Demo image Demo image Demo image Demo image Demo image Demo image Demo image Demo image

ಮೌಮರ್ ಗಡಾಫಿ ಮತ್ತು ಇಂಗ್ಲೀಷ್ ಭಾಷೆ

  • ಸೋಮವಾರ, ಫೆಬ್ರವರಿ 18, 2013
  • ಬಿಸಿಲ ಹನಿ
  • ಲಿಬಿಯಾದಲ್ಲಿ ನಲವತ್ತೆರೆಡು ವರ್ಷಗಳ ಕಾಲ ಹುಲಿಯಂತೆ ಮೆರೆದು ಕೊನೆಗೆ ಹೇಳ ಹೆಸರಿಲ್ಲದಂತೆ ನಾಶವಾದ ಮೌಮರ್ ಗಡಾಫಿ ತನ್ನ ದಕ್ಷ ಆಡಳಿತಕ್ಕೆ ಹೆಸರುವಾಸಿಯದಂತೆ ತನ್ನ ವಿಚಿತ್ರ ಪೋಷಾಕುಗಳಿಗೆ, ದುಡುಕುತನಕ್ಕೆ, ಹಟಮಾರಿತನಕ್ಕೆ, ಹಾಗೂ ಹರಕುಬಾಯಿಗೆ ಕೂಡ ಅಷ್ಟೇ ಹೆಸರುವಾಸಿಯಾಗಿದ್ದ. ಗಡಾಫಿ ಎಷ್ಟರಮಟ್ಟಿನ ಹರಕುಬಾಯಿಯವನಾಗಿದ್ದನೆಂದರೆ ಮುಂಚಿನಿಂದಲೂ ಅಮೆರಿಕನ್ನರ ಬದ್ಧ ವೈರಿಯಾಗಿದ್ದ ಆತ ಅವಕಾಶ ಸಿಕ್ಕಾಗಲೆಲ್ಲಾ ಅವರನ್ನು ಯಾವುದೇ ಮುಲಾಜಿಲ್ಲದೆ, ಹಿಂಜರಿಕೆಯಿಲ್ಲದೆ ಬಹಿರಂಗವಾಗಿ ಟೀಕಿಸಿ ಅವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದ. ಈ ವಿಷಯದಲ್ಲಿ ಇತರೆ ಮುಸ್ಲಿಂ ರಾಷ್ಟ್ರಗಳ ನಾಯಕರು ಗಡಾಫಿಯನ್ನು ‘ಹಾಗೆಲ್ಲಾ ಅಮೆರಿಕನ್ನರನ್ನು ಬಹಿರಂಗವಾಗಿ ಟೀಕಿಸಬೇಡ’ ಎಂದು ಎಚ್ಚರಿಸಿದ್ದರೂ ಅವ ಅದನ್ನು ಲೆಕ್ಕಿಸದೆ ಪುಂಖಾನುಪುಂಖವಾಗಿ ಸಂದರ್ಭ ಸಿಕ್ಕಾಗಲೆಲ್ಲಾ ಅವರನ್ನು ತರಾಟೆಗೆ ತೆಗೆದುಕೊಂಡು ಅವರ ವಿರೋಧ ಕಟ್ಟಿಕೊಳ್ಳುತ್ತಿದ್ದನಲ್ಲದೇ ಇದೇ ಕಾರಣಕ್ಕಾಗಿ ಇನ್ನಿಲ್ಲದಂತೆ ನಾಶವಾಗಿ ಹೋದ.


    ಸಣ್ಣ ವಯಸ್ಸಿಗೇ ಅಧಿಕಾರಕ್ಕೇರಿದ ಗಡಾಫಿ ಒಬ್ಬ ದಕ್ಷ ಆಡಳಿತಗಾರನಾಗಿದ್ದ. ಆತನ ಆಡಳಿತಾವಧಿಯಲ್ಲಿ ಲಿಬಿಯಾ ಮಾನವ ಸಂಪನ್ಮೂಲ ಅಭಿವೃದ್ಧಿ, ಶಿಕ್ಷಣ, ಆರೋಗ್ಯ. ಕೃಷಿ-ಕೈಗಾರಿಕೆಗಳಲ್ಲಿ ಇಡೀ ಆಫ್ರಿಕಾದಲ್ಲೇ ಮೊದಲ ಸ್ಥಾನ ಪಡೆದುಕೊಂಡಿತ್ತು. ಜೊತೆಗೆ ಲಿಬಿಯಾದ ರಾಷ್ಟ್ರೀಯ ತಲಾದಾಯವು ಜಗತ್ತಿನ ಉತ್ತಮ ತಲಾದಾಯ ಇರುವ ದೇಶಗಳ ಸಾಲಿಗೆ ಸೇರಿತ್ತು. ಹೀಗಾಗಿ ಗಡಾಫಿ ಸಹಜವಾಗಿ ಲಿಬಿಯಾದ ಜನತೆಗೆ ಒಬ್ಬ ಭರವಸೆಯ ನಾಯಕನಾಗಿ ಕಾಣಿಸಿದ. ಆದರೆ ಅವನು ಅನೇಕ ತಿಕ್ಕಲುತನಗಳಿಂದ ಕೂಡಿದ ಮನುಷ್ಯನಾಗಿದ್ದ. ಆತ ರಾಜಕೀಯವಾಗಿ ಎಷ್ಟೊಂದು ಸಂವೇದನಾಶೀಲನಾಗಿದ್ದನೋ ಅಷ್ಟೇ ತಿಕ್ಕಲುನಾಗಿದ್ದ. ಆತನ ತಿಕ್ಕಲುತನಗಳಿಗೆ ಲೆಕ್ಕವಿರಲಿಲ್ಲ! ಆದರೆ ಅವು ಸಾಧ್ಯವಾದಷ್ಟು ವ್ಯಯಕ್ತಿಕವಾಗಿರುತ್ತಿದ್ದವೇ ಹೊರತು ಸಾರ್ವಜನಿಕ ಜೀವನದ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ.

