Demo image Demo image Demo image Demo image Demo image Demo image Demo image Demo image

ಎರಡು ಪೀಳಿಗೆಗಳು....

  • ಭಾನುವಾರ, ಜನವರಿ 11, 2009
  • ಬಿಸಿಲ ಹನಿ
  • ನನ್ನ ಅಜ್ಜಿಯರು ಸದೃಡವಾಗಿದ್ದರು................
    ಹೊಲದಲ್ಲಿ ಉಳುತ್ತಾ ಗೇಯುತ್ತಾ ಮೈ ಬಗ್ಗಿಸಿ ದುಡಿದರು
    ಉತ್ತುತ್ತಾ ಬಿತ್ತುತ್ತಾ ಹೊಲದ ತುಂಬೆಲ್ಲಾ ಓಡಾಡಿದರು
    ಮಣ್ಣ ಮೀಟಿ ಹೊನ್ನ ಬೆಳೆಯನ್ನು ಬೆಳೆದರು
    ಗಟ್ಟಿಮುಟ್ಟಾಗಿದ್ದರು ಖುಶಿಯಾಗಿದ್ದರು ಹಾಡ ಹಾಡಿದರು.

    ನನ್ನ ಅಜ್ಜಿಯರು ಮತ್ತೆ ಮತ್ತೆ ನೆನಪಾಗುತ್ತಾರೆ
    ತಮ್ಮ ಸಾಬೂನು, ಈರುಳ್ಳಿ, ಹಸಿಮಣ್ಣಿನ ಮೈ ವಾಸನೆಯೊಂದಿಗೆ
    ಆಗಾಗ ಕಾಡುತ್ತಾರೆ ಬೆರಗುಗೊಳಿಸುತ್ತಾರೆ
    ತಮ್ಮ ಕೈಗಳನ್ನು ಚಕಚಕನೆ ತಿರುಗಿಸುತ್ತಾ
    ಎಲ್ಲವನ್ನೂ ಹೊಡೆದುಹಾಕುವ ಪರಿಗೆ

    ನನ್ನ ಅಜ್ಜಿಯರು ಪ್ರೀತಿಯನ್ನು ಉಂಡರು ಉಣಿಸಿದರು
    ನಕ್ಕರು ನಗಿಸಿದರು ಗೆದ್ದರು ಗೆಲ್ಲಿಸಿದರು
    ಹಿತವಾಗಿ ಮಾತನಾಡುತ್ತಾ ತೋಳುಗಳಲ್ಲಿ ತುಂಬಿಕೊಂಡರು
    ನನ್ನ ಅಜ್ಜಿಯರು ಸದೃಡವಾಗಿದ್ದರು ಗಟ್ಟಿಮುಟ್ಟಾಗಿದ್ದರು.............
    ಆದರೆ..... ನಾನೇಕೆ ಅವರಂತಿಲ್ಲ?

    ಇಂಗ್ಲೀಷ ಮೂಲ: ಮಾರ್ಗರೇಟ್ ವಾಕರ್
    ಕನ್ನಡಕ್ಕೆ: ಉದಯ್ ಇಟಗಿ

    4 ಕಾಮೆಂಟ್‌(ಗಳು):

    sunaath ಹೇಳಿದರು...

    ಈ ಕವನ ಸಹ ಕನ್ನಡ ಕವನದಂತೇ ಭಾಸವಾಗುತ್ತದೆಯೇ ಹೊರತು ಆಂಗ್ಲ ಕವನದಂತಲ್ಲ.

    ಬಿಸಿಲ ಹನಿ ಹೇಳಿದರು...

    ಸುನಾಥ್ ಸರ್,
    ನಿಮ್ಮ ಸತತವಾದ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.ಈ ಸಂದರ್ಭದಲ್ಲಿ ನಿಮಗೆ ಒಂದು ಮಾತು ಹೇಳುವದೇನೆಂದರೆ ತುಂಬ ದಿನಗಳ ಹಿಂದೆ ನಾನು ಸಂಯುಕ್ತ ಕರ್ನಾಟಕದ ರೂವಾರಿ ದಿವಂಗತ ಶಾಮರಯರ ಬಗ್ಗೆ ಓದುವಾಗ ಒಂದು ಪ್ರಸಂಗ ನನ್ನ ಮೇಲೆ ಬಹಳ ಪರಿಣಾಮ ಬೀರಿದೆ.ಅದೇನೆಂದರೆ ಅವರೊಂದು ಸಾರಿ ತಮ್ಮ ಪತ್ರಿಕೆಯ ವರದಿಗಾರನನ್ನು ಕರೆದು ಇಂಗ್ಲೀಷನಿಂದ ಕನ್ನಡಕ್ಕೆ ಅನುವಾದಿಸಿದರ ಬಗ್ಗೆ ಹಿಗ್ಗಾಮುಗ್ಗಾ ಬಯ್ದರಂತೆ.ಆಗ ಆ ವರದಿಗಾರ ಮಿತ್ರ "ಅದರಲ್ಲಿ ಏನ್ ತಪ್ಪಿದೆ ಸರ್.ಇಂಗ್ಲೀಷನಿಂದ ಕನ್ನಡಕ್ಕೆ ಸರಿಯಾಗಿ ಅನುವಾದ ಮಾದಿದ್ದೇನಲ್ಲ" ಅಂತ ಅಂದನಂತೆ.ಆಗ ಶಾಮರಾಯರು ನಗುನಗುತ್ತಾ "ಇಂಗ್ಲೀಷನಿಂದ ಕನ್ನಡಕ್ಕೆ ಸರಿಯಾಗಿ ಮಾಡಿದ್ದಿ.ಆದರೆ ಕನ್ನಡದಿಂದ ಕನ್ನದಕ್ಕೆ ಇನ್ನೊಂದು ಸಾರಿ ಅನುವಾದ ಮಾಡು ಎಂದರಂತೆ".ಈ ಘಟನೆ ನನ್ನ ಮನದಲ್ಲಿ ಬೇರೂರಿ ಅನುವಾದ ಮಾಡುವಾಗೆಲ್ಲ ಅವು ನಮ್ಮದೇ ನೆಲದ ಹಾಡುಗಳು ಎನ್ನುವಷ್ಟರ ಮಟ್ಟಿಗೆ ಅನುವಾದಿಸಲು ಪ್ರಯತ್ನ ಪಡುವೆ.ಸೋತುಹೋದರೆ ಕೈ ಬಿಟ್ಟು ಬಿಡುವೆ.

    ಅಂತರ್ವಾಣಿ ಹೇಳಿದರು...

    ಉದಯ ಅವರೆ,
    ಹಿಂದಿನ ಕಾಲದ ಜನರು ಎಷ್ಟು ಗಟ್ಟಿ ಮುಟ್ಟಾಗಿದ್ದರು ಅನ್ನೋದನ್ನು ಈ ಕವನ ತೋರಿಸುತ್ತದೆ.
    ಸುನಾಥಂಕಲ್ ಹೇಳಿದ ಹಾಗೆ ಈ ಮಣ್ಣಿನವರೇ ಬರೆದಂತಿದೆ.

    ನಿಮಗಿಂತ ಚಿಕ್ಕವನಾದರೂ ಒಂದು ವಿಷಯ ಹೇಳ ಬೇಕೆನಿಸಿತು. ಅನುವಾದ ಮಾಡಿ ಅದು ತಪ್ಪು ಎನ್ನುವುದಿಲ್ಲ. ಅದರ ಜೊತೆಗೆ ನೀವು ಬರೆಯಿರಿ.

    ಬಿಸಿಲ ಹನಿ ಹೇಳಿದರು...

    ಜಯಶಂಕರ್,
    ನಿಮ್ಮ ಪ್ರತಿಕ್ರಿಯೆಗೆ ಹಾಗೂ ಸಲಹೆಗೆ ಧನ್ಯವಾದಗಳು.ನನಗೆ ಅನುವಾದದಲ್ಲಿ ವಿಶೇಷ ಆಸಕ್ತಿಯಿರುವದರಿಂದ ಅದಕ್ಕೆ ಮೊದಲ ಆದ್ಯತೆ.ನಂತರದು ನನ್ನ ಬರವಣಿಗೆ.ಅದನ್ನು ಆಗೊಮ್ಮೆ ಈಗೊಮ್ಮೆ ಬರೆಯುವೆ.