆ. ಇದು ನಮ್ಮಂಥ ದೊಡ್ಡವರಿಗೆ ತೀರ ಬಾಲಿಶ ಎನಿಸಬಹುದಾದರೂ ಮಕ್ಕಳಿಗೆ ಇಷ್ಟವಾಗುವ ಪದ್ಯ. ಕನಸುಗಳನ್ನು ತಂದುಕೊಡುವ ಆಟಗಳು ಹಾಗೂ ಆ ತರದ ಪದ್ಯಗಳು ಯಾವ ಮಕ್ಕಳಿಗೆ ತಾನೆ ಇಷ್ಟವಾಗುವದಿಲ್ಲ?

    ಟ್ಯಾಗೋರರು ಇದನ್ನು ಬರೆದು ಕೆಲವು ವರ್ಷಗಳ ನಂತರ “ಕಾಗದದ ದೋಣಿ” ಎನ್ನುವ ಮತ್ತೊಂದು ಗಂಭೀರ ಪದ್ಯವನ್ನು ಬರೆದರು. ಇದನ್ನು ಬರೆಯುವಾಗ ಜೀವನದಲ್ಲಿ ಅವರು ಸಾಕಷ್ಟು ಮಳೆ, ಗಾಳಿ, ಬಿಸಿಲುಗಳನ್ನು ಉಂಡಿದ್ದರು. ಇಂಥ ಎಲ್ಲ ಅನುಭವಗಳ ಪಕ್ವದ ಹಿನ್ನೆಲೆಯಲ್ಲಿಯೇ ಈ ಕವನ ಹೊರಬಂದಿದ್ದು.

    ಕವನ ಆರಂಭವಾಗುವದೇ ಕವಿಯ ಬಾಲ್ಯದ ದೋಣಿಯಾಟದ ನೆನಪುಗಳೊಂದಿಗೆ. ಒಂದು ಮಳೆಗಾಲದ ದಿನ ರಾಡಿ ನೀರಲ್ಲಿ ಕಾಗದದ ದೋಣಿಗಳನ್ನು ಮಾಡಿ ತೇಲಿಬಿಡುತ್ತಿದ್ದಾನೆ. ಅವು ತೇಲುತ್ತಾ ತೇಲುತ್ತಾ ದೂರ ದೂರ ಸಾಗುವದನ್ನು ನೋಡಿ ಮನದಣಿಯುತ್ತಾನೆ. ಸೇರಬೇಕಾದವರನ್ನು ಸೇರುತ್ತವೆ ಎಂದು ನಿರೀಕ್ಷಿಸುತ್ತಾನೆ. ಆದರೆ ಈ ಖುಶಿ ನಾಶವಾಗಲು ಎಷ್ಟು ಹೊತ್ತು? ಇದ್ದಕ್ಕಿದ್ದಂತೆ ಆಗಸದಲ್ಲಿ ಮೋಡಗಳು ದಟೈಸಿ ಮಳೆ ಧಾರಾಕಾರವಾಗಿ ಸುರಿದು ದೋಣಿಯನ್ನು ಮುಳುಗಿಸಿಬಿಡುತ್ತದೆ. ಕವಿಯ ಕಲ್ಪನೆ, ಕನಸುಗಳೆಲ್ಲವೂ ನುಚ್ಚುನೂರಾಗುತ್ತವೆ. ಕವಿಗೆ ಕೋಪ, ಹತಾಶೆ, ದುಃಖ ಒಟ್ಟಿಗೆ ಆವರಿಸುತ್ತವೆ. ಮಳೆಗೆ ಹಿಡಿಶಾಪ ಹಾಕುತ್ತಾನೆ. ತನ್ನ ಸಂತೋಷವನ್ನೆಲ್ಲ ಕಿತ್ತುಕೊಂಡ ಪಾಪಿ ಎಂದು ಜರೆಯುತ್ತಾನೆ. ಈ ಮಳೆಯು ತಾನು ಖುಶಿಯಾಗಿ ಆಡುತ್ತಿರುವದನ್ನು ಕಂಡು ಹೊಟ್ಟೆಕಿಚ್ಚಿನಿಂದ ಇಡಿ ಭೂಮಿಯ ಮೇಲಿನ ಸೇಡನ್ನು ತನ್ನೊಬ್ಬನ ವಿರುದ್ಧ ಮಾತ್ರವೇ ತೀರಿಸಿಕೊಳ್ಳಲು ಬಂದ ದುಷ್ಟಶಕ್ತಿಯೆಂದು ಭಾವಿಸುತ್ತಾನೆ. ಒಬ್ಬನೇ ಕುಳಿತು ರೋಧಿಸುತ್ತಾನೆ.

