Demo image Demo image Demo image Demo image Demo image Demo image Demo image Demo image

ಹೀಗೆ ಸುಮ್ಮನೆ

  • ಗುರುವಾರ, ಮಾರ್ಚ್ 12, 2009
  • ಬಿಸಿಲ ಹನಿ
  • ಮೊದಲೇ ಹೇಳಿಬಿಡುತ್ತೇನೆ. ಬರೆಯಲು ಏನೂ ಇಲ್ಲ ಎಂದು ಹೀಗೆ ಸುಮ್ಮನೆ ಏನೇನೋ ಬರೆಯುತ್ತಿದ್ದೇನೆ ಎಂದು ಕೊಳ್ಳಬೇಡಿ. ನಾನು ಬರೆಯುವದು ಬಹಳಷ್ಟಿದೆ;ಶೇಕ್ಷಪೀಯರ್‍ನ ಮೇಲೆ, ಅವನ ಸುನಿತಗಳ ಮೇಲೆ, ಹ್ಯಾಮ್ಲೆಟ್ ಪಾತ್ರದ ಮೇಲೆ, ಟ್ಯಾಗೋರ್ ಪದ್ಯಗಳ ಮೇಲೆ, ಹೀಗೆ ಪಟ್ಟಿ ಮಾಡುತ್ತಾ ಹೋದರೆ ಉದ್ದನೆಯ ಬಾಲವಾದೀತು! ಜೊತೆಗೆ ಅನುವಾದಿಸಲು ಒಂದಷ್ಟು ಚೆಂದನೆಯ ಅರೇಬಿ ಕವನಗಳು ಹಾಗೂ ರಸ್ಕಿನ್ ಬಾಂಡ್‍ನ ಮತ್ತು ಚೀನು ಅಚೆಬೆಯ ಅದ್ಭುತ ಕಥೆಗಳಿವೆ. ಇದೆಲ್ಲದರ ನಡುವೆ ನಾನು ಜೀವನದಲ್ಲಿ ಏನೆಲ್ಲ ಎಡರು ತೊಡರುಗಳನ್ನು ಎದುರಿಸಿ ಈ ಘಟ್ಟಕ್ಕೆ ಬಂದು ತಲುಪಿದ್ದು ಹೇಗೆ ಎನ್ನುವದಷ್ಟನ್ನೆ ವಿವರಿಸುವ ಸಣ್ಣದೊಂದು ಆತ್ಮ ನಿವೇದನೆ ಅರ್ಧ ದಾರಿ ಕ್ರಮಿಸಿ ಅಲ್ಲೇ ನಿಂತು ಬಿಟ್ಟಿದೆ. ಏಕೋ ಮುಂದಕ್ಕೆ ಹೋಗಲೊಲ್ಲೆ ಎನ್ನುತ್ತಿದೆ. ಆತ್ಮ ನಿವೇದನೆಯ ಹಾದಿಯೇ ಹಾಗೆ! ಅದು ಅಷ್ಟು ಸುಲಭವಾಗಿ ಸವೆಯುವಂಥದಲ್ಲ! ಇದನ್ನು ಬರೆಯಬೇಕೋ ಬೇಡವೋ ಎನ್ನುವ ದ್ವಂದದಲ್ಲಿಯೇ ಅರ್ಧ ಸಮಯವನ್ನು ಕಳೆದುಬಿಟ್ಟಿರುತ್ತೇವೆ. ಒಮ್ಮೊಮ್ಮೆ ನಾವೇ ಬಲವಾಗಿ ತಳ್ಳುತ್ತಾ ಹೋಗಬೇಕು. ಅಂತೆಯೇ ನಾನು ಸಹ ತಳ್ಳುತ್ತಿದ್ದೇನೆ. ಪರಿಣಾಮವಾಗಿ ಶೀಘ್ರದಲ್ಲಿ ನನ್ನ ಈ ಆತ್ಮನಿವೇದನೆಯನ್ನು ಹೊತ್ತು ನನ್ನ ಬ್ಲಾಗ್‍ಲ್ಲಿ ಹಾಜರಾಗುವೆ. ಇನ್ನು ಬೇರೆ ಲೇಖನಗಳಿಗೆ ಬೇಕಾದ ಪೂರ್ವಸಿದ್ಧತೆ, ಮಾಹಿತಿ ಸಂಗ್ರಹಣೆ, ಆಕರ ಸಾಮಗ್ರಿಗಳನ್ನೆಲ್ಲ ಒಂದೆಡೆ ಕಲೆ ಹಾಕಿ ಇಟ್ಟಿದ್ದೇನೆ. ನನ್ನ ಅಧ್ಯಾಪನ ಕೆಲಸದ ಜೊತೆಗೆ ಬರೆಯುತ್ತಾ ಹೋಗಬೇಕು. ಬರೆದು ಒಮ್ಮೆ ಹಗುರಾಗಬೇಕು. ಬರಹಗಾರನ ತುಡಿತಗಳೇ ಹಾಗೆ. ಬರೆಯುವವರಿಗೆ ಕಾಯುವದಿಲ್ಲ ಎನ್ನುತ್ತವೆ!