    ಆದರೆ ಒಮ್ಮೆಯಂತೂ ಆತ ದುಡುಕಿ ತೆಗೆದುಕೊಂಡ ನಿರ್ಧಾರ ಇಡೀ ಲಿಬಿಯಾದ ಭವಿಷ್ಯದ ಮೇಲೆ ಕೆಟ್ಟಪರಿಣಾಮ ಬೀರಿತು. ಮಾತ್ರವಲ್ಲ ಅವನ ಆಡಳಿತಾವಧಿಯಲ್ಲಿ ಅದೊಂದು ಕಪ್ಪುಚುಕ್ಕೆಯಾಗಿ ಉಳಿಯಿತು. ಅದೇನೆಂದರೆ ಅಮೆರಿಕನ್ನರ ಬದ್ಧವೈರಿಯಾಗಿದ್ದ ಗಡಾಫಿ ಅವರನ್ನು ದ್ವೇಷಿಸಿದ್ದಷ್ಟೇ ಅಲ್ಲದೇ ಅವರ ಮಾತೃಭಾಷೆಯಾದ ಇಂಗ್ಲೀಷನ್ನು ಕೂಡ ತೀವ್ರವಾಗಿ ದ್ವೇಷಿಸುತ್ತಿದ್ದ. ಆ ಕಾರಣಕ್ಕಾಗಿ ತನ್ನ ದೇಶದ ಜನತೆ ಸಹ ಅವರ ಮಾತೃಭಾಷೆಯಾದ ಇಂಗ್ಲೀಷ್ ಭಾಷೆಯನ್ನು ಕಲಿಯಕೂಡದೆಂದು ತಾಕೀತು ಮಾಡಿಬಿಟ್ಟ. ಆ ಮೂಲಕ ತನ್ನ ದೇಶದಲ್ಲಿ ಇಂಗ್ಲೀಷ್ ಭಾಷೆಯ ಕಲಿಕೆಯನ್ನು ನಿಷೇಧಿಸುವದರ ಮೂಲಕ ಅಲ್ಲಿಯ ಒಂದು ತಲೆಮಾರನ್ನು ಸುಮಾರು ಹತ್ತು ವರ್ಷಗಳ ಕಾಲ ವಂಚಿಸಿಬಿಟ್ಟ.

    ಈ ನಿರ್ಧಾರದಿಂದಾಗಿ ಇಡೀ ಲಿಬಿಯಾ ಒಂದು ದಶಕದ ಕಾಲ ಕತ್ತಲ ಕೂಪದಲ್ಲಿ ಮುಳುಗಿತು. ಇಪ್ಪತ್ತನೇ ಶತಮಾನದ ಅಂಚಿನಲ್ಲಿದ್ದ ಇಡಿ ಜಗತ್ತು ಇಂಗ್ಲೀಷ್ ಭಾಷೆಯನ್ನು ಕಲಿಯಲು ಏನೆಲ್ಲ ಸಾಹಸಗಳನ್ನು ಮಾಡುತ್ತಿರಬೇಕಾದರೆ ಒಂದು ದೇಶ ಕ್ಷುಲ್ಲಕ ಕಾರಣಕ್ಕಾಗಿ ಆ ಭಾಷೆ ನಮಗೆ ಬೇಡವೇ ಬೇಡ ಎಂದು ನಿಷೇಧಿಸಿದರೆ ಅಲ್ಲಿಯ ಪರಿಸ್ಥಿತಿ ಹೇಗಿರಬೇಡ? ನೀವೇ ಊಹಿಸಿಕೊಳ್ಳಿ. ಪರಿಣಾಮವಾಗಿ ಇಂಗ್ಲೀಷ್ ಭಾಷೆಯ ಕಲಿಕೆ ಮತ್ತು ಕಲಿಸುವಿಕೆಯನ್ನು ಶಾಲಾ ಕಾಲೇಜುಗಳಲ್ಲಿ ಕೈ ಬಿಡಲಾಯಿತು. ಇಂಗ್ಲೀಷ್ ಭಾಷೆಗೆ ಸಂಬಂಧಪಟ್ಟ ಹಾಗೆ ಅಷ್ಟೂ ಪುಸ್ತಕಗಳನ್ನು ಅಂದಿನ ಶಿಕ್ಷಣ ಮಂತ್ರಿಯ ಸಮ್ಮುಖದಲ್ಲಿ ಸಾರ್ವಜನಿಕವಾಗಿ ಸುಟ್ಟುಹಾಕಲಾಯಿತು. ಅತ್ತ ಲಿಬಿಯಾ ನಿಧಾನವಾಗಿ ಇಂಗ್ಲೀಷ್ ಭಾಷೆಯ ಸಂಪರ್ಕವಿಲ್ಲದೇ ಹೊರಜಗತ್ತಿನಿಂದ ದೂರ ಸರಿಯುತ್ತಿದ್ದಂತೆ ಇತ್ತ ಜನರು ಇಂಗ್ಲೀಷ್ ಭಾಷೆಯತ್ತ ನಿರ್ಭಾವುಕತೆಯನ್ನು ಬೆಳೆಸಿಕೊಳ್ಳತೊಡಗಿದರು. ಅದೊಂದು ಶತೃ ಭಾಷೆ, ಆ ಭಾಷೆಯನ್ನು ನಾವು ಕಲಿಯಕೂಡದು ಎನ್ನುವ ನಿರ್ಧಾರವನ್ನು ತಳೆದರು. ಈಗಲೂ ಆ ಭಾಷೆಯ ಬಗ್ಗೆ ಇಲ್ಲಿಯ ಜನರಲ್ಲಿ ಒಂದು ತೆರನಾದ ಫೋಬಿಯಾ ಇದೆ. ಆದರೆ ಕೆಲವು ಪ್ರಜ್ಞಾವಂತ ಶ್ರೀಮಂತ ಜನರು ಪಕ್ಕದ ರಾಷ್ಟ್ರಗಳಾದ ಈಜಿಪ್ಟ್, ನೈಜರ್, ನೈಜೇರಿಯಾ, ಗನಾ ದೇಶಗಳಿಗೆ ಹೋಗಿ ಇಂಗ್ಲೀಷ್ ಭಾಷೆಯನ್ನು ಕಲಿತು ಬಂದರು. ಆದರೆ ಮಧ್ಯಮವರ್ಗ ಮತ್ತು ಬಡ ಜನರು ಎ, ಬಿ, ಸಿ, ಡಿ ಕೂಡಾ ಕಲಿಯದೇ ಹಾಗೆ ಉಳಿದುಬಿಟ್ಟರು. ಹೀಗಾಗಿ ಇಲ್ಲಿಯ ಜನ ಗಡಾಫಿಯನ್ನು ಅವನ ಬೇರೆಲ್ಲ ಕೆಲಸಗಳಿಗೆ ಹೊಗಳಿದರೂ ಈ ಒಂದು ನಿರ್ಧಾರಕ್ಕೆ ಮಾತ್ರ ಇವತ್ತಿಗೂ ಹಿಡಿಹಿಡಿ ಶಾಪ ಹಾಕುತ್ತಾರೆ.