    ಇದೀಗ ಕವಿ ಬೆಳೆದು ದೊಡ್ದವನಾಗಿದ್ದಾನೆ. ಜುಲೈ ತಿಂಗಳಿನ ಒಂದು ಮಳೆಗಾಲದ ದಿನ ಕವಿ ಹೊರಗಡೆ ಕುಳಿತುಕೊಡಿದ್ದಾನೆ. ಮಳೆ ಬೀಳತೊಡಗುತ್ತದೆ. ಆ ಮಳೆಯ ಹನಿಗಳೊಂದಿಗೆ ಅವನ ನೆನಪಿನ ಹನಿಗಳೂ ಬೀಳತೊಡಗುತ್ತವೆ. ಮತ್ತೆ ಅವನ ದೋಣಿಯಾಟ ನೆನಪಾಗುತ್ತದೆ. ಅಂದು ಯಾವುದನ್ನು ಹುಡುಗುತನದಲ್ಲಿ ಪಾಪಿ, ದುಷ್ಟಶಕ್ತಿಯೆಂದು ಕರೆದಿದ್ದನೋ ಇಂದು ಅದನ್ನು ತನ್ನ ಪಕ್ವಗೊಂಡ ಬೌದ್ಧಿಕ ನೆಲೆಯಲ್ಲಿ ತೂಗಿ ನೋಡುತ್ತಾನೆ. ಜೀವನದಲ್ಲಿ ಇಂಥ ಹೊಡೆತಗಳು ಸರ್ವೇಸಾಮಾನ್ಯ ಅವುಗಳನ್ನು ಬಂದಂತೆ ಬಂದಹಾಗೆ ಸ್ವೀಕರಿಸುತ್ತಾ ಹೋಗಬೇಕೆಂಬ ನಿರ್ಣಯವನ್ನು ತಳೆಯುತ್ತಾನೆ. ಮುಂದೆ ಎಂದೋ ಬರುವ ಜೀವನದ ಹೊಡೆತಗಳನ್ನು, ಸೋಲುಗಳನ್ನು ಸ್ವೀಕರಿಸಲು ಬಾಲ್ಯದಿಂದಲೇ ಒಂದು ರೀತಿಯ ಮಾನಸಿಕ ತಯಾರಿಯನ್ನು ನಡೆಸಲು ಹೇಳಿಕೊಟ್ಟ ಈ ದೋಣಿಯಾಟಕ್ಕೆ ಥ್ಯಾಂಕ್ಸ್ ಹೇಳುತ್ತಾನೆ.