    ಮೊನ್ನೆ ಬ್ಲಾಗ್ ಮಿತ್ರ ಶಿವು "ಯಾಕೆ ಏನೂ ಹೊಸದನ್ನು ಬರೆದಿಲ್ಲ? ಬಹುಶಃ ಕೆಲಸದಲ್ಲಿ ಬ್ಯುಸಿ ಆಗಿರಬೇಕು. ಬಿಡುವು ಮಾಡಿಕೊಂಡು ಬರೆಯಿರಿ" ಎನ್ನುವ ಸಣ್ಣ ಒತ್ತಾಸೆಯೊಂದಿಗೆ ಆದೇಶವನ್ನಿತ್ತಿದ್ದಾರೆ. ಅವರ ಆದೇಶಕ್ಕೆ ತಲೆಬಾಗಿ ಲೇಖನಿಯನ್ನು ಮತ್ತೆ ಕೈಗೆತ್ತಿಕೊಂಡಿದ್ದೇನೆ. ಅಂತೆಯೇ ಅವರ ಕಳಕಳಿಗೆ ಆಭಾರಿಯಾಗಿದ್ದೇನೆ. ಫೆಬ್ರುವರಿ ತಿಂಗಳ ಕೊನೆ ವಾರದಲ್ಲಿ ಮೊದಲ ಸೆಮೆಸ್ಟರ್ ಪರೀಕ್ಷೆ, ಮೌಲ್ಯಮಾಪನ ಅಂತೆಲ್ಲ ಮುಗಿದು ಹದಿನೈದು ದಿವಸಗಳ ರಜೆ ಸಿಕ್ಕಿತು. ಈ ರಜೆಯಲ್ಲಿ ಸಿದ್ಧತೆ ಮಾಡಿಟ್ಟುಕೊಂಡಿದ್ದ ಎಲ್ಲವನ್ನೂ ಬರೆದು ಮುಗಿಸಿಬಿಡಬೇಕು ಎಂದುಕೊಂಡಿದ್ದೆ. ಆದರೆ ನಮಗೆಲ್ಲಾ ದಿಢಿರಂತ ರೆಸಿಡೆನ್ಸ್ ವೀಸಾ ಸಿಕ್ಕು ಹೆಂದತಿ ಮಕ್ಕಳನ್ನು ಇಲ್ಲಿಗೆ ಕರೆತರಲು ಡಿಪೆಂಡೆಂಟ್ ವೀಸಾ ಅಪ್ಲೈ ಮಾಡುವದಕ್ಕೋಸ್ಕರ ನಾವಿದ್ದ ಜಾಗದಿಂದ ಆರನೂರು ಕಿ.ಮೀ. ದೂರದಲ್ಲಿರುವ ನಮ್ಮ ಮೇನ್ ಕ್ಯಾಂಪಸ್‍ಗೆ ಹೋಗಬೇಕಾಗಿ ಬಂತು. ಕಳೆದ ಸಾರಿ ಕೆಲವು ಆಂತರಿಕ ತೊಂದರೆಗಳಿಂದಾಗಿ ಫ್ಯಾಮಿಲಿ ವೀಸಾ ಸಿಗದೆ ನಮ್ಮ ಕುಟುಂಬವನ್ನು ಕರೆತರಲಾಗಿರಲಿಲ್ಲ. ಈ ಬಗ್ಗೆ ಕೇಳಿದ್ದಾಗ ಈ ವರ್ಷ ನಮ್ಮ ಕಾಂಟ್ರಾಕ್ಟ ರಿನ್ಯೂ ಆಗಿ ಭಾರತದಲ್ಲಿ ಎರಡು ತಿಂಗಳು ರಜೆ ಕಳೆದು ಹಿಂತಿರುಗಿದ ಆರು ತಿಂಗಳೊಳಗಾಗಿ ಡಿಪೆಂಡೆಂಟ್ ವೀಸಾ ಕೊಡುತ್ತೇವೆ ಎಂದು ಹೇಳಿದ್ದರು. ಅದರಂತೆ ನಡೆದುಕೊಂಡಿದ್ದರು ಕೂದ. ಹೀಗಾಗಿ ಆ ಕೆಲಸದ ನಿಮಿತ್ತ ಸೆಭಾಗೆ ಹೊರಟೆವು. ಅಲ್ಲಿ ಎಲ್ಲ ಕೆಲಸ ಮುಗಿಸಿ ಭಾರತಕ್ಕೆ ದುಡ್ದನ್ನು ಕಳಿಸಲು ಟ್ರಿಪೋಲಿಗೆ ಹೋಗಬೇಕಾಗಿತ್ತು. ನಾನಿರುವ ಕಡೆಯಲ್ಲಾಗಲಿ ಹಾಗೂ ಸೆಭಾದಲ್ಲಾಗಲಿ Western Union ಇಲ್ಲದ ಕಾರಣ ಮತ್ತು ನಮ್ಮ ಬ್ಯಾಂಕ್‍ಗಳಿಂದ Swift Code ಮುಖಾಂತರ ಕಳಿಸುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರಿಂದ ಟ್ರಿಪೋಲಿಗೆ ಹೋಗುವ ಅನಿವಾರ್ಯತೆಯಿತ್ತು. ಸೆಭಾದಲ್ಲಿ ಕೆಲಸ ಮಾಡುತ್ತಿರುವ ನನ್ನ ಸಹೋದ್ಯೋಗಿ ಮಿತ್ರರಾದ ಡಾ.ಹನಾ ಪದ್ಮಾ ಮತ್ತು ನಾನು ವಿಮಾನದಲ್ಲಿ ಹೋಗುವದೆಂದು ನಿರ್ಧರಿಸಿ ಟಿಕೇಟ್ ಪಡೆದಿದ್ದಾಯಿತು. ರಾತ್ರಿ ಹತ್ತು ಗಂಟೆಗೆ ಹೊರಡಬೇಕಿದ್ದ ವಿಮಾನ ಹನ್ನೆರೆಡು ಗಂಟೆಗೆ ಹೊರಟಿತು. ವಿಮಾನ ಪ್ರಯಾಣದಲ್ಲಿ ಈ ತರದ ಪ್ರಯಾಣ ವಿಳಂಬತೆ ಮತ್ತು ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವದಕ್ಕೆ ಮೊದಮೊದಲು ಬೇಸರವಾಗುತ್ತಿತ್ತಾದರೂ ಈಗ ಅದೊಂದು ತರ ಅಭ್ಯಾಸವಾಗಿಬಿಟ್ಟಿದೆ. ಟ್ರಿಪೋಲಿ ಸಮೀಪಿಸುತ್ತಿದ್ದಂತೆ ಹವಾಮಾನದಲ್ಲಿ ವ್ಯತ್ಯಾಸವಾಗಿ ಗಾಳಿ ಜೋರಾಗಿ ಬೀಸತೊಡಗಿದ್ದರಿಂದ ನಾವಿರುವ ವಿಮಾನ ಡೋಲಾಯಮಾನವಾಗಿ ಅತ್ತ ಇತ್ತ ಓಲಾಡತೊಡಗಿತು. ಒಂದು ಹಂತದಲ್ಲಿ ವಿಮಾನ ಬಿದ್ದೇ ಹೋಗುತ್ತಿದೆ ಎಂದು ಭಾಸವಾಗಿ ಇದು ನಮ್ಮ ಅಂತಿಮ ಯಾತ್ರೆ ಎಂದುಕೊಂಡೆವು. ಆದರೆ ಸ್ವಲ್ಪ ಹೊತ್ತಿನ ನಂತರ ಯಥಾಸ್ಥಿತಿಗೆ ಮರಳಿ ಕೊನೆಗೆ ವಿಪರೀತವಾಗಿ ಬೀಸುವ ಗಾಳಿಯ ನಡುವೆಯೇ ಟ್ರಿಪೋಲಿ ಏರ್‍ಪೋರ್ಟನಲ್ಲಿ ಸುರಕ್ಷಿತವಾಗಿ ಲ್ಯಾಂಡಿನ್ ಆದಾಗ ನಾವೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟೆವು. ಅಲ್ಲಿಂದ ಲಗೇಜ್ ತೆಗೆದುಕೊಂಡು ಟ್ಯಾಕ್ಷಿ ಹಿಡಿದು ಸ್ನೇಹಿತನ ಮನೆ ಸೇರುವಷ್ಟರಲ್ಲಿ ರಾತ್ರಿ ಮೂರು ಗಂಟೆಯಾಗಿತ್ತು. ಮೂರು ದಿವಸದಿಂದ ಹೋಟೆಲ್‍ನಲ್ಲಿ ಬರಿ ಬ್ರೆಡ್ ಜಾಮ್ ತಿಂದು ನಾಲಗೆ ಕೆಟ್ಟು ಹೋಗಿದ್ದರಿಂದ ಸ್ನೇಹಿತ ಮಾಡಿದ ಬಿಸಿ ಬಿಸಿ ಅನ್ನ ಸಾಂಬಾರು ತಿಂದು ನೆಮ್ಮದಿಯ ನಿದ್ರೆ ಹೋದೆ. ಮರುದಿವಸ ದುಡ್ಡು ಕಳಿಸಿ ಒಂದಷ್ಟು ಸಾಮಾನುಗಳನ್ನು ಹಾಗೂ ಮಗಳು ಭೂಮಿಗೆ ಚೆಂದನೆಯ ಡ್ರೆಸ್‍ಗಳನ್ನು ಖರಿದಿಸಿ ಮಾರನೆ ದಿನ ಸಂಜೆ ಘಾಟ್‍ಗೆ ನೇರವಾಗಿ ಹೊರಡುವ ಫ್ಲೈಟ್‍ಗೆ ಟಿಕೆಟ್ ಬುಕ್ ಮಾಡಿದೆ.

    ಮರುದಿವಸ ನಾನು ಮತ್ತು ಗೆಳೆಯ ಸುರೇಂದ್ರ ಸಬ್ರತಾದಲ್ಲಿ ಸುತ್ತಾಡಿ ಮತ್ತೊಂದಿಷ್ಟು ಸಾಮಾನುಗಳನ್ನು ಖರಿದಿಸಿ ಹನ್ನೆರಡು ಗಂಟೆಗೆ ಟ್ಯಾಕ್ಷಿ ಹಿಡಿದು ಏರ್ ಪೋರ್‍ಟ್ಗೆ ಬಂದೆ. ತಲುಪಿದ ಕೆಲವೇ ನಿಮಿಷಗಳ ನಂತರ ಚೆಕಿನ್ ಆರಂಭವಾಯಿತು. ನನ್ನ್ ಲಗೆಜ್ ಚೆಕಿನ್ ಮಾಡಿ ವೇಟಿಂಗ್ ಲಾಂಜ್‍ನಲ್ಲಿ ಕಾಯುತ್ತಾ ಕುಳಿತೆ. ಅಷ್ಟರಲ್ಲಿ ಘಾಟ್‍ನಲ್ಲಿ ಹವಾಮಾನ ವ್ಯತ್ಯಾಸವಾದ ಕಾರಣ ಅಲ್ಲಿಗೆ ಹೊರಡುವ ಫ್ಲೈಟ್ ಕ್ಯಾನ್ಸಲ್ ಆಗಿದೆ ಎನ್ನುವ ಅನೌನ್ಸಮೆಂಟ್ ಹೊರಬಿತ್ತು. ತುಂಬಾ ನಿರಾಶನಾಗಿ ಈಗಾಗಲೆ ಚಿಕಿನ್ ಮಾಡಿದ ಲಗೇಜನ್ನು ಮರಳಿ ಪಡೆದು ಲಿಬಿಯಾನ್ ಏರಲೈನ್ಸ್ ಆಫಿಸಿನತ್ತ ಧಾವಿಸಿದೆ. ಅಲ್ಲಿ ಅವರು ಮುಂದಿನ ವಾರದವರೆಗೂ ಘಾಟ್‍ಗೆ ಯಾವುದೇ ಫ್ಲೈಟ್ ಬಿಡುವದಿಲ್ಲವೆಂದು ಹಾಗೂ ಸೆಭಾಗೆ ಬೇರೆ ಫ್ಲೈಟ್‍ನಲ್ಲಿ ಹೋಗಬಹುದೆಂದು ಹೇಳಿದರು. ಸರಿ ಸೆಭಾದಿಂದ ಟ್ಯಾಕ್ಷಿ ಹಿಡಿದು ಘಾಟ್‍ಗೆ ಹೋದರಾಯಿತು ಎಂದುಕೊಂಡು ಅಂದೇ ರಾತ್ರಿ ಸೆಭಾಗೆ ಹೊರಡುವ ಫ್ಲೈಟ್‍ಗೆ ಟಿಕೇಟ್‍ನ್ನು ಬದಲಾಯಿಸಲು ಹೇಳಿದೆ. ಟ್ರಿಪೋಲಿಯಿಂದ ಘಾಟ್‍ಗೆ ವಾರಕ್ಕೊಂದು ಸಾರಿ ಇರುವದು ಒಂದೇ ಒಂದು ಫ್ಲೈಟ್! ಅದಕ್ಕೂ ಖೋತಾ ಎಂದು ಮನಸಾರೆ ಬದಲಾದ ಹವಮಾನವನ್ನು ಶಪಿಸಿದೆ. ಆ ಪ್ರಕಾರ ನನ್ನ ಟಿಕೇಟನ್ನು ಬದಲಾಯಿಸಿ ಕೊಡಲಾಯಿತು. ನೋಡಿದರೆ ಅದು ಓಪನ್ ಟಿಕೆಟ್ ಆಗಿತ್ತು. ನನಗೆ Confirm ಟಿಕೇಟ್ ಇದ್ದರೆ ಮಾತ್ರ ಕೊಡಿ ಇಲ್ಲವಾದರೆ ಬೇಡವೆಂದೆ. ಘಾಟ್ ಫ್ಲೈಟ್ ರದ್ದಾಗಿದ್ದರಿಂದ ಅಲ್ಲಿಗೆ ಹೋಗುವ ಬಹಳಷ್ಟು ಜನಕ್ಕೆ ಅಂದೇ ರಾತ್ರಿ ಸೆಭಾಗೆ ಹೊರಡುವ ಫ್ಲೈಟ್ಗೆ ಇದೆ ತರ ಟಿಕೇಟ್ ಕೊಡಲಾಗಿದೆ ನೀವು ಹೋಗಬಹುದು ಎಂಬ ಉತ್ತರ ಬಂತು.

    ಫ್ಲೈಟ್ ಇದ್ದುದು ರಾತ್ರಿ ಎಂಟು ಗಂಟೆಗೆ. ಆದರೆ ಚಿಕಿನ್ ಅರಂಭವಾಗಿದ್ದು ರಾತ್ರಿ ಹತ್ತು ಗಂಟೆಗೆ. ನಾಲ್ಕು ಗಂಟೆಗಳ ಕಾಲ ಮತ್ತೆ ವಿಳಂಬ. ಬೇಸತ್ತುಹೋಗಿದ್ದೆ. ಆದರೆ ನಾವಿನ್ನೂ ಇಪ್ಪತ್ತು ಜನ ಚಿಕಿನ್ ಕ್ಯೂನಲ್ಲಿ ಇರುವಾಗಲೇ ಚಿಕಿನ್ ನಿಲ್ಲಿಸಲಾಯಿತು. ಅರೆ, ಇದೇನಿದು? ಹೀಗೇಕಾಯಿತು? ಎಂದು ವಿಚಾರಿಸಿದರೆ ಇಪ್ಪತ್ತು ಟಿಕೆಟ್‍್ಗಳನ್ನು ಹೆಚ್ಚಾಗಿ ಇಶ್ಯೂ ಮಾಡಿದ್ದು ಗೊತ್ತಾಯಿತು. ಎಲ್ಲಾದರು ವಿಮಾನ ಪ್ರಯಾಣದಲ್ಲಿ ಟಿಕೆಟ್ಸ್‍ನ್ನು ಹೀಗೆ ಹೆಚ್ಚಿಗೆ ಇಶ್ಯೂ ಮಾಡುವದುಂಟಾ? ಆಶ್ಚರ್ಯವೆನಿಸಿದರೂ ನಂಬಲೇಬೇಕಿತ್ತು. ನಂಬಲಸಾಧ್ಯವಾದರು ನಡೆದಿದ್ದನ್ನು ಅರಗಿಸಿಕೊಳ್ಳಲೇಬೇಕಿತ್ತು. ಏರಲೈನ್ಸ್ ಆಫೀಸ್ ಮುಂದೆ ಪ್ರಯಾಣಿಕರೆಲ್ಲ ಜಮಾಯಿಸಿದರು. ವಾದ, ವಿವಾದ, ಜಗಳ ಶುರುವಾಗಿ ನಾನು ಯಾವುದೋ ಬಸ್ ಸ್ತ್ಯಾಂಡಿನಲ್ಲಿ ಇರುವಂತೆ ಭಾಸವಾಯಿತು. ಮೇಲಾಧಿಕಾರಿಗಳು ಅಡ್ಜೆಸ್ಟ್ ಮಾಡಲು ಹರಸಾಹಸ ಮಾಡುತ್ತಿದ್ದರು. ಕೊನೆಗೆ ಹತ್ತು ಜನಕ್ಕೆ ಮಾತ್ರ ಅಡ್ಜೆಸ್ಟ್ ಮಾಡಿ ಉಳಿದವರಿಗೆ ಇಲ್ಲ ಎಂದು ಹೇಳಿದರು. ಆ ನತದೃಷ್ಟರಲ್ಲಿ ನಾನೂ ಒಬ್ಬನಾಗಿದ್ದೆ. ಅದ್ಹೇಗೆ ಅಡ್ಜೆಸ್ಟ್ ಮಾಡಿದರೋ ಅವರಿಗೆ ಮಾತ್ರ ಗೊತ್ತು. ಸರಿ ಬಂದ ದಾರಿಗೆ ಸುಂಖವಿಲ್ಲವೆಂದುಕೊಂಡು ಲಿಬಿಯನ್ನರ ಮೂರ್ಖತನವನ್ನು ಹಾಗೂ ಅವರ ಅದಕ್ಷತೆಯನ್ನು ಶಪಿಸುತ್ತಾ ಟ್ಯಾಕ್ಷಿ ಹಿಡಿದು ಹೊಟೆಲ್‍ಗೆ ಹೋದೆ. ಅಲ್ಲಿ ರಾತ್ರಿ ಇದ್ದು ಮರುದಿವಸ ಟ್ಯಾಕ್ಷಿ ಹಿಡಿದು ಘಾಟ್‍ಗೆ ಹೊರಟು ಬಂದೆ. ಲಿಬಿಯಾದಲ್ಲಿ ಎಲ್ಲ ಟ್ಯಾಕ್ಷಿಗಳು ಗಂಟೆಗೆ ೧೦೦ ಕಿ.ಮೀ. ವೇಗದಲ್ಲಿ ಓಡುತ್ತವೆಯಾದ್ದರಿಂದ ೧೪೦೦ ಕಿ.ಮೀ. ದೂರವನ್ನು ಕೇವಲ ೧೪ ಗಂಟೆಗಳಲ್ಲಿ ಕ್ರಮಿಸಿದ್ದೆ. ಬಂದ ನಂತರ ಎರಡು ದಿವಸ ಸುಧಾರಿಸಿಕೊಂಡು ಈಗಷ್ಟೆ ಬರೆಯಲು ಹಿಂತಿರುಗಿದ್ದೇನೆ.

    ನಾಳೆ ಮಗಳು ಭೂಮಿಯ ಎರಡನೇ ವರ್ಷದ ಹುಟ್ಟುಹಬ್ಬ. ದೂರದ ಲಿಬಿಯಾದಿಂದ ಹೋಗಲಾಗುವದಿಲ್ಲವಾದ್ದರಿಂದ ರೇಖಾಳಿಗೆ ನೆಹ್ರೂ ಬರೆದಿರುವ "Letters to Indira Priyadarshini" ಪುಸ್ತಕವನ್ನು ಉಡುಗೊರೆಯಾಗಿ ಕೊಡಲು ಹೇಳಿದ್ದೇನೆ. ಜೊತೆಗೆ ಕೆಲವು ಕನ್ನಡ ಕಾಮಿಕ್ಷ್ ಹಾಗೂ ಅನುಪಮಾ ನಿರಂಜನರ "ದಿನಕ್ಕೊಂದು ಕತೆ" ಕೊಡಲು ಹೇಳಿದ್ದೇನೆ. ಅವಳು ಈಗ ಏನನ್ನೂ ಓದಲಾರಳು ಎಂದು ಗೊತ್ತು. ಆದರೆ ಅವಳ ಪ್ರತಿ ಹುಟ್ಟುಹಬ್ಬಕ್ಕೆ ಹೀಗೆ ಪುಸ್ತಕಗಳನ್ನು ಕೊಡುತ್ತ ಹೋದರೆ ಬೆಳೆದು ದೊಡ್ಡವಳಾದ ಮೇಲೆ ಓದಲು ಅವಳ ಬಳಿ ಒಂದಷ್ಟು ಪುಸ್ತಕಗಳಿರುತ್ತವೆ ಎಂಬುದು ನನ್ನಾಸೆ. ಸಾಲದೆಂಬಂತೆ ಅವಳ ಹೆಸರಲ್ಲಿ ನಾನೇ ಓಪನ್ ಮಾಡಿರುವ ಅವಳ ಈಮೇಲ್‍ಗೆ ಮುದ್ದಾದ ಈ-ಗ್ರೀಟಿಂಗ್ ಕಾರ್ಡೊಂದನ್ನು ಕಳಿಸಿದ್ದೇನೆ. ನಾನೇ ಖುದ್ದಾಗಿ ಇಂಟರ್ನೆಟ್‍ನಲ್ಲಿ ತಡಕಾಡಿ ಅವಳಿಗೋಸ್ಕರ ಒಂದಷ್ಟು ಕನ್ನಡ ರೈಮ್ಸ್ ಹಾಗೂ ಕಾರ್ಟೂನ್ ಚಿತ್ರಗಳನ್ನು ಸಂಗರಹಿಸಿಟ್ಟಿದ್ದೇನೆ. ಅಕ್ಷರಗಳನ್ನು ಬೋಧಿಸುವ ಅಪ್ಪ ಅಕ್ಷರಗಳ ಅರಮನೆಯನ್ನು ಬಿಟ್ಟರೆ ಬೇರೆ ಏನು ತಾನೆ ಕೊಡಲು ಸಾಧ್ಯ? ನಾಳೆ ಬೆಳೆದು ದೊಡ್ದವಳಾದ ಮೇಲೆ ಉಡುಗೊರೆಗಳನ್ನು ನೋಡಿ ಹೆಮ್ಮೆಪಡುತ್ತಾಳೋ ಇಲ್ಲ ತಿರಸ್ಕರಿಸುತ್ತಾಳೋ ಗೊತ್ತಿಲ್ಲ. ಎಲ್ಲ ಅವಳ ಅಬಿರುಚಿ, ಇಚ್ಛೆಯ ಮೇಲೆ ಅವಲಂಬನೆಯಾಗಿದೆ. ಅಪ್ಪ ಅಮ್ಮಂದಿರಾಗಿ ಮಕ್ಕಳಿಗೆ ಕನಸುಗಳನ್ನು ಕಟ್ಟಿಕೊಡುವ, ಕೊಂಡುಕೊಡುವ ಕೆಲಸವನ್ನಷ್ಟೆ ಮಾದಬಹುದು. ಆದರೆ ಅವುಗಳನ್ನು ಅವರ ಮೇಲೆ ಹೇರಲಾದೀತೆ? ಹೇರಲೂಬಾರದು. ನನಗೆ ಇಲ್ಲಿ ಖಲೀಲ್ ಗಿಬ್ರಾನ್‍ನ ಸಾಲುಗಳು ನೆನಪಾಗುತ್ತವೆ-

    Your children are not your children.
    They are the sons and daughters of Life's longing for itself.
    They come through you but not from you,
    And though they are with you yet they belong not to you.
    You may give them your love but not your thoughts,
    For they have their own thoughts.
    You may house their bodies but not their souls,
    For their souls dwell in the house of tomorrow,which you cannot visit, not even in your dreams.
    You may strive to be like them,but seek not to make them like you.
    For life goes not backward nor tarries with yesterday.

    -ಉದಯ ಇಟಗಿ
    ಚಿತ್ರ: ಮಗಳು ಭೂಮಿ

    14 ಕಾಮೆಂಟ್‌(ಗಳು):

    Unknown ಹೇಳಿದರು...

    ಉದಯ ಅವರೇ ನೀವೊಂದು ರೀತಿಯಲ್ಲಿ ಸುಳ್ಳುಗಾರರು! 'ಆತ್ಮ ನಿವೇದನೆಯ ಹಾದಿಯೇ ಹಾಗೆ! ಅದು ಅಷ್ಟು ಸುಲಭವಾಗಿ ಸವೆಯುವಂಥದಲ್ಲ! ಇದನ್ನು ಬರೆಯಬೇಕೋ ಬೇಡವೋ ಎನ್ನುವ ದ್ವಂದದಲ್ಲಿಯೇ ಅರ್ಧ ಸಮಯವನ್ನು ಕಳೆದುಬಿಟ್ಟಿರುತ್ತೇವೆ. ಒಮ್ಮೊಮ್ಮೆ ನಾವೇ ಬಲವಾಗಿ ತಳ್ಳುತ್ತಾ ಹೋಗಬೇಕು. ಅಂತೆಯೇ ನಾನು ಸಹ ತಳ್ಳುತ್ತಿದ್ದೇನೆ.' ಎಂದು ಬರೆದಿದ್ದೀರಾ. ನಿಮ್ಮ ಈ ಲೇಖನ ಕೂಡಾ ಆತ್ಮನಿವೇದನೆಯ ಬರಹವೇ ಆಗಿದೆ. ಇದನ್ನೇ ನೀವು ಮತ್ತೊಮ್ಮೆ ಓದಿ ನೋಡಿ. ಬಲವಾಗಿ ತಳ್ಳುತ್ತಾ ಹೋಗಿರುವ ಲೇಖನ ಇದಲ್ಲ. ಎಷ್ಟೊಂದು ಸಹಜವಾಗಿ ಬರೆದಿದ್ದೀರಾ. ಸರಸವಾಗಿ ಓದಿಸಿಕೊಂಡು ಹೋಗಲಿರುವ ನಿಮ್ಮ ಆತ್ಮನಿವೇದನೆಯ ಪುಟಗಳಿಗಾಗಿ ಕಾಯುತ್ತಿರುತ್ತೇನೆ.

    shivu.k ಹೇಳಿದರು...

    ಉದಯ ಸರ್,

    ನಾನು ನಿಮ್ಮ ಬ್ಲಾಗಿಗೆ ಇಣುಕಿದಾಗ ಹೊಸದೇನು ಇಲ್ಲದ್ದರಿಂದ ಹಾಗೆ ಹೇಳೀದ್ದೆ....ನನ್ನ ಮಾತಿಗೆ ಇಷ್ಟು ಒಳ್ಳೆಯ ಅನುಭವ ಬರೆದಿರುವುದು ನನಗೆ ಖುಷಿಯಾಯಿತು...ಇದು ನಿಮ್ಮ ಮಾತಿನಂತೆ ಬಲವಂತವಾಗಿ ಬರೆದಿದ್ದಲ್ಲ...ಸಹಜವಾಗಿ ಓದಿಸಿಕೊಂಡು ಹೋಗುವುದರಿಂದ ನೀವು ಸಹಜವಾಗಿಯೇ ಬರೆದಿದ್ದೀರಿ.....

    ಮತ್ತೆ ನಮ್ಮ ದೇಶದ ವಿಮಾನಗಳಂತೆ ಜನಗಳಂತೆ ಅಲ್ಲಿಯೂ ವಿಳಂಬ, ಬೇಜವಬ್ಡಾರಿ, ಅಶಿಸ್ತು, ಕೇಳಿ ಸ್ವಲ್ಪ ಸಮಾಧಾನವಾಯಿತು....ಎಷ್ಟೇ ಅದರೂ ನಮ್ಮ ಪಕ್ಕದ ಆಪ್ರಿಕಾ ಖಂಡದ ದೇಶವಲ್ಲವೇ....

    ಮತ್ತು ಮಗಳ ಬಗ್ಗೆ ನಿಮಗಿರುವ ದೃಷ್ಟಿಕೋನ ಮುಂದೆ ನಿಮ್ಮ ಮಗಳು ದೊಡ್ಡವಳಾದಾಗ ಅವಳ ಕಣ್ಣಿಗೆ ಹೀರೋ ಆಗುವ ಸಾಧ್ಯತೆ ಖಂಡಿತ. ಮತ್ತು ರೋಲ್ ಮಾಡಲ್ ಕೂಡ.

    ನಿಮ್ಮ ಮಗಳ ಹುಟ್ಟುಹಬ್ಬಕ್ಕೆ ಶುಭಾಶಯಗಳು....

    PARAANJAPE K.N. ಹೇಳಿದರು...

    ಉದಯ ಅವರಿಗೆ
    ನಮಸ್ಕಾರ. ಈಗಷ್ಟೇ ಶಿವೂ ಅವರ ಬ್ಲಾಗಿನ ಕಿಟಿಕಿಯಿ೦ದ ನಿಮ್ಮ ಬ್ಲಾಗಿಗೆ ಹಾರಿಬ೦ದು ನಿಮ್ಮ ಬರಹ ಓದಿದೆ.
    "ಅಕ್ಷರಗಳನ್ನು ಬೋಧಿಸುವ ಅಪ್ಪ ಅಕ್ಷರಗಳ ಅರಮನೆಯನ್ನು ಬಿಟ್ಟರೆ ಬೇರೆ ಏನು ತಾನೆ ಕೊಡಲು ಸಾಧ್ಯ?"
    ಎ೦ಬ ಸಾಲು ಇಷ್ಟವಾಯಿತು. ಚೆನ್ನಾಗಿದೆ. ಇನ್ನಷ್ಟು ಅನುಭವಗಳನ್ನು ಬರೆಯಿರಿ. ಅ೦ದ ಹಾಗೆ ನನ್ನದು
    ಒ೦ದು ಬ್ಲಾಗಿದೆ. ಪುರುಸೊತ್ತು ಮಾಡಿಕೊ೦ಡು ಬನ್ನಿ.
    http://www.nirpars.blogspot.com

    ತೇಜಸ್ವಿನಿ ಹೆಗಡೆ ಹೇಳಿದರು...

    ಉದಯ್ ಅವರೆ,

    ನನ್ನ ಅಜ್ಜ ನನಗೆ ಸದಾ ಹೇಳುತ್ತಿದ್ದರು. ಯಾರೂ ಅಪಹರಿಸಲಾರದ ಎಂದೂ ಕಳೆದುಕೊಳ್ಳುವ ಭಯವಿರದ ಸಂಪತ್ತು ಎಂದರೆ ವಿದ್ಯೆ ಎಂದು. ಅದನ್ನೇ ನಿಮ್ಮ ಮಗಳ ಪ್ರತೀ ಹುಟ್ಟುಹಬ್ಬಕ್ಕೂ ಕೊಡುತ್ತಿದ್ದೀರಿ ಎಂದರೆ ನಿಜಕ್ಕೂ ಶ್ಲಾಘನೀಯ. ಅವಳ ಭವಿಷ್ಯ ಖಂಡಿತ ಉಜ್ವಲವಾಗುವುದು. ಬೆಳೆವ ಸಿರಿ ಮೊಳಕೆಯಲ್ಲಿ.. ಎಂಬಂತೆ ಈಗಲೇ ಓದುವ ಹವ್ಯಾಸವನ್ನು ಹೆಚ್ಚಿಸಿದರೆ ಮುಂದೆ ಅವಳೂ ಅದರಲ್ಲಿ ಆಸಕ್ತಿಯನ್ನು ಪಡೆಯುವಳು.

    ಪ್ರೀತಿಪಾತ್ರರಿಂದ ದೂರವಿರಬೇಕಾದಾಗ ಉಂಟಾಗುವ ವಿಪ್ಲವಗಳನ್ನು ಚೆನ್ನಾಗಿ ವಿವರಿಸಿದ್ದೀರಿ.

    ಭೂಮಿ ಪುಟ್ಟಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಬಹು ಬೇಗ ನಿಮ್ಮ ಪರಿವಾರ ನಿಮ್ಮನ್ನು ಸೇರುವಂತಾಗಲಿ.

    sunaath ಹೇಳಿದರು...

    ಉದಯ,
    ನಿಮ್ಮ ಲೇಖನ ಹಾಗೂ ಭೂಮಿಯ ಫೋಟೋ ಇಷ್ಟವಾಯಿತು.
    ಭೂಮಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವಳಿಗೆ ನೀವು ಕೊಡುತ್ತಿರುವ ‘ಅಕ್ಷರದ ಅರಮನೆ’ಯ ಕೊಡುಗೆಗಿಂತ ಹೆಚ್ಚಿನ ಕೊಡುಗೆ ಯಾವುದಿದೆ?
    ಲಿಬ್ಯಾದ ಬಗೆಗೆ ನೀವು ಬರೆದಿರುವದನ್ನು ಓದಿ ಕುತೂಹಲ ಹೆಚ್ಚಾಗುತ್ತಿದೆ. ಆ ದೇಶದ ಜನಜೀವನದ ವಿವರಗಳನ್ನು ಕೊಡುವಿರಾ?
    ಅದಲ್ಲದೆ, ಅರೇಬಿಯನ್ ಕವನಗಳ ಅನುವಾದವನ್ನು ಓದಲೂ ಸಹ ನಾನು ಉತ್ಸುಕನಾಗಿದ್ದೇನೆ.

    ಬಿಸಿಲ ಹನಿ ಹೇಳಿದರು...

    ಸತ್ಯನಾರಾಯಣವರೆ,
    ನೀವು ನನ್ನನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದೀರಿ. ಮೊಟ್ಟ ಮೊದಲಿಗೆ ಒಂದು ಸ್ಪಷ್ಠಿಕರಣ.< ಆತ್ಮ ನಿವೇದನೆಯ ಹಾದಿಯೇ ಹಾಗೆ! ಅದು ಅಷ್ಟು ಸುಲಭವಾಗಿ ಸವೆಯುವಂಥದಲ್ಲ! ಇದನ್ನು ಬರೆಯಬೇಕೋ ಬೇಡವೋ ಎನ್ನುವ ದ್ವಂದದಲ್ಲಿಯೇ ಅರ್ಧ ಸಮಯವನ್ನು ಕಳೆದುಬಿಟ್ಟಿರುತ್ತೇವೆ.ಒಮ್ಮೊಮ್ಮೆ ನಾವೇ ಬಲವಾಗಿ ತಳ್ಳುತ್ತಾ ಹೋಗಬೇಕು.ಅಂತೆಯೇ ನಾನು ಸಹ ತಳ್ಳುತ್ತಿದ್ದೇನೆ>ಹೀಗೆಂದು ಹೇಳಿದ್ದು ನಾನು ಬರೆಯುತ್ತಿರುವ ನನ್ನ ಆತ್ಮನಿವೇದನೆಯ ಬಗ್ಗೆ.ಆತ್ಮಕತೆ ಬರೆಯುವಾಗ ಕೆಲವು ತೀರಾ ವ್ಯಯಕ್ತಿಕ ಘಟನೆಗಳನ್ನು ಹೇಳಿಕೊಳ್ಳಬೇಕೋ ಬೇಡವೋ ಎನ್ನುವ ಸಂದಿಗ್ಧತೆ ಇರುತ್ತದೆ.ಮೇಲಾಗಿ ಆತ್ಮಕತೆ ಬರೆದಾಗ ಮುಖ್ಯವಾಗಿ ಇಬ್ಬರು ವ್ಯಕ್ತಿಗಳ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.ಒಂದು ನಮ್ಮ ಆತ್ಮಕತೆಯಲ್ಲಿ ಪ್ರಸ್ತಾಪಿಸಿದ ವ್ಯಕ್ತಿಗಳು ನಮ್ಮ ಹೆಸರನ್ನು ಏಕೆ ಪ್ರಸ್ತಾಪಿಸಿದಿರೆಂದು ಹಾಗೂ ಪ್ರಸ್ತಾಪಿಸದೆ ಇರುವ ವ್ಯಕ್ತಿಗಳು ನಮ್ಮ ಬಗ್ಗೆ ಏಕೆ ಪ್ರಸ್ತಾಪಿಸಿಲಿಲ್ಲವೆಂದು ಆರೋಪಿಸುತ್ತಾರೆ.ಈ ಎಲ್ಲ ಮಿತಿಗಳ ಹಿನ್ನೆಲೆಯಲ್ಲಿ ಯೋಚಿಸಿದಾಗ ಇದನ್ನು ಬರೆಯಬೇಕೋ ಬೇಡವೋ ಎನ್ನುವ ದ್ವಂದದಲ್ಲಿಯೇ ಅರ್ಧ ಸಮಯವನ್ನು ಕಳೆದುಬಿಟ್ಟಿರುತ್ತೇವೆ ಹಾಗಾಗಿ ಒಂದೊಂದು ಸಾರಿ ನಿಜಕ್ಕೂ ನಮಗೆ ಆತ್ಮಕತೆಯನ್ನು ಬರೆದು ಮುಗಿಸುವ ಇರಾದೆಯಿದ್ದರೆ ಬಲವಾಗಿ ತಳ್ಳುತ್ತಾ ಹೋಗಬೇಕು ಎಂದು ನಾನು ಹೇಳಿದ್ದು.ಆದರೆ ನೀವು ಪ್ರಸ್ತುತ ಲೇಖನಕ್ಕೆ ಅನ್ವಯಿಸಿ "ನಿಮ್ಮ ಈ ಲೇಖನ ಕೂಡಾ ಆತ್ಮನಿವೇದನೆಯ ಬರಹವೇ ಆಗಿದೆ. ಇದನ್ನೇ ನೀವು ಮತ್ತೊಮ್ಮೆ ಓದಿ ನೋಡಿ.ಬಲವಾಗಿ ತಳ್ಳುತ್ತಾ ಹೋಗಿರುವ ಲೇಖನ ಇದಲ್ಲ" ಎಂದು ಹೇಳಿರುವಿರಿ.ಇದು ನಿಮಗೆ ಆತ್ಮನಿವೇದನೆಯಂತೆ ತೋರಿರಬಹುದು.ಆದರೆ ಇದು ಆತ್ಮನಿವೇದನೆಯಲ್ಲ.ನನ್ನ ಅನುಭವ ಕಥನವಷ್ಟೆ.ಹೀಗಾಗಿ ಅದು ಸಜವಾಗಿ ಮೂಡಿಬಂದಿದ್ದರಲ್ಲಿ ಅಚ್ಚರಿಯೇನಿಲ್ಲ.
    Anyway,ನಿಮ್ಮ ನೇರ ಹಾಗೂ ಮುಕ್ತ ಅನಿಸಿಕೆಗೆ ಧನ್ಯವಾದಗಳು.ಶೀಘ್ರದಲ್ಲಿಯೇ ನನ ಆತ್ಮನಿವೇದನೆಯನ್ನು ಹೊತ್ತು ಬರುವೆ.ಕಾದು ನೋಡಿ.

    ಬಿಸಿಲ ಹನಿ ಹೇಳಿದರು...

    ಶಿವು ಅವರೆ,
    ತುಂಬಾ ದಿನಗಳಿಂದ ನಾನು ಏನೂ ಹೊಸದನ್ನು ಬರೆದೇ ಇಲ್ಲ ಎಂದು ನನಗೇ ಅನಿಸುತ್ತಿತ್ತು.(ಬರೆಯಬೇಕೆಂದುಕೊಂಡಿದ್ದನ್ನು ಏಕೆ ಬರೆಯಲಾಗಲಿಲ್ಲ ಎಂಬುದನ್ನು ಲೇಖನದಲ್ಲಿ ವಿವರಿಸಿದ್ದೇನೆ.)ಅದಕ್ಕೆ ನಿಮ್ಮ ಮಾತು ಒಂದು Driving Force ಆಯಿತು ಅಷ್ಟೆ.ನಿಮ್ಮ ಮಾತಿನಂತೆ ಮಗಳ ಕಣ್ಣಲ್ಲಿ ಹೀರೊ ಆಗಬಹುದೇನೋ.ಆದರೆ ಖಂಡಿತ ಹೀರೋ ಆಗಬೇಕೆಂದು ಈ ಕೆಲಸ ಮಾಡುತ್ತಿಲ್ಲ.ಒಬ್ಬ ಅಪ್ಪನಾಗಿ ಸದಭಿರುಚಿಗಳನ್ನು ಬೆಳೆಸುತ್ತಿದ್ದೇನೆ ಅಷ್ಟೆ.
    ಭಾರತದಂತೆ ಲಿಬಿಯಾದಲ್ಲಿಯೂ ಸಹ ಅರಾಜಕತೆ,ಅದಕ್ಷತೆ,ಅಶಿಸ್ತು ಹಾಗೂ ಸ್ವಲ್ಪಮಟ್ಟಿನ ಭೃಷ್ಟಾಚಾರ ತಾಂಡವಾಡುತ್ತಿದೆ.
    ನಿಮ್ಮ ಪ್ರತಿಕ್ರಿಯೆ ಹಾಗೂ ಶುಭಾಶಯಗಳಿಗೆ ಧನ್ಯವಾದಗಳು.

    ಬಿಸಿಲ ಹನಿ ಹೇಳಿದರು...

    ಪರಾಂಜಪೆಯವರೆ,
    ನನ್ನ ಬ್ಲಾಗ್‍ಗೆ ಭೇಟಿಕೊಟ್ಟಿದ್ದು ಸಂತೋಷ!ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಖಂಡಿತ ನಿಮ್ಮ ಬ್ಲಾಗ್‍ಗೆ ಭೇಟಿಕೊಡುವೆ.

    ಬಿಸಿಲ ಹನಿ ಹೇಳಿದರು...

    ತೇಜಸ್ವಿನಿಯವರೆ,
    ಒಬ್ಬ ಅಪ್ಪನಾಗಿ ಮಗಳಿಗೆ ಸದಭಿರುಚಿಗಳನ್ನು ಬೆಳೆಸುತ್ತಿದ್ದೇನೆ.ಏಕೆಂದರೆ ಓದು ಕೊಡುವ ಸುಖ ಬೇರೆ ಯಾವುದು ಕೊಡಲಾರದು ಎಂಬುದು ನನ್ನ ವ್ಯಯಕ್ತಿಕ ಅಭಿಪ್ರಾಯ.ಹೀಗಾಗಿ ಅವಳ ಪ್ರತಿ ಹುಟ್ಟುಹಬ್ಬಕ್ಕೆ ಒಂದಷ್ಟು ಪುಸ್ತಕಗಳನ್ನು ಕೊಡುತ್ತಿದ್ದೇನೆ.
    ನಿಮ್ಮ ಪ್ರತಿಕ್ರಿಯೆಗೆ ಹಾಗೂ ಶುಭಾಶಯಗಳಿಗೆ ಧನ್ಯವಾದಗಳು.

    ಬಿಸಿಲ ಹನಿ ಹೇಳಿದರು...

    ಸುನಾಥ್ ಸರ್,
    ನಿಮ್ಮ ಪ್ರತಿಕ್ರಿಯೆಗೆ ಹಾಗೂ ಭೂಮಿಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಕ್ಕೆ ಧನ್ಯವಾದಗಳು.
    ಅಕ್ಷರದ ಅರಮನೆಯ ಕೊಡುಗೆಗಿಂತ ಬೇರೆ ಯಾವ ಕೊಡುಗೆ ಸಮನಾಗಿದೆಯಲ್ಲವೆ?
    ನೀವು ಹೇಳಿದಂತೆ ಈ ದೇಶದ ಜನಜೀವನದ ಅನುಭವಗಳನ್ನು ಬರೆಯಲು ಪ್ರಯತ್ನಿಸುವೆ.ಆದರೆ ಈಗಲ್ಲ.ನಾನು ಬರೆಯಬೇಕೆಂದುಕೊಂಡಿದ್ದನ್ನು ಬರೆದು ಮುಗಿಸಿದಮೇಲೆ.

    ಚಂದ್ರಕಾಂತ ಎಸ್ ಹೇಳಿದರು...

    ಉದಯ್

    ನಿಮ್ಮ ಬರವಣಿಗೆ ಬಹಳ ಪಕ್ವವಾಗಿದೆ. ನಿಜ, ದೂರದೇಶದಲ್ಲಿದ್ದ ಯಾರಿಗೇ ಆಗಲಿ ತಾಯ್ನಾಡಿಗೆ ಹೋಗುವಾಗ ಇಂತಹ ನಿರಾಶೆಗಳೆದುರಾದರೆ ಬಹಳ ವ್ಯಥೆ, ಆಕ್ರೋಶ ...ಮುಂತಾದ ಭಾವಗಳೇ ಬರುತ್ತವೆ. ಆದರೆ ನೀವೊಬ್ಬ ಬರಹಗಾರರಾದ್ದರಿಂದ ನಿಮ್ಮ ಭಾವನೆಗಳಿಗೆ ಅಕ್ಷರಗಳ outlet ಕೊಟ್ಟಿರುವಿರಿ. ಮನುಷ್ಯನನ್ನು ನೋವು ರೂಪಿಸುವಂತೆ ನಲಿವು ರೂಪಿಸುವುದಿಲ್ಲ ಎಂಬ ಮಾತು ಎಷ್ಟು ನಿಜವಲ್ಲವೇ?

    ಯೋಚಿಸಬೇಡಿ, ನಿಮ್ಮ ಬ್ಲಾಗಲ್ಲಿ ಸುರಕ್ಷಿತವಾಗಿರುವ ಬರಹಗಳನ್ನು ಭೂಮಿ ಮುಂದೊಮ್ಮೆ ಓದಿ ಅಪ್ಪನ ಬಗ್ಗೆ ಹೆಮ್ಮೆ ಪಡುತ್ತಾಳೆ. ಪುಸ್ತಕವನ್ನು ಮಕ್ಕಳಿಗೆ ಉಡುಗೊರೆಯಾಗಿ ಕೊಡುವುದು ಅತ್ಯಂತ ಉಪಯುಕ್ತ. ಅದು ಪ್ರಯೋಜನ ಹೌದೋ ಅಲ್ಲವೋ ಎಂದು ನಾವಂದುಕೊಳ್ಳುತ್ತೇವೆ. ಆದರೆ ಖಂಡಿತ ಮಕ್ಕಳು ಅದರ ಸವಿಯನ್ನು ಅನುಭವಿಸುತ್ತಾರೆ.ನೀವು ಭೂಮಿಯ ವಿಷಯ ಹೇಳುತ್ತಿದ್ದರೆ ನನಗೆ ದೂರವಿರುವ ನನ್ನ ಮೊಮ್ಮಗನ ನೆನಪಾಗುತ್ತದೆ.
    ಆಗಲೇ ಭೂಮಿ ಎರಡು ವರುಷದವಳಾದಳಾ? ಖಲೀಲ್ ಗಿಬ್ರಾನ್ ಹೇಳಿದ ನನಗೆ ಅಚ್ಚುಮೆಚ್ಚಾದ ಸಾಲುಗಳನ್ನು ಕೊಟ್ಟಿರುವಿರಿ. ಇದನ್ನು ತಾಯ್ತಂದೆಯರಿಗೆ ಅರ್ಥಮಾಡಿಸುವರಾರು?

    ಉತ್ತಮ ಬರಹಕ್ಕೆ ವಂದನೆಗಳು

    ಬಿಸಿಲ ಹನಿ ಹೇಳಿದರು...

    ಚಂದ್ರಕಾಂತ ಮೇಡಂ,
    "ಯೋಚಿಸಬೇಡಿ, ನಿಮ್ಮ ಬ್ಲಾಗಲ್ಲಿ ಸುರಕ್ಷಿತವಾಗಿರುವ ಬರಹಗಳನ್ನು ಭೂಮಿ ಮುಂದೊಮ್ಮೆ ಓದಿ ಅಪ್ಪನ ಬಗ್ಗೆ ಹೆಮ್ಮೆ ಪಡುತ್ತಾಳೆ" ಎಂದು ಭರವಸೆಯನ್ನು ನೀಡಿರುವಿರಿ.ತುಂಬಾ ಥ್ಯಾಂಕ್ಸ್.ಅವಳು ಹೆಮ್ಮೆ ಪಡುತ್ತಾಳೋ, ಬಿದುತ್ತಾಳೋ ಅಪ್ಪನಾಗಿ ನಾನು ಅವಳಿಗೆ ಈಗಿನಿಂದಲೇ ಸದಭಿರುಚಿಯನ್ನು ಬೆಳೆಸುತ್ತಿದ್ದೇನೆ.ಭೂಮಿಯೊಟ್ಟಿಗೆ ದೂರದ ಆಸ್ತ್ರೇಲಿಯಾದಲ್ಲಿರುವ ನಿಮ್ಮ ಮೊಮ್ಮಗನನ್ನು ನೆನಪಿಸಿಕೊಂಡಿರುವಿರಿ.ಅವನು ಭೂಮಿಗಿಂತ ಒಂದೆರಡು ತಿಂಗಳು ದೊಡ್ಡವನಿರಬೇಕಲ್ಲವೆ?ಈ ಮಕ್ಕಳ ಆಟ ಪಾಠ ನೋಡುತ್ಟಾ ದಿನಗಳು ಹೋದದ್ದೇ ಗೊತ್ತಾಗುವದಿಲ್ಲ ಅಲ್ಲವೆ?
    ಮಕ್ಕಳ ವಿಷಯದಲ್ಲಿ ಖಲೀಲ್ ಗಿಬ್ರಾನ್ ಹೇಳಿದ ಮಾತುಗಳು ಎಷ್ಟು ಸತ್ಯ ಅಲ್ಲವೆ?ನೀವು ಹೇಳಿದಂತೆ ಎಷ್ಟು ಜನ ತಂದೆ ತಾಯಿ ಈ ಸತ್ಯವನ್ನು ಅರ್ಥ ಮಾಡಿಕೊಳ್ಳುತ್ತಾರೆ?
    ಈ ಸಾಲುಗಳ ಕನ್ನಡ ಅನುವಾದ ಹಾಕಬೇಕೆಂದುಕೊಂಡಿದ್ದೆ.ಆದರೆ ಸಿಗದೆ ಹೋದ ಕಾರಣ ಇಂಗ್ಲೀಷನಲ್ಲಿ ಹಾಕಿದ್ದೇನೆ.ನೇಮಿಚಂದ್ರರ ಕತೆಯೊಂದರಲ್ಲಿ (ಕತೆ ಯಾವುದೆಂದು ನೆನಪಿಲ್ಲ) ಈ ಸಾಲುಗಳ ಅನುವಾದ ಬರುತ್ತದೆ.
    Anyway,ಎಂದಿನ ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಹಾಗೂ ಭೂಮಿಯ ಹುಟ್ತುಹಬ್ಬಕ್ಕೆ ಶುಭಾಯಶಯ ಕೋರಿದ್ದಕ್ಕೆ ವಂದನೆಗಳು.

    kaligananath gudadur ಹೇಳಿದರು...

    Sir, My lovely daughter's name too is Bhoomi.

    ಬಾಲು ಸಾಯಿಮನೆ ಹೇಳಿದರು...

    ಆಕಸ್ಮಿಕವಾಗಿ ನಿಮ್ಮ ಬ್ಲಾಗಿಗೆ ಬಂದವ ಎಲ್ಲ ಲೇಖನಗಳನ್ನು ಓದಿ ಮುಗಿಸಿದೆ. ಧನ್ಯವಾದಗಳು. ಲಿಬಿಯಾ ಎಲ್ಲಿದೆ ಎಂದು ಮತ್ತೊಮ್ಮೆ ನಕಾಶೆಯ ಪುಟಗಳನ್ನು ನೋಡುತ್ತಿದ್ದಂತೆ ಬಿಸಿಲಲ್ಲಿ ಸುಟ್ಟಂತಾಯ್ತು.
    ದೂರದ ದೇಶದಲ್ಲಿ ನಿಮ್ಮ ಻ನುಭವಗಳನ್ನು ಓದಲು ಹೆಚ್ಚು ಖುಷಿ ಆಗುತ್ತದೆ. ಅದನ್ನೂ ಸ್ವಲ್ಪ ಹೆಚ್ಚೇ ಬೆರೆಯಲು ನನ್ನ ಕೋರಿಕೆ.
    ಧನ್ಯವಾದಗಳು.