Demo image Demo image Demo image Demo image Demo image Demo image Demo image Demo image

ಸತ್ಯವೋ? ಮಿಥ್ಯವೋ?

 • ಮಂಗಳವಾರ, ಮಾರ್ಚ್ 31, 2009
 • ಬಿಸಿಲ ಹನಿ
 • ಜನರ ಮೂಢನಂಬಿಕೆಗೆ ಕಾರಣವಾಗಲಿ ತರ್ಕವಾಗಲಿ ಇಲ್ಲ. ಈ ನಂಬಿಕೆಗಳು ನಮಗೆ ಗೊತ್ತಿರುವಂತೆ ಬಹಳಷ್ಟು ಸಾರಿ ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿವೆ. ಮೂಢನಂಬಿಕೆಯ ಜನರು ಒಳ್ಳೆಯದಾಗಲೆಂದು ಅಥವಾ ಕೆಟ್ಟದ್ದು ಆಗದಿರಲೆಂದು ಅಥವಾ ಮುಂದೆ ಆಗುವ ಅವಘಡಗಳನ್ನು ತಪ್ಪಿಸಲೆಂದು ಈ ಆಚರಣೆಗಳನ್ನು ಪರಿಪಾಲಿಸುತ್ತಾ ಬಂದಿದ್ದಾರೆ. ಉದಾಹರಣೆಗೆ ಉಪ್ಪು ಚೆಲ್ಲಿದಾಗ ಮುಂದೆ ಕೆಡಕು ಆಗದಿರಲೆಂದು ಸ್ವಲ್ಪ ಉಪ್ಪನ್ನು ತೆಗೆದು ತಮ್ಮ ಎಡಭುಜದ ಮೇಲಿಂದ ಎಸೆಯುತ್ತಾರೆ.

  ಈ ಮೂಢನಂಬಿಕೆಗಳು ಹೇಗೆ ಪ್ರಚಲಿತವಾದವು? ಜನ ಅವುಗಳನ್ನು ಹೇಗೆ ಪಾಲಿಸುತ್ತಾ ಬಂದರು? ಅವು ಹೇಗೆ ತಮ್ಮ ಅದೃಷ್ಟವನ್ನು ನಿರ್ಧರಿಸಬಲ್ಲವು ಎಂದುಕೊಂಡರು?

  ಪ್ರಾಚೀನ ಕಾಲದಲ್ಲಿ ರೋಮ್, ಗ್ರೀಸ್ ಮತ್ತು ಸ್ಕ್ಯಾಂಡಿನ್ಯಾವಿಯಾದ ಜನರು ತಮ್ಮ ಬದುಕನ್ನು ಮತ್ತು ಇಡಿ ಪ್ರಕೃತಿಯನ್ನು ದೇವರು ನಿಯಂತ್ರಿಸುತ್ತಿದ್ದಾನೆ ಎಂದುಕೊಂಡಿದ್ದರು. ಹೀಗಾಗಿ ಅವರು ಕಾಣಿಕೆಗಳನ್ನು ಅರ್ಪಿಸುವದರ ಮೂಲಕ ಆದಷ್ಟು ತಮ್ಮ ದೇವರುಗಳನ್ನು ಖುಶಿಯಾಗಿಡಲು ಪ್ರಯತ್ನಿಸಿದರು. ಏನಾದರು ಪ್ರಕೃತಿ ವಿಕೋಪಗಳೆದ್ದಾಗ ಜನರು ತಮ್ಮ ಮೇಲೆ ಕೋಪಗೊಂಡಿದ್ದಾನೆ ಎಂದು ತಿಳಿದು ಪುನಃ ಅವನನ್ನು ಹರಕೆಗಳನ್ನು ತೀರಿಸುವದರ ಮೂಲಕ ತೃಪ್ತಿಪಡಿಸಲು ಪ್ರಯತ್ನಿಸಿದರು. ಹೀಗೆ ಕೆಲವು ಆಚರಣೆಗಳನ್ನು ಪಾಲಿಸುವದರಿಂದ ತಮ್ಮ ಹಣೆಬರಹವನ್ನು ಬದಲಾಯಿಸಬಹುದೆಂದು ನಂಬಿದ್ದರು.