    ನನ್ನ ಬಾಲ್ಯವೂ ಹೀಗೆ ಇತ್ತಲ್ಲವೆ? ಆಗ ತಾನೆ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಗಿರುತ್ತಿತ್ತು. ರಜೆಯಲ್ಲಿ ಒಂದೊಂದೇ ಆಟಗಳನ್ನು ಆಡಿ ಮುಗಿಸುತ್ತಿದ್ದಂತೆ ಮುಂಗಾರು ಮಳೆ ಕಾಲಿಟ್ಟಿರುತ್ತಿತ್ತು. ಆಗೊಮ್ಮೆ ಈಗೊಮ್ಮೆ ಬರುವ ಮುಂಗಾರು ಮಳೆಯ ಮುನ್ಸೂಚನೆಯೆಂದರೆ ಆಗಸದಲ್ಲಿ ಮೋಡಗಳು ಕಪ್ಪಾಗುವದು. ಹೀಗೆ ಕಪ್ಪಾಗುವದನ್ನೇ ಕಾಯುತ್ತಿದ್ದ ನಾವು ಕಾಗದದ ದೋಣಿಗಳನ್ನು ಮಾಡಿಟ್ಟುಕೊಂಡು ಸಜ್ಜಾಗಿರುತ್ತಿದ್ದೆವು. ಅವುಗಳ ಮೇಲೆ ನಮ್ಮ ಹೆಸರನ್ನು ಬರೆಯುವದನ್ನು ಎಂದಿಗೂ ಮರೆಯುತ್ತಿರಲಿಲ್ಲ. ಮಳೆ ಹನಿದು ನಿಂತ ಮೇಲೆ ಅಥವಾ ಒಂದೊಂದು ಸಾರಿ ಜಿಟಿ ಜಿಟಿ ಮಳೆಯಲ್ಲಿಯೇ ಅಂಗಳಕ್ಕೆ ಜಿಗಿಯುತ್ತಿದ್ದೆವು. ದೊಡ್ಡಮ್ಮ “ಮಳೆಯಲ್ಲಿ ನೆನೆಯಬೇಡ್ವೋ. ಶಿತ ಆಗುತ್ತೆ” ಅಂತ ಹೇಳಿದರೂ ಕೇಳದೆ ಆಗಷ್ಟೆ ಹನಿದು ಮನೆಯ ಮುಂದೆ ಹರಿಯುತ್ತಿರುವ ರಾಡಿ ನೀರಲ್ಲಿ ದೋಣಿಗಳನ್ನು ಬಿಡಲು ಮುಂದಾಗುತ್ತಿದ್ದೆ. ಆ ಆಟದ ಹುರುಪೇ ಹಾಗಿತ್ತು! ಹೀಗೆ ತೇಲಿಬಿಟ್ಟು ಹರಿವ ನೀರಿನ ಗುಂಟ ಹೋಗಿ ನದಿ ಸೇರುವದನ್ನು ನೋಡುತ್ತಿದ್ದೆವು. ಅದೇನಾದರೂ ನದಿಯನ್ನು ಸೇರಿಬಿಟ್ಟರೆ ನೆಮ್ಮದಿಯಿಂದ ಮನೆಗೆ ವಾಪಾಸಾಗುತ್ತಿದ್ದೆವು. ರಾತ್ರಿಯೆಲ್ಲಾ ದೋಣಿಯದೇ ಕನಸು! ದೋಣಿ ನದಿ ಸೇರಿದೆ, ಅಲ್ಲಿಂದ ನಿಧಾನವಾಗಿ ದೂರ ದೂರ ಸಾಗುತ್ತಾ ಹೋಗುತ್ತದೆ, ಅದರಲ್ಲೊಂದಿಷ್ಟು ಪ್ರಯಾಣಿಕರು ತುಂಬಿಕೊಳ್ಳುತ್ತಾರೆ, ದೇವಕನ್ನಿಕೆಯರು ಪ್ರತ್ಯಕ್ಷರಾಗುತ್ತಾರೆ, ಅವರನ್ನೆಲ್ಲಾ ಹೊತ್ತು ತಂದ ನನ್ನ ದೋಣಿಯನ್ನು ಸಮುದ್ರರಾಜ ಭವ್ಯವಾಗಿ ಸ್ವಾಗತಿಸಿ ಅಭಿನಂದಿಸುತ್ತಾನೆ. ಅಬ್ಬಾ! ಒಂದೇ, ಎರಡೇ...... ಇಂಥ ನೂರಾರು ಚಿತ್ರಣಗಳನ್ನು ನೀಡುವ ನೂರು ನೂರು ಕನಸುಗಳು ಸಾಲುಗಟ್ಟಿ ಬರುತ್ತಿದ್ದವು. ನಾನು ಕನಸು ಕಾಣಲು ಕಲಿತಿದ್ದು ಬಹುಶಃ ಇದೇ ಆಟದಿಂದೇನೇ? ನನಗೆ ಸರಿಯಾಗಿ ನೆನಪಿಲ್ಲ. ಇದ್ದರೂ ಇರಬಹುದು!