    ಅಷ್ಟಕ್ಕೂ ಗಡಾಫಿ ಲಿಬಿಯಾದಲ್ಲಿ ಇಂಗ್ಲೀಷ್ ಭಾಷೆಯನ್ನು ಹತ್ತು ವರ್ಷಗಳ ಕಾಲ ಅಂದರೆ 1986 ರಿಂದ 1996 ರ ವರೆಗೆ ನಿಷೇಧಿಸಿದ್ದಾದರೂ ಏಕೆ? ಅಂಥ ಬಲವಾದ ಕಾರಣವೇನಿತ್ತು? ಎಂದು ಇಲ್ಲಿಯವರನ್ನು ಕೇಳಿದರೆ ಬಹಳಷ್ಟು ಜನ ಅದೆಲ್ಲದಕ್ಕೂ ಗಡಾಫಿಯ ತಿಕ್ಕಲುತನ ಮತ್ತು ಅಮೆರಿಕನ್ನರ ಮೇಲಿನ ವ್ಯಯಕ್ತಿಕ ದ್ವೇಷವೇ ಕಾರಣವೆಂದು ಹೇಳುತ್ತಾರೆ. ಐರ್ಲಂಡ್‍ನಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ಚಟುವಟಿಕೆಗಳಿಗೆ ಲಿಬಿಯಾದ ಬೆಂಬಲವಿದೆಯೆಂಬ ಕಾರಣಕ್ಕೆ ಯೂರೋಪ್ ಮಾತ್ರ ಲಿಬಿಯಾವನ್ನು ‘ಭಯೋತ್ಪದಕ’ ದೇಶಗಳ ಪಟ್ಟಿಯಲ್ಲಿಟ್ಟಿತ್ತು. ಆದರೆ 1986ರಲ್ಲಿ ಬರ್ಲಿನ್‍ನ ನೈಟ್ ಕ್ಲಬ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಗಡಾಫಿಯ ಪಾತ್ರವನ್ನು ಸಂಶಯಿಸಿ ಅಮೆರಿಕಾ ಕೂಡಾ ಲಿಬಿಯಾವನ್ನು ’ಭಯೋತ್ಪದಕ’ ದೇಶಗಳ ಪಟ್ಟಿಯಲ್ಲಿಟ್ಟಿತ್ತಲ್ಲದೇ ಪ್ರತಿಕಾರವಾಗಿ ಲಿಬಿಯಾದ ರಾಜಧಾನಿ ಟ್ರಿಪೋಲಿಯ ಮೇಲೆ ಬಾಂಬ್ ದಾಳಿ ನಡೆಸಿತು. ಈ ಕಾರಣಕ್ಕಾಗಿ ಲಿಬಿಯಾದ ಮೇಲೆ ತಾತ್ಕಾಲಿಕ ದಿಗ್ಬಂಧವನ್ನು ಹೇರಿತು ಕೂಡಾ. ಮುಂದೆ ಅಂದರೆ 1988ರಲ್ಲಿ ಸ್ಕಾಟ್ಲೆಂಡ್‍ನ ಲಾಕರ್-ಬಿ ಎನ್ನುವ ಪಟ್ಟಣದ ಮೇಲೆ ಹಾರಾಡುತ್ತಿದ್ದ ಅಮೆರಿಕಾದ ಪಾನ್ ಅಮ್ 103 ಎನ್ನುವ ವಿಮಾನವೊಂದನ್ನು ಸ್ಫೋಟಿಸಿದ ಆರೋಪವೂ ಲಿಬಿಯಾದ ಮೇಲೆ ಬಂತು. ಬಹುಕಾಲ ಗಡಾಫಿ ಇದನ್ನು ನಿರಾಕರಸುತ್ತಲೇ ಬಂದ. ಈ ಕಾರಣಕ್ಕಾಗಿ ವಿಶ್ವಸಂಸ್ಥೆ ಲಿಬಿಯಾವನ್ನು ಮತ್ತೆ ನಿಷೇಧಕ್ಕೆ ಗುರಿಪಡಿಸಿತು. ಇದು ಗಡಾಫಿಯನ್ನು ರೊಚ್ಚಿಗೆಬ್ಬಿಸಿತಲ್ಲದೆ ಅಮೆರಿಕನ್ನರ ಮೇಲಿನ ಕೋಪಕ್ಕಾಗಿ ಅವರ ಮಾತೃಭಾಷೆಯಾದ ಇಂಗ್ಲೀಷ್ ಭಾಷೆಯನ್ನು ನಾವೇಕೆ ಓದಬೇಕು? ಬರೆಯಬೇಕು? ಮಾತನಾಡಬೇಕು? ಎಂದು ದುಡುಕಿ ಅದನ್ನು ತನ್ನ ದೇಶದಿಂದ ನಿಷೇಧಗೊಳಿಸಿಬಿಟ್ಟ.

    ಆದರೆ Amazigh International Council ನ (Amazigh ಎನ್ನುವದು ಲಿಬಿಯಾದಲ್ಲಿ ಮುಂಚಿನಿಂದಲೂ ಕಡೆಗಣಿಸಲ್ಪಟ್ಟ ಅಲ್ಪಸಂಖ್ಯಾತ ಬುಡಕಟ್ಟು ಜನಾಂಗ) ನಿರ್ದೇಶಕರಾದ ಹಫೀದ್ ಫಿಸ್ ಹೀಗೆ ಹೇಳುತ್ತಾರೆ, “ಗಡಾಫಿ ಸುಮಾರು ಹತ್ತು ವರ್ಷಗಳ ಕಾಲ ಇಂಗ್ಲೀಷ್ ಭಾಷೆಯನ್ನು ನಿಷೇಧಿಸಿದ್ದು ಅಮೆರಿಕನ್ನರ ಮೇಲಿನ ಕೋಪ ಎನ್ನುವದು ಒಂದು ನೆಪವಷ್ಟೆ. ಆದರೆ ನಿಜದ ಸಂಗತಿ ಬೇರೆಯೇ ಇದೆ. ಗಡಾಫಿಗೆ ಲಿಬಿಯನ್ನರ ಬಗ್ಗೆ ಭಯವಿತ್ತು. ತಾನು ಅಧಿಕಾರಕ್ಕೆ ಬಂದಂದಿನಿಂದ ಗಡಾಫಿ ನಿಧಾನವಾಗಿ ಲಿಬಿಯನ್ನರ ಮೆಲೆ ತನ್ನ ಹತೋಟಿಯನ್ನು ಸಾಧಿಸಿ ಮೆಲ್ಲನೆ ಅವರ ಮೆಲೆ ದಬ್ಬಾಳಿಕೆ ನಡೆಸತೊಡಗಿದ. ಅವರು ಇಂಗ್ಲೀಷ್ ಭಾಷೆಯನ್ನು ಕಲಿತರೆ ಎಲ್ಲಿ ತನ್ನ ದಬ್ಬಾಳಿಕೆಯ ಬಗ್ಗೆ ಹೊರಜಗತ್ತಿಗೆ ಹೇಳಿಬಿಡುತ್ತಾರೋ ಎನ್ನುವ ಭಯವಿತ್ತು ಅವನಿಗೆ. ಹೀಗಾಗಿ ಅವನು ಉದ್ದೇಶಪೂರ್ವಕವಾಗಿ ಇಂಗ್ಲೀಷ್ ಭಾಷೆಯನ್ನು ತನ್ನ ದೇಶದಿಂದ ನಿಷೇಧಿಸಿನಲ್ಲದೆ ಆ ಮೂಲಕ ತನ್ನ ದೇಶದ ಜನರು ಆ ಭಾಷೆಯನ್ನು ಕಲಿಯದಂತೆ ಮಾಡಿಬಿಟ್ಟ. ಹಾಗೆ ನೋಡಿದರೆ ಗಡಾಫಿ ತನ್ನ ಬದ್ಧ ವೈರಿ ದೇಶವಾದ ಅಮೆರಿಕವೂ ಸೆರಿದಂತೆ ಬಹಳಷ್ಟು ಇಂಗ್ಲೀಷ್ ಮಾತನಾಡುವ ದೇಶಗಳ ಜೊತೆ ತನ್ನ ಸಂಬಂಧವನ್ನು ಚನ್ನಾಗಿಯೇ ಇಟ್ಟುಕೊಂಡಿದ್ದ. ತನ್ನ ಈ ನೀತಿಯನ್ನು ಲಿಬಿಯಾದ ಜನತೆ ಹೊರಜಗತ್ತಿನೊಂದಿಗೆ ಸಂಪರ್ಕ ಇಟ್ಟುಕೊಳ್ಳದಂತೆ ಒಂದು ಅಸ್ತ್ರದಂತೆ ಬಳಸಿದ.” ಇವರ ಹೇಳಿಕೆಯನ್ನು ಗಡಾಫಿ ಇಂಗ್ಲೀಷ್ ಭಾಷೆಯನ್ನು ನಿಷೇಧಗೊಳಿಸುವ ಮುಂಚಿನ ದಿನಗಳಿಗೂ ಹಾಗೂ ನಂತರದ ದಿನಗಳಿಗೂ ಹೋಲಿಸಿ ಕೂಲಂಕುಷವಾಗಿ ಪರಿಶೀಲಿಸಿದರೆ ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲ ಅನಿಸುತ್ತದೆ. ಯಾಕೆಂದರೆ ಗಡಾಫಿ ತಾನು ಅಧಿಕಾರಕ್ಕೆ ಬಂದ ವರ್ಷದಿಂದಲೇ ಇಂಗ್ಲೀಷ್ ಭಾಷೆಯೂ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಹೆಚ್ಚಿನ ವ್ಯಾಸಾಂಗ ಮಾಡಲು ತನ್ನ ಪ್ರಜೆಗಳನ್ನು ಸ್ಕಾಲರ್ಶಿಪ್ ಕೊಟ್ಟು ಅಮೆರಿಕಾ, ಬ್ರಿಟನ್ ಮುಂತಾದ ಇಂಗ್ಲೀಷ್ ಮಾತನಾಡುವ ದೇಶಗಳಿಗೆ ಕಳಿಸುತ್ತಿದ್ದ. ಒಂದು ವೇಳೆ ಅವನಿಗೆ ಲಿಬಿಯನ್ನರ ಬಗ್ಗೆ ಭಯವಿದ್ದಿದ್ದರೆ ಅವನ್ಯಾಕೆ ಹಾಗೆ ಇಂಗ್ಲೀಷ್ ಮಾತನಾಡುವ ದೇಶಗಳಿಗೆ ಅವರನ್ನು ಕಳಿಸುತ್ತಿದ್ದ? ಅಥವಾ ಗಡಾಫಿಯ ದಬ್ಬಾಳಿಕೆಯ ಬಗ್ಗೆ ಹೊರಜಗತ್ತಿಗೆ ಹೇಳುವವರಿದ್ದರೆ 1986ರಗಿಂತ ಮೊದಲೇ ಇಂಗ್ಲೀಷ್ ಕಲಿತ ಲಿಬಿಯನ್ನರು ಇದ್ದಿರಲಿಲ್ಲವೆ? ಅವರೆಲ್ಲಾ ಆತನ ಬಗ್ಗೆ ಹೇಳಬಹುದಿತ್ತಲ್ಲ? ಮತ್ತು ಇಂಗ್ಲೀಷ್ ಭಾಷೆಯ ಮೇಲೆ ಹೇರಿದ್ದ ನಿಷೇಧವನ್ನು ಹಿಂತೆಗೆದುಕೊಂಡ ನಂತರ ಜನ ಇಂಗ್ಲೀಷ್ ಕಲಿತು ತನ್ನ ದಬ್ಬಾಳಿಕೆಯ ಬಗ್ಗೆ ಹೊರಜಗತ್ತಿಗೆ ತಿಳಿಸಬಹುದು ಎಂಬ ಭಯ ಅವನಿಗಿದ್ದರಲಿಲ್ಲವೆ? ಹಾಗಿದ್ದೂ ಅವನು ಯಾಕೆ ಇಂಗ್ಲೀಷ್ ಕಲಿಕೆಗೆ ಉತ್ತೇಜನ ಕೊಟ್ಟ? ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಒಂದೇ. ಗಡಾಫಿ ಇಂಗ್ಲೀಷ್ ಭಾಷೆಯನ್ನು ನಿಷೇಧಿಸಿದ್ದು ಅಮೆರಿಕಾದವಾರ ಮೇಲಿನ ಕೋಪಕ್ಕಾಗಿಯೇ ಹೊರತು ಖಂಡಿತ ಅದರ ಹಿಂದೆ ಯಾವುದೇ ದುರುದ್ದೇಶವಿರಲಿಲ್ಲ ಎನ್ನುವದು ಸ್ಪಷ್ಟವಾಗುತ್ತದೆ.

    ಇದನ್ನು ಆಲ್ ಮೊಘಾನಿ ಹಸನ್ ಮೊಹಮ್‍ದ ಎನ್ನುವ ಪಿ.ಎಚ್‍ಡಿ. ವಿದ್ಯಾರ್ಥಿಯೊಬ್ಬ ಹೀಗೆ ಪುಷ್ಟಿಕರಿಸುತ್ತಾನೆ. ಆತ “Students’ Perceptions of Motivation in English Language Learning in Libya” ಎನ್ನುವ ತನ್ನ ಇಂಗ್ಲೀಷ್ ಪ್ರೌಡಪ್ರಬಂಧದಲ್ಲಿ ಗಡಾಫಿಗೆ ಇಂಗ್ಲೀಷ್ ಭಾಷೆ ಮತ್ತು ಅಮೆರಿಕನ್ನರ ಮೇಲಿದ್ದ ಹಗೆತನ ಹೇಗೆ ಲಿಬಿಯನ್ನರ ಇಂಗ್ಲೀಷ್ ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಬೀರಿತು ಮತ್ತು ಈ ವಿಷಯದಲ್ಲಿ ಪ್ರಜೆಗಳು ಕೂಡಾ ಹೇಗೆ ತಮ್ಮ ರಾಜನನ್ನೇ ಅನುಸರಿಸಿದರು ಎನ್ನುವದನ್ನು ಹೇಳುತ್ತಾನೆ. ಮುಂದುವರಿದು ಮತ್ತೆ ಹೀಗೆ ಹೇಳುತ್ತಾನೆ. ಒಂದು ಸಾರಿ ಗಡಾಫಿ ತನ್ನ ಭಾಷಣದಲ್ಲಿ ಅಮೆರಿಕನ್ನರನ್ನು ಕುರಿತಂತೆ ಹೀಗೆ ಆಪಾದಿಸಿದ್ದ; “ಜಮ್ಹಾರಿಯಾ(Socialist People's Libyan Arab Jamahiriya)ದ ಸ್ವಾಂತ್ರ್ಯಕ್ಕೆ ಧಕ್ಕೆ ತರುವ ಸಾಮ್ರಾಜ್ಯಶಾಹಿ ರಾಷ್ಟ್ರವಾದ ಅಮೆರಿಕಾವನ್ನು ಮತ್ತದರ ಧೋರಣೆಯನ್ನು ನಾವು ತೀವ್ರವಾಗಿ ಖಂಡಿಸುತ್ತೆವೆ. ಆ ನಿಟ್ಟಿನಲ್ಲಿ ನಾವೆಲ್ಲಾ ಅಮೆರಿಕನ್ನರ ಹುಟ್ಟು ದ್ವೇಷಿಗಳು. ಅಮೆರಿಕನ್ನರೆಡಗಿನ ನಮ್ಮ ಈ ದ್ವೇಷ ಇತಿಹಾಸದಲ್ಲಿ ದಾಖಲಾಗಲಿ.” ಅಮೆರಿಕನ್ನರೆಡಗಿನ ಈತನ ಈ ಭಯಂಕರ ದ್ವೇಷ ಲಿಬಿಯಾದ ಜನರ ಮೇಲೆಯೂ ಗಾಢವಾದ ಪರಿಣಾಮ ಬೀರಿತು. ಅವನಂತೆ ಅವರು ಕೂಡಾ ಅಮೆರಿಕನ್ನರ ಹುಟ್ಟು ದ್ವೇಷಿಗಳಾದರು ಮತ್ತು ಇಂಗ್ಲೀಷ್ ಭಾಷೆಯನ್ನು ದ್ವೇಷಿಸತೊಡಗಿದರು.

    ಕ್ರಮೇಣ ಅಮೆರಿಕಾದ ಜೊತೆ ಲಿಬಿಯಾದ ಸಂಬಂಧ ಸರಿಹೋಗುತ್ತಿದ್ದಂತೆ ಗಡಾಫಿಗೆ ಇಂಗ್ಲೀಷ್ ಭಾಷೆಯ ಮಹತ್ವದ ಅರಿವಾಗತೊಡಗಿತು. ಮಾತ್ರವಲ್ಲ ಇಂಗ್ಲೀಷ್‍ನ್ನು ಕಲಿಯದೇ ಹೋದರೆ ಅಮೆರಿಕನ್ನರು ನಡೆಸುವ ಕಾರುಬಾರುಗಳು ನಮಗೆ ಗೊತ್ತೇ ಆಗುವದಿಲ್ಲ ಹಾಗೂ ಲಿಬಿಯಾಕ್ಕೆ ಒಳ್ಳೆಯ ಭವಿಷ್ಯವಿರುವದಿಲ್ಲ ಎಂಬ ಸತ್ಯವನ್ನು ಮನಗಂಡ. ಹೀಗಾಗಿ ಆತ ಮತ್ತೆ ಇಂಗ್ಲೀಷ್ ಭಾಷೆಯ ಕಲಿಕೆಯನ್ನು ಆರಂಭಿಸಿದ. ಕೆಲವರು ಆತ ಇಂಗ್ಲೀಷ್ ಭಾಷೆಯನ್ನು ನಿಷೇಧಿಸಿ ಆರು ವರ್ಷಗಳ ನಂತರ ಅಂದರೆ 1992ರಲ್ಲಿ ಅದರ ಕಲಿಕೆಯನ್ನು ಮತ್ತೆ ಆರಂಭಿಸಿದನೆಂದೂ ಆದರೆ ಅದು ಇಡಿ ದೇಶದ ತುಂಬಾ ವಿಸ್ತರಣೆಯಾದದ್ದು 1996ರಲ್ಲಿ ಮಾತ್ರ ಎಂದು ಹೇಳುತ್ತಾರೆ. ಇನ್ನು ಕೆಲವರು ಸರಿ ಸುಮಾರು ಹತ್ತು ವರ್ಷಗಳ ಕಾಲ ಅಂದರೆ 1986ರಿಂದ 1996ರವರೆಗೆ ಲಿಬಿಯಾ ಇಂಗ್ಲೀಷ್ ಭಾಷೆಯ ಮುಖವನ್ನೇ ಕಾಣಲಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಏನೇ ಆಗಲಿ 1996 ರಿಂದಾಚೆ ಇಂಗ್ಲೀಷ್ ಭಾಷೆಯನ್ನು ಕಲಿಯಲಿಕ್ಕೆ ಏನೆಲ್ಲ ಸೌಕರ್ಯಗಳು ಬೇಕೋ ಅವನ್ನೆಲ್ಲಾ ಗಡಾಫಿ ಕಲ್ಪಿಸಿಕೊಟ್ಟ. ಪಕ್ಕದ ದೇಶಗಳಾದ ಗನಾ, ನೈಜೇರಿಯಾ, ಕೀನ್ಯಾ, ಈಜಿಪ್ಟ್ ಗಳಿಂದ ಇಂಗ್ಲೀಷ್ ಶಿಕ್ಷಕರನ್ನು ನೇಮಿಸಿಕೊಂಡು ಮತ್ತೆ ಇಂಗ್ಲೀಷ್ ಕಲಿಸತೊಡಗಿದ. ಇಲ್ಲಿಯ ಪ್ರೈಮರಿ, ಪ್ರಿಪರೇಟರಿ, ಹಾಗೂ ಸೆಕೆಂಡರಿ ಶಾಲೆಯ ಇಂಗ್ಲೀಷ್ ಪಠ್ಯಪುಸ್ತಕಗಳನ್ನು ರಚಿಸಲು ಇಂಗ್ಲೀಷ್‍ರ ಸಹಾಯ ತೆಗೆದುಕೊಂಡನು. ಆ ಕಾರಣಕ್ಕಾಗಿಯೇ ಇಲ್ಲಿಯ ಇಂಗ್ಲೀಷ್ ಪಠ್ಯಪುಸ್ತಕಗಳು ತುಂಬಾ ಉತ್ಕೃಷ್ಟ ಮಟ್ಟದಲ್ಲಿವೆ. ದುರಂತವೆಂದರೆ ಅವನ್ನು ಸರಿಯಾಗಿ ಕಲಿಸಲು ಒಳ್ಳೆಯ ಶಿಕ್ಷಕರೇ ಇಲ್ಲ. ಈ ಮಧ್ಯ ಸಮೀಕ್ಷೆಯೊಂದನ್ನು ನಡೆಸಿ ಭಾರತೀಯರು ಕೂಡಾ ಇಂಗ್ಲೀಷಿನಲ್ಲಿ ಬ್ರಿಟಿಷ್‍ರಿಗಿಂತ ಏನೂ ಕಮ್ಮಿಯಿಲ್ಲ ಎಂಬ ಸತ್ಯವನ್ನು ಕಂಡುಕೊಂಡನು. ಆ ಪ್ರಕಾರ 2000 ದಿಂದಾಚೆ ಲಿಬಿಯಾದ ಕಾಲೇಜುಗಳಲ್ಲಿ ಭಾರತೀಯ ಇಂಗ್ಲೀಷ್ ಉಪನ್ಯಾಸಕರನ್ನು ನೇಮಿಸಿಕೊಂಡು ಇಂಗ್ಲೀಷ್ ಭಾಷೆಯ ಕಲಿಕೆಗೆ ಹೆಚ್ಚಿನ ಒತ್ತನ್ನು ಕೊಟ್ಟನು.

    ಅದೆಲ್ಲಾ ಇರಲಿ. ಇಷ್ಟೆಲ್ಲಾ ಹೇಳುತ್ತಿದ್ದ ಗಡಾಫಿ ಇಂಗ್ಲೀಷ್ ಭಾಷೆಯನ್ನು ಕಲಿತಿದ್ದನೆ? ಅವನಿಗೆ ಇಂಗ್ಲೀಷಿನಲ್ಲಿ ಮಾತನಾಡಲು ಬರುತ್ತಿತ್ತೆ? ಎಂದು ಕೇಳಿದರೆ ಉತ್ತರ ಹೌದು ಅಥವಾ ಇಲ್ಲ ಎಂದು ಬರುತ್ತದೆ. ಏಕೆಂದರೆ ಗಡಾಫಿ ಇಂಗ್ಲೀಷ್ ಕಲಿತಿದ್ದು ತನ್ನ ಸೆಕೆಂಡರಿ ಶಾಲೆಯಲ್ಲಿ ಮತ್ತು ಬಿ.ಎ. ಓದುತ್ತಿರಬೇಕಾದರೆ ಮಾತ್ರ. ಮುಂದೆ ಆತ ತನ್ನ ಓದನ್ನು ಅರ್ಧದಲ್ಲಿ ಮೊಟಕುಗೊಳಿಸಿ ಲಿಬಿಯಾದ ಗದ್ದುಗೆಯನ್ನೆರಿದ್ದರಿಂದ ತನ್ನ ಶಿಕ್ಷಣಕ್ಕೆ ತಿಲಾಂಜಲಿಯನ್ನು ಇಡಬೇಕಾಯಿತು. ಹೀಗಾಗಿ ಆತ ಇಂಗ್ಲೀಷ್ ಕಲಿತಿದ್ದೇನಿದ್ದರೂ ಅಲ್ಪ ಸ್ವಲ್ಪ ಮಾತ್ರ. ಅವನಿಗೆ ಇಂಗ್ಲೀಷ್‍ನಲ್ಲಿ ಮಾತನಾಡಲು ಬರುತ್ತಿತ್ತೆಂದರೆ ಬರುತ್ತಿತ್ತು. ಇಲ್ಲವೆಂದರೆ ಇಲ್ಲ. ಒಂದು ವೇಳೆ ಇಂಗ್ಲೀಷಿನಲ್ಲಿ ಮಾತನಾಡಲೇಬೇಕಾದ ಪ್ರಸಂಗ ಬಂದರೆ ಹರಕು ಮುರುಕು ಇಂಗ್ಲೀಷ್‍ನಲ್ಲಿ ಮಾತನಾಡುತ್ತಿದ್ದ. ಅಥವಾ ತುಂಬಾ ತಯಾರಿಯನ್ನು ಮಾಡಿಕೊಂಡು ಮಾತನಾಡುತ್ತಿದ್ದ. ಇಂಗ್ಲೀಷ್ ಚಾನಲ್‍ಗಳಿಗೆ ಸಂದರ್ಶನ ಕೊಡಬೇಕಾದಾಗ ಅಥವಾ ಬೇರೆ ಬೇರೆ ರಾಷ್ಟ್ರದ ನಾಯಕರೊಂದಿಗೆ ಮಾತನಾಡುವಾಗ ಅವನ ಪಕ್ಕದಲ್ಲಿ ಸದಾ ಅರೇಬಿಕ್ ಮತ್ತು ಇಂಗ್ಲೀಷ್ ಭಾಷೆಗಳೆರೆಡನ್ನೂ ಬಲ್ಲ ಒಬ್ಬ ನುರಿತ ಅನುವಾದಕನಿರುತ್ತಿದ್ದ. ಇಂಗ್ಲೀಷಿನಲ್ಲಿ ಮಾತನಾಡಿದ್ದನ್ನು ಆತ ಅರೇಬಿಕ್ ಭಾಷೆಗೆ ಅನುವಾದಿಸಿ ಗಡಾಫಿಗೆ ಹೇಳುತ್ತಿದ್ದ ಹಾಗೂ ಗಡಾಫಿ ಹೇಳಿದ್ದನ್ನು ಇಂಗ್ಲೀಷಿಗೆ ಅನುವಾದಿಸಿ ಇತರರಿಗೆ ರವಾನಿಸುತ್ತಿದ್ದ.

    ಒಮ್ಮೆ ಅಂದರೆ 1999 ರಲ್ಲಿ ಸುಪ್ರಸಿದ್ಧ ಸಂದರ್ಶಕಿ ಡ್ಯಾಫ್ನಿ ಗಡಾಫಿಯನ್ನು B.B.C. ಚಾನಲ್‍ಗೆ ಸಂದರ್ಶಿಸುತ್ತಾ ಹೀಗೆ ಕೇಳಿದ್ದಳು. “So… when are you going to quit and leave the stage for someone else?” ಈ ಪ್ರಶ್ನೆಗೆ ಗಡಾಫಿಯ ಅನುವಾದಕ ಭಯಕ್ಕೋ, ಮುಜುಗರಕ್ಕೋ, ಅಥವಾ ಪ್ರಶ್ನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾರದ್ದಕ್ಕೋ ಸುಮ್ಮನೆ ಕುಳಿತಿದ್ದ. ಡ್ಯಾಫ್ನಿ ಮತ್ತೆ ಅದೇ ಪ್ರಶ್ನೆಯನ್ನು ಕೇಳಿದಳು. ಅನುವಾದಕ ಆಗಲೂ ಸುಮ್ಮನಿದ್ದ. ಆಗ ಡ್ಯಾಫ್ನಿ ಈ ಪ್ರಶ್ನೆಯನ್ನು ಅರೇಬಿಕ್‍ನಲ್ಲಿ ಕೇಳೋಣ ಎಂದುಕೊಳ್ಳುತ್ತಿರುವಾಗಲೇ ತಕ್ಷಣ ಇಂಗ್ಲೀಷ್ ಸರಿಯಾಗಿ ಮಾತನಾಡಲು ಬಾರದ ಗಡಾಫಿ ಯಾವುದೇ ಅನುವಾದದ ಸಹಾಯವಿಲ್ಲದೆ ಹೀಗೆ ಹೇಳಿದ್ದ; "It is not about me quitting, after all – I am the head of a revolution…”

                                                      
                             ಬಿಬಿಸಿ ಸಂದರ್ಶನಕ್ಕಾಗಿ ಸ್ಟುಡಿಯೋಕ್ಕೆ ಕರೆದೊಯ್ಯುವ ಮುನ್ನ ಗಡಾಫಿ ಡ್ಯಾಫ್ನಿ ಜೊತೆ
    ಹೀಗಿದ್ದೂ ಗಡಾಫಿ ಸಪ್ಟಂಬರ್ 23, 2009 ರಂದು ವಿಶ್ವಸಂಸ್ಥೆಯಲ್ಲಿ ತನ್ನ ಅನುವಾದಕನಿಗೆ ಹೆಚ್ಚು ತೊಂದರೆ ಕೊಡದೆ ಸಾಕಷ್ಟು ತಯಾರಿ ಮಾಡಿಕೊಂಡು ತಾನು ಹೇಳಬೇಕಾದ್ದೆಲ್ಲವನ್ನೂ ಸುಮಾರು 90 ನಿಮಿಷಗಳ (ಅಂದರೆ ಕೊಟ್ಟ ಅವಧಿಗಿಂತ 15 ನಿಮಿಷ ಹೆಚ್ಚಿಗೆ ತೆಗೆದುಕೊಂಡು) ಕಾಲ ಇಂಗ್ಲೀಷಿನಲ್ಲಿ ಹೇಳಿ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದ. ಇದು ಆತ ವಿಶ್ವಸಂಸ್ಥೆಯಲ್ಲಿ ಮೊಟ್ಟಮೊದಲ ಬಾರಿಗೆ ಮಾಡಿದ ಭಾಷಣವಾಗಿತ್ತು. ಆದರೆ ಅಲ್ಲಿ ಅಮೆರಿಕಾವೂ ಸೇರಿದಂತೆ ಇತರೆ ಇಂಗ್ಲೀಷ್ ದೇಶಗಳ ನಾಯಕರುಗಳು ಆತನನ್ನು ಕೀಳಾಗಿ ಕಂಡರು. ಆತನ ಭಾಷಣಕ್ಕೆ ಆಗಿನ ಬ್ರಿಟಿಷ್ ಪ್ರಧಾನ ಮಂತ್ರಿ ಗೋರ್ಡನ್ ಬ್ರೌನ್ ಸೇರಿದಂತೆ ಬೇರೆ ದೇಶದ ಗಣ್ಯವ್ಯಕ್ತಿಗಳ್ಯಾರೂ ಹಾಜರಾಗಲೇ ಇಲ್ಲ. ಅಷ್ಟೇ ಏಕೆ US ಸೆಕ್ರೇಟರಿಯಾಗಿದ್ದ ಹಿಲೇರಿ ಕ್ಲಿಂಟನ್ ಮತ್ತು ಅಮೇರಿಕಾದ ರಾಯಭಾರಿಗಳು ಸಹ ಅವನು ಭಾಷಣ ಆರಂಭಿಸುವ ಮೊದಲೇ ಅಲ್ಲಿಂದ ಎದ್ದು ಹೋದರು.

    ಆದರೂ ಗಡಾಫಿ ಪಟ್ಟು ಬಿಡದೆ ತಾನು ಹೇಳಬೇಕಾದ್ದನ್ನು ಯಾವುದೇ ಹಿಂಜರಿಕೆಯಿಲ್ಲದೆ ಇಂಗ್ಲೀಷಿನಲ್ಲಿ ಹೇಳುತ್ತಾ ಹೋದ. ಮೊದಲಿಗೆ ಮನೆಗೆ ಬಂದ ಅತಿಥಿಗಳನ್ನು ಹೇಗೆ ಸತ್ಕರಿಸಬೇಕು ಎನ್ನುವದನ್ನು ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ನೋಡಿ ಕಲಿಯಿರಿ ಎಂದು ಸೂಚ್ಯವಾಗಿ ಅಮೆರಿಕಾಕ್ಕೆ ಹೇಳುತ್ತಾ ವಿಶ್ವಸಂಸ್ಥೆ ತನ್ನ ಕಲಮು 2 ರ ಪ್ರಕಾರ ತನ್ನ ಎಲ್ಲ ಸದಸ್ಯರನ್ನು ಸಮನಾಗಿ ಕಾಣಬೇಕು. ಆದರೆ ವಾಸ್ತವದಲ್ಲಿ ಇದು ರೂಢಿಯಾಗೇ ಇಲ್ಲ ಎಂದು ಹೇಳುವದರ ಮೂಲಕ ತನಗಾದ ತಾರತಮ್ಯವನ್ನು ಎತ್ತಿ ತೋರಿಸಿದ್ದ. ಮುಂದುವರಿಯುತ್ತಾ ವಿಶ್ವಸಂಸ್ಥೆ ಹುಟ್ಟಿರುವದೇ ಜಗತ್ತಿನ ಯಾವುದೇ ಭಾಗದಲ್ಲಿ ಯುದ್ಧಗಳಾಗದಂತೆ ನೋಡಿಕೊಳ್ಳುವದಕ್ಕೆ ಅಂದರೆ ವಿಶ್ವಶಾಂತಿ ಕಾಪಾಡುವದಕ್ಕೆ. ಆದರೆ ಅದು ಹುಟ್ಟಿದಾಗಿನಿಂದ ಅಂದರೆ 1945ರಿಂದ ಜಗತ್ತಿನ ನಾನಾ ಕಡೆ 65 ಯುದ್ಧಗಳು ನಡೆದಿವೆ. ಅವನ್ನು ತಡೆಗಟ್ಟುವಲ್ಲಿ ವಿಶ್ವಸಂಸ್ಥೆ ವಿಪಲವಾಗಿದೆ. ಹೀಗಿದ್ದ ಮೇಲೆ ವಿಶ್ವಸಂಸ್ಥೆ ಯಾಕಿರಬೇಕು ಎಂದು ಕಿಡಿಕಾರಿದ್ದ. ಮತ್ತೆ ಮುಂದುವರಿದು ಬೇರೆ ರಾಷ್ಟ್ರಗಳ ವಿಷಯದಲ್ಲಿ ಅಮೆರಿಕಾ ಮೂಗು ತೂರಿಸುವದನ್ನು ಮೊದಲು ನಿಲ್ಲಿಸಲಿ ಎಂದು ಹೇಳುತ್ತಾ ಇರಾಕ್ ಯುದ್ಧವನ್ನು ಅಮೆರಿಕಾದ “ಕೇಡಿನ ಪರಮಾವಧಿ” ಎಂದು ಕಟುಕಿದ್ದ. ಪ್ಯಾಲೈಸ್ತೀನಾದ ಬಿಕ್ಕಟ್ಟಿನ ಕುರಿತಂತೆ ಪ್ಯಾಲೈಸ್ತೀನಿಯನ್ನರು ಮತ್ತು ಇಸ್ರೇಲಿಯರು ಒಟ್ಟಿಗೆ ಒಂದೇ ದೇಶದಲ್ಲಿ ಸಹಬಾಳ್ವೆಯನ್ನು ನಡೆಸುವಂತಾಗಬೇಕು ಎಂದು ಕರೆಕೊಟ್ಟಿದ್ದ. ಆದರೆ ಅವನ ಭಾಷಣವನ್ನು ಕೇಳಿದವರೆಲ್ಲಾ ಅವನೇನು ಮಾತನಾಡಿದನೆಂದು ನಮಗೆ ಸರಿಯಾಗಿ ಅರ್ಥವಾಗಲೇ ಇಲ್ಲ. ಅಲ್ಲದೇ ಅವನ ಭಾಷಣ ಒಂದಕ್ಕೊಂದು ಸರಿಯಾದ ಜೋಡಣೆಯಿಲ್ಲದೆ ಅಸಂಬದ್ಧವಾಗಿತ್ತು ಎಂದು ಟೀಕಿಸುವದರ ಮೂಲಕ ಮತ್ತೆ ಅವನನ್ನು ಕಡೆಗಣಿಸಿದ್ದರು.

    -ಉದಯ್ ಇಟಗಿ