Demo image Demo image Demo image Demo image Demo image Demo image Demo image Demo image

ಸತ್ತವರ ಹಾದಿ

  • ಮಂಗಳವಾರ, ಮಾರ್ಚ್ 30, 2010
  • ಬಿಸಿಲ ಹನಿ
  • ಲೇಬಲ್‌ಗಳು:


  • ಮೈಕೆಲ್ ಓಬಿಯ ಆಸೆಗಳೆಲ್ಲಾ ಅವನು ಅಂದುಕೊಂಡಿದ್ದಕ್ಕಿಂತ ಬಹಳಷ್ಟು ಮೊದಲೇ ಈಡೇರಿದ್ದವು. ಓಬಿ 1949 ಜನೇವರಿ ತಿಂಗಳಲ್ಲಿ ಎನ್ಡುಮೆ ಕೇಂದ್ರೀಯ ವಿದ್ಯಾಲಯದ ಮುಖ್ಯೋಪಾದ್ಯಯನಾಗಿ ನೇಮಕಗೊಂಡ. ಆ ಶಾಲೆ ಬಹಳ ದಿವಸಗಳಿಂದ ಹಿಂದುಳಿದ ಶಾಲೆಯಾಗಿಯೇ ಉಳಿದಿತ್ತು. ಹೀಗಾಗಿ ಅದರ ಮಿಶಿನ್ ಅಧಿಕಾರಿಗಳು ಅದನ್ನು ನಡೆಸಲು ಒಬ್ಬ ದಕ್ಷ, ಪ್ರಾಮಾಣಿಕ, ಶಿಸ್ತಿನ ತರುಣ ಶಿಕ್ಷಕನನ್ನು ಕಳಿಸಲು ನಿರ್ಧರಿಸಿದ್ದರು. ಓಬಿ ಅತ್ಯಂತ ಉತ್ಸಾಹದಿಂದ ಈ ಜವಾಬ್ದಾರಿಯನ್ನು ಒಪ್ಪಿಕೊಂಡ. ಅವನಲ್ಲಿ ಒಂದು ಶಾಲೆಯನ್ನು ನಡೆಸಲು ಬೇಕಾಗುವ ಎಲ್ಲ ಅರ್ಹತೆಗಳು ಇದ್ದವು. ಮೇಲಾಗಿ ಅವನು ತನ್ನ ದೂರದೃಷ್ಟಿ, ಚಾಣಾಕ್ಷತನ ಮತ್ತು ಕಾರ್ಯತಂತ್ರಗಳಿಗೆ ಹೆಸರುವಾಸಿಯಾಗಿದ್ದ. ಇದೀಗ ಅವನ್ನೆಲ್ಲ ಜಾರಿಗೆ ತರಲು ಒಂದು ಸುವರ್ಣಾವಕಾಶ ತಾನೇ ತಾನಾಗಿ ಒದಗಿ ಬಂದಿತ್ತು. ಓಬಿ ಉನ್ನತ ವ್ಯಾಸಾಂಗ ಮುಗಿಸಿ ಒಬ್ಬ ನುರಿತ ಶಿಕ್ಷಕನೆಂದು ಹೆಸರು ಮಾಡಿದ್ದ. ಆ ವಿಷಯ ಶಿಕ್ಷಣ ಇಲಾಖೆಯ ಕಡತಗಳಲ್ಲೂ ಸಹ ನಮೂದಿತವಾಗಿತ್ತು. ಈ ಕಾರಣಕ್ಕಾಗಿ ಅವನು ಮಿಶಿನ್ ಸಂಸ್ಥೆಯಲ್ಲಿ ಕೆಲಸ ಮಾಡುವ ಬೇರೆಲ್ಲ ಮುಖ್ಯೋಪಾದ್ಯಾಯರಿಗಿಂತ ತನ್ನನ್ನು ವಿಭಿನ್ನವಾಗಿ ಗುರುತಿಸಿಕೊಂಡಿದ್ದ. ಸದಾ ನೇರ, ನಿಷ್ಠುರ ನುಡಿಗೆ ಹೆಸರಾಗಿದ್ದ ಅವನು ಹಳೆಯ ಕಾಲದವರ ಕಂದಾಚಾರಗಳನ್ನು, ಮೂಢನಂಬಿಕೆಗಳನ್ನು ಹಾಗೂ ಅವರ ಅವೈಜ್ಞಾನಿಕ ವಿಚಾರಗಳನ್ನು ಬಲವಾಗಿ ಖಂಡಿಸುತ್ತಿದ್ದ.
    “ಈ ಅವಕಾಶವನ್ನು ನಾವು ಸದ್ಬಳಿಕೆ ಮಾಡಿಕೊಳ್ಳಬಹುದು.... ಅಲ್ಲವೇ?” ಮೊಟ್ಟಮೊದಲಿಗೆ ಅವನು ತನ್ನ ಬಡ್ತಿ ವಿಷಯವನ್ನು ತಿಳಿದಾಗ ಅತ್ಯಂತ ಸಂತೋಷದಿಂದ ತನ್ನ ನವತರುಣಿ ಹೆಂಡತಿಯನ್ನು ಹೀಗೆ ಕೇಳಿದ್ದ.
    “ಖಂಡಿತ, ನಮ್ಮ ಕೈಲಿ ಏನಾಗುತ್ತೋ ಅದನ್ನೆಲ್ಲಾ ಮಾಡೋಣ...... ಚನ್ನಾಗಿಯೇ ಮಾಡೋಣ” ಅವಳು ಉತ್ತರಿಸಿದಳು, “ನಮ್ಮ ಶಾಲೆಯನ್ನು ನವೀಕರಿಸೋಣ......ಅದರ ಸುತ್ತಲೂ ಅಂದ ಚೆಂದದ ಹೂ ಗಿಡಗಳನ್ನು ನೆಡೋಣ......ಹಾಗೂ ಎಲ್ಲದರಲ್ಲೂ ಹೊಸತನ ಮತ್ತು ಬದಲಾವಣೆಯನ್ನು ತರೋಣ.” ಕೇವಲ ಎರಡೇ ಎರಡು ವರ್ಷದ ದಾಂಪತ್ಯ ಜೀವನದಲ್ಲಿ ‘ಹೊಸತನ’ ಕುರಿತಂತೆ ಆಕೆ ತನ್ನ ಗಂಡನಿಂದ ಸಾಕಷ್ಟು ಪ್ರಭಾವಿತಳಾಗಿದ್ದಳು. ಮಾತ್ರವಲ್ಲ ಅವಳ ಗಂಡ ‘ಹಳೆಯ ಕಾಲದ ನಂಬಿಕೆಗಳಿಗೆ ಜೋತುಬಿದ್ದ ಈ ಮೂಢರು ಮಾರ್ಕೆಟಿನಲ್ಲಿ ವ್ಯಾಪಾರ ಮಾಡಿಕೊಂಡಿರುವದು ಬಿಟ್ಟು ಇಲ್ಲಿ ಕಲಿಸಲು ಬಂದಿದ್ದಾರೆ’ ಎಂದು ಆಗಾಗ್ಗೆ ಅಲ್ಲಿರುವ ಶಿಕ್ಷಕರನ್ನು ಕುರಿತು ಹೇಳುತ್ತಿದ್ದ. ಅದೇ ಧೋರಣೆಯನ್ನು ಅವಳೂ ಸಹ ತಾಳಿದ್ದಳು. ಆಕೆ ಅದಾಗಲೇ “ಇಂಥ ಹೆಡ್ಮಾಸ್ಟರನ ಹೆಂಡತಿಯಾಗಿದ್ದೇ ತನ್ನ ಸೌಭಾಗ್ಯ” ಎಂದುಕೊಂಡು ಇಡಿ ಶಾಲೆಯಲ್ಲಿ ರಾಣಿಯಂತೆ ಮೆರೆಯತೊಡಗಿದ್ದಳು.
    ಅಲ್ಲಿ ಬೇರೆ ಶಿಕ್ಷಕರ ಹೆಂಡತಿಯರು ಇದ್ದಿದ್ದರೆ ಅವಳ ಸ್ಥಾನಮಾನ ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದರೇನೋ? ಅವರಿಗೆಲ್ಲಾ ಈಕೆ ಎಲ್ಲದರಲ್ಲೂ ಮಾದರಿಯಾಗಿರುತ್ತಿದ್ದಳೇನೋ? ಆದರೆ ಅಲ್ಲಿ ಇವಳೊಬ್ಬಳನ್ನು ಬಿಟ್ಟರೆ ಬೇರೆ ಯಾವ ಹೆಂಗಸರೂ ಇದ್ದಂತೆ ಕಾಣಲಿಲ್ಲ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಅವಳು ಸ್ವಲ್ಪ ಸಂದೇಹದಿಂದಲೇ ಕೊಂಚ ಅಳಕುತ್ತಾ ತನ್ನ ಗಂಡನನ್ನು ಕೇಳಿದಳು.
    “ನಿಮ್ಮ ಸಹೋದ್ಯೋಗಿಗಳೆಲ್ಲಾ ಅವಿವಾಹಿತ ತರುಣರೆ?” ಅವನದಕ್ಕೆ ಉತ್ಸಾಹದಿಂದ “ಹೌದು, ಅದೊಂದು ರೀತಿ ಒಳ್ಳೇದೇ!” ಎಂದು ಹೇಳಿದ. ಆದರೆ ಅವನ ಉತ್ಸಾಹದಲ್ಲಿ ಅವಳು ಭಾಗಿಯಾಗಲಿಲ್ಲ.
    “ಏಕೆ?”
    “ಏಕೆಂದರೆ, ಅವರು ತಮ್ಮ ಸಮಯ ಮತ್ತು ಶಕ್ತಿಯನ್ನೆಲ್ಲಾ ಶಾಲೆಯ ಅಭಿವೃದ್ಧಿಗಾಗಿ ಮೀಸಲಿಡಬಹುದು.”
    ನ್ಯಾನ್ಸಿ, ಕ್ಷಣಾರ್ಧದಲ್ಲಿ ನಿರಾಶೆಗೊಂಡಳು. ಅವಳ ಉತ್ಸಾಹವೆಲ್ಲಾ ಒಮ್ಮೆಲೆ ಜರ್ರೆಂದು ಇಳಿದುಹೋಯಿತು. ಈಗ್ಗೆ ಸ್ವಲ್ಪ ಸಮಯದ ಹಿಂದೆಯಷ್ಟೇ ಅವಳು ಹೊಸ ಶಾಲೆಯ ಕುರಿತಂತೆ ಬಹಳಷ್ಟನ್ನು ಕಲ್ಪಿಸಿಕೊಂಡಿದ್ದಳು. ಅವಳ ಉತ್ಸಾಹಕ್ಕೆ ಪಾರವೇ ಇರಲಿಲ್ಲ. ಆದರೆ ಅದು ಕೆಲವೇ ಕೆಲವು ಕ್ಷಣಗಳು ಮಾತ್ರ. ಎಲ್ಲವೂ ಮಂಜಿನಂತೆ ಕರಗಿಹೋಗಿತ್ತು. ಆದರೆ ಅವಳು ತನ್ನ ವ್ಯಯಕ್ತಿಕ ದುರಾದೃಷ್ಟಕ್ಕೆ ತನ್ನ ಗಂಡನ ಖುಶಿಯನ್ನು ಹಾಳುಮಾಡಲು ಇಷ್ಟಪಡಲಿಲ್ಲ. ಅವನು ಅರಾಮ ಖುರ್ಚಿಯಲ್ಲಿ ಒರಗಿ ಕುಳಿತಂತೆ, ನ್ಯಾನ್ಸಿ ಒಮ್ಮೆ ಅವನತ್ತ ನೋಡಿದಳು. ಅವನ ಬೆನ್ನು ಸ್ವಲ್ಪ ಗೂನವಾಗಿದ್ದರಿಂದ ಅಲ್ಪಾಯುಷಿ ತರ ಕಂಡ. ಆದರೆ ಅವನ ಜೀವನೋತ್ಸಾಹಕ್ಕೆ ಪಾರವೇ ಇರಲಿಲ್ಲ. ಸದಾ ಏನಾದರೊಂದು ಕೆಲಸ ಮಾಡುತ್ತಾ ಚಟುವಟಿಕೆಯಿಂದಿರುತ್ತಿದ್ದ. ಯಾವುದೇ ಕೆಲಸಕ್ಕಾದರೂ ಸೈ ಉತ್ಸಾಹದಿಂದ ಮುನ್ನುಗ್ಗುತ್ತಿದ್ದ. ಅವನ ಈ ಪರಿಯ ಉತ್ಸಾಹವನ್ನು ನೋಡಿ ಸುತ್ತುಮುತ್ತಲಿನ ಜನ ಚಕಿತಗೊಳ್ಳುತ್ತಿದ್ದರು. ಅವನೀಗ ಕುಳಿತಿರುವ ಭಂಗಿಯಿಂದಲೇ ಹೇಳಬಹುದಿತ್ತು ಅವನ ದೇಹದ ಶಕ್ತಿಯೆಲ್ಲಾ ಉಡುಗಿಹೋಗಿ, ಅದು ಅವನ ಗುಳಿಬಿದ್ದ ಕಂಗಳಲ್ಲಿ ಮನೆಮಾಡಿ ಅವನೊಬ್ಬ ಸೂಕ್ಷ್ಮಗ್ರಾಹಿ ತರ ಕಾಣಿಸುವಂತೆ ಮಾಡಿತ್ತು. ಅವನಿಗೀಗ ಕೇವಲ ಇಪ್ಪತ್ತಾರು ವರ್ಷ. ಆದರೆ ಮೂವತ್ತೋ, ಮೂವತ್ತೆರಡೋ ಆದವರ ತರ ಕಾಣುತ್ತಿದ್ದ. ಒಟ್ಟಾರೆಯಾಗಿ ಹೇಳುವದಾದರೆ ಅವನು ಅಂಥಾ ಆಕರ್ಷಕವಾಗಿ ಕಾಣದಿದ್ದರೂ ಕುರೂಪಿಯೇನೂ ಆಗಿರಲಿಲ್ಲ.
    “ಮೈಕ್, ನಿನ್ನ ಯೋಚನಾ ಲಹರಿಗೆ ಒಂದು ಪೆನ್ನಿ ಕೊಡಬೇಕು” ಯಾವುದೋ ಮಹಿಳಾ ಮಾಸಪತ್ರಿಕೆಯೊಂದನ್ನು ಓದುತ್ತಿದ್ದ ನ್ಯಾನ್ಸಿ ಸ್ವಲ್ಪ ಸಮಯದ ನಂತರ ಅದರಲ್ಲಿನ ವಾಕ್ಯವೊಂದನ್ನು ಅನುಕರಿಸುತ್ತಾ ಹೇಳಿದಳು.
    “ನಾನು, ಈ ಜನಕ್ಕೆ ಒಂದು ಶಾಲೆಯನ್ನು ಹೇಗೆ ನಡೆಸಬೇಕೆಂದು ತೋರಿಸಲು ನಮಗೆ ಕೊನೆಗೂ ಒಂದು ಒಳ್ಳೆ ಅವಕಾಶ ಸಿಕ್ಕಿತಲ್ಲವೆ? ಎಂದು ಯೋಚಿಸುತ್ತಿದ್ದೆ”
    ಎನ್ದುಮೆ ಶಾಲೆ ಅಕ್ಷರಶಃ ಹಿಂದುಳಿದ ಶಾಲೆಯಾಗಿತ್ತು. ಈ ಶಾಲೆಯನ್ನು ಮುಂದೆ ತರಲು ಓಬಿ ತನ್ನ ಜೀವನವನ್ನೇ ಮುಡಿಪಾಗಿಟ್ಟ. ಹಾಗೆಯೇ ಅವನ ಹೆಂಡತಿಯೂ ಸಹ. ಅವನಲ್ಲಿ ಎರಡು ಧ್ಯೇಯಗಳಿದ್ದವು. ಮೊದಲನೆಯದು ಶಾಲೆಯಲ್ಲಿ ಉನ್ನತ ಕಲಿಕಾ ವಿಧಾನಗಳನ್ನು ಅಳವಡಿಸುವದು. ಎರಡನೆಯದು ಶಾಲೆಯ ಕೌಂಪೊಂಡನ್ನು ಅಂದಚೆಂದಗೊಳಿಸುವದು. ಮುಂದಿನ ಮಳೆಗಾಲದಷ್ಟೊತ್ತಿಗೆ ನ್ಯಾನ್ಸಿಯ ಕನಸಿನ ತೋಟಗಳೆಲ್ಲಾ ಅರಳಿ ನಿಂತವು. ದಾಸವಾಳ ಮತ್ತು ಕಣಿಗೆಲೆ ಗಿಡಗಳನ್ನು ಶಾಲೆಯ ಕೌಂಪೊಂಡಿನ ಗೋಡೆಯನ್ನಾಗಿ ನಿರ್ಮಿಸಿದರೆ ಅವುಗಳ ಮಧ್ಯದಲ್ಲಿ ಕೆಂಪು ಮತ್ತು ಹಳದಿ ಬಣ್ಣಗಳ ಕುರುಚಲು ಗಿಡಗಳನ್ನು ಆ ತುದಿಯಿಂದ ಈ ತುದಿಯವರೆಗೆ ಅತ್ಯಂತ ಜಾಗೂರಕವಾಗಿ ಬೆಳೆಸಲಾಯಿತು.
    ಒಂದು ಸಂಜೆ ಓಬಿ ತನ್ನ ಕೆಲಸವನ್ನು ನೋಡಿ ತನ್ನಷ್ಟಕ್ಕೆ ತಾನೇ ಹೆಮ್ಮೆಯಿಂದ ಬೀಗುತ್ತಾ ನಿಂತಿದ್ದ. ಅಷ್ಟರಲ್ಲಿ ಒಬ್ಬ ಹೆಣ್ಣು ಮಗಳು ಶಾಲೆಯ ಕೌಂಪೊಂಡಿನ ಪೊದೆಗಳ ಸಂಧಿಯಿಂದ ನುಸುಳಿ, ಪಕ್ಕದಲ್ಲಿಯೇ ಇದ್ದ ಚೆಂಡು ಹೂವಿನ ಗಿಡಗಳನ್ನು ದಾಟಿಕೊಂಡು ಕುಂಟುತ್ತಾ ನಡೆದುಹೋಗುವದನ್ನು ನೋಡಿ ಓಬಿ ಕೆಂಡಾಮಂಡಲವಾದ. ಆ ಜಾಗದ ಹತ್ತಿರ ಬಂದು ಅದನ್ನು ಸೂಕ್ಷ್ಮವಾಗಿ ಗಮನಿಸಿದ. ಅಲ್ಲಿ ಅದಾಗಲೇ ಬಳಸಿ ಬಿಟ್ಟಿರುವ ಕಾಲುದಾರಿಯೊಂದು ಕೌಂಪೊಂಡಿನಾಚೆಯಿಂದ ಈ ತುದಿಯಲ್ಲಿರುವ ಕಂಟಿಗಳನ್ನು ಹಾಯ್ದುಕೊಂಡು ಹೋಗಿರುವದು ಕಾಣಿಸಿತು. ಓಬಿಯ ಮೈಯೆಲ್ಲಾ ಉರಿಯಿತು.
    “ನನಗೆ ಅಶ್ಚರ್ಯವಾಗ್ತಿದೆ” ಅಲ್ಲಿ ಮೂರುವರ್ಷದಿಂದ ಕೆಲಸ ಮಾಡುತ್ತಿದ್ದ ಶಿಕ್ಷಕನನ್ನು ಕೇಳಿದ “ನೀವು ಅದ್ಹೇಗೆ ಈ ಜಾಗವನ್ನು ಹಳ್ಳಿಯವರಿಗೆ ಕಾಲುದಾರಿಯನ್ನಾಗಿ ಬಳಸಲು ಬಿಟ್ಟಿರಿ? ಇದು ನಂಬಲಸಾಧ್ಯವಾದುದು” ಎಂದು ಅಸಹನೆಯಿಂದ ತನ್ನ ತಲೆಯನ್ನೊಮ್ಮೆ ಕೊಡವಿದ.
    “ಆ ದಾರಿ” ಕ್ಷಮೆಯಾಚಿಸುವ ರೀತಿಯಲ್ಲಿ ಕೊಂಚ ಅಳುಕತ್ತಲೇ ಆ ಶಿಕ್ಷಕ ಹೇಳಿದ “ಅವರಿಗೆ ತುಂಬಾ ಮಹತ್ವವಾದುದೆಂದು ಕಾಣುತ್ತದೆ. ಅದನ್ನು ಅಪರೂಪಕ್ಕೊಮ್ಮೆ ಬಳಸಿದರೂ, ಈ ದಾರಿ ಅವರ ಊರಿನ ದೇವಸ್ಥಾನ ಹಾಗೂ ಸ್ಮಶಾನವನ್ನು ಒಂದುಗೂಡಿಸುತ್ತದೆ”
    “ಅದಕ್ಕೂ, ಈ ಶಾಲೆಗೂ ಏನು ಸಂಬಂಧ?” ಹೆಡ್ಮಾಸ್ಟರು ಕೇಳಿದರು.
    “ಅದೆಲ್ಲಾ ನಂಗೊತ್ತಿಲ್ಲ” ಪಕ್ಕದಲ್ಲಿಯೇ ಇದ್ದ ಇನ್ನೊಬ್ಬ ಶಿಕ್ಷಕ ತನ್ನ ಭುಜ ಕುಣಿಸುತ್ತಾ ಹೇಳಿದ “ಆದರೆ ನಂಗಿನ್ನೂ ಚನ್ನಾಗಿ ನೆನಪಿದೆ. ಹಿಂದೆ ನಾವು ಈ ದಾರಿಯನ್ನು ಮುಚ್ಚಲು ಪ್ರಯತ್ನಿಸಿದಾಗ ದೊಡ್ದ ಗಲಾಟೆಯೇ ನಡೆಯಿತು.”
    “ಅದು ಹಿಂದೆ. ಆದರೆ ಈಗ ಅದನ್ನು ಉಪಯೋಗಿಸಲು ಬಿಡಬಾರದು. ಮುಂದಿನವಾರ ಶಿಕ್ಷಣ ಮೇಲಾಧಿಕಾರಿ ಈ ಶಾಲೆಯನ್ನು ತಪಾಸಣೆ ಮಾಡಲು ಬಂದಾಗ ಇದನ್ನೆಲ್ಲ ನೋಡಿ ಏನು ಅನ್ಕೊಳದಿಲ್ಲಾ? ಅದಲ್ಲದೆ ಅವರು ಬಂದಾಗಲೇ ಈ ಹಳ್ಳಿಯವರು ಅದನ್ನು ಬಳಸಿಬಿಟ್ಟರೆ ಏನು ಗತಿ?” ಎಂದು ಹೇಳುತ್ತಾ ಓಬಿ ನಡೆದುಹೋದ.
    ಆ ದಾರಿಗೆ ಅಡ್ದಲಾಗಿ ಎರಡೂ ಕಡೆಗೆ ಅಂದರೆ ಶಾಲೆಯ ಕೌಂಪೊಂಡಿನೊಳಗೆ ಶುರುವಾಗುವಿನಿಂದ ಹಿಡಿದು ಆ ತುದಿಯ ಕೌಂಪೊಂಡಿನ ಸರಹದ್ದಿಗೆ ಬರುವ ಕೊನೆಯವರೆಗೂ ದೊಡ್ಡ ದೊಡ್ಡ ಬಿದಿರಿನ ಕಡ್ದಿಗಳನ್ನು ನೆಡೆಲಾಯಿತು. ಅಲ್ಲದೆ ತಂತಿಯನ್ನು ಸಹ ಬಿಗಿದು ಭದ್ರಗೊಳಿಸಲಾಯಿತು.
    ಮೂರು ದಿನಗಳ ನಂತರ ಆ ಊರಿನ ಪೂಜಾರಿ ಯ್ಯಾನಿ ಹೆಡ್ಮಾಸ್ಟರನ್ನು ಕಾಣಲು ಬಂದ. ಅವನಿಗೆ ವಯಸ್ಸಾಗಿದ್ದರಿಂದ ಸ್ವಲ್ಪ ಬಗ್ಗಿಕೊಂಡು ನಡೆಯುತ್ತಿದ್ದ. ಅವನ ಕೈಯಲ್ಲೊಂದು ದಪ್ಪನಾದ ಊರುಗೋಲಿತ್ತು. ಅದನ್ನು ಪ್ರತಿಸಾರಿ ತನ್ನ ವಾದದಲ್ಲಿ ಹೊಸ ಹೊಸ ವಿಚಾರಗಳನ್ನು ಮಂಡಿಸುವಾಗ ಇತರರ ಗಮನ ಸೆಳೆಯಲು ಒಮ್ಮೆ ಅದನ್ನು ನೆಲಕ್ಕೆ ಕುಟ್ಟುತ್ತಿದ್ದ.
    “ಇತ್ತೀಚಿಗೆ......” ಅವನು ಎಂದಿನಂತೆ ಮಾಮೂಲಿ ಉಭಯಕುಶಲೋಪರಿಯೆಲ್ಲಾ ಮುಗಿದ ಮೇಲೆ ಹೇಳಿದ “ನಮ್ಮ ಪೂರ್ವಿಕರ ಕಾಲ್ದಾರಿ ಮುಚ್ಚಲ್ಪಟ್ಟಿದೆ ಅಂತ ಕೇಳಲ್ಪಟ್ಟೆ.......”
    “ಹೌದು.....” ಓಬಿ ಉತ್ತರಿಸುತ್ತಾ ನಿಷ್ಠುರವಾಗಿ ಹೇಳಿದ “ನಮ್ಮ ಶಾಲೆಯ ಕೌಂಪೊಂಡನ್ನು ಹೆದ್ದಾರಿಯನ್ನಾಗಿ ಬಳಸಲು ನಾವು ಅವಕಾಶ ಮಾಡಿಕೊಡುವದಿಲ್ಲ.”
    “ಇಲ್ನೋಡು ಮಗನೆ......” ತನ್ನ ಊರುಗೋಲನ್ನು ನೆಲಕ್ಕೆ ಕುಟ್ಟುತ್ತಾ ಪೂಜಾರಿ ಹೇಳಿದ “ಈ ಹಾದಿ ನೀ ಹುಟ್ಟುವದಕ್ಕಿಂತ, ನಿನ್ನ ತಂದೆ ಹುಟ್ಟುವದಕ್ಕಿಂತ ಮೊದಲೇ ಇಲ್ಲಿತ್ತು. ಇಡಿ ಹಳ್ಳಿ ಈ ದಾರಿಯನ್ನು ಆಶ್ರಯಿಸಿದೆ. ನಮ್ಮ ಸತ್ತ ಸಂಬಂಧಿಕರು ಈ ಹಾದಿಯಿಂದಲೇ ತೆರಳುತ್ತಾರೆ ಮತ್ತು ಈ ಹಾದಿಯಿಂದಲೇ ನಮ್ಮ ಪೂರ್ವಿಕರು ನಮ್ಮನ್ನು ಭೇಟಿ ಮಾಡುತ್ತಾರೆ. ಅದಕ್ಕಿಂತ ಹೆಚ್ಚಾಗಿ, ಮುಂದೆ ಹುಟ್ಟುವ ನಮ್ಮ ಮಕ್ಕಳೆಲ್ಲಾ ಈ ದಾರಿಯಿಂದಲೇ ಹುಟ್ಟಿ ಬರೋದು......”
    ಓಬಿ ಶುಷ್ಕ ನಗೆಯೊಂದನ್ನು ನಗುತ್ತಾ ಎಲ್ಲವನ್ನೂ ಕೇಳಿಸಿಕೊಂಡ.
    “ನಮ್ಮ ಇಡಿ ಶಾಲೆಯ ಉದ್ದೇಶ.....” ಅವನು ಕೊನೆಯದೆಂಬಂತೆ ಹೇಳಿದ “ಇಂಥ ಮೂಢನಂಬಿಕೆಗಳನ್ನು ಅಳಿಸುವದೇ ಆಗಿದೆ. ಸತ್ತವರಿಗೆ ಹಾದಿಗಳು ಬೇಕಾಗಿಲ್ಲ. ನಿಮ್ಮೀ ಯೋಚನೆಯೇ ಹಾಸ್ಯಾಸ್ಪದದಿಂದ ಕೂಡಿದೆ. ಇಂಥ ಮೂಢನಂಬಿಕೆಗಳನ್ನು ನೋಡಿ ನಮ್ಮ ಶಾಲೆಯ ಮಕ್ಕಳು ಅಪಹಾಸ್ಯ ಮಾಡುವಂತೆ ಮಾಡುವದೇ ನಮ್ಮ ಮೊದಲ ಕರ್ತವ್ಯವಾಗಿದೆ”
    “ನೀವು ಹೇಳುವದು ನಿಜವಿರಬಹುದು. ಆದರೆ ನಮ್ಮ ಪೂರ್ವಿಕರ ಕಾಲದಿಂದ ಈ ಆಚರಣೆಗಳನ್ನು ಪಾಲಿಸುತ್ತಾ ಬಂದಿದ್ದೇವೆ. ನೀವು ಈ ದಾರಿಯನ್ನು ಪುನಃ ಆರಂಭಿಸಿದರೆ, ನಿಮ್ಮೊಂದಿಗೆ ಹಗೆತನ ಕಟ್ಟಿಕೊಳ್ಳುವ ಪ್ರಸಂಗ ಬರುವದಿಲ್ಲ. ನಾನು ಹೇಳುವದಿಷ್ಟೆ: ಗಿಣಿಯೂ ಹಾರಾಡುತ್ತಿರಲಿ, ಗಿಡುಗವೂ ಹಾರಾಡುತ್ತಿರಲಿ.” ಎಂದು ಹೇಳುತ್ತಾ ಪೂಜಾರಿ ಹೊರಡಲು ಎದ್ದು ನಿಂತನು.
    “ದಯವಿಟ್ಟು ಕ್ಷಮಿಸಿ” ತರುಣ ಮುಖ್ಯೋಪಾದ್ಯಾಯ ಹೇಳಿದ “ನಮ್ಮ ಶಾಲೆಯ ಕೌಂಪೊಂಡನ್ನು ನಾವು ಹೆದ್ದಾರಿಯನ್ನಾಗಿ ಬಳಸಲು ಬಿಡುವದಿಲ್ಲ. ಅದು ನಮ್ಮ ನೀತಿ ನಿಯಮಗಳಿಗೆ ವಿರುದ್ಧವಾದುದು. ಬೇಕಾದರೆ ನಿಮಗೊಂದು ಸಲಹೆ ಕೊಡಬಲ್ಲೆ; ನಿಮಗೆ ಬೇಕೆನಿಸಿದರೆ ಕೌಂಪೊಂಡಿನಿಂದಾಚೆ ಅದರ ಉದ್ದಕ್ಕೂ ಇನ್ನೊಂದು ದಾರಿಯನ್ನು ನಿರ್ಮಿಸಿಕೊಳ್ಳಿ. ಅದನ್ನು ನಿರ್ಮಿಸಲು ಬೇಕಾದರೆ ನಮ್ಮ ಶಾಲೆಯ ಮಕ್ಕಳ ಸಹಾಯವನ್ನು ಸಹ ಕೊಡಬಲ್ಲೆ. ನಮ್ಮ ಪೂರ್ವಿಕರಿಗೆ ಆ ಬಳಸು ದಾರಿಯಲ್ಲಿ ನಡೆದುಬಂದರೆ ಅಂಥಾ ಕಷ್ಟವಾಗುತ್ತದೆಂದು ನನಗನಿಸುವದಿಲ್ಲ.”
    “ಇದಕ್ಕಿಂತ ಹೆಚ್ಚಿಗೆ ನಾನೇನೂ ಹೇಳಲಾರೆ.” ಎಂದು ಪೂಜಾರಿ ಅದಾಗಲೇ ಹೊರನಡೆದು ಹೇಳಿದ.
    ಎರಡು ದಿವಸಗಳ ನಂತರ ಆ ಹಳ್ಳಿಯಲ್ಲಿ ಹೆಂಗಸೊಬ್ಬಳು ಹೆರಿಗೆ ಸಮಯದಲ್ಲಿ ತೀರಿಕೊಂಡಳು. ಇದಕ್ಕೆ ಕಾರಣವೇನೆಂದು ತಿಳಿಯಲು ಜೋತಿಷಿಯ ಹತ್ತಿರ ವಿಚಾರಿಸಲಾಗಿ, ಪೂರ್ವಿಕರ ಹಾದಿಯನ್ನು ಮುಚ್ಚಿ ಅವರಿಗೆ ಅವಮಾನ ಮಾಡಿದ್ದೇ ಆ ಹೆಂಗಸಿನ ಬಲಿದಾನಕ್ಕೆ ಕಾರಣವಾಯಿತು ಹಾಗೂ ಮುಂದೆಯೂ ಸಹ ಇದೇ ರೀತಿ ಬಲಿದಾನ ನಡೆಯುತ್ತಾ ಹೋಗುತ್ತದೆ ಎಂಬ ಉತ್ತರ ಬಂತು.
    ಮರು ದಿವಸ ಮುಂಜಾನೆ ಓಬಿ ತಾನೇ ಕಟ್ಟಿ ಬೆಳೆಸಿದ ಶಾಲೆಯ ಅವಶೇಷಗಳೊಂದಿಗೆ ಎದ್ದನು. ಆ ಹಾದಿಯ ಅಂಚಿನಲ್ಲಿದ್ದ ಪೊದೆಗಳನ್ನೆಲ್ಲಾ ಕಿತ್ತೆಸೆದಿದ್ದರು. ಮಾತ್ರವಲ್ಲ ಶಾಲೆಯ ಸುತ್ತಮುತ್ತಲಿದ್ದ ಸುಂದರ ಗಿಡಗಂಟಿಗಳನ್ನೆಲ್ಲಾ ನಾಶಮಾಡಿದ್ದರು. ಹೂಗಳೆಲ್ಲಾ ಕಾಲ್ತುಳಿತಕ್ಕೊಳಗಾಗಿ ಸತ್ತುಹೋಗಿದ್ದವು. ಶಾಲೆಯ ಒಂದು ಕಟ್ಟಡವನ್ನು ಸಹ ಕೆಡುವಲಾಗಿತ್ತು........ ಅದೇ ದಿವಸ ಮೇಲಾಧಿಕಾರಿಗಳು ಶಾಲೆಯನ್ನು ವೀಕ್ಷಿಸಲು ಬಂದರು. ಅಲ್ಲಿ ಆಗಿರುವ ದುಸ್ಥಿತಿಯನ್ನು ನೋಡಿ ಕೆಟ್ಟ ವರದಿಯೊಂದನ್ನು ನೀಡಿದರು. ಆ ವರದಿಯಲ್ಲಿ ‘ಶಾಲೆಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು ಹೊಸ ಹೆಡ್ಮಾಸ್ಟರರು ಶಾಲೆಯನ್ನು ಅಭಿವೃದ್ಧಿಗೊಳಿಸುವ ನೆಪದಲ್ಲಿ ಸ್ಥಳೀಯರ ಧಾರ್ಮಿಕ ನಂಬಿಕೆಗಳನ್ನು ಅವಮಾನ ಮಾಡುವದರ ಮೂಲಕ ಶಾಲೆಯ ದುಸ್ಥಿತಿಗೆ ಕಾರಣವಾಗಿದ್ದಾರಲ್ಲದೆ ಇಡಿ ಹಳ್ಳಿಯಲ್ಲಿ ಅಶಾಂತಿ ನೆಲೆಸುವಂತೆ ಮಾಡಿದ್ದಾರೆ’ ಎಂದು ಹೇಳಲಾಗಿತ್ತು.
    ಮೂಲ ಇಂಗ್ಲೀಷ್: ಚೀನು ಅಚಿಬೆ
    ಕನ್ನಡಕ್ಕೆ: ಉದಯ್ ಇಟಗಿ

    ಈ ಕಥೆಯು 22-05-2011 ರ ಉದಯವಾಣಿಯಲ್ಲಿ ಪ್ರಕಟವಾಗಿದೆ. ಅದರ ಲಿಂಕ್ ಗಳು ಕೆಳಗಿವೆ.
    http://www.udayavani.com/news/70173L15-ಸತ-ತವರ-ಹ-ದ-.html
    http://epaper.udayavani.com/Display.aspx?Pg=H&Edn=MN&DispDate=5/22/2011 PDF Version


    ಈ ಕಥೆಯ ವಿಮರ್ಶೆ ಓದಲು ಇಲ್ಲಿ ಕ್ಲಿಕ್ಕಿಸಿ http://bisilahani.blogspot.com/2009/12/blog-post_24.html

    6 ಕಾಮೆಂಟ್‌(ಗಳು):

    ಸಾಗರದಾಚೆಯ ಇಂಚರ ಹೇಳಿದರು...

    ಸರ್
    ಎಂಥಹ ಅದ್ಭುತ ಬರಹ ಸರ್
    ಜಗತ್ತೇ ಹಾಗೆ
    ಒಳ್ಳೆಯ ಉದ್ದೇಶ ಎಂಬುದು ಕೆಟ್ಟ ಧಾರ್ಮಿಕ ಭಾವನೆಗಳೊಂದಿಗೆ ಸೇರಿ ಹಾಳಾಗುತ್ತದೆ
    ಭಾರತದ ಅಭಿವ್ರದ್ದಿಗೂ ಇಂಥಹುದೇ ಅನೇಕ ಮೂಢ ನಂಬಿಕೆಗಳು ಅಡ್ಡ ಗಾಲಾಗಿವೆ
    ನಿಮ್ಮ ಬರಹ ಓದಿದ ಮೇಲೆ ಆ ಅಂಗ್ಲ ಕವಿಯ ಮೇಲೆ ಇನ್ನು ಹೆಚ್ಚಿನ ಆಸಕ್ತಿ ಮೂಡಿದೆ
    ಒಳ್ಳೆಯ ಅನುವಾದ

    sunaath ಹೇಳಿದರು...

    ತುಂಬ ಪರಿಣಾಮಕಾರಿಯಾದ, ಸರಳ ಶೈಲಿಯ ಕತೆ. ನಿಮ್ಮ ಅನುವಾದವು, ಅನುವಾದವೆನ್ನಿಸದೇ ಮೂಲವೆಂದೇ ಭಾಸವಾಗುವಂತಿದೆ.

    Unknown ಹೇಳಿದರು...

    ಉದಯ್.. ಇವತ್ತು ಒಂದು ಮಾತು ಹೇಳಬೇಕು.. ನೀವು ಬರೆದ ಅನುವಾದ ದ ಎಲ್ಲಾ ಬರಹಗಳಲ್ಲಿ ಇದು ತುಂಬಾ ತುಂಬಾ ಇಷ್ಟವಾಯಿತು.. ಚೀನು ಅಚಿಬೆ ಯ ಇನ್ನಷ್ಟು ಬರಹಗಳನ್ನು ಅನುವಾದಿಸಿ ಇಲ್ಲಿ ಹಾಕಿ.. ಹಿಂದೊಮ್ಮೆ ನೀವು ಚೀನು ಅಚಿಬೆ ಬಗ್ಗೆ ಬರೆದ ಅಸ್ಪಷ್ಟ ನೆನಪು.. ಈಗ ಅದನ್ನು ಮತ್ತೆ ಓದಿಕೊಂಡೆ...

    PARAANJAPE K.N. ಹೇಳಿದರು...

    ಅತ್ಯುತ್ತಮವಾಗಿದೆ, ಅನುವಾದವೆನ್ನಿಸುವುದಿಲ್ಲ, ನೀವೇ ಅನುಭವಿಸಿ ಬರೆದ೦ತಿದೆ.

    AntharangadaMaathugalu ಹೇಳಿದರು...

    ಉದಯ್ ಸಾರ್...
    ಕಥೆ ನಿಜಕ್ಕೂ ಅನುವಾದವೆನ್ನಿಸುವುದಿಲ್ಲ... ಒಳ್ಳೆಯದು ಮಾಡಲು ಹೊರಟವರ ಅನುಭವವೆಲ್ಲಾ ಮುಕ್ಕಾಲು ಪಾಲು ಹೀಗೇ ಇರುತ್ತೇನೋ... ತುಂಬಾ ಚೆನ್ನಾಗಿದೆ ಸಾರ್...

    shivu.k ಹೇಳಿದರು...

    ಸರ್,

    ಇದು ನಿಜಕ್ಕೂ ತುಂಬಾ ಚೆನ್ನಾಗಿದೆ. ಅನುವಾದವೆನ್ನಿಸುವುದೇ ಇಲ್ಲ...ಎಲ್ಲಾ ಭಾವನೆಗಳನ್ನು ನೀವೇ ಅನುಭವಿಸಿದಂತಿದೆ. ದೂರದ ಊರಲ್ಲಿದ್ದು ವಿಶ್ವದ ಅನೇಕ ಲೇಖಕರ ಕೃತಿಗಳನ್ನು ಹೀಗೆ ಅನುವಾದಿಸಿಕೊಡುತ್ತಿರುವುದು ನಿಜಕ್ಕೂ ಸಂತಸದ ವಿಚಾರ...