    ಒಂದೊಂದು ಸಾರಿ ದೋಣಿ ಅರ್ಧದಾರಿಯಲ್ಲಿ ಆಯತಪ್ಪಿ ಮುಗ್ಗುರಿಸಿಬಿಟ್ಟರೆ ಅಥವಾ ನೀರಲ್ಲಿ ನೆನೆದು ಹಾಳಾಗಿ ಹೋದರೆ ಅಥವಾ ಗಾಳಿಯ ಹೊಡೆತಕ್ಕೆ ಸಿಕ್ಕು ನಲುಗಿದರೆ ಇನ್ನಿಲ್ಲದ ನಿರಾಶೆಯಾಗುತ್ತಿತ್ತು. ದೋಣಿಯ ಮೂಲಕ ಸಮುದ್ರರಾಜನನ್ನು ಸೇರುವ ನಮ್ಮ ಕನಸು ಒಡೆದು ಚೂರುಚೂರಾಗಿರುತ್ತಿತ್ತು. ಆಗ ನಾನು ಜೋರಾಗಿ ಅತ್ತುಕೊಂಡು ದೊಡ್ದಮ್ಮನ ಬಳಿ ಹೋಗಿ ನಡೆದಿದ್ದೆಲ್ಲವನ್ನು ಹೇಳುತ್ತಿದ್ದೆ. “ಹೋಗಲಿಬಿಡು, ಅದಕ್ಯಾಕೆ ಅಳತಿ. ನಾಳೆ ಮತ್ತೆ ಮಳೆ ಬರುತ್ತದೆ. ಆಗ ಗಟ್ಟಿಯಾದ ದೋಣಿಯನ್ನು ಮಾಡಿಬಿಡು. ಹೋಗಿ ತಲುಪುತ್ತದೆ” ಎಂದು ಭರವಸೆಯನ್ನು ನೀಡುತ್ತಿದ್ದಳು. ಎಷ್ಟೇ ಆದರೂ ವಯಸ್ಸಿನಲ್ಲಿ, ಅನುಭವದಲ್ಲಿ ನನಗಿಂತ ದೊಡ್ದವಳಲ್ಲವೆ? ಜೀವನದಲ್ಲಿ ಇಂಥ ಅದೆಷ್ಟು ದೋಣಿಯಾಟಗಳನ್ನು ಆಡಿದ್ದಳೊ! ಅದೆಷ್ಟು ಮಳೆ, ಬಿಸಿಲು, ಗಾಳಿಗಳ ಹೊಡೆತಗಳನ್ನು ತಾಳಿಕೊಂಡು ಬಂದಿದ್ದಳೋ!

    ಮಾರನೆ ದಿನ ಮತ್ತೆ ಮಳೆ ಹುಯ್ಯುತ್ತಿತ್ತು. ನಾನು ಮತ್ತೆ ಹಿಂದಿನದೆಲ್ಲವನ್ನು ಮರೆತು ಎಂದಿನ ಉತ್ಸಾಹದೊಂದಿಗೆ ಕಾಗದದ ದೋಣಿಗಳನ್ನು ಹೊತ್ತು ಅಂಗಳಕ್ಕೆ ಜಿಗಿಯುತ್ತಿದ್ದೆ. ಆಟದಲ್ಲಿ ಮಳೆ, ಗಾಳಿಗಳ ಹೊಡೆತಗಳನ್ನು ತಿನ್ನುತ್ತಾ, ನೋಯುತ್ತಾ, ಸೋಲುತ್ತಾ, ಗೆಲ್ಲುತ್ತಾ ಜೀವನದ ದೋಣಿಯಾಟವಾಡಲು ತಯಾರಾಗುತ್ತಿದ್ದೆ. ಬದುಕೆಂದರೆ ಇದೇ ಅಲ್ಲವೆ?