  ಶತಮಾನದಿಂದಲೂ ಬಹಳಷ್ಟು ಮೂಡನಂಬಿಕೆಗಳು ಜಾರಿಯಲ್ಲಿವೆ. ಆದರೆ ಇಂದು ಜಗತ್ತಿನ ಅನೇಕ ಕಡೆ ಜನರು ದೇವರು ಇಲ್ಲವೆಂದು ವಾದಿಸುವಾಗ ಈ ಆಚರಣೆಗಳ ಪಾಲನೆ ದಿನೆದಿನೆ ಕಡಿಮೆಯಾಗುತ್ತಿದೆ. ದೇವರನ್ನು ಕಾಣಿಕೆ ಕೊಡುವದರ ಮೂಲಕ ತ್ರುಪ್ತಿಪಡಿಸುವ ಕಾರ್ಯ ಸಹ ನಿಲ್ಲುತ್ತಿದೆ. ಆದಾಗ್ಯೂ ಈ ನಂಬಿಕೆಗಳು, ಆಚರಣೆಗಳು ಇನ್ನೂ ನಮ್ಮೊಂದಿಗೆ ಮುಂದುವರಿಯುತ್ತಲೇ ಇವೆ.

  ಪುರಾತನ ಕಾಲದಲ್ಲಿ ಜನರು ದೆವರು ಬೆಟ್ಟ ಗುಡ್ದಗಳ ಮೇಲೆ ಇದ್ದಾನೆ, ತಮಗಿಂತ ಎತ್ತರದಲ್ಲಿರುವದೆಲ್ಲ ದೇವರಿಗೆ ಸುಲಭವಾಗಿ ಸಿಗುತ್ತದೆ ಎಂದುಕೊಂಡಿದ್ದರು. ಪಕ್ಷಿಗಳ ಬಗ್ಗೆಯೂ ಸಾಕಷ್ಟು ನಂಬಿಕೆಗಳಿದ್ದವು. ಪಕ್ಷಿಗಳು ದೇವರ ದೂತ, ತಾವು ಸತ್ತ ಮೇಲೆ ತಮ್ಮ ಆತ್ಮವನ್ನು ದೇವರೆಡೆಗೆ ಒಯ್ಯಬಲ್ಲಂಥ ಸಾಧನಗಳು ಎಂದು ಭಾವಿಸಿದ್ದರು. ಅಷ್ಟೇ ಅಲ್ಲದೆ ಕೆಲವು ಜನರು ಪಕ್ಷಿಗಳನ್ನು ಕೊಲ್ಲುವದು ದೇವರ ಇಚ್ಚೆಗೆ ವಿರುದ್ಧವಾಗಿದ್ದು ಅದು ತಮಗೆ ದುರಾದೃಷ್ಟವನ್ನು ತರುವದೆಂದು ತಿಳಿದಿದ್ದರು. ಅಮೆರಿಕಾದ ಕೆಲವು ಭಾಗಗಳಲ್ಲಿ ಈಗಲೂ ಜನ ಗೂಬೆಯೇನಾದರು ಸಾಯಂಕಾಲದ ಹೊತ್ತು ಕೂಗುವದನ್ನ್ನು ಕೇಳಿದರೆ ಅದು ಸಾವು ತರುವ ಸಂಕೇತವೆಂದು ನಂಬುತ್ತಾರೆ. ಇಂಥ ನಂಬಿಕೆಗಳಿಂದಲೇ “ಪಕ್ಷಿಯೊಂದು ಹೇಳಿತು” ಎನ್ನುವ ಇಂಗ್ಲೀಷ ಗಾದೆಯೊಂದು ಹುಟ್ಟಿಕೊಂಡಿದೆ. ಈಗೀಗ ಜನ ಪಕ್ಷಿಗಳನ್ನು ದೇವರ ದೂತ ಎಂದು ನಂಬದಿದ್ದರೂ ಯಾವುದಾದರೊಬ್ಬ ವ್ಯಕ್ತಿಯ ಗುಪ್ತಸಮಾಚಾರವನ್ನು ಕೇಳಿ ತಿಳಿದುಕೊಂಡಾಗ ಅದು ಹೇಗೆ ನಿಮಗೆ ಗೊತ್ತಾಯಿತು ಎಂದು ಅವರನ್ನು ಕೇಳಿದರೆ ಅವರು “ಪಕ್ಷಿಯೊಂದು ಹೇಳಿತು” ಎಂದು ಉಸುರುತ್ತಾರೆ.

  ನಮಗೆ ಪಕ್ಷಿಗಳು ಮಾತನಾಡುವದಿಲ್ಲವೆಂದೂ, ಗೂಬೆಗಳು ಸಾವನ್ನು ತರುವದಿಲ್ಲವೆಂದೂ ಗೊತ್ತಿದ್ದರೂ ಇಂಥ ನಂಬಿಕೆಗಳು ಇನ್ನೂ ನಮ್ಮಲ್ಲಿ ಹಾಗೆಯೇ ಉಳಿದಿವೆ. ಬಹಳಷ್ಟು ಸಮುದ್ರ ಯಾತ್ರಿಕರು ಮಾರ್ಗ ಮಧ್ಯದಲ್ಲಿ ಕಡಲ ಕೋಳಿಯನ್ನೇನಾದರು ನೋಡಿದರೆ ತಮ್ಮ ಹಡಗಿಗೆ ಏನೋ ಅಪಶಕುನ ಕಾದಿದೆ ಎಂದುಕೊಳ್ಳುತ್ತಾರೆ. ಜಗತ್ತಿನ ಅನೇಕ ಕಡೆ ಜನರು ಪಾರಿವಾಳವನ್ನು ಶಾಂತಿಯ ಸಂಕೇತವೆಂದೂ ಹಾಗೂ ಉತ್ತರ ಅಮೆರಿಕಾದ ನಿವಾಸಿಗಳು ಹದ್ದನ್ನು ಸ್ವಾತಂತ್ರ್ಯದ ಸಂಕೇತವೆಂದು ಬಣ್ಣಿಸುತ್ತಾರೆ.

  ಪುರಾತನ ಕಾಲದ ಜನರ ಮತ್ತೊಂದು ನಂಬಿಕೆ ಬೆಕ್ಕು. ಹಿಂದೆ ಈಜಿಪ್ಟಿನ ಜನರು ಬೆಕ್ಕುಗಳನ್ನು ಅವು ಬಹಳ ಜಾಣ ಮತ್ತು ವಿಶೇಷ ಶಕ್ತಿಯುಳ್ಳ ಪ್ರಾಣಿಗಳೆಂಬ ಕಾರಣಕ್ಕಾಗಿ ಪೂಜಿಸುತ್ತಿದ್ದರು. ಆದರೆ ಇಂದು ಬೆಕ್ಕುಗಳು ಮನುಷ್ಯರಿಗಿಂತ ಹೆಚ್ಚು ಸ್ವತಂತ್ರವಾಗಿರುವದರಿಂದ ಜನರ ತಿರಸ್ಕಾರಕ್ಕೆ ಗುರಿಯಾಗಿವಲ್ಲದೇ ಅವುಗಳ ಬಗ್ಗೆ ಕೆಲವು ಕುರುಡು ನಂಬಿಕೆಗಳು ಪ್ರಚಲಿತದಲ್ಲಿವೆ. ತುಂಬಾ ಜನರು ಕರಿಬೆಕ್ಕು ತಮ್ಮ ದಾರಿಗೆ ಅಡ್ದ ಹೋದರೆ ಅದು ಆ ದಿನದ ಅಶುಭದ ಲಕ್ಷಣ ಎಂದುಕೊಳ್ಳುತ್ತಾರೆ. ಆದರೆ ಇಂಗ್ಲೆಂಡ್‍ನಲ್ಲಿ ಕರಿಬೆಕ್ಕು ವ್ಯಕ್ತಿಯ ಕಡೆಗೇನಾದರೂ ಹೋದರೆ ಅವರಿಗದು ಶುಭದ ಸಂಕೇತ. ಕರಿಬೆಕ್ಕುಗಳು ಅದೃಷ್ಟವನ್ನು ತರತ್ತವೆಯೆಂಬ ಕಾರಣಕ್ಕಾಗಿ ಇಂಗ್ಲೀಷರು ಅವುಗಳನ್ನು ಸಾಕುತ್ತಾರೆ.

  ಪುರಾತನ ಕಾಲದಲ್ಲಿ ಜನರು ಚಂದ್ರನನ್ನು ಒಬ್ಬ ಮನುಷ್ಯನೆಂದು ತಿಳಿದಿದ್ದರು. ಅವನು ತನ್ನ ಆಕಾರದಲ್ಲಿ ಬದಲಾಗುವದನ್ನು ಕಂಡಿದ್ದರು. ಕಪ್ಪು ಆಗಸದಲ್ಲಿ ಚಂದ್ರ ಹೊಳೆಯುವ ವಸ್ತು ಆಗಿದ್ದರಿಂದ ಆತನನ್ನು “ಕಪ್ಪು ಆಗಸದ ರಾಣಿ” ಎಂದು ಕರೆದರು. ಚಂದ್ರನಿಗೆ ಮನಸ್ಸು ಇದೆಯೇ? ಇದ್ದರೆ ಅದು ಎಲ್ಲಿ ಹೋಯಿತು ಎಂದೆಲ್ಲಾ ಅಚ್ಚರಿಪಟ್ಟರು. ಜನರು ಕತ್ತಲಿನ ಬಗ್ಗೆ ಭಯವನ್ನು ಬೆಳೆಸಿಕೊಂಡಿದ್ದರಿಂದ ಚಂದ್ರನ ಪ್ರಕಾಶಮಾನ ಬೆಳಕು ಸ್ವಾಗತಾರ್ಹ ಮತ್ತು ಕುತೂಹಲಕಾರಿಯಾಗಿತ್ತು.

  ಇಂದಿಗೂ ಸಹ ಚಂದ್ರನ ಬಗ್ಗೆ ಭಯ ಮತ್ತು ಕುತೂಹಲಗಳು ನಮ್ಮಲ್ಲಿವೆ. ಇಂಥ ಭಾವನೆಗಳೇ ಚಂದ್ರನ ಜೀವಂತಿಕೆಯ ಬಗ್ಗೆ ಕುರುಹುಗಳಾಗಿ ಉಳಿದಿವೆ. ಮನೆ ಕಟ್ಟುವಾಗ, ಬೆಳೆಗಳನ್ನು ಬೆಳೆಯುವಾಗ, ಮದುವೆ ಮಾಡುವಾಗ ಜನರು ಚಂದ್ರನ ಸ್ಥಾನಬಲವನ್ನು ನೋಡಿಯೇ ಮಾಡುತ್ತಾರೆ. ಚಂದ್ರ ನಮ್ಮನ್ನು ಮೂರ್ಖನನ್ನಾಗಿ ಮಾಡಬಲ್ಲ ಎಂಬ ನಂಬಿಕೆಯಿತ್ತು. ಏಕೆಂದರೆ ಲ್ಯ್ಯಾಟಿನ್ ಭಾಷೆಯಲ್ಲಿ ಚಂದ್ರನಿಗೆ “ಲೂನಾ” ಎಂಬ ಶಬ್ಧವಿದೆ. ಅಂದರೆ “ಹುಚ್ಚ” ಅಥವಾ “ತಲೆಕೆಟ್ಟವ” ಎಂಬ ಅರ್ಥವಿದೆ. ಇಂದಿಗೂ ಸಹ ಕೆಲವು ಕಡೆ ಚಂದ್ರನ ಕೆಳಗೆ ಮಲಗಿದವರು ಬುದ್ಧಿವಿಕಲ್ಪಿತರಾಗುತ್ತಾರೆ ಎಂಬ ನಂಬಿಕೆಯಿದೆ.

  ಬಣ್ಣಗಳು ಮತ್ತು ಸಂಖ್ಯೆಗಳು ಸಹ ಮೂಢನಂಬಿಕೆಗಳ ಒಂದು ದೊಡ್ಡ ಭಾಗವಾಗಿವೆ. ಮಾಟಗಾತಿಯರ ಕಾಟದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಾಗೂ ತಮ್ಮ ಕನಸಗಳನ್ನು ನನಸಾಗಿಸಿಕೊಳ್ಳಲು ಜನರು ನೀಲಿಬಣ್ಣವನ್ನು ಉಪಯೋಗಿಸುವರು. ಕೆಂಪು ಬಣ್ಣವು ಕಾಯಿಲೆಯಿಂದ ಕಾಪಾಡುವ, ದುರಾದೃಷ್ಟವನ್ನು ಹೊಡೆದೋಡಿಸುವ ಬಣ್ಣವಾಗಿದೆ. ಹಸಿರು ಬಣ್ಣವು ಕೆಲವು ಸಾರಿ ದುರಾದೃಷ್ಟದ ಬಣ್ಣವಾಗಿದೆ. ಅದಕೆಂದೇ ನಟರು ನಾಟಕದಲ್ಲಿ ಹಸಿರು ಬಣ್ಣದ ಉಡುಪುಗಳನ್ನು ಧರಿಸುವದಿಲ್ಲ.

  ಇನ್ನು ಸಂಖ್ಯೆಗಳ ವಿಷಯದಲ್ಲಿ ಸರಿ ಸಂಖ್ಯೆಗಳಿಗಿಂತ ಬೆಸ ಸಂಖ್ಯೆಗಳು ಅದೃಷ್ಟವನ್ನು ತರುವ ಸಂಖ್ಯೆಗಳಾಗಿವೆ. ಮೂರು, ಏಳು, ಒಂಬತ್ತು ಸಂಖ್ಯೆಗಳನ್ನು ಅದೃಷ್ಟದ ಸಂಖ್ಯೆಗಳೆಂದು ಭಾವಿಸುತ್ತಾರೆ. ಆದರೆ ಹದಿಮೂರ ದುರಾದೃಷ್ಟದ ಸಂಖ್ಯೆಯಾಗಿದೆ. ಈ ಕಾರಣಕ್ಕಾಗಿ ಬಹಳಷ್ಟು ಕಡೆ ಹದಿಮೂರನೆ ಮಹಡಿಯಿರುವದಿಲ್ಲ.

  ಮೂಢನಂಬಿಕೆಗಳಲ್ಲಿ ನಂಬಿಕೆಯಿರದವರು ಸಹ ಅವುಗಳನ್ನು ತಮಗೆ ಗೊತ್ತಿಲ್ಲದಂತೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಯಾರಾದರು “ಈ ಚಳಿಗಾಲ ಪೂರ್ತಿ ನನಗೆ ಶೀತವೇ ಇರಲಿಲ್ಲ” ಎಂದು ಹೇಳಿದರೆ ತಕ್ಷಣ ಆ ವ್ಯಕ್ತಿ “ಅಯ್ಯೋ, ಹೋಯಿತು ಅನ್ನು” ಎಂದು ಕಟ್ಟಿಗೆಯಿಂದ ಮಾಡಿರುವ ವಸ್ತುವನ್ನು ಮುಟ್ಟಬಹುದು. ಮುಂದೆ ಆಗುವ ದುರ್ಘಟನೆಯನ್ನು ಊಹಿಸಿ ಮಾತನಾಡುವಾಗಲು ಸಹ ಆ ಘಟನೆ ಸಂಭವಿಸದಿರಲಿ ಎಂದು ಕಟ್ಟಿಗೆಯಿಂದ ಮಾಡಿರುವ ವಸ್ತುಗಳನ್ನು ಮುಟ್ಟುವ ವಾಡಿಕೆಯಿದೆ. ಈ ನಂಬಿಕೆ ಹೇಗೆ ಬಂದೆಂತೆಂದರೆ ಅನಾದಿಕಾಲದಿಂದಲೂ ಒಳ್ಳೆಯ ಪ್ರೇತಾತ್ಮಗಳು ಮರದಲ್ಲಿವೆ ಹಾಗೂ ಅವು ದುರ್ಘಟನೆಗಳನ್ನು ನಿಗ್ರಹಿಸಬಲ್ಲವು ಎಂದು ನಂಬಿದ್ದರಿಂದ ಮರವನ್ನು ಅಥವಾ ಮರದಿಂದ ಮಾಡಿದ ವಸ್ತುಗಳನ್ನು ಮುಟ್ಟುವ ಸಂಪ್ರದಾಯ ಬಂದಿತು.

  ಅದೇ ತರ ಮೂಢನಂಬಿಕೆಗಳಲ್ಲಿ ನಂಬಿಕೆಯಿರದ ಜನ ತ್ರಿಕೋನಗಳು ವಿಶೇಷ ಶಕ್ತಿಯುಳ್ಳ ವಸ್ತುಗಳೆಂದು ಅದರ ಬಾಹುಗಳನ್ನು ಬೇಧಿಸಲು ಹೆದರುತ್ತಾರೆ. ಏಣಿಯೇನಾದರು ಗೋಡೆಗೆ ಬಾಗಿಕೊಂಡಿದ್ದರೆ ಜನ ಅದರ ಕೆಳಗೆ ಓಡಾಡುವದಿಲ್ಲ. ಏಕೆಂದರೆ ಅದು ತ್ರಿಕೋನವನ್ನು ಮುರಿಯುತ್ತದೆ ಎಂಬ ಬಲವಾದ ನಂಬಿಕೆಯಿದೆ.

  ಏನೇ ಆಗಲಿ ನಾವೆಲ್ಲರೂ ಒಂದಲ್ಲ ಒಂದು ರೀತಿ ಮೂಢನಂಬಿಕೆಗಳನ್ನು ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಪಾಲಿಸುತ್ತಾ ಬಂದಿರುವರು. ನಾವು ಎಷ್ಟೇ ವೈಜ್ಞಾನಿಕವಾಗಿ ಮುಂದುವರೆದಿದ್ದರೂ ನಮಗೆಲ್ಲರಿಗೂ ಮುಂದೆ ಏನಾಗಬಹುದೆಂದು ತಿಳಿಯುವ ಕುತೂಹಲ ಇದ್ದೇ ಇರುವದರಿಂದ ನಮಗರಿವಿಲ್ಲದಂತೆ ಈ ಆಚರಣೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವರು. ನಾವೆಲ್ಲಾ ೨೧ನೇ ಶತಮಾನದಲ್ಲಿರುವಾಗ, ಜಗತ್ತು ವಿಜ್ಞಾನಮಯವಾಗಿರುವಾಗ ಇನ್ನೂ ಏಕೆ ಈ ಪುರಾತನ ಕಾಲದ ನಂಬಿಕೆಗಳಿಗೆ ಅಂಟಿಕೊಂಡಿದ್ದೇವೆ? ಅದಕ್ಕೆ ಏನು ಕಾರಣ? ಈ ನಂಬಿಕೆಗಳೆಲ್ಲ ನಿಜವೆ? ಅವುಗಳಿಗೆ ಏನಾದರು ಆಧಾರವಿದೆಯೇ? ಈಗಲೂ ನಡೆಯುತ್ತವೆಯೇ? ಇಲ್ಲ ಇಲ್ಲ............. ಹಾಗಂತ ನಮಗೆ ಖಾತ್ರಿಯಿದೆಯೇ?

  ಇಂಗ್ಲೀಷನಿಂದ: ಚಾರ್ಲೋಟ್ ವಾರ್ಮನ್
  ಕನ್ನಡಕ್ಕೆ: ಉದಯ ಇಟಗಿ

  4 ಕಾಮೆಂಟ್‌(ಗಳು):

  sunaath ಹೇಳಿದರು...

  ಉದಯ,
  ಅನೇಕ ಮೂಢನಂಬಿಕೆಗಳು ಈಗ ಮಾಯವಾಗಿವೆ. ಅಮೇರಿಕೆಯ
  ಪ್ರಸಿದ್ಧ ವಿಜ್ಞಾನಿ Neil Bohrನ ಬಗೆಗಿರುವ ಒಂದು ಘಟನೆ
  ತುಂಬ ರಂಜಕವಾಗಿದೆ. ಈತ bad luck ಮನೆಯೊಳಗೆ ಬರದಿರಲೆಂದು ತನ್ನ ಮನೆಯ ಹೆಬ್ಬಾಗಿಲಿಗೆ ಒಂದು horseshoe ಬಡೆದಿದ್ದನಂತೆ! ಅಚ್ಚರಿಗೊಂಡ ಸಂದರ್ಶಕರೊಬ್ಬರು ಆತನನ್ನ ಪ್ರಶ್ನಿಸಿದಾಗ ಆತ ಹೇಳಿದ್ದು ಹೀಗೆ:
  "ನಂಬಿಕೆ ಇರಲಿ ಬಿಡಲಿ, ಕುದುರೆಲಾಳ ಬಡೆಯುವದು ಒಳ್ಳೇದು
  ಎಂದು ಹೇಳ್ತಾರಪ್ಪ! ಅದಕ್ಕೇ ಬಡೆದಿದ್ದೀನಿ!!"

  shivu ಹೇಳಿದರು...

  ಉದಯ್ ಸರ್,

  ಮೂಡನಂಬಿಕೆಗಳ ಬಗೆಗೆ ಒಂದು ಸೊಗಸಾದ ಲೇಖನ..ಇಂಗ್ಲೀಷಿನಿಂದ ತುಂಬಾ ಚೆನ್ನಾಗಿ ಅನುವಾದಿಸಿದ್ದೀರಿ....ನಾವು ಪುಟ್ಟ ಮಕ್ಕಳಾಗಿದ್ದಾಗ...ಹಿರಿಯರ ಮಾತನ್ನು ಕೇಳುತ್ತಿದ್ದೆವು...ಆಗ ಅವು ಮೂಡನಂಭಿಕೆಗಳೆಂದು ಗೊತ್ತಿರಲಿಲ್ಲ...ಈಗ ಸ್ವಲ್ಪ ಸಾಮಾನ್ಯ ಜ್ಞಾನ ಬಂದಮೇಲೆ ಅವುಗಳನ್ನು ನಿಲ್ಲಿಸಿದ್ದೇವೆ. ಈಗ ಮಂಗಳವಾರ ಶುಕ್ರವಾರ ಹಣ ಕೊಡುವುದು ಬೇಡ ಅಂತಾರೆ...ನಾನು ಏನಾಗುತ್ತೆ ಅಂತ ಅವತ್ತೇ ಕೊಡುತ್ತೇನೆ...ಏನು ತೊಂದರೆ ಆಗಲಿಲ್ಲ..ಅದ್ರೂ ಕೆಲವನ್ನು ನಾನು ಪಾಲಿಸುತ್ತೇನೆ...ನಾನು ಮುಂಜಾನೆ ನಾಲ್ಕು ಗಂಟೆಗೆ ಎದ್ದು ಹೋಗುವಾಗ ಬೇಸಿಗೆಯಲ್ಲೂ ಒಂದು ಕ್ರೀಮ್ ಬಣ್ಣದ ಸ್ವೆಟರ್ ಹಾಕುತ್ತೇನೆ...ಕಾರಣ ಅದನ್ನು ಹಾಕಿಕೊಂಡು ಹೋದರೆ ನನ್ನ ಬೀಟ್ ಹುಡುಗರು ತಪ್ಪಿಸಿಕೊಳ್ಳದೇ ಬರುತ್ತಾರೆ ಅನ್ನುವ ಮೂಢನಂಬಿಕೆ...ಇದ್ಯಾಕೆ ಬದಲಿಸಿಕೊಳ್ಳಲು ಸಾಧ್ಯವಾಗಿಲ್ಲ....ಏಕೆ ಅಂತ ಗೊತ್ತಿಲ್ಲ..!
  ಧನ್ಯವಾದಗಳು....

  ರಜನಿ.ಎಂ.ಜಿ ಹೇಳಿದರು...

  ಧನ್ಯವಾದಗಳು ಸರ್. ಕಡಲಾಚೆ ಇದ್ದರೂ ಕನ್ನಡದ ಕೈ ಬಿಡದ ನಿಮಗೆ ನನ್ನ ಅಭಿನಂದನೆಗಳು

  ಅನಾಮಧೇಯ ಹೇಳಿದರು...

  yenu helidaru saaladu namma kannada istu jeevantavaagideyalla.
  dannyavadagalu.