ಅಮೆರಿಕದ ಅಧ್ಯಕ್ಷ ಬರಾಕ್ ಹುಸೇನ್ ಒಬಾಮನ ಬಗ್ಗೆ ಕಳೆದೆರಡು ತಿಂಗಳಿಂದ ಬರೆಯದ ಪತ್ರಿಕೆಗಳಿಲ್ಲ, ಸುದ್ದಿ ಬಿತ್ತರಿಸದ ಟೀವೀ ಚಾನಲ್‍ಗಳಿಲ್ಲ. ಅವನೊಬ್ಬ ಕರಿಯನಾಗಿದ್ದುಕೊಂಡು ಏನೆಲ್ಲ ಸಾಧನೆಯನ್ನು ಮಾಡಿದ! ಹಿಂದೊಮ್ಮೆ ಕರಿಯರನ್ನು ಅಸ್ಪೃಶ್ಯರಂತೆ ನಡೆಸಿಕೊಡ ದೇಶಕ್ಕೆ ಈಗ ಅವನೇ ಅಧಿಪತಿ! ಹಿಂದೆ ಅಮೆರಿಕದ ಹೋಟೆಲ್‍ಗಳಲ್ಲಿ ಪ್ರವೇಶವೇ ನಿಷಿದ್ಧವಾಗಿದ್ದ ಕರಿಯರಿಗೆ ಈಗ ನೇರವಾಗಿ ವೈಟ್ ಹೌಸ್ ಒಳಗಡೆ ಪ್ರವೇಶವೆಂದರೆ ಸುಮ್ಮನೇನಾ? ಎಂದೆಲ್ಲಾ ಒಬಾಮ ಹೀಗೆ, ಒಬಾಮ ಹಾಗೆ ಎಂದು ಕೊಡಾಡಿದ್ದೇ ಕೊಂಡಾಡಿದ್ದು! ಸಾಲದೆಂಬಂತೆ ಒಬಾಮ ನಮ್ಮ ಮನೆಯ ಹುಡುಗನಾದಂತೆ ಅವನ ಬಗ್ಗೆ ಕನ್ನಡದ ಪತ್ರಿಕೆಗಳು ಸಹ ಪುಟಗಟ್ಟಲೆ ಬರೆದು ಹೆಮ್ಮೆಯಿಂದ ಬೀಗಿದವು. ಕನ್ನಡದ ಲೇಖಕರು ಈತನ ಬಗ್ಗೆ ಬರೆಯದೆ ಹೋದರೆ ತಾವೆಲ್ಲಿ ಲೇಖಕರ ಪಟ್ಟಿಯಿಂದ ಕೈ ಬಿಟ್ಟು ಹೋಗುತ್ತೇವೆ ಎಂಬ ಅನುಮಾನದಿಂದ ನಾ ಮುಂದು ತಾ ಮುಂದೆಂದು ಪಟ್ಟು ಹಿಡಿದು ದಿನಕ್ಕೊಬ್ಬೊಬ್ಬರಂತೆ ಪತ್ರಿಕೆಗಳಲ್ಲಿ, ಮ್ಯಾಗಜೀನಗಳಲ್ಲಿ ಬರೆದು ಧನ್ಯರಾದರು. ಈಗಲೂ ಬರೆಯುತ್ತಿದ್ದಾರೆ. ಅದ್ಯಾವ ಮಟ್ಟ ತಲುಪಿದ್ದಾರೆಂದರೆ ಅದೇನನ್ನೋ ಬರೆದು ಅದ್ಹೇಗೊ ಈ ಒಬಾಮನಿಗೆ ಲಿಂಕ್ ಮಾಡಿಡುತ್ತಿದ್ದಾರೆ. ಹೀಗಾಗಿ ಎಲ್ಲರ ಬಾಯಲ್ಲೂ ಒಬಾಮ! ಒಬಾಮ!! ಒಬಾಮ!!! ಇಲ್ಲಿ ಎಲ್ಲವೂ ಒಬಾಮಮಯವಾಗಿದೆ.
ನಾನು ಎಲ್ಲವನ್ನೂ ನಿರ್ಲಿಪ್ತವಾಗಿ ಗಮನಿಸುತ್ತಾ, ಒಳೊಗೊಳಗೆ ನಗುತ್ತಾ ಈ ಜನಕ್ಕೆ ಒಬಾಮನ ಬಗ್ಗೆ ಹುಚ್ಚು ಹಿಡಿದಿದೆ ಎಂದುಕೊಂಡೆ. ಒಬಾಮ ಪ್ರಮಾಣ ವಚನ ಸ್ವೀಕರಿಸಿದ ಮಾರನೆ ದಿನ ನನ್ನ ಇಂಡಿಯನ್ ಅಧ್ಯಾಪಕ ಮಿತ್ರರೊಬ್ಬರು ಲಿಬಿಯಾದಿಂದ ದೂರದ ಹೈದ್ರಾಬಾದಿನಲ್ಲಿ ಮೂರನೆ ಕಾಸಿನಲ್ಲಿ ಓದುತ್ತಿರುವ ತಮ್ಮ ಮಗನೊಂದಿಗೆ ಫೋನಿನಲ್ಲಿ ಮಾತನಾಡುತ್ತಾ "ನಿನ್ನೆ ಟೀವೀಯಲ್ಲಿ ಒಬಾಮನ ಓಥ್ ಸೆರ್‍ಮನಿ ನೋಡಿದ್ಯಾ? ಎಷ್ಟು ಚನ್ನಾಗಿತ್ತು ಅಲ್ವಾ? ಅವನ ಹಾಗೆ ನೀನು ದೊಡ್ದ ಸಾಧನೆ ಮಾಡಬೇಕು. ಗೊತ್ತಾಯ್ತಾ?" ಎಂದೆಲ್ಲಾ ಹಿತೋಪದೇಶ ನೀಡಿದರು. ಅವರು ಮಾತನಾಡಿ ಮುಗಿಸಿದ ಮೇಲೆ ಪಕ್ಕದಲ್ಲಿಯೆ ಇದ್ದ ನಾನು "ನೀವು ನಿಮ್ಮ ಮಗನಿಗೆ ಅಮೆರಿಕದ ಒಬಾಮನನ್ನೇ ಏಕೆ ಉದಾಹರಣೆಯಾಗಿ ಕೊಟ್ಟಿರಿ? ನಮ್ಮದೆ ದೇಶದ ಗಾಂಧಿಯನ್ನೊ, ವಿವೆಕಾನಂದರನ್ನೊ, ಅಂಬೇಡ್ಕರನ್ನೊ ಏಕೆ ಪ್ರಸ್ತುತ ಪಡಿಸಲಿಲ್ಲ? ಅವರೆಲ್ಲಾ ಹೋಗಲಿ, ಕೊನೆಪಕ್ಷ ನೀವು ಸದಾ ಬಡತನದ ನೆರಳಲ್ಲಿ ಬೆಳೆದು, ಏನೇನೆಲ್ಲಾ ಅನುಭವಿಸಿ, ಕಷ್ಟಪಟ್ಟು ಓದಿ ಸಂದರ್ಶನವೊಂದರಲ್ಲಿ ಪಾಸಾಗಿ ಇದೀಗ ಲಿಬಿಯಾದಲ್ಲಿ ದೊಡ್ದಮೊತ್ತದ ಸಂಬಳಕ್ಕೆ ಕೆಲಸ ಮಾಡುತ್ತಿರುವಿರೆಲ್ಲ, ನಿಮ್ಮದೂ ಒಂದು ಸಾಧನೆಯಲ್ಲವೆ? ನೀವೇಕೆ ನಿಮ್ಮ ಸಾಧನೆಯ ಬಗ್ಗೆ ನಿಮ್ಮ ಮಗನಿಗೆ ತಿಳಿಯಪಡಿಸುವದಿಲ್ಲ? ದೂರದವರೇ ಏಕೆ ಆಗಬೇಕು?" ಎಂದು ಕೇಳಿದೆ. ಅದಕ್ಕವರು ಕಕ್ಕಾಬಿಕ್ಕಿಯಾದಂತೆ ಕಂಡರು. ಆನಂತರ ಸುಧಾರಿಸಿಕೊಂಡು ನಕ್ಕು "ಹಿತ್ತಿಲ ಗಿಡ ಮದ್ದಲ್ಲ" ಎಂದೇನೋ ಹೇಳಿ ನನ್ನ ವಾದದ ಹಿಡಿತಕ್ಕೆ ಸಿಗುವ ಮುನ್ನವೇ ನಯವಾಗಿ ಜಾರಿಕೊಂಡರು.
ನಾನು ಮತ್ತೊಮ್ಮೆ ನಕ್ಕು ಸುಮ್ಮನಾದೆ. ನಮ್ಮ ಜನವೇ ಇಷ್ಟು. ದೂರದ ಜನಗಳ, ವಸ್ತುಗಳ ಬಗ್ಗೆ ಹುಚ್ಚು ಹಿಡಿಸಿಕೊಳ್ಳುತ್ತಾರೆ. ಅವರ ಬಗ್ಗೆ ಮಾತನಾಡುತ್ತಲೆ ಪಕ್ಕದವರ ಸಾಧನೆಗಳನ್ನು ಮರೆತು ಬಿಡುತ್ತಾರೆ. ಅವರನ್ನು ಗುರುತಿಸುವ, ಅವರ ಬಗ್ಗೆ ಒಳ್ಳೆಯ ಮಾತನಾಡುವ ಕಿಂಚಿತ್ತು ಕಾಳಜಿಯನ್ನು ತೋರಿಸುವದಿಲ್ಲ ಅಂತ ಅಂದುಕೊಂಡೆ. ನಾನು ಬಹಳಷ್ಟು ಸಾರಿ ನನ್ನನ್ನು ನಾನೇ ಕೇಳಿಕೊಂಡಿದ್ದೇನೆ. ನಾವೇಕೆ ಹೀಗೆ? ದೂರದವರಿಂದಲೆ ಏಕೆ ಬದುಕಿನ ಪಾಠಗಳನ್ನು ಕಲಿಯುತ್ತೇವೆ? ಹತ್ತಿರದವರಿಂದ ಏಕೆ ಕಲಿಯುವದಿಲ್ಲ? ಅವರನ್ನೇ ರೋಲ್ ಮಾಡೆಲ್‍ಗಳಾಗಿ ಏಕೆ ಇಟ್ಟುಕೊಳ್ಳುವದಿಲ್ಲ? ಉತ್ತರ ಹುಡುಕುವ ಮುನ್ನ ಮತ್ತೆ ನಾವು ಯೋಚಿಸುವ ರೀತಿ ನೆನಪಾಗುತ್ತದೆ.
ನಮಗೆ ಅಮೆರಿಕದ ಅಧ್ಯಕ್ಷ ಗೊತ್ತಿರುವಷ್ಟು ನಮ್ಮದೇ ದೇಶದ ರಾಷ್ಟ್ರಪತಿಗಳಾಗಲಿ,ಪ್ರಧಾನಮಂತ್ರಿಯಾಗಲಿ ಗೊತ್ತಿರುವದಿಲ್ಲ. ಅಥವಾ ಅಮೆರಿಕಾ ದೇಶದ ಬಗ್ಗೆ ತಿಳಿದಿರುವಷ್ಟು ನಮ್ಮದೇ ದೇಶದ ಬಗ್ಗೆ ತಿಳಿದಿರುವದಿಲ್ಲ. ದೇಶವನ್ನು ಬಿಡಿ, ನಮ್ಮ ನಾಡಿನ ಬಗ್ಗೆ ನಮಗೆ ಬಹಳಷ್ಟು ಸಂಗತಿಗಳು ತಿಳಿದೇ ಇರುವದಿಲ್ಲ. ಅರವಿಂದ ಅಡಿಗರ "ಬಿಳಿ ಹುಲಿ" ಕೃತಿಗೆ ಬೂಕರ್ ಪ್ರಶಸ್ತಿ ಬಂತು ಎಂದು ಸುಲಭವಾಗಿ ಹೇಳುವ ನಾವು ಶ್ರೀನಿವಾಸ ವೈದ್ಯರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸಿಕ್ಕಿತು ಎಂದು ಕೇಳಿದರೆ ಬೆಬ್ಬೆಬ್ಬೆ ಎಂದು ಬಾಯಿಬಿಡುತ್ತೇವೆ. ಶಶಿ ದೇಶಪಾಂಡೆ, ಅನಿತಾ ದೇಸಾಯಿಯವರ ಬಗ್ಗೆ ತಿಳಿದಿರುವಷ್ಟು ನಮ್ಮ ಲೇಖಕಿಯರ ಬಗ್ಗೆ ಏನೇನೂ ತಿಳಿದಿರುವದಿಲ್ಲ. ಫಲ್ಗುಣಿ ಪಾಟಕ್, ಸೊನು ನಿಗಮ್‍ರ ಪ್ರತಿಭೆಯನ್ನು ಗುರಿತಿಸಿದಂತೆ ನಮ್ಮವರೇ ಆದ ಅವರಿಗಿಂತ ಚನ್ನಾಗಿ ಹಾಡಿರುವ ರಾಜೇಶ್, ನಂದಿತಾ, ಪಲ್ಲವಿಯವರ ಬಗ್ಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡುವದಿಲ್ಲ. ಯಾವದೋ ಅಂತರಾಷ್ಟ್ರಿಯ ಮಟ್ಟದಲ್ಲಿ ಪ್ರಶಸ್ತಿ ಪಡೆದ "ಸ್ಲಂ ಡಾಗ್" ಚಿತ್ರದ ಬಗ್ಗೆ ಬರೆದು ಪ್ರಚಾರ ಪಡೆಸಿದಷ್ಟು ಕನ್ನಡದಲ್ಲಿ ಬಂದ ಒಳ್ಳೆಯ ಚಿತ್ರಗಳಾದ ಗುಲಾಬಿ, ಮಾತಾಡ್ ಮಾತಾಡ್ ಮಲ್ಲಿಗೆ, ಮೊಗ್ಗಿನ ಮನಸ್ಸು ಚಿತ್ರಗಳ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನು ಬರೆದು ಪ್ರಚಾರಪಡಿಸುವ ಉಸಾಬರಿಗೆ ಹೋಗುವದಿಲ್ಲ. ಹಿಂದೊಮ್ಮೆ ಅಮಿತಾಬಚ್ಚನ್ "ಬ್ಲ್ಯಾಕ್" ಚಿತ್ರದಲ್ಲಿನ ಅಬಿನಯಕ್ಕಾಗಿ ಶ್ರೇಷ್ಟ ನಟನೆಂದು ರಾಷ್ಟ್ರ ಪ್ರಶಸ್ತಿ ಪಡೆದಾಗ ಹೆಮ್ಮೆಯಿಂದ ಬೀಗಿದ್ದ ನನ್ನ ಸ್ನೇಹಿತನೊಬ್ಬ ಅದೇ ರಾಷ್ಟ್ರ ಪ್ರಶಸ್ತಿ ದತ್ತಣ್ಣನಿಗೆ (ಮುನ್ನುಡಿ ಚಿತ್ರಕ್ಕಾಗಿ) ಹಾಗೂ ಅವಿನಾಶಗೆ (ಮತದಾನ ಚಿತ್ರಕ್ಕಾಗಿ) ಬಂದಾಗ ಅವನು ಏನೂ ಹೇಳದಿದ್ದನ್ನು ಕೇಳಿ ನನಗೆ ಅಚ್ಚರಿಯಾಗಿತ್ತು. ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡುವಾಗ ದೂರದ ನರ್ಮದಾ ಬಚಾವ್ ಅಂದೋಲನದ ನಾಯಕಿ ಮೇಧಾ ಪಾಟ್ಕರ್ ನೆನಪಾದಂತೆ ಸಾಲು ಮರಗಳನ್ನು ನೆಟ್ಟು ನಮಗೆಲ್ಲಾ ನೆರಳನ್ನು ನೀಡಿದ ಸಾಲು ಮರದ ತಿಮ್ಮಕ್ಕ ನೆನಪಾಗುವದಿಲ್ಲ. ನಮಗೆ ಅಂಬೇಡ್ಕರ್‍ವರ ಹೋರಾಟದ ಕತೆ ಇಷ್ಟವಾದಂತೆ ನಮ್ಮೂರಿನ ಮುಖಂಡರೊಬ್ಬರು ದಲಿತರಿಗೆ ದೇವಸ್ಥಾನಗಳಲ್ಲಿ ಪ್ರವೇಶ ಕಲ್ಪಿಸಲು ನಡೆಸಿದ ಹೋರಾಟದ ಕತೆ ಇಷ್ಟವಾಗುವದಿಲ್ಲ. ಶಿಕ್ಷಕರ ದಿನಾಚಾರಣೆಯಂದು ಅಷ್ಟಾಗಿ ಗೊತ್ತಿರದ, ನೋಡಿರದ ರಾಧಾಕೃಷ್ಣರನ್ನು ನೆನೆಯುತ್ತಾ ಅವರನ್ನು ನಮ್ಮ ಶಿಕ್ಷಕರಲ್ಲಿ ಕಾಣುವ ಹುನ್ನಾರು ನಡೆಸುತ್ತೇವೆ. ಆದರೆ ಮೊದಲ ಅಕ್ಷರಗಳನ್ನು ಹೇಳಿಕೊಟ್ಟ, ತೊದಲ ನುಡಿಗಳನ್ನು ಕಲಿಸಿದ ಅಮ್ಮನನ್ನಾಗಲಿ, ನೀತಿಪಾಠಗಳನ್ನು ಹೇಳಿಕೊಟ್ಟ ಅಜ್ಜಿಯರನ್ನಾಗಲಿ ನಾವು ಗುರುಗಳೆಂದು ಭಾವಿಸಿ ಅಭಿನಂದಿಸುವದಿಲ್ಲ. ಎಲ್ಲೋ ದೂರದಲ್ಲಿ ಯಾವುದೋ ಹೆಣ್ಣುಮಗಳೊಬ್ಬಳು ನಿಷ್ಪ್ರಯೋಜಕ ಗಂಡನನ್ನು ಕಟ್ಟಿಕೊಂಡು ಏನೆನೆಲ್ಲಾ ಹಿಂಸೆ ಅನುಭವಿಸಿ ಅವನೊಂದಿಗೆ ಬಾಳಲಾರದೆ ಡೈವೋರ್ಸ್ ಕೊಟ್ಟು ಹೊರಬಂದು ಕಷ್ಟಪಟ್ಟು ಓದಿ ಕೆಲಸ ಹಿಡಿದು ಮಕ್ಕಳಿಗೊಂದು ನೆಲೆ ಕಾಣಿಸಿದವಳ ನೋವಿನ ಕತೆ ನಮ್ಮನ್ನು ತಾಕುವಂತೆ, ಅಂಥದೇ ನಿಷ್ಪ್ರಯೋಜಕ ಗಂಡನನ್ನು ಕಟ್ಟಿಕೊಂಡು ಅವನೊಂದಿಗೆ ಏಗಿ ಏನೆನೆಲ್ಲಾ ಅನುಭವಿಸುತ್ತಾ ನಮಗೊಂದು ಸುಭದ್ರ ನೆಲೆ ಕಲ್ಪಿಸಿದ ನಮ್ಮಮ್ಮನ ನೋವಿನ ಕತೆ ನಮ್ಮನ್ನು ಅಷ್ಟಾಗಿ ತಾಕುವದಿಲ್ಲ. ಒಂದೇ, ಎರಡೇ ಇಂಥ ನೂರಾರು ಸಂಗತಿಗಳು ನಮ್ಮ ಪಕ್ಕದಲ್ಲಿಯೇ ನಡೆದಿರುತ್ತವೆ. ನಾವು ಕಣ್ಣುಮುಚ್ಚಿಕೊಂಡು ಕುಳಿತಿರುತ್ತೇವೆ. ಕಣ್ಣು ಬಿಟ್ಟಾಗ ಪಕ್ಕದವರು ಎದ್ದು ಹೋಗಿರುತ್ತಾರೆ. ನಾವು ಮತ್ತೆ ರೋಲ್ ಮಾಡೆಲ್‍ಗಳಿಗಾಗಿ ಅರಸಿಕೊಂಡು ಹೋಗುವದು ದೂರದವರನ್ನೇ!
ಹಾಗೆ ನೋಡಿದರೆ ನಮ್ಮ ನಾಡಿನವರೆ ಏನೆಲ್ಲ ಅಚ್ಚರಿಗಳನ್ನು ಬಿಟ್ಟು ಹೋಗಿಲ್ಲ? ಎಷ್ಟೆಲ್ಲ ಕೊಡುಗೆಗಳನ್ನು ಕೊಟ್ಟಿಲ್ಲ? ಸರಿಯಾಗಿ ನೋಡುವ ಕಣ್ಣುಗಳಿದ್ದರೆ, ಸ್ಪಂದಿಸುವ ಕುತೂಹಲದ ಮನಸ್ಸಿದ್ದರೆ, ತಿಳಿಯುವ ತಾಳ್ಮೆಯಿದ್ದರೆ ನಮ್ಮ ನಾಡಿನವರ ಅಗಾಧ ಕೊಡುಗೆಗಳ ಬಗ್ಗೆ ಹೆಮ್ಮೆಯೆನಿಸುತ್ತದೆ. ಶೇಕ್ಷಪೀಯರನ "ಕಾಮಿಡಿ ಆಫ್ ಎರರರ್ಸ್" ಒಂದು ಅದ್ಭುತ ಕಾಮಿಡಿಯೆಂದು ಹೊಗುಳುವ ಮುನ್ನ ಶೇಕ್ಷಪೀಯರನಿಗಿಂತ ಎಷ್ಟೋ ವರ್ಷಗಳ ಹಿಂದೆಯೇ ವಿಜಯನಗರ ಅರಸರ ಆಸ್ಥಾನದಲ್ಲಿದ್ದ ಸೂರಣ್ಣ ರಾಮರಾಯನ "ಕಲಾ ಪೂರ್ಣೋದಯಂ" ಎನ್ನುವ ಕನ್ನಡದ ಕೃತಿಯೊಂದು ಶೇಕ್ಷಪೀಯರನ ನಾಟಕಕ್ಕೆ ಮೂಲಾಧಾರವಾಗಿತ್ತೆಂದು ಹಾಗೂ ಅದು ಅವನಿಗೆ ಸ್ಪೂರ್ತಿಯನ್ನು ನೀಡಿತ್ತೆಂದು ತಿಳಿದು ಪ್ರಚಾರಪಡಿಸಬೇಕಿದೆ. ದೂರವಾಣಿಯನ್ನು ಗ್ರಹಾಂಬೆಲ್ ಕಂಡು ಹಿಡಿದನೆಂದು ನಮಗೆಲ್ಲಾ ತಿಳಿದಿದೆಯಷ್ಟೆ? ಆದರೆ ದೂರವಾಣಿಯನ್ನು ಪರೋಕ್ಷವಾಗಿ ಬಳಸುವ ಕಲೆ ಗ್ರಹಾಂಬೆಲ್‍ಗಿಂತ ಮೊದಲೆ ಕರ್ನಾಟಕದ ಬಿಜಾಪೂರ ಸುಲ್ತಾನರ ಆಸ್ಥಾನದಲ್ಲಿದ್ದ ವಾಸ್ತುಶಿಲ್ಪಿಗಳಿಗೆ ತಿಳಿದಿತ್ತೆಂದು ಕೆಲವು ಆಧಾರಗಳು ಹೇಳುತ್ತವೆ. ಇಲ್ಲವಾದರೆ ಗೋಳಗುಮ್ಮಟದಲ್ಲಿ ಒಂದು ಗೋಡೆಯಲ್ಲಿ ಪಿಸುಗುಟ್ಟಿದರೆ ಅದ್ಹೇಗೆ ಇನ್ನೊಂದು ಗೋಡೆಯಲ್ಲಿ ಕೇಳಿಸುತ್ತದೆ? ಗೆಲಿಲಿಯೋಗಿಂತ ಮೊದಲೇ ದೂರದರ್ಶಕ(ಟೆಲಿಸ್ಕೋಪ್)ದ ಬಳಕೆ ಹೊಯ್ಸಳರ ಕಾಲದ ಕನ್ನಡಿಗರಿಗೆ ತಿಳಿದಿತ್ತೆಂದು ಬಲವಾಗಿ ಹೇಳಲು ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ಹಳೆಬೀಡಿನ ಸುಪ್ರಸಿದ್ಧ ಹೊಯ್ಸಳೇಶ್ವರ ದೇವಸ್ಥಾನದ ಹೊರಗೋಡೆಯ ಮೇಲೆ ಕೆತ್ತಿರುವ ವ್ಯಕ್ತಿಯೊಬ್ಬ ಕೊಳವೆಯಾಕಾರದ ವಸ್ತುವೊಂದನ್ನು ಕೈಯಲ್ಲಿ ಹಿಡಿದು ಆಕಾಶದತ್ತ ನೋಡುತ್ತಿರುವ ಚಿತ್ರವೊಂದು ಸಾಕ್ಷಿಯಾಗಿದೆ. ನಾನೊಬ್ಬ ಇಂಗ್ಲೀಷ ಅಧ್ಯಾಪಕನಾಗಿ ಡಿ.ಹೆಚ್.ಲಾರೆನ್ಸನ "ಸ್ನೇಕ್" ಪದ್ಯವನ್ನು ಪಾಠ ಮಾಡುವಾಗಲೆಲ್ಲಾ ಇಂಗ್ಲೀಷ ಸಾಹಿತ್ಯದಲ್ಲಿ ಹಾವನ್ನು ಕಾಮದ ಸಂಕೇತವಾಗಿ ಧಾರಾಳವಾಗಿ ಬಳಸುತ್ತಾರೆಂದು ಹಾಗೂ "ಹಾವು-ಕಾಮದ" ಪರಿಕಲ್ಪನೆಯನ್ನು ಮೊಟ್ಟಮೊದಲಿಗೆ ಪ್ರತಿಪಾದಿಸಿದವನು ಸಿಗ್ಮಂಡ್ ಫ್ರಾಯ್ಡನೆಂದು ಹೇಳುತ್ತಿದ್ದೆ. ಆದರೆ ಮೊನ್ನೆಯಷ್ಟೆ ಸುನಾಥವರ ಬ್ಲಾಗಲ್ಲಿ ಬಸವಣ್ಣನವರ ವಚನಗಳ ಮೇಲೆ ಪ್ರಕಟವಾದ ಲೇಖನವೊಂದರಲ್ಲಿ ಸಿಗ್ಮಂಡ್ ಫ್ರಾಯ್ಡನಿಗಿಂತ ಮುಂಚೆ ಹನ್ನೆರಡನೆ ಶತಮಾನದ ಬಸವಣ್ಣನವರು ತಮ್ಮ "ಹುತ್ತವ ಬಡಿದರೆ ಹಾವು ಸಾಯಬಲ್ಲದೆ?" ವಚನವೊಂದರಲ್ಲಿ ಹಾವನ್ನು ಕಾಮದ ಸಂಕೇತವಾಗಿ ಅದಾಗಲೆ ಬಳಸಿದ್ದರೆಂದು ಗೊತ್ತಾಯಿತು. ಅರೆರೆ ಈ ವಚನವನ್ನು ನಾನು ಎಷ್ಟು ಸಾರಿ ಕೇಳಿರಲಿಲ್ಲ, ಓದಿರಲಿಲ್ಲ? ಆದರೂ ಈ ವಿಚಾರ ನನಗೇಕೆ ಹೊಳೆಯಲಿಲ್ಲ? ನಾನೇಕೆ ಸಿಗ್ಮಂಡ್ ಫ್ರಾಯ್ಡ್ ಬಗ್ಗೆ ಪೂರ್ವಗ್ರಹನಾದೆ? ಎಂದು ನನ್ನ ಅಜ್ಞಾನಕ್ಕೆ ನಾನೇ ಮರಗಿದ್ದಿದೆ. ಇದೀಗ ಪಾಠ ಮಾಡುವಾಗಲೆಲ್ಲಾ "ಹಾವು-ಕಾಮ" ಪರಿಕಲ್ಪನೆಯನ್ನು ಕೊಟ್ಟವರು ಸಿಗ್ಮಂಡ್ ಫ್ರಾಯ್ಡನಲ್ಲ, ಬಸವಣ್ಣನೆಂದು ಹೆಮ್ಮೆಯಿಂದ ಹೇಳುತ್ತೇನೆ.
ಹಿಂದೆಲ್ಲ ನಾವು ಹಿರಿಯರಿಂದ, ಜೊತೆಯವರಿಂದ, ತಿಳಿದವರ ಸಂಪರ್ಕದಿಂದ, ಬದುಕಿನ ಅನುಭವಗಳಿಂದ ಪಾಠ ಕಲಿಯುತ್ತಿದ್ದೆವು. ವಿಚಿತ್ರವೆಂದರೆ ಇಂದು ಹೀಗೆ ತಿಳಿಹೇಳಲೆಂದೇ ಕೌನ್ಸಿಲಿಂಗ್ ಸೆಂಟರ್‍ಗಳು ಹುಟ್ಟಿಕೊಂಡು ಭಾರಿ ದುಡ್ಡನ್ನು ಗಳಿಸುತ್ತಿವೆ. ಇಂದಿನವರು ಮನೆಯವರ ಮಾತುಗಳಿಗೆ ಕಿವಿಗೊಡದೆ ಹೊರಗಿರುವ ಕೌನ್ಸಿಲಿಂಗ್ ಸೆಂಟರ್‍ಗಳಿಗೆ ಹೊಗಿ ದುಡ್ಡನ್ನು ಕೊಟ್ಟು ಮನೆಯವರು ಕೊಡುವ ಅದೇ ಉಪದೇಶವನ್ನು ಕೊಂಡುಕೊಂದು ಬರುತ್ತಿದ್ದಾರೆ. ಸದಾ ಗಡಿಬಿಡಿಯಲ್ಲಿಯೆ ಹೋಗಿ ಕಾಲೇಜು ಸೇರುವ ನನ್ನಾಕೆ "ಟೈಮೇ ಸಾಕಾಗೊಲ್ಲ. ಟೈಮ್ ಹೇಗೆ ಮ್ಯಾನೇಜ್ ಮಾಡೋದಂತ ಟೈಮ್ ಮ್ಯಾನೇಜ್‍ಮೆಂಟ್ ಕ್ಲಾಸಿಗೆ ಹೋಗಿ ಕಲಿತುಕೊಂಡು ಬರುತ್ತೇನೆ" ಎಂದು ಹೇಳುತ್ತಿದ್ದ ಅವಳ ಮಾತು ಕೇಳಿ ರೋಷಿ ಹೋಗಿ "ಅಲ್ಲಿ ಹೋಗಿ ಕಲಿಯೋದೇನಿದೆ? ಮೊದಲು ನಮ್ಮ ಮನೆಯ ಕೆಲಸದ ಹುಡುಗಿಯನ್ನು ನೋಡಿ ಕಲಿ. ಅವಳು ಬೆಳಿಗ್ಗೆ ಎದ್ದು ಆರು ಗಂಟೆಗೆ ಬಂದು ನಮ್ಮ ಮನೆಯ ಕೆಲಸ ಮುಗಿಸಿ, ತಮ್ಮ ಮನೆಯವರಿಗೂ ಕೆಲಸದಲ್ಲಿ ಸಹಾಯ ಮಾಡಿ ಆರು ಕಿಲೋಮೀಟರ ನಡೆದುಕೊಂಡುಹೋಗಿ ಫ್ಯಾಕ್ಟರಿಗೆ ಸರಿಯಾದ ಸಮಯಕ್ಕೆ ಸೇರುತ್ತಾಳಲ್ಲ ಅದ್ಹೇಗೆ ಎಂದು ಅವಳನ್ನು ಕೇಳಿ ತಿಳಿ" ಎಂದು ದಬಾಯಿಸಿದ್ದೆ. ಹೀಗೆ ಎಲ್ಲೆಲ್ಲೋ ಹೋಗಿ ಯಾರ್ಯಾರಿಂದಲೋ ಕಲಿಯುವ ಬದಲು ಹತ್ತಿರದವರಿಂದಲೆ ಕಲಿತರೆ ಆಗುವದಿಲ್ಲವೆ? ಅವರನ್ನೇ ರೋಲ್ ಮಾಡೆಲ್‍ಗಳಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲವೆ? ಸದಾ ಹಿತ್ತಿಲ ಗಿಡ ಮದ್ದಲ್ಲ ಎಂದು ಗೊಣಗುವ ಮೊದಲು ಅದರ ಮಹತ್ವವೇನೆಂದು ತಿಳಿದು ಅದರ ಬಗ್ಗೆ ಪ್ರಚಾರಪಡಿಸಬೇಕು. ನಮ್ಮ ವಸ್ತುಗಳ ಬಗ್ಗೆ ನಮ್ಮ ನೆಲದವರ ಬಗ್ಗೆ ಹೆಮ್ಮಿಯಿಂದ ಹೇಳಿಕೊಳ್ಳಬೇಕು. ನಮ್ಮ ಸಾಧನೆಗಳ ಬಗ್ಗೆ ಅಭಿಮಾನದಿಂದ ಬೀಗಬೇಕು. ಹೆಚ್ಚಾಗಿ ಕೇಳಿರದ ಕಂಡಿರದ ದೂರದ ವ್ಯಕ್ತಿಗಳ ಬಗ್ಗೆ ಪೂರ್ವಾಗ್ರಹಪೀಡಿತರಾಗಿ ಮಾತನಾಡುವದಕ್ಕಿಂತ ನಮ್ಮ ಹತ್ತಿರದವರ ಪ್ರತಿಭೆ, ಸಾಧನೆಗಳನ್ನು ಗುರುತಿಸಿ ಅವರಿಂದ ಕಲಿಯಬೇಕು. ಈ ಒಬಾಮ, ಗಾಂಧಿ, ಅಬೇಡ್ಕರ್‍ವರಿಂದ ಕಲಿಯುವದಕ್ಕಿಂತ ಮುನ್ನ ನಮ್ಮಿಂದ ನಾವೇ ಕಲಿಯುತ್ತಾ ನಮಗೆ ನಾವೇ ಮಾದರಿಯಾಬೇಕು.ಸೂರ್ಯ ಅಷ್ಟು ಉರಿಯುತ್ತಾನೆಂದು ನಕ್ಷತ್ರಗಳಿಗೆ ಬಹಿಷ್ಕಾರ ಹಾಕಲಾದೀತೆ?
-ಉದಯ ಇಟಗಿ
2 ಕಾಮೆಂಟ್(ಗಳು):
ಉದಯ,
ತುಂಬಾ ವಿಚಾರಪೂರ್ಣವಾಗಿ ಬರೆದಿರುವಿರಿ.
ಭಾರತೀಯರಿಗೆ ಭಾರತೀಯ ಇತಿಹಾಸವೇ ಗೊತ್ತಿಲ್ಲ. ನಾನು ಮಾಧ್ಯಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ ನಮ್ಮ ಇತಿಹಾಸದ ಗುರುಗಳು Boston Tea Party ಬಗೆಗೆ ಹೇಳುವದನ್ನು ಕೇಳಿ ರೋಮಾಂಚಿತನಾಗುತ್ತಿದ್ದೆ. ಆದರೆ, ಅದೇ ಶಾಲೆಯಲ್ಲಿ ನಮಗೆ ಕಲಿಸುತ್ತಿದ್ದ ಮತ್ತೊಬ್ಬ ಗುರುಗಳು ಬ್ರಿಟಿಶರ ವಿರುದ್ಧ ಭೂಗತ ಹೋರಾಟ ಮಾಡಿದ್ದರು
ಎನ್ನುವದು ನನಗೆ ಗೊತ್ತಿರಲಿಲ್ಲ.
ತನ್ನ ಭೂತಕಾಲ ಗೊತ್ತಿಲ್ಲದವನಿಗೆ ಭವಿಷ್ಯ ಎಲ್ಲಿಂದ ಬಂದೀತು, ಅಲ್ಲವೆ?
ಸುನಾಥ್ ಸರ್,
ತುಂಬಾ ಚನ್ನಾಗಿ ಹೇಳಿರುವಿರಿ. ಮೊದಲು ನಮ್ಮ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗಿದೆ. ಆನಂತರ ವರ್ತಮಾನ, ಭವಿಷ್ಯವೆಲ್ಲಾ. ನಿಮ್ಮ ಪ್ರತಿಕ್ರಿಯಿಗೆ ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