
ಮಗನೇ,
ಮಣ್ಣಲ್ಲಿ ಕುಳಿತು ಸಂಭ್ರಮ ಸಡಗರಗಳಿಂದ
ಮುರಿದ ಆಟಿಕೆಯೊಂದಿಗೆ ಆಡುತ್ತಾ
ಇಡಿ ಮುಂಜಾನೆ ಕಳೆಯುತ್ತಿರುವೆಯಲ್ಲ
ನೀನೆಷ್ಟೊಂದು ಸುಖಿ!?
ನಿನ್ನ ಆಟವೇನಿದ್ದರೂ
ಮುರಿದ ಸಣ್ಣ ಸಣ್ಣ ಆಟಿಕೆಗಳೊಂದಿಗೆ ಮಾತ್ರ!
ಆದರೂ ಎಷ್ಟೊಂದು ಖುಶಿ, ಸಂತೋಷ ನಿನಗೆ!
ನಾನೊಬ್ಬ ಮೂರ್ಖ
ನನಗೆ ತಿಳಿಯದು ಅವುಗಳ ಬೆಲೆ
ಸುಮ್ಮನೆ ಮುಸಿ ಮುಸಿ ನಗುತ್ತೇನೆ ಅವುಗಳ(ಮುರಿದ ಆಟಿಕೆಗಳ)ತ್ತ ನೋಡಿ.
ನಾನೋ
ಬೆಳ್ಳಂಬೆಳಿಗ್ಗೆ ಲೆಕ್ಕ ಪತ್ರಗಳನ್ನು ಹಿಡಿದು ಕುಳಿತಿರುವೆ
ಕೂಡುತ್ತಾ, ಕಳೆಯುತ್ತಾ, ಗುಣಿಸುತ್ತಾ, ಭಾಗಿಸುತ್ತಾ ಕಡತಗಳಲ್ಲಿ ಮೈ ಮರೆತಿರುವೆ.
ನಂದೂ ಒಂದು ಆಟವೇ,
ಅಂಕಿ-ಸಂಖ್ಯೆಗಳ ಆಟ!
ಬಹುಶಃ ನನ್ನಾಟವನ್ನು ನೋಡಿ ನಗುವ ಸರದಿ ಈಗ ನಿನ್ನದು
"ಎಂಥ ಪೆದ್ದ ಅಪ್ಪ! ಯಾವುದೋ ಮೂರ್ಖರ ಆಟವನ್ನು ಆಡುತ್ತಾ
ಸುಂದರ ಮುಂಜಾನೆಯನ್ನು ಹಾಳು ಮಾಡಿಕೊಳ್ಳುತ್ತಿರುವನಲ್ಲ?" ಎಂದು.
ಏನು ಮಾಡಲಿ ಮಗನೆ?
ನನಗೆ ನಿನ್ನ ಹಾಗೆ
ಮುರಿದ ಕಡ್ಡಿಗಳೊಂದಿಗೆ, ಮಣ್ಣ ಕುಡಿಕೆಗಳೊಂದಿಗೆ
ಆಡುತ್ತಾ ಆಡುತ್ತಾ ಮೈ ಮರೆಯುವ ಕಲೆ ಎಂದೋ ಮರೆತು ಹೋಗಿದೆ.
ಈಗೇನಿದ್ದರೂ
ನನ್ನ ಆಟ ಬರಿ
ನಗನಾಣ್ಯ, ಬೆಳ್ಳಿ, ಬಂಗಾರದ ಸಾಮಾನುಗಳೊಂದಿಗೆ ಮಾತ್ರ!
ನೀನೋ
ದಿನವೂ ಮತ್ತದೇ ಮುರಿದ ಹಳೆಯ ಆಟಿಕೆಗಳನ್ನು ಹರವಿಕೊಂಡು
ಆಡುತ್ತಾ ಆಡುತ್ತಾ ಖುಶಿಪಡುತ್ತಿ.
ಆದರೆ ನಾನು?
ನಾನು ಸಮಯ, ಶಕ್ತಿಯೆರಡನ್ನೂ ವ್ಯಯಗೊಳಿಸುತ್ತೇನೆ
ದುಬಾರಿ ಸಾಮಾನುಗಳನ್ನು ಗಳಿಸಲು.
ಆದರೂ ಮೈ ಮರೆಯಲಾಗದು ನನ್ನಾಟದಲ್ಲಿ,
ಗಳಿಸಲಾಗದು ಆ ನಿನ್ನ ಆ ಖುಶಿಯನ್ನು.
ಒಂದು, ಇನ್ನೊಂದು, ಮತ್ತೊಂದು, ಮಗದೊಂದು
ಹೀಗೆ ಒಂದಾದ ಮೇಲೊಂದರಂತೆ
ನನ್ನ ಮುತ್ತಿಕೊಳ್ಳುತ್ತಲೇ ಇವೆ ಆಸೆಗಳು
ಮಿತಿಯಿಲ್ಲ ಅವಕೆ ಸಾಗರದಂತೆ
ಆದರೂ ಗಟ್ಟಿಯಿರದ ದೋಣಿಯಲ್ಲಿ ಕುಳಿತುಕೊಂಡು
ತೀರದಾಸೆಗಳ ಸಾಗರವನ್ನು ದಾಟಲು ತಿಣಿತಿಣುಕಿಡುತ್ತೇನೆ.
ದಾಟುತ್ತೇನೆಯೇ?
ನನಗೆ ಗೊತ್ತಿಲ್ಲ!
ಮೂಲ: ರಬೀಂದ್ರನಾಥ್ ಟ್ಯಾಗೋರ್
ರೂಪಾಂತರ: ಉದಯ ಇಟಗಿ