    -ಉದಯ ಇಟಗಿ
    ಚಿತ್ರ: ಧಾರವಾಡದ ಪಲ್ಲವಿಯವರ ಬ್ಲಾಗಿನಿಂದ ಎತ್ತಿಹಾಕಿಕೊಂಡಿದ್ದು.

    8 ಕಾಮೆಂಟ್‌(ಗಳು):

    ಅಂತರ್ವಾಣಿ ಹೇಳಿದರು...

    ಉದಯ ಅವರೆ,
    ನಮ್ಮ ಜೀವನ ದೋಣಯಾಟ ಅಂತ ರವೀಂದ್ರನಾಥ್ ಟ್ಯಾಗೋರ್ ಸರಿಯಾಗಿ ಹೇಳಿದ್ದಾರೆ.

    ಈ ಲೇಖನದಿಂದ ನಾನೂ ಬಾಲ್ಯದಲ್ಲಿ ಬಿಡುತ್ತಿದ್ದ ದೋಣಿ ನೆನಪಾಯ್ತು..

    ಮತ್ತೊಂದು ವಿಚಾರ: ನಿಮ್ಮ ಬ್ಲಾಗಿನಲ್ಲಿ ಅಕ್ಷರಗಳೆಲ್ಲಾ ತುಂಬಾ ಚಿಕ್ಕದಾಗಿದೆ. ಓದಲು ತುಂಬಾ ಕಷ್ಟಕರವಾಗುತ್ತಿದೆ.

    PARAANJAPE K.N. ಹೇಳಿದರು...

    ಸರ್,
    ಕಾಗದದ ದೋಣಿಯ ಜೊತೆಜೊತೆಗೆ , ಬಾಲ್ಯದ ನೆನಪು,ಜೀವನದ ದೋಣಿಯಾಟ ಎಲ್ಲವನ್ನು ಅಡಕಗೊಳಿಸಿದ್ದೀರಿ, ಚೆನ್ನಾಗಿದೆ

    sunaath ಹೇಳಿದರು...

    ಉದಯ,
    "ದೋಣಿ ಸಾಗಲಿ, ಮುಂದೆ ಹೋಗಲಿ,
    ದೂರ ತೀರವ ಸೇರಲಿ"
    ಎನ್ನುವ ಕವಿವಾಣಿ ನಮ್ಮ ಆಟಗಳಿಗೂ, ನಮ್ಮ ಜೀವನಕ್ಕೂ ಅನ್ವಯಿಸುತ್ತದೆ, ಅಲ್ಲವೆ?

    ಬಿಸಿಲ ಹನಿ ಹೇಳಿದರು...

    ಜಯ ಶಂಕರ್ ಅವರೆ,
    ನನ್ನ ಲೇಖನ ನಿಮ್ಮ ದೋಣಿಯಾಟವನ್ನು ಜ್ಞಾಪಿಸಿದ್ದು ನನಗೆ ಖುಶಿಯಾಯಿತು.ಬಹಳಷ್ಟು ಹಳ್ಳಿಗಾಡಿನ ಮಕ್ಕಳು ಈ ಆಟವನ್ನು ಆಡೇ ಆಡಿರುತ್ತಾರೆ. ನೀವು ಹೇಳಿದ ಹಾಗೆ ಫಾಂಟ್ ಸೈಜ್‍ನ್ನು ಹೆಚ್ಚಿಸಿದ್ದೇನೆ.

    ಬಿಸಿಲ ಹನಿ ಹೇಳಿದರು...

    ಪರಾಂಜಪೆಯವರೆ,
    ನಾವಾಡುವ ದೋಣಿಯಾಟಕ್ಕೂ ಜೀವನದ ದೋಣಿಯಾಟಕ್ಕೂ ಎಷ್ಟೊಂದು ಸಾಮ್ಯವಿದೆ ಅಲ್ಲವೆ? ಇದನ್ನು ಆಡುತ್ತಾ ಆದುತ್ತಾ ಜೀವನದ ದೋಣಿಯಾಟವನ್ನು ಕಲಿಯುವದು ವಿಶೇಷ!

    ಬಿಸಿಲ ಹನಿ ಹೇಳಿದರು...

    ಸುನಾಥ್ ಸರ್,
    "ದೋಣಿ ಸಾಗಲಿ, ಮುಂದೆ ಹೋಗಲಿ,
    ದೂರ ತೀರವ ಸೇರಲಿ"
    ಎನ್ನುವ ಮಾತುಗಳು ಎಷ್ಟೊಂದು ಅರ್ಥಪೂರ್ಣ!
    ನೀವು ಹೇಳಿದಂತೆ ಆ ಕವಿವಾಣಿ ನಮ್ಮ ಆಟಗಳಿಗೂ, ನಮ್ಮ ಜೀವನಕ್ಕೂ ಅನ್ವಯಿಸುತ್ತದೆ.

    shivu.k ಹೇಳಿದರು...

    ಉದಯ್ ಸರ್,

    ದೋಣಿಯಾಟದ ನಡುವೆ ಬಾಲ್ಯದ ನೆನಪುಗಳು ಗರಿಗೆದರಿಕೊಳ್ಳುವುದು....ಎಂಥ ಮಜ ಅಲ್ವೇ.....ನಾನು ಬಾಲ್ಯದಲ್ಲಿ ದೋಣಿ ಬಿಡುವುದು, ಮತ್ತೆ ಈಗ ಛಾಯಾಗ್ರಾಹಣದಲ್ಲಿ ದೋಣಿ ಬಿಡುವ ಮಕ್ಕಳ ಒಂದಷ್ಟು ಫೋಟೊ ತೆಗೆದಿದ್ದೆ....ಆಗ ನಾವು ಮಕ್ಕಳಾಗಿದ್ದು ನೆನಪಾಯಿತು....ಸುಂದರ ಬರವಣಿಗೆ....ಮತ್ತೆ ನಮ್ಮ ಬಗ್ಗೆ ತುಂಬಾ ಹೊಗಳಿ ಸಂಪದದಲ್ಲಿ ಬರೆದಿದ್ದೀರಿ...ಅದನ್ನು ಓದಿ ನಿಮಗೆ ಕಾಮೆಂಟು ಹಾಕುತ್ತೇನೆ....

    ಧನ್ಯವಾದಗಳು......

    ಬಿಸಿಲ ಹನಿ ಹೇಳಿದರು...

    ಶಿವು ಅವರೆ,
    ದೋಣಿಯಾಟದ ನೆನಪುಗಳೇ ಹಾಗೆ. ಅದು ಯಾವಾಗಲೂ ನಮ್ಮ ಬಾಲ್ಯದ ನೆನಪುಗಳನ್ನು ಜ್ಞಾಪಿಸುತ್ತದೆ.
    ನಿಮ್ಮ ಬಗ್ಗೆ ಸಂಪದದಲ್ಲಿ ಹೊಗಳಿ ಬರೆದಿಲ್ಲ. ಬ್ಲಾಗ್ ಲೋಕದ ಮೂಲಕ ನಿಮ್ಮ ಒಡನಾಟ ಆರಂಭವಾಗಿದ್ದಾಗಿನಿಂದ ನನಗನಿಸಿದ್ದನ್ನು ಬರೆದಿದ್ದೇನೆ. ಅದನ್ನು ನನ್ನ ಬ್ಲಾಗಲ್ಲೂ ಪ್ರಕಟಿಸಿರುವೆ